ಕಳಚಿಬಿದ್ದ ಮುಖವಾಡಗಳು | Vartha Bharati- ವಾರ್ತಾ ಭಾರತಿ

--

ಕಳಚಿಬಿದ್ದ ಮುಖವಾಡಗಳು

ಕೂಲಿ ಕಾರ್ಮಿಕರಿಗೆಂದು ಮೀಸಲಾದ ಆಹಾರದ ಪೊಟ್ಟಣಗಳು ವ್ಯಾನ್‌ಗಳಲ್ಲಿ ಬರುತ್ತಿದ್ದವು. ನಿರ್ದಿಷ್ಟ ಸ್ಥಳಗಳಲ್ಲಿ ಪೊಟ್ಟಣಗಳನ್ನು ಇಳಿಸಿಕೊಳ್ಳಲಾಗುತ್ತಿತ್ತು. ನಂತರ ಅವು ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ಸುಪರ್ದಿಗೆ ಕೈ ಬದಲಾವಣೆಯಾಗುವುದನ್ನು ಸ್ವತ: ಈ ಅಂಕಣಕಾರನೇ ಕಂಡದ್ದಿದೆ. ಸಿಕ್ಕವರಿಗೆ ಸೀರುಂಡೆ! ಇರಲಿ. ಇವೆಲ್ಲ ಇದ್ದದ್ದೇ. ಆದರೆ ಇದಾವುದೂ ದುಡಿಮೆಗೆ ಪರ್ಯಾಯವಾಗಲಾರದು. ಪೊಟ್ಟಣದ ಅನ್ನ ಹೊಟ್ಟೆ ತುಂಬಿಸದು. ನಿರುದ್ಯೋಗಿಗಳಾದವರು ವಲಸೆ ಕೂಲಿಗಾರರಷ್ಟೇ ಅಲ್ಲ. ಸ್ಥಳೀಯ ಕಸುಬುದಾರರೂ ಇದ್ದಾರೆ. ಕಮ್ಮಾರರು, ಚಮ್ಮಾರರು, ಮಡಿವಾಳರು, ಕ್ಷೌರಿಕರು, ಮನೆಗೆಲಸದವರು, ಹೀಗೆ.ಇವರೆಲ್ಲರೂ ಲಾಕ್‌ಡೌನ್ ನಿರುದ್ಯೋಗಿಗಳೇ. ಇವರ ಪಾಡೇನು?


ಮಹಾಯುದ್ಧ ಸಾರಿಯಾಗಿದೆ. ಮಹಾಭಾರತದ ಕುರುಕ್ಷೇತ್ರ ಯುದ್ಧ ಹದಿನೆಂಟು ದಿನಗಳಾದರೆ ಕೋವಿಡ್-19ರ ವಿರುದ್ಧ ನಮ್ಮ ಪ್ರಧಾನಮಂತ್ರಿ ಮೋದಿ 21 ದಿನಗಳ ಸಮರವನ್ನೇ ಸಾರಿದ್ದಾರೆ. 21 ದಿನಗಳ ಯುದ್ಧ ಮುಗಿಯಲು ಕೇವಲ ಎರಡು ದಿನ ಮಾತ್ರ ಬಾಕಿ ಇದೆ. ಆದರೆ ಶತ್ರು ಸೋತು ಹಿಮ್ಮೆಟ್ಟುವ ಸೂಚನೆಗಳು ಕಂಡು ಬರುತ್ತಿಲ್ಲ. ಅಮೆರಿಕದಂತಹ ಅಮೆರಿಕವನ್ನೇ ಗಡಗಡ ನಡುಗುವಂತೆ ಮಾಡಿ ಟ್ರಂಪ್ ಸಾಹೇಬರೇ ಔಷಧಿಗಾಗಿ ನಮಗೆ ಮೊರೆಹೋಗುವಂತೆ ಮಾಡಿದ ಈ ಶತ್ರು ತನ್ನ ಕಬಂಧ ಬಾಹುಗಳನ್ನು ಚಾಚಿ ಭಾರತದ ಮೂಲೆ ಮೂಲೆಗೂ ವ್ಯಾಪಿಸುತ್ತಿದೆ. 24 ಗಂಟೆ ಟೊಂಕಕಟ್ಟಿ ಹೋರಾಟ ನಡೆಸಿರುವ ಆಳುವ ಪ್ರಭುಗಳು ಕಂಗೆಟ್ಟಿದ್ದಾರೆ. ಯಥಾ ರಾಜ ತಥಾ ಪ್ರಜಾ!

ಸರಕಾರದ ಕಂಗೆಟ್ಟ ಮಾತುಗಳು, ಆತುರದ ನಿರ್ಧಾರಗಳನ್ನು ಕಂಡಾಗ ಜನರಿಗಿಂತ ಸರಕಾರವೇ ಹೆಚ್ಚಾಗಿ ಹೆದರಿದೆಯೇನೋ ಎಂದು ಭಾಸವಾಗುತ್ತದೆ. ಯುದ್ಧಗಳಂತಹ ಗಂಡಾಂತರಗಳನ್ನೆದುರಿಸಿದ ಸರಕಾರ ಯಕಶ್ಚಿತ್ ಒಂದು ಕಾಯಿಲೆಗೆ ಹೆದರುವುದೆ? ಎಂಬ ಪ್ರಶ್ನೆ ಸಹಜವಾದರೂ ಪರಿಸ್ಥಿತಿ ಅಸಹಜ. ಎಂತೆಂತಹ ಯುದ್ಧ ಗೆಲ್ಲಲೂ ನಮ್ಮಲ್ಲಿ ‘ರಾಮ ಬಾಣ’ಗಳಿವೆ. ಆದರೆ ಕೋವಿಡ್-19 ಮಹಾಮಾರಿಯನ್ನು ಮಣಿಸುವ ರಾಮಬಾಣ ನಮ್ಮಲ್ಲಿ ಇಲ್ಲ. ವಿಶ್ವದಲ್ಲೇ ಅದಕ್ಕೆ ಔಷಧಿ ಇಲ್ಲ ಎಂದೇ ಎಲ್ಲರಂತೆ ನಾವೂ ಹೆದರಿದ್ದೇವೆ, ತುಸು ಹೆಚ್ಚಾಗಿಯೇ. ಈ ಮಾರಿ ದೇಶದೊಳಕ್ಕೆ ಬಂದಾಗಿದೆ. ಮನೆಯೊಳಗೆ ಬರದಂತೆ ಬಾಗಿಲು ಭದ್ರಪಡಿಸುವುದೊಂದೇ ಈಗಿರುವ ಉಪಾಯ ಎಂದೇ ಮೋದಿ ಅವರು ‘ಲಕ್ಷ್ಮಣ ರೇಖೆ’ ಚಿಕಿತ್ಸಾ ವಿಧಾನ ಆಶ್ರಯಿಸಿದ್ದಾರೆ. ಆದರೆ ಮುಚ್ಚಿದ ಬಾಗಿಲುಗಳನ್ನು ನುಚ್ಚುನೂರಾಗಿಸಿ ಕೋವಿಡ್-19 ಹುಚ್ಚು ಆವೇಶದಿಂದ ನುಗ್ಗುತ್ತಿದೆ. ಕೋವಿಡ್-19 ರೋಗಾಣುಗಳು ಹರಡಲು ಜನರ ನಡುವಣ ಸಾಮಾಜಿಕ ಒಡನಾಟಗಳೇ ಮುಖ್ಯ ಕಾರಣವೆನ್ನಲಾಗಿದ್ದು, ಸಾಮಾಜಿಕ ಒಡನಾಟಗಳ ಮೂಲಕ ಉಂಟಗಬಹುದಾದ ಭೌತಿಕ ಸಂಪರ್ಕಗಳನ್ನು ತಪ್ಪಿಸಲು ‘ಲಾಕ್‌ಡೌನ್’ನಂತಹ ಜನತೆಯನ್ನು ಗೃಹಬಂಧನದಲ್ಲಿರಿಸುವ ಕ್ರಮಗಳನ್ನು ಭಾರತವೂ ಸೇರಿದಂತೆ ಅನೇಕ ದೇಶಗಳು ಕೈಗೊಂಡಿವೆ. ಆದರೂ ಕೋವಿಡ್-19ರ ದಾಪುಗಾಲಿನ ನಡೆಗೆ ತಡೆಯೊಡ್ಡುವುದು ಇನ್ನೂ ಸಾಧ್ಯವಾಗಿಲ್ಲ.

ಕೋವಿಡ್-19ರ ವಿರುದ್ಧ ಸಾರಿರುವ ಸಮರದ ಮುಖ್ಯ ಅಸ್ತ್ರಗಳಲ್ಲಿ ಒಂದು ಮಾಸ್ಕ್, ಮುಖ ಪರದೆ ಅಥವಾ ಮುಖವಾಡ. ಇದನ್ನು ಧರಿಸುವುದರಿಂದ, ಪದೇ ಪದೇ ಕೈ ತೊಳೆದುಕೊಳ್ಳುವುದರಿಂದ ಕೊರೋನ ರೋಗಾಣುವನ್ನು ದೂರವಿಡಬಹುದೆಂದು ಆರೋಗ್ಯ ಇಲಾಖೆ ತಿಳಿಸಿದೆ. ಈಗ ಈ ಮಾಸ್ಕ್‌ಗಳಿಗೂ ಅಭಾವ. (ಫ್ರಾನ್ಸ್ ಮತ್ತು ಜರ್ಮನಿ ಚೀನಾದಿಂದ ತರಿಸಿಕೊಳ್ಳುತ್ತಿದ್ದ ಮಾಸ್ಕ್‌ಗಳಿದ್ದ ಎರಡು ಹಡಗುಗಳನ್ನು ಅಮೆರಿಕ ಮಾಸ್ಕ್ ಆಸೆಯಿಂದ ತನ್ನ ವಶಕ್ಕೆ ತೆಗೆದುಕೊಂಡಿದ್ದು ಈಗ ಆ ದೇಶಗಳ ನಡುವೆ ಲಟಾಪಟಿ ಶುರುವಾಗಿದೆ). ಎಲ್ಲೆಲ್ಲೂ ಮಾಸ್ಕ್‌ಧಾರಿ ಮುಖಗಳೇ! ಮಾಸ್ಕ್ ಧರಿಸಿದ ಮುಖಗಳಂತೆ ಮುಖವಾಡ ಕಳಚಿದ ಅನೇಕ ಮುಖಗಳೂ ಈಗ ಗೋಚರಿಸುತ್ತಿರುವುದು ಕೋವಿಡ್-19ರ ವಿರುದ್ಧ ಸಮರದ ಇನ್ನೊಂದು ವಿಶೇಷ. ಈ ಸಮರದಲ್ಲಿ ಅಜ್ಞಾನ, ಅನುಭವ-ದಕ್ಷತೆಗಳ ಮುಖವಾಡಗಳು, ರಾಜಕಾರಣಿಗಳು, ಸಮಾಜ ಸೇವಕರು ಮೊದಲಾದ ಗೋಮುಖ ವ್ಯಾಘ್ರಗಳ ಮುಖವಾಡಗಳು ಕಳಚಿ ಬಿದ್ದಿದ್ದು, ಮಾನವ ಜನಾಂಗವನ್ನು ಕೋವಿಡ್-19ರ ಯಮಪಾಶದಿಂದ ಪಾರುಮಾಡಲು ಹಗಲಿರುಳು ಶ್ರಮಿಸುತ್ತಿರುವ ‘ಸೇವಾಭೂಪ’ರ ಈ ಅವತಾರ ಕಂಡು ‘ನಗೆಯು ಬರುತಿದೆ ಎನಗೆ ನಗೆಯು ಬರುತಿದೆ’ ಎಂದು ಉದ್ಗರಿಸುವಂತಾಗಿದೆ.

ಕೋವಿಡ್‌ನ ಎದುರು ಎಲ್ಲರೂ ಬೆತ್ತಲೆ ಬೆತ್ತಲಾಗದೆ ಬಯಲು ಸಿಕ್ಕದಿಲ್ಲಿ! ದೇಶಬಾಂಧವರ ಪ್ರಾಣ ರಕ್ಷಣೆ ತಮ್ಮ ಮೊದಲ ಆದ್ಯತೆ ಎಂಬುದು ನರೇಂದ್ರ ಮೋದಿ ಅವರ ಅಂಬೋಣ. ನೂರಕ್ಕೆ ನೂರು ಯಾರಾದರೂ ಒಪ್ಪುವಂತಹ ಮಾತೇ ಸರಿ. ಆದರೆ ಕೋವಿಡ್‌ನಿಂದ ದೇಶಬಾಂಧವರನ್ನು ರಕ್ಷಿಸುವ ಧಾವಂತದಲ್ಲಿ ಉರಿವ ಬೆಂಕಿಯಿಂದ ಕುದಿವ ಬಾಣಲೆಗೆ ಎಸೆಯುವಂತಾದರೆ? ಇದಕ್ಕೆ ಏನನ್ನಬೇಕು? ಸಾಹಿತ್ಯ, ಕಲೆ, ಸಂಸ್ಕೃತಿ, ಆಡಳಿತ ಎಲ್ಲವೂ ನಿಂತಿರುವುದು ಒಂದು ದೇಶದ ಜನಜೀವನದ ತಳಹದಿಯ ಮೇಲೆ ಎಂಬುದನ್ನು ನಾವು ಮರೆಯಬಾರದು. ದೇಶದ ಆಡಳಿತದ ಚುಕ್ಕಾಣಿ ಹಿಡಿದವರಿಗಂತೂ ತಮ್ಮ ದೇಶದ ಜನಜೀವನದ ಅರಿವು ಚೆನ್ನಾಗಿರಬೇಕು. ಇಲ್ಲವಾದಲ್ಲಿ ಪ್ರಜೆಗಳ ಬದುಕು ಮೂರಾಬಟ್ಟೆ ಯಾಗುತ್ತದೆ. ಇದಕ್ಕೆ, 21 ದಿನಗಳ ‘ಲಾಕ್‌ಡೌನ್’ ಸಮರ ಜನಜೀವನದ ಮೇಲೆ ಎಂತಹ ಪರಿಣಾಮ ಬೀರಬಹುದು ಎಂಬುವುದನ್ನು ಯೋಚಿಸದೇ ದಿಢೀರನೆ ಲಾಕ್‌ಡೌನ್ ಜಾರಿಗೆ ತಂದದ್ದು ಒಂದು ಉತ್ತಮ ನಿದರ್ಶನವಾಗಬಹುದು. ಪ್ರಧಾನಮಂತ್ರಿ ‘ಲಾಕ್‌ಡೌನ್’ ಜಾರಿಗೆ ತಂದಾಗ ಅವರ ಕಣ್ಮುಂದೆ ಮನೆಮಠ ಹೊಂದಿರುವ ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗ ಮಾತ್ರ ಇದ್ದರು ಎಂದು ತೋರುತ್ತದೆ. ಏಕೆಂದರೆ ಈ ದೇಶದ ಶ್ರಮ ಸಂಪತ್ತಾದ ಸುಮಾರು 2 ಕೋಟಿ ಮಂದಿ ವಲಸೆ ಕೂಲಿಕಾರ್ಮಿಕರು ಮತ್ತಿತರ ಶ್ರಮಜೀವಿಗಳು ಅವರ ನೆನಪಿಗೆ ಬಂದಂತಿಲ್ಲ.

ದಿಢೀರನೆ ‘ಲಾಕ್‌ಡೌನ್’ ಜಾರಿಗೆ ತಂದರೆ ಈ ಮಂದಿಗೆ ಆಗಬಹುದಾದ ತೊಂದರೆಯನ್ನು ಅವರು ಗಮನಿಸಿದಂತಿಲ್ಲ. ‘ಲಾಕ್‌ಡೌನ್’ ಜಾರಿಗೆ ತರಬೇಕಾದ ಹೊಣೆ ಹೊತ್ತ ರಾಜ್ಯಗಳ ಮುಖ್ಯ ಮಂತ್ರಿಗಳ ಜೊತೆ ಸಮಾಲೋಚಿಸುವ ಮುತ್ಸದ್ದಿತನವನ್ನೂ ಅವರು ತೋರಲಿಲ್ಲ. ಹಿಂದೆಮುಂದೆ ಯೋಚಿಸದೇ ದಿಢೀರನೆ ‘ಲಾಕ್‌ಡೌನ್’ ಘೋಷಿಸಿಬಿಟ್ಟರು. ಹೀಗಾಗಿ ರಾತ್ರೋರಾತ್ರಿ ವಲಸೆ ಕೂಲಿಕಾರ್ಮಿಕರು, ಇತರ ಶ್ರಮಜೀವಿಗಳು ಅನ್ನವಸತಿ ಹೀನರಾದರು. ಈ ನಿರ್ಗತಿಕರಿಗೆ ಕೊರೋನಗಿಂತ ವಸತಿಹೀನರಾಗಿ ಹಸಿವಿನಿಂದ ಸಾಯುವ ದಾರುಣ ಸ್ಥಿತಿಯೇ ಹೆಚ್ಚಾಗಿ ಕಾಡಿದ್ದಲ್ಲಿ ಅದು ಅಸಹಜವೇನಲ್ಲ. ಪ್ರಧಾನ ಮಂತ್ರಿ ‘ಲಾಕ್‌ಡೌನ್’ ಜಾರಿಗೆ ತರುವ ಮುನ್ನ ಈ ಕೂಲಿಕಾರ್ಮಿಕರಿಗೆ ಅನ್ನವಸತಿಗೆ ಧಕ್ಕೆಯಾಗದಂತಹ ಒಂದು ಗತಿಯನ್ನು ತೋರಿಸಿದ್ದಿದ್ದರೆ ಪರಿಸ್ಥಿತಿ ಇಷ್ಟು ಉಲ್ಬಣಿಸುತ್ತಿರಲಿಲ್ಲ.

‘ಅಟ್ಟ ಮೇಲೆ ಒಲೆ ಉರೀತು ಕೆಟ್ಟ ಮೇಲೆ ಬುದ್ಧಿ ಬಂತು’ ಎಂಬಂತೆ ಈಗ ನಡೆಸಿರುವ ವೀಡಿಯೊ ಸಮಾಲೋಚನೆಯನ್ನು ಮೊದಲೇ ನಡೆಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ‘ಲಾಕ್‌ಡೌನ್’ ಘೋಷಿಸಿದ್ದಿದ್ದರೆ ವಲಸೆ ಕೂಲಿ ಕಾರ್ಮಿಕರು ಬೇರೆ ದಾರಿ ಕಾಣದೆ ಹುಟ್ಟಿದೂರುಗಳಿಗೆ ಧಾವಿಸುವ ಮಾರ್ಗದಲ್ಲಿ ಪ್ರಾಣ ಕಳೆದುಕೊಳ್ಳಬೇಕಾಗಿರಲಿಲ್ಲ, ಹಸಿವಿನಿಂದ ಕಂಗೆಡುವಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಇಂತಹ ಒಂದು ದುಡುಕಿನ ನಿರ್ಧಾರದಿಂದಾಗಿ ಬೇರೆ ಗತಿ ಕಾಣದೆ ಕೂಲಿಕಾರ್ಮಿಕರು ಹುಟ್ಟಿದ ಊರುಗಳಿಗೆ ಹಿಂದಿರುಗಲಾರಂಭಿಸಿದಾಗ ಹಿಂಡುಹಿಂಡಾಗಿ ಜನ ಸೇರುವುದು ಅನಿವಾರ್ಯವಾಗಿ ‘ಲಾಕ್‌ಡೌನ್’ ಮುಖ್ಯ ಉದ್ದೇಶವಾದ ಸಾಮಾಜಿಕ ಅಂತರ ಗಾಳಿಪಾಲಾಗಿತ್ತು.

‘ಲಾಕ್‌ಡೌನ್’ ಸಮರ ಮಧ್ಯದಲ್ಲಿರುವಾಗಲೇ ದಿಲ್ಲಿಯಲ್ಲಿ ನಡೆದ ತಬ್ಲೀಗಿ ಧಾರ್ಮಿಕ ಸಮ್ಮೇಳನ ಪ್ರಕರಣ ಸ್ಫೋಟಿಸಿ ಮತ್ತೊಮ್ಮೆ ಕೋಮು ಸೌಹಾರ್ದದ ನಮ್ಮ ಮುಖವಾಡ ಕಳಚಿ ಬಿತ್ತು. ಈ ಧಾರ್ಮಿಕ ಸಮ್ಮೇಳನದಲ್ಲಿ ವಿದೇಶಿಯರೂ ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು. ಇವರಿಂದ ಕೊರೋನ ಸೋಂಕು ಹರಡಿರುವುದನ್ನು ಅಲ್ಲಗಳೆಯುವಂತಿಲ್ಲ. ಸಾಂಕ್ರಾಮಿಕ ರೋಗವೊಂದು ದಾಳಿ ನಡೆಸಿದ ಸಂದರ್ಭದಲ್ಲಿ ನಡೆವ ದೇಶವಿದೇಶಗಳ ಜನರು ಪಾಲ್ಗೊಂಡಿದ್ದಂತಹ ಯಾವುದೇ ಧರ್ಮದ ಸಮ್ಮೇಳನದಲ್ಲೂ ಇದು ಸಾಧ್ಯವಿತ್ತು.ಮೊದಲನೆಯದಾಗಿ ಇಂತಹದೊಂದು ಸಮ್ಮೇಳನಕ್ಕೆ ಅನುಮತಿ ನೀಡಿದವರ ನಿಲುವು- ನಿರ್ಧಾರವೇ ಪ್ರಶ್ನಾರ್ಹವಾದದ್ದು. ಆದರೆ ಬಲುಬೇಗ ಇದಕ್ಕೆ ಕೋಮು ಬಣ್ಣ ನೀಡಲಾಯಿತು. ಸೋಂಕು ಹರಡುವ ಏಕೈಕ ಉದ್ದೇಶದಿಂದಲೇ ಈ ಸಮ್ಮೇಳನವನ್ನು ಯೋಜಿಸಲಾಗಿತ್ತೆಂದೂ ಇದು ಇಸ್ಲಾಮ್ ಉಗ್ರಗಾಮಿಗಳ ಸಂಚೆಂದೂ ಪ್ರಚುರಪಡಿಸಲಾಯಿತು. ಇಂತಹ ಅವಕಾಶಕ್ಕೆ ಕಾದು ಕುಳಿತಿರುವ ನಮ್ಮ ಮೂವರು ಶಾಸಕರು ತಬ್ಲೀಗಿ ಸಮ್ಮೇಳನದಲ್ಲಿ ಭಾಗವಹಿಸಿ ಸೋಂಕು ಹರಡುತ್ತಿರುವವರನ್ನು ಗುಂಡಿಟ್ಟು ಕೊಲ್ಲಬೇಕು ಎನ್ನುವವರೆಗೆ ಈ ಉನ್ಮಾದ ಏರಿದ್ದು ವಿಷಾದನೀಯ. ಮುಖ್ಯಮಂತ್ರಿ ಯಡಿಯೂರಪ್ಪಮುಸ್ಲಿಮ್ ನಾಯಕರೊಂದಿಗೆ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಿದರಾದರೂ ಈ ಮೂವರ ವಿರುದ್ಧ ತುಟಿಪಿಟಕ್ಕೆನ್ನಲಿಲ್ಲ.

‘ಲಾಕ್‌ಡೌನ್’ ಜಾರಿಗೆ ಬಂದ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿರುದ್ಯೋಗಿ ಕೂಲಿ ಕಾರ್ಮಿಕರು ಮತ್ತು ಇತರ ಸಂತ್ರಸ್ತರಿಗೆ ಕೆಲವೊಂದು ಪರಿಹಾರಗಳನ್ನು ಘೋಷಿಸಿದ್ದು ಸ್ವಾಗತಾರ್ಹವೇ. ಪಡಿತರ ವಿತರಣೆ, ಜನಧನ್ ಖಾತೆಗೆ 500 ರೂ. ಪಾವತಿ, ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಊಟ ತಿಂಡಿ. ಬೆಂಗಳೂರು ಮಹಾನಗರ ಪಾಲಿಕೆ ನಿರುದ್ಯೋಗಿಗಳಾದ ಕೂಲಿ ಕಾರ್ಮಿಕರ ಊಟ ತಿಂಡಿಗಾಗಿ ಕೋಟಿ ಕೋಟಿ ರೂ.ಯನ್ನು ಗೊತ್ತುಪಡಿಸಿತು. ಇದೆಲ್ಲ್ಲಾ ಎಷ್ಟರ ಮಟ್ಟಿಗೆ ಸದ್ವಿನಿಯೋಗವಾಯಿತೆಂಬುದು ಮತ್ತೊಂದು ಮುಖವಾಡ ಕಳಚಿಬಿದ್ದ ಪ್ರಕರಣ. ಕೂಲಿಕಾರ್ಮಿಕರಿಗೆಂದು ಮೀಸಲಾದ ಆಹಾರದ ಪೊಟ್ಟಣಗಳು ವ್ಯಾನ್‌ಗಳಲ್ಲಿ ಬರುತ್ತಿದ್ದವು. ನಿರ್ದಿಷ್ಟ ಸ್ಥಳಗಳಲ್ಲಿ ಪೊಟ್ಟಣಗಳನ್ನು ಇಳಿಸಿಕೊಳ್ಳಲಾಗುತ್ತಿತ್ತು. ನಂತರ ಅವು ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ಸುಪರ್ದಿಗೆ ಕೈ ಬದಲಾವಣೆಯಾಗುವುದನ್ನು ಸ್ವತಹ ಈ ಅಂಕಣಕಾರನೇ ಕಂಡದ್ದಿದೆ. ಸಿಕ್ಕವರಿಗೆ ಸೀರುಂಡೆ! ಇರಲಿ. ಇವೆಲ್ಲ ಇದ್ದದ್ದೇ. ಆದರೆ ಇದಾವುದೂ ದುಡಿಮೆಗೆ ಪರ್ಯಾಯವಾಗಲಾರದು. ಪೊಟ್ಟಣದ ಅನ್ನ ಹೊಟ್ಟೆ ತುಂಬಿಸದು. ನಿರುದ್ಯೋಗಿಗಳಾದವರು ವಲಸೆ ಕೂಲಿಗಾರರಷ್ಟೇ ಅಲ್ಲ.ಸ್ಥಳೀಯ ಕಸುಬುದಾರರೂ ಇದ್ದಾರೆ.

ಕಮ್ಮಾರರು, ಚಮ್ಮಾರರು, ಮಡಿವಾಳರು, ಕ್ಷೌರಿಕರು, ಮನೆಗೆಲಸದವರು, ಹೀಗೆ.ಇವರೆಲ್ಲರೂ ಲಾಕ್‌ಡೌನ್ ನಿರುದ್ಯೋಗಿಗಳೇ. ಇವರ ಪಾಡೇನು? ಮಧ್ಯಮ ವರ್ಗದವರು ಮತ್ತು ಕೆಳ ಮಧ್ಯಮ ವರ್ಗದವರ ಸ್ಥಿತಿ ಇದಕ್ಕಿಂತ ಉತ್ತಮವಾಗೇನಿಲ್ಲ. ಅವರೆಲ್ಲ ಖಾಸಗಿ ಕಾರ್ಖಾನೆಗಳು ಮತ್ತು ಸಂಸ್ಥೆಗಳಲ್ಲಿ ದುಡಿಯುತ್ತಿದ್ದು ಅನೇಕರು ಲಾಕ್‌ಡೌನ್‌ನಿಂದಾಗಿ ನಿರುದ್ಯೋಗಿಗಳಾಗಿದ್ದಾರೆ.ಇದ್ದ ಅಲ್ಪಸ್ವಲ್ಪ ಉಳಿತಾಯವೂ ಖಾಲಿಯಾಗಿ ಈಗ ಅವರೂ ಮುಂದೇನು ಎಂದು ಚಡಪಡಿಸುತ್ತಿದ್ದಾರೆ.‘ಲಾಕ್‌ಡೌನ್’ ತೆರವಾದೀತೆ, 15ರಂದು ಕೆಲಸಗಳಿಗೆ ಹೋಗಬಹುದೇ ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. 21 ದಿನಗಳ ಸಮರ ಕಾಲದ ಅವಧಿಯಲ್ಲಿ ಪೊಲೀಸ್ ರಾಜ್ಯದ ರುಚಿಯನ್ನೂ ನಾಗರಿಕರು ಕಂಡಿದ್ದಾರೆ. ಜನಗಳು ಗುಂಪು ಸೇರದಂತೆ ನಿರ್ವಹಿಸುವುದರಲ್ಲಿ ಪೊಲೀಸರು ಹರಸಾಹಸ ಮೆರೆದಿದ್ದಾರೆ ಎಂಬುದು ನಿಜ. ಆದರೆ ಜನಸಾಮಾನ್ಯರ ಅನುಭವವೇ ಬೇರೆ. ಮುಖ್ಯವಾಗಿ ಸರಕಾರ ಜನರು ಹಸಿದುಕೊಂಡಿರಲು ಬಿಡಲಾಗುವುದಿಲ್ಲ, ಅಗತ್ಯ ವಸ್ತುಗಳು ಸಿಗುತ್ತವೆ ಎಂದು ಪದೇಪದೇ ಘೋಷಿಸಿದರೂ ಜನರು ಅಗತ್ಯ ವಸ್ತುಗಳಿಗಾಗಿ ಪರದಾಡಬೇಕಾಯಿತು. ಕರ್ಫ್ಯೂ ಎಂದ ಕೂಡಲೇ ಅಗತ್ಯಕ್ಕಿಂತ ಹೆಚ್ಚು ದಾಸ್ತಾನು ಮಾಡುವುದು ಜನರ ದೌರ್ಬಲ್ಯ. ಇದರಿಂದಾಗಿ ಲಾಕ್‌ಡೌನ್ ಜಾರಿಗೆ ಬಂದ ಒಂದೆರಡು ದಿನಗಳಲ್ಲೇ ಬೆಂಗಳೂರಿನ ದಿನಸಿ ಅಂಗಡಿಗಳು ಖಾಲಿಯಾದವು. ಹಣ್ಣು ತರಕಾರಿಗಳಿಗೆ ಪರದಾಡುವಂತಾಯಿತು.

ಸಗಟು ವ್ಯಾಪಾರಿಗಳಿಂದ ಚಿಲ್ಲರೆ ಅಂಗಡಿಗಳಿಗೆ ಸರಕು ಪೂರೈಕೆಯಾಗದಿದ್ದುದೇ ಈ ಪರದಾಟಕ್ಕೆ ಕಾರಣ. ಪಾಸ್ ಇಲ್ಲದೇ ಸರಕು ಸಾಗಣೆ ವಾಹನಗಳೂ ಓಡಾಡುವಂತಿರಲಿಲ್ಲ. ಅಗತ್ಯ ವಸ್ತುಗಳು ಎಂದಾಗ ಅಕ್ಕಿ ಬೇಳೆ, ತರಕಾರಿ ಅಷ್ಟೆ ಅಲ್ಲ. ವಿದ್ಯುದೀಪಕರಣಗಳೂ ಅಗತ್ಯ ವಸ್ತುಗಳೇ. ವಿದ್ಯುದೀಪಕರಣಗಳ ಬಿಡಿಭಾಗಗಳು, ಮಳಿಗೆಗಗಳು ಮುಚ್ಚಿದ್ದು ಮಿಕ್ಸಿ, ಕುಕ್ಕರ್ ಇತ್ಯಾದಿ ಕೆಟ್ಟವರು ಅಕ್ಕಿ ಬೇಳೆ ಇದ್ದು ಉಪವಾಸವಿರುವಂತಾಯಿತು. ಬಡಾವಣೆಗಳಲ್ಲಿ ಹೊಟೇಲ್‌ನವರು ಪಾರ್ಸೆಲ್ ಕೊಡುವ ಔದಾರ್ಯವನ್ನು ತೋರದೆ ಅವಿವಾಹಿತರು, ಒಂಟಿಯಾಗಿರುವ ಹಿರಿಯ ನಾಗರಿಕರು ಊಟ ತಿಂಡಿಗಾಗಿ ಅಲೆದಾಡಬೇಕಾಯಿತು. ಸಿದ್ಧ ಆಹಾರವಾದ ಬ್ರೆಡ್, ಬನ್‌ಗಳನ್ನು ಮಾರುವ ಬೇಕರಿಗಳನ್ನು ಮುಚ್ಚಿಸಿದ್ದು ಮನುಷ್ಯರಿಗೂ ಪ್ರಾಣಿಗಳಿಗೂ ಬಗೆದ ದೊಡ್ಡ ಅನ್ಯಾಯ. ಲಾಕ್‌ಡೌನ್‌ಆಯಿತು. ಈಗ ‘ಸೀಲ್‌ಡೌನ್’ ಶುರುವಾಗಿದೆ. ಇದು ಎಷ್ಟರ ಮಟ್ಟಿಗೆ ಕಾರ್ಯ ಸಾಧ್ಯವಾದೀತು ಎಂಬುದನ್ನು ಸರಕಾರವೇ ಹೇಳಬೇಕು. ಇಡೀ ಬೊಂಬೂ ಬಝಾರಿನ ಬೊಂಬುಗಳನ್ನೆಲ್ಲಾ ತಂದರೂ ಬೆಂಗಳೂರಿನ ರಸ್ತೆಗಳಿಗೆ ಅಡತಡೆ ನಿರ್ಮಿಸಲು ಸಾಧ್ಯವಾಗದೇನೋ. ಇನ್ನು ಪೊಲೀಸರು,ಅವರೂ ಮನುಷ್ಯರಲ್ಲವೇ, ಅವರಿಗೆ ವಿಶ್ರಾಂತಿ ಬೇಡವೇ?

ಜನರ ತಲ್ಲಣಗಳನ್ನು ಹೆಚ್ಚಿಸುವುದರಲ್ಲಿ ವಿದ್ಯುನಾನ ಮಾಧ್ಯಮಗಳು ಪೊಲೀಸರೊಂದಿಗೆ ಸ್ಪಂದಿಸುತ್ತಿರುವಂತಿದೆ. ಕೆಲವು ವಾಹಿನಿಗಳು ಬೆಂಗಳೂರು ಡೇಂಜರ್, ಡೇಂಜರ್, ಅಯ್ಯಯ್ಯೋ ಏನಾಗಿ ಹೋಯ್ತು ಎಂದೆಲ್ಲಾ ಬೊಬ್ಬೆ ಹೊಡೆದು ಜನರ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದವು. ಕೆಲವು ವಾಹಿನಿಗಳಂತೂ ಎಗ್ಗಿಲ್ಲದೆ ತಮ್ಮ ಕೋಮು ಪಕ್ಷಪಾತವನ್ನು ಪ್ರದರ್ಶಿಸಿದವು. ಬೆಂಗಳೂರು ಮಹಾನಗರದಲ್ಲಿ ವಾಹನಗಳ ಓಡಾಟಕ್ಕೆ ಪಾಸ್ ವ್ಯವಸ್ಥೆ ಏನೋ ಇತ್ತು. ಆದರೆ ಇದು ಅಪಾತ್ರರಿಗೇ ದೊರೆತಂತಿತ್ತು.

ಪಾಸ್ ಪಡೆದು ಸಿನೆಮಾ ನಟ-ನಟಿಯರು ಮೋಜಿನ ಡ್ರೈವ್ ಮಾಡಿದರೆ, ಆಸ್ಪತ್ರೆ ತಲುಪಲು ಗರ್ಭಿಣಿಯರು ವೈದ್ಯರ ಚೀಟಿ ತೋರಿಸಿ ವಾಹನದಲ್ಲಿ ಹೋಗಲು ಅಂಗಲಾಚಬೇಕಾಯಿತು. ಇದೆಲ್ಲದರ ಮಧ್ಯೆಯೂ ಪೊಲೀಸರ ಸೇವಾ ಸಹನೆಯನ್ನು ಮೆಚ್ಚದಿರಲಾಗದು. ಕೋವಿಡ್-19ಕ್ಕೆ ಔಷಧಿ ಇಲ್ಲ ಎಂದಮೇಲೆ ಅದೊಂದು ಪ್ರಕೃತಿಯ ಮುನಿಸಿದ್ದಂತೆ. ಕೋಪದ ಉಬ್ಬರ ಇಳಿದು ಪ್ರಕೃತಿ ಸೌಮ್ಯವಾಗುವವರೆಗೆ ಸಹನೆಯಿಂದ ಕಾಯುವಂತೆ, ಕೊರೋನ ಅಬ್ಬರ ಇಳಿಯುವವರೆಗೆ ಸಂಯಮ ಪಾಲನೆಯಷ್ಟೆ ಉಳಿದಿರುವ ಮಾರ್ಗ. ವಿಶ್ವ ಆರೋಗ್ಯ ಸಂಸ್ಥೆಯೂ ಇದನ್ನೇ ಹೇಳುತ್ತಿದೆ. ಲಾಕ್‌ಡೌನ್ ತೆರವು ಮಾಡಿದ ನಂತರದ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸದೇ ಹೋದರೆ ಕಷ್ಟ ತಪ್ಪಿದ್ದಲ್ಲ ಎಂದೂ ಅದು ಎಚ್ಚರಿಸಿದೆ. ಲಾಕ್‌ಡೌನ್ ಮುಂದುವರಿಕೆ ಅನಿವಾರ್ಯವಾದಲ್ಲಿ ಅದು ಅಮಾನುಷವಾಗಬಾರದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top