ಎಂಬತ್ತರ ‘ಯುವ’ಕವಿ: ಸಿದ್ಧಲಿಂಗ ಪಟ್ಟಣಶೆಟ್ಟಿ | Vartha Bharati- ವಾರ್ತಾ ಭಾರತಿ

--

ಎಂಬತ್ತರ ‘ಯುವ’ಕವಿ: ಸಿದ್ಧಲಿಂಗ ಪಟ್ಟಣಶೆಟ್ಟಿ

ಎಂಬತ್ತರ ಈ ಪ್ರಾಯ ಸಿದ್ಧಲಿಂಗ ಪಟ್ಟಣಶೆಟ್ಟಿಯವರು ನಡೆದು ಬಂದ ಸಾಹಿತ್ಯ ಪಥದ ರೇಖೆದೇಖೆ ಮಾಡಲು, ಅವರ ಸಾಹಿತ್ಯ ಕೃಷಿಯನ್ನು ಅಳೆದುಸುರಿದು ನೋಡಲು ಒಂದು ಹೇಳಿಮಾಡಿಸಿದಂಥ ಸಂದರ್ಭ. ಪಟ್ಟಣಶೆಟ್ಟಿಯವರದು ಬಹುಮುಖ ಪ್ರತಿಭೆ. ಕಾವ್ಯ, ಕಥೆ, ನಾಟಕ, ಲಲಿತ ಪ್ರಬಂಧ, ಜೀವನ ಚರಿತ್ರೆ, ವಿಮರ್ಶೆ ಹೀಗೆ ಅವರ ಸಾಹಿತ್ಯ ಕೃಷಿ ಹಲವಾರು ಪ್ರಕಾರಗಳಲ್ಲಿ ಯಶಸ್ವಿಯಾಗಿ ಸಾಗಿಬಂದಿದೆಯಾದರೂ ಅವರ ಸೃಜನಶೀಲತೆ ಹೆಚ್ಚಾಗಿ ಒಲಿದಿರುವುದು ಕಾವ್ಯಕ್ಕೆ. ಈ ಮಾತಿಗೆ, ಪಟ್ಟಶೆಟ್ಟಿಯವರು ಇಲ್ಲಿಯವರೆಗೆ ಹದಿನಾರು ಕಾವ್ಯ ಸಂಕಲನಗಳನ್ನು ಪ್ರಕಟಿಸಿದ್ದಾರೆ ಎನ್ನುವುದಕ್ಕಿಂತ ಮತ್ತೊಂದು ನಿದರ್ಶನ ಬೇಕಿಲ್ಲ. ಇಷ್ಟೂ ಸಂಕಲನಗಳಲ್ಲಿ ಅವರ ಕಾವ್ಯದ ಸಿರಿ ಸಮೃದ್ಧವಾಗಿ ಅಭಿವ್ಯಕ್ತಿ ಪಡೆದಿದೆ.


ಕಳೆದ ಶತಮಾನದ ಅರವತ್ತರ ದಶಕದ ದಿನಮಾನ. ‘ಚಂಡಮದ್ದಳೆ’ಯ ವೀರಾವೇಶದ ಉದ್ಘೋಷದೊಂದಿಗೆ ನವ್ಯ ಕಾವ್ಯ ರಂಗಪ್ರವೇಶ ಮಾಡಿದ ದಿನಗಳು. ಹಳೇ ಮೈಸೂರಿನ ಪ್ರದೇಶದಲ್ಲಿ ಗೋಪಾಲಕೃಷ್ಣ ಅಡಿಗರ ಕಾವ್ಯದ್ದೇ ಒಡ್ಡೋಲಗ. ನವ್ಯದ ಉತ್ಕಟತೆ ಕಾವ್ಯ ಪರಿಸರದ ಪಲುಕುಗಳಲ್ಲಿ ಬಿಸಿಬಿಸಿಯಾಗಿ ಹಬೆಯಾಡುತ್ತಿದ್ದ ಕಾಲಮಾನ. ಈ ಕಾಲದಲ್ಲಿ ಮಧುರಚೆನ್ನ ಬೇಂದ್ರೆ ಗೋಕಾಕರ ಕಾವ್ಯ ಭೂಮಿ ಉತ್ತರ ಕರ್ನಾಟಕದ ಎರೆ ಸೀಮೆಯ ಒಡಲಿನಾಳದಿಂದ ಮೇಲೆದ್ದುಬಂದ ಹೊಸ ಕಾವ್ಯದನಿಗಳಲ್ಲಿ ಒಡನೆಯೇ ರಸಿಕರ ಗಮನ ಸೆಳೆದವರು ಇಂದಿನ ಎಂಬತ್ತರ ‘ಯುವ’ ಕವಿ ಸಿದ್ಧಲಿಂಗ ಪಟ್ಟಣಶೆಟ್ಟಿಯವರು. ಕವಿಯಾಗಿ, ಅನುವಾದಕರಾಗಿ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ವಿಶಿಷ್ಟ ಸ್ಥಾನ ಗಳಿಸಿರುವ ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಹುಟ್ಟಿದ್ದು 1939ರ ನವೆಂಬರ್ 3ರಂದು ಧಾರವಾಡ ಸಮೀಪದ ಯಾದವಾಡದಲ್ಲಿ. ತಂದೆ ಬಸೆಟ್ಟಪ್ಪಸಿದ್ಲಿಂಗಪ್ಪಪಟ್ಟಣಶೆಟ್ಟಿ. ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಎರಡು-ಎರಡೂವರೆ ವರ್ಷಗಳ ಬಾಲಕನಿದ್ದಾಗಲೇ ತಂದೆಯ ವಿಯೋಗದಿಂದಾಗಿ ತಾಯಿ ಗಿರಿಜವ್ವಳ ಅಕ್ಕರಾಸ್ಥೆಯಲ್ಲೇ ಬೆಳೆದರು.

ಪ್ರಾಥಮಿಕ ವಿದ್ಯಾಭ್ಯಾಸ ಮನಗಂಡಿಯಲ್ಲಿ.ಹೈಸ್ಕೂಲ್ ಶಿಕ್ಷಣ ಹುಬ್ಬಳ್ಳಿಯ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ. ಹೈಸ್ಕೂಲಿನಲ್ಲಿ ಹಿಂದಿಯಲ್ಲಿ ಅನುತ್ತೀರ್ಣನಾದಾಗ ಬಾಲಕನಲ್ಲಿ ಹಿಂದಿಯನ್ನು ಒಲಿಸಿಕೊಳ್ಳುವ ಛಲಮೂಡಿತು. 1958ರಲ್ಲಿ ಹಿಂದಿ ಶಿಕ್ಷಕ್ ಸನದ್‌ನಲ್ಲಿ ಅಂದಿನ ಮುಂಬೈ ರಾಜ್ಯಕ್ಕೇ ಮೊದಲಿಗರಾಗಿ ಪಾಸಾದರು. ಅವ್ವ ಗಿರಿಜವ್ವ ಕೂಲಿಮಾಡುತ್ತಾ ಮಗನ ವಿದ್ಯಾಭ್ಯಾಸಕ್ಕೆ ಬದುಕ ಮುಡುಪಿಟ್ಟರೆ, ಓದೋದುತ್ತ ತರಗತಿಯಿಂದ ತರಗತಿಗೆ ಪಾಸಾಗುತ್ತಲೇ ಪೌಗಂಡ ವಯಸ್ಸು ದಾಟಿದ ತರುಣ ಸಿದ್ಧಲಿಂಗ ಪಟ್ಟಣಶೆಟ್ಟಿ ಮಕ್ಕಳಿಗೆ ಪಾಠ ಹೇಳುತ್ತಾ ತಾವೂ ಕಲಿಯುತ್ತಾ ಬಿ.ಎ.ಆನರ್ಸ್ ಪಾಸಾದರು. ಹಿಂದಿ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರಾದರು. ಮೋಹನ್ ರಾಕೇಶ್ ಮತ್ತು ಗಿರೀಶ್ ಕಾರ್ನಾಡ್ ನಾಟಕಗಳ ತೌಲನಿಕ ಅಧ್ಯಯನದ ಸಂಪ್ರಬಂಧಕ್ಕೆ ಡಾಕ್ಟರೆಟ್ ಪಡೆದರು. 1965ರಲ್ಲಿ ಉತ್ತರ ಕನ್ನಡದ ಸಿರ್ಸಿ ಕಾಲೇಜಿನಲ್ಲಿ ಅಧ್ಯಾಪನ ವೃತ್ತಿಗೆ ನಾಂದಿಯಾಯಿತು.ಕೆಲವೇ ದಿನಗಳಲ್ಲಿ ಅವರು ಕಲಿತ ಕರ್ನಾಟಕ ಕಲಾ ಮಹಾವಿದ್ಯಾನಿಲಯ ಕೈಬೀಸಿ ಕರೆಯಿತು. ಈ ಮಹಾವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ ನೇಮಕಗೊಂಡರು. ಮುಂದಿನ ವೃತ್ತಿ ಜೀವನವೆಲ್ಲ ಈ ಮಹಾವಿದ್ಯಾನಿಲಯಕ್ಕೇ ಮೀಸಲು. ರೀಡರ್ ಆಗಿ, ಪ್ರೊಫೆೆಸರ್ ಆಗಿ, ಹಿಂದಿ ವಿಭಾಗದ ಮುಖ್ಯಸ್ಥರಾಗಿ 1999ರಲ್ಲಿ ಸಿದ್ಧಲಿಂಗ ಪಟ್ಟಣಶಟ್ಟಿಯವರು ಅಧ್ಯಾಪನ ವೃತ್ತಿಯಿಂದ ವಿಶ್ರಾಂತರಾದರು. ಸೃಜನಶೀಲ ಬರವಣಿಗೆಗೆ ವಿಶ್ರಾಂತಿ ಇಲ್ಲ. ಎಂಬತ್ತರ ಈ ಪ್ರಾಯ ಸಿದ್ಧಲಿಂಗ ಪಟ್ಟಣಶೆಟ್ಟಿಯವರು ನಡೆದು ಬಂದ ಸಾಹಿತ್ಯ ಪಥದ ರೇಖೆದೇಖೆ ಮಾಡಲು, ಅವರ ಸಾಹಿತ್ಯ ಕೃಷಿಯನ್ನು ಅಳೆದುಸುರಿದು ನೋಡಲು ಒಂದು ಹೇಳಿಮಾಡಿಸಿದಂಥ ಸಂದರ್ಭ. ಪಟ್ಟಣಶೆಟ್ಟಿಯವರದು ಬಹುಮುಖ ಪ್ರತಿಭೆ.

ಕಾವ್ಯ, ಕಥೆ, ನಾಟಕ, ಲಲಿತ ಪ್ರಬಂಧ, ಜೀವನ ಚರಿತ್ರೆ, ವಿಮರ್ಶೆ ಹೀಗೆ ಅವರ ಸಾಹಿತ್ಯ ಕೃಷಿ ಹಲವಾರು ಪ್ರಕಾರಗಳಲ್ಲಿ ಯಶಸ್ವಿಯಾಗಿ ಸಾಗಿಬಂದಿದೆಯಾದರೂ ಅವರ ಸೃಜನಶೀಲತೆ ಹೆಚ್ಚಾಗಿ ಒಲಿದಿರುವುದು ಕಾವ್ಯಕ್ಕೆ. ಈ ಮಾತಿಗೆ, ಪಟ್ಟಣಶೆಟ್ಟಿಯವರು ಇಲ್ಲಿಯವರೆಗೆ ಹದಿನಾರು ಕಾವ್ಯ ಸಂಕಲನಗಳನ್ನು ಪ್ರಕಟಿಸಿದ್ದಾರೆ ಎನ್ನುವುದಕ್ಕಿಂತ ಮತ್ತೊಂದು ನಿದರ್ಶನ ಬೇಕಿಲ್ಲ. ಇಷ್ಟೂ ಸಂಕಲನಗಳಲ್ಲಿ ಅವರ ಕಾವ್ಯದ ಸಿರಿ ಸಮೃದ್ಧವಾಗಿ ಅಭಿವ್ಯಕ್ತಿ ಪಡೆದಿದೆ. ಎರಡು ಕಥಾ ಸಂಕಲನ, ಒಂಬತ್ತು ವಿಮರ್ಶಾ ಸಂಕಲನಗಳು, ಎರಡು ಲಲಿತ ಪ್ರಬಂಧಗಳ ಸಂಗ್ರಹಗಳು, ಎರಡು ಜೀವನ ಚರಿತ್ರೆ, ಎಂಟು ಸಂಪಾದಿತ ಕೃತಿಗಳು, ಹದಿನೈದು ನಾಟಕಗಳು, ಮೂರು ಅನುವಾದಿತ ಕಥಾ ಸಂಕಲನಗಳು ಹಾಗೂ ಮೂರು ಅನುವಾದಿತ ಕಾದಂಬರಿಗಳು, ಮೂರು ವ್ಯಕ್ತಿಚಿತ್ರ ಸಂಕಲನಗಳು, ‘ಗಿರಿಜವ್ವನ ಮಗ’ ಆತ್ಮಕಥೆ, ಇದರ ಮೇಲೆ ‘ಚಹಾದ ಜೋಡಿ ಚೂಡಾದ್ಹಾಂಗ’ ಅಂಕಣ ಬರಹಗಳ ಐದು ಸಂಪುಟಗಳು. ಹತ್ತಿರಹತ್ತಿರ ಎಂಬತ್ತು ಕೃತಿಗಳ ಸಾಹಿತ್ಯ ಸಂಪದ.ಎಂಬತ್ತು ವರ್ಷಕ್ಕೆ ಎಂಬತ್ತು, ಅಜಮಾಸು ವರ್ಷಕ್ಕೊಂದರಂತೆ.ಸಂಖ್ಯೆಯಲ್ಲೂ ಸತ್ವದಲ್ಲೂ ಸಮೃದ್ಧವಾದ ಕೃಷಿಯೇ ಸರಿ. ಈ ಮಧ್ಯೆ ಸಂಕ್ರಮಣ, ಸಂಕಲನ ಸಾಹಿತ್ಯ ಪತ್ರಿಕೆಗಳ ಸಂಪಾದನೆ.

‘ನೀನಾ’(1964) ಸಿದ್ಧಲಿಂಗ ಪಟ್ಟಣಶೆಟ್ಟರ ಮೊದಲ ಕವಿತಾ ಸಂಕಲನ. ವಿಮರ್ಶಕರು ಗಮನಿಸಿರುವಂತೆ ಈ ಸಂಕಲನದ ಕವಿತೆಗಳಲ್ಲಿ ಬರುವ ‘ನೀ’ ದುಃಖಾಂತಗಳ ಸಫಲ ಅಭಿವ್ಯಕ್ತಿಯಾದ ಅಗ್ನಿಕನ್ಯೆಯಾದರೆ, ‘ನಾ’ ಆಕೆಯ ವಿರಹದಿಂದ ನಿರಂತರ ವೇದನೆಗೆ ಆಹುತಿಯಾಗಿರುವ ಆಜ್ಯ. ಹೆಣ್ಣು ಗಂಡುಗಳ ನಡುವಣ ಅಗಲಿಕೆಯೇ ಇಲ್ಲಿಯ ಬಹುತೇಕ ಕವಿತೆಗಳ ವಸ್ತು. ಈ ಕವಿತೆಗಳಲ್ಲಿ ಅಗಲಿಕೆಯ ತೀವ್ರವಾದ ನೋವು, ತಪ್ತ ಭಾವ ಪ್ರಖರವಾಗಿ ಮೈಪಡೆದಿದೆ ಎನ್ನುತ್ತಾರೆ ಸಮಾನಸ್ಕಂದ ಕವಿ, ವಿಮರ್ಶಕ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು. ಮೂರು ವರ್ಷಗಳ ನಂತರ ಬಂದ ‘ಔರಂಗಜೇಬ’(1967) ಎರಡನೆಯ ಕವನ ಸಂಕಲನ. ಇದರಲ್ಲಿ ಭಾವುಕತೆ ಸ್ವಲ್ಪ ತಗ್ಗಿ ಸುತ್ತಲ ಸಮಾಜದ ಕಟುವಾಸ್ತವಿಕತೆಯತ್ತ, ಚರಿತ್ರೆಯತ್ತ ಕವಿ ಮುುಖಮಾಡಿದ್ದಾರೆ.ಮುಂದೆ ಅಧ್ಯಯನ, ಅನುಭವಗಳನ್ನು ಮಾಗಲು ಬಿಟ್ಟರೋ ಎಂಬಂತೆ ಒಂಬತ್ತು ವರ್ಷಗಳ ಸುದೀರ್ಘ ರಜೆಯ ನಂತರ ಮೂರನೆಯ ಸಂಕಲನ ‘ಪರದೇಸಿಯ ಹಾಡುಗಳು’(1976) ಪ್ರಕಟವಾಗಿದೆ. ಇದರಲ್ಲಿ ಕವಿ ಸಾಮಾಜಿಕ ಸಂದರ್ಭಗಳಲ್ಲಿ ಭಾಗಿಯಾಗುತ್ತಾ, ತನ್ನನ್ನು ಗುರುತಿಸಿಕೊಳ್ಳುತ್ತಾ, ನಿರ್ಭಾವುಕ ಮನಃಸ್ಥತಿಯಲ್ಲಿ ಸಾಮಾಜಿಕ ಸಂಬಂಧಗಳನ್ನೂ ಹೆಣ್ಣು-ಗಂಡುಗಳ ನಡುವಣ ಪ್ರೀತಿ ಸಂಬಂಧಗಳನ್ನೂ ಪ್ರಬುದ್ಧ ದೃಷ್ಟಿಕೋನದಿಂದ ವಿಶ್ಲೇಷಿಸುವ ಪರಿಯಲ್ಲಿ ಇಲ್ಲಿನ ಕವಿತೆಗಳು ಹೆಚ್ಚು ಆಪ್ತವಾಗುತ್ತವೆ. ನಿಶ್ಚಯವಾಗಿಯೂ ‘ಪರದೇಸಿ ಹಾಡುಗಳು’ ಕವಿಯಾಗಿ ಪಟ್ಟಣಶೆಟ್ಟರ ಬೆಳವಣಿಗೆಯ ದಿಕ್ಸೂಚಿಯಾಗಿ ನಿಲ್ಲುತ್ತದೆ. ಮೇಲಿನ ಮಾತಿಗೆ ನಿದರ್ಶನವಾಗಿಯೋ ಎಂಬಂತೆ ಮರುವರ್ಷವೇ ಪ್ರಕಟವಾದ ‘ನೂರಾರು ಪದ್ಯಗಳು’(1977) ವೈಚಾರಿಕತೆ ಮತ್ತು ಕಲಾತ್ಮಕತೆ ಎರಡರಲ್ಲೂ ನಮ್ಮ ಗಮನ ಸೆಳೆಯುತ್ತದೆ. ಹಾಯ್ಕು ಮಾದರಿಯ ಪ್ರೀತಿ-ಪ್ರೇಮ ಸಂಬಂಧಿತ ತೀಕ್ಷ್ಣ ರಚನೆಗಳು ಈ ಸಂಕಲನದಲ್ಲಿವೆ. ಹೆಣ್ಣು-ಗಂಡುಗಳ ಈ ಪ್ರೀತಿ-ಪ್ರಣಯ ಸಂಬಂಧಗಳಲ್ಲಿ, ತಾಳಿಯಾಕೆ, ತಾಳುವಾಕೆ ಮತ್ತು ತಾಳುವಾಕೆಯರ ಜೊತೆಯ ಸಂಬಂಧ ವ್ಯಕ್ತಿತ್ವವನ್ನು ಬೆಳೆಸುವುದಕ್ಕೆ ಅವಶ್ಯವೆಂದುಕೊಂಡರೂ ಇಂತಹ ಸಂಬಂಧ ಒಂದು ಅಪಸ್ವರವನ್ನೂ ಹೊರಡಿಸುತ್ತದೆ ಎಂಬ ಅರಿವೂ ನಾಯಕನಲ್ಲಿದ್ದು, ಬದುಕಿನ ಪ್ರವಾಹ ಇರುವುದೇ ಹೀಗೆ ಎಂಬ ಸಮಾಧಾನದಲ್ಲಿ ಕವಿಯ ದೃಷ್ಟಿ ಹೆಚ್ಚು ವಸ್ತುನಿಷ್ಠವಾಗುತ್ತದೆ.
 
‘ಪ್ರತೀಕ್ಷೆ(1976) ಸಂಕಲನದ ಕೆಲವು ಕವಿತೆಗಳಲ್ಲೂ ಗಂಡು-ಹೆಣ್ಣಿನ ಸಂಬಂಧದ ಜಟಿಲತೆಗಳ ಕಾಡುವಿಕೆಯಿಂದ ಕವಿ ಮುಕ್ತರಾಗಿಲ್ಲ ಎನ್ನಿಸುತ್ತದೆ. ಇದೇ ಸಂಕಲನದ ವಿಭಿನ್ನವಾದ ‘ಸೀಮಾ’ಪದ್ಯಗಳು ಮೋಹವಾಂಛೆಗಳನ್ನು ಮೀರಿದ ವಾತ್ಸಲ್ಯ ಭಾವದ ಪ್ರೌಢ ರಚನೆಗಳಾಗಿ ಪ್ರಿಯವಾಗುತ್ತವೆ. ಕವಿತೆ ಬರೆಯುವುದಕ್ಕೆ ಈ ಹಾಳು ಹುಡುಗಿಯರೇ ಬೇಕೆ?
ಯಾವ ಮೂಲೆಯ ಉಸಿರೂ ಕವಿಗೆ ಬೇಟೆ ತುಂಬಿದ ಪೇಟೆ
ರಸಘಟ್ಟ ಕವಿತೆಗೆ

ಎನ್ನುವಷ್ಟು ಪ್ರಬುದ್ಧವಾದ ಬೆಳವಣಿಗೆ ಸ್ಪಷ್ಟವಾಗುತ್ತದೆ. ಮತ್ತೆ ಬಂದಿದ್ದಾಳೆ(1982), ಅಯಸ್ಕಾಂತ(1986),‘ಇಂದು ರಾತ್ರಿಯ ಹಾಗೆ’(1994),‘ಇಷ್ಟು ಹೇಳಿದ ಮೇಲೆ’(2000), ‘ಅಪರಂಪಾರ’(2005),‘ನಿನ್ನ ಮರೆಯೋ ಮಾತು’(2011) ಸಂಕಲನಗಳಲ್ಲಿ ಕವಿ ಪಟ್ಟಣಶೆಟ್ಟರು ಸಂಕಲನದಿಂದ ಸಂಕಲನಕ್ಕೆ ಬೆಳೆಯತ್ತಾ ಬಂದಿರುವುದಕ್ಕೆ ಹಲವಾರು ದೃಷ್ಟಾಂತಗಳು ಕಾಣ ಸಿಗುತ್ತವೆ. ಈ ಮಧ್ಯೆ ‘ಪಟ್ಟಣಶೆಟ್ಟರ ಆಯ್ದ ಕವಿತೆಗಳು(1983), ‘ಆಯ್ದ ಕವಿತೆಗಳು(2011), ‘ಪಟ್ಟಣಶೆಟ್ಟಿ ಸಮಗ್ರ ಕಾವ್ಯ’(2000) ಪ್ರಕಟವಾಗಿದೆ. ‘ಕುಲಾಯಿ ಇರಲಿ ನನ್ನಲ್ಲಿಯೇ’ (2013) ಸಂಕಲನದ ಮೂಲಕ ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಮತ್ತೊಮ್ಮೆ ವಿಮರ್ಶಕರ ಆಸಕ್ತಿಯನ್ನು ಸೆಳೆದಿದ್ದಾರೆ. ಮಾಧವ ಕುಲಕರ್ಣಿಯವರು ಅಭಿಪ್ರಾಯಪಟ್ಟಿರುವಂತೆ ಆತ್ಮಚರಿತ್ರೆಯನ್ನೇ ಕಾವ್ಯವಾಗಿಸಲು ಹವಣಿಸುವ ಈ ಕಾವ್ಯ ಸಂಕಲನ, ಕುಟುಂಬ, ನಿಸರ್ಗ, ವ್ಯಕ್ತಿಗತವಾದ ಹರ್ಷ ಮತ್ತು ನೋವುಗಳನ್ನು ಏಕತ್ರಗೊಳಿಸುವ ಆಕಾಂಕ್ಷೆಯಲ್ಲಿ, ಜೀವನಾನುಭವದಿಂದ ಪಕ್ವಗೊಂಡ ಮನಸ್ಸೊಂದು ಮುಕ್ತವಾಗಿ ಮಾತನಾಡುವ ರೀತಿ ನೀತಿಯಿಂದ ಹೆಚ್ಚು ಮುಖ್ಯವಾಗುತ್ತದೆ.

‘ಕುಲಾಯಿ...’ ಅರವತ್ತೊಂದು ಕವನಗಳ ಒಂದು ಕಾವ್ಯಗುಚ್ಛ. ಇಲ್ಲಿ ಒಂದೊಂದು ಕವಿತೆಗೂ ಸ್ವತಂತ್ರ ಅಸ್ತಿತ್ವ ಇರಬಹುದಾದರೂ ಇದೊಂದು ರೂಪಕ ಕಾವ್ಯ. ‘ಅವ್ವ’, ಮಾತೃಹೃದಯ ಇದರ ಕೇಂದ್ರ ರೂಪಕ, ಇದರ ಅಸ್ಮಿತೆ. ಈ ರೂಪಕದ ಮೂಲಕವೇ ಕವಿ ಸಾಮಾಜಿಕ ಸ್ವಾಸ್ಥ್ಯವನ್ನೂ ಸಮಾಧಾನವನ್ನೂ ಕಾಣಬಯಸುತ್ತಾನೆ. ಕುಲಾಯಿ ನೆತ್ತಿಯನ್ನು ರಕ್ಷಿಸುವ ಮಾತೃರಕ್ಷೆ. ಎಂದೇ ಕವಿಗೆ ಅವ್ವ ಹೊಲಿದ ಕುಲಾಯಿ ಜೀವನಿಧಿ. ಆದರೆ ಬದಲಾಗುತ್ತಿರುವ ಕಾಲಮಾನದಲ್ಲಿ ಮಗಳು ಹೂವಿಯ ಹೂವಿನ ತಲೆಗೆ ಹೊಸ ಕುಲಾಯಿ ಬೇಕೆನ್ನಿಸುತ್ತದೆ. ಆದರೆ ನೆತ್ತ ರಕ್ಷಿಸುವ ಕುಲಾಯಿಯ ಧರ್ಮದಲ್ಲಿ ಬದಲಾವಣೆ ಇಲ್ಲ. ‘ಅಕ್ಷರಸ್ಥ ಪತ್ನಿಯಲ್ಲಿ ಅವ್ವನನ್ನು ಹುಡುಕುತ್ತಾ ಪಡೆದುಕೊಳ್ಳುತ್ತಿರುವಂತೆ ಮಗಳು ಹೂವಿಗೂ ಹೊಸ ಕುಲಾಯಿಯಲ್ಲಿ ನೆತ್ತಿ ಕಾಯುವ ರಕ್ಷಣೆಯ ಭರವಸೆಯನ್ನು ಕಾಣುತ್ತಾರೆ. ‘ಗುರಿ’ ಈ ಸಂಕಲನದ ಒಂದು ಮಹತ್ವದ ಕವಿತೆ. ಪಟ್ಟಣಶೆಟ್ಟಿಯವರ ಕಾವ್ಯ ಸತ್ವವನ್ನು ಪರಿಣಾಮಕಾರಿಯಾಗಿ ನಿರೂಪಿಸುವ ಕವಿತೆಯ ಈ ಸಾಲುಗಳನ್ನು ನೋಡಿ: ಪ್ರತೀಕ, ಪ್ರತಿಮೆ ಇತ್ಯಾದಿ ನಿಜ,
ಬಹಳ ಹೇಳುತ್ತಾರೆ
ಕೆಲ ಕವಿಗಳು, ಅವರ ತಲೆ ಮೇಲೆ

ಆಶೀರ್ವಾದ ಛಾಯಾಛತ್ರ ಚಾಚಿದ ವಿಮರ್ಶಕರು. ನನಗೆ ತಿಳಿದಿಲ್ಲ
ಯಾವುದೂ. ಬಹಳ ಯತ್ನಿಸಿದೆ.
ಪ್ರಜ್ಞಾಪಾತಳಿಗೆ ನಿಲುಕಿದ್ದು ನನ್ನ
ಎದೆಯೊಳಗಿನೊಳಗಿವಿ
ಒಳಗೆ ಅವಿತ ಹಳೆ ಕವಿತೆ
ಸಾಕೆನಗೆ ಸಂತೋಷ ಸಾಕಷ್ಟು
ಸಿಕ್ಕಿದೆ ನೆಮ್ಮದಿ

ನನ್ನ ಹಳ್ಳಿಯ ಹಳೆಯ ಕತ್ತಲು ರಾತ್ರಿಗಳಲ್ಲಿ ಹಳ್ಳದ ಹಾದಿಗಳಲ್ಲಿ.
-ಯಾವುದೇ ಪಂಥ, ಪ್ರಚಾರ, ಪ್ರಸಿದ್ಧಿ, ವಿಮರ್ಶೆಯ ಆಸರೆ ಈ ಯಾವ ಹಂಗು, ಜಂಜಾಟಗಳಿಲ್ಲದೆ ‘ಒಳಗೆ ಅವಿತ ಹಳೆ ಕವಿತೆ’ಯ ಸಂತೋಷ, ನೆಮ್ಮದಿಗಳಗೆ ತುಡಿವ ಕವಿ ಮನಸ್ಸಿನ ಪರಿ ಇದು. ಇದನ್ನೇ ಕವಿತೆ ಬರೆಯುವ ಉದ್ದೇಶವೇನು ಎಂಬ ಪ್ರಶ್ನೆಗೆ ಈ ಕವಿಯು ಸರಳವಾಗಿ ‘ಜೀವನದಲ್ಲಿ ಸಮಾಧಾನ ಪಡೆಯಲು’ ಎಂದು ಮಾಧವ ಕುಲಕರ್ಣಿಯವರು ಅರ್ಥೈಸಿದ್ದಾರೆ.

ಧಾರವಾಡ ಸುತ್ತಮುತ್ತಲಿನ ಆಡುಮಾತಿನ ಭಾಷೆ ಸಿದ್ಧಲಿಂಗ ಪಟ್ಟಣಶೆಟ್ಟಿಯವರಿಗೆ ಅಂತಃಕರಣದ ಭಾಷೆ ಆಗಿ ಒದಗಿ ಬಂದಿದೆ. ಕಾವ್ಯವಿರಲಿ, ನಾಟಕವಿರಲಿ, ಅಂಕಣ ಬರಹವಿರಲಿ, ಅವರದೇ ವಿಶಿಷ್ಟ ನುಡಿಗಟ್ಟಿನ ಈ ದೇಸಿ ಭಾವ-ಅರ್ಥಗಳಲ್ಲಿ, ಧ್ವನಿಯ ನಾದಮಾಧುರ್ಯಗಳಲ್ಲಿ ನಮ್ಮ ಮನಸ್ಸನ್ನು ಸೂರೆಗೊಳ್ಳುತ್ತದೆ. ನಾದನಾದ ತುಂಬಿ ಬಂದ ಅರ್ಥದ ನವನೀತ.

ಬಾಲ್ಯದಿಂದಲೂ ಸಣ್ಣಾಟ-ದೊಡ್ಡಾಟ-ಬಯಲಾಟಗಳ ಪರಿಸರದಲ್ಲಿ ಬೆಳೆದ ಪಟ್ಟಣಶೆಟ್ಟಿಯವರ ಎರಡನೆಯ ಪ್ರೀತಿ ರಂಗಭೂಮಿ. ಅವರು ಅನುವಾದಿಸಿರುವ ನಾಟಕಗಳಲ್ಲಿ ‘ಆಷಾಢದ ಒಂದು ದಿನ’, ‘ಅಧೇಅಧೂರೆ’, ‘ಅಂಧಯುಗ’, ‘ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ’, ‘ಅಲೆಗಳಲ್ಲಿ ರಾಜಹಂಸ’, ‘ಚೋರ ಚರಣದಾಸ’ ಕನ್ನಡದ ನಾಟಕಗಳೇ ಆಗಿ ಜನಮನವನ್ನು ಗೆದ್ದಿವೆ. ಅಂಕಣ ಬರಹಗಳಿಗೆ ಸಾಹಿತ್ಯದ ರಸರೂಪಸ್ಪರ್ಶಗಂಧ ನೀಡಿದವರಲ್ಲಿ ಪಟ್ಟಣಶೆಟ್ಟಿ ಪ್ರಮುಖರು.ಉತ್ತರ ಕರ್ನಾಟಕದ ಸಾಂಸ್ಕೃತಿಕ ಕಾರ್ಯಚಟುವಟಿಕೆಗಳಿಗೆ ರಾಜಧಾನಿಯ ಪತ್ರಿಕೆಗಳು ಸೂಕ್ತ ಪ್ರಾಶಸ್ತ್ಯ ನೀಡುತ್ತಿಲ್ಲ ಎಂಬ ದೂರು ಜೋರಾಗಿ ಕೇಳಿಬರುತ್ತಿದ್ದ ದಿನಗಳಲ್ಲಿ ಮೂಡಿಬಂದ ಅಂಕಣ ‘ಚಹಾದ ಜೋಡಿ ಚೂಡಾದ್ಹಾಂಗ’.

ಸಾಂಸ್ಕೃತಿಕ ಚಿಂತನೆಯ ಹುರುಳು ಮತ್ತು ವಿಶಿಷ್ಟ ಆಡುನುಡಿಯ ಲಯದಿಂದಾಗಿ ಒಂದು ರೀತಿ ಹೊಸ ಸಂಚಲನವನ್ನೇ ಉಂಟುಮಾಡಿತು ಈ ಅಂಕಣ ಬರಹಗಳು. ಪಟ್ಟಣಶೆಟ್ಟಿಯವರ ಉಳಿದ ಕೃತಿಗಳ ತಖ್ತೆ ತೆಗೆಯುವುದೂ ಈ ಅಂಕಣದ ಮಿತಿಯಲ್ಲಿ ಸಾಧ್ಯವಿಲ್ಲ. ‘ಗಿರಿಜವ್ವನ ಮಗ’ ಅವರ ಆತ್ಮ ಕಥೆಯ ಮೊದಲ ಭಾಗ. ಪ್ರಸಿದ್ಧಿ, ಪ್ರಶಸ್ತಿ ಸಮ್ಮಾನಗಳು ಬೇಡವೆಂದರೂ ರಾಜ್ಯೋತ್ಸವ, ಸಾಹಿತ್ಯ/ನಾಟಕ ಅಕಾಡಮಿ ಹೀಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು,‘ಸಹೃದಯ’ ಅಭಿನಂದನಾ ಗ್ರಂಥ ಗಿರಿಜವ್ವನ ಮಗನನನ್ನು ಅರಸಿ ಬಂದಿವೆ. ಹದಿನಾರಕ್ಕೂ ಹೆಚ್ಚು ಕಾವ್ಯ ಸಂಗ್ರಹಗಳನ್ನು ಪ್ರಕಟಿಸಿ ಪಟ್ಟಣಶೆಟ್ಟರು ತಮ್ಮ ಪೀಳಿಗೆಯ ಮುಖ್ಯ ಕವಿಯಾಗಿ ಎದ್ದುಕಾಣುತ್ತಾರೆಂದು ಕನ್ನಡ ಸಾಹಿತ್ಯ ಚರಿತ್ರೆ ಗುರುತಿಸಿದೆ. ಸಿದ್ಧಲಿಂಗ ಪಟ್ಟಣಶೆಟ್ಟರಿಗೆ ಪ್ರಾಯ ಎಂಭತ್ತಾದರೂ ಅವರಲ್ಲಿ ಕಾವ್ಯೋತ್ಸಾಹ, ಚೈತನ್ಯಗಳು ಉಡುಗಿಲ್ಲ. ಎಂಬತ್ತರ ಸಂಭ್ರಮದಲ್ಲಿ ಹದಿನೇಳನೆಯ ಕವನ ಸಂಗ್ರಹ ‘ಚಿಂತಾಮಣಿ’, ನಾಟಕ ‘ಮಾಳವಿಕಾಗ್ನಿ ಮಿತ್ರಂ’ ಮತ್ತು ಇನ್ನೂ ಏಳೆಂಟು ಕೃತಿಗಳನ್ನು ಕನ್ನಡಿಗರಿಗೆ ಅರ್ಪಿಸಲು ಸಿದ್ಧತೆ ನಡೆಸಿರುವ ಕವಿಮಿತ್ರ ಸಿದ್ಧಲಿಂಗ ಪಟ್ಟಣ ಶೆಟ್ಟಿಯವರಿಗೆ ಹೇಳೋಣ-
  ಸ್ವಸ್ತಿ ಸ್ವಸ್ತಿ ಸ್ವಸ್ತಿ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top