ಕಾರ್ಪೊರೇಟ್ ಲಾಭ ಪ್ರಖರ: ರೈತ, ಕಾರ್ಮಿಕ ಬದುಕು ಬರ್ಬರ | Vartha Bharati- ವಾರ್ತಾ ಭಾರತಿ

--

ವಿದ್ಯುತ್ ತಿದ್ದುಪಡಿ ಮಸೂದೆ-2021

ಕಾರ್ಪೊರೇಟ್ ಲಾಭ ಪ್ರಖರ: ರೈತ, ಕಾರ್ಮಿಕ ಬದುಕು ಬರ್ಬರ

ಕೇಂದ್ರದ ಶಕ್ತಿ ಸಚಿವಾಲಯದ ಪೋರ್ಟಲ್‌ನಲ್ಲಿ ದೇಶದಲ್ಲಿ ಈ ಸ್ಮಾರ್ಟ್ ಮೀಟರಿಂಗ್ ಯಾವ ಗತಿಯಲ್ಲಿ ನಡೆಯುತ್ತಿದೆ ಎಂಬುದರ ಮೇಲೆ ನಿಗಾ ಇಡುತ್ತಾ ತ್ವರಿತಗೊಳಿಸಲು ‘ನ್ಯಾಷನಲ್ ಸ್ಮಾರ್ಟ್ ಗ್ರಿಡ್ ಮಿಷನ್’ ಎಂಬ ಉಪ ಇಲಾಖೆಯನ್ನೇ ತೆರೆಯಲಾಗಿದೆ. ಅದರ ಡ್ಯಾಷ್ ಬೋರ್ಡ್ ಹೇಳುವಂತೆ 1.11 ಕೋಟಿ ಸ್ಮಾರ್ಟ್ ಮೀಟರ್‌ಗಳ ಸ್ಯಾಂಕ್ಷನ್ ಆಗಿದ್ದು 22 ಲಕ್ಷ ಸ್ಮಾರ್ಟ್ ಮೀಟರ್‌ಗಳನ್ನು ಈಗಾಗಲೇ ಅಳವಡಿಸಲಾಗಿದೆ. ಅದರಲ್ಲಿ ಕರ್ನಾಟಕದ ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ಅಳವಡಿಸಲಾಗಿರುವ 22 ಸಾವಿರ ಸ್ಮಾರ್ಟ್ ಮೀಟರ್‌ಗಳು ಸೇರಿಕೊಂಡಿವೆ.

ಭಾಗ-2

ವಿದ್ಯುತ್ ವಿತರಣಾ ಕಂಪೆನಿಗಳ ನಷ್ಟಕ್ಕೆ ಕಾರಣಗಳು-ಜನಪರ ಪರಿಹಾರಗಳು

ವಾಸ್ತವದಲ್ಲಿ ವಿದ್ಯುತ್ ವಿತರಣಾ ಕಂಪೆನಿಗಳು ನಷ್ಟದಲ್ಲಿರುವುದು ನಿಜ. ಒಂದು ಅಂದಾಜಿನ ಪ್ರಕಾರ ಅದರ ಪ್ರಮಾಣ 4 ಲಕ್ಷ ಕೋಟಿ ರೂಪಾಯಿ. ಅದಕ್ಕೆ ಪ್ರಧಾನ ಕಾರಣ ಸರಕಾರವೇ. ಏಕೆಂದರೆ ಬೇರೆಬೇರೆ ರಾಜ್ಯ ಸರಕಾರಗಳು ಬಾಕಿ ಉಳಿಸಿಕೊಂಡಿರುವ ಒಂದುವರೆ ಲಕ್ಷ ಕೋಟಿಗೂ ಹೆಚ್ಚಿನ ಸಬ್ಸಿಡಿ ಮೊತ್ತವನ್ನು ವಿತರಣಾ ಕಂಪೆನಿಗಳಿಗೆ ನೀಡಿಲ್ಲ. ಎರಡನೆಯದಾಗಿ ವಿತರಣಾ ಕಂಪೆನಿಗಳು ಎದುರಿಸುತ್ತಿರುವ ಪ್ರಸರಣಾ ಹಾಗೂ ವಾಣಿಜ್ಯ ನಷ್ಟ (ಎಟಿಸಿ-ಅಗ್ರಿಗೇಟ್ ಟೆಕ್ನಿಕಲ್ ಆ್ಯಂಡ್ ಕಮರ್ಷಿಯಲ್ ಲಾಸ್). ಅಂದರೆ ನೂರು ಮೆಗಾವ್ಯಾಟಿನಷ್ಟು ವಿದ್ಯುತ್ತನ್ನು ಉತ್ಪಾದನೆಯಾದ ಸ್ಥಳದಿಂದ ಬಳಕೆದಾರರವರೆಗೆ ಲೈನ್‌ಗಳ ಮೂಲಕ ಸಾಗಿಸುವಾಗ ಅಂದಾಜು ಶೇ. 15ರಷ್ಟು ವಿದ್ಯುತ್ ಸರಿಯಾದ ನಿರ್ವಹಣೆಯಿಲ್ಲದೆ ತಾಂತ್ರಿಕ ಕಾರಣಗಳಿಂದ ಪೋಲಾಗುತ್ತದೆ. ಇದನ್ನು ಸರಿಯಾದ ತಾಂತ್ರಿಕತೆಯನ್ನು ಬಳಸುವ ಮೂಲಕ ಮುಕ್ಕಾಲು ಭಾಗ ನಿಲ್ಲಿಸಬಹುದು. ಇನ್ನು ಕೆಲವು ಸಣ್ಣ ದೊಡ್ಡ ವಿದ್ಯುತ್ ಕಳವುಗಳು. ಈ ವಾಣಿಜ್ಯ ನಷ್ಟವನ್ನು ಸರಿಯಾದ ಮೀಟರಿಂಗ್ ಮತ್ತು ವಿಚಕ್ಷಣೆಯ ಮೂಲಕ ನಿಯಂತ್ರಿಸಬಹುದು. ಉದಾಹರಣೆಗೆ ದಿಲ್ಲಿಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಶೇ. 58ರಷ್ಟಿದ್ದ ಎಟಿಸಿ ನಷ್ಟವನ್ನು ಶೇ.7ಕ್ಕೆ ಇಳಿಸಿರುವುದರಿಂದ ಒಂದು ಅಂದಾಜಿನ ಪ್ರಕಾರ ರೂ. 1.2 ಲಕ್ಷ ಕೋಟಿ ಉಳಿತಾಯವಾಗಿದೆ. ಮೂರನೆಯದಾಗಿ ವಿದ್ಯುತ್ ಉತ್ಪಾದಕ ಕಂಪೆನಿಗಳು ಅದರಲ್ಲೂ ಖಾಸಗಿ ವಿದ್ಯುತ್ ಉತ್ಪಾದಕ ಕಂಪೆನಿಗಳು ಉತ್ಪಾದಕ ವೆಚ್ಚಕ್ಕಿಂತ ಹಲವು ಪಟ್ಟು ಅಧಿಕ ಬೆಲೆ ನಿಗದಿ ಮಾಡುತ್ತವೆ ಮತ್ತು ಉತ್ಪಾದನೆಯಲ್ಲೂ ಉತ್ತಮ ತಾಂತ್ರಿಕತೆಯನ್ನು ಬಳಸದೆ ಉತ್ಪಾದಕ ವೆಚ್ಚ ಹೆಚ್ಚಾಗುವಂತೆ ಮಾಡುತ್ತಿವೆ. ಅಂದರೆ ವಿತರಣಾ ಕಂಪೆನಿಗಳು ನಷ್ಟವನ್ನೆದುರಿಸುತ್ತಿರುವುದು ನಿಜ. ಆದರೆ ಅದನ್ನು ಜನರ ಮೇಲೆ ವರ್ಗಾಯಿಸದೆ ಹಾಗೂ ಅದನ್ನು ನೆಪವಾಗಿ ಬಳಸಿಕೊಳ್ಳದೆ ಸೂಕ್ತ ಆರ್ಥಿಕ ಹಾಗೂ ತಾಂತ್ರಿಕ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನಿಯಂತ್ರಣಕ್ಕೆ ತರುವ ರಾಜಮಾರ್ಗ ಸರಕಾರಕ್ಕಿದೆ.

ವಿದ್ಯುತ್ ಮಸೂದೆ-2021- ಬಡವರ ಬೆಳಕು ಕಸಿವ ನೀಲನಕ್ಷೆ 

ಆದರೆ ಸರಕಾರ ವಿತರಣಾ ಕಂಪೆನಿಗಳ ಈ ಪರಿಸ್ಥಿತಿಯನ್ನು ಬಳಸಿಕೊಂಡು ಇಡೀ ವಿತರಣಾ ಕ್ಷೇತ್ರವನ್ನೇ ಖಾಸಗೀಕರಿಸಲು ಹೊರಟಿದೆ ಮತ್ತು ಈಗಾಗಲೇ ತತ್ತರಿಸಿರುವ ಜನರಿಗೆ ಕೊಡುತ್ತಿದ್ದ ಸೌಕರ್ಯಗಳನ್ನು ಕಿತ್ತುಕೊಂಡು ಜನರನ್ನು ಮತ್ತಷ್ಟು ಹಿಂಡುವ ಮೂಲಕ ಕಾರ್ಪೊರೇಟ್ ಲಾಭವನ್ನು ಖಾತರಿಪಡಿಸಲು ಹೊರಟಿದೆ. ಈ ಸುಲಿಗೆಯ ನೀಲನಕ್ಷೆಯೇ ವಿದ್ಯುತ್ ತಿದ್ದುಪಡಿ ಮಸೂದೆ-2021. ಈ ಮಸೂದೆಯ ಉದ್ದೇಶವೇ ವಿದ್ಯುತ್ ವಿತರಣಾ ಕ್ಷೇತ್ರವನ್ನು ಖಾಸಗೀಕರಿಸುವುದು. ಆದರೆ ಲಾಭದ ಉದ್ದೇಶದಿಂದ ಉದ್ಯಮದಲ್ಲಿರುವ ಹಾಗೂ ಹೆಚ್ಚು ಲಾಭವಿರುವ ಕ್ಷೇತ್ರಗಳಲ್ಲಿ ಮಾತ್ರ ಹೂಡಿಕೆ ಮಾಡುವ ಕಾರ್ಪೊರೇಟ್ ಕಂಪೆನಿಗಳು ಈಗಾಗಲೇ ನಷ್ಟದಲ್ಲಿರುವ ವಿದ್ಯುತ್ ವಿತರಣಾ ಕ್ಷೇತ್ರಕ್ಕೇಕೆ ಬರುತ್ತಾರೆ? ಆದ್ದರಿಂದಲೇ ಈ ಮಸೂದೆಯು ವಿದ್ಯುತ್ ವಿತರಣೆಯನ್ನು ಲಾಭದಾಯಕ ಮಾಡುವ ಹಲವಾರು ಪ್ರಸ್ತಾವಗಳನ್ನು ಹೊಂದಿದೆ.

ಕ್ರಾಸ್ ಸಬ್ಸಿಡಿ ರದ್ದು-ಒಂದೇ ದೇಶ, ಒಂದೇ ಬೆಲೆ!

ಅದರಲ್ಲಿ ಮೊತ್ತ ಮೊದಲನೆಯದು ಬಡವರಿಗೆ, ರೈತರಿಗೆ ಕೊಡುತ್ತಿದ್ದ ಸಬ್ಸಿಡಿ ದರದ ವಿದ್ಯುತ್ತನ್ನು ರದ್ದುಮಾಡಿ ಎಲ್ಲರಿಗೂ ಒಂದೇ ದರವನ್ನು ನಿಗದಿ ಮಾಡುವುದು. ಕಾರ್ಪೊರೇಟ್ ಕಂಪೆನಿಗಳ ಪ್ರಕಾರ ವಿತರಣಾ ಕಂಪೆನಿಗಳು ನಷ್ಟವನ್ನೆದುರಿಸಲು ಕಾರಣ ಗ್ರಾಹಕರು ವಿದ್ಯುತ್ ಉತ್ಪಾದನೆ ಹಾಗೂ ವಿತರಣೆಗೆ ಎಷ್ಟು ವೆಚ್ಚವಾಗುವುದೋ ಅಷ್ಟು ಬೆಲೆಯನ್ನು ಕಟ್ಟದಿರುವುದು. ಆದ್ದರಿಂದ ವಿದ್ಯುತ್ ಬೆಲೆಯಲ್ಲಿ ರಿಯಾಯಿತಿ ಇರದೆ ಬಡವ-ಶ್ರೀಮಂತರೆನ್ನದೆ ಎಲ್ಲಾ ಗ್ರಾಹಕರು ಎಷ್ಟು ವೆಚ್ಚವಾಗುವುದೋ ಅಷ್ಟು ಬೆಲೆಯನ್ನು ಕಟ್ಟಬೇಕು.

ಈ ಮಾರುಕಟ್ಟೆ ತತ್ವವನ್ನು ಮೋದಿ ಸರಕಾರ ಚಾಚೂ ತಪ್ಪದೆ ಒಪ್ಪಿಕೊಂಡಿದೆ. ಹೊಸ ಮಸೂದೆಯ 12 (ii) ಅಂಶ ಹೀಗೆ ಹೇಳುತ್ತದೆ: “Provided also that such surcharge and cross subsidies shall be progressively reduced by the State Commission in the manner as may be provided in the Tariff Policy:” ಈ ಕಲಮನ್ನು ಅಡಕ ಮಾಡಲಾಗಿದೆ ಹಾಗೂ ಹೊಸ ಖಾಸಗಿ ವಿತರಣಾ ಕಂಪೆನಿಗಳಿಗೆ ಸರಕಾರ ಈವರೆಗೆ ನೀಡುತ್ತಾ ಬಂದ ಎಲ್ಲಾ ಬಗೆಯ ಕ್ರಾಸ್ ಸಬ್ಸಿಡಿಗಳನ್ನು ವೇಗವಾಗಿ ಕಡಿತಗೊಳಿಸಲಾಗುವುದು ಎಂಬ ಭರವಸೆ ನೀಡಲಾಗಿದೆ. ಇದಕ್ಕೆ ಪೂರಕವಾಗಿ 2016ರಲ್ಲಿ ಜಾರಿ ಮಾಡಿದ್ದ ಹೊಸ ವಿದ್ಯುತ್ ಶುಲ್ಕ ನೀತಿಗೂ ತಿದ್ದುಪಡಿ ತರುವ ಭರವಸೆಯನ್ನು ಅಡಕಗೊಳಿಸಲಾಗಿದೆ.

ಆದರೆ ಒಂದೊಮ್ಮೆ ಈ ಮಸೂದೆ ಕಾಯ್ದೆಯಾದರೆ ಸರಕಾರಿ ಒಡೆತನ ದಲ್ಲಿರುವ ವಿತರಣಾ ಕಂಪೆನಿಗಳ ಬದಲಿಗೆ ಖಾಸಗಿ ವಿತರಣಾ ಕಂಪೆನಿಗಳಿಂದ ಅವರು ನಿಗದಿಪಡಿಸಿದ ಶುಲ್ಕವನ್ನು ತೆತ್ತು ರೈತರು ಮತ್ತು ಬಡವರು ವಿದ್ಯುತ್ತನ್ನು ಖರೀದಿ ಮಾಡಬೇಕಿರುತ್ತದೆ. ಸಬ್ಸಿಡಿ ಇಲ್ಲದಿರುವುದರಿಂದ ಹಾಗೂ ಎಲ್ಲರಿಗೂ ಒಂದೇ ದರವಾದ್ದರಿಂದ ಅದು ಈಗಿರುವುದಕ್ಕಿಂತ ಸಹಜವಾಗಿಯೇ ಎರಡು-ಮೂರುಪಟ್ಟು ಹೆಚ್ಚಿರುತ್ತದೆ. ನೇರ ನಗದು ವರ್ಗಾವಣೆಯೆಂಬ ಬಳಸು ಮೋಸ ಆದರೆ ಆ ಮಸೂದೆಯಲ್ಲಿ ರಾಜ್ಯ ಸರಕಾರಗಳು ಬೇಕಿದ್ದರೆ ಆ ನಂತರ ಕೆಲವು ನಿರ್ದಿಷ್ಟ ವರ್ಗಗಳ ಗ್ರಾಹಕರ ಅಕೌಂಟಿಗೆ ಸಬ್ಸಿಡಿ ಹಣವನ್ನು ತುಂಬಬಹುದು ಎಂಬ ಅವಕಾಶವನ್ನು ನೀಡಿದೆ. ಆದರೆ ಗ್ಯಾಸ್ ಮತ್ತು ಗೊಬ್ಬರದ ವಿಷಯಗಳಲ್ಲಿ ಅದರಲ್ಲೂ ವಿಶೇಷವಾಗಿ ಅಡುಗೆ ಅನಿಲದ ವಿಷಯದಲ್ಲಿ ಈ ನೇರ ನಗದು ವರ್ಗಾವಣೆ ಎಂಬುದು ಹೇಗೆ ಜನರನ್ನು ಮೋಸ ಮಾಡುವ ತಂತ್ರವಾಗಿದೆ ಎಂಬುದನ್ನು ಈ ದೇಶದ ಜನ ಅರ್ಥ ಮಾಡಿಕೊಂಡಿದ್ದಾರೆ. ಆದ್ದರಿಂದ ಪ್ರಾರಂಭದ ಒಂದೆರಡು ವರ್ಷ ಬಡವರ ಮತ್ತು ರೈತರ ಅಕೌಂಟಿನಲ್ಲಿ ವಿದ್ಯುತ್ ಸಬ್ಸಿಡಿ ಹಣ ಬಂದರೂ ನಂತರದಲ್ಲಿ ಖಾಸಗಿ ಕಂಪೆನಿಗಳು ನಿಗದಿಪಡಿಸಿದಷ್ಟು ಶುಲ್ಕವನ್ನು ತೆರಲೇಬೇಕಾದ ವ್ಯವಸ್ಥೆ ಜಾರಿಗೆ ಬರಲಿದೆ.

ಪ್ರೀ ಪೇಯ್ಡೆ ಮೀಟರ್ ಎಂಬ ರಾಷ್ಟ್ರೀಯ ಕುತಂತ್ರ

ಎಲ್ಲಕ್ಕಿಂತ ಹೆಚ್ಚಾಗಿ ಖಾಸಗಿ ವಿತರಣಾ ಕಂಪೆನಿಗಳಿಗಿದ್ದ ದೊಡ್ಡ ತಕರಾರು ಗ್ರಾಹಕ ವರ್ಗಗಳು ಶುಲ್ಕವನ್ನು ಪಾವತಿ ಮಾಡುವುದು ವಿದ್ಯುತ್ತಿನ ಸಬರಾಜನ್ನು ಮಾಡಿದ ತಿಂಗಳ ನಂತರ. ಆದರೆ ಆ ವರ್ಗಗಳು ತಿಂಗಳ ನಂತರ ಶುಲ್ಕ ಪಾವತಿ ಮಾಡದಿದ್ದರೆ? ಅದರಿಂದ ತಮ್ಮ ಇಡೀ ವ್ಯವಹಾರ ಯೋಜನೆಯೇ ತಲೆಕೆಳಗಾಗುವುದರಿಂದ ಈ ಖಾಸಗಿ ಕಂಪೆನಿಗಳು ಪ್ರೀ ಪೇಯ್ಡಿ ಮೀಟರಿಂಗ್ ಯೋಜನೆಯನ್ನು ಮುಂದಿಟ್ಟಿವೆ. ಸರಕಾರ ಇದನ್ನು ಕೂಡ ಚಾಚೂ ತಪ್ಪದೆ ಒಪ್ಪಿಕೊಂಡಿದೆ.

ಪ್ರೀ ಪೇಯ್ಡಿ ಸ್ಮಾರ್ಟ್ ಮೀಟರಿಂಗ್ ಯೋಜನೆಯೆಂದರೆ ಪ್ರೀ ಪೇಯ್ಡಾ ಮೊಬೈಲ್ ರೀ ಚಾರ್ಜ್ ಇದ್ದಂತೆ. ಬಳಸುವ ಮುನ್ನವೇ ದುಡ್ಡು ಕಟ್ಟಬೇಕು. ಎಷ್ಟು ದುಡ್ಡು ಕಟ್ಟಲಾಗಿದೆಯೋ ಅಷ್ಟರವರೆಗೆ ಸೇವೆ ಲಭ್ಯ. ಆ ನಂತರ ಮತ್ತೆ ದುಡ್ಡು ತುಂಬುವವರೆಗೆ ಇನ್ ಕಮಿಂಗ್ ಮತ್ತು ಔಟ್ ಗೋಯಿಂಗ್ ಕಟ್! ಹಾಗೆಯೇ ವಿದ್ಯುತ್ ಕ್ಷೇತ್ರದಲ್ಲೂ ಇನ್ನು ಮುಂದೆ ಗ್ರಾಹಕರು ವಿದ್ಯುತ್ತನ್ನು ಬಳಸುವ ಮುಂಚೆಯೇ ಅದರ ಶುಲ್ಕವನ್ನು ತಮ್ಮ ಬ್ಯಾಂಕ್ ಅಕೌಂಟಿನಲ್ಲಿ ತುಂಬಿರಬೇಕು ಅಥವಾ ಗ್ರಾಹಕರ ಅಕೌಂಟಿನಲ್ಲಿ ಎಷ್ಟು ಹಣವಿದೆಯೋ ಅಷ್ಟರವರೆಗೆ ವಿದ್ಯುತ್ ಸರಬರಾಜಾಗುತ್ತದೆ. ಹಣ ಮುಗಿದೊಡನೆ ವಿದ್ಯುತ್ ನಿಲ್ಲುತ್ತದೆ. ಇದರಿಂದ ಖಾಸಗಿ ವಿತರಕರ ಲಾಭ ಖಾತರಿಯಾಗುತ್ತದೆ. ಆದರೆ ಬಡ-ರೈತಾಪಿಯ ಬದುಕು?

ಆದರೂ ಮೋದಿ ಸರಕಾರ 2019ರಿಂದಲೇ ಸದ್ದಿಲ್ಲದೆ ಪ್ರೀ ಪೇಯ್ಡಾ ಮೀಟರಿಂಗ್ ಯೋಜನೆಗೆ ಸನ್ನಾಹ ಪ್ರಾರಂಭಿಸಿದೆ. ಹಾಗೆ ನೋಡಿದರೆ ವಿದ್ಯುತ್ ಕೇಂದ್ರ ಮತ್ತು ರಾಜ್ಯ ಎರಡಕ್ಕೂ ಸಂಬಂಧಿಸಿದ ಸಮವರ್ತಿ ಪಟ್ಟಿಯಲ್ಲಿದೆ. ಆದರೆ ರಾಜ್ಯಗಳ ಸಮ್ಮತಿಯನ್ನೂ ಪಡೆಯದೆ ಹಾಗೂ ಯಾವುದೇ ಶಾಸನಗಳ ಬೆಂಬಲವೂ ಇಲ್ಲದಂತೆ ಮೋದಿ ಸರಕಾರ 2019ರಿಂದಲೇ ಒಂದು ರಾಷ್ಟ್ರೀಯ ಸ್ಮಾರ್ಟ್ ಮೀಟರಿಂಗ್ ಕಾರ್ಯಕ್ರಮ ಪ್ರಾರಂಭಿಸಿದೆ. 2020ರ ಬಜೆಟ್‌ನಲ್ಲೂ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ದೇಶದ 22 ಕೋಟಿ ವಿದ್ಯುತ್ ಮೀಟರ್‌ಗಳನ್ನು ಹಂತಹಂತವಾಗಿ ಸ್ಮಾರ್ಟ್ ಮತ್ತು ಪ್ರೀ ಪೇಯ್ಡಾ ಮೀಟರ್ ಆಗಿ ಬದಲಾಯಿಸುವ ಪ್ರಸ್ತಾವವನ್ನು ಮುಂದಿಟ್ಟಿದ್ದರು. ಕೇಂದ್ರದ ಶಕ್ತಿ ಸಚಿವಾಲಯದ ಪೋರ್ಟಲ್‌ನಲ್ಲಿ ದೇಶದಲ್ಲಿ ಈ ಸ್ಮಾರ್ಟ್ ಮೀಟರಿಂಗ್ ಯಾವ ಗತಿಯಲ್ಲಿ ನಡೆಯುತ್ತಿದೆ ಎಂಬುದರ ಮೇಲೆ ನಿಗಾ ಇಡುತ್ತಾ ತ್ವರಿತಗೊಳಿಸಲು ‘ನ್ಯಾಷನಲ್ ಸ್ಮಾರ್ಟ್ ಗ್ರಿಡ್ ಮಿಷನ್’ ಎಂಬ ಉಪ ಇಲಾಖೆಯನ್ನೇ ತೆರೆಯಲಾಗಿದೆ. ಅದರ ಡ್ಯಾಷ್ ಬೋರ್ಡ್ ಹೇಳುವಂತೆ 1.11 ಕೋಟಿ ಸ್ಮಾರ್ಟ್ ಮೀಟರ್‌ಗಳ ಸ್ಯಾಂಕ್ಷನ್ ಆಗಿದ್ದು 22 ಲಕ್ಷ ಸ್ಮಾರ್ಟ್ ಮೀಟರ್‌ಗಳನ್ನು ಈಗಾಗಲೇ ಅಳವಡಿಸಲಾಗಿದೆ. ಅದರಲ್ಲಿ ಕರ್ನಾಟಕದ ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ಅಳವಡಿಸಲಾಗಿರುವ 22 ಸಾವಿರ ಸ್ಮಾರ್ಟ್ ಮೀಟರ್‌ಗಳು ಸೇರಿಕೊಂಡಿವೆ.

ಇದಲ್ಲದೆ ಉತ್ತರದ ಹಲವಾರು ರಾಜ್ಯಗಳಲ್ಲಿ ಈಗಾಗಲೇ 2.5 ಲಕ್ಷ ಪ್ರೀ ಪೇಯ್ಡಾ ಮೀಟರ್‌ಗಳನ್ನು ಹಾಕಲಾಗಿದೆ. ಆಸಕ್ತರು ಹೆಚ್ಚಿನ ವಿವರಗಳನ್ನು ಈ ವೆಬ್‌ಸೈಟ್‌ನಲ್ಲಿ ನೋಡಬಹುದು: https://www.nsgm.gov.in/en/state-wise-map ಹೀಗಾಗಿ ಈ ಮಸೂದೆ ಈ ಅಧಿವೇಶನದಲ್ಲಿ ಪಾಸಾಗದಿದ್ದರೂ ಪ್ರೀ ಪೇಯ್ಡ ಮೀಟರಿಂಗ್ ಅರ್ಥಾತ್ ಜನರನ್ನು ಕತ್ತಲಿಂದ ಕಗ್ಗತ್ತಲಿಗೆ ದೂಡುವ ಕಾರ್ಯಕ್ರಮ ಮುಂದುವರಿಯುವ ಎಲ್ಲಾ ಸಾಧ್ಯತೆಗಳಿದೆ.

ಉಳ್ಳವರಿಗೆ ಬೆಳಕೆಂದರೆ ಇಲ್ಲದವರಿಗೆ ಕತ್ತಲೆ

ಹಾಗೆ ನೋಡಿದರೆ ಖಾಸಗಿ ವಿತರಕರು ಈಗಾಗಲೇ ಮಾರ್ಕೆಟ್‌ನಲ್ಲಿದ್ದಾರೆ. ದೇಶದ ಶೇ. 10ರಷ್ಟು ವಿತರಣೆ ಖಾಸಗಿ ಸುಪರ್ದಿಯಲ್ಲಿದೆ. ಆದರೆ ಅದು ಮುಂಬೈ, ದಿಲ್ಲಿ, ರಾಜಸ್ಥಾನಗಳ ಲಾಭ ಖಾತರಿ ನಗರಗಳಲ್ಲಿ ಮಾತ್ರ. ಅವರಿಗೆ ಒಡಿಶಾ ಹಾಗೂ ಬಿಹಾರಗಳ ನಗರಗಳ ವಿತರಣೆಯ ಅವಕಾಶಗಳಿದ್ದರೂ ಅದನ್ನು ಆಯ್ದುಕೊಳ್ಳಲಿಲ್ಲ. ಕಾರಣ ಅದು ಲಾಭದಾಯಕವಲ್ಲ. ಹೀಗಾಗಿ ನಾಳೆ ಸರಕಾರಿ ವಿತರಣಾ ಕಂಪೆನಿಗಳನ್ನು ಸರಕಾರಗಳೇ ಕೊಂದು ಹಾಕಿ ಕೇವಲ ಖಾಸಗಿಗಳೇ ಉಳಿದರೆ ಗ್ರಾಮೀಣ ಪ್ರದೇಶಗಳಿಗೆ ಮತ್ತು ಬಡಮಧ್ಯಮ ವಸತಿ ಪ್ರದೇಶಗಳಿಗೆ ಹಾಗೂ ಅವರ ಉದ್ದಿಮೆಗಳಿಗೆ ವಿದ್ಯುತ್ ಸಿಗುವ ಖಾತರಿಯೇನು? ಜೊತೆಗೆ ಸುಮಾರು 25 ಲಕ್ಷದಷ್ಟು ಉದ್ಯೋಗಿಗಳಿರುವ ವಿದ್ಯುತ್ ವಿತರಣಾ ಕ್ಷೇತ್ರ ಖಾಸಗಿಯಾದರೆ ಅರ್ಧಕ್ಕರ್ಧ ಉದ್ಯೋಗಿಗಳು ಬೀದಿಪಾಲಾಗಲಿದ್ದಾರೆ. ಆದ್ದರಿಂದ ಶತಾಯ ಗತಾಯ ಈ ದೇಶದ ಎಲ್ಲಾ ಜನರು ವಿದ್ಯುತ್ ಕ್ಷೇತ್ರದ ಈ ದೇಶದ್ರೋಹಿ ಜನದ್ರೋಹಿ ಖಾಸಗೀಕರಣವಾಗದಂತೆ ಸದಾ ಎಚ್ಚರದಿಂದಿರಬೇಕಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top