‘ದಿ ವೌಸ್‌ಟ್ರಾಪ್’ ಮಹಾತ್ಮೆ | Vartha Bharati- ವಾರ್ತಾ ಭಾರತಿ

--

‘ದಿ ವೌಸ್‌ಟ್ರಾಪ್’ ಮಹಾತ್ಮೆ

ಆಹ್ವಾನಿತ ಪ್ರೇಕ್ಷಕರಿಗಾಗಿ ‘ದಿ ವೌಸ್‌ಟ್ರಾಪ್’ನ ಪ್ರಥಮ ಪ್ರದರ್ಶನ ನಡೆದದ್ದು 1952ರ ಅಕ್ಟೋಬರ್ 6ರಂದು ಇಂಗ್ಲೆಂಡ್‌ನ ನಾಟಿಂಗ್ಹಮ್‌ನ ರಾಯಲ್ ಥಿಯೇಟರಿನಲ್ಲಿ. ಆನಂತರ ಅದೇ ವರ್ಷ ವೆಸ್ಟೆಂಡಿನ ಸೈಂಟ್ ಮೇರೀಸ್ ರಂಗಮಂದಿರದಲ್ಲಿ ಸಾರ್ವಜನಿಕ ಪ್ರದರ್ಶನ ಶುರುವಾಯಿತು. 1952ರಲ್ಲಿ ಶುರುವಾದ ‘ದಿ ವೌಸ್‌ಟ್ರಾಪ್’ ಪ್ರದರ್ಶನ ಆರು ದಶಕಗಳಿಗೂ ಹೆಚ್ಚು ಕಾಲದಿಂದ ಇಂದಿನವರೆಗೆ ನಿರಂತರವಾಗಿ ನಡೆಯುತ್ತಿದ್ದು ಅತಿಹೆಚ್ಚು ಪ್ರದರ್ಶನಗಳನ್ನು ಕಂಡ ನಾಟಕವೆಂದು ವಿಶ್ವವಿಕ್ರಮ ಸ್ಥಾಪಿಸಿದೆ. ಲಂಡನ್‌ಗೆ ಹೋದವರು ‘ದಿ ವೌಸ್‌ಟ್ರಾಪ್’ ನೋಡದೇ ಹಿಂದಿರುಗುವುದಿಲ್ಲ ಎನ್ನುವುದು ರೂಢಿಮಾತಾಗುವಷ್ಟು ಅದರ ಜನಪ್ರಿಯತೆ ಹಬ್ಬಿದೆ.


ಇವತ್ತಿನ ಕನ್ನಡ ರಂಗಭೂಮಿಯಲ್ಲಿ ಒಂದು ನಾಟಕ ನೂರು ಪ್ರದರ್ಶನಗಳನ್ನು ಕಂಡರೆ ಅದು ಹಿಮಾಲಯ ಸದೃಶ ಸಾಧನೆ. ಅದಕ್ಕಾಗಿ ಹಗಲುರಾತ್ರಿ ಎನ್ನದೇ ಸೈಕಲ್ ಹೊಡೆದು ಶ್ರಮಿಸಿದ ಸಕಲರೂ ಹಿಗ್ಗಿಹೀರೇಕಾಯಿ ಆಗುತ್ತಾರೆ. ಮಂತ್ರಿ ಮಹೋದಯರು ಈ ಸಶ್ರಮ ಕಲಾಯಾತ್ರೆಗೆ ‘‘ಮನೆಹಾಳರ ಕೆಲಸ’’ ಎಂದು ಷರಾ ಬರೆಯುತ್ತಾರೆ. ಈ ಹಿನ್ನೆಲೆಯಲ್ಲಿ ನಾವೆಲ್ಲ ವಿಸ್ಮಯಪಡುವಂಥ ಸುದ್ದಿಯೊಂದು ಬಂದಿದೆ. ಇಂಗ್ಲಿಷ್ ಕಥಾ ಸಾಹಿತ್ಯದಲ್ಲಿ ‘ಡಿಟೆಕ್ಟಿವ್ ಕ್ವೀನ್’-ಪತ್ತೇದಾರಿ ಸಾಮ್ರಾಜ್ಞಿ- ಎಂದೇ ಖ್ಯಾತಳಾದ ಅಗಾಥ ಕ್ರಿಸ್ಟಿಯ ‘ದಿ ವೌಸ್‌ಟ್ರಾಪ್’ ನಾಟಕ ಕಳೆದ ಆರೂ ಮುಕ್ಕಾಲು ದಶಕಗಳಿಂದ ನಿತ್ಯನಿರಂತರವಾಗಿ ಲಂಡನ್ನಿನ ವೆಸೆಂ್ಟಡ್‌ನ ಸೈಂಟ್ ಮೇರೀಸ್ ರಂಗಮಂದಿರದಲ್ಲಿ ಪ್ರದರ್ಶನ ಗೊಳ್ಳುತ್ತಿದ್ದು ಈಗ ಇದೇ ತಿಂಗಳು ಬೆಂಗಳೂರಿಗೂ ಬರಲಿದೆ. ‘ದಿ ವೌಸ್‌ಟ್ರಾಪ್’ ನಾಟಕದ ಕರ್ತೃ ಖ್ಯಾತ ಪತ್ತೇದಾರಿ ಕಾದಂಬರಿಕಾರಳಾದ ಅಗಾಥ ಕ್ರಿಸ್ಟಿ. ಅರವತ್ತಾರು ಪತ್ತೇದಾರಿ ಕಾದಂಬರಿಗಳನ್ನೂ ಹದಿನಾಲ್ಕು ನಾಟಕಗಳನ್ನು ಬರೆದಿರುವ ಕ್ರಿಸ್ಟಿ ‘ಬೆಸ್ಟ್ ಸೆಲ್ಲಿಂಗ್ ಆಥರ್’ಎಂದು ಗಿನ್ನೆಸ್ ದಾಖಲೆಯ ಸಮ್ಮಾನ ಪಡೆದವಳು. ಕ್ರಿಸ್ಟಿಯ ಕಾದಂಬರಿಗಳು ಇಲ್ಲಿಯವರೆಗೆ ಎರಡು ಲಕ್ಷ ಕೋಟಿ ಪ್ರತಿಗಳು ಮಾರಾಟವಾಗಿದ್ದು ಪ್ರಪಂಚದ 103 ಭಾಷೆಗಳಿಗೆ ಅನುವಾದಗೊಂಡಿವೆ. ‘ದಿ ವೌಸ್‌ಟ್ರಾಪ್’ ನಾಟಕ ಇಪ್ಪತ್ತೇಳು ಭಾಷೆಗಳಿಗೆ ಅನುವಾದಗೊಂಡಿದ್ದು ಜಗತ್ತಿನ ಐವತ್ತಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಪ್ರದರ್ಶನಗೊಂಡಿದೆ. ‘ವೌಸ್‌ಟ್ರಾಪ್’ ನಿಗೂಢ ಕೊಲೆಗಳ ಸುತ್ತ ಹೆಣೆದ ನಾಟಕ.

1952ರ ಒಂದು ದಿನ ಮಾಂಕ್‌ಸ್ವೆಲ್ ಮೇನರ್, ಲಂಡನ್‌ನ ಹೊರವಲಯದ ಗ್ರಾಮಾಂತರ ಪ್ರದೇಶದ ಸುಂದರ ಪರಿಸರದಲ್ಲಿನ ಒಂದು ಅತಿಥಿ ಗೃಹ. ನವ ವಿವಾಹಿತರಾದ ಜಿಲೆಸ್ ಮತ್ತು ಮೊಲ್ಲಿ ರ್ಯಾಲ್‌ಸ್ಟನ್ ಈ ಅತಿಥಿ ಗೃಹದ ಒಡೆಯರು. ಈ ದಂಪತಿ ಅತಿಥಿಗಳ ನಿರೀಕ್ಷೆಯಲ್ಲಿ ಕಾದು ಕುಳಿತಿರುವಂತೆ, ಲಂಡನ್‌ನ ಕಲ್ವೆರ್ ಉಪನಗರದಲ್ಲಿ ಸಂಭವಿಸಿದ ಘೋರ ಕೊಲೆಯ ಸುದ್ದಿಯನ್ನು ರೇಡಿಯೊ ಬಿತ್ತರಿಸುತ್ತದೆ. ಕೊಲೆಯ ಆರೋಪಿ ತಲೆತಪ್ಪಿಸಿಕೊಂಡಿದ್ದಾನೆ. ಅತಿಥಿ ಗೃಹಕ್ಕೆ ಗಿರಾಕಿಗಳು ಬರತೊಡಗಿದಂತೆ ಆಕಾಶವಾಣಿ ಮತ್ತೊಂದು ಕೊಲೆಯ ಸುದ್ದಿಯನ್ನು ಬಿತ್ತರಿಸುತ್ತದೆ. ಮೂರನೆಯ ಕೊಲೆಯೂ ಆಗಬಹುದೇನೋ ಎಂಬ ಭೀತಿಯೂ ಜನಮನದಲ್ಲಿ ತಲೆದೋರುತ್ತಿದೆ. ಕೊಲೆಗಾರನನ್ನು ಪತ್ತೆಹಚ್ಚಬೇಕಾದ ಪತ್ತೇದಾರ ಹಿಮಾಚ್ಛಾದಿತ ಬಿರುಗಾಳಿಯಿಂದಾಗಿ ಪುರಜನರಿಂದ ಪ್ರತ್ಯೇಕಿತನಾಗಿದ್ದಾನೆ. ಆದರೇನು? ಕೊಲೆಗಾರನನ್ನು ಪತ್ತೆಹಚ್ಚಲೇಬೇಕೆಂಬ ಕರ್ತವ್ಯಪ್ರಜ್ಞೆಯಿಂದ ಅವನ ಪತ್ತೆದಾರಿಕೆ ಶುರುವಾಗುತ್ತದೆ. ಹೀಗೆ ಪ್ರಾರಂಭವಾಗುವ ನಾಟಕ ಹಲವಾರು ತಿರುವುಗಳನ್ನು ಪಡೆಯುತ್ತಾ, ಪ್ರೇಕ್ಷಕರಲ್ಲಿ ಕುತೂಹಲದ ಅಲೆಗಳನ್ನು ಎಬ್ಬಿಸುತ್ತಾ ಎರಡು-ಎರಡೂವರೆ ಗಂಟೆ ಸಾಗುತ್ತದೆ. ಕೊನೆಗೆ ಕೊಲೆಗಾರನನ್ನು ಪತ್ತೆಹಚ್ಚುವುದರಲ್ಲಿ ಪತ್ತೇದಾರ ಯಶಸ್ವಿಯಾಗುತ್ತಾನೆ, ಪ್ರೇಕ್ಷಕರ ಕುತೂಹಲ ತಣಿಯುತ್ತದೆ. ಎದ್ದು ನಿಂತ ಪ್ರೇಕ್ಷಕರಲ್ಲಿ ಸೂತ್ರಧಾರ ವಿನಂತಿ ಮಾಡುತ್ತಾನೆ: ‘‘ಹೊರಗೆ ಹೋದಾಗ ನಾಟಕದ ಅಂತ್ಯ ಹೇಗಾಯಿತೆಂಬುದನ್ನು ನಿಮ್ಮ ಬಂಧುಮಿತ್ರರಿಗೆ ದಯಮಾಡಿ ತಿಳಿಸಬೇಡಿ’’ ಅಗಾಥ ಕ್ರಿಸ್ಟಿ (1890-1976) ಮೊದಲು ಈ ನಾಟಕವನ್ನು ಬರೆದದ್ದು ಆಕಾಶವಾಣಿಯಲ್ಲಿ ಪ್ರಸಾರಕ್ಕಾಗಿ.

ಪ್ರಸಾರ ನಾಟಕದ ಹೆಸರು: ‘ತ್ರೀ ಬ್ಲೈಂಡ್ ಮೈಸ್’. ಡೆನ್ನಿಸ್ ಓನೀಲ್ ಎಂಬವರ ಬದುಕಿನಲ್ಲಿ ಸಂಭವಿಸಿದ ಘಟನೆಯೊಂದನ್ನು ಆಧರಿಸಿ ಅಗಾಥ ಕ್ರಿಸ್ಟಿ ಬರೆದ ಸಣ್ಣ ಕಥೆ ಇದಕ್ಕೆ ಸ್ಫೂರ್ತಿ. ಈ ರೇಡಿಯೊ ನಾಟಕ 1947ರ ಮೇ 30ರಂದು ಪ್ರಸಾರವಾಯಿತು. ಎಮಿಲಿ ಲಿಟ್ಲರ್ ಎಂಬ ರಂಗ ನಿರ್ದೇಶಕ ಮೊತ್ತಮೊದಲ ಬಾರಿಗೆ ಈ ‘ತ್ರೀ ಬ್ಲೈಂಡ್ ಮೈಸ್’ ರೇಡಿಯೊ ರೂಪಕವನ್ನು ರಂಗದ ಮೇಲೆ ಪ್ರದರ್ಶಿಸಿದ. ಮೊದಲ ಪ್ರದರ್ಶನದ ನಂತರ ನಾಟಕದ ಹೆಸರನ್ನು ರೂಪಾಕಾರ್ಥ ಬರುವಂತೆ ಬದಲಾಯಿಸಿಲು ಲೇಖಕಿಯನ್ನು ಒತ್ತಾಯಪಡಿಸಿದನಂತೆ. ನಿರ್ದೇಶಕನಲ್ಲಿ ಹೆಸರು ಬದಲಾಯಿಸಬೇಕೆಂಬ ಉಮೇದು ಉಂಟಾದದ್ದು ಶೇಕ್ಸ್‌ಪಿಯರನ ‘ಹ್ಯಾಮ್ಲೆಟ್’ ನಾಟಕದ ಪ್ರೇರಣೆಯಿಂದ. ‘ಹ್ಯಾಮ್ಲೆಟ್’ ನಾಟಕದೊಳಗೊಂದು ನಾಟಕ ನಡೆಯುತ್ತದೆ. ದೊರೆ ಕ್ಲಾಡಿಯಸ್ ಆ ನಾಟಕದ ಹೆಸರೇನೆಂದು ಕೇಳಿದಾಗ ಹ್ಯಾಮ್ಲೆಟ್ ‘ದಿ ವೌಸ್‌ಟ್ರಾಪ್’ ಎಂದು ಉತ್ತರಿಸುತ್ತಾನೆ. ವಾಸ್ತವವಾಗಿ ‘ಹ್ಯಾಮ್ಲೆಟ್’ನ ಪೀಠಿಕಾ ಪ್ರಕರಣವಾಗಿ ಬರುವ ನಾಟಕದೊಳಗಿನ ಈ ನಾಟಕದ ಹೆಸರು ‘ದಿ ಮರ್ಡರ್ ಆಫ್‌ಗೊನ್ಸಾಗೊ’ ಎಂದು. ಹ್ಯಾಮ್ಲೆಟ್ ರೂಪಕಾಲಂಕಾರವಾಗಿ ಅದನ್ನು ‘ದಿ ವೌಸ್‌ಟ್ರಾಪ್’ ಎಂದು ಕರೆದಿರುತ್ತಾನೆ. ಇದರ ಸ್ಫೂರ್ತಿಯಿಂದಾಗಿ ‘ತ್ರೀ ಬ್ಲೈಂಡ್ ವೌಸ್’ ಮುಂದಿನ ಪ್ರದರ್ಶನಗಳಲ್ಲಿ ‘ದಿ ವೌಸ್‌ಟ್ರಾಪ್’ ಆಯಿತು.

‘ದಿ ವೌಸ್‌ಟ್ರಾಪ್’ ನಾಟಕದ ಮೂಲ ಕಥೆ ಮಾತ್ರ ಇನ್ನೂ ಪ್ರಕಟಗೊಂಡಿಲ್ಲ. ಕಥೆ ಪ್ರಕಟಗೊಂಡರೆ ನಾಟಕದ ಸ್ವಾರಸ್ಯ ಜನರಿಗೆ ಮೊದಲೇ ತಿಳಿದುಹೋಗುತ್ತದೆ ಎನ್ನುವ ಕಾರಣದಿಂದ ಅಗಾಥ ಕ್ರಿಸ್ಟಿ ಈ ಕಥೆಯನ್ನು ಪ್ರಕಟನೆಗೆ ಕೊಡಲೇ ಇಲ್ಲ. ಅಷ್ಟೇ ಅಲ್ಲ ಎಲ್ಲಿಯವರೆಗೆ ‘ದಿ ವೌಸ್‌ಟ್ರಾಪ್’ ವೆಸ್ಟೆಂಡ್ ರಂಗಮಂದಿರದಲ್ಲಿ ಪ್ರರ್ಶನವಾಗುತ್ತಿರುತ್ತದೋ ಅಲ್ಲಿಯವರೆಗೆ ಈ ಕಥೆಯನ್ನು ಪತ್ರಿಕೆಗಳಲ್ಲಾಗಲೀ ಪುಸ್ತಕರೂಪದಲ್ಲಾಗಲೀ ಪ್ರಕಟಿಸಬಾರದು ಎಂದು ನಿರ್ಧರಿಸಿದ್ದಳು. ‘ದಿ ವೌಸ್‌ಟ್ರಾಪ್’ ನಾಟಕದ ಹಕ್ಕುಗಳನ್ನು ಕ್ರಿಸ್ಟಿ ಹುಟ್ಟುಹಬ್ಬದ ಉಡುಗೊರೆಯಾಗಿ ಮೊಮ್ಮಗನಿಗೆ ನೀಡಿದ್ದಾಳೆ. ‘ದಿ ವೌಸ್‌ಟ್ರಾಪ್’ಗೆ ಆಧಾರವಾಗಿರುವ ಸಣ್ಣ ಕಥೆಯನ್ನು ಪ್ರಕಟನೆಗೆ ಕೊಡಬಾರದೆಂದು ಮೊಮ್ಮಗನಿಗೆ ಅಪ್ಪಣೆಮಾಡಿದ್ದಳು. ಹೀಗಾಗಿ ಈ ಕಥೆ ಲಂಡನ್‌ನಲ್ಲಿ ಇನ್ನೂ ಅಜ್ಞಾತವಾಗಿಯೇ ಉಳಿದಿದೆ. ಆದರೆ ಅದು ಅಮೆರಿಕದಲ್ಲಿ ‘ತ್ರೀ ಬ್ಲೈಂಡ್ ವೌಸ್ ಆ್ಯಂಡ್ ಅದರ್ ಸ್ಟೋರೀಸ್’ ಹೆಸರಿನಲ್ಲಿ ಪ್ರಕಟಗೊಂಡಿದ್ದು ಹೇಗೋ ತಿಳಿಯದು. ಆಹ್ವಾನಿತ ಪ್ರೇಕ್ಷಕರಿಗಾಗಿ ‘ದಿ ವೌಸ್‌ಟ್ರಾಪ್’ನ ಪ್ರಥಮ ಪ್ರದರ್ಶನ ನಡೆದದ್ದು 1952ರ ಅಕ್ಟೋಬರ್ 6ರಂದು ಇಂಗ್ಲೆಂಡ್‌ನ ನಾಟಿಂಗ್ಹಮ್‌ನ ರಾಯಲ್ ಥಿಯೇಟರಿನಲ್ಲಿ. ಆನಂತರ ಅದೇ ವರ್ಷ ವೆಸ್ಟೆಂಡಿನ ಸೈಂಟ್ ಮೇರೀಸ್ ರಂಗಮಂದಿರದಲ್ಲಿ ಸಾರ್ವಜನಿಕ ಪ್ರದರ್ಶನ ಶುರುವಾಯಿತು.

1952ರಲ್ಲಿ ಶುರುವಾದ ‘ದಿ ವೌಸ್‌ಟ್ರಾಪ್’ ಪ್ರದರ್ಶನ ಆರು ದಶಕಗಳಿಗೂ ಹೆಚ್ಚು ಕಾಲದಿಂದ ಇಂದಿನವರೆಗೆ ನಿರಂತರವಾಗಿ ನಡೆಯುತ್ತಿದ್ದು ಅತಿಹೆಚ್ಚು ಪ್ರದರ್ಶನಗಳನ್ನು ಕಂಡ ನಾಟಕವೆಂದು ವಿಶ್ವವಿಕ್ರಮ ಸ್ಥಾಪಿಸಿದೆ. ಲಂಡನ್‌ಗೆ ಹೋದವರು ‘ದಿ ವೌಸ್‌ಟ್ರಾಪ್’ ನೋಡದೇ ಹಿಂದಿರುಗುವುದಿಲ್ಲ ಎನ್ನುವುದು ರೂಢಿಮಾತಾಗುವಷ್ಟು ಅದರ ಜನಪ್ರಿಯತೆ ಹಬ್ಬಿದೆ. ಪ್ರವಾಸಿಗರನ್ನು ಆಕರ್ಷಿಸುವ ಈ ಜನಪ್ರಿಯತೆಯೇ ‘ದಿ ವೌಸ್‌ಟ್ರಾಪ್’ನ ಸುದೀರ್ಘಾಯುಷ್ಯದ ಗುಟ್ಟು ಎನ್ನುತ್ತಾರೆ ರಂಗ ವಿಮರ್ಶಕರು. ತನ್ನ ಈ ನಾಟಕ ಇಷ್ಟೊಂದು ವರ್ಷಕಾಲ ನಡೆಯುತ್ತದೆ ಎಂದು ಅಗಾಥ ಕ್ರಿಸ್ಟಿಯೇ ನಂಬಿರಲಿಲ್ಲವಂತೆ. ನಿರ್ದೇಶಕ ಪೀಟರ್ ರಂಗ ಪ್ರದರ್ಶನಕ್ಕೆ ಅನುಮತಿ ಪಡೆಯಲು ಹೋದಾಗ ಹದಿನಾಲ್ಕು ತಿಂಗಳುಗಳ ಕಾಲ ನಾಟಕ ಪ್ರದರ್ಶನ ನಡೆಸುವ ವಿಶ್ವಾಸ ವ್ಯಕ್ತಪಡಿಸಿದನಂತೆ. ಆಗ ಅಗಾಥ ಕ್ರಿಸ್ಟಿ ಎಂಟು ತಿಂಗಳಷ್ಟು ಕಾಲವೂ ನಡೆಯಲಾರದು ಎಂದು ಶಂಕೆ ವ್ಯಕ್ತ ಪಡಿಸಿದ್ದಳಂತೆ. ಪೀಟರ್ ನಿರ್ದೇಶನದ ‘ದಿ ವೌಸ್‌ಟ್ರಾಪ್’ನ ಪ್ರಾರಂಭದ ದಿನಗಳ ಪ್ರದರ್ಶನಗಳಲ್ಲಿ ‘ಗಾಂಧಿ’ ಚಲನಚಿತ್ರ ಖ್ಯಾತಿಯ ನಿರ್ದೇಶಕ ರಿಚರ್ಡ್ ಅಟೆನ್‌ಬರೋ ಪತ್ತೇದಾರನ ಪಾತ್ರದಲ್ಲಿ ಅಭಿನಯಿಸಿದ್ದರು. ಅಟೆನ್‌ಬರೋ ಪತ್ನಿ ಷೆಲ್ಲಾ ಸ್ಲಿಮ್ ಪತ್ತೇದಾರನ ಹೆಂಡತಿ ಪಾತ್ರದಲ್ಲಿ ಅಭಿನಯಿಸಿದ್ದರು. ದಂಪತಿ ಅದಕ್ಕೆ ಪಡೆದ ಸಂಭಾವನೆ ಪ್ರತಿ ಪ್ರದರ್ಶನದ ಗಳಿಕೆಯಲ್ಲಿ ಶೇ. ಹತ್ತರಷ್ಟು. ‘ದಿ ವೌಸ್‌ಟ್ರಾಪ್’ನ ಪ್ರದರ್ಶನ ನಿರಂತರವಾಗಿ ನಡೆಯುತ್ತಾ ಹೋದಂತೆ ನಟನಟಿಯರೂ ಬದಲಾಗುತ್ತಾ ಹೋದರು. ವೇಷಭೂಷಣಗಳಲ್ಲೂ ಬದಲಾವಣೆ ಮಾಡಲಾಯಿತು. 1965 ಮತ್ತು 1999ರಲ್ಲಿ ರಂಗಸಜ್ಜಿಕೆಯಲ್ಲೂ ಮಾರ್ಪಾಟು ಮಾಡಲಾಯಿತು. ಆದರೆ ನಾಟಕದ ದಿವಾನಖಾನೆಯಲ್ಲಿ ಕಾಲದ ಮೋಟಿಪ್ ಆಗಿ ಕಾಣಿಸಿಕೊಳ್ಳುವ ಗಡಿಯಾರವನ್ನು ಮಾತ್ರ ಬದಲಾಯಿಸದೆ ಪ್ರಥಮ ಪ್ರದರ್ಶನದಲ್ಲಿ ಬಳಸಿಕೊಂಡ ಓಬೀರಾಯನ ಕಾಲದ ಗೋಡೆ ಗಡಿಯಾರವನ್ನೇ ಉಳಿಸಿಕೊಳ್ಳಲಾಗಿದೆ.

‘ದಿ ವೌಸ್‌ಟ್ರಾಪ್’ನ ಸಾವಿರದೊಂದನೆಯ ಪ್ರದರ್ಶನ 1955ರ ಎಪ್ರಿಲ್ 22ರಂದು; ಹತ್ತುಸಾವಿರದ ಪ್ರದರ್ಶನ 1976ರ ಡಿಸೆಂಬರ 17ರಂದು; ಇಪ್ಪತ್ತು ಸಾವಿರದ ಪ್ರದರ್ಶನ 2000ದ ಡಿಸೆಂಬರ್ 16ರಂದು ಹಾಗೂ ಇಪ್ಪತ್ತೈದು ಸಾವಿರದ ಪ್ರದರ್ಶನ 2012ರ ಡಿಸೆಂಬರ್ 18ರಂದು ನಡೆಯಿತು. ಕಳೆದ ಅರವತ್ತೇಳು ವರ್ಷಗಳಿಂದ ಒಂದು ದಿನವೂ ತಪ್ಪದಂತೆ ಪ್ರದರ್ಶನಗೊಳ್ಳುತ್ತಾ ಲಂಡನ್‌ನ ಸಾಂಸ್ಕೃತಿಕ ಲೋಕದ ಒಂದು ಮಾದರಿ ಎನ್ನುವ ಕೀರ್ತಿಗೆ ಪಾತ್ರವಾಗಿರುವ ‘ದಿ ವೌಸ್‌ಟ್ರಾಪ್’ ಈಗ ಭಾರತ ಯಾತ್ರೆ ಕೈಗೊಂಡಿದೆ. ವೆಸ್ಟೆಂಡ್ ನಾಟಕ ತಂಡವು ಚೆನ್ನೈ, ಬೆಂಗಳೂರು ಮತ್ತು ಮುಂಬೈ ನಗರಗಳಲ್ಲಿ ‘ದಿ ವೌಸ್‌ಟ್ರಾಪ್’ ನಾಟಕ ಪ್ರದರ್ಶನ ನೀಡಲಿದೆ. ನವೆಂಬರ್ 14ರಿಂದ 17ರವರೆಗೆ ನಾಲ್ಕು ದಿನಗಳು ಬೆಂಗಳೂರಿನ ಕೋರಮಂಗಲದ ಸೈಂಟ್ ಜಾನ್ಸ್ ಆಡಿಟೋರಿಯಮ್‌ನಲ್ಲಿ ನಡೆಯಲಿದೆ. ಮನೆಯ ಬಾಗಿಲಿಗೇ ಬಂದಿರುವ ಲಂಡನ್ ತಂಡದ ‘ದಿ ವೌಸ್‌ಟ್ರಾಪ್’ ನೋಡಲೇ ಬೇಕೆಂಬ ಉತ್ಸಾಹ ನನ್ನಲ್ಲಿ ಗರಿಗೆದರಿತು. ಆದರೆ ಅದರ ಪ್ರವೇಶ ದರ ಗಮನಿಸಿದಾಗ ಆ ಉತ್ಸಾಹ ಜರ್ರನೆ ಇಂಗಿಹೋಯಿತು. ಪ್ರವೇಶ ದರ ಕನಿಷ್ಠ ದರ್ಜೆ ಒಂದು ಸಾವಿರ ರೂಪಾಯಿ, ಮೇಲ್ ದರ್ಜೆ ಆರು ಸಾವಿರ ರೂಪಾಯಿ. ‘ದಿ ವೌಸ್‌ಟ್ರಾಪ್’ ಸೇಂಟ್ ಜಾನ್ಸ್ ಪ್ರೊಸೀನಿಯಂ ಸಿಂಹಾಸನದಿಂದ ಕೆಳಕ್ಕಿಳಿದು ಯಾವತ್ತಾದರೂ ಕನ್ನಡಕ್ಕೆ ಬಂದರೆ ನಮ್ಮಂಥವರಿಗೆ ನೋಡಲು ಸಾಧ್ಯವಾದೀತೇನೋ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top