ಪ್ರಧಾನಿ ಮತ್ತವರ ಸಾಮ್ರಾಜ್ಯಶಾಹಿ ಹಮ್ಮುಬಿಮ್ಮುಗಳು | Vartha Bharati- ವಾರ್ತಾ ಭಾರತಿ

--

ಪ್ರಧಾನಿ ಮತ್ತವರ ಸಾಮ್ರಾಜ್ಯಶಾಹಿ ಹಮ್ಮುಬಿಮ್ಮುಗಳು

ಹಿಂದಿನ ಚಕ್ರವರ್ತಿಗಳು ನಿರ್ಮಿಸಿದ ಕಟ್ಟಡಗಳನ್ನು ಅಪಹಾಸ್ಯ ಮಾಡುವಂತಹ ರೀತಿಯಲ್ಲಿ ತಾನು ನಿರ್ಮಿಸಿದ ಬೃಹತ್ ಕಟ್ಟಡಗಳನ್ನು 300 ಅಥವಾ 400 ವರ್ಷಗಳ ಆನಂತರ ‘ಹಿಂದುತ್ವ ರಾಷ್ಟ್ರ’ದ ಭಾವೀ ಪ್ರಜೆಗಳು ಹೆಮ್ಮೆಯಿಂದ ವೀಕ್ಷಿಸುವರು ಎಂಬುದು ನರೇಂದ್ರ ಮೋದಿಯವರ ಆಶಾವಾದವಾಗಿರಬಹುದು. ಆದರೆ ಈ ಭರವಸೆಯು ಸಾಕಾರಗೊಳ್ಳುವ ಸಾಧ್ಯತೆ ತುಂಬಾ ಕಡಿಮೆ.


ಒಂದಾನೊಂದು ಕಾಲದಲ್ಲಿ ನರೇಂದ್ರನೆಂಬ ರಾಜನಿದ್ದ. ಆತ ಹಿಂದೂ ಧರ್ಮದ ಪರಮಪವಿತ್ರ ಮಂದಿರವಿರುವಂತಹ ವಿಶಾಲವಾದ ಸಾಮ್ರಾಜ್ಯವೊಂದನ್ನು ಆಳುತ್ತಿದ್ದ. ಯಾಕೆಂದರೆ ತನ್ನ ಪರಂಪರೆ ಹಾಗೂ ಈ ಮಹಾನ್ ದೇವಾಲಯದ ಪೋಷಕನಾಗಿ ಆತನನ್ನು ಜನರು, ಮಾನವ ರೂಪದ ದೇವರು ಎಂಬುದಾಗಿ ಗೌರವಿಸುತ್ತಿದ್ದರು. ಆದಾಗ್ಯೂ, ತನ್ನ ಪಾರಂಪರಿಕ ಸ್ಥಾನಮಾನದ ವರ್ಚಸ್ಸಿನಿಂದಾಗಿ ಪ್ರಭಾವಯುತವಾದ ಹುದ್ದೆದೊರೆತರೂ ಕೂಡಾ ರಾಜನಿಗೆ ಸಂತೃಪ್ತಿಯಾಗಲಿಲ್ಲ. ತನಗಿಂತ ಮೊದಲು ಸಿಂಹಾಸನವನ್ನು ಅಲಂಕರಿಸಿದ್ದ ವ್ಯಕ್ತಿಗಿಂತ ಭಿನ್ನವಾಗಿರಲು ಬಯಸಿದ ಆತ ತನ್ನ ಆನಂತರ ಯಾರು ಆ ಸಿಂಹಾಸನವನ್ನು ಅಲಂಕರಿಸಬೇಕೆಂಬುದನ್ನು ನಿರ್ಧರಿಸಲು ಬಯಸಿದ. ಹೀಗಾಗಿ ಆ ನಮ್ಮ ದೊರೆಯು ತನಗಾಗಿ ಹಾಗೂ ತನ್ನ ಪ್ರಜೆಗಳಿಗಾಗಿ ಹೊಚ್ಚ ಹೊಸ ರಾಜಧಾನಿಯೊಂದನ್ನು ನಿರ್ಮಿಸಿದ, ಆದಕ್ಕೆ ಆತ ನರೇಂದ್ರ ನಗರ ಎಂಬುದಾಗಿ ಹೆಸರನ್ನಿಟ್ಟ.

ನಾನು ಮೇಲೆ ಹೇಳಿದ ಕಥೆಯು ಪುರಾಣವಾಗಲಿ ಅಥವಾ ಪ್ರಾಚೀನವಾದುದೇನೂ ಅಲ್ಲ. ಇದು ನಿಜಕ್ಕೂ ನಡೆದಿರುವಂತಹದ್ದು. ನಾನು ವಿವರಿಸಿದ ಈ ಘಟನೆಗಳು ಕೇವಲ ಒಂದು ಶತಮಾನದ ಹಿಂದೆ ನಡೆದಿದ್ದವು. ಆ ದೊರೆ ತೆಹ್ರಿ ಗರ್ವಾಲ್ ರಾಜ್ಯದ ನರೇಂದ್ರ ಶಾ ಆಗಿದ್ದ. ಆತನ ಕುಟುಂಬವು ಬದ್ರಿನಾಥ ದೇವಾಲಯವನ್ನು ನಿಯಂತ್ರಿಸುತ್ತಿತ್ತು. ಆದರೆ ಆತನ ಹೆಸರಿನಲ್ಲಿಯೇ ನಿರ್ಮಿಸಲಾದ ನಗರದ ನಿರ್ಮಾಣ ಕಾರ್ಯವು 1919ರಲ್ಲಿ ಪೂರ್ಣಗೊಂಡಿತು.

ಗರ್ವಾಲ್ ಬೆಟ್ಟಗಳ ತಪ್ಪಲಲ್ಲಿ ಬೆಳೆದ ಹುಡುಗನಾದ ನಾನು, ನರೇಂದ್ರನಗರಕ್ಕೆ ಆಗಾಗ ಖುದ್ದಾಗಿ ಭೇಟಿ ನೀಡಿದ್ದೆ. ಅಹ್ಮದಾಬಾದ್‌ನ ಪ್ರಮುಖ ಕ್ರಿಕೆಟ್ ಸ್ಟೇಡಿಯಂಗೆ ನರೇಂದ್ರ ಮೋದಿಯವರ ಹೆಸರನ್ನು ಇಡಲಾಗಿದೆಯೆಂಬ ಸುದ್ದಿಯನ್ನು ಕೇಳಿದಾಗ ನನಗೆ ನರೇಂದ್ರ ನಗರದ ನೆನಪುಗಳು ಹಾಗೂ ಅದರ ಉಗಮದ ಕುರಿತ ಕಥೆಗಳು ಮತ್ತೆ ಮರುಕಳಿಸಿದವು. ಅಹ್ಮದಾಬಾದ್‌ನ ಕ್ರಿಕೆಟ್ ಸ್ಟೇಡಿಯಂಗೆ ಹೇಗೆ ಹೆಸರನ್ನು ಆಯ್ಕೆ ಮಾಡಲಾಗಿತ್ತು ಎಂಬ ಬಗ್ಗೆ ಪ್ರಾಯಶಃ ಯಾವತ್ತೂ ಬಹಿರಂಗಪಡಿಸಲಿಕ್ಕಿಲ್ಲ. ಬ್ರಿಟಿಷ್ ಸುದ್ದಿ ಪತ್ರಿಕೆಯೊಂದು Narendra Modi Renames Stadium after Himself (ನರೇಂದ್ರ ಮೋದಿ ತನ್ನ ಹೆಸರನ್ನೇ ಕ್ರೀಡಾಂಗಣಕ್ಕೆ ಮರುನಾಮಕರಣ ಮಾಡಿದ್ದಾರೆ) ಎಂಬ ಶೀರ್ಷಿಕೆಯ ಲೇಖನವೊಂದನ್ನು ಪ್ರಕಟಿಸಿತ್ತು. ಪ್ರಾಯಶಃ ಈ ಮರುನಾಮಕರಣದ ಯೋಚನೆಯು ಮೂಲತಃ ಭಾರತದ ಕ್ರಿಕೆಟ್ ಆಡಳಿತದಲ್ಲಿ ಬಲವಾದ ಆಸಕ್ತಿಯನ್ನು ಹೊಂದಿರುವ ಗುಜರಾತಿ ರಾಜಕಾರಣಿಯೊಬ್ಬರಿಂದ ಬಂದಿರುವ ಸಾಧ್ಯತೆಯಿದೆ. ತನ್ನ ಧಣಿಯನ್ನು ಓಲೈಸಿಕೊಳ್ಳಲು ಹಾಗೂ ತನ್ನ ಕುಟುಂಬ ವ್ಯಾಮೋಹದ ಕುರಿತಾಗಿ ಕೇಳಿಬರುತ್ತಿರುವ ಟೀಕೆಗಳನ್ನು ವೌನವಾಗಿಸುವ ಉದ್ದೇಶವನ್ನು ಆತ ಹೊಂದಿರಬಹುದಾಗಿದೆ. ತಥಾಕಥಿತ ಪ್ರಜಾತಾಂತ್ರಿಕ ದೇಶದ ಪ್ರಧಾನಿಯಾಗಿ ಸ್ಟೇಡಿಯಂಗೆ ತನ್ನ ಹೆಸರನ್ನಿಡುವುದಕ್ಕೆ ಅನುಮತಿ ಕೊಟ್ಟಿರುವುದು ಅಥವಾ ಉತ್ತೇಜಿಸಿರುವುದು ಅಥವಾ ಉಪಕ್ರಮಿಸಿರುವುದು, ದಿಗ್ಭ್ರಮೆಗೊಳಿಸುವಂತಹ ಆಡಂಬರದ ಕೃತ್ಯವಾಗಿದ್ದು, ಇದು 1930ರಲ್ಲಿ ಸ್ಟಟ್‌ಗಾರ್ಟ್‌ನಲ್ಲಿ ಫುಟ್ಬಾಲ್ ಕ್ರೀಡಾಂಗಣಕ್ಕೆ ತನ್ನ ಹೆಸರನ್ನಿಡುವುದಕ್ಕೆ ಅನುಮತಿ ನೀಡಿದ, ಉತ್ತೇಜಿಸಿದ ಅಥವಾ ಉಪಕ್ರಮಿಸಿದ ಅಡಾಲ್ಫ್ ಹಿಟ್ಲರ್ (ಟ್ವಿಟರ್ ಬಳಕೆದಾರರೊಬ್ಬರು ಗಮನಸೆಳೆದಿರುವ ಹಾಗೆ)ನ ನಡವಳಿಕೆಗೆ ಸರಿಸಾಟಿಯಾದುದಾಗಿದೆ. ಹಿಟ್ಲರ್‌ನಂತೆಯೇ ಸರ್ವಾಧಿಕಾರಿಗಳಾದ ಮುಸ್ಸೋಲಿನಿ, ಸದ್ದಾಂ ಹುಸೈನ್ ಹಾಗೂ ಕಿಮ್ II ಸುಂಗ್ ಕೂಡಾ ಅಧಿಕಾರದಲ್ಲಿದ್ದಾಗ ಸ್ಟೇಡಿಯಂಗಳಿಗೆ ತಮ್ಮ ಹೆಸರನ್ನು ತಾವೇ ಇರಿಸಿದ್ದರು. (https://thewire.in/politics/motera-stadium-renaming-narendra-modi-notori...).

ಎಲ್ಲಾ ರಾಜಕಾರಣಿಗಳಿಗೂ ತಮ್ಮ ಬಗ್ಗೆ ತಮಗೇ ಉನ್ನತ ಅಭಿಪ್ರಾಯಗಳಿರುತ್ತವೆ. ಅವರ ವೃತ್ತಿ ಕೂಡಾ ಅದನ್ನೇ ಬಯಸುತ್ತದೆ. ಆದಾಗ್ಯೂ, ಗಣತಂತ್ರ ರಾಷ್ಟ್ರವೊಂದರಲ್ಲಿ ರಾಜಕಾರಣಿಗಳು ಪ್ರಜಾತಾಂತ್ರಿಕ ವಿಧಾನದ ಮಹತ್ವವನ್ನು ಅರಿಯಬೇಕಾಗಿದೆ ಹಾಗೂ ತಾವು ಹೊಂದಿರುವಂತಹ ಹುದ್ದೆಯನ್ನು ಮೀರಿ ನಿಲ್ಲಲು ಅವಕಾಶ ನೀಡಬಾರದು. ಒಬ್ಬ ದೊರೆಯ ತನ್ನ ಸಾಮ್ರಾಜ್ಯದೊಂದಿಗೆ ತನ್ನನ್ನು ಸರಿಸಮಾನವೆಂದು ಭಾವಿಸಬಹುದಾಗಿದೆ. ಆದರೆ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಪ್ರಧಾನಿ (ಅಥವಾ ರಾಷ್ಟ್ರಪತಿ) ತಾನು ದೇಶಕ್ಕೆ ಸಮಾನಾರ್ಥಕವೆಂದು ಯಾವತ್ತೂ ಭಾವಿಸಬಾರದು. ದುರದೃಷ್ಟಕರವೆಂದರೆ ಈ ಪಾಠವನ್ನು ಜಗತ್ತಿನ ಅತ್ಯಂತ ಪುರಾತನ ಗಣತಂತ್ರ ರಾಷ್ಟ್ರಗಳ ನಾಯಕರು ಯಾವತ್ತೂ ಆಲಿಸಲಿಲ್ಲ. ಫ್ರೆಂಚ್ ಅಧ್ಯಕ್ಷರಾಗಿದ್ದ ಚಾರ್ಲ್ಸ್ ಡೆ ಗಾಲೆ ಅವರು ತನ್ನನ್ನು ಫ್ರಾನ್ಸ್‌ನೊಂದಿಗೆ ಸಮೀಕರಣಗೊಳಿಸಿದ್ದರು. ಅಮೆರಿಕದ ಇತಿಹಾಸಕಾರ ಅರ್ಥರ್ ಶ್ಲೆಸಿಂೆರ್ ಜೂನಿಯರ್ ಅವರು, ‘ಇಂಪೀರಿಯಲ್ ಪ್ರೆಸಿಡೆನ್ಸಿ’ (ಸಾಮ್ರಾಜ್ಯಶಾಹಿ ಅಧ್ಯಕ್ಷ ಸ್ಥಾನ) ಎಂಬ ಕೃತಿಯಲ್ಲಿ ತನ್ನ ದೇಶವನ್ನು ಆಳಿದ ನಾಯಕರು ಪರಿಶೀಲನೆ ಹಾಗೂ ಸಮತೋಲನದ ಬಗ್ಗೆ ಚಿಂತಿಸುವ ಪ್ರಜಾಸತ್ತಾತ್ಮಕ ರಾಜಕಾರಣಿಗಳಂತೆ ನಡೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ಚಕ್ರವರ್ತಿಗಳಂತೆ ಆಳ್ವಿಕೆ ನಡೆಸಿದವರನ್ನು ಬಣ್ಣಿಸಲು ಇಂಪೀರಿಯಲ್ ಪ್ರೆಸಿಡೆನ್ಸಿ ಎಂಬ ಹೊಸ ಪದವನ್ನು ಹುಟ್ಟುಹಾಕಿದರು.

ನಮ್ಮ ಸ್ವಂತ ಪ್ರಜಾಪ್ರಭುತ್ವವಾದಿ ರಾಷ್ಟ್ರದ ಇತಿಹಾಸದಲ್ಲಿ ಜವಾಹರಲಾಲ್ ನೆಹರೂ, ಇಂದಿರಾಗಾಂಧಿ ಹಾಗೂ ನರೇಂದ್ರ ಮೋದಿ ಈ ಮೂವರು ಪ್ರಧಾನಿಗಳು ಪ್ರಭಾವಶಾಲಿಗಳೆನಿಸಿಕೊಂಡಿದ್ದಾರೆ. ಇವರೆಲ್ಲರೂ ಪಕ್ಷದಲ್ಲಿರುವ ತಮ್ಮ ಸಹದ್ಯೋಗಿಗಳನ್ನು ಹಾಗೂ ಸರಕಾರವನ್ನು ಮೀರಿ ಬೆಳೆದಿದ್ದರು. ನೆಹರೂ ಹಾಗೂ ಇಂದಿರಾಗಾಂಧಿ ಇವರಿಬ್ಬರಿಗೂ ದೇಶದ ಪರಮೋಚ್ಚ ಗೌರವವಾದ ಭಾರತ ರತ್ನವನ್ನು ಅವರು ಅಧಿಕಾರದಲ್ಲಿರುವಾಗಲೇ ನೀಡಲಾಗಿತ್ತು. ಮೋದಿ ಕೂಡಾ ಮುಂದೆ ಹಾಗೆಯೇ ಮಾಡಲಿದ್ದಾರೆಯೇ?.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸರ್ದಾರ್ ಪಟೇಲ್ ಕ್ರಿಕೆಟ್ ಸ್ಟೇಡಿಯಂಗೆ ನರೇಂದ್ರ ಮೋದಿ ಎಂದು ಪುನರ್‌ನಾಮಕರಣಗೊಳಿಸಿರುವುದು ಕುತೂಹಲಕರವಾಗಿದೆ, ಅಲ್ಲದೆ ಸ್ವಲ್ಪ ಮಟ್ಟಿಗೆ ಅಚ್ಚರಿಕರವೂ ಆಗಿದೆ. 2022 ಅಥವಾ 2023ರಲ್ಲಿ ಮೋದಿಗೆ ಭಾರತರತ್ನ ಪ್ರಶಸ್ತಿಯನ್ನು ಪ್ರದಾನ ಮಾಡುವುದಕ್ಕೆ ಇದು ಪೂರ್ವಪೀಠಿಕೆಯಾಗಿರಬಹುದೇ ಎಂಬ ಪ್ರಶ್ನೆಯು ಈಗ ಕಾಡುತ್ತಿದೆ.

ಆದರೆ ಎರಡು ಕಾರಣಗಳಿಗಾಗಿ ಇದು ಅಸಂಭವನೀಯವೆಂದು ನಾನು ಭಾವಿಸುತ್ತೇನೆ. ಮೊದಲನೆಯದಾಗಿ ಮೋದಿಯವರು ತನ್ನ ಪೂರ್ವಾಧಿಕಾರಿಗಳಿಂದ ವ್ಯವಸ್ಥಿತವಾಗಿ ಅಂತರವನ್ನು ಕಾಯ್ದುಕೊಂಡಿದ್ದಾರೆ ಮತ್ತು ಈ ವಿಷಯದಲ್ಲಿಯೂ ಅವರು ಹಾಗೆ ನಡೆದುಕೊಳ್ಳಲಿದ್ದಾರೆ. ಎರಡನೆಯದಾಗಿ ಅವರಿಗೆ ಇನ್ನೂ ದೊಡ್ಡದಾದ ಮಹತ್ವಾಕಾಂಕ್ಷೆಗಳಿವೆ. ನೆಹರೂ ಹಾಗೂ ಇಂದಿರಾ ಅವರು ತಮಗೆ ಗಣತಂತ್ರದ ಗೌರವವು ಪ್ರದಾನ ಮಾಡುವುದನ್ನು ತಾವೇ ಖುದ್ದಾಗಿ ಉತ್ತೇಜಿಸಿದ್ದರು. ಆದರೆ ಮೋದಿ ಅವರು ಸ್ಮಾರಕ ವಾಸ್ತುಶಿಲ್ಪ ರಚನೆಯಂತಹ ದುಬಾರಿಯಾದ ಪ್ರಕ್ರಿಯೆಯ ಮೂಲಕ ಭಾರತದ ರಾಜಧಾನಿಗೆ ಮರುರೂಪ ನೀಡುವ ಸಾಧ್ಯತೆಯಿದೆ.

2014ರ ಮೇ ತಿಂಗಳಲ್ಲಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಲೋಕಸಭೆಯಲ್ಲಿ ಭಾಷಣ ಮಾಡಿದ ನರೇಂದ್ರ ಮೋದಿಯವರು 1,200 ವರ್ಷಗಳ ಗುಲಾಮಗಿರಿಯಿಂದ ದೇಶವನ್ನು ಮುಕ್ತಗೊಳಿಸುವುದೇ ನನ್ನ ಗುರಿಯಾಗಿದೆ ಎಂದು ಹೇಳಿದ್ದರು. ಆ ಸಮಯದಲ್ಲಿ ಯುವ ಲೇಖಕರೊಬ್ಬರು ನನ್ನೊಂದಿಗೆ ಮಾತನಾಡುತ್ತಾ, ಈ ಹೇಳಿಕೆ ಹಾಗೂ ಇಡೀ ಭಾಷಣವು ಮೋದಿಯ ರಾಜಕೀಯ ಹಾಗೂ ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಗಾಢವಾಗಿ ಅನಾವರಣಗೊಳಿಸಿದೆ ಎಂದರು. ಭಾರತವು ದೀರ್ಘ ಸಮಯದಿಂದ ದಾಸ್ಯದಲ್ಲಿತ್ತು ಹಾಗೂ ವಿದೇಶಿಯರ ಆಡಳಿತದಲ್ಲಿತ್ತು. ಈಗ ಮೋದಿ ಅವರು ನಮಗೆ ಆತ್ಮಗೌರವ ಹಾಗೂ ಘನತೆಯನ್ನು ಮರಳಿ ನೀಡಲು ಆಗಮಿಸಿದ್ದಾರೆಂದು ಹಿಂದೂಗಳು ಭಾವಿಸಿದರು. ನನ್ನ ಸ್ನೇಹಿತ ಹೇಳಿದ ಹಾಗೆ, ಮೋದಿಯವರು ಈ ವಿಷಯವನ್ನು ಪ್ರಸ್ತಾವಿಸುವ ಮೂಲಕ ದೇಶವನ್ನು ಯಶಸ್ವಿಯಾಗಿ ಒಗ್ಗಟ್ಟನ್ನು ಮೂಡಿಸಿದ ಪ್ರಥಮ ಹಿಂದೂ ಆಡಳಿತಗಾರನೆಂದು ಅವರು ಸೂಚಿಸಿದ್ದರು. ಶಿವಾಜಿ ಹಾಗೂ ಪೃಥ್ವಿರಾಜ ಅವರ ಶೌರ್ಯ ಹಾಗೂ ಅವರ ಕುರಿತಾದ ಜಾನಪದ ಕಥೆಗಳೆಲ್ಲ ಇದ್ದರೂ, ಅವರು ಇಡೀ ಭಾರತ ಉಪಖಂಡದಲ್ಲಿ ಒಂದು ಸಣ್ಣ ಪ್ರದೇಶದ ಮೇಲಷ್ಟೇ ತಮ್ಮ ನಿಯಂತ್ರಣವನ್ನು ಹೊಂದಿದ್ದರು. ಪ್ರಾದೇಶಿಕ ವ್ಯಾಪ್ತಿ ಅಥವಾ ರಾಜಕೀಯ ವಿಷಯಗಳಲ್ಲಿ ಅವರು ಅಶೋಕ (ಬೌದ್ಧ ಮತಾನುಯಾಯಿ) ಅಥವಾ ಮುಸ್ಲಿಂ ಮೊಘಲರು ಅಥವಾ ಕ್ರೈಸ್ತ ಬ್ರಿಟಿಷರಷ್ಟು ಯಶಸ್ವಿಯಾಗಿರಲಿಲ್ಲ. ಶಿವಾಜಿ ಹಾಗೂ ಪೃಥ್ವಿರಾಜ ಯಾವುದನ್ನು ಮಾಡಲು ವಿಫಲರಾದರೋ ಅದನ್ನು ಪೂರ್ಣಗೊಳಿಸುವ ಮೂಲಕ ಹಿಂದೂಗಳನ್ನು ಉದ್ಧರಿಸಲಿದ್ದಾರೆ ಎಂಬ ಭಾವನೆಯನ್ನು ಮೂಡಿಸಲಾಗುತ್ತಿದೆ.

ತಮ್ಮ ಮಹತ್ವವನ್ನು ಪ್ರಕಟಿಸಲು, ತಮ್ಮ ಶ್ರೇಷ್ಠತೆಯನ್ನು ಘೋಷಿಸಲು ಹಾಗೂ ತಮ್ಮ ಸಾರ್ವಭೌಮತ್ವವನ್ನು ಪ್ರತಿಪಾದಿಸಲು ದೊರೆಗಳು ತಮಗಾಗಿ ಹೊಸ ರಾಜಧಾನಿಗಳನ್ನು ನಿರ್ಮಿಸುತ್ತಾರೆ. ಗರ್ವಾಲ್‌ನಲ್ಲಿ ನರೇಂದ್ರ ಶಾ, ಹೊಸ ರಾಜಧಾನಿಯನ್ನು ನಿರ್ಮಿಸಲು ನಿರ್ಧರಿಸುವ ಮೂಲಕ ಅವರು ಭಾರತ ಹಾಗೂ ವಿದೇಶದ ವಿವಿಧ ರಾಜರು ಇರಿಸಿದ್ದಂತಹ ಹೆಜ್ಜೆಗಳನ್ನೇ ಅನುಸರಿಸಿದ್ದಾರೆ. ನರೇಂದ್ರ ನಗರವನ್ನು ನಿರ್ಮಿಸಲು ನಿರ್ಧರಿಸಿದ ಕೆಲವೇ ವರ್ಷಗಳ ಮೊದಲು ಆತ ನಿಷ್ಠೆಯನ್ನು ಹೊಂದಿದ್ದ ಇಂಗ್ಲೆಂಡ್‌ನ ದೊರೆ ಐದನೇ ಜಾರ್ಜ್ ಅವರು ಬ್ರಿಟಿಷ್ ಆಳ್ವಿಕೆಯ ಭಾರತಕ್ಕೆ ನೂತನ ರಾಜಧಾನಿಯ ಅಗತ್ಯವಿದೆ ಎಂದು ಘೋಷಿಸಿದ್ದರು. ಕೋಲ್ಕತಾವನ್ನು ರಾಜಧಾನಿಯಾಗಿ ಮುಂದುವರಿಸಲು ಸಾಧ್ಯವಿಲ್ಲವೆಂದು ಅವರು ಹೇಳಿದ್ದರು. ಹೀಗಾಗಿ ಭಾರತ ಉಪಖಂಡದ ಸಾಮ್ರಾಜ್ಯಶಾಹಿ ಶಕ್ತಿಯು ಉತ್ತರಕ್ಕೆ ವರ್ಗಾವಣೆಗೊಂಡಿತ್ತು. ಪುರಾತನ ನಗರವಾದ ದಿಲ್ಲಿಯ ದಕ್ಷಿಣ ಭಾಗದ ಹಳ್ಳಿಗಳ ಜಮೀನನ್ನು ಸ್ವಾಧೀನಪಡಿಸಿದ ಬ್ರಿಟಿಷ್ ಸಾಮ್ರಾಜ್ಯಶಾಹಿಗಳು ತಮ್ಮ ಅಹಮಿಕೆಗೆ ತಕ್ಕುದಾದ ಬೃಹತ್ ನಗರವನ್ನು ನಿರ್ಮಿಸಿದರು.

ಬ್ರಿಟಿಷ್ ಸಾಮ್ರಾಜ್ಯವು ರಾಜಧಾನಿ ದಿಲ್ಲಿಗೆ ವರ್ಗಾವಣೆಗೊಳ್ಳುವ ಮೂರು ಶತಮಾನಗಳಷ್ಟು ಮೊದಲು ಮೊಘಲ್ ಚಕ್ರಾಧಿಪತ್ಯ ಕೂಡಾ ಹಾಗೆಯೇ ಮಾಡಿತ್ತು. ಬಾಬರ್‌ನಿಂದ ಆರಂಭಗೊಂಡ ಮೊಘಲ್ ವಂಶದ ಐದನೇ ದೊರೆಯಾದ ಶಹಜಹಾನ್ ತನ್ನ ಸಾಮ್ರಾಜ್ಯದ ರಾಜಧಾನಿಯನ್ನು ಆಗ್ರಾದಿಂದ ದಿಲ್ಲಿಗೆ ವರ್ಗಾಯಿಸಲು ಬಯಸಿದ. ಸರಣಿ ಸರಣಿಯಾಗಿ ವೈಭವೋಪೇತ ಕಟ್ಟಡಗಳ ನಿರ್ಮಾಣದ ಮೇಲ್ವಿಚಾರಣೆಯನ್ನು ಆತ ನಡೆಸಿದ. ಆ ಕಟ್ಟಡಗಳ ಪೈಕಿ ಹಲವು ಈಗಲೂ ಉಳಿದುಕೊಂಡಿವೆ. ಹೊಸ ರಾಜಧಾನಿಯ ನಿರ್ಮಾಣಕಾರ್ಯವು ಅಂದುಕೊಂಡಂತೆ ನಡೆದುದನ್ನು ನೋಡಿ ಸಂತೃಪ್ತನಾದ ಆತ ನಗರಕ್ಕೆ ತನ್ನದೇ ಹೆಸರನ್ನು ಇರಿಸಿದ. ಅದಕ್ಕೆ ಶಹಜಹಾನಾಬಾದ್ ಎಂದು ನಾಮಕರಣಗೊಳಿಸಲಾಯಿತು. ‘ದಿ ಕಿಂಗ್ ಆ್ಯಂಡ್ ದಿ ಪೀಪಲ್’ ಕೃತಿಯಲ್ಲಿ ಲೇಖಕ ಅಭಿಷೇಕ್ ಕಾಯ್ಕರ್ ಅವರು, 17 ಹಾಗೂ 18ನೇ ಶತಮಾನದ ದಿಲ್ಲಿಯ ಇತಿಹಾಸವನ್ನು ಅತ್ಯಂತ ಚೆನ್ನಾಗಿ ಬರೆದಿದ್ದು, ಮೊಘಲ್ ಚಕ್ರವರ್ತಿಗಳ ಪೈಕಿ ಶಹಜಹಾನ್ ವಾಸ್ತುಶಿಲ್ಪದ ವಿಷಯದಲ್ಲಿ ನಿರರ್ಗಳವಾದ ಪಾಂಡಿತ್ಯವನ್ನು ಹೊಂದಿದ್ದನೆಂದು ಉಲ್ಲೇಖಿಸಿದ್ದಾರೆ. ಶಿಲ್ಪಕಲಾಕೃತಿಗಳಲ್ಲಿ ತಾನೊಬ್ಬ ಧರೆಗಿಳಿದ ಅನ್ಯಲೋಕದ ದೇವದೂತನೆಂಬಂತೆ ಜನಸಾಮಾನ್ಯರ ಮುಂದೆ ಬಿಂಬಿಸುವ ಉದ್ದೇಶದಿಂದ ತನ್ನ ಅರಮನೆಯ ಕಿಟಕಿಗಳ ಸೂರಿನ ಕೆಳಗೆ ತಾನು ಹಾರುವ ಭಂಗಿಯಲ್ಲಿರುವ ಚಿತ್ರಶಿಲ್ಪಗಳನ್ನು ರಚಿಸುವುದಕ್ಕೆ ವಿಶೇಷವಾದ ಕಾಳಜಿಯನ್ನು ವಹಿಸಿದ್ದ.

ಶಹಜಹಾನ್‌ನಂತೆ ನರೇಂದ್ರ ಮೋದಿಯವರು ಕೂಡಾ ತನ್ನ ಉಡುಪು ಹಾಗೂ ಹಾವಭಾವದ ಬಗ್ಗೆ ಅಸಾಧಾರಣವಾದ ಗಮನವನ್ನು ವಹಿಸುತ್ತಾರೆ. ಅವರ ಉಡುಗೆಗಳು, ಅವರ ಭಂಗಿ, ಛಾಯಾಚಿತ್ರಗಳನ್ನು ತೆಗೆಸಿಕೊಳ್ಳುವ ಸ್ಥಳ ಇವೆಲ್ಲವನ್ನೂ ಅತ್ಯಂತ ಕರಾರುವಾಕ್ಕಾಗಿ, ಯೋಜನಾಬದ್ಧವಾಗಿ ಮಾಡಿಸುತ್ತಿದ್ದಾರೆ. ತಂತ್ರಜ್ಞಾನದ ವಿಷಯದಲ್ಲಿ ಅವರು ಶಾಹಜಹಾನ್‌ಗಿಂತಲೂ ಅದೃಷ್ಟವಂತರಾಗಿದ್ದಾರೆ. ಮಧ್ಯಕಾಲೀನ ಯುಗದ ಚಕ್ರವರ್ತಿಯಾದ ಶಹಜಹಾನ್‌ಗೆ ಜನರ ಮೇಲೆ ನಾಟಕೀಯ ಪರಿಣಾಮವನ್ನು ಬೀರಬೇಕಾದರೆ ಆತ ಖುದ್ದಾಗಿ ಹಾಜರಾಗಬೇಕಾಗುತ್ತದೆ. ಆದರೆ ಆಧುನಿಕ ಯುಗದಲ್ಲಿ ಸರ್ವಾಧಿಕಾರಿಯು ರೇಡಿಯೊ, ಟೆಲಿವಿಶನ್, ದಿನಪತ್ರಿಕೆಗಳು, ವೆಬ್‌ಸೈಟ್‌ಗಳು, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಮ್ ಇತ್ಯಾದಿಗಳ ಮೂಲಕ ತಾನು ಬಯಸಿದ ವರ್ಚಸ್ಸಿನೊಂದಿಗೆ ಯಾವುದೇ ಭಾರತೀಯನ ಮುಂದೆ ನೇರಪ್ರಸಾರದೊಂದಿಗೆ ಹಾಜರಾಗಲು ಸಾಧ್ಯವಾಗುತ್ತಿದೆ.

ಪ್ರಧಾನಿಯಾಗಿ ನರೇಂದ್ರ ಮೋದಿಯವರ ನಡವಳಿಕೆಯು ಪ್ರಭಾವಶಾಲಿಯಾಗಿದೆ. ತನ್ನ ರಾಜಕೀಯ ಸಹದ್ಯೋಗಿಗಳನ್ನು ಹಾಗೂ ರಾಜಕೀಯ ಪ್ರತಿಸ್ಪರ್ಧಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿಯಲ್ಲಿಯೂ ಅದು ವ್ಯಕ್ತವಾಗುತ್ತಿದೆ. ಸಾರ್ವಜನಿಕವಾಗಿ ಅವರು ತನ್ನನ್ನು ತೋರ್ಪಡಿಸಿಕೊಳ್ಳುತ್ತಿರುವ ರೀತಿ, ಸಂಸತ್‌ನಲ್ಲಿ ಚರ್ಚೆ ನಡೆಸುವುದಕ್ಕೆ ಅವರಿಗಿರುವ ಅನಾದರ ಹಾಗೂ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ನಡೆಸಲು ಒಪ್ಪದೆ ಇರುವುದು (ತಿರಸ್ಕಾರ ಅಥವಾ ಹೇಡಿತನ ಕಾರಣವೇ) ಇದಕ್ಕೆ ಸಾಕ್ಷಿಯಾಗಿವೆ. ಹಿಂದಿನ ಕಾಲದ ಚಕ್ರವರ್ತಿಗಳ ಹಾಗೆ ಮೋದಿಯವರ ಪ್ರಕಟನೆ ಕೂಡಾ ಏಕಮುಖವಾಗಿದೆ. 21ನೇ ಶತಮಾನದ ‘ಮನ್ ಕೀ ಬಾತ್’ ಕಾರ್ಯಕ್ರಮವು ಮೊಘಲ್ ಆಡಳಿತದ ಫರ್ಮಾನ್‌ಗೆ ಸಮಾನವಾಗಿದೆ. ಅವರಂತೆ, ಮೋದಿ ಕೂಡಾ ರಾಜಕೀಯದ ಪ್ರತಿಯೊಂದು ಶಕ್ತಿ ಕೇಂದ್ರಕ್ಕೂ ಮರುರೂಪವನ್ನು ನೀಡುವ ಮೂಲಕ ತನ್ನನ್ನು ಅಜರಾಮರಗೊಳಿಸಲು ಯತ್ನಿಸುತ್ತಿದ್ದಾರೆ. ಕೇವಲ ಅಹ್ಮದಾಬಾದ್‌ನ ಕ್ರೀಡಾಂಗಣಕ್ಕೆ ಹೆಸರಿಡುವುದರಿಂದಾಗಲಿ ಅಥವಾ ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವುದರಿಂದ ಇದು ಸಾಧ್ಯವಾಗಲಾರದು ಎಂಬುದು ಅವರಿಗೆ ಅರಿವಿದೆ.

ಬ್ರಿಟಿಷ್ ಹಾಗೂ ಮೊಘಲ್ ಆಡಳಿತದ ವಿರುದ್ಧ ಎಷ್ಟೇ ದೂಷಣೆಗಳನ್ನು ಮಾಡಿದರೂ ನರೇಂದ್ರ ಮೋದಿಯವರು ತನ್ನನ್ನೊಂದು ಶಾಶ್ವತವಾದ ಪರಂಪರೆಯಾಗಿ ರೂಪಿಸಲು ಹೊರಟಿರುವುದು ದಿಲ್ಲಿಗಾಗಿ ಬ್ರಿಟಿಷರು ಮತ್ತು ಮೊಘಲರು ಏನೆಲ್ಲಾ ಮಾಡಿರುವುದರ ಒರಟು ಅನುಕರಣೆಯಾಗಿದೆ.

ಹಿಂದಿನ ಚಕ್ರವರ್ತಿಗಳು ನಿರ್ಮಿಸಿದ ಕಟ್ಟಡಗಳನ್ನು ಅಪಹಾಸ್ಯ ಮಾಡುವಂತಹ ರೀತಿಯಲ್ಲಿ ತಾನು ನಿರ್ಮಿಸಿದ ಬೃಹತ್ ಕಟ್ಟಡಗಳನ್ನು 300 ಅಥವಾ 400 ವರ್ಷಗಳ ಆನಂತರ ‘ಹಿಂದುತ್ವ ರಾಷ್ಟ್ರ’ದ ಭಾವೀ ಪ್ರಜೆಗಳು ಹೆಮ್ಮೆಯಿಂದ ವೀಕ್ಷಿಸುವರು ಎಂಬುದು ಅವರ ಆಶಾವಾದವಾಗಿರಬಹುದು. ಆದರೆ ಈ ಭರವಸೆಯು ಸಾಕಾರಗೊಳ್ಳುವ ಸಾಧ್ಯತೆ ತುಂಬಾ ಕಡಿಮೆ. ಆ ಕಟ್ಟಡಗಳ ನಿರ್ಮಾಣಕ್ಕೆ ಆಯ್ಕೆ ಮಾಡಿದ ವಾಸ್ತುಶಿಲ್ಪಿ ಹಾಗೂ ಆತನ ಹಿಂದಿನ ನಿರ್ಮಾಣಗಳ ಬಗ್ಗೆ ಅರಿವನ್ನು ಹೊಂದಿರುವವರು ದಿಲ್ಲಿಯ ಲಾಲ್ ಖಿಲಾ ಅಥವಾ ಜಾಮಾ ಮಸೀದಿ, ಉತ್ತರ ಅಥವಾ ದಕ್ಷಿಣ ಬ್ಲಾಕ್ ಕಟ್ಟಡಗಳ ಸೌಂದರ್ಯವನ್ನು ಸರಿಗಟ್ಟುವಂತಹ ಒಂದೇ ಒಂದು ಕಟ್ಟಡವನ್ನು ನಿರ್ಮಿಸಲು ಸಾಧ್ಯವಾಗಲಾರದು.

ಕೊನೆ ಚಿಂತನೆ: ಹೊಸದಿಲ್ಲಿಗೆ ಮರುಸ್ವರೂಪ ನೀಡುವ ಯೋಜನೆಗೆ ಪ್ರಸಕ್ತ ‘ಸೆಂಟ್ರಲ್ ವಿಸ್ತಾ ಪ್ರಾಜೆಕ್ಟ್’ ಎಂದು ಕರೆಯಲಾಗುತ್ತಿದೆ. ಒಮ್ಮೆ ನೂತನ ಸ್ಮಾರಕಕಟ್ಟಡಗಳು ನಿರ್ಮಾಣಗೊಂಡರೆ, ಸ್ಥಳಗಳಿಗೆ ವಸಾಹತುಶಾಹಿಗಳು ಇರಿಸಿರುವ ಹೆಸರನ್ನು ತೆರವುಗೊಳಿಸಿ ಅವುಗಳಿಗೆ ಆತ್ಮನಿರ್ಭರ ಹೆಸರುಗಳನ್ನಿಡಲು ದಾರಿ ಮಾಡಿಕೊಡಬೇಕಾಗಿದೆ. ನರೇಂದ್ರ ನಗರ ಎಂಬ ಹೆಸರನ್ನು ಒಂದು ಶತಮಾನದ ಹಿಂದೆ ಆಳಿದ್ದ ವಿಫಲ ದೊರೆಯೊಬ್ಬ ತನ್ನ ಹೊಸ ರಾಜಧಾನಿಗೆ ಇಟ್ಟಿದ್ದನು. ಪ್ರಾಯಶಃ ‘ನರೇಂದ್ರ ಮಹಾನಗರ’ ಅಥವಾ ‘ಮೋದಿಯಾ ಬಾದ್’ ಎಂದು ಹೆಸರಿಡಬಹುದೇನೋ?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top