ಪ್ರಶಾಂತ್ ಭೂಷಣ್ ಪ್ರಕರಣದ ಬೆಳಕಿನಲ್ಲಿ ನ್ಯಾಯಾಲಯಗಳ ನಿಂದನೆಯ ಕುರಿತು..

ಪಲಾಯನವಾದಿಗಳೇ ಹೆಚ್ಚಿರುವ ಈ ದೇಶದಲ್ಲಿ ಹಿರಿಯ ನ್ಯಾಯವಾದಿ ಯೊಬ್ಬರು ಸಂವಿಧಾನಬದ್ಧ ಸಂಸ್ಥೆಗಳ ಕುರಿತು ತಮ್ಮ ನಿರ್ಭೀತ ಅಭಿಪ್ರಾಯಗಳನ್ನು ಪ್ರಕಟಿಸಿದಾಗ ಅದನ್ನು ಶೋಧಿಸಲು ತೊಡಗಬೇಕೇ ವಿನಾ ನಿಗ್ರಹಿಸಲು ಪ್ರಯತ್ನಿಸಬಾರದು. ಸರಕಾರವೂ ಇದಕ್ಕೆ ಅವಕಾಶ ನೀಡಬಾರದು. ಸತ್ಯವನ್ನು ಹುಡುಕುವಲ್ಲಿ ಸಹಕರಿಸಬೇಕು. ನ್ಯಾಯಾಧೀಶರೂ ಮನುಷ್ಯರೇ. ಎಲ್ಲರೂ ಪುರುಷೋತ್ತಮರಲ್ಲ. ಆದ್ದರಿಂದ ಸತ್ಯಶೋಧನೆಯ ಹಾದಿಯಲ್ಲಿ ತಾವೂ ಯಾತ್ರಿಕರೆಂದು ನ್ಯಾಯಾಧೀಶರು ತಿಳಿಯದಿದ್ದರೆ ಬರಲಿರುವ ದುಷ್ಪರಿಣಾಮಗಳನ್ನು ಅವರು ಇನ್ನಷ್ಟು ಬೇಗ ಬರಲು ಆಸ್ಪದಮಾಡಿಕೊಡುತ್ತಾರೆಯೇ ವಿನಾ ತಡೆಯುವುದಕ್ಕಲ್ಲ. ನ್ಯಾಯದಾನದಲ್ಲಿ ಅಪ್ರಾಮಾಣಿಕತೆ ತನ್ನೆಲ್ಲ ಸ್ವರೂಪದಲ್ಲಿ ವಿಜೃಂಭಿಸಬಾರದೆಂದೇನಿಲ್ಲ.

ಹಿರಿಯ ನ್ಯಾಯವಾದಿ ಮತ್ತು ನಾಗರಿಕ ಹಕ್ಕುಗಳ ಹೋರಾಟಗಾರ ಪ್ರಶಾಂತ್ ಭೂಷಣ್ 2009ರಲ್ಲಿ ತಮ್ಮ ಕೆಲವು ನ್ಯಾಯಮೂರ್ತಿಗಳ ಕುರಿತು ಮಾಡಿದರೆನ್ನಲಾದ ನಿಂದನೆಯ ಕುರಿತು ಭಾರತದ ಸರ್ವೋಚ್ಚ ನ್ಯಾಯಾಲಯ (ಸುಪ್ರೀಂಕೋರ್ಟು) ನ್ಯಾಯಾಲಯಗಳ ನಿಂದನೆಯ ಕಾಯ್ದೆಯಡಿ ತಾನಾಗಿಯೇ ದಾಖಲುಮಾಡಿಕೊಂಡ ಪ್ರಕರಣವು ಈಗ ಕುತೂಹಲಕಾರಿ ಘಟ್ಟವನ್ನು ತಲುಪಿದೆ. ನ್ಯಾಯಾಲಯದ ಕಚೇರಿಯಲ್ಲಿ ನಿದ್ರಿಸಿಕೊಂಡಿದ್ದ ಕಡತವು ಒಮ್ಮಿಂದೊಮ್ಮೆಗೇ ಧೂಳುಕೊಡವಿಕೊಂಡು ಮೇಲೆದ್ದು ವಿಚಾರಣೆಗೆ ಬಂದು ಅರುಣ್ ಮಿಶ್ರಾ ಅವರ ಜ್ಯೇಷ್ಠತೆಯ ತ್ರಿಸದಸ್ಯ ನ್ಯಾಯಪೀಠವು ಅವಸರವಸರವಾಗಿ ಆರೋಪಿ ಪ್ರಶಾಂತ್ ಭೂಷಣ್ ಅವರನ್ನು ತಪ್ಪಿತಸ್ಥನೆಂದು ಘೋಷಿಸಿ ಅವರ ಅಹವಾಲನ್ನು ಕೇಳಲು ಮತ್ತು ಶಿಕ್ಷೆಯ ಪ್ರಮಾಣವನ್ನು ನಿರ್ಣಯಿಸಲು ಸೆಪ್ಟಂಬರ್ 20ನೇ ದಿನಾಂಕವನ್ನು ನಿಗದಿಪಡಿಸಿತು. ಆ ದಿನ ಮತ್ತೆ ನ್ಯಾಯಾಲಯವು ಅವರಿಗೆ ತನ್ನ ತಪ್ಪಿಗಾಗಿ ವಿಷಾದ ವ್ಯಕ್ತಪಡಿಸಲು 2-3 (?) ದಿನಗಳ ಕಾಲಾವಕಾಶ ನೀಡಿ ಪ್ರಕರಣವನ್ನು ಸೆಪ್ಟಂಬರ್ 24ಕ್ಕೆ ಮುಂದೂಡಿತು. ಅಂದು ಪ್ರಶಾಂತ್‌ಭೂಷಣ್ ವಿವರವಾದ ಲಿಖಿತ ಹೇಳಿಕೆ ನೀಡಿ ತನ್ನದೆಂದು ಆರೋಪಿಸಲಾದ ತಪ್ಪನ್ನು ಒಪ್ಪಿಕೊಳ್ಳುವುದೆಂದರೆ ತನ್ನ ಆತ್ಮಸಾಕ್ಷಿಯ ನಿಂದನೆಯಾಗುತ್ತದೆಂದು ತಾನು ಶಿಕ್ಷೆಯನ್ನು ಎದುರಿಸಲು ಸಿದ್ಧನೆಂದು ತಿಳಿಸಿದರು. ಆನಂತರ ನ್ಯಾಯಪೀಠವು ಈ ನುಂಗಲಾರದ ಬಿಸಿತುಪ್ಪವು ಇನ್ನಷ್ಟು ನಿಂದನೆಯಿಂದ ಕೂಡಿದೆಯೆಂಬ ಭಾವನೆಯನ್ನು ವ್ಯಕ್ತಪಡಿಸಿ 25ಕ್ಕೆ ಮುಂದೂಡಿತು. 25ರಂದು ನ್ಯಾಯಾಲಯವು ಈ ಕುರಿತು ವಾದವನ್ನು ಆಲಿಸಲು ಮತ್ತು ಮುಂದಿನ ಕ್ರಮದ ಕುರಿತು ಚರ್ಚಿಸಲು ಕನಿಷ್ಠ ‘4 ಗಂಟೆಗಳಾದರೂ’ ಬೇಕೆಂದು ಮತ್ತು ತಮ್ಮ ಪೈಕಿ ಅರುಣ್ ಮಿಶ್ರಾ ಇವರು ಸೆಪ್ಟಂಬರ್ 2ರಂದು ನಿವೃತ್ತರಾಗುವ ಹಿನ್ನೆಲೆಯಲ್ಲಿ ಅದು ಕಷ್ಟಸಾಧ್ಯವೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿ ಸದ್ಯಕ್ಕೆ ಈ ಪ್ರಕರಣವನ್ನು ಸೆಪ್ಟಂಬರ್ 10ಕ್ಕೆ ಮುಂದೂಡುವ ಮೂಲಕ ಈ ಪ್ರಕರಣಕ್ಕೆ ಅಲ್ಪವಿರಾಮವನ್ನು ಹಾಕಿದೆ. (ಆದೇಶಕ್ಕೆಂದೂ ವರದಿಯಾಗಿದೆ!)

ಮಾಮೂಲಾಗಿ ಇಂತಹ ಪ್ರಕರಣಗಳು ಸುದ್ದಿಯಾಗುವುದಿಲ್ಲ; ಸದ್ದು ಮಾಡುವುದಿಲ್ಲ. ನ್ಯಾಯಾಲಯಕ್ಕೆ ಒಂದೇ ಆಯಾಮ: ಕಾನೂನಿನದ್ದು; ಅರ್ಥಾತ್ ನ್ಯಾಯನಿರ್ವಹಣೆಯದ್ದು. ಆದರೆ ಅರೋಪಿಗಳು ಜನಪ್ರಿಯರೋ ಶ್ರೇಷ್ಠರೋ ಧಾರ್ಮಿಕ/ಸಾಮಾಜಿಕ/ರಾಜಕೀಯ ಸ್ಥಾನಮಾನಗಳನ್ನು ಹೊಂದಿದವರೋ ಆಗಿದ್ದರೆ ಪ್ರಕರಣದ ಆಯಾಮವು ವಿಸ್ತರಿಸುತ್ತದೆ; ಮತ್ತು ಆರೋಪಿಯೇ ಪ್ರಕರಣದ ಕೇಂದ್ರವಾಗಿ ಅದು ಮಾಧ್ಯಮಗಳಿಗೆ ಮತ್ತು ಜನರಿಗೆ ಆಕರ್ಷಕ ವಿಚಾರವಾಗುತ್ತದೆ. ಈವರೆಗೂ ಇದಿಷ್ಟು ಸದ್ಯದ ವರ್ತಮಾನ: 11 ವರ್ಷಗಳ ಹಿಂದಿನ ವ್ಯಾಜ್ಯದ ಕಡತವು ಈಗ ವಿಚಾರಣೆಗೆ ಬಂದರೆ ತಪ್ಪಿಲ್ಲ. ನಮ್ಮ ನ್ಯಾಯದಾನದ ವೇಗವನ್ನು ಗಮನಿಸಿದರೆ ಇವೆಲ್ಲ ಸರ್ವೇಸಾಮಾನ್ಯ. ಮುಖ್ಯವಲ್ಲದ ಮತ್ತು ಯಾರನ್ನೂ ಬಾಧಿಸದ ಕಡತಗಳು, ಅಡಗಿ ಅಲ್ಲೇ ಸಮಾಧಿಯಾದರೂ ನ್ಯಾಯಾಲಯಗಳಾಗಲೀ, ಜನರಾಗಲೀ ಗಮನಿಸುವುದಿಲ್ಲ. ನ್ಯಾಯಾಲಯಗಳ ನಿಂದನೆ ಕಾಯ್ದೆಯಡಿ ವ್ಯಕ್ತಿಗಳು ಸಲ್ಲಿಸಿದ ದೂರಿನ ಮೇಲೆ ದಾಖಲಾದ ಪ್ರಕರಣಗಳು ಅವರವರ ಆಸಕ್ತಿಯ ಮೇರೆಗೆ ಇತ್ಯರ್ಥವಾಗುವುದುಂಟು. ಉಳಿದವೆಲ್ಲ ತಮ್ಮ ಮೋಕ್ಷಕ್ಕೆ ಕಾಯುವ ಶಿಲಾಅಹಲ್ಯೆಯಂತಿರುತ್ತವೆ. ಈಗ ಈ ಪ್ರಕರಣವು ಸೃಷ್ಟಿಸಿದ ವಿಚಾರಗಳ ಕುರಿತು ಒಂದಿಷ್ಟು ಚರ್ಚಿಸಬಹುದು: ಮುಖ್ಯವಾಗಿ ನೆನಪಿಡಬೇಕಾದ್ದು ಇದು ‘ನ್ಯಾಯಾಲಯಗಳ ನಿಂದನೆ’ಯೇ ಹೊರತು ‘ನ್ಯಾಯಾಂಗ ನಿಂದನೆ’ಯಲ್ಲ. ನ್ಯಾಯಾಲಯ ಎಂಬ ಪದವು ಸಂಬಂಧಿಸಿದ ಒಂದು ಅಥವಾ ಹೆಚ್ಚಿನ ನ್ಯಾಯಾಧೀಶರನ್ನೊಳಗೊಳ್ಳುತ್ತದೆ. ಇದೊಂದು ಕಾನೂನಿನ ಪರಿಭಾಷೆ. ವೈದ್ಯಕೀಯ, ತಾಂತ್ರಿಕ ಕ್ಷೇತ್ರಗಳಂತೆ ಇಲ್ಲೂ ವಸ್ತು ಮತ್ತು ವಿಷಯದ ಕುರಿತು ಅಧ್ಯಯನಪೂರ್ಣ ಮತ್ತು ಪ್ರಾಯೋಗಿಕ ಸೂಕ್ಷ್ಮತೆ ಬೇಕು. ಈ ವ್ಯತ್ಯಾಸ ಗೊತ್ತಿಲ್ಲದಿದ್ದರೆ ಚರ್ಚೆಗಳು ತಮ್ಮ ನಿಖರತೆಯನ್ನು ಕಳೆದುಕೊಳ್ಳುತ್ತವೆ. ವರ್ತಮಾನದ ದುರಂತವೆಂದರೆ ಬುದ್ಧಿವಂತರು, ಚಿಂತಕರು ಎಂದೆನಿಸಿಕೊಳ್ಳುವವರೆಲ್ಲ ರಾಜಕಾರಣಿಗಳಂತೆ ಕಾನೂನು ಎಂಬುದನ್ನು ತತ್ವ/ಸಿದ್ಧಾಂತ, ಭಾಷೆ, ಕಲೆ, ಸಾಹಿತ್ಯ, ಪತ್ರಿಕೋದ್ಯಮಗಳಂತೆ ಸ್ಥೂಲವಾಗಿ ವ್ಯಾಖ್ಯಾನಿಸಬಹುದು ಎಂಬ ಭ್ರಮೆಯನ್ನು ಹೊಂದಿರುವುದು. (ಹಾಗೆಂದು ಅವರು ಅತ್ಯಂತ ಅಗತ್ಯಗಳ ಕುರಿತು ಕುರುಡ/ಕಿವುಡ/ಮೂಕರಾಗಿರುತ್ತಾರೆ!) ಪ್ರಸ್ತುತ ಪ್ರಕರಣದ ಕುರಿತೇ ಮಾಧ್ಯಮಗಳಲ್ಲಿ ‘ನ್ಯಾಯಾಂಗ ನಿಂದನೆ’ಯೆಂದೇ ಚರ್ಚೆ ನಡೆದಿರುವುದನ್ನು ಗಮನಿಸಬಹುದು. ಈ ವ್ಯತ್ಯಾಸವನ್ನು ಹೇಳಿದರೆ ಇದೊಂದು ಪದವ್ಯತ್ಯಯವೇ ಹೊರತು ಪ್ರಮಾದವೇನಲ್ಲ ಎಂದು ತಮ್ಮನ್ನು ತಾವು ಸಮರ್ಥಿಸಿಕೊಂಡ ಪ್ರಭೃತಿಗಳೂ ಇದ್ದಾರೆ. ಅವರ ಬಗ್ಗೆ ಅನುಕಂಪವಿರಲಿ. ನ್ಯಾಯಾಲಯಗಳ ನಿಂದನೆಯ ಕಾಯ್ದೆಯು ಬ್ರಿಟಿಷ್ ಮೂಲದ್ದು. ಅಲ್ಲಿ ಈ ಕಾಯ್ದೆಯು ರದ್ದಾಗಿದೆ. ಇದ್ದಾಗಲೂ ಅವು ತೀರ ಅಪರೂಪ; ಮತ್ತು ಅಪವಾದಗಳಷ್ಟೇ ಆಗಿರುತ್ತಿದ್ದವು. ಜನಹಿತವೇ ಸರ್ವೋಚ್ಚ ಕಾನೂನಾಗಿರುವಾಗ ಜನಹಿತಕ್ಕೆ ಸಂಬಂಧಿಸದ ಇಂತಹ ಕಾನೂನುಗಳು ಅಲಂಕಾರಕ್ಕಷ್ಟೇ ಇರಬೇಕಾದವುಗಳು. ಅವು ಅರಸನ ಕಿರೀಟದಂತೆ ಪ್ರದರ್ಶನಕ್ಕೆ ಪಾತ್ರವಾಗಬೇಕೇ ಹೊರತು ಉಣ್ಣಲು, ನಿದ್ರಿಸಲು ಧರಿಸಬೇಕಾದ ಪರಿಕರಗಳಲ್ಲ. ಇದು ಗೊತ್ತಿದ್ದಲ್ಲಿ ನ್ಯಾಯಾಲಯಗಳು ತಮ್ಮ ಪಾಡಿಗೆ ತಾವು ಕೆಲಸಮಾಡುತ್ತವೆಯೇ ವಿನಾ ಜನರ ಟೀಕೆಗಳಿಗೆ ಉತ್ತರಿಸುವುದಿಲ್ಲ ಮಾತ್ರವಲ್ಲ ಕಿವಿಗೊಡುವುದೇ ಇಲ್ಲ. ಭಾರತದಲ್ಲಿ 1952ರಿಂದ ಈ ಕಾಯ್ದೆಯಿದ್ದರೂ ಅದು ಈಗಿನಂತೆ ಸಶಸ್ತ್ರವಾದದ್ದು 1971ರಲ್ಲಿ. ಇದರ ಉದ್ದೇಶವು ‘‘ನ್ಯಾಯಾಲಯಗಳ ನಿಂದನೆಯನ್ನು ಶಿಕ್ಷಿಸಲು ಕೆಲವು ನ್ಯಾಯಾಲಯಗಳಿಗಿರುವ ಅಧಿಕಾರವನ್ನು ವ್ಯಾಖ್ಯಾನಿಸುವ/ನಿರೂಪಿಸುವ ಮತ್ತು ಮಿತಿಗೊಳಿಸುವ ಮತ್ತು ತತ್ಸಂಬಂಧದ ಪ್ರತಿಕ್ರಿಯೆಗಳನ್ನು ನಿಯಂತ್ರಿಸುವ’’ ಎಂದು ಸೂಚಿಸಲಾಗಿದೆ. ‘ಮಿತಿಗೊಳಿಸುವ’ ಎಂಬಲ್ಲಿ ನ್ಯಾಯಾಲಯಗಳ ಅಂಕೆಯಿಲ್ಲದ ನಾಗಾಲೋಟಕ್ಕೆ ಕಡಿವಾಣ ಹಾಕಲು ಅವಕಾಶವಿದೆ. ಕಾಯ್ದೆಯಿರಬೇಕಾದದ್ದು ಜನರಲ್ಲಿ ನ್ಯಾಯಾಲಯಗಳ ಕುರಿತು ಭಯ ಹುಟ್ಟಿಸುವುದಕ್ಕಲ್ಲ; ಗೌರವ ಮೂಡಿಸುವುದಕ್ಕೆ. ‘ನಿಂದನೆ’ಯೆಂಬುದೇ ಈ ಕಾಯ್ದೆಯ ಸೂತ್ರ. ಇವುಗಳಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಎಂಬ 2 ವಿಧಗಳಿವೆ: ಸಿವಿಲ್ ನಿಂದನೆಯೆಂದರೆ ನ್ಯಾಯಾಲಯದ ಯಾವುದೇ ತೀರ್ಪು, ನಿರ್ದೇಶನ, ಆದೇಶಗಳ ಅಥವಾ ನ್ಯಾಯಾಲಯಕ್ಕೆ ನೀಡಿದ ಅಶ್ವಾಸನೆಯ ಉಲ್ಲಂಘನೆ. ಕ್ರಿಮಿನಲ್ ನಿಂದನೆಯೆಂದರೆ ನ್ಯಾಯಾಲಯವನ್ನು ಹೀಗಳೆಯುವ, ಅವಮಾನಿಸುವ, ಕೆಡುಕನ್ನು, ಕಲಾಪಗಳಿಗಡ್ಡಿಯನ್ನು ಅಥವಾ ನ್ಯಾಯಪಾಲನೆಗೆ ತೊಂದರೆಯನ್ನು ಉಂಟುಮಾಡುವ ಯಾವುದೇ ಲಿಖಿತ ಅಥವಾ ಮೌಖಿಕ ಪ್ರಕಟಣೆ, ಸಂಜ್ಞೆ ಅಥವಾ ಇನ್ನಾವುದೇ ನಡವಳಿಕೆ. ನ್ಯಾಯಾಲಯದ ವರದಿಗಳು, ನಡವಳಿಕೆಗಳ ನಿಷ್ಪಕ್ಷಪಾತ/ಪೂರ್ವಗ್ರರಹಿತ ಟೀಕೆಗಳು, ಯಾವುದೇ ಕೆಳನ್ಯಾಯಾಲಯದ ನ್ಯಾಯಾಧಿಶರ ಕುರಿತು ಮೇಲಿನ ನ್ಯಾಯಾಲಯಕ್ಕೆ ನೀಡಿದ ಪ್ರಾಮಾಣಿಕ ನಂಬಿಕೆಯ ಹೇಳಿಕೆ, ನ್ಯಾಯಾಲಯವು ಅಧಿಕೃತವಾಗಿ ಮತ್ತು ಮುಕ್ತವಾಗಿ ಪ್ರಕಟಣೆಯನ್ನು ನಿಷೇಧಿಸಿರದಿದ್ದಲ್ಲಿ ಅಂತಹ ನಡವಳಿಕೆಗಳ ನಿಖರ ಹಾಗೂ ಪ್ರಾಮಾಣಿಕವಾದ ವರದಿ, ಮುಂತಾದವು ನ್ಯಾಯಾಲಯಗಳ ನಿಂದನೆಯಾಗುವುದಿಲ್ಲ. ತೀವ್ರ ಕೆರಳಿಕೆಯ ಮಾತನ್ನು ನ್ಯಾಯಾಧೀಶರು ಮಾಡಿದಾಗ ಅದಕ್ಕೆ ನೀಡಿದ ಉತ್ತರವೂ ನ್ಯಾಯಾಲಯಗಳ ನಿಂದನೆಯಂತೆ ಅನ್ನಿಸಿದರೂ ಅವನ್ನು ಪ್ರಾಸಂಗಿಕ ಎಂದು ತಿಳಿಯಬೇಕು.

ನ್ಯಾಯಾಲಯಗಳಲ್ಲಿ ಕೆಲವು ನಡವಳಿಕೆಗಳನ್ನು ಪ್ರಕಟಿಸಬಾರದೆಂಬ ನಿಯಮವಿದೆ. ಇವು ಕಕ್ಷಿದಾರರಿಗೋ ಇತರ ವ್ಯಕ್ತಿ(ತ್ವ)ಗಳಿಗೋ ಸಂಬಂಧಿಸಿರಬಹುದು. ಅನುಮತಿಯಿಲ್ಲದೆ ಅವನ್ನು ಪ್ರಕಟಿಸುವುದು ನ್ಯಾಯಾಲಯಗಳ ನಿಂದನೆಯಾಗುತ್ತದೆ. ಇವಲ್ಲದೆ ಸಾಂದರ್ಭಿಕವಾಗಿ ಕಾಯ್ದೆಯಡಿ ನಿರೂಪಿಸದ ಇತರ ನಡತೆಗಳೂ ನ್ಯಾಯಾಲಯಗಳ ನಿಂದನೆಯಾಗಬಹುದು. ಯಾವುದೇ ಇತರ ಕಾಯ್ದೆಯಡಿ ಶಿಕ್ಷೆಗೊಳಪಡುವ ಅಪರಾಧಗಳು ನ್ಯಾಯಾಲಯಗಳ ನಿಂದನೆಯಾಗುವುದಿಲ್ಲ. ಹಾಗಲ್ಲದಿದ್ದರೆ ಯಾವುದೇ ತೀರ್ಪೂ ಪಾಲನೆಯಾಗದಿದ್ದರೆ ನ್ಯಾಯಾಲಯಗಳ ಉಲ್ಲಂಘನೆಯಾಗುತ್ತಿತ್ತು. ಈ ಕಾಯ್ದೆಯಡಿ ಶಿಕ್ಷಿಸುವ ಅಧಿಕಾರ ಸರ್ವೊಚ್ಚ ಮತ್ತು ಉಚ್ಚ ನ್ಯಾಯಾಲಯಗಳಿಗೆ ಮಾತ್ರವಿದೆ. ನ್ಯಾಯಾಲಯ ನಿಂದನೆಗೆ 6 ತಿಂಗಳ ವರೆಗೆ ವಿಸ್ತರಿಸಬಹುದಾದ ಸಾದಾ ಶಿಕ್ಷೆ ಅಥವಾ 2 ಸಾವಿರ ರೂಪಾಯಿಗಳ ವರೆಗಿನ ದಂಡ ಅಥವಾ ಇವೆರಡನ್ನೂ ವಿಧಿಸಬಹುದು. ಗಣನೀಯ ತೊಡಕಾದರೆ ಮಾತ್ರ ಶಿಕ್ಷಿಸಬಹುದೇ ಹೊರತು ನ್ಯಾಯಾಲಯಗಳು ಎಲ್ಲ ಅರೋಪಗಳಿಗೂ ಈ ಕಾಯ್ದೆಯನ್ನು ಬಳಸುವಂತಿಲ್ಲ. ಉಚ್ಚ ನ್ಯಾಯಾಲಯಗಳ ಕ್ರಮದ ವಿರುದ್ಧ ಸರ್ವೋಚ್ಚ ನ್ಯಾಯಾಲಯಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಕೆಳನ್ಯಾಯಾಲಯಗಳ ನಿಂದನೆಯಾದರೆ ಅದನ್ನು ಉಚ್ಚ ನ್ಯಾಯಾಲಯಗಳಿಗೆ ನಿಗದಿತ ರೀತಿಯಲ್ಲಿ ದೂರು ಸಲ್ಲಿಸಿ ಸಾಧಿಸಬಹುದು. ಮುಖ್ಯವಾಗಿ ಈ ಕಾಯ್ದೆಯಿರುವುದು ನ್ಯಾಯದಾನದ ವಿರುದ್ಧ ಅರಾಜಕತೆಯನ್ನು ತಡೆಯಲು. ಕಾಯ್ದೆಯು ಇನ್ನೂ ಹಲವು ಪ್ರಕ್ರಿಯಾ ವಿವರಗಳನ್ನು ಹೇಳಿದೆಯಾದರೂ ಅವು ಸಾಮಾನ್ಯ ಓದಿಗೆ, ಅರ್ಥವಿಸುವಿಕೆಗೆ ಅಗತ್ಯವಿಲ್ಲ. ಭಾರತದಲ್ಲಿ ಈ ಕಾಯ್ದೆಯ ಫಲಾನುಭವಿಗಳು ಸಾಕಷ್ಟಿದ್ದಾರೆ. ಅನೇಕರು ಶಿಕ್ಷೆಗೊಳಗಾಗಿದ್ದಾರೆ: ಬಾಬರಿ ಮಸೀದಿಯ ರಕ್ಷಣೆಗೆ ನ್ಯಾಯಾಲಯಕ್ಕೆ ನೀಡಿದ ಆಶ್ವಾಸನೆಯನ್ನು ಮುರಿದು ಮಸೀದಿಯು ಭಗ್ನವಾಗುವುದಕ್ಕೆ ಕಾರಣರಾದ ಉತ್ತರ ಪ್ರದೇಶದ ಆಗಿನ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ 1 ದಿನದ ಸೆರೆವಾಸವನ್ನು ಅನುಭವಿಸಿದರು; ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಪಾಲಿಸದ ವೈಫಲ್ಯಕ್ಕಾಗಿ ಕರ್ನಾಟಕ ಸರಕಾರದ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ವಾಸುದೇವನ್ 1 ತಿಂಗಳ ಸೆರೆವಾಸವನ್ನು ಅನುಭವಿಸಿದರು. ಇತ್ತೀಚೆಗೆ ಕರ್ಣನ್ ಎಂಬ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯೊಬ್ಬರು ಇದೇ ಕಾಯ್ದೆಯಡಿ ಸೆರೆವಾಸ ಅನುಭವಿಸಿದರು. ಅವರು ಸರ್ವೋಚ್ಚ ನ್ಯಾಯಮೂರ್ತಿಗಳ ವಿರುದ್ಧ ದಸ್ತಗಿರಿ ವಾರಂಟನ್ನು ನೀಡಿ ಪ್ರಜ್ಞಾಪೂರ್ವಕವಾಗಿಯೇ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದರು. ಅದು ಸ್ಪಷ್ಟವಾಗಿಯೇ ನ್ಯಾಯಾಲಯಗಳನ್ನು ನಿಂದಿಸುವುದು ಮಾತ್ರವಲ್ಲ, ಹಂಗಿಸುವಂತಿತ್ತು. ಇವೆಲ್ಲವೂ ಒಂದಲ್ಲ ಒಂದು ಕಾರಣಕ್ಕಾಗಿ ಸಮರ್ಥನೀಯವಾಗಿದ್ದವು. ಒಂದು ಪ್ರಕರಣದಲ್ಲಿ ನ್ಯಾಯಾಲಯ ನಿಂದನೆಗಾಗಿ ಶಿಕ್ಷೆಗೆ ಗುರಿಯಾದ ವಕೀಲರು ತಾವು ನಿಂದಿಸಿದ ನ್ಯಾಯಾಲಯಕ್ಕೆ ಮನದಟ್ಟಾಗುವಂತೆ ತಮ್ಮ ನಡತೆಯನ್ನು ನಿರೂಪಿಸಿ ಕ್ಷಮೆಯನ್ನು ಪಡೆಯದಿದ್ದರೆ ಅವರು ವಕಾಲತ್ತು ನಡೆಸುವಂತಿಲ್ಲವೆಂದು ಹೇಳಿತು. ಇದು ಒಂದೇ ತಪ್ಪಿಗೆ ಎರಡು ಶಿಕ್ಷೆಯಾದಂತಿತ್ತು. ಅನೇಕ ಪ್ರಕರಣಗಳಲ್ಲಿ ನ್ಯಾಯಾಲಯಗಳು ತಾವೇ ಸರಿಯೆಂಬ ಧೋರಣೆಗೆ ಅಂಟಿಕೊಂಡು ಕುರುಡಾದಂತಿವೆ. ಸರ್ವೋಚ್ಚ ನ್ಯಾಯಾಲಯವು ತನ್ನ ನಿಂದನೆಯ ವಿರುದ್ಧ ನೀಡಿದ ತೀರ್ಪಿಗೆ ಮೇಲ್ಮನವಿಯಿಲ್ಲ. ಅಂತಹ ಸಂದರ್ಭದಲ್ಲಿ ಆರೋಪಿಗಾದ ಅನ್ಯಾಯವನ್ನು ಸರಿಪಡಿಸುವವರ್ಯಾರು?

ಕಳೆದ ಕೆಲವು ದಶಕಗಳಿಂದ ಮಾಧ್ಯಮಗಳು ಸಮಾನಾಂತರ ವಿಚಾರಣೆ ನಡೆಸಿ (ಅನೇಕ ಬಾರಿ ತಮ್ಮ ಅಜ್ಞಾನದಿಂದ!) ತೀರ್ಪನ್ನು ನೀಡಲಾರಂಭಿಸಿವೆಯಾದರೂ ಬಹುಪಾಲು ಅವು ನ್ಯಾಯಾಲಯಗಳ ನಿಂದನೆಯೆನ್ನಿಸಿಲ್ಲ. ಸದ್ಯ ಪ್ರಶಾಂತ್ ಭೂಷಣ್ ವಿರುದ್ಧ ಸರ್ವೋಚ್ಚ ನ್ಯಾಯಾಲಯವು ಎಡವಿತೇ ಅಥವಾ ಅವಸರದಿಂದ ವರ್ತಿಸಿತೇ ಎಂಬುದು ಈಗ ಅರ್ಥವಾಗಲಾರದು. ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಗಣನೀಯ ಮಂದಿ (ಅವರಲ್ಲಿ ನಿವೃತ್ತ ಉಚ್ಚ, ಸರ್ವೋಚ್ಚ ನ್ಯಾಯಮೂರ್ತಿಗಳೂ, ಶ್ರೇಷ್ಠ ನ್ಯಾಯವೇತ್ತರೂ ಇದ್ದಾರೆ!) ಪ್ರಶಾಂತ್ ಭೂಷಣ್ ಅವರಿಗೆ ಬೆಂಬಲ ಸಾರಿ ಸರ್ವೋಚ್ಚ ನ್ಯಾಯಾಲಯವನ್ನು ಟೀಕಿಸಿದ್ದಾರೆ. ನ್ಯಾಯಾಲಯಗಳು ಸೀಜರನ ಪತ್ನಿಯಂತೆ ಶಂಕೆಗೆ ಹೊರತಾಗಿರಬೇಕು. ಟೀಕೆಗಳನ್ನು ತಮ್ಮ ಮೇಲಿನ ದಾಳಿಯೆಂದು ತಿಳಿಯದೆ ತಮ್ಮ ಕುರಿತ ಜನಾಭಿಪ್ರಾಯವೆಂದು ಅರ್ಥಮಾಡಿಕೊಳ್ಳಬೇಕು. ನ್ಯಾಯಾಂಗದ ವೈಫಲ್ಯವಿರುವುದು ತಾವು ಸರಿ; ಮತ್ತು ತಾವು ಮಾತ್ರ ಸರಿಯೆಂದು ಭಾವಿಸುವುದರಲ್ಲಿ. ಹಿಂದಿನ ತೀರ್ಪುಗಳನ್ನು ತಳ್ಳಿಹಾಕಿ ಹೊಸ ತೀರ್ಪುಗಳನ್ನು ನೀಡುವಲ್ಲಿ ಸರ್ವೋಚ್ಚ ನ್ಯಾಯಾಲಯವು ತಾನು ನ್ಯಾಯಾಲಯಗಳ ನಿಂದನೆಯನ್ನು ಮಾಡುತ್ತಿದ್ದೇನೆಂದು ಭಾವಿಸುತ್ತದೆಯೇ? ಪಲಾಯನವಾದಿಗಳೇ ಹೆಚ್ಚಿರುವ ಈ ದೇಶದಲ್ಲಿ ಹಿರಿಯ ನ್ಯಾಯವಾದಿ ಯೊಬ್ಬರು ಸಂವಿಧಾನಬದ್ಧ ಸಂಸ್ಥೆಗಳ ಕುರಿತು ತಮ್ಮ ನಿರ್ಭೀತ ಅಭಿಪ್ರಾಯಗಳನ್ನು ಪ್ರಕಟಿಸಿದಾಗ ಅದನ್ನು ಶೋಧಿಸಲು ತೊಡಗಬೇಕೇ ವಿನಾ ನಿಗ್ರಹಿಸಲು ಪ್ರಯತ್ನಿಸಬಾರದು. ಸರಕಾರವೂ ಇದಕ್ಕೆ ಅವಕಾಶ ನೀಡಬಾರದು. ಸತ್ಯವನ್ನು ಹುಡುಕುವಲ್ಲಿ ಸಹಕರಿಸಬೇಕು. ನ್ಯಾಯಾಧೀಶರೂ ಮನುಷ್ಯರೇ. ಎಲ್ಲರೂ ಪುರುಷೋತ್ತಮರಲ್ಲ. ಆದ್ದರಿಂದ ಸತ್ಯಶೋಧನೆಯ ಹಾದಿಯಲ್ಲಿ ತಾವೂ ಯಾತ್ರಿಕರೆಂದು ನ್ಯಾಯಾಧೀಶರು ತಿಳಿಯದಿದ್ದರೆ ಬರಲಿರುವ ದುಷ್ಪರಿಣಾಮಗಳನ್ನು ಅವರು ಇನ್ನಷ್ಟು ಬೇಗ ಬರಲು ಆಸ್ಪದಮಾಡಿಕೊಡುತ್ತಾರೆಯೇ ವಿನಾ ತಡೆಯುವುದಕ್ಕಲ್ಲ. ನ್ಯಾಯದಾನದಲ್ಲಿ ಅಪ್ರಾಮಾಣಿಕತೆ ತನ್ನೆಲ್ಲ ಸ್ವರೂಪದಲ್ಲಿ ವಿಜೃಂಭಿಸಬಾರದೆಂದೇನಿಲ್ಲ. ಕ್ರೀಡೆಯಲ್ಲಿ ‘ಅಡೆತಡೆ ಓಟ’ (Hurdles Race) ಎಂಬುದೊಂದಿದೆ. ಅವುಗಳನ್ನು ಓಡುವವನು ಅವನ್ನು ದಾಟಿ ಓಡಬೇಕೇ ಹೊರತು ಅವುಗಳನ್ನು ಬೀಳಿಸಿ/ಕೆಡವಿ ಅಥವಾ ಅವುಗಳಡಿ ಓಡಬಾರದು. ಸತ್ಯದ ವಿರುದ್ಧ ಎಷ್ಟೇ ಸಬೂಬು ಹೇಳಿದರೂ ಅದು ಬಹಿರಂಗವಾಗುತ್ತದೆ. ಚರಿತ್ರೆ ತಡವಾಗಿಯಾದರೂ ಸತ್ಯಶೋಧನೆಯ ಬೆಳಕನ್ನು ತೋರಿಸುತ್ತದೆ. ಪ್ರಶಾಂತ್ ಭೂಷಣ್ ಪ್ರಕರಣ ಈ ಹಾದಿಯ ಮೈಲಿಗಲ್ಲಾದರೆ ಒಳ್ಳೆಯದು. ಆದ್ದರಿಂದ ಸರ್ವೋಚ್ಚ ನ್ಯಾಯಾಲಯದ ಸಂಬಂಧಿತ ನ್ಯಾಯಪೀಠವು ಪ್ರಶಾಂತ್ ಭೂಷಣ್ ಅವರು ಮಾಡಿದ ಆರೋಪಗಳ ತನಿಖೆಯನ್ನು ಮಾಡುವುದು ಅದರ ಗೌರವಕ್ಕೂ ನ್ಯಾಯಾಂಗದ ಪಾವಿತ್ರ್ಯಕ್ಕೂ ಹಿತ. ಯಾರು ಸರಿ ಎಂಬುದಕ್ಕಿಂತ ಯಾವುದು ಸರಿ ಎಂಬುದು ಮುಖ್ಯವಾಗಬೇಕು. ಬೆತ್ತಲೆ ಅರಸನ ರಾಜರಹಸ್ಯ ಬಯಲಾದರೆ ರಾಜನಿಗೂ ರಾಜ್ಯಕ್ಕೂ ಒಳ್ಳ್ಳೆಯದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top