ಆಳಲು ಸಾಧ್ಯವಾಗದ ಉತ್ತರಪ್ರದೇಶ! | Vartha Bharati- ವಾರ್ತಾ ಭಾರತಿ

--

ಆಳಲು ಸಾಧ್ಯವಾಗದ ಉತ್ತರಪ್ರದೇಶ!

ಉತ್ತಮ ಆಡಳಿತಕ್ಕೆ ಉತ್ತರಪ್ರದೇಶವನ್ನು ವಿಭಜಿಸುವುದು ಅನಿವಾರ್ಯವೆಂಬ ವಾದವು ತೀರಾ ಇತ್ತೀಚೆಗೆ ಹೆಚ್ಚು ಬಲವನ್ನು ಪಡೆದುಕೊಳ್ಳುತ್ತಿದೆ. ಒಬ್ಬನೇ ಮುಖ್ಯಮಂತ್ರಿಯು ಒಂದೇ ಸರಕಾರದ ಪೀಠದಿಂದ ಆಡಳಿತವನ್ನು ಪರಿಣಾಮಕಾರಿಯಾಗಿ ನಡೆಸುವುದಕ್ಕೆ ತ್ರಾಸದಾಯಕವಾಗುವಷ್ಟು ಉತ್ತರ ಪ್ರದೇಶವು ತುಂಬಾ ವಿಸ್ತಾರ ಹಾಗೂ ಅತಿಯಾದ ಜನಸಂಖ್ಯೆಯಿಂದ ಕೂಡಿದ ರಾಜ್ಯವಾಗಿದೆ.


ಭಾಷಾವಾರು ಆಧಾರದಲ್ಲಿ ಪ್ರಾಂತೀಯ ಗಡಿಗಳನ್ನು ಪುನರ್‌ರೂಪಿಸಬೇಕೆಂದು ರಾಜ್ಯಗಳ ಪುನಾರಚನೆ ಆಯೋಗ (ಎಸ್‌ಆರ್‌ಸಿ)ವು ಭಾರತ ಸರಕಾರಕ್ಕೆ 1955ರ ಸೆಪ್ಟಂಬರ್‌ನಲ್ಲಿ ಸಲ್ಲಿಸಿದ ವರದಿಯಲ್ಲಿ ನೆನಪಿಸಿತ್ತು. ಎಸ್‌ಆರ್‌ಸಿ ವರದಿ ಜಾರಿಯಿಂದಾಗಿ ನಾನು ನೆಲೆಸಿರುವ ಕರ್ನಾಟಕದಂತಹ ರಾಜ್ಯಗಳು ಅಸ್ತಿತ್ವಕ್ಕೆ ಬಂದವು. ಇದರಿಂದಾಗಿ ನಾಲ್ಕು ವಿಭಿನ್ನ ಆಡಳಿತ ಪ್ರಾಂತಗಳಲ್ಲಿ ಹಂಚಿಹೋಗಿದ್ದ ಕನ್ನಡ ಭಾಷಿಕರನ್ನು ಏಕೀಕೃತ ಪ್ರಾಂತ ರಚನೆಯ ಮೂಲಕ ಒಗ್ಗೂಡಿಸಲಾಯಿತು.

ಎಸ್‌ಆರ್‌ಸಿಯಲ್ಲಿ ತೀರ್ಪುಗಾರರಾಗಿ ಎಸ್. ಫಝಲ್ ಅಲಿ(ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು) ಸಾಮಾಜಿಕ ಕಾರ್ಯಕರ್ತರಾದ ಎಚ್.ಎನ್. ಕುಂಝ್ರು ಹಾಗೂ ಇತಿಹಾಸಕಾರ ಕೆ.ಎಂ. ಪಣಿಕ್ಕರ್ ಹೀಗೆ ಮೂವರು ಸದಸ್ಯರಿದ್ದರು. ಮುಖ್ಯವರದಿಯ ಉಪಭಾಗದಲ್ಲಿ ಬರೆಯಲಾಗಿದ್ದ ಒಂದು ಆಕರ್ಷಕವಾದ ಟಿಪ್ಪಣಿಯಲ್ಲಿ ಪಣಿಕ್ಕರ್ ಅವರು ಕನ್ನಡ ಭಾಷಿಕರು, ತಮಿಳು ಭಾಷಿಕರು ಹಾಗೂ ಒಡಿಯಾ ಭಾಷಿಕರಿಗಾಗಿ ರಾಜ್ಯಗಳ ಸ್ಥಾಪನೆಯ ಜೊತೆಗೆ ಭಾರತದ ಅತಿ ದೊಡ್ಡ ರಾಜ್ಯವಾದ ಉತ್ತರಪ್ರದೇಶವನ್ನು ವಿಭಜಿಸಬೇಕೆಂದು ಎಸ್‌ಆರ್‌ಸಿ ಶಿಫಾರಸು ಮಾಡಬೇಕೆಂದು ಆಗ್ರಹಿಸಿದ್ದರು. ಜನಸಂಖ್ಯೆಯ ಮಟ್ಟಿಗೆ ಹೇಳುವುದಾದರೆ ಇತರ ಹಲವು ರಾಜ್ಯಗಳ ಒಟ್ಟು ಜನಸಂಖ್ಯೆಯನ್ನು ಒಟ್ಟುಗೂಡಿಸಿದರೂ ಉತ್ತರಪ್ರದೇಶವು ಅವುಗಳನ್ನು ಮೀರಿಸುತ್ತದೆ. ಇದರಿಂದಾಗಿ ಆ ರಾಜ್ಯವು ರಾಷ್ಟ್ರ ರಾಜಕೀಯದಲ್ಲಿ ಅಸಮಾನವಾದ ಪ್ರಭಾವವನ್ನು ಬೀರುವುದಕ್ಕೆ ಕಾರಣವಾಗಿದೆ. ಇದು ಭಾರತದ ಏಕತೆಯ ಭವಿಷ್ಯಕ್ಕೆ ಕರಾಳವಾದ ಅಪಶಕುನವೆಂದು ಇತಿಹಾಸತಜ್ಞರು ಅಭಿಪ್ರಾಯಿಸುತ್ತಾರೆ.

ಒಕ್ಕೂಟ ವ್ಯವಸ್ಥೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕಾದರೆ, ಅದರ ಘಟಕಗಳು ಕೂಡಾ ನ್ಯಾಯೋಚಿತವಾದ ಸಮತೋಲನವನ್ನು ಹೊಂದಿರಬೇಕು. ಒಂದು ರಾಜ್ಯವು ತುಂಬಾ ದೊಡ್ಡದಿದ್ದಲ್ಲಿ ಅದು ಉಳಿದ ರಾಜ್ಯಗಳಲ್ಲಿ ಸಂದೇಹವನ್ನು ಹಾಗೂ ಅಸಮಾಧಾನವನ್ನು ಸೃಷ್ಟಿಸುತ್ತದೆ ಮಾತ್ರವಲ್ಲದೆ ಫೆಡರಲ್ ಸಂರಚನೆಯನ್ನು ಧಿಕ್ಕರಿಸುವಂತಹ ಶಕ್ತಿಗಳ ಉದ್ಭವಕ್ಕೆ ಕಾರಣವಾಗುವ ಸಾಧ್ಯತೆಯಿರುತ್ತದೆ ಹಾಗೂ ಆ ಮೂಲಕ ದೇಶದ ಏಕತೆಗೆ ಅಪಾಯವುಂಟಾಗುತ್ತದೆ. ಪಣಿಕ್ಕರ್ ಮುಂದುವರಿದು ಹೇಳುತ್ತಾರೆ. ‘‘ಒಂದು ವೇಳೆ ಯಾರಾದರೂ ವಾಸ್ತವವಾದಿಯಾಗಿದ್ದು, ಜಗತ್ತಿನಾದ್ಯಂತದ ಸರಕಾರಗಳ ಕಾರ್ಯನಿರ್ವಹಣೆಯನ್ನು ಪರಿಗಣನೆಗೆ ತೆಗೆದುಕೊಂಡಲ್ಲಿ, ಫೆಡರಲ್ ಆಡಳಿತ ವ್ಯವಸ್ಥೆಯಲ್ಲಿರುವ ಒಂದು ಅತ್ಯಂತ ದೊಡ್ಡ ಘಟಕವು ತನಗೆ ಪ್ರಾಪ್ತವಾಗಿರುವ ಪ್ರಭಾವವನ್ನು ದುರ್ಬಳಕೆ ಮಾಡಿಕೊಳ್ಳಬಹುದಾಗಿದೆ ಹಾಗೂ ಅದರ ವಿರುದ್ಧ ಉಳಿದ ಎಲ್ಲಾ ಸಹ ಘಟಕಗಳು ಅಸಮಾಧಾನವನ್ನು ವ್ಯಕ್ತಪಡಿಸುವ ಸಾಧ್ಯತೆಯಿರುತ್ತದೆ. ಆಧುನಿಕ ಸರಕಾರಗಳನ್ನು ಪಕ್ಷದ ಕಾರ್ಯನಿರ್ವಹಣಾ ಅಂಗ ದೊಡ್ಡ ಮಟ್ಟದಲ್ಲಿ ಅಥವಾ ಸಣ್ಣ ಮಟ್ಟದಲ್ಲಿ ನಿಯಂತ್ರಿಸುತ್ತವೆ. ಹೀಗಾಗಿ ಸಂಖ್ಯೆಯ ದೃಷ್ಟಿಯಿಂದ ಬಲವಾಗಿರುವ ಗುಂಪಿನ ಮತದಾನದ ಶಕ್ತಿಯು ಪ್ರಭಾವಶಾಲಿಯಾಗಿರುತ್ತದೆ. ಆದುದರಿಂದ ‘‘ಯಾವುದೇ ಘಟಕಕ್ಕೆ ಅನುಚಿತವಾದ ರೀತಿಯಲ್ಲಿ ರಾಜಕೀಯ ಪ್ರಭಾವವನ್ನು ಬೀರುವಂತಹ ಸ್ಥಿತಿಯಲ್ಲಿ ಇರಿಸುವುದು ಯೋಗ್ಯವೇ?’’ ಎಂದು ಇತಿಹಾಸಕಾರ ಪಣಿಕ್ಕರ್ ಪ್ರಶ್ನಿಸಿದ್ದಾರೆ.

ಪಣಿಕ್ಕರ್ ಅವರ ಟಿಪ್ಪಣಿಯು ವಿವೇಚನಾಯುತವಾಗಿತ್ತು ಹಾಗೂ ಮುನ್ನೋಟವನ್ನು ಹೊಂದಿತ್ತು. 1955ರಲ್ಲೇ ಕೇರಳ ಮೂಲದ ಈ ಇತಿಹಾಸತಜ್ಞ, ಫೆಡರಲ್ ಘಟಕಗಳಿಗೆ ಸಮಾನತೆಯನ್ನು ನಿರಾಕರಿಸುವುದರಿಂದ ಉತ್ತರಪ್ರದೇಶ ಹೊರತಾದ ರಾಜ್ಯಗಳಲ್ಲಿ ಅಪನಂಬಿಕೆ ಹಾಗೂ ಅಸಮಾಧಾನದ ಭಾವನೆಗಳನ್ನು ಸೃಷ್ಟಿಸುತ್ತದೆ. ದಕ್ಷಿಣದ ರಾಜ್ಯಗಳು ಮಾತ್ರವಲ್ಲದೆ ಪಂಜಾಬ್, ಪಶ್ಚಿಮಬಂಗಾಳ ಮತ್ತಿತರ ರಾಜ್ಯಗಳು ಕೂಡಾ ಪ್ರಸಕ್ತ ಸರಕಾರಿ ಸಂರಚನಾ ವ್ಯವಸ್ಥೆಯು ಅಖಿಲ ಭಾರತ ಮಟ್ಟದ ವಿಷಯಗಳಲ್ಲಿ ಉತ್ತರಪ್ರದೇಶದ ಪ್ರಾಬಲ್ಯಕ್ಕೆ ಕಾರಣವಾಗಿದೆಯೆಂಬ ಅಭಿಪ್ರಾಯವನ್ನು ಸಾಮಾನ್ಯವಾಗಿ ವ್ಯಕ್ತಪಡಿಸುತ್ತಿವೆ ಎಂದಿದ್ದರು.

 ಈ ಅಸಮತೋಲನವನ್ನು ಹೇಗೆ ಬಗೆಹರಿಸಲು ಸಾಧ್ಯವಿದೆ?. ಬಿಸ್ಮಾರ್ಕ್ ಕಾಲದ ಜರ್ಮನಿಯ ಉದಾಹರಣೆಯನ್ನು ಇಲ್ಲಿ ಪಣಿಕ್ಕರ್ ನೀಡಿದ್ದಾರೆ. ಜನಸಂಖ್ಯೆ ಹಾಗೂ ಆರ್ಥಿಕ ಸಾಮರ್ಥ್ಯದಿಂದ ಪ್ರಬಲವಾಗಿದ್ದ ಪ್ರಶಿಯಾ ರಾಜ್ಯಕ್ಕೆ ರಾಷ್ಟ್ರೀಯ ಶಾಸಕಾಂಗಸಭೆಯಲ್ಲಿ ಅನುಪಾತಕ್ಕೆ ಹೋಲಿಸಿದರೆ ಕಡಿಮೆ ಪ್ರಾತಿನಿಧ್ಯವನ್ನು ನೀಡಲಾಗಿತ್ತು. ಏಕೀಕೃತ ಜರ್ಮನಿಯಲ್ಲಿ ಕಡಿಮೆ ಜನಸಂಖ್ಯೆಯ ರಾಜ್ಯಗಳಿಗೆ ಅತಿಯಾಗಿ ಪ್ರಶಿಯಾಕರಣಗೊಳ್ಳಬಾರದೆಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಹೀಗೆ ಮಾಡಲಾಗಿತ್ತು. ಪಣಿಕ್ಕರ್ ಅವರು ಅಮೆರಿಕದ ಉದಾಹರಣೆಯ ನ್ನು ಕೂಡಾ ಇಲ್ಲಿ ಉಲ್ಲೇಖಿಸಬಹುದಾಗಿತ್ತು. ಆ ದೇಶದಲ್ಲಿಯೂ ಕ್ಯಾಲಿಫೋರ್ನಿಯಾ ದಂತಹ ಅಧಿಕ ಜನಸಂಖ್ಯೆಯ ರಾಜ್ಯಗಳ ಪ್ರಾಬಲ್ಯವನ್ನು ತಪ್ಪಿಸುವುದಕ್ಕಾಗಿ ಪ್ರತಿಯೊಂದು ರಾಜ್ಯಕ್ಕೂ ಅದರ ಗಾತ್ರವನ್ನು ಪರಿಗಣನೆಗೆ ತೆಗೆದುಕೊಳ್ಳದೆ ಸೆನೆಟ್‌ನಲ್ಲಿ ತಲಾ ಎರಡು ಸ್ಥಾನಗಳನ್ನು ನೀಡಲಾಗಿದೆ.

ಆದಾಗ್ಯೂ ಈ ಪೂರ್ವನಿದರ್ಶನಗಳನ್ನು ಭಾರತದ ಸಂವಿಧಾನವು ಪರಿಗಣನೆಗೆ ತೆಗೆದುಕೊಂಡಿಲ್ಲ. ಅದು ಜನಸಂಖ್ಯಾ ಪ್ರಮಾಣಕ್ಕನುಗುಣವಾಗಿ ಆಯಾ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ನಿರ್ಧರಿಸಿದೆ. ಸೈದ್ಧಾಂತಿಕವಾಗಿ 1955ರಲ್ಲಿ 499 ಮಂದಿ ಲೋಕಸಭಾ ಸದಸ್ಯರ ಪೈಕಿ ಉತ್ತರಪ್ರದೇಶವು 86 ಸಂಸದರನ್ನು ಹೊಂದಿತ್ತು (2000ನೇ ಇಸವಿಯಲ್ಲಿ ಉತ್ತರಾಖಂಡ ರಾಜ್ಯ ರಚನೆಯಾದ ವೇಳೆಗೆ 543 ಲೋಕಸಭಾ ಸ್ಥಾನಗಳಲ್ಲಿ ಉತ್ತರಪ್ರದೇಶದ ಸಂಸತ್‌ಸ್ಥಾನಗಳ ಸಂಖ್ಯೆ 80ಕ್ಕೆ ಇಳಿದಿತ್ತು). ಆಡಳಿತ ಹಾಗೂ ನೀತಿ ನಿರೂಪಣೆಯ ವಿಷಯಕ್ಕೆ ಸಂಬಂಧಿಸಿ ಲೋಕಸಭೆಯಲ್ಲಿ ಇಂತಹ ರಾಜ್ಯಗಳ ಪ್ರಭಾವವನ್ನು ತಪ್ಪಿಸುವುದಕ್ಕೆ ಇರುವ ಏಕೈಕ ಪರಿಹಾರವೆಂದರೆ ಅತಿಯಾಗಿ ಬೆಳೆದಿರುವ ರಾಜ್ಯವನ್ನು ವಿಭಜಿಸಿ ಪುನಾರಚಿಸುವುದಾಗಿದೆ ಎಂದು ಪಣಿಕ್ಕರ್ ಪ್ರತಿಪಾದಿಸಿದ್ದಾರೆ. ಉತ್ತರಪ್ರದೇಶವನ್ನು ಎರಡಾಗಿ ವಿಭಜಿಸಿ ಮೀರತ್, ಆಗ್ರಾ, ರೋಹಿಲ್‌ಖಂಡ್ ಹಾಗೂ ಝಾನ್ಸಿ ವಿಭಾಗಗಳನ್ನು ಒಳಗೊಂಡಂತಹ ಹೊಸ ಆಗ್ರಾ ರಾಜ್ಯವನ್ನು ಸೃಷ್ಟಿಸಬೇಕೆಂದು ಅವರು ಸೂಚಿಸಿದ್ದರು.

ಆದಾಗ್ಯೂ ಉತ್ತರಪ್ರದೇಶವನ್ನು ವಿಭಜಿಸುವುದು ಅತ್ಯಗತ್ಯವೆಂದು ಪಣಿಕ್ಕರ್‌ಗೆ ಅನಿಸಿದ್ದರೂ, ಆಯೋಗದ ಇತರ ಸದಸ್ಯರು ಹಾಗೆ ಯೋಚಿಸಲಿಲ್ಲ. ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಉತ್ತರ ಪ್ರದೇಶದವರಾಗಿದ್ದರೂ ಆಡಳಿತಾರೂಢ ಕಾಂಗ್ರೆಸ್‌ಗೂ ಆ ಬಗ್ಗೆ ಹೆಚ್ಚಿನ ಸ್ಪಷ್ಟತೆ ಇರಲಿಲ್ಲ. ಉತ್ತರಪ್ರದೇಶವು ಕಾಂಗ್ರೆಸ್ ನೇತೃತ್ವದ ಸ್ವಾತಂತ್ರ ಹೋರಾಟದ ಕೇಂದ್ರಬಿಂದುವಾಗಿತ್ತು. 1955ರಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದ ರಾಜಕೀಯದಲ್ಲಿ ಅಗಾಧವಾದ ಪ್ರಾಬಲ್ಯವನ್ನು ಸ್ಥಾಪಿಸಿತ್ತು.

ಡಾ. ಅಂಬೇಡ್ಕರ್ ಅವರು ರಾಜ್ಯಗಳ ಪುನಾರಚನಾ ಆಯೋಗದ ವರದಿಯನ್ನು ಮೊದಲು ಓದಿದವರಾಗಿದ್ದರು. ಅಂತರ್‌ದೃಷ್ಟಿಯಿಂದ ಕೂಡಿದಂತಹ ಕರಪತ್ರವೊಂದರಲ್ಲಿ ಅವರು ತನ್ನ ಪ್ರತಿಕ್ರಿಯೆಯನ್ನು ಸವಿವರವಾಗಿ ಬರೆದಿದ್ದು, ಅದು 1955ರ ಡಿಸೆಂಬರ್‌ನಲ್ಲಿ ಪ್ರಕಟವಾಗಿತ್ತು. ಅಂಬೇಡ್ಕರ್ ಅವರು ಅದರಲ್ಲಿ ಉತ್ತರಪ್ರದೇಶದ ಕುರಿತ ಪಣಿಕ್ಕರ್ ಅವರ ಟಿಪ್ಪಣಿಯನ್ನು ಅನುಮೋದಿಸಿದ್ದರು. ರಾಜ್ಯಗಳ ನಡುವೆ ಜನಸಂಖ್ಯೆ ಹಾಗೂ ಅಧಿಕಾರದ ಅಸಮಾನತೆಯು ಖಂಡಿತವಾಗಿಯೂ ದೇಶಕ್ಕೆ ಪಿಡುಗಾಗಿ ಪರಿಣಮಿಸಲಿದೆ ಎಂದರು. ಅಸಮಾನತೆಯ ವಿರುದ್ಧ ಪರಿಹಾರವನ್ನು ಒದಗಿಸುವುದು ಅತ್ಯಂತ ಅಗತ್ಯವೆಂದು ಅಂಬೇಡ್ಕರ್ ಭಾವಿಸಿದ್ದರು. ಪಣಿಕ್ಕರ್ ಸೂಚಿಸಿರುವಂತೆ ಉತ್ತರಪ್ರದೇಶವನ್ನು ಕೇವಲ ಎರಡಲ್ಲ ಮೂರು ರಾಜ್ಯಗಳಾಗಿ ವಿಭಜಿಸಬೇಕೆಂದು ಅವರು ಪ್ರತಿಪಾದಿಸಿದ್ದರು. ಆ ಮೂಲಕ ಆ ಮೂರು ರಾಜ್ಯಗಳಿಗೆ ಮೀರತ್, ಕಾನ್ಪುರ ಹಾಗೂ ಅಲಹಾಬಾದ್ ರಾಜಧಾನಿಗಳಾಗಿರಬೇಕು ಎಂದವರು ಸೂಚಿಸಿದ್ದರು. ಅಂಬೇಡ್ಕರ್ ಅವರ ಪ್ರಸ್ತಾವಕ್ಕೆ ಕೇಂದ್ರ ಸರಕಾರವು ಗಾಢ ವೌನ ವಹಿಸಿತ್ತು.

ಉತ್ತರಪ್ರದೇಶವನ್ನು ವಿಭಜಿಸಬೇಕೆಂದು ಪಣಿಕ್ಕರ್ ಹಾಗೂ ಅಂಬೇಡ್ಕರ್ ಅವರು ಸೂಚಿಸಿದ ಐದೂವರೆ ದಶಕಗಳ ಬಳಿಕ, 2011ರಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಮಾಯಾವತಿಯವರು ಆ ನಿಟ್ಟಿನಲ್ಲಿ ನೂತನ ಪ್ರಸ್ತಾವವನ್ನು ಮಾಡಿದ್ದರು. ಈಗ ಅಸ್ತಿತ್ವದಲ್ಲಿರುವ ಉತ್ತರಪ್ರದೇಶದದಿಂದ ಪೂರ್ವಾಂಚಲ, ಬುಂದೇಲಖಂಡ, ಅವಧ್ ಪ್ರದೇಶ ಹಾಗೂ ಪಶ್ಚಿಮ ಪ್ರದೇಶ ಎಂಬ ನಾಲ್ಕು ಸಣ್ಣ ರಾಜ್ಯಗಳನ್ನು ರಚಿಸಬೇಕೆಂಬ ನಿರ್ಣಯವನ್ನು ಅವರು ಉತ್ತರಪ್ರದೇಶ ವಿಧಾನಸಭೆಯಲ್ಲಿ ಅಂಗೀಕರಿಸಿದ್ದರು. ಆದರೆ ಈ ಪ್ರಸ್ತಾವವನ್ನು ಸಮಾಜವಾದಿ ಪಕ್ಷವು ಕಟುವಾಗಿ ವಿರೋಧಿಸಿದ್ದರೆ, ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವು ಆ ಪ್ರಸ್ತಾವದಲ್ಲಿ ಯಾವುದೇ ತಿರುಳಿಲ್ಲವೆಂದು ಭಾವಿಸಿತ್ತು.

ಉತ್ತಮ ಆಡಳಿತಕ್ಕೆ ಉತ್ತರಪ್ರದೇಶವನ್ನು ವಿಭಜಿಸುವುದು ಅನಿವಾರ್ಯವೆಂಬ ವಾದವು ತೀರಾ ಇತ್ತೀಚೆಗೆ ಹೆಚ್ಚು ಬಲವನ್ನು ಪಡೆದುಕೊಳ್ಳುತ್ತಿದೆ. ಒಬ್ಬನೇ ಮುಖ್ಯಮಂತ್ರಿಯು ಒಂದೇ ಸರಕಾರದ ಪೀಠದಿಂದ ಆಡಳಿತವನ್ನು ಪರಿಣಾಮಕಾರಿಯಾಗಿ ನಡೆಸುವುದಕ್ಕೆ ತ್ರಾಸದಾಯಕವಾಗುವಷ್ಟು ಉತ್ತರ ಪ್ರದೇಶವು ತುಂಬಾ ವಿಸ್ತಾರ ಹಾಗೂ ಅತಿಯಾದ ಜನಸಂಖ್ಯೆಯಿಂದ ಕೂಡಿದ ರಾಜ್ಯವಾಗಿದೆ.

ಅಭಿವೃದ್ಧಿಯ ಸೂಚಕಗಳಲ್ಲಿ ಭಾರತದ ರಾಜ್ಯಗಳಲ್ಲೇ ಉತ್ತರ ಪ್ರದೇಶವು ಅತ್ಯಂತ ಕಳಪೆ ಸ್ಥಾನದಲ್ಲಿದೆ. ಅದು ಆರ್ಥಿಕವಾಗಿ ಮಾತ್ರವಲ್ಲದೆ ಸಾಮಾಜಿಕವಾಗಿ ಹಿಂದುಳಿದ ರಾಜ್ಯವಾಗಿದೆ. ಬಹುಸಂಖ್ಯಾತವಾದವನ್ನು ಉತ್ತೇಜಿಸುವುದರಲ್ಲೇ ಉತ್ತರಪ್ರದೇಶದ ರಾಜಕೀಯ ಸಂಸ್ಕೃತಿಯು ತನ್ನ ಗಮನವನ್ನು ಕೇಂದ್ರೀಕರಿಸಿರುವುದು ಕೂಡಾ ಇದಕ್ಕೊಂದು ಕಾರಣವಾಗಿದೆ. ಈ ರಾಜ್ಯವು ಅತಿಯಾಗಿ ಪಿತೃಪ್ರಧಾನ ವ್ಯವಸ್ಥೆಯನ್ನು ಅನುಸರಿಸುತ್ತಿರುವುದು ಇನ್ನೊಂದು ಕಾರಣವಾಗಿದೆ. ಮೂರನೆಯದಾಗಿ ಉತ್ತರಪ್ರದೇಶದ ಹಿಂದುಳಿಯುವಿಕೆಗೆ ಜನಸಂಖ್ಯೆಯು ಖಂಡಿತವಾಗಿಯೂ ಇನ್ನೊಂದು ಕಾರಣವಾಗಿದೆ. 20 ಕೋಟಿಗೂ ಅಧಿಕ ಜನಸಂಖ್ಯೆ ಯಿರುವ ಈ ರಾಜ್ಯವು, ಜಗತ್ತಿನಲ್ಲಿ ಐದು ದೇಶಗಳನ್ನು ಹೊರತುಪಡಿಸಿ ಉಳಿದೆಲ್ಲಾ ದೇಶಗಳಿಗಿಂತ ಹೆಚ್ಚು ಜನರನ್ನು ಹೊಂದಿದೆ.

2017ರ ಫೆಬ್ರವರಿಯಲ್ಲಿ ಉತ್ತರಪ್ರದೇಶದಲ್ಲಿ ಕಳೆದ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಮೊದಲು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯಲ್ಲಿ ನಾನು ಬರೆದ ಅಂಕಣದಲ್ಲಿ ಉತ್ತರಪ್ರದೇಶದ ವಿಭಜನೆಯ ಕುರಿತ ಹೊಸತಾಗಿ ತಲೆಯೆತ್ತಿರುವ ವಾದವನ್ನು ಉಲ್ಲೇಖಿಸಿದ್ದೆ. ‘ಉತ್ತರಪ್ರದೇಶ’ವನ್ನು ಇಂಗ್ಲಿಷ್ ಅಕ್ಷರಗಳಲ್ಲಿ ಬರೆದರೆ, ಅದರ ಮೊದಲ ಅಕ್ಷರವಾದ ‘ಯು’ ಎಂಬ ಪದವು ಅನ್‌ಗವರ್ನೇಬಲ್ (ಆಡಳಿತ ನಡೆಸಲು ಸಾಧ್ಯವಿಲ್ಲದ್ದು) ಎಂಬುದನ್ನು ಸಂಕೇತಿಸುತ್ತದೆ ಎಂದು ವಿಮರ್ಶಾತ್ಮಕವಾಗಿ ಹೇಳಿದ್ದೆ. ಹಾಲಿ ವಿಧಾನಸಭಾ ಚುನಾವಣೆಯಲ್ಲಿ ಯಾರೇ ಗೆದ್ದು ಬಂದರೂ ಆ ರಾಜ್ಯದ ಸ್ಥಿತಿಗತಿ ಬದಲಾಗುವುದಿಲ್ಲವೆಂದು ಹೇಳಿದೆ. ಉತ್ತರಪ್ರದೇಶದಂತಹ ರೋಗಗ್ರಸ್ತ ರಾಜ್ಯವು ಕೊನೆಗೂ ಆರೋಗ್ಯವಾಗಿರಬೇಕಾದರೆ ಮೊದಲಿಗೆ ಅದನ್ನು ಮೂರು ಅಥವಾ ನಾಲ್ಕು ಸ್ವಯಮಾಡಳಿತ ಭಾಗಗಳಾಗಿ ವಿಭಜಿಸಬೇಕೆಂದು ಸಲಹೆ ಮಾಡಿದ್ದೆ.

ಭಾರತದ ಒಳಿತಿಗಾಗಿ ಹಾಗೂ ತನ್ನದೇ ನಿವಾಸಿಗಳ ಒಳಿತಿಗಾಗಿ ಉತ್ತರ ಪ್ರದೇಶವವನ್ನು ಮೂರು ಇಲ್ಲವೇ ನಾಲ್ಕು ಪ್ರತ್ಯೇಕ ರಾಜ್ಯಗಳಾಗಿ ವಿಭಜಿಸಬೇಕಾಗಿದೆ. ಇವು ಪ್ರತಿಯೊಂದು ಸ್ವಂತ ವಿಧಾನಸಭೆ ಹಾಗೂ ಸಚಿವ ಸಂಪುಟವನ್ನು ಹೊಂದಿರಬೇಕು. ದುರಂತವೆಂದರೆ, ಇದು ಸಂಭವಿಸುವ ಸಾಧ್ಯತೆ ತೀರಾ ಕಡಿಮೆಯಾಗಿದೆ. ನರೇಂದ್ರ ಮೋದಿ ಹಾಗೂ ಅವರ ಪಕ್ಷಕ್ಕೆ ಉತ್ತಮ ಆಡಳಿತಕ್ಕಿಂತಲೂ ಹೆಚ್ಚಾಗಿ ಅಧಿಕಾರ ಹಿಡಿಯುವುದು ಮತ್ತು ಅದನ್ನು ಉಳಿಸಿಕೊಳ್ಳುವುದೇ ಹೆಚ್ಚು ಮುಖ್ಯವಾಗಿ ಬಿಟ್ಟಿದೆ. 2014 ಹಾಗೂ 2019ರ ಲೋಕಸಭಾ ಚುನಾವಣೆಗಳಲ್ಲಿ ಉತ್ತರಪ್ರದೇಶದಿಂದ ಬಿಜೆಪಿಯು ಕ್ರಮವಾಗಿ 71 ಹಾಗೂ 62 ಸ್ಥಾನಗಳನ್ನು ಗೆದ್ದಿತ್ತು. ಒಟ್ಟಾರೆ ಬಹುಮತವನ್ನು ಪಡೆಯಲು ಈ ಸ್ಥಾನಗಳು ನಿರ್ಣಾಯಕವಾದ ಪಾತ್ರವನ್ನು ವಹಿಸಿದ್ದವು. ಆರ್ಥಿಕತೆಯ ನಿರ್ವಹಣೆಯಲ್ಲಿ ಹಾಗೂ ಕೊರೋನ ಸಾಂಕ್ರಾಮಿಕದ ನಿಯಂತ್ರಣದಲ್ಲಿ ತನ್ನ ವೈಫಲ್ಯಗಳು 2024ರ ಲೋಕಸಭಾ ಚುನಾವಣೆಯ ಹೊತ್ತಿಗೆ ಮರೆತುಹೋಗಬಹುದೆಂಬ ಆಶಾವಾದವನ್ನು ಮೋದಿ ಸರಕಾರವು ಹೊಂದಿದೆ. ರಾಮಮಂದಿರ ನಿರ್ಮಾಣವನ್ನು ಆಧರಿಸಿದ ಆಕ್ರಮಣಕಾರಿ ಹಿಂದುತ್ವದ ಆಜೆಂಡಾ ಹಾಗೂ ಮುಸ್ಲಿಮರ ಜನಸಂಖ್ಯಾ ವಿಸ್ತರಣೆಯ ಕುರಿತಾಗಿ ಭೀತಿಯನ್ನು ಸೃಷ್ಟಿಸುವ ಮೂಲಕ ಹಿಂದೂಗಳ ಬೆಂಬಲವನ್ನು ತನ್ನ ಪರವಾಗಿ ಧ್ರುವೀಕರಿಸುವ ಮೂಲಕ ಮತ್ತೊಮ್ಮೆ ಉತ್ತರಪ್ರದೇಶದ 80 ಲೋಕಸಭಾ ಸ್ಥಾನಗಳ ಪೈಕಿ ಬಹುತೇಕ ಸ್ಥಾನಗಳನ್ನು ಪಡೆಯುವ ಗುರಿಯನ್ನು ಅದು ಇರಿಸಿಕೊಂಡಿದೆ.

ಅವಿಭಜಿತವಾಗಿರುವ ಉತ್ತರ ಪ್ರದೇಶವು ಸಮಸ್ಯೆಗಳಿಂದ ಹೈರಾಣಾಗಿಬಿಟ್ಟಿದೆ ಹಾಗೂ ಜಡ್ಡುಗಟ್ಟಿದ ಸ್ಥಿತಿಯಲ್ಲಿದ್ದು, ತನ್ನ ನಕಾರಾತ್ಮಕ ನೆರಳನ್ನು ದೇಶದ ಇತರ ಭಾಗಗಳಿಗೂ ಆವರಿಸಿದೆ. ಈ ರಾಜ್ಯದ ಹಾಗೂ ಭಾರತದ ಭವಿಷ್ಯವು ಪ್ರಸಕ್ತ ಓರ್ವ ವ್ಯಕ್ತಿ ಹಾಗೂ ಆತನ ಪಕ್ಷದ ರಾಜಕೀಯ ಆಕಾಂಕ್ಷೆಗಳಿಗೆ ಒತ್ತೆಯಾಳಾಗಿಬಿಟ್ಟಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top