-

ಹೊಟ್ಟೆಗೆ ಹಿಟ್ಟು ದೊರಕಿಸಿಕೊಳ್ಳುವುದರ ಬಗ್ಗೆ ಮೊದಲು ವಿಚಾರ ಮಾಡಿ

-

ಪುಣೆಯಲ್ಲಿ ಮಾಡಿಕೊಂಡ ಒಪ್ಪಂದದ ಬಳಿಕ ಮುಂಬೈನ ಇಡೀ ಅಸ್ಪಶ್ಯ ಸಮಾಜವು ಡಾ. ಬಾಬಾಸಾಹೇಬ್ ಅವರ ಭಾಷಣ ಕೇಳಲು ಯಾವಾಗ ಅವಕಾಶ ಲಭಿಸುತ್ತದೆ ಎಂದು ಉತ್ಸುಕವಾಗಿತ್ತು. ವರ್ಲಿಯಲ್ಲಿನ ಶ್ರೀ ಸಾವಂತ ಸೇರಿದಂತೆ ಇನ್ನಿತರ ಯುವ ಮಿತ್ರರು ಸೆಪ್ಟಂಬರ್ 28, 1932 ರಂದು ರಾತ್ರಿ 10 ಗಂಟೆಗೆ ಒಂದು ಸಭೆ ಆಯೋಜಿಸಿದರು. ಬಿ.ಡಿ.ಡಿ ಚಾಳ್ ಹತ್ತಿರದ ಮೈದಾನದ ಬಳಿ ಆಯೋಜಿಸಿದ್ದ ಈ ಸಾರ್ವಜನಿಕ ಸಭೆಗೆ ಡಾ. ಅಂಬೇಡ್ಕರ್, ದೇವರಾಯ ನಾಯಿಕ ಸೇರಿದಂತೆ ಇನ್ನಿತರರು ಆಗಮಿಸುತ್ತಿದ್ದಂತೆಯೇ ಸಭೆಯ ಕಲಾಪ ಆರಂಭವಾಯಿತು.

ಸಭೆಯ ಅಧ್ಯಕ್ಷತೆ ವಹಿಸಿಕೊಂಡ ದೇವರಾಯ ನಾಯಿಕ ತಮ್ಮ ಪ್ರಾಸ್ತಾವಿಕದಲ್ಲಿ: ‘‘ಮಹಾತ್ಮಾ ಗಾಂಧೀಜಿ ಅವರ ಘೋರ ಪ್ರತಿಜ್ಞೆಯ ಪರಿಣಾಮವಾಗಿ ಇಡೀ ಭಾರತ ಅಲುಗಾಡಿ ಹೋಗಿತ್ತು. ಈ ಪ್ರತಿಜ್ಞೆಯ ಸ್ವರೂಪ ಎಷ್ಟು ಭಯಂಕರವಾಗಿತ್ತೆಂದರೆ, ಡಾ. ಅಂಬೇಡ್ಕರ್ ಅವರು ಮಹಾತ್ಮಾ ಗಾಂಧೀಜಿ ಅವರ ಅಭಿಪ್ರಾಯಕ್ಕೆ ತಲೆಬಾಗದಿದ್ದರೆ ಗಾಂಧೀಜಿ ಜೀವ ಸುರಕ್ಷಿತವಾಗಿ ಉಳಿಯುತ್ತಿರಲಿಲ್ಲ. ಒಂದು ವೇಳೆ ಕರಾರಿಗೆ ಸಮ್ಮತಿಸಿದರೆ ಇಷ್ಟೊಂದು ಪರಿಶ್ರಮದಿಂದ ಅಸ್ಪಶ್ಯರಿಗೆ ಲಭಿಸಿದ ಸ್ವಸಂರಕ್ಷಣೆಯ ಹಕ್ಕುಗಳಿಗೆ ತಿಲಾಂಜಲಿ ನೀಡಬೇಕಾಗಿತ್ತು. ಸಮ್ಮತಿ ಸೂಚಿಸದಿದ್ದರೆ ಮಹಾತ್ಮಾ ಗಾಂಧೀಜಿ ಜೀವ ಕಳೆದುಕೊಳ್ಳುವುದಕ್ಕೆ ಕಾರಣೀಭೂತರಾಗಬೇಕಾಗಿತ್ತು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಇಡೀ ಅಸ್ಪಶ್ಯ ಸಮಾಜ ಅದರಲ್ಲೂ ವಿಶೇಷವಾಗಿ ಡಾ. ಅಂಬೇಡ್ಕರ್ ಸಿಕ್ಕಿ ಹಾಕಿಕೊಂಡಿದ್ದರು. ಆದರೆ ಅಸ್ಪಶ್ಯರ ಸುದೈವದಿಂದ ಈ ಕ್ಲಿಷ್ಟ ಪರಿಸ್ಥಿತಿ ಸುಖಕರವಾಗಿ ಎರಡೂ ಸಮಸ್ಯೆಗಳು ಏಕಕಾಲಕ್ಕೆ ಪರಿಹರಿಸಲ್ಪಟ್ಟವು.

ಕ್ಲಿಷ್ಟಕರ ಪರಿಸ್ಥಿತಿ ಪರಿಹಾರವಾಗುವುದು ಎಂದರೆ ಅಸ್ಪಶ್ಯರ ಪಾಲಿಗೆ ಇದು ಶುಭ ಸಂಕೇತ. ಇತಿಹಾಸದಲ್ಲಿ ಅಸ್ಪಶ್ಯರಿಗೆ ಎಂದೂ ಲಭಿಸದಂತಹ ಹಕ್ಕುಗಳು ದೊರೆತಿರುವುದು ನಿಜ. ಆದರೆ ಹಿಂದೂ ಸಮಾಜದಲ್ಲಿ ಇಂದು ಬೇರೂರಿರುವ ಅಸ್ಪಶ್ಯತೆ ನಿರ್ಮೂಲನೆಯಾಗಿ ಈ ಹಕ್ಕುಗಳು ಸಾರ್ಥಕಗೊಳ್ಳಬೇಕು. ಹಿಂದೂ ಸಮಾಜದಲ್ಲಿ ವಿಷಮತೆಗೆ ಮಿಶ್ರಮಿಸುವುದಿಲ್ಲ ಎಂದು ಅಸ್ಪಶ್ಯ ಸಮಾಜ ಹಿಂದೂ ಸಮಾಜಕ್ಕೆ ತಿಳಿಸಿಕೊಡುವುದಕ್ಕೆ ಕಾರ್ಯಪ್ರವೃತ್ತ ಆಗಬೇಕಿದೆ’’ ಎಂದು ಹೇಳಿದರು. ತಮ್ಮ ಭಾಷಣಕ್ಕೆ ವಿರಾಮ ನೀಡುವ ಮುನ್ನ ದೇವರಾಯ ನಾಯಿಕ ಅವರು, ಇಂದಿನಿಂದ ನಾಲ್ಕು ತಿಂಗಳೊಳಗೆ ಜನತಾ ಪತ್ರಕ್ಕೆ ಐದು ಸಾವಿರ ಚಂದಾದಾರರನ್ನು ಮಾಡದ ಹೊರತು ಪತ್ರಿಕೆಯ ಸಂಪಾದಕ ಹುದ್ದೆ ಸ್ವೀಕರಿಸುವುದಿಲ್ಲ ಎಂದು ಪ್ರತಿಜ್ಞೆಗೈದರು.

ದೇವರಾಯ ನಾಯಿಕ ಅವರ ಭಾಷಣದ ಬಳಿಕ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಜನರ ಕರತಾಡನದೊಂದಿಗೆ ಡಾ. ಅಂಬೇಡ್ಕರ್ ಭಾಷಣಕ್ಕೆ ನಿಂತರು.
‘‘ಎಂಟು ದಿನಗಳ ಹಿಂದೆ ಅಸ್ಪಶ್ಯ ಸಮಾಜದ ಮೇಲೆ ಎಂತಹ ಸಂಕಟ ಬಂದೆರಗಿತ್ತು ಎನ್ನುವುದನ್ನು ಅಧ್ಯಕ್ಷತೆ ವಹಿಸಿರುವ ದೇವರಾಯ ನಾಯಿಕ ಸ್ಪಷ್ಟಪಡಿಸಿದ್ದಾರೆ, ಈ ಸಂಕಟದಿಂದ ಅಸ್ಪಶ್ಯ ಸಮಾಜ ಹೊರಗೆ ಬರುವುದರ ಜೊತೆಗೆ ಈ ಸಂಕಟಕ್ಕೆ ಸಿಲುಕಿ ಶಕ್ತಿಹೀನವಾಗುವ ಬದಲು ಮತ್ತಷ್ಟು ಶಕ್ತಿ ಸಂಚಯಿಸಿಕೊಂಡಿದೆ.

ದುಂಡು ಮೇಜಿನ ಪರಿಷತ್ತಿನ ಸಭೆಯಲ್ಲಿ ಅಸ್ಪಶ್ಯರ ಕೆಲವು ಬೇಡಿಕೆಗಳನ್ನು ಮಂಡಿಸಿದ್ದೆ. ಅವುಗಳ ನ್ಯಾಯಬದ್ಧವಾಗಿದ್ದವು ಕೂಡ. ಎರಡನೇ ಅಧಿವೇಶನದ ಸಂದರ್ಭದಲ್ಲಿ ಅಸ್ಪಶ್ಯರ ಬೇಡಿಕೆಗಳ ವಿಚಾರ ಪ್ರಸ್ತುತಪಡಿಸಿದಾಗ ಮಹಾತ್ಮಾ ಗಾಂಧಿ ಸೇರಿದಂತೆ ಎಲ್ಲ ಹಿಂದೂ ಮುಖಂಡರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದರಿಂದ ಅಸ್ಪಶ್ಯರ ಸಂರಕ್ಷಣೆಯ ಒಂದಿಷ್ಟು ಸೌಲಭ್ಯಗಳು ಸಿಗಬಹುದು ಎಂದು ಯಾವುದೇ ಭರವಸೆ ಇರಲಿಲ್ಲ. ಎಲ್ಲರ ಕಾಲ್ತುಳಿತಕ್ಕೆ ಸಿಲುಕಿ ನರಳಿದ, ಆರ್ಥಿಕವಾಗಿ ಹೀನಾಯವಾಗಿರುವ, ಧಾರ್ಮಿಕವಾಗಿ ಕಡೆಗಣಿಸಲ್ಪಟ್ಟ, ಸಾಮಾಜಿಕವಾಗಿ ಕಸಕ್ಕಿಂತ ಕೀಳಾಗಿ ಮತ್ತು ರಾಜಕೀಯದಲ್ಲಿ ನಿರ್ಮಾಲ್ಯವಾಗಿದ್ದಂತಹ ಸಮಾಜಕ್ಕೆ ಯಾವುದೇ ಸೌಲಭ್ಯಗಳನ್ನು ನೀಡುವುದಕ್ಕೆ ಹಿಂದೂ ಸಮಾಜ ಸಿದ್ಧವಿಲ್ಲ ಎಂದ ಮೇಲೆ ಭವಿಷ್ಯದ ಸ್ವರಾಜ್ಯದಲ್ಲಿ ಅಂದರೆ ಆ ರಾಜಾಡಳಿತದ ಅಧಿಕಾರ ಹಿಂದೂಗಳ ಕೈಗೆ ಸಿಕ್ಕ ಮೇಲೆ ಈ ದುರ್ಬಲ ಅಸ್ಪಶ್ಯ ಸಮಾಜದ ಸ್ಥಿತಿಗತಿ ಏನಾಗಬೇಡ? ಇಂತಹ ದೊಡ್ಡ ಸಂಶಯ ನನಗೆ ಕಾಡಲಾರಂಭಿಸಿತು.

ಇದೇ ಕಾರಣಕ್ಕೆ ಭವಿಷ್ಯದ ಸ್ವರಾಜ್ಯದಲ್ಲಿ ಅಸ್ಪಶ್ಯರಿಗೆ ಅತ್ಯಗತ್ಯವಾಗಿರುವ ಸೌಲಭ್ಯಗಳು ಲಭಿಸದೇ ಇದ್ದರೆ ಅಂತಹ ಸ್ವರಾಜ್ಯಕ್ಕೆ ಅಸ್ಪಶ್ಯ ಸಮಾಜ ಎಂದಿಗೂ ತನ್ನ ಸಹಮತ ವ್ಯಕ್ತಪಡಿಸದು ಎಂದು ಅಂದೇ ನನ್ನ ಅಭಿಪ್ರಾಯ ಸ್ಪಷ್ಟಪಡಿಸಿದ್ದೆ. ಎರಡನೇ ಅಧಿವೇಶನದಲ್ಲಿ ಅಸ್ಪಶ್ಯರ ಬೇಡಿಕೆಗಳನ್ನು ಮಂಡಿಸಿ ಅವುಗಳಿಗೆ ಪ್ರಧಾನಿಯ ಹಸ್ತಾಕ್ಷರ ಕೂಡ ಆಗಿತ್ತು. ಆದರೂ ಕೂಡ ಪ್ರಧಾನಮಂತ್ರಿ ಪ್ರಕಟಿಸಿದ ಯೋಜನೆಯಲ್ಲಿ ನಾನು ಮಂಡಿಸಿದ ಬೇಡಿಕೆಗಳಿಗೆ ಅನುಗುಣವಾಗಿ ಇರಲಿಲ್ಲ ಆದರೂ ಅದರಲ್ಲಿ ನನಗೆ ಸಮಾಧಾನ ಇತ್ತು. ಹೀಗಾಗಿ ಮುಂದಿನ ಯೋಜನೆ ಕುರಿತು ಚಿಂತನೆ ಮಾಡುತ್ತಿದ್ದೆ. ಕಷ್ಟ ಎದುರಿಸಿದರೂ ಅಸ್ಪಶ್ಯ ಸಮಾಜಕ್ಕಾಗಿ ನನ್ನಿಂದ ಒಂದಿಷ್ಟು ಕೆಲಸ ಆಯಿತು ಎಂದು ಭಾವಿಸಿದ್ದೆ. ಸಂತಸದಿಂದ ಜೀವ ನಿರುಮ್ಮಳವಾಗಿತ್ತು. ಹೆಚ್ಚಿಗೆ ಏಕೆ ಹಿಂಸ್ರಪಶುವಿನ ದವಡೆಗೆ ಸಿಲುಕಿ ಜೀವ ಉಳಿಸಿಕೊಳ್ಳುವುದಕ್ಕೆ ಓಡಿ ನಿಶ್ಚಿಂತೆಯಿಂದ ಇದ್ದ ಜಿಂಕೆಯ ಮನಸ್ಥಿತಿಯಲ್ಲಿದ್ದೆ, ಇಷ್ಟರಲ್ಲಿ ಗಾಂಧೀಜಿ ಅವರು ಘೋರ ಪ್ರತಿಜ್ಞೆ ಕಿವಿಗೆ ಬಿತ್ತು. ಅಸ್ಪಶ್ಯರ ಸುದೈವದಿಂದಲೋ ಏನೋ ಅಸ್ಪಶ್ಯರ ಬೇಡಿಕೆಗಳಿಗೆ ಮಹಾತ್ಮಾ ಗಾಂಧಿ ವಿರೋಧವಾಗಿರಲಿಲ್ಲ. ಅವರಿಂದಾಗಿ ನನಗೂ ಸಾಕಷ್ಟು ಉಪಯೋಗವಾಯಿತು.

ಅಲ್ಲದೆ ಹಿಂದೂ ನಾಯಕರೊಂದಿಗೆ ಏರ್ಪಟ್ಟ ಒಪ್ಪಂದದಿಂದಾಗಿ ಅಸ್ಪಶ್ಯರಿಗೆ ಲಾಭವೇ ಆಯಿತು. ಒಂದು ಸ್ಥಾನ ಕೂಡ ಲಭಿಸದಂತಹ ಪಂಜಾಬ್‌ನಲ್ಲಿ ಎಂಟು ಸ್ಥಾನಗಳು ಸಿಗುವುದರ ಜೊತೆಗೆ ಬೇರೆ ಪ್ರಾಂತಗಳಲ್ಲೂ ಇನ್ನೂ ಹೆಚ್ಚಿನ ಸ್ಥಾನಗಳು ಲಭಿಸಿದವು. ಎರಡನೇ ಲಾಭ ಎಂದರೆ ಕೇಂದ್ರ ಕಾನೂನು ಮಂಡಳಿಯಲ್ಲಿ ಅಸ್ಪಶ್ಯರಿಗೆ 18 ಸ್ಥಾನಗಳನ್ನು ನೀಡುವುದಕ್ಕೆ ತೀರ್ಮಾನಿಸಲಾಯಿತು. ಅಂದ ಹಾಗೆ ಪ್ರಧಾನ ಮಂತ್ರಿ ಅವರ ಪ್ರಸ್ತಾವನೆಯಲ್ಲಿ ಈ ವಿಷಯದ ಉಲ್ಲೇಖವಿರಲಿಲ್ಲ. ಅಸ್ಪಶ್ಯರಿಗೆ ಅತ್ಯಂತ ಹಾನಿಕಾರಕ ಮತ್ತು ದ್ರೋಹ ಬಗೆಯುವ ರೀತಿಯಲ್ಲಿ ಎಲ್ಲ ಸೌಲಭ್ಯಗಳು 20 ವರ್ಷಗಳ ಬಳಿಕ ರದ್ದುಗೊಳ್ಳುತ್ತವೆ ಎಂದು ಹೇಳಲಾಗಿತ್ತು. ಆದರೆ ಕೇವಲ 20 ವರ್ಷಗಳ ಅವಧಿಯಲ್ಲಿ ಜಗತ್ತು ಬದಲಾಗುತ್ತಿಲ್ಲ. ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದ ಶೋಷಣೆ ಕೇವಲ 20ವರ್ಷಗಳಲ್ಲಿ ಇಲ್ಲವಾಗುತ್ತದೆ ಎನ್ನುವುದು ಬರೀ ಕಲ್ಪನೆ, ಇಡೀ ಹಿಂದೂ ಸಮಾಜದ ದೃಷ್ಟಿಕೋನ ಬದಲಾಗದ ಹೊರತು ನೀಡಿರುವ ಸೌಲಭ್ಯ ಕಿತ್ತುಕೊಳ್ಳುವುದು ಎಂದರೆ ಬೆಳೆಯುತ್ತಿರುವ ಗಿಡಕ್ಕೆ ಕೊಡಲಿ ಏಟು ಹಾಕಿದಂತೆ. ಆದರೆ ಹೊಸ ಒಪ್ಪಂದದಲ್ಲಿ ಇದನ್ನು ಬದಲಿಸಿ ಹಿಂದೂ ಮತ್ತು ಅಸ್ಪಶ್ಯ ಸಮಾಜದ ಪರಸ್ಪರ ಸಹಮತದ ಮೇರೆಗೆ ಈ ಸೌಲಭ್ಯ ರದ್ದುಗೊಳಿಸಲಾಗುವುದು.

ಹಿಂದೂ ಸಮಾಜವು ತನ್ನ ಕಾರ್ಯದಿಂದ ಅಸ್ಪಶ್ಯ ಸಮಾಜದ ವಿಶ್ವಾಸ ಗಳಿಸಿಕೊಂಡಿದ್ದೆಯಾದರೆ ಅಸ್ಪಶ್ಯರು ತಾವಾಗಿಯೇ ಈ ಸೌಲಭ್ಯ ಬಿಟ್ಟುಕೊಡುತ್ತಾರೆ ಇಲ್ಲದಿದ್ದರೆ ಈ ವ್ಯವಸ್ಥೆ ಮುಂದುವರಿಯುತ್ತದೆ. ಆದರೆ ಲಭಿಸಿರುವ ಸೌಲಭ್ಯದ ಲಾಭವನ್ನು ನೀವು ಸರಿಯಾಗಿಮಾಡಿಕೊಳ್ಳದೇ ಇದ್ದಲ್ಲಿ ಕಣ್ಣಿಲ್ಲದವರ ಎದುರು ಮುತ್ತು ರತ್ನ ಇರಿಸಿದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ನಿಮಗೆ ಲಭಿಸಿರುವ ಅಧಿಕಾರದ ಕಲ್ಪನೆ ಬರಬೇಕೆಂದರೆ ಭವಿಷ್ಯದ ಮುಂಬೈ ಪ್ರಾಂತದ ಕಾನೂನು ಮಂಡಳಿಯ ಕಲ್ಪನೆ ಮಾಡಿಕೊಳ್ಳಿ. 200 ಸ್ಥಾನಗಳಿರುವ ಮುಂಬೈ ಪ್ರಾಂತದಲ್ಲಿ ಅಧಿಕಾರಕ್ಕೆ ಬರಬೇಕೆಂದರೆ ಕನಿಷ್ಠ 115 ಸ್ಥಾನಗಳು ಅತ್ಯಗತ್ಯ. ಈ ಪ್ರಾಂತದಲ್ಲಿ ಹಿಂದೂಗಳಿಗೆ ಅತಿ ಹೆಚ್ಚು ಎಂದರೆ ಸರಿಸುಮಾರು 100 ಸ್ಥಾನಗಳು ಹಂಚಿಕೆಯಾಗಿವೆ. ನೂರು ಸ್ಥಾನಗಳನ್ನು ಹೊಂದಿರುವ ಹಿಂದೂಗಳಿಗೆ ನಿಮ್ಮ 15 ಸ್ಥಾನಗಳಿಲ್ಲದೆ ಅಧಿಕಾರ ನಡೆಸುವುದು ಅಸಾಧ್ಯ. ನಿಮ್ಮ ಕೈಗೆ ಸಿಕ್ಕಿರುವ ಈ ಅಲೌಕಿಕ ಅಧಿಕಾರವನ್ನು ನಿಮ್ಮ ಆರ್ಥಿಕ ಸಾರ್ಮಥ್ಯ ವೃದ್ಧಿಗಾಗಿ ಉಪಯೋಗಿಸಿ. ನಿಮಗೆ ಇನ್ನೊಂದು ಮಹತ್ವದ ಸೂಚನೆ ನೀಡುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ನಿಮಗೆ ದೇವಸ್ಥಾನದ ಬಾಗಿಲು ತೆರೆಯುವ ಪ್ರಯತ್ನ ನಡೆಯುತ್ತಿದೆ.

ಈ ಪ್ರಯತ್ನ ಶುದ್ಧ ಕುತಂತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ದೇವಾಲಯಕ್ಕೆ ಹೋಗುವುದಕ್ಕೆ ಅವಕಾಶ ಸಿಕ್ಕಿತು ಎಂದ ಮಾತ್ರಕ್ಕೆ ನಿಮ್ಮ ಉದ್ಧಾರ ಆಗುವುದಿಲ್ಲ ಎನ್ನುವುದನ್ನು ಮರೆಯಬೇಡಿ. ದೇವಾಲಯ ಮತ್ತು ಮೂರ್ತಿಯ ಆಧ್ಯಾತ್ಮಿಕ ಭಾವನೆಗಳ ಚೆಲ್ಲಾಟಕ್ಕಿಂತ ಹೊಟ್ಟೆಗೆ ಹಿಟ್ಟು ಹೇಗೆ ಹಾಕುವುದು ಎನ್ನುವುದರ ಬಗ್ಗೆ ಮೊದಲು ವಿಚಾರ ಮಾಡಬೇಕಿದೆ. ತಿನ್ನುವುದಕ್ಕೆ ಸಾಕಷ್ಟು ಅನ್ನ ಇಲ್ಲ. ಮೈ ಮೇಲೆ ಬಟ್ಟೆ ಇಲ್ಲ. ಚಿಕಿತ್ಸೆ, ಔಷಧಕ್ಕೆ ಹಣದ ಕೊರತೆಯಂತಹ ದೀನ ಸ್ಥಿತಿಯಲ್ಲಿ ನಮ್ಮ ಸಮಾಜ ಸಿಲುಕಿಕೊಂಡಿದೆ. ಈ ಪರಿಸ್ಥಿತಿ ಬದಲಾಗಿ ಜೀವನಕ್ಕೆ ಬೇಕಾಗಿರುವ ಸುಖ ಅನುಭವಿಸುವ ನಿಟ್ಟಿನಲ್ಲಿ ನಿಮ್ಮ ಚಿಂತನೆ ಬದಲಾಗಬೇಕಿದೆ. ಇಂದಿನ ನಮ್ಮ ಈ ದೀನ ಸ್ಥಿತಿ ದೈವ ದುರ್ವಿಲಾಸ ಫಲ ಎನ್ನುವಂತಹ ಹುಚ್ಚು, ಆತ್ಮವಂಚನೆಯ ಕಲ್ಪನೆ ಒದ್ದೋಡಿಸಿ. ನನಗಂತೂ ಖಾತ್ರಿ ಇದೆ ಇಂತಹ ಮುಗ್ಧ ಕಲ್ಪನೆಗಳಿಗೆ ಅವಕಾಶ ನೀಡದೆ ನಮ್ಮ ಸಮಾಜದ ಪ್ರತಿಯೊಬ್ಬ ವ್ಯಕ್ತಿ ರಾಜಕೀಯದಲ್ಲಿ ಗುರುತಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದರೆ ನಮ್ಮ ಸಮಾಜದ ದೀನ ಸ್ಥಿತಿ ದೂರವಾಗುವುದಲ್ಲಿ ಸಂಶಯವಿಲ್ಲ. ನೀವು ಆಯ್ಕೆ ಮಾಡುವ ಮುಖಂಡ, ನೀವು ವಿಶ್ವಾಸ ಇರಿಸುವ ಮುಖಂಡ ನಿಮ್ಮ ನಿಜವಾದ ಮಾರ್ಗದರ್ಶಕನಾಗಬಲ್ಲ. ನಿಮ್ಮ ಹಿತ ಮತ್ತು ಅವರ ಹಿತ ಒಂದೇ ಆಗಿರಬೇಕು. ಸ್ವಾರ್ಥವಿಲ್ಲದೆ ವ್ಯಕ್ತಿಯನ್ನು ಆಯ್ಕೆ ಮಾಡಿ. ಬೇರೆ ಪಕ್ಷದವರ ಎಂಜಲು ನೀರು ಕುಡಿಯುವ ಇಲ್ಲವೇ ಅವರ ಬಾಡಿಗೆ ಕೆಲಸ ಮಾಡುವ ಜನರು ನಿಮ್ಮ ಏಕತೆಯನ್ನು ಒಡೆದು ದಿಕ್ಕು ತಪ್ಪಿಸಿ ದ್ರೋಹ ಬಗೆಯದೇ ಇರಲಾರರು. ಇಂತಹ ನಾಮಕಾವಾಸ್ತೆ ಮುಖಂಡರಿಂದ ದೂರ ಇರುವುದು ಒಳಿತು.

ಇನ್ನೂ ನಮಗೆ ಸಾಕಷ್ಟು ಕೆಲಸ ಮಾಡಬೇಕಾಗಿದ್ದು, ಮೊದಲನೆಯದಾಗಿ ನಮ್ಮ ಬಳಿ ಗಟ್ಟಿ ಸಂಘಟನೆ ಇಲ್ಲ. ಎಲ್ಲ ಚಳವಳಿಗಳಿಗೂ ಮಾರ್ಗದರ್ಶನ ನೀಡುವುದಕ್ಕೆ ಕೇಂದ್ರ ಮಾರ್ಗದರ್ಶಕ ಮಂಡಳಿ ಇಲ್ಲ. ಸಮಾಜದ ಕೆಲಸ ಮಾಡುವುದಕ್ಕೆ ಕಾರ್ಯಕರ್ತರಿಲ್ಲ. ಈ ಎಲ್ಲ ತೊಂದರೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸುಮಾರು ಎರಡು ಲಕ್ಷ ರೂಪಾಯಿ ನಿಧಿ ಸಂಗ್ರಹಿಸಬೇಕಿದೆ. ಎಲ್ಲ ವಯಸ್ಕ ಮಹಿಳೆಯರು ಮತ್ತು ಪುರುಷರು ವಂತಿಗೆ ನೀಡಿದರೆ ನಿಧಿ ಸಂಗ್ರಹ ಕಷ್ಟಕರವಾಗುವುದಿಲ್ಲ. ಒಂದು ವೇಳೆ ನೀವು ಇಚ್ಛಿಸಿದರೆ ಕೇವಲ ಮುಂಬೈವೊಂದರಲ್ಲಿಯೇ ನಿಧಿ ಸಂಗ್ರಹಿಸಬಹುದು ಅಲ್ಲದೇ ಎಲ್ಲರೂ ಈ ಕೆಲಸಕ್ಕಾಗಿ ಟೊಂಕ ಕಟ್ಟಿ ನಿಲ್ಲುತ್ತೀರಿ ಎಂದು ಭಾವಿಸಿದ್ದೇನೆ. ಅದೇ ರೀತಿ ನಮ್ಮ ಮುಖಪತ್ರವಾಗಿರುವ ಜನತಾದ ಪ್ರಸರಣ ಹೆಚ್ಚಾಗಬೇಕಿದ್ದು, ಈ ಪತ್ರದ ಮುಖಾಂತರ ಜನರನ್ನು ಉತ್ತೇಜಿತಗೊಳಿಸಬಹುದು.’’
ಈ ರೀತಿ ಸುಮಾರು ಒಂದೂವರೆ ಗಂಟೆ ಡಾ. ಅಂಬೇಡ್ಕರ್ ಮಾತನಾಡಿದರು. ಅವರ ಪ್ರತಿಯೊಂದು ಮಾತುಗಳನ್ನು ಸೇರಿದ್ದ ಅಪಾರ ಜನಸ್ತೋಮ ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿತ್ತು. ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ ಡಾ. ಅಂಬೇಡ್ಕರ್ ಮತ್ತು ಅಧ್ಯಕ್ಷತೆ ವಹಿಸಿದ್ದ ದೇವರಾಯ ನಾಯಿಕರವರಿಗೆ ವಂದನೆ ಸಲ್ಲಿಸಲಾಯಿತು. ಈ ಸಾರ್ವಜನಿಕ ಸಭೆ ಮಧ್ಯರಾತ್ರಿ ಸುಮಾರು 12 ಗಂಟೆಯವರೆಗೆ ಜರುಗಿತು.


(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top