ಸಾಹಿತ್ಯದ ಓದು-ಬರಹವೆಂಬ ವೈರಾಗ್ಯ
-

ಸಾಹಿತ್ಯವು ದೇವರಮನೆಯಿಂದ ಗ್ರಂಥಭಂಡಾರಕ್ಕೆ, ಅಲ್ಲಿಂದ ಪ್ರಕಟನಾ ಮಾಧ್ಯಮಗಳ ಮೂಲಕ ನಿತ್ಯಜೀವನಕ್ಕೆ ಬಂದು ಆನಂತರ ಸೆಮಿನಾರುಗಳಿಗೆ, ಆಮೇಲೆ ಅಂತರ್ಜಾಲಕ್ಕೆ ಮತ್ತು ಗುಂಪುಗಳಿಗೆ ಬಂದದ್ದನ್ನು ಗಮನಿಸಿದರೆ ನಮಗುಳಿಯುವುದು ಹಳೆಯ ಹೊನ್ನು ಮಾತ್ರವೇನೋ ಅನ್ನಿಸುತ್ತದೆ. ಆದರೆ ಇಷ್ಟು ಮಾತ್ರ ಖಂಡಿತ: ಹಳೆಯದೋ ಹೊಸದೋ ಹೊನ್ನಂತೂ ಉಳಿಯುತ್ತದೆ.
ನನ್ನ ಕಿರಿಯ ಸ್ನೇಹಿತರೊಬ್ಬರು (ವಯಸ್ಸಿನಲ್ಲಿ ನನಗಿಂತ ಕಿರಿಯರು ಎಂದಷ್ಟೇ ಅರ್ಥ) ಈಚೆಗೆ ನನ್ನನ್ನು ಭೇಟಿಯಾದಾಗ ಅವರಿಗಿರುವ ಸಾಹಿತ್ಯದ ಆಸಕ್ತಿಯೊಂದಿಗೆ ಒಂದಿಷ್ಟು ಚರ್ಚಿಸಿದರು. ಓದು, ಬರಹ, ಕನ್ನಡ, ಸಾಹಿತ್ಯ ಹೀಗೆ ಒಂದಿಷ್ಟು ವಿಚಾರಗಳೂ ಸಹಜವಾಗಿಯೇ ನಮ್ಮನ್ನು ಸುತ್ತಿದವು. ಅವರು ಎತ್ತಿದ ಒಂದು ಮುಖ್ಯ ಸಂಶಯ ‘‘ಈಗ ಬರೆಯುವವರು ಹೆಚ್ಚಾಗಿದ್ದಾರೆ; ಓದುವವರು ಕಡಿಮೆಯಾಗಿದ್ದಾರೆ’’ ಎಂಬುದು ನಿಜವೆನ್ನಿಸುತ್ತದೆ. ನಾನು ಅವರಿಗೆ ನೀಡಿದ ವಿವರಣೆ ನನ್ನನ್ನು ಕಾಡತೊಡಗಿತು. ನನ್ನೊಂದಿಗೆ ನಾನೇ ಮಾಡಿದ ಈ ಜಗಳವನ್ನು ಮುಂದುವರಿಸಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ:
ಹತ್ತೊಂಬತ್ತನೇ ಶತಮಾನದ ಕೊನೆ ಮತ್ತು ಇಪ್ಪತ್ತನೇ ಶತಮಾನದ ಆದಿಭಾಗದಲ್ಲಿ ನಾವಿಂದು ಆಧುನಿಕ ಕನ್ನಡ ಸಾಹಿತ್ಯ ಎಂದು ಕರೆಯಲ್ಪಡುವ ಸಾಹಿತ್ಯವೊಂದು ಅರಳಿತು. ಪಂಪ, ರನ್ನ, ಕುಮಾರವ್ಯಾಸರ (ಈ ಪಟ್ಟಿ ಬಹುದೊಡ್ಡದಿದೆ ಮತ್ತು ಶ್ರೇಷ್ಠವೂ ಇದೆ!), ಕಾವ್ಯದ, ವಚನಗಳ, ದಾಸರ ಹಾಡುಗಳ ಬದಲು, ಓದುವ ಪದ್ಯಗಳು ಹುಟ್ಟಿದವು. ಕಥೆ, ಕಾದಂಬರಿಗಳು ಸೃಷ್ಟಿಯಾದವು. ಸಂಪ್ರದಾಯಕ್ಕೆ ಭಿನ್ನವಾದ ನಾಟಕಗಳೂ ರಚನೆಗೊಂಡವು. ಇವುಗಳ ಹಿಂದೆ ಇತರ ಭಾರತೀಯ ಭಾಷೆಗಳ ಹಾಗೂ ಪಾಶ್ಚಾತ್ಯ ಸಾಹಿತ್ಯದ ಪ್ರಭಾವವಿದ್ದದ್ದು ಹೌದು. ಆದರೆ ಇವು ಅಪಾರ ಸಂಖ್ಯೆಯ ಓದುಗರನ್ನೂ ಸೃಷ್ಟಿಸಿದವು. 20ನೇ ಶತಮಾನದ ಮಧ್ಯಭಾಗದಲ್ಲಿ ಕನ್ನಡವನ್ನೋದುವ ಒಂದು ಓದುಗ ವರ್ಗ ಮನೆಮನೆಯಲ್ಲೂ ಇದ್ದವು.
ನಾನು ಬೆಳೆದ ದಕ್ಷಿಣ ಕನ್ನಡದ ಗ್ರಾಮೀಣ ಮೂಲೆಯ ಮಧ್ಯಮ, ಬಡ ವರ್ಗಗಳ ಅಡಿಕೆಸೋಗೆಮಾಡಿನ ಮನೆಯ ಅಟ್ಟದಲ್ಲಿ ಸೂರಿನಡಿಗೆ ಸಿಕ್ಕಿಸಿ ಜೋಪಾನವಾಗಿರಿಸಿಕೊಂಡ ಪುಸ್ತಕಗಳನ್ನು ಮಧ್ಯಾಹ್ನದ ಊಟದ ಆನಂತರದ ನಿದ್ರೆಯ ಹೊತ್ತಿನ ತುಸುಬಿಡುವಿನಲ್ಲಿ ಕೆಳಗಿಳಿಸಿ ಓದುವ ಹೆಂಗಸರು ಸಾಮಾನ್ಯವಾಗಿ ಎಲ್ಲ ಮನೆಗಳಲ್ಲೂ ಇದ್ದರು. (ಶ್ರೀಮಂತರ ಮನೆಯಲ್ಲೂ ಈ ಓದುವ ಕಥಾನಕ ನಡೆದಿರಬಹುದು!) ಹಾಗೆಯೇ ಪುಸ್ತಕಗಳನ್ನು ಮನೆಮನೆಗಳಿಗೆ ತಲುಪಿಸುವ ಕೆಲಸದಲ್ಲಿ ಅನೇಕ ಉತ್ತಮ ಬರಹಗಾರರನ್ನು, ಪ್ರಕಾಶಕರನ್ನು, ತೊಡಗಿಸಿತು. ಹಿರಿಯ ಕಾದಂಬರಿಕಾರ ಉತ್ತರ ಕರ್ನಾಟಕದ ಗಳಗನಾಥರಿಂದ ಮೊದಲ್ಗೊಂಡು ನಾನಿದ್ದ ದಕ್ಷಿಣ ಕನ್ನಡದ ಚೊಕ್ಕಾಡಿಯ ಪ್ರಸಿದ್ಧ ಭಾಗವತ ಅಜ್ಜನಗದ್ದೆ ಗಣಪಯ್ಯನವರ ತನಕ ಈ ಸಾಹಿತ್ಯ ಪ್ರಸಾರವು ಶ್ರೇಷ್ಠಮಟ್ಟದಲ್ಲಿ ನಡೆಯಿತು. ಮಾಸ್ತಿ, ಕುವೆಂಪು, ಶಿವರಾಮ ಕಾರಂತ, ಮುಂತಾದ ಕನ್ನಡದ ಶ್ರೇಷ್ಠರು ಸಾಹಿತ್ಯ ಪುಸ್ತಕಗಳನ್ನು ತಾವೇ ಪ್ರಕಟಿಸಿ, ಮುದ್ರಿಸಿ ಮಾರುತ್ತಿದ್ದರು. ಅನೇಕ ಸಾಹಿತಿಗಳಿಗೆ ಆರ್ಥಿಕ ಬಡತನವಿತ್ತು. ಆದರೆ ಸಾಂಸ್ಕೃತಿಕ ಬಡತನವು ಈ ಯಾರನ್ನೂ ಕಾಡಿರಲಿಲ್ಲ. ಬರೆಯುವವರು ಕೆಲವರಾದರೆ ಓದುವವರು ಎಲ್ಲರೂ. ಅದಕ್ಕೆ ಶಾಲೆಯ ಓದಿನ ಅಗತ್ಯವಿರಲಿಲ್ಲ. ಪುರೋಹಿತರ ಮಂತ್ರಪುಸ್ತಕದೊಂದಿಗೂ ಒಂದು ಕಾದಂಬರಿಯಿದ್ದದ್ದು ನಾನು ಕಂಡಿದ್ದೇನೆ. ಸಾಹಿತ್ಯದ ಮಾಂತ್ರಿಕ ಜಾಲ ಅದು!
ಮನೆಮನೆಗಳಲ್ಲಿ ಕೆ.ಎಸ್.ನ. ಅವರ ಮೈಸೂರು ಮಲ್ಲಿಗೆ ಕವನ ಸಂಕಲನವಿದ್ದವು. ಚೆನ್ನವೀರ ಕಣವಿಯವರ ಕವಿತಾ ಸಂಕಲನವೊಂದು ಇಂದು ಊಹಿಸಲಾಗದಷ್ಟು ಸುಂದರವಾಗಿ ಮುದ್ರಿತವಾಗಿತ್ತು. 1950ರ ದಶಕದಲ್ಲಿ (ಇಂದು ನಾವು ಸಾಮಾನ್ಯವೆಂದು ಭಾವಿಸುವ) ಪ್ರಕಟವಾದ ಉತ್ತಮ ಗುಣಮಟ್ಟದ ಪುಸ್ತಕಗಳನ್ನೂ ಓದುತ್ತಿದ್ದೆವು. ಸಂಪರ್ಕ ಸಾಧನಗಳು ಇಂದಿನಷ್ಟು ಸುಲಭಸಾಧ್ಯವಿಲ್ಲದ ಆ ಕಾಲದಲ್ಲಿ ಅಂಚೆಯ ಮೂಲಕ ಪುಸ್ತಕಗಳನ್ನು ತರಿಸಿಕೊಳ್ಳುವವರು ಅನೇಕರಿದ್ದರು. ನಾಡಿನ ಮೂಲೆಮೂಲೆಗಳಲ್ಲೂ ಉತ್ತಮವೆನ್ನಬಹುದಾದ ಮತ್ತು ಎಲ್ಲ ವರ್ಗದ ಜನರೂ ಭಾಗವಹಿಸಬಹುದಾದ ನಿಯತಕಾಲಿಕಗಳಿದ್ದವು. ಏನಾದರೂ ಪ್ರಕಟವಾದರೆ ಅಂತಹ ವ್ಯಕ್ತಿಯನ್ನು ಸಮಾಜವು ವಿಸ್ಮಯದಿಂದ ಮತ್ತು ಮೆಚ್ಚುಗೆಯಿಂದ ಕಾಣುತ್ತಿತ್ತು.
ಗ್ರಂಥಾಲಯಗಳಲ್ಲಿ ತುಂಬಿಕೊಂಡ ಪುಸ್ತಕಗಳನ್ನು ಸ್ಪರ್ಧೆಯಿಂದೆಂಬಂತೆ ಓದುವ ಮಂದಿಯಿದ್ದರು. ಈ ಪುಸ್ತಕಗಳು ಬಹುಬೇಗನೆ ಜೀರ್ಣಾವಸ್ಥೆಯನ್ನು ತಲುಪುತ್ತಿದ್ದದ್ದೂ ಇತ್ತು. ಆರಂಭದ ಮತ್ತು ಕೊನೆಯ ಕೆಲವು ಪುಟಗಳಿಲ್ಲದ ಪುಸ್ತಕಗಳನ್ನು ನಾನು ನನ್ನ ಕಾಲೇಜು ದಿನಗಳಲ್ಲಿ (1970ರ ಆರಂಭದಲ್ಲಿ) ಗ್ರಂಥಾಲಯದಿಂದ ಪಡೆದು ಓದಿದ್ದಿದೆ. ಗ್ರಂಥಾಲಯಗಳಲ್ಲೇ ಕುಳಿತು ರಾಜಾಮಲಯಸಿಂಹದಂತಹ ಕೃತಿಗಳನ್ನು ಓದಿ ಪೂರೈಸಿದ್ದೂ ಇದೆ. ಇವುಗಳ ಓದಿಗೆ ವರ್ಗೀಕರಣವಾಗಲೀ ಅಸ್ಪಶ್ಯತೆಯಾಗಲೀ ಇರಲಿಲ್ಲ. ಗಳಗನಾಥ, ಅ.ನ.ಕೃ., ತರಾಸು, ಕೃಷ್ಣಮೂರ್ತಿ ಪುರಾಣಿಕ, ನಿರಂಜನ, ಕಟ್ಟೀಮನಿ, ತ್ರಿವೇಣಿ ಇವರನ್ನು ಓದಿದಂತೆಯೇ ಮತ್ತು ಅಷ್ಟೇ ಆಸಕ್ತಿಯಿಂದ ಹಾಸ್ಯ ಸಾಹಿತಿ ಬೀಚಿ, ಪತ್ತೇದಾರಿ ಕಾದಂಬರಿಗಳನ್ನು ಬರೆಯುತ್ತಿದ್ದ ಎನ್. ನರಸಿಂಹಯ್ಯ, ರಾಮಮೂರ್ತಿಯವರನ್ನೂ ಓದುತ್ತಿದ್ದೆವು. ಸಂಸ, ಕೈಲಾಸಂ ಹೇಗೆ ಜನಪ್ರಿಯರೋ ಹಾಗೆಯೇ ದಾಶರಥಿ ದೀಕ್ಷಿತ್, ಗುಂಡಣ್ಣನವರೂ ಜನಪ್ರಿಯರಾಗಿದ್ದರು. ಕಾಲೇಜು ದಿನಗಳಲ್ಲಿ ನಾಟಕವಾಡಬೇಕಾದರೆ ಗ್ರಂಥಾಲಯಗಳಲ್ಲಿದ್ದ ಈ ಪುಸ್ತಕಗಳನ್ನು ತಂದು ಪ್ರತಿಮಾಡಿಕೊಂಡು ನಾಟಕವಾಡಿದ್ದೂ ಇದೆ! ಊರೂರುಗಳಲ್ಲಿ ಪ್ರದರ್ಶಿತವಾಗುತ್ತಿದ್ದ ನಾವಿಂದು ಕಂಪೆನಿ ನಾಟಕಗಳೆಂದು ವರ್ಣಿಸುವ ಟಿಪ್ಪುಸುಲ್ತಾನ್, ಕಿತ್ತೂರು ರಾಣಿ ಚೆನ್ನಮ್ಮ, ಅಣ್ಣ-ತಂಗಿ ಮುಂತಾದ ನಾಟಕಗಳು ಬಹುಜನಾಕರ್ಷಣೆ ಪಡೆದಿದ್ದವು.
ಆಗ ಟಿಪ್ಪೂಮುಸ್ಲಿಂ, ಚೆನ್ನಮ್ಮ ಲಿಂಗಾಯತಳು ಎಂದು ಅನ್ನಿಸುವ ವಾತಾವರಣವಿರಲಿಲ್ಲ! ಬಂಗಾಳಿ ಭಾಷೆಯಿಂದ ಅನುವಾದಗೊಂಡ (ಠಾಗೋರ್, ಬಂಕಿಮಚಂದ್ರ, ಶರತ್ಚಂದ್ರ ಮುಂತಾದವರ) ಅನೇಕ ಕನ್ನಡ ಕಾದಂಬರಿಗಳು ಬಹು ಜನಪ್ರಿಯವಾಗಿದ್ದವು. ಅಷ್ಟೇ ಅಲ್ಲ, ಆಗ ಬರುತ್ತಿದ್ದ ಕನ್ನಡ ಸಿನೆಮಾಗಳನ್ನು (ಅನೇಕವು ಕನ್ನಡದ ಜನಪ್ರಿಯ ಕಾದಂಬರಿಗಳನ್ನಾಧರಿಸಿರುತ್ತಿದ್ದವು!) ನೋಡುತ್ತಿದ್ದ ಜನರು ಅವುಗಳ ನಗು-ಅಳು-ಭಯ-ದುಗುಡ-ದುಮ್ಮಾನಗಳಲ್ಲಿ ಭಾಗವಹಿಸುತ್ತಿದ್ದರು. ಸಿನೆಮಾಗಳ ಕಥೆ ಮತ್ತು ಹಾಡುಗಳನ್ನೊಳಗೊಂಡ ಹತ್ತುಪೈಸೆಯ ಪುಟ್ಟಹೊತ್ತಿಗೆಯೊಂದನ್ನು (ಅದಕ್ಕೆ ಪದ್ಯಾವಳಿ ಎಂದೇನೋ ಹೆಸರು!) ಹಿಡಿದುಕೊಂಡು ಒಬ್ಬ ಹುಡುಗ ಥಿಯೇಟರಿನೊಳಗೆ ನಾವು ಕುಳಿತ ಸಾಲಿನಲ್ಲೇ ಮಾರಿಕೊಂಡು ಬರುತ್ತಿದ್ದ. ನವ್ಯ ಸಾಹಿತ್ಯ ಬರುತ್ತಿದ್ದಂತೆಯೇ ನೊಂದವರ ಬಾಳನ್ನು, ಸಂವೇದನೆಗಳನ್ನು ಅಭಿವ್ಯಕ್ತಿಗೊಳಿಸುತ್ತಿದ್ದೇವೆ, ವಾಸ್ತವ ಪ್ರಪಂಚದ ಬೇರುಗಳನ್ನು ಕಂಡಿದ್ದೇವೆ, ಮನುಷ್ಯ ಪ್ರಪಂಚದ ನಿಗೂಢಗಳನ್ನು ಬರೆಯುತ್ತೇವೆ ಎಂದು ಸಾಧುಸಂತರಂತೆ ಹೇಳಿಕೊಂಡರೂ, ಬರವಣಿಗೆ ಅನೇಕರ ಭಾಷೆಯಾಗಲು ಪ್ರಯತ್ನಿಸಿದರೂ ಸಾಮಾನ್ಯ ಮತ್ತು ಅಸಾಮಾನ್ಯ ಓದುಗರ ಮತ್ತು ಬರಹಗಾರರ ಒಂದು ಭಿನ್ನಪ್ರಕಾರವು ಸೃಷ್ಟಿಯಾಯಿತೆನ್ನಿಸುತ್ತದೆ. ಈ ಹೊತ್ತಿಗೆ ಮುದ್ರಣ ಸುಲಭವಾಯಿತು. ಆಧುನಿಕ ತಂತ್ರಜ್ಞಾನ ನೆರವಾಯಿತು.
ಇದೇ ಮಟ್ಟದಲ್ಲಿ ಪ್ರಕಾಶನ ಪ್ರಪಂಚ ಬೆಳೆಯಿತೆಂದೇನೂ ಇಲ್ಲ. ಪ್ರತಿಷ್ಠಿತ ಪ್ರಕಾಶಕರು ಇಂದಿಗೂ ಸರಕಾರದ ಸಗಟು ಮಾರಾಟ ವಹಿವಾಟನ್ನೇ ನೆಚ್ಚಿ ಕೆಲವೇ ಬರಹಗಾರರ ಕೃತಿಗಳನ್ನು ದಶಾವತಾರ ಸ್ವರೂಪದಲ್ಲಿ ಪ್ರಕಟಿಸುವುದನ್ನು ಕಾಣಬಹುದು. ಇದರೊಂದಿಗೆ ಕೈಯಿಂದ ಹಣಹಾಕಿ ಪ್ರಕಟಿಸುವವರ ಸಂಖ್ಯೆಯೂ ಕಡಿಮೆಯೇನಲ್ಲ. ಕನ್ನಡದ ಒಳ್ಳೆಯ ಬರಹಗಾರ್ತಿಯೊಬ್ಬರು ಈಚೆಗೆ ತಮ್ಮ 75 ಶೇಕಡಾ ಕೃತಿಗಳನ್ನು ತಮ್ಮ ಕೈಯಿಂದಲೇ ವೆಚ್ಚ ಮಾಡಿ ಪ್ರಕಟಿಸಿದ್ದಾಗಿ ಹೇಳಿದಾಗ ಅವರು ನಮ್ಮ ಪ್ರಕಟನಾ ಜಗತ್ತಿನ ಬಹಿರಂಗ ರಹಸ್ಯವೊಂದನ್ನು ಬಯಲಿಗೆಳೆದರು. ಇಷ್ಟೇ ಅಲ್ಲ, ಕೆಲವು (ಪ್ರತಿಷ್ಠಿತ!) ಪ್ರಕಾಶಕರು ಕೇವಲ 500 ಪ್ರತಿಗಳನ್ನು ಮುದ್ರಿಸಿ (1,000 ಅಥವಾ ಅದಕ್ಕೂ ಹೆಚ್ಚು ಪ್ರತಿಗಳನ್ನು ಮುದ್ರಿಸಿದ್ದೇವೆಂಬ ಸಿಹಿಸುದ್ದಿಯನ್ನು ಮತ್ತು 100 ಪ್ರತಿಗಳನ್ನು ಲೇಖಕರಿಗೆ ನೀಡಿ) ವಿಮರ್ಶೆ/ಸಮೀಕ್ಷೆ/ತಮ್ಮ ಬಳಗಕ್ಕೆ ಇನ್ನೊಂದು 100, ಮತ್ತು 300 ಪ್ರತಿಗಳನ್ನು ಸರಕಾರಕ್ಕೆ ಕೊಟ್ಟು ಕೈಮುಗಿಯುತ್ತಿದ್ದಾರೆಂಬ ಅನಧಿಕೃತ ಸತ್ಯವೂ ಬಹಿರಂಗಗೊಂಡಿದೆ. ಬೆಂಗಳೂರಿನಲ್ಲಾದರೆ ಮುದ್ರಣಾಲಯದಿಂದ ನೇರ ಅವೆನ್ಯೂ ರಸ್ತೆ, ಬಳೆಪೇಟೆಯ ಹಳೆಯ ಪುಸ್ತಕಗಳ ಬೀದಿಮಾರುಕಟ್ಟೆಗೆ ಹೊಸ ಪುಸ್ತಕಗಳು ಬಿಡುಗಡೆಯಾದದ್ದೂ ಇದೆ.
ಈ ಹಂತದಲ್ಲಿ ಓದುಗರು ಹೊಸ ಬೆಳವಣಿಗೆಯನ್ನು ಜೀರ್ಣಿಸಿಕೊಳ್ಳಲಾರದೆ ಆದರೆ ಹೊಸದೇನೋ ಬರುತ್ತಿದೆ ಎಂದು ಕೊರಳು ಹಿಗ್ಗಿಸಿ ಇಣಿಕಿ ನೋಡಿದ್ದರು. ಆದರೆ ನವ್ಯ ಪದ್ಯಗಳು, ನಾಟಕಗಳು, ಕಥೆಗಳು, ಕಾದಂಬರಿಗಳು ಒಂದು ಚಳವಳಿಯೋಪಾದಿಯಲ್ಲಿ ಪ್ರದರ್ಶನಗೊಂಡಾಗ ಮತ್ತು ತಮ್ಮ ರುಚಿ ಮತ್ತು ಅಭಿರುಚಿಯು ಮುಖ್ಯವಾಹಿನಿಗಿಂತ ಬೇರೆಯೇ ಎಂಬುದನ್ನು ತೋರಿಸಹೊರಟಾಗ ಅನೇಕರು ದೂರಸರಿದರು. ಪುತಿನ ಅಂತಹವರೂ ಕುತೂಹಲಕ್ಕೆ ಮಣೆ ಹಾಕಿ ಇವರೊಂದಿಗೆ ನಿಷ್ಠುರ ಬೇಡ ಎಂಬ ಹಾಗೆ ಸಾದರಿಸಿದರೇ ವಿನಾ ತಾವು ಅಂತಹ ಪ್ರಯೋಗಕ್ಕೆ ಇಳಿಯಲಿಲ್ಲ. ಕೆ.ಎಸ್.ನ. ಒಬ್ಬರೇ ತಮ್ಮ ಕುರಿತ ಟೀಕೆಗಳನ್ನು ನವ್ಯದ ಮೂಲಕವೇ ಎದುರಿಸಿದ್ದು!
ಆದರೆ ನಮ್ಮ ಮಾಧ್ಯಮಗಳು ಇವನ್ನು ಅತ್ಯಂತ ಅಕ್ಕರೆಯಿಂದ ಕಂಡರು. ಹೊಸ ತಲೆಮಾರಿಗೆ ಅತ್ಯಂತ ಗೌರವವನ್ನು ನೀಡಿದವರೆಂದರೆ ಪತ್ರಿಕಾ ಪ್ರಪಂಚ. 1960ರ ದಶಕದಲ್ಲೇ ಉತ್ತಮ ಪ್ರಸಾರದಲ್ಲಿದ್ದ ಕೈಲಾಸ, ಗೋಕುಲ, ಪ್ರಜಾಮತ, ಜನಪ್ರಗತಿ ಮತ್ತು ಆನಂತರ ಬಂದ ಸುಧಾ, ತರಂಗ, ಕರ್ಮವೀರ, ತುಷಾರ, ಮಯೂರ ಮುಂತಾದ ಜನಪ್ರಿಯ ಪತ್ರಿಕೆಗಳು ನವ್ಯರಿಗಾಗಿ ವಿಶೇಷ ಕೊಠಡಿಗಳನ್ನು ತೆರೆದರು. ಯುವ ಜನಾಂಗ ಈ ಕೊಠಡಿಗಳನ್ನು ಅವುಗಳತ್ತ ಇಣುಕುವ ಕಿಟಕಿಗಳನ್ನು ಸದುಪಯೋಗಪಡಿಸಿಕೊಂಡರು. ಅನೇಕ ಒಳ್ಳೆಯ ಬರಹಗಾರರು ಈ ಕಾರಣವಾಗಿಯೇ ಪ್ರಕಟವಾದರು. ಇವಲ್ಲದೆ ನವ್ಯಸಾಹಿತ್ಯ ಪತ್ರಿಕೆಗಳೆಂದೇ ಹೊರಬಂದ ಸಾಕ್ಷಿ, ಸಂಕ್ರಮಣ ಇವೇ ಮೊದಲಾದ ಪ್ರಕಟನೆಗಳು ನವ್ಯರಿಗೆ ಕೆಂಪು ಹಾಸನ್ನು ಹಾಸಿದರು. ಪರಿಣಾಮವಾಗಿ ನವ್ಯದ ಕೆಂಪು ನೀರು ಎಲ್ಲೆಡೆ ಪ್ರವಾಹವಾಯಿತು. ಈ ಬುನಾದಿಯ ಮೇಲೆ ಆನಂತರ ದಲಿತ, ಬಂಡಾಯ, ಇನ್ನಿತರ ವರ್ಗಗಳೂ ಬೆಳೆದುಬಂದವು. ಇವೆಲ್ಲವೂ ನೆಲವನ್ನು ಅಗೆದದ್ದು ಮಾತ್ರವಲ್ಲ ಗೆರೆಮಿರಿವ ಚಿನ್ನದದಿರೆಂದು ಭಾವಿಸಿ ಅಂತರ್ಜಲವನ್ನು ಪೋಷಿಸಿಕೊಂಡು ಬರುತ್ತಿದ್ದ ಕಲ್ಲಿನ ಪದರವನ್ನು ಒಡೆದವು. ಅಲ್ಲಿಂದಲೂ ಸಾರವನ್ನೆಳೆದವು. ಎಲ್ಲೆಡೆ ನವ್ಯವೇ ಮೂಡಿತು. ಇದು ಸಾಹಿತ್ಯದಲ್ಲಿ ಕಂಡಷ್ಟು ಪ್ರಾಧಾನ್ಯವನ್ನು ಇತರ ಕಲಾ ಪ್ರಕಾರಗಳಲ್ಲಿ ಕಾಣಲಿಲ್ಲ.
ಏಕೆಂದರೆ ಅಲ್ಲಿ ಪರಂಪರೆಯ ಗಟ್ಟಿತನದ ಮೇಲೆಯೇ ಹೊಸದೆಲ್ಲ ಮೊಳೆದಿತ್ತು. ಪಾಶ್ಚಾತ್ಯ ಕಲಾಪ್ರಕಾರದಲ್ಲಿ ಹೊಸ ಬೆಳವಣಿಗೆ ನಿಧಾನವಾಗಿ ಮತ್ತು ವಿಕಾಸವಾದಂತೆ ಬೆಳೆದುಬಂದಿತ್ತಾದ್ದರಿಂದ ಅದೂ ಹಠಾತ್ ಬೆಳವಣಿಗೆಯೆಂದು ಅನ್ನಿಸದಂತಿದೆ. ಇವೆಲ್ಲದರ ನಡುವೆ ಮೌನವಾಗಿ ಓದುತ್ತಿದ್ದ ಒಂದು ಅಂತರ್ಜಲವು ನಮ್ಮ ನೀರಿನ ಸ್ಥಿತಿಯಂತೆ ಬರಿದಾಗುತ್ತಲೇ ಹೋಯಿತು. ಪರಿಣಾಮವಾಗಿ ನಾವಿಂದು ಕೆಲವು ನಿಯತಕಾಲಿಕಗಳು ಅಕಾಲಿಕವಾಗಿ ಮುಚ್ಚಿಹೋದದ್ದನ್ನು, ಇನ್ನು ಕೆಲವು ನಿಯತಕಾಲಿಕಗಳು ಕಥೆ, ಕಾದಂಬರಿ, ಕವನ ಇವುಗಳನ್ನು ತಮ್ಮ ಪುಟಗಳಿಂದ ಕಿತ್ತುಹಾಕಿದ್ದನ್ನು ಕಾಣುತ್ತೇವೆ. ಪತ್ರಿಕೆಯಲ್ಲಿ ಕವಿತೆ ಪ್ರಕಟವಾದರೆ ಅದನ್ನು ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳಲ್ಲಿ ಹಂಚುವುದು ಅನಿವಾರ್ಯವಾಗಿದೆ. ಹೀಗೆ ಹಂಚಿದರೆ ಸಾಲದು, ದಯವಿಟ್ಟು ಓದಿ ಎಂಬ ಕಳಕಳಿಯ ವಿನಂತಿಯನ್ನೂ ಮಾಡಬೇಕಾಗಿದೆ. ನಮ್ಮ ಕೃತಿಯೊಂದರ ಕುರಿತು ಯಾರಾದರೂ ಬರೆದರೆ ಅದನ್ನು ಅವರು ಮಾತ್ರವಲ್ಲ, ನಾವೂ ಹಂಚಬೇಕಾದ ಸ್ಥಿತಿ ಕನ್ನಡದ ಪ್ರಮುಖ ಲೇಖಕರೆಂದು ಪ್ರತಿಷ್ಠಾಪಿತರಾದವರಿಗೇ ಬಂದಿದೆಯೆಂದರೆ ಉಳಿದವರ ಗತಿ ಹೇಗಿರಬಹುದೆಂದು ಊಹಿಸಬಹುದು. ಪುಸ್ತಕಗಳನ್ನು ಸ್ನೇಹಿತರೊಂದಿಗೆ ಉಚಿತವಾಗಿ ಹಂಚಿಕೊಳ್ಳುವ, ವಿನಿಮಯ ಮಾಡಿಕೊಳ್ಳುವ, ಕ್ರಮ ಮೊದಲಿನಿಂದಲೂ ಇತ್ತು.
ಆದರೆ ಈಗ ಪುಸ್ತಕಗಳನ್ನು ಅನೇಕ ಲೇಖಕರು ಮುದ್ರಿಸಿದ ಪಾಪ ಹಂಚಿ ಪರಿಹಾರ ಎಂಬ ಹಾಗೆ ಉಚಿತವಾಗಿಯೇ ಹಂಚುವುದರಿಂದ ಕೊಳ್ಳುವ ಅಗತ್ಯವೂ ಬರುವುದಿಲ್ಲ. ಟಾಪ್ ಟೆನ್ ಟಾಪ್‌ಲೆಸ್ ಆಗಿರುವ ಸಂಶಯವೂ ಇದೆ. ಹೀಗೆ ಬಂದಿರುವ ಪುಸ್ತಕಗಳನ್ನು ತ್ಯಾಜ್ಯ ವಿಲೇವಾರಿಯಂತೆ ಅವರಿವರಿಗೆ, ಬಡಶಾಲೆಗಳಿಗೆ ನೀಡಿ ಹೊರೆ ಕಳಚಿಕೊಳ್ಳುವವರೂ ಇದ್ದಾರೆ. ಹೀಗೆ ಕೊಟ್ಟ ಪುಸ್ತಕಗಳಲ್ಲಿ ಆದರ/ಗೌರವ/ವಿಶ್ವಾಸ/ಪ್ರೀತಿ/ಸ್ನೇಹ-ಪೂರ್ವಕದ ಪುಸ್ತಕಗಳು, ನಲ್ಮೆ/ಆತ್ಮೀಯತೆಯ ಕೊಡುಗೆಗಳೂ ಇರುತ್ತವೆ. ಕುರ್ತಕೋಟಿಯವರೊಮ್ಮೆ ಬೀದಿ ಬದಿಯ ಹಳೆಯ ಪುಸ್ತಕದ ರಾಶಿಯಲ್ಲಿ ಅವರೇ ಇನ್ನೊಬ್ಬ ಬರಹಗಾರರಿಗೆ ತಮ್ಮ ಸಹಿಸಹಿತ ವಿಶ್ವಾಸದಿಂದ ಕೊಟ್ಟ ಪುಸ್ತಕವನ್ನು ಕಂಡು ಧನ್ಯರಾದರಂತೆ! (ಶಂಕರ ಮೊಕಾಶಿ ಪುಣೇಕರ ಅವರ ಈ ರೀತಿ ಯಾರಿಗೋ ನೀಡಿದ ಗಂಗಮ್ಮ ಗಂಗಾಮಾಯಿ ಪುಸ್ತಕವೊಂದು ನನಗೆ ಭಜನೆ ಪುಸ್ತಕಗಳ ನಡುವೆ ಕೇವಲ ಎಂಟಾಣೆಗೆ ಸಿಕ್ಕಿತ್ತು!) ಧರ್ಮಕ್ಕೆ ಬಂದದ್ದು ದಾನಕ್ಕೆ ಹೋಯಿತು ಎಂಬ ಉಕ್ತಿಯಿದ್ದರೂ ಇನ್ನೊಬ್ಬರು ನಮಗೆ ಹೀಗೆ ನೀಡಿದ ಪುಸ್ತಕವನ್ನು ಕನಿಷ್ಠ ನಾವು ಜೀವಂತವಾಗಿರುವಾಗ ಬೇರೆಯವರಿಗೆ ನೀಡುವ ಔದಾರ್ಯದ ಹಕ್ಕು ನಮಗಿದೆಯೆಂದು ನನಗನ್ನಿಸುವುದಿಲ್ಲ.
ಒಟ್ಟಿನಲ್ಲಿ ಇದರ ಚರ್ಚೆ ಮುಗಿವಿಲ್ಲದ್ದೆನ್ನಿಸುತ್ತದೆ. ಸಾಹಿತ್ಯವು ದೇವರಮನೆ ಯಿಂದ ಗ್ರಂಥಭಂಡಾರಕ್ಕೆ, ಅಲ್ಲಿಂದ ಪ್ರಕಟನಾ ಮಾಧ್ಯಮಗಳ ಮೂಲಕ ನಿತ್ಯಜೀವನಕ್ಕೆ ಬಂದು ಅನಂತರ ಸೆಮಿನಾರುಗಳಿಗೆ, ಆಮೇಲೆ ಅಂತರ್ಜಾಲಕ್ಕೆ ಮತ್ತು ಗುಂಪುಗಳಿಗೆ ಬಂದದ್ದನ್ನು ಗಮನಿಸಿದರೆ ನಮಗುಳಿಯುವುದು ಹಳೆಯ ಹೊನ್ನು ಮಾತ್ರವೇನೋ ಅನ್ನಿಸುತ್ತದೆ. ಆದರೆ ಇಷ್ಟು ಮಾತ್ರ ಖಂಡಿತ: ಹಳೆಯದೋ ಹೊಸದೋ ಹೊನ್ನಂತೂ ಉಳಿಯುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.