-

ಹಾವು-ಮುಂಗುಸಿ ಮೈತ್ರಿ ಎಂದಾದರೂ ಆದೀತೇ?

-

1938ರ ಜನವರಿ 10 ಸೋಮವಾರದಂದು ಮುಂಬೈ ಪ್ರಾಂತಿಕ ಅಸೆಂಬ್ಲಿಯ ಸಭೆ ಮುಂಬೈ ಕೌನ್ಸಿಲ್ ಹಾಲ್‌ನಲ್ಲಿ ಆರಂಭವಾಯಿತು. ಈ ಸಭೆಯ ವೇಳೆ ರೈತಬಾಂಧವರು ತಮ್ಮ ಮೋರ್ಚಾ ಕೊಂಡೊಯ್ಯುವ ನಿರ್ಧಾರವನ್ನು ಮುಂಚೆಯೇ ಜಾಹೀರುಗೊಳಿಸಿದ್ದರು. ಕೊಂಕಣ, ಸತಾರ, ನಾಶಿಕ ಮುಂತಾದ ಜಿಲ್ಲೆಗಳ ರೈತಬಾಂಧವರು, ಅದರಂತೆ ರೈತರ ಈ ಮೋರ್ಚಾ ಸಂಘಟಿತವಾಗಿರಬೇಕು ಮತ್ತು ಯೋಗ್ಯ ರೀತಿಯಿಂದ ಯಶಸ್ವಿಗೊಳಿಸಬೇಕೆಂದು ಸ್ವತಂತ್ರ ಮಜೂರ ಪಕ್ಷ ಮತ್ತು ಇತರ ರೈತ ಸಂಘಟನೆಗಳು ಸಿದ್ಧತೆ ನಡೆಸಿ ಪರಸ್ಪರ ಸಹಕರಿಸಿ ‘ಮೋರ್ಚಾ ಕಮಿಟಿ’ ಒಂದನ್ನು ಕಟ್ಟಿದರು. ಇದರ ನೇತೃತ್ವದಲ್ಲಿ ರೈತರು ಈ ಅಪೂರ್ವ ಮೋರ್ಚಾವನ್ನು ಕೌನ್ಸಿಲ್‌ಗೆ ಕೊಂಡೊಯ್ಯುವುದನ್ನು ನಿರ್ಧರಿಸಿದರು. ಈ ನಿರ್ಧಾರದಂತೆ ದಿ: 10ರಂದು ಮೇಲೆ ಹೇಳಿದ ಸ್ಥಳದ ಎಲ್ಲ ರೈತರು ಮೆರವಣಿಗೆ ಮೂಲಕ ಮಧ್ಯಾಹ್ನ 1:20ಕ್ಕೆ ಮೈದಾನದಲ್ಲಿ ಸೇರಿದರು. ಕೊಂಕಣ ಭಾಗದಿಂದ ಬಂದ ರೈತ ಬಂಧುಗಳು ವಿಕ್ಟೋರಿಯಾ ಡಾಕ್‌ನಿಂದ ನೇರ ಬೋರಿಬಂದರ ಎದುರಿನ ಮೈದಾನಕ್ಕೆ ಆಗಮಿಸಿದರು. ಇತರ ರೈತರ ಗುಂಪು ಪರಳನ ಕಾಮಗಾರ ಮೈದಾನದಲ್ಲಿ ಜಮಾಯಿಸಿದರು. ನಂತರ ಅಲ್ಲಿಂದ ಬೃಹತ್ ಮೆರವಣಿಗೆ ಮೂಲಕ ಆಝಾದ್ ಮೈದಾನಕ್ಕೆ ಆಗಮಿಸಿದರು. ಈ ಮೆರವಣಿಗೆಯಲ್ಲಿ ‘ಗೌಡಕೀ ಪದ್ಧತಿ ನಷ್ಟಗೊಳಿಸಿ’, ‘ಸಾಹುಕಾರಶಾಹಿಗೆ ಹಿಡಿಮಣ್ಣು ಹಾಕಿರಿ’, ‘ರೈತರಿಗೆ ಜಯವಾಗಲಿ’ ಎಂಬ ಮುಂತಾದ ಆಶಯಗಳ ದೊಡ್ಡ ದೊಡ್ಡ ಬಾವುಟಗಳು ಹಾರಾಡುತ್ತಿದ್ದವು. ಡಾ. ಬಾಬಾಸಾಹೇಬ ಅಂಬೇಡ್ಕರರ ಜಯಕಾರಗಳೂ ಮೊಳಗುತ್ತಿದ್ದವು.

ಇಂತಹ ಅದ್ಭುತ ಮೆರವಣಿಗೆ ಕಾಳಬಾದೇವಿ ಮಾರ್ಗ ಮೂಲಕ ಬರುತ್ತಿದ್ದಾಗ ಅಲ್ಲಿಯ ವ್ಯಾಪಾರಿಗಳ ಜಂಘಾಬಲವೇ ಉಡುಗಿತು. ಕಾಂಗ್ರೆಸ್‌ನಂತಹ ಅಧಿಕಾರರೂಢ ಸತ್ತೆಯ ವಿರುದ್ಧ ರೈತರ ಈ ಸಂಘಟಿತ ಬಂಡಾಯ ಕಂಡು ಅವರಿಗೆಲ್ಲ ಭೀತಿ ಮತ್ತು ಅಚ್ಚರಿಯೆನಿಸಿದ್ದಲ್ಲಿ ವಿಶೇಷವೇನಿಲ್ಲ. ಈ ಮೆರವಣಿಗೆ ಆಝಾದ್ ಮೈದಾನಕ್ಕೆ ಬಂತು. ಅದೇ ಚೌಪಾಟಿ ಮಾರ್ಗದಿಂದ ಮುಂಬೈನ ‘ಬಾಲೂ’ ಜನರ ಮೂರನೇ ಮೆರವಣಿಗೆಯು ಈ ರೈತರ ಮೆರವಣಿಗೆಯಲ್ಲಿ ಸೇರಿತು. ಅದಲ್ಲದೆ ಠಾಣೆ-ಕಲ್ಯಾಣ ಮುಂತಾದ ಸ್ಥಳಗಳ ರೈತರ ವಿವಿಧ ದಾರಿಗಳ ಮೂಲಕ ಆಝಾದ್ ಮೈದಾನಕ್ಕೆ ಬಂದು ಕೂಡಿದರು. ಡಾ. ಭೊಯಿರ ಅವರ ನೇತೃತ್ವದಲ್ಲಿ ಠಾಣೆ ಜಿಲ್ಲೆಯೊಳಗಿನ ರೈತಬಾಂಧವರು ತೀರ ನಸುಕಿನಲ್ಲೇ ದಾದರ ಮೂಲಕ ಕಾಮಗಾರ ಮೈದಾನದಲ್ಲಿ ಹಾಜರಾಗಿದ್ದರು. ಇದೇ ಬಗೆಯಲ್ಲಿ ಈ ಸಮೂಹವು ವೃದ್ಧಿಗೊಳ್ಳುತ್ತ ಇಪ್ಪತ್ತು ಇಪ್ಪತ್ತೈದು ಸಾವಿರಸಂಖ್ಯೆ ತಲುಪಿತು. ಈ ರೈತ ಬಂಧುಗಳು ಆಝಾದ್ ಮೈದಾನದಲ್ಲಿ ಮೆರವಣಿಗೆಗೆ ಸಿದ್ಧರಾದರು. ಈ ಬೃಹತ್ ಮೆರವಣಿಗೆಯ ಶಿಸ್ತನ್ನು ಕಾಪಾಡಲು ಭಾಯಿ ಚಿತ್ರೆ, ಯಾಜ್ಞಿಕ, ಪರುಳೇಕರ, ಪೋತನೀಸ, ಪ್ರಧಾನ, ಮಿರಜಕರ, ಬಾಲಜಿ ಪೇಂಡಸೆ, ಸುರಬಾ ಟಿಪಣೀಸ, ಮಡಕೆಬುವಾ ಜಾಧವ, ರಾಜಾರಾಮ ಭೋಳೆ, ಡಾ. ಭೋಯಿರ ಮುಂತಾದವರು ಸಿದ್ಧರಾಗಿದ್ದರು.

ಅವರು ಸೇರಿದ ರೈತರಿಗೆ ಇಂದಿನ ಐತಿಹಾಸಿಕ ರೈತ ಮೋರ್ಚಾ ವಿಷಯ ಕುರಿತು ಸವಿವರ ಮಾಹಿತಿ ನೀಡಿದರು. ಅಷ್ಟರಲ್ಲಿ ಯಾವ ಮಾರ್ಗದಿಂದ ಈ ಮೆರವಣಿಗೆ ಸಾಗಬೇಕು ಎಂಬುದರ ಪೊಲೀಸ್ ಕಮಿಷನರ ಅವರ ಆದೇಶ ತೆಗೆದುಕೊಂಡು ಎ. ಡಿವಿಜನ್ ಪೊಲೀಸ್ ಇನ್‌ಸ್ಪೆಕ್ಟರ್ ಆಗಮಿಸಿದರು. ಪೊಲೀಸರು ಈ ಮೆರವಣಿಗೆಯು ಕೌನ್ಸಿಲ್‌ಹಾಲ್ ಮೂಲಕ ಹೋಗಬಹುದು, ಆದರೆ ಎಲ್ಲೂ ನಿಲ್ಲಕೂಡದೆಂದು ಮತ್ತು ನೇರ ಆಝಾದ್ ಮೈದಾನ ಸೇರಬೇಕೆಂದು ಕಾರ್ಯಕರ್ತರಿಗೆ ತಿಳಿಸಿದರು. ಈ ವಿಷಯವಾಗಿ ರೈತ ಮುಂದಾಳುಗಳ ಜೊತೆಗೆ ಸಾಕಷ್ಟು ಚರ್ಚೆಯಾಗಿ ಕೊನೆಗೆ ಪೊಲೀಸರ ಮಾತನ್ನೇ ಕೇಳಬೇಕಾಯಿತು. ಕೊನೆಪಕ್ಷ ಈ ಮೆರವಣಿಗೆ ಪೈಕಿ ಕನಿಷ್ಠ ಇಪ್ಪತ್ತು ಪ್ರತಿನಿಧಿಗಳು ಮಾನ್ಯ ಮುಖ್ಯಪ್ರಧಾನರನ್ನು ಭೇಟಿಯಾಗಿ ರೈತರ ಅನಿಸಿಕೆಗಳನ್ನು ತಿಳಿಸುವ ಪರವಾನಿಗೆ ಕೇಳಲಾಯಿತು. ಪರವಾನಿಗೆಯನ್ನು ಪೊಲೀಸ್ ಕಮಿಷನರ್ ತಕ್ಷಣ ನೀಡಿದರು. ಈ ಬಗೆಯಲ್ಲಿ ಮೆಯೊ ರಸ್ತೆಯ ಮೂಲಕ ಕುಪರೇಜ ಹತ್ತಿರವಾಗಿ ಕೌನ್ಸಿಲ್ ಹಾಲ್ ಸುತ್ತಿ ಮ್ಯೂಸಿಯಮ್ ಮಾರ್ಗವಾಗಿ 20-25 ಸಾವಿರ ಸಂಖ್ಯೆಯ ಬೃಹತ್ ರೈತರ ಮೆರವಣಿಗೆಯು ಗಗನಭೇದಿ ಜಯಘೋಷಗಳನ್ನು ಹೇಳುತ್ತ ಸಂಜೆ ಐದರ ಹೊತ್ತಿಗೆ ಆಝಾದ್ ಮೈದಾನಕ್ಕೆ ಬಂತು. ಈ ಮೆರವಣಿಗೆಯ ಶಿಸ್ತು ಮತ್ತು ಸಂಘಟನೆ ಕಂಡು ಯಾರಿಗಾದರೂ ಕುತೂಹಲ ಎನಿಸದೆ ಇರದು. ಕಾನೂನು ಮತ್ತು ಸುವ್ಯವಸ್ಥೆ ಖಾತೆಯ ಸರ್ವ ಅಧಿಕಾರಿಗಳು, ಮುಂಬೈನ ಎಲ್ಲ ಪೊಲೀಸರು ಮೆರವಣಿಗೆಯ ಸಂದರ್ಭದಲ್ಲಿ ಭದ್ರವಾದ ಬಂದೋಬಸ್ತ್ ಮಾಡಿದ್ದರು. ಕೊನೆಗೆ ಮೆರವಣಿಗೆ ಆಝಾದ್ ಮೈದಾನಕ್ಕೆ ಬಂದ ನಂತರ ಸ್ವತಂತ್ರ ಮಜೂರ ಪಕ್ಷದ ನೇತಾರ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಬಹಿರಂಗ ಸಭೆ ನಡೆಯಿತು. ಈ ಮೊದಲು ಖೇರ ಅವರು ರೈತರ ಇಪ್ಪತ್ತು ಪ್ರತಿನಿಧಿಗಳಿಗೆ ಸಂಜೆ 7 ಗಂಟೆಗೆ ಸಂದರ್ಶನ ನೀಡುವ ಭರವಸೆ ಕೊಟ್ಟಿದ್ದರು. ಆಝಾದ ಮೈದಾನದಲ್ಲಿ ರೈತರ ಸಭೆಯಲ್ಲಿ ಭಾಯಿಚಿತ್ರೆ ಅವರ ಭಾಷಣ ನಡೆಯಿತು. ಭಾಯಿ ಚಿತ್ರೆಯವರಂತೆ ಕಾ. ಯಾಜ್ಞಿಕ, ದ.ವಿ. ಪ್ರಧಾನ, ಲಾಲಜಿ, ಪೇಂಡಸೆ, ಮಿರಜಕರ, ಟಿಪಣೀಸ ಮುಂತಾದವರ ಜೋರಿನ ಭಾಷಣಗಳು ಆದವು. ಅವರ ಭಾಷಣಗಳ ಬಳಿಕ ಡಾ. ಬಾಬಾಸಾಹೇಬ ಅಂಬೇಡ್ಕರರು ಮಾತನಾಡಿದರು.

ಡಾ. ಬಾಬಾಸಾಹೇಬ ಅಂಬೇಡ್ಕರರು ಮಾತನಾಡಲು ಏಳುತ್ತಿದ್ದಂತೆಯೇ ಅಂಬೇಡ್ಕರ ಹೆಸರಿನ ಜಯಘೋಷಗಳು ಮೊಳಗಿದವು. ಸ್ಪಷ್ಟ ಮಾತುಗಳಲ್ಲಿ ಅವರು ಹೇಳಿದರು.
ಕಷ್ಟಾಳುಗಳ ಸಂಘಟನೆ ಮಾಡುವುದಾದರೆ ಅಲ್ಲಿ ಜಾತಿಭೇದ, ಧರ್ಮ ಭೇದಗಳು ಮೂಲತಃ ಬರಲೇಬಾರದು. ಈ ವರ್ಗವು ಮೊದಲೇ ಆರ್ಥಿಕ ಬಿಕ್ಕಟ್ಟಿನ ಒತ್ತಡದಲ್ಲಿ ನಲುಗಿ ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವ ಸಂಘಟನೆ ಘಟಿಸಿತೋ ಅದರಲ್ಲಿ ನಾನು ಹೇಳಿದ ವಿಷಮತೆ ಕೂಡದು ಮತ್ತು ನಾನು ಪ್ರತಿಪಾದಿಸುವಂತಹ ಈ ತರದ ಸರ್ವ ಜಾತಿಗಳ ಕಟ್ಟಾಳು ವರ್ಗದ ಸಂಘಟನೆ ಕಂಡು ನನಗೆ ಸಂತೋಷವಾಗುತ್ತಿದೆ. ಆದಕಾರಣ ಇಂದಿನ ದಿನವನ್ನು ದೊಡ್ಡ ಭಾಗ್ಯದ ದಿನವೆಂದು ಭಾವಿಸುತ್ತೇವೆ. ಯಾಕೆಂದರೆ ಇವತ್ತಿನ ಈ ಸಂಘಟನೆ ಸ್ವಾರ್ಥವನ್ನು ತ್ಯಜಿಸಿದ ಶಕ್ತಿಯ ಆಧಾರದಲ್ಲಿ ನಿಂತಿದೆ. ಅದಕ್ಕೆಂದೇ ಶ್ರಮಜೀವಿ ವರ್ಗವು ಶ್ರೀಮಂತ ವರ್ಗದ ಅಂದರೆ ಕಾಂಗ್ರೆಸ್‌ನಂತಹವರ ಮೇಲೆ ನಂಬಿಕೆಯಿಟ್ಟು ಪ್ರಯೋಜನವಿಲ್ಲ. ನಿಮಗೆ ಗೊತ್ತೆ ಇದೆ, ಈ ಜಗತ್ತಿನಲ್ಲಿ ಯಾರ ಮನೆ ಬೆಂಕಿಯಲ್ಲಿ ಧಗಧಗಿಸುತ್ತದೆ, ಯಾರ ಮನೆಗೆ ಬೆಂಕಿಯನ್ನಿಡಲಾಗುತ್ತದೆ ಮತ್ತು ಯಾರು ಬೆಂಕಿಯಿಡುತ್ತಾರೋ ಅವರ ಜೊತೆ ಪರಸ್ಪರ ಸಹಕಾರದಿಂದ ಇರಲು ಸಾಧ್ಯವೇ? ಸಾಮಾನ್ಯವಾಗಿ ಪ್ರಾಣಿಗಳತ್ತ ದೃಷ್ಟಿನೆಟ್ಟು ಗಮನಿಸಿ ಮುಂಗುಸಿ-ಹಾವು ಒಂದೆಡೆ ಬದುಕಲು ಸಾಧ್ಯವೇ? ಬೆಕ್ಕು-ಇಲಿ ಜೊತೆಗಿರುತ್ತವೆಯೇ? ಈ ರೀತಿ ನಿಸರ್ಗದ ವಿರುದ್ಧವಾಗಿ ಸೃಷ್ಟಿಸಲು ಹೊರಟವರನ್ನು ಎಂದಾದರೂ ನಂಬಲು ಬರುತ್ತದೆಯೇ? ನಾವು ಅದೇ ದೃಷ್ಟಿಕೋನದಿಂದ ಶ್ರೀಮಂತರನ್ನು ಬೆಂಬಲಿಸುವ ಕಾಂಗ್ರೆಸ್‌ನತ್ತ ಗಮನಕೊಡಬೇಕು.

ಮುಂಬೈ ಅಸೆಂಬ್ಲಿಯ ಕಾಂಗ್ರೆಸ್ ಸದಸ್ಯರನ್ನೇ ನೋಡಿರಿ. ಬಹುತೇಕ ಆಯ್ಕೆಗೊಂಡವರೆಲ್ಲರೂ ಸಾಹುಕಾರ, ಜಮೀನುದಾರ, ಪಾಟೀಲ ಮತ್ತು ಶ್ರೀಮಂತರೆ ಆಗಿದ್ದಾರೆ. ಅವರು ತಮ್ಮ ಹಿತಾಸಕ್ತಿ ವಿರುದ್ಧ ಕಾಂಗ್ರೆಸ್‌ಗೆ ಏನನ್ನೂ ಮಾಡಲು ಬಿಡರು. ಅವರಲ್ಲಿ ಅನೇಕರ ಸಾಹುಕಾರಿಕೆ 50 ಸಾವಿರ ಮೇಲ್ಪಟ್ಟಿದೆ. ಇಂತಹ ಬಡ್ಡಿವ್ಯವಹಾರಸ್ಥರು, ತಮ್ಮ ಧನ ವೃದ್ಧಿಸುವವರು ನಮ್ಮಂಥ ಶ್ರಮಜೀವಿ ವರ್ಗಗಳ ಕಲ್ಯಾಣವನ್ನು ಹೇಗೆ ಮಾಡಿಯಾರು? ಒಂದು ವಿಷಯ ನಿಮ್ಮ ಮನದಲ್ಲಿ ಪಕ್ಕಾ ಮಾಡಿಕೊಳ್ಳಿರಿ, ಈ ಅಸೆಂಬ್ಲಿಗೆ ಕಾಂಗ್ರೆಸ್‌ನ ಕೃಪೆಯಿಂದ ಆಯ್ಕೆಗೊಂಡ ಸದಸ್ಯರು ನಿಮ್ಮ ಹಿತಸಂಬಂಧದ ಯಾವ ಯೋಚನೆಯನ್ನೂ ಮಾಡಲಾರರು. ನಾವು 1937ನೇ ವರ್ಷದಲ್ಲಿ ಈ ಕಾಂಗ್ರೆಸ್‌ನ ಪ್ರತಿನಿಧಿಗಳನ್ನು ಆರಿಸಿ ತಂದಾಗ ಯಾವರೀತಿ ಕಾಲು ಹಿಡಿಯುವುದನ್ನು ಮಾಡುತ್ತಿದ್ದರು. ಇದನ್ನು ಲಕ್ಷದಲ್ಲಿಡಿರಿ. ‘‘ನಿಮ್ಮ ಹಿತವನ್ನು ಮೊದಲು ಕಾಪಾಡುತ್ತೇವೆ, ನಿಮ್ಮ ಸುಖಕ್ಕೆ ಕಾಂಗ್ರೆಸ್ ಫಕೀರತ್ವ ಪಡೆದರೂ ನಡೆದೀತು. ಇದನ್ನು ಗಮನದಲ್ಲಿಟ್ಟು ಕಾಂಗ್ರೆಸ್‌ಗೆ ಮತ ನೀಡಿರಿ.’’ ಹೀಗೆ ಹೇಳುವ ಮತ್ತು ಆಯ್ಕೆಗೊಂಡ ನಂತರ ಈ ಪ್ರತಿನಿಧಿಗಳು ನಿಮ್ಮತ್ತ ಇಣುಕಿಯೂ ನೋಡುವುದಿಲ್ಲ. ಅದಕ್ಕಾಗಿ ನಾನು ಹೇಳುವುದಿಷ್ಟೆ. ಇವರನ್ನು ಗಮನಕ್ಕೆ ತೆಗೆದುಕೊಳ್ಳಲೇಬಾರದು.

ನಮ್ಮ ನಿಜವಾದ ಹಿತ ಸಾಧಿಸುವವರು ಯಾರೆಂಬುದನ್ನು ಆಯ್ಕೆ ಮಾಡುವಾಗ ಎಚ್ಚರವಹಿಸಿರಿ. ನಿಮ್ಮಲ್ಲಿರುವ ಬುದ್ಧಿ ಬಳಸಿ ವಿವೇಕದಿಂದ ವರ್ತಿಸಿರಿ. ನಿಮ್ಮ ಖರೇ ಹಿತಚಿಂತಕರಾರು, ಯಾವ ಪಕ್ಷ ನಿಮಗಾಗಿ ಪ್ರಾಣದ ಹಂಗು ತೊರೆದು ಸಂಘರ್ಷಕ್ಕಿಳಿಯಲು ಸಮರ್ಥವಿದೆ, ಇದನ್ನು ನೀವೇ ಆಯ್ಕೆ ಮಾಡಿರಿ.
ನಿಜವಾಗಿ ಪ್ರಪಂಚದಲ್ಲಿ ಎರಡೇ ಜಾತಿಗಳಿವೆ. ಮೊದಲನೆಯದು ಸಿರಿವಂತರದ್ದು, ಎರಡನೆಯದ್ದು ಬಡವರದ್ದು. ಇದಲ್ಲದೆ ಮೂರನೆಯ ವರ್ಗ ಮಧ್ಯಮವರ್ಗ. ಜಗತ್ತಿನ ಯಾವುದೇ ಒಂದು ಉಜ್ವಲರೂಪದ ಚಳವಳಿಯ ನಾಶಕ್ಕೆ ಇದೇ ವರ್ಗ ಕಾರಣೀಭೂತವಾಗುತ್ತಿರುತ್ತದೆ. ಈ ದೇಶದಲ್ಲಿ ಕಷ್ಟಪಟ್ಟು ಹೊಟ್ಟೆ ತುಂಬಿಸಿಕೊಳ್ಳುವ ಬಂಧುಗಳು ಶೇ.80ರಷ್ಟಿದ್ದಾರೆ. ಈ ಸಂಖ್ಯೆ ಎದುರಿಟ್ಟು ನೋಡಿದಾಗ ಇತರ ವರ್ಗ ಅದೆಷ್ಟು ಅಲ್ಪಸಂಖ್ಯಾತರು ಎಂಬುದು ಗೋಚರವಾಗುತ್ತದೆ. ಆದರೆ ಕೇವಲ ಅಜ್ಞಾನದಿಂದ ಮತ್ತು ವರಿಷ್ಠರೆಂದು ಕರೆಯಿಸಿಕೊಳ್ಳುವವರ ಕೈಗೆ ಅಧಿಕಾರ ಇರುವುದರಿಂದ ನಮ್ಮಂತಹ ಬಹುಸಂಖ್ಯಾತ ಜನತೆಗೆ ಅಡ್ಡಿ ಆತಂಕಗಳನ್ನು ತರುತ್ತಾರೆ. ಆದರೆ ತಾವೆಲ್ಲ ಎಚ್ಚರಗೊಂಡಿದ್ದೀರಿ, ನಿಮ್ಮ ಹಿತ ಯಾವುದರಲ್ಲಿ ಅಡಗಿದೆಯೆಂಬುದನ್ನು ಸಂಘಟನೆಯ ಶಕ್ತಿಯಿಂದ ಮತ್ತು ಸ್ವಾವಲಂಬನೆ ಮೂಲಕ ಅರಿಯಲು ಯತ್ನಿಸುತ್ತಿದ್ದೀರಿ. ಹೀಗಾದಾಗ ಕ್ಷಣಾರ್ಧದಲ್ಲಿ ಅಧಿಕಾರವನ್ನು ಕೈಗೆತ್ತಿಕೊಳ್ಳಬಹುದಾದ ರಾಷ್ಟ್ರೀಯ ಕಾಂಗ್ರೆಸ್‌ನ ಹಿಂದಿನ ಕಾಯ್ದೆಭಂಗ ಚಳವಳಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಸ್ಪಷ್ಟವಾಗುವ ಸಂಗತಿಯೆಂದರೆ ಶ್ರಮಜೀವಿಗಳ ಸಹಾಯದಿಂದಲೇ ಕಾಂಗ್ರೆಸ್ ತನ್ನ ಹೋರಾಟವನ್ನು ಇಷ್ಟೊಂದು ಪ್ರಭಾವಪೂರ್ಣವಾಗಿ ನಡೆಸಿತ್ತು. ಈ ಶ್ರಮಜೀವಿಗಳಿಗೆ ಅಧಿಕಾರರೂಢ ಕಾಂಗ್ರೆಸಿಗರು ಆಗ ಸಾಕಷ್ಟು ಆಸೆಯ ಭರವಸೆಗಳನ್ನಿತ್ತಿದ್ದರು.

ಕಾಂಗ್ರೆಸ್ ಕೈಗೆ ಅಧಿಕಾರ ಬಂದಾಕ್ಷಣ ಮೊತ್ತಮೊದಲಿಗೆ ಬಡವ, ಶ್ರಮಜೀವಿ ವರ್ಗಗಳ ಹಿತ ರಕ್ಷಣೆಯ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ಹೇಳಿದ್ದರಂತೆ. ನಿಮಗದು ಎಲ್ಲಾದರೂ ಕಾಣುತ್ತಿದೆಯೇ? ಇವತ್ತು ಅವರ ಕೈಗೆ ಅಧಿಕಾರವಿದೆ. ಆದರೆ ಯಾವುದೇ ಬಗೆಯ ಕೆಲಸವನ್ನು ದೊಡ್ಡ ಆಸ್ಥೆಯಿಂದ ಅಥವಾ ತತ್‌ಕ್ಷಣ ಮಾಡಿಲ್ಲ. ಅವರ ಪ್ರತಿನಿಧಿಗಳು ಮುಂಬೈ ಅಸೆಂಬ್ಲಿಯಲ್ಲಿ ಬಹುಸಂಖ್ಯೆಯಲ್ಲಿದ್ದಾರೆ. ಬಹುಮತದಿಂದ ನಿಮ್ಮ ಹಿತದ ಸಂಬಂಧದಲ್ಲಿ ಬೇಕಾದಷ್ಟು ಕೆಲಸ ಕಾರ್ಯ, ಕಾನೂನು ಮಾಡಲು ಅವಶ್ಯವೇನಿಲ್ಲ. ನಮ್ಮ ಸ್ವತಂತ್ರ ಮಜೂರ ಪಕ್ಷದ ಕೇವಲ 14-15 ಸದಸ್ಯರಿದ್ದಾರೆ. ಇಷ್ಟು ಕಡಿಮೆ ಸಂಖ್ಯೆಯ ಸದಸ್ಯರ ಬಲದಿಂದ ನಿಮ್ಮ ಹಿತದ ಕಾನೂನು ಪಾಸುಮಾಡಿಕೊಳ್ಳುವುದು ಸಾಧ್ಯವಿಲ್ಲ. ಆದ್ದರಿಂದ ಲಕ್ಷದಲ್ಲಿಡಿರಿ, ಆ ಕಾಂಗ್ರೆಸ್‌ನ ಬಂಡವಾಳದಾರರಿಗೆ ತಮ್ಮ ಮತ ನೀಡಿ ಆರಿಸಿ ತರಬೇಡಿರಿ. ಇವತ್ತು ಹೇಗೆ ಸಂಘಟಿತರಾಗಿ ಇಲ್ಲಿ ಆಗಮಿಸಿದ್ದೀರೋ ಹಾಗೆಯೇ ಜಾತಿಭೇದ-ಧರ್ಮಭೇದ ಮರೆತು ಸಂಘಟನೆ ಬಲಗೊಳಿಸಿರಿ.

ಕೊಂಕಣ ಪ್ರಾಂತದ ಸ್ಥಿತಿ ಗಮನಿಸಿದರೆ, ಗೌಡ ಸಾಹುಕಾರ ಮುಂತಾದ ಜನರು ಕೇವಲ ಸಾವಿರ, ಎರಡು ಸಾವಿರ ಸಂಖ್ಯೆಯಲ್ಲಿದ್ದಾರೆ. ನಿಮ್ಮಂತಹ ಕಡುಕಷ್ಟ ಅನುಭವಿಸುವ ಜನರು 13 ಲಕ್ಷದಷ್ಟಿದ್ದಾರೆ. ಇಂದು ಸಾವಿರ, ಎರಡು ಸಾವಿರ ಸಂಖ್ಯೆಯ ಜನ ನಮ್ಮಂತಹ 13 ಲಕ್ಷ ಜನ ಸಮುದಾಯವನ್ನು ಆಳುತ್ತಿದ್ದಾರೆ. ಇದರ ಮೂಲ ಕಾರಣ ನಮ್ಮ ದಾರುಣ ಬಡತನವೇ ಸರಿ. ಮುಷ್ಟಿಯಷ್ಟು ಶ್ರೀಮಂತರು ನಿಮ್ಮನ್ನು ಹಿಂಡುತ್ತಿದ್ದಾರೆ. ನಮ್ಮಲ್ಲಿ ಈ ಶೋಷಣೆ ವಿರುದ್ಧ ಹೋರಾಟ ನಡೆಸುವ ಶಕ್ತಿ ಉಳಿದಿಲ್ಲ. ನಿಮ್ಮ ಈ ಅಸಹ್ಯ ಅವಸ್ಥೆಗೆ ಕಾರಣರಾದ ಇವರಿಗೆ ಇನ್ಮುಂದೆ ಯಾವುದೇ ಪ್ರಕಾರದ ಸಹಕಾರ ನೀಡಬೇಡಿರಿ ಮತ್ತು ಇದನ್ನು ಗಮನದಲ್ಲಿಡಿರಿ, ಕಾಂಗ್ರೆಸ್ ಈ ಸಿರಿವಂತರಿಗೆ ನೋವುಂಟು ಮಾಡಿ ನಿಮ್ಮ ಹಿತ ಕಾಪಾಡಲು ಸಾಧ್ಯವಿಲ್ಲ. ಅದರಂತೆ ಇಲ್ಲಿ ಸೇರಿದ ವಿವಿಧ ಜಾತಿಗಳ ನೀವು ತಮ್ಮದೇ ಜಾತಿಗಳ ಬಗೆಬಗೆಯ ಸಂಘಟನೆ ಕಟ್ಟಿಕೊಂಡಿದ್ದೀರಿ ಮತ್ತು ಕಾರ್ಯನಿರ್ವಹಿಸುತ್ತಿದ್ದೀರಿ. ಆ ಕಾರಣ ಶ್ರಮಜೀವಿ ಎಂದು ಪ್ರತ್ಯೇಕ ಒಂದು ವರ್ಗದ ಒಟ್ಟುಗೂಡಿದಂತಹ ಒಂದು ಸಂಘಟನೆಯಿರಲಿಲ್ಲ. ಆದರೆ ಆ ಭಾಗ್ಯ ಎದುರು ಕಾಣುತ್ತಿದೆ. ಇದು ಅತ್ಯಂತ ಆನಂದದ ಸಂಗತಿಯಾಗಿದೆ. ಶ್ರೀಮಂತರಿಗೆ ನೆರವು ನೀಡುವ ಕಾಂಗ್ರೆಸ್‌ಗೆ ಸಹಕಾರ ನೀಡಿದರೆ ನಮ್ಮ ಯಾವುದೇ ಹಿತವು ಸಾಧ್ಯವಿಲ್ಲ. ಇವತ್ತಿನ ಪರಿಸ್ಥಿತಿಯನ್ನೇ ತಮ್ಮೆದುರು ಇಡುತ್ತಿದ್ದೇನೆ.

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ನಾವು ಸ್ವತಂತ್ರ ಮಜೂರ ಪಕ್ಷದಪರ ಕಾಂಗ್ರೆಸ್ ಒಟ್ಟಿಗೆ ಸಂಘರ್ಷಕ್ಕಿಳಿದು ಚುನಾವಣೆ ಹೋರಾಟ ನಡೆಸಿದೆವು. ಕೊಂಚ ಯಶಸ್ಸೂ ದೊರೆಯಿತು. ಅದರಂತೆ ಕಮ್ಯುನಿಷ್ಟ್ ಮುಂತಾದ ಉದ್ದಾಮ ಪಕ್ಷಗಳ ಮುಂದಾಳುಗಳು ಯೋಚಿಸಿದ್ದರೆ ಅವರಿಗೂ ಹೆಚ್ಚು ಕಡಿಮೆ ಯಶಸ್ಸು ದೊರೆತು, ನಮಗೆ ಅಸೆಂಬ್ಲಿಯಲ್ಲಿ ನೆರವು ಸಿಗಬಹುದಿತ್ತು. ಆದರೆ ಇನ್ನು ಮುಂದಾದರೂ ಕರ್ತವ್ಯಗಳನ್ನು ಪೂರೈಸಿಕೊಳ್ಳಲು ನಿರ್ಲಕ್ಷ ಕೂಡದು. ಹಾಗೆಯೇ ನಮ್ಮ ಕಮ್ಯುನಿಷ್ಟ್ ಮಿತ್ರರಿಗೆ ಎರಡು ಮಾತು ಹೇಳುವುದು ಯೋಗ್ಯವೆಂದೇ ಭಾವಿಸಿದ್ದೇನೆ. ನಾನು ಈ ಕಮ್ಯುನಿಸ್ಟ್ ತತ್ವಜ್ಞಾನವುಳ್ಳ ಇಲ್ಲಿಯ ಎಲ್ಲ ಪುಢಾರಿಗಳಿಗಿಂತ ಹೆಚ್ಚಿನ ಪುಸ್ತಕಗಳನ್ನು ಅಧ್ಯಯನ ಪೂರ್ಣವಾಗಿ ಓದಿದ್ದೇನೆ ಎಂದು ಖಚಿತವಾಗಿ ಹೇಳಬಲ್ಲೆ.

ಈ ಕೃತಿಗಳಿಂದ ನನಗನಿಸುವುದೆಂದರೆ, ಕಮ್ಯುನಿಸ್ಟ್ ತತ್ವಜ್ಞಾನವು ಅದೆಷ್ಟೋ ಸುಂದರವಾಗಿದ್ದರೂ ಅದರ ಪ್ರಯೋಜನ ಎಷ್ಟರಮಟ್ಟಿಗೆ ಸಾಧ್ಯವಾದೀತು ಎಂಬುದನ್ನು ನೋಡಬೇಕು. ಆ ದೃಷ್ಟಿಯಿಂದ ಕಾರ್ಯ ನಿರ್ವಹಿಸಿದರೆ ರಶ್ಯನ್ನರಿಗೆ ದೊರಕಿದ ಯಶಸ್ಸಿಗೆ ಸಾಕಷ್ಟು ಶ್ರಮ ಮತ್ತು ಕಾಲಾವಧಿ ಬೇಕಾಯಿತಲ್ಲ ಅಷ್ಟು ಹಿಂದೂಸ್ಥಾನದೊಳಗಿನ ಪರಿಸ್ಥಿತಿಯಿಂದ ಬೇಕಾಗುವುದಿಲ್ಲ, ಹೀಗೆ ನನಗನಿಸುತ್ತದೆ. ಅದಕ್ಕೆ ನನಗೆ ಶ್ರಮಜೀವಿಗಳ ಚಳವಳಿಯ ಹೋರಾಟದ ಬಾಬತ್ತಿನಲ್ಲಿ ಕಮ್ಯುನಿಸ್ಟ್ ಸಿದ್ಧಾಂತ ಅಧಿಕ ಹತ್ತಿರದ್ದೆನಿಸುತ್ತದೆ. ನಮ್ಮ ಪರಿಸ್ಥಿತಿಯು ಹೇಗಿದೆಯೆಂದರೆ, ನಮ್ಮ ಬಳಿ ಹಣವಿಲ್ಲ. ನಮ್ಮ ಚಳವಳಿಯ ಪ್ರಚಾರವನ್ನು ಎಲ್ಲೆಡೆ ನಡೆಸಲು ಒಂದು ಪ್ರಭಾವ ಪೂರ್ಣ ದಿನ ಪತ್ರಿಕೆಯಿಲ್ಲ. ಸರಕಾರದ ಸಹಾಯ ಸಿಗುವ ಭರವಸೆಯಿಲ್ಲ. ಆದ್ದರಿಂದ ತಾವು ತಮ್ಮ ಸ್ವತಂತ್ರ ಹಾಗೂ ಸಂಘಟಿತರೂಪಿ ಸಂಘಟನೆ ಸಿದ್ಧಗೊಳಿಸಿರಿ. ನಿಮ್ಮ ಹೋರಾಟವು ಎಲ್ಲ ಭೇದಗಳ ಅಳಿಸಿಹಾಕಿ ಮುನ್ನಡೆಯಲಿ, ಅದಕ್ಕಾಗಿ ಸಿದ್ಧರಾಗಿರಿ, ಇಷ್ಟೇ ಕೋರಿಕೆ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top