ಅಧಿಕಾರದ ಮಧುಚಂದ್ರವೂ ರಾಜಕಾರಣದ ಹುಲಿಸವಾರಿಯೂ | Vartha Bharati- ವಾರ್ತಾ ಭಾರತಿ

--

ಅಧಿಕಾರದ ಮಧುಚಂದ್ರವೂ ರಾಜಕಾರಣದ ಹುಲಿಸವಾರಿಯೂ

ಶಂಖ-ಜಾಗಟೆ-ದೀಪ-ಆರತಿಗಳ ಮೂಲಕ ಭಾರತದೆಲ್ಲೆಡೆ ಸದ್ದುಗದ್ದಲದ ಗೊಂದಲದ ಹೊರತು ಇತರ ಸಾಧನೆ ಶೂನ್ಯವೆಂಬುದು ಸಿಂಹಾವಲೋಕನದಲ್ಲಿ ತಿಳಿಯುತ್ತದೆ. ಕೊರೋನವನ್ನು ತಾವು ಸೋಲಿಸುತ್ತಿದ್ದೇವೆಂಬ ಸುಳ್ಳು ಭರವಸೆಗಳೇ ಜನರನ್ನು ಮರುಳುಮಾಡಿದವು. ಬಹುಪಾಲು ವೈದ್ಯರು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ದುಡಿದರೆ, ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ನಡೆದುಕೊಂಡ ರೀತಿ ಸಂಶಯಾಸ್ಪದ. ರಾಜಕಾರಣಿಗಳಿಗೆ, ಪ್ರಭಾವಿಗಳಿಗೆ ಮತ್ತು ಶ್ರೀಮಂತರಿಗೆ ಚಿಕಿತ್ಸೆ ಸುಲಭದಲ್ಲಿ ಲಭ್ಯವಾದರೆ ಬಡವರು ನಿರ್ಲಕ್ಷ್ಯಕ್ಕೊಳಗಾಗಿ ಬಳಲಿದರು. ಸತ್ತವರು ತಮ್ಮ ಕುಟುಂಬಕ್ಕೂ ಸಿಕ್ಕದೆ ದಫನವಾದರು.

ಭಾರತವು ವಿದಾಯ ಹೇಳಿ ಕಳಿಸಿದ ಕೊರೋನ ಮರುಕಳಿಸಿದೆ. ಸರಕಾರ ತನ್ನ ಪಾರಂಪರಿಕ ಔಷಧಗಳನ್ನು, ರಾಮದೇವರುಗಳನ್ನು ಸದ್ಯಕ್ಕೆ ಕೈಬಿಟ್ಟು ಈ ಮಾರಿಯಿಂದ ಶಾಶ್ವತ ಮುಕ್ತಿ ಪಡೆಯಲು ವೈಜ್ಞಾನಿಕ ಲಸಿಕೆಗಳ ಮೊರೆಹೋಯಿತು. ಎಂದಿನ ಚಟದಿಂದ ಜಗತ್ತಿನಲ್ಲಿ ಈ ಸಾಹಸವನ್ನು ಮಾಡುತ್ತಿರುವ ಏಕೈಕ ರಾಷ್ಟ್ರವೆಂಬಂತೆ ಪ್ರಚಾರ ಮಾಡಿತು. ಇದಕ್ಕೆ ಪೂರಕವಾಗಿ 80ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಲಸಿಕೆಯನ್ನು ರಫ್ತುಮಾಡಿತು. ದೇಶದ 135 ಕೋಟಿ ಜನರಿಗೆ ವ್ಯಾಕ್ಸಿನ್ ನೀಡುವ ಬದಲು ‘ವಸುಧೈವ ಕುಟುಂಬಕಂ’ ಎಂಬ ಸೂತ್ರವನ್ನು ಎತ್ತಿಹಿಡಿದಂತೆ ಹಂಚಿತು. ಪರಿಣಾಮವಾಗಿ ನಮ್ಮಲ್ಲಿನ್ನೂ ಶೇ. 10 ಜನರಿಗೂ ವ್ಯಾಕ್ಸಿನ್ ನೀಡಿಲ್ಲ. ಕೊರೋನ ಒಂದೆರಡು ತಿಂಗಳುಗಳಿಂದ ಮತ್ತೆ ಇನ್ನೊಂದು ರೂಪದಲ್ಲಿ ಮರುಕಳಿಸಿದೆ. ಮಹಾರಾಷ್ಟ್ರ, ಉತ್ತರಪ್ರದೇಶ, ದಿಲ್ಲಿ ಸೇರಿದಂತೆ ದೇಶದ ಬಹುಭಾಗ ಕೊರೋನದ ಮುಕ್ತಹಾವಳಿಗೆ ಬಲಿಯಾಗಿದೆ. ಈಗ ವ್ಯಾಕ್ಸಿನ್ ಆಗಲಿ, ರೋಗಿಗಳಿಗೆ ಬೇಕಾಗುವ ಆಮ್ಲಜನಕವಾಗಲಿ, ಕೊನೆಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಬಿಡಿ, ಜಾಗಗಳೇ ಇಲ್ಲ. ಒಬ್ಬೊಬ್ಬರೇ ಸಾಯುವುದರ ಬದಲು ಜನರು ಹಿಂಡುಹಿಂಡಾಗಿ ಸಾಯುತ್ತಿದ್ದಾರೆ. ಸರಕಾರದ ಬಹುಜನತುಷ್ಟೀಕರಣದ ನೀತಿಯನ್ನು ಸಮರ್ಥಿಸುವಂತೆ ಒಂದು ಜಾತಿ, ವರ್ಗದ, ಪಂಗಡದ ಜನರಷ್ಟೇ ಸಾಯದೆ ಎಲ್ಲ ಮತ-ಧರ್ಮದ ಜನರೂ ಸಾಯುತ್ತಿದ್ದಾರೆ. ಸರಕಾರ ಮುಂದಿನ ನಡೆ ತಿಳಿಯದೆ ಕವಲುದಾರಿಯಲ್ಲಿ ತಬ್ಬಿಬ್ಬಾಗಿ ನಿಂತಿದೆ.

ಇಂತಹ ಸಂದರ್ಭದಲ್ಲಿ ದೇಶದ ನಾಯಕತ್ವವು ಇದನ್ನು ನಿಭಾಯಿಸುವುದೇ ತನ್ನ ಪರಮ ಕರ್ತವ್ಯವೆಂಬಂತೆ ಮೈಕೊಡವಿ ದುಡಿಯಬೇಕಿತ್ತು. ಆದರೆ ಪ್ರಧಾನಿ ಮತ್ತು ಗೃಹಮಂತ್ರಿಗಳು ಕೆಲವು ರಾಜ್ಯಗಳ ಚುನಾವಣೆಯಲ್ಲಿ ತಮ್ಮನ್ನು ತಾವು ಕೆಡವಿಕೊಂಡಿದ್ದಾರೆ. ಸಾಮಾನ್ಯವಾಗಿ ಈ ಹುದ್ದೆಗಳ ಘನತೆಯಿರುವುದೇ ಜಾತಿ- ಮತ-ಧರ್ಮ-ಪಂಗಡ-ಪ್ರದೇಶ-ಪಕ್ಷಾತೀತವಾಗಿ ನಡೆದುಕೊಳ್ಳುವುದರಲ್ಲಿ. ದೇಶಕ್ಕಿಂತ ಅಧಿಕಾರ-ಪಕ್ಷ ಮುಖ್ಯವಲ್ಲ ಎಂದು ತೋರಿಸುವುದರಲ್ಲಿ. ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಕೊರೋನ ನಿರ್ವಹಣೆಗೆ ಬೇಕಾದ ಪರಿಕರಗಳನ್ನು ಪೂರೈಸಲು ಪ್ರಧಾನಮಂತ್ರಿಗಳಿಗೆ ದೂರವಾಣಿ ಕರೆ ಮಾಡಿದರೆ ಅಲ್ಲಿನ ಅಧಿಕಾರಿಗಳು ಪ್ರಧಾನಿಯವರು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಾರ್ಯದಲ್ಲಿ ನಿರತಾಗಿದ್ದಾರೆಂದು ಮತ್ತು ಅವರು ಮರಳಿದ ಬಳಿಕ ಉತ್ತರಿಸುತ್ತಾರೆಂದು ತಿಳಿಸಿದರು. ಈ ಸಂದರ್ಭದಲ್ಲಿ ದೇಶದ ಪ್ರಧಾನಿಯವರು ಪಶ್ಚಿಮ ಬಂಗಾಳದ ಚುನಾವಣಾ ರ್ಯಾಲಿಯೊಂದನ್ನುದ್ದೇಶಿಸಿ ಭಾಷಣಮಾಡುತ್ತಾ ಇಷ್ಟೊಂದು ಜನಸಾಗರವನ್ನು ತಾನು ಈ ತನಕ ನೋಡಿರಲಿಲ್ಲವೆಂದು ಸಂತೋಷ ಮತ್ತು ಅಪಾರ ಹೆಮ್ಮೆಯಿಂದ ಹೇಳಿಕೊಂಡರು. ಅದಕ್ಕೆ ರ್ಯಾಲಿಯ ಜನ ಸಹಜವಾಗಿಯೇ ಕರತಾಡನಮಾಡಿ ಹುಚ್ಚೆದ್ದು ಕುಣಿದರು. ಅವರ ಅಪಾರ ಬೆಂಬಲಿಗರು ಚುನಾವಣೆಯಲ್ಲಿ ತಮ್ಮ ಗೆಲುವು ಶತಸಿದ್ಧವೆಂದು ಪ್ರಚಾರಮಾಡಿದರು. ಇದೇ ಕ್ಷಣದಲ್ಲಿ ಹರಿದ್ವಾರದಲ್ಲಿ, ಕುಂಭ ಮೇಳ ನಡೆಯುತ್ತಿತ್ತು. ಲಕ್ಷಾಂತರ ಮಂದಿ ನೆರೆದು ದಿನವೂ ಸಾವಿರಾರು ಕೋವಿಡ್ ಪಾಸಿಟಿವ್ ಪ್ರಕರಣಗಳು ಸೃಷ್ಟಿಯಾಗುತ್ತಿದ್ದವು. ಅವನ್ನು ಅಲಕ್ಷಿಸಿ, ರಾಜಕೀಯ ರ್ಯಾಲಿಗಳನ್ನು ನಡೆಸುವುದರಲ್ಲಿ ಪ್ರಧಾನಿ ಮತ್ತು ಗೃಹಮಂತ್ರಿಗಳ ದ್ವಿದಳಗಳು ಅರಳಿದವು. ಪ್ರಾಯಃ ಕೊರೋನಕ್ಕೆ ಬಲಿಯಾದ ಹೆಣಗಳ ಬಣವೆಯನ್ನೂ ನೋಡುವ ಉತ್ಸಾಹದಲ್ಲಿದ್ದರೆಂಬಂತೆ ಮತ್ತು 135 ಕೋಟಿಯಲ್ಲಿ ಒಂದಷ್ಟು ಕೋಟಿ ನಷ್ಟವಾದರೆ ತಮಗೇನೂ ಸಂಬಂಧವಿಲ್ಲವೆಂಬಂತೆ ಅವರು ವರ್ತಿಸಿದರು. ಈ ದುಡಿಮೆಯನ್ನು ಕೇಂದ್ರ ಸಚಿವರು ‘‘ಪ್ರಧಾನಿಯವರು 17-18 ಗಂಟೆಗಳ ಕಾಲ ದಿನಾ ದುಡಿಯುತ್ತಿದ್ದಾರೆ’’ ಎಂದು ಶ್ಲಾಘಿಸಿದರು.

 ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಾನು ರ್ಯಾಲಿ ನಡೆಸುವುದಿಲ್ಲವೆಂದು ಹೇಳಿದರು. ಇದು ರಾಜಕೀಯ ನಡೆಯೇ ಇರಲಿ, ಕಾಳಜಿಪೂರ್ವ ನಡೆಯೇ ಇರಲಿ, ಸಮಯೋಚಿತವೇ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯೂ ತಾನು ರ್ಯಾಲಿಗಳನ್ನು ನಡೆಸುವುದಿಲ್ಲವೆಂದು ಘೋಷಿಸಿದರು. ವಿಚಿತ್ರವೆಂದರೆ ದೇಶವನ್ನಾಳುವ ಸರಕಾರದ ಕೆಲವು ಮಂತ್ರಿಗಳು ಇದಕ್ಕೆ ನೀಡಿದ ಪ್ರತಿಕ್ರಿಯೆಗಳು. ರವಿಶಂಕರ್‌ಪ್ರಸಾದ್ ಎಂಬ ಕೇಂದ್ರ ಸಚಿವರು ಸೋಲುವ ಖಚಿತತೆಯಿಂದ ರಾಹುಲ್ ಗಾಂಧಿ ಹೀಗೆ ಹೇಳಿದ್ದಾರೆಂದು ಪ್ರತಿಕ್ರಿಯಿಸಿದರು. ಮಮತಾ ಬ್ಯಾನರ್ಜಿಯ ಕುರಿತೂ ಇಂತಹ ಟೀಕೆಗಳು ಮೊದಲಿನಿಂದಲೂ ಬಂದಿವೆ.

ಇದಾದ ನಂತರದಲ್ಲಿ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಆರ್ಥಿಕ ತಜ್ಞ ಮತ್ತು ಅನುಭವಿ ರಾಜಕಾರಣಿಯಾಗಿ ಕೊರೋನ ನಿರ್ವಹಣೆಗಾಗಿ ಪ್ರಧಾನಿಗೆ 5 ಸಲಹೆಗಳಿರುವ ಪತ್ರವನ್ನು ಬರೆದರು. ಘನತೆಯಿರುವ ಯಾವನೇ ರಾಜಕಾರಣಿಯಾದರೂ ಇದಕ್ಕೆ ಸ್ಪಂದಿಸುವ ನಿರ್ಧಾರವನ್ನು ಕೈಗೊಳ್ಳುತ್ತಾರೆ. ಅತ್ಯಂತ ಸಂಕಟಮಯ ಸಂದರ್ಭಗಳಲ್ಲಿ ಸರಕಾರಗಳು ಸರ್ವಪಕ್ಷ ಸಭೆಗಳನ್ನು ನಡೆಸುವುದೇ ಅಧಿಕಾರವನ್ನು ಮೀರಿದ ಪಕ್ವ ರಾಜಕಾರಣದ, ಕೊನೇ ಪಕ್ಷ ಅಸಹಾಯಕತೆಯಿಂದ. ಆದರೆ ಪ್ರಧಾನಿ ಈ ಪತ್ರಕ್ಕೆ ಉತ್ತರಿಸಲಿಲ್ಲ. ಬದಲಿಗೆ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಕಟುವಾಗಿ ಉತ್ತರಿಸಿದರು. ತಮ್ಮ ಪಕ್ಷದ ಅಧಿಕಾರವಿರುವ ರಾಜ್ಯಗಳಿಗೆ ಈ ಹಿತವಾದವನ್ನು ಹೇಳಬೇಕೆಂದು ಕೊಂಕು ನುಡಿದರು. ರಾಜಕಾರಣದ ತಳ ಎಷ್ಟು ಆಳದಲ್ಲಿದೆಯೆಂಬುದು ಕಣ್ಣಿಗೆ ರಾಚುವಂತಹ ನೀಚತನವನ್ನು ಈಗ ಬಹುತೇಕ ಎಲ್ಲ ಮಂತ್ರಿಗಳೂ ಪ್ರದರ್ಶಿಸುತ್ತಿದ್ದಾರೆ. ಮನುಷ್ಯತ್ವವನ್ನೇ ಪ್ರಶ್ನಿಸುವಂತಹ ಇದೇ ಬಗೆಯ ಸೊಂಟಪಟ್ಟಿಯ ಕೆಳಗಿನ ಟೀಕೆಗಳನ್ನು ಇತರ ಭಾಜಪ ಪ್ರತಿನಿಧಿಗಳೂ ಮಾಡಿದರು. ಆದರೂ ತೃಪ್ತಿಯೆಂದರೆ ಎಲ್ಲರಿಗೂ ಲಸಿಕೆ ನೀಡುವ ಮಾಜಿ ಪ್ರಧಾನಿಯ ಸಲಹೆಯನ್ನು ಸರಕಾರ ಅನುಸರಿಸಲು ನಿರ್ಧರಿಸಿದೆ. ಆದರೆ ಇದರ ರಾಜಕೀಯ ಲಾಭವನ್ನು ತಾನೇ ಪಡೆಯಬೇಕೆಂಬ ಕಾರಣಕ್ಕೆ ಮನಮೋಹನ ಸಿಂಗ್ ಅವರ ನಡೆಯನ್ನು ನಿರ್ಲಕ್ಷಿಸಿದೆ. ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ಅವರಿಗೆ ವಿರೋಧ ಪಕ್ಷವೆಂಬುದಿರಲಿಲ್ಲ. ಇದ್ದರೆ ಬ್ರಿಟಿಷರು. ಆದ್ದರಿಂದ ಕಾಂಗ್ರೆಸ್ ಸಮಸ್ತ ಭಾರತೀಯರನ್ನು ಸಾಂಕೇತಿಕವಾಗಿಯಾದರೂ ಪ್ರತಿನಿಧಿಸುತ್ತಿತ್ತು. ವಿವಿಧ ಪಕ್ಷಗಳು ಹುಟ್ಟಿಕೊಂಡರೂ ಅವು ಸೈದ್ಧಾಂತಿಕ ಭಿನ್ನಭಿಪ್ರಾಯವನ್ನಷ್ಟೇ ಹೊಂದಿದ್ದವು ಮತ್ತು ಆ ಕಾರಣಕ್ಕೆ ಸರಕಾರದೊಂದಿಗಿರಲಾಗದೆ ಪ್ರತಿಪಕ್ಷಗಳಾಗಿ ಉಳಿದವು.

ಆದರೆ ಭಾಜಪ ಸರಕಾರ ಬಂದಿರುವುದೇ ಕಾಂಗ್ರೆಸನ್ನು ವಿರೋಧಿಸಿ. ಅದು ತನ್ನ ಆಡಳಿತವನ್ನು ವಿರೋಧಿಸುವ ಎಲ್ಲರನ್ನು ವಿರೋಧಿಗಳಂತೆ ಕಾಣಬೇಕಾದ ಬಹುಸಂಖ್ಯಾತ ತುಷ್ಟೀಕರಣದ ಹುಲಿಸವಾರಿಗೆ ಹೊರಟಿದೆ. ಕೊರೋನವಿರಲಿ, ಯಾವುದೇ ಮಾರಕ ಅಡೆತಡೆಯಿರಲಿ, ಅದನ್ನು ಜಾತಿ-ಮತ-ಧರ್ಮಗಳ ಹೆಸರಿನಿಂದಲೇ ಎದುರಿಸಬೇಕಾದ ಅನಿವಾರ್ಯದಲ್ಲಿದೆ. ಆದ್ದರಿಂದ ಕೊರೋನವನ್ನು ಎದುರಿಸಬೇಕಾದರೆ ಅದಕ್ಕೆ ಅಯೋಧ್ಯೆ, ಕಾಶಿ, ಮಥುರಾಗಳು, ಕುಂಭಮೇಳವೂ ಇತರ ಹಿಂದೂ ಉತ್ಸವಗಳೂ ಅಗತ್ಯವಾಗಿವೆ. ಇದೊಂದು ರೀತಿಯಲ್ಲಿ ವೈರಿನಿರ್ನಾಮಕ್ಕೆ ಮಾಡುವ ಮಾರಣಹೋಮಗಳು.

ಸಾಮಾನ್ಯವಾಗಿ ರಾಜ್ಯಗಳ ಚುನಾವಣೆಯಲ್ಲಿ ರಾಜ್ಯಗಳ ನಾಯಕತ್ವವೇ ವಿಜೃಂಭಿಸುತ್ತದೆ. ರಾಷ್ಟ್ರೀಯ ನಾಯಕರು ಅಪರೂಪವೆಂಬಂತೆ ಒಂದೆರಡು ರ್ಯಾಲಿಗಳನ್ನು ನಡೆಸುತ್ತಾರೆ. ಆದರೆ ಈ ಬಾರಿಯ ರಾಜ್ಯ ಚುನಾವಣೆಗಳಲ್ಲಿ ಭಾಜಪಕ್ಕೆ ವಿರೋಧಪಕ್ಷಗಳಿಂದ ವಲಸೆ ಬಂದವರನ್ನು ಹೊರತುಪಡಿಸಿದರೆ ಹೇಳಿಕೊಳ್ಳುವಂತಹ ರಾಜ್ಯ/ಪ್ರಾದೇಶಿಕ ನಾಯಕರುಗಳಿಲ್ಲ. ತತ್ವ-ಸಿದ್ಧಾಂತಗಳನ್ನು ಹೇಳಿಕೊಂಡು ಬಂದ, ಮತ-ಧರ್ಮಗಳ ಬಹುಸಂಖ್ಯಾತ ಸನ್ನಿಯ ಮೂಲಕ ಬೆಳೆದ, ಭಾಜಪಕ್ಕೆ ನೆಲೆಯೂರಲು ಯಾರೂ ಆಗಬಹುದೆಂಬ ಎಲ್ಲ ಲಕ್ಷಣಗಳಿವೆ. ಆದ್ದರಿಂದ ಮೋದಿ-ಶಾರವರು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಜಗಳ ಕಾಯುವುದು ರಾಷ್ಟ್ರೀಯ ರಾಜಕಾರಣವಾಗಿದೆ. ಮಧುಚಂದ್ರವೆಂಬ ಕಲ್ಪನೆಯು ಪಾಶ್ಚಾತ್ಯರದ್ದು. ಹನಿಮೂನ್ ಎಂಬ ಆಂಗ್ಲ ಪದದ ಕನ್ನಡ ಅವತರಣಿಕೆ. ಈ ಅವಧಿಯಲ್ಲಿ ದಂಪತಿಗಳು ಜಗತ್ತನ್ನೇ ಮರೆತು ವೈವಾಹಿಕ ಜೀವನದ ಮೊದಲ ಮಾಸವನ್ನು ಕಳೆಯುತ್ತಾರೆ. (ಅಕ್ಷರಶಃ ಇದು ಕಳೆಯುವುದೇ! ಹಣವನ್ನೂ ಸಮಯವನ್ನೂ!) ಪಾಶ್ಚಾತ್ಯರು ಮೊದಲ ಮಾಸವನ್ನಷ್ಟೇ ಮಧುಮಾಸವಾಗಿ ಆಚರಿಸುತ್ತಾರಂತೆ. ಹೊಸದಾಗಿ ಆಮದುಮಾಡಿಕೊಂಡದ್ದರಿಂದಾಗಿ ಭಾರತದಲ್ಲಿ ಈ ಅವಧಿಗೆ ಮಿತಿಯಿಲ್ಲ. ಆಧುನಿಕತೆ ಅತಿಯಾದಾಗ ಜೊತೆಯಲ್ಲಿ ಬದುಕುವ ಅವಿವಾಹಿತರೂ ಮಧುಚಂದ್ರಕ್ಕೆ ಹೋಗುವುದುಂಟು. ನಮ್ಮ ಬಾಲಿವುಡ್ ತಾರೆಗಳು ಮಾಲ್ದಿವ್ಸ್‌ನಲ್ಲಿ ವಿಹರಿಸಿದ್ದನ್ನು ಮಾಧ್ಯಮಗಳು ಅತಿರಂಜಿಸಿ ವಿವರಿಸುತ್ತಾರೆಯೇ ವಿನಾ ಅದರ ನೈತಿಕತೆಯನ್ನು ಪ್ರಶ್ನಿಸುವುದಿಲ್ಲ. ಹದಿನೆಂಟರ ನಂತರ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಧರ್ಮ, ಸಂಬಂಧಗಳನ್ನು ಆಯ್ಕೆಮಾಡುವ ಸ್ವಾತಂತ್ರ್ಯವಿದೆಯೆಂದು ತಿಳಿದರೂ ಅದು ವ್ಯಭಿಚಾರದ ಹಂತಕ್ಕಿಳಿಯಬಾರದಲ್ಲ! ಕಾಲ ಕೆಡುವುದಿಲ್ಲ, ನಾವು ಕೆಡುತ್ತೇವೆ. ನಾವು ಕೆಟ್ಟ ಕಾಲಕ್ಕೆ ನಮಸ್ಕಾರ!

ಏನಿದ್ದರೂ ಇವೆಲ್ಲ ಖಾಸಗಿ ಬದುಕಿಗೆ ಸಂಬಂಧಿಸಿದವು. ಮನುಷ್ಯ ಯಾವಾಗ ಸಾಮಾಜಿಕನಾಗುತ್ತಾನೋ ಆಗ ವೈಯಕ್ತಿಕತೆ ಬದಿಗೆ ಸರಿಯುತ್ತದೆ. ಮದುವೆಯ ಮಂಟಪದಲ್ಲಿ ಸಮಾರಂಭದ, ಬದುಕಿನ, ಜಗತ್ತಿನ ಕೇಂದ್ರದಂತಿರುವ ದಂಪತಿಗಳು ಒಂದಷ್ಟು ದಿನಗಳ ನಂತರ ಗಂಭೀರವಾಗುತ್ತಾರೆ; ಸಮಾಜದೆದುರು ಸಾಮಾನ್ಯರಾಗುತ್ತಾರೆ ಅಥವಾ ತಮಗೆ ಮೊದಲ ಮಗು ಹುಟ್ಟಿದಾಗ ತಮ್ಮ ಬದುಕನ್ನು ಹಿಂದೆ ಸರಿಸಿ ಮಗುವನ್ನು ಕೇಂದ್ರವಾಗಿಸುತ್ತಾರೆ. ಅಂದರೆ ಸಾರ್ವಜನಿಕರಾಗುತ್ತಾ ಹೋದಂತೆ ಮನುಷ್ಯರು ಪಾತ್ರದಲ್ಲಿ ಹಿರಿದಾದಾಗಲೂ ಗಾತ್ರದಲ್ಲಿ ಕಿರಿದಾಗುತ್ತಾರೆ. ಅದರಲ್ಲೂ ಅಧಿಕಾರ ಬಂದರೆ ಸಮಾಜಕ್ಕೆ ತಾನು ಹೊಣೆಯಾಗುತ್ತಿದ್ದಂತೆ ತಾನು ಕಾಲಕ್ಕೆ ಕಾರಣವೆಂಬ ಅರಿವು ಮೂಡಿ ವೈಯಕ್ತಿಕತೆ ಅಳಿದು ಸಮಷ್ಟಿಭಾವ ಉಳಿಯುತ್ತದೆ. ‘ಆಗುತ್ತದೆ’ಯೆಂಬ ಭರವಸೆಯಿಲ್ಲದಲ್ಲಿ ‘ಆಗಬೇಕು’ ಎಂಬ ಮಾತನ್ನಾಡಬೇಕಾಗುತ್ತದೆ. ಹೊಣೆ ಪಡೆದ, ಹೊಣೆ ಹೊತ್ತ ಎಲ್ಲರೂ ಹೊಣೆಯರಿತಿರಬೇಕಾಗಿಲ್ಲವಲ್ಲ!

ಭಾರತೀಯ ಸಂಪ್ರದಾಯದ ವೈವಾಹಿಕ ಸಂಬಂಧವನ್ನು ಮತ್ತು ನೈತಿಕತೆಯನ್ನು ಮೀರಿದ ಮತ್ತು ಎಚ್‌ಐವಿ ಪಾಸಿಟಿವ್‌ನ ಅಪಾಯವಿರಬಲ್ಲ ‘ಲಿವ್-ಇನ್-ರಿಲೇಷನ್‌ಶಿಪ್’ನ ಮೂಲಕ ಭಾಜಪವು ಎಷ್ಟು ಕಾಲ ತನ್ನ ಆಯುಸ್ಸನ್ನು ಹಿಗ್ಗಿಸಿಕೊಳ್ಳುತ್ತದೆಯೋ ಎಂದು ಹೇಳುವುದು ಕಷ್ಟ. ಇದೊಂದು ರೀತಿಯ ರೋಗಗ್ರಸ್ತ ಮಧುಚಂದ್ರ.

2020ರಲ್ಲಿ ಲಾಕ್‌ಡೌನ್ ಘೋಷಣೆಯಾದ ನಂತರದಲ್ಲಿ ಕೊರೋನಕ್ಕಿಂತಲೂ ಅದರ ನಿಯಂತ್ರಣಕ್ಕಾಗಿ ಹೇರಿದ ನಿಯಮ ನಿಬಂಧನೆಗಳು ಜನತೆಯನ್ನು ಹೈರಾಣಾಗಿಸಿದ್ದವು. ಕಾರ್ಮಿಕರು, ಬೀದಿಬದಿಯ ವ್ಯಾಪಾರಿಗಳಷ್ಟೇ ಅಲ್ಲ, ಸ್ವಂತ ದುಡಿಮೆ ಮಾಡಿ ಜೀವಿಸುವವರು, ಕಲ್ಯಾಣ ಮಂಟಪ, ಸಿನೆಮಾ ಥಿಯೇಟರ್, ಜಿಮ್, ಮಾಲ್ ಇವುಗಳ ಮಾಲಕರು, ಸಿನೆಮಾ, ನಾಟಕ, ಮುಂತಾದ ಕಲಾಪ್ರಕಾರಗಳಲ್ಲಿರುವ ವೃತ್ತಿಪರರು ಸೋತರು. ಶಿಕ್ಷಣದ ಹಾದಿಯ ಎಲ್ಲ ಎಳೆಯ ಮನಸ್ಸುಗಳು ಅನಾಥವಾದವು. ಆನೆಯನ್ನು ತೋರಿಸುವುದರ ಬದಲಾಗಿ ಆನೆ ನೀರು ಕುಡಿಯುವ ಕೆರೆಯನ್ನು ತೋರಿಸಿದಂತೆ ಶಿಕ್ಷಣದ ಹಾದಿ ಬದಲಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಕನಸುಗಳು ಮೂಡದೆಯೇ ಸತ್ತುಹೋದವು; ಆಸೆಯ ಒರತೆಗಳು ಬತ್ತಿಹೋದವು. ಕೊರೋನದ ಮೊದಲ ಅಲೆಯ ನಿರ್ವಹಣೆಯು ಸಾಕಷ್ಟು ಟೀಕೆಗೊಳಗಾಯಿತು. ವೈದ್ಯರು ಪಿಪಿಇ ಕಿಟ್ಟಿನೊಳಗಿನಿಂದಲೇ ತಮ್ಮ ಬದುಕನ್ನು ಇಣುಕಿ ನೋಡಬೇಕಾಗಿತ್ತು. ಆದರೂ ಜನತೆಯು ಸರಕಾರ ನಮ್ಮನ್ನುಳಿಸಲು ಏನೋ ಮಾಡುತ್ತಿದೆ ಎಂಬ ಅನುಕಂಪ ಮಿಶ್ರಿತ ಬೆಂಬಲವನ್ನು ನೀಡಿತು.

ಆದರೆ ಸರಕಾರವು ಈ ಎಲ್ಲ ವ್ಯವಸ್ಥೆಯನ್ನು ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ನಿರ್ವಹಿಸಿದೆಯೇ ಎಂಬುದನ್ನು ನೋಡಿದರೆ ಈ ಅವಧಿಯಲ್ಲಿ ಸರಕಾರಕ್ಕೆ ಜನರ ಭದ್ರತೆಗಿಂತ ತಮ್ಮ ಅಧಿಕಾರದ ಭದ್ರತೆ ಹೆಚ್ಚು ಅಗತ್ಯವಾಗಿತ್ತು. ಅದಕ್ಕಾಗಿ ರಾಜಕಾರಣದ ಕೌಟಿಲ್ಯದಲ್ಲಿ ಏನು ಸಾಧ್ಯವೋ ಅದನ್ನು ಮಾಡಿದ್ದನ್ನು ದೇಶದುದ್ದಗಲಕ್ಕೂ ಗಮನಿಸಬಹುದು. ಶಂಖ-ಜಾಗಟೆ-ದೀಪ-ಆರತಿಗಳ ಮೂಲಕ ಭಾರತದೆಲ್ಲೆಡೆ ಸದ್ದುಗದ್ದಲದ ಗೊಂದಲದ ಹೊರತು ಇತರ ಸಾಧನೆ ಶೂನ್ಯವೆಂಬುದು ಸಿಂಹಾವಲೋಕನದಲ್ಲಿ ತಿಳಿಯುತ್ತದೆ. ಕೊರೋನವನ್ನು ತಾವು ಸೋಲಿಸುತ್ತಿದ್ದೇವೆಂಬ ಸುಳ್ಳು ಭರವಸೆಗಳೇ ಜನರನ್ನು ಮರುಳುಮಾಡಿದವು. ಬಹುಪಾಲು ವೈದ್ಯರು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ದುಡಿದರೆ, ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ನಡೆದುಕೊಂಡ ರೀತಿ ಸಂಶಯಾಸ್ಪದ. ರಾಜಕಾರಣಿಗಳಿಗೆ, ಪ್ರಭಾವಿಗಳಿಗೆ ಮತ್ತು ಶ್ರೀಮಂತರಿಗೆ ಚಿಕಿತ್ಸೆ ಸುಲಭದಲ್ಲಿ ಲಭ್ಯವಾದರೆ ಬಡವರು ನಿರ್ಲಕ್ಷ್ಯಕ್ಕೊಳಗಾಗಿ ಬಳಲಿದರು. ಸತ್ತವರು ತಮ್ಮ ಕುಟುಂಬಕ್ಕೂ ಸಿಕ್ಕದೆ ದಫನವಾದರು. ಪೊಲೀಸರಿಗೆ ಹೆಚ್ಚಿನ ಹೊಣೆ ಲಭ್ಯವಾದ್ದರಿಂದ ಅಧಿಕಾರವನ್ನು ಅವರು ಹೇಗೆ ಬೇಕಾದರೂ ಚಲಾಯಿಸುವಂತಾಯಿತು. ಕೆಲವರು ಕರ್ತವ್ಯಕ್ಕೆ ಇನ್ನು ಕೆಲವರು ಅಧಿಕಾರಕ್ಕೆ ನಿಷ್ಠರಾದರು. ಅತಿಯಾದ ನಿರ್ಬಂಧದಿಂದಾಗಿ ಲಂಚ ಮತ್ತು ಭ್ರಷ್ಟಾಚಾರವು ಇನ್ನಷ್ಟು ನೆಲೆಯೂರಿತು. ವಲಸೆ ಕಾರ್ಮಿಕರ ಸಾವು-ನೋವು ಸುದ್ದಿಮಾಡಿತು; ಬರಹ-ಭಾಷಣಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ-ಪ್ರಸಾರವಾಯಿತು. ನಂತರದಲ್ಲಿ ಕೊರೋನ ಹೋಗಿದೆಯೆಂಬ ಸುದ್ದಿ ತಲೆಬರಹವಾಯಿತು. ವಿಶ್ವದಲ್ಲಿ ಭಾರತವೊಂದೇ ಈ ಸಾಧನೆಯನ್ನು ಮಾಡಿದೆಯೆಂಬ ಸುಳ್ಳಿನ ಗುಳ್ಳೆಯನ್ನು ನಮ್ಮ ನಾಯಕರು ಹರಿಯಬಿಟ್ಟರು. ನಿಜವೆಂದರೆ ನ್ಯೂಝಿಲ್ಯಾಂಡ್‌ನ ಹೊರತು ಯಾವ ರಾಷ್ಟ್ರವೂ ಕೊರೋನ ನಿರ್ಮೂಲನದ ಸಮೀಪವೂ ಸುಳಿಯಲಿಲ್ಲ.

ಈಗ ದೇಶದೆಲ್ಲೆಡೆ ಕೊರೋನದ ಎರಡನೆಯ ಅವತರಣಿಕೆ ವ್ಯಾಪಿಸಿದೆ. ಅಪಾಯದ ಎಲ್ಲೆ ಬಲ್ಲವರಿಲ್ಲ. ಸಂಬಳ ಮತ್ತು ನಿವೃತ್ತಿ ವೇತನ ಪಡೆಯುವವರು, ಹಾಗೂ ಸಾಕಷ್ಟು ಹಣ ಕೂಡಿಟ್ಟವರನ್ನು ಹೊರತುಪಡಿಸಿ ಉಳಿದೆಲ್ಲವರು ಸಹಜವಾಗಿಯೇ ಆತಂಕಿತರಾಗಿದ್ದಾರೆ. ದೇಶದೆಲ್ಲೆಡೆ ಲಾಕ್‌ಡೌನಿನ ವಿಷಮತೆ ಸನ್ನಿಹಿತವಾಗಿದೆ. ಆದರೆ ಸರಕಾರ(ಗಳು) ಅತಿರೇಕಗಳನ್ನು ಎದುರಿಸುವ ಸ್ಥಿತಿಯಲ್ಲಿಲ್ಲ. ಮುಂದೇನು ಎಂಬುದು ಯಾರಿಗೂ ತಿಳಿದಿಲ್ಲ. ಕಾರಣ- ಅಧಿಕಾರದ ಮಧುಚಂದ್ರ; ರಾಜಕಾರಣದ ಹುಲಿಸವಾರಿ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top