ದ ಪ್ರಿನ್ಸ್ - ಮೆಖೈವೆಲ್ಲಿಯ ರಾಜತಂತ್ರ | Vartha Bharati- ವಾರ್ತಾ ಭಾರತಿ

--

ದ ಪ್ರಿನ್ಸ್ - ಮೆಖೈವೆಲ್ಲಿಯ ರಾಜತಂತ್ರ

ಈ ಕೃತಿಯಲ್ಲಿ 26 ಅಧ್ಯಾಯಗಳಿವೆ. ಒಂದೊಂದೂ ಅತ್ಯಂತ ಸಂಕ್ಷಿಪ್ತವಾಗಿ ಮತ್ತು ಸ್ಪಷ್ಟವಾಗಿ ಸೋದಾಹರಣಾಪೂರ್ವಕವಾಗಿ ರಾಜನೊಬ್ಬನ ಹಕ್ಕುಬಾಧ್ಯತೆಗಳನ್ನು, ಕೈಗೊಳ್ಳಬೇಕಾದ ಮತ್ತು ಕೈಗೊಳ್ಳಬಾರದ ಕ್ರಮಗಳನ್ನು ಹೇಳುತ್ತದಾದರೂ ಅವೆಲ್ಲದಕ್ಕೂ ಅವನು ನೀಡುವ ಇತಿಹಾಸ ಒಳ್ಳೆಯ ಅರಸರದ್ದೇ ಎಂದೇನಿಲ್ಲ. ಫ್ರಾನ್ಸ್, ಸ್ಪೈನ್, ಇಟಲಿ, ರೋಮ್, ಟರ್ಕಿ, ಈಜಿಪ್ಟ್, ಮುಂತಾದ ದೇಶಗಳ ಇತಿಹಾಸ ಇಲ್ಲಿ ನಿದರ್ಶನಗಳಾಗಿ ಬಂದಿವೆ.


ನಿಕೊಲೊ ಮೆಖೈವೆಲ್ಲಿ (03.05.1469-21.06.1527)ಯನ್ನು ಆಧುನಿಕ ರಾಜನೀತಿಯ ಪಿತಾಮಹ ಎನ್ನುತ್ತಾರೆ. ಇಟಲಿಯ ಫ್ಲಾರೆನ್ಸ್ ಗಣರಾಜ್ಯದಲ್ಲಿ ಉನ್ನತಾಧಿಕಾರದಲ್ಲಿದ್ದ ಮೆಖೈವಲ್ಲಿ ರಾಜಸತ್ತೆಯನ್ನು ಮತ್ತು ರಾಜಕೀಯದ ಕುಟಿಲ ತಂತ್ರವನ್ನು ಸಮೀಪದಿಂದ ನೋಡಿದವನು. ಅದರ ಕಷ್ಟವನ್ನೂ ಅನುಭವಿಸಿದವನು. ಸರಿಸುಮಾರು 14 ವರ್ಷಗಳ ಕಾಲವಷ್ಟೇ ಸಾರ್ವಜನಿಕ ಸೇವೆಯಲ್ಲಿದ್ದ ಮೆಖೈವೆಲ್ಲಿ ತನ್ನ ಶೇಷಾಯುಷ್ಯವನ್ನು ರಾಜಕಾರಣದ ಹಾಗೂ ಸಾಹಿತ್ಯದ ರಚನೆಯಲ್ಲಿ ಕಳೆದವನು. ಅವನು ಮರಣಹೊಂದಿದ ಸುಮಾರು 5 ವರ್ಷಗಳ ಆನಂತರ ಪ್ರಕಟವಾದ ‘ದ ಪ್ರಿನ್ಸ್’ ಎಂಬ ಪುಟ್ಟ ಕೃತಿಯು ಅವನ ಕೀರ್ತಿಯನ್ನು ಶಾಶ್ವತವಾಗಿಸಿತು. ಅವನು ಇತರ ಅನೇಕ ಕೃತಿಗಳನ್ನು ಬರೆದಿದ್ದರೂ ಇಂದಿಗೂ ರಾಜಕಾರಣದ ಚದುರಂಗದಾಟದಲ್ಲಿ ಮೆಖೈವೆಲ್ಲಿಯ ದಾಳಗಳು, ಸೂತ್ರಗಳು ಗಮನಿಸಲ್ಪಡುತ್ತವೆ. ಅವನನ್ನು ಒಪ್ಪಬಹುದು, ಒಪ್ಪದೇ ಇರಬಹುದು, ಆದರೆ ಅವನನ್ನು ಓದಿಕೊಳ್ಳದೆ ರಾಜಕೀಯಶಾಸ್ತ್ರದ ಓದು ಪೂರ್ಣವಾಗದು. ಐರೋಪ್ಯ ಅರ್ಥನೀತಿಯಲ್ಲಿ ಸಾರ್ವಜನಿಕ ಹಿತವು ಸ್ವಾರ್ಥದ ಉಪಉತ್ಪತ್ತಿ (by-product)ಯಾಗಿ ಬರಬೇಕೇ ಹೊರತು ಮುಖ್ಯ ಉದ್ದೇಶವಾಗಿರಬಾರದು ಎಂಬ ನಂಬಿಕೆ ಲಾಗಾಯ್ತಿನಿಂದಲೇ ಇತ್ತು. ಅವುಗಳ ವಸಾಹತುಶಾಹಿ ಧೋರಣೆಯು ಈ ಹಾದಿಯಲ್ಲೇ ಮುಂದುವರಿದು ಮುಂದೆ ರಾಜಕೀಯ ಅಧಿಕಾರವನ್ನು ಪಡೆಯುವುದರಲಿತ್ತು.

21ನೇ ಶತಮಾನದಲ್ಲಿ ಸರಕಾರಗಳನ್ನು ಬಂಡವಾಳಶಾಹಿ ಅಥವಾ ಬಹುರಾಷ್ಟ್ರೀಯ ಸಂಸ್ಥೆಗಳು ನಡೆಸುತ್ತವೆಯೆಂದು ಹೇಳುವುದು ಇದೇ ಅರ್ಥದ ಮುಂದುವರಿಕೆಯಾಗಿ ಇರಬಹುದು. ಮೆಖೈವೆಲ್ಲಿಯ ಈ ಕೃತಿಯನ್ನು ಪತ್ರಕರ್ತ-ಸಾಹಿತಿ ಕೆ.ಎನ್.ವೆಂಕಟಸುಬ್ಬರಾವ್ ಅವರು 2021ರಲ್ಲಿ ಕನ್ನಡಕ್ಕೆ ತಂದಿದ್ದಾರೆ. (ಈ ಹಿಂದೆ ದಕ್ಷ ಆಡಳಿತಗಾರರೂ ಹಿರಿಯ ಸಾಹಿತಿಯೂ ಆಗಿದ್ದ ನವರತ್ನ ರಾಮರಾವ್ ಅವರು ಅನುವಾದಿಸಿದ್ದಾರೆಂಬ ಉಲ್ಲೇಖವಿದೆಯಾದರೂ ಅದು ಲಭ್ಯವಿಲ್ಲವೆಂಬ ಮಾಹಿತಿಯೂ ಇದೆ.) ‘ದ ಪ್ರಿನ್ಸ್-ರಾಜನೀತಿಯ ಕೈಪಿಡಿ’ ಎಂದು ಹೆಸರಿಟ್ಟಿದ್ದಾರೆ. ಜೊತೆಗೇ ‘ಕನ್ನಡ ಭಾವಾನುವಾದ’ ಎಂದು ಹೇಳಿಕೊಂಡಿದ್ದಾರೆ. ಲ್ಯಾಟಿನ್ ಮೂಲವನ್ನು ಓದಿದ್ದೇನೆಂದು ಅವರು ಹೇಳಿಲ್ಲ. ಬಹುಪಾಲು ಯುರೋಪಿಯನ್ ಸಾಹಿತ್ಯವನ್ನು ಇಂಗ್ಲಿಷ್ ಅನುವಾದದಲ್ಲಿ ಓದಿ ಕನ್ನಡಕ್ಕೆ ಅನುವಾದಿಸುವುದೇ ರೂಢಿಯಲ್ಲಿದೆ. ಇದರಿಂದಾಗಿ ಅದು ಮೂಲಕ್ಕೆ ಎಷ್ಟು ನಿಷ್ಠವಾಗಿದೆ ಎಂಬುದು ಪಕ್ಕನೆ ತಿಳಿಯುವ ವಿಚಾರವಲ್ಲ. ಆದರೆ ಇಂಗ್ಲಿಷ್ ಅನುವಾದದ ಮೂಲಕ ಕೃತಿಯ ಭಾವವನ್ನು ಹಿಡಿದರೆ ಅಷ್ಟರ ಮಟ್ಟಿಗೆ ಅನುವಾದಕರ ಪ್ರಯತ್ನ ಸಾರ್ಥಕ. ಈ ದೃಷ್ಟಿಯಿಂದ ಅನುವಾದಕರು ಹೇಳಿದ ‘ಭಾವಾನುವಾದ’ ಎಂಬ ರಕ್ಷಣಾತ್ಮಕ ಮತ್ತು ವಿನಯಪೂರ್ವಕ ಹೇಳಿಕೆಯನ್ನು ಇತರ ಅನುವಾದಕರೂ ಅನುಸರಿಸುವುದು ಒಳ್ಳೆಯದು.

125 ಪುಟಗಳ ಕನ್ನಡದ ಈ ಭಾವಾನುವಾದದ ಆಧಾರದಲ್ಲೇ ಮೆಖೈವೆಲ್ಲಿಯ ಮಾತುಗಳನ್ನು ಪರಿಶೀಲಿಸಬಹುದು: ಇಂದಿನ ರಾಜಕೀಯದಲ್ಲೂ ನಾವು ‘ನೀತಿ ಆಯೋಗ’ ಎಂಬ ಹೆಸರನ್ನು ಕಾಣುತ್ತೇವಾದರೂ ಅದೂ ರಾಜಕೀಯದ ನಡೆಗಳಿಗೆ ಬೇಕಾದ ಸರಕುಗಳನ್ನು ತಯಾರು ಮಾಡುವ ಕೇಂದ್ರವಾಗಿರುತ್ತದೆಯೇ ವಿನಾ ಸಾರ್ವಜನಿಕ/ಪ್ರಜಾ ಹಿತ ಒಂದು ಉಪಉತ್ಪತ್ತಿ ಆಗಿ ಉಳಿಯುವ ಅವಕಾಶವೇ ಹೆಚ್ಚು. ‘ನೀತಿ’ಯನ್ನು ‘ಧೋರಣೆ’ ಎಂಬರ್ಥದಲ್ಲಿ ಬಳಸಿದ್ದಾರೆಂದು ಅನ್ನಿಸುತ್ತದೆ. ಭಾರತೀಯ ಪರಂಪರೆಯಲ್ಲಿ ‘ನೀತಿ’ಯೆಂದರೆ ‘ಸರಿಯಾದದ್ದು’ ಎಂದೇ ಪ್ರಚಲಿತ. ಈ ದೃಷ್ಟಿಯಿಂದಲೇ ಇರಬೇಕು-ದುರ್ಗಸಿಂಹನ ನೀತಿಕಥೆಗಳು ‘ಪಂಚತಂತ್ರ’ವಾಗಿವೆ, ‘ಪಂಚನೀತಿ’ಗಳಲ್ಲ. ಮೆಖೈವೆಲ್ಲಿ ಈ ಕೃತಿಯಲ್ಲಿ ಹೇಳಿದ ಸೂತ್ರಗಳು ರಾಜನೀತಿಗಿಂತ ರಾಜತಂತ್ರವೆಂಬ ವಿಚಾರಕ್ಕೆ ಹತ್ತಿರದಲ್ಲಿವೆ. ಏಕೆಂದರೆ ಆಗಿನ್ನೂ ಇಂದು ನಾವು ಕಾಣುವ ಪ್ರಜಾಪ್ರಭುತ್ವವು ಭ್ರೂಣಾವಸ್ಥೆಯಲ್ಲಿದ್ದು ಅರಸೊತ್ತಿಗೆಯೇ ಆನುವಂಶಿಕತೆ ಅಥವಾ ಶಕ್ತಿಯ ಮೂಲಕ ಏರುವ ಸ್ಥಾನವಾದ್ದರಿಂದ ಅಲ್ಲಿಗೆ ತಲುಪುವುದು ಅಥವಾ ಅಧಿಕಾರವನ್ನು ಗಳಿಸುವುದು (ಕಬಳಿಸುವುದು?) ಹೇಗೆ ಮತ್ತು ಅದನ್ನು ತನ್ನ ಅನುಕೂಲಕ್ಕನುಗುಣವಾಗಿ, ಸುರಕ್ಷಿತವಾಗಿ ಬಳಸುವುದು ಹೇಗೆ ಮತ್ತು ಅಧಿಕಾರವನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಸಂಕೀರ್ಣ ವಿಚಾರವನ್ನು ಮೆಖೈವೆಲ್ಲಿ ಚರ್ಚಿಸಿದ್ದಾನೆ.

ರಾಜನಾದವನು ಎಷ್ಟರ ಮಟ್ಟಿಗೆ ಒಳ್ಳೆಯವನಾಗಿ ಇರಬಹುದು ಮತ್ತು ಅಂತಿಮ ಪರಿಣಾಮದಲ್ಲಿ ಹಿತವಾಗುವುದಾದರೆ ಅವನು ದಾರಿತಪ್ಪಿಹೋದರೂ ಯಾವುದು ಕೇಡೆಂದು ನಾವು ಹೇಳುತ್ತೇವೆಯೋ ಅದನ್ನು ಅನುಸರಿಸಿದರೂ ತಪ್ಪಿಲ್ಲ ಎಂಬ ಛಾಯೆಯ ನಿರೂಪಣೆ ಇದರಲ್ಲಿದೆ. ಆದ್ದರಿಂದ ‘ನೀತಿ’ ಎಂಬ ಪದ ಅವನ ಈ ಕೃತಿಯಲ್ಲಿ ಮೂಡುವ ವಿಚಾರಗಳಿಗೆ ಹೊಂದದು. ಈ ಕೃತಿಯಲ್ಲಿ 26 ಅಧ್ಯಾಯಗಳಿವೆ. ಒಂದೊಂದೂ ಅತ್ಯಂತ ಸಂಕ್ಷಿಪ್ತವಾಗಿ ಮತ್ತು ಸ್ಪಷ್ಟವಾಗಿ ಸೋದಾಹರಣಾಪೂರ್ವಕವಾಗಿ ರಾಜನೊಬ್ಬನ ಹಕ್ಕುಬಾಧ್ಯತೆಗಳನ್ನು, ಕೈಗೊಳ್ಳಬೇಕಾದ ಮತ್ತು ಕೈಗೊಳ್ಳಬಾರದ ಕ್ರಮಗಳನ್ನು ಹೇಳುತ್ತದಾದರೂ ಅವೆಲ್ಲದಕ್ಕೂ ಅವನು ನೀಡುವ ಇತಿಹಾಸ ಒಳ್ಳೆಯ ಅರಸರದ್ದೇ ಎಂದೇನಿಲ್ಲ. ಫ್ರಾನ್ಸ್, ಸ್ಪೈನ್, ಇಟಲಿ, ರೋಮ್, ಟರ್ಕಿ, ಈಜಿಪ್ಟ್, ಮುಂತಾದ ದೇಶಗಳ ಇತಿಹಾಸ ಇಲ್ಲಿ ನಿದರ್ಶನಗಳಾಗಿ ಬಂದಿವೆ. ಅತ್ಯುತ್ತಮವಾಗಿ ಬದುಕಿ, ಆಳಿದರೂ ಅದೇ ದೌರ್ಬಲ್ಯವಾಗಿ ದೇಶವನ್ನು ಕಳೆದುಕೊಂಡ ಉದಾಹರಣೆಗಳೂ ಇವೆ; ದೇಶಭ್ರಷ್ಟರಾದವರೂ ಇದ್ದಾರೆ. ಹಿಂಸೆ ನೀಡಿ ಹೆಸರುಗಳಿಸಿದವರು ಇದ್ದಾರೆ. ಧರ್ಮ ಮತ್ತು ರಾಜಕೀಯದ ಸಂಬಂಧ ಮತ್ತು ಅವು ಇರಿಸಿಕೊಳ್ಳಬೇಕಾದ ಅಂತರದ ಕುರಿತೂ ಕ್ಷ-ಕಿರಣವಿದೆ. ಹೀಗಿದ್ದರೆ ಹೀಗೆ ಸುರಕ್ಷಿತವಾಗಿರಬಹುದು ಎಂಬ ‘ಇದಮಿತ್ಥಂ’ ಸೂತ್ರ ರಾಜಕೀಯದಲ್ಲಿ ನಡೆಯದು ಎಂಬುದಕ್ಕೆ ಮೆಖೈವೆಲ್ಲಿ ಸಾಕಷ್ಟು ಪ್ರಸಂಗಗಳನ್ನು ನೀಡುತ್ತಾನೆ. ಕೃತಿಯು ಆಗ ಅಧಿಕಾರಕ್ಕೇರುವ ಫ್ಲಾರೆನ್ಸಿನ ರಾಜಕುಮಾರನಿಗೆ ಅರ್ಪಿತವಾದಂತೆ ಆರಂಭದಲ್ಲೇ ಒಂದು ಅರ್ಪಣಾಪತ್ರವಿದೆ. ಇದೂ ಒಂದು ರಾಜತಂತ್ರವೇ ಇರಬಹುದು.

ತನ್ನ ತಿಳಿವಳಿಕೆಯ ಸಾರವನ್ನು ಕೃತಿರೂಪದಲ್ಲಿ ಅರ್ಪಿಸುವ ಮೂಲಕ ಮೆಖೈವೆಲ್ಲಿಯು ಹಲವು ಸಲಹೆಗಳನ್ನು ಮತ್ತು ಎಚ್ಚರಿಕೆಯ ಮಾತುಗಳನ್ನು ಅರ್ಪಿಸಿದ್ದಾನೆ. ಆತನೇ ಕೃತಿಯ ಈ ಭಾಗದಲ್ಲಿ ಸೂಚಿಸಿದಂತೆ (ಮತ್ತು ಅನೇಕ ತಜ್ಞರು ಆನಂತರ ಚರ್ಚಿಸಿದಂತೆ) ಇಲ್ಲಿನ ಚರ್ಚಿತ ಅಂಶಗಳು ಸರಳವೂ ಸಾಮಾನ್ಯರಿಗೂ ಅರ್ಥವಾಗುವಂತೆ ಬರೆಯಲು ಅವನು ಉದ್ದೇಶಿಸಿದ್ದಾನೆ. ಆದರೆ ವಿಷಯವೇ ಸಂಕೀರ್ಣವಾದಾಗ ಭಾಷೆ ಅರ್ಥವಾದರೂ ಚರ್ಚಿತ ಅಂಶಗಳು ಅರ್ಥವಾಗದಿರಲು ಸಾಧ್ಯ. ‘ಇತರ ಬರಹಗಾರರು ಬಳಸುವ, ಬಳಸಿರುವ ತಲೆ ದಿಮ್ಮೆನಿಸುವ ಪದಪುಂಜಗಳನ್ನಾಗಲೀ, ಉದ್ದನೆಯ ವಾಕ್ಯಗಳನ್ನಾಗಲೀ, ತೋರಿಕೆಯ, ಆಡಂಬರದ, ಉತ್ಪ್ರೇಕ್ಷೆಯ ಆಲಂಕಾರಿಕ ಪದಗಳನ್ನಾಗಲೀ’ ತಾನು ಬಳಸಿಲ್ಲ ಎನ್ನುತ್ತಾನೆ ಮೆಖೈವೆಲ್ಲಿ. ಹಾಗೆಯೇ ‘ನಿಸರ್ಗವನ್ನು ಕುಂಚದಲ್ಲಿ ಮೂಡಿಸಲು ಚಿತ್ರಕಾರನು ಕಣಿವೆಗಳಲ್ಲಿ ಅಡ್ಡಾಡಿ, ಪರ್ವತವನ್ನು ಏರಿ, ಪ್ರಕೃತಿ ಸೌಂದರ್ಯವನ್ನು ಹೇಗೆ ವೀಕ್ಷಿಸುವನೋ, ಹಾಗೆಯೇ ಜನರ ಸ್ವಭಾವ ವ್ಯಕ್ತಿತ್ವವನ್ನು ತಿಳಿಯಲು ದೊರೆ ಸಾಮಾನ್ಯ ಮನುಷ್ಯನಾಗಿರಬೇಕು.’ ಎಂಬ ಉದಾತ್ತ ತತ್ವವಿದೆ. ಜೊತೆಗೇ ‘ಪಾರಸ್ಪರಿಕವಾಗಿ ದೊರೆಯ ಸ್ವಭಾವ ವ್ಯಕ್ತಿತ್ವಗಳನ್ನು ಅರಿಯಲು ಸಾಮಾನ್ಯ ಮನುಷ್ಯನೂ ದೊರೆಯಾಗಬೇಕು.’ ಎಂಬ ಕಳಕಳಿಯಿದೆ. ಇದು ಪ್ರಜೆಗಳನ್ನು ರಾಜನಿಂದ ರಕ್ಷಿಸಲು ಅತೀ ಮಹತ್ವದ ಸಲಹೆ. ಇವೆಲ್ಲ ಅರ್ಥವ್ಯಾಪ್ತಿಯನ್ನು ಪರಿಶೀಲಿಸಿದರೆ ಮೆಖೈವೆಲ್ಲಿಯದ್ದು ಶುದ್ಧ ರಾಜತಂತ್ರ. ಅವನು ಸೂಚಿಸುವ ಸೂತ್ರ/ತಂತ್ರಗಳು ಗಣತಂತ್ರಕ್ಕೂ ರಾಜಸತ್ತೆಗೂ ಸಮಾನವಾಗಿ ಅಲ್ಲದಿದ್ದರೂ ಸಾಂದರ್ಭಿಕವಾಗಿ ಅನ್ವಯಿಸುವಂಥವು.

ಹುಟ್ಟಿನಿಂದಲೇ ಆಡಳಿತಕ್ಕೆ ಹಕ್ಕುದಾರರಾದರೂ ವಿಫಲರಾದವರನ್ನು ಅವನು ನೋಡಿದ್ದನು; ಹಾಗೆಯೇ ಹೊಸದಾಗಿ ಅರಸನಾಗಿ ಯಶಸ್ಸಾದವರನ್ನೂ ಕಂಡಿದ್ದನು. ಆದ್ದರಿಂದ ಎಲ್ಲವೂ ಒಂದೇ ಅಳತೆಗೋಲಿಗೆ ಸಿಕ್ಕವೆಂಬುದು ಅವನಿಗೆ ತಿಳಿದಿತ್ತು. ಆದ್ದರಿಂದಲೇ ಅವನು ಒಬ್ಬ ಅರಸ, ತನ್ನ ವೈರಿಗಳ ವಿರುದ್ಧ ಯಾವ ರೀತಿಯ ಪ್ರತಿತಂತ್ರ ಹೂಡಬೇಕಿದೆ ಎಂಬುದನ್ನೂ ಚರ್ಚಿಸುತ್ತಾನೆ. ಒಂದು ಸಂದರ್ಭದಲ್ಲಿ (ಆಡಳಿತಗಾರನು) ‘ತನ್ನ ಹಿಂದಿನ ಆಡಳಿತಗಾರನ, ಆಡಳಿತಗಾರರ, ವಂಶವನ್ನು ನಿರ್ನಾಮಗೊಳಿಸಬೇಕು’ ಎಂಬ ಅಮಾನವೀಯ ಮತ್ತು ಕ್ರೂರ ಸಲಹೆಯನ್ನಿಡುತ್ತಾನೆ. ಇನ್ನೊಂದು ಭಾಷೆ, ಪದ್ಧತಿಯುಳ್ಳ ಪ್ರದೇಶವನ್ನು ವಶಪಡಿಸುವ ಸಿದ್ಧಾಂತಗಳನ್ನು ಮಂಡಿಸುತ್ತಾನೆ. ಕ್ಷಯರೋಗದ ಉದಾಹರಣೆಯನ್ನು ನೀಡಿ ‘‘ಆರಂಭದಲ್ಲಿ ರೋಗಲಕ್ಷಣಗಳನ್ನು ಕಾಣುವುದು ಕಷ್ಟ; ಕಂಡಿತೆಂದರೆ ಗುಣಪಡಿಸುವುದು ಸುಲಭ; ಕಾಲಕ್ರಮೇಣ ರೋಗವನ್ನು ಗುರುತಿಸುವುದು ಸುಲಭವಾದರೂ ನಿವಾರಣೆ ಕಷ್ಟ’’ ಎನ್ನುತ್ತಾನೆ. (ಈ ಉದಾಹರಣೆ ಕೃತಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಬರುತ್ತದೆ.) ಇಂದಿನ ರಾಜಕಾರಣಕ್ಕೆ ಬಹು ಹತ್ತಿರವಾದ ರೀತಿಯಲ್ಲಿ ‘‘ತನ್ನ ಹಿಡಿತದಲ್ಲಿರುವ ನೆಲದಲ್ಲಿ, ಮತ್ತೊಬ್ಬನು ಪ್ರಭಾವಶಾಲಿಯಾಗಿ ಬೆಳೆಯಲು ಅವಕಾಶ ನೀಡುವ ಒಬ್ಬ ದೊರೆ, ತನ್ನ ನಾಶವನ್ನು ತಾನೇ ಆಹ್ವಾನಿಸುತ್ತಾನೆ.’’ ಎನ್ನುತ್ತಾನೆ. (ರಾಜಕಾರಣಿಗಳು ಏಕಸ್ವಾಮ್ಯವನ್ನು ಸಾಧಿಸಿ ಉಳಿಸಿಕೊಳ್ಳಲು ನಿಷ್ಠುರಮಾರ್ಗಗಳನ್ನನುಸರಿಸುವುದನ್ನು ಇಂದಿಗೂ ಕಾಣುತ್ತೇವಲ್ಲವೇ?) ಯಾವುದೇ ‘ಪ್ರದೇಶಕ್ಕೆ ಹೊಸಬನಾದ ರಾಜನು ತಾನು ವಶಪಡಿಸಿಕೊಂಡ ಹೊಸ ರಾಜ್ಯದಲ್ಲಿ ತನ್ನನ್ನು ಸ್ಥಾಪಿಸಿಕೊಳ್ಳುವುದು ಅಥವಾ ಉಳಿಸಿಕೊಳ್ಳುವುದು ಎಷ್ಟು ಸುಲಭ ಅಥವಾ ಎಷ್ಟು ಕಷ್ಟ ಎಂಬುದು, ಆತನ ಸಾಮರ್ಥ್ಯ ಅಥವಾ ಅಸಾಮರ್ಥ್ಯವನ್ನು ಅವಲಂಬಿಸಿರುವುದಾಗಿರುತ್ತದೆ.’ ಎಂಬ ಸ್ಪಷ್ಟನುಡಿ ಇಲ್ಲಿದೆ. ಅವನು ಬರೆಯುವಂತೆ ‘ಎಲ್ಲವುದಕ್ಕಿಂತ ಮೇಲಾಗಿ, ಜನಸಾಮಾನ್ಯರ ಮನಸ್ಸು ಲೋಲಕದಂತೆ ಅತ್ತಿತ್ತ ಓಲಾಡುತ್ತಿರುತ್ತದೆ ಎಂಬುದು ನಮ್ಮ ನೆನಪಿನಲ್ಲಿ ಇರಬೇಕಿದೆ.’ ಅಧಿಕಾರದ ಆರೋಹಣಕ್ಕೆ ಅದೃಷ್ಟ ಮತ್ತು ಸಾಮರ್ಥ್ಯದ ಸಾಧ್ಯತೆಗಳನ್ನು ಮೆಖೈವೆಲ್ಲಿ ಹೇಳುತ್ತಾನೆ.

‘‘ಅನುಗ್ರಹದಿಂದ ಅಧಿಕಾರ ಹಿಡಿದವರಿಗೆ, ಲಭ್ಯ ಅಧಿಕಾರದಲ್ಲಿ ಹೇಗೆ ಮುಂದುವರಿಯಬೇಕೆಂಬುದೇ ತಿಳಿದಿರುವುದಿಲ್ಲ.’’ (ಇದನ್ನು ನಾವು ಇಂದೂ ಕಾಣುತ್ತೇವೆ!) ಇಂತಹ ಅನೇಕ ಪ್ರಸಂಗಗಳು, ಸಮಸ್ಯೆಗಳು, ಪರಿಹಾರಗಳ ದಾರಿಗಳು ಕೃತಿಯಲ್ಲಿ ಎದುರಾಗುತ್ತವೆ. ದ್ರೋಹ, ಹಿಂಸೆ, ಕ್ರೌರ್ಯ ಇವು ರಾಜಕೀಯದಲ್ಲಿ ಹಾಸುಹೊಕ್ಕಾಗಿವೆಯೆಂಬ ಪ್ರಮೇಯ ಮೆಖೈವೆಲ್ಲಿಯದು. ಅವನು ಹೇಳುವಂತೆ ‘‘ಇಷ್ಟೆಲ್ಲಾ ದ್ರೋಹ, ವಂಚನೆ, ಕ್ರೌರ್ಯಗಳನ್ನು ಎಸಗಿಯೂ ಅಗಥೋಕ್ಲಸ್‌ನಂತಹವರು, ಪ್ರಜೆಗಳು ತಮ್ಮ ವಿರುದ್ಧ ಪ್ರತಿರೋಧ ತೋರದಂತೆ ನೋಡಿಕೊಳ್ಳುತ್ತಾ, ವಿದೇಶೀ ಶತ್ರುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುತ್ತಾ ವರ್ಷಗಳ ಕಾಲ ಸಿಂಹಾಸನದಲ್ಲಿ ಹೇಗೆ ವಿರಾಜಮಾನರಾಗಿರುತ್ತಾರೆ?’’ ಎಂದು ಪ್ರಶ್ನೆಯನ್ನು ಹಾಕಿ ಅದಕ್ಕೆ ಕಾರಣಗಳನ್ನು ವಿಷದಪಡಿಸುತ್ತಾನೆ. ಕೆಲವೇ ಮಂದಿಯನ್ನು ದಂಡಿಸಿದರೂ ಅದರಿಂದ ಒಟ್ಟಾರೆ ಜನರಿಗೆ ಹಿತವಾಗುವುದಾದರೆ ಜನರು ಅದನ್ನು ತಪ್ಪೆಂದು ತಿಳಿಯುವುದಿಲ್ಲವೆಂಬುದು ಅವನ ತರ್ಕ. ‘‘ಯಾವ ಪ್ರಮಾಣದ ಹಿಂಸೆ ಮತ್ತು ಕ್ರೌರ್ಯ ಅಗತ್ಯ, ಎಂಬುದನ್ನು ಅಂದಾಜು ಮಾಡಿಕೊಳ್ಳಬೇಕು’’ ಎನ್ನುತ್ತಾನೆ. ಪ್ರಜಾ ಬೆಂಬಲದ ಅರಸೊತ್ತಿಗೆ ಮತ್ತು ಕೆಲವೇ ಮಂದಿ ಗಣ್ಯರ ಬೆಂಬಲದ ಅರಸೊತ್ತಿಗೆಯ ವ್ಯತ್ಯಾಸವನ್ನು ಗುರುತಿಸುತ್ತಾನೆ. ಧಾರ್ಮಿಕ ಸಂಸ್ಥೆಗಳ (ಕೃತಿಯಲ್ಲಿ ಚರ್ಚ್) ಒಡನಾಟದ, ಬಾಡಿಗೆ ಬಂಟರ ಮೂಲಕ, ಇತರ ದೇಶಗಳ ನೆರವಿನಿಂದ, ನಡೆಸುವ ಆಡಳಿತವನ್ನು ಚರ್ಚಿಸಿ ‘‘ಈ ಬಾಡಿಗೆ ಬಂಟರು ಇಟಲಿಗೆ ಕೊಟ್ಟ ಕೊಡುಗೆ ಗುಲಾಮಗಿರಿ ಮತ್ತು ಅಪಮಾನ.’’ ಎಂದು ಮಾರ್ಮಿಕವಾಗಿ ಸಾರುತ್ತಾನೆ. ಸೈನ್ಯದ ಅನಿವಾರ್ಯತೆ ಮತ್ತು ಅವನ್ನು ಬಳಸುವ ವಿಧಾನವನ್ನು ಸೂಚಿಸುತ್ತಾನೆ. ‘‘ದೊರೆ ಮಾಡಬೇಕಾದ ಮಾನಸಿಕ ವ್ಯಾಯಾಮವೆಂದರೆ ಇತಿಹಾಸದ ಓದು.’’ ಎನ್ನುತ್ತಾನೆ. (ಇಂದಿಗೂ ರಾಜಕಾರಣಿಗಳಲ್ಲಿ ಓದು ವುದು, ಅದರಲ್ಲೂ ಇತಿಹಾಸವನ್ನು ಓದುವವರ ಸಂಖ್ಯೆ ಕಡಿಮೆಯೇ. ಅದಕ್ಕೇ ಅವರ ಭಾಷೆ, ವಿಚಾರ, ಅಭಿವ್ಯಕ್ತಿ ಸಾಮಾನ್ಯವಾಗಿ ಕೆಳ/ಕೀಳುಮಟ್ಟದಲ್ಲಿರುತ್ತದೆ!)

ಮೆಖೈವೆಲ್ಲಿ ನೀಡುವ ನರಿ ಮತ್ತು ಸಿಂಹದ ದೃಷ್ಟಾಂತವು ಪಂಚತಂತ್ರದ ಕಥೆಯಂತಿದೆ: ‘ಬಲೆಗೆ ಬಿದ್ದ ಸಿಂಹಕ್ಕೆ ಬಲೆಯನ್ನು ಭೇದಿಸಲು ಆಗುವುದಿಲ್ಲ. ನರಿಗೆ ತೋಳಗಳಿಂದ ತನ್ನನ್ನು ರಕ್ಷಿಸಿಕೊಳ್ಳುವುದು ತಿಳಿದಿಲ್ಲ. ದೊರೆಯಾದವನು ನರಿಯಾಗಿ ಬಲೆಯನ್ನು ಭೇದಿಸಬೇಕು. ಸಿಂಹವಾಗಿ ತೋಳಗಳನ್ನು ಬೆದರಿಸಿ ಓಡಿಸಬೇಕು. ದೊರೆ ಕೇವಲ ಸಿಂಹ ಸ್ವರೂಪನಾಗಿ, ನರಿಯಾಗಲು ಮರೆತರೆ ತಾನೇನು ಮಾಡುತ್ತಿದ್ದೇನೆ ಎಂಬುದು ಅವನಿಗೇ ತಿಳಿಯುವುದಿಲ್ಲ.’
ಮೆಖೈವೆಲ್ಲಿ ದೊರೆಯ ಬಗ್ಗೆ ಹೇಳುವ ಮಾತುಗಳು ಎಲ್ಲ ಕಾಲಕ್ಕೂ ಸಲ್ಲುತ್ತವೆಯೆಂಬುದಕ್ಕೆ ಇಲ್ಲಿವೆ ಉದಾಹರಣೆಗಳು:

 ‘ದೊರೆಯಾದವನು ಮಾತಿಗೆ ತಪ್ಪದೆ ಪ್ರಾಮಾಣಿಕವಾಗಿ ನಡೆದುಕೊಂಡಾಗ ಎಲ್ಲರೂ ಅವನನ್ನು ಮೆಚ್ಚುತ್ತಾರೆ. ಆದರೆ ಉತ್ತಮ ಕಾರ್ಯಗಳನ್ನು ಮಾಡಿದ ನಾಯಕರು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಬಗ್ಗೆ ಹೆಚ್ಚು ಚಿಂತೆ ಮಾಡದಿರುವುದನ್ನು, ನಾವು ನಮ್ಮ ಕಾಲದಲ್ಲೇ ನೋಡಿದ್ದೇವೆ.’

‘ಯುದ್ಧದಲ್ಲಿ ಎರಡು ವಿಧ ಎಂಬುದನ್ನು ಓದುಗರು ನೆನಪಿನಲ್ಲಿ ಇಡಬೇಕು. ಒಂದು ಕಾನೂನು, ಇನ್ನೊಂದು ಬಲ. ಸಾಮಾನ್ಯವಾಗಿ ಮನುಷ್ಯರು ಕಾನೂನನ್ನು ಬಳಸುತ್ತಾರೆ. ಮೃಗಗಳು ಬಲವನ್ನು ಪ್ರಯೋಗಿಸುತ್ತವೆ. ಕಾನೂನಿನ ಬಳಕೆ ಆಗಾಗ ಅಸಮರ್ಪಕ ಎಂಬುದು ಮನದಟ್ಟಾಗುತ್ತದೆ. ಆಗ ಬಲ ಪ್ರಯೋಗವೇ ಸೂಕ್ತ ಎನಿಸುತ್ತದೆ.’ ‘ಪ್ರಜೆಗಳ ಪಾಲಿಗೆ ಅವನು ಪರಮ ದಯಾಳು, ಪರಮ ನಿಷ್ಠ, ಮಹಾನ್ ಮಾನವತಾವಾದಿ, ಪರಮ ಪ್ರಾಮಾಣಿಕ ಮತ್ತು ಪರಮ ಧಾರ್ಮಿಕನಂತೆ ತೋರಬೇಕು. ಧಾರ್ಮಿಕನಂತೆ ತೋರುವುದಕ್ಕಿಂತ ಮುಖ್ಯವಾದದ್ದು ಬೇರೆ ಯಾವುದೂ ಇಲ್ಲ. ಹೆಚ್ಚಿನ ಸಂಖ್ಯೆಯ ಜನ ದೊರೆಯನ್ನು ಅವನ ಹಾವಭಾವ ರೂಪಗಳಿಂದ ಅಳೆಯುತ್ತಾರೆಯೇ ಹೊರತು, ಅವನೊಡನೆ ಕಲೆತು ಪಡೆಯುವ ಅನುಭವದಿಂದಲ್ಲ. ಏಕೆಂದರೆ, ಅವರು ದೊರೆಯನ್ನು ನೋಡುತ್ತಾರೆಯೇ ವಿನಾ, ದೊರೆಯೊಡನೆ ನೇರ ಸಂಪರ್ಕ ಹೊಂದಿರುವುದಿಲ್ಲ. ದೊರೆ ತಾನೇನೆಂದು ಪ್ರಜೆಗಳಿಗೆ ತೋರಿಸಿಕೊಳ್ಳುವನೋ, ಅದನ್ನೇ ಅವನೆಂದು ಪ್ರಜೆಗಳು ಭಾವಿಸುತ್ತಾರೆ. ಎಲ್ಲೋ ಕೆಲವರಿಗೆ ಮಾತ್ರ ದೊರೆಯ ನಿಜ ಸ್ವರೂಪ ತಿಳಿದಿರುತ್ತದೆ.’

‘ಇಂದಿಗೂ ಸಹ ಒಬ್ಬ ದೊರೆಯಿದ್ದಾನೆ. ಅವನ ಹೆಸರನ್ನು ಇಲ್ಲಿ ಪ್ರಸ್ತಾಪಿಸಲು ನಾನು ಬಯಸುವುದಿಲ್ಲ. ಅವನು ಶಾಂತಿ ಮತ್ತು ನಂಬಿಕೆ ಬಗ್ಗೆ ಯಾವಾಗಲೂ ಬೋಧನೆ ಮಾಡುತ್ತಿರುತ್ತಾನೆ. ಆದರೆ ಅವನು ಅದೇ ಶಾಂತಿ ಮತ್ತು ನಂಬಿಕೆಗಳ ಪರಮ ಶತ್ರುವಾಗಿದ್ದಾನೆ. ಅವನೇನಾದರೂ ತನ್ನ ಬೋಧನೆಯನ್ನು ಅನುಷ್ಠಾನಕ್ಕೆ ತಂದಿದ್ದರೆ, ಅವನು ಹಲವಾರು ಬಾರಿ ತನ್ನ ಅಧಿಕಾರವನ್ನು ಅಥವಾ ರಾಜ್ಯವನ್ನು ಕಳೆದುಕೊಳ್ಳುತ್ತಿದ್ದ.’

ಮೆಖೈವೆಲ್ಲಿ ಹೇಳುವ ದೊರೆ ನಮ್ಮ ನಡುವೆಯೇ ಇದ್ದಾನೆಂದು ಮತ್ತು ಅವನಿಗೆ ಆದರ್ಶ ಮತ್ತು ವಾಸ್ತವದ ಸ್ಪಷ್ಟ ಕಲ್ಪನೆಯಿತ್ತೆಂದು ಅನಿಸುವುದಿಲ್ಲವೇ? ಇಂತಹ ಸಂಕೀರ್ಣ ಪಠ್ಯದ ಅನುವಾದ ಅಗತ್ಯವಿತ್ತು. ಅನುವಾದಕರು ಸಾಕಷ್ಟು ಶ್ರಮವಹಿಸಿ ಯಶಸ್ವಿಯಾಗಿದ್ದಾರೆ. ಅನುವಾದದಲ್ಲಿ ದೋಷಗಳಿಲ್ಲವೆಂದಲ್ಲ. ಕೆಲವು ವಾಕ್ಯಗಳು ಅರ್ಥವಾಗಲು ಓದುಗರು ಕಷ್ಟಪಡಬೇಕಾಗುತ್ತದೆ. ಉದಾಹರಣೆಗೆ ಕೃಪಣತೆಗೆ ಕಾರ್ಪಣ್ಯ ಎಂದು ಬಳಸಿರುವುದು (ಪುಟ 75) ಸರಿಯಲ್ಲವೆನ್ನಿಸುತ್ತದೆ. ಇವೆಲ್ಲ ಅನುವಾದಗಳಲ್ಲಿ ಸರ್ವೇಸಾಮಾನ್ಯ. ಜ್ಞಾನಪಠ್ಯಗಳ ಸಾಲಿನಲ್ಲಿ ಈ ಕೃತಿ ಅಗ್ರಸ್ಥಾನದಲ್ಲಿ ನಿಲ್ಲಬಹುದು. ಓದುಗರಿಗೆ ಇಂತಹದ್ದೊಂದು ಕೃತಿಯ ಅಗತ್ಯವಿತ್ತು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top