ಸತ್ಯದ ಮುಖಗಳನ್ನು ತಿರುಚುವ ಯತ್ನ
-
ಧಾರ್ಮಿಕ, ಸಾಮಾಜಿಕ, ನೈತಿಕ ಪೊಲೀಸ್‌ಗಿರಿ ಮಾಡಿದರೆ ಸಮಾಜದಲ್ಲಿ ಶಾಂತಿ ನೆಲೆಸುವುದಾದರೆ ಅಂತಹ ಮಿತಚಟುವಟಿಕೆಗಳು ಅಗತ್ಯವಾಗಬಹುದಿತ್ತು. ಆದರೆ ಈ ಸಾರ್ವಜನಿಕ ಪೊಲೀಸ್‌ಗಿರಿ ಹೆಚ್ಚಾದ ಮೇಲೆ ಸರಕಾರದಿಂದ ನಿಯೋಜಿತರಾದ ಪೊಲೀಸರಿಗೆ ಕೆಲಸ ಹೆಚ್ಚಾಗಿದೆ. ಅವರಿಗೆ ಈ ಧಾರ್ಮಿಕ/ಸಾಮಾಜಿಕ/ನೈತಿಕ ಪೊಲೀಸರನ್ನು ಹತ್ತಿಕ್ಕುವುದೇ ಒಂದು ಸವಾಲಾಗಿದೆ. ಕಾನೂನು ಇಲ್ಲದಿರುತ್ತಿದ್ದರೆ ಅಥವಾ ಈ ದೇಶದ ಸಂವಿಧಾನದ ಬೇರುಗಳು ಸುದೃಢವಾಗಿಲ್ಲದೆ ಇರುತ್ತಿದ್ದರೆ ಪ್ರಾಯಃ ಭಾರತದಲ್ಲೂ ಉಗ್ರಮತಾಂಧತೆಯು ತಾಲಿಬಾನಿಗೆ ಸವಾಲನ್ನೊಡ್ಡುವಂತೆ ತನ್ನ ಚಟುವಟಿಕೆಗಳನ್ನು ನಡೆಸುತ್ತಿತ್ತು.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ತಂದ ಹಲವು ಕ್ರೂರ ನಿಯಮಗಳಲ್ಲಿ ಕ್ಷೌರಿಕರು ಗಡ್ಡವನ್ನು ಬೇಕಾದಂತೆ ರೂಪಿಸುವ, ನಿರೂಪಿಸುವ ಕಾಯಕಕ್ಕೆ ಕಡಿವಾಣ ಹಾಕಿದೆ. ಅಮೆರಿಕನ್ ಮಾದರಿಯ ದಾಡಿಗಳಿಗೆ ಅಲ್ಲಿ ಪ್ರವೇಶವಿಲ್ಲ. ಗಡ್ಡವು ನೀಳವಾಗಿ ಬಿಳಲುಗಳಂತೆ ಇಳಿಯಬೇಕೇ ಹೊರತು ಬತ್ತುವಂತಿಲ್ಲ. ಯಾರಾದರೂ ಈ ‘ಸಿದ್ಧಾಂತ’ವನ್ನು ಉಲ್ಲಂಘಿಸಿದರೆ ಅವರಿಗೆ ಎಂತಹ ಶಿಕ್ಷೆಯಿರಬಹುದೋ ಕಲ್ಪಿಸಲೂ ಸಾಧ್ಯವಿಲ್ಲ. ಧರ್ಮದ ಹೆಸರಿನಲ್ಲಿ ಅಲ್ಲಿ ನಡೆಯುತ್ತಿರುವ ಪ್ರಜಾಶೋಷಣೆ ಹಿಟ್ಲರ್‌ನಿಗೆ ಸರಿಸಾಟಿಯಾಗಬಹುದು. ಗ್ಯಾಸ್‌ಛೇಂಬರಿನಂತಹ ವ್ಯವಸ್ಥೆಗೆ ತಾಲಿಬಾನಿನಲ್ಲಿ ಮೂಲಸೌಕರ್ಯಗಳಿಲ್ಲವೇನೋ? ಮಹಿಳೆಯರನ್ನು ಮಕ್ಕಳನ್ನು ಹೆರುವ ಜೀವಂತ ಯಂತ್ರಗಳೆಂದು ಈಗಾಗಲೇ ಅಲ್ಲಿನ ಆಡಳಿತ ಯಂತ್ರವು ಘೋಷಿಸಿದೆ. ಬದುಕು ಇಂತಹ ನರಕಯಾತನೆಯಾಗುವುದು ಯಾರಿಗೂ ಬೇಡ.
ತಾಲಿಬಾನ್ ವಿಶ್ವರಾಜಕೀಯದಲ್ಲಿ ಪ್ರವೇಶಿಸಲು ಒದ್ದಾಡುತ್ತಿದೆ. ತನ್ನ ಕಡುಬಡತನದಲ್ಲೂ ಅದು ತನ್ನ ಕ್ರೌರ್ಯವನ್ನು ಅಬಾಧಿತವಾಗಿ ಮುಂದುವರಿಸುವುದನ್ನು ನೋಡಿದರೆ ಅದಕ್ಕೆ ಅಂತರ್‌ರಾಷ್ಟ್ರೀಯ ಬೆಂಬಲವು ಮೊದಲಿನಿಂದಲೂ ಇತ್ತೆಂಬುದು ಸ್ಪಷ್ಟ. ಕಳೆದ 20 ವರ್ಷಗಳಲ್ಲಿ ಅದನ್ನು ಉಳಿಯಗೊಟ್ಟದ್ದು, ಅದಕ್ಕೆ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದು ಯಾರು? ಈ ಬಗ್ಗೆ ವಿಶ್ವರಾಜಕಾರಣವು ತುಟಿಪಿಟಕ್ಕೆನ್ನುತ್ತಿಲ್ಲ. ಮಾನವೀಯ ನೆಲೆಯಲ್ಲಿ ಅಲ್ಲಿಗೆ ಸಹಾಯಕ್ಕೆ ವಿಶ್ವಸಂಸ್ಥೆಯು ಮುಂದಾಗಿದೆ. ಮನುಷ್ಯರಿರುವಲ್ಲಿ ಮಾನವೀಯತೆ. ಪ್ರಾಯಃ ಇದರ ಬದಲು ವಿಶ್ವಸಂಸ್ಥೆಯು ಅಲ್ಲಿನ ಆಡಳಿತವನ್ನು ತಹಬಂದಿಗೆ ತರಲು ಯತ್ನಿಸಿದ್ದರೆ, ಮಾನವಹಕ್ಕುಗಳನ್ನು ಪಾಲಿಸುವಂತೆ ಮಣಿಸಿದ್ದರೆ ಅದು ಮಹಾನ್ ಸಹಾಯವಾಗುತ್ತಿತ್ತು. ಆದರೆ ಜಾಗತಿಕ ರಾಜಕೀಯವನ್ನು ಗಮನಿಸಿದರೆ ಭಾರತವೂ ಸೇರಿದಂತೆ ಯಾವ ರಾಷ್ಟ್ರಕ್ಕೂ ಶಾಶ್ವತ ಶಾಂತಿ ಬೇಡವೆಂಬುದು ಗೊತ್ತಾಗುತ್ತದೆ. ಎಲ್ಲಕಡೆ ಸರ್ವಾಧಿಕಾರವೇ ಪ್ರಜಾಪ್ರಭುತ್ವದ ವ್ಯಾಖ್ಯಾನವನ್ನು ಮಾಡುವುದು ಈ ಶತಮಾನದ ವಿಚಿತ್ರಗಳಲ್ಲೊಂದು. ಅಫ್ಘಾನಿಸ್ತಾನವನ್ನು ಮರೆತರೂ ಮಾನವ ಹಕ್ಕುಗಳು ಮುಖಕ್ಕೆ ರಾಚುವಂತೆ ಉಲ್ಲಂಘನೆಯಾದ ಮ್ಯಾನ್ಮಾರ್, ಹಾಂಕಾಂಗ್, ಉತ್ತರ ಕೊರಿಯಾ, ಸೌದಿ ಅರೇಬಿಯಾ ಈ ಪ್ರದೇಶಗಳಲ್ಲಿ ನಡೆದ, ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮರೆತು ಅವುಗಳೊಂದಿಗೆ ವ್ಯವಹರಿಸುವುದರಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ಅಂದರೆ ಎಲ್ಲಾ ದೇಶಗಳೂ ತಮ್ಮ ತಮ್ಮ ಅಧಿಕಾರದ ಮತ್ತು ವ್ಯಾಪಾರದ ಲಾಭವನ್ನಷ್ಟೇ ಗಣಿಸುತ್ತವೆಯೇ ಹೊರತು ಅದರ ಪರಿಣಾಮಗಳನ್ನಲ್ಲ ಮತ್ತು ಇದಕ್ಕೆ ತಕ್ಕಂತೆ ತಮ್ಮ ತಮ್ಮ ಮೂಗಿನ ನೇರಕ್ಕೆ ತರ್ಕಗಳನ್ನು ಮತ್ತು ವಾದಗಳನ್ನು ಒಡ್ಡುತ್ತವೆ. ಮೊನ್ನೆಯಷ್ಟೇ ಪ್ರಧಾನಿ ಕ್ವಾಡ್ ಶೃಂಗಸಮ್ಮೇಳನಕ್ಕಾಗಿ ಮತ್ತು ವಿಶ್ವಸಂಸ್ಥೆಯ ಅಧಿವೇಶನಕ್ಕಾಗಿ ಅಮೆರಿಕ ದೇಶಕ್ಕೆ ಹೋಗಿ ಬಂದರು. ಕ್ವಾಡ್ ಎಂದರೆ ಅಮೆರಿಕ, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್‌ನ್ನೊಳಗೊಂಡ ಒಂದು ಗುಂಪು. ಇಂತಹ ಗುಂಪು ಇತಿಹಾಸದಲ್ಲಿ ಹೊಸತೇನಲ್ಲ. ತಮ್ಮತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ದೊಡ್ಡ ರಾಷ್ಟ್ರಗಳು ಹೂಡುವ ಸಂಚು ಇದು. ಭಾರತದಂತಹ ರಾಷ್ಟ್ರಗಳು ತಾವೇನೋ ವಿಶ್ವಮಾನ್ಯರಾದೆವೆಂದು ಭ್ರಮಿಸಲು ಇದು ಒಳ್ಳೆಯ ವೇದಿಕೆಯನ್ನೊದಗಿಸುತ್ತದೆ. ಆದರೆ ಕ್ವಾಡ್ ಶೃಂಗಸಭೆಯ ಹೊತ್ತಿನಲ್ಲಿ ಅಮೆರಿಕವು ಆಸ್ಟ್ರೇಲಿಯಾ ಮತ್ತು ಬ್ರಿಟನ್‌ಗಳನ್ನೊಳಗೊಂಡ ಇನ್ನೊಂದು ಗುಂಪನ್ನು ರಚಿಸಿತು. ಇದು ಕ್ವಾಡ್‌ಗಿಂತ ಯಾಕೆ ಮತ್ತು ಹೇಗೆ ಭಿನ್ನ, ತನ್ನನ್ನು ಇದರಲ್ಲಿ ಸೇರಿಸಿಕೊಳ್ಳದಿರಲು ಕಾರಣವೇನು ಎಂಬುದನ್ನು ಭಾರತವಾಗಲೀ ಜಪಾನ್ ಆಗಲೀ ಕೇಳಲು ಅಸಮರ್ಥವಾದವು. ಈ ಎರಡೂ ಗುಂಪಿಗೆ ಸೇರದ ಮತ್ತು ಕ್ವಾಡ್ ಗುಂಪಿನ ಕುರಿತು ಚಿಂತಿಸದ ಫ್ರಾನ್ಸ್ ಮಾತ್ರ ಅಮೆರಿಕ, ಆಸ್ಟ್ರೇಲಿಯಾ ಮತ್ತು ಬ್ರಿಟನ್ ತ್ರಿಮೂರ್ತಿಗಳ ಕುರಿತು ಆಕ್ರೋಶವನ್ನು ಅಭಿವ್ಯಕ್ತಿಸಿತು. ನಾವು ಚಿಕ್ಕವರಿರುವಾಗ ಕರಾವಳಿಯಲ್ಲಿ ಬಾಳೆಕಾಯಿ ವ್ಯಾಪಾರ ಮಾಡುವವರು ಕೈಗೆ ಕರವಸ್ತ್ರ ಮುಚ್ಚಿಟ್ಟುಕೊಂಡು ಪರಸ್ಪರ ಕೈಕುಲುಕುವಂತೆ ಹಿಡಿದುಕೊಂಡು ದರ ನಿಶ್ಚಯಿಸುತ್ತಿದ್ದರು. ಈಗಲೂ ಆ ಪದ್ಧತಿ ಇದೆಯೇನೋ ಗೊತ್ತಿಲ್ಲ. ದೇಶದೇಶಗಳ ನಡುವಣ ರಾಜಕೀಯ ಹೆಚ್ಚುಕಡಿಮೆ ಹೀಗೆಯೇ ಇರುತ್ತದೆ. ಅವುಗಳ ಮೈತ್ರಿ ಎಲ್ಲಿ, ಭಿನ್ನಾಭಿಪ್ರಾಯ ಎಲ್ಲಿ ಎಂಬುದು ಗೊತ್ತಾಗುವುದಿಲ್ಲ; ಗೊತ್ತಾಗುವಾಗ ಬಹಳಷ್ಟು ಜನರು ಬಲಿಯಾಗಿರುತ್ತಾರೆ. ಭಾರತ ಮತ್ತು ಚೀನಾದ ವ್ಯವಹಾರ ಹೆಚ್ಚುಕಡಿಮೆ ಹೀಗೇ ಇದೆ. ಗಡಿ ವಿವಾದ ಮತ್ತು ಇತರ ಅನೇಕ ಭಿನ್ನಾಭಿಪ್ರಾಯಗಳು ಮಾಧ್ಯಮಗಳಲ್ಲಿ ಸುದ್ದಿ ಮಾಡಿದ್ದೇ ಮಾಡಿದ್ದು. ನಮ್ಮ ದೇಶವು ಚೀನಾದ ಆ್ಯಪ್‌ಗಳಿಗೆ ನಿಷೇಧ ಹೇರಿದ್ದೇ ಹೇರಿದ್ದು. ಸಾಮಾನ್ಯ ಜನರು ಇದರ ಗೊಡವೆಗೆ ಹೋಗದೆ ತಮ್ಮ ಪಾಡಿಗೆ ತಾವಿದ್ದರು. ಅನೇಕ ಸ್ವಘೋಷಿತ ದೇಶಭಕ್ತರು ಚೀನಾದ ಸರಕುಗಳಿಗೆ ಮಾರುಕಟ್ಟೆಯಲ್ಲಿ ಬಹಿಷ್ಕಾರ ಹಾಕಲು ಕರೆ ನೀಡಿದರು. ಹೀಗೆ ಕರೆ ನೀಡಿದವರಲ್ಲಿ ಎಷ್ಟು ಜನರು ಅದನ್ನು ಸ್ವಂತಕ್ಕೆ ಪ್ರಯೋಗಿಸಿದರೋ ಗೊತ್ತಿಲ್ಲ. ಹೀಗೆ ನಿಷೇಧಕ್ಕೊಳಗಾದ ಒಂದು ಆ್ಯಪ್ ‘ಕ್ಯಾಮ್ ಸ್ಕಾನರ್’. ಅದರ ಬದಲಿಗೆ ದೇಶಿ ಮತ್ತು ಚೀನೇತರ ವಿದೇಶಿ ಆ್ಯಪ್‌ಗಳು ಬಳಕೆಗೆ ಬಂದವೆಂದು ಸುದ್ದಿಯಾಯಿತು. ಆದರೆ ಇಂದಿಗೂ ನಮ್ಮ ಸರಕಾರಗಳ (ಒಕ್ಕೂಟ ಮತ್ತು ರಾಜ್ಯಗಳ) ಬಹಳಷ್ಟು ಸ್ಕಾನರ್‌ಗಳು ಚೀನಾದ ಈ ‘ಕ್ಯಾಮ್ ಸ್ಕಾನರ್’ ಲಾಂಛನವನ್ನೇ ಹೊತ್ತು ಬರುತ್ತಿವೆ. ಕರ್ನಾಟಕ ಸರಕಾರದ್ದಂತೂ ಇದೇ ಮಾದರಿಯೆಂಬುದು ದಾಖಲೆಗಳಿಂದ ಸ್ಪಷ್ಟ. ಹಾಗಾದರೆ ಎಲ್ಲಿ ಹೋಯಿತು ನಿಷೇಧಾಜ್ಞೆ? ಎಲ್ಲಿದೆ ದೇಶಭಕ್ತಿ? ಆತ್ಮನಿರ್ಭರತೆ?
ದೇಶವೊಂದರ ಒಳಗಿನ ರಾಜಕೀಯ ಹೇಗಿರುತ್ತದೆ? ಅಫ್ಘಾನಿಸ್ತಾನದ, ಪಾಕಿಸ್ತಾನದ ವಿಷಯ ಬಂದಾಗ ರೊಚ್ಚಿಗೇಳುವ, ನಮ್ಮ ದೇಶದ ಒಳಗಿನ ನಡವಳಿಕೆ ಹೇಗಿದೆ? ಅಮೆರಿಕ ದೇಶದ ನಡವಳಿಕೆ ಹೇಗಿದೆ? ಎಲ್ಲವೂ ಒಂದೇ!
ಸರಕಾರದ ಕರೆಗೆ ಓಗೊಟ್ಟು ಅನೇಕ ಅಮಾಯಕರು ಅಡುಗೆ ಅನಿಲದ ಮೇಲಣ ಸಬ್ಸಿಡಿಯನ್ನು ಬಿಟ್ಟುಕೊಟ್ಟರು. ಪರಿಣಾಮವಾಗಿ ಅವರಿಗೆ ಸಿಗುವ ರಿಯಾಯಿತಿ ತಪ್ಪಿತೇ ಹೊರತು ದೇಶದ ಅಥವಾ ಇಂತಹ ಪ್ರಜೆಗಳ ಆರ್ಥಿಕತೆಯಲ್ಲಿ ಯಾವ ಅಭಿವೃದ್ಧಿಯೂ ಆಗಲಿಲ್ಲ. ನಮ್ಮ ಜನಪ್ರತಿನಿಧಿಗಳು ತಮಗೆ ಸೌಕರ್ಯ ಸಿಕ್ಕಿದರೆ ಅದು ಜನರಿಗಾಗುವ ಉಪಕಾರವೆಂದು ತಿಳಿಯುತ್ತಾರೆ. ಹೀಗಾಗಿ ಅವರಿಗೆ ಸಬ್ಸಿಡಿ ದರದಲ್ಲಿ ಸಿಗುವ ಯಾವ ಸೌಕರ್ಯ, ಸವಲತ್ತನ್ನೂ ಅವರು ಬಿಟ್ಟುಕೊಟ್ಟಿಲ್ಲ. ಇಷ್ಟೇ ಅಲ್ಲ, ತಮಗೆ ಎಲ್ಲಿಲ್ಲದ ರಿಯಾಯಿತಿಗಳು ಬೇಕೆಂದು ಪಕ್ಷಭೇದವನ್ನು ಬಿಟ್ಟು (ಮರೆತು ಅಲ್ಲ!) ಕೂಗಾಡಿ ಪಡೆಯುತ್ತಾರೆ. ಕರ್ನಾಟಕದ ಶಾಸಕರು ಹೆದ್ದಾರಿಯ ಟೋಲ್‌ಗಳಿಂದ ತಮಗೆ ವಿನಾಯಿತಿ ಬೇಕೆಂದು ಬೇಡಿಕೆಯನ್ನಿಟ್ಟಿದ್ದಾರೆ. ಜನಸೇವೆಗೆ ಸಿಗುವ ಸಮಯವು ಈ ಟೋಲ್‌ಗಳಿಂದಾಗಿ ನಷ್ಟವಾಗುತ್ತದಂತೆ! ತಾಲಿಬಾನ್‌ನಿಂದ ಆರಂಭವಾದ ಚರ್ಚೆಯು ದೂರ ಸರಿದರೂ ಮತ್ತೆ ಅದರ ಸುತ್ತವೇ ಗಿರಕಿಹೊಡೆಯಬೇಕಾಗಿದೆ. ಅಫ್ಘಾನಿಸ್ತಾನದ ಕುರಿತು ನಾವೆಷ್ಟು ಎಚ್ಚರವಾಗಿದ್ದೇವೋ ಅಷ್ಟೇ ಎಚ್ಚರ ನಮ್ಮದೇ ದೇಶದ ಕಾರ್ಯಕಲಾಪಗಳಲ್ಲಿಲ್ಲ. ತಾಲಿಬಾನ್‌ನಷ್ಟು ತಾಮಸ, ಹಿಂಸಾತ್ಮಕವಾಗಿ ಪ್ರಚಾರವಾಗದಿದ್ದರೂ ಅದರ ರಾಜಸ ಸ್ವರೂಪವು ನಮ್ಮ ದೇಶದಲ್ಲಿ ವಿಜೃಂಭಿಸುತ್ತಿದೆ. ‘ಜೈ ಶ್ರೀರಾಮ್’ ಎಂದು ಹೇಳಿಸುವುದಕ್ಕಾಗಿ ಗೂಂಡಾಗಿರಿ ಎಲ್ಲೆಡೆ ನಡೆಯುತ್ತಿದೆ. ಪ್ರತ್ಯಕ್ಷ ಶ್ರೀರಾಮನೇ ಬಂದರೂ ಬಲಾತ್ಕಾರವಾಗಿ ‘ಜೈಶ್ರೀರಾಮ್’ ಎಂದು ಹೇಳಿಸಲಾರ. ರಾಮಾಯಣದಲ್ಲಿ ರಾಮನು ಹೀಗೆ ಹೇಳಿಸಿದ ಉದಾಹರಣೆಗಳಿಲ್ಲ. ಆದರೆ ನಮ್ಮ ಸ್ವಘೋಷಿತ ಧರ್ಮರಕ್ಷಕರಿಗೆ ಇದನ್ನು ಮೀರಿದ ಹಿಂಸ್ರ ಪ್ರವೃತ್ತಿ ಬೇರೆಯಿಲ್ಲ. ಧರ್ಮದ ಹೆಸರಿನಲ್ಲಿ ಪೊಲೀಸ್‌ಗಿರಿ ನಡೆಸುವುದನ್ನು ಯಾವ ಧರ್ಮವೂ ಹೇಳುವುದಿಲ್ಲ. ಆದರೆ ಎಲ್ಲ ಧರ್ಮಗಳೂ ತಮ್ಮ ಮೂಗಿನ ನೇರಕ್ಕೆ ತಮ್ಮ ಎಲ್ಲಾ ತಪ್ಪುಗಳನ್ನೂ ದೋಷಗಳನ್ನೂ ಮುಚ್ಚಿಹಾಕುತ್ತಿವೆ. ಇದಕ್ಕೆ ವ್ಯಾಟಿಕನ್, ಮಕ್ಕಾ, ಅಯೋಧ್ಯೆ, ಅಮೃತಸರಗಳು ಹೊರತಲ್ಲ. ದೇವರನ್ನೂ ಧರ್ಮವನ್ನೂ ವಿವಾದದಲ್ಲಿಟ್ಟರೆ ಅಧಿಕಾರ ರಾಜಕೀಯ ಉಳಿಯಬಹುದೆಂಬುದು ಎಲ್ಲ ಸ್ವಾರ್ಥಿ ರಾಜಕಾರಣಿಗಳಿಗೆ ಗೊತ್ತಿದೆ. ಧರ್ಮದ ಮೂಲಕ ನೈತಿಕತೆಯನ್ನು ಬೆಳೆಸುವುದರಷ್ಟು ಹುಂಬತನ ಬೇರೆಯಿಲ್ಲ. ದೇವರಿಗೆ ಕೈಮುಗಿಯುವವನು ತನ್ನ ಬದುಕು ಸರಿಯಿರಬೇಕು, ನ್ಯಾಯ-ಸತ್ಯ-ಅಹಿಂಸೆ-ಸೌಜನ್ಯ-ಧರ್ಮದರ್ಶಿತ್ವದ ಮೂಲಕ ಬೆಳಕು ನೀಡಬೇಕು ಎಂಬುದನ್ನು ಯೋಚಿಸುವುದಿಲ್ಲ. ಆದ್ದರಿಂದಲೇ ಅತೀ ಧರ್ಮೀಯರು ಮಾಡುವಷ್ಟು ಗೂಂಡಾಗಿರಿಯನ್ನು, ಹಿಂಸೆಯನ್ನು ನಾಸ್ತಿಕರಾಗಲೀ, ಇತರರಾಗಲೀ ಮಾಡುವುದಿಲ್ಲ. ಇಂದು ಧಾರ್ಮಿಕ ಲಾಂಛನಗಳನ್ನು ತಲೆ, ಹಣೆಗಳಲ್ಲಿ ಮೂಡಿಸಿಕೊಂಡು ಹೋಗುವವರನ್ನು ಕಂಡರೆ ಜನರು ಅದರಲ್ಲೂ ಮಹಿಳೆಯರೂ ಮಕ್ಕಳೂ ಹೆದರುತ್ತಾರೆ. ಧರ್ಮದ ಹೆಸರಿನಲ್ಲಿ ಪಡೆಯನ್ನು ಕಟ್ಟಿಕೊಂಡು ಬೀದಿ ಸುತ್ತುತ್ತ ಸಾಧುಜನರನ್ನು, ಯುವಕ-ಯುವತಿಯರನ್ನು ಹೆದರಿಸಿ ಏಕಕಾಲಕ್ಕೆ ತಮ್ಮ ನಿರುದ್ಯೋಗ ನಿವಾರಣೆಯನ್ನೂ ಹೊಟ್ಟೆಪಾಡಿನ ಸುಧಾರಣೆಯನ್ನೂ ಮಾಡುವ ಯುವಕರಿಗೆ ನಮ್ಮ ಸಮಾಜದಲ್ಲಿ ಕೊರತೆಯಿಲ್ಲ. ಮಾಧ್ಯಮಗಳು ‘ಈ ಕೋಮು’, ‘ಆ ಕೋಮು’, ಅನ್ಯ ಕೋಮು ಎನ್ನುತ್ತಲೇ ಈ ಘರ್ಷಣೆಗಳಿಗೆ ಸೀಮೆಯೆಣ್ಣೆ ಸುರಿಯುವ, ಬೆಂಕಿಹಚ್ಚುವ ಕೆಲಸದಲ್ಲಿ ಸದಾ ಸಿದ್ಧರಾಗಿರುವುದರಿಂದ ಯಾವ ಸಮಸ್ಯೆಯೂ ಶಮನವಾಗದೆ ಉಲ್ಬಣವಾಗುತ್ತದೆ. ಕನ್ನಡ ಕರಾವಳಿಯಂತೂ ಇಂತಹ ಮತೀಯತೆಗೆ, ಹಿಂಸೆಗೆ ಹೆಸರುವಾಸಿಯಾಗಿದೆ. ವಿದ್ಯೆ ಕಲಿಯಬೇಕಾದ ಯುವಕರು ದಾರಿತಪ್ಪಿದ ಮಕ್ಕಳಾಗುತ್ತಿದ್ದಾರೆ. ಬಹುತ್ವವು ಬಹುಮತತ್ವಕ್ಕೆ ದಾರಿ ಮಾಡಿಕೊಟ್ಟಿದೆ.
ಧಾರ್ಮಿಕ, ಸಾಮಾಜಿಕ, ನೈತಿಕ ಪೊಲೀಸ್‌ಗಿರಿ ಮಾಡಿದರೆ ಸಮಾಜದಲ್ಲಿ ಶಾಂತಿ ನೆಲೆಸುವುದಾದರೆ ಅಂತಹ ಮಿತಚಟುವಟಿಕೆಗಳು ಅಗತ್ಯವಾಗಬಹುದಿತ್ತು. ಆದರೆ ಈ ಸಾರ್ವಜನಿಕ ಪೊಲೀಸ್‌ಗಿರಿ ಹೆಚ್ಚಾದ ಮೇಲೆ ಸರಕಾರದಿಂದ ನಿಯೋಜಿತರಾದ ಪೊಲೀಸರಿಗೆ ಕೆಲಸ ಹೆಚ್ಚಾಗಿದೆ. ಅವರಿಗೆ ಈ ಧಾರ್ಮಿಕ/ಸಾಮಾಜಿಕ/ನೈತಿಕ ಪೊಲೀಸರನ್ನು ಹತ್ತಿಕ್ಕುವುದೇ ಒಂದು ಸವಾಲಾಗಿದೆ. ಕಾನೂನು ಇಲ್ಲದಿರುತ್ತಿದ್ದರೆ ಅಥವಾ ಈ ದೇಶದ ಸಂವಿಧಾನದ ಬೇರುಗಳು ಸುದೃಢವಾಗಿಲ್ಲದೆ ಇರುತ್ತಿದ್ದರೆ ಪ್ರಾಯಃ ಭಾರತದಲ್ಲೂ ಉಗ್ರಮತಾಂಧತೆಯು ತಾಲಿಬಾನಿಗೆ ಸವಾಲನ್ನೊಡ್ಡುವಂತೆ ತನ್ನ ಚಟುವಟಿಕೆಗಳನ್ನು ನಡೆಸುತ್ತಿತ್ತು. ಈಗಾಗಲೇ ಇತರ ಧರ್ಮೀಯರಿಗೆ ಭಯವೊಡ್ಡುವ ಮತ್ತು ಎಲ್ಲವೂ ತಾವು ಹೇಳಿದಂತೆ ನಡೆಯಬೇಕೆನ್ನುವ ಲಂಪಟತನ ನಮ್ಮಲ್ಲಿ ವ್ಯಾಪಕವಾಗಿ ಬೆಳೆದಿದೆ. ಮನುಷ್ಯರಕ್ತದ ರುಚಿ ಸಿಕ್ಕಿದರೆ ಹುಲಿ ಸುಮ್ಮನಾಗದು. ಅದನ್ನು ನಿಯಂತ್ರಿಸದಿದ್ದರೆ ಒಂದಲ್ಲ ಒಂದು ದಿನ-ಇಂತಹ ಮನಸ್ಥಿತಿಯವರಿಗೆ ಆಹಾರ ಸಿಕ್ಕದಾಗ ಅವರು ತಮ್ಮ ಸೃಷ್ಟಿಕರ್ತರನ್ನೇ ಬಲಿತೆಗೆದುಕೊಳ್ಳಬಹುದೆಂಬ ಸಾಮಾನ್ಯ ಅರಿವೂ ನಮ್ಮ ಅಧಿಕಾರಸ್ಥರಲ್ಲಿ ಇಲ್ಲದಿರುವುದು ದುರದೃಷ್ಟಕರ. ನಮ್ಮ ಬಹುತೇಕ ಎಲ್ಲ ರಾಜ್ಯಗಳಲ್ಲಿ ಜಾತಿ, ಮತ, ಧರ್ಮ, ಭಾಷೆ, ಸಂಸ್ಕೃತಿಯ ಜನರು ಪರಸ್ಪರ ಸಾಮರಸ್ಯದಿಂದ, ಸಮನ್ವಯತೆಯಿಂದ ಬದುಕುತ್ತ ಬಂದವರೇ. ಯಾವೊಂದು ಪ್ರದೇಶವೂ ತಮಗಾಗಿ ಎಂದು ಯಾರೂ ತಿಳಿದಿರುತ್ತಿರಲಿಲ್ಲ. ಆದರೆ ಇದೀಗ ಪರಿಸ್ಥಿತಿ ಬೇರೆ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಮಧ್ಯಪ್ರದೇಶದಂತಹ ಒಂದು ರಾಜ್ಯದಲ್ಲಿ ವಿಶ್ವಹಿಂದೂ ಪರಿಷತ್ತಿನ ನಾಯಕರು ಈ ರಾಜ್ಯ ತಮ್ಮದು; ಇಲ್ಲಿ ಯಾವ ಕ್ರೈಸ್ತ ಪೂಜಾಸ್ಥಾನವೂ ಉಳಿಯಲು ಬಿಡೆವು ಎಂದು ಘೋಷಿಸಿದ್ದಾರೆ. ಇದರಿಂದ ಭಯಭೀತರಾದ ಅಲ್ಲಿನ ಬಿಷಪರು ರಾಷ್ಟ್ರಪತಿಯವರ ಮೊರೆಹೋಗಿದ್ದಾರೆ. ಒಂದು ಕಾಲವಿತ್ತು: ರಾಷ್ಟ್ರಪತಿಯವರ ಮಾತು ಅಲ್ಪಸ್ವಲ್ಪವಾದರೂ ಮನ್ನಣೆಗೆ ಪಾತ್ರವಾಗುತ್ತಿತ್ತು. ಇಂದು ಮನ್ನಣೆಯಿರಲಿ, ರಾಷ್ಟ್ರಪತಿ ಇಷ್ಟು ವಿಶಾಲ ದೃಷ್ಟಿಕೋನವನ್ನು ಹೊಂದಿದ್ದಾರೆಯೇ ಎಂದು ಚಿಂತಿಸುವ ಕಾಲ ಬಂದಿದೆ. ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲೂ ಅಂಧಶ್ರದ್ಧೆಯನ್ನು, ಮತಾಂಧತೆಯನ್ನು ಶಿಕ್ಷಣದ ಮೂಲಕ, ಚರಿತ್ರೆಯ ಮರುರಚನೆಯ ಮೂಲಕ ಬೆಳೆಸುವ ಮತ್ತು ಸತ್ಯದ ಎಲ್ಲ ಮುಖಗಳನ್ನೂ ತಿರುಚುವ ಯತ್ನ ಸತತ ನಡೆಯುತ್ತಿದೆ. ಇದಕ್ಕೆ ಪ್ರಕೃತಿಯೇ ಕಡಿವಾಣವನ್ನು ಹಾಕಬೇಕಷ್ಟೇ.
ದೈನಂದಿನ ಚಟುವಟಿಕೆಗಳಲ್ಲಿ ಭಾಗಿಯಾಗುವ ಮನಸ್ಸು ತನ್ನ ಕಿಟಿಕಿಗಳನ್ನು ಹೊರ-ಒಳ ಜಗತ್ತಿನ ಕಡೆಗೆ, ಸಮಾಜದ ಕಡೆಗೆ ತೆರೆದರೆ ಅಸಂಖ್ಯ ಅಸಹನೆಗಳನ್ನು ಕಾಣಬಹುದು. ಜಗತ್ತಿನ ಎಲ್ಲೆಡೆಯಿಂದ ಒಳ್ಳೆಯ ವಿಚಾರಗಳು ಬರಲಿ ಎಂಬ ಪಾರಂಪರಿಕ ಸೂತ್ರ ವಾಕ್ಯಗಳ ಅನುಷ್ಠಾನದ ಬದಲಿಗೆ ದೇಹದ, ಮನಸ್ಸಿನ ಆರೋಗ್ಯವನ್ನು ಹದಗೆಡಿಸುವ ವಿಚಾರಗಳೇ ನಮ್ಮತ್ತ ಬರುತ್ತಿವೆ. ನಾವು ಪ್ರಜಾಪ್ರಭುತ್ವದ, ಗಾಂಧಿಯ, ಸಹನೆ, ಅಹಿಂಸೆ, ಸೌಜನ್ಯ, ಧರ್ಮದರ್ಶಿತ್ವದ ಪಾಠವನ್ನು ವಿದೇಶೀಯರಿಂದ ಕೇಳುವ ಹಣೆಬರಹಕ್ಕೆ ತುತ್ತಾಗಿದ್ದೇವೆ. ಪಶ್ಚಿಮದ ಬೆಳಕು ಪೂರ್ವದ ಕತ್ತಲನ್ನು ನಿವಾರಿಸಲಿ ಎಂದೇ ಹಾರೈಸಬೇಕಷ್ಟೇ!
ತನ್ನ ಸುತ್ತ ನಡೆಯುವ ವಿದ್ಯಮಾನಗಳ ಕುರಿತು ಆತಂಕವಿರುವ ಪ್ರತಿಯೊಬ್ಬ ಪ್ರಜ್ಞಾವಂತ ವ್ಯಕ್ತಿಗೆ, ಖಾಸಗಿ ಬದುಕು ಅಸಹನೀಯವಾಗಬಹುದು. ಎಲ್ಲೇ ಏನೇ ಆದರೂ ತಾನಿರುವುದೇ ಹೀಗೆ ಎಂಬವನಿಗೆ ‘ಯಾರೇ ಕೂಗಾಡಲಿ...’ ಎಂದು ಆರಂಭವಾಗುವ ಸಿನೆಮಾ ಹಾಡಿನ ಪೂರ್ಣಪಾಠವೇ ರಾಷ್ಟ್ರಗೀತೆಯಾಗಬಹುದು. ಅಂತಹವರಿಗೆ ನೆಮ್ಮದಿಗೆ ಭಂಗವಿಲ್ಲ. ಅದರಲ್ಲೂ ಕುಳಿತಲ್ಲಿಗೇ ಪ್ರಶಸ್ತಿ-ಪುರಸ್ಕಾರಗಳ ಗೌರವ, ಪಿಂಚಣಿ ಮುಂತಾದ ಆರ್ಥಿಕ ಸವಲತ್ತುಗಳು ಬರುತ್ತಿದ್ದರಂತೂ ಬದುಕು ಸುಖದ ಸ್ವರ್ಗ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.