-

ಅಕ್ರಮ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ಎಂಬ ಭಸ್ಮಾಸುರ ಮಹಿಮೆ

-

ಧರ್ಮೋ ರಕ್ಷತಿ ರಕ್ಷಿತಃ ಎಂಬ ಉಕ್ತಿ ಅಕ್ರಮ ಧಾರ್ಮಿಕ ಕಟ್ಟಡೋ ರಕ್ಷತಿ ರಕ್ಷಿತಃ ಎಂದು ಬದಲಾಗಬೇಕಾದದ್ದು ಅನಿವಾರ್ಯ. ಏಕೆಂದರೆ ಈ ದೇಶಕ್ಕೇ ಈ ಸಕ್ರಮೀಕರಣವೆಂಬ ಶಾಪವಿದೆ. ಪ್ರಜಾಪ್ರಭುತ್ವವೆಂದರೆ ಬಹುಜನಹಿತ, ಬಹುಜನಸುಖದ ಮೂಲಕ ಸತ್ಯದ, ಸತ್ವದ ರಕ್ಷಣೆ, ಸಜ್ಜನರಕ್ಷಣೆ ಈ ಸಮೀಕರಣಗಳು ಪರಕೀಯವಾಗಿವೆ. ಅಧಿಕಾರರಾಜಕಾರಣಕ್ಕೆ ಯಾವುದು ಒಳಿತೋ ಅದೇ ಜನರಿಗೆ ಒಳಿತು ಎಂಬ ಅಪಾಯಕಾರಿ ಸಿದ್ಧಾಂತವು ಎಲ್ಲೆಡೆ ಪ್ರತಿಫಲಿಸುತ್ತಿದೆ. ‘ಅಕ್ರಮ’ವೆಂಬ ಪದವನ್ನು ಅದು ಯಾವುದೇ ರೂಪದಲ್ಲಿರಲಿ, ಭಾಷೆಯಲ್ಲಿರಲಿ, ಅದನ್ನು ಅಳಿಸಿಹಾಕುವುದೇ ಉತ್ತಮ ಪ್ರಭುತ್ವವೆನ್ನಿಸಿದೆ.


ಈ ಲೇಖನ ಪ್ರಕಟವಾಗುವ ಹೊತ್ತಿಗೆ ಪ್ರಾಯಃ ಕರ್ನಾಟಕ ಸರಕಾರವು ಅಕ್ರಮ ಧಾರ್ಮಿಕ ಕಟ್ಟಡಗಳನ್ನು ಸಕ್ರಮೀಕರಿಸಿ ರಕ್ಷಿಸುವ ಮಸೂದೆಯನ್ನು ಅವಸರವಸರವಾಗಿಯಾದರೂ ಅಂಗೀಕರಿಸುವ ಸಾಧ್ಯತೆಯಿದೆ. ಧರ್ಮೋ ರಕ್ಷತಿ ರಕ್ಷಿತಃ ಎಂಬ ಉಕ್ತಿ ಅಕ್ರಮ ಧಾರ್ಮಿಕ ಕಟ್ಟಡೋ ರಕ್ಷತಿ ರಕ್ಷಿತಃ ಎಂದು ಬದಲಾಗಬೇಕಾದದ್ದು ಅನಿವಾರ್ಯ. ಏಕೆಂದರೆ ಈ ದೇಶಕ್ಕೇ ಈ ಸಕ್ರಮೀಕರಣ ವೆಂಬ ಶಾಪವಿದೆ. ಪ್ರಜಾಪ್ರಭುತ್ವವೆಂದರೆ ಬಹುಜನಹಿತ, ಬಹುಜನಸುಖದ ಮೂಲಕ ಸತ್ಯದ, ಸತ್ವದ ರಕ್ಷಣೆ, ಸಜ್ಜನರಕ್ಷಣೆ ಈ ಸಮೀಕರಣಗಳು ಪರಕೀಯವಾಗಿವೆ. ಅಧಿಕಾರರಾಜಕಾರಣಕ್ಕೆ ಯಾವುದು ಒಳಿತೋ ಅದೇ ಜನರಿಗೆ ಒಳಿತು ಎಂಬ ಅಪಾಯಕಾರಿ ಸಿದ್ಧಾಂತವು ಎಲ್ಲೆಡೆ ಪ್ರತಿಫಲಿಸುತ್ತಿದೆ. ‘ಅಕ್ರಮ’ವೆಂಬ ಪದವನ್ನು ಅದು ಯಾವುದೇ ರೂಪದಲ್ಲಿರಲಿ, ಭಾಷೆಯಲ್ಲಿರಲಿ, ಅದನ್ನು ಅಳಿಸಿಹಾಕುವುದೇ ಉತ್ತಮ ಪ್ರಭುತ್ವವೆನ್ನಿಸಿದೆ. ದಾಸರು ಹೇಳಿದ ‘ಉತ್ತಮ ಪ್ರಭುತ್ವ ಲೊಳಲೊಟ್ಟೆ’ ಎಂಬುದಕ್ಕೆ ಅತ್ತಿತ್ತ, ಮೇಲೆ-ಕೆಳಗೆ, ಹಿಂದೆ-ಮುಂದೆ ನೋಡಬೇಕಾಗಿಲ್ಲ. ಅದು ಕೊಳ್ಳಿದೆವ್ವದಂತೆ ನಮ್ಮನ್ನಾಳುವವರ ಮೂಲಕ ಪ್ರತ್ಯಕ್ಷವಾಗುತ್ತಿದೆ. ಮುಂದೆ ಇದು ಭಸ್ಮಾಸುರನಂತೆ ಯಾರನ್ನು ಸುಡುತ್ತದೋ ಗೊತ್ತಿಲ್ಲ. ಆದರೆ ಈಗ ಕಂಡಂತೆ ಆತನಿಗೆ ಸೋಲಿಲ್ಲ. ನ್ಯಾಯಾಲಯಗಳು ಯಾವುದನ್ನು ಅಸಾಂವಿಧಾನಿಕವೆಂದು, ಕಾನೂನಿಗೆ ಹೊರತಾದದ್ದು ಎಂದು ಹೇಳುತ್ತಾವೋ ಅದನ್ನು ಜಾರಿಗೆ ತರುವುದೇ ಆಳ್ವಿಕೆಯೆನಿಸಿದೆ. ಮದ್ರಾಸು ಬಾರ್ ಅಸೋಸಿಯೇಷನ್ ಪ್ರಕರಣ ಮತ್ತು ನ್ಯಾಯಮಂಡಳಿಗಳ ನಿಯಮಾವಳಿಗಳಲ್ಲಿ ಒಕ್ಕೂಟ ಸರಕಾರವು ಇದನ್ನು ಲಜ್ಜೆಗೆಟ್ಟು ನಿರೂಪಿಸಿದೆ. ಈ ಕಾಯ್ದೆಯ ಅಳಿವು-ಉಳಿವು ಈಗ ನ್ಯಾಯಾಲಯದಲ್ಲೇ ಪರೀಕ್ಷೆಗೊಳಪಡಬೇಕಷ್ಟೇ. ಈ ವಿದ್ಯಮಾನದ ಹಿನ್ನೆಲೆಯನ್ನು ಸ್ವಲ್ಪಪರಿಶೀಲಿಸಬಹುದು:

ಈಚೆಗೆ ಕರ್ನಾಟಕದ ಎರಡು ಪೂಜಾಕೇಂದ್ರಗಳನ್ನು ಕೆಡವಲಾಯಿತು. ಇದು ಯಾವುದೇ ಅಕ್ರಮ ಸಂಘಟನೆಯ ಕರಸೇವೆಯ ಮೂಲಕ ಕೆಡವಿದ್ದಲ್ಲ; ಅಧಿಕೃತವಾಗಿ ಕಾನೂನು ಮತ್ತು ನ್ಯಾಯಾಲಯದ ಆದೇಶ ಪಾಲನೆಗಾಗಿ, ಸರಕಾರಿ ಯಂತ್ರಗಳನ್ನೇ ಬಳಸಿ ಕೆಡವಿದ್ದು. ಇದಾದ ತಕ್ಷಣ ಸ್ವಘೋಷಿತ ಧರ್ಮರಕ್ಷಕರು ಉಗ್ರ ಆಕ್ರೋಶವನ್ನು ವ್ಯಕ್ತಪಡಿಸಿದರು. ಹಿಂದುತ್ವ ಸಂಘಟನೆಗಳ ನಾಯಕರೂ, ಖಳನಾಯಕರೂ ರಾಜ್ಯಾಡಳಿತವನ್ನು ವಾಚಾಮಗೋಚರ ನಿಂದಿಸಿದರು. ಹಿಂದೂಮಹಾಸಭಾದ ಧುರೀಣರು ‘‘ಗಾಂಧಿಯನ್ನೇ ಬಿಟ್ಟಿಲ್ಲ ಇನ್ನು ನೀವ್ಯಾವ ಲೆಕ್ಕ’’ ಎಂದು ಮುಖ್ಯಮಂತ್ರಿಯವರನ್ನೇ ಬೆದರಿಸಿದರು. ತಾವೂ ಹಿಂದೆ ಬೀಳಬಾರದೆಂದು ವಿರೋಧಪಕ್ಷದ ಕೆಲವು ರಾಜಕಾರಣಿಗಳೂ ಈ ಕೃತ್ಯವನ್ನು ಖಂಡಿಸಿದ್ದು ಮಾತ್ರವಲ್ಲ, ಆಡಳಿತ ಸರಕಾರವನ್ನು ವಿಫಲವೆಂದು ಹಳಿದರು. ಆಳುವ ಮಂದಿ ಈ ಕೃತ್ಯವು ಅಧಿಕೃತವೋ ಅಲ್ಲವೋ ಎಂಬುದನ್ನು ಸ್ಪಷ್ಟೀಕರಿಸುವ ಬದಲು ಇಂತಹ ರೊಚ್ಚನ್ನು ತಣಿಸಲು ಮತ್ತು ಇದು ತಮ್ಮ ರಾಜಕೀಯ ಭವಿಷ್ಯವನ್ನು ಹಾಳುಗೆಡವದಂತೆ ತೇಪೆಹಚ್ಚಲು ಆರಂಭಿಸಿದರು. ಮೈಸೂರಿನ ಜಿಲ್ಲಾಧಿಕಾರಿಗಳಿಗೂ, ತಹಶೀಲ್ದಾರರಿಗೂ ಕಾರಣ ಕೇಳಿ ನೋಟೀಸನ್ನು ನೀಡಲಾಯಿತೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹುತ್ತವ ಬಡಿದರೂ ಹಾವು ಸಾಯಲಿಲ್ಲವೆಂಬಂತೆ ಈ ಹುಚ್ಚುಗದ್ದಲದಲ್ಲಿ ಸತ್ಯ ಹೊರಬೀಳಲೇ ಇಲ್ಲ. ವಾಸ್ತವವನ್ನು ಹೇಳಬಾರದೆಂಬ ಅಲಿಖಿತ ಒಪ್ಪಂದವನ್ನು ಎಲ್ಲ ರಾಜಕಾರಣಿಗಳೂ ಮಾಡಿಕೊಂಡಂತಿತ್ತು. ಸರಕಾರದ ಮೇಲ್‌ಸ್ತರದ ಅಧಿಕಾರಿಗಳು ಘನಮೌನಕ್ಕೆ ಶರಣಾದರು. ಸಂಬಂಧಿಸಿದ ಅಧಿಕಾರಿಗಳು ಏನನ್ನೂ ಉತ್ತರಿಸಿಲ್ಲವೆಂಬುದು ಮಹತ್ವದ ಅಚ್ಚರಿಯ ವಿಚಾರ. ಸರಿಯಾದರೆ ಸರಿ, ತಪ್ಪಾದರೆ ತಲೆದಂಡ- ಏನಾದರೊಂದು ಹೇಳಬೇಕಿತ್ತಲ್ಲ! ಇಂದಿನ ಕಾಲದಲ್ಲಿ ಗುಟ್ಟಾಗಿರಬೇಕಾದ್ದೇ ಸೋರಿಹೋಗುತ್ತಿದೆ. ಹಾಗಿರುವಾಗ ಇಂತಹ ಸಾರ್ವಜನಿಕ ವಿಚಾರವೊಂದು ಹೆಪ್ಪುಗಟ್ಟುವುದನ್ನು ನೋಡಿದ ಪ್ರಜ್ಞಾವಂತರೂ ಬಾಯಿಬಿಡದೆ ಇರುವುದು ಅಜ್ಞಾನವಲ್ಲ; ಕುತಂತ್ರಜ್ಞಾನ. ನಮ್ಮ ಕಾಲದ ದುರಂತ.

ಧಾರ್ಮಿಕ ಶ್ರದ್ಧಾ(!)ಕೇಂದ್ರಗಳು ಒಂದಾನೊಂದು ಕಾಲದಲ್ಲಿ ಸಂಸ್ಕೃತಿಯ ಪ್ರಸಾರಕೇಂದ್ರಗಳಾಗಿದ್ದವು. ಈ ಭಾರತವೆಂಬ ಭೂಭಾಗದ ಮೇಲೆ ಪರಕೀಯರ ಆಕ್ರಮಣವಾದಾಗಲೆಲ್ಲ (ಇಂದಿನ ಪರಿಸ್ಥಿತಿಯಲ್ಲಿ ಅದನ್ನೂ ಅಕ್ರಮವೆನ್ನುವಂತಿಲ್ಲ!) ಇಲ್ಲಿನ ಇಂತಹ ಕೇಂದ್ರಗಳ ಮೇಲೆ ದಾಳಿಯಾಗಿ ಭಗ್ನಾವಶೇಷಗಳೇ ವಿಜಯದ ಕುರುಹಿನಂತೆ ಉಳಿಯುತ್ತಿದ್ದವು. ಇದು ವಿದೇಶಿ ಆಕ್ರಮಣಕ್ಕಷ್ಟೇ ಮೀಸಲಾಗಿರಲಿಲ್ಲ; ದೇಶದೊಳಗಣ (ಆಗಿನ್ನೂ ದೇಶವಿರಲಿಲ್ಲ!) ಅರಸೊತ್ತಿಗೆಗಳೂ ತಾವು ನಂಬಿದ ಪಂಥಕ್ಕೆ ವಿರೋಧವಾದ ಯಾವುದೇ ಕೇಂದ್ರಗಳನ್ನು ಉಳಿಯಗೊಡುತ್ತಿರಲಿಲ್ಲ. ಶೈವ-ವೈಷ್ಣವ-ಬೌದ್ಧ-ಜೈನ ಹೀಗೆ ಎಲ್ಲ ಶ್ರದ್ಧೆಗಳೂ ತಮ್ಮ ಶ್ರದ್ಧೆಯ ಹೊರತು ಇತರರನ್ನು ಗೌರವಿಸಿದ್ದು ಕಡಿಮೆ. ರಾಮಾನುಜಾಚಾರ್ಯರು ತಮಿಳುನಾಡನ್ನು ಬಿಟ್ಟು ಕರ್ನಾಟಕ ಪ್ರಾಂತಕ್ಕೆ ಓಡಿಬಂದದ್ದು ಇಂತಹ ಸಂದಿಗ್ಧದಲ್ಲೇ. ಮರಾಠರ ಕೈಯಲ್ಲಿ ಶೃಂಗೇರಿಯ ಮಠ ನಲುಗಿದಾಗ ಟಿಪ್ಪೂಸುಲ್ತಾನನೇ ಅದನ್ನು ರಕ್ಷಿಸಿದನೆಂಬ ಐತಿಹ್ಯವಿದೆ. ಈ ಅರಸೊತ್ತಿಗೆಗಳೆಲ್ಲ ತಮ್ಮತಮ್ಮ ಇಷ್ಟವನ್ನುದ್ಧರಿಸುವುದಕ್ಕಾಗಿ ನೆರವಾಗುತ್ತಿದ್ದರಾದರೂ ಅದರಿಂದಾಗಿ ಬಹಳಷ್ಟು ಕೇಂದ್ರಗಳು ಉಳಿದವು. ಇಲ್ಲವಾದರೆ ಶ್ರೀರಂಗಪಟ್ಟಣದಲ್ಲಿ ರಂಗನಾಥ ಉಳಿಯಲು ಸಾಧ್ಯವಿರಲಿಲ್ಲ.

ಘಜನಿ, ಘೋರಿ, ಮೊಘಲರು ಈ ಮಣ್ಣಿನ ಅನೇಕ ಪೂಜಾಕೇಂದ್ರಗಳ ಮೇಲೆ ದಾಳಿ ಮಾಡಿದರೂ ಅವು ಅದು ಹೇಗೋ ಸಾವರಿಸಿಕೊಂಡವು. ಗುಜರಾತಿನ ಸೋಮನಾಥದ ದೇವಾಲಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಉದ್ಧರಿಸಲಾಯಿತಾದರೂ ಸರಕಾರ ತನ್ನ ಧರ್ಮನಿರಪೇಕ್ಷ ಸಿದ್ಧಾಂತದ ನಿಲುವಿನ ಮೂಲಕ ಪ್ರತ್ಯಕ್ಷವಾಗಿ ಭಾಗಿಯಾಗಲಿಲ್ಲ. ಇಂತಹ ಚರಿತ್ರೆಯ ಹಿನ್ನೆಲೆಯಲ್ಲಿ ಸ್ವತಂತ್ರ ಭಾರತದಲ್ಲಿ ಅದು ಹೇಗೋ ಧರ್ಮ-ದೇವರುಗಳು ಪೂಜಾಕೇಂದ್ರಗಳಾಗಿ ಉಳಿಯುವ ಬದಲಿಗೆ ಮತಪೆಟ್ಟಿಗೆಗಳಾಗಿ ಬದಲಾದವು. ಧಾರ್ಮಿಕ ನಾಯಕರೆಲ್ಲ ತಮ್ಮ ತಮ್ಮ ಬೆಂಬಲಿಗರೊಂದಿಗೆ ರಾಜಕೀಯ ಪಕ್ಷಗಳನ್ನು ಕಾಯುವ ಪಾಲಕರಾದರು. ಅದೀಗ ದೇಶವನ್ನೇ ಸುಡುವ ಹಂತಕ್ಕೆ ತಲುಪಿದೆ.

ಇರಲಿ: ಈ ಪೂಜಾಕೇಂದ್ರಗಳನ್ನು ಯಾರು ಮತ್ತು ಯಾಕೆ ಕೆಡವಿದರು? ಸಂದರ್ಭಸಹಿತ ವಿವರಿಸುವುದಕ್ಕೆ ದೇಶಾದ್ಯಂತ ಪರೀಕ್ಷೆಗೆ ಇದು ಒಳ್ಳೆಯ ಪ್ರಶ್ನೆ. ಈ ವಿವಾದದ ಬಗ್ಗೆ ಸಾರ್ವಜನಿಕವಾಗಿ ತಮ್ಮ ಅಜ್ಞಾನವನ್ನು ಪ್ರದರ್ಶಿಸಿದವರೇ ಹೆಚ್ಚು. ಆದರೆ ‘ಅರಿವೇ ಗುರು’ ಶರಣರ ಕಾಲಕ್ಕೇ ಸತ್ತುಹೋಗಿದೆ; ಇನ್ನು ಇಂದು ಅದಿರುವುದೆಲ್ಲಿ?

ಮಹಾತ್ಮಾಗಾಂಧಿ ಮತ್ತು ಸರ್ದಾರ್ ಪಟೇಲರ ಕರ್ಮಭೂಮಿ ಗುಜರಾತ್. ಮೊನ್ನೆ ಮೊನ್ನೆಯವರೆಗೂ ಅವರೇ ಈ ದೇಶಕ್ಕೆ ಮಾದರಿ. ಆದರೆ ಸುಮಾರು ಎರಡು ದಶಕಗಳಿಂದ ಗುಜರಾತ್ ಮತೀಯ ರಾಜಕಾರಣದ ಪ್ರಯೋಗಶಾಲೆಯಾದ ನಂತರ ಇನ್ನೊಂದು ಹೊಸ ಮಾದರಿ ಸೃಷ್ಟಿಯಾಗಿದೆ. ದೇವರು ಕಟ್ಟಡದೊಳಗೆ ಬಂದಿಯಾದರೆ, ಧರ್ಮ ಬೀದಿಗೆ ಬಂದಿದೆ. ಪರಿಣಾಮವಾಗಿ ಇಂದು ಪೂಜಾಕೇಂದ್ರಗಳನ್ನು ಯಾರೂ ಶ್ರದ್ಧಾಭಕ್ತಿ ಸಮನ್ವಿತರಾಗಿ ನೋಡುವ ಜಾಯಮಾನ ಕಡಿಮೆಯಾಗಿದೆ. ಯಾರು ಯಾರನ್ನು ಯಾಕೆ ಪೂಜಿಸುತ್ತಾರೆಂಬುದಕ್ಕೆ ಚುನಾವಣಾ ರಾಜಕಾರಣ ಉತ್ತರಿಸುತ್ತಿದೆ. ಕಳೆದ ಒಂದೆರಡು ದಶಕಗಳಿಂದ ಮತರಾಜಕಾರಣ ಇಂತಹ ಧಾರ್ಮಿಕ, ದೇವಕಾರ್ಯಗಳಿಗೆ ನೆಲೆಯನ್ನು ಸಾರ್ವಜನಿಕ ಸ್ಥಳ, ರಸ್ತೆ ಮತ್ತಿತರ ಮುಕ್ತ ವಲಯವನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸಲು ಆರಂಭಿಸಿತು. ದೇಶವಿಡೀ ಇಂತಹ ಧರ್ಮಸಂಕಟಕ್ಕೆ ಸಿಲುಕುವುದರಲ್ಲಿತ್ತು. ಈ ಸಂದರ್ಭದಲ್ಲಿ ಇದನ್ನು ಗುಜರಾತ್‌ನ ಉಚ್ಚ ನ್ಯಾಯಾಲಯವು ಸ್ವಯಿಚ್ಛೆಯಿಂದ ಗಮನಿಸಿ ಕ್ರಮಕೈಗೊಂಡಿತು. ಮೇ 2006ರಲ್ಲಿ ಗುಜರಾತ್‌ನಲ್ಲಿ 1,200 ದೇವಸ್ಥಾನಗಳೂ 260 ಮಸೀದಿಗಳೂ ಅಕ್ರಮವಾಗಿ ತಲೆಯೆತ್ತಿದ ವರದಿ ಬಂದಾಗ ಅಲ್ಲಿನ ಉಚ್ಚ ನ್ಯಾಯಾಲಯವು 14 ಪ್ರಾಧಿಕಾರಗಳಿಗೆ ನೋಟೀಸು ಜಾರಿ ಮಾಡಿ ಆರಂಭಿಕ ಹಂತದಲ್ಲೇ ಒಂದು ಮಧ್ಯಕಾಲೀನ ಆದೇಶವನ್ನು ನೀಡಿ ‘‘ಸಾರ್ವಜನಿಕ ಸ್ಥಳಾವಕಾಶವನ್ನು ಅಕ್ರಮವಾಗಿ ಬಳಸಿಕೊಂಡಿರುವ ಎಲ್ಲ ಧಾರ್ಮಿಕ ಕಟ್ಟಡಗಳನ್ನೂ’’ ತಕ್ಷಣ ಕೆಡವಬೇಕೆಂದು ನಿರ್ದೇಶಿಸಿತು. ಈ ಆದೇಶವು ವಿಚಾರಣೆಗೂ ಮುನ್ನ ನೀಡಿದ್ದೆಂಬ ಮತ್ತು ಸಂಬಂಧಿಸಿದವರಿಗೆ ಸೂಕ್ತ ಅವಕಾಶವನ್ನು ನೀಡಿಲ್ಲವೆಂಬ ಕಾರಣಕ್ಕೆ ಆಗಿನ ಒಕ್ಕೂಟ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ಮೇಲ್ಮನವಿಯನ್ನು ಸಲ್ಲಿಸಿತು.

ಸರ್ವೋಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠವು ಈ ಆದೇಶಕ್ಕೆ ತಡೆಯಾಜ್ಞೆ ನೀಡಿತಾದರೂ ಪರಿಸ್ಥಿತಿಯ ಗಾಂಭೀರ್ಯವನ್ನೂ, ಗುರುತ್ವವನ್ನೂ ಮನಗಂಡು ಎಲ್ಲಾ ರಾಜ್ಯಗಳಲ್ಲೂ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದರ ಹಿನ್ನೆಲೆಯಲ್ಲಿ ಎಲ್ಲ ರಾಜ್ಯ ಸರಕಾರಗಳೂ ಈ ಬಗ್ಗೆ ಕ್ರಮಕೈಗೊಳ್ಳುವುದು ಅಗತ್ಯವೆಂದು ಹೇಳಿ ಒಂದು ಸೂತ್ರವನ್ನು ಮಂಡಿಸಲು ಒಕ್ಕೂಟ ಸರಕಾರಕ್ಕೆ ತಿಳಿಸಿತು. ಹೀಗೆ ಗುಜರಾತ್‌ನ ಈ ಪಿಡುಗು ದೇಶವ್ಯಾಪಿಯೆಂದು ಗುರುತಾಯಿತು. ಆನಂತರ ರಾಜ್ಯ ಸರಕಾರಗಳ/ಕೇಂದ್ರಾಡಳಿತ ಪ್ರದೇಶಗಳ ಮತ್ತು ಒಕ್ಕೂಟ ಸರಕಾರದ ಮುಖ್ಯಕಾರ್ಯದರ್ಶಿಗಳು ಸಭೆ ಸೇರಿ ಯಾವುದೇ ಸರಕಾರಿ/ಸಾರ್ವಜನಿಕ ಪ್ರದೇಶ/ರಸ್ತೆಗಳಲ್ಲಿ ಧಾರ್ಮಿಕ ಕಟ್ಟಡ ಅಂದರೆ ದೇವಸ್ಥಾನ, ಇಗರ್ಜಿ, ಮಸೀದಿ ಅಥವಾ ಗುರುದ್ವಾರ ಇತ್ಯಾದಿಗಳನ್ನು ನಿರ್ಮಿಸಲು ಅನುಮತಿ ನೀಡುವಂತಿಲ್ಲ; ಮತ್ತು ಈಗಾಗಲೇ ತಲೆಯೆತ್ತಿರುವ ಅನಧಿಕೃತ ಕಟ್ಟಡಗಳ ಕುರಿತು ರಾಜ್ಯಸರಕಾರಗಳು ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ನಿರ್ಧರಿಸಿದರು. ಈ ದಕ್ಷ ಅಧಿಕಾರಿಗಳ ಸಂತತಿ ಸಾವಿರವಾಗಬೇಕಿತ್ತು. ಆದರೆ ಹಾಗಾಗಲಿಲ್ಲ. ಚುನಾಯಿತ ಸರಕಾರವಿರುವ ಯಾವುದೇ ಆಡಳಿತವು ಸಹಜವಾಗಿಯೇ ಇಂತಹ ಕ್ರಮಕ್ಕೆ ಗಮನ ಹರಿಸುವುದಿಲ್ಲ. ಇದನ್ನು ಪರಿಗಣಿಸಿದ ಸರ್ವೋಚ್ಚ ನ್ಯಾಯಾಲಯವು ಅನಧಿಕೃತ/ಅಕ್ರಮ ಕಟ್ಟಡಗಳು ತಲೆಯೆತ್ತದಂತೆ ಶೀಘ್ರವೇ ಕ್ರಮಕೈಗೊಳ್ಳಬೇಕೆಂದು ಹೇಳಿತು. ರಾಜಕಾರಣಿಗಳ ಆಷಾಢಭೂತಿತನದ ಅರಿವಿದ್ದ ನ್ಯಾಯಾಲಯವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜಿಲ್ಲಾಡಳಿತಗಳಿಗೆ ಇದರ ಉತ್ತರದಾಯಿತ್ವವನ್ನು ನೀಡಿ ಎಲ್ಲಾ ಜಿಲ್ಲಾಧಿಕಾರಿಗಳು, ದಂಡಾಧಿಕಾರಿ ಗಳು ಈ ಆದೇಶವನ್ನು ಜಾರಿಗೊಳಿಸಬೇಕೆಂದು ಮತ್ತು ಆಯಾಯ ಮುಖ್ಯಕಾರ್ಯದರ್ಶಿ ಗಳು ವರದಿಯನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಲೂ ಆದೇಶಿಸಿತು. ಇವೆಲ್ಲ ನಡೆದದ್ದು 2008-10ರಲ್ಲಿ.

ದ್ರೌಪದಿ ವಸ್ತ್ರಾಪಹಾರಕಾಲದಲ್ಲಿ ಭೀಷ್ಮರೇ ಮುಂತಾದ ಹಿರಿಯರು ಸುಮ್ಮನಿದ್ದಂತೆ ನಮ್ಮ ಪ್ರಜ್ಞಾವಂತರು ಈ ಯಾವ ಕ್ರಮವನ್ನೂ ಬೆಂಬಲಿಸದೆ ಸುಮ್ಮನಿದ್ದರು. ಸರ್ವೋಚ್ಚ ನ್ಯಾಯಾಲಯವೇ ಮತ್ತೆ ನಮ್ಮ ಪ್ರಜಾಪ್ರಭುತ್ವದ ದ್ರೌಪದಿಗೆ ಅಕ್ಷಯಾಂಬರವನ್ನು ತೊಡಿಸಬೇಕಾಯಿತು. ತನ್ನ ಸರ್ವಾಂತರ್ಯಾಮಿತ್ವದ ಮಿತಿಯನ್ನರಿತ ಸರ್ವೋಚ್ಚ ನ್ಯಾಯಾಲಯವು ತಾನೇ ಈ ಸಾಹಸಕ್ಕೆ ಮುಂದಾಗದೆ, ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳ ಗಾಢಮೌನವನ್ನು ಪ್ರಶ್ನಿಸಿ ಮುಖ್ಯ ಕಾರ್ಯದರ್ಶಿಗಳು ಸೂಕ್ತ ಸುತ್ತೋಲೆಯನ್ನು ಈಗಾಗಲೇ ನೀಡದಿದ್ದಲ್ಲಿ ತಕ್ಷಣ ನೀಡಲು ಆದೇಶಿಸಿತು. ಇದನ್ನು ಪಾಲಿಸದಿದ್ದಲ್ಲಿ ನ್ಯಾಯಾಲಯನಿಂದನೆಯಾಗುವುದಾಗಿ ಎಚ್ಚರಿಸಿ ಸಂಬಂಧಿಸಿದ ಎಲ್ಲರೂ ಆದೇಶದ ಪರಿಪಾಲನೆಯ ಪ್ರಮಾಣಪತ್ರಗಳನ್ನು ಸಲ್ಲಿಸುವಂತೆಯೂ ಆದೇಶಿಸಿತು. ಮುಂದಿನ ಒಂದು ದಶಕಗಳಲ್ಲಿ ಈ ಕುರಿತು ಏನೂ ಕ್ರಮ ಜರುಗಲಿಲ್ಲ ಮಾತ್ರವಲ್ಲ, ಅಕ್ರಮ ಧಾರ್ಮಿಕ ಕಟ್ಟಡಗಳು ಮತಪೆಟ್ಟಿಗೆಗಳ ಗೌರವಪಡೆದು ವಿಜಯಸೂಚಕವಾದವು. ಕಾನೂನನ್ನು ಕೈಗೆಟಕುವಷ್ಟು ಎತ್ತರದಲ್ಲಿ ಸರಳೀಕರಿಸುವ ನ್ಯಾಯಾಲಯಗಳ ನಡೆಯ ನಡುವೆ, ಕಾನೂನನ್ನು ಜನರೇ ಕೈಗೆತ್ತಿಕೊಳ್ಳುವ ಹೊಸ ರೀತಿಯ ಪ್ರಜಾಪ್ರಭುತ್ವವು ಹುಟ್ಟಿಕೊಂಡಿತು. ದೇವರ, ಧರ್ಮದ ಹೆಸರಿನಲ್ಲಿ ಏನು ಮಾಡಿದರೂ ಅದು ಪ್ರಶ್ನಾತೀತವಾಗತೊಡಗಿತು. ಅಕ್ರಮವೂ ಧಾರ್ಮಿಕ ನಂಬಿಕೆಯ ನೆಲೆಯನ್ನು ಕಂಡುಕೊಂಡವು. ಈ ದೇಶದಲ್ಲಿ ಎಲ್ಲವೂ ಶೈತ್ಯಾಗಾರದಲ್ಲೇ ಬದುಕುತ್ತಿರುವಾಗ, ಕಾನೂನು ಮತ್ತು ನ್ಯಾಯ ಹೇಗೆ ಅಪವಾದಗಳಾದಾವು?

2018ರ ಜನವರಿಯಲ್ಲಿ ಸರ್ವೋಚ್ಚ ನ್ಯಾಯಾಲಯವು ತನ್ನ ಆದೇಶವನ್ನು ಜಾರಿ ಮಾಡಲು ಮತ್ತು ಉಲ್ಲಂಘನೆಯ ಸಂದರ್ಭಗಳಲ್ಲಿ ನ್ಯಾಯಾಲಯನಿಂದನೆ ಪ್ರಕರಣಗಳನ್ನು ದಾಖಲಿಸಲು ಹಾಗೂ ಕ್ರಮಕೈಗೊಳ್ಳಲು ಎಲ್ಲ ರಾಜ್ಯಗಳ ಉಚ್ಚ ನ್ಯಾಯಾಲಯಗಳಿಗೆ ಅಧಿಕಾರ ನೀಡಿತು. ಇದಕ್ಕನುಗುಣವಾಗಿ ಎಲ್ಲ ರಾಜ್ಯಗಳಂತೆ ಕರ್ನಾಟಕ ಉಚ್ಚ ನ್ಯಾಯಾಲಯವೂ ಸ್ವಯಿಚ್ಛೆಯ ಕ್ರಮಕೈಗೊಂಡಿದೆ. ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯವರು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡಿ ನ್ಯಾಯಾಲಯದ ಆದೇಶಪಾಲನೆಗೆ ವಿಳಂಬವಿಲ್ಲದೆ ಕ್ರಮಕೈಗೊಂಡು ವರದಿಯನ್ನು ನಿಯಮಿತವಾಗಿ ಸಲ್ಲಿಸಬೇಕೆಂದು ತಿಳಿಸಿದರು. ನಂಜನಗೂಡಿನ ದೇಗುಲ ಕೆಡವಿದ್ದೂ ಇದೇ ಆದೇಶದ ಮೇರೆಗೆ. ರಿಟ್ ಅರ್ಜಿ 27,551/2019ರಲ್ಲಿ 25/10/2019ರಿಂದ ಮೊನ್ನೆಮೊನ್ನೆ ಅಂದರೆ 12/08/2021ರ ವರೆಗೂ ಅಕ್ರಮ ಧಾರ್ಮಿಕ ಕಟ್ಟಡಗಳ ತೆರವಿಗೆ ಉಚ್ಚ ನ್ಯಾಯಾಲಯವು ಸೂಕ್ತ ಆದೇಶಗಳನ್ನು ನೀಡಿದೆ. ಸದ್ಯ 17/09/2021ರಂದು ಈ ಪ್ರಕರಣಗಳು ವಿಚಾರಣೆಗೆ ಬಂದಿದ್ದು ಸರಕಾರದ ಮನವಿಯಂತೆ 04/10/2021ಕ್ಕೆ ಮುಂದೂಡಲಾಗಿದೆ. ಆದರೆ ‘ಹೌದಿನಿ ಇಂದ್ರಜಾಲ’ದಂತೆ ಅಕ್ರಮವು ಸಕ್ರಮವಾಗಿ ಸಕ್ರಮವು ಅಕ್ರಮವಾಗಿ ಅಧಿಕಾರಿಗಳ ಮೇಲೆ ಗೂಬೆ ಕೂರಿಸುವ ಸಂಚನ್ನು ಸರಕಾರವೂ ರಾಜಕಾರಣಿಗಳೂ ಧಾರ್ಮಿಕ ಮೂಲಭೂತವಾದಿಗಳೂ ಸೇರಿ ಹೂಡಿದ್ದಾರೆ. ಇದನ್ನು ಬಯಲಿಗೆಳೆಯಬೇಕಾದವರು ಆಲಯದೊಳಗೆ ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಸಕ್ರಮ ಮತ್ತು ಅಕ್ರಮಗಳೆಂಬ ಎರಡು ವಿಧದ ದೇವರು, ಧರ್ಮ, ಮತಗಳಿರುವ ಪ್ರಜಾಪ್ರಭುತ್ವವು ಬರಬಹುದು. ಇಂತಹ ಸ್ಥಿತಿಯಲ್ಲಿ ಭಕ್ತಪರಾಧೀನ ದೇವರ ಒಂದು ವರ್ಗ ಅಕ್ರಮಕೂಟದ ನಾಯಕನಾದರೆ ಅಚ್ಚರಿಯೇನಿಲ್ಲ! ಪದಗಳ, ಶಬ್ದಗಳ, ಕಾನೂನಿನ, ಸಂವಿಧಾನದ, ಹೊಸ ನಿರೂಪಣೆಗೆ ಜನರು ಸಿದ್ಧರಾಗಬೇಕು, ಅಷ್ಟೇ. ಈ ರಾಜಕೀಯ ಮೇಲಾಟದಲ್ಲಿ ಕೊನೆಗೂ ಭಸ್ಮಾಸುರನೇ ಗೆಲ್ಲಬಹುದು! ಆದ್ದರಿಂದ ‘‘ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ, ಬಡತನವ ಬುಡಮುಟ್ಟ ಕೀಳಬನ್ನಿ, ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ, ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ’’ ಎಂದ ಕುವೆಂಪು ಅವರ ಆತ್ಮಕ್ಕೆ ಶಾಂತಿ ಸಿಗಲಿ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top