ರೈತರ ಮೇಲೆ ಮತ್ತೊಂದು ಆಕ್ರಮಣ: 2022ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? | Vartha Bharati- ವಾರ್ತಾ ಭಾರತಿ

--

ರೈತರ ಮೇಲೆ ಮತ್ತೊಂದು ಆಕ್ರಮಣ: 2022ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ?

ಮೊನ್ನೆ ಇಫ್ಕೋ ಕಂಪೆನಿಯು ಘೋಷಿಸಿರುವ ಗೊಬ್ಬರ ಬೆಲೆ ಹೆಚ್ಚಳವು ಕೂಡಾ ನಿಧಾನವಾಗಿ ಗೊಬ್ಬರ ಸಬ್ಸಿಡಿಯನ್ನು ಕಡಿಮೆ ಮಾಡುತ್ತಿರುವ ನೇರ ಪರಿಣಾಮವೇ ಆಗಿದೆ ಹಾಗೂ ಗೊಬ್ಬರ ಸಬ್ಸಿಡಿಗಳನ್ನು ಫಲಾನುಭವಿ ರೈತರಿಗೆ ನೇರ ನಗದು ವರ್ಗಾವಣೆ ಮಾಡುವ ನೀತಿಯು 2022ರಿಂದ ಜಾರಿಗೆ ಬರಲಿದ್ದು ನಿಧಾನವಾಗಿ ಗೊಬ್ಬರ ಸಬ್ಸಿಡಿಯೂ ಕೂಡಾ ಗ್ಯಾಸ್ ಸಬ್ಸಿಡಿಯ ರೀತಿ ಸಂಪೂರ್ಣವಾಗಿ ರದ್ದಾಗಬಹುದು. ರೈತರ ಆದಾಯ ದ್ವಿಗುಣ ಮಾಡುವ ಹೆಸರಲ್ಲಿ ಜಾರಿಯಾಗುತ್ತಿರುವ ಈ ನೀತಿ ರೈತರ ವೆಚ್ಚಗಳನ್ನೂ, ಸಂಕಷ್ಟಗಳನ್ನೂ ಮತ್ತು ಆತ್ಮಹತ್ಯೆಗಳನ್ನೂ ಹೆಚ್ಚಿಸಲಿದೆ. ಕಾರ್ಪೊರೇಟ್‌ಗಳ ಲಾಭವನ್ನು ದ್ವಿಗುಣಗೊಳಿಸಲಿದೆ.


ಇತ್ತೀಚೆಗೆ ಭಾರತದ ಬಹುದೊಡ್ಡ ಸಹಕಾರಿ ಗೊಬ್ಬರ ಉತ್ಪಾದಕ ಸಂಸ್ಥೆಯಾದ ಇಫ್ಕೋ(ಐಊಊಇ), ಯೂರಿಯಾ ಹೊರತುಪಡಿಸಿ ಮಿಕ್ಕ ಗೊಬ್ಬರಗಳ ಋ್ಕಿ ಬೆಲೆಯನ್ನು ಶೇ.45-58ರಷ್ಟು ಏರಿಕೆ ಮಾಡಿತು. ಉದಾಹರಣೆಗೆ 50ಕೆಜಿಯ ಈಅ ಗೊಬ್ಬರದ ಋ್ಕಿ ಬೆಲೆ 1,200 ರೂ. ಇದ್ದದ್ದು 1,900 ರೂ.ಗೆ ಏರಿಸಲ್ಪಟ್ಟಿದ್ದರೆ ವಿವಿಧ ಬಗೆಯ ಘೆಓ  ಮಿಶ್ರಣದ ಗೊಬ್ಬರ ಬೆಲೆಗಳೂ ಕೂಡಾ 50 ಕೆಜಿ ಬ್ಯಾಗಿಗೆ ಸರಸರಿ 600-800 ರೂ. ಬೆಲೆ ಏರಿಕೆಯಾಗಿದೆ. ಇದರಿಂದಾಗಿ ಏನಿಲ್ಲವೆಂದರೂ ಒಂದು ಎಕರೆಗೆ ರೈತರು ಮಾಡಬೇಕಾಗಿರುವ ಸಾರಾಸರಿ ವೆಚ್ಚ 8-10,000 ರೂ. ಹೆಚ್ಚಾಗಲಿದೆ.

ಆದರೆ, ಪ. ಬಂಗಾಳ, ತಮಿಳುನಾಡು, ಅಸ್ಸಾಮಿನಂತಹ ಕೃಷಿ ಪ್ರಧಾನ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲಿ ಘೋಷಿಸಲಾಗಿರುವ ಈ ಬೆಲೆ ಏರಿಕೆಯಿಂದಾಗಿ ಕಸಿವಿಸಿಗೊಂಡ ಮೋದಿ ಸರಕಾರ ಕೂಡಲೇ ಗೊಬ್ಬರ ಉತ್ಪಾದಕ ಕಂಪೆನಿಗಳ ಜೊತೆ ‘ಮಾತುಕತೆ’ ನಡೆಸಿದ್ದರಿಂದ ಗೊಬ್ಬರ ಕಂಪೆನಿಗಳು ‘ತಾತ್ಕಾಲಿಕವಾಗಿ’ ಬೆಲೆ ಏರಿಕೆಯನ್ನು ತಡೆಹಿಡಿದು ಹಳೆ ದಾಸ್ತಾನನ್ನು ಹಳೆ ದರದಲ್ಲೇ ಮಾರಾಟ ಮಾಡುವುದಾಗಿ ಹೇಳಿವೆ. ಅರ್ಥಾತ್ ಮುಂದಿನ ವರ್ಷದಿಂದ ಹೊಸ ದಾಸ್ತಾನನ್ನು ಹೊಸ ಬೆಲೆಗೇ ಮಾರುವ ಸೂಚನೆ ನೀಡಿವೆ! ಹೀಗಾಗಿ ಮೇ-2ರಂದು ಚುನಾವಣಾ ಫಲಿತಾಂಶ ಬಂದಮೇಲೆ ಚುನಾವಣಾ ಕಾರಣಕ್ಕಾಗಿ ಕಳೆದ ಎರಡು ತಿಂಗಳಿಂದ ತಡೆಹಿಡಿಯಲಾಗಿರುವ ಪೆಟ್ರೋಲ್-ಡೀಸೆಲ್-ಗ್ಯಾಸ್ ಬೆಲೆ ಏರಿಕೆ, ಸಣ್ಣ ಉಳಿತಾಯದ ಮೇಲಿನ ಬಡ್ಡಿದರ ಕಡಿತದಂತೆ ಗೊಬ್ಬರ ಬೆಲೆ ಏರಿಕೆಯ ತಾತ್ಕಾಲಿಕ ತಡೆಯೂ ತೆರವಾಗಲಿದೆ. ಏಕೆಂದರೆ ಇದು ಗೊಬ್ಬರ ಕಂಪೆನಿಗಳು ದಿಢೀರನೆ ತೆಗೆದುಕೊಂಡ ತೀರ್ಮಾನವಲ್ಲ. ಬದಲಿಗೆ ಗೊಬ್ಬರ ಸಬ್ಸಿಡಿಯನ್ನು ಹಂತ ಹಂತವಾಗಿ ಹಿಂದೆಗೆದುಕೊಳ್ಳುತ್ತಿರುವ ಕೇಂದ್ರ ಸರಕಾರದ ರೈತವಿರೋಧಿ ನೀತಿಗಳ ತಾರ್ಕಿಕ ಪರಿಣಾಮವೇ ಆಗಿದೆ. ಇದು ಗೊಬ್ಬರ ಸಬ್ಸಿಡಿ ಹಿಂದೆಗೆತ ಯೋಜನೆ 1992ರ ಭೋಸ್ಲೆ ಸಮಿತಿಯ ಪರಿಣಾಮವಾಗಿ ಪ್ರಾರಂಭವಾಗಿದ್ದು ಮೋದಿ ಸರಕಾರದಲ್ಲಿ ತೀವ್ರ ಆಕ್ರಮಣಕಾರಿ ಸ್ವರೂಪವನ್ನು ಪಡೆಯುತ್ತಿದೆ.

NBS-ಕಾರ್ಪೊರೇಟ್ ಲಾಭದ ಮುಲಾಜು

2007-8ರಲ್ಲಿ ಗೊಬ್ಬರ ಆಮದು ವೆಚ್ಚ ತೀರಾ ಹೆಚ್ಚಿದ್ದರಿಂದ 2010ರಿಂದ ನ್ಯೂಟ್ರಿಯೆಂಟ್ ಬೇಸ್ಡ್ ಸಬ್ಸಿಡಿ ಸ್ಕೀಮ್-NBS ಯೋಜನೆ ಜಾರಿಗೆ ಬಂತು. ಈಗಲೂ ಅದೇ ಯೋಜನೆ ಚಾಲ್ತಿಯಲ್ಲಿದೆ. ಈ NBS ಯೋಜನೆಯಡಿ ಯೂರಿಯಾದ MRPಯನ್ನು ಮಾತ್ರ ಸರಕಾರವೇ ನಿಗದಿ ಮಾಡುತ್ತದೆ. 2012ರಿಂದ ಈವರೆಗೆ ಯೂರಿಯಾದ ಬೆಲೆ ಅಷ್ಟೊಂದು ಹೆಚ್ಚಾಗದಿರಲು ಅದೇ ಕಾರಣ. ಇಂದು 45 ಕೆಜಿ ಬ್ಯಾಗಿನ ಯೂರಿಯಾ ಗೊಬ್ಬರಕ್ಕೆ 250 ರೂ. ಗಳನ್ನು ನಿಗದಿ ಮಾಡಲಾಗಿದೆಯಷ್ಟೆ. ಆದರೆ ಗೊಬ್ಬರ ಕಂಪೆನಿಗಳ ಪ್ರಕಾರ ಅದಕ್ಕಾಗುವ ವೆಚ್ಚ 900 ರೂ. ಹೀಗಾಗಿ ಸರಕಾರ ಪ್ರತಿ 45 ಕೆಜಿ ಬ್ಯಾಗಿಗೆ 650 ರೂ. ಸಬ್ಸಿಡಿಯನ್ನು ನೇರವಾಗಿ ಗೊಬ್ಬರ ಕಂಪೆನಿಗಳಿಗೆ ಪಾವತಿ ಮಾಡುತ್ತದೆ.

ಇನ್ನು NBS ಯೋಜನೆಯಡಿ DAP, NPK ಗೊಬ್ಬರಗಳಿಗೆ ಸರಕಾರ MRPಯನ್ನು ನಿಗದಿ ಮಾಡುವುದಿಲ್ಲ. ಬದಲಿಗೆ ಗೊಬ್ಬರ ಉತ್ಪಾದನೆಗೆ ಅವು ಬಳಸುವ ನ್ಯೂಟ್ರಿಯೆಂಟುಗಳಿಗೆ ಕೆಜಿಗಿಷ್ಟು ಎಂದು ಸಬ್ಸಿಡಿಯನ್ನು ನೀಡುತ್ತದೆ. ಉದಾಹರಣೆಗೆ 2010ರಲ್ಲಿ ನೈಟ್ರೋಜನ್‌ಗೆ ಕೆಜಿಗೆ 23 ರೂ., ಫಾಸ್ಫೇಟಿಗೆ ಕೆಜಿಗೆ 26.27 ರೂ., ಪೊಟಾಷಿಗೆ 24.48 ರೂ.ಗಳನ್ನು ಸರಕಾರ ಗೊಬ್ಬರ ಕಂಪೆನಿಗಳಿಗೆ ಪಾವತಿ ಮಾಡಿತ್ತು.

ಈ ಸಬ್ಸಿಡಿಯನ್ನು ಪಡೆದುಕೊಂಡು ತಮ್ಮ ಅಂತಿಮ DAP, NPK  ಗೊಬ್ಬರಗಳ ಬೆಲೆಯನ್ನು ಆಯಾ ಕಂಪೆನಿಗಳಿಗೆ ನಿಗದಿ ಮಾಡಿಕೊಳ್ಳಬೇಕು. ಆದರೆ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ನೈಟ್ರೋಜನ್ ಸಬ್ಸಿಡಿ 23ರಿಂದ 18 ರೂ.ಗಳಿಗೂ, ಫಾಸ್ಫೇಟ್ ಸಬ್ಸಿಡಿ ಕೆಜಿಗೆ 26ರಿಂದ 15 ರೂ.ಗಳಿಗೂ ಮತ್ತು ಪೊಟಾಷ್ 24ರಿಂದ 10 ರೂ.ಗಳಿಗೆ ಇಳಿಸಿರುವುದೇ ಕಳೆದ ಐದು ವರ್ಷಗಳಲ್ಲಿ ಅವುಗಳ ಬೆಲೆ ಗಗನಕೇರಿರಲು ಕಾರಣ. ಈ ವರ್ಷ ಅದನ್ನು ಮತ್ತಷ್ಟು ಕಡಿಮೆ ಮಾಡಿದ್ದರಿಂದಲೇ ಇಫ್ಕೋ ಶೇ. 50ರಷ್ಟು ಹೆಚ್ಚುವರಿ ಬೆಲೆಯನ್ನು ಘೋಷಿಸಿದ್ದು.

ಇದು 2010ರಿಂದ ಜಾರಿಯಲ್ಲಿರುವ ನೀತಿ. ಇದರಿಂದ ಸರಕಾರದ ಮೇಲಿನ ಸಬ್ಸಿಡಿ ಹೊರೆ ತಗ್ಗಬಹುದು ಎಂದು ಸರಕಾರ ಯೋಚಿಸಿತ್ತು. ಆದರೆ ಗೊಬ್ಬರ ಸಬ್ಸಿಡಿಯ ವೆಚ್ಚ ಹೆಚ್ಚಾಗುತ್ತಲೇ ಹೋಗಿ ಈಗ ವಾರ್ಷಿಕ ರೂ. 70,000 ಕೋಟಿ ಮುಟ್ಟಿದೆ. ಮತ್ತೊಂದು ಕಡೆ ಅದರ ಲಾಭವನ್ನೂ ಗೊಬ್ಬರ ಕಂಪೆನಿಗಳು ರೈತರಿಗೆ ತಲುಪಿಸುತ್ತಿಲ್ಲ. ಹೀಗಾಗಿ 2010ಕ್ಕೆ ಹೋಲಿಸಿದರೆ ಯೂರಿಯಾದ ಬೆಲೆ ಹೆಚ್ಚಾಗದಿದ್ದರೂ DAPಯ ದರ ಯೂರಿಯಾ ದರಕ್ಕಿಂತ ಐದು ಪಟ್ಟು ಹೆಚ್ಚಾಗಿದ್ದರೆ NPK  ದರ ಮೂರು ಪಟ್ಟು ಹೆಚ್ಚಾಗಿದೆ.
ಆದ್ದರಿಂದ ಸರಕಾರ ರೈತರಿಗೆ ಸಹಾಯ ಮಾಡುವ ಉದ್ದೇಶವನ್ನೇ ಹೊಂದಿದ್ದರೆ ಇತರ ಗೊಬ್ಬರಗಳಿಗೂ ಯೂರಿಯಾದಂತೆ MRP ನಿಗದಿ ಮಾಡುವ ನೀತಿಗೆ ಮರಳಬೇಕಿತ್ತು. ಆದರೆ ಭಾರತೀಯ ಗೊಬ್ಬರ ಕ್ಷೇತ್ರದಲ್ಲಿ ನಿಧಾನವಾಗಿ ಹೆಚ್ಚುತ್ತಿರುವ ಖಾಸಗಿ ಕ್ಷೇತ್ರಕ್ಕೆ ಇದು ಪಥ್ಯವಿಲ್ಲ. ಮೇಲಾಗಿ ಸರಕಾರವೂ ಸಹ ಗೊಬ್ಬರ ಕಂಪೆನಿಗಳಿಗೆ ಕೊಡಬೇಕಿದ್ದ ಸಬ್ಸಿಡಿಗಳನ್ನು ವರ್ಷಗಟ್ಟಲೇ ಬಾಕಿ ಇಟ್ಟುಕೊಳ್ಳುತ್ತಾ ಬಂದಿದೆ. ಇದು ಕಂಪೆನಿಗಳಿಗೆ ಲಾಭದಾಯಕವಲ್ಲ. ಬದಲಿಗೆ ರೈತರೇ ನೇರವಾಗಿ ಒಟ್ಟು ಮಾರುಕಟ್ಟೆ ಬೆಲೆ ಪಾವತಿಸಿ ಖರೀದಿಸುವುದು ಕಂಪೆನಿಗಳಿಗೆ ಲಾಭದಾಯಕ. ಸರಕಾರ ಬೇಕಿದ್ದರೆ ನೇರವಾಗಿ ರೈತರಿಗೆ ಸಬ್ಸಿಡಿಯನ್ನು ಪಾವತಿಸಲಿ ಎಂಬುದು ಕಾರ್ಪೊರೇಟ್ ಕ್ಷೇತ್ರದ ಆಗ್ರಹವೂ ಆಗಿತ್ತು. ಆದರೆ ಇದರಿಂದ ರೈತಾಪಿಯ ಮೇಲೆ ಬೀಳುವ ಹೊರೆ ಹಾಗೂ ರಾಜಕೀಯ ಪರಿಣಾಮದಿಂದಾಗಿ ಈವರೆಗೆ ಯಾವ ಸರಕಾರಗಳೂ ಇಂತಹ ಕಾರ್ಪೊರೇಟ್ ಪರ-ರೈತದ್ರೋಹಿ ನೀತಿಗೆ ಮುಂದಾಗಿರಲಿಲ್ಲ. ಮೋದಿ ಸರಕಾರ ಮತ್ತು ಕಾರ್ಪೊರೇಟ್ ಲಾಭಕ್ಕೆ ಗೊಬ್ಬರ  

ಆದರೆ 2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ಸಬ್ಸಿಡಿಗಳನ್ನೂ ನಿಧಾನವಾಗಿ ಕಡಿತಗೊಳಿಸುತ್ತಾ ಕಾರ್ಪೊರೇಟ್‌ಗಳ ಲಾಭಕ್ಕೆ ಮುಕ್ತ ಅವಕಾಶವನ್ನು ಒದಗಿಸುವ ಆಕ್ರಮಣಕಾರಿ ನೀತಿಯನ್ನು ಜಾರಿ ಮಾಡುತ್ತಿದೆ. ಅದರ ಭಾಗವಾಗಿಯೇ 2015ರಲ್ಲಿ ಹೊಸ ಯೂರಿಯಾ ನೀತಿಯನ್ನು ಜಾರಿ ಮಾಡಲಾಯಿತು. ಮೇಲ್ನೋಟಕ್ಕೆ ಇದು ಉತ್ಪಾದಕ ಘಟಕಗಳ ದಕ್ಷತೆಯನ್ನು ಹೆಚ್ಚಿಸುವ ಮುಖವಾಡವನ್ನು ಹೊಂದಿದ್ದರೂ ಅದರ ಪ್ರಧಾನ ಲಕ್ಷ ಗೊಬ್ಬರ ಸಬ್ಸಿಡಿಗೆ ಆಗುತ್ತಿರುವ ವೆಚ್ಚವನ್ನು ನಿಯಂತ್ರಿಸುವುದೇ ಆಗಿತ್ತು. ಅದರ ಭಾಗವಾಗಿ 2016ರಿಂದ ಗೊಬ್ಬರ ಕಂಪೆನಿಗಳಿಗೆ ಸಬ್ಸಿಡಿ ಪಾವತಿ ಮಾಡುವ ಮುಂಚೆ ಎಷ್ಟು ಪ್ರಮಾಣದ ಗೊಬ್ಬರವನ್ನು ರೈತರಿಗೆ ವಾಸ್ತವದಲ್ಲಿ ತಲುಪಿಸಲಾಗಿದೆ ಎಂಬುದನ್ನು ಆಧರಿಸಿ ಪಾವತಿಸುವ ವ್ಯವಸ್ಥೆ ಜಾರಿಗೆ ಬಂತು. 2018ರಿಂದ ದೇಶಾದ್ಯಂತ ಈ ವ್ಯವಸ್ಥೆ ಜಾರಿಗೆ ಬಂದಿದ್ದು ರೈತರು ತಮ್ಮ ಆಧಾರ್ ಕಾರ್ಡ್ ನಮೂದಿಸಿ ಗೊಬ್ಬರ ಖರೀದಿಸಬೇಕಿದೆ. ಮಾರಾಟಕ್ಕೆ ತಕ್ಕಂತೆ ಕಂಪೆನಿಗಳಿಗೆ ಸಬ್ಸಿಡಿ ಪಾವತಿಯಾಗುತ್ತದೆ. ಮೇಲ್ನೋಟಕ್ಕೆ ಇದು ಸೋರಿಕೆಯನ್ನು ತಡೆಯುವ ಕ್ರಮದಂತೆ ಕಂಡುಬಂದರೂ ನಿಧಾನಕ್ಕೆ ಗೊಬ್ಬರ ವಿತರಣೆಯನ್ನು ಮುಕ್ತ ಮಾರುಕಟ್ಟೆಗೊಳಿಸಿ ಸಬ್ಸಿಡಿಯನ್ನು ಫಲಾನುಭವಿಗಳಿಗೆ ನೇರೆ ವರ್ಗಾವಣೆ ಮಾಡುವ ವ್ಯವಸ್ಥೆಗೆ ತರುವ ತಂತ್ರ ಇದರ ಹಿಂದಿತ್ತು.

ನೇರ ನಗದು ವರ್ಗಾವಣೆ- ಸಬ್ಸಿಡಿಗಳ ನಿಧಾನ ನಿರಾಕರಣೆ
ಸೋರಿಕೆಯನ್ನು ತಡೆಗಟ್ಟುವ ಹೆಸರಲ್ಲಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಯೆಂಬ ಯೋಜನೆಯನ್ನು ಬಳಸಿಕೊಂಡು ಎಲ್ಲಾ ಸಬ್ಸಿಡಿಗಳನ್ನೂ ಹಂತ ಹಂತವಾಗಿ ತೆಗೆದುಹಾಕಲು ಮೋದಿ ಸರಕಾರ ದೊಡ್ಡ ಕುತಂತ್ರವನ್ನೇ ಹೆಣೆದಿದೆ.

ಇದಕ್ಕೆ ಇತ್ತೀಚಿನ ಉದಾಹರಣೆ ಗ್ಯಾಸ್ ಸಬ್ಸಿಡಿ. 2018ಕ್ಕೆ ಮುಂಚೆ ಒಂದು ಗ್ಯಾಸ್ ಸಿಲಿಂಡರ್‌ಗೆ 750 ರೂ. ವೆಚ್ಚವಾಗುತ್ತಿದ್ದರೂ ಗ್ರಾಹಕರು ಪಾವತಿಸುತ್ತಿದ್ದದ್ದು ಕೇವಲ 350 ರೂ. ಉಳಿದದ್ದನ್ನು ಸರಕಾರ ತನ್ನ ಬಜೆಟ್‌ನಿಂದ ನೇರವಾಗಿ ಗ್ಯಾಸ್ ಕಂಪೆನಿಗಳಿಗೆ ಪಾವತಿಸುತ್ತಿತ್ತು. ಆದರೆ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಹಣ ಸೋರಿಕೆಯ ತಡೆ ಹೆಸರಿನಲ್ಲಿ ಗ್ಯಾಸ್ ಸಬ್ಸಿಡಿಯನ್ನು ನೇರವಾಗಿ ಫಲಾನುಭವಿಗಳ ಅಕೌಂಟಿಗೆ ವರ್ಗಾಯಿಸುವ ಯೋಜನೆ ತಂದಿತು. ಅಂದರೆ ಗ್ರಾಹಕರು ಗ್ಯಾಸ್ ಖರೀದಿಸುವಾಗ ಮೊದಲಿನಂತೆ 350 ರೂ. ಅಲ್ಲದೆ ಪೂರಾ 750 ರೂ. ಕಟ್ಟಬೇಕು. ಸರಕಾರ ಆ ನಂತರ ಫಲಾನುಭವಿಗಳ ಅಕೌಂಟಿಗೆ 400 ರೂ. ವರ್ಗಾಯಿಸುತ್ತಿತ್ತು. ಮೊದಲೆರೆಡು ವರ್ಷ ಸಬ್ಸಿಡಿ ವರ್ಗಾವಣೆಯಾಯಿತು.

ಆದರೆ ಕ್ರಮೇಣ ಗ್ಯಾಸ್ ಸಿಲಿಂಡರಿನ ಮಾರುಕಟ್ಟೆ ಬೆಲೆಯೂ ಹೆಚ್ಚುತ್ತಾ ಬಂತು ಮತ್ತು ಜನರ ಅಕೌಂಟಿಗೆ ವರ್ಗಾವಣೆಯಾಗುತ್ತಿದ್ದ ನಗದೂ ಕಡಿಮೆಯಗುತ್ತಾ ಬಂತು. ಉದಾಹರಣೆಗೆ, 2013ರಲ್ಲಿ ಗ್ಯಾಸ್ ಸಬ್ಸಿಡಿಗೆಂದು ಎತ್ತಿಡಲಾಗಿದ್ದ ಬಜೆಟ್ ರೂ. 53,000 ಕೋಟಿ. 2021-22ರ ಸಾಲಿನಲ್ಲಿ ಎತ್ತಿಟ್ಟಿರುವ ಹಣ ಕೇವಲ ರೂ. 13,000 ಕೋಟಿ. ಅಂದರೆ ಶೇ. 80ರಷ್ಟು ನೇರ ಕಡಿತ. ಇದರಿಂದಾಗಿ ಕಳೆದ ಒಂದು ವರ್ಷದಿಂದ ಯಾವ ಫಲಾನುಭವಿಗಳಿಗೂ ಸಬ್ಸಿಡಿ ಹಣ ಬಂದಿಲ್ಲ. ಜೊತೆಗೆ ಗ್ಯಾಸ್ ಸಿಲಿಂಡರಿನ ಬೆಲೆಯೂ ಶೇ. 20ರಷ್ಟು ಹೆಚ್ಚುತ್ತಿದೆ. ಈಗ ಇತರ ಇಂಧನ ಮೂಲಗಳಾದ ಸೀಮೆಎಣ್ಣೆ, ಸೌದೆ ಇನ್ನಿತ್ಯಾದಿಗಳು ಸುಲಭವಾಗಿ ದೊರೆಯುತ್ತಿಲ್ಲವಾದ್ದರಿಂದ ಅನಿವಾರ್ಯವಾಗಿ ಸಾಮಾನ್ಯ ಜನರು ಹೆಚ್ಚಿನ ಹಣವನ್ನು ಕಂಪೆನಿಗಳಿಗೆ ತೆರಬೇಕಾಗಿ ಬಂದಿದೆ. ಇದೇ ನೀತಿಯನ್ನು ಪಡಿತರಕ್ಕೂ, ಕರೆಂಟಿಗೂ ಅನ್ವಯಿಸುವ ಯೋಜನೆಗಳನ್ನು ಮೋದಿ ಸರಕಾರ ಹೊಂದಿದೆ. ಹೀಗೆ ನೇರ ನಗದು ವರ್ಗಾವಣೆ ಎನ್ನುವ ಮೋದಿ ನೀತಿಯು ಒಟ್ಟಾರೆ ಸಬ್ಸಿಡಿ ಕಡಿತದ ಮೊದಲ ಹೆಜ್ಜೆಯಾಗಿದೆ. ಗೊಬ್ಬರ ಸಬ್ಸಿಡಿಗಳಲ್ಲೂ ಇದೇ ನೀತಿ ಅನುಸರಿಸಲು ಮೋದಿ ಸರಕಾರದ NITI ಆಯೋಗ ದೊಡ್ಡ ತಂತ್ರವನ್ನು ಹೆಣೆದಿದೆ.

NITI ಆಯೋಗದ ಸ್ಟ್ರಾಟೆಜಿ

2017ರಲ್ಲಿ ನೀತಿ ಆಯೋಗ ಮುಂದಿಟ್ಟ Strategy For New India  ಎಂಬ ದಸ್ತಾವೇಜಿನಲ್ಲಿ: ‘‘ರೈತರಿಗೆ ಗೊಬ್ಬರಗಳಿಗೆ, ವಿದ್ಯುತ್‌ಗೆ, ಬೆಳೆ ವಿಮೆ ಇತ್ಯಾದಿ ಬಾಬತ್ತುಗಳಿಗೆ ಪ್ರತ್ಯೇಕವಾಗಿ ಕೊಡುತ್ತಿರುವ ಸಬ್ಸಿಡಿಗಳ ಬದಲಿಗೆ ಪ್ರತಿ ಎಕರೆಗೆ ಇಂತಿಷ್ಟು ಎಂದು ಒಟ್ಟಾರೆಯಾಗಿ ಸಬ್ಸಿಡಿ ಮೊತ್ತವನ್ನು ಫಲಾನುಭವಿಗಳಿಗೆ ನೇರವಾಗಿ ಪಾವತಿಸುವುದು ಉತ್ತಮ’’(ಪು. 64) ಎಂಬ ಸೂಚನೆಯನ್ನು ನೀಡಿತ್ತು.

(For agriculture, an upfront subsidy per acre of land through Direct Benefit Transfer (DBT) may be considered instead of providing separate subsidies for fertilizers, electricity, crop insurance etc..(p.64)

 ಆಸಕ್ತರು ಮೋದಿಯವರು ಈ ಕಾರ್ಪೊರೇಟ್ ನವಭಾರತಕ್ಕಾಗಿ ಇನ್ನೂ ಏನೇನು ಯೋಜನೆ ಹಾಕಿಕೊಂಡಿದ್ದಾರೆ ಎಂಬುದನ್ನು https://niti.gov.in/writereaddata/files/Strategy_for_New_India.pdf  ವೆಬ್ ವಿಳಾಸದಲ್ಲಿ ತಿಳಿದುಕೊಳ್ಳಬಹುದು. ಅದೇ ಸಮಯದಲ್ಲಿ ಗೊಬ್ಬರ ಸಬ್ಸಿಡಿಗಳನ್ನು ರೈತರಿಗೆಷ್ಟು ಮಾರಾಟ ಮಾಡಿದ್ದಾರೆ ಎಂಬ ವಿವರಗಳನ್ನು ಆಧರಿಸಿ ನೇರವಾಗಿ ಫಲಾನುಭವಿ ಕಂಪೆನಿಗಳ ಖಾತೆಗಳಿಗೆ ಸಬ್ಸಿಡಿ ವರ್ಗಾವಣೆ (ಡಿಬಿಟಿ) ಮಾಡುವ ನೀತಿಯು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ ಎಂಬುದನ್ನು ಅಧ್ಯಯನ ಮಾಡಲು ಕೇಂದ್ರದ NITI ಆಯೋಗವು Microsave ಎಂಬ ಕಂಪೆನಿಯನ್ನು ಅಧಿಕೃತವಾಗಿ ನೇಮಿಸಿತು. ಅದರ ಜೊತೆಗೆ ತನ್ನ ಅಸಲು ಯೋಜನೆಯಾದ ಫಲಾನುಭವಿ ರೈತರಿಗೆ ನೇರೆ ನಗದು ವರ್ಗಾವಣೆ ಮಾಡುವ ವಿಷಯದ ಬಗ್ಗೆಯೂ ಜನರ ಅಭಿಪ್ರಾಯವನ್ನು ಸಂಗ್ರಹಿಸಲು ಕೋರಿತ್ತು.

Microsave ವರದಿ ತಂದ ಮುಜುಗರ 

Microsave ಕಂಪೆನಿಯು ದೇಶಾದ್ಯಂತ ರೈತರನ್ನು ಸಂದರ್ಶಿಸಿ ವಿಷಯವನ್ನು ಅಧ್ಯಯನ ಮಾಡಿ 2019ರಲ್ಲೇ ತನ್ನ ವರದಿಯನ್ನೂ ನೀಡಿತು.

ಅದರ ಪ್ರಕಾರ: -ದೇಶದ ಶೇ. 70ರಷ್ಟು ರೈತರು ಗ್ಯಾಸ್ ಸಬ್ಸಿಡಿಯ ಅನುಭವದ ಹಿನ್ನೆಯಲ್ಲಿ ನೇರ ನಗದು ವರ್ಗಾವಣೆ ಎಂಬ ನೀತಿಯು ಸಂಪೂರ್ಣ ಸಬ್ಸಿಡಿ ರದ್ದಿಗೆ ಮೊದಲ ಹೆಜ್ಜೆಯಾಗಬಹುದೆಂಬ ಆತಂಕವನ್ನು ವ್ಯಕ್ತಪಡಿಸಿ ನೇರ ನಗದು ವರ್ಗಾವಣೆಯನ್ನು ಸಾರಾಸಗಟು ವಿರೋಧಿಸಿದ್ದರು. -ಅಷ್ಟು ಮಾತ್ರವಲ್ಲದೆ ನೇರ ನಗದು ವರ್ಗಾವಣೆ ನೀತಿ ಜಾರಿಗೆ ಬಂದರೆ ರೈತರು ಮೊದಲು ಮಾರುಕಟ್ಟೆ ಬೆಲೆ ತೆತ್ತು ಗೊಬ್ಬರವನ್ನು ಖರೀದಿಸಬೇಕಾಗುತ್ತದೆ. ಅಂದರೆ ಆಗ 45 ಕೆಜಿ ಯೂರಿಯಾ ಬ್ಯಾಗಿಗೆ 250 ರೂ. ತೆರುತ್ತಿರುವ ರೈತ 1,000 ರೂ. ತೆರಬೇಕಾಗುತ್ತದೆ. ಒಂದು ಎಕರೆಗೆ ಯೂರಿಯಾ ಹಾಗೂ ಇತರ ಗೊಬ್ಬರಗಳಿಗೆ ಏನಿಲ್ಲವೆಂದರೂ ವರ್ಷಕ್ಕೆ 15,000-20,000ರೂ. ತೆರಬೇಕು. -ಸಬ್ಸಿಡಿಯು ಖರೀದಿಗೆ ಮುನ್ನ ಅಕೌಂಟಿಗೆ ಬೀಳುವುದಿಲ್ಲ. ಖರೀದಿಸಿದ ನಂತರ ಲೆಕ್ಕಾಚಾರಗಳ ಪರಿಶೀಲನೆಯಾಗಿ ನಂತರ ಅಕೌಂಟಿಗೆ ಪಾವತಿಯಾಗಬೇಕು. ಹೀಗಾಗಿ ಸಣ್ಣಪುಟ್ಟ ರೈತರು ಅದಕ್ಕಾಗಿ ಹೆಚ್ಚುವರಿ ಸಾಲ ಮಾಡಬೇಕು. ಅದಕ್ಕೆ ಬಡ್ಡಿ ತೆರಬೇಕು. ಇದು ರೈತರ ವೆಚ್ಚವನ್ನು ಹಾಗೂ ಕಷ್ಟಗಳನ್ನು ಹೆಚ್ಚಿಸುತ್ತದೆ ಎಂದೂ ಕೂಡಾ Microsave ಕಂಪೆನಿಯು ವರದಿ ನೀಡಿತು.

ಮೇಲಿನ ವಿಷಯಕ್ಕೆ ಸಂಬಂಧಪಟ್ಟ ವಿವರವನ್ನು ಆಸಕ್ತರು ಈ ವೆಬ್ ವಿಳಾಸದಲ್ಲಿ https://www.microsave.net/wp-content/uploads/2019/10/191010_DBT_fertiliz... ಪುಟ 33ರಲ್ಲಿ ಗಮನಿಸಬಹುದು.

ಆದರೆ ಶತಾಯ ಗತಾಯ ಗೊಬ್ಬರ ಸಬ್ಸಿಡಿಯನ್ನು ನಿಧಾನವಾಗಿ ರದ್ದುಗೊಳಿಸಲು ಹಠ ತೊಟ್ಟಿರುವ ಮೋದಿ ಸರಕಾರ ತನ್ನದೇ ಸರಕಾರದ ಅಧ್ಯಯನ ವರದಿಯನ್ನು ಒಪ್ಪಿಕೊಳ್ಳದೆ ತಿರಸ್ಕರಿಸಿತು. ಈ ಬಗ್ಗೆ 2019ರಲ್ಲಿ ಸಂಸದರೊಬ್ಬರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಗೊಬ್ಬರ ಮಂತ್ರಿ ಸದಾನಂದಗೌಡರು:

ಈ ವರದಿಯ ಬಗ್ಗೆ ತಮ್ಮ ಇಲಾಖೆಗೆ ಮಾಹಿತಿ ಇಲ್ಲವೆಂದೂ, ಮೇಲಾಗಿ ಆ ಸರ್ವೇಯ ಸ್ಯಾಂಪಲ್ ಗಾತ್ರ ಬಹಳ ಕಡಿಮೆ ಇತ್ತಾದ್ದರಿಂದ ಆ ವರದಿಯನ್ನು ಒಪ್ಪಿಕೊಳ್ಳಲಾಗುವುದಿಲ್ಲವೆಂದು ಅಧಿಕೃತವಾಗಿ ಉತ್ತರಿಸಿದ್ದಾರೆ.

(http://164.100.24.220/loksabhaquestions/annex/172/AU367.pdf)

022ರಿಂದ ದ್ವಿಗುಣವಾಗುವುದು ರೈತರ ಆದಾಯವಲ್ಲ- ವೆಚ್ಚಗಳು, ಸಂಕಷ್ಟಗಳೂ.. 

2021ರ ಜನವರಿಯಲ್ಲಿ ಮೋದಿ ಸರಕಾರ ಹೇಳಿಕೆಯೊಂದನ್ನು ನೀಡಿ 2022ರ ಸಾಲಿನಿಂದ ಗೊಬ್ಬರ ಸಬ್ಸಿಡಿಯನ್ನು ರೈತರ ಅಕೌಂಟುಗಳಿಗೆ ನೇರ ನಗದು ವರ್ಗಾವಣೆ ಮಾಡುವ ಯೋಜನೆ ಜಾರಿಗೆ ಬರಲಿದೆಯೆಂದು ಘೋಷಿಸಿದೆ. ಆದರೆ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ರೈತ ಜನಾಂದೋಲನ ಹಾಗೂ ಐದು ರಾಜ್ಯಗಳ ಚುನಾವಣೆಗಳ ಹಿನ್ನೆಲೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲವೆಂದು ಕೂಡಾ ಹೇಳುತ್ತಿದ್ದಾರೆ. ಆದರೆ ಮೊನ್ನೆ ಇಫ್ಕೋ ಕಂಪೆನಿಯು ಘೋಷಿಸಿರುವ ಗೊಬ್ಬರ ಬೆಲೆ ಹೆಚ್ಚಳವು ಕೂಡಾ ನಿಧಾನವಾಗಿ ಗೊಬ್ಬರ ಸಬ್ಸಿಡಿಯನ್ನು ಕಡಿಮೆ ಮಾಡುತ್ತಿರುವ ನೇರ ಪರಿಣಾಮವೇ ಆಗಿದೆ ಹಾಗೂ ಗೊಬ್ಬರ ಸಬ್ಸಿಡಿಗಳನ್ನು ಫಲಾನುಭವಿ ರೈತರಿಗೆ ನೇರ ನಗದು ವರ್ಗಾವಣೆ ಮಾಡುವ ನೀತಿಯು 2022ರಿಂದ ಜಾರಿಗೆ ಬರಲಿದ್ದು ನಿಧಾನವಾಗಿ ಗೊಬ್ಬರ ಸಬ್ಸಿಡಿಯೂ ಕೂಡಾ ಗ್ಯಾಸ್ ಸಬ್ಸಿಡಿಯ ರೀತಿ ಸಂಪೂರ್ಣವಾಗಿ ರದ್ದಾಗಬಹುದು. ರೈತರ ಆದಾಯ ದ್ವಿಗುಣ ಮಾಡುವ ಹೆಸರಲ್ಲಿ ಜಾರಿಯಾಗುತ್ತಿರುವ ಈ ನೀತಿ ರೈತರ ವೆಚ್ಚಗಳನ್ನೂ, ಸಂಕಷ್ಟಗಳನ್ನೂ ಮತ್ತು ಆತ್ಮಹತ್ಯೆಗಳನ್ನೂ ಹೆಚ್ಚಿಸಲಿದೆ. ಕಾರ್ಪೊರೇಟ್‌ಗಳ ಲಾಭವನ್ನು ದ್ವಿಗುಣಗೊಳಿಸಲಿ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top