ದಲಿತ ದನಿಗೆ ಪಂಪ ಪ್ರಶಸ್ತಿಯ ‘ಪೆಂಪು’ | Vartha Bharati- ವಾರ್ತಾ ಭಾರತಿ

--

ದಲಿತ ದನಿಗೆ ಪಂಪ ಪ್ರಶಸ್ತಿಯ ‘ಪೆಂಪು’

ಪ್ರತಿಭಟನಾತ್ಮಕವಾದ ದಲಿತ/ಬಂಡಾಯ ಕಾವ್ಯಕ್ಕೆ ನಾಂದಿ ಹಾಡಿದ ಪ್ರಮುಖ ಕವಿ ಡಾ.ಸಿದ್ಧಲಿಂಗಯ್ಯನವರು. ಕರ್ನಾಟಕ ಸರಕಾರ ಸಾಹಿತಿಗಳಿಗೆ ನೀಡುವ ಪರಮೋಚ್ಚ ಗೌರವದ ಪ್ರತೀಕವಾದ ಪಂಪ ಪ್ರಶಸ್ತಿಗೆ ಈಗಷ್ಟೆ ಭಾಜನರಾಗಿರುವ ಸಿದ್ಧಲಿಂಗಯ್ಯನವರದು ನೋವಿಗದ್ದಿದ ಲೇಖನಿ. ಈ ನೋವಿನ ಮೂಲವಾದ ಶೋಷಣೆ, ಅಸಹಾಯಕತೆ, ರೊಚ್ಚು, ಆಕ್ರೋಶ, ಪ್ರತಿಭಟನೆಗಳೆಲ್ಲವನ್ನೂ ತೀವ್ರ ಸಂವೇದನೆಯಿಂದ ತಮ್ಮ ಕಾವ್ಯ ಮತ್ತಿತರ ಕೃತಿಗಳಲ್ಲಿ ಅಭಿವ್ಯಕ್ತಗೊಳಿಸಿ ದಲಿತ/ಬಂಡಾಯ ಕಾವ್ಯದ ಮಾರ್ಗಪ್ರವರ್ತಕ ಕವಿ ಎನ್ನಿಸಿಕೊಂಡವರು ಡಾ.ಸಿದ್ಧಲಿಂಗಯ್ಯ. ಸಿದ್ಧಲಿಂಗಯ್ಯನವರ ಕಾವ್ಯ ದಲಿತ ಕಾವ್ಯವೂ ಹೌದು, ಬಂಡಾಯ ಕಾವ್ಯವೂ ಹೌದು.


ನವೋದಯ ಕಾವ್ಯದ ಸತ್ವ ಮುಗಿದು 1950ರ ಹೊತ್ತಿಗೆ ಅದು ನವ್ಯ ಕಾವ್ಯಕ್ಕೆ ದಾರಿಮಾಡಿಕೊಟ್ಟಿತು.1980ರ ಹೊತ್ತಿಗೆ ನವ್ಯವೂ ಇಳಿಮುಖವಾಗಿ ದಲಿತ-ಬಂಡಾಯ ಕಾವ್ಯ ಮಾರ್ಗ ತಲೆದೋರಿದ್ದು ಈಗ ಇತಿಹಾಸ. ವಸ್ತು, ಭಾಷೆ ಎರಡೂ ದೃಷ್ಟಿಯಿಂದಲೂ ನವೋದಯ, ನವ್ಯಗಳಿಗಿಂತ ತೀರಾ ಭಿನ್ನವಾದ ದಲಿತ/ಬಂಡಾಯ ಕಾವ್ಯದ ಮುಖ್ಯದನಿ ಪ್ರತಿಭಟನೆ. ಪ್ರತಿಭಟನಾತ್ಮಕವಾದ ದಲಿತ/ಬಂಡಾಯ ಕಾವ್ಯಕ್ಕೆ ನಾಂದಿ ಹಾಡಿದ ಪ್ರಮುಖ ಕವಿ ಡಾ.ಸಿದ್ಧಲಿಂಗಯ್ಯನವರು. ಕರ್ನಾಟಕ ಸರಕಾರ ಸಾಹಿತಿಗಳಿಗೆ ನೀಡುವ ಪರಮೋಚ್ಚ ಗೌರವದ ಪ್ರತೀಕವಾದ ಪಂಪ ಪ್ರಶಸ್ತಿಗೆ ಈಗಷ್ಟೆ ಭಾಜನರಾಗಿರುವ ಸಿದ್ಧಲಿಂಗಯ್ಯನವರದು ನೋವಿಗದ್ದಿದ ಲೇಖನಿ. ಈ ನೋವಿನ ಮೂಲವಾದ ಶೋಷಣೆ, ಅಸಹಾಯಕತೆ, ರೊಚ್ಚು, ಆಕ್ರೋಶ, ಪ್ರತಿಭಟನೆಗಳೆಲ್ಲವನ್ನೂ ತೀವ್ರ ಸಂವೇದನೆಯಿಂದ ತಮ್ಮ ಕಾವ್ಯ ಮತ್ತಿತರ ಕೃತಿಗಳಲ್ಲಿ ಅಭಿವ್ಯಕ್ತಗೊಳಿಸಿ ದಲಿತ/ಬಂಡಾಯ ಕಾವ್ಯದ ಮಾರ್ಗಪ್ರವರ್ತಕ ಕವಿ ಎನ್ನಿಸಿಕೊಂಡವರು ಡಾ.ಸಿದ್ಧಲಿಂಗಯ್ಯ. ಸಿದ್ಧಲಿಂಗಯ್ಯನವರ ಕಾವ್ಯ ದಲಿತ ಕಾವ್ಯವೂ ಹೌದು, ಬಂಡಾಯ ಕಾವ್ಯವೂ ಹೌದು. ಸಿದ್ಧಲಿಂಗಯ್ಯರವರೇ ಹೇಳುವಂತೆ, ‘‘ಬಂಡಾಯ ಸಾಹಿತ್ಯ ಮತ್ತು ದಲಿತ ಸಾಹಿತ್ಯಕ್ಕೆ ಇರುವ ವ್ಯತ್ಯಾಸಗಳು ತೀರಾ ಗೌಣವಾದವುಗಳು. ದಲಿತ ಸಾಹಿತ್ಯ ಕೆಳಸ್ತರದ ಸಾಹಿತಿಗಳ ಸೃಷ್ಟಿ. ಬಂಡಾಯ ಸಾಹಿತ್ಯ ಎಲ್ಲ ಜಾತಿ, ಜನವರ್ಗಗಳ ಶೋಷಿತರ ಪರವಾದ ಕ್ರಾಂತಿಕಾರಿ ಸಾಹಿತ್ಯ.’’ ಸಿದ್ಧಲಿಂಗಯ್ಯನವರ ಕಾವ್ಯದಲ್ಲಿ ದಲಿತರ ನೋವು, ಅವರ ಒಡಲಾಳದ ಅಸಹಾಯಕತೆ, ಸಿಟ್ಟು, ಆಕ್ರೋಶಗಳು ಪೂರ್ಣಾವತಾರದಲ್ಲಿ ಅನಾವರಣಗೊಂಡಿರುವುದು ಅವರ ಸಂವೇದನೆ ಮತ್ತು ಪ್ರತಿಭೆಯ ಸಹಜ ಸೃಷ್ಟಿಯೇ ಆಗಿದೆ.

ಸಿದ್ಧಲಿಂಗಯ್ಯನವರ ಜನನವಾದದ್ದು ಚಾತುರ್ವರ್ಣ ಸಮಾಜ ಹೇರಿದ ಎಲ್ಲ ಬಗೆಯ ಅಸಮಾನತೆ, ಕ್ರೌರ್ಯಗಳಿಗೆ ಈಡಾಗಿದ್ದ ಶೋಷಿತ ಕುಟುಂಬವೊಂದರಲ್ಲಿ. ಈಗಿನ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬೆಲೆಯಲ್ಲಿ, 1954ರ ಫೆಬ್ರವರಿ 3ರಂದು. ತಂದೆ ದೇವಯ್ಯ, ತಾಯಿ ವೆಂಕಮ್ಮ. ಮಂಚನಬೆಲೆ, ಅಣೆಕೆಂಪಯ್ಯನ ದೊಡ್ಡಿ ಮೊದಲಾದ ಹಳ್ಳಿಗಳ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಮುಗಿಸಿದ ಸಿದ್ಧಲಿಂಗಯ್ಯನವರು ನಂತರ ಬೆಂಗಳೂರಿಗೆ ಬಂದು ಶ್ರೀರಾಂಪುರದ ರಾತ್ರಿ ಶಾಲೆ ಸೇರಿದರು. ಗೋಪಾಲಸ್ವಾಮಿ ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯ. ಮಲ್ಲೇಶ್ವರದ ಸರಕಾರಿ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿ ಉನ್ನತ ಶಿಕ್ಷಣಕ್ಕೆ ಬೆಂಗಳೂರು ವಿಶ್ವ ವಿದ್ಯಾನಿಲಯ ಸೇರಿದರು. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂಎ ಮುಗಿಸಿದರು. ಡಿ.ಎಲ್.ನರಸಿಂಹಾಚಾರ್ ಚಿನ್ನದ ಪದಕದೊಂದಿಗೆ ಪ್ರಥಮ ಶ್ರೇಣಿಯಲ್ಲಿ ಎಂಎ ಪಾಸುಮಾಡಿದ ಸಿದ್ಧಲಿಂಗಯ್ಯನವರ ಜ್ಞಾನದಾಹ, ಪ್ರತಿಭೆಗಳನ್ನು ಗುರುತಿಸಿದ್ದ ಗುರುಗಳಾದ ಜಿ.ಎಸ್.ಶಿವರುದ್ರಪ್ಪನವರು ಸಂಶೋಧಕ ಸಹಾಯಕನನ್ನಾಗಿ ನೇಮಕಮಾಡಿಕೊಂಡು ‘‘ಕನ್ನಡ ಅಧ್ಯಯನ ಕೇಂದ್ರದಲ್ಲಿ ಒಂದು ಸ್ಥಳ ತೋರಿಸಿ ನನಗೆ ಕುರ್ಚಿ, ಮೇಜನ್ನು ದೊರಕಿಸಿಕೊಟ್ಟರು.’’ ಅಲ್ಲಿಂದ ಮುಂದಿನದು ಸಿದ್ಧಲಿಂಗಯ್ಯನವರ ಯಶೋಗಾಥವೇ.

ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾದರು, ಕನ್ನಡ ವಿಭಾಗದ ಮುಖ್ಯಸ್ಥರಾದರು, ಡಾ.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.ಏತನ್ಮಧ್ಯೆ ‘ಗ್ರಾಮ ದೇವತೆಗಳು-ಒಂದು ಜಾನಪದೀಯ ಅಧ್ಯಯನ’ ನಡೆಸಿ ಸಂಪ್ರಬಂಧ ರಚಿಸಿದರು. ಅದಕ್ಕೆ ಪಿಎಚ್.ಡಿ., ಪಡೆದು ಡಾ.ಸಿದ್ಧಲಿಂಗಯ್ಯನವರಾದರು. ವಿಶ್ವವಿದ್ಯಾನಿಲಯದ ಎಲ್ಲ ಹೊಣೆಗಾರಿಕೆಗಳ ನಡುವೆ ಸೃಜನಶೀಲ ಬರವಣಿಗೆಯಲ್ಲೂ ಪ್ರವೃತ್ತರಾದರು. ಕಾವ್ಯದೊಂದಿಗಿನ ಇವರ ಕರುಳಬಳ್ಳಿಯ ಸಂಬಂಧ ಸತತವಾಗಿ ಸಾಗಿಬಂದು ದಷ್ಟಪುಷ್ಟವಾದ ಕೃತಿಗಳ ಸೃಷ್ಟಿಯಾಯಿತು. ಇಲ್ಲಿಯವರೆಗಿನ ಸಿದ್ಧಲಿಂಗಯ್ಯನವರ ಸಾಹಿತ್ಯ ಸೃಷ್ಟಿ ಫಲಸಮೃದ್ಧಿಯಾದುದು. ‘ಹೊಲೆಮಾದಿಗರ ಹಾಡು’, ‘ಮೆರವಣಿಗೆ’, ‘ಸಾವಿರಾರು ನದಿಗಳು’, ‘ಕಪ್ಪುಕಾಡಿನ ಹಾಡು’, ‘ಅಲ್ಲೆ ಕುಂತವರೆ’, ‘ನನ್ನ ಜನಗಳು ಮತ್ತು ಇತರ ಕವಿತೆಗಳು, ‘ಆಯ್ದ ಕವಿತೆಗಳು’ ಸಿದ್ಧಲಿಂಗಯ್ಯನವರ ಕವನ ಸಂಕಲನಗಳಾದರೆ, ಏಕಲವ್ಯ’, ‘ನೆಲಸಮ’, ‘ಪಂಚಮ’ ನಾಟಕಗಳು. ‘ಹಕ್ಕಿ ನೋಟ’, ‘ರಸಗಳಿಗೆಗಳು’, ‘ಎಡಬಲ’, ‘ಉರಿಕಂಡಾಯ’-ವಿಮರ್ಶಾ ಕೃತಿಗಳು.ಮೂರು ಸಂಪುಟಗಳ ‘ಊರು ಕೇರಿ’ ಆತ್ಮ ಕಥೆ.

 ‘ಹೊಲೆ ಮಾದಿಗರ ಹಾಡು’(1985) ಸಿದ್ಧಲಿಂಗಯ್ಯನವರ ಮೊದಲ ಕವನ ಸಂಕಲನ. ‘ಸಾವಿರಾರು ನದಿಗಳು’(1990)ದ್ವಿತೀಯ. ಈ ಎರಡೂ ಸಂಕಲನಗಳಲ್ಲಿನ ಬಹುಮಟ್ಟಿನ ಕವಿತೆಗಳು ಶತಶತಮಾನಗಳಿಂದ ಎಲ್ಲ ಬಗೆಯ ಶೋಷಣೆ, ದಬ್ಬಾಳಿಕೆಗಳಿಗೆ ಒಳಗಾಗಿ ನರಳಿ-ನಲುಗಿ ಹೋದ ಜನಾಂಗದ ಪ್ರತಿಭಟನೆಯನ್ನೂ ಶೋಷಣೆ ವಿರುದ್ಧ ಅವರ ಬಂಡಾಯವನ್ನು ಜಗತ್ತಿಗೆ ಸಾರುತ್ತವೆ. ಈ ಎರಡು ಸಂಕಲನಗಳಿಗೆ ಐತಿಹಾಸಿಕ ಮಹತ್ವವಿದೆ. ದಲಿತ ಸಾಹಿತ್ಯದತ್ತ ಓದುಗರು ಮತ್ತು ವಿಮರ್ಶಕರ ವಿಶೇಷ ಗಮನವನ್ನು ಸೆಳೆದ ಯಶಸ್ಸು ಈ ಎರಡು ಸಂಕಲನಗಳದು. ಇದು ‘ಕಡೆಗಣಿಸಲ್ಪಟ್ಟ ಜಗತ್ತಿನ ಸಾಂಕೇತಿಕ ದನಿ’, ‘ಹೊಸಯುಗಧರ್ಮವೊಂದಕ್ಕೆ ಬಾಯಿಕೊಟ್ಟ ಮೊತ್ತಮೊದಲ ಕಾವ್ಯ’ ಎಂದು ವಿಮರ್ಶೆ ಸಿದ್ಧಲಿಂಗಯ್ಯನವರ ಕಾವ್ಯವನ್ನು ಸ್ವಾಗತಿಸಿತು. ವಿಶೇಷವಾಗಿ ‘ಒಂದು ಪದ’, ‘ನನ್ನ ಜನಗಳು’, ‘ಸಾವಿರಾರು ನದಿಗಳು’, ‘ದಲಿತರು ಬರುವರು ದಾರಿ ಬಿಡಿ’, ‘ಕೆಂಪು ಸೂರ್ಯ, ಚೋಮನ ಮಕ್ಕಳು’ ಕವಿತೆಗಳು ವಸ್ತು, ಭಾಷೆ ಮತ್ತು ಅಭಿವ್ಯಕ್ತಿ ಕ್ರಮದಿಂದಾಗಿ ಸಾಮಾನ್ಯ ಓದುಗರು ಮತ್ತು ವಿಮರ್ಶಕರಿಬ್ಬರ ಮನಸ್ಸುಗಳನ್ನು ಕದಡಿದವು. ‘ಒಂದು ಪದ’ ಈ ಸಾಲುಗಳನ್ನು ಗಮನಿಸಿ:

ಇಕ್ರಲಾ ವದೀರ್ಲಾ
ಈ ನನ್ನ ಮಕ್ಕಳ ಚರ್ಮ ಎಬ್ರಲಾ
ದೇವ್ರ ಒಬ್ರೇ ಅಂತಾರೆ
ಓಣಿಗೊಂದೊಂದು ತರಾ ಗುಡಿ ಕಟ್ಟವ್ರೆ
ಎಲ್ಲಾರು ದೇವ್ರ ಮಕ್ಳು ಅಂತಾರೆ
ಹೊಲೇರ್ನ ಕಂಡ್ರೆ ಹಾವ್ ಕಂಡಂಗಾಡ್ತಾರೆ

ನೇರವಾದ, ನಯನಾಜೂಕುಗಳಿಲ್ಲದ ರೋಷದ ಭಾಷೆಯಲ್ಲಿ ಹರಿಜನೋದ್ಧಾರದ ಮಾತುಗಳನ್ನು ತಿರಸ್ಕರಿಸುವ ಈ ಪರಿ ಓದುಗರನ್ನು ಒಮ್ಮೆಗೇ ಹಿಡಿದು ಅಲ್ಲಾಡಿಸುವ ರೀತಿಯದು. ಶೋಷಿತರ ಬದುಕನ್ನು, ಅವರ ನೋವುಬೇಗುದಿಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸುವ ‘ನನ್ನ ಜನಗಳ’ನ್ನು ಕವಿ ಹೀಗೆ ಗುರುತಿಸುತ್ತಾರೆ:
ಹಸಿವಿನಿಂದ ಸತ್ತೋರು ಸೈಜುಗಲ್ಲು ಹೊತ್ತೋರು
ವದಿಸಿಕೊಂಡು ವರಗಿದೋರು ನನ್ನ ಜನಗಳು
ಕಾಲು ಕಯ್ಯಿ ಹಿಡಿಯೋರು ಕೈ ಮಡಗಿಸಿಕೊಳ್ಳೋರು
ಭಕ್ತರಪ್ಪಭಕ್ತರೋ ನನ್ನ ಜನಗಳು
ಇಂತಹ ಶೋಷಣೆ ಬಹಳ ದಿನಗಳು ನಡೆಯದು ಎನ್ನುವ ಕವಿ, ಶೋಷಿತರಲ್ಲಿ ಜಾಗೃತಿಯುಂಟಾಗುತ್ತಿರುವುದನ್ನು ಗಮನಿಸದೇ ಇಲ್ಲ:
ನೆನ್ನೆ ದಿನ
ನನ್ನ ಜನ
ಬೆಟ್ಟದಂತೆ ಬಂದರು

ಕಪ್ಪುಮುಖ ಬೆಳ್ಳಿ ಗಡ್ಡ ಉರಿಯುತ್ತಿರುವ ಕಣ್ಣುಗಳು
ಹಗಲು ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು
ಕಂಬಳಿಗಳು ಕೊರಗಿದವು ಎದ್ದೇಳುವ ರೊಚ್ಚಿಗೆ
ಭೂಕಂಪನವಾಯಿತು ಅವರು ಕುಣಿದ ಹುಚ್ಚಿಗೆ.

-ಹೀಗೆ ಕೆಳಸ್ತರದ ಶೋಷಿತ ಜನರ ಬದುಕು ಸಿದ್ಧಲಿಂಗಯ್ಯನವರ ಕಾವ್ಯದ ಆತ್ಮವಾಗಿದ್ದರೆ, ಚಿತ್ರವತ್ತಾದ ಶಕ್ತಿಯುತ ಭಾಷೆ ಅದರ ಸಾಧನಸಂಪತ್ತಾಗಿದೆ. ವಿಮರ್ಶಕರು ಅಭಿಪ್ರಾಯಪಟ್ಟಿರುವಂತೆ ಅವರ ಕವನಗಳಲ್ಲಿ ಒಂದು ಇಡೀ ಸಮುದಾಯವೇ ಮಾತನಾಡುತ್ತದೆ, ತನ್ನ ಮತ್ತು ಸಮಾಜದ ನಡುವಣ ಸಂಬಂಧವನ್ನು ವಿಶ್ಲೇಷಿಸುತ್ತದೆ ಹಾಗೂ ಅಲ್ಲಿನ ಅಸಮಾನತೆ, ಶೋಷಣೆಗಳ ವಿರುದ್ಧ ಪ್ರತಿಭಟಿಸುತ್ತದೆ. ಸಿದ್ಧಲಿಂಗಯ್ಯನವರ ಕಾವ್ಯದ ಭಾಷೆ ಭಾಷಣದ ಭಾಷೆ, ಉತ್ಪ್ರೇಕ್ಷಿಸುವ, ಕೆರಳಿಸುವ ಭಾಷೆ ಎನ್ನುವ ಅಭಿಪ್ರಾಯವೂ ವಿಮರ್ಶಕ ವಲಯದಲ್ಲಿ ಕೇಳಿ ಬಂದದ್ದುಂಟು. ಇದನ್ನು ಅಲ್ಲಗಳೆಯುವ ಮತ್ತೊಬ್ಬ ವಿಮರ್ಶಕ ಬಸವರಾಜ ಕಲ್ಗುಡಿಯವರು ಸಿದ್ಧಲಿಂಗಯ್ಯನವರ ಕಾವ್ಯಭಾಷೆಯ ಹೀಗೆ ವ್ಯಾಖ್ಯೆ ಮಾಡಿದ್ದಾರೆ:

‘‘ಸಿದ್ಧಲಿಂಗಯ್ಯನವರ ಕಾವ್ಯದಲ್ಲಿ ಕಾಣುವ ರೋಷ, ಆಕ್ರೋಶ ಮತ್ತು ನೋವಿನ ಭಾಷೆಯನ್ನು ‘ಸಾರ್ವಜನಿಕ ಕಾವ್ಯದ ಭಾಷೆ’ ಎಂದು ಕರೆಯಬಹುದೆ? ಕೊಂಚ ಯೋಚನೆ ಮಾಡಿ ನೋಡಿದರೆ ಇದು ಸರಳೀಕರಣಗೊಂಡ ವ್ಯಾಖ್ಯಾನವೆನಿಸುತ್ತದೆ. ದಲಿತ ಚಳುವಳಿಯ ಪ್ರಧಾನ ಹಾಡುಗಳಾಗಿ ಇವುಗಳು ತಮ್ಮ ಸಾಮುದಾಯಿಕ ನೆಲೆಯ ಗುಣವನ್ನು ಹೊಂದಿದವು ಎನ್ನುವುದು ನಿಜ. ಆದರೆ ದಲಿತ ಸಮುದಾಯದ ಭಾಗವಾದ ಈ ಕಾವ್ಯ ಚರಿತ್ರೆಯ ಅಮಾನವೀಯತೆಯನ್ನು ಹಿಡಿಯುವ ಒಂದು ಶೈಲಿಯೂ ಆಗಿದೆ. ಅವುಗಳಿಗೆ ಭಾವನೆಯ ಸ್ಪರ್ಶವಿರದಿದ್ದರೆ ಜೀವವೇ ಇರುವುದಿಲ್ಲ. ಈ ಕಾವ್ಯದಲ್ಲಿ ರೋಷವಾಗಲೀ, ನೋವಾಗಲೀ ವೈಯಕ್ತಿಕವಲ್ಲವೆಂದು ಕಾವ್ಯದ ಭಾಷೆಯೇ ಸ್ಪಷ್ಟಪಡಿಸುತ್ತದೆ. ಇಲ್ಲಿ ನೋವಿನ ಭಾಷೆಗೆ ಚರಿತ್ರೆಯ ನೆನಪಿರುವಂತೆ, ಆಕ್ರೋಷದ ಭಾಷೆಗೆ ಸಮುದಾಯದಲ್ಲಿ ಮೂಡುತ್ತಿರುವ ಹೊಸ ದೃಢವಾದ ಆತ್ಮಪ್ರತ್ಯಯವನ್ನು ಸೂಚಿಸುವ ಶಕ್ತಿಯೂ ರೂಪುಗೊಂಡಿರುವುದನ್ನು ಗುರುತಿಸಬಹುದು.’’
(ಮೈಯೇ ಸೂರು ಮನವೇ ಮಾತು ಪು:117)

ಬಸವರಾಜ ಕಲ್ಗುಡಿಯವರ ಈ ಮಾತುಗಳು ಸಿದ್ಧಲಿಂಗಯ್ಯನವರ ಭಾಷೆಯ ಶಕ್ತಿಯನ್ನು ಚಾರಿತ್ರಿಕ ಅನಿವಾರ್ಯವಾಗಿ ಗುರುತಿಸಿರುವುದರ ಜೊತೆ ಈ ಕವನಗಳನ್ನು ನೋಡಬೇಕಾದ ರೀತಿಯನ್ನೂ ಸೂಚಿಸುತ್ತದೆ. ಹೀಗೆ ಸಿದ್ಧಲಿಂಗಯ್ಯನವರು ದಲಿತರ ರೊಚ್ಚನ್ನು ಕಾವ್ಯವನ್ನಾಗಿಸಿದರು. ಶತಶತಮಾನಗಳ ಅನ್ಯಾಯ, ಅನಾದರಗಳನ್ನು ಕಣ್ಣಮುಂದೆ ನಿಲ್ಲಿಸುವಂತೆ ಸಮರ್ಥವಾಗಿ ನಿರೂಪಿಸಿದರು. ಅವರ ಕಾವ್ಯದಲ್ಲಿ ಜನರ ಕಣ್ತೆರೆಸುವ ಚಿಕಿತ್ಸಕ ಗುಣವೂ ಇದೆ. ದಲಿತರಲ್ಲಿ ಆತ್ಮವಿಶ್ವಾಸ ತುಂಬುವ ಚೈತನ್ಯವಿದೆ. ಸಿದ್ಧಲಿಂಗಯ್ಯನವರ ಗದ್ಯಬರಹಗಳಲ್ಲೂ ದಲಿತ ಸಂವೇದನೆಯ ತೀವ್ರತೆ ಇದ್ದರೂ ಅದು ತಣ್ಣಗಿನ ಕ್ರೌರ್ಯವನ್ನು ನಮ್ಮೆದೆಗಳಿಗೆ ತಾಕಿಸುವ ರೀತಿಯದು. ‘ಊರುಕೇರಿ’ ಆತ್ಮ ಕಥನ ಬಾಲ್ಯದ ಕೇರಿಯ ಅನುಭವಗಳೊಂದಿಗೆ ಪ್ರಾರಂಭವಾಗುತ್ತದೆ. ಪ್ರಾರಂಭದಲ್ಲೇ ಬಾಲಕನ ಕುತೂಹಲದ ಕಣ್ಣುಗಳು ಕಾಣುವ ‘‘ಐನೋರ ಹೊಲದಲ್ಲಿ ಇಬ್ಬರು ಮನುಷ್ಯರ ಹೆಗಲಮೇಲೆ ನೊಗ ಹೂಡಿ’’ ಉಳುವ ನೋಟ ದಲಿತರ ಶೋಷಣೆಯ ರೂಪಕವಾಗುವಂತೆಯೇ, ‘‘ಆ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬ ನನ್ನ ಅಪ್ಪ’’ಎನ್ನುವ ವಸ್ತುಸ್ಥಿತಿಯ ಹೇಳಿಕೆಯ ಮಾತುಗಳು ಸಿದ್ಧಲಿಂಗಯ್ಯನವರಿಗಾದಂತೆ ಓದುಗರಲ್ಲೂ ಸಂಕಟವನ್ನುಂಟು ಮಾಡುತ್ತದೆ. ಇಂತಹ ದಾರುಣ ಸಂದರ್ಭ-ಸನ್ನಿವೇಶಗಳನ್ನು ರೋಷಾವೇಶಗಳಿಲ್ಲದೆ ನಿರ್ಲಿಪ್ತವಾಗಿ ಕಟ್ಟಿಕೊಡುವ ಸಿದ್ಧಲಿಂಗಯ್ಯನವರ ಗದ್ಯದ ಇನ್ನೊಂದು ಗುಣವೆಂದರೆ ಅದರಲ್ಲಿನ ಹಾಸ್ಯದ ಹೊಳಪು.

ಹಾಸ್ಯಪ್ರಜ್ಞೆ ಸಿದ್ಧಲಿಂಗಯ್ಯನವರ ಗದ್ಯದಲ್ಲಿ ಸಾಮಾಜಿಕ ವಿಡಂಬನೆ, ವ್ಯಂಗ್ಯಗಳನ್ನು ನಗೆಯ ವೇಷದಲ್ಲೇ ಚಿಟುಕುಮುಳ್ಳಾಡಿಸುವ ಪರಿಯದು. ಜಾನಪದ ಸಿದ್ಧಲಿಂಗಯ್ಯನವರ ಗದ್ಯದ ಇನ್ನೊಂದು ಆಯಾಮ. ಜಾನಪದ ಆಚರಣೆಗಳನ್ನು ಬಾಲ್ಯದಿಂದಲೇ ಯಥೇಚ್ಛವಾಗಿ ಕಂಡು ಅನುಭವಿಸಿರುವ ಅವರು ತಮ್ಮ ಗದ್ಯ ಬರಹಗಳಲ್ಲಿ ಅದನ್ನು ಬಳಸುವ ರೀತಿಯೂ ಪ್ರಗತಿಪರವಾದುದು. ಸಿದ್ಧಲಿಂಗಯ್ಯನವರ ಗದ್ಯ ಕೃತಿಗಳಲ್ಲಿ ವಿಶೇಷವಾಗಿ ನಮ್ಮ ಗಮನ ಸೆಳೆಯುವುದು-‘ಜನಸಂಸ್ಕೃತಿ’. ಸಮಾಜ, ಸಂಸ್ಕೃತಿ ಮತ್ತು ಸಾಹಿತ್ಯ-ಮೂರು ನೆಲೆಗಳಲ್ಲಿ ಚಿಂತನಪರವಾದ ಅಧ್ಯಯನ ಲೇಖನಗಳಿರುವ ಒಂದು ವಿಶಿಷ್ಟ ಸಂಗ್ರಹವಿದು. ‘‘ವಚನ, ದಲಿತ, ಬಂಡಾಯ ಪರಿಕಲ್ಪನೆಗಳನ್ನು ವಿಶಾಲ ತಳಹದಿಯಲ್ಲಿ ಚರ್ಚಿಸುವ ಇಲ್ಲಿನ ಲೇಖನಗಳು ಪರಸ್ಪರ ಅಂತರ್‌ಸಂಬಂಧಿಯಾಗಿವೆ’’ ಎನ್ನುವ ಬಿ.ಎ.ವಿವೇಕ ರೈ ಅವರ ಮಾತು ಸತ್ಯ ಎಂಬುದು ಪುಸ್ತಕದ ಓದಿನಿಂದ ಸಿದ್ಧವಾಗುತ್ತದೆ.

ಈ ಅಂತರ್‌ಸಂಬಂಧ ಹೆಚ್ಚಿನ ಅಧ್ಯಯನಕ್ಕೆ ಪುಟಕೊಡುವ ರೀತಿಯದು. ಸಿದ್ಧಲಿಂಗಯ್ಯನವರು ಎರಡು ಅವಧಿಗೆ ಕರ್ನಾಟಕ ವಿಧಾನ ಪರಿಷತ್‌ನ ಸದಸ್ಯರಾಗಿದ್ದವರು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದವರು. ‘ಸದನದಲ್ಲಿ ಸಿದ್ಧಲಿಂಗಯ್ಯ’-ಅವರು ವಿಧಾನಪರಿಷತ್‌ನಲ್ಲಿ ಕನ್ನಡ ಭಾಷೆ ಹಾಗೂ ಶೋಷಿತರ ಬದುಕನ್ನು ಕುರಿತುಮಾಡಿದ ಭಾಷಣಗಳ ಸಂಗ್ರಹ. ಶ್ರವಣಬೆಳಗೊಳದಲ್ಲಿ ನಡೆದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಪುರಸ್ಕಾರಕ್ಕೆ ಪಾತ್ರರಾಗಿದ್ದ ಡಾ.ಸಿದ್ಧಲಿಂಗಯ್ಯನವರನ್ನು ಅರಸಿಬಂದಿರುವ ಪ್ರಶಸ್ತಿ ಪುರಸ್ಕಾರಗಳು ಹಲವಾರು. ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ, ಭಾರತೀಯ ದಲಿತ ಸಾಹಿತ್ಯ ಅಕಾಡಮಿಯ ಡಾ.ಅಂಬೇಡ್ಕರ್ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಇವುಗಳಲ್ಲಿ ಪ್ರಮುಖವಾದವು.ಈಗ ಇವೆಲ್ಲದರ ಶೃಂಗಪ್ರಾಯವಾಗಿ ಪಂಪ ಪ್ರಶಸ್ತಿಯ ಪೆಂಪು. ಡಾ.ಸಿದ್ಧಲಿಂಗಯ್ಯನವರಿಗೆ ನೇಸರಾಭಿನಂದನೆಗಳು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top