ಪ್ರಗತಿಯಲ್ಲಿ ಉತ್ತರವನ್ನು ಮೀರಿಸುತ್ತಿರುವ ದಕ್ಷಿಣ ಭಾರತ | Vartha Bharati- ವಾರ್ತಾ ಭಾರತಿ

--

ಪ್ರಗತಿಯಲ್ಲಿ ಉತ್ತರವನ್ನು ಮೀರಿಸುತ್ತಿರುವ ದಕ್ಷಿಣ ಭಾರತ

ಜನಸಂಖ್ಯೆಯ ಆಧಾರದಲ್ಲಿ ಲೋಕಸಭಾ ಸ್ಥಾನಗಳನ್ನು ಪುನರ್‌ವಿಂಗಡಣೆಗೊಳಿಸುವ ಪ್ರಸ್ತಾವಕ್ಕೆ ಕೇಂದ್ರ ಸರಕಾರ ಬುನಾದಿ ಹಾಕಿದೆ. ಒಂದು ವೇಳೆ ಅದು ಕಾರ್ಯಗತಗೊಂಡಲ್ಲಿ ತಮ್ಮ ಪ್ರಜೆಗಳಿಗೆ ಉತ್ತಮವಾದ ಸೇವೆಗಳನ್ನು ಒದಗಿಸುತ್ತಿರುವ ಕೇರಳ, ತಮಿಳುನಾಡಿನಂತಹ ರಾಜ್ಯಗಳಿಗೆ ಕೇಂದ್ರ ಸರಕಾರದ ನೀತಿಗಳು ಹಾಗೂ ಆದ್ಯತೆಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವು ಇನ್ನಷ್ಟು ಕಡಿಮೆಯಾಗಲಿದೆ. ತಮ್ಮ ಪ್ರಜೆಗಳಿಗೆ ಅಸಡ್ಡೆಯಿಂದ ಹಾಗೂ ಅಸಹನೆಯಿಂದ ಸೇವೆ ಸಲ್ಲಿಸುತ್ತಿರುವ ಉತ್ತರಪ್ರದೇಶ, ಬಿಹಾರದಂತಹ ರಾಜ್ಯಗಳು ಕೇಂದ್ರ ಸರಕಾರದ ನೀತಿ ಹಾಗೂ ಆದ್ಯತೆಗಳ ಮೇಲೆ ತಾವು ಈಗಾಗಲೇ ಹೊಂದಿರುವ ಪ್ರಭಾವ ಹಾಗೂ ಆಧ್ಯತೆಗಳನ್ನು ಇನ್ನಷ್ಟು ಹೆಚ್ಚಿಸಲಿವೆ. ಇಂತಹ ಅಸಮಾನತೆಯಿಂದಾಗಿ ಈಗಾಗಲೇ ಶಿಥಿಲಗೊಂಡಿರುವ ಭಾರತದ ಒಕ್ಕೂಟ ವ್ಯವಸ್ಥೆಯು ಹೊಸ ಹೊರೆಗಳನ್ನು ಹಾಗೂ ಒತ್ತಡಗಳನ್ನು ಎದುರಿಸಬೇಕಾಗಿ ಬಂದಿದೆ.


1966ರಲ್ಲಿ ಪ್ರಕಟವಾಗಿದ್ದ ವಾಲ್ಟರ್ ಕ್ರೊಕರ್ ಅವರ ಪುಸ್ತಕಕೃತಿ ‘ನೆಹರೂ: ಎ ಕಂಟೆಂಪರರಿ ಎಸ್ಟಿಮೇಟ್’ ಅನ್ನು ನಾನು ಇತ್ತೀಚೆಗೆ ಮತ್ತೊಮ್ಮೆ ಓದಿದೆ. ಭಾರತದ ಪ್ರಪ್ರಥಮ ಪ್ರಧಾನಿಯ ಬದುಕು ಹಾಗೂ ಸಾಧನೆಯನ್ನು ಒಂದೇ ಸಂಪುಟದಲ್ಲಿ ಅಧ್ಯಯನ ಮಾಡಿದಂತಹ ಅತ್ಯುತ್ತಮ ಪುಸ್ತಕವಾಗಿ ಇಂದಿಗೂ ಇದು ಉಳಿದುಕೊಂಡಿದೆ. ನೆಹರೂ ಆಡಳಿತ ಕಾಲದ ಭಾರತದ ಕುರಿತೂ ಅದು ಅನೇಕ ಕುತೂಹಲಕಾರಿ ವಿಷಯಗಳನ್ನು ಹೇಳುತ್ತದೆ. ನಾನು ವಾಸಿಸುತ್ತಿರುವ ಭಾರತದ ದಕ್ಷಿಣ ಭಾಗದ ಬಗ್ಗೆ ಅವರ ಅಭಿಪ್ರಾಯಗಳನ್ನು ಪರಿಶೀಲಿಸೋಣ.
                                      
 ‘‘ಭಾರತೀಯ ಗಣರಾಜ್ಯದಲ್ಲಿ ದಕ್ಷಿಣ ಭಾರತವನ್ನು ಸಣ್ಣ ಮಟ್ಟದಲ್ಲಿ ಪರಿಗಣಿಸಲಾಗುತ್ತಿದೆ. ಆದರೆ ಹಾಗೆ ಭಾವಿಸುವುದು ದಕ್ಷಿಣ ಭಾರತಕ್ಕೆ ಅನ್ಯಾಯ ಮಾಡಿದಂತೆ. ದಕ್ಷಿಣ ಭಾರತದಲ್ಲಿ ಉತ್ತರ ಭಾರತಕ್ಕಿಂತ ತುಲನಾತ್ಮಕವಾಗಿ ಕಡಿಮೆ ಹಿಂಸಾಚಾರ, ಕಡಿಮೆ ಪ್ರಮಾಣದ ಮುಸ್ಲಿಂ ವಿರೋಧಿ ಅಸಹಿಷ್ಣುತೆ, ವಿಶ್ವವಿದ್ಯಾನಿಲಯಗಳಲ್ಲಿ ಅಶಿಸ್ತು ಹಾಗೂ ಕರ್ತವ್ಯಲೋಪ ಕಡಿಮೆ ಇರುವುದನ್ನು ಕಾಣಬಹುದಾಗಿದೆ. ಉತ್ತಮವಾದ ಶೈಕ್ಷಣಿಕ ಗುಣಮಟ್ಟ, ಉತ್ತಮ ಸರಕಾರ, ನೈರ್ಮಲ್ಯ, ಕಡಿಮೆ ಭ್ರಷ್ಟಾಚಾರ ಹಾಗೂ ಹಿಂದೂ ಪುನರುತ್ಥಾನವಾದದ ಬಗ್ಗೆ ಕಡಿಮೆ ಅಭಿರುಚಿ ಹೀಗೆೆ ಕೆಲವು ನಿರ್ದಿಷ್ಟ ವಿಷಯಗಳಲ್ಲಿ ದಕ್ಷಿಣ ಭಾರತವು ಶ್ರೇಷ್ಠತೆಯನ್ನು ಹೊಂದಿದೆ’ ಎಂದು ಈ ಪುಸ್ತಕದಲ್ಲಿ ಬರೆಯಲಾಗಿದೆ. ಈ ಪದಗಳನ್ನು ಕ್ರೊಕರ್ ಬರೆದ ಅರ್ಧ ಶತಮಾನದ ಬಳಿಕ ಅರ್ಥಶಾಸ್ತ್ರಜ್ಞರಾದ ಸ್ಯಾಮುಯೆಲ್ ಪೌಲ್ ಹಾಗೂ ಕಲಾ ಸೀತಾರಾಮ್ ಶ್ರೀಧರ್ ಅವರು ‘ದಿ ಪ್ಯಾರಾಡಾಕ್ಸ್ ಆಫ್ ಇಂಡಿಯಾಸ್ ನಾರ್ತ್-ಸೌತ್ ಡಿವೈಡ್’ (ಸೇಜ್ ಪಬ್ಲಿಕೇಶನ್ಸ್, 2015) ಎಂಬ ಪುಸ್ತಕವನ್ನು ಪ್ರಕಟಿಸಿದ್ದರು. ಬಹುತೇಕವಾಗಿ ಅಧಿಕೃತ ಮೂಲಗಳಿಂದ ಸವಿಸ್ತಾರವಾದ ಅಂಕಿಅಂಶಗಳನ್ನು ಈ ಪುಸ್ತಕದಲ್ಲಿ ಬಳಸಿಕೊಳ್ಳಲಾಗಿದೆ. ಆರ್ಥಿಕ ಅಭಿವೃದ್ಧಿಯ ವಿಷಯದಲ್ಲಿ ದಕ್ಷಿಣ ಭಾರತವು ಉತ್ತರ ಭಾರತಕ್ಕಿಂತ ಹೆಚ್ಚು ಉತ್ತಮವಾದ ಸಾಧನೆ ಮಾಡಿದೆ ಎಂದು ಈ ಪುಸ್ತಕವು ಪ್ರತಿಪಾದಿಸಿದೆ. ಪೌಲ್ ಹಾಗೂ ಶ್ರೀಧರ್ ಅವರು ಇಲ್ಲಿ ಎರಡು ವಿಧದ ಹೋಲಿಕೆಗಳನ್ನು ಮಾಡಿದ್ದಾರೆ. ಮೊದಲನೆಯದಾಗಿ ಅವರು ದಕ್ಷಿಣ ಭಾರತದ ಪ್ರಮುಖ ರಾಜ್ಯವಾದ ತಮಿಳುನಾಡನ್ನು ಉತ್ತರ ಭಾರತದ ಮಹತ್ವದ ರಾಜ್ಯವಾದ ಉತ್ತರಪ್ರದೇಶದ ಜೊತೆ ಹೋಲಿಸಿದ್ದಾರೆ. ಆನಂತರ ಅವರು ಉತ್ತರ ಭಾರತದ ನಾಲ್ಕು ರಾಜ್ಯಗಳಾದ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳನ್ನು ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಅವಿಭಜಿತ ಆಂಧ್ರಪ್ರದೇಶ ಹಾಗೂ ಕೇರಳದ ಜೊತೆ ಹೋಲಿಕೆ ಮಾಡಿದ್ದಾರೆ.

ಪೌಲ್ ಹಾಗೂ ಶ್ರೀಧರ್ ಈ ಪುಸ್ತಕಕ್ಕಾಗಿ ಬಳಸಿಕೊಂಡ ದತ್ತಾಂಶಗಳು 1960ನೇ ಇಸವಿಯಿಂದ ಆರಂಭಗೊಳ್ಳುತ್ತವೆ. ಆಗ ತಮಿಳುನಾಡು ಜನತೆಯ ತಲಾ ಆದಾಯವು ಉತ್ತರಪ್ರದೇಶದ ಜನರಿಗಿಂತ ಶೇ.51ರಷ್ಟು ಅಧಿಕವಾಗಿತ್ತು. 1980ರ ದಶಕದ ಆರಂಭದಲ್ಲಿ ಈ ವ್ಯತ್ಯಾಸವು ಶೇ.39ಕ್ಕೆ ಸಂಕುಚಿತಗೊಂಡಿತು. ಆದಾಗ್ಯೂ, ಆನಂತರದ ದಶಕಗಳಲ್ಲಿ ಈ ಅಂತರವು ತ್ವರಿತವಾಗಿ ಹೆಚ್ಚತೊಡಗಿತು. 2005ರ ವೇಳೆಗೆ ತಮಿಳುನಾಡಿನ ನಿವಾಸಿಯ ಸರಾಸರಿ ತಲಾ ಆದಾಯವು ಉತ್ತರಪ್ರದೇಶದ ನಿವಾಸಿಯ ತಲಾವಾರು ಸರಾಸರಿ ಆದಾಯಕ್ಕಿಂತ ಶೇಕಡಾ 128ರಷ್ಟಾಗಿತ್ತು (ಈ ಅಂತರವು 2021ರ ಒಳಗೆ ಹೆಚ್ಚುಕಮ್ಮಿ 300 ಶೇಕಡಾದಷ್ಟು ಹೆಚ್ಚಲಿದೆ ಎಂದು ಲಭ್ಯವಿರುವ ಅಂಕಿಅಂಶಗಳು ತಿಳಿಸಿವೆ).

ಸಮಗ್ರ ದಕ್ಷಿಣ ಭಾರತವನ್ನು ಹಾಗೂ ಸಮಗ್ರ ಉತ್ತರ ಭಾರತವನ್ನು ಈ ಪುಸ್ತಕದಲ್ಲಿ ಹೋಲಿಸಲಾಗಿದೆ. ‘‘1960-1961ರ ನಡುವಿನ ಅವಧಿಯಲ್ಲಿ ತಲಾವಾರು ಆದಾಯದ ಮಟ್ಟಿಗೆ ಹೇಳುವುದಾದರೆ ಈ ಎರಡು ಪ್ರಾಂತಗಳ ತಲಾವಾರು ಆದಾಯದಲ್ಲಿನ ವ್ಯತ್ಯಾಸವು ಶೇ.39ರಷ್ಟಿತ್ತು. ಆದರೆ ನಲ್ವತ್ತು ವರ್ಷಗಳ ಬಳಿಕ ಈ ಅಂತರವು ಶೇ.101ರಷ್ಟು ವಿಸ್ತಾರಗೊಂಡಿತ್ತು. 2021ರಲ್ಲಿ ನಾಲ್ಕು ಉತ್ತರ ಭಾರತದ ರಾಜ್ಯಗಳಲ್ಲಿ ವಾರ್ಷಿಕ ತಲಾವಾರು ಆದಾಯವು ಸುಮಾರು 4 ಸಾವಿರ ಅಮೆರಿಕನ್ ಡಾಲರ್ (ಅಂದಾಜು 2,96,605 ರೂ.) ಆಗಿತ್ತು ಹಾಗೂ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಜನರ ಸರಾಸರಿ ತಲಾವಾರು ಆದಾಯವು 10 ಸಾವಿರ ಡಾಲರ್‌ಗಳಿಗೂ ಮೀರಿದ್ದು (ಸುಮಾರು 7,41,455 ರೂ.) ಉತ್ತರ ಭಾರತದ ನಿವಾಸಿಗಳಿಗಿಂತ ಶೇ.250ರಷ್ಟು ಅಧಿಕವಾಗಿದೆ’’ ಎಂದು ಪೌಲ್ ಹಾಗೂ ಶ್ರೀಧರ್ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.

ದಕ್ಷಿಣ ಭಾರತವು ಎರಡು ಕ್ಷೇತ್ರಗಳಲ್ಲಿ ಉತ್ತರ ಭಾರತಕ್ಕಿಂತ ಉತ್ತಮ ಸಾಧನೆ ಮಾಡಿದೆ ಎಂದು ಪೌಲ್ ಹಾಗೂ ಶ್ರೀಧರ್ ಅವರು ವಿಶ್ಲೇಷಿಸಿದ್ದಾರೆ. ಮೊದಲನೆಯದಾಗಿ ಮಹಿಳಾ ಸಾಕ್ಷರತೆ, ಶಿಶುಮರಣ ಹಾಗೂ ಸಾಮಾನ್ಯ ಜೀವಿತಾವಧಿಯಂತಹ ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಉತ್ತಮ ನಿರ್ವಹಣೆಯನ್ನು ದಕ್ಷಿಣ ಭಾರತ ಪ್ರದರ್ಶಿಸಿದೆ. ಎರಡನೆಯದಾಗಿ ತಾಂತ್ರಿಕ ಶಿಕ್ಷಣ, ವಿದ್ಯುತ್‌ಶಕ್ತಿ ಉತ್ಪಾದನೆ ಹಾಗೂ ರಸ್ತೆಗಳ ಗುಣಮಟ್ಟ ಹಾಗೂ ವಿಸ್ತಾರದಂತಹ ಆರ್ಥಿಕ ಅಭಿವೃದ್ಧಿಗೆ ನಿರ್ಣಾಯಕವಾದ ಕ್ಷೇತ್ರಗಳಲ್ಲಿಯೂ ಉತ್ತಮ ಸಾಧನೆ ತೋರಿಸಿದೆ. ಮೇಲೆ ಉಲ್ಲೇಖಿಸಲಾದ ಮೊದಲನೆಯ ಅಂಶಗಳು ಅಧುನಿಕ ಆರ್ಥಿಕತೆಯಲ್ಲಿ ಆರೋಗ್ಯಕರ ಹಾಗೂ ಸುಶಿಕ್ಷಿತ ಪೌರರನ್ನು ಸಿದ್ಧಪಡಿಸುತ್ತವೆಯಾದರೆ, ಎರಡನೇ ಅಂಶಗಳು ಗುಂಪು, ಉತ್ಪಾದನೆ ಹಾಗೂ ಸೇವೆಗಳಲ್ಲಿ ಅಧಿಕ ಪ್ರಮಾಣದ ಉತ್ಪಾದನೆ ಹಾಗೂ ದಕ್ಷತೆಯನ್ನು ಸಾಧ್ಯವಾಗಿಸುತ್ತವೆ.

ಆಡಳಿತಾತ್ಮಕ ಸೂಚ್ಯಂಕಗಳಲ್ಲಿ ಉತ್ತರ ಭಾರತಕ್ಕಿಂತ ದಕ್ಷಿಣ ಭಾರತವು ಗಣನೀಯವಾಗಿ ಉತ್ತಮ ಸಾಧನೆ ಮಾಡಿರುವುದನ್ನು ಪೌಲ್ ಹಾಗೂ ಶ್ರೀಧರ್ ಪತ್ತೆ ಹಚ್ಚಿದ್ದಾರೆ. ದಕ್ಷಿಣದ ರಾಜ್ಯಗಳಲ್ಲಿ ಸರಕಾರಿ ಶಾಲೆಗಳು ಹಾಗೂ ಖಾಸಗಿ ಆಸ್ಪತ್ರೆಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಶಾಲೆಯನ್ನು ಅರ್ಧದಲ್ಲೇ ತ್ಯಜಿಸುವವರ ಸಾಧ್ಯತೆ ಕೂಡಾ ಕಡಿಮೆ ಇದೆ. ವೈದ್ಯರು ಹಾಗೂ ಔಷಧಿ ದಾಸ್ತಾನುಗಳ ಲಭ್ಯತೆಯೂ ಅಧಿಕವಾಗಿದೆ. ಉತ್ತರ ಭಾರತದ ಕೊಳೆಗೇರಿಗಳಿಗೆ ಹೋಲಿಸಿದರೆ, ದಕ್ಷಿಣ ಭಾರತದ ನಗರಗಳ ಕೊಳೆಗೇರಿಗಳು ಹೆಚ್ಚು ಶೌಚಗೃಹಗಳನ್ನು ಹೊಂದಿದ್ದು ಹಾಗೂ ನೈರ್ಮಲ್ಯದಿಂದ ಕೂಡಿವೆ. ಅಲ್ಲದೆ ಉತ್ತಮವಾದಂತಹ ಸುರಕ್ಷಿತವಾದ ಕುಡಿಯುವ ನೀರಿನ ಸಂಪರ್ಕವನ್ನು ಹೊಂದಿವೆ.
ಈಗ ನಂಬಲು ಸಾಧ್ಯವಿಲ್ಲವಾದರೂ, 1960ನೇ ಇಸವಿಗಿಂತ ಮೊದಲು ಗ್ರಾಮೀಣ ಪ್ರದೇಶದ ಬಡತನವು ಉತ್ತರಪ್ರದೇಶಕ್ಕಿಂತ ತಮಿಳುನಾಡಿನಲ್ಲಿ ಅತ್ಯಧಿಕವಾಗಿತ್ತು. 1980ರ ದಶಕದಿಂದಷ್ಟೇ ದಕ್ಷಿಣ ಭಾರತವು ಉತ್ತರ ಭಾರತಕ್ಕಿಂತ ಉತ್ತಮ ನಿರ್ವಹಣೆಯನ್ನು ಪ್ರದರ್ಶಿಸತೊಡಗಿತು ಮತ್ತು 1990ರಿಂದ ಈ ಅಂತರವು ಇನ್ನಷ್ಟು ಹೆಚ್ಚಾಗತೊಡಗಿತು.

ಪೌಲ್-ಶ್ರೀಧರ್ ಅವರ ಅಧ್ಯಯನವು ಅಂಕಿಸಂಖ್ಯೆಗಳನ್ನು ಆಧರಿಸಿದ್ದಾಗಿದೆ. ಅದು ಬಹುತೇಕವಾಗಿ ಸಮಾಜಶಾಸ್ತ್ರೀಯ ಹಾಗೂ ಗುಣಾತ್ಮಕ ವಿಶ್ಲೇಷಣೆಯನ್ನು ಕೈಬಿಟ್ಟಿದೆ. ಅದು ಕೇವಲ ದಕ್ಷಿಣ ಭಾರತದಲ್ಲಿ ನಡೆದಿರುವಂತಹ ಸಾಮಾಜಿಕ ಸುಧಾರಣಾ ಚಳವಳಿಗಳ ಮಹತ್ವದ ಬಗ್ಗೆ ಹೆಚ್ಚೇನೂ ಉಲ್ಲೇಖಿಸಿಲ್ಲ ಹಾಗೂ ಹಿಂದೂ-ಮುಸ್ಲಿಂ ಸಂಘರ್ಷವು ತುಲನಾತ್ಮಕವಾಗಿ ಕಡಿಮೆಯಿರುವುದರ ಬಗ್ಗೆಯೂ ಹೇಳಿಲ್ಲ. ಆದಾಗ್ಯೂ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ದಕ್ಷಿಣ ಹಾಗೂ ಉತ್ತರ ಭಾರತವು ನಾಟಕೀಯವಾದಂತಹ ವೈರುಧ್ಯತೆಯನ್ನು ಯಾಕೆ ಹೊಂದಿವೆಯೆಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಖಂಡಿತವಾಗಿಯೂ ಈ ಅಂಶಗಳು ಮಹತ್ವದ್ದಾಗಿವೆ.

ಪೌಲ್ ಹಾಗೂ ಶ್ರೀಧರ್ ಅವರ ಕೃತಿಯ ಕಾರ್ಯಚೌಕಟ್ಟನ್ನು ಗಮನಕ್ಕೆ ತೆಗೆದುಕೊಂಡರೆ, ವಾಲ್ಟರ್ ಕ್ರೂಕರ್ ಅವರ ಪುಸ್ತಕವನ್ನು ಅವರು ಅಧ್ಯಯನ ಮಾಡದೆ ಇರುವುದರಲ್ಲಿ ಅಚ್ಚರಿಯೇನಿಲ್ಲ. ಆದಾಗ್ಯೂ, 1960ರ ದಶಕದಲ್ಲಿ ಕ್ರೂಕರ್ ಅವರು ಮುನ್ನೆಲೆಗೆ ತಂದಂತಹ ಸಾಂಸ್ಕೃತಿಕ ಅಂಶಗಳು ದಕ್ಷಿಣ ಹಾಗೂ ಉತ್ತರ ಭಾರತದಲ್ಲಿನ ಅಭಿವೃದ್ಧಿಯ ಪಥಗಳು ವಿಭಿನ್ನವಾಗಿರುವುದನ್ನು ಅರಿತುಕೊಳ್ಳುವುದಕ್ಕೆ ನಿರ್ಣಾಯಕವಾಗಿರಬಹುದು. ಆದರೆ 1991ರಲ್ಲಿ ಭಾರತದ ಆರ್ಥಿಕತೆ ಉದಾರೀಕರಣಗೊಳ್ಳತೊಡಗಿತ್ತು. ಈ ಬದಲಾವಣೆಯ ಲಾಭವನ್ನು ಪಡೆದುಕೊಳ್ಳುವಲ್ಲಿ ದಕ್ಷಿಣ ಭಾರತದಲ್ಲಿ ಪೂರಕ ವಾತಾವರಣವಿತ್ತು. 1990 ಹಾಗೂ 2000ನೇ ದಶಕಗಳುದ್ದಕ್ಕೂ ತಮಿಳುನಾಡು ಹಾಗೂ ಆಂಧ್ರಪ್ರದೇಶದಂತಹ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಾರ್ಖಾನೆಗಳು, ಇಂಜಿನಿಯರಿಂಗ್ ಕಾಲೇಜುಗಳು, ಸಾಫ್ಟ್‌ವೇರ್ ಪಾರ್ಕ್‌ಗಳು ವ್ಯಾಪಕವಾಗಿ ಬೆಳೆದವು. ಆದರೆ ರಾಮಜನ್ಮಭೂಮಿ ಚಳವಳಿ, ಹಿಂದುತ್ವದ ಹೆಸರಿನಲ್ಲಿ ನಡೆದ ಹಿಂಸಾಚಾರವು ಉತ್ತರ ಭಾರತದಲ್ಲಿ ವ್ಯಾಪಕವಾಗಿತ್ತು. ಇದರ ಪರಿಣಾಮವಾಗಿ ಉತ್ತರ ಭಾರತವನ್ನ್ನು ದೊಡ್ಡ ಮಟ್ಟದಲ್ಲಿ (ಸಂಪೂರ್ಣವಾಗಿ ಅಲ್ಲದಿದ್ದರೂ) ಹಿಂದಿಕ್ಕುವಲ್ಲಿ ದಕ್ಷಿಣ ಭಾರತ ಯಶಸ್ವಿಯಾಯಿತು.

ಇತ್ತೀಚಿನ ದಿನಗಳಲ್ಲಿ ಉತ್ತರ ಭಾರತವು ದಕ್ಷಿಣ ಭಾರತಕ್ಕಿಂತ ಯಾಕೆ ಉತ್ತಮವಾಗಿದೆ ಎಂಬುದನ್ನು ತಿಳಿಯಬೇಕಾದರೆ, ಹಿಂದಿನ ದಶಕಗಳು ಮಾತ್ರವಲ್ಲದೆೆ, ಹಲವಾರು ಶತಮಾನಗಳ ಸುದೀರ್ಘವಾದ ಇತಿಹಾಸದತ್ತ ದೃಷ್ಟಿಹಾಯಿಸಬೇಕಾಗುತ್ತದೆ. ದಕ್ಷಿಣ ಭಾರತಕ್ಕೆ ಕರಾವಳಿ ತೀರದ ಸಂಪರ್ಕ ಹಾಗೂ ಆಕ್ರಮಣಕಾರರ ಬದಲಿಗೆ ವ್ಯಾಪಾರಿಗಳು ಹಾಗೂ ಪ್ರವಾಸಿಗಳಾಗಿ ವಿದೇಶೀಯರ ಆಗಮನದಿಂದಾಗಿ ಆ ಪ್ರದೇಶದ ಜನರು ಪರಕೀಯ ದ್ವೇಷದ ಭಾವನೆಯನ್ನು ತಾಳುವ ಬದಲು ಮುಕ್ತ ಮನಸ್ಕರಾಗಲು ಸಾಧ್ಯವಾಯಿತು. ವರ್ತಮಾನದ ಇತಿಹಾಸದ ಸಮೀಪಕ್ಕೆ ಬರುವುದಾದರೆ ದೇಶ ವಿಭಜನೆಯ ಭಯಾನಕತೆಯ ಅನುಭವ ದಕ್ಷಿಣ ಭಾರತಕ್ಕೆ ಆಗಿರಲಿಲ್ಲ. ಹೀಗಾಗಿ ಅದು ಇತಿಹಾಸದ ಧಾರುಣವಾದ ನೋವಿನಿಂದ ಪಾರಾಗಿತ್ತು.

ಇನ್ನೊಂದೆಡೆ ದಕ್ಷಿಣ ಭಾರತದಲ್ಲಿ ಉತ್ತರ ಭಾರತಕ್ಕಿಂತ ಮೊದಲು ಸಾಮಾಜಿಕ ಬದಲಾವಣೆಗಳು ನಡೆದವು. ಬ್ರಾಹ್ಮಣ್ಯದ ಯಜಮಾನಿಕೆಗೆ ದಕ್ಷಿಣ ಭಾರತದಲ್ಲಿ ಬಹಳಷ್ಟು ಮೊದಲೇ ಸವಾಲೆಸೆಯಲಾಗಿತ್ತು. ನಾರಾಯಣಗುರು ಹಾಗೂ ಪೆರಿಯಾರ್ ಅವರಂತಹ ಚಿಂತಕರು ಜಾತಿ ಹಾಗೂ ಲಿಂಗಭೇದದ ವಿರುದ್ಧ ಹೆಚ್ಚು ಸಮತಾವಾದಿ ಧೋರಣೆಯನ್ನು ಪ್ರದರ್ಶಿಸಿದರು. ದಕ್ಷಿಣ ಭಾರತದಲ್ಲಿ ಕೃಷಿ ಕುಲಕಸುಬಿನ ಜಾತಿಗಳಿಗೆ ಸೇರಿದ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲದೆ ಶ್ರಮಿಕಶಕ್ತಿಯಲ್ಲೂ ಮಹಿಳೆಯರು ದೊಡ್ಡ ಪ್ರಮಾಣದಲ್ಲಿದ್ದಾರೆ. ಇದು ಆಕಸ್ಮಿಕವಾದುದೇನಲ್ಲ. ಸಾಮಾಜಿಕ ಸುಧಾರಣಾ ಚಳವಳಿಯು ಇಂತಹ ಗೋಚರಣೀಯ, ದೀರ್ಘಾವಧಿಯ ಪರಿಣಾಮವನ್ನು ಉಂಟು ಮಾಡಿದೆ.

ಖ್ಯಾತ ಸಮಾಜಶಾಸ್ತ್ರಜ್ಞೆ ಅಲೈಸ್ ಇವಾನ್ಸ್ ಅವರು ತನ್ನ ‘ಮೋಸ್ಟ್ ಡ್ರಾಮಾಟಿಕ್ ರೀಜನಲ್ ಡಿಸ್ಪಾರಿಟಿ (ಬಿಟ್ವಿನ್ ಸೌತ್ ಇಂಡಿಯಾ ಆ್ಯಂಡ್ ನಾರ್ತ್ ಇಂಡಿಯಾ) ಮೇ ಬಿ ಇನ್ ಜೆಂಡರ್ ರಿಲೇಶನ್ಸ್’ ಎಂಬ ವಾಸ್ತವಿಕ ಪ್ರಬಂಧದಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಿದ್ದಾರೆ. ಉತ್ತರಭಾರತದ ಸ್ತ್ರೀಯರಿಗೆ ಹೋಲಿಸಿದರೆ ದಕ್ಷಿಣ ಭಾರತದ ಮಹಿಳೆಯರು ಶೈಶವಾವಸ್ಥೆಯಲ್ಲಿ ಬದುಕುಳಿಯುವ, ಸುಶಿಕ್ಷಿತರಾಗುವ, ತಡವಾಗಿ ವಿವಾಹವಾಗುವ, ತಮ್ಮ ಇಷ್ಟದ ಪತಿಯನ್ನು ಆಯ್ಕೆ ಮಾಡುವ, ತಮ್ಮ ಪತಿಯೊಂದಿಗೆ ಹೆಚ್ಚು ನಿಕಟವಾಗಿರುವ, ಕಡಿಮೆ ಸಂಖ್ಯೆಯ ಮಕ್ಕಳನ್ನು ಹೆರುವ, ಸ್ವಂತ ಆಸ್ತಿಯನ್ನು ಹೊಂದುವ, ವರದಕ್ಷಿಣೆ ಪಿಡುಗಿನ ಮೇಲೆ ನಿಯಂತ್ರಣ ಸಾಧಿಸುವ, ಸ್ನೇಹಿತೆಯರೊಂದಿಗೆ ಬೆರೆಯುವ, ತಮ್ಮ ಸಮುದಾಯಗಳಲ್ಲಿ ಮುಕ್ತವಾಗಿ ಬೆರೆಯುವ ಹಾಗೂ ಪುರುಷರೊಂದಿಗೆ ಕೆಲಸ ಮಾಡುವ ಅವಕಾಶ ಮತ್ತು ಸಾಧ್ಯತೆಗಳು ಹೆಚ್ಚಿವೆೆ ಎಂದು ಹೇಳಿದ್ದಾರೆ. (https://scroll.in/article/975151/why do women in south india have more freedom-than their northern sisters).

ಖಂಡಿತವಾಗಿಯೂ ದಕ್ಷಿಣ ಭಾರತವು ಯಾವುದೇ ರೀತಿಯಲ್ಲಿ ಪರಿಪೂರ್ಣವಾದುದೇನಲ್ಲ. ತಮಿಳುನಾಡಿನ ಕೆಲವು ಭಾಗಗಳಲ್ಲಿ ದಲಿತರು ಎದುರಿಸುತ್ತಿರುವ ದಬ್ಬಾಳಿಕೆಯು ಆ ರಾಜ್ಯಕ್ಕೆ ಹಾಗೂ ಅದರ ರಾಜಕೀಯ ಸಂಸ್ಕೃತಿಗೆ ಅಪಮಾನಕಾರಿಯಾಗಿದೆ. ಕರ್ನಾಟಕದಲ್ಲಿ ಹಿಂದುತ್ವವಾದವು ಸಾಮಾಜಿಕ ಹಾಗೂ ರಾಜಕೀಯ ಬದುಕಿನಲ್ಲಿ ಸ್ಥಿರವಾಗಿ ನುಸುಳುತ್ತಿದೆ. 1960ರ ದಶಕದಲ್ಲಿ ದಕ್ಷಿಣ ಭಾರತದಲ್ಲಿ ಭ್ರಷ್ಟಾಚಾರ ತುಂಬಾ ಕಡಿಮೆ ಇತ್ತೆಂಬುದು ನಿಜ. ಆದರೆ ಉದಾರೀಕರಣದ ಬಳಿಕ ಗಣಿಗಾರಿಕೆ ಹಾಗೂ ಮೂಲಸೌಕರ್ಯಗಳ ನಿರ್ಮಾಣ ಗುತ್ತಿಗೆಯಿಂದ ಬೃಹತ್ ಪ್ರಮಾಣದಲ್ಲಿ ಲಾಭ ಮಾಡಿಕೊಳ್ಳಲಾಗುತ್ತಿದೆ. ಕಮಿಶನ್ ಹಾಗೂ ಲಂಚ ಪಡೆಯುವುದರಲ್ಲಿ ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನ ರಾಜಕಾರಣಿಗಳು ಇತರ ರಾಜ್ಯಗಳ ರಾಜಕೀಯ ಕುಳಗಳನ್ನು ಮೀರಿಸುತ್ತಿದ್ದಾರೆ.

ಉತ್ತರ ಭಾರತಕ್ಕಿಂತಲೂ ಅಧಿಕವಾಗಿ ದಕ್ಷಿಣ ಭಾರತವು ದೇಶದ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡುತ್ತಿದೆ. ಕೇಂದ್ರ ಸರಕಾರಕ್ಕೂ ಅಧಿಕವಾದ ತೆರಿಗೆ ಆದಾಯ ದಕ್ಷಿಣ ಭಾರತದಿಂದಲೇ ಹರಿದು ಬರುತ್ತಿದೆ. ದಕ್ಷಿಣ ಭಾರತದಲ್ಲಿ ಜೀವಿಸುತ್ತಿರುವ ಭಾರತೀಯರು ಉತ್ತರ ಭಾರತದಲ್ಲಿ ವಾಸಿಸುವ ಭಾರತೀಯರಿಗಿಂತ ಒಟ್ಟಾರೆಯಾಗಿ ಹೆಚ್ಚು ಆರೋಗ್ಯವಂತರು, ಉತ್ತಮ ಆಹಾರ ಸೇವಿಸುತ್ತಾರೆ ಹಾಗೂ ಹೆಚ್ಚು ಸಮೃದ್ಧಿಯನ್ನು ಹೊಂದಿದವರಾಗಿದ್ದಾರೆ ಹಾಗೂ ಸಾರ್ವಜನಿಕ ಸೇವೆಗಳನ್ನು ಸುಲಭವಾಗಿ ಪಡೆಯುತ್ತಿದ್ದಾರೆ. ಇದನ್ನು ಹಲವಾರು ಉತ್ತರ ಭಾರತೀಯರು ಕೂಡಾ ಅರಿತುಕೊಂಡಿದ್ದಾರೆ. ಹೀಗಾಗಿ ಅವರು ದಕ್ಷಿಣ ಭಾರತಕ್ಕೆ ಹೋಗಿ ನೆಲೆಸಲು ಬಯಸುತ್ತಿದ್ದಾರೆ. ನಾನು ವಾಸವಾಗಿರುವ ಬೆಂಗಳೂರು ನಗರದಲ್ಲಿ ಯಶಸ್ವಿಯಾದ ಉದ್ಯಮಿಗಳ ಉಪನಾಮಗಳು, ಅವರ ಮೂಲ ಗಂಗಾ ನದಿ ತಪ್ಪಲು ಪ್ರದೇಶದ ರಾಜ್ಯಗಳೆಂಬುದನ್ನು ಸೂಚಿಸುತ್ತದೆ. (ಆದರೆ ಲಕ್ನೊ ನಗರದಲ್ಲಿ ತಮಿಳು, ಕನ್ನಡಿಗ ಅಥವಾ ಮಲಯಾಳಿ ಉಪನಾಮಗಳನ್ನು ಹೊಂದಿರುವ ಉದ್ಯಮಿಗಳಿದ್ದಾರೆಂಬುದನ್ನು ನಾನು ಯೋಚಿಸಲಾರೆ). ಅಲ್ಲದೆ ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ಮಧ್ಯಮವರ್ಗದ ಮತ್ತು ದುಡಿಯುವ ವರ್ಗದ ವಲಸೆಯು ಅಧಿಕವಾಗಿದೆ.

ಭಾರತದ ಗಣರಾಜ್ಯ ವ್ಯವಸ್ಥೆಯಲ್ಲಿ ದಕ್ಷಿಣ ಭಾರತವನ್ನು ತುಂಬಾ ಸಣ್ಣ ಮಟ್ಟದಲ್ಲಿ ಪರಿಗಣಿಸಲಾಗುತ್ತದೆ ಎಂದು ವಾಲ್ಟರ್ ಕ್ರೊಕರ್ ಅವರು 1966ರಲ್ಲಿ ಬರೆದಿದ್ದರು. ಇದೀಗ 50 ವರ್ಷಗಳ ಆನಂತರ ಕನಿಷ್ಠ ಪಕ್ಷ ಆರ್ಥಿಕ ವಿಷಯದಲ್ಲಾದರೂ ದಕ್ಷಿಣ ಭಾರತವು ದೊಡ್ಡ ಮಟ್ಟದಲ್ಲಿ ಪರಿಗಣಿಸಲ್ಪಡುತ್ತಿದೆ. ಶಿಕ್ಷಣ ಹಾಗೂ ಆಡಳಿತಕ್ಕೆ ಹೆಚ್ಚಿನ ಗಮನನೀಡಿರುವುದು ಹಾಗೂ ಹಿಂದೂ ಪುನರುತ್ಥಾನವಾದದ ಬಗ್ಗೆ ಕಡಿಮೆ ಅಭಿರುಚಿ ಇಂತಹ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಂಶಗಳು ದಕ್ಷಿಣ ಭಾರತದ ರಾಜ್ಯಗಳು ಮುನ್ನಡೆಗೆ ಕಾರಣವಾಗಿವೆಯೆಂದು ಕ್ರೊಕರ್ ಅಭಿಪ್ರಾಯಿಸಿದ್ದಾರೆ.

ಆದಾಗ್ಯೂ ಇತ್ತೀಚಿನ ದಶಕಗಳ ಸಾಮಾಜಿಕ ಹಾಗೂ ರಾಜಕೀಯ ಪ್ರಗತಿಯನ್ನು ಸಾಧಿಸಿದ ಹೊರತಾಗಿಯೂ ರಾಜಕೀಯವಾಗಿ ದಕ್ಷಿಣ ಭಾರತವು ನಮ್ಮ ಗಣರಾಜ್ಯದಲ್ಲಿ ತುಂಬಾ ಸಣ್ಣದಾಗಿಯೇ ಪರಿಗಣಿಸಲ್ಪಡುತ್ತಿದೆ. ಜನಸಂಖ್ಯೆಯ ಆಧಾರದಲ್ಲಿ ಲೋಕಸಭಾ ಸ್ಥಾನಗಳನ್ನು ಪುನರ್‌ವಿಂಗಡಣೆಗೊಳಿಸುವ ಪ್ರಸ್ತಾವಕ್ಕೆ ಕೇಂದ್ರ ಸರಕಾರ ಬುನಾದಿ ಹಾಕಿದೆ. ಒಂದು ವೇಳೆ ಅದು ಕಾರ್ಯಗತಗೊಂಡಲ್ಲಿ ತಮ್ಮ ಪ್ರಜೆಗಳಿಗೆ ಉತ್ತಮವಾದ ಸೇವೆಗಳನ್ನು ಒದಗಿಸುತ್ತಿರುವ ಕೇರಳ, ತಮಿಳುನಾಡಿನಂತಹ ರಾಜ್ಯಗಳಿಗೆ ಕೇಂದ್ರ ಸರಕಾರದ ನೀತಿಗಳು ಹಾಗೂ ಆದ್ಯತೆಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವು ಇನ್ನಷ್ಟು ಕಡಿಮೆಯಾಗಲಿದೆ. ತಮ್ಮ ಪ್ರಜೆಗಳಿಗೆ ಅಸಡ್ಡೆಯಿಂದ ಹಾಗೂ ಅಸಹನೆಯಿಂದ ಸೇವೆ ಸಲ್ಲಿಸುತ್ತಿರುವ ಉತ್ತರಪ್ರದೇಶ, ಬಿಹಾರದಂತಹ ರಾಜ್ಯಗಳು ಕೇಂದ್ರ ಸರಕಾರದ ನೀತಿ ಹಾಗೂ ಆದ್ಯತೆಗಳ ಮೇಲೆ ತಾವು ಈಗಾಗಲೇ ಹೊಂದಿರುವ ಪ್ರಭಾವ ಹಾಗೂ ಆಧ್ಯತೆಗಳನ್ನು ಇನ್ನಷ್ಟು ಹೆಚ್ಚಿಸಲಿವೆ. ಇಂತಹ ಅಸಮಾನತೆಯಿಂದಾಗಿ ಈಗಾಗಲೇ ಶಿಥಿಲಗೊಂಡಿರುವ ಭಾರತದ ಒಕ್ಕೂಟ ವ್ಯವಸ್ಥೆಯು ಹೊಸ ಹೊರೆಗಳನ್ನು ಹಾಗೂ ಒತ್ತಡಗಳನ್ನು ಎದುರಿಸಬೇಕಾಗಿ ಬಂದಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top