ಚಿನ್ನದದಿರಿನ ಭಿನ್ನರೂಪಗಳು | Vartha Bharati- ವಾರ್ತಾ ಭಾರತಿ

--

(ಒಲಿವರ್ ಗೋಲ್ಡ್ ಸ್ಮಿತ್ ನ ವಿಕರ್ ಆಫ್ ವೇಕ್‌ಫೀಲ್ಡ್‌ನ ಎರಡು ಕನ್ನಡ ಅವತರಣಿಕೆಗಳು)

ಚಿನ್ನದದಿರಿನ ಭಿನ್ನರೂಪಗಳು

ಎರಡೂ ಕೃತಿಗಳು ಸ್ಮಿಥ್‌ನ ಮಾದರಿ; ಸ್ವಂತ ಸೃಷ್ಟಿ. ಒಳ್ಳೆಯ ಓದು. ಭಿನ್ನ ರೀತಿ-ರುಚಿಯ ಸಂವೇದನಾ/ಸರ್ಜನಶೀಲ ಬರಹಗಾರರಲ್ಲಿ ಸ್ಪಂದನವನ್ನು ಪಡೆಯುವ ಮೂಲಕ ಕನ್ನಡಸಾಹಿತ್ಯವನ್ನು ಸಂಪನ್ನಗೊಳಿಸಿವೆ. ಈ ಇಬ್ಬರು ಲೇಖಕರಿಗೂ ಅವರ ಕಾಲದಲ್ಲಾಗಲೀ ಆನಂತರವಾಗಲೀ ಸಾಹಿತ್ಯ ವರ್ತುಲದಲ್ಲಿ ಮತ್ತು ವಿಶೇಷವಾಗಿ ವಿಮರ್ಶಾವಲಯದಲ್ಲಿ ಸಿಗಬೇಕಾದ ಗೌರವ ಸಿಗಲಿಲ್ಲವೆಂಬುದೇ ವಿಷಾದಕರ ವಿಚಾರ.
ಚಿನ್ನದದಿರು ಸಿಗಬೇಕಾದರೆ ಅಗೆಯಬೇಕಲ್ಲವೇ?


ಕನ್ನಡದಲ್ಲಿ ಭಾರತದ ಇತರ ಭಾಷೆಗಳ ಮತ್ತು ವಿಶ್ವ ಸಾಹಿತ್ಯದ ಅನೇಕ ಕೃತಿಗಳು 19ನೇ ಶತಮಾನದ ಉತ್ತರಾರ್ಧದಿಂದೀಚೆಗೆ ಅನುವಾದ/ಭಾಷಾಂತರ, ಇಲ್ಲವೇ ರೂಪಾಂತರಗೊಂಡಿವೆ. ಇವಲ್ಲದೆ ಅನೇಕ ಕನ್ನಡ ಕೃತಿಗಳು ಇತರ ಭಾಷಾ ಸಾಹಿತ್ಯದ ಪ್ರಭಾವದಿಂದ, ಪ್ರೇರಣೆಯಿಂದ ಬಂದಿವೆ. ಆಧುನಿಕ ಕನ್ನಡ ವಿಮರ್ಶೆಗೂ ಬಹುತೇಕ ಪಾಶ್ಚಾತ್ಯ ವಿಮರ್ಶೆಯೇ ಬೇರು. ಕೆಲವರು ಈ ಪ್ರಭಾವ ಇಲ್ಲವೇ ಪ್ರೇರಣೆ, ಸ್ಫೂರ್ತಿಯನ್ನು ಉಲ್ಲೇಖಿಸಿದ್ದರೆ ಇನ್ನು ಕೆಲವರು ಅವನ್ನು ತಮ್ಮ ಸ್ವಂತವೇ ಎಂಬಂತೆ ಬರೆದಿದ್ದಾರೆ. ಅಪಾರ ಸಂಖ್ಯೆಯ ಇಂಗ್ಲಿಷ್ ಪುಸ್ತಕಗಳು ಕನ್ನಡಕ್ಕೆ ಮುಂಬಾಗಿಲಿನ ಮೂಲಕ, ಕಿಟಿಕಿಯ ಮೂಲಕ, ಹಿತ್ತಿಲ ಬಾಗಿಲಿನ ಮೂಲಕವೂ ಬಂದಿವೆ. ಇವು ಮೂಲವನ್ನು ಓದಲು ಆಸಕ್ತಿ ಮೂಡಿಸಿವೆಯೆಂದೇ ನನ್ನ ತರ್ಕ. ಭಾರತೀಯ ಅನ್ಯಭಾಷೆಗಳ ಕೃತಿಗಳ ಆಮದು ಕೂಡಾ ಇಂಗ್ಲಿಷ್ ಇಲ್ಲವೇ ಇತರ ಭಾರತೀಯ ಅನುವಾದಗಳ ಮೂಲಕ ಬಂದಿವೆ. ಇವನ್ನು ವಿಶ್ಲೇಷಿಸುವ ಒಂದು ಅಧ್ಯಯನವೇ ನಡೆಯಬೇಕು. ನವೋದಯ ಪೂರ್ವದಿಂದಲೇ ಇಂತಹ ಹಲವು ಕೃತಿಗಳು ಪ್ರಕಟವಾಗಿವೆ. ಶೇಕ್ಸ್‌ಪಿಯರ್‌ನಿಂದ ಅಲೆಕ್ಸಾಂಡರ್ ಡೂಮಾನವರೆಗೆ ಗಯಟೆಯಿಂದ ಗೋಲ್ಡ್‌ಸ್ಮಿಥ್‌ನ ವರೆಗೆ ಯುರೋಪಿನ ಇಂತಹ ಕೃತಿಗಳ ಅವತಾರಗಳನ್ನು ಲೇಖಕರ ಸ್ವಂತ ಕೃತಿಗಳನ್ನು ಓದುವಷ್ಟೇ ಆಸಕ್ತಿಯಿಂದ ಕನ್ನಡಿಗರು ಓದುತ್ತಿದ್ದರು. ಹಳೆಯ ತಲೆಮಾರಿನ ಓದುಗರ ಸಂಗ್ರಹದಲ್ಲಿ ಸ್ವಂತ ಕೃತಿಗಳಷ್ಟೇ ಪ್ರಮಾಣದ/ಸಂಖ್ಯೆಯ ಇಂತಹ ಕೃತಿಗಳಿರುತ್ತಿದ್ದವು. ಕೆಲವು ಕಾಲಮಾನದಲ್ಲಿ ಓದುಗರಿಂದಾಗಿ ಉಳಿದು ಜನಪ್ರಿಯವಾದರೆ ಇನ್ನು ಕೆಲವು ವಿಮರ್ಶೆಯ ಪ್ರಭಾವದಿಂದ ಉ/ಅಳಿದವು. ಆದರೂ ಯಾವುದೇ ಕೃತಿಯ ಶ್ರೇಷ್ಠತೆಯೆಂದರೆ ಅದು ಗರಿಕೆಹುಲ್ಲಿನಂತೆ ಬೇಸಿಗೆಯಲ್ಲಿ ನಾಶವಾದಂತೆ ಕಂಡರೂ ಒಂದು ಮಳೆಗೇ ಮೊಳೆತು ತನ್ನ ಹಸಿರು ಹರಿತ ನೋಟವನ್ನು ಬೀರುತ್ತದೆ.

ಕನ್ನಡದಲ್ಲಿ ಹಿರಿಯ ವಿದ್ವಾಂಸ ಪ್ರೊ. ಪ್ರಧಾನ್ ಗುರುದತ್ತರೇ ಮೊದಲಾದವರು ಅನುವಾದ/ಭಾಷಾಂತರ ಸಾಹಿತ್ಯದಲ್ಲಿ ಪ್ರಮುಖ ಅಧ್ಯಯನ ಮಾಡಿದವರು; ದುಡಿದವರು. ನಿಖರವಾಗಿ ಇಷ್ಟೇ ಅನುವಾದ, ರೂಪಾಂತರ, ಆಗಿವೆಯೆಂಬ ವಿವರಗಳು ಲಭ್ಯವಿಲ್ಲ. ನವೋದಯ ಮತ್ತು ಅದಕ್ಕೂ ಮೊದಲು ಒಂದೇ ಮಾದರಿಯಿಂದ ಸೃಷ್ಟಿಯಾಗಿರುವ ಎರಡು ಕೃತಿಗಳನ್ನು ಆಯ್ದು ಅವುಗಳ ಮಹತ್ವವನ್ನು ಗುರುತಿಸುವ ಪ್ರಯತ್ನ ನನ್ನದು. ಸಮುದ್ರದ ನೀರನ್ನು ಬೊಗಸೆಯಲ್ಲಿ ಹಿಡಿದು ಸಮುದ್ರವನ್ನೇ ಹಿಡಿದಿದ್ದೇನೆಂದು ಹೇಳುವುದು ಮೂರ್ಖತನವಾದೀತು. ಒಲಿವರ್ ಗೋಲ್ಡ್ ಸ್ಮಿತ್ 19ನೇ ಶತಮಾನದ ಐರಿಷ್ ಮೂಲದ ಆಂಗ್ಲ ಕವಿ, ಕಾದಂಬರಿಕಾರ. ಅವನ ಸಾಹಿತ್ಯದ ವಿಷದವಾದ ವಿಮರ್ಶೆ ನನ್ನ ಉದ್ದೇಶವಲ್ಲ. ಈ ಪ್ರಸಿದ್ಧ ಸಾಹಿತಿ 1766ರಲ್ಲಿ ಬರೆದ ‘ದ ವಿಕರ್ ಆಫ್ ವೇಕ್‌ಫಿಲ್ಡ್’ ಒಂದು ಪ್ರಸಿದ್ಧ ಕಾದಂಬರಿ. ಬದುಕಿನಲ್ಲಿ ಶ್ರದ್ಧೆ ಮತ್ತು ನಂಬಿಕೆ ಬದುಕಿನ ಏಳುಬೀಳುಗಳಲ್ಲಿ ಮನುಷ್ಯನನ್ನು ಮುನ್ನಡೆಸುತ್ತದೆಂಬ ಆಶಯವನ್ನು ಈ ಕೃತಿ ರೂಪಿಸುತ್ತದೆ.

ಕಥಾವಸ್ತುವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ ಇದು ಡಾ. ಚಾರ್ಲ್ಸ್ ಪ್ರಿಮೋರ್ಸ್ ಎಂಬ ಒಬ್ಬ ಸಜ್ಜನ ಸಂಸಾರಿಯ ಕತೆ. ಆತ ಶ್ರದ್ಧೆಯ ಪಾದ್ರಿ. ಆತನಿಗೆ ದೆವೋರಾ ಎಂಬ ಪತ್ನಿ, ಜಾರ್ಜ್ ಎಂಬ ಮಗ, ಒಲಿವಿಯಾ, ಸೋಫಿಯಾ ಎಂಬ ಹೆಣ್ಣು ಮಕ್ಕಳು. ಶಿಸ್ತಿನ ಜೀವನದಿಂದಾಗಿ ಅಗತ್ಯದ ಹಣವನ್ನುಳಿಸಿದ್ದ. ಆತನ ಮಗ ಜಾರ್ಜ್‌ಗೆ ಅರಬೆಲ್ಲ ಎಂಬ ಸ್ಥಿತಿವಂತರ ಮಗಳೊಂದಿಗೆ ಮದುವೆ ನಿಶ್ಚಯವಾಗುತ್ತದೆ. ಇನ್ನೇನು ಮದುವೆ ನಡೆಯುತ್ತದೆಯೆಂಬಾಗ ಚಾರ್ಲ್ಸ್‌ನ ಉಳಿತಾಯದ ಹಣವೆಲ್ಲ ಷೇರುಪೇಟೆಯಲ್ಲಿ ನಷ್ಟವಾದ ವರದಿ ಬರುತ್ತದೆ. ಮದುವೆ ನಿಂತುಹೋಗುತ್ತದೆ. ಜಾರ್ಜ್‌ನನ್ನು ಪಟ್ಟಣಕ್ಕೆ ಕಳುಹಿಸಿ ಎಲ್ಲರೂ ಊರನ್ನು ತ್ಯಜಿಸಿ ಅಲ್ಲಿ ಸ್ಕ್ವೈರ್ ಥಾರ್ನ್‌ಹಿಲ್ ಎಂಬವನ ಮನೆಯಲ್ಲಿ ಬಾಡಿಗೆಗಿರುತ್ತಾರೆ. ಆತನಿಗೆ ಸರ್ ವಿಲಿಯಮ್ ಥಾರ್ನ್‌ಹಿಲ್ ಎಂಬ ಚಿಕ್ಕಪ್ಪನಿದ್ದಾನೆ. ಬಚ್ರಿಲ್ ಎಂಬ ಬಡ ವಿಕ್ಷಿಪ್ತ ವ್ಯಕ್ತಿ ಸ್ಕ್ವೈರ್‌ನ ಜೊತೆ ಆಗಾಗ ಬರುತ್ತಿರುತ್ತಾನೆ. ಒಲಿವಿಯಾ ಸ್ಕ್ವೈರ್‌ನನ್ನು ಇಷ್ಟಪಡುತ್ತಾಳೆ. ಆಕೆ ಓಡಿಹೋಗುತ್ತಾಳೆ. ಎಲ್ಲರ ಸಂಶಯ ಬಚ್ರಿಲ್ ಮೇಲೆ. ಆದರೆ ಆಕೆ ಓಡಿಹೋಗುವುದಕ್ಕೆ ಕುಮ್ಮಕ್ಕು ನೀಡಿದವನು ಸ್ಕ್ವೈರ್. ಆತ ಸ್ತ್ರೀವ್ಯಾಮೋಹಿ. ಆತನ ಉದ್ದೇಶ ಆಕೆಯನ್ನು ಮದುವೆಯಾದಂತೆ ನಟಿಸಿ ಕೈಬಿಡುವುದು. ತನ್ಮಧ್ಯೆ ಸೋಫಿಯಾ ನೀರಿನಲ್ಲಿ ಮುಳುಗುತ್ತಾಳೆ. ಆಕೆಯನ್ನು ಬಚ್ರಿಲ್ ರಕ್ಷಿಸುತ್ತಾನೆ. ಓಡಿಹೋದ ಒಲಿವಿಯಾಳನ್ನು ಚಾರ್ಲ್ಸ್ ಕರೆದುಕೊಂಡು ಬರುತ್ತಾನೆ. ಅಷ್ಟರಲ್ಲಿ ಅವರ ಮನೆ ಬೆಂಕಿಗೆ ಆಹುತಿಯಾಗಿ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ. ಆದರೆ ಸ್ಕ್ವೈರ್ ಬಾಡಿಗೆಗೆ ಒತ್ತಾಯಿಸಿ ಚಾರ್ಲ್ಸ್‌ನನ್ನು ದಸ್ತಗಿರಿಮಾಡಿಸುತ್ತಾನೆ. ಸೋಫಿಯಾ ಕಾಣದಾಗುತ್ತಾಳೆ. ಒಲಿವಿಯಾ ಸತ್ತ ಸುದ್ದಿ ಬರುತ್ತದೆ. ಬಚ್ರಿಲ್ ಸೋಫಿಯಾಳನ್ನು ರಕ್ಷಿಸುತ್ತಾನೆ; ಒಲಿವಿಯಾ ಬದುಕಿರಬಹುದೆಂದೇ ಹೇಳುತ್ತಾನೆ. ಎಲ್ಲ ಕಷ್ಟ-ನಷ್ಟಗಳ ಬಳಿಕ ಬಚ್ರಿಲ್ ಎಂಬವನೇ ವಿಲಿಯಮ್ ಥಾರ್ನ್‌ಹಿಲ್ ಎಂಬುದು ಗೊತ್ತಾಗುತ್ತದೆ. ಕೊನೆಯಲ್ಲಿ ಜಾರ್ಜ್ ಅರಬೆಲ್ಲಳನ್ನು ಮದುವೆಯಾಗುತ್ತಾನೆ. ವಿಲಿಯಮ್ ಸೋಫಿಯಾಳನ್ನು ಮದುವೆಯಾಗುತ್ತಾನೆ. ಸ್ಕ್ವೈರ್ ಒಲಿವಿಯಾಳನ್ನು ಮದುವೆಯಾಗುತ್ತಾನೆ ಮತ್ತು ಆಕೆಗೆ ಮೋಸಮಾಡಿಲ್ಲವೆಂಬ ಅರಿವಾಗುತ್ತದೆ. ಚಾರ್ಲ್ಸ್ ಕಳೆದುಕೊಂಡ ಸಂಪತ್ತು ಮರಳಿ ಮೊದಲಿನ ಶ್ರೀಮಂತಿಕೆ ಉಳಿಯುತ್ತದೆ. ಹಳೆಯ ಭಾರತೀಯ ಚಲನಚಿತ್ರಕತೆಗಳಂತೆ ಈ ಕೃತಿಯಲ್ಲಿ ಸುಖ-ದುಃಖ, ಕಷ್ಟ-ನಷ್ಟ ಎಲ್ಲವೂ ಇದೆ. ಶುಭಮಂಗಳವಾಗುತ್ತದೆ. ಬದುಕಿನ ಎಲ್ಲ ಸಾಂಸಾರಿಕ ತಳಮಳಗಳನ್ನೂ ಇತ್ಯಾತ್ಮಕವಾದ ನಂಬಿಕೆ ಕಾಪಾಡುತ್ತದೆಯೆಂಬ ಸಂದೇಶವನ್ನು ಈ ಮನೋರಂಜಕ ಕೃತಿ ನೀಡುತ್ತದೆ.

 ತೆಲುಗಿನ ಹಿರಿಯ ಲೇಖಕ ರಾವ್‌ಬಹದೂರ್ ಕಂದುಕುರಿ ವೀರೇಶಲಿಂಗಂ (1848-1919) ಅವರು 1890ರಲ್ಲಿ ‘ರಾಜಶೇಖರಚರಿತ’ ಎಂಬ ತೆಲುಗು ರೂಪಾಂತರದ ಮೂಲಕ ಇದನ್ನು ಭಾರತೀಯ ಭಾಷೆಯೊಂದಕ್ಕೆ ಮೊದಲು ತಂದರು. (ಇದು ಆನಂತರದಲ್ಲಿ ಕನ್ನಡಕ್ಕೆ ಅನುವಾದವಾಗಿದೆಯಂತೆ!) ಆನಂತರ ಮರಾಠಿಯಲ್ಲಿ ಆರ್.ವಿ.ಟಿಕೇಕರ್ ಎಂಬವರು 1898ರಲ್ಲಿ ‘ವಾಯಿಕರ್‌ಭಟ್‌ಜೀ’ ಎಂಬ ಶೀರ್ಷಿಕೆಯೊಂದಿಗೆ ರೂಪಾಂತರಿಸಿದರು. ಈ ಕೃತಿಯನ್ನು ಮೊದಲಿಗೆ ಕನ್ನಡಿಸಿದವರು 20ನೇ ಶತಮಾನದ ಮೊದಲಾರ್ಧದಲ್ಲಿ ತಮ್ಮ ಐತಿಹಾಸಿಕ ಮತ್ತು ಸಾಮಾಜಿಕ ಕಾದಂಬರಿಗಳ ಮೂಲಕ ಖ್ಯಾತರಾಗಿದ್ದ ಭೀ. ಪ. ಕಾಳೆಯವರು. ಅವರು 1936ರಲ್ಲಿ ‘ನನ್ನ ಗೃಹಿಣಿ’ ಎಂಬ ಹೆಸರಿನಲ್ಲಿ ಇದನ್ನು ರೂಪಾಂತರಿಸಿದರು. ಗೋಲ್ಡ್‌ಸ್ಮಿಥ್‌ನ ಮೂಲಕೃತಿ ಮತ್ತು ಟಿಕೇಕರ್ ಅವರ ಮರಾಠಿ ‘ರೂಪಾಂತರದ ನಿರೀಕ್ಷಣದಿಂದ’ ಬರೆಯಲ್ಪಟ್ಟಿದೆ ಎಂದಿದ್ದಾರೆ ಲೇಖಕರು. ವೇಕ್‌ಫೀಲ್ಡ್‌ನ ಕಥಾ ವಸ್ತುವನ್ನು ಕನ್ನಡದ ತುಂಗಭದ್ರಾ ನದೀತೀರದ ಸರ್ಪಪುರಿಯೆಂಬ ನೆಲಕ್ಕೊಗ್ಗಿಸಿ ಸಂಪ್ರದಾಯದ ಬ್ರಾಹ್ಮಣ ಗುರುಭಟ್ಟನನ್ನು ಚಾರ್ಲ್ಸ್ ಆಗಿಸಿ ಪ್ರಥಮ ಪುರುಷ ನಿರೂಪಣೆಯ ಮೂಲಕ ಸಾಂಸಾರಿಕ ಹಾಗೂ ಸಾಮಾಜಿಕ ಸಮಸ್ಯೆಗಳನ್ನೇ ಮಾರ್ಮಿಕವಾಗಿ ಚಿತ್ರಿಸಿದ್ದಾರೆ; ನಮ್ಮ ಪರಂಪರೆಯ ಕಥೆಯಾಗಿಸಿದ್ದಾರೆ.

ಎಲ್ಲ ತುಡಿತಗಳೊಂದಿಗೂ ಬದುಕಿನಲ್ಲಿ ಮುಳುಗೇಳುವ ಮಂದಿಯ ಸಂಸಾರಯಾತ್ರೆಯ ಈ ಕಥನದಲ್ಲಿ ಬದುಕಿನ ಕತೆ-ವ್ಯಥೆಯಿದೆ. ಲೇಖಕರು ಮಾಡಿದ ಮುಖ್ಯ ಬದಲಾವಣೆಯೆಂದರೆ ತನ್ನ ಕತೆ ಹೇಳುತ್ತಲೇ ಕಥಾನಾಯಕ ಇಡೀ ಕಥನವನ್ನು ತನ್ನ ಪತ್ನಿಯ ಕತೆಯಾಗಿಸುತ್ತಾನೆ. ಆಕೆಯ ಸ್ಪಂದನ, ಪ್ರತಿಕ್ರಿಯೆ, ಯೋಚನೆ, ಯೋಜನೆ ಇವೆಲ್ಲ ಅನುಕಂಪಕ್ಕಿಂತ ಹೆಚ್ಚಾಗಿ ಅಭಿಮಾನಕ್ಕೆ ಪಾತ್ರವಾಗುವಂತೆ ಇಲ್ಲಿ ಆಕೆಯ ಪಾತ್ರಚಿತ್ರಣವಿದೆ. ಎಲ್ಲೋ ಒಂದುಕಡೆ ಮಾತ್ರ ‘ಕಾವಕ್ಕ’ ಎಂದು ಆಕೆಯನ್ನು ಕರೆಯುವುದನ್ನು ಹೊರತುಪಡಿಸಿದರೆ ಆಕೆಯ ಹೆಸರು ‘ನನ್ನ ಗೃಹಿಣಿ’ ಎಂದೇ ಇದೆ! ಮೊದಲ ಎರಡು ಅಧ್ಯಾಯಗಳಲ್ಲಿ ಆಕೆಯ ವಿವರಣೆಯೇ ಇದೆ. ಕೃತಿಯ ಆರಂಭದಲ್ಲೇ ‘‘ಸಂಸಾರದಲ್ಲಿ ಮನುಷ್ಯನಿಗೆ ಸುಖಕ್ಕಿಂತ ದುಃಖವೇ ಹೆಚ್ಚು ಎಂಬ ಉದ್ಗಾರವು ಪ್ರತಿಯೊಬ್ಬನ ಬಾಯಿಂದ ಹೊರಡುತ್ತಿರುವುದೇನೋ ನಿಜ; ಆದರೆ ಇಂತಹ ದುಃಖಮಯ ಹಾಗೂ ಕ್ಲೇಶದಾಯಕವಾದ ಸಂಸಾರವನ್ನು ಕಂಡೂ ಕಂಡು ತ್ಯಾಗಮಾಡುವಂತಹ ಭಗವದ್ಭಕ್ತರೆಷ್ಟು ಜನರಿರುವರೆಂಬುದನ್ನು ಎಣಿಕೆಹಾಕಹೋದರೆ ಸಿಗುವುದಿಲ್ಲ’’ ಎನ್ನುತ್ತಾನೆ ನಿರೂಪಕ ಗುರುಭಟ್ಟ.

ವ್ಯವಸ್ಥೆಯ ಕುರಿತ ಕ್ರೂರ ವ್ಯಂಗ್ಯವು ಇಲ್ಲಿ ಶಕ್ತವಾಗಿ ಮೂಡಿದೆ: ‘‘ಇಳಿಹೊತ್ತಿನಲ್ಲಿ ಹಾಳುಹರಟೆಯ ಕೊಚ್ಚುವ ನೆವದಿಂದಲೂ ನನ್ನ ಬಳಿಯ ಉತ್ತಮವಾದ ನಸ್ಯದ ಒಂದೆರಡು ಚಿಮಟಿಗೆಗಳೇನಾದರೂ ದೊರೆಯುವವೇನೆಂಬ ಆಶೆಯಿಂದಲೂ ನಮ್ಮೂರಿನ ಕೆಲ ಗೊಡ್ಡು ವೈದಿಕರು ನನ್ನ ಬಳಿಗೆ ದಿನಾಲು ಬರುತ್ತಿದ್ದರು. ಆದರೆ ಆ ಹಾಳು ಹರಟೆಗಳ ಇಲ್ಲವೇ ಪರಾನ್ನಪುಷ್ಟತೆಯಿಂದ ಹೊಟ್ಟೆ ಬೆಳೆದು ಅಕರಾಳ-ವಿಕರಾಳವಾಗಿ ತೋರುವ ಆ ಬ್ರಾಹ್ಮಣರ ಬಗ್ಗೆ ಅವಳಿಗೆ ಎಂದೂ ಬೇಸರವುಂಟಾಗುತ್ತಿರಲಿಲ್ಲ.’’ ಹಿರಿಯ ಮಗನಿಗೆ ಊರಿನ ಹುಡುಗಿಯನ್ನೇ ಮದುವೆಯಾಗುತ್ತದೆ. ದೊಡ್ಡ ಮಗಳಿಗೆ ಮದುವೆಯಾಗುತ್ತದೆ. ಎರಡನೆಯ ಮಗನಿಗೂ ಅಪ್ರಾಪ್ತವಾಗಿ ಮದುವೆಯಾಗುತ್ತದೆ. ಸಂಸಾರ ಹೇಳಿಕೊಳ್ಳಲಾಗದ ಆರ್ಥಿಕ ಸಂಕಟಕ್ಕೆ (‘‘ಅವ್ವಾ ಹಸಿವು-ಅವ್ವಾ ಹಸಿವು ಎಂದು ಅವು ಅವಳನ್ನು ಕಾಡಹತ್ತಲು, ಅವಳು ಈಗ ಬಡಿಸುವೆನು; ಇನ್ನೊಂದು ಕ್ಷಣಕ್ಕೆ ಬಡಿಸುವೆನು ಎಂದು ಈಗಿನ ನ್ಯಾಯಾಸನಗಳಂತೆ ಅವಧಿಯ ಮೇಲೆ ಅವಧಿಯನ್ನು ಹೇಳುತ್ತಿದ್ದಳೇ ಹೊರತು..’’) ತುತ್ತಾಗುತ್ತದೆ.

ಶ್ರೀಮಂತಿಕೆಗೆ ಬಳಸುವ ಪದವನ್ನು ಆಯ್ದು ‘ದಾರಿದ್ರ್ಯವು ತುಳುಕುತ್ತಿರತಕ್ಕದ್ದು!’ ಎಂಬ ವಿಷಾದವಿದೆ. ಆನಂತರ ಅನಿವಾರ್ಯವಾಗಿ ಎಲ್ಲರೂ ಬೆಂಗಳೂರಿಗೆ ವಲಸೆಹೋಗುತ್ತಾರೆ. ಅಲ್ಲಿ ಸಾಲ-ಸೋಲವಾಗಿ ಹತಾಶೆಯ ಅಂಚಿಗೆ ತಲುಪಿದಾಗ ಹಿರಿಯ ಮಗನಿಗೆ ಕೆಲಸ ಸಿಗುತ್ತದೆ; ಗುರುಭಟ್ಟನಿಗೆ ಸಾಮಾಜಿಕವಾಗಿ ವೃತ್ತಿಗೌರವವೂ ಲಭಿಸುತ್ತದೆ. ಎರಡನೆಯ ಮಗಳು ಸಿರಿವಂತ ಕುಟುಂಬಕ್ಕೇ ಮದುವೆಯಾಗುತ್ತಾಳೆ. ಆದರೆ ಎರಡನೆಯ ಮಗ ಕ್ರೈಸ್ತಧರ್ಮಕ್ಕೆ ಮತಾಂತರವಾಗುತ್ತಾನೆ. ದೊಡ್ಡ ಮಗಳು ವಿಧವೆಯಾಗುತ್ತಾಳೆ. ಹಿರಿಯ ಮಗ ಬಾಳಾ ಸಂಸಾರವನ್ನು ಪೋಷಿಸಿದರೂ ಅತ್ತೆ-ಸೊಸೆಗೆ ಸರಿಬಾರದೆ ಗುರುಭಟ್ಟನೂ ಆತನ ಪತ್ನಿಯೂ ಊರಿಗೆ ಮರಳುವ ನಿರ್ಧಾರ ಮಾಡುತ್ತಾರೆ. ಮರಳಿ ಮಣ್ಣಿಗೆ ಬಂದಾಗ ಆತನ ಪತ್ನಿ ಗತಿಸುತ್ತಾಳೆ. ಗುರುಭಟ್ಟನಿಗೆ ಆ ವರೆಗಿನ ಬದುಕಿನಲ್ಲಿ ಪ್ರಪಂಚದ ವೈಶಾಲ್ಯ, ಮನುಷ್ಯನ ಸಣ್ಣತನ, ಒಳಿತು-ಕೆಡುಕುಗಳು ಸ್ವಾರ್ಥಮೂಲವೆಂಬುದರ ಅರಿವಾಗುತ್ತದೆ. ದುಃಖವೂ ಸ್ವಾರ್ಥಮೂಲವೆಂಬ ತರ್ಕಕ್ಕೆ ಆತ ಒಳಪಡುತ್ತಾನೆ. ಇದಕ್ಕೆ ಆತ ಕೊಡುವ ಸಮರ್ಥನೆ ಹೀಗೆ: ‘‘ಅಳುವುದು ಸತ್ತ ಪ್ರಾಣಿಯ ಶರೀರಕ್ಕೆಂದಲ್ಲ; ಆದರೆ ಆತನ ಮರಣದಿಂದ ಆಗಿರುವ ಅಥವಾ ಆಗಲಿರುವ ಸ್ವಂತದ ಹಾನಿಗಾಗಿ.’’ ಗುರುಭಟ್ಟನ ಶೇಷಾಯುಷ್ಯವು ‘ಅಂತಃಕರಣದ ಧರ್ಮವು ಅಂತಃಕರಣಕ್ಕೇ ಗೊತ್ತಾಗುವ’ ಒಂದು ಸಂಕೇತವಾಗಿ ಉಳಿಯುತ್ತದೆ.

ಕೃತಿ ಸ್ವತಂತ್ರವಾಗಿ ಓದಿಸಿಕೊಂಡು ಹೋಗುತ್ತದೆ. ಎಲ್ಲೂ ಇಂಗ್ಲಿಷ್ ಸಂಸ್ಕೃತಿಯ, ಪ್ರಕೃತಿಯ ನೆರಳಿಲ್ಲ. ಇದು ಪ್ರಕಟವಾದ ಐದು ವರ್ಷಗಳ ಆನಂತರ (1941) ಬೆಳಗಾವಿಯ ಪ್ರಸಿದ್ಧ ವಕೀಲ ಕಟ್ಟಿ ಶೇಷಾಚಾರ್ಯರು (ಇವರು ಸಂಯುಕ್ತ ಕರ್ನಾಟಕದ ಮೊದಲ ಸಂಪಾದಕರು; 1938ರಲ್ಲೇ ‘ಕವಿ ಕನಕದಾಸರು’ ಎಂಬ ವಿಮರ್ಶಾಕೃತಿಯನ್ನೂ ಬರೆದಿದ್ದಾರೆ.) ಗೋಲ್ಡ್‌ಸ್ಮಿಥ್‌ನ ಈ ಕೃತಿಯನ್ನಾಧರಿಸಿ ‘ಶೂರ್ಪಾಲಿಯ ಆಚಾರ್ಯರು’ ಎಂಬ ಕನ್ನಡ ಕಾದಂಬರಿಯನ್ನು ಬರೆದರು. (ಶೇಷಾಚಾರ್ಯರು ಮೂಲಕೃತಿ ಮತ್ತು ಮರಾಠಿ ರೂಪಾಂತರ ಇವೆರಡನ್ನೂ ಉಲ್ಲೇಖಿಸಿದ್ದಾರೆ; ಕಾಳೆಯವರ ಕೃತಿಯನ್ನು ಗಮನಿಸಿದ್ದರೋ ಗೊತ್ತಾಗುವುದಿಲ್ಲ.) ಶೂರ್ಪಾಲಿ ಇಂದಿನ ಜಮಖಂಡಿ ತಾಲೂಕಿನಲ್ಲಿರುವ ಕೃಷ್ಣಾ ನದೀದಂಡೆಯ ಊರು. ಅಲ್ಲಿನ ನರಸಿಂಹ ದೇವಸ್ಥಾನದ ಸದ್ಭಕ್ತ ನರಸಿಂಹಾಚಾರ್ಯರು ಇಲ್ಲಿನ ಚಾರ್ಲ್ಸ್. ಈ ಕೃತಿಗೆ ಶ್ರೀರಂಗರ ಮುನ್ನುಡಿಯಿದೆ. 2008ರಲ್ಲಿ ಮನೋಹರ ಗ್ರಂಥಮಾಲೆಯವರು ಈ ಕೃತಿಯನ್ನು ಮತ್ತೆ ಪ್ರಕಟಿಸಿ ಹೊಸ ಓದುಗರಿಗೆ ಹಳತಿನ ಹೊಳಪನ್ನು ತೋರಿಸಿದ್ದಾರೆ. ಶ್ರೀರಂಗರು ಈ ಕೃತಿಯನ್ನು ‘‘ಭಾರತೀಯ ಸಂಸ್ಕೃತಿಯ ಆಧುನಿಕ ಇತಿಹಾಸವಾಗಿದೆ; ಆಧುನಿಕ ಪದ್ಧತಿಯಲ್ಲಿ ಬರೆದ ಇತಿಹಾಸವೂ ಆಗಿದೆ’’ಯೆಂದು ಬಣ್ಣಿಸಿದ್ದಾರೆ. ಇಲ್ಲಿಯೂ ಕತೆಯನ್ನು ನರಸಿಂಹಾಚಾರ್ಯರ ಮೂಲಕ ನಿರೂಪಿಸಲಾಗಿದೆ.

ಹಳ್ಳಿಗಳ ಪಾರಂಪರಿಕ ಜೀವನವು ವ್ಯಾವಹಾರಿಕ ಪ್ರಪಂಚದ ದಾಳಿಗೆ ಶಿಥಿಲಗೊಳ್ಳುವುದು, ಜೀವನದ ರೀತಿ-ನೀತಿಗಳೇ ಬದಲಾಗುವುದು, ಶ್ರೀರಂಗರು ಹೇಳಿದಂತೆ ‘ಬುದ್ಧಿ-ಭಾವನೆಗಳಲ್ಲಿ ಕ್ರಾಂತಿ’ ಸಂಭವಿಸುವುದು ಇಲ್ಲಿನ ಕತೆ ಹೇಳುವ ತಂತ್ರವಾಗಿದೆ. ಅಧ್ಯಾಯಗಳಿಗೆ ಮಹಾಭಾರತದಂತೆ ‘ಆದಿಪರ್ವ’, ‘ಸಭಾಪರ್ವ’, ‘ಅರಣ್ಯಪರ್ವ’, ‘ವಿರಾಟಪರ್ವ’, ‘ಉದ್ಯೋಗಪರ್ವ’, ‘ಶಾಂತಿಪರ್ವ’ ಮಾತ್ರವಲ್ಲ ‘ಅಜ್ಞಾತವಾಸ’ ಮುಂತಾದ ಶೀರ್ಷಿಕೆಗಳಿವೆ. ಲೇಖಕರು ಶೂರ್ಪಾಲಿಯ ಸಸ್ಯ ವೈವಿಧ್ಯಕ್ಕೂ ಬದುಕಿನ ಸೂತ್ರವನ್ನು ಪೋಣಿಸಿದ್ದಾರೆ: ‘ಹೆಜ್ಜೆಯು ದೃಷ್ಟಿಪೂತವಾಗಿರಬೇಕೆಂದು ಜಾಲಿಯ ಮುಳ್ಳು ಚುಚ್ಚಿ ಜಾಗರೂಕತೆಯನ್ನು ಸೂಚಿಸುವುದು. ಮೊದಲು ಕಹಿಯಾಗಿ ಕಂಡರೂ ಪರಿಣಾಮವು ಪಥ್ಯಕರವೆಂದು ಬೇವು ಸಾತ್ವಿಕತೆಯ ಗುಟ್ಟನ್ನು ಸಾರುವುದು. ಮರ ಮುಪ್ಪಾದರೂ ಹುಳಿಗೆ ಮುಪ್ಪಿಲ್ಲವೆಂದು ಹುಣಸೆಯು ಹೇಳುವುದು.’ ನರಸಿಂಹ ತನ್ನ ಪತ್ನಿಯನ್ನು ಕುಟುಂಬಕ್ಕೆ ಅಧಾರಳೆಂದು ಕೊಂಡಾಡುವುದು ಮಾತ್ರವಲ್ಲ, ಅದು ಕಾದಂಬರಿಯ ಸ್ಥಾಯೀಭಾವವಾಗಿ ಉಳಿಯುತ್ತದೆ. ದಾನಪ್ರವೃತ್ತಿಯಿಂದ ನಷ್ಟವಾದಾಗ ‘‘ಇಹದೊಳಗಿನ ಧರ್ಮದ ಬಿತ್ತಿಗೆ ಪರದಲ್ಲಿ ಫಲ ದೊರೆಯುವುದೆಂಬ ನಂಬಿಗೆಯಿಂದ ಮೌನವಾಗಿರುವೆನು’’ ಎಂಬುದು ಇಡೀ ಕಾದಂಬರಿಯಲ್ಲಿ ಪರಾಥರ್ಕ್ಕೆ ಸಂಕೇತವಾಗಿ ಮೂಡಿದೆ.

‘‘ಮಕ್ಕಳ ಹಾಲಿನ ಹಸಿವನ್ನು ನೀರಿನಿಂದ ತಣಿಸುವೆನು’’ ಎಂಬ ಮಾರ್ಮಿಕ ವಿವರಣೆಯೂ ಇದೆ. ಸಮಾಜ ಬಡತನವನ್ನು ಹೇಗೆ ನೋಡುತ್ತದೆಯೆಂಬುದನ್ನು ‘‘ನಿರ್ಧನನಾದವನ ಸದ್ಗುಣಗಳೂ ದಾರಿದ್ರ್ಯಪಂಕದಲ್ಲಿ ಹೂತು ಹೋಗುವುವು’’ ಎಂಬ ಮೂಲಕ ವ್ಯಕ್ತವಾಗಿದೆ. ಕಾದಂಬರಿ ಸ್ವಲ್ಪಮಟ್ಟಿಗೆ ಉಪದೇಶಾತ್ಮಕವಾಗಿದೆಯೆಂದನ್ನಿಸಿದರೂ ಹೃದ್ಯವಾಗಿದೆ. ಶ್ರೀರಂಗರು ಗುರುತಿಸಿದಂತೆ ನಿರೂಪಕನು ಹೇಳುವ ‘‘ನನ್ನ ಮಾತಿನಲ್ಲಿ ಇಷ್ಟು ದಿವಸ ಸಂಸ್ಕೃತದಲ್ಲಿ ಕನ್ನಡವನ್ನು ಬೆರೆಸುವ ಪರಿಪಾಠವಿತ್ತು. ಈಗ ಕನ್ನಡದಲ್ಲಿ ಸಂಸ್ಕೃತ ಬೆರೆಸುವೆನು.’’ ಎಂಬ ಮಾತಿನಲ್ಲಿ ಇಡಿಯ ಕಾದಂಬರಿಯ ತಿರುಳಿದೆ. ಎರಡೂ ಕೃತಿಗಳು ಸ್ಮಿಥ್‌ನ ಮಾದರಿ; ಸ್ವಂತ ಸೃಷ್ಟಿ. ಒಳ್ಳೆಯ ಓದು. ಭಿನ್ನ ರೀತಿ-ರುಚಿಯ ಸಂವೇದನಾ/ಸರ್ಜನಶೀಲ ಬರಹಗಾರರಲ್ಲಿ ಸ್ಪಂದನವನ್ನು ಪಡೆಯುವ ಮೂಲಕ ಕನ್ನಡಸಾಹಿತ್ಯವನ್ನು ಸಂಪನ್ನಗೊಳಿಸಿವೆ. ಈ ಇಬ್ಬರು ಲೇಖಕರಿಗೂ ಅವರ ಕಾಲದಲ್ಲಾಗಲೀ ಆನಂತರವಾಗಲೀ ಸಾಹಿತ್ಯ ವರ್ತುಲದಲ್ಲಿ ಮತ್ತು ವಿಶೇಷವಾಗಿ ವಿಮರ್ಶಾವಲಯದಲ್ಲಿ ಸಿಗಬೇಕಾದ ಗೌರವ ಸಿಗಲಿಲ್ಲವೆಂಬುದೇ ವಿಷಾದಕರ ವಿಚಾರ.
ಚಿನ್ನದದಿರು ಸಿಗಬೇಕಾದರೆ ಅಗೆಯಬೇಕಲ್ಲವೇ?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top