ನವನವೋನ್ಮೇಷದ ಕವಿ ಬಿ.ಆರ್. ಲಕ್ಷ್ಮಣ ರಾವ್ | Vartha Bharati- ವಾರ್ತಾ ಭಾರತಿ

--

ನವನವೋನ್ಮೇಷದ ಕವಿ ಬಿ.ಆರ್. ಲಕ್ಷ್ಮಣ ರಾವ್

ಯಾರೊಬ್ಬ ಪೂರ್ವಿಕರ ಪ್ರಭಾವ ಎಲ್ಲರ ಮೇಲೂ ಆಗಿರುತ್ತದೆ. ಅದು ಆಕ್ಷೇಪವೇ ಅಲ್ಲ. ಈ ಎಲ್ಲ ಪ್ರಭಾವ ಮೀಸಲಾತಿಯ ಹೊರತಾಗಿಯೂ ಲಕ್ಷ್ಮಣರಾವ್ ಅವರ ಕವಿತೆಗಳ ಲವಲವಿಕೆ ಅವರನ್ನು ಇಂದಿನ ಕಾವ್ಯಕ್ಷೇತ್ರದ ಮುಂಚೂಣಿ ಸರದಾರರಂತೆ ಕಾಣಿಸುತ್ತದೆ. ಮೇಲ್ಪದರದಲ್ಲೇ ಅಂದರೆ ಮೊದಲ ಓದಿಗೆ ದಕ್ಕಿದಂತನ್ನ್ನಿಸಿದರೂ ಮತ್ತೆ ಮತ್ತೆ ಓದಿದರೆ ಅರ್ಥವು ಆಳವಾಗುತ್ತಾ ಹೋಗಿ ಕೈಗೆ ಸಿಕ್ಕುವುದಿಲ್ಲವೇನೋ ಎಂಬ ಅನೂಹ್ಯತೆಯನ್ನು ಸೃಷ್ಟಿಸುತ್ತ ಗಾಢ ವಿಷಾದವನ್ನು ರೂಪಿಸಿಕೊಡುತ್ತವೆ.


ಬಿ .ಆರ್. ಲಕ್ಷ್ಮಣರಾವ್ ಈಗ 75ರ ಹೊಸ್ತಿಲಲ್ಲಿದ್ದಾರೆ (ಹುಟ್ಟು 1946). ಕಳೆದ 50 ವರ್ಷಗಳಿಂದ ಅವರು ಆರಂಭದಲ್ಲಿ ತಮ್ಮ ಗಂಭೀರಕಾವ್ಯದಿಂದ, ಆನಂತರ ಕ್ಯಾಸೆಟ್ಟು ಮುಖೇನ ಜನಪ್ರಿಯವಾದ ಸುಗಮ ಸಂಗೀತದ ಗೇಯಹಾಡುಗಳಿಂದ ಜನಜನಿತವಾಗಿದ್ದಾರೆ; ‘ಗೋಪಿ ಮತ್ತು ಗಾಂಡಲೀನ’, ‘ಟುವಟಾರ’, ‘ಲಿಲ್ಲಿಪುಟ್ಟಿಯ ಹಂಬಲ’, ‘ಶಾಂಗ್ರಿ-ಲಾ’, ‘ಅಪರಾಧಂಗಳ ಮನ್ನಿಸೋ’, ‘ಎಡೆ’, ‘ಇವಳು ನದಿಯಲ್ಲ’, ‘ನನ್ನ ಮಟ್ಟಿಗೆ’, ‘ನವೋನ್ಮೇಷ’ ಎಂಬ 9 ಕವನ ಸಂಕಲನಗಳನ್ನು ತಂದಿದ್ದಾರೆ. ಇವೆಲ್ಲವೂ ಸಮಗ್ರವಾಗಿ ‘ಕ್ಯಾಮರ ಕಣ್ಣು’ ಎಂದು ಪ್ರಕಟವಾಗಿವೆ. ಇವಲ್ಲದೆ ಕಾದಂಬರಿ, ಕಥಾಸಂಕಲನ, ನಾಟಕಗಳನ್ನೂ ಬರೆದಿದ್ದಾರಾದರೂ ಅವ್ಯಾವುದೂ ಅವರನ್ನು ಸಾಹಿತ್ಯದ ಮುನ್ನೆಲೆಗೆ ತಂದು ನಿಲ್ಲಿಸಿಲ್ಲ. ಅವರನ್ನು ಕನ್ನಡಜನ ಕವಿಯೆಂದೇ ಗುರುತಿಸಿದ್ದಾರೆ. ಲಕ್ಷ್ಮಣರಾವ್ ಪದ್ಯ ಬರೆಯುವ ಕ್ರಮ, ಶ್ರಮ ಇವು ಅಡಿಗರನ್ನು ಹೋಲುತ್ತಿರಲಿಲ್ಲ. ಸುಮಾರಾಗಿ ಲಂಕೇಶ್, ರಾಮಚಂದ್ರ ಶರ್ಮ, ರಾಮಾನುಜನ್, ತಿರುಮಲೇಶ್ ಇವರ ಗದ್ಯ ಶೈಲಿಯನ್ನು ಅನುಸರಿಸಿದಂತಿತ್ತು. ಆದರೆ ವಿಶಿಷ್ಟ ರೂಪಕಗಳನ್ನು, ಪ್ರತಿಮೆಗಳನ್ನು ಬಳಸುತ್ತಿದ್ದರು. ಇದನ್ನು ಗಮನಿಸಬೇಕಾದರೆ ಲಕ್ಷ್ಮಣರಾವ್ ಅವರ ‘ಟುವಟಾರ’ (ಸಾಕ್ಷಿ-1973) ಮತ್ತು ಅದೇ ಸಂಚಿಕೆಯಲ್ಲಿ ಪ್ರಕಟವಾಗಿದ್ದ ರಾಮಚಂದ್ರಶರ್ಮರ ‘ಕ್ರಿಸ್‌ಮಸ್ಸಿನ ಮೂರು ಮುಖಗಳು’ ಕವಿತೆಯನ್ನು ಓದಿದರೆ ಸಾಕು ಅನ್ನಿಸುತ್ತದೆ. ಇತರ ಹಿರಿಯರ ಕವಿತೆಗಳು ಆ ಸಂಚಿಕೆಯಲ್ಲಿದ್ದರೂ ಇವೆರಡೇ ಕವನಗಳು ನನಗೆ ಹೊಸ ಅನುಭವವನ್ನು ನೀಡಿದ್ದು.

ಟುವಟಾರದ ಓದಿನೊಂದಿಗೆ ಲಕ್ಷ್ಮಣರಾವ್ ಅವರ ಹಳೆಯ ಕವಿತೆಗಳ ಓದನ್ನು ನಡೆಸಬಹುದು. ‘ಗೋಪಿ ಮತ್ತು ಗಾಂಡಲೀನ’ ಸಂಕಲನದಲ್ಲಿದ್ದ ‘ಫೋಟೊಗ್ರಾಫರ್’, ‘ಗೋಪಿ ಮತ್ತು ಗಾಂಡಲೀನ’, ‘ಸಖೀಗೀತ’ ಇವು ಸಾಕಷ್ಟು ಹೊಸ ಅನುಭವವನ್ನು ನೀಡಿದ್ದವು. ‘ಅಪ್ಪನ ಚಿಪ್ಪೊಡೆದುಕೊಂಡು’, ‘‘ಗೃಹಸ್ಥಧರ್ಮದ ಗಂಧ ತೇಯುತ್ತಿದೆ ರಕ್ಷಮಾಂ ಪುರುಷೋತ್ತಮ!’’, ಸಂಪ್ರದಾಯದ ತೊನ್ನು ಪ್ರತಿಷ್ಠೆಯ ಕುತ್ತ, ‘ಆದೀತು’ ಎನ್ನಲು ಕಾಲ ಸಾಕ್ಷಿಯೆ, ಕಾಮಾಕ್ಷಿಯೇ? ಇವನ್ನು ಓದುವಾಗ ಅಡಿಗರೂ ಬೇಂದ್ರೆಯವರೂ ನೆನಪಾದರೂ (ಮುಂದೆಯೂ ಇವರು ‘ಮುಳ್ಳುಮಾತಿನ ಮೊನೆ ಚುಚ್ಚಿ ಗಾಳಿ ಇಳಿಸಿಬಿಡುವ..’, ‘ಸಂಕಲ್ಪಬಲ’, ‘ಪುರುಷೋತ್ತಮನ ರೂಪರೇಖೆ’, ‘ವ್ಯಕ್ತ ಮಧ್ಯ’ ಮುಂತಾದ ಪದಪುಂಜವನ್ನು ಮತ್ತು ವಿಭಿನ್ನ ರೂಪದ ‘ಬೇಲಿ’ ಎಂಬ ಕವನದಲ್ಲಿ ಅಡಿಗರ ಪ್ರತಿಮಾ ಲೋಕವನ್ನು ಬಳಸಿದ್ದರು.) ‘ಶಶಿಯ ಮೊರೆ’ ಕವನದಲ್ಲಿ ‘‘ದಯವಿಟ್ಟು ನನ್ನ ಕ್ಷೇತ್ರದಲ್ಲೂ ನಿಮ್ಮ ಧ್ವಜ ನೆಟ್ಟು ನನ್ನ ಬಸಿರಲ್ಲೂ ಒಂದು ವಿಯಟ್ನಾಂ ಬಿತ್ತಬೇಡಿ’’ ಎಂಬ ಸಾಲಿನ ಶೈಲಿ ರಾಮಾನುಜನ್, ಶರ್ಮ ಇವರನ್ನು ನೆನಪಿಸಿದರೂ ಬಳಕೆಯ ರೀತಿ ಚೇತೋಹಾರಿಯಾದದ್ದು.

ಲಕ್ಷ್ಮಣರಾವ್ ‘ಹಸಿರು ಹಾವು’ ಎಂಬ ಕವನ ಹಾವಿನ ಪ್ರತಿಮೆಯ ಕಾರಣಕ್ಕಲ್ಲ, ಬದಲಾಗಿ ತನ್ನ ತಾತ್ವಿಕ ಹೊಳಹು, ಹೊಳಪಿಗಾಗಿ ಮನಸ್ಸನ್ನು ಸೆಳೆಯಿತು. ದಾರ್ಶನಿಕತೆಯಲ್ಲಿ ಯೇಟ್ಸನ ಕವಿತೆಯನ್ನೂ ನೆನಪಿಸುತ್ತದೆ. ಯೇಟ್ಸನ ಕುರಿತ ಒಂದು ಕವನವನ್ನೂ ಲಕ್ಷ್ಮಣರಾವ್ ಅನುವಾದಿಸಿದ್ದಾರೆ. ಯಾರೊಬ್ಬ ಪೂರ್ವಿಕರ ಪ್ರಭಾವ ಎಲ್ಲರ ಮೇಲೂ ಆಗಿರುತ್ತದೆ. ಅದು ಆಕ್ಷೇಪವೇ ಅಲ್ಲ. ಈ ಎಲ್ಲ ಪ್ರಭಾವ ಮೀಸಲಾತಿಯ ಹೊರತಾಗಿಯೂ ಲಕ್ಷ್ಮಣರಾವ್ ಅವರ ಕವಿತೆಗಳ ಲವಲವಿಕೆ ಅವರನ್ನು ಇಂದಿನ ಕಾವ್ಯಕ್ಷೇತ್ರದ ಮುಂಚೂಣಿ ಸರದಾರರಂತೆ ಕಾಣಿಸುತ್ತದೆ. ಮೇಲ್ಪದರದಲ್ಲೇ ಅಂದರೆ ಮೊದಲ ಓದಿಗೆ ದಕ್ಕಿದಂತನ್ನಿಸಿದರೂ ಮತ್ತೆ ಮತ್ತೆ ಓದಿದರೆ ಅರ್ಥವು ಆಳವಾಗುತ್ತಾ ಹೋಗಿ ಕೈಗೆ ಸಿಕ್ಕುವುದಿಲ್ಲವೇನೋ ಎಂಬ ಅನೂಹ್ಯತೆಯನ್ನು ಸೃಷ್ಟಿಸುತ್ತ ಗಾಢ ವಿಷಾದವನ್ನು ರೂಪಿಸಿಕೊಡುತ್ತವೆ. ‘ಫೋಟೊಗ್ರಾಫರ್’ ಕವಿತೆಯ ಕೊನೆಯ ಮೂರು ಸಾಲುಗಳು ಹೇಳುವ ಈ ವಿಷಣ್ಣತೆಯನ್ನು ಗಮನಿಸಿ: ‘‘ಅವರವರ ಊರುಗಳಿಗೆ ಅವರೆಲ್ಲಾ ಹೊರಟುಬಿಟ್ಟ ಮೇಲೆ, ನನ್ನ ಬಳಿ ಉಳಿಯುವುದು ಅವರೆಲ್ಲರ ಮಾಸುವ ನೆನಪು,  ನೆಗೆಟಿವ್‌ಗಳು ಮಾತ್ರ’’. ಬದುಕು ಇಷ್ಟೇ ಅಲ್ಲವೇ ಎಂಬ ಸೂಚನೆ ಸ್ಪಷ್ಟವಿದೆ. ‘ಮಾಸುವ’ ಎಂಬ ಪದದ ಬದಲಿಗೆ ‘ಮಾಸದ’ ಎಂದು ಈ ಕವಿ ಬಳಸಿದ್ದರೆ ಕವಿತೆಯ ಪರಿಣಾಮದ ವ್ಯಾಪ್ತಿ, ಧ್ವನಿ, ಕುಗ್ಗುತ್ತಿತ್ತು! ಲಂಕೇಶ್ ಈ ಕವಿತೆಯ ಬಗ್ಗೆ ಹೇಳಿದ ‘ವಸ್ತುವಿನ ಮೇಲೆ ಕಣ್ಣು ನೆಟ್ಟು ಬರೆಯುವ ಬಗೆ’ ಹೆಚ್ಚು ಕಡಿಮೆ ಅವರ ಎಲ್ಲ ಕವಿತೆಗಳಲ್ಲೂ ಇವೆ.

‘ಸಾಕ್ಷಿ’ಯಲ್ಲೇ (ಸಾಕ್ಷಿ-19, ಎಪ್ರಿಲ್-1973) ಲಕ್ಷ್ಮಣರಾವ್ ಅವರ ಮತ್ತೆರಡು ಕವಿತೆಗಳು- ‘ಮನವಿ’, ‘ಮಣ್ಣು ಹುಳ’ ಎಂಬ ಕವಿತೆಗಳು ಪ್ರಕಟವಾಗಿದ್ದವು. ‘ಮನವಿ’ಯಲ್ಲಿ ಅವರು ‘‘ಹಿಪ್ಪಿಯಲ್ಲ, ಡ್ಯಾಂಡಿಯಲ್ಲ, ಕ್ಷುದ್ರ ಕಾಟನ್ ಕ್ಯಾಂಡಿಯಲ್ಲ ನಾನಿಂದಿನ ಕವಿ’’ ಎಂದು ಸಾರಿದ್ದರು. 20ನೇ ಶತಮಾನದ ಆದಿಯಲ್ಲಿ ಪೇಜಾವರ ಸದಾಶಿವರಾಯರ ‘ನೃತ್ಯೋತ್ಸವ’ ಕವಿತೆ ನೀಡಿದಂತಹ ಮತ್ತೊಂದು ಹೊಸಹಾದಿಯನ್ನು ಕವಿ ಆಧುನಿಕ ಕನ್ನಡ ಕಾವ್ಯಕ್ಕೆ ನೀಡುತ್ತಿದ್ದಾರೆಂಬುದು ಸ್ಪಷ್ಟವಿತ್ತು. ಅಡಿಗರ ಮಣ್ಣಿನ ವಾಸನೆಯ ಬದಲು ‘ನಾನಾಗಬೇಕು ರೈತನ ಬಂಧು ಒಂದು ಮಣ್ಣುಹುಳ’ ಎಂಬ ತವಕವಿತ್ತು. ಅವರ ಕವಿತೆಗಳನ್ನು ಓದುವಾಗ ‘ಬ್ರಹ್ಮಾಂಡದ ಮೇಲೆ ಕಾವು ಕೂತು ಮೊಟ್ಟೆ ಒಡೆದರೆ.. ಎಂಥ ಮರಿ ಹೊರ ಬರುವುದೋ ನೋಡಬೇಕೆಂದು.’ ಎಂಬ ಅವರ ಕಾವ್ಯಭವಿಷ್ಯದ ಬಗ್ಗೆ ನಮಗೂ ಅನ್ನಿಸುವಂತಿತ್ತು.

‘ಕೊಂಚ ಹೊತ್ತು’ ಎಂಬ ಒಂದು ಕವಿತೆ ಪ್ರೇಮ/ವಿರಹ ಕವಿತೆಗಳಂತೆ ತೀರಾ ಸರಳವಾದದ್ದನ್ನು ಸರಳವಾಗಿಯೇ ಹೇಳುತ್ತ ಕೊನೆಯಲ್ಲಿ ತನ್ನ ಮಾಂತ್ರಿಕ ಶಕ್ತಿಯನ್ನು ಬೀರಿ ಓದುಗನನ್ನು ಬದುಕಿನ ಕಟು ವಾಸ್ತವಕ್ಕೇರಿಸುತ್ತದೆ. ಇದನ್ನು ನರಸಿಂಹಸ್ವಾಮಿ ಅಥವಾ ನಿಸಾರ್ ಅಹಮದ್ ಶೈಲಿಯೆನ್ನೋಣವೇ? ಇಲ್ಲ. ಅದಕ್ಕಿಂತಲೂ ತೀವ್ರ ಆಪ್ತ ಧಾಟಿಯಿದೆ. 1960-70ರ ದಶಕದ ಆತ್ಮಪ್ರತ್ಯಯ, ವಯಸ್ಕರಿಗೆ ಮಾತ್ರ ಎಂದು ಜ್ಞಾಪಿಸುವಂತಹ ಕಾಮ, ನಿಯಾನ್ ದೀಪ, ಕುಡಿತವೂ ಸೇರಿದಂತೆ ಆಧುನಿಕ ಮನಸ್ಕರ ಚಾಳಿಗಳ ವೈಭವೀಕರಣ ಮುಂತಾದವು ಲಕ್ಷ್ಮಣರಾವ್ ಅವರ ಕವನಗಳಲ್ಲೂ ಇದ್ದವು. ‘ಮಲೆಘಟ್ಟ ಸೊಪಾನ’ವನ್ನು ಬಿಡಬೇಕೆಂದರೂ ಬಿಡದ ಒತ್ತಡ ಅವರಿಗೂ ಇತ್ತು. ಇವುಗಳ ನಡುವೆಯೂ ಲಕ್ಷ್ಮಣರಾವ್ ಬದುಕಿನ, ಕಾವ್ಯದ ಇತ್ಯಾತ್ಮಕತೆಯನ್ನು ಹಂಚುವ, ಕುಣಿಯುತ್ತ ಬರುವ, ಮನಸ್ಸಿಗೆ ಮುದ ತರುವ, ಆದರೆ ನಿಗೂಢ ವಿಷಾದವನ್ನು ಬಚ್ಚಿಟ್ಟುಕೊಂಡ ‘ನೆನಪು’, ‘ಲೋಲೀಟಾ’, ‘ಪ್ರೇಮ (ಧೂಮ) ಗೀತೆ’ ಮುಂತಾದ ಕವನಗಳನ್ನು ಬರೆದರು. ‘ನಿನ್ನನ್ನು ಮರೆಯುವಷ್ಟೇ ಸುಲಭ ಸಿಗರೇಟು ತೊರೆಯುವುದು’ ಎಂಬ ಭಾವವನ್ನು ಅದಕ್ಕಿಂತ ಚೆನ್ನಾಗಿ ವಿನ್ಯಾಸ ಹಾಕಿ ಅಷ್ಟು ಅರ್ಥವ್ಯಾಪ್ತಿಯನ್ನು ಮೈಗೂಡಿಸಿಕೊಂಡು ಬರೆಯಲು ಸಾಧ್ಯವಿಲ್ಲವೆಂಬಂತೆ ಬರೆದರು. ಓದುಗರು ಮತ್ತೆ ಮತ್ತೆ ಓದುವಂತೆ ಬರೆದರು.

‘‘ಮರೆಯಬಹುದು ಯಾವುದನ್ನು? ಮರೆಯಬಲ್ಲೆನೆ ನಾನು ನೀ ಕೊಟ್ಟ ನಲಿವನ್ನು? ನಲಿವಿಗಿಂತಲೂ ಆಳವಾದ ನೋವುಗಳನ್ನು?’’ ಎಂಬ ಸಾಲುಗಳಲ್ಲಿ ಅಳುತ್ತ ಕುಣಿಯುವ ಅಮೂರ್ತ ಶಿಲ್ಪ ಸೃಷ್ಟಿಯಾಗುತ್ತದೆ. ಇಂತಹ ಕಾವ್ಯ ‘ಪ್ರೇಮದಲ್ಲಿ ಪೆಟ್ಟು ತಿಂದ ಎಷ್ಟೋ ಬುದ್ಧಿಜೀವಿಗಳಂತೆ ಇನ್ನು ನಾನೂ ದಾರ್ಶನಿಕನಾಗಬೇಕೆ?’ ಎಂಬ ಹಂತವನ್ನು ತಲುಪುತ್ತದೆ. ಇದೊಂದು ರೀತಿಯ ಕಾವ್ಯ ಮೀಮಾಂಸೆಯೂ ಹೌದು. ನವ್ಯದ ಅತೀ ದಾರ್ಶನಿಕತೆಯ ಕುರಿತ, ಕವಿಗಳನ್ನು ಒಳಗೊಳಗೇ ತಳಮಳಗೊಳಿಸಿದ ಸಂಶಯದ, ಧಾಟಿಯನ್ನು ಲಕ್ಷ್ಮಣರಾವ್ ಅಳುಕದೆ ತೆರೆದಿಡುತ್ತಾರೆ. ಈ ಹಂತದಲ್ಲಿ ಅವರು ಏರುತಗ್ಗುಗಳನ್ನು ದೂರಮಾಡಿ ಬದುಕನ್ನು ಸಾಫಾಟು ನೆಲದಂತೆ ಚಿತ್ರಿಸಲು ಮುಂದಾದಂತೆ ಕಾಣಿಸುತ್ತಾರೆ. ‘‘ಸುಬ್ಬಾಭಟ್ಟರ ಮಗಳೇ, ಇದೆಲ್ಲಾ ನಂದೇ ತಗೊಳ್ಳೇ’’ ಎನ್ನುತ್ತಾರೆ. ‘‘ಪಾತರಗಿತ್ತಿಯ ಪಕ್ಕವನೇರಿ ಹೂಪಡಖಾನೆಗೆ ಹಾರಿ ಪ್ರಾಯದ ಮಧು ಹೀರಿ, ಜುಳುಜುಳು ಹರಿಯುವ ಕಾಲದ ಹೊಳೆಯಲಿ ತೇಲುವ ಮುಳುಮುಳುಗಿ, ಪ್ರತಿದಿನ ಹೊಸತನದಲಿ ಬೆಳಗಿ.’’ ಎನ್ನುವಾಗ ಕುವೆಂಪು, ಬೇಂದ್ರೆಯವರ ಪದಲಾಲಿತ್ಯದ ಬೆರಗನ್ನು ಏಕಕಾಲಕ್ಕೆ ಸಾಧಿಸುತ್ತಾರೆಂದು ಅನ್ನಿಸುವಂತಿದೆ. ದಿನನಿತ್ಯದ ಹೊಸಬೆಳಗನ್ನು, ಬೆಳಕನ್ನು, ಪರಂಪರೆಯು ‘ನವೋನವೋ ಭವತಿ’ ಎಂದಂತೆ ಹೊಸತನದಲ್ಲಿ ಬೆಳಗಿ ಕಾಣಬಹುದೆಂಬುದನ್ನು ಅನಾವರಣಗೊಳಿಸುತ್ತಾರೆ. ಆದರೆ ಕೊನೆಗೂ ಕವಿಗನ್ನಿಸುವುದು ಏಕೆ? ಸಾಕಾಯಿತೆ ನನ್ನ ರಗಳೆ?

‘ದಯವಿಟ್ಟು’ ಎಂಬ ಕವನದಲ್ಲಿ ಕವಿ ಸಾಂಪ್ರದಾಯಿಕ ಬುದ್ಧಿ ಮತ್ತು ಮುಕ್ತ ಮನಸ್ಸಿನ ನಡುವಣ ದ್ವಂದ್ವವನ್ನು ಹೇಳುತ್ತಾರೆ. ಕೊನೆಗೂ ಸಾಂಪ್ರದಾಯಿಕ ನಂಬಿಕೆ ಎಚ್ಚರಿರುತ್ತದೆಂಬ ಕಾರಣಕ್ಕೆ ಮನಸ್ಸು ಮುದುಡಿಕೊಳ್ಳುತ್ತದೆ. ಇದಕ್ಕೆ ಪೂರಕವಾದ ಮತ್ತು ಮುಂದುವರಿದ ಭಾಗದಂತಿರುವ ‘ಆಳ-ಎತ್ತರ’ ಎಂಬ ಕವನವಿದೆ. ‘ವಿಚಿತ್ರ’ ಎಂಬ ಕವನದಲ್ಲಿ ಇದಕ್ಕೆ ಉತ್ತರವೆಂಬಂತೆ ‘‘ಐದು ಸಾವಿರ ವರ್ಷಗಳ ನಂತರವೂ ಈ ಚಿತ್ರ ನಮಗೆ ವಿಚಿತ್ರವೆನಿಸುತ್ತಿಲ್ಲ ಎಂಥ ವಿಚಿತ್ರವಲ್ಲವೆ?’’ ಎಂದು ಬರೆಯುತ್ತಾರೆ. ಬುದ್ಧಿ ಮತ್ತು ಮನಸ್ಸಿನ ನಡುವಣ ಈ ಸಂದಿಗ್ಧ ಅದೇ ಶೀರ್ಷಿಕೆಯ ಕವನದಲ್ಲೂ ಕಾಣಿಸುತ್ತದೆ. ‘‘ತರಗೆಲೆಗಳಲ್ಲಿ ಒಂದು ನನ್ನ ಕೈ ಸೋಕಿದ ಕೂಡಲೇ ತಟ್ಟನೆ ಚಿಟ್ಟೆಯಾಗಿ ಪಟಪಟ ಹಾರಿಹೋಯಿತು ಕಂಡು, ದಂಗಾಗಿ ನಿಂತೆ’’ ಎಂಬ ಮತ್ತು ಇದಕ್ಕೆ ಸಂವಾದಿಯಾಗಿ ಕೊನೆಗೆ ‘‘ಆದ್ದರಿಂದ ಪ್ರಭೂ,ದಯವಿಟ್ಟು ಮಿದುಳನ್ನು ಹಿಂದೆಗೆದುಕೊ, ಅಥವಾ ತಕ್ಕ ಅನ್ನ ಕೊಡು, ನಿನ್ನ ಕೊಡು.’’ ಎಂದು ಹೇಳುತ್ತದೆ.

‘ಘಸ್ನಿ’, ‘ಉಮಾ V/s ರಮಾ’, ಮುಂತಾದ ಹುಡುಗಾಟದ ಕವಿತೆಗಳಲ್ಲೂ ಮನೋಜ್ಞ ಪ್ರತಿಮೆಗಳಿವೆ. ಇವುಗಳಲ್ಲಿ ತುಂಬ ಇಷ್ಟವಾಗುವ ‘ಲಿಲ್ಲಿಪುಟ್ಟಿಯ ಹಂಬಲ’ ಎಂಬ ಕವಿತೆ ಕಲ್ಪನೆಯ ಮೇರೆಗಳನ್ನು ಮೀರಿ ಬೆಳೆಯುತ್ತದೆ. ಎರಡು ವಿಷಮಾಕೃತಿಗಳ ನಡುವಣ ಭಾವನೆಗಳು ಸಮರಸವಾಗುವ ಹಂಬಲವನ್ನು ಚಿತ್ರಿಸುತ್ತದೆ. ‘‘ಹಾಲು ತುಂಬಿದ ನಿನ್ನ ಬಟ್ಟಲಲ್ಲಿ ನಾ ಬತ್ತಲೆ ಈಜಿದರೆ’’ ಎಂಬುದು ಈ ಕವನದ ಮಾತ್ರವಲ್ಲ, ಲಕ್ಷ್ಮಣ ರಾಯರ ಒಟ್ಟು ಕಾವ್ಯದ ಸಾರ್ಥಕ ಪ್ರತಿಮೆಗಳಲ್ಲೊಂದು. ಹಾಗೆಯೇ ಮೂರು ತಲೆಮಾರುಗಳ ನೆಪದಲ್ಲಿ ನಿರ್ಬಾಧಿತ ಕಾಲಕಾರಣವನ್ನು ಅವರು ಹೀಗೆ ಹೇಳುತ್ತಾರೆ: ‘‘ಮರಳ ಹರಹಿನಲ್ಲಿ ಮುರಿದ ಶಂಖ ಕಪ್ಪೆಚಿಪ್ಪು ಭಿನ್ನ ಸಾಲಿಗ್ರಾಮ ಇತ್ಯಾದಿ ಆಪ್ತ ನೆನಪುಗಳನ್ನು ಹೆಕ್ಕುತ್ತಾ ಶಾಲಿನ ಜೋಳಿಗೆಯಲ್ಲಿ ಕೂಡಿಕ್ಕುತ್ತಾ ಮೆಲ್ಲ ಮೆಲ್ಲನೆ ಸಾಗುವ ಬಾಗು ಬೆನ್ನಿನ ದಣಿದ ತಂದೆ.
ತನ್ನ ಕಲ್ಪನೆಯ ಚಿನ್ನದರಮನೆ ಕೋಟೆಕೊತ್ತಳ ಕೈಯಾರೆ ಕಟ್ಟುತ್ತ ಕಡೆಯುತ್ತಾ ತಲ್ಲೀನ ಕೂತ ಕನಸುಗಣ್ಣಿನ ರೂವಾರಿ ಪುಟ್ಟ ಮಗ. ಬಂಡೆಯ ಮರೆಯಲ್ಲಿ ತಂದೆಗೆ ಕಾಣದ ಹಾಗೆ ಸಿಗರೇಟೆಳೆಯುತ್ತಾ ಇಂದ್ರಿಯಗಳಿಗೆ ದಕ್ಕಿದ್ದನ್ನು ನನಗೆ ತಕ್ಕ ವಾಗರ್ಥಗಳಲ್ಲಿ ಅಳೆಯುತ್ತಾ ಕವಿಯಾಗಿ ನಾನು.’’
 
ಕಾವ್ಯಪ್ರಿಯರ ನಡುವೆ 1975ರಷ್ಟು ಹಿಂದೆಯೇ ‘‘ನನ್ನ ನಾಗರಿಕ ನವ್ಯಕಾವ್ಯದ ಸಿನಿಕತೆಯಲ್ಲೂ ಅಲ್ಲಲ್ಲಿ ಭಾವರಮ್ಯತೆ ತಂದ ಜೀವವೇ,’’ ಎಂದು ಕವಿ ಬರೆದುಕೊಂಡಿದ್ದರು. ಇದಕ್ಕೆ ಸರಿಯಾಗಿ ಆನಂತರದ ದಶಕಗಳಲ್ಲಿ ಅವರ ಅನೇಕ ಕವಿತೆಗಳನ್ನು ಕನ್ನಡ ಸುಗಮ ಸಂಗೀತ ಕಲಾವಿದರು ಹಾಡಲು ಆರಂಭಿಸಿದರು. ಕವಿಯ ಮೊದಲ ಸಂಕಲನದ ‘ಅಮ್ಮ’ ಕವನದ ಮೊದಲ ಎರಡು ಸಾಲುಗಳಷ್ಟೇ ಉಳಿದು ಇನ್ನುಳಿದ ಸಾಲುಗಳು ಗೇಯತೆಗೆ ಶರಣಾಗಿ ಹೊಸದಾಗಿ ಮೂಡಿದವು. ಅವನ್ನೇ ಹಾಡುವುದರಿಂದಾಗಿ ಕಾವ್ಯದ ‘ಅಮ್ಮ’ ಹಿಂದೆ ಸರಿದಿದ್ದಾಳೆ. ಅವರ ಹೆಸರು ಹೇಳಿದಾಗ ಜನರು ‘ಸುಬ್ಬಾಭಟ್ಟರ ಮಗಳೇ, ಬಾರೇ ರಾಜಕುಮಾರಿ, ಏನೀ ಅದ್ಭುತವೇ’, ‘ಅಮ್ಮಾ ನಿನ್ನ ಎದೆಯಾಳದಲ್ಲಿ’ ಕವಿತೆಗಳ ಮೂಲಕ ಗುರುತಿಸಿದಾಗ ವ್ಯಥೆಯಾಗುತ್ತದೆ. ಅವು ಕವಿಯನ್ನು ಅವಮಾನಿಸು ತ್ತವೆಯೆಂದಲ್ಲ, ಅವರ ಕಾವ್ಯಶಕ್ತಿಯನ್ನು ಅನುಮಾನಿಸುತ್ತವೆಯೆಂಬುದಕ್ಕಾಗಿ. (ಇದೇ ಸಮಸ್ಯೆ ಭಾವಗೀತೆ ಬರೆಯುವ ಇತರ ಕವಿಗಳೂ ಎದುರಿಸಿದ್ದಾರೆ: ‘ಅನಿಸುತಿದೆ ಯಾಕೋ’ ಕವಿತೆಯ ಜಯಂತ ಕಾಯ್ಕಿಣಿ, ‘ಮುನಿಸು ತರವೇ’ ಕವಿತೆಯ ಸುಬ್ರಾಯ ಚೊಕ್ಕಾಡಿ, ಅಥವಾ ಇತರ ಮಾಧ್ಯಮಗಳಲ್ಲಾದರೆ ‘ಕಾದಲನ್’ನ ಖಳನಾಯಕ ಗಿರೀಶ್ ಕಾರ್ನಾಡ್ ಹೀಗೆ.) ಜನಪ್ರಿಯತೆಯು ಉತ್ತಮಿಕೆಯ ಒಂದು ಭಾಗವೇ ಹೊರತು ಅದೇ ಶ್ರೇಷ್ಠತೆಯ ಮಾನದಂಡವಲ್ಲ.

ಕುವೆಂಪು, ಬೇಂದ್ರೆ, ಕಂಬಾರ ಮುಂತಾದ ಕವಿಗಳಿಗೂ ಜನಪ್ರಿಯತೆಯನ್ನು ಹಂಬಲಿಸಿ/ಹಂಬಲಿಸದೆ ಪಡೆದ ಇತರ ಕವಿಗಳ ನಡುವೆ ಇರುವ ಅಂತರ ಇದೇ. ನಾದಗಳು ನುಡಿಯಾಗುವುದು ಬೇರೆ; ನುಡಿಗಳನ್ನು ನಾದವಾಗಿಸುವುದು ಬೇರೆ- ಒಂದು ರೀತಿಯಲ್ಲಿ ಹಿಮ್ಮುಖ ಚಲನೆ. ಇದನ್ನರಿತೇ ಕೆಎಸ್‌ನ ತಮ್ಮ ‘ಮೈಸೂರು ಮಲ್ಲಿಗೆ’ಯಿಂದ ‘ಶಿಲಾಲತೆ’ಯ ಕಡೆಗೆ ಪಯಣಿಸಿದರು. ಇಂತಹ ಇಕ್ಕಟ್ಟಿನ ನಡುವೆಯೂ ‘ನವೋನ್ಮೇಷ’ದ ವರೆಗೂ ಲಕ್ಷ್ಮಣರಾಯರು ತಮ್ಮ ಕಾವ್ಯಗುಣವನ್ನು ತೊರೆದಿಲ್ಲ. ಅವರ ಕೆಲವು ಕಥನಕವಿತೆಗಳು ಕಡೆಂಗೋಡ್ಲು, ಎಕ್ಕುಂಡಿ, ಇಂತಹವರ ಮಾದರಿಗಳಲ್ಲವಾದರೂ ಅದೇ ಗಾಢ ಅನುಭವವನ್ನು ನೀಡುತ್ತವೆ. ‘ಟುವಟಾರ’ ಸಂಕಲನದಲ್ಲಿರುವ ‘ಲೋಲೀಟಾ’ ಕವನವನ್ನು ಬರೆದ ಲಕ್ಷ್ಮಣರಾವ್ ‘ನವೋನ್ಮೇಷ’ದಲ್ಲಿ ‘ಮತ್ತೆ ಲೋಲೀಟ’ ಬರೆದಿದ್ದಾರೆ. ಅದು ‘ನವೋನ್ಮೇಷ’ದಂತೆ ಹೊಸದಾಗಿ ಅರಳಿದೆ; ಆದರೆ ನಿರೂಪಣೆಯ ವಿಧಾನ ಬೇರೆಯಿದೆ. ಈ ಕವನದಲ್ಲಿ ಬರುವ ‘ನೋಟ್ಬುಕ್ಕು ಮತ್ತು ತೆರೆದುಕೊಂಡ ಹಾಳೆ’ ಬದುಕು ಮತ್ತು ಕಾವ್ಯದ ಸಂಬಂಧವನ್ನು ನುಡಿದ ಬಗೆ ಅನನ್ಯ. ಕಾವ್ಯಕ್ಕೆ ಪ್ರತಿಭೆಯಷ್ಟೇ ಸಾಲದು, ಶ್ರಮವೂ ಬೇಕೆಂದು ಈ ಕವಿ ಹಲವೆಡೆ ಹೇಳಿದ್ದಾರೆ. ಅದು ಅವರ ಕಾವ್ಯದುದ್ದಕ್ಕೂ ಕಾಣುತ್ತದೆಯೆಂಬುದು ಅವರ ಕಾವ್ಯಮಾರ್ಗದ ವೈಶಿಷ್ಟ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top