ನೆಹರೂ ಸ್ಮಾರಕದ ಕಥೆ, ವ್ಯಥೆ | Vartha Bharati- ವಾರ್ತಾ ಭಾರತಿ

--

ನೆಹರೂ ಸ್ಮಾರಕದ ಕಥೆ, ವ್ಯಥೆ

 ಈಗ ಮಾಡಲಾಗಿರುವ ಬದಲಾವಣೆಗಳಿಗೆ ಸಂಬಂಧಿಸಿದಂತೆ ಬಂದಿರುವ ಟೀಕೆಗಳಿಗೆ ಪ್ರತಿಕ್ರಿಯಿಸುತ್ತಾ, ನೆಹರೂ ವಸ್ತುಸಂಗ್ರಹಾಲಯ ಮತ್ತು ಪುಸ್ತಕ ಭಂಡಾರ ನೆಹರೂ ಕುಟುಂಬದ, ಅವರ ಅಭಿಮಾನಿಗಳ ಸ್ವತ್ತಲ್ಲ ಎನ್ನುವ ಮಾತು ಸರಕಾರದ ವಲಯಗಳಿಂದ ಕೇಳಿಬಂದಿದೆ. ಹೌದು, ಹಾಗೆಯೇ ಅದು ನೆಹರೂ ದ್ವೇಷಿಗಳ ಸ್ವತ್ತೂ ಆಗಬಾರದು. ಅದು ಮೂಲೋದ್ದೇಶದಂತೆ ಶುದ್ಧಾಂಗವಾಗಿ ಇತಿಹಾಸ, ಸಮಾಜ ವಿಜ್ಞಾನ ಮತ್ತು ಸಂಸ್ಕೃತಿಗಳ ಅಧ್ಯಯನ ಮತ್ತು ಸಂಶೋಧನೆಯ ಸಂಸ್ಥೆಯಾಗಿಯೇ ಉಳಿಯಬೇಕು.


ಈ ತಿಂಗಳ 14ರಂದು ಪಂಡಿತ್ ಜವಾಹರಲಾಲ್ ನೆಹರೂ ಅವರ ಜಯಂತಿ ಹಿಂದಿನ ವರ್ಷಗಳ ಸಡಗರ ಸಂಭ್ರಮಗಳಿಲ್ಲದೆ ಒಂದು ಪೇಲವ ಆಚರಣೆಯಾಗಿ ಬಂದು ಹೋಯಿತು. ನೆಹರೂ ಅವರ ಸ್ಮರಣೆಯೇ ಒಂದು ಪಾಪ ಎನ್ನುವ ಮಟ್ಟಿಗೆ ದೇಶದಲ್ಲಿ ನೆಹರೂ ವಿರೋಧಿ ವಾತಾವರಣವಿರುವ ಇಂದಿನ ಪರಿಸ್ಥಿತಿಯಲ್ಲಿ ಇದು ಸಹಜವಾದುದೇ. ಸಮಯ, ಸಂದರ್ಭ ಸಿಕ್ಕಾಗಲೆಲ್ಲ ನೆಹರೂ ವಿರುದ್ಧ ದ್ವೇಷಕಾರುವ ಸಂಘಟನೆಗಳು ಚುರುಕಾಗಿರುವ, ಅವರದೇ ಸರಕಾರವಿರುವ ಈ ದಿನಗಳಲ್ಲಿ ನೆಹರೂ ಪರಂಪರೆಯನ್ನು ಅಳಿಸಿಹಾಕುವ ಅಥವಾ ವಿಕೃತಗೊಳಿಸುವ ಕೆಲಸವಂತೂ ಅವ್ಯಾಹತವಾಗಿ ನಡೆದಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಪುಸ್ತಕ ಭಂಡಾರ (ನೆಹರೂ ಮೆಮೋರಿಯಲ್ ಮ್ಯೂಸಿಯಂ ಆ್ಯಂಡ್ ಲೈಬ್ರರಿ ಸೊಸೈಟಿ) ಸಂಸ್ಥೆಯಲ್ಲಿ ಕೇಂದ್ರ ಸರಕಾರ ಮಾಡಿರುವ ಬದಲಾವಣೆಗಳು. ಸಂಶೋಧನೆ, ಜ್ಞಾನಾರ್ಜನೆ ಮತ್ತು ಸಂಸ್ಕೃತಿ ಪೋಷಣೆಯಂತಹ ಘನ ಉದ್ದೇಶ ಹೊಂದಿರುವ ಈ ಸಂಸ್ಥೆಯನ್ನು ನವೀಕರಿಸುವ ಉದ್ದೇಶದಿಂದ ಮಾಡಲಾಗಿರುವ ಈ ಬದಲಾವಣೆಯಲ್ಲಿ ಪ್ರಮುಖವಾದದ್ದು, ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನಿರ್ದೇಶಕರನ್ನು ಆಡಳಿತ ಮಂಡಳಿಯಿಂದ ತೆಗೆದು ಹಾಕಿ ಅವರ ಜಾಗಕ್ಕೆ ಬಿಜೆಪಿ ಮತ್ತು ಆರೆಸ್ಸೆಸ್ ಅಭಿಮಾನಿಗಳನ್ನು ನೇಮಿಸಿರುವುದು. ಈ ಬದಲಾವಣೆ ಕಾಂಗ್ರೆಸ್ ಹಾಗೂ ಬುದ್ಧಿಜೀವಿಗಳ ವಲಯಗಳಲ್ಲಿ ತೀವ್ರ ಅಸಮಾಧಾನ ಹಾಗೂ ಟೀಕೆಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಧ್ಯಕ್ಷರಾಗಿರುವ, ರಕ್ಷಣಾ ಸಚಿವ ರಾಜನಾಥ ಸಿಂಗ್ ಉಪಾಧ್ಯಕ್ಷರಾಗಿರುವ ಆಡಳಿತ ಮಂಡಳಿಯಿಂದ ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್, ಕರಣ್ ಸಿಂಗ್ ಅವರನ್ನು ತೆಗೆದು ಹಾಕಿ ಅವರ ಜಾಗಕ್ಕೆ ಗೃಹ ಸಚಿವ ಅಮಿತ್ ಶಾ, ವಿದ್ಯುನ್ಮಾನ ಮಾಧ್ಯಮದ ಪತ್ರಕರ್ತ ರಜತ್ ಶರ್ಮಾ ಮತ್ತು ಚಲಚಿತ್ರ ಸೆನ್ಸಾರ್ ಮಂಡಳಿಯ ಅಧ್ಯಕ್ಷ ಪ್ರಸೂನ್ ಜೋಶಿ ಅವರನ್ನು ನೇಮಿಸಲಾಗಿದೆ. ಅಲ್ಲದೆ ಆಡಳಿತ ಮಂಡಳಿಯ ನಿರ್ದೇಶಕರ ಸಂಖ್ಯೆಯನ್ನು 34ರಿಂದ 28ಕ್ಕೆ ಇಳಿಸಲಾಗಿದೆ

. ಈ ಬದಲಾವಣೆಯಿಂದಾಗಿ ಆಡಳಿತ ಮಂಡಳಿಯಿಂದ ನೆಹರೂ ಆದರ್ಶಗಳಲ್ಲಿ ನಂಬಿಕೆಹೊಂದಿದ್ದ ಮುಕ್ತ ಮನಸ್ಸಿನ ವಿದ್ವಾಂಸರೆಲ್ಲರನ್ನೂ ಹೊರದಬ್ಬಿದಂತಾಗಿದೆ. ಐದು ದಶಕಕ್ಕೂ ಹೆಚ್ಚಿನ ಇತಿಹಾಸ ಉಳ್ಳ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಪುಸ್ತಕ ಭಂಡಾರ ಇಷ್ಟು ಸುದೀರ್ಘ ಅವಧಿಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದಂತಹ ದಿನಗಳನ್ನೂ ಅಧೋಗತಿಗಿಳಿದ ದಿನಗಳನ್ನೂ ಕಂಡಿದೆ. ಈಗಿನ ಉದ್ದೇಶಿತ ನವೀಕರಣ ಏರುಹಾದಿಯದೋ ಜಾರುಹಾದಿಯದೋ ಎನ್ನುವುದನ್ನು ತಿಳಿಯಲು ಕಾಯಬೇಕಷ್ಟೇ. ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥ ಭಂಡಾರವನ್ನು ಹೊಸದಿಲ್ಲಿಯ ತೀನ್ ಮೂರ್ತಿ ಭವನದಲ್ಲಿ ಸ್ಥಾಪಿಸಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ದಿಲ್ಲಿ ಮಹಾನಗರದ ಭವ್ಯ ಬಂಗಲೆ ಎಂದೇ ಪ್ರಖ್ಯಾತವಾಗಿದ್ದ ತೀನ್‌ಮೂರ್ತಿ ಭವನ ಬ್ರಿಟಿಷ್ ಸೇನೆಯ ಮಹಾ ದಂಡನಾಯಕನ ನಿವಾಸವಾಗಿತ್ತು. ಸ್ವಾತಂತ್ರ್ಯಾನಂತರ 1948ರ ಮಧ್ಯಭಾಗದಲ್ಲಿ ಅಂದಿನ ಪ್ರಧಾನ ಮಂತ್ರಿ ನೆಹರೂ ತೀನ್ ಮೂರ್ತಿ ಭವನಕ್ಕೆ ತಮ್ಮ ವಾಸ್ತವ್ಯವನ್ನು ಬದಲಾಯಿಸಿದರು ಹಾಗೂ ಜೀವಿತಾವಧಿ ಪೂರ್ತಿ ಅಲ್ಲೇ ಇದ್ದರು. 1964ರ ಮೇ ತಿಂಗಳಿನಲ್ಲಿ ನೆಹರೂ ಕಾಲವಶರಾದ ನಂತರ ಅವರ ಮಗಳು ಇಂದಿರಾ ಗಾಂಧಿಯವರು ತಮ್ಮ ತಂದೆಯೇ ತೀನ್ ಮೂರ್ತಿ ಭವನದ ಮೊದಲ ಹಾಗೂ ಕೊನೆಯ ಭಾರತೀಯ ನಿವಾಸಿಯಾಗಿರಬೇಕೆಂದು ನಿರ್ಧರಿಸಿದರು. ಶೋಕದ ದಿನಗಳು ಮುಗಿದ ಕೂಡಲೇ ತೀನ್ ಮೂರ್ತಿ ಭವನ ಪಂಡಿತ್ ಜವಾಹರಲಾಲ್ ನೆಹರೂ ಸ್ಮಾರಕವಾಗಲಿದೆಯೆಂದು ಪ್ರಕಟಿಸಲಾಯಿತು. ಇದಕ್ಕೆ ಗಾಂಧಿಯವರ ಹತ್ಯೆಯಾದ ಬಿರ್ಲಾಭವನವನ್ನು ಮಹಾತ್ಮ್ಮರ ಸ್ಮಾರಕ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಿದ ಪೂರ್ವನಿದರ್ಶನವೂ ಇತ್ತು.

ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಪುಸ್ತಕ ಭಂಡಾರ ನಿರ್ಮಿಸುವ ಹೊಣೆಯನ್ನು ಆಗ ಕೇಂದ್ರ ಸಂಪುಟದಲ್ಲಿ ಸಂಸ್ಕೃತಿ ಸಚಿವರಾಗಿದ್ದ ಎಂ.ಸಿ.ಛಗಲಾ ಅವರಿಗೆ ವಹಿಸಲಾಯಿತು. ಸ್ವತ: ವಿದ್ವಾಂಸರೂ ಸಾಹಿತಿಗಳೂ ಮುತ್ಸದ್ದಿಯೂ ಆಗಿದ್ದ ಛಗಲಾ ಅವರು ಖುದ್ದು ಆಸಕ್ತಿ ವಹಿಸಿ ನೆಹರೂ ಅವರಿಗೆ ಅನ್ಯಾಯವಾಗದಂತೆ ತೀನ್ ಮೂರ್ತಿ ಭವನವನ್ನು ಸ್ಮಾರಕವಾಗಿ ಪರಿವರ್ತಿಸಿದರು. ವಸ್ತು ಸಂಗ್ರಹಾಲಯದ ಜೊತೆಗೆ ಭವನದ ಆವರಣದೊಳಗೆ ಇದ್ದ ಜಾಗದಲ್ಲಿ ಸಾರ್ವಜನಿಕ ಪತ್ರಾಗಾರ(ಆರ್ಕೈವ್) ಮತ್ತು ಗ್ರಂಥ ಭಂಡಾರವನ್ನು ಸ್ಥಾಪಿಸಲಾಯಿತು. ಖ್ಯಾತ ಇತಿಹಾಸಕಾರರೂ ಜೀವನಚರಿತ್ರೆಕಾರರೂ ಆಗಿದ್ದ ಬಿ.ಆರ್.ನಂದಾ ಅವರನ್ನು ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯದ ಪ್ರಥಮ ನಿರ್ದೇಶಕರನ್ನಾಗಿ ನೇಮಿಸಲಾಯಿತು. ಅಧಿಕಾರ ವಹಿಸಿಕೊಂಡ ನಂದಾ ಅವರು ಈ ವಸ್ತು ಸಂಗ್ರಹಾಲಯ ಮತ್ತು ಗ್ರಂಥ ಭಂಡಾರ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಕೇಂದ್ರವಾಗಿರಬೇಕು ಎಂದು ನಿರ್ಧರಿಸಿದರು. ನೆಹರೂ ಅವರ ಖಾಸಗಿ ಪುಸ್ತಕ ಭಂಡಾರ, ಅವರು ರಚಿಸಿದ ಗ್ರಂಥಗಳು, ಅವರ ಹಸ್ತ ಪ್ರತಿಗಳು, ಅವರು ಬಳಸುತ್ತಿದ್ದ ವಸ್ತುವಿಶೇಷಗಳ ಜೊತೆಗೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದಂತೆ ದೇಶದ ವಿವಿಧೆಡೆಗಳಿಂದ ಸಂಗ್ರಹಿಸಿದ ದಾಖಲೆಗಳನ್ನು, ಪತ್ರಗಳನ್ನು, ಚಿತ್ರಗಳನ್ನು, ದಸ್ತಾವೇಜುಗಳನ್ನು ಇಲ್ಲಿ ವ್ಯವಸ್ಥಿತವಾಗಿ ಸಂಗ್ರಹಿಸಿಡುವ ಕಾರ್ಯ ಕೈಗೆತ್ತಿಕೊಂಡರು. ಇವೆಲ್ಲವನ್ನೂ ದೇಶದಾದ್ಯಂತ ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಿದವರ ಕುಟುಂಬಗಳಿಂದ ಸಂಗ್ರಹಿಸಲಾಯಿತು.ಆಗ ಇದ್ದ ಸ್ವಾತಂತ್ರ್ಯ ಯೋಧರ ಸಂದರ್ಶನಗಳನ್ನು ನಡೆಸಿ ಅವರ ಜೀವನಗಾಥೆಗಳನ್ನು ಸಿದ್ಧಪಡಿಸಿ ವಸ್ತು ಸಂಗ್ರಹಾಲಯಕ್ಕೆ ಸೇರಿಸಲಾಯಿತು.

ಪತ್ರಿಕಾಲಯಗಳು ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಇದ್ದ ಅಮೂಲ್ಯ ದಾಖಲೆಗಳನ್ನು ಮೈಕ್ರೋ ಫಿಲ್ಮ್ ಮಾಡಿಸಿ ಸಂಗ್ರಹಾಲಯಕ್ಕೆ ನೀಡಿದರು. ವಿದ್ವಾಂಸರು ತಮ್ಮ ಗ್ರಂಥ ಸಂಗ್ರಹಗಳನ್ನು ಈ ಭಂಡಾರಕ್ಕೆ ದಾನ ಮಾಡಿದರು. ನಂದಾ ಅವರ ಮಾರ್ಗದರ್ಶನದಲ್ಲಿ ಸ್ಮಾರಕ ಭವನದ ಸಿಬ್ಬಂದಿ ವಿವಿಧ ಮೂಲಗಳಿಂದ ಭಾರತದ ಇತಿಹಾಸ ಮತ್ತು ಸ್ವಾತಂತ್ರ್ಯ ಹೋರಾಟದ ಇತಿಹಾಸಕ್ಕೆ ಸಂಬಂಧಿಸಿದ ಖಾಸಗಿ ಕಾಗದ ಪತ್ರಗಳನ್ನು, ದಸ್ತಾವೇಜುಗಳನ್ನು ಮತ್ತು ಇತರ ಸಾಮಗ್ರಿಗಳನ್ನು ಸಂಗ್ರಹಿಸಿದರು. ಸಮಕಾಲೀನ ಅಧ್ಯಯನಕ್ಕಾಗಿ ಪ್ರತ್ಯೇಕ ಕೇಂದ್ರ ಒಂದನ್ನು ತೆರೆಯಲಾಯಿತು. ಇಲ್ಲಿ ಸಮಕಾಲೀನ ಗ್ರಂಥಗಳು ಅಧ್ಯಯನಾಸಕ್ತರಿಗೆ ದೊರೆಯುವಂತಾಯಿತು. ಹೀಗೆ, ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಒಂದು ಸುಸಜ್ಜಿತ ಸಂಶೋಧನಾ ಕೇಂದ್ರವಾಗಿ ಬೆಳೆಯಿತು. ಇತಿಹಾಸಕಾರರು ಮತ್ತು ಸಮಾಜ ವಿಜ್ಞಾನಿಗಳ ಜ್ಞಾನ ಗಂಗೋತ್ರಿಯಾಯಿತು. ಸ್ವಾತಂತ್ರ್ಯ ಹೋರಾಟದ ಇತಿಹಾಸ, ದೇಶದ ಸಾಂಸೃತಿಕ ಇತಿಹಾಸ, ಸಮಾಜ ವಿಜ್ಞಾನಗಳಲ್ಲಿ ಸಂಶೋಧನೆ ಮತ್ತು ಗ್ರಂಥ ರಚನೆಗಳನ್ನು ಪ್ರೋತ್ಸಾಹಿಸಲು ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಪುಸ್ತಕ ಭಂಡಾರ ಆಸಕ್ತರಿಗೆ ಮೂರರಿಂದ ಐದು ವರ್ಷಗಳ ಕಾಲ ಫೆಲೋಶಿಪ್ ನೀಡುವ ಯೋಜನೆಯೊಂದನ್ನು ಜಾರಿಗೆ ತಂದಿತು. ಇತಿಹಾಸಕಾರರು, ಸಮಾಜ ವಿಜ್ಞಾನಿಗಳು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಂಡರು. ಪ್ರತಿವಾರ ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗುತ್ತಿತ್ತು. ಉದಾರವಾದಿಗಳು, ಬಲಪಂಥೀಯರು, ಎಡ ಪಂಥೀಯರು ಹೀಗೆ ಎಲ್ಲ ವಿಚಾಧಾರೆಯವರು ಇಲ್ಲಿ ಪ್ರಬಂಧಗಳನ್ನು ಮಂಡಿಸಲು ಅವಕಾಶಮಾಡಿಕೊಡಲಾಗುತ್ತಿತ್ತು. ಈ ರೀತಿ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಬೌದ್ಧಿಕ ಚಟುವಟಿಕೆಗಳ ಕೇಂದ್ರವಾಗಿ ದೇಶವಿದೇಶಗಳ ವಿದ್ವಾಂಸರನ್ನು ಆಕರ್ಷಿಸಿತು. ರಾಮಚಂದ್ರ ಗುಹಾ ಅವರಂತಹ ಅಂತರ್‌ರಾಷ್ಟ್ರೀಯ ಖ್ಯಾತಿಯ ಇತಿಹಾಸಕಾರರನ್ನು ರೂಪಿಸಿತು. ನೆಹರೂ ಸ್ಮಾರಕ ಗ್ರಂಥ ಭಂಡಾರದ ಸಂಗ್ರಹಗಳನ್ನು ಆಧರಿಸಿ ಸುಮಾರು ಎಂಟುನೂರು ಪುಸ್ತಕಗಳು ಪ್ರಕಟವಾಗಿದೆಯೆಂದು ಸಮೀಕ್ಷೆಯೊಂದು ತಿಳಿಸಿದೆ. ನಂದಾ ಅವರ ನಂತರ ಬಂದ ರವೀಂದ್ರ ಕುಮಾರ್, ಡಾ.ಬಾಲಕೃಷ್ಣ ಅವರ ಆಡಳಿತಾವಧಿಯಲ್ಲೂ ವಸ್ತು ಸಂಗ್ರಹಾಲಯ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವಾಗಿ ಕೀರ್ತಿಪಥದಲ್ಲಿ ಸಾಗಿತ್ತು. ಇದು ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ಅವಧಿ ಎನ್ನುತ್ತಾರೆ ವಿದ್ವಾಂಸರು.

ನ್ಯಾಯೋಚಿತವಾಗಿ ಚೆನ್ನಾಗಿ ಕೆಲಸಮಾಡುವ ಸಂಸ್ಥೆಯೊಂದರ ಆಯಸ್ಸು ಇಪ್ಪತ್ತು ವರ್ಷಗಳ ಕಾಲ ಮಾತ್ರ ಎನ್ನುವ ರೂಢಿ ಮಾತೊಂದಿದೆ. ಇಪ್ಪತ್ತು ವರ್ಷಗಳ ನಂತರ, ಸಂಸ್ಥಾಪಕರ ನಿಧನ ನಿಮಿತ್ತವಾಗಿಯೋ ಅಥವಾ ಆಡಳಿತಗಾರರ ಅನಾಸಕ್ತಿಯಿಂದಾಗಿಯೋ ಅದು ಸುಸ್ಥಿತಿಯಲ್ಲಿರುವುದಿಲ್ಲ. ಈ ಮಾತಿಗೆ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥ ಭಂಡಾರವೂ ಹೊರತಲ್ಲ. ಈ ಸಂಸ್ಥೆಗೆ ಆಡಳಿತ ನಿರ್ದೇಶಕರನ್ನು ಪ್ರತಿಭೆ, ವಿದ್ವತ್ತು, ರಚನಾತ್ಮ್ಮಕ ಕ್ರಿಯಾಶೀಲತೆ ಮೊದಲಾದ ಅರ್ಹತೆಗಳ ಆಧಾರದ ಮೇಲೆ ನೇಮಕಮಾಡಲಾಗುತ್ತಿತ್ತು. 2006ರಲ್ಲಿ ಈ ನೇಮಕದಲ್ಲಿ ರಾಜಕೀಯ ಪ್ರಭಾವ ನುಸುಳಿತು. ಆಗ ಪ್ರೊ. ಮೃದುಲಾ ಮುಖರ್ಜಿ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಯಾರದೋ ಪ್ರಭಾವದಿಂದ ಅವರ ನೇಮಕವಾಗಿತ್ತು. ಸೋನಿಯಾಗಾಂಧಿಯವರ ವಿಶ್ವಾಸ ನಂಬಿಕೆಗಳಿಗೆ ಪಾತ್ರರಾಗಿದ್ದವರೊಬ್ಬರು ಪ್ರೊ. ಮೃದುಲಾ ಮುಖರ್ಜಿಯವರ ಹೆಸರನ್ನು ಈ ಹುದ್ದೆಗೆ ಸೂಚಿಸಿದ್ದರೆಂದು ಇತಿಹಾಸಕಾರ ರಾಮಚಂದ್ರ ಗುಹಾ ಬರೆಯುತ್ತಾರೆ.(ಪೇಟ್ರಿಯಟ್ಸ್ ಆ್ಯಂಡ್ ಪಾರ್ಟಿಸನ್ಸ್ -258 ಕನ್ನಡದಲ್ಲಿ: ದೇಶಪ್ರೇಮಿಗಳು ಮತ್ತು ಪಕ್ಷಪಾತಕರು ಪುಟ 365).ಇಲ್ಲಿಂದ ಅದರ ಅವನತಿಯ ದಿನಗಳು ಶುರುವಾದವು.

ಪ್ರೊ. ಮೃದುಲಾ ಮುಖರ್ಜಿಯವರ ಆಗಮನದೊಂದಿಗೆ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯದ ಆದ್ಯತೆ ಮತ್ತು ಕಾರ್ಯ ವೈಖರಿ ಬದಲಾಯಿತು. ನೆಹರೂ ಕುಟುಂಬದವರನ್ನು ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಬಿಂಬಿಸುವ ಪ್ರಯತ್ನಗಳು ಶುರುವಾದವು. ಗ್ರಂಥ ಭಂಡಾರದಲ್ಲಿ ಇಂದಿರಾಗಾಂಧಿ-ನೆಹರೂ ನಡುವಣ ಪತ್ರವ್ಯವಹಾರ ಆಧರಿಸಿದ ವಸ್ತು ಪ್ರದರ್ಶನ ನಡೆಸುವುದರೊಂದಿಗೆ ಈ ಚಾಳಿ ಪ್ರಾರಂಭವಾಯಿತು. ಆ ಕುಟುಂಬದ ಕೃಪಾಕಟಾಕ್ಷಗಳಿಸಲು ಮುಂದೆ ಇಂತಹ ಕಾರ್ಯಕ್ರಮಗಳು ಹೆಚ್ಚಾದವು. ಪ್ರಚಲಿತ ವಿಷಯಗಳ ಬಗ್ಗೆ, ಸಮಾಜ ವಿಜ್ಞಾನಗಳ ಬಗ್ಗೆ ನಡೆಯುತ್ತಿದ್ದ ವಿಚಾರ ಸಂಕಿರಣಗಳು, ಶೈಕ್ಷಣಿಕ ಚಟುವಟಿಕೆಗಳು ಕಡಿಮೆಯಾದವು. ವಿಚಾರ ಸಂಕಿರಣಗಳಿಗಾಗಿ ಮೀಸಲಿದ್ದ ಕೊಠಡಿಯನ್ನು ಯುವ ಕಾಂಗ್ರೆಸ್‌ಗೆ ಬಿಟ್ಟುಕೊಡಲಾಯಿತು. ಪಕ್ಷದ ಹಾಗೂ ಕುಟುಂಬದ ಉತ್ತರಾಧಿಕಾರಿಯಾದ ರಾಹುಲ್ ಗಾಂಧಿಯವರ ಸಭೆಗಳಿಗೆ ಹಾಗೂ ಪತ್ರಿಕಾ ಗೋಷ್ಠಿಗಳಿಗೆ ಈ ಕೊಠಡಿ ಮೀಸಲಾಯಿತು. ಪುಸ್ತಕಗಳು ಹಾಗೂ ಐತಿಹಾಸಿಕ ದಾಖಲೆಗಳ ಪ್ರಕಟನೆ ಕಾರ್ಯ ನಿಂತುಹೋಯಿತು.ಇತಿಹಾಸಕಾರರು ಮತ್ತು ಸಮಾಜ ವಿಜ್ಞಾನಿಗಳ ಪಾಲಿಗೆ ಪ್ರಾಚೀನ ಮತ್ತು ಅರ್ವಾಚೀನ ಗ್ರಂಥಗಳ ಆಗರವೆನಿಸಿದ್ದ ಗ್ರಂಥ ಭಂಡಾರ ಅಲಕ್ಷಕ್ಕೆ ಗುರಿಯಾಯಿತು. ದೇಶದ ಇತಿಹಾಸಕ್ಕೆ ಸಂಬಂಧಿಸಿದ ಹಸ್ತಪ್ರತಿಗಳು, ದಾಖಲೆಗಳು, ಮಾಹಿತಿಗಳನ್ನು ಸಂಗ್ರಹಿಸುವ ಕಾರ್ಯ ನಿಂತುಹೋಯಿತು. ಗ್ರಂಥ ಭಂಡಾರ, ಪತ್ರಾಗಾರಗಳು ಅವ್ಯವಸ್ಥೆಯ ಆಗರಗಳಾದವು. ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿ ಅಮೂಲ್ಯ ದಾಖಲೆಗಳು, ಮೈಕ್ರೋಫಿಲ್ಮ್‌ಗಳು ಸಿಬ್ಬಂದಿಯ ನಿರ್ಲಕ್ಷದಿಂದಾಗಿ ಮೂಲೆ ಗುಂಪಾದವು. ನಂತರದ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಿದ ವರದಿಗಳು ಏನೂ ಇಲ್ಲ. ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿ ಸೊಸೈಟಿ ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿನ ಸ್ವಾಯತ್ತ ಸಂಸ್ಥೆ. ಇದರ ಆಡಳಿತಕ್ಕೆ ಸಂಬಂಧಿಸಿದ ನಿರ್ದೇಶಕರನ್ನು ಸರಕಾರ ನೇಮಿಸುತ್ತದೆ. ಏತನ್ಮ್ಮಧ್ಯೆ ತೀನ್ ಮೂರ್ತಿ ಭವನದಲ್ಲಿ ದೇಶದ ಎಲ್ಲ ಪ್ರಧಾನ ಮಂತ್ರಿಗಳ ಸ್ಮಾರಕವನ್ನು ಸ್ಥಾಪಿಸುವ ವಿಚಾರವನ್ನು 2017ರಲ್ಲಿ ಮೋದಿಯವರ ಸರಕಾರ ತೇಲಿ ಬಿಟ್ಟಿತು.

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಪಕ್ಷ, ಇದನ್ನು ನೆಹರೂ ಪರಂಪರೆಯನ್ನು ಅಳಿಸಿಹಾಕುವ ಪ್ರಯತ್ನವೆಂದು ವ್ಯಾಖ್ಯಾನಿಸಿತು. 2018ರಲ್ಲಿ ಮಾಜಿ ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಅವರು ತೀನ್ ಮೂರ್ತಿ ಭವನಕ್ಕೆ ಭಂಗ ಉಂಟುಮಾಡುವಂತಹ ಯಾವುದೇ ಪ್ರಯತ್ನವನ್ನು ಮಾಡಬಾರದೆಂದು ಆಗ್ರಹಪೂರ್ವಕವಾಗಿ ಸರಕಾರಕ್ಕೆ ಪತ್ರ ಬರೆದರು. ಮೋದಿ ಸರಕಾರದ ಇಂತಹದ್ದೊಂದು ನಡೆಯನ್ನು ವಿರೋಧಿಸಿ ನೆಹರೂ ಸ್ಮಾರಕ ಆಡಳಿತ ಮಂಡಳಿಯ ನಿರ್ದೇಶಕರಾಗಿದ್ದ ಪ್ರೊ. ಉದಯನ್ ಮಿಶ್ರಾ, ಅರ್ಥ ಶಾಸ್ತ್ರಜ್ಞ ನಿತಿನ್ ದೇಸಾಯಿ ಮತ್ತು ಅಧಿಕಾರಿ ಬಿ.ಪಿ.ಸಿಂಗ್ ರಾಜೀನಾಮೆ ನೀಡಿದರು. ಸರಕಾರ ಆಗ ಇವರ ಸ್ಥಾನದಲ್ಲಿ ಪತ್ರಕರ್ತ ಅರ್ನಾಬ್ ಗೋಸ್ವಾಮಿ, ಈಗ ವಿದೇಶಾಂಗ ಸಚಿವರಾಗಿರುವ ಜೈಶಂಕರ್ ಮತ್ತು ಭಾರತೀಯ ಸಾಂಸ್ಕೃತಿಕ ಬಾಂಧವ್ಯ ಮಂಡಳಿಯ (ಐಸಿಸಿಆರ್)ವಿನಯ್ ಸಹಸ್ರಬುದ್ಧೆಯವರನ್ನು ನೇಮಕಮಾಡಿತು. ಈಗ ಇನ್ನು ಒಂದು ಹೆಜ್ಜೆ ಮುಂದೆ ಇಟ್ಟು ಮೋದಿ ಸರಕಾರದ ಸಂಸ್ಕೃತಿ ಸಚಿವ ಶಾಖೆ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಪುಸ್ತಕ ಭಂಡಾರವನ್ನು ಸುಧಾರಿಸುವ, ನವೀಕರಿಸುವ ಮಾತನ್ನಾಡುತ್ತಿದೆ. ಅದರ ಪರಿಕಲ್ಪನೆಯ ಸುಧಾರಣೆ ಮತ್ತು ನಾವೀನ್ಯತೆಗಳೇನು ಎಂಬುದು ಬಹಿರಂಗವಾಗಿಲ್ಲ. ಅದು ಏನೇ ಇರಲಿ ನಿರ್ದೇಶಕರ ಬದಲಾವಣೆಯಂತಹ ಅಪಸ್ವರದೊಂದಿಗೆ ಸುಧಾರಣಾ ಕ್ರಮ ಶುರುವಾಗಬಾರದಿತ್ತು. ಜೈರಾಮ್ ರಮೇಶ್, ಕರಣ್ ಸಿಂಗ್ ಅವರಂತಹ ವಿದ್ವದೀಯರನ್ನು ತೆಗೆದುಹಾಕಿದ್ದು ಉಚಿತವಲ್ಲ.

ನಿರ್ದೇಶಕರು ನೆಹರೂ ಅಭಿಮಾನಿಗಳೇ ಆಗಿರಬೇಕು, ನೆಹರೂ ಕುಟುಂಬವನ್ನು ಓಲೈಸುವವರೇ ಅಗಿರಬೇಕು ಎಂದೇನಿಲ್ಲ. ನಿರ್ದೇಶಕರು ಸ್ವತಃ ವಿದ್ವಾಂಸರೂ ಆಗಿದ್ದು, ವಿದ್ವತ್ತು, ಸಂಶೋಧನೆ, ಅಧ್ಯಯನ, ಸ್ವತಂತ್ರ ಚಿಂತನೆ, ಪ್ರಾಮಾಣಿಕತೆಗಳನ್ನು ಪ್ರೋತ್ಸಾಹಿಸುವ ಉದಾರ ಮನಸ್ಸಿನವರಾಗಿರಬೇಕು, ಮೌಲ್ಯಗಳ ಕಾಳಜಿಯುಳ್ಳವರಾಗಿರಬೇಕು. ಈಗ ಮಾಡಲಾಗಿರುವ ಬದಲಾವಣೆಗಳಿಗೆ ಸಂಬಂಧಿಸಿದಂತೆ ಬಂದಿರುವ ಟೀಕೆಗಳಿಗೆ ಪ್ರತಿಕ್ರಿಯಿಸುತ್ತಾ, ನೆಹರೂ ವಸ್ತುಸಂಗ್ರಹಾಲಯ ಮತ್ತು ಪುಸ್ತಕ ಭಂಡಾರ ನೆಹರೂ ಕುಟುಂಬದ, ಅವರ ಅಭಿಮಾನಿಗಳ ಸ್ವತ್ತಲ್ಲ ಎನ್ನುವ ಮಾತು ಸರಕಾರದ ವಲಯಗಳಿಂದ ಕೇಳಿಬಂದಿದೆ. ಹೌದು, ಹಾಗೆಯೇ ಅದು ನೆಹರೂ ದ್ವೇಷಿಗಳ ಸ್ವತ್ತೂ ಆಗಬಾರದು. ಅದು ಮೂಲೋದ್ದೇಶದಂತೆ ಶುದ್ಧಾಂಗವಾಗಿ ಇತಿಹಾಸ, ಸಮಾಜ ವಿಜ್ಞಾನ ಮತ್ತು ಸಂಸ್ಕೃತಿಗಳ ಅಧ್ಯಯನ ಮತ್ತು ಸಂಶೋಧನೆಯ ಸಂಸ್ಥೆಯಾಗಿಯೇ ಉಳಿಯಬೇಕು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top