ಸ್ವಾರ್ಥ ದೃಷ್ಟಿಕೋನದಿಂದ ಇಡೀ ಸಮಾಜವೇ ಸರ್ವನಾಶ
-

ಅಕ್ಟೋಬರ್ 8, 1936 ಗುರುವಾರದಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೆಳಗಿನ ಜಾವ 6:30ರ ರೈಲಿನಲ್ಲಿ ಜಳಗಾಂವಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಅವರ ಸ್ವಾಗತಕ್ಕಾಗಿ ಹಲವು ಪ್ರಮುಖರು ಇದ್ದರು. ಸ್ವಾಗತದ ಸಮಯದಲ್ಲಿ ಮೇಜರ್ ಸೇನು ನಾರಾಯಣ ಮೇಢೆ, ಶಾಮರಾವ್ ಕಾಮಾಜಿ ಜಾಧವ, ರಾಯಲಾ ಝಗಾ ನಿಕಮ್, ಲಕ್ಷ್ಮಣ ಪಾಹುಣಾ ಮೇಢೆ, ಧನಾಜಿ ರಾಮಚಂದ್ರ ಬಿಹ್ರಾಡೆ, ಮೋತಿರಾಮ್ ರಾಮಜಿ ಬಿಹ್ರಾಡೆ, ದೇವಿದಾಸ ಸೋನಾವಣೆ, ನಾಮದೇವ ಸೋನಾವಣೆ, ಓಂಕಾರ ಸೋನಾವಣೆ, ದಿವಾನ್ ಸೀತಾರಾಮ್ ಚವ್ಹಾಣ, ಮಾಛಾಡೆ, ಶ್ರೀ ಪ್ರಧಾನ್ ವಕೀಲ, ವಾನಖೇಡೆ, ಬಾರಸೆ, ಬಹಿರೂಪೆ, ಕೆ. ಎಲ್.ತಾಯಡೆ, ಬಡಗೆ, ನಾಮದೇವ ಭಾಗಾಜಿ ಭಾಲೇರಾವ್, ಶಿವಾ ರಘುನಾಥ, ಭಾಸ್ಕರ್ ಗರಬಡ್, ವಾಘ ಸೇರಿದಂತೆ ಇತರರು ಇದ್ದರು. ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ರೈಲಿನಿಂದ ಕೆಳಗೆ ಇಳಿಯುತ್ತಿದ್ದಂತೆ ಮುಗಿಲು ಮುಟ್ಟುವಂತಹ ಜಯಕಾರ ಹಾಕಿ ಅವರನ್ನು ಸ್ವಾಗತಿಸಲಾಯಿತು. ಮೇಢೆ ಪುಷ್ಪಹಾರ ಹಾಕಿ ಸ್ವಾಗತಿಸಿದರು. ಆಗಮಿಸಿದ ಸದಸ್ಯರ ಕುಶಲೋಪರಿ ಬಳಿಕ ಕಲೆಕ್ಟರ್ ಅವರ ವಾಹನದಲ್ಲಿ ಡಾ. ಅಂಬೇಡ್ಕರ್ ಅವರನ್ನು ಪ್ರಧಾನ್ ವಕೀಲರ ಮನೆಗೆ ಕರೆತರಲಾಯಿತು. ಡಾ. ಅಂಬೇಡ್ಕರ್ ಅವರಿಗೆ ಕೋರ್ಟ್‌ನಲ್ಲಿ ಕೆಲಸವಿದ್ದ ಕಾರಣ 11 ಗಂಟೆಗೆ ನ್ಯಾಯಾಲಯಕ್ಕೆ ತೆರಳಿದರು.
ಡಾ.ಅಂಬೇಡ್ಕರ್ ಅವರು ಕೋರ್ಟ್‌ಗೆ ತಲುಪಿದರೋ ಇಲ್ಲವೋ ಗೊತ್ತಿಲ್ಲ. ಆದರೆ ಜನರು ಮಾತ್ರ ಹಿಂದೆಯೇ ಕೋರ್ಟ್‌ನತ್ತ ಧಾವಿಸಿದರು. 15-20 ನಿಮಿಷಗಳಲ್ಲಿ ಇಡೀ ಕೋರ್ಟ್ ಆವರಣ ಜನದಟ್ಟಣೆಯಿಂದ ತುಂಬಿದ್ದರಿಂದ ಆ ಜಾಗದಲ್ಲಿ ದೊಡ್ಡ ಜಾತ್ರೆ ನಡೆಯುತ್ತಿದೆಯೋ ಏನೋ ಎನ್ನುವಂತೆ ಭಾಸವಾಗುತ್ತಿತ್ತು. ಕೋರ್ಟ್ ಕಲಾಪಕ್ಕೆ ಸಾಕಷ್ಟು ತೊಂದರೆಯಾದ ಕಾರಣ ನ್ಯಾಯಾಧೀಶರು ಕೋರ್ಟ್‌ನ ಬಾಗಿಲು ಮುಚ್ಚಿಸಬೇಕಾಯಿತು. ಆದರೂ ಕೂಡ ಜನಸಮುದಾಯ ಕೋರ್ಟ್‌ನ ಅಂಗಳದಲ್ಲಿ ಕುಳಿತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಹೊರಗೆ ಬರುವುದನ್ನು ಕಾಯುತ್ತಿದ್ದರು. ಕೋರ್ಟ್‌ನ ಕೆಲಸ 5:20ಕ್ಕೆ ಮುಗಿಯುತ್ತಿದ್ದಂತೆ ಅವರು ಹೊರಬಂದರು. ಅಲ್ಪಕಾಲದಲ್ಲಿ ಡಾ.ಅಂಬೇಡ್ಕರ್ ಅವರ ವಾಹನ ಮುನ್ಸಿಪಲ್ ಟೌನ್ ಹಾಲ್‌ಗೆ ಆಗಮಿಸಿತು. ಈ ಸಂದರ್ಭದಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು. ಡಾ. ಅಂಬೇಡ್ಕರ್ ಅವರಿಗೆ ಜಯವಾಗಲಿ ಎಂಬ ರಣಗರ್ಜನೆಯ ಸ್ವಾಗತವನ್ನು ಅವರಿಗೆ ನೀಡಲಾಯಿತು ಮತ್ತು ಸಭೆಯ ಕಲಾಪ ಆರಂಭಗೊಂಡಿತು.
ಈ ಸಂದರ್ಭದಲ್ಲಿ ನಾಸಿಕ್‌ನ ಮುಖಂಡ ಭಾವುರಾವ್ ಗಾಯಕವಾಡ, ಅಹ್ಮದ್ ನಗರದ ಯುವ ನಾಯಕ ಪ್ರಭಾಕರ ಜನಾರ್ದನ್ ರೋಹಮ್, ಬಲರಾಮ್ ದಾದಾ ಟೇಲರ್ ಸೇರಿದಂತೆ ಇತರರು ಇದ್ದರು. ಮುಂಬರುವ ಅಸೆಂಬ್ಲಿ ಚುನಾವಣೆ ಕುರಿತು ಭಾವುರಾವ ಗಾಯಕವಾಡ ಅವರು ಮಾಡಿದ ಭಾಷಣ ಅತ್ಯಂತ ಪರಿಣಾಮಕಾರಿಯಾಗಿತ್ತು, ಅಲ್ಲದೆ ಕಳಕಳಿಯಿಂದ ಕೂಡಿದ್ದಾಗಿತ್ತು. ಡಾ. ಅಂಬೇಡ್ಕರ್ ಅವರು ಭಾಷಣ ಮಾಡುವುದಕ್ಕೆ ಎದ್ದು ನಿಲ್ಲುತ್ತಿದ್ದಂತೆಯೇ ಇಡೀ ಆವರಣ ಕರತಾಡನದ ಸದ್ದಿನಿಂದ ದುಮಿಗುಡಲಾರಂಭಿಸಿತು. ಎಲ್ಲರಿಗೂ ಶಾಂತವಾಗುವಂತೆ ಡಾ. ಅಂಬೇಡ್ಕರ್ ಸಂಜ್ಞೆ ಮಾಡುತ್ತಲೇ ಎಲ್ಲ ಸಭಿಕರು ಒಂದೇ ಕ್ಷಣದಲ್ಲಿ ಶಾಂತತೆಗೆ ಶರಣಾದರು. ಸಭೆ ಶಾಂತವಾಗುತ್ತಿದ್ದಂತೆ ಡಾ. ಅಂಬೇಡ್ಕರ್ ಅವರು ಭಾಷಣ ಆರಂಭಿಸಿದರು.
ಇಂದಿನ ಈ ಸಭೆಯನ್ನು ದೌಲತ್‌ರಾವ್ ಗುಲಾಜಿ ಜಾಧವ ಅವರಿಗೆ ಬೆಂಬಲ ನೀಡುವ ಉದ್ದೇಶದಿಂದ ಆಯೋಜಿಸಲಾಗಿದೆ. ಪೂರ್ವ ಖಾನ್ ದೇಶ ಜಿಲ್ಲೆಯ ವ್ಯಾಪ್ತಿಯ ಮೀಸಲು ಪೂರ್ವ ಭಾಗದ ಅಭ್ಯರ್ಥಿಯಾಗಿ ಅವರು ಕಣಕ್ಕೆ ಇಳಿದಿದ್ದಾರೆ. ಈ ಜಾಗದಿಂದ ಇನ್ನೂ ಕೆಲವು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ ಎಂದು ಕೇಳಿದ್ದೇನೆ. ಆ ಹೆಸರುಗಳ ಪೈಕಿ ಮೇಢೆ ಮತ್ತು ಬಿಹ್ರಾಡೆ ಅವರು ಹೆಸರು ಕೇಳಿದ್ದೇನೆ. ಅವರ ಬಗ್ಗೆ ನನಗೆ ಸಾಕಷು ಗೊತ್ತಿದೆ. ಅವರನ್ನು ನಾನು ಕಳೆದ 15-20 ವರ್ಷಗಳಿಂದ ಬಲ್ಲೆ. ಅದರಲ್ಲಿಯೂ ಮೇಢೆ ಅವರೊಂದಿಗೆ ನನ್ನ ಸಂಬಂಧ ಚೆನ್ನಾಗಿಯೇ ಇದೆ. ಮೇಢೆ ಅವರು ಒಂದಿಷ್ಟು ಕೆಲಸ ಮಾಡಿದ್ದಾರೆ ಎಂದು ಗೊತ್ತಿದ್ದರೂ ನಾನೇಕೆ ಜಾಧವ ಅವರನ್ನು ಕಣಕ್ಕೆ ಇಳಿಸಿದ್ದೇನೆ ಎಂದು ಸಾಕಷ್ಟು ಜನರ ಮನಸ್ಸಿನಲ್ಲಿ ಕೊರೆಯುತ್ತಿರಬಹುದು. ಅದಕ್ಕೆ ಇರುವ ಕಾರಣ ಇಷ್ಟೇ. ಅಸೆಂಬ್ಲಿಯಲ್ಲಿ ಚಾಣಾಕ್ಷ ಮತ್ತು ಸಮಾಜಮುಖಿ ಜನರ ಅಗತ್ಯವಿದ್ದು ನಮಗೆ ಅಂತಹ ಕೆಲಸ ಮಾಡುವ ವ್ಯಕ್ತಿ ಬೇಕಾಗಿದ್ದಾರೆ. ಆಯಾ ಕ್ಷೇತ್ರಗಳಿಗೆ ಆಯಾ ಕ್ಷೇತ್ರದ ವ್ಯಕ್ತಿಯಲ್ಲದವನನ್ನು ಆಯ್ಕೆ ಮಾಡಿದರೆ ಆತನಿಗೆ ಆ ಕೆಲಸ ಪೂರ್ಣಗೊಳಿಸಲು ಆಗುವುದಿಲ್ಲ ಮತ್ತು ಆತನಿಗೆ ಕೆಲಸ ಮಾಡಲಿಕ್ಕೆ ಬರುವುದೂ ಇಲ್ಲ. ಒಂದು ವೇಳೆ ನಿಮಗೆ ಮನೆ ಕಟ್ಟಿಸುವುದಿದ್ದರೆ ಅದಕ್ಕೆ ಸೂಕ್ತ ವ್ಯಕ್ತಿಗೆ ಕೆಲಸ ಹೇಳುತ್ತೀರಿ.
ಕಮ್ಮಾರನಿಗೆ, ಬಡಿಗೆಯವನಿಗೆ ಕೆಲಸ ಹೇಳಿದರೆ ಅವರಿಗೆ ಆ ಕೆಲಸ ಮಾಡಲಿಕ್ಕಾಗುವುದಿಲ್ಲ. ನೀವು ಗೌಂಡಿಗೆ ಗೌಂಡಿ ಕೆಲಸ ಹೇಳಬೇಕಾಗುತ್ತದೆ. ಒಂದು ವೇಳೆ ನೀವು ಹಾಗೆ ಹೇಳದಿದ್ದಲ್ಲಿ ನಿಮಗೆ ಮನೆಯಂತಹ ಕಟ್ಟಡ ಮಾತ್ರ ಕಾಣಲು ಸಿಗುತ್ತದೆ. ಸರಿಯಾದ ವ್ಯಕ್ತಿಗೆ ಸರಿಯಾದ ಕೆಲಸ ವಹಿಸಿಕೊಟ್ಟರೆ ಕಣ್ಣಿಗೆ ಕಟ್ಟುವಂತಹ ಕಟ್ಟಡ ನಿಮ್ಮ ಕಣ್ಣೆದುರು ಎದ್ದು ನಿಲ್ಲುತ್ತದೆ. ಇದೇ ವಿಚಾರ ನಿತ್ಯದ ವ್ಯವಹಾರಕ್ಕೂ ಅನ್ವಯಿಸುತ್ತದೆ. ಈ ಬಗ್ಗೆ ನೀವು ಪ್ರತಿಯೊಬ್ಬರು ವಿಚಾರ ಮಾಡಿದರೆ ಇದು ಅರಿವಿಗೆ ಬರಬಹುದು. ಮೇಜರ್ ಮೇಢೆ ಮತ್ತು ಬಿಹ್ರಾಡೆ ಅವರಂತಹವರು ಲೋಕಲ್ ಬೋರ್ಡ್, ನಗರ ಪಾಲಿಕೆ ಇಲ್ಲವೇ ಸ್ಕೂಲ್ ಬೋರ್ಡ್‌ಗಳಲ್ಲಿ ಕೆಲಸ ಮಾಡುವುದಕ್ಕೆ ಅರ್ಹರು. ನಮ್ಮಿಂದ ಯಾವ ಹೊಣೆಗಾರಿಕೆ ನಿರ್ವಹಿಸುವುದಕ್ಕೆ ಸಾಧ್ಯವಾಗುದಿವುಲ್ಲವೋ ಅಂತಹ ಹೊಣೆಗಾರಿಕೆ ಅಪೇಕ್ಷಿಸಬಾರದು. ಒಂದು ವೇಳೆ ಅವರಿಗೆ ನಿಜವಾಗಿಯೂ ಸಮಾಜದ ಹಿತದ ಬಗ್ಗೆ ಕಳಕಳಿ ಇದ್ದಲ್ಲಿ ಅವರು ಒಂದಷ್ಟು ಹೊತ್ತು ಆತ್ಮಸಾಕ್ಷಿಯಿಂದ ಆ ಕೆಲಸಕ್ಕೆ ಯಾರು ಅರ್ಹರು ಎಂದು ವಿಚಾರ ಮಾಡಿದರೆ ಅದಕ್ಕೆ ಅವರ ಮನಸ್ಸೇ ಉತ್ತರ ನೀಡುತ್ತದೆ. ಅಂತಹ ಕೆಲಸ ಅವರಿಂದ ಸಾಧ್ಯವಿಲ್ಲ ಆದರೆ ಅವರು ಅನರ್ಹರು ಎನ್ನುತ್ತಿಲ್ಲ. ಆದರೆ ಆ ಕೆಲಸಕ್ಕೆ ಯಾರಾದರೂ ಅರ್ಹ ವ್ಯಕ್ತಿಗಳಿದ್ದರೆ ಅವರ ಪೈಕಿ ಜಾಧವ ಅವರು ಹೆಚ್ಚು ಅರ್ಹರಾಗಿದ್ದಾರೆ.
ಕೌನ್ಸಿಲ್‌ನಲ್ಲಿ ಎಲ್ಲ ಕೆಲಸಗಳು ಇಂಗ್ಲಿಷ್‌ನಲ್ಲಿ ನಡೆಯುತ್ತವೆ. ಆದ್ದರಿಂದ ಅಭ್ಯರ್ಥಿಗೆ ಇಂಗ್ಲಿಷ್ ಜ್ಞಾನ ಅತ್ಯಗತ್ಯವಾಗಿದೆ. ತನಗೆ ಸರಿ ಎನಿಸಿದ ಪ್ರಶ್ನೆಗಳನ್ನು ಕೇಳುವ ಧೈರ್ಯ ಇರಬೇಕು. ಈ ಎಲ್ಲ ಸಂಗತಿಗಳನ್ನು ತಿಳಿದುಕೊಳ್ಳುವುದಕ್ಕೆ ಇಂಗ್ಲಿಷ್ ಜ್ಞಾನ ಅತ್ಯಗತ್ಯ ಮತ್ತು ಇಂಗ್ಲಿಷ್ ಜ್ಞಾನವಿಲ್ಲದವರು ನಿಷ್ಪ್ರಯೋಜಕ. ನಾವು ನಮ್ಮ ಪಾಲಿನ ಕುರ್ಚಿಗಳಲ್ಲಿ ಕೇವಲ ಶೋಭಿಸಲೆಂದು ಕುಳಿತುಕೊಳ್ಳುವ ಹಾಗಿಲ್ಲ. ಅಲ್ಲಿ ನಮಗೆ ಕೆಲಸ ಮಾಡಬೇಕಿದೆ. ಇಂದು ಜಾಧವರಷ್ಟು ಕಲಿತವರು ನಿಮ್ಮ ಜಿಲ್ಲೆಯಲ್ಲಿ ಬೇರೊಬ್ಬರು ಇಲ್ಲವೇ ಇಲ್ಲ. ಅವರದ್ದು ಬಿಎ ವರೆಗೆ ಶಿಕ್ಷಣ ಆಗಿದೆ ಮತ್ತು ಅವರೇನೂ ನನ್ನ ಸಂಬಂಧಿಕರೂ ಅಲ್ಲ ಅಥವಾ ತಮಗೆ ಬರುವ ಭತ್ತೆಯನ್ನು ನನಗೆ ನೀಡುವವರಲ್ಲ. ನಿಮ್ಮ ಲಾಭಕ್ಕಾಗಿಯೇ ನಾನು ಅವರನ್ನು ಆಯ್ಕೆ ಮಾಡಿದ್ದೇನೆ. ನಾನು ಯಾವುದೇ ಪಕ್ಷಪಾತ ಮಾಡಿಲ್ಲ. ಈ ಎಲ್ಲ ಸಂಗತಿಗಳ ಬಗ್ಗೆ ಸಮಗ್ರವಾಗಿ ವಿಚಾರ ಮಾಡಿ, ಪೂರ್ವ ಖಾನ್ ದೇಶದ ಜಿಲ್ಲೆಯ ನಕಾಶೆಯನ್ನು ನನ್ನ ಕಣ್ಣೆದುರು ಇಟ್ಟುಕೊಂಡು ಶ್ರೀ ಜಾಧವ ಅವರನ್ನು ಆಯ್ಕೆ ಮಾಡಿದ್ದೇನೆ. ‘‘ಅಶಿಕ್ಷಿತ ಮರಾಠರು ಮತ್ತು ಕುಣಬಿಗಳು ಕೂಡ ಕೌನ್ಸಿಲ್‌ಗೆ ಹೋಗುತ್ತಾರೆ. ಅವರಿಗೆ ಎಲ್ಲಿ ಇಂಗ್ಲಿಷ್ ಬರುತ್ತದೆ? ಅವರು ಹೋಗುತ್ತಾರೆಂದರೆ ನಮ್ಮ ವ್ಯಕ್ತಿ ಏಕೆ ಹೋಗಬಾರದು?’’ ಎಂದು ನೀವು ಕೇಳಬಹುದು. ಆದರೆ ನಿಮಗೆ ಒಂದು ಮಾತು ಹೇಳುತ್ತೇನೆ. ನಿಮ್ಮ ಮತ್ತು ಕುಣಬಿ, ಮರಾಠರ ಮಧ್ಯೆ ಭೂಮ್ಯಾಕಾಶದ ಅಂತರ ಇದೆ. ಅವರಿಗೆ ಉಳಿದ ಎಲ್ಲ ಸಂಗತಿಗಳು ಅನುಕೂಲಕರವಾಗಿ ಇವೆ. ಅವರಿಗೆ ಎಲ್ಲಿಯೂ ಕಷ್ಟವಿಲ್ಲ.
ಆದರೆ ನೀವು ಕಂಗಾಲಾಗಿದ್ದವರು. ನಿಮಗೆ ಪ್ರತಿಯೊಂದನ್ನೂ ಕಷ್ಟಪಟ್ಟು ಪಡೆದುಕೊಳ್ಳಬೇಕಾಗುತ್ತದೆ ಮತ್ತು ಅದನ್ನು ಸುಲಭವಾಗಿ ಪಡೆದುಕೊಳ್ಳಬೇಕಾಗಿದ್ದರೆ ಅದು ಕೇವಲ ಕಾಯ್ದೆ ಮುಖಾಂತರ ಸಾಧ್ಯ. ಇಷ್ಟೆಲ್ಲ ಸಂಗತಿಗಳಿಗಾಗಿ ನಿಮ್ಮ ಮೂರ್ಖ ಅಭ್ಯರ್ಥಿಗಳು ಅಲ್ಲಿ ನಡೆಯುವುದಿಲ್ಲ. ಬದಲಿಗೆ ತಜ್ಞರು ಬೇಕಾಗುತ್ತದೆ. ನಿಮ್ಮ ಗ್ರಹಗತಿ ಬದಲಿಸಬೇಕಿದೆ. ಹೀಗಾಗಿ ಜಾಧವ ಅವರಂತಹ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ. ಒಂದು ವೇಳೆ ನೀವು ಹಾಗೆ ಮಾಡದೆ ಇದ್ದರೆ ನಿಮ್ಮದೇ ಸರ್ವನಾಶವಾಗುವ ಅಪಾಯದ ಸೂಚನೆಯನ್ನು ನಾನು ಈಗ ನೀಡುತ್ತಿದ್ದೇನೆ. ಒಂದು ವೇಳೆ ಯಾರಾದರೂ ಇಂತಹ ಮೂರ್ಖತನದ ಕೆಲಸ ಮಾಡಿದರೂ ನೀವು ಮಾತ್ರ ಅಂತಹ ಕೆಲಸ ಮಾಡಬೇಡಿ. ಇಂದಿಗೆ ಎರಡು ಸಾವಿರ ವರ್ಷಗಳಿಂದ ನಿಮ್ಮ ಪೂರ್ವಿಕರು ಭಾರತದಲ್ಲಿದ್ದಾರೆ. ಆದರೆ ಯಾರಾದರೂ ಬ್ರಾಹ್ಮಣರ ಹತ್ತಿರ ಕುಳಿತುಕೊಂಡಿದ್ದ ಉದಾಹರಣೆ ಇದೆಯೇ? ಆದರೆ ಅಂತಹ ಭಾಗ್ಯೋದಯದ ಅವಕಾಶ ಈಗ ಬಂದಿದೆ. ಇಂತಹ ಸಂದರ್ಭದಲ್ಲಿ ಒಂದು ವೇಳೆ ನೀವು ಅಂಧ, ಸ್ವಾರ್ಥ ದೃಷ್ಟಿಕೋನ ಇರಿಸಿಕೊಂಡರೆ ಇಡೀ ಸಮಾಜವಷ್ಟೇ ಅಲ್ಲ. ನಿಮ್ಮ ಪತ್ನಿ-ಮಕ್ಕಳಿಗೂ ದ್ರೋಹ ಬಗೆದಂತಾಗುತ್ತದೆ. ಬಿಹ್ರಾಡೆ ಮತ್ತು ಮೇಢೆ ಅವರು ಸಮಾಜದ ಪ್ರಗತಿಗೆ ಅಡ್ಡ ಬಂದು ವಿನಾಕಾರಣ ಗೊಂದಲ ಸೃಷ್ಟಿಸಬೇಡಿ ಎಂದು ಎಲ್ಲ ಸದಸ್ಯರ ಪರವಾಗಿ ನಾನು ಅವರಿಗೆ ವಿನಂತಿಸಿಕೊಳ್ಳುತ್ತೇನೆ.
ಇಷ್ಟು ಹೇಳಿದರೂ ಅವರು ಕೇಳಲಿಲ್ಲ ಎಂದರೆ ನೀವು ಏನು ಮಾಡುತ್ತೀರಿ? (ಎಲ್ಲೆಡೆಯಿಂದ ಇಲ್ಲ. ಇಲ್ಲ..ಇಲ್ಲ- ಒಕ್ಕೊರಲಿನ ಕೂಗು) ಹಾಗಿದ್ದರೆ ಏನು ಮಾಡುತ್ತೀರಿ? ನಿಮ್ಮ ಭಾಗದಲ್ಲಿ 5,000 ಮತದಾರರು ಇದ್ದಾರೆ. ಪ್ರತಿಯೊಬ್ಬರು ಲಭಿಸಿರುವ ಮತದಾನದ ಹಕ್ಕನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕು. ಸಮಾಜದ ಕೆಲಸ ಉತ್ತಮವಾಗಿ ಆಗಬೇಕು ಎಂದು ನಿಮಗೆ ಅನ್ನಿಸಿದರೆ ನೀವು ನಿಮ್ಮ ಕರ್ತವ್ಯವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಿ. ಎಲ್ಲರೂ ಸೇರಿ ಜಾಧವ್ ಅವರನ್ನು ಆಯ್ಕೆ ಮಾಡಿ. ಮುರಿದ ನಾವೆ ಮತ್ತು ಕೆಲಸಕ್ಕೆ ಬಾರದ ನಾವಿಕರನ್ನು ಇಟ್ಟುಕೊಂಡು ನದಿಯ ಇನ್ನೊಂದು ತೀರಕ್ಕೆ ಹೋಗಿ ಎಂದು ಹೇಳಿದರೆ ನಾನು ಅಂತಹ ನಾವೆಯನ್ನು ಎಂದಿಗೂ ಇನ್ನೊಂದು ತೀರಕ್ಕೆ ತೆಗೆದುಕೊಂಡು ಹೋಗಲಿಕ್ಕಿಲ್ಲ. ಅಷ್ಟೇ ಅಲ್ಲ, ಆ ನಾವೆಯಲ್ಲಿ ನಾನು ಕಾಲು ಕೂಡ ಇಡಲಿಕ್ಕಿಲ್ಲ. ನಾನು ಹೇಳಿದ ನಾವಿಕನನ್ನೇ ನೀವು ನನಗೆ ನೀಡಬೇಕು ಅಂದರೆ ಮಾತ್ರ ನಾನು ನಾವೆಯನ್ನು ಸಹಜವಾಗಿ ತೆಗೆದುಕೊಂಡು ಹೋಗಬಹುದು. ಅಂತಿಮವಾಗಿ ಜಾಧವ್ ಅವರನ್ನು ಆಯ್ಕೆ ಮಾಡಬೇಕು ಎಂದು ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಬಳಿಕ ವಾರಭುವನ್ ಅವರು, ಡಾ. ಅಂಬೆೇಡ್ಕರ್ ಅವರು ಹೇಳಿದ ವಿಚಾರಗಳನ್ನು ಎಲ್ಲರೂ ಗಮನದಲ್ಲಿ ಇರಿಸಿಕೊಂಡು ಜಾಧವ್ ಅವರನ್ನು ಆಯ್ಕೆ ಮಾಡಿ ತರುವುದಕ್ಕೆ ವಿವಿಧ ಹಳ್ಳಿಗಳಲ್ಲಿ ಪ್ರಚಾರ ಮೆರವಣಿಗೆಗಳನ್ನು ಆಯೋಜಿಸುವುದಾಗಿ ಹೇಳಿದರು.
(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.