ಎಸ್. ಕೆ. ಪದ್ಮಾದೇವಿ - ಒಂದು ನೆನಪು | Vartha Bharati- ವಾರ್ತಾ ಭಾರತಿ

--

ಎಸ್. ಕೆ. ಪದ್ಮಾದೇವಿ - ಒಂದು ನೆನಪು

1982ರ ಉತ್ತರಾರ್ಧದಲ್ಲಿ ಒಂದು ದಿನ ನಾನು ಪದ್ಮಾದೇವಿಯವರ ಸಂದರ್ಶನ ಬಯಸಿ ಬೆಂಗಳೂರು ಆಕಾಶವಾಣಿಗೆ ಹೋದಾಗ ಅವರು ಕಾರ್ಯಕ್ರಮವೊಂದರ ರೆಕಾರ್ಡಿಂಗ್‌ನಲ್ಲಿ ನಿರತರಾಗಿದ್ದರು. ಕೆಲವೇ ನಿಮಿಷಗಳಲ್ಲಿ ರೆಕಾರ್ಡಿಂಗ್ ಮುಗಿಸಿ ಪೂರ್ವನಿಗದಿತ ಸಮಯಕ್ಕೇ ಸಂದರ್ಶನಕ್ಕೆ ಸಿದ್ಧರಾಗಿ ಸ್ಟುಡಿಯೋದಿಂದ ಹೊರಬಂದರು ಪದ್ಮಾದೇವಿ. ಆಕಾಶವಾಣಿಯ ಆವರಣದ ಮರದ ನೆರಳಲ್ಲಿ ಕಲ್ಲುಬೆಂಚೊಂದರ ಮೇಲೆ ಕುಳಿತದ್ದೇ ಕಲಾವಿದೆಯ ಆ ಅದ್ಭುತ ದಿನಗಳ ನೆನಪಿನ ಸುರುಳಿ ಬಿಚ್ಚಿಕೊಂಡಿತು......

ಕಳೆದ ತಿಂಗಳು (ಸೆ.20ರಂದು) ಕನ್ನಡ ರಂಗಭೂಮಿ ಮತ್ತು ಚಲಚ್ಚಿತ್ರದ ಮೇರು ನಟಿ ಶ್ರೀಮತಿ ಎಸ್.ಕೆ. ಪದ್ಮಾದೇವಿ ತೊಂಬತ್ತೈದರ ಇಳಿ ವಯಸ್ಸಿನಲ್ಲಿ ನಿಧನರಾದ ಸುದ್ದಿ ಓದಿದಾಗ ನನ್ನ ಮನಸ್ಸು ಹಿಮ್ಮಿಗವಾಯಿತು. ಕಳೆದ ಶತಮಾನದ ಎಂಬತ್ತರ ದಶಕದ ದಿನಗಳು ನನ್ನ ಸ್ಮತಿಪಟಲದಲ್ಲಿ ಮೂಡಲಾರಂಭಿಸಿದವು. 1982ನೆಯ ಇಸವಿ. ನಾನು ಪ್ರಜಾವಾಣಿ ಸಾಪ್ತಾಹಿಕ ಪುರವಣಿಗೆ ‘ಓಹ್! ಆ ಆದ್ಭುತ ದಿನಗಳು’ ಎನ್ನುವ ಅಂಕಣವನ್ನು ಬರೆಯುತ್ತಿದ್ದೆ. ಇದು ಮುಖ್ಯವಾಗಿ ಕನ್ನಡ ರಂಗಭೂಮಿ ಮತ್ತು ಚಲಚ್ಚಿತ್ರ ಕಲಾವಿದರ ಬಣ್ಣದ ಬದುಕಿನ ‘ವಸಂತ ಕಾಲದ’ ನೆನಪುಗಳನ್ನು ಅನಾವರಣಗೊಳಿಸುವ ಸಂದರ್ಶನ ಲೇಖನಗಳ ಅಂಕಣವಾಗಿತ್ತು.ಆಗ ನಾನು ಸಂದರ್ಶಿಸಿದ ಅಭಿನೇತ್ರಿ ಪದ್ಮಾದೇವಿಯವರು ಸ್ಮತಿಪಟಲದಿಂದ ಎದ್ದುಬಂದು ಕಣ್ಮುಂದೆ ನಿಂತಂತಾಯಿತು.

ಕನ್ನಡದ ಮೊತ್ತಮೊದಲ ವಾಕ್ಚಿತ್ರ ‘ಭಕ್ತ ಧ್ರುವ’(1934) ಎಸ್.ಕೆ.ಪದ್ಮಾದೇವಿಯವರ ಮೊದಲ ಚಿತ್ರವೂ ಹೌದು. ಆದರೆ ಕಾರಣಾಂತರಗಳಿಂದ ‘ಭಕ್ತ ಧ್ರುವ’ ಬಿಡುಗಡೆ ತಡವಾಗಿ ‘ಸತಿ ಸುಲೋಚನ’ ಅದಕ್ಕೂ ಮೊದಲು ತೆರೆಕಂಡು ಕನ್ನಡದ ಮೊದಲ ವಾಕ್‌ಚಿತ್ರ ಎಂಬ ಖ್ಯಾತಿಗೆ ಪಾತ್ರವಾದದ್ದು ಕನ್ನಡ ಚಲಚ್ಚಿತ್ರ ಇತಿಹಾಸದ ವಿಪರ್ಯಾಸಗಳಲ್ಲೊಂದು. ಪದ್ಮಾದೇವಿಯವರು ಛಮಕ್-ಛಮಕ್ ರಜತ ಪರದೆ ಪ್ರವೇಶಿಸುವ ಮುನ್ನ ಕನ್ನಡ ರಂಗಭೂಮಿಯಲ್ಲಿ ಮಿಂಚಿದ್ದರು. ರಂಗಭೂಮಿ ಮತ್ತು ಚಲಚ್ಚಿತ್ರದ ಅತಿರಥ ಮಹಾರಥ ಕಲಾವಿದರಾದ ಆರ್. ನಾಗೇಂದ್ರ ರಾಯರು, ಜಿ. ನಾಗೇಶ ರಾಯರು, ನಟಭಯಂಕರ ಗಂಗಾಧರ ರಾಯರು, ಬಿ. ಆರ್. ಪಂತುಲು, ಡಿಕ್ಕಿ ಮಾಧವ ರಾವ್ ಮೊದಲಾದವರ ಜೋಡಿಯಾಗಿ ಅಭಿನಯಿಸಿ ಉಜ್ವಲ ಪ್ರತಿಭೆ ಎನ್ನುವ ಶಹಭಾಸ್‌ಗಿರಿ ಸಂಪಾದಿಸಿದ ಪದ್ಮಾದೇವಿಯವರು ವೃತ್ತಿರಂಗಭೂಮಿ ಭವಿಷ್ಯ ಮಸುಕಾಗುತ್ತಿದ್ದ ದಿನಗಳಲ್ಲಿ, ಸಿನೆಮಾದ ಅವಕಾಶಗಳ ಅನಿಶ್ಚಿತತೆ ನಂಬಲಾಗದೆ ಬದುಕಿನ ಭದ್ರತೆಗಾಗಿ ಆಕಾಶವಾಣಿ (ಎ.ಐ.ಆರ್) ಸೇರಿದರು-ನಾಟಕ ವಿಭಾಗದ ಧ್ವನಿ ಕಲಾವಿದೆಯಾಗಿ.

1982ರ ಉತ್ತರಾರ್ಧದಲ್ಲಿ ಒಂದು ದಿನ ನಾನು ಪದ್ಮಾದೇವಿಯವರ ಸಂದರ್ಶನ ಬಯಸಿ ಬೆಂಗಳೂರು ಆಕಾಶವಾಣಿಗೆ ಹೋದಾಗ ಅವರು ಕಾರ್ಯಕ್ರಮವೊಂದರ ರೆಕಾರ್ಡಿಂಗ್‌ನಲ್ಲಿ ನಿರತರಾಗಿದ್ದರು. ಕೆಲವೇ ನಿಮಿಷಗಳಲ್ಲಿ ರೆಕಾರ್ಡಿಂಗ್ ಮುಗಿಸಿ ಪೂರ್ವನಿಗದಿತ ಸಮಯಕ್ಕೇ ಸಂದರ್ಶನಕ್ಕೆ ಸಿದ್ಧರಾಗಿ ಸ್ಟುಡಿಯೋದಿಂದ ಹೊರಬಂದರು ಪದ್ಮಾದೇವಿ. ಆಕಾಶವಾಣಿಯ ಆವರಣದ ಮರದ ನೆರಳಲ್ಲಿ ಕಲ್ಲುಬೆಂಚೊಂದರ ಮೇಲೆ ಕುಳಿತದ್ದೇ ಕಲಾವಿದೆಯ ಆ ಅದ್ಭುತ ದಿನಗಳ ನೆನಪಿನ ಸುರುಳಿ ಬಿಚ್ಚಿಕೊಂಡಿತು......

ಅಭಿನಯ ಕಲೆ ಪದ್ಮಾದೇವಿಯವರಿಗೆ ತಾತನ ಬಳುವಳಿಯಾಗಿ ಬಂದ ವಂಶವಾಹಿ. ನಾಟಕದ ಗೀಳಿನ ಅವರ ತಾತನಿಗೆ ಬ್ರಿಟಿಷರ ಕಾಲದಲ್ಲಿ ಲಾಟರಿ ಲಕ್ಷ್ಮೀ ಒಲಿದು ಒಂಬತ್ತು ಲಕ್ಷ ರೂ. ಸಿಕ್ಕಾಗ ಮುಳುಗುತ್ತಿದ್ದ ನಾಟಕದ ಕಂಪೆನಿಯೊದರ ರಕ್ಷಣೆಗೆ ಧಾವಿಸಿ ಅದಕ್ಕೆ ‘ಜನಮನೋಲ್ಲಾಸಿನಿ ಸಭಾ’ ಎಂದು ಮರುನಾಮಕರಣ ಮಾಡಿ ಕಂಪೆನಿಯನ್ನು ನಡೆಸಿದರಂತೆ. ಕಂಪೆನಿ ಊರಿಂದೂರಿಗೆ ಸುತ್ತಿ ವರ್ಷಗಟ್ಟಳೆ ನಾಟಕಗಳನ್ನು ಪ್ರದರ್ಶಿಸಿದರೂ ಲಾಭದಾಯಕವಾಗಲಿಲ್ಲ. ಲಾಟರಿ ಹಣ ಕರಗಿತು. ಕಂಪೆನಿಯನ್ನು ಸಾಕಲು ಇದ್ದ ಜಮೀನನ್ನೂ ಮಾರಬೇಕಾಯಿತಂತೆ. ಇದರಿಂದಾಗಿ ಪದ್ಮಾದೇವಿಯವರ ತಂದೆಗೆ ಬಂದ ಪಿತ್ರಾರ್ಜಿತ ಆಸ್ತಿ ಎಂದರೆ ನಾಟಕದ ಹುಚ್ಚಷ್ಟೆ. ಬಾಲ್ಯದಲ್ಲೇ ಈ ಬಗೆಯ ಬಣ್ಣದ ಬದುಕನ್ನು ಕಂಡ ಬಾಲೆ ಪದ್ಮಾದೇವಿ ನಾಟಕಶಿರೋಮಣಿ ವರದಾಚಾರ್ಯರ ಸೊಸೆ ಕನಕಲಕ್ಷ್ಮಮ್ಮನವರ ಕಣ್ಣಿಗೆ ಬಿದ್ದು ‘ಭಕ್ತ ಪ್ರಹ್ಲಾದ’ ನಾಟಕದ ಭದೇವಿ ಪಾತ್ರಕ್ಕೆ ಆಯ್ಕೆಯಾದರು. ಕನಕಲಕ್ಷ್ಮಮ್ಮನವರು ವರದಾಚಾರ್ಯರ ಸ್ಮಾರಕ ರಂಗಮಂದಿರ ನಿರ್ಮಿಸುವ ಕನಸು ಕಾಣುತ್ತಿದ್ದ ದಿನಗಳು. ಮಗಳು ಯೋಗ್ಯ ವರನನ್ನು ಮದುವೆಯಾಗಿ ಸುಖವಾಗಿರಲೆಂಬುದು ತಾಯಿ ಹೃದಯದ ಬಯಕೆ. ತಂದೆಗಾದರೋ ಮಗಳು ಕಲಾವಿದೆಯಾಗಿ ಬೆಳಗಲಿ ಎನ್ನುವ ಆಸೆ. ತಂದೆ ಹಠ ಗೆದ್ದಿತು. ಪದ್ಮಾದೇವಿ ರಂಗಪ್ರವೇಶವಾಯಿತು. ಹಲವಾರು ನಾಟಕ ಕಂಪೆನಿಗಳಲ್ಲಿ ಪದ್ಮಾದೇವಿ ‘ಭಕ್ತ ಪ್ರಹ್ಲಾದ’, ‘ಶಾಕುಂತಲ’, ‘ಮನ್ಮಥ ವಿಜಯ’, ‘ಕಾಳಿದಾಸ, ‘ಕೃಷ್ಣ ಲೀಲೆ’, ‘ರಾಮಾಯಣ’ ಮೊದಲಾದ ನಾಟಕಗಳಲ್ಲಿ ಮುಖ್ಯಪಾತ್ರಗಳಲ್ಲಿ ಅಭಿನಯಿಸಿ ರಸಿಕ ಪ್ರೇಕ್ಷಕರ ಮನಗೆದ್ದರು. ರಂಗಭೂಮಿಯ ಹಿರಿಯ ಗುಣಾಢ್ಯ ಕಲಾವಿದರ ಗಮನಸೆಳೆದರು.

‘‘ಎಂಥ ಕಣ್ಣು, ಎಂಥಾ ಕಣ್ಣು...’’

ರಂಗದ ಮೇಲೆ ಲೀಲಾಜಾಲವಾಗಿ ಅಭಿನಯಿಸುತ್ತಿದ್ದ ಬಾಲಕಿಯ ಭಾವಪೂರ್ಣ ಕಣ್ಣುಗಳನ್ನು ಕಂಡು ಬೆರಗಾದರು ಬಿ.ಆರ್.ಪಂತುಲು. ಬೆಂಗಳೂರು ಅಮೆಚೂರ್ ಡ್ರಮ್ಯಾಟಿಕ್ ಅಸೋಸಿಯೇಷನ್ ಪ್ರದರ್ಶಿಸಿದ ಸಿ. ಕೆ. ವೆಂಕಟರಾಮಯ್ಯನವರ ‘ನಚಿಕೇತ’ ನಾಟಕದಲ್ಲಿ ಈ ಪರಿ ಪಂತುಲು ಅವರ ಕಣ್ಸೆಳೆದ ಪದ್ಮಾದೇವಿ ‘‘ಆಗ ನಿಜಕ್ಕೂ ನನ್ನ ಕಣ್ಣುಗಳು ತುಂಬ ಸುಂದರವಾಗಿದ್ದವು. ನಂಗೆ ಅಳಲು ಗ್ಲಿಸರಿನ್ ಅಗತ್ಯವೇ ಇರಲಿಲ್ಲ’’ ಎನ್ನುತ್ತಾ ನೆನಪಿನ ಓವರಿಯಲ್ಲಿ ಅ ದಿನಗಳಿಗೆ ಜಾರಿದರು.

ಸಾಮಾಜಿಕ ನಾಟಕಗಳಾದ ‘ಸಂಸಾರ ನೌಕೆ’ಯ ಸುಶೀಲ, ‘ಪ್ರೇಮ ಲೀಲಾ’ದ ರೋಹಿಣಿ, ‘ದೇವದಾಸಿ’ಯ ದೇವದಾಸಿ ‘ಧರ್ಮ ರತ್ನಾಕರ’ದ ಪ್ರಮೀಳಾ, ‘ಸದಾರಾಮೆ’ಯ ಸದಾರಾಮೆ ಮೊದಲಾದ ಪಾತ್ರಗಳಲ್ಲಿ ಭಾವಪೂರ್ಣ ಅಭಿನಯದಿಂದ ತಾರಾ ಪ್ರಸಿದ್ಧಿಯ ಪಾವಟಿಗೆಗಳನ್ನು ಏರುತ್ತಿದ್ದ ದಿನಗಳಲ್ಲೇ ಪದ್ಮಾದೇವಿಯವರ ಪ್ರತಿಭೆ ಆರ್.ನಾಗೇಂದ್ರ ರಾಯರ ಕಣ್ಸೆಳೆಯಿತು. ನಾಗೇಂದ್ರ ರಾಯರ ‘ವಸಂತ ಸೇನೆ’ ಚಿತ್ರದಲ್ಲಿ ನಾಯಕಿ ಪಾತ್ರ. ‘‘ಅಭಿನಯದಲ್ಲಿ ಸಹಜತೆಗೆ ಪ್ರಾಶಸ್ತ್ಯ ಕೊಡುತ್ತಿದ್ದ ನಟ, ನಿರ್ದೇಶಕರು ನಾಗೇಂದ್ರ ರಾಯರು’’ ಎಂದು ನೆನಪಿಸಿಕೊಂಡರು ಪದ್ಮಾದೇವಿ. ‘‘ವಸಂತಸೇನೆಯಲ್ಲಿ ನಾಗೇಂದ್ರ ರಾಯರು ‘ಗ್ಲಿಸರಿನ್ ಇಲ್ಲ. ಹತ್ತು ನಿಮಿಷ ಟೈಂಕೊಡ್ತೀನಿ. ಪಾತ್ರದಲ್ಲಿ ತನ್ಮಯಳಾಗು ಮೂಡ್ ಬರುತ್ತೆ’ ಅಂದರು. ಮಾತಿಲ್ಲದ ಅಗಲಿಕೆಯ ಸನ್ನಿವೇಶವದು. ಎಲ್ಲವನ್ನೂ ಕಣ್ಣುಗಳೇ ಹೇಳಬೇಕು. ಐದು ನಿಮಿಷ ದೂರ ಕುಳಿತು ಪಾತ್ರದಲ್ಲಿ ಲೀನವಾದೆ. ಕ್ಯಾಮರಾ ಮುಂದೆ ನಿಂತ ಕೂಡಲೇ ಕಣ್ಣಲ್ಲಿ ಪಟಪಟ ನೀರು. ಮೊದಲ ಟೇಕ್‌ನಲ್ಲೇ ಓ. ಕೆ. ಆಯಿತು.’’ ಮುಂದೆ ತಾವು ದುರಂತ ಪಾತ್ರಗಳಲ್ಲಿ ಜನಪ್ರಿಯವಾದುದನ್ನು ಮೆಲುಕುಹಾಕಿದರು.

ಎಚ್. ಎಲ್. ಎನ್. ಸಿಂಹ ಅವರ ‘ಸಿಂಹಾಸ್ ಸೆಲೆಕ್ಟ್ ಆರ್ಟಿಸ್ಟ್ಸ್’ ನಾಟಕ ಕಂಪೆನಿಯ ಜನಪ್ರಿಯ ನಾಟಕಗಳಲ್ಲಿ ಒಂದು ‘ಸಂಸಾರ ನೌಕೆ’. ಈ ನಾಟಕದಲ್ಲಿ ಸುಶೀಲ ಪಾತ್ರ ಮಾಡಿದ್ದೇ ಪದ್ಮಾದೇವಿಯವರಿಗೆ ‘ಸಂಸಾರ ನೌಕೆ’ಯ ಸುಶೀಲ ಅನ್ವರ್ಥ ನಾಮವಾಗಿಬಿಟ್ಟಿತು. ಮುಂದೆ ‘ಸಂಸಾರ ನೌಕೆ’ ಸಿನೆಮಾ ಆಗಿ ಕನ್ನಡದ ಪ್ರಪ್ರಥಮ ಸಾಮಾಜಿಕ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಸಿಂಹ ಅವರ ಈ ಚಿತ್ರದ ನಾಯಕ ಬಿ. ಆರ್. ಪಂತುಲು, ನಾಯಕಿ ಪದ್ಮಾದೇವಿ. ಶೂಟಿಂಗ್‌ನಲ್ಲಿ ಮೊದಲ ದೃಶ್ಯದ ರಿಹರ್ಸಲ್. ಅದು ನಾಯಕ ನಾಯಕಿಯನ್ನು ಆಲಿಂಗನ ಮಾಡಿಕೊಳ್ಳುವ ಪ್ರೇಮಾನುರಾಗದ ದೃಶ್ಯ. ಮಗಳು ಒಪ್ಪಿಕೊಂಡಿರುವುದು ಇಂತಹ ರೊಮ್ಯಾಂಟಿಕ್ ಎಂದು ಮನೆಮಂದಿಗೆ ತಿಳಿದದ್ದೇ ತಕರಾರು ಶುರುವಾಯಿತು. ಅಂತಹ ಪಾತ್ರ ಮಾಡಿದರೆ ಜನ ಕಲ್ಲು ತಗೊಂಡು ಹೊಡೀತಾರೆ ಎಂದು ಹೆದರಿಸಿದರು. ಹದಿಹರೆಯದ ಹುಡುಗಿಗೆ ನಡುಕ. ಆ ಪಾತ್ರ ನಾ ಒಲ್ಲೆ ಎಂದಳು. ಆಗ ಪಂತುಲು ಎದುರು ಆ ಪಾತ್ರಕ್ಕೆ ನಿರ್ದೇಶಕರು ನಾಯಕಿಯಾಗಿ ಎಂ. ವಿ. ರಾಜಮ್ಮನವರನ್ನು ತಲಾಶ್ ಮಾಡಿದರು. ನಾಟಕದಲ್ಲಿ ಮಾಡುತ್ತಿದ್ದ ಅಳುಮುಂಜಿ ಸುಶೀಲೆ ಪಾತ್ರ ಪದ್ಮದೇವಿಯವರಿಗೆ ಗಟ್ಟಿಯಾಯಿತು.

‘ಸಂಸಾರ ನೌಕೆಯ’ ಜನಪ್ರಿಯತೆಯ ದಿನಗಳಲ್ಲಿ ಒಂದೆರಡು ತೆಲುಗು-ತಮಿಳು ಚಿತ್ರಗಳಲ್ಲಿ ಅಭಿನಯಿಸಿದರೂ ಸಿನೆಮಾ ರಂಗ ಪದ್ಮಾದೇವಿಯವರಿಗೆ ಚಿನ್ನದ ಗಣಿಯಾಗಲಿಲ್ಲ. ಮತ್ತೆ ರಂಗಭೂಮಿಗೆ. ಪುತ್ತೂರಿನಲ್ಲಿ ಮೊಕ್ಕಾಂ ಮಾಡಿದ್ದ ಡಿಕ್ಕಿ ಮಾಧವ ರಾವ್ ಅವರ ಡಿಕ್ಕಿ ಬ್ರದರ್ಸ್ ನಾಟಕ ಕಂಪೆನಿ ಸೇರಿದರು. ‘‘ಅಲ್ಲಿ ದಿನಕ್ಕೊಂದು ಹೊಸ ನಾಟಕ. ನಿಜಕ್ಕೂ ಸವಾಲು. ದಾನಶೂರ ಕರ್ಣದಲ್ಲಿ ಕೊಟ್ಟೂರಪ್ಪನವರದು ಕರ್ಣನ ಪಾತ್ರ, ನಾನು ಸೋಮಪ್ರಭೆ. ಸದಾರಾಮೆ ನಾಟಕದಲ್ಲಿ ಡಿಕ್ಕಿಗೆ ಕಳ್ಳನ ಪಾತ್ರ, ನಾನು ಸದಾರಮೆ. ಎಲ್ಲ ನಾಟಕಗಳಲ್ಲಿ ನಾನೇ ನಾಯಕಿ. ಬೆಳಗ್ಗೆ ಸಂಭಾಷಣೆ, ಹಾಡು ಕೊಡ್ತಿದ್ರು. ದಿನವಿಡೀ ಅಭ್ಯಾಸ ಮಾಡಿ ಸಾಯಂಕಾಲ ಆಡಬೇಕಾಗುತ್ತಿತ್ತು. ಒಂಥರಾ ಅಗ್ನಿಪರೀಕ್ಷೆ... ಪುತ್ತೂರು ಕ್ಯಾಂಪನ್ನು ನಾನು ಮರೆಯುವಂತೆಯೇ ಇಲ್ಲ.’’ ಎಂದಂತೆ ಸುಭದ್ರ ಪಾತ್ರ ನೆನಪಿನಾಳದಿಂದ ನುಗ್ಗಿ ಬಂತು...

‘‘ರಾಗಮಾಲಿಕೆಯಲ್ಲಿ ಸೀಸ ಪದ್ಯ ಹಾಡಿದಾಗ ಪ್ರೇಕ್ಷಕರಿಂದ ರೂಪಾಯಿಗಳ ಸುರಿಮಳೆ. ದಿಗ್ಭ್ರಮೆಯಾಯಿತು. ದಕ್ಷಿಣ ಕನ್ನಡದಲ್ಲಿ ರೂಪಾಯಿ ಎಸೆದರೆ ‘ಒನ್ಸ್‌ಮೋರ್’ ಎಂದರ್ಥವಂತೆ. ಹಾರ್ಮೋನಿಯಂ ನುಡಿಸುತ್ತಿದ್ದವರು ರಾಗಮಾಲಿಕೆಯಲ್ಲಿ ಮತ್ತೆ ಹಾಡುವಂತೆ ಸಂಜ್ಞೆ ಮಾಡಿದರು. ಅಂದು ಜನ ತೋರಿಸಿದ ಮೆಚ್ಚುಗೆ, ಆ ಚಪ್ಪಾಳೆ, ಸಂತೋಷ ಜ್ಞಾಪಿಸಿಕೊಂಡರೆ ಈಗಲೂ ಆಗಿನ ಸುಭದ್ರೆಯಾಗಿ ಬಿಡುತ್ತೇನೆ. ರೋಮಾಂಚನವಾಗುತ್ತೆ’’

ರೋಮಾಂಚನದ ಈ ಉತ್ಸಾಹದಲ್ಲೇ ‘ಪ್ರೇಮಲೀಲಾ’ದ ರೋಹಿಣಿ ಬಿ.ಎ. ಅವರ ಮನಃಪಟಲದಲ್ಲಿ ಪ್ರತ್ಯಕ್ಷಳಾದಳು. ಪ್ರೇಮಿಗಳು ಖಾದಿಹಾರ ವಿನಿಮಯ ಮಾಡಿಕೊಳ್ಳುವ ಈ ನಾಟಕ ಚಿತ್ರದುರ್ಗದಲ್ಲಿ ಇಪ್ಪತ್ತೊಂದು ಪ್ರದರ್ಶನಗಳನ್ನು ಕಂಡಿತು.ಎಲ್ಲ ಪ್ರದರ್ಶನಗಳನ್ನು ತಪ್ಪಿಸದೆ ನೋಡಿದ್ದ ಸ್ವಾತಂತ್ರ್ಯ ಹೋರಾಟಗಾರ್ತೀ ಬಳ್ಳಾರಿ ಸಿದ್ದಮ್ಮನವರು ಪದ್ಮಾದೇವಿಯವರಿಗೆ ಕೆಂಪಿನ ಉಂಗುರವನ್ನು ಉಡುಗೊರೆಯಾಗಿ ನೀಡಿದರಂತೆ.

ತೆಲುಗು ಸಿನೆಮಾದಂತೆ ತೆಲುಗು ರಂಗಭೂಮಿಯಲ್ಲೂ ಪದ್ಮಾದೇವಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ‘‘ತೆಲುಗು ರಂಗಭೂಮಿಯಲ್ಲಿ ಅ ಕಾಲಕ್ಕೆ ಸ್ಥಾನಂ ನರಸಿಂಹ ರಾವ್ ತುಂಬ ಹೆಸರುವಾಸಿಯಾದ ಕಲಾವಿದರು. ಅವರ ಹಾಗೆ ಹೆಣ್ಣಿನ ಪಾತ್ರ ಮಾಡೋಕ್ಕೆ ಹೆಂಗಸರಿಗೂ ಬರುವುದಿಲ್ಲ ಎನ್ನುವ ಮಾತು ಜನಜನಿತವಾಗಿತ್ತಂತೆ. ‘ಚಿಂತಾಮಣಿ’ ಅಂತ ಒಂದು ಪ್ರಸಿದ್ಧ ತೆಲುಗು ನಾಟಕ. ಇದರಲ್ಲಿ ಸ್ಥಾನಂ ಚಿಂತಾಮಣಿ ಪಾತ್ರ ಮಾಡುತ್ತಿದ್ದರಂತೆ. ಆ ಪಾತ್ರ ಮಾಡುವ ಅವಕಾಶ ನನಗೆ ಒದಗಿ ಬಂತು. ನಾನು ತೆಲುಗು ಸೀಸ ಪದ್ಯ ಹಾಡಿದ್ದನ್ನು ಕೇಳಿ ಕಂಪೆನಿಯವರು ಎಷ್ಟು ಖುಷಿಪಟ್ಟರೆಂದರೆ 101 ರೂ. ಎಲೆಅಡಿಕೆಯಲ್ಲಿಟ್ಟು ಕೊಟ್ಟು ಮರ್ಯಾದೆ ಮಾಡಿದರು’’ ಎಂದಾಗ ಅವರ ಕಣ್ಣುಗಳಲ್ಲಿ ಆನಂದಬಾಷ್ಪತುಳುಕಿತು.

 ‘‘ಕೊಟ್ಟೂರಪ್ಪ, ನಾಗೇಶ ರಾಯರು ಮೊದಲಾಗಿ ಎಲ್ಲ ಪ್ರಸಿದ್ಧ ನಟರ ಜೊತೆ ಅಭಿನಯಿಸಿದ್ದೇನೆ’’ ಎಂದು ಅಂದು ಹೆಮ್ಮೆಯಿಂದ ಹೇಳಿಕೊಂಡ ಪದ್ಮಾದೇವಿಯವರ ಕಲಾಜೀವನದ ಕೊರಗು ಎಂದರೆ, ಗುಬ್ಬಿ ವೀರಣ್ಣ, ಪೀರ್ ಸಾಹೇಬರ ಜೊತೆ ಅಭಿನಯಿಸಲು ಸಾಧ್ಯವಾಗಲಿಲ್ಲ ಎಂಬುದು. ‘‘ವೀರಣ್ಣನವರು ಸ್ವತಃ ತಾವೇ ಬಂದು ತಿಂಗಳಿಗೆ 200 ರೂ. ಸಂಬಳ ಕೊಡುವುದಾಗಿ ಕರೆದರು. 250ಕ್ಕೆ ಕಮ್ಮಿ ಬರಲ್ಲ ಎಂದು ಹಠ ಹಿಡಿದೆ. ಅಂತಹ ದೊಡ್ಡವರು ಬಂದು ಕರೆದಾಗ ಹೋಗದೆ ತಪ್ಪುಮಾಡಿದೆ ಎಂದು ಈಗಲೂ ಪಶ್ಚಾತಾಪವಾಗುತ್ತೆ’’ ಎಂದರು ವಿಷಾದದ ದನಿಯಲ್ಲಿ. ‘‘ಪೀರ್ ಸಾಹೇಬರ ಜೊತೆ ಅಭಿನಯಿಸಿಬಿಟ್ಟರೆ ನಮ್ಮ ಹುಡುಗೀಗೆ ಮದುವೆಯೇ ಆಗೋಲ್ಲ....ಈ ಕೋಮು ಭಾವನೆ ಎಷ್ಟು ಆಳವಾಗಿ ಇಳಿದುಬಿಟ್ಟಿತ್ತೆಂದರೆ, ಪೀರ್ ಸಾಹೇಬರ ಕಂಪೆನಿ ಸೇರಿ ಅಭಿನಯಿಸುವುದಿರಲಿ ಅವರನ್ನು ರಂಗದ ಮೇಲೆ ನೋಡಿ ಆನಂದಿಸುವ ಸೌಭಾಗ್ಯವೂ ನನಗೆ ಸಿಗಲಿಲ್ಲ’’ ಎಂದಾಗ ಕೊರಗಿನ ನೋವು ಈ ಕಲಾವಿದೆಯ ನೆನಪಿನ ಭಾಗವಾಗಿತ್ತು.

ಪದ್ಮಾದೇವಿ ಡಿಕ್ಕಿ ಮಾಧವರಾವ್ ಅವರ ತಮ್ಮ, ರಂಗಭೂಮಿ ಕಲಾವಿದ ಪದ್ಮನಾಭ ರಾವ್ ಅವರನ್ನು ವಿವಾಹವಾದರು. ಇವರ ಪುತ್ರ ನಂದಕಿಶೋರನೂ ಕಲಾವಿದ. ಮದುವೆಯ ನಂತರ ಪತಿರಾಯರು ಇನ್ನು ನಾಟಕಗಳಲ್ಲಿ ಮಾಡಕೂಡದು ಎಂದಾಗ ಗಂಡ-ಹೆಂಡಿರ ಮಧ್ಯೆ ದೂರ ಅನಿವಾರ್ಯವಾಯಿತು. ಪದ್ಮಾದೇವಿ ರಂಗಭೂಮಿ ತ್ಯಜಿಸಲಿಲ್ಲ. ಕೊನೆಯವರೆಗೂ ಹೀಗೇ ನಾಟಕಗಳಲ್ಲಿ ಪಾತ್ರ ಮಾಡಿಕೊಂಡು, ಅವಕಾಶಕ್ಕಾಗಿ ಊರೂರು ತಿರುಗಿಕೊಂಡು ಬದುಕಬೇಕೆ ಎನ್ನುವ ಚಿಂತೆ ಶುರುವಾದಾಗ ನಿಶ್ಚಿತ ಆದಾಯದ ಉದ್ಯೋಗ ಅರಸಿದರು. ಆಕಾಶವಾಣಿಗೆ ಕೆಲಸಕ್ಕೆ ಅರ್ಜಿ ಹಾಕಿದಾಗ ಆಗ ಬೆಂಗಳೂರು ನಿಲಯದ ನಿರ್ದೇಶಕರಾಗಿದ್ದ ನಟೇಶನ್ ‘ಸಂಸಾರ ನೌಕೆ’ಯ ಸುಶೀಲ ಅಲ್ಲವೇ ಎಂದು ನಾಟಕ ವಿಭಾಗದ ಧ್ವನಿ ಕಲಾವಿದೆಯಾಗಿ ನೇಮಿಸಿಕೊಂಡರು. ಆಕಾಶವಾಣಿಯಲ್ಲಿ ನಾಟಕ ವಿಭಾಗವಷ್ಟೇ ಅಲ್ಲದೆ ಮಕ್ಕಳ ಕಾರ್ಯಕ್ರಮ. ಮಹಿಳಾ ಕಾರ್ಯಕ್ರಮ ಹೀಗೆ ಬೇರೆ ವಿಭಾಗಗಳಲ್ಲೂ ರಂಜನೀಯವೂ ಬೋಧಪ್ರದವೂ ಆದ ಕಾರ್ಯಕ್ರಮಗಳನ್ನು ಬಿತ್ತರಿಸಿ ಸೈ ಎನ್ನಿಸಿಕೊಂಡರು. 1985ರಲ್ಲಿ ಆಕಾಶವಾಣಿಯಿಂದ ನಿವೃತ್ತಿ ಹೊಂದಿದರು. ಆಕಾಶವಾಣಿ ಉದ್ಯೋಗದಲ್ಲಿದ್ದಾಗಲೂ ರಂಗಭೂಮಿ ಮತ್ತು ಸಿನೆಮಾ ಪ್ರಪಂಚದೊಂದಿಗೆ ನಂಟು ಕಳೆದುಕೊಳ್ಳಲಿಲ್ಲ.

ಎನ್.ಲಕ್ಷ್ಮೀನಾರಾಯಣ್ ಅವರ ‘ಮುಕ್ತಿ’, ರಾಮದಾಸ ನಾಯಿಡು ಅವರ ‘ಅಮರ ಮಧುರ ಪ್ರೇಮ’, ನಂಜುಂಡೇ ಗೌಡರ ‘ಸಂಕ್ರಾಂತಿ’ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದರು. ಗಿರೀಶ್ ಕಾಸರವಳ್ಳಿಯವರ ‘ಕ್ರೌರ್ಯ’ ಚಿತ್ರಕ್ಕೆ ಕಂಠದಾನ ಮಾಡಿದರು. ಶಂಕರ್ ನಾಗ್ ಅವರ ‘ಮಾಲ್ಗುಡಿ ಡೇಸ್’ ಮತ್ತು ಮಗ ನಂದಕಿಶೋರ್ ನಿರ್ದೇಶನದ ‘ಕಿರಣ’ ಟೆಲಿಚಿತ್ರಗಳಲ್ಲಿ ಅಭಿನಯಿಸಿ ಕಿರುತೆರೆಯಲ್ಲೂ ಬೆಳಗಿದ್ದರು. ಎಪ್ಪತ್ತರ ದಶಕದಲ್ಲಿ ಖ್ಯಾತ ಹವ್ಯಾಸಿ ನಾಟಕ ತಂಡ ರಂಗಸಂಪದದ ‘ವನರಂಗ’ ಪ್ರಯೋಗವಾಗಬೇಕಿದ್ದ ಧರ್ಮವೀರ ಭಾರತಿಯವರ ‘ಅಂಧಯುಗ’ ನಾಟಕದಲ್ಲಿ ಗಾಂಧಾರಿಯಾಗಿ ಪ್ರಶಂಸಾತ್ಮಕ ಅಭಿನಯ ನೀಡಿದ್ದರು. ‘ವನರಂಗ’ದಲ್ಲಿ ವೇಷತಾಲೀಮು ನಡೆದಾಗ ಪದ್ಮಾದೇವಿ ಗಾಂಧಾರಿ ಪಾತ್ರಕ್ಕೆ ಜೀವತುಂಬಿದ್ದನ್ನು ನಿರ್ದೇಶಕ ಎನ್.ಎಸ್.ವೆಂಕಟರಾಂ ಸ್ಮರಿಸಿದ್ದಾರೆ. ಪ್ರೊಸೀನಿಯಂ ಥಿಯೇಟರಿನಿಂದ ಕಬ್ಬನ್ ಪಾರ್ಕಿನ ಬಾಲಭವನದಲ್ಲಿ ‘ವನರಂಗ’ ಸೃಷ್ಟಿಸುವ ರಂಗಸಂಪದದ ಪ್ರಯತ್ನ ವರುಣನ ಕೃಪೆಯಿಂದಾಗಿ ವಿಫಲಗೊಂಡು ‘ಅಂಧಯುಗ’ ಕಲಾಕ್ಷೇತ್ರದಲ್ಲೇ ಪ್ರದರ್ಶನಗೊಂಡದ್ದು ಬೇರೆಯೇ ಕಥೆ.

ಇಪ್ಪತ್ತನೇ ಶತಮಾನದ ಕನ್ನಡ ರಂಗಭೂಮಿ, ಚಲನಚಿತ್ರ ಮತ್ತು ಪ್ರಸಾರ ಮಾಧ್ಯಮದ ಪರಂಪರೆಯಲ್ಲಿ ಒಂದು ಮುಖ್ಯ ಕೊಂಡಿಯಂತಿದ್ದ ಎಸ್.ಕೆ. ಪದ್ಮಾದೇವಿಯವರು ಕನ್ನಡ ಪತ್ರಿಕೆಗಳ ಪಾಲಿಗೆ ಕೇವಲ ನಾಲ್ಕು ಸಾಲಿನ ಸುದ್ದಿಯಾಗಿ ಸೆ. 19ರಂದು ಇಹಲೋಕ ತ್ಯಜಿಸಿದರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top