-

ವಿದ್ಯೆಯ ಮಹತ್ವ ಕುಂಠಿತವಾಗದಿರಲಿ

-

ಮುಂಬೈಯಲ್ಲಿ ಅಸ್ಪಶ್ಯ ವಿದ್ಯಾರ್ಥಿಗಳ ಪರವಾಗಿ ಏರ್ಪಡಿಸಲಾದ ‘ಮುಂಬೈ ಅಸ್ಪಶ್ಯ ವಿದ್ಯಾರ್ಥಿ ಸಮ್ಮೇಳನವು’ ದಿನಾಂಕ 10.11.12, ಡಿಸೆಂಬರ್ 1938ರಂದು ಯಶಸ್ವಿಯಾಗಿ ನೆರವೇರಿತು. ದಿ.12ರಂದು ಸಮ್ಮೇಳನದ ಅಧ್ಯಕ್ಷರಾದ ಡಾ. ಅಂಬೇಡ್ಕರ್ ಅವರು ವಿದ್ಯಾರ್ಥಿಗಳಿಗೆ ಹಿತೋಪದೇಶ ನೀಡಿದರು. ಕರತಾಡನ ಮತ್ತು ಮಹಿಳೆಯರ ಗ್ಯಾಲರಿಯಿಂದ ನಡೆದ ಪುಷ್ಪವೃಷ್ಠಿಯ ನಡುವೆ ಡಾ. ಅಂಬೇಡ್ಕರ್‌ಭಾಷಣವನ್ನು ಆರಂಭಿಸಿದರು. ನೀವಿಂದು ಮುಂಬೈಯಲ್ಲಿ ಅಸ್ಪಶ್ಯ ವಿದ್ಯಾರ್ಥಿಗಳ ಸಮ್ಮೇಳನವನ್ನು ಏರ್ಪಡಿಸಿದಿರಿ. ಅದು ಎಲ್ಲ ರೀತಿಯಿಂದ ಯಶಸ್ವಿಯಾಯಿತು. ಈ ಕಾರಣಕ್ಕಾಗಿ ನಿಮಗೂ, ಸಹಕರಿಸಿದ ವಿದ್ಯಾರ್ಥಿಗಳಿಗೂ ಅಭಿನಂದನೆಯನ್ನು ಸಲ್ಲಿಸುತ್ತೇನೆ. ನಾನು ಶನಿವಾರ, ರವಿವಾರ ನಾಶಿಕದಲ್ಲಿದ್ದೆ. ಪ್ರವಾಸದ ಆಯಾಸದಿಂದ ನನ್ನ ಆರೋಗ್ಯ ಹದಗೆಟ್ಟಿದೆ. ನನ್ನಲ್ಲಿ ಅಷ್ಟೊಂದು ತ್ರಾಣವಿಲ್ಲ. ಭಾಷಣ ಮಾಡುವಷ್ಟು ಶಕ್ತಿಯೂ ಇಲ್ಲ. ಇಂದು ಈ ಸಮ್ಮೇಳನಕ್ಕೆ ಬರುವುದಕ್ಕೆ ಸಾಧ್ಯವಾಗಿದ್ದರಿಂದ ಸಂತೋಷ ಮತ್ತು ಧನ್ಯತೆ ಎನಿಸುತ್ತದೆ.

ಈ ಬಗೆಯ ಸಮ್ಮೇಳನ ಸಾಕಷ್ಟು ಜರುಗುತ್ತವೆ. ಇಂಥಕಾಲಕ್ಕೆ ನಾನು ಸದಾ ಗಮನಿಸಿದಂತೆ ಅಧ್ಯಕ್ಷನಾದವನು ವಿದ್ಯಾರ್ಥಿಗಳನ್ನು ಚುಚ್ಚಿ ಮಾತನಾಡುತ್ತಾನೆ. ‘ನೀವು ಕಲಿತು ಏನುಮಾಡುತ್ತೀರಿ? ಸರಕಾರಿ ನೌಕರಿಯೇ?’ ಅವರಿಗೆ ದೇಶ ಸೇವೆ ಮಾಡುವಂತೆ ಉಪದೇಶ ನೀಡಲಾಗುತ್ತದೆ. ಆದರೆ ಅದರಲ್ಲೇನೂ ಹುರುಳಿಲ್ಲ. ನಾನು ವಿದ್ಯಾರ್ಥಿಗಳ ಕುರಿತು ಯೋಚಿಸಿದ್ದೇನೆ. ಅದರ ಮೇಲಿಂದ ಹೇಳಬಯಸುವುದೇನೆಂದರೆ- ನೌಕರಿ ಮಾಡಿದರೆ ಅದರಲ್ಲೇನು ಪಾಪವಿದೆ? ಅವನಿಗೂ ಜೀವನವಿದೆ. ಭಾವನೆಯಿದೆ. ಪ್ರತಿಯೊಬ್ಬ ಮನುಷ್ಯನ ಅಂತಿಮ ಧ್ಯೇಯವೇನು? ತನ್ನಲ್ಲಿ ಮೈಗೂಡಿರುವ ಗುಣವನ್ನು ಪರಿಪೋಷಿಸಿ ಸತ್ಫಲ ಸಿಗಲಿ ಎಂಬ ಧ್ಯೇಯವಿರುತ್ತದೆ. ಆದ್ದರಿಂದ ನಾನು ನಿಮಗೆ ಅಂಥ ಉಪದೇಶ ನೀಡಲಾರೆ. ಸರಕಾರದ ನೌಕರಿಯು ಸದ್ಯ ಒಂದೇ ಜಾತಿಯ ಸತ್ತಿಗೆಯಾಗಿದೆ. ಕಲೆಕ್ಟರ್ ಆಫೀಸಿನಲ್ಲಾಗಲಿ, ಉಳಿದ ಪ್ರತಿಯೊಂದು ಆಫೀಸಿನಲ್ಲೂ ಒಂದೇ ಜಾತಿಯ ಜನರಿದ್ದಾರೆ. ನೀವು ನೌಕರಿಗಾಗಿ ಏಕೆ ಜಗಳಾಡುತ್ತೀರಿ? ಎಂದು ಹಲವರು ಕೇಳುತ್ತಾರೆ. ಅರ್ಹತೆಯಿದ್ದರೆ ನೌಕರಿ ಸಿಗುತ್ತದೆ. ಅದರಲ್ಲಿ ಜಾತಿಯ ಪ್ರಶ್ನೆ ಎಲ್ಲಿಂದ ಬರುತ್ತದೆ? ಆದರೆ ನಮ್ಮ ಸಾಮಾಜಿಕ ಪರಿಸ್ಥಿತಿಯ ಬಗೆಗೆ ಯೋಚಿಸಿದಿರಿ ಎಂದರೆ, ನೌಕರಿಯಿಂದ ಏನುಲಾಭ ಎಂದು ಕೇಳುವುದು ಮೂರ್ಖತನ.

ಈ ದೇಶದಲ್ಲಿ ಜಾತಿಭೇದದ ಪದ್ಧತಿ ಬೇಕಾಗಿದೆ. ಇಂದು ದುಡ್ಡಿದ್ದವರ ಕೈಯಲ್ಲೇ ಸತ್ತೆಯಿದೆ. ಅವನದನ್ನು ಸದ್ಭಾವನೆಯಿಂದ ಬಳಸದೆ, ತುಪ್ಪವನ್ನು ತಾನೇ ತಿನ್ನುತ್ತಾನೆ. ನೌಕರಿಯಿಂದ ಸಂಬಳ ಕೈಗೆ ಸಿಗುತ್ತದೆ. ಯಾವ ಸಮಾಜ ಸರಕಾರಿ ನೌಕರಿ ಮಾಡುವುದಿಲ್ಲವೋ, ಯಾವ ಸಮಾಜಕ್ಕೆ ಅಧಿಕಾರದ ಹುದ್ದೆ ಸಿಗಲಿಲ್ಲವೋ ಅವರ ಊರ್ಜಿತಾವಸ್ಥೆಯಾಗಲಾರದು. ಬ್ರಾಹ್ಮಣ ಸಮಾಜವು ನೌಕರಿಯಲ್ಲಿ ತೊಡಗಿಕೊಂಡಿದೆ. ಹೀಗಾಗಿ ನೀವು ಸರಕಾರಿ ನೌಕರಿಗಾಗಿ ಪ್ರಯತ್ನಿಸದಿರೆಂದರೆ ಸಮಾಜದ ಉನ್ನತಿಯಾಗುತ್ತದೆ. ಅದನ್ನು ಪಡೆಯಲು ನೀವು ಶತಪ್ರಯತ್ನ ಮಾಡಿ. ಕಲಿತವರಲ್ಲಿ ಕೆಲವು ದೋಷವಿರುತ್ತವೆ. ಆದರೆ ಕಲಿತ ಮೇಲೆ ನೌಕರಿಯ ಬೆನ್ನು ಹತ್ತುವುದೇನು ದೋಷವಲ್ಲ. ಆ ದೋಷವಾಗಲಿ, ಅವಗುಣವಾಗಲಿ ನಿಮ್ಮಲ್ಲಿ ಮೈಗೂಡದಂತೆ ಎಚ್ಚರವಹಿಸಿ. ಮೊದಲನೆಯದೆಂದರೆ ಶಿಕ್ಷಣ ಪೂರ್ಣಗೊಂಡ ಬಳಿಕ ಮನುಷ್ಯ ಸ್ವಾರ್ಥಿಯಾಗುತ್ತಾನೆ. ಮನುಷ್ಯ ಸ್ವಾರ್ಥಿಯಾಗುವುದು ಸಹಜ. ಆದರೆ ಕಲಿತವನು ಸ್ವಂತದ ಹಿತವನ್ನು ನೋಡುತ್ತಾನೆಯೇ ಹೊರತು, ಸಮಾಜದ ಹಿತವನ್ನು ನೋಡುವುದಿಲ್ಲ.ಅವನು ತನ್ನ ಹೆಂಡತಿ ಮಕ್ಕಳ ಮತ್ತು ತನ್ನದಷ್ಟೇ ನೋಡಿಕೊಳ್ಳುತ್ತಾನೆ. ಮೆಝಿನ ಹೇಳುವುದೇನೆಂದರೆ, ‘ಜನರಲ್ಲಿ ಪಾರತಂತ್ರ ಪಸರಿಸಿದಾಗ, ಮನುಷ್ಯ ಕಲಿತರೂ ಸಹ ಕರ್ತವ್ಯಕ್ಕಿಂತ ಹಕ್ಕಿನ ಅರಿವೇ ಹೆಚ್ಚು ಬೆಳೆಯುತ್ತದೆ’. ತನ್ನ ಕರ್ತವ್ಯ ಯಾವುದು ಎಂಬ ಭಾವನೆಯೂ ಜಾಗೃತವಾಗದಿರುವುದೇ ಕಲಿತವನ ದೋಷವಾಗಿದೆ.

ನನಗೆ ಖೇದನಿಸುವ ಸಂಗತಿಯೆಂದರೆ ಪದವಿ, ನೌಕರಿ ಸಿಕ್ಕ ಬಳಿಕ ಅವನ ವಿದ್ಯಾರ್ಜನೆಯ ಮಾರ್ಗ ತೀರ ಕುಂಠಿತವಾಗುತ್ತದೆ. ವಿದ್ಯೆಯ ಮಹತ್ವ ಕುಂಠಿತವಾಗುತ್ತದೆ. ನಾನು ಪ್ರವಾಸ ಮಾಡುವಾಗ ನನ್ನ ಹತ್ತಿರ ನಾಲ್ಕಾರು ಪುಸ್ತಕ ಮತ್ತು ಪತ್ರಿಕೆಗಳಿರುತ್ತವೆ. ಆದರೆ ಕಲಿತವರ ಕೈಯಲ್ಲಿ ಪುಸ್ತಕ, ಪತ್ರಿಕೆಯ ಬದಲಿಗೆ ಸಿಗರೇಟು ಕಾಣಿಸುತ್ತದೆ. ಮನುಷ್ಯ ಬಿಎ ಪಡೆದ ಮಾತ್ರಕ್ಕೆ ಅವನಿಗೆ ಅಧಿಕ ಶಿಕ್ಷಣದ ಅಗತ್ಯವಿಲ್ಲವೇ? ಬಿಎ ಅಥವಾ ಎಂಎ ಗಳಿಸಿದ ಮಾತ್ರಕ್ಕೆ ಅವನಿಗೆ ಸರ್ವಜ್ಞಾನ ಪ್ರಾಪ್ತವಾಯಿತು ಎಂಬ ಭಾವನೆಯು ತಪ್ಪು. ಅಗಸ್ತ್ಯ ಮುನಿಯು ಸಮುದ್ರಪ್ರಾಶನ ಮಾಡಿದಂತೆ, ಕಲಿತವರಿಗೆ ತಾವು ಪದವಿಗಳಿಸಿದ ಮಾತ್ರಕ್ಕೆ ಎಲ್ಲ ವಿದ್ಯೆ ಹಸ್ತಗತ ಮಾಡಿಕೊಂಡಂತೆ ಅನಿಸುತ್ತದೆ! ಬರೋಡಾದ ಸಂಸ್ಥಾನದಲ್ಲಿ ಒಬ್ಬ ವ್ಯಕ್ತಿಯಿದ್ದ, ಅವನು ಬಿಎ ಪದವೀಧರ. ಮಹಾರಾಜರು ಅವನನ್ನು ಒಂದು ಹಳ್ಳಿಗೆ ನೇಮಿಸಿದರು. ಆ ಕಾಲದಲ್ಲಿ ಬರೋಡಾ ಸಂಸ್ಥಾನದ ಭಾಷೆ ಗುಜರಾತ್‌ನಲ್ಲಿತ್ತು, ಇಂಗ್ಲಿಷ್‌ನಲ್ಲಿರಲಿಲ್ಲ. ಆ ವ್ಯಕ್ತಿ ತುಂಬ ಆಲಸಿ! ತಪ್ಪಿಯೂ ಟೈಮ್ಸ್ ಓದುತ್ತಿರಲಿಲ್ಲ. ಮುಂದೆ ಏನಾಯಿತೆಂದರೆ, ಅವನಿಗೆ ಕೆಲವು ವರ್ಷಗಳ ಬಳಿ ಎಬಿಸಿಯ ಪರಿಚಯವೂ ಉಳಿಯಲಿಲ್ಲ. ಇದು ಸತ್ಯವಾದ ಸಂಗತಿ. ನನ್ನ ಅನುಭವವೂ ಹೀಗೇ ಇದೆ. ಪಿ.ಎಚ್‌ಡಿ. ಪಡೆಯಲು ಫ್ರೆಂಚ್ ಮತ್ತು ಜರ್ಮನ್ ಭಾಷೆ ಬರಬೇಕು. ಆಗ ನನಗೆ ಆ ಭಾಷೆ ಬರುತ್ತಿತ್ತು. ಆದರೆ ಈಗ ಆ ಭಾಷೆಯ ವ್ಯಾಸಂಗವಿಲ್ಲದ್ದರಿಂದ, ಆ ಭಾಷೆಯಲ್ಲಿ ಮಾತಾಡುವುದು ಕಷ್ಟ.

ಇತ್ತೀಚೆಗೆ ನಾನು ಫ್ರಾನ್ಸ್ ಮತ್ತು ಜರ್ಮನಿಗೆ ಹೋದಾಗ ನನಗೆ ಆ ಭಾಷೆಯಲ್ಲಿ ಮಾತಾಡುವುದು ದುಸ್ತರವೆನಿಸಿತು. ವಿದ್ಯೆಯ ನಿಜವಾದ ರುಚಿ ಯಾರಿಗಿರುತ್ತದೆ? ಪರೀಕ್ಷೆಯ ಬಳಿಕ ಪುಸ್ತಕವನ್ನು ಹಳೆ ಪುಸ್ತಕದ ಅಂಗಡಿಗೆ ಮಾರುತ್ತಾರೋ, ಅವನಿಗೆ ವಿದ್ಯೆಯ ರುಚಿಗೊತ್ತಿಲ್ಲ ಎಂದೇ ನನ್ನ ಭಾವನೆ. ನನ್ನ ಮನೆಯ ಮೇಲೆ ಸರಕಾರ ಜಪ್ತಿತಂದರೆ, ಗುಮಾಸ್ತನು ನನ್ನ ಪುಸ್ತಕವನ್ನೇನಾದರೂ ಮುಟ್ಟಿದರೆ ನಾನವನನ್ನು ಗುಂಡು ಹೊಡೆದು ಕೊಲ್ಲುತ್ತೇನೆ. ಕಲಿತ ನಿಮಗೆ ಸೌಂದರ್ಯದ ರುಚಿಯಿದ್ದಂತೆ ಕಾಣುತ್ತದೆ. ಮದುವೆ ಮಾಡಿಕೊಳ್ಳಲಿರುವ ಹುಡುಗಿ ಸುಂದರಿಯಾಗಿದ್ದಾಳೆಯೇ? ತನಗವಳು ಇಷ್ಟವೇ? ಮುಂತಾದ ವಿಷಯಗಳ ಬಗ್ಗೆ ನೀವು ಯೋಚಿಸುತ್ತೀರಿ. ಆದರೆ ಅದೇ ಹಕ್ಕನ್ನು ಹುಡುಗಿಯರಿಗೆ ನೀಡಿ. ಸಾಕಷ್ಟು ಸುಂದರ ಹುಡುಗಿಯರು ಕುರೂಪಿ ಗಂಡಸರ ಸ್ವಾಧೀನವಾಗಿರುವುದನ್ನು ಕಂಡಿದ್ದೇನೆ. ನನಗೆ ಈ ದೇಶದ ಬಗ್ಗೆ ಬೇಸರ ಬಂದಿದೆ. ಆದರೆ ನನಗೆ ನನ್ನ ಕರ್ತವ್ಯದ ಅರಿವಿರುವುದರಿಂದ ನಾನಿಲ್ಲಿ ನಿಲ್ಲಬೇಕಾಗಿದೆ. ಅದರಲ್ಲೂ ಧರ್ಮ, ಸಾಮಾಜಿಕ ರಚನೆ, ಸುಧಾರಣೆ ಮತ್ತು ಸಂಸ್ಕೃತಿಯ ಬಗೆಗೆ ನಾನು ತುಂಬ ರೋಸಿ ಹೋಗಿದ್ದೇನೆ. ಜಿ ಞ ಡಿಚ್ಟ ಡಿಜಿಠಿ ್ಚಜಿಜ್ಝಿಜ್ಢಿಠಿಜಿಟ್ಞನಲ್ಲಿಯ ಕೋಟ್ಯಧೀಶ ಮಾರವಾಡಿಯ ಮನೆಯಲ್ಲಿ ಕಾಣಿಸುವುದೇನು? ಅವನ ಮನೆಯಲ್ಲಿ ಮೂರ್ತಿ, ಫರ್ನಿಚರ್, ಪೇಂಟಿಂಗ್ ಮತ್ತು ಪುಸ್ತಕಗಳಲ್ಲಿ ಒಂದಾದರೂ ವಸ್ತುಕಾಣಲಾರದು. ಇದೇ ವಿಷಯ ಬ್ರಾಹ್ಮಣರದ್ದು. ಒಬ್ಬ ಬ್ರಾಹ್ಮಣನಿಗೆ ಸಂಬಳ ಸಿಕ್ಕಿದ್ದೇ ತಡ, ಅವನು ತನ್ನ ಹೆಂಡತಿಗೆ ಆಭರಣ ಮಾಡಿಕೊಡಲು ಪ್ರಯತ್ನಿಸುತ್ತಾನೆ.

ಏಕೆಂದರೆ ಚಿನ್ನ ಸಂಕಟದ ಕಾಲಕ್ಕೆ ಉಪಯೋಗವಾಗುತ್ತದಲ್ಲ! ಪ್ರಪಂಚದಲ್ಲಿ ಬದುಕುವುದೇ ಧ್ಯೇಯವಾಗಿದ್ದರೆ ಪಶು ಮತ್ತು ಮನುಷ್ಯನಲ್ಲಿ ವ್ಯತ್ಯಾಸವೇನು? ಮನುಷ್ಯನು ಸೌಂದರ್ಯವನ್ನು ಸಂಗ್ರಹಿಸಬಲ್ಲ. ಪಶು ಹಾಗೆ ಮಾಡಲಾರದು. ಕೇವಲ ಕಾಲರ್‌ಸೆಟಿಸಿ, ನೈಕ್‌ಟೈ ಕಟ್ಟುವುದರಿಂದ ಸೌಂದರ್ಯ ಬೆಳೆಯುವುದಿಲ್ಲ. ನಾನು ಈವರೆಗೆ 8-10 ಸಲವಾದರೂ ವಿದೇಶಕ್ಕೆ ಹೋಗಿ ಬಂದಿದ್ದೇನೆ. ನನ್ನ ಜೊತೆಗೆ ಹಲವು ಜನರೂ ಬಂದಿದ್ದರು. ಈಗ ನಾನವರನ್ನು ಕಾಣುವುದೇನು. ಅವರಿಗೆ ವರ್ಣಾಶ್ರಮ ಧರ್ಮ ಒಪ್ಪಿಗೆಯಿದೆ! ಅವರ ಮೇಲೆ ಯಾವ ಪರಿಣಾಮವೂ ಗೋಚರಿಸುವುದಿಲ್ಲ. ಅವರದ್ದು ಎಂಥ ಜನ್ಮ! ಹಿಂದೂಧರ್ಮದಲ್ಲಿಯ ಎಲ್ಲ ಹೊಲಸೂ ಅವರಿಗೆ ಒಪ್ಪಿಗೆ! ನೀವು ಕೊಳಚೆಯಲ್ಲಿ ಬಿದ್ದ ರತ್ನ! ಕೊಳಚೆ ನೀರಿನಲ್ಲಿ ಬಿದ್ದ ಅತ್ತರಿನ ಹನಿಯಂತೆ ನಿಮ್ಮ ಸ್ಥಿತಿಯಾಗಿದೆ. ನೂರಾರು ದಾರಿದ್ರ. ಹೀಗಾಗಿ ಈ ಕೊಳಚೆಯನ್ನು ಸ್ವಚ್ಛಗೊಳಿಸುವುದು ನಿಮ್ಮ ಕರ್ತವ್ಯ. ಉಪ್ಪಿಗೆ ರುಚಿಯಿಲ್ಲದಿದ್ದರೆ ಉಳಿದ ಪದಾರ್ಥಗಳ ರುಚಿಯ ಗತಿಯೇನು? ಎಂದು ಬೈಬಲ್‌ನಲ್ಲಿ ಹೇಳಲಾಗಿದೆ. ಯಾವುದೇ ಕಾರ್ಯ ಮಾಡಬೇಕಾಗಿದ್ದರೆ ನಮ್ಮ ಗುಣ ಸ್ಥಿರವಾಗಿರಬೇಕು. ಅದು ಸ್ಥಿರಗೊಳ್ಳಲು ಒಂದು ಪೀಳಿಗೆಯಾದರೂ ದಾಟಬೇಕಾಗುತ್ತದೆ. ಸ್ವತಃ ಸುಧಾರಿಸದ ಹೊರತು ಪರರನ್ನು ಹೇಗೆ ಸುಧಾರಿಸುತ್ತೀರಿ? ಸುಧಾರಣೆಯ ಮೂಲದಲ್ಲಿ ವಂಶಪರಂಪರೆ ಹುದುಗಿರಬೇಕು. ನಿಮ್ಮಲ್ಲೇ ಈ ಗುಣದ ಕೊರತೆ ಇದ್ದರೆ ಶತಪ್ರಯತ್ನ ಮಾಡಿಯಾದರೂ ಅದನ್ನು ಗಳಿಸಿ.

ನಿಮ್ಮಲ್ಲಿ ಹಲವರು ಅವಿವಾಹಿತರಾಗಿರಬೇಕು. ಮತ್ತೆ ಹಲವರು ಮದುವೆಯಾಗಿಯೂ ಇದ್ದಿರಬಹುದು. ಆದರೆ ಮದುವೆಯ ನಂತರ ನೀವೇನು ಮಾಡಲಿದ್ದೀರಿ? ಈ ವಿಷಯದಲ್ಲಿ ನಿಮ್ಮ ಮೇಲೆ ಗುರುತರವಾದ ಜವಾಬ್ದಾರಿ ಇದೆ. ನಾನು ನನ್ನ ತಂದೆಯದೇ ಉದಾಹರಣೆ ನೀಡುತ್ತೇನೆ ಅವರಿಗೆ ಒಟ್ಟು ಹದಿನಾಲ್ಕು ಮಕ್ಕಳು ಜನಿಸಿದವು. ಅವರಲ್ಲಿ ನಾನು ಹನ್ನೊಂದನೇ ರತ್ನ. ಆದರೆ ನಾನು ಎಲ್ಫಿನ್‌ಸ್ಟನ್ ಕಾಲೇಜಿಗೆ ಹೋದಾಗ ನನ್ನ ಸ್ಥಿತಿ ಹೇಗಿತ್ತು ಅಂತೀರಾ? ನನ್ನ ಕಾಲಲ್ಲಿ ಪಾದರಕ್ಷೆ ಇರಲಿಲ್ಲ. ನಾನು ಧರಿಸಿದ್ದು ಮಂಜರಪಾಟದಂಥ ತೆಳು ಶರ್ಟು ಮತ್ತು ಅಪ್ಪನ ಹರಕು ಕೋಟು!! ನೀವು ಎಲ್ಫಿನ್‌ಸ್ಟನ್‌ಕಾಲೇಜಿಗೆ ಹೋದಿರಿ ಎಂದರೆ ಅಲ್ಲಿ ನಿಮಗೆ ಮುಲ್ಲರ್ ಸಾಹೇಬರ ಚಿತ್ರ ಕಾಣಿಸುತ್ತದೆ. ಅವರು ನನಗೆ ಕೊನೆಯ ಎರಡು ವರ್ಷ ಶರ್ಟ್ ನೀಡಿದರು. ನಾನು ಯೋಚಿಸುತ್ತಿದ್ದೆ. ಅಪ್ಪನಿಗೆ ಹದಿನಾಲ್ಕರ ಬದಲು ನಾಲ್ಕು ಮಕ್ಕಳು ಹುಟ್ಟಿದ್ದರೆ ಎಂಥ ಸುಖ ಸಿಗುತ್ತಿತ್ತಲ್ಲ ಎಂದು. ನನ್ನ ಈ ದುಃಖಕ್ಕೆ ಅಪ್ಪನೇ ಕಾರಣನಾಗಿದ್ದ. ನಾನೊಮ್ಮೆ ಕಾಲೇಜಿಗೆ ಹೋಗುವಾಗ ರೈಲ್ವೆ ಪಾಸನ್ನು ಮನೆಯಲ್ಲೇ ಮರೆತೆ. ಅದೇ ದಿನ ಪಾಸಿನ ತಪಾಸಣೆ ನಡೆದಿತ್ತು. ಟಿಕೆಟ್ ಸ್ವೀಕರಿಸುವ ಮಾಸ್ತರ ನನ್ನನ್ನು ತಡೆದು ನಿಲ್ಲಿಸಿದ.

ನನ್ನ ಹತ್ತಿರವಂತೂ ದಮ್ಮಡಿ ಇಲ್ಲ. ನಾಲ್ಕು ಗಂಟೆಯವರೆಗೆ ಚರ್ಚ್‌ಗೇಟ್ ಸ್ಟೇಷನ್‌ನಲ್ಲಿ ಕೂತೇ ಇರಬೇಕಾಯಿತು. ಬಳಿಕ ಕೈಶಿಣಿ ಎಂಬ ಸಹಪಾಠಿ ಅಲ್ಲಿಗೆ ಬಂದ. ‘ಏನೋ ಇಲ್ಲೇಕೆ ಕುಳಿತಿರುವೆ’ ಎಂದು ಕೇಳಿದ. ನಾನು ಅವನಿಗೆ ಎಲ್ಲ ವಿಷಯ ಹೇಳಿದೆ. ಅವನು ನಾಲ್ಕಾಣೆ ತುಂಬಿ ನನ್ನ ಬಿಡುಗಡೆ ಮಾಡಿದ. ಬಳಿಕ ಟಿಕೆಟ್ ತೆಗೆಸಿ ಮರಳಿ ಕಳಿಸಿದ. ಈ ಕಾರಣಕ್ಕಾಗಿ ನಾನು ಅಪ್ಪನ ಮೇಲೆ ದೋಷ ಹೊರಿಸುತ್ತೇನೆ. ಏಕೆಂದರೆ ಅವರು ತಮ್ಮ ಜವಾಬ್ದಾರಿಯನ್ನು ಮರೆತರು. ಅಪ್ಪತಪ್ಪಿದಾಗ ಅವರಿಗೆ ಅದನ್ನು ಹೇಳುವುದು ತಪ್ಪೇನಲ್ಲ ಎಂದು ನನಗೆ ಅನಿಸುತ್ತದೆ. ಈಗ ನಮ್ಮ ಮೇಲೆ ಈ ಜವಾಬ್ದಾರಿ ಇದೆ. ಅದೇ ರೀತಿ ಮಹಿಳೆಯರ ಮೇಲೂ ಇದೆ. ನಾನು ಕೇವಲ ಪುರುಷರಿಗಾಗಿ ಮಾತ್ರ ಹೇಳುತ್ತಿಲ್ಲ. ಮಹಿಳೆಯರು ಸಹ ತಮ್ಮ ಜವಾಬ್ದಾರಿಯನ್ನು ಅರಿಯಬೇಕು, ಅದರ ಬಗ್ಗೆ ಯೋಚಿಸಬೇಕು. ನೀವು ನೌಕರರಿಗೆ ಹೋಗುತ್ತೀರಿ. ನನಗನಿಸಿದಂತೆ ಹಲವರು ಗುಮಾಸ್ತರು ಆಗುತ್ತೀರಿ. ಏನಿಲ್ಲವೆಂದರೂ 50-60 ರೂಪಾಯಿ ಸಿಗುತ್ತದೆ. ಅಂಥದ್ದರಲ್ಲಿ ನಿಮಗೂ ಹದಿನಾಲ್ಕು ಮಕ್ಕಳು ಜನಿಸಿದರೆ ಆ ಮಕ್ಕಳ ಗತಿ ಏನು? ಅವರ ಹೊಣೆಯನ್ನು ಸಮಾಜದ ಮೇಲೆ ಹಾಕುತ್ತೀರಾ? ಇದರ ಬಗ್ಗೆ ಸರಿಯಾಗಿ ಯೋಚಿಸಿ. ಆದ್ದರಿಂದ ಪಶುವಿನಂತೆ ಬದುಕುವುದು ಅಮಾನವೀಯ ಸಂಗತಿ ಎಂಬುದನ್ನು ಮರೆಯದೆ ನೀವು ಅದರ ಬಗೆಗೆ ಚೆನ್ನಾಗಿ ಯೋಚನೆ ಮಾಡಿ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top