ಒಂದು ಗಮನಾರ್ಹ ಕಾವ್ಯದನಿ | Vartha Bharati- ವಾರ್ತಾ ಭಾರತಿ

--

ಒಂದು ಗಮನಾರ್ಹ ಕಾವ್ಯದನಿ

ನಿವೃತ್ತಿಯ ನಂತರ ಮನೆಯೇ ಜೈಲಾಗಿ ಕಾಲ ಕಳೆಯುತ್ತ ಕೊಳೆಯುತ್ತಿರುವ ದಿನಗಳು. ಮನೆಬಿಟ್ಟು ಹೊರಬರಬೇಡಿ. ಲಕ್ಷ್ಮಣ ರೇಖೆ ಎಳೆದುಕೊಂಡು ಗೃಹಬಂದಿಯಾಗಿರಿ. ಜಾಗಟೆ ಬಾರಿಸಿ. ಲೈಟ್ ಆರಸಿ ಇತ್ಯಾದಿ ಫರ್ಮಾನ್‌ಗಳಿಂದಾಗಿ ಕೊರೋನದಿಂದ ಮೊದಲೇ ಮುದುಡಿದ್ದ ಮನಸ್ಸು ಮತ್ತಷ್ಟು ಮುದುಡಿ ಹೋಗಿ, ಹೆಳವನ ಹೆಗಲ ಮೇಲೆ ಕುರುಡ ಕುಳಿತ್ತಿದ್ದಾನೆ; ದಾರಿಸಾಗುವುದೆಂತೋ ನೋಡಬೇಕು ಎಂದು ಅಡಿಗರನ್ನು ಮೆಲುಕುಹಾಕುತ್ತಾ ಖಿನ್ನತೆಯಲ್ಲೇ ಮೇಜಿನ ಮೇಲಿದ್ದ ಇತ್ತೀಚೆಗೆ ಬಂದಿದ್ದ ಪುಸ್ತಕಗಳ ರಾಶಿಯಲ್ಲಿ ಕೈಯಾಡಿಸಿದಾಗ ಸಿಕ್ಕಿದ್ದು ಡಿ.ವಿ.ಪ್ರಹ್ಲಾದರ-
‘ದಯಾ...ನೀ
ಭವಾ...ನೀ’
 ಕವನ ಸಂಕಲನ. ಈ ಶೀರ್ಷಿಕೆ ವಿನೀತವೋ ವಿಡಂಬನೆಯೋ,ವಿಷಾದವೋ ಎಂದು ಮನಸ್ಸು ಮತ್ತಷ್ಟು ಕುಗ್ಗಿನಾಳಕ್ಕೆ ಉರುಳು,ಮೂರೇ ಉರುಳುಕುಸಿಯುವುದರಲ್ಲಿದ್ದಾಗ ಪ್ರಹ್ಲಾದರ ‘ಅಕ್ಷರ ದೋಣಿ’ ಕಾಣಿಸಿಕೊಂಡಿತು-
ಸುಮ್ಮನಿರುವುದು ಹೇಗೆ ಝಳಝಳಿಸುವ ನದಿಯ ಹಾಗೆ
ಕಣ್ಣತುಂಬುವ ಹಸಿರು
ಹೇಳುತ್ತಿದೆ ಹೆಸರು
-ಎನ್ನುತ್ತ ಕುಸಿಯುತ್ತಿದ್ದವನನ್ನು ತನ್ನೊಳಕ್ಕೆ ಸೆಳೆದುಕೊಂಡಿತು. ‘ದಯಾ...ನೀ
ಭವಾ... ನೀ ’
     
ಪ್ರಹ್ಲಾದರ ಮೂರನೆಯ ಕವನ ಸಂಕಲನ. ಕಳೆದ ಎರಡೂವರೆ ದಶಕಗಳಿಂದ ತಮ್ಮ ಕಾವ್ಯ ಹಾಗೂ ‘ಸಂಚಯ’ ಸಾಹಿತ್ಯ ನಿಯತಕಾಲಿಕದಿಂದ ಕನ್ನಡ ಸಾಹಿತ್ಯವಲಯದಲ್ಲಿ ಚಿರಪರಿಚಿತರಾಗಿರುವ ಡಿ.ವಿ.ಪ್ರಹ್ಲಾದರ ಈ ಸಂಕಲನಕ್ಕೆ ಬರುವ ಮುನ್ನ ನಾನು ಅವರ ಬಗ್ಗೆ ಕೆಲವು ಮಾತುಗಳನ್ನು ತಿಳಿಸಬೇಕಾಗಿದೆ. ಬೆಂಗಳೂರಿನಲ್ಲಿ ಹುಟ್ಟಿ (1966)ಬೆಳೆದ ಪ್ರಹ್ಲಾದ್ ಓದಿದ್ದು ನ್ಯಾಷನಲ್ ಹೈಸ್ಕೂಲ್ ಮತ್ತು ಶೇಷಾದ್ರಿಪುರಂ ಕಾಲೇಜುಗಳಲ್ಲಿ.ಶಾಲಾ ಕಾಲೇಜುಗಳಲ್ಲಿ ಸಂಸ್ಕೃತಿ, ಸಾಹಿತ್ಯ, ಕಲೆ ಇತ್ಯಾದಿ ಸಂಸ್ಕಾರಗಳ ಗಂಧಗಾಳಿ ಇನ್ನೂ ಸುಳಿದಾಡುತ್ತಿದ್ದ ದಿನಗಳು. ಕನ್ನಡದಲ್ಲಿ ಎಂ.ಎ. ತೇರ್ಗಡೆ ಹೊಂದಿದರು. ಇದಿಷ್ಟೇ ಅವರ ಖಾಸಗಿ ಬದುಕಿನ ವಿವರಗಳು. ಅವರು ಸಾಹಿತ್ಯದ ಒಲವಿಗೆ, ಕಾವ್ಯದ ಸೆಳವಿಗೆ ಹೇಗೆ ಸಿಕ್ಕಿಬಿದ್ದರೋ ತಿಳಿಯದು. ನನಗೂ ಅವರಿಗೂ ಹತ್ತಿರ ಹತ್ತಿರ ಎರಡು ದಶಕಗಳ ಪರಿಚಯವಿದೆ. ಅವರು ಮಿತಭಾಷಿ. ಆದರೆ ಆಡುವ ಒಂದೊಂದು ಮಾತಿನಲ್ಲೂ ಕಳಕಳಿಯಷ್ಟೇ ತಾನು ನಂಬಿದ ವಿಚಾರಗಳಲ್ಲಿ ದೃಢ ನಿಲುವು ನಿಶ್ಚ್ಚಿತ ಅಭಿಪ್ರಾಯ. ಋಜುತ್ವ, ಪ್ರಾಮಾಣಿಕತೆಗಳಲ್ಲಿ ಅಪರಂಜಿ. ನನ್ನ ಅವರ ಪರಿಚಯ ಖಾಸಗಿಗಿಂತ ಹೆಚ್ಚಾಗಿ ಅವರ ಸಾಹಿತ್ಯಕ ಒಲವು, ಕಾವ್ಯ ಮತ್ತು ‘ಸಂಚಯ’ಗಳಿಂದ ಬೆಳೆದದ್ದು. ಸ್ವತ: ಕವಿಯಾದ ಪ್ರಹ್ಲಾದ್ ತಮ್ಮನ್ನು, ತಮ್ಮ ಕಾವ್ಯವನ್ನು ಬಿಂಬಿಸಿಕೊಂಡಿದ್ದಕ್ಕಿಂತ ಹೆಚ್ಚಾಗಿ ಸಾಹಿತ್ಯ ಕಲೆಗಳ ಸಮಷ್ಠಿ ಬೆಳವಣಿಗೆಯತ್ತ ತಮ್ಮ ಕಾರ್ಯಚಟುವಟಿಕೆಗಳನ್ನು ಕೇಂದ್ರೀಕರಿಸಿದವರು. ಒಂದು ರೀತಿಯಲ್ಲಿ ಅವರು ಜಿ.ಪಿ.ರಾಜರತ್ನಂ, ಶ್ರೀನಿವಾಸ ರಾಜು ಅವರ ಸಾಹಿತ್ಯ ಪರಿಚಾರಿಕೆಯ ಪರಂಪರೆಯಲ್ಲಿ ಸಾಗಿ ಬಂದವರು. ಪ್ರಹ್ಲಾದರ ಈ ನಿಟ್ಟಿನ ನಡೆದು ಬಂದ ದಾರಿಯಲ್ಲಿ ‘ಸಂಚಯ’ ಒಂದು ಘನವಾದ ಕೆಲಸ. ‘ಸಂಚಯ’ ಸಾಹಿತ್ಯ ನಿಯತಕಾಲಿಕವನ್ನು ಪ್ರಹ್ಲಾದ್ ಶುರು ಮಾಡಿದ್ದು 1987ರಲ್ಲಿ. ಸಂಪಾದಕ, ಪ್ರಕಾಶಕ ಎಲ್ಲವೂ ಅವರೇ. ಮೊದಲ ಒಂಬತ್ತು ಸಂಚಿಕೆಗಳು ಸೈಕೊಸ್ಟೈಲ್ ಮತ್ತು ಜೆರಾಕ್ಸ್ ಮುದ್ರಣದಲ್ಲಿದ್ದವು.

ನಮ್ಮ ಕಾಲದ ‘ಸಾಕ್ಷಿ’, ‘ಸಂಕ್ರಮಣ’ಗಳಂತೆ ಸಾಹಿತ್ಯ, ಕಲೆಗಳಿಗೆ ಬದ್ಧವಾದ ಪತ್ರಿಕೆ. ಪ್ರಹ್ಲಾದರೇ ಹೇಳಿರುವಂತೆ ಸಮಕಾಲೀನ ಸಮಸ್ಯೆ, ಆತಂಕಗಳ ಬಗ್ಗೆ ಚರ್ಚೆ, ಉತ್ತಮ ಗುಣಮಟ್ಟದ ಬರಹಗಳು ಹಾಗೂ ಕವಿತೆಗಳಿಂದ ‘ಸಂಚಯ’ ಹೊಸ ಶತಮಾನದ ಉದಯದ ವೇಳೆಗೆ ಗಣನೀಯ ಸಾಹಿತ್ಯ ತ್ರೈಮಾಸಿಕವಾಗಿ ರೂಪುಗೊಂಡಿತ್ತು. ‘ಸಂಚಯ’ ಬಲುಬೇಗ ಗುಣಾಢ್ಯ ಸಾಹಿತ್ಯ ಪತ್ರಿಕೆಯಾಗಿ ಬೆಳೆಯಿತು. ಆದರೆ ಎಲ್ಲ ಸಾಹಿತ್ಯ ಪತ್ರಿಕೆಗಳಂತೆ ಇದನ್ನು ಕಾಡಿದ್ದೂ ಹಣದ ಮುಗ್ಗಟ್ಟಿನ ಬಾಲಾರಿಷ್ಠವೇ. ಕವನ, ಲೇಖನಗಳಂತೆ ಚಂದಾ ಹಣದ ಚೆಕ್‌ಗಳು, ಜಾಹೀರಾತಿನ ಚೆಕ್‌ಗಳು ಧಾರಾಳವಾಗಿ ಹರಿದು ಬರಲಿಲ್ಲ. ಹಾಗೆಂದೇ ಪ್ರಹ್ಲಾದರಿಗೆ ‘ಸಂಚಯ’ದ ವಜನು ಹೆಚ್ಚಾಗಿರಬೇಕು. ಅದರ ಪ್ರಕಟನೆ ನಿಲ್ಲಿಸುವುದು ಅನಿವಾರ್ಯವಾಯಿತು. ನಡೆಸಿದಷ್ಟು ಅವಧಿಯಲ್ಲಿ ಪತ್ರಿಕೆಯ ಒಳಹೂರಣ ಮತ್ತು ಹೊರಗಿನ ಅಂದ ಚೆಂದಗಳಿಗೆ, ವಿನ್ಯಾಸಗಳಿಗೆ ಪ್ರಹ್ಲಾದ್ ವಿಶೇಷ ಮುತುವರ್ಜಿ ತೋರುತ್ತಿದ್ದರು ಎನ್ನುವುದಕ್ಕೆ ಪ್ರತಿ ಸಂಚಿಕೆಯೂ ಪ್ರತ್ಯಕ್ಷ ನಿದರ್ಶನವಾಗಿ ನಿಲ್ಲುತ್ತದೆ. ಕವಿಯಾಗಿ, ಸಾಂಸ್ಕೃತಿಕ ಪತ್ರಕರ್ತರಾಗಿ ಪ್ರಹ್ಲಾದರ ಅಭಿರುಚಿ, ರಸಾಭಿಜ್ಞತೆ, ಮೌಲ್ಯನಿಷ್ಠೆ ಮತ್ತು ಸಾಹಿತ್ಯಕ ಬದ್ಧತೆಗಳಿಗೆ ದರ್ಪಣದಂತಿವೆ ‘ಸಂಚಯ’ ವಿಶೇಷ ಸಂಚಿಕೆಗಳು.‘ಎ.ಕೆ.ರಾಮಾನುಜನ್ ಹೆಜ್ಜೆ ಗುರುತು’, ಸಾಹಿತಿಗಳ ಸಂದರ್ಶನದ ‘ಬಗೆತೆರೆದ ಬಾನು’, ಶಾಂತಿನಾಥ ದೇಸಾಯಿಯವರನ್ನು ಕುರಿತ ‘ಮುಕ್ತ ಛಂದ’, ‘ತೇಜಸ್ವಿ ಲೋಕ’, ‘ಮತ್ತೊಮ್ಮೆ ಭಗವದ್ಗೀತ-ಇವು ‘ಸಂಚಯ’ ವಿಶೇಷಾಂಕಗಳು. ಇವತ್ತಿಗೂ ಆಕರ ಗ್ರಂಥಗಳಂತೆ ಅಧ್ಯಯನ ಯೋಗ್ಯವಾದ ಈ ವೀಶೇಷ ಸಂಚಿಕೆಗಳಲ್ಲಿ ಪ್ರಹ್ಲಾದರ ಸಾಹಿತ್ಯದ ಹಿರಿಮೆ, ಗರಿಮೆ ಕುರಿತ ಮನೋಕಾಮನೆಗಳು ಮತ್ತು ಕಾರ್ಯಕ್ಷಮತೆಗಳು ಎದ್ದು ಕಾಣುತ್ತವೆ.‘ಬೆಳ್ಳಕ್ಕಿ ಹಿಂಡು’ ಸು.ರಂ.ಎಕ್ಕುಂಡಿಯವರ ಸಮಗ್ರಕಾವ್ಯ, ಸಂಚಯದ ಇನ್ನೊಂದು ಮಹತ್ವದ ಪ್ರಕಟನೆ.

ಅವತರಿಸುವ ಕವಿತೆಗಾಗಿ, ಮಣೆಹಾಸಿ... ಕಾದಿರುವ ವರ್ಧಿಷ್ಣು ಕವಿ ಡಿ.ವಿ.ಪ್ರಹ್ಲಾದ್. ದೇಶಕಾಲಗಳ, ಸಮಯಗಳ ಎಗ್ಗಿಲ್ಲದ ನಿರ್ಭಿಡೆಯ ಮನೋಭಾವದ ಕವಿ. ‘ದಯಾ...ನೀ,ಭವಾ...ನೀ’ ಅವರ ಮೂರನೆಯ ಕವನ ಸಂಕಲನ. ‘ಡ್ರೀಮರ್’(1995). ‘ನಾಳೆಯಿಂದ’(2005) ಉಳಿದೆರಡು ಕವನ ಸಂಕಲನಗಳು. ಆಯ್ದ ಸಂಪಾದಕೀಯಗಳ ‘ಹೊಳೆದದ್ದು ತಾರೆ’(2015),‘ಅನುದಿನವಿದ್ದು’(2014-ಅಗಲಿದ ಲೇಖಕರ ನೆನಪುಗಳು) ಗದ್ಯ ಬರಹಗಳ ಸಂಕಲನಗಳು. ಮೊದಲೆರಡು ಸಂಕಲನಗಳಿಂದ ಕಾವ್ಯರಸಿಕರಲ್ಲಿ ಭರವಸೆಯನ್ನು ಮೂಡಿಸಿದ್ದ ಪ್ರಹ್ಲಾದ್ ಮೂರನೆಯ ಈ ಸಂಕಲನದಲ್ಲಿ ಅವರನ್ನು ನಿರಾಸೆಗೊಳಿಸುವುದಿಲ್ಲ ಎಂದಷ್ಟೇ ಹೇಳಿದರೆ ಅದು ಕೊರೆಯ (ಅಂಡರ್ ಸ್ಟೇಟ್‌ಮೆಂಟ್) ಮಾತಾಗುತ್ತದೆ. ಕವಿ ಸಮಯಕ್ಕೆ ಒದಗಿ ಬರುವ ಪದಗಳು, ಪೂರ್ವ ಸೂರಿಗಳು, ಹುಡುಗಾಟಿಕೆಯ ತೆವಲುಗಳು ಇವೆಲ್ಲವನ್ನೂ ಅರಗಿಸಿಕೊಂಡು ಬೆಳೆದು, ಮಾಗಿ ಹದವಾಗುತ್ತಿರುವ ಕಾವ್ಯದ ಪರಿ, ಕವಿಯ ಅಸ್ಮಿತೆಯ ಲಕ್ಷಣಗಳು ಈ ಸಂಕಲನದಲ್ಲಿ ಸ್ಪಷ್ಟವಾಗಿ ಕಾಣ ಸಿಗುತ್ತವೆ. ‘ರಾಜು ಮೇಷ್ಟ್ರಿಗೆ’ಕವನಗುಚ್ಛ ಸೇರಿ ನಲವತ್ತು ಕವಿತೆಗಳಿರುವ ಈ ಸಂಕಲನದಲ್ಲಿ ಮೂರು ಬಗೆಯ ಕವಿತೆಗಳು ಅನಾಯಸವಾಗಿ ನಮ್ಮನ್ನು ಆಕರ್ಷಿಸುತ್ತವೆ. ಬದುಕಿನ ಮುಗಿಯದ ಜಿಜ್ಞಾಸೆ,ವ್ಯಂಗ್ಯ ಮತ್ತು ವ್ಯಕ್ತಿ ಚಿತ್ರಗಳ ಮಾದರಿಯ ಮೂರು ಬಗೆಯ ಕವಿತೆಗಳು-
     ‘ಬನ್ನಿ ಸಮಯಗಳೇ
     ದೇಶಕಾಲಗಳೇ
     ತೆರೆದ ಮನವಿದೆ-
           
  ಎನ್ನುವ ಕವಿಯ ಪಂಥಾಹ್ವಾನ ಸ್ವೀಕರಿಸಿದಂತೆ ಒದಗಿಬರುವ ಇಲ್ಲಿನ ಕವಿತೆಗಳು. ಅವರಿವರ ಚರಣಾಂಬುಜಕೆ ಶರಣಾಗದ, ಯಾರ ಹಾಡಿಗೋ ಕೊರಳಾಗದ, ಎದೆ ಹೊಳೆಯ ಹಾಡು ತೋರಿದ ಹಾದಿಯ ಅಸ್ಮಿತೆಯ ಛಾಪಿನ ಕವನಗಳು. ಈ ಮೂರರ ಮಧ್ಯೆ ಕಹಿ-ಕಸರು, ವ್ಯಂಗ್ಯ ವಿಡಂಬನೆ ಈ ಯಾವ ಹಂಗೂ ಇಲ್ಲದ ‘ಪಾರಿಜಾತ’ದಂತಹ ಎರಡ್ಮೂರು ಸುಂದರ ರಚನೆಗಳಿವೆ. ಸಂಕಲನದ ಶೀರ್ಷಿಕೆಯ ಮಹತ್ವ ಪಡೆದಿರುವ ‘ದಯಾ...ನೀ,ಭವಾ...ನೀ’ಹುಟ್ಟಿನಿಂದ ಹಿಡಿದು ಮುಕ್ತಿ ಸೋಪಾನವಾದ ಅಧ್ಯಾತ್ಮದವರೆಗೆ ಹಲವು ಅರ್ಥಗಳಿಗೆ ಚಾಚಿಕೊಳ್ಳುವ ಒಂದು ಧ್ವನಿಪೂರ್ಣವಾದ ಕವನ. ಪರ್ವೀನ್ ಸುಲ್ತಾನ್ ಅವರ ಮಿಶ್ರ ಭೈರವಿ ರಾಗದ ಒಂದು ರಚನೆಗೆ ಪ್ರತಿಸ್ಪಂದಿಯಾಗಿ ಹುಟ್ಟಿರುವ ಈ ಕವಿತೆ ಪ್ರಕೃತಿ-ಪುರುಷ ಸಂಬಂಧವನ್ನು, ಪ್ರಕೃತಿ ಮತ್ತು ಅದರ ಕೂಸಾದ ಸೃಷ್ಟಿಯ ಚರಾಚರಗಳ ನಡುವಣ ಸಂಬಂಧವನ್ನು ಸರಾಗವಾಗಿ ಪಲುಕುತ್ತ,ಚರಮ ಸ್ಥಿತಿಯಲ್ಲಿ ಸಾಭಿನಯವಾಗಿ ತನ್ನ ಗರಿಮೆಯನ್ನು ಸ್ಥಾಪಿಸುವ ಒಂದು ಸುಂದರ ರಚನೆ.ಕೊನೆಯಲ್ಲಿ ಕೊಟ್ಟಿರುವ ಅಡಿಟಿಪ್ಪಣಿಯಿಂದ ಅದನ್ನು ಭವದ ಬಿಡುಗಡೆಯ ವಾಚ್ಯಾರ್ಥಕ್ಕೆ ಕಟ್ಟಿಹಾಕುವ ಅಗತ್ಯವಿರಲಿಲ್ಲ. ‘ಮಧ್ವಸರೋವರದಲ್ಲಿ’ ದ್ವೈತ-ಅದ್ವೈತಗಳ ತಿರುಗಣಿಯಲ್ಲಿ ಸಿಕ್ಕಿಬಿದ್ದ ಮನಸ್ಸಿಗೆ ಯಕ್ಷಪ್ರಶ್ನೆಯಾಗಿ ಕಾಡುವ ‘ಮುಗಿಯದ ಜಿಜ್ಞಾಸೆ’-ಪರಂಪರಾನುಗತವಾಗಿ ಬಂದದ್ದು.

ಅಡಿಗರ ‘ಆನಂದ ತೀರ್ಥರಿಗೆ’ ಕವಿತೆಯನ್ನು ನೆನಪಿಗೆ ತರುವ ಕವನ. ಈ ಪರಂಪರೆಯಲ್ಲಿನ ಭೋಗದಾಸೆ, ವಿಕೃತ ಮುದ್ರೆ, ಚಿನ್ನ ಸವರಿದ ಹಿತ್ತಾಳೆ ಟಂಕೆ ಎಲ್ಲವನ್ನು ಕಂಡ ನಂತರವೂ ಅಡಿಗರ ಕವಿತೆ ಆನಂದ ತೀರ್ಥರಿಗೆ ಇಡುವ ಮೊರೆ: ತನ್ನಿ ಕಮ್ಮಟ,ಚಾಣ,ಟಂಕಸಾಲೆಯಾದರೆ,‘ಮಧ್ವಸರೋವರದಲ್ಲಿ’, ದ್ವೈತಗುಣ ಸಹಜವಾಗಿಯೋ ಎಂಬಂತೆ,‘ನೀರಿಗಿಳಿಯಬೇಕೆ?/ಬೆವೆತ ಮೈಹೊತ್ತು ದಡಕ್ಕೆ ನಿಲ್ಲಬೇಕೆ ಎಂಬ ದ್ವಂದ್ವವೇ ಜಿಜ್ಞಾಸೆ. ‘ವ್ಯಾಖ್ಯಾನ’,‘ತಿಟ್ಹತ್ತಿ’, ಹುಟ್ಟು ಸಾವುಗಳ ಮಣ್ಣಿನ ಓಟದ ನಡುವಣ ಮೃಣ್ಮಯವಾದ ಹಾಲು ಹಾಲಾಹಲವಾಗುವ ವಿಪರ್ಯಾಸಗಳ ಬದುಕಿನ ಜಿಜ್ಞಾಸೆಯೇ. ಪರಂಪರಾನುಗತವಾದ ಈ ಜಿಜ್ಞಾಸೆಗೆ ಮುಖಾಮುಖಿಯಾಗಿ ನಿಲ್ಲುವ ಕವಿತೆ ಕಲ್ಲು ಕರಗಲೊಲ್ಲದು. ಬೇಯುವ ಮಹಾಮನೆಯಲ್ಲಿ ರೂಪವಿಲ್ಲದ ಆಧುನಿಕ ಬಸವಣ್ಣಗಳು ಮನುಷ್ಯ ಸಹಜ ಘನತೆಯನ್ನು ಮೂರು ಕಾಸಿಗೆ ಮಾರಿ ನಡೆಸಿರುವ ‘ಕಲ್ಯಾಣ ಕ್ರಾಂತಿ’ಯನ್ನು ತುಂಬ ಕಟುವಾಗಿ ವಿಡಂಬಿಸುವ ಈ ಕವನ, ಅಲ್ಲಮ, ಕಲ್ಲು ಕರಗುವುದಿಲ್ಲ, ಮಹಾಮನೆಯಲ್ಲೀಗ ಮನಸ್ಸುಗಳಿಲ್ಲ ಎಂಬ ವಿಷಾದದ ಆಧುನಿಕ ಜಿಜ್ಙಾಸೆಯಾಗಿದೆ.‘ಭಕ್ತಿ ಎಂಬುದೂ...’ ಇಂಥದೇ ವಿಷಾದಪೂರ್ಣ ಆಧುನಿಕ ಭಕ್ತಿ ಜಿಜ್ಞಾಸೆ. ’ಕಾಫಿ ಬ್ರೇಕ್’,‘ಬೂತುಗನ್ನಡಿಯ ಆಚೀಚೆ’ ಇಂತಹ ಕವನಗಳು ಇಬ್ಬಂದಿ ಬದುಕಿನ ಆಧುನಿಕ ಲಘು ಜಿಜ್ಞಾಸೆಗಳೇ ಆಗಿವೆ.
           
 ವ್ಯಂಗ್ಯ, ವಿಡಂಬನೆ ಪ್ರಹ್ಲಾದರ ಕಾವ್ಯದ ಇನ್ನೊಂದು ಮುಖ್ಯಲಕ್ಷಣ. ‘ಧಣಿ ನಿಮ್ಮ ಗುಣಗಳ’, ‘ನಿತ್ಯ ನಾರಕಿಗಳು’, ‘ಪ್ರಥಮ ಪುರುಷರ ನಡುವೆ’ ಇಂಥ ಕವಿತೆಗಳಲ್ಲಿ ವ್ಯಂಗ್ಯ, ವಿಡಂಬನೆಗಳ ಮೊನಚು ಕಿಬ್ಬದಿಯ ಕೀಲು ಮುರಿಯುವಷ್ಟು ಪರಿಣಾಮಕಾರಿಯಾದುದು.ಅಗಣಿತ ಗುಣಗಳ ‘ಧಣಿ’ಯ ಮಹಿಮೆಯನ್ನು ಕೊಂಡಾಡುತ್ತಲೇ ಕವನ ಅಲ್ಲೇ ಕುಂತವರೆ ನನ್ನ ಜನಗಳು ಎನ್ನುವ ಭಾಷ್ಯದಲ್ಲಿ ಮಾರ್ಮಿಕವಾಗುತ್ತದೆ.ವ್ಯಂಗ್ಯ, ವಿಡಂಬನೆಗಳ ಚಿಟುಕುಮುಳ್ಳಾಡುತ್ತದೆ. ‘ನಿತ್ಯ ನಾರಕಿಗಳು’-ಹಾರುವರ ಹೆಂಡಿರ ಮೇಲೆ ಹೋರಿ ಹಾಯಿಸಿರೆಂದವಿಶ್ವ ಮಾನವರ ವಿಕೃತ ಮನಸ್ಸುಗಳನ್ನು ವಿಡಂಬಿಸುತ್ತಲೇ ಮುಗಿಯದ ಹೊಸಗಾಲದ ಆಚಾರ್ಯ ಜಿಜ್ಞಾಸೆಯ ನಿತ್ಯ ನರಕದ ದರ್ಶನ ಮಾಡಿಸುತ್ತದೆ. ವ್ಯಕ್ತಿ ಚಿತ್ರಗಳ ಮಾದರಿಯ ‘ಅವಧೂತ’,‘ರವೆ ಉಂಡೆ’,‘ರಾಜು ಮೇಷ್ಟ್ರು’ ಮನೋಜ್ಞ ಕವಿತೆಗಳು. ಈ ಕವಿತೆಗಳ ಹಿಂದಿನ ಸಂವೇದನೆಯಲ್ಲಿ, ವ್ಯಕ್ತಿಪೂಜೆಯ ಅತಿಗೆ ಹೋಗದೆ ವಸ್ತುನಿಷ್ಠತೆಯ ಆರೋಗ್ಯ ಕಾಪಾಡಿಕೊಳ್ಳುವ ಎಚ್ಚರವಿದೆ. ‘ಅವಧೂತ’ಶಾರದಾಪ್ರಸಾದರ ನೆನಪಿನ ಕವನ-ಕಪಿಲೆ ಪಕ್ಕದೆ ನೀಲ ನೆಳಲಲ್ಲೊಂದು ಎಳೆ ಬಿಸಿಲು....‘ದಪ್ಪ ರವೆ ಉಂಡೆ’ ಶ್ರಾವಣದ ತಂಪು ಸಂಜೆಗಳಲ್ಲಿ ಪದೇಪದೇ ನೆನಪಾಗುವ ‘ತಂದೆ’ಯ ವ್ಯಕ್ತಿತ್ವದ ಮಾಧುರ್ಯವನ್ನು ಆಪ್ತವಾಗಿ ಸವಿಯುವ ಕವನ. ಪಿತೃಗಳ ಶ್ರಾದ್ಧದಲ್ಲಿ ರವೆಯುಂಡೆ ವಿಶೇಷವಾದ ಸಿಹಿ ಭಕ್ಷ. ಪಿತೃಪಿತಾಮಹ ಪರಂಪರೆಯ ಬೇರುಗಳಲ್ಲಿನ ಮಾಧುರ್ಯದ ರೂಪಕವಾಗಿ ಬರುವ ‘ರವೆ ಉಂಡೆ’ ನಿರಂತರ ಚಪ್ಪರಿಕೆಯಲ್ಲಿ ಮುಂದುವರಿಯುವ ಸಂಬಂಧವಾಗಿ ಮನಂಬಗುತ್ತದೆ, ಅರ್ಥಪೂರ್ಣವಾಗುತ್ತದೆ.

ತಂದೆಯ ಬದುಕಿನ ಸ್ಥಿತಿಗತಿಲಯಗಳನ್ನು ವಿಮರ್ಶಿಸುತ್ತಲೇ ಅದರ ಮೌಲಿಕತೆಯನ್ನು ಬಿಂಬಿಸುವ ಇಲ್ಲಿನ ರೀತಿ ಮೆಚ್ಚುವಂಥಾದ್ದು. ಇಂಥ ರಚನೆಗಳಲ್ಲಿ ಸಾಮಾನ್ಯವಾಗಿ ಕಾಣಬರುವ ಮಾತಯಿನ ಅಬ್ಬರ, ಭಾವುಕತೆಗಳಿಂದ ಕವಿ ಬಿಡಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆ. ‘ಮೇಷ್ಟ್ರು ಪದ್ಯಗಳು’, ‘ಕನ್ನಡದ ಅಂತರ್ಜಲ’ ಚಿ.ಶ್ರೀನಿವಾಸ ರಾಜು ಅವರ ವ್ಯಕ್ತಿತ್ವವನ್ನು ಬಿಡಿಸಿ ನೋಡುವ ಇಪ್ಪತ್ಮೂರು ಪದ್ಯಗಳ ಒಂದು ಕಾವ್ಯಗುಚ್ಛ.ಇಲ್ಲಿನ ಒಂದೊಂದು ಪದ್ಯವೂ ಶ್ರೀನಿವಾಸ ರಾಜು ಅವರನ್ನು ಹತ್ತಿರದಿಂದ ಬಲ್ಲವರು. ಕಂಡುಂಡಂತಹ ಅವರ ವ್ಯಕ್ತಿತ್ವದ ಹಲವಾರು ರೇಕುಗಳನ್ನು ಅನಾವರಣಗೊಳಿಸುತ್ತವೆ.ಈ ಪ್ರಕ್ರಿಯೆಯಲ್ಲಿ ಬಿಡಿ ಪದ್ಯಗಳಾದರೂ ಒಂದೊಂದೂ ಪರಸ್ಪರ ಕೋದುಕೊಂಡು ಅಸಾಧಾರಣ ವ್ಯಕ್ತಿತ್ವದ ಸಮಗ್ರಚಿತ್ರವನ್ನು ಕಡೆದಿರಿಸುವುದರಲ್ಲಿ ಕವಿ ಸಫಲರಾಗಿದ್ದಾರೆ. ನವ್ಯ ಕಾವ್ಯದ ಶಿಸ್ತು,ಆಧುನಿಕ ಸಂವೇದನೆಗಳನ್ನು ರೂಢಿಸಿಕೊಂಡಿರುವ ಡಿ.ವಿ.ಪ್ರಹ್ಲಾದ್ ಗಮನಿಸಬೇಕಾದ ಕವಿ. ಎರಡನೆಯ ಸಂಕಲನ ‘ನಾಳೆಯಿಂದ’ ಪ್ರಕಟವಾದ ಹದಿನೈದು ವರ್ಷಗಳ ಸುದೀರ್ಘ ಮಾಗುವಿಕೆಯ ನಂತರ ಹೊಬಂದಿರುವ ಅವರ ಈ ‘ದಯಾ...ನೀ,ಭವಾ ...ನೀ’ ಕನ್ನಡ ವಿಮರ್ಶೆ ಗಂಭಿರವಾಗಿ ಪರಿಗಣಿಸಬೇಕಾಗಿರುವ ಕಾವ್ಯ ಕೃತಿ ಎಂದರೆ ಅದು ಉತ್ಪ್ರೇಕ್ಷೆಯಾಗದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top