ಉಲ್ಬಣಿಸುತ್ತಿದೆ ಕೋಮುವಾದೀಕರಣ | Vartha Bharati- ವಾರ್ತಾ ಭಾರತಿ

--

ಉಲ್ಬಣಿಸುತ್ತಿದೆ ಕೋಮುವಾದೀಕರಣ

ಶಾಂತಿಯುತ ಭಿನ್ನಮತವನ್ನು ಹತ್ತಿಕ್ಕಲು ಮೋದಿ-ಶಾ ಆಡಳಿತವು ನಿರಂಕುಶ ಹಾಗೂ ಆಡಳಿತ ಶಕ್ತಿಯ ಅತಿರೇಕದ ಬಳಕೆ ಮಾಡುತ್ತಿದೆ. ಪೊಲೀಸರು ಹಾಗೂ ಗುಪ್ತಚರ ಸಂಸ್ಥೆಗಳು ಯಾವುದೇ ಗಮನಕ್ಕೆ ಬಾರದಂತೆ ವ್ಯಕ್ತಿಗಳನ್ನು ಬಂಧಿಸಿ ಜೈಲಿಗೆ ಅಟ್ಟುತ್ತದೆ. ಒಮ್ಮೆ ಅವರನ್ನು ಜೈಲುಕಂಬಿಗಳ ಹಿಂದೆ ಸುರಕ್ಷಿತವಾಗಿ ಇರಿಸಿದ ಆನಂತರ ಅವರ ವಿರುದ್ಧ ‘ಪುರಾವೆ’ಗಳನ್ನು ಜೋಡಿಸುವ ಕೆಲಸ ಶುರುಹಚ್ಚಿಕೊಳ್ಳುತ್ತದೆ. ಕಳೆದ ವರ್ಷ ಫೆಬ್ರವರಿ ಗಲಭೆಗಳ ನೆಪದಲ್ಲಿ ವಿದ್ಯಾರ್ಥಿ ನಾಯಕರು ಹಾಗೂ ಮಹಿಳಾವಾದಿ ಹೋರಾಟಗಾರರ ಮೇಲೆ ಪೊಲೀಸರು ತಮ್ಮ ಕರಾಳಹಸ್ತವನ್ನು ಚಾಚಿದ್ದರು. ಹಿಂಸಾಚಾರಕ್ಕೆ ಬಹಿರಂಗವಾಗಿ ಕರೆ ನೀಡಿದ್ದ ಉನ್ನತ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಕೂಡಾ ಅವರು ನಿರಾಕರಿಸುತ್ತಿದ್ದಾರೆ.


2002ರ ಗುಜರಾತ್ ಗಲಭೆ ಕುರಿತಾದ ನೂತನ ಪುಸ್ತಕ "Under Cover: My journey into the Darkness of Hindutva' (ಮಾರುವೇಷ: ಹಿಂದುತ್ವದ ಕಗ್ಗತ್ತಲೆಯೆಡೆಗೆ ನನ್ನ ಪಯಣ) ಅನ್ನು ನಾನು ಓದುತ್ತಿದ್ದೇನೆ. ಗುಜರಾತ್ ಗಲಭೆಯ ಆನಂತರದ ವಿದ್ಯಮಾನಗಳ ಅದರಲ್ಲೂ ಈ ಹಿಂಸಾಚಾರದ ಸೂತ್ರಧಾರಿಗಳಿಗೆ ಶಿಕ್ಷೆಯಾಗದೆ ಹೋದಂತಹ ಪ್ರಕ್ರಿಯೆ ಕುರಿತು ಕೆಲವೊಂದು ಉತ್ಕೃಷ್ಟವಾದ ವರದಿಗಳನ್ನು ಮಾಡಿರುವ ಆಶಿಷ್ ಖೇತನ್ ಈ ಪುಸ್ತಕವನ್ನು ಬರೆದಿದ್ದಾರೆ.

 ‘ಅಂಡರ್ ಕವರ್’ ಕೃತಿಯು ಎರಡು ದಶಕಗಳ ಹಿಂದೆ ಸಂಭವಿಸಿದಂತಹ ರಕ್ತಪಾತದ ಬಗ್ಗೆ ತಿಳಿಯಲು ಬಯಸುವ ವಿದ್ವಾಂಸರಿಗೆ ಒಂದು ಮಹತ್ವದ ಸಂಪನ್ಮೂಲವಾಗಲಿದೆ. ಆದಾಗ್ಯೂ, ಇದು ನೇರವಾಗಿ ವರ್ತಮಾನದ ಜೊತೆ ಮಾತನಾಡುತ್ತದೆ, ಗಲಭೆಯ ವೇಳೆ ಆ ರಾಜ್ಯದಲ್ಲಿ ಆಳ್ವಿಕೆಯಲ್ಲಿದ್ದ ಪಕ್ಷವೇ ಈಗ ಕೇಂದ್ರದಲ್ಲಿಯೂ ಅಧಿಕಾರದಲ್ಲಿದೆ. ಖೇತನ್ ಮುಂದುವರಿದು ಹೀಗೆ ಬರೆಯುತ್ತಾರೆ. ‘‘ಮೋದಿಯ ಗುಜರಾತ್‌ನಲ್ಲಿ ಒಂದು ವೇಳೆ ಓರ್ವ ಅಧಿಕಾರಿ ಅಥವಾ ಪೊಲೀಸ್ ಅಧಿಕಾರಿ ತನ್ನ ಹುದ್ದೆಯಲ್ಲಿ ಮೇಲೇರಬೇಕಾದರೆ, ಆತ ವ್ಯವಸ್ಥೆಯ ಕಪಟತನದ ಜೊತೆ ಸಂಪೂರ್ಣವಾಗಿ ಒಳಗೊಳ್ಳಬೇಕು’’. ಕೇವಲ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಮಟ್ಟಿಗೆ ಮಾತ್ರವಲ್ಲ ನರೇಂದ್ರ ಮೋದಿ ಪ್ರಧಾನಿಯಾಗಿ ಹಾಗೂ ಅಮಿತ್ ಶಾ ಅವರು ಗೃಹ ಸಚಿವರಾಗಿರುವ ಕೇಂದ್ರ ಸರಕಾರದ ವಿಷಯದಲ್ಲೂ ಇದು ನಿಜವೆನಿಸಿದೆ. 2014ನೇ ಇಸವಿಗಿಂತ ಮೊದಲು ಭಾರತ ಸರಕಾರವು ಬಿಡುಗಡೆಗೊಳಿಸಿದ ಅಧಿಕೃತ ಆರ್ಥಿಕ ಅಂಕಿಅಂಶಗಳು ತಮ್ಮ ವಿಶ್ವಾಸಾರ್ಹತೆಗಾಗಿ ಜಗತ್ತಿನಾದ್ಯಂತ ಮೆಚ್ಚುಗೆಗೆ ಪಾತ್ರವಾಗಿವೆ. ಆದರೆ ವಿದ್ವಾಂಸರೀಗ ಅವುಗಳನ್ನು ನಂಬುವುದನ್ನು ಬಿಟ್ಟಿದ್ದಾರೆ. ಆರ್ಥಿಕತೆಯಿರಲಿ ಅಥವಾ ಆರೋಗ್ಯ, ಶಿಕ್ಷಣ ಅಥವಾ ಚುನಾವಣಾ ನಿಧಿಸಂಗ್ರಹವಿರಲಿ ಸತ್ಯ ಹಾಗೂ ಪಾರದರ್ಶಕತೆಯ ಬದಲಿಗೆ ವಂಚನೆ ಹಾಗೂ ಮರೆಮಾಚುವಿಕೆಯು ಈ ಸರಕಾರದ ನಡವಳಿಕೆಯಾಗಿಬಿಟ್ಟಿದೆ.

ಗುಜರಾತ್ ಮಾದರಿಯನ್ನು ದೇಶಾದ್ಯಂತ ಅಳವಡಿಸಿಕೊಂಡಿರುವುದರಿಂದ ಆಗಿರುವಂತಹ ಇನ್ನೊಂದು ಪರಿಣಾಮವೆಂದರೆ ಚರ್ಚೆ ಹಾಗೂ ಭಿನ್ನಮತಕ್ಕೆ ಅವಕಾಶ ಕುಗ್ಗಿರುವುದು. ಖೇತನ್ ಅವರ ಬರಹವನ್ನೇ ಇಲ್ಲಿ ಮತ್ತೊಮ್ಮೆ ಉಲ್ಲೇಖಿಸುತ್ತೇನೆ. ‘‘ಗುಜರಾತ್‌ನಲ್ಲಿ ಸಾಣೆಹಾಕಿದ ಹಾಗೂ ನಿಯೋಜಿತ ಸಲಕರಣೆಗಳನ್ನೇ ಇದೀಗ ಭಿನ್ನಮತವನ್ನು ಬುಡಮೇಲುಗೊಳಿಸಲು, ಕಿರುಕುಳ ನೀಡಲು ಹಾಗೂ ರಾಕ್ಷಸೀಕರಿಸಲು ರಾಷ್ಟ್ರಮಟ್ಟದಲ್ಲಿ ಬಳಸಲಾಗುತ್ತಿದೆ. ಮೋದಿಯ ಟೀಕಾಕಾರರ ಚಾರಿತ್ರಹನನ ಮಾಡಲಾಗುತ್ತದೆ ಮತ್ತು ದೇಶಕ್ಕೆ ಬೆದರಿಕೆ ಹಾಗೂ ದೇಶವಿರೋಧಿಗಳೆಂದು ಹಣೆಪಟ್ಟಿ ಕಟ್ಟಲಾಗುತ್ತದೆ.

ಈ ಶಾಂತಿಯುತ ಭಿನ್ನಮತವನ್ನು ಹತ್ತಿಕ್ಕಲು ಮೋದಿ-ಶಾ ಆಡಳಿತವು ನಿರಂಕುಶ ಹಾಗೂ ಆಡಳಿತ ಶಕ್ತಿಯ ಅತಿರೇಕದ ಬಳಕೆ ಮಾಡುತ್ತಿದೆ. ಪೊಲೀಸರು ಹಾಗೂ ಗುಪ್ತಚರ ಸಂಸ್ಥೆಗಳು ಯಾವುದೇ ಗಮನಕ್ಕೆ ಬಾರದಂತೆ ವ್ಯಕ್ತಿಗಳನ್ನು ಬಂಧಿಸಿ ಜೈಲಿಗೆ ಅಟ್ಟುತ್ತದೆ. ಒಮ್ಮೆ ಅವರನ್ನು ಜೈಲುಕಂಬಿಗಳ ಹಿಂದೆ ಸುರಕ್ಷಿತವಾಗಿ ಇರಿಸಿದ ಆನಂತರ ಅವರ ವಿರುದ್ಧ ‘ಪುರಾವೆ’ಗಳನ್ನು ಜೋಡಿಸುವ ಕೆಲಸ ಶುರುಹಚ್ಚಿಕೊಳ್ಳುತ್ತದೆ. ಕಳೆದ ವರ್ಷ ಫೆಬ್ರವರಿ ಗಲಭೆಗಳ ನೆಪದಲ್ಲಿ ವಿದ್ಯಾರ್ಥಿ ನಾಯಕರು ಹಾಗೂ ಮಹಿಳಾವಾದಿ ಹೋರಾಟಗಾರರ ಮೇಲೆ ಪೊಲೀಸರು ತಮ್ಮ ಕರಾಳಹಸ್ತವನ್ನು ಚಾಚಿದ್ದರು. ಹಿಂಸಾಚಾರಕ್ಕೆ ಬಹಿರಂಗವಾಗಿ ಕರೆ ನೀಡಿದ್ದ ಉನ್ನತ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಕೂಡಾ ಅವರು ನಿರಾಕರಿಸುತ್ತಿದ್ದಾರೆ. ಈಶಾನ್ಯ ದಿಲ್ಲಿ ಗಲಭೆ ಪ್ರಕರಣಗಳಲ್ಲಿ ಪೊಲೀಸರ ಪಕ್ಷಪಾತದ ವರ್ತನೆಯ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿ ಜೂಲಿಯೊ ರೆಬೈರೋ ಹೀಗೆ ಬರೆಯುತ್ತಾರೆ. ‘‘ದಿಲ್ಲಿ ಪೊಲೀಸರ ಅನ್ಯಾಯದ ನಿಲುವು ಈ ವೃದ್ಧ ಪೊಲೀಸ್‌ನ ಆತ್ಮಸಾಕ್ಷಿಯನ್ನು ರೇಗಿಸುತ್ತಿದೆ’’ಎಂದವರು ಲೇಖನವೊಂದರಲ್ಲಿ ಹೇಳುತ್ತಾರೆ.

 ನ್ಯಾಯಾಲಯಗಳು ಮುಚ್ಚಲ್ಪಟ್ಟಿರುವ ಹಾಗೂ ನ್ಯಾಯವಾದಿಗಳು ಲಭ್ಯವಾಗದೆ ಇರುವಂತಹ ವಾರಾಂತ್ಯದಲ್ಲಿ ಬಂಧನಗಳನ್ನು ಹೆಚ್ಚಾಗಿ ನಡೆಸುವುದರಲ್ಲಿಯೇ ಸರಕಾರದ ದುರುದ್ದೇಶ ವ್ಯಕ್ತವಾಗುತ್ತದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)ಯನ್ನು ಅನಿಯಮಿತವಾಗಿ ಬಳಸಿಕೊಳ್ಳುವುದರಲ್ಲಿಯೂ ಸರಕಾರದ ದುರುದ್ದೇಶ ಅಭಿವ್ಯಕ್ತಗೊಳ್ಳುತ್ತದೆ. ಈ ಅಸಾಧಾರಣವಾದ ಶಾಸನದ ತುಣುಕನ್ನು ಬಳಸಿಕೊಳ್ಳುತ್ತಿರುವುದು ಸರಕಾರಿ ಪ್ರಾಯೋಜಿತ ಮಾನವಹಕ್ಕುಗಳ ಉಲ್ಲಂಘನೆಗೆ ನೀಡಲಾದ ಶಾಸನಾತ್ಮಕ ಪೂರ್ಣಾಧಿಕಾರವಲ್ಲದೆ ಮತ್ತೇನೂ ಅಲ್ಲ.

ಕೇಂದ್ರ ಹಾಗೂ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಪೊಲೀಸರ ಪಾಲುದಾರಿಕೆಯು, ಪೌರರನ್ನು ಅವರ ರಾಜಕೀಯ ನಿಷ್ಠೆಗೆ ಅನುಗುಣವಾಗಿ ವಿಭಿನ್ನವಾಗಿ ನಡೆಸಿಕೊಳ್ಳುವುದರಲ್ಲಿ ಕಂಡುಬರುತ್ತದೆ. ಅಹಿಂಸಾತ್ಮಕವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಬೆಂಬಲಿಸಿ ಟ್ವೀಟ್ ಮಾಡಿದ ಪರಿಸರ ಹೋರಾಟಗಾರ್ತಿಯೊಬ್ಬರನ್ನು ದೇಶದ್ರೋಹದ ಆರೋಪದಲ್ಲಿ ಜೈಲಿಗೆ ಕಳುಹಿಸಲಾಯಿತು. ಭಿನ್ನಮತ ವ್ಯಕ್ತಪಡಿಸುವವರನ್ನು ಗುಂಡಿಕ್ಕಬೇಕೆಂದು ಕರೆ ನೀಡಿದ ರಾಜಕಾರಣಿಯೊಬ್ಬನ ಸಚಿವ ಸ್ಥಾನ ಇನ್ನೂ ಉಳಿದುಕೊಂಡಿದೆ. ನಗರ, ಪಟ್ಟಣಗಳಲ್ಲಿ ರೌಡಿ ಯುವಕರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆರಳುತ್ತಾ, ನಾಗರಿಕರನ್ನು ಅವರ ಸ್ವಂತದ್ದಲ್ಲದ ಉದ್ದೇಶಕ್ಕಾಗಿ ಹಣವನ್ನು ದೇಣಿಗೆ ನೀಡುವಂತೆ ಆಗ್ರಹಿಸುತ್ತಿರುವುದನ್ನು ಪೊಲೀಸರು ಅಸಹಾಯಕರಾಗಿ ನೋಡುತ್ತಿದ್ದಾರೆ. ಬಿಜೆಪಿ ಬೆಂಬಲವಾಗಿ ನಡೆಯುತ್ತಿರುವ ಅನೈತಿಕ ಪೊಲೀಸ್‌ಗಿರಿಗೆ ಆಡಳಿತದಿಂದ ಉತ್ತೇಜನ ದೊರೆಯುತ್ತದೆ. ಸ್ವತಂತ್ರವಾದ ಧ್ವನಿಗಳ ಶಾಂತಿಯುತವಾದ ಅಭಿವ್ಯಕ್ತಿಗೂ ಕೂಡಾ ಜೈಲೇ ಗತಿಯಾಗುತ್ತದೆ.

ಅಧಿಕಾರದಲ್ಲಿರುವ ರಾಜಕಾರಣಿಗಳು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಆದೇಶಗಳನ್ನು ಪಡೆದುಕೊಳ್ಳುವುದು ಭಾರತದಲ್ಲಿ ತೀರಾ ಹಳೆಯ ವಿದ್ಯಮಾನವಾಗಿದೆ. ತೀರಾ ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಆಗಿರುವಂತೆ ಬಿಜೆಪಿ ಆಡಳಿತದಲ್ಲಿಲ್ಲದ ರಾಜ್ಯಗಳಲ್ಲಿಯೂ ಈ ಪ್ರವೃತ್ತಿ ಕಂಡುಬರುತ್ತದೆ. ಮೋದಿ-ಶಾ ಆಳ್ವಿಕೆಯಲ್ಲಿ ಪೊಲೀಸ್ ಪಡೆಯ ಕೋಮುವಾದೀಕರಣಗೊಂಡಿರುವುದು ಕೂಡಾ ಅಷ್ಟೇ ಕಳವಳಕಾರಿಯಾಗಿದೆ. ಇದು ಕೂಡಾ ಅಷ್ಟು ಹೊಸತೇನೂ ಅಲ್ಲ. 1980ರ ದಶಕದಿಂದಲೂ ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ಪೊಲೀಸರು ಅಲ್ಪಸಂಖ್ಯಾತ ಸಮುದಾಯದ ದಾಂಧಲೆಕೋರರಿಗಿಂತ ಬಹುಸಂಖ್ಯಾತ ಸಮುದಾಯದ ದಾಂಧಲೆಕೋರರ ಬಗ್ಗೆ ಹೆಚ್ಚು ಮೃದುವಾಗಿ ವರ್ತಿಸುತ್ತಾರೆ. ಇದರೊಂದಿಗೆ ಬಹುಸಂಖ್ಯಾತ ಪರ ಪಕ್ಷಪಾತವು ಹೆಚ್ಚು ನಗ್ನವಾಗಿ ಮತ್ತು ಸ್ಪಷ್ಟವಾಗಿ ಗೋಚರಿಸುತ್ತದೆ.

ಜೂಲಿಯೊ ರೆಬೈರೋ ಅವರಿಗೆ ಸರಿಸಾಟಿಯಾದ ಪ್ರಾಮಾಣಿಕತೆ ಯುಳ್ಳ ನಿವೃತ್ತ ಪೊಲೀಸ್ ಅಧಿಕಾರಿ ವಿಭೂತಿ ನಾರಾಯಣ್ ರಾಯ್ ಅವರು ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಇತ್ತೀಚೆಗೆ ಮಧ್ಯ ಪ್ರದೇಶದಲ್ಲಿ ಮುಸ್ಲಿಂ ಮನೆಗಳ ಮೇಲೆ ಹಿಂದುತ್ವವಾದಿ ಗುಂಪುಗಳು ನಡೆಸಿದ ದಾಳಿಗಳ ಬಗ್ಗೆ ಸರಣಿ ಲೇಖನಗಳನ್ನು ಬರೆದಿದ್ದರು. ಈ ದಾಳಿಗಳ ವೀಡಿಯೊದಲ್ಲಿ ಪೊಲೀಸ್ ಇನ್‌ಸ್ಪೆಪೆಕ್ಟರ್‌ರ ಅಸಾಮಾನ್ಯವಾದ ದೃಶ್ಯಕಂಡುಬಂದಿದೆ. ಇಬ್ಬರು ಹಿಂದುತ್ವವಾದಿಗಳು ಕೇಸರಿ ಧ್ವಜ ಹಾಗೂ ತ್ರಿಶೂಲವನ್ನು ಒಯ್ಯುತ್ತಿರುವಾಗ ಆತ ಲಜ್ಜೆಯಿಂದ ತಲೆಯನ್ನು ಕೆಳಗೆ ಬಗ್ಗಿಸಿರುವುದು ಕಂಡುಬಂದಿದೆ. ಆ ಇನ್‌ಸ್ಪೆಪೆಕ್ಟರ್‌ಗೆ ಮುಜುಗರವಾಗಿದೆ ಹಾಗೂ ನಾಚಿಕೆಯಾಗಿದೆ. ಯಾಕೆಂದರೆ ಆತ ಹಾಗೂ ಆತನ ಸಹೋದ್ಯೋಗಿಗಳು ಗೂಂಡಾಗಳು ಮನೆಗಳನ್ನು ಲೂಟಿಗೈಯುತ್ತಿರುವುದನ್ನು, ಅಸಹಾಯಕ ಪುರುಷರು ಹಾಗೂ ಮಹಿಳೆಯರನ್ನು ಥಳಿಸುತ್ತಿರುವುದನ್ನು ಹಾಗೂ ಧ್ವಜಗಳನ್ನು ಬೀಸುವುದನ್ನು ಬಲವಂತವಾಗಿ ನೋಡಲೇಬೇಕಾದಂತಹ ಪರಿಸ್ಥಿತಿಯುಂಟಾಗಿತ್ತು. ಇವೆಲ್ಲವನ್ನು ಕಂಡು ದೊಡ್ಡ ತುಕಡಿಯೊಂದಿಗೆ ಆಗಮಿಸಿದ್ದ ಪೊಲೀಸರ ಮುಖ ಪೇಲವವಾಗಿತ್ತು.

ರೆಬೈರೋ ಅವರಂತೆ ತನ್ನ ಖಾಕಿ ಸಮವಸ್ತ್ರವನ್ನು ಗೌರವಪೂರ್ವಕವಾಗಿ ಧರಿಸುತ್ತಿದ್ದ ರಾಯ್ ಅವರಿಗೆ ಈ ದೃಶ್ಯವನ್ನು ಕಂಡು ಆಘಾತವಾಗಿತ್ತು. ಪೊಲೀಸ್ ಅಧಿಕಾರಿಗಳು ತಮ್ಮ ವೃತ್ತಿಪರ ಭವಿಷ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಚಿಂತಿಸದೆ, ಹಿಂಸಾಚಾರ ಸಂಭವಿಸುವ ಮೊದಲೇ ಅದನ್ನು ತಡೆಗಟ್ಟಬೇಕೆಂದು ಅವರು ಲೇಖನದಲ್ಲಿ ಬರೆದಿದ್ದಾರೆ. ದುರಂತವೆಂದರೆ ಅಂತಹ ಧೈರ್ಯ ಹಾಗೂ ಸಾಮರ್ಥ್ಯವುಳ್ಳ ಕೆಲವೇ ಕೆಲವು ಪೊಲೀಸ್ ಅಧಿಕಾರಿಗಳು ಕಂಡುಬರುತ್ತಾರೆ. ‘‘ಮಧ್ಯಪ್ರದೇಶದಲ್ಲಿ ಅಲಿಖಿತವಾದ ನೂತನ ಪೊಲೀಸ್ ಕೈಪಿಡಿಯೊಂದು ರೂಪುಗೊಂಡಿದೆ. ಅದರಲ್ಲಿ ಪೊಲೀಸರು ಕಾನೂನುಭಂಜಕರ ವಿರುದ್ಧ ಪ್ರತಿರೋಧವನ್ನು ತೋರಬೇಕಾಗಿಲ್ಲ ಮತ್ತು ಸಂತ್ರಸ್ತರು ಸುರಕ್ಷತೆಗಾಗಿ ತಮ್ಮ ಮನೆಗಳನ್ನು ತೊರೆದುಹೋಗುವಂತೆ ಮಾಡುವ ಮೂಲಕ ಗೂಂಡಾಗಳಿಗೆ ನೆರವಾಗುತ್ತಿದ್ದಾರೆ’’ ಎಂದವರು ಲೇಖನದಲ್ಲಿ ಹೇಳಿದ್ದಾರೆ.

ಆಶಿಷ್ ಖೆೇತನ್ ಅವರು ತನ್ನ ಪುಸ್ತಕದಲ್ಲಿ ಮೋದಿ ಆಳ್ವಿಕೆಯ ಗುಜರಾತ್‌ನಲ್ಲಿ ಕೋಮುವಾದಿ ಪಕ್ಷಪಾತವು ಸ್ಪರ್ಶವಾಗದೆ ಇರುವ ಒಂದೇ ಒಂದು ಸರಕಾರಿ ಸಂಸ್ಥೆ ಅಥವಾ ಆಡಳಿತದ ಅಂಗ ಇದ್ದಿರಲಿಲ್ಲ. ‘ಗುಜರಾತ್ ಪೊಲೀಸರು ಪುರಾವೆಗಳನ್ನು ಹೆಣೆಯುತ್ತಾರೆ...’. ಮೇ 2014ನೇ ಇಸವಿಯಿಂದೀಚೆಗೆ ಕೇಂದ್ರೀಯ ಮಟ್ಟದಲ್ಲಿ ಸರಕಾರಿ ಏಜೆನ್ಸಿಗಳ ಕೋಮುವಾದೀಕರಣವು ತೀವ್ರಗೊಂಡಿತು. ಹಾಗೆಯೇ ರಾಜಕೀಯದಲ್ಲಿ ಭ್ರಷ್ಟಾಚಾರ ಹಾಗೂ ಬೆದರಿಕೆಯೂ ಹೆಚ್ಚಾಯಿತು. ಆದರೆ 2014ಕ್ಕೆ ಮುನ್ನ ಇವೆರಡೂ ಅಂತಹ ವ್ಯಾಖ್ಯಾನಾತ್ಮಕ ಹಾಗೂ ನಿರ್ಧಾರಾತ್ಮಕ ಪಾತ್ರವನ್ನು ವಹಿಸಿರಲಿಲ್ಲ. ವಿವಿಧ ರಾಜ್ಯಗಳಲ್ಲಿ ಚುನಾವಣಾ ಆಯೋಗವು ವಿವಿಧ ಮತದಾನದ ದಿನಾಂಕವನ್ನು ನಿಗದಿಪಡಿಸಿರುವುದು ಆಡಳಿತ ಪಕ್ಷದ ಚುನಾವಣಾ ಪ್ರಚಾರದ ಆದ್ಯತೆಗಳಿಂದ ಪ್ರಭಾವಿತವಾಗಿರುವಂತೆ ಭಾಸವಾಗುತ್ತಿದೆ. ರಾಜಕೀಯ ವಿರೋಧಿಗಳನ್ನು ಕೇಂದ್ರೀಯ ತನಿಖಾ ಸಂಸ್ಥೆ ಹಾಗೂ ಜಾರಿ ನಿರ್ದೇಶನಾಲಯದ ದುರ್ಬಳಕೆಯು ಕಾಂಗ್ರೆಸ್ ಆಳ್ವಿಕೆಯ ಕಾಲದಲ್ಲಿಯೂ ಗೊತ್ತಿಲ್ಲದೆ ಇರುವಂತಹ ಸಂಗತಿಯೇನಲ್ಲ. ಆದರೆ ಬಿಜೆಪಿಯು ಅದನ್ನು ವಿಭಿನ್ನವಾದ ಮಟ್ಟಕ್ಕೆ ಕೊಂಡೊಯ್ದಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರತಿಪಕ್ಷ ಸರಕಾರಗಳು, ಕೇಂದ್ರದ ಅಧಿಕಾರದ ಬೆದರಿಕೆ ಹಾಗೂ ಬಿಜೆಪಿಯ ಧನಬಲದ ಪರಿಣಾಮವಾಗಿ ಪತನಗೊಳ್ಳುತ್ತಿರುವುದಕ್ಕೆ ಪುಟ್ಟ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ತೀರಾ ಇತ್ತೀಚಿನ ನಿದರ್ಶನವಾಗಿದೆ.

ಈ ಅಂಕಣವನ್ನು ಬರೆಯುತ್ತಿರುವ ಹೊತ್ತಿಗೆ ತಮಿಳುನಾಡಿನಲ್ಲಿ ಪ್ರಮುಖ ಪ್ರತಿಪಕ್ಷದ ರಾಜಕಾರಣಿಯೊಬ್ಬರ ಮೇಲೆ ಐಟಿ ದಾಳಿ ನಡೆಸಲಾಯಿತು ಮತ್ತು ಅಸ್ಸಾಮಿನಲ್ಲಿ ಬಿಜೆಪಿ ಸಚಿವರೊಬ್ಬರು ತನ್ನ ರಾಜಕೀಯ ಎದುರಾಳಿಗೆ ಆತನ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ಛೂಬಿಡಲಾಗುವುದು ಎಂದು ಬೆದರಿಕೆ ಹಾಕಿದ್ದರು.

ಗುಜರಾತ್‌ನಲ್ಲಿ ಅಧಿಕಾರದ ಮೇಲೆ ಸಂಪೂರ್ಣ ಹತೋಟಿ ಸಾಧಿಸುವ ತಮ್ಮ ಹಂಬಲದ ಭಾಗವಾಗಿ ಮೋದಿ ಹಾಗೂ ಶಾ ಅವರು ಮೂವರು ಜೊತೆಗಾರರನ್ನು ಹೊಂದಿದ್ದರು. ಮೊದಲನೆಯದಾಗಿ ತಮಗೆ ಬದ್ಧವಾಗಿರುವ ನಾಗರಿಕ ಸೇವೆ ಮತ್ತು ಪೊಲೀಸ್ ಪಡೆ, ಎರಡನೆಯದಾಗಿ ವಿನಮ್ರವಾದ ಹಾಗೂ ಪ್ರಚಾರಕ ಮಾಧ್ಯಮಗಳು ಹಾಗೂ ವಿಧೇಯವಾದ ನ್ಯಾಯಾಂಗ ಇವು ಆ ಮೂರು ಜೊತೆಗಾರರಾಗಿದ್ದರು.

ಭಾರತದ ಮೇಲೆ ಸಂಪೂರ್ಣ ಅಧಿಕಾರವನ್ನು ಸ್ಥಾಪಿಸುವ ಪ್ರಯತ್ನದಲ್ಲಿ ಮೋದಿ ಹಾಗೂ ಶಾ ಅವರು ಮೇಲಿನ ವಿಧಾನವನ್ನೇ ಅನುಸರಿಸುತ್ತಿದ್ದಾರೆ. ಆದರೆ ಅವರಿಗೆ ಅಲ್ಪ ಯಶಸ್ಸಷ್ಟೇ ದೊರೆತಿದೆ. ಇದಕ್ಕೆ ಮೂರು ಪ್ರಮುಖ ಕಾರಣಗಳಿವೆ. ಮೊದಲನೆಯದಾಗಿ ದೇಶದ ಹಲವಾರು ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿಲ್ಲ. ಎರಡನೆಯದಾಗಿ ಹಲವಾರು ಪ್ರಮುಖ ಹಿಂದಿ ದಿನಪತ್ರಿಕೆಗಳು ಹಾಗೂ ಇಂಗ್ಲಿಷ್ ಮತ್ತು ಹಿಂದಿ ಟಿವಿ ವಾಹಿನಿಗಳು ಆಡಳಿತ ಪಕ್ಷವನ್ನು ಅನುಸರಿಸುತ್ತಿರಬಹುದು. ಆದರೂ, ಕೆಲವು ಇಂಗ್ಲಿಷ್ ದಿನಪತ್ರಿಕೆಗಳು ಹಾಗೂ ವೆಬ್‌ಸೈಟ್‌ಗಳು ಈಗಲೂ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ. ನ್ಯಾಯಾಲಯಗಳು ಅಂಜುಬುರುಕ ಹಾಗೂ ದುರ್ಬಲವಾಗಿದ್ದರೂ (ವಿಶೇಷವಾಗಿ ಜಾಮೀನು ನೀಡಿಕೆಯಂತಹ ವಿಷಯಗಳಲ್ಲಿ), ಕೆಲವೊಮ್ಮೆ ನ್ಯಾಯಾಧೀಶರು ಆಗೊಮ್ಮೆ ಈಗೊಮ್ಮೆ ಜನತೆಯ ವೈಯಕ್ತಿಕ ಹಕ್ಕುಗಳು ಹಾಗೂ ಅಭಿವ್ಯಕ್ತಿ ಸ್ವಾತಂತ್ರದ ಪರವಾಗಿ ಎದ್ದು ನಿಲ್ಲುತ್ತಾರೆ.

ಆದಾಗ್ಯೂ ಮೋದಿ ಹಾಗೂ ಶಾ ಅವರು ದೇಶವನ್ನು ಸಾಗಿಸಲು ಬಯಸುತ್ತಿರುವ ದಿಕ್ಕು ಹಾಗೂ ಭಾರತವು ಪ್ರಸಕ್ತ ಮುನ್ನಡೆಯುತ್ತಿರುವ ದಾರಿ ಇವೆರಡೂ ಸ್ಪಷ್ಟವಾಗಿದೆ. ಇನ್ನೊಂದು ಸಲ ಆಶಿಷ್ ಖೆೇತನ್ ಅವರ ಬರಹದ ಸಾಲನ್ನು ಇಲ್ಲಿ ಉಲ್ಲೇಖಿಸುತ್ತೇನೆ. ‘‘ಬಹುಸಂಖ್ಯಾತವಾದಿ ಆಳ್ವಿಕೆಯು ಕಾನೂನಿಗೆ ಅನಿಯಂತ್ರಿತವಾಗಿದೆ. ಪ್ರಜಾಪ್ರಭುತ್ವದ ದೌರ್ಬಲ್ಯಗಳು ಸಂವಿಧಾನಾತ್ಮಕತೆಯ ಶಕ್ತಿಯನ್ನು ಕಡಿಮೆಗೊಳಿಸಿವೆ. ವಿಶೇಷವಾಗಿ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರ ನಿರಂತರ ಕಡೆಗಣನೆ, ಹಿಂದೂ ಬಲಪಂಥೀಯ ದಾಳಿಕೋರರಿಗೆ ಕುಮ್ಮಕ್ಕು ಹಾಗೂ ತಮ್ಮ ಸಿದ್ಧಾಂತಗಳನ್ನು ವಿರೋಧಿಸಿದವರನ್ನು ಅನ್ಯಾಯವಾಗಿ ಬಂಧನದಲ್ಲಿರಿಸಲಾಗುತ್ತಿದೆ ಹಾಗೂ ಜೈಲಿಗೆ ತಳ್ಳಲಾಗುತ್ತಿದೆ, ರಾಜಕೀಯ ವಿರೋಧಿಗಳನ್ನು, ಭಿನ್ನಮತೀಯರನ್ನು ಗುರಿಯಿರಿಸಲು ಸಾಂಸ್ಥಿಕ ಹಾಗೂ ನ್ಯಾಯಾಂಗ ಪ್ರಕ್ರಿಯೆಯ ದುರ್ಬಳಕೆಯಾಗುತ್ತಿದೆ. ಯಾವುದೇ ರೀತಿಯ ವಿರೋಧವನ್ನು ದಮನಿಸಲು ಮೋದಿ, ಕೇಂದ್ರದ ಅಧಿಕಾರ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈಗ ನಡೆಯುತ್ತಿರುವ ರಾಜಕೀಯ ದಬ್ಬ್ಪಾಳಿಕೆಯ ತೀವ್ರತೆಯು ಭಾರತದ ಮಟ್ಟಿಗೆ ಅಭೂತಪೂರ್ವವಾಗಿದೆ’’ ಎಂದವರು ಬರೆದಿದ್ದಾರೆ. ಪೊಲೀಸರ ಬಗ್ಗೆ ವಿಶ್ವಾಸವಿಡುವ ಬದಲು ಅವರಿಗೆ ಹೆದರುವ, ನ್ಯಾಯಾಧೀಶರು ಕೂಡಾ ನಿರ್ಭೀತವಾಗಿ ಹಾಗೂ ಯಾವುದೇ ವಶೀಲಿಗೊಳಗಾಗದೆ ಕಾರ್ಯಾಚರಿಸುವರೆಂದು ನಿರೀಕ್ಷಿಸಲಾಗದ ಮತ್ತು ಓರ್ವನ ನಿರಪರಾಧಿತ್ವ ಅಥವಾ ಅಪರಾಧಿತ್ವವನ್ನು ಆತ ಯಾವ ಧರ್ಮಕ್ಕೆ ಸೇರಿದ್ದಾನೆ, ಯಾವ ಪಕ್ಷಕ್ಕೆ ಮತ ನೀಡಿದ್ದಾನೆ ಅಥವಾ ದೇಣಿಗೆ ನೀಡಿದ್ದಾನೆಂಬುದರ ಆಧಾರದಲ್ಲಿ ನಿರ್ಧರಿಸುವಂತಹ ಸಮಾಜ ರೂಪಗೊಳ್ಳುತ್ತಿದೆ.

ಗುಜರಾತ್ ಮಾದರಿಯು ರಾಷ್ಟ್ರೀಯ ಮಟ್ಟಕ್ಕೆ ಸಾಗುತ್ತಿರುವುದರ ಪರಿಣಾಮ ಇದಾಗಿದೆ. ಸಾಂಸ್ಥಿಕವಾಗಿ ಹೇಳುವುದಾದರೆ, 1975-77ರ ತುರ್ತುಸ್ಥಿತಿಯಿಂದೀಚೆಗೆ ಸಂವಿಧಾನದ ಆದರ್ಶಗಳಿಂದ 1950ರ ಜನವರಿ 26ರಂದು ಸಂವಿಧಾನನ್ನು ಅಂಗೀಕರಿಸಿದಾಗಿನಿಂದ ಹಿಂದೆಂದೂ ಇಲ್ಲದ ಹಾಗೆ ಸಾಮಾಜಿಕ ಹಾಗೂ ನೈತಿಕವಾಗಿ ನಾವು ದೂರಸರಿಯುತ್ತಾ ಹೋಗುತ್ತಿದ್ದೇವೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top