ಸಂವಿಧಾನದ ಎಪ್ಪತ್ತರ ಹಾದಿ... | Vartha Bharati- ವಾರ್ತಾ ಭಾರತಿ

--

ಸಂವಿಧಾನದ ಎಪ್ಪತ್ತರ ಹಾದಿ...

ಧರ್ಮಗ್ರಂಥಗಳ ಎಲ್ಲಾ ಅನುಯಾಯಿಗಳೂ ತಮ್ಮ ಧರ್ಮಗ್ರಂಥಗಳನ್ನು ಅನುಸರಿಸುವುದಿಲ್ಲ, ಆರಾಧಿಸುತ್ತಾರೆ. ಭಾರತದ ಸಂವಿಧಾನದ ವಿಚಾರವೂ ಹಾಗೆಯೇ. ಅದನ್ನು ಎಲ್ಲರೂ ಹಾಡಿ ಹೊಗಳುತ್ತಾರೆ. ಆದರೆ ಸಂವಿಧಾನದ ಆಶಯವನ್ನು ದೈನಂದಿನ ಆಡಳಿತದಲ್ಲಿ, ವ್ಯವಹಾರದಲ್ಲಿ ಮತ್ತು ಸಂಬಂಧಗಳಲ್ಲಿ ಅನುಸರಿಸಲು ಭಾರತೀಯ ಮನಸ್ಸು ಇನ್ನೂ ಸಂಪೂರ್ಣ ಬದ್ಧವಾಗಿಲ್ಲ, ಸಿದ್ಧವೂ ಆಗಿಲ್ಲ. ಭಾರತೀಯ ಮನಸ್ಸುಗಳ ಸಿದ್ಧತೆಯ ಹಿನ್ನೆಲೆಯಲ್ಲಿ ನೋಡಿದರೆ 70 ವರ್ಷಗಳ ಅವಧಿ ತೀರಾ ಸಣ್ಣದು.

ಅಝೀಂ ಪ್ರೇಮ್‌ಜಿ ವಿವಿಯಲ್ಲಿ ಪ್ರಾಧ್ಯಾಪಕರಾಗಿರುವ ಎ. ನಾರಾಯಣ ಅವರು ನಾಡಿನ ಪ್ರಮುಖ ನಿಯತಕಾಲಿಕಗಳಲ್ಲಿ ಅಂಕಣಕಾರರಾಗಿದ್ದಾರೆ. ಸಾಹಿತ್ಯ, ಕಲೆ ಮಾತ್ರವಲ್ಲದೆ, ರಾಜಕೀಯ ವಿಶ್ಲೇಷಣೆಯ ಮೂಲಕವೂ ಗುರುತಿಸಿಕೊಂಡಿದ್ದಾರೆ.

ಭಾರತದ ಸಂವಿಧಾನಕ್ಕೆ 70 ತುಂಬಿದೆ. ಸಂವಿಧಾನದ ಬಗ್ಗೆ ಮುಂದಿನ ಮಾತುಗಳನ್ನು ಹೇಳುವುದರ ಮೊದಲು ಅದು ಏಳು ದಶಕಗಳ ಕಾಲ ಉಳಿದಿದೆ ಎಂಬುದು ಒಂದು ಸಾಧನೆ. ಯಾಕೆಂದರೆ ಪ್ರಪಂಚದಲ್ಲಿ ಸಂವಿಧಾನಗಳು ಇಷ್ಟು ದೀರ್ಘ ಕಾಲ ಬಾಳುವುದಿಲ್ಲ. ಅಮೆರಿಕದ ಚಿಕಾಗೋ ವಿಶ್ವ ವಿದ್ಯಾನಿಲಯದವರು ಇತ್ತೀಚೆಗೆ ಕಾರಾರುವಕ್ಕಾಗಿ ಹಾಕಿದ ಲೆಕ್ಕಾಚಾರದ ಪ್ರಕಾರ ಸಂವಿಧಾನಗಳ ಸರಾಸರಿ ಆಯುಷ್ಯ 17 ವರ್ಷ ಮಾತ್ರ. ಅಷ್ಟೇ ಅಲ್ಲ. ಈ ಅಧ್ಯಯನದಲ್ಲಿ ಪರಿಶೀಲಿಸಲಾದ ಸಂವಿಧಾನಗಳ ಪೈಕಿ ಪ್ರತೀ ನೂರರಲ್ಲಿ ಏಳು ಸಂವಿಧಾನಗಳು ಎರಡು ವರ್ಷ ತುಂಬುದರೊಳಗೆ ಕಾಲದಲ್ಲಿ ಕಳೆದುಹೋಗಿವೆ. ಆದರೆ, ಭಾರತದ ಸಂವಿಧಾನ ಇನ್ನೂ ಉಳಿದಿದೆ ಮಾತ್ರವಲ್ಲ ಜನಮನದಲ್ಲಿ ಅದಕ್ಕೊಂದು ಪವಿತ್ರವಾದ ಸ್ಥಾನವೂ ಇದೆ ಎನ್ನುವುದನ್ನು ಸಂವಿಧಾನಗಳ ಅಲ್ಪಾಯುಷ್ಯದ ಹಿನ್ನೆಲೆಯಲ್ಲಿ ಯೋಚಿಸಿದಾಗ ರೋಚಕ ಎನಿಸುತ್ತದೆ. ಉಳಿದ ದೇಶಗಳ ಕತೆ ಹಾಗಿರಲಿ. ಭಾರತಕ್ಕೊಂದು ಸಂವಿಧಾನ ನಿರ್ಮಾಣವಾದ ಪರಿಸ್ಥಿತಿ ಮತ್ತು ಪರಿಸರದಲ್ಲಿ ಅದು ದೀರ್ಘ ಕಾಲ ಉಳಿಯಲು ಸಾಧ್ಯವಿಲ್ಲ ಅಂತ ಸಂವಿಧಾನ ತಜ್ಞರ ಅಭಿಪ್ರಾಯವಾಗಿತ್ತು. ಆ ಕಾಲದ ಸಂವಿಧಾನ ತಜ್ಞರ ನಡುವೆ ಬಲು ದೊಡ್ಡ ಹೆಸರು ಸರ್ ಐವರ್ ಜೆನ್ನಿಂಗ್ಸ್ ಅವರದ್ದು. ಅವರು 1952ರಲ್ಲಿ ಭಾರತದ ಸಂವಿಧಾನವನ್ನು ಪರಿಶೀಲಿಸಿ ಇದು ಹೆಚ್ಚು ಕಾಲ ಬಾಳದು ಎಂದರು. ಈ ಸಂವಿಧಾನದ ಗಾತ್ರ ಮತ್ತು ಅದರ ಕಾಠಿಣ್ಯಗಳೇ ಅದಕ್ಕೆ ಮುಳುವಾಗಲಿವೆ ಎಂದರು. ಜೆನ್ನಿಂಗ್ಸ್ ಅವರ ಭವಿಷ್ಯ ಸುಳ್ಳಾಗಿದೆ. ಅಷ್ಟೇ ಅಲ್ಲ. ಇದೇ ಜೀನ್ನಿಂಗ್ಸ್ ಅವರ ನೇತೃತ್ವದಲ್ಲೇ ತಯಾರಾದ ಶ್ರೀಲಂಕಾದ 1948ರ ಸಂವಿಧಾನ ಪೂರ್ತಿ ಇಪ್ಪತ್ತೈದು ವರ್ಷಗಳ ಕಾಲವೂ ಬಾಳಲಿಲ್ಲ. ಇಷ್ಟೇ ಅಲ್ಲ, 1927ರಲ್ಲಿ ಇಂಗ್ಲೆಂಡ್‌ನ ಸಂಸತ್ತಿನಲ್ಲಿ ಮಾತನಾಡುತ್ತಾ ಲಾರ್ಡ್ ಬಿರ್ಕಿನ್ ಹೆಡ್ ಅಣಕಿಸಿದ್ದರಂತೆ: ಸ್ವರಾಜ್ಯದ ಮಾತು ಹಾಗಿರಲಿ; ನೆಟ್ಟಗೆ ಭಾರತದಲ್ಲೇ ಎಲ್ಲರಿಗೂ ಒಪ್ಪಿಗೆಯಾಗುವಂತೆ ಒಂದು ಸಂವಿಧಾನ ಬರೆಯುವುದಕ್ಕೂ ಸಾಧ್ಯವಿಲ್ಲ ಆ ಮಹಾನ್ ಭಾರತೀಯರಿಗೆ ಅಂತ. ಬಿರ್ಕಿನ್ ಹೆಡ್ ರ ಮಾತು ಕೂಡಾ ಹುಸಿಯಾಯಿತು. ಬಿರ್ಕಿನ್ ಹೆಡ್ ಹಾಗೆ ಹೇಳಿ ಎರಡು ದಶಕಗಳು ಉರುಳುವುದರೊಳಗೆ ಭಾರತದ ಸಂವಿಧಾನ ಸಿದ್ಧವಾಗಿತ್ತು. ಅದೂ ಸಂಪೂರ್ಣವಾಗಿ ದೇಶಿಯವಾಗಿ ತಯಾರಾದ ಸಂವಿಧಾನ. ಸಾಮಾನ್ಯವಾಗಿ ಎಲ್ಲಾ ಅಭಿವೃದ್ಧಿಶೀಲ ದೇಶಗಳೂ ಅಮೆರಿಕ ಅಥವಾ ಯುರೊಪ್‌ನ ಸಂವಿಧಾನ ಪಂಡಿತರ ನೆರವು ಪಡೆದು ತಮ್ಮ ಸಂವಿಧಾನಗಳನ್ನು ರಚಿಸಿವೆ. ಆದರೆ ಭಾರತದ ಸಂವಿಧಾನ ಯಾವುದೇ ಬಾಹ್ಯ ನೆರವಿಲ್ಲದೆ ತಯಾರಾಯಿತು. ಸಂವಿಧಾನದ ಬಹುತೇಕ ಅಂಶಗಳನ್ನು ಇತರ ದೇಶಗಳ ಸಂವಿಧಾನಗಳಿಂದ ಎತ್ತಿಕೊಳ್ಳಲಾಗಿದೆ ಎಂಬ ಆಪಾದನೆ ಇದೆ. ಅದಕ್ಕೆ ಸ್ಪಷ್ಟ ಉತ್ತರ ಸಂವಿಧಾನದ ಪ್ರಧಾನ ಶಿಲ್ಪಿ ಅನ್ನಿಸಿಕೊಂಡ ಡಾ. ಬಿ.ಆರ್. ಅಂಬೇಡ್ಕರ್ ಅವರೇ ನೀಡಿದ್ದಾರೆ: ''ಪ್ರಜಾತಾಂತ್ರಿಕ ಮೌಲ್ಯಾದರ್ಶಗಳು ಯಾವುದೇ ದೇಶದ ಸ್ವಂತ ಸೊತ್ತಲ್ಲ.'' ಆದುದರಿಂದ, ಕೆಲ ಸಾರ್ವಕಾಲಿಕ ಮೌಲ್ಯಗಳನ್ನು ಮತ್ತು ಕಾಲವೇ ಒಪ್ಪಿಕೊಂಡ ಆಡಳಿತಾತ್ಮಕ ಚೌಕಟ್ಟುಗಳನ್ನು ಇತರ ದೇಶಗಳಿಂದ ಎರವಲು ತಂದದ್ದು ಭಾರತದ ಸಂವಿಧಾನ ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಿತವಾದದ್ದು ಎನ್ನುವ ಹೆಗ್ಗಳಿಕೆಯನ್ನು ಅಲ್ಲಗಳೆಯುವುದಿಲ್ಲ. ಭಾರತದ್ದೇ ಆದ ಒಂದು ವ್ಯವಸ್ಥೆಯನ್ನೂ ಒಂದು ರಾಜಕೀಯ ಸಿದ್ಧಾಂತವನ್ನೂ ಅದು ಸಂವಿಧಾನ ರೂಢಿಸಿಕೊಳ್ಳಬೇಕಿತ್ತು ಎನ್ನುವ ಅರ್ಥದ ಕೆಲ ಆಕ್ಷೇಪಗಳಿವೆ. ಸಂವಿಧಾನ ಸಭೆಯ ಓರ್ವ ಸದಸ್ಯರು ಹೇಳಿದ್ದರಂತೆ: ನಾವು ವೀಣೆಯ ಸಂಗೀತ ಇಲ್ಲಿ ಮಾರ್ದನಿಸುತ್ತದೆ ಅಂತ ಅಂದು ಕೊಂಡರೆ ಇಲ್ಲಿ ನಾವು ಪಿಟೀಲಿನ ನಾದವನ್ನಷ್ಟೇ ಕೇಳುತ್ತಿದ್ದೇವೆ ಅಂತ. ಅಷ್ಟಕ್ಕೂ ಈ ಭಾರತೀಯವಾದ ವ್ಯವಸ್ಥೆ, ಭಾರತೀಯವಾದ ರಾಜಕೀಯ ಸಿದ್ಧಾಂತ ಅಂದರೆ ಏನು ಎನ್ನುವ ವಿಷಯದಲ್ಲಿ ಒಂದು ಸರ್ವಸಮ್ಮತ ಅಭಿಪ್ರಾಯಕ್ಕೆ ಬರಲು ಸಾಧ್ಯವಿಲ್ಲದ ಕಾರಣ ಈ ದೇಶದ ಸಂವಿಧಾನ ಇನ್ನೊಂದು ರೀತಿಯಲ್ಲಿ ಹೆಚ್ಚು ಭಾರತೀಯವಾಗಿ ರೂಪುಗೊಳ್ಳಬಹುದಿತ್ತು ಅಂತ ಹೇಳುವುದು ಕೇವಲ ಊಹೆಯಾಗುತ್ತದೆ. ಹೀಗೆ ಮಾಡಿಲ್ಲ ಎನ್ನುವುದೇ ಸಂವಿಧಾನ ಗಟ್ಟಿಯಾಗಿ ಉಳಿದದ್ದಕ್ಕೆ ಒಂದು ಕಾರಣವೂ ಇದ್ದೀತು. ಈ ದೇಶದ ಚರಿತ್ರೆಯ ಗತಿ ಬದಲಿಸಬೇಕು ಎಂಬ ಆಶಯದ ಮೂರ್ತರೂಪ ಭಾರತದ ಸಂವಿಧಾನ. ಶತಶತಮಾನದಿಂದ ಅರಸೊತ್ತಿಗೆಯನ್ನು ಒಪ್ಪಿಕೊಂಡು, ಅಧಿಕಾರದ ಮುಂದೆ ತಲೆಬಾಗಿದ ಒಂದು ಜನ ಸಮೂಹವನ್ನು ಒಮ್ಮಿಂದೊಮ್ಮೆಲೇ ಕಾನೂನಿನ ಮುಂದೆ ಎಲ್ಲರೂ ಸಮಾನ ಎನ್ನುವ ಸರಳ ಸೂತ್ರಕ್ಕೆ ಒಪ್ಪಿಸುವ ಪ್ರಯತ್ನಕ್ಕೆ ಸಂವಿಧಾನ ಕಟಿಬದ್ಧವಾದದ್ದಕ್ಕೆ ಅದು ಚಾರಿತ್ರಿಕ. ಹೊರಗೆ ಎರಡು ಧರ್ಮಗಳು ರಕ್ತದೋಕುಳಿಯಲ್ಲಿ ಮಿಂದೇಳುತ್ತಿದ್ದಾಗ, ಸಂವಿಧಾನ ಸಭೆಯಲ್ಲಿ ಕುಳಿತವರು ಈ ದೇಶ ಯಾವ ಧರ್ಮಕ್ಕೂ ಸೇರಿದ್ದಲ್ಲ; ಯಾರು ಏನೇ ಮಾಡಲಿ ನಾವು ಮಾತ್ರ ಧರ್ಮ ನಿರಪೇಕ್ಷವಾಗಿ ಉಳಿಯುತ್ತೇವೆ ಎಂಬ ಆದರ್ಶಮಯವಾದ ನಿಲುವನ್ನು ತಳೆದದ್ದಕ್ಕೆ ಅದು ಚಾರಿತ್ರಿಕ. ಯಾವ ದೇಶದ ಸಂವಿಧಾನವೂ ಅದು ಪ್ರಾರಂಭವಾಗುತ್ತಲೇ ಎಲ್ಲಾ ಭೇದಗಳನ್ನು ಬದಿಗಿರಿಸಿ ಎಲ್ಲಾ ಪ್ರಜೆಗಳಿಗೂ ಮತದಾನದ ಹಕ್ಕನ್ನು ನೀಡಿರಲಿಲ್ಲ. ಭಾರತದ ಸಂವಿಧಾನ ಅದನ್ನು ಮಾಡಿತು. ಇದು ಮೇಲ್ನೋಟಕ್ಕೆ ತೀರಾ ಸಾಮಾನ್ಯ ನಿರ್ಧಾರ. ಆಳಕ್ಕಿಳಿದು ನೋಡಿದರೆ ಇಡೀ ಪ್ರಪಂಚದ ರಾಜಕೀಯ ಚರಿತ್ರೆಯಲ್ಲಿ ತೆಗೆದುಕೊಳ್ಳಲಾದ ಅತ್ಯಂತ ಧೈರ್ಯದ ನಿರ್ಧಾರ.

ಭಾರತದ ಸಂವಿಧಾನ ಈ ದೇಶದ ಜನರಿಗೆ ನೀಡಿದ್ದು ಏನು ಮತ್ತು ಎಷ್ಟು ಎನ್ನುವ ಪ್ರಶ್ನೆಗೆ ಸಂಪೂರ್ಣವಾದ ಉತ್ತರ ಅಂತ ಒಂದು ಇಲ್ಲ. ಒಂದು ಕಾಲಘಟ್ಟದಲ್ಲಿ ಕಾಣದ್ದು ಸಂವಿಧಾನದಲ್ಲಿ ಇನ್ನೊಂದು ಕಾಲಘಟ್ಟದಲ್ಲಿ ಕಾಣಿಸುತ್ತದೆ. ಕೆಲ ಮನಸ್ಸುಗಳು ಕಾಣದ್ದನ್ನು ಅದರಲ್ಲಿ ಇನ್ನು ಕೆಲವು ಮನಸ್ಸುಗಳು ಗುರುತಿಸುತ್ತವೆ. ಸಂವಿಧಾನ ಜೀವಂತಿಕೆ ಪಡೆಯುವುದು ಅದನ್ನು ಅರ್ಥೈಸುವ ಕಾಲದಲ್ಲಿ ಮತ್ತು ಅರ್ಥೈಸುವವರ ಒಲವು-ನಿಲುವುಗಳಲ್ಲಿ. ವ್ಯಕ್ತಿಗಳ ಖಾಸಗಿತನದ ಹಕ್ಕು ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳಲ್ಲಿ ಸೇರಿದೆಯೇ ಇಲ್ಲವೇ ಎನ್ನುವ ಪ್ರಶ್ನೆಯ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ದಶಕಗಳ ಹಿಂದೆ ಎರಡು ಬಾರಿ ಹುಡುಕಾಟ ನಡೆಸಿದ ನ್ಯಾಯಾಧೀಶರು ಅಂತಹದ್ದೊಂದು ಮೂಲಭೂತ ಹಕ್ಕು ಭಾರತದ ಸಂವಿಧಾನದಲ್ಲಿ ಇಲ್ಲವೇ ಇಲ್ಲ ಎಂದಿದ್ದರು. ಈ ಮಧ್ಯೆ ನ್ಯಾಯಾಲಯಗಳು ಅದು ಇದೆ ಎಂದು ಹಲವು ಬಾರಿ ಹೇಳಿದಾಗಲೂ ಗೊಂದಲ ನಿವಾರಣೆಯಾಗಿರಲಿಲ್ಲ. ಸರಕಾರ ಎಲ್ಲಾ ಸಾರ್ವಜನಿಕ ವ್ಯವಹಾರಗಳಿಗೂ ಆಧಾರ್ ಕಡ್ಡಾಯಗೊಳಿಸುತ್ತಿರುವುದರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ ಪ್ರಕರಣದ (ಕೆ.ಎಸ್. ಪುಟ್ಟಸ್ವಾಮಿ ಮತ್ತಿತರರು ವರ್ಸಸ್ ಭಾರತ ಸರಕಾರ) ಜಾಡು ಹಿಡಿದು ಮತ್ತೊಮ್ಮೆ ಈ ಅನ್ವೇಷಣೆ ನಡೆಯಿತು. ಅದೇ ಪ್ರಶ್ನೆ. ಅದೇ ಸಂವಿಧಾನ. ಅದೇ ಸುಪ್ರೀಂ ಕೋರ್ಟ್. ಬೇರೆ ನ್ಯಾಯಾಧೀಶರು. ಬೇರೆ ಕಾಲ. ಈ ಬಾರಿ ಒಂಬತ್ತು ಮಂದಿ ನ್ಯಾಯಾಧೀಶರುಗಳಿದ್ದರು. ಹಿಂದಿನವರು ಯಾರೂ ಕಾಣದ್ದನ್ನು ಈ ಒಂಬತ್ತೂ ಮಂದಿಯೂ ಕಂಡರು. ಸಂವಿಧಾನದ ಆಶಯದ ಆಳದಲ್ಲಿ ಖಾಸಗಿತನದ ಹಕ್ಕು ಒಂದು ಮೂಲಭೂತ ಹಕ್ಕಾಗಿ ಅವಿನಾಭಾವ ರೀತಿಯಲ್ಲಿ ಬೆಸೆದುಕೊಂಡಿದೆ ಎನ್ನುವುದನ್ನು ಅವರು ತಮ್ಮ 547 ಪುಟಗಳ ತೀರ್ಪಿನಲ್ಲಿ 2018 ಆಗಸ್ಟ್ 24 ರಂದು ದೇಶದ ಮುಂದೆ ಘೋಷಿಸಿದಾಗ ಭಾರತದ ಪ್ರಜಾತಂತ್ರ ವ್ಯವಸ್ಥೆಯ ತಾಯಿಬೇರು ಇನ್ನೊಂದು ಅಂಗುಲ ಆಳಕ್ಕೆ ಬೆಳೆಯಿತು. ಭಾರತದ ಸಂವಿಧಾನದ ಮತ್ತೊಂದು ಹೊಸ ಆಯಾಮ ಅನಾವರಣವಾಯಿತು..

ಯಾವುದೇ ಸಂವಿಧಾನದಲ್ಲಿ ಎರಡು ಪ್ರಧಾನ ಅಂಶಗಳಿರುತ್ತವೆ. ಒಂದು ಸರಕಾರಿ ವ್ಯವಸ್ಥೆ ಹೇಗೆ ರೂಪುಗೊಳ್ಳಬೇಕು ಮತ್ತು ಕಾರ್ಯವೆಸಗಬೇಕು ಎನ್ನುವ ವಿಧಿವಿಧಾನಗಳು. ಇನ್ನೊಂದು ಅಧಿಕಾರ ಹೇಗೆ ಚಲಾವಣೆ ಆಗಬೇಕು ಮತ್ತು ಅಧಿಕಾರದ ಮೇಲೆ ಯಾವ ಯಾವ ರೀತಿಯ ನಿಯಂತ್ರಣಗಳು ಇರಬೇಕು ಎನ್ನುವುದು. ಭಾರತದ ಸಂವಿಧಾನಕ್ಕೆ ಸಂಬಂಧಿಸಿ ಹೇಳುವುದಾದರೆ ಒಂದನೇ ಅಂಶದ ಕುರಿತಾಗಿ ಯಾರಿಗೂ ದೊಡ್ಡ ತಕರಾರುಗಳೇನೂ ಇಲ್ಲ. ವಾಸ್ತವ ದಲ್ಲಿ ಸಂವಿಧಾನದಲ್ಲಿರುವ ಈ ಅಂಶಗಳೆಲ್ಲಾ 1935 ಭಾರತ ಸರಕಾರ ಕಾಯ್ದೆಯ (Government of India Act) ಮುಂದುವರಿಕೆಗಳೇ ಆಗಿವೆ. ಸಂವಿಧಾನದಲ್ಲಿ ಹೊಸತು ಮತ್ತು ಭಾರತೀಯರದ್ದೇ ಆದ ಆಯ್ಕೆಗಳು ಅಂತ ಇರುವುದು ಎರಡನೆಯ ಅಂಶಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ. ಸಂವಿಧಾನದ ಒಂದು, ಎರಡು, ಮೂರು ಮತ್ತು ನಾಲ್ಕನೆಯ ಭಾಗಗಳಲ್ಲಿ ಈ ಅಂಶಗಳು ದಾಖಲಾಗಿವೆ. ಎಲ್ಲರಿಗೂ ತಿಳಿದಂತೆ ಈ ಭಾಗದ ಆಶಯಗಳೇನು ಅಂತ ಸಂವಿಧಾನದ ಪ್ರಸ್ತಾವನೆ  (Preamble) ಬಹುಸುಂದರವಾಗಿ ಸಾರುತ್ತದೆ. ಸಂವಿಧಾನಕ್ಕೆ ಸವಾಲುಗಳು ಎದುರಾಗುವುದು ಈ ಅಂಶಗಳ ವಿಚಾರದಲ್ಲಿ. ಯಾಕೆಂದರೆ ಅಧಿಕಾರಸ್ಥರು ತಮ್ಮ ಅಧಿಕಾರದ ಮೇಲೆ ಯಾವುದೇ ಅಂಕುಶ ಇರುವುದನ್ನು ಇಷ್ಟಪಡುವುದಿಲ್ಲ. ಸಂವಿಧಾನ ಅಂತಹ ಒಂದು ಅಂಕುಶ. ಜನರಿಗೆ ನೀಡಿದ ಮೂಲಭೂತ ಹಕ್ಕುಗಳು ಪರ್ಯಾಯವಾಗಿ ಅಧಿಕಾರದ ಮೇಲಿನ ಅಂಕುಶ. ಅಧಿಕಾರದ ನಿರ್ವಹಣೆಯ ಮೂಲಕ ಏನನ್ನು ಸಾಧಿಸಬೇಕು ಅಂತ ನಿರ್ದೇಶಕ ತತ್ವಗಳ ಮೂಲಕ ಸಂವಿಧಾನ ಏನನ್ನು ಹೇಳುತ್ತದೆಯೋ ಅದು ಕೂಡಾ ಪರ್ಯಾಯವಾಗಿ ಅಧಿಕಾರದ ಮೇಲಿನ ನಿರ್ಬಂಧವೇ ಆಗಿದೆ. ಅಧಿಕಾರಸ್ಥರಿಗೆ ಅರಗಿಸಿಕೋಳ್ಳಲು ಕಷ್ಟವಾಗುವುದು ಅವರ ಅಧಿಕಾರಕ್ಕೆ ಸಂವಿಧಾನ ವಿಧಿಸುವ ನಿರ್ಬಂಧಗಳನ್ನು. ಸ್ವಾತಂತ್ರ ಮತ್ತು ಸಮಾನತೆಯನ್ನು ಎಲ್ಲರಿಗೂ ಅನ್ವಯಿಸಬೇಕು ಎನ್ನುವ ಆಶಯವನ್ನು. ಅಂದಿಗೂ ಇಂದಿಗೂ ಪಾಳೇಗಾರಿ ಮನೋಭಾವ ಎನ್ನುವುದು ಭಾರತೀಯ ಉಪಖಂಡಲ್ಲಿ ನೆಲೆಸಿದಷ್ಟು ಭದ್ರವಾಗಿ ಪ್ರಪಂಚದ ಬೇರೆಯಾವ ಖಂಡದಲ್ಲೂ ನೆಲೆಸಿಲ್ಲ. ಅರುವತ್ತು ವರ್ಷಗಳ ಸಂವಿಧಾನದ ಚರಿತ್ರೆಯಲ್ಲಿ ಎದ್ದು ಕಾಣುವುದು ಜನ ಸಾಮಾನ್ಯರಿಗೆ ಸಂವಿಧಾನ ನೀಡಿದ ಹಕ್ಕುಗಳನ್ನು ಅರಗಿಸಿಕೊಳ್ಳಲಾಗದ ಅಧಿಕಾರಸ್ಥರ ಮನೋಭಾವ. ಸಂವಿಧಾನ ಜಾರಿಗೆ ಬಂದು ಇನ್ನೂ ವರ್ಷ ತುಂಬಿರಲಿಲ್ಲ. ಆಗಲೇ ಸಂವಿಧಾನಕ್ಕೆ ಮೊದಲ ತಿದ್ದುಪಡಿ. ಹಸುಗೂಸಿಗೇ ಬೈಪಾಸ್ ಸರ್ಜರಿ. ಅದರ ಉದ್ದೇಶ ನೀಡಿದ ಹಕ್ಕುಗಳನ್ನು ಮೊಟಕುಗೊಳಿಸುವುದು. ಅದಕ್ಕೆ ಸಾಮಾಜಿಕ ನ್ಯಾಯದ ಸಮಜಾಯಿಸಿ ಎನೋ ಇತ್ತು. ಆದರೂ ಮೊದಲನೇ ತಿದ್ದುಪಡಿಯ ಮೂಲಕ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾದ ಒಂಬತ್ತನೇ ಪರಿಚ್ಛೇದ ಇಂದಿಗೂ ದೇಶಕ್ಕಂಟಿದ ಶಾಪ. ನ್ಯಾಯಾಲಯದ ಕೈಗೆಟಕದಂತೆ ರಾಜಕೀಯವಾಗಿ ಅನುಕೂಲವಾಗುವ ಕಾನೂನುಗಳನ್ನು ಅಡಗಿಸಿಡುವ ಕಸದ ಬುಟ್ಟಿ. ಆ ನಂತರ ಸರಕಾರದ ಹದ್ದುಮೀರಿದ ಕ್ರಮಗಳಿಂದ ಜನಸಾಮಾನ್ಯರನ್ನು ರಕ್ಷಿಸುವುದಕ್ಕೆಂದು ಇರುವ ಮೂಲಭೂತ ಹಕ್ಕುಗಳ ವಿಚಾರದಲ್ಲಿ ಸಂಸತ್ತಿಗೂ (ಸರಕಾರಗಳಿಗೆ ಅಂತ ಓದಿಕೊಳ್ಳಿ) ಮತ್ತು ನ್ಯಾಯಾಲಯಗಳಿಗೆ ಸುದೀರ್ಘ ಸಮರವೇ ನಡೆದುಹೋಯಿತು. ಈ ವ್ಯವಸ್ಥೆಯಲ್ಲಿ ಜನರೇ ಸಾರ್ವಭೌಮರು. ಅಂದ ಮೇಲೆ ಜನರಿಂದ ಆರಿಸಲ್ಪಟ್ಟ ಸಂಸತ್ತು ಸಾರ್ವಭೌಮ. ಅಂದ ಮೇಲೆ ಸಂಸತ್ತು ಸಂವಿಧಾನವನ್ನು ಹೇಗೆ ಬೇಕಾದರೂ ಮೊಟಕುಗೊಳಿಸಬಹುದು ಎಂದು ಸರಕಾರ ವಾದಿಸಿತು. ಸಂಸತ್ತು ಸಂವಿಧಾನದ ಕೂಸು. ಸಂಸತ್ತು ತನ್ನ ಅಧಿಕಾರವನ್ನು ಜನರಿಂದ ಸಂವಿಧಾನ ಹಾಕಿಕೊಟ್ಟ ನಿಯಮಗಳ ಪ್ರಕಾರ ಪಡೆದಿದೆ. ಅಂದ ಮೇಲೆ ''ಸಂಸತ್ತು ಸಂವಿಧಾನಕ್ಕಿಂತ ಮೇಲಲ್ಲ ಎಂಬ ವಾದವನ್ನು ನ್ಯಾಯಾಲಯ ಮುಂದಿಟ್ಟಿತ್ತು. ಕೊನೆಗೂ 1973ರ ಕೇಶವಾನಂದ ಭಾರತೀ ಪ್ರಕರಣದಲ್ಲಿ ಸಂವಿಧಾನದ ಮೂಲ ಮೂಲರಚನೆಗೆ  (basic structure) ಭಂಗಬಾರದಂತೆ ಸಂವಿಧಾನವನ್ನು ಬದಲಾಯಿಸುವ ಹಕ್ಕು ಸಂಸತ್ತಿಗೆ ಇದೆ; ಆದರೆ ಮೂಲ ರಚನೆ ಅಂದರೆ ಏನು ಮತ್ತು ಎಷ್ಟು ಎನ್ನುವುದನ್ನು ನಿರ್ಧರಿಸುವ ಅಧಿಕಾರ ನ್ಯಾಯಾಂಗಕ್ಕೆ ಸೇರಿದ್ದು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ಬರೆಯುವುದರೊಂದಿಗೆ ಸಮರ ತಾತ್ಕಲಿಕ ಅಂತ್ಯ ಕಂಡಿತು. ಕೆಲವರ ಪ್ರಕಾರ ಸಂವಿಧಾನ ಸಮಾನತೆ ಮತ್ತು ಸ್ವಾತಂತ್ರ ಎರಡಕ್ಕೂ ಒತ್ತು ನೀಡಿದ್ದು ಒಂದು ವಿರೋಧಾಭಾಸ. ಮಾತ್ರವಲ್ಲ ಇಂದೊಂದು ನಿರಂತರ ಸಂಘರ್ಷದ ಮೂಲ. ಈ ಅಭಿಪ್ರಾಯದಲ್ಲಿ ಸತ್ಯಾಂಶ ಇದೆ. ಆದರೆ ಸಮಾನತೆ ಮತ್ತು ಸ್ವಾತಂತ್ರ ಎರಡೂ ಕೂಡಾ ಮಹೋನ್ನತ ಮೌಲ್ಯಗಳೇ ಆಗಿರುವುದರಿಂದ ಅವುಗಳ ನಡುವೆ ಒಂದು ರೀತಿಯ ಸೂಕ್ಷ್ಮವಾದ ಸಮತೋಲನ ಇರುವಂತೆ ನೋಡಿಕೊಳ್ಳುವುದೇ ದೇಶದ ಆಡಳಿತದ ಗುಣಮಟ್ಟದ ಸೂಚಕ ಆಗುತ್ತದೆ. ಒಂದರ್ಥದಲ್ಲಿ ಕೇಶವಾನಂದ ಭಾರತೀ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯ ಸಾರಿದ್ದು ಈ ಸಮತೋಲನದ ಅವಶ್ಯಕತೆಯನ್ನು. ಈ ವಿಚಾರದಲ್ಲಿ ಆಗಾಗ ತಗಾದೆಗಳು ನಿಂತಿಲ್ಲ. ಆದರೆ ಕೇಶವಾನಂದ ಭಾರತೀ ತೀರ್ಪೇ ಈ ತನಕ ಅಂತಿಮ. ಮುಂದೇನಾಗಲಿದೆಯೋ?

ಸಂವಿಧಾನದ ನಾಳೆಗಳ ಬಗ್ಗೆ ಯೋಚಿಸುವಾಗ ನಮ್ಮ ನಡುವೆ ಈಗ ಜರುಗುತ್ತಿರುವ ಕೆಲ ವಿದ್ಯಮಾನಗಳನ್ನು ಗಮನಿಸಬೇಕಾಗುತ್ತದೆ. ಸಂವಿಧಾನಕ್ಕೆ ಬಹಿರಂಗವಾಗಿ ಯಾರೂ ಸವಾಲು ಹಾಕುತ್ತಿಲ್ಲ. ಸಂವಿಧಾನ ಸರಿಯಿಲ್ಲ- ಬದಲಿಸಬೇಕು ಎನ್ನುವ ಧ್ವನಿ ಅಲ್ಲೊಮ್ಮೆ ಇಲ್ಲೊಮ್ಮೆ ಕೇಳಿಸಿದ ಮರುಕ್ಷಣವೇ ಸಂಬಂಧಪಟ್ಟವರಿಂದ ಸಂವಿಧಾನವೇ ಅಂತಿಮ ಎನ್ನುವ ಸಮಜಾಯಿಸಿಯೂ ಬರುತ್ತದೆ. ಆದರೆ ಇವೆಲ್ಲಾ ಕಣ್ಣಿಗೆ ಕಾಣಿಸುವಷ್ಟು ಸರಳವಾದ ಬೆಳವಣಿಗೆಗಳಲ್ಲ. ಸಂವಿಧಾನ ಒಪ್ಪಿಕೊಂಡ ಕೆಲವು ಮೌಲ್ಯಗಳ ಬಗ್ಗೆ ಈ ದೇಶದ ಒಂದು ವರ್ಗಕ್ಕೆ ಅಸಹನೆಯೋ, ಅಸಮಾಧಾನವೋ ಅಥವಾ ಸಿಟ್ಟೋ ಇದೆ. ಆದರೆ ಸಂವಿಧಾನಕ್ಕೆ ಬಹುದೊಡ್ಡ ಜನಬೆಂಬಲ ಇರುವುದರಿಂದ ಅವರು ತಮ್ಮ ಸಿಟ್ಟನ್ನು ಬಹಿರಂಗವಾಗಿ ಹೇಳುವುದಿಲ್ಲ. ಆದರೆ ಕೆಲ ಸಾಂವಿಧಾನಿಕ ಮೌಲ್ಯಗಳು ಅವರು ಪ್ರತಿಪಾದಿಸುತ್ತಿರುವ ಭಾರತೀಯ ಮೌಲ್ಯಗಳಿಗೆ ತದ್ವಿರುದ್ಧವಾಗಿವೆ ಎನ್ನುವ ಜನಾಭಿಪ್ರಾಯವೊಂದನ್ನು ಬಹಳ ನಾಜೂಕಿನಿಂದ ರೂಪಿಸುವ ಕೆಲಸ ನಡೆಯುತ್ತಿದೆ. ಇದರಲ್ಲಿ ಪ್ರಮುಖವಾಗಿರುವುದು ಸಂವಿಧಾನ ಒಪ್ಪಿಕೊಂಡ ಧರ್ಮ ನಿರಪೇಕ್ಷತೆ ಅಥವಾ ಸೆಕ್ಯುಲರಿಸಂ ಅಂತ ಕೆರೆಯಲ್ಪಡುವ ಮೌಲ್ಯದ ಕುರಿತಾದ ತಗಾದೆ.. ಸೆಕ್ಯುಲರ್ ವಾದದ ವಿರೋಧಿಗಳು ಈ ಪರಿಕಲ್ಪನೆ ಮೂಲ ಸಂವಿಧಾನದಲ್ಲಿ ಇರಲಿಲ್ಲವೆಂದೂ, ರಾಜಕೀಯ ಕಾರಣಗಳಿಗೋಸ್ಕರ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯ ಸಂದರ್ಭ ಬಳಸಿಕೊಂಡು 42ನೆಯ ಸಾಂವಿಧಾನಿಕ ತಿದ್ದುಪಡಿಯ (1976) ಮೂಲಕ ''ಸೆಕ್ಯುಲರ್'' ಮತ್ತು ''ಸೋಷಿಯಲಿಸ್ಟ್'' ಎಂಬ ಪದಗಳನ್ನು ಸಂವಿಧಾನದ ಪ್ರಸ್ತಾವದಲ್ಲಿ ಸೇರಿಸಿ ಅನಗತ್ಯವಾಗಿ ಅವುಗಳನ್ನು ದೇಶದ ಮೇಲೆ ಹೇರಿದರೆಂದೂ ಹೇಳುತ್ತಾರೆ. ಈ ವಾದ ಮಂಡಿಸುವವರ ಪ್ರಕಾರ ಧಾರ್ಮಿಕ ಸ್ವಾತಂತ್ರ ಮತ್ತು ಧರ್ಮ-ಧರ್ಮಗಳ ನಡುವಣ ಸಹಬಾಳ್ವೆ ಭಾರತದ ಪರಂಪರೆಯಲ್ಲಿ ಸಹಜವಾಗಿಯೇ ಸದಾ ನೆಲೆಸಿತ್ತು. ಆದ ಕಾರಣ ಈ ದೇಶಕ್ಕೆ ಸೆಕ್ಯುಲರಿಸಮ್‌ನ ಪರಿಕಲ್ಪನೆಯೇ ಅನಗತ್ಯ ಎನ್ನುವ ವಿಚಾರವನ್ನು ಮನಗಂಡೇ ಸಂವಿಧಾನ ನಿರ್ಮಾತೃಗಳು ಮೂಲ ಸಂವಿಧಾನದಲ್ಲಿ ಈ ಸೆಕ್ಯುಲರ್ ಎನ್ನುವ ವಿಚಾರವನ್ನು ಸೇರಿಸಿಲ್ಲ. ಈ ವಾದ ಮೂಲಭೂತವಾಗಿ ಸಂಪೂರ್ಣ ತಪ್ಪು.

ಇಂದಿರಾ ಗಾಂಧಿಯವರ ಕಾಲದಲ್ಲಿ ಸೆಕ್ಯುಲರ್ ಮತ್ತು ಸೋಷಿಯಲಿಸ್ಟ್ ಎನ್ನುವ ಪದಗಳನ್ನು ಸಂವಿಧಾನದ ಪ್ರಸ್ತಾವದ ಮೊದಲ ಸಾಲಿಗೆ ಸೇರಿಸಲಾಯಿತು ಎನ್ನುವುದನ್ನು ಬಿಟ್ಟರೆ ಸೆಕ್ಯುಲರಿಸಂನ ಪರಿಕಲ್ಪನೆ ಸಂವಿಧಾನದ ಮೂಲಭೂತ ಮೌಲ್ಯಗಳಲ್ಲಿ ಒಂದು ಎಂದು ಆರಂಭದಿಂದಲೂ ಸ್ಥಿರೀಕರಿಸಲ್ಪಟ್ಟಿತ್ತು.

 ಇಂದಿರಾ ಗಾಂಧಿಯವರ ಕಾಲದಲ್ಲಿ ಸೆಕ್ಯುಲರ್ ಮತ್ತು ಸೋಷಿಯಲಿಸ್ಟ್ ಎನ್ನುವ ಪದಗಳನ್ನು ಸಂವಿಧಾನದ ಪ್ರಸ್ತಾವದ ಮೊದಲ ಸಾಲಿಗೆ ಸೇರಿಸಲಾಯಿತು ಎನ್ನುವುದನ್ನು ಬಿಟ್ಟರೆ ಸೆಕ್ಯುಲರಿಸಂನ ಪರಿಕಲ್ಪನೆ ಸಂವಿಧಾನದ ಮೂಲಭೂತ ಮೌಲ್ಯಗಳಲ್ಲಿ ಒಂದು ಎಂದು ಆರಂಭದಿಂದಲೂ ಸ್ಥಿರೀಕರಿಸಲ್ಪಟ್ಟಿತ್ತು. ಸಂವಿಧಾನ ರಚನಾ ಸಭೆಯಲ್ಲಿ ಕೆ.ಟಿ. ಶಾ ಎನ್ನುವ ಸದಸ್ಯರು ''ಸೆಕ್ಯುಲರ್'' ಮತ್ತು ''ಸೋಷಿಯಲಿಸ್ಟ್'' ಎನ್ನುವ ಪದಗಳನ್ನು ಸಂವಿಧಾನದ ಮುಖ್ಯಪಠ್ಯದಲ್ಲೇ ಸೇರಿಸಬೇಕು ಎಂದು ವಾದಿಸಿದ್ದರು. ಅಂಬೇಡ್ಕರ್ ಈ ಸಲಹೆಯನ್ನು ತಿರಸ್ಕರಿಸಿದ್ದರು. ಅದಕ್ಕೆ ಅಂಬೇಡ್ಕರ್ ನೀಡಿದ ಕಾರಣ ಸಂವಿಧಾನದಲ್ಲಿ ಈಗಾಗಲೇ ಯಾವ ಯಾವ ವಿಚಾರಗಳು ಸ್ಪಷ್ಟವಾಗಿದೆಯೋ ಅವುಗಳನ್ನು ಮತ್ತೆ ಮತ್ತೆ ಪ್ರತ್ಯೇಕ ಶಬ್ದಗಳನ್ನು ಬಳಸಿ ಹೇಳುವ ಅಗತ್ಯವಿಲ್ಲ ಎಂಬುದಾಗಿತ್ತು. ಅಂದರೆ ಮೂಲ ಸಂವಿಧಾನದಲ್ಲಿ ಸೆಕ್ಯುಲರ್ ಎಂಬ ಪದ ಬಳಕೆಯಾಗಿಲ್ಲ, ಆದರೆ ಸೆಕ್ಯುಲರ್ ವಾದದ ಆಶಯ ಅಂತರ್ಗತವಾಗಿತ್ತು. 42ನೆಯ ತಿದ್ದುಪಡಿಗೆ ಮೊದಲೇ ಪ್ರಸಿದ್ಧ ಕೇಶವಾನಂದ ಭಾರತಿ ಪ್ರಕರಣದಲ್ಲಿ (1973) ಸುಪ್ರೀಂ ಕೋರ್ಟ್ ಸೆಕ್ಯುಲರ್ ವಾದವನ್ನು ಸಂವಿಧಾನದಲ್ಲಿ ಬದಲಿಸಲಾಗದ ಮತ್ತು ಬದಲಿಸಬಾರದ ಮೂಲ ರಚನೆಯ ಭಾಗ (basic structure) ಎಂದು ಸ್ಪಷ್ಟವಾಗಿ ಹೇಳಿತ್ತು. ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಇದನ್ನೇ ಕೋರ್ಟು ಮತ್ತೆ ಹೇಳಿತು. 1977 ರಲ್ಲಿ ಅಧಿಕಾರಕ್ಕೆ ಬಂದ ಜನತಾ ಸರಕಾರ (ಅದರಲ್ಲಿ ಎಲ್. ಕೆ. ಅಡ್ವಾಣಿ ಮತ್ತು ಎ.ಬಿ.ವಾಜಪೇಯಿ ಪ್ರಮುಖ ಸಚಿವರಾಗಿದ್ದರು) 42ನೇಯ ತಿದ್ದುಪಡಿಯನ್ನು ಅಕ್ಷರಶ ಅಳಿಸಿ ಹಾಕುವಾಗಲೂ ಸೆಕ್ಯುಲರ್ ಎನ್ನುವ ಪದವನ್ನು ಮುಂದುವರಿಸಿತು ಎನ್ನುವುದು ಇಲ್ಲಿ ಉಲ್ಲೇಖನೀಯ. ಆದುದರಿಂದ ಸೆಕ್ಯುಲರ್ ವಾದ ಎನ್ನುವುದು ನೆಹರೂ ಅವರಿಂದ ಬಂತು, ಇಂದಿರಾ ಗಾಂಧಿಯವರಿಂದ ಬಂತು, ಕಾಂಗ್ರೆಸ್ಸಿನಿಂದ ಬಂತು ಮುಂತಾದ ಹೇಳಿಕೆಗಳೆಲ್ಲ ಒಂದು ವ್ಯವಸ್ಥಿತ ಅಪಪ್ರಚಾರದ ಭಾಗ.

ಸಂವಿಧಾನ ನಿರ್ಮಾರ್ತೃಗಳು ಕೊನೆಯ ಬಾರಿಗೆ (1949 ನವೆಂಬರ್ 26) ಸಭೆ ಸೇರಿದಾಗ ಒಂದು ಕುತೂಹಲಕಾರಿ ಘಟನೆ ನಡೆಯಿತು. ಹಸ್ತಾಕ್ಷರದಲ್ಲಿ ಬರೆಯಲಾದ ಪೂರ್ಣ ಸಂವಿಧಾನದ ಪ್ರತಿಗೆ ಸಂವಿಧಾನ ಸಭೆಯ ಸದಸ್ಯರೆಲ್ಲಾರೂ ಸಹಿ ಹಾಕುವ ಮೂಲಕ ಅದನ್ನು ಔಪಚಾರಿಕವಾಗಿ ಅಂಗೀಕರಿಸಬೇಕಿತ್ತು. ಆ ದಿನದ ಸಭೆಯಲ್ಲ್ಲಿಸದಸ್ಯರೆಲ್ಲಾ ಸಹಿಹಾಕುವಂತೆ ಅಧ್ಯಕ್ಷ ಬಾಬೂ ರಾಜೇಂದ್ರ ಪ್ರಸಾದ್ ತಿಳಿಸಿದರು. ಮೊದಲಿಗೆ ಜವಾಹರಲಾಲ್ ನೆಹರೂ ಸಹಿ ಮಾಡಿದರು. ನಂತರ ಸದಸ್ಯರೆಲ್ಲಾ ಒಬ್ಬರ ನಂತರ ಒಬ್ಬರಂತೆ ಸಹಿ ಮಾಡುತ್ತಾ ಹೋದರು. ಕೊನೆಗೆ ರಾಜೇಂದ್ರಪ್ರಸಾದ್ ಸಹಿ ಮಾಡಲು ಬಂದರು. ಅಧ್ಯಕ್ಷರಾಗಿ ಅವರು ಕೊನೆಯ ಸಾಲಿನಲ್ಲಿ ಸಹಿಮಾಡಬೇಕಿತ್ತಂತೆ. ಆದರೆ ಸ್ವಲ್ಪ ಹಿಂದೆ ಮುಂದೆ ನೋಡಿದ ರಾಜೇಂದ್ರ ಪ್ರಸಾದ್ ಹಾಗೆ ಮಾಡದೆ ಸಂವಿಧಾನದ ಕೊನೆಯ ಸಾಲು ಮತ್ತು ನೆಹರೂ ಅವರ ಸಹಿಯ ಮಧ್ಯೆ ಇದ್ದ ಇಕ್ಕಟ್ಟಾದ ಜಾಗದಲ್ಲಿ ತಮ್ಮ ಸಹಿಯನ್ನು ತೂರಿಸಿದರಂತೆ! ಒಂದು ರೀತಿಯಲ್ಲಿ ಆ ಘಟನೆ ಸಂವಿಧಾನದ ಭವಿಷ್ಯದ ಚರಿತ್ರೆಗೆ ಮುನ್ನುಡಿ. ಸಂವಿಧಾನದ ಆಶಯದ ಪ್ರಕಾರ ಜನ ತಂತ್ರದಲ್ಲಿ ಸಮಾನತೆ ಎಂಬುದು ಅಧಿಕಾರ, ಅಂತಸ್ತು, ಸಾಮಾಜಿಕ ಸ್ಥಾನ, ಆರ್ಥಿಕ ಬಲ ಎಲ್ಲವನ್ನೂ ಮೀರಿದ ಮೌಲ್ಯವಾಗಿರಬಹುದು. ಆದರೆ ಶತಮಾನದ ಮಾನಸಿಕ ಕಿಲುಬು ಸಮಾನತೆ ಸಂವಿಧಾನದಲ್ಲಿ ದಾಖಲಾದ ಕೂಡಲೇ ತೊಳೆದು ಹೋದೀತೇ?

ಇಷ್ಟೆಲ್ಲಾ ಆದರೂ ಹತ್ತು ವರ್ಷಗಳ ಹಿಂದೆ ಸಂವಿಧಾನ 60ನೇ ವರ್ಷಕ್ಕೆ ಕಾಲಿಟ್ಟಾಗ 'ಸೆಮಿನಾರ್' ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಉಲ್ಲೇಖಿಸಿದ ಮಾತೊಂದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಭಾರತ ಇಂದು ಪಾಕಿಸ್ಥಾನದ ಹಾಗೆ ಆತ್ಮಘಾತುಕತೆಯತ್ತ ಸಾಗದೇ ಇದ್ದರೆ, ಚೈನಾದ ಹಾಗೇ ಆತ್ಮರಹಿತ ಅಭಿವೃದ್ಧಿಯ ಹಾದಿಹಿಡಿಯದೇ ಇದ್ದರೆ, ಇಸ್ರೇಲ್ ನಂತೆ ಆತ್ಮ ಶ್ರೇಷ್ಠತೆಯಿಂದ ನಲುಗದೇ ಇದ್ದರೆ, ಅಮೆರಿಕದ ಹಾಗೆ ಪರಮ ಲೌಕಿಕತೆಯ ನಶೆ ಏರಿಸಿಕೊಳ್ಳದೇ ಇದ್ದರೆ ಅದಕ್ಕೆ ಬಹುಮುಖ್ಯ ಕಾರಣ ಭಾರತದ ಸಂವಿಧಾನ ಎತ್ತಿ ಹಿಡಿದ ಮೌಲ್ಯಗಳು ಮತ್ತು ಅದು ಹಾಕಿಕೊಟ್ಟ ಆಡಳಿತದ ಹಾದಿ. ಆಶಯದ ವಿಚಾರದಲ್ಲಿ ಭಾರತದ ಸಂವಿಧಾನಕ್ಕಿಂತ ಉತ್ತಮವಾದದ್ದನ್ನು ಹುಡುಕುವುದು ಕಷ್ಟ. ಅದು ದೇಶದಲ್ಲಿ ಆಶ್ರಯ ಪಡೆದಿರುವ ಎಲ್ಲಾ ಧರ್ಮಗಳ ಸುಸಂದೇಶ ಸಾರವನ್ನು ಅಂತರ್ಗತ ಗೊಳಿಸಿಕೊಂಡ ಜಗತ್ತಿನ ಅತೀದೊಡ್ಡ ಸೆಕ್ಯುಲರ್ ಮಾನವಧರ್ಮ ಗ್ರಂಥ. ಆಚರಣೆಯ ವಿಚಾರದಲ್ಲಿ ಹೇಳಹೊರಟರೆ ಅದೊಂದು ದುರಂತ. ಧರ್ಮಗ್ರಂಥಗಳ ಎಲ್ಲಾ ಅನುಯಾಯಿಗಳೂ ತಮ್ಮ ಧರ್ಮಗ್ರಂಥಗಳನ್ನು ಅನುಸರಿಸುವುದಿಲ್ಲ, ಆರಾಧಿಸುತ್ತಾರೆ. ಭಾರತದ ಸಂವಿಧಾನದ ವಿಚಾರವೂ ಹಾಗೆಯೇ. ಅದನ್ನು ಎಲ್ಲರೂ ಹಾಡಿ ಹೊಗಳುತ್ತಾರೆ. ಆದರೆ ಸಂವಿಧಾನದ ಆಶಯವನ್ನು ದೈನಂದಿನ ಆಡಳಿತದಲ್ಲಿ, ವ್ಯವಹಾರದಲ್ಲಿ ಮತ್ತು ಸಂಬಂಧಗಳಲ್ಲಿ ಅನುಸರಿಸಲು ಭಾರತೀಯ ಮನಸ್ಸು ಇನ್ನೂ ಸಂಪೂರ್ಣ ಬದ್ಧವಾಗಿಲ್ಲ, ಸಿದ್ಧವೂ ಆಗಿಲ್ಲ. ಭಾರತೀಯ ಮನಸ್ಸುಗಳ ಸಿದ್ಧತೆಯ ಹಿನ್ನೆಲೆಯಲ್ಲಿ ನೋಡಿದರೆ 70 ವರ್ಷಗಳ ಅವಧಿ ತೀರಾ ಸಣ್ಣದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top