ಒಂದಾದ ದೇಶದಲಿ ಹೊಂದಿ ಬಾಳದ ಸುತರ... | Vartha Bharati- ವಾರ್ತಾ ಭಾರತಿ

--

ಒಂದಾದ ದೇಶದಲಿ ಹೊಂದಿ ಬಾಳದ ಸುತರ...

ಸ್ವಾತಂತ್ರ್ಯ ದಿನ ಹತ್ತಿರಾಯಿತೆಂದರೆ ದೇಶದ ಆರೋಗ್ಯವು ಪರಿಶೀಲನೆ ಗೊಳಪಡುವುದು ಸಹಜ. ಇರಲಿ: ಈ ದೇಶ ಈಗ ಹೊಸದೊಂದು ಸಂಘರ್ಷವನ್ನು ಕಾಣುತ್ತಿದೆ. ಧರ್ಮವೆಂಬ ಹೆಸರಿನಲ್ಲಿ, ರಾಷ್ಟ್ರೀಯತೆಯೆಂಬ ಹೆಸರಿನಲ್ಲಿ, ಈ ದೇಶದ 135 ಕೋಟಿಗೂ ಮಿಕ್ಕಿ ಜನರನ್ನು ಧ್ರುವೀಕರಣ ಕ್ಕೊಳಪಡಿಸಲಾಗುತ್ತಿದೆ. ಈಗ ಭಾರತೀಯರಿಲ್ಲ. ಹಿಂದೂಗಳು(ಅವರೊಳಗೆ ಜೈನರು, ಬೌದ್ಧರು, ಲಿಂಗಾಯತರು ಇತ್ಯಾದಿ), ಮುಸಲ್ಮಾನರು, ಕ್ರೈಸ್ತರು, ಪಾರ್ಸಿಗಳು ಹೀಗೆ. ಎಲ್ಲಾದರೂ ಭಾರತೀಯರು ಸಿಕ್ಕಿದರೆ ಅದು ನಮ್ಮ ಸುಕೃತದ ಫಲವಾಗಿ ದೊರೆಯುವ ಅಪರೂಪದ ತಳಿಯೆಂದು ಭಾವಿಸಬೇಕು. ಸ್ವಾತಂತ್ರ್ಯ ಪೂರ್ವದಲ್ಲೂ ಭಾರತೀಯರು ಇರಲಿಲ್ಲವೆನ್ನಬಹುದು. ಆಗ ಇದ್ದಬದ್ದ ಹಳೆಯ ಸಂಸ್ಥಾನಗಳೆಲ್ಲ ಹೂಣರ, ಮೊಗಲರ, ಯುರೋಪಿಯನರ ಕೈಚಳಕದಿಂದಾಗಿ ತಮ್ಮ ಸ್ವತಂತ್ರ ಅಸ್ತಿತ್ವವನ್ನು ಕಳೆದುಕೊಂಡು ವಸಾಹತುಗಳಾದ ಮೇಲೆ, ಗುಲಾಮರಾದ ಮೇಲೆ ಮತ್ತೆ ತಮ್ಮ ಅಸ್ತಿತ್ವವನ್ನು ಕಾಣುವುದಕ್ಕಾಗಿ ಹೋರಾಡಿದವು. ಅದಕ್ಕೂ ಮೊದಲು ಮಗಧ-ಕಳಿಂಗ ಎಂಬ ಹಾಗೆ ಪರಸ್ಪರ ಹೋರಾಡುವ ಸಾಮ್ರಾಜ್ಯಗಳೇ ನಮ್ಮಲ್ಲಿದ್ದದ್ದು. ಪ್ರಾಯಃ ಮೊದಲ ಸ್ವಾತಂತ್ರ್ಯ ಹೋರಾಟವೆಂದು ಕರೆಯಲಾಗುವ 1857ರ ದಂಗೆ ಭಾರತವನ್ನು ಒಂದು ರಾಷ್ಟ್ರವಾಗಿ ಕಾಣುವ ಉದ್ದೇಶದಿಂದ ಉದ್ಭವಿಸಿತ್ತೇ ಅಥವಾ ತಮ್ಮ ತಮ್ಮ ರಾಜಸತ್ತೆಗಳನ್ನು ಮತ್ತೆ ಸ್ಥಾಪಿಸಿಕೊಳ್ಳಲು ಮಾಡಿದ್ದಾಗಿತ್ತೇ ಎಂಬುದು ಅವರವರ ರಾಜಕೀಯ ದೃಷ್ಟಿಕೋನವನ್ನವಲಂಬಿಸಿದೆ. ಧರ್ಮದ ಆಧಾರದಲ್ಲಿ ದಾಳಿಗಳಾದದ್ದು ಕಡಿಮೆ. ಮರಾಠರು ಶೃಂಗೇರಿಯ ದೇವಳವನ್ನು ಲೂಟಿ ಮಾಡಿದಾಗ ಸುಲ್ತಾನ ಟಿಪ್ಪುಅದನ್ನು ಸಂರಕ್ಷಿಸಬೇಕಾಯಿತು. ಹೀಗೆ ಪರಸ್ಪರ ವಿರೋಧಗಳ ಸಮೂಹ ಒಡೆತನದ ಭೂಭಾಗದ ಇತಿಹಾಸವಂತೂ ಇದನ್ನು ಉತ್ತರಿಸಿಲ್ಲ; ನೇರವಾಗಿ ನಿರೂಪಿಸಿ ನೆರವಾಗಲಿಲ್ಲ. ಭಾರತ ಯಾವುದು? ಹಿಂದಿನ ಅಂದರೆ ಪುರಾಣದವರೆಗೂ ಚಾಚುವ ಭೂಗೋಳವನ್ನವಲಂಬಿಸಿದ ಅಥವಾ ಬ್ರಿಟಿಷ್ ಭಾರತದ ಕಲ್ಪನೆಯನ್ನು ಅನುಸರಿಸುವುದಾದರೆ ಅಥವಾ ರಾಜಕೀಯ ಚರಿತ್ರೆಯ ಹೇಳಿಕೆಗಳನ್ನವಲಂಬಿಸಿದರೆ ಅತ್ತ ಈಗ ಅಫ್ಘಾನಿಸ್ತಾನವೆಂದು ಕರೆಯಲ್ಪಡುವ ಗಾಂಧಾರದಿಂದ ಇತ್ತ ಈಗ ಮ್ಯಾನ್ಮಾರ್ ಎಂದು ಕರೆಸಿಕೊಳ್ಳುವ ಬ್ರಹ್ಮದೇಶದವರೆಗೆ, ಉತ್ತರದ ಹಿಮಾಲಯದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ಈ ದೇಶ ವಿಸ್ತರಿಸಿತ್ತು. ಅಫ್ಘಾನಿಸ್ತಾನವೂ ಪೂರ್ವದ ಬರ್ಮಾವೂ ಕಾಲಕ್ರಮೇಣ ಬೇರೆಯಾದವು. 1947ರಲ್ಲಿ ಪೂರ್ವ-ಪಶ್ಚಿಮದ ಪಾಕಿಸ್ತಾನ ಭೂಪ್ರದೇಶ ಪ್ರತ್ಯೇಕವಾಯಿತು; ಆ ಸಮಯದಲ್ಲಿ ಅರ್ಧ ಕಾಶ್ಮೀರ ನಮ್ಮನ್ನು ಬಿಟ್ಟು ಪಾಕಿಸ್ತಾನದ ಕೈವಶವಾಯಿತು; ಆನಂತರ ಯಾವಾಗಲೋ ಜಮ್ಮು-ಕಾಶ್ಮೀರದ ಒಂದಷ್ಟು ಭೂಭಾಗವೂ ಚೀನಾದ ಪಾಲಾಯಿತು; ಪೂರ್ವಪಾಕಿಸ್ತಾನವು ಪಾಕಿಸ್ತಾನದ ಕೈತಪ್ಪಿಬಾಂಗ್ಲಾದೇಶವಾಯಿತೇ ಹೊರತು ಭಾರತದ ಭೂಭಾಗವಾಗಲಿಲ್ಲ. ಸಿಕ್ಕಿಂ ಎಂಬ ಈಶಾನ್ಯದ ಭೂಪ್ರದೇಶವು ನಮ್ಮದಾಯಿತು. ಉತ್ತರದಿಂದ ದಕ್ಷಿಣದವರೆಗೆ ಯಥಾಸ್ಥಿತಿ ಮುಂದುವರಿದಿದೆ. ಇವುಗಳೊಳಗಿರುವ ನಾವು ಯಾರು?

ನಾವು ಭಾರತೀಯರು ಎಂದುಕೊಳ್ಳುವಾಗಲೇ ಈ ದೇಶದಲ್ಲಿ ಭಾರತೀಯರೆಷ್ಟಿದ್ದಾರೆ ಎಂದು ಪ್ರಶ್ನಿಸುವುದು ಅಗತ್ಯ. ಕಚೇರಿಯೊಂದರಲ್ಲಿ ಇಲ್ಲಿ ಎಷ್ಟು ಜನ ಕೆಲಸ ಮಾಡುತ್ತಿದ್ದಾರೆ? ಎಂದು ಕೇಳಿದ್ದಕ್ಕೆ 50 ಮಂದಿ ಉದ್ಯೋಗದಲ್ಲಿದ್ದಾರೆ, ಯಾರೂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಉತ್ತರಿಸಿದರಂತೆ. ಈ ದೇಶದ ಸ್ಥಿತಿಯೇ ಹಾಗೆ. ಚುನಾವಣೆ ಹತ್ತಿರಾಯಿತೆಂದರೆ ಮತೀಯ ಧ್ರುವೀಕರಣದ ಎಲ್ಲ ಸಾಧ್ಯತೆಗಳನ್ನು ರಾಜಕಾರಣ ಮಾಡಿಸುತ್ತದೆ. ಕಳೆದ ಕೆಲವು ವರ್ಷ, ತಿಂಗಳುಗಳವರೆಗೆ ನಾವು ಗಡಿ ಸಮಸ್ಯೆಯೆಂದರೆ ಪಾಕಿಸ್ತಾನ, ಚೀನಾ, ಬಾಂಗ್ಲಾ ಗಡಿಗಳನ್ನು ಗುರುತಿಸಿ ಅದರಿಂದಾಚೆಗಿನವರು ಭಯೋತ್ಪಾದಕರು ಎಂದು ಉಲ್ಲೇಖಿಸುತ್ತಿದ್ದೆವು. ಅವರ ಕುರಿತು ಉಲ್ಲೇಖ ಉದಿಸಿತೆಂದರೆ ದೇಶಭಕ್ತಿ ರೋಮಾಂಚದಿಂದ ರಕ್ತಕುದಿಯುವವರೆಗೆ ವ್ಯಾಪಿಸುತ್ತಿತ್ತೆಂದು ಭಾವಿಸೋಣ. ನಮ್ಮಲ್ಲಿ ಅತಿ ದೊಡ್ಡ ಕ್ರೀಡೆಯೆಂದರೆ ರಾಜಕೀಯ. ನಮ್ಮ ನಿಜವಾದ ಸಾಧನೆಯೇನೇ ಇರಲಿ ಅದರ ಕುರಿತ ನಮ್ಮ ಉತ್ಸಾಹ ಮತ್ತು ಪ್ರಚಾರವಂತೂ ದೊಡ್ಡದಿದೆ. (ಇದು ಒಂದು ರೀತಿಯಲ್ಲಿ ನಮ್ಮ ಒಲಿಂಪಿಕ್ಸ್ ಪಂದ್ಯದ ಸ್ಪರ್ಧೆಯಂತೆ. ನಮ್ಮ 135 ಕೋಟಿ ಕೈಚಪ್ಪಾಳೆಯೊಂದಿಗೂ ನಮಗೆ ಸ್ಪರ್ಧಿಸುವ ದೇಶಗಳ ಮೊದಲರ್ಧಕ್ಕೂ ತಲುಪಲು ಸಾಧ್ಯವಾಗುತ್ತಿಲ್ಲ. ಈ ವರೆಗಿನ ಎಲ್ಲ ಒಲಿಂಪಿಕ್ಸ್‌ಗಳಲ್ಲೂ ಇದೇ ಗತಿ! ಆದರೆ ನಾವು ತಲೆಮಾರುಗಳುದ್ದಕ್ಕೂ ಇದನ್ನೇ ಮಹತ್ಸಾಧನೆಯೆಂದು ಹೇಳಿ-ಬಹುಮಾನ, ಪುರಸ್ಕಾರಗಳನ್ನು ಘೋಷಿಸುತ್ತೇವೆ. ಒಂದರ್ಥದಲ್ಲಿ ಅದೇ ಸರಿ, ಸ್ಪರ್ಧಾ ವಿಜೇತರಾದರೂ ಶ್ರೀಮಂತರಾಗುತ್ತಾರಲ್ಲ! ಈ ವಿಜಯವು ನಮ್ಮ ಸರಕಾರದ್ದೆಂದು ಸಚಿವರು ಹೇಳುವ ಹಂತದವರೆಗೂ ತಲುಪುತ್ತದೆ.) ಈಗ ಈ ಭಾರತ-ಪಾಕಿಸ್ತಾನ, ಚೀನಾಗಳ ಮನಸ್ಥಿತಿ ನಮ್ಮ ರಾಜ್ಯಗಳಿಗೂ ಬಂದೊದಗಿದೆ. ಅಂತರ್‌ರಾಜ್ಯಗಳ ವಿವಾದ ಸ್ವತಂತ್ರ ಭಾರತದೊಂದಿಗೇ ಹುಟ್ಟಿಕೊಂಡಿದೆ. ಗಡಿ, ನೀರು, ನೆಲ, ಭಾಷೆ-ಹೀಗೆ ಎಲ್ಲ ರೀತಿಯ ವಿವಾದಗಳೂ ಪರಿಹಾರವನ್ನು ಕಾಣದೆ ಕಾಲಕಳೆಯುತ್ತಿವೆ. ಒಂದು ವೇಳೆ ಯಾವುದಾದರೂ ನ್ಯಾಯಮಂಡಳಿಯು ತೀರ್ಮಾನ ನೀಡಿತೆಂದಾದರೂ ಅದರ ಬಗ್ಗಡ ಹಾಗೆಯೇ ಹಗೆಯ ರೂಪದಲ್ಲಿ ಉಳಿಯುತ್ತದೆ. ಭಾರತದಂತಹ ಒಕ್ಕೂಟ ವ್ಯವಸ್ಥೆಯಲ್ಲಿ ಸಂವಿಧಾನವು ಇಂತಹ ಸಮಸ್ಯೆಗಳಿಗೆ ಸಾಂವಿಧಾನಿಕ ಪರಿಹಾರಗಳನ್ನು ಹೇಳಿದರೂ ಅವು ಪುಸ್ತಕದಲ್ಲಷ್ಟೇ ಉಳಿದಿರುತ್ತವೆ. ಎರಡು ರಾಜ್ಯಗಳೂ ಒಕ್ಕೂಟ ಸರಕಾರವೂ ಒಂದೇ ಪಕ್ಷದ ಆಡಳಿತದಲ್ಲಿದ್ದಾಗ್ಯೂ ವಿವಾದ ಬಗೆಹರಿಯುವುದಿಲ್ಲವೆಂದರೆ ಇಚ್ಛಾಶಕ್ತಿಯ ಕೊರತೆ ಮತ್ತು ಸಮೀಪದೃಷ್ಟಿದೋಷದಿಂದಾಗಿ ಎಲ್ಲವೂ ಸ್ವಾರ್ಥಪರವಾಗಿಯಷ್ಟೇ ವ್ಯವಹರಿಸಲ್ಪಡುತ್ತಿದೆ ಎಂದೇ ಅರ್ಥ. ಹಿಂದೊಮ್ಮೆ ಮಹಾರಾಷ್ಟ್ರದಲ್ಲಿ ಇದು ಮರಾಠಿಗಳಿಗೆ ಎಂಬ ರಾಜ್ಯಭಕ್ತಿ ತಲೆಯೆತ್ತಿತ್ತು. ಬಿಹಾರ, ಉತ್ತರ ಪ್ರದೇಶದಿಂದ ಬಂದವರನ್ನು ಓಡಿಸಬೇಕೆಂಬ ಮನಸ್ಥಿತಿ ಆರಂಭವಾಗಿತ್ತು. ದೇಶದ ಪುಣ್ಯದಿಂದ ಅದು ಕುಂಠಿತವಾಯಿತು. ಉತ್ತರ ಭಾರತದವರು ದಕ್ಷಿಣ ಭಾರತದವರನ್ನು ಪ್ರತ್ಯೇಕವಾಗಿ ಕಾಣುತ್ತಾರೆಂಬ ಆಕ್ಷೇಪ ಯಾವತ್ತೂ ಇದೆ. ಈಶಾನ್ಯ ರಾಜ್ಯಗಳು ನೆನಪಾಗುವುದು ಅವರು ಅಂತರ್‌ರಾಷ್ಟ್ರೀಯ ನೆಲೆಯಲ್ಲಿ ಗೌರವವನ್ನು ಗಳಿಸಿದಾಗ ಮಾತ್ರವೆಂಬ ಮಾತಿದೆ. (ಈ ಬಾರಿಯ ಒಲಿಂಪಿಕ್ಸ್ ಪಂದ್ಯಾಟದಲ್ಲಿ ಮೀರಾಬಾಯಿಯ ಸಾಧನೆಯ ಸಂದರ್ಭದಲ್ಲಿ ಇದು ಅನುರಣಿಸಿದೆ!) ದೇಶದ ರೈತರನ್ನು ಅವರು ಉತ್ತರ ಪ್ರದೇಶದವರು, ಹರ್ಯಾಣದವರು, ಪಂಜಾಬಿನವರು ಎಂದೆಲ್ಲ ವಿಭಜಿಸಿ ಉಳಿದವರನ್ನು (ಮತ್ತು ಉಳಿದವರಿಗೆ) ಅಸ್ಪಶ್ಯರಾಗಿಸುವುದು ನಮ್ಮ ಕಣ್ಣಮುಂದೆಯೇ ಇದೆ. ಅಸ್ಸಾಂ ಮತ್ತು ಮಿಜೋರಾಂ ರಾಜ್ಯಗಳು ಈಶಾನ್ಯ ಭಾರತದ ಭೂಭಾಗದಲ್ಲಿವೆ. ಹೆಚ್ಚು ಕಡಿಮೆ ಅಲ್ಲಿನ ಎಲ್ಲ ರಾಜ್ಯಗಳೂ (ಮಣಿಪುರ, ಮೇಘಾಲಯ, ತ್ರಿಪುರವೂ ಸೇರಿ) ಸಣ್ಣಪುಟ್ಟ ವ್ಯತ್ಯಾಸಗಳನ್ನು ಹೊರತುಪಡಿಸಿದರೆ ಒಂದೇ ಆಚಾರ, ವಿಚಾರ, ಸಂಸ್ಕೃತಿಯನ್ನು ಹೊಂದಿವೆ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಅಲ್ಲಿನ ಎಲ್ಲ ರಾಜ್ಯಗಳೂ ಒಂದೇ ಪಕ್ಷದ ಆಡಳಿತದಲ್ಲಿವೆ. ಅವುಗಳ ಅದೃಷ್ಟಕ್ಕೆ ಅದೇ ಪಕ್ಷ ಒಕ್ಕೂಟ ಸರಕಾರದಲ್ಲೂ ಆಡಳಿತದಲ್ಲಿದೆ. ಹೀಗಿದ್ದರೂ ಕಳೆದ ಕೆಲವು ದಿನಗಳ ಹಿಂದೆ ಅಸ್ಸಾಂ ಮತ್ತು ಮಿಜೋರಾಂ ಭಾರತ-ಪಾಕಿಸ್ತಾನಗಳಂತೆ ತಮ್ಮ ಪರಸ್ಪರ ಗಡಿಯಲ್ಲಿ ಬಡಿದಾಡಿದವು. ಬರಿಯ ಹೋರಾಟವಲ್ಲ, ಅಸ್ಸಾಮಿನ ಕೆಲವು ಪೊಲೀಸರು ಮಿಜೋರಾಂನ ಪೊಲೀಸರ ಗುಂಡೇಟಿಗೆ ಬಲಿಯಾದರು. ಪರಸ್ಪರ ಗಡಿ ಅತಿಕ್ರಮಣದ, ಭಯೋತ್ಪಾದನೆಯ ಆಪಾದನೆಗಳು ಮೇಳೈಸಿದವು. ಮಿಜೋರಾಂ ರಾಜ್ಯವು ಅಸ್ಸಾಮಿನ ಅಧಿಕಾರಿಗಳ ವಿರುದ್ಧ ಮಾತ್ರವಲ್ಲ, ಅಲ್ಲಿನ ಮುಖ್ಯಮಂತ್ರಿಯ ವಿರುದ್ಧವೂ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿದವು. ಅಸ್ಸಾಮಿನ ಪೊಲೀಸರು ಮಿಜೋರಾಂನ ಅಧಿಕಾರಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿವೆ. ಮಾತ್ರವಲ್ಲ, ಮಿಜೋರಾಂಗೆ ಹೋಗದಂತೆ ತನ್ನ ಪ್ರಜೆಗಳಿಗೆ ಸೂಚಿಸಿದೆ. ಈಗ ಈ ಪ್ರಜೆಗಳು ಭಾರತೀಯರೇ? ಅಸ್ಸಾಮಿಗಳೇ? ಎರಡು ರಾಜ್ಯದವರೂ ತನ್ನದೇ ಪಕ್ಷದ ಸರದಾರರಾಗಿರುವುದರಿಂದ ಒಕ್ಕೂಟ ಸರಕಾರದ ಪಾಲಿಗೆ ಇದು ಬಗೆಹರಿಯುವ ಪ್ರಕರಣವಾಗಬೇಕಾಗಿತ್ತು. ಆದರೆ ಅದೀಗ ಬಗೆಹರಿಯದ ನಗೆಪಾಟಲಾಗಿದೆ. ಈಗ ಯಾರು ಗಡಿಯಾಚೆಗಿನ ಭಯೋತ್ಪಾದಕರು? ಯಾರು ಶೂರರು? ಯಾರು ಹುತಾತ್ಮರು? ದೇಶದೇಶಗಳ ನಡುವಿನ ಗಡಿಗಳೇ ಕೃತಕವಾಗಬೇಕಾದ ಸಂದರ್ಭದಲ್ಲಿ ಒಕ್ಕೂಟ ವ್ಯವಸ್ಥೆಯೊಳಗಿನ ಆಡಳಿತ ವ್ಯವಸ್ಥೆಗಳೇ ಹೀಗೆ ಪ್ರತ್ಯೇಕವಾಗುವುದು ವಿರೋಧಾಭಾಸ ಮಾತ್ರವಲ್ಲ ನಮ್ಮ ಕ್ಷುಲ್ಲಕ, ಸಂಕುಚಿತ ಮತ್ತು ಹಾದಿತಪ್ಪಿದ ಮನಸ್ಥಿತಿಯ ದುರಂತ. ಆಡಳಿತವು ದೇಶಭಕ್ತಿಯನ್ನು ಹೇಳುವಾಗ ರಾಜ್ಯಭಕ್ತಿಯು ದೇಶಭಕ್ತಿಗಿಂತ ದೊಡ್ಡದಲ್ಲವೆನ್ನುವುದನ್ನು ಹೇಳದೆ ಎಲ್ಲರನ್ನೂ ಜಾತಿ, ಮತ, ಜನಾಂಗ, ಭಾಷೆ ಈ ಆಧಾರಗಳ ಮೇಲೆ ಪ್ರತ್ಯೇಕಿಸಿ, ಸಮ್ಮೋಹಿಸಿ ಮತಬೇಟೆಗೆ ಹೊರಟರೆ ಹೀಗಾಗದೆ ಇನ್ನೇನಾಗುತ್ತದೆ? ‘ಒಂದು ದೇಶ ಒಂದು ಪಡಿತರ ಚೀಟಿ’, ‘ಒಂದು ದೇಶ ಒಂದು ಭಾಷೆ’ ಮುಂತಾದವುಗಳನ್ನು ಹೇಳುವುದಕ್ಕಿಂತಲೂ ಮೊದಲೇ ಮನುಷ್ಯರ ನಡುವೆ ಗೋಡೆ ಕಟ್ಟುವುದನ್ನು ಸರಕಾರವು ನಿಲ್ಲಿಸದಿದ್ದರೆ ಮುಂದೆ ಜಿಲ್ಲೆ, ತಾಲೂಕು, ಗ್ರಾಮ, ಕೊನೆಗೆ ಮನೆೆಗಳ ಮಟ್ಟದಲ್ಲಿ ಈ ಬೆಂಕಿ ಹಬ್ಬುವುದು ಅನಿವಾರ್ಯ. ಭಾರತಕ್ಕೆ ವಿಭಜನೆಯ ಮತ್ತು ತಾರತಮ್ಯದ ಪೌರಾಣಿಕ ಪರಂಪರೆಯೇ ಇದೆ. ಕಶ್ಯಪ ಮುನಿಗೆ ಇಬ್ಬರು ಪತ್ನಿಯರು. ದಿತಿ-ಅದಿತಿ. ದಿತಿಯ ಮಕ್ಕಳು ದೈತ್ಯರೆಂದು ಕರೆಸಿಕೊಂಡರು. ಅದಿತಿಯ ಮಕ್ಕಳು ಅದೈತ್ಯರಾಗಲಿಲ್ಲ. ದೇವತೆಗಳಾದರು. ಮುಂದೆ ಎಲ್ಲದರಲ್ಲೂ ದಿತಿಯ ಮಕ್ಕಳು ದುರಂತವನ್ನೇ ಕಂಡರು. ಅಮರತ್ವ ದೇವತೆಗಳ ಪಾಲಾಯಿತು. ದೇವರು ಬಿಡಿ, ಹೆತ್ತ ತಂದೆಯೂ ತನ್ನ ಮಕ್ಕಳ ನಡುವೆ ಪಕ್ಷಪಾತಿಯಾದ. ಆನಂತರ ಈ ಚರಿತ್ರೆ ಬರೆದವರೂ ಇದೇ ರೀತಿ ಬರೆದರು. ದೈತ್ಯರು ಖಳನಾಯಕರಾದರು. ದೇವತೆಗಳು ಪುಕ್ಕಲರಾದರೂ ನಾಯಕರಾದರು. ದೇವರ ದಯೆಯಿಂದಲೇ ಎಲ್ಲ ಸುಖಭೋಗಗಳನ್ನು ಅನುಭವಿಸಿದರು. ದೇವರೆಂಬ ಹೈಕಮಾಂಡ್ ಅನುಸರಿಸಿದ ರೀತಿ-ನೀತಿ ಯಾವ ಜೀವಿಗೂ ಸಲ್ಲದು!

  ಆದರೆ ನಾವು ಇದೇ ಪರಂಪರೆಯ ಶಿಶುಗಳೆಂದು ಮತ್ತು ಇವೆಲ್ಲ ಈ ಮಣ್ಣಿನ ಗುಣವೆಂಬುದನ್ನು ಮರೆಯಲಾಗದು. ನಮ್ಮ ಪುರಾಣ, ಪರಂಪರೆ, ಯೋಗವೇ ಮೊದಲಾದ ದರ್ಶನಗಳನ್ನು ವೈಭವೀಕರಿಸಿ ನಾವೇ ವಿಶ್ವಶ್ರೇಷ್ಠರೆಂದು ನಮ್ಮನ್ನು ಬಿಂಬಿಸಿಕೊಳ್ಳುವ ಮೊದಲು ವಾಸ್ತವದ ನೆಲೆಗಟ್ಟನ್ನು ಅಭ್ಯಸಿಸುವುದು, ನಮ್ಮ ರಾಷ್ಟ್ರೀಯತೆಯ ಭಾಗವತರೂ, ಹರಿದಾಸರೂ, ನಟರೂ ಬಣ್ಣ ಕಳಚಿ ನೇಪಥ್ಯವನ್ನು ಸೇರಿಕೊಂಡು ಕನ್ನಡಿಯಲ್ಲಿ ತಮ್ಮ ಮೂಲರೂಪವನ್ನು ನೋಡಿಕೊಳ್ಳುವುದು ಅಗತ್ಯ. ಭಾರತವು 1947ರಲ್ಲಿ ಒಂದಾಗಿಲ್ಲವೆಂದೂ ಅಖಂಡ ಭಾರತವನ್ನಾಗಿಸುವುದು ಮತ್ತು ಆ ಮೂಲಕ ನಮ್ಮನ್ನು ನಾವು ಮತ್ತೆ ವಿಶ್ವಗುರುವಾಗಿಸುವುದು ನಮ್ಮ ಪರಮೋಚ್ಚ ಗುರಿಯೆಂದೂ ಪಲ್ಲವಿ ಹಾಡಿದರೆ ಸಾಲದು. ಆದರ್ಶ ಮತ್ತು ವಾಸ್ತವದ ನೆಲೆ ಅರ್ಥವಾಗಬೇಕು. ಭಾರತಮಾತೆ ಮೂರ್ಖಳಲ್ಲ. ಮಕ್ಕಳು ತಾಯಿಗೆ ಜೋಗುಳ ಹಾಡುವ ಅಗತ್ಯವಿಲ್ಲ. ಶೀರ್ಷಿಕೆಯ ಸಾಲು ‘‘ಕನ್ನಡದ ಕುಲದೇವಿ ಕಾಪಾಡು ಬಾ ತಾಯೇ’’ ಎಂದು ಆರಂಭವಾಗುವ ಸಿನೆಮಾ ಗೀತೆಯದು. ಇದು ಸಾಹಿತ್ಯದಲ್ಲಿ ಸ್ಥಾಪಿತವಾಗಿರುವ ಯಾವ ಕವಿ-ಮಹಾಕವಿಯ ಪದ್ಯವೂ ಅಲ್ಲ. ಇದೊಂದು ಹಳೆಯ ಸಿನೆಮಾ ಗೀತೆ. ಜಿ.ವಿ. ಅಯ್ಯರ್ ಎಂಬವರು 1960ರ ದಶಕದಲ್ಲಿ ನಿರ್ಮಿಸಿದ ‘ಸ್ಕೂಲ್‌ಮಾಸ್ಟರ್’ ಎಂಬ ತಮ್ಮದೊಂದು ಕನ್ನಡ ಸಿನೆಮಾಕ್ಕಾಗಿಯೇ ರಚಿಸಿದ್ದು. ಕನ್ನಡ ತಾಯಿಗಾಗಿ ಹಾಡಿದಂತಿದ್ದರೂ ಇದು ರಾಷ್ಟ್ರವ್ಯಾಪಕವಾದ ಭಾವವನ್ನು ಹೊಂದಿದೆ. ಸಿನೆಮಾ ಗೀತೆಗಳನ್ನು ಕಳಪೆಯೆಂದು ದೂರೀಕರಿಸುವ ಮಂದಿಗೆ ಸಿನೆಮಾ ಗೀತೆಗಳು ಇಂದಿಗೂ ಜನರ ವಿಚಾರ ಮತ್ತು ಭಾವನೆಗಳ ಮೇಲೆ ಬೀರುವ ಪರಿಣಾಮದ ಬಗ್ಗೆ ಹೆಚ್ಚು ಗೊತ್ತಿಲ್ಲವೆನ್ನಿಸುತ್ತದೆ. ಖ್ಯಾತ ಚಲನಚಿತ್ರ ಗೀತರಚನಕಾರ ಆರ್.ಎನ್. ಜಯಗೋಪಾಲ್ ಬರೆದ ‘‘ಈ ಮಣ್ಣು ನಮ್ಮದು ಈ ನಾಡು ನಮ್ಮದು ಕಲಕಲನೆ ಹರಿಯುತಿಹ ನೀರು ನಮ್ಮದು ಕಣಕಣದಲು ಭಾರತೀಯ ರಕ್ತ ನಮ್ಮದು’’ ಎಂಬ ಇನ್ನೊಂದು ಪದ್ಯವೂ ನೆನಪಾಗುತ್ತದೆ. ಇದು ಸಿನೆಮಾ ಹಾಡಲ್ಲದಿದ್ದರೂ ಇದಕ್ಕೆ ಸಿನೆಮಾ ಗೀತರಚನಕಾರರು ಬರೆದ ಗೀತೆಯೆಂಬ ಕಿಲುಬು ಅಂಟಿದೆ. ಇಂದು ದೇಶಾಭಿಮಾನದಲ್ಲಿ ಮತಾಭಿಮಾನದ ದ್ವೇಷಮನಸ್ಸುಗಳನ್ನು ಬೆಳೆಸುವ ಸಂದರ್ಭದಲ್ಲಿ ಇವು ಅಚಾನಕವಾಗಿ ನೆನಪಾಗುತ್ತವೆ. ಕುವೆಂಪು ‘‘ಜಯ ಭಾರತ ಜನನಿಯ ತನುಜಾತೆ’’ ಎಂದು ಆರಂಭಿಸಿ ಕರ್ನಾಟಕ ಮಾತೆಯನ್ನು (ಆಗಿನ್ನೂ ಮೈಸೂರು ಪ್ರಾಂತವು ಕರ್ನಾಟಕ ರಾಜ್ಯವಾಗಿರಲಿಲ್ಲವಾದರೂ ಕುವೆಂಪು ಪ್ರವಾದಿತನವನ್ನು ಮೆರೆದಿದ್ದರು!) ಕೊಂಡಾಡಿದರೂ ಅದು ಒಕ್ಕೂಟ ವ್ಯವಸ್ಥೆಯ ಸಂಬಂಧಗಳ್ನು ತನ್ನೊಳಗೆ ಹುದುಗಿಸಿಕೊಂಡಿದೆ.

ದೇಶಭಕ್ತಿ ಬೇಕು. ಅದು ದೇಶವೆಂಬ ಭೂಮಿಯ ಬಗ್ಗೆ ಮಾತ್ರವಲ್ಲ, ಅದರೊಂದಿಗೆ ಜೀವಿಸುವ ಎಲ್ಲ ಪಶು-ಪಕ್ಷಿ-ಪ್ರಾಣಿಗಳ, ಸಸ್ಯಶ್ಯಾಮಲದ ಮತ್ತು ಮುಖ್ಯವಾಗಿ ನಮ್ಮಂತೆ ಬದುಕುವ ಮನುಷ್ಯರ ಕುರಿತ ಪ್ರೀತಿ, ಸಹನೆ, ಅನುಕಂಪ ವಾಗಿ ಹೊರಹೊಮ್ಮಬೇಕು. ಅದಲ್ಲದಿದ್ದರೆ ನಾವಿಡುವ ಪ್ರತೀ ಹೆಜ್ಜೆಯೂ ಭಸ್ಮಾಸುರ ನರ್ತನವಾದೀತು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top