​ಡೆಸ್ಮಂಡ್ ಟುಟು ನೆನಪಿನಲಿ... | Vartha Bharati- ವಾರ್ತಾ ಭಾರತಿ

--

​ಡೆಸ್ಮಂಡ್ ಟುಟು ನೆನಪಿನಲಿ...

ಡೆಸ್ಮಂಡ್ ಟುಟು ಅವರೊಂದಿಗೆ ನನಗೆ ಎಳ್ಳಷ್ಟೂ ವೈಯಕ್ತಿಕ ನಂಟು ಇಲ್ಲದೆ ಇದ್ದರೂ ಅವರ ನಿಧನವು ನನಗೆ ದುಃಖವನ್ನು ತಂದಿದೆ. ಅವರಿಂದ ಪ್ರೇರಣೆ ಪಡೆದಿದ್ದ ಅಮೆರಿಕದ ವಿದ್ಯಾರ್ಥಿ ಪ್ರತಿಭಟನೆ ಹಾಗೂ ಎರಡು ದಶಕಗಳ ನಂತರ ನನ್ನ ಊರಿನಲ್ಲಿ ಅವರೊಂದಿಗಿನ ಸಂಕ್ಷಿಪ್ತ ಭೇಟಿ ನೆನಪಿಗೆ ಬರುತ್ತದೆ. ವರ್ಣಭೇದವಾದಿ ಸರಕಾರದ ಜನಾಂಗೀಯ ಬರ್ಬರತೆಯ ವಿರುದ್ಧ ನೇರವಾಗಿ ಹೋರಾಡಿದಂತಹ ಅವರು ದಕ್ಷಿಣ ಆಫ್ರಿಕದ ಆತ್ಮಸಾಕ್ಷಿಯಾಗಿದ್ದರು. ಅಲ್ಲದೆ ವರ್ಣಭೇದವಾದಿ ಸರಕಾರದ ಆನಂತರ ಅಧಿಕಾರಕ್ಕೇರಿದ ಆಡಳಿತದಲ್ಲಿದ್ದ ಭ್ರಷ್ಟಾಚಾರ ಹಾಗೂ ಆಫ್ರಿಕನ್ ನ್ಯಾಶನಲ್ ಕಾಂಗ್ರೆಸ್‌ನ ಸ್ವಜನಪಕ್ಷಪಾತದ ವಿರುದ್ಧ ಧ್ವನಿಯೆತ್ತಿದ್ದರು.


ಕಳೆದ ಕೆಲವು ವಾರಗಳಿಂದೀಚೆಗೆ ನಾನು ದಕ್ಷಿಣ ಆಫ್ರಿಕದ ಬಗ್ಗೆ ತುಂಬಾ ಯೋಚಿಸಿದ್ದೇನೆ. ಭಾಗಶಃ ಇದಕ್ಕೆ ಒಂದು ಕಾರಣ ಅಲ್ಲಿ ಭಾರತವು ಕ್ರಿಕೆಟ್ ಟೆಸ್ಟ್ ಸರಣಿಯನ್ನು ಆಡಲಿರುವುದಾಗಿದೆ.ಆದರೆ ಅದಕ್ಕಿಂತಲೂ ಮಿಗಿಲಾದ ಕಾರಣವೆಂದರೆ ವರ್ಣಭೇದ ವಿರೋಧಿ ಹೋರಾಟದ ಮಹಾನ್ ದಿಗ್ಗಜರಲ್ಲಿ ಕೊನೆಯವರಾದ ಡೆಸ್ಮಂಡು ಟುಟು ಅವರ ನಿಧನ. ದಕ್ಷಿಣ ಆಫ್ರಿಕದಲ್ಲಿ ತನ್ನ ಸಾಧನೆ, ಕಾರ್ಯಗಳಿಂದಾಗಿ ಅವರು ಜನಪ್ರಿಯರಾಗಿದ್ದಾರಾದರೂ, ಹೊರದೇಶಗಳಲ್ಲಿ ನಡೆಯುತ್ತಿರುವ ಅನ್ಯಾಯ, ದಬ್ಬಾಳಿಕೆಗಳ ವಿರುದ್ಧ ಧ್ವನಿಯೆತ್ತಿದ್ದಕ್ಕಾಗಿಯೂ ಅವರು ವಿಶ್ವಸಮುದಾಯದ ಗೌರವಾದರಗಳಿಗೆ ಪಾತ್ರರಾಗಿದ್ದರು. ಬಹುಶಃ ಅವರು ಜಗತ್ತಿನ ಆತ್ಮಸಾಕ್ಷಿಗೆ ತನ್ನ ಇತರ ಯಾವುದೇ ಸಮಕಾಲೀನರಿಗಿಂತ ಹೆಚ್ಚು ಹತ್ತಿರವಾಗಿದ್ದರು.

ನಾನು ಮೊದಲ ಬಾರಿಗೆ ಡೆಸ್ಮಂಡ್ ಟುಟು ಅವರನ್ನು 1986ರ ಜನವರಿಯಲ್ಲಿ ಟಿವಿ ಪರದೆಯಲ್ಲಿ ಕಂಡಿದ್ದೆ. ನಾನು ಅಮೆರಿಕದಲ್ಲಿ ಬೋಧಕನಾಗಿದ್ದಾಗ, ಅಲ್ಲಿಗೆ ಈ ಕ್ರೈಸ್ತಧರ್ಮಗುರು ಭೇಟಿ ನೀಡಿದ್ದರು. ದಕ್ಷಿಣ ಆಫ್ರಿಕದ ಜನಾಂಗೀಯವಾದಿ ಆಡಳಿತವನ್ನು ಕೆಲವೊಮ್ಮೆ ಯುಕ್ತಿಯಿಂದ ಹಾಗೂ ಇನ್ನು ಕೆಲವೊಮ್ಮೆ ಬಹಿರಂಗವಾಗಿ ಬೆಂಬಲಿಸುತ್ತಿದ್ದ ಅಮೆರಿಕ ಹಾಗೂ ಅಮೆರಿಕನ್ನರನ್ನು ಎಚ್ಚರಿಸಲು ಅವರು ಬಯಸಿದ್ದರು. ಅಮೆರಿಕ ಪ್ರವಾಸದ ಸಂದರ್ಭ ಅವರು ಜನರಲ್ ಮೋಟಾರ್ಸ್‌ನ ವರಿಷ್ಠ ಸೇರಿದಂತೆ ಕಾರ್ಪೊರೇಟ್ ಸಂಸ್ಥೆಗಳ ಮುಖ್ಯಸ್ಥರನ್ನು ಮಾತ್ರವಲ್ಲದೆ ಅಮೆರಿಕದ ಮಹಾನ್ ಹಾಗೂ ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ಅಧ್ಯಕ್ಷರನ್ನು ಭೇಟಿ ಮಾಡಿದ್ದರು. ದಕ್ಷಿಣ ಆಫ್ರಿಕದಲ್ಲಿ ಅತ್ಯಂತ ಗಣನೀಯವಾದ ಹಾಗೂ ಲಾಭದಾಯಕವಾದ ಹೂಡಿಕೆಗಳನ್ನು ಹಿಂದೆಗೆದುಕೊಳ್ಳುವಂತೆ ಅವರು ಆಗ್ರಹಿಸಿದ್ದರು.

 ಅಮೆರಿಕದ ಪ್ರವಾಸದ ಸಂದರ್ಭ ಟುಟು ಅವರು ಮನಸೆಳೆಯುವ ವ್ಯಕ್ತಿಯಾಗಿ ಮಾತ್ರವಲ್ಲದೆ ಉಕ್ಕಿನಂತಹ ದಿಟ್ಟತನವನ್ನು ಮೈಗೂಡಿಸಿಕೊಂಡಂತಹ ಕ್ರಿಯಾಶೀಲ, ಹಾಸ್ಯಪ್ರಜ್ಞೆಯವರಾಗಿ ಕಂಡುಬಂದಿದ್ದರು. ಶ್ರೀಮಂತ ಹಾಗೂ ಪ್ರಭಾವಿ ವ್ಯಕ್ತಿಗಳನ್ನು ಭೇಟಿಯಾಗುವುದರ ಜೊತೆಗೆ, ಟುಟು ಅವರು 1960ರ ದಶಕದಲ್ಲಿ ಅಮೆರಿಕದ ಮಾನವಹಕ್ಕುಗಳ ಹೋರಾಟದಲ್ಲಿ ಪಾಲ್ಗೊಂಡ ವ್ಯಕ್ತಿಗಳ ಜೊತೆ ಸಮಾಲೋಚನೆ ನಡೆಸಿದರು. ಟುಟು ಅವರನ್ನು ಆಗಾಗ ಮಾರ್ಟಿನ್ ಲೂಥರ್ ಕಿಂಗ್ ಅವರೊಂದಿಗೆ ಹೋಲಿಸಲಾಗುತ್ತಿತ್ತು. ಆದರೆ ಅದನ್ನು ದಕ್ಷಿಣ ಆಫ್ರಿಕ ಸಂಜಾತರಾದ ಡೆಸ್ಮಂಡ್ ಟುಟು ಒಪ್ಪುತ್ತಿರಲಿಲ್ಲ. ಮಾರ್ಟಿನ್ ಲೂಥರ್‌ಕಿಂಗ್ ತನಗಿಂತಲೂ ಹೆಚ್ಚು ಹ್ಯಾಂಡ್‌ಸಂ ಆಗಿದ್ದರು. ತಾನಾದರೋ ಕುಳ್ಳನೆಯ, ಡೊಳ್ಳು ಹೊಟ್ಟೆಯವನು ಮತ್ತು ಕೆದರಿದ ತಲೆಕೂದಲಿನವನು ಎಂದು ಚಟಾಕಿ ಹಾರಿಸುತ್ತಿದ್ದರು.

ದಕ್ಷಿಣ ಆಫ್ರಿಕದಲ್ಲಿ ಹೂಡಿಕೆ ಮಾಡಿರುವ ಅಮೆರಿಕದ ವಿಶ್ವವಿದ್ಯಾನಿಲಯಗಳ ಪೈಕಿ ನಾನಿರುವ ಯೇಲ್ ವಿವಿ ಕೂಡಾ ಒಂದಾಗಿದೆ. ಯೇಲ್ ವಿವಿಗೆ ಟುಟು ಅವರ ಭೇಟಿಯು ವಿದ್ಯಾರ್ಥಿಗಳು ಮಾತ್ರವಲ್ಲದೆ ಒಂದು ವರ್ಗದ ಬೋಧಕರ ಚಿಂತನಾ ಸರಣಿಗೆ ಸಾಣೆ ಹಿಡಿಸಿತು. ದಕ್ಷಿಣ ಆಫ್ರಿಕದ ಕಂಪೆನಿಗಳಲ್ಲಿ ಮಾಡಿರುವ ಹೂಡಿಕೆಯನ್ನು ಹಿಂದೆಗೆಯುವಂತೆ ಅವರು ಯೇಲ್ ಕಾರ್ಪೊರೇಷನ್‌ಗೆ ಮನವಿ ಮಾಡಿದರು. ಆದರೆ ಯೇಲ್‌ನ ಕಾರ್ಪೊರೇಟ್ ಅಧಿಕಾರಿಗಳು ಅದನ್ನು ನಿರಾಕರಿಸಿದರು. ಹೀಗಾಗಿ ವಿದ್ಯಾರ್ಥಿಗಳು ಗ್ರಂಥಾಲಯದ ಹೊರಗಿರುವ ವಿಶಾಲವಾದ ವಾಣಿಜ್ಯ ಮಳಿಗೆಯನ್ನು ಆತಿಕ್ರಮಿಸಿಕೊಂಡರು. ಅಲ್ಲಿ ಮರ ಹಾಗೂ ತಗಡಿನ ಗುಡಿಸಲುಗಳನ್ನು ನಿರ್ಮಿಸಿದರು. ಅಲ್ಲಿ ಕುಳಿತುಕೊಂಡು ಅವರು ಹಾಡುಗಳನ್ನು ಹಾಡಿದರು, ಘೋಷಣೆಗಳನ್ನು ಕೂಗಿದರು ಹಾಗೂ ಭಾಷಣಗಳನ್ನು ಮಾಡಿದರು. 20 ವರ್ಷಗಳಿಂದಲೂ ಹೆಚ್ಚು ಸಮಯದಿಂದ ಜೈಲಿನಲ್ಲಿದ್ದ ನೆಲ್ಸನ್‌ಮಂಡೇಲಾ ಅವರ ಭಾವಚಿತ್ರಗಳನ್ನು ತೂಗುಹಾಕಿದ ಅವರು ಜನಾಂಗೀಯವಾದಿ ವಿರೋಧಿ ಚಳವಳಿಗಾರರ ತ್ಯಾಗಗಳನ್ನು ಸ್ಮರಿಸಿಕೊಂಡರು.

ನಾನು ಭಾರತದಿಂದ ಪ್ರಥಮ ಬಾರಿಗೆ ಹೊರಗೆ ಹೋದ ಸಮಯವನ್ನು ಯೇಲ್‌ನಲ್ಲಿ ಕಳೆದಿದ್ದೆ. ಆಗ ನಾನು 20ರ ಹರೆಯದ ಉತ್ತರಾರ್ಧದಲ್ಲಿದ್ದೆ. ಅಮೆರಿಕದ ಟಿವಿಯೊಂದರಲ್ಲಿ ಬಿಶಪ್‌ಟುಟು ಅವರ ಭಾಷಣವನ್ನು ವೀಕ್ಷಿಸುವವರೆಗೂ ದಕ್ಷಿಣ ಆಫ್ರಿಕದಲ್ಲಿ ಏನಾಗುತ್ತಿದೆಯೆಂಬ ಬಗ್ಗೆ ನನಗೆ ಹೆಚ್ಚು ಕಾಳಜಿಯಿರಲಿಲ್ಲ. ನನ್ನ ದೇಶದಲ್ಲಿ ಜಾತಿ ಹಾಗೂ ಧಾರ್ಮಿಕ ಉದ್ವಿಗ್ನತೆಗಳು ಹೆಚ್ಚುತ್ತಿರುವುದು ನನ್ನನ್ನು ಖಂಡಿತವಾಗಿಯೂ ಕಾಡುತ್ತಿದ್ದುದರಿಂದ ನಾನು ರಾಜಕೀಯವಾಗಿ ತಟಸ್ಥನಾಗಿಯೂ ಇದ್ದೆ ಎಂದು ಹೇಳಲು ಸಾಧ್ಯವಿಲ್ಲ. ನಾನು ನನ್ನ ದೃಷ್ಟಿಯನ್ನು ವಿಯೆಟ್ನಾಂ, ಇರಾನ್ ಹಾಗೂ ಇತರ ಸ್ಥಳಗಳಲ್ಲಿನ ಪ್ರಕ್ಷುಬ್ಧ ರಾಜಕೀಯ ಘಟನಾವಳಿಗಳ ಬಗ್ಗೆ ಹಾಯಿಸಿದ್ದೆ. ಆದರೆ ಅದ್ಯಾಕೋ ದಕ್ಷಿಣ ಆಫ್ರಿಕದ ಬಗ್ಗೆ ಯೋಚಿಸಿರಲಿಲ್ಲ. ಇದಕ್ಕೆ ಬಹುಶಃ ನಾನು ಭಾರತೀಯ ಮಾಧ್ಯಮಗಳನ್ನು ದೂಷಿಸಬೇಕಾಗಿದೆ. ಅವು ಆ ದೇಶದ ಬಗ್ಗೆ ಬಲು ಅಪರೂಪವಾಗಿ ವರದಿ ಮಾಡುತ್ತಿದ್ದವು. ನಮಗೆ ಅಲ್ಲಿನ ಜನಾಂಗೀಯವಾದಿ ಆಡಳಿತದ ಜೊತೆ ಯಾವುದೇ ರಾಜತಾಂತ್ರಿಕ ನಂಟಿಲ್ಲದೆ ಇರುವುದು ಕೂಡಾ ಇದಕ್ಕೆ ಕಾರಣವಾಗಿರಬಹುದು. ಆದರೆ ಟಿವಿಯಲ್ಲಿ ಡೆಸ್ಮಂಡ್ ಟುಟು ಅವರು ಮಾತುಗಳನ್ನು ಆಲಿಸಿದ ಬಳಿಕ ಹಾಗೂ ಅವರ ಭಾಷಣದ ಕುರಿತ ವರದಿಗಳನ್ನು ಪತ್ರಿಕೆಗಳಲ್ಲಿ ಓದಿದ ಬಳಿಕ ಹಾಗೂ ಬಹುತೇಕವಾಗಿ ಯೇಲ್ ವಿವಿಯ ಆಂಗ್ಲ ವಿದ್ಯಾರ್ಥಿಗಳ ಮೇಲೆ ಅವರ ಭಾಷಣ ಬೀರಿದ ಪರಿಣಾಮವನ್ನು ಕಂಡ ಬಳಿಕ ದಕ್ಷಿಣ ಆಫ್ರಿಕದ ಕುರಿತ ಆಸಕ್ತಿಯು ತಡವಾಗಿ ಹೆಚ್ಚಿತು.

ಭಾರತಕ್ಕೆ ವಾಪಸಾದ ಬಳಿಕ ನಾನು ದಕ್ಷಿಣ ಆಫ್ರಿಕದ ರಾಜಕೀಯ ಬೆಳವಣಿಗೆಯನ್ನು ಹೆಚ್ಚು ನಿಕಟವಾಗಿ ಗಮನಿಸಲು ಆರಂಭಿಸಿದೆ. ಈ ಮಧ್ಯೆ ದ.ಆಫ್ರಿಕದ ವರ್ಣಭೇದವಾದಿ ಸರಕಾರದ ವಿರುದ್ಧ ನಿರ್ಬಂಧ ಹೇರಿಕೆಗೆ ಆಗ್ರಹಿಸುವ ಚಳವಳಿಯು ತೀವ್ರ ರೂಪವನ್ನು ಪಡೆಯಿತು. ಈ ಮೊದಲು ವರ್ಣಭೇದವಾದಿ ಆಡಳಿತವನ್ನು ಟೀಕಿಸಲು ಹಿಂದೇಟು ಹಾಕುತ್ತಿದ್ದ ಮಾರ್ಗರೆಟ್ ಥ್ಯಾಚರ್ ಹಾಗೂ ರೊನಾಲ್ಡ್ ರೇಗನ್ ಧ್ವನಿಯೆತ್ತಲು ಆರಂಭಿಸಿದರು. ಆಗ ನೆಲ್ಸನ್ ಮಂಡೇಲಾ ಅವರು ಇನ್ನೂ ಕಾರಾಗೃಹದಲ್ಲೇ ಇದ್ದರು. ಆದರೆ ಕೆಲವು ವಿಶಿಷ್ಟ ವಿದೇಶಿ ಪ್ರವಾಸಿಗರಿಗೆ ಅವರನ್ನು ಭೇಟಿಯಾಗಲು ಅವಕಾಶ ನೀಡಲಾಗಿತ್ತು. ಅಂತಹ ವಿದೇಶಿ ಗಣ್ಯರಲ್ಲಿ ಆಸ್ಟ್ರೇಲಿಯದ ಮಾಜಿ ಪ್ರಧಾನಿ ಮಾಲ್ಕಂ ಫ್ರೇಸರ್ ಅವರೂ ಒಬ್ಬರಾಗಿದ್ದರು. ತನ್ನನ್ನು ಭೇಟಿಯಾದ ಮಾಲ್ಕಂ ಫ್ರೇಸರ್ ಅವರನ್ನು ಮಂಡೇಲಾ ‘‘ಡಾನ್ ಬ್ರಾಡ್ಮನ್ ಇನ್ನೂ ಜೀವಂತವಿದ್ದಾರೆಯೇ?’’ ಎಂದು ಕೇಳಿದ್ದರು.

1991ರಲ್ಲಿ ನಾನು ಲಂಡನ್‌ನಲ್ಲಿ ಗೋಪಾಲಕೃಷ್ಣ ಗಾಂಧಿ ಅವರ ಮನೆಯಲ್ಲಿದ್ದಾಗ ಆಂಗ್ಲಿಕನ್ ಚರ್ಚ್‌ನ ಧರ್ಮಗುರು ಟ್ರೆವರ್ ಹಡಲ್‌ಸ್ಟನ್ ಅವರನ್ನು ಭೇಟಿಯಾಗಿದ್ದೆ. ಜನಾಂಗೀಯವಾದದ ವಿರುದ್ಧದ ಟೀಕೆಗಾಗಿ ಅವರನ್ನು 1950ರ ದಶಕದಲ್ಲಿ ದಕ್ಷಿಣ ಆಫ್ರಿಕದಿಂದ ಉಚ್ಚಾಟಿಸಲಾಗಿತ್ತು. ಜೋಹಾನ್ಸ್‌ಬರ್ಗ್‌ನಲ್ಲಿ ಪ್ಯಾರಿಶ್ ಧರ್ಮಗುರು ಆಗಿದ್ದ ಟ್ರೆವರ್ ಹಡಲ್‌ಸ್ಟನ್ ಹಲವಾರು ಅಸಾಧಾರಣ ವ್ಯಕ್ತಿತ್ವದ ಯುವಜನರಿಗೆ ಮಾರ್ಗದರ್ಶನ ನೀಡಿದ್ದರು. ಅವರಲ್ಲಿ ಡೆಸ್ಮಂಡ್ ಟುಟು ಹಾಗೂ ಜಾಝ್ ಸಂಗೀತಗಾರ ಹ್ಯೂಗ್ ಮಾಸ್ಕೆಲಾ ಕೂಡಾ ಒಳಗೊಂಡಿದ್ದರು. ಒಂದು ಕಾಲದಲ್ಲಿ ಪ್ರಖರ ಹೋರಾಟಗಾರರಾಗಿದ್ದ ಹಡಲ್‌ಸ್ಟನ್ ಅವರು 70ರ ಹರೆಯದ ಉತ್ತರಾರ್ಧದಲ್ಲಿ ತೀರಾ ಬಳಲಿದಂತೆ ಕಾಣುತ್ತಿದ್ದರು ಮತ್ತು ದೃಷ್ಟಿ ಕೂಡಾ ಮಂದವಾಗಿತ್ತು. ಔತಣಕೂಟವೊಂದರಲ್ಲಿ ಅತಿಥಿಯೊಬ್ಬರು ಹಡಲ್‌ಸ್ಟನ್‌ರನ್ನು ಅವರ ಆರೋಗ್ಯದ ಬಗ್ಗೆ ವಿಚಾರಿಸಿದಾಗ ‘‘ನಾನು ಸಾಯುವ ಮುಂಚೆ ವರ್ಣಭೇದವು ಸಾಯುವುದನ್ನು ಕಾಣಬಯಸುವೆ ಎಂದು ಹೇಳಿದ್ದರು. ಹಡಲ್‌ಸ್ಟನ್ ಅವರ ಬಯಕೆ ಈಡೇರಿತು. ಸ್ವಲ್ಪ ಸಮಯದ ಆನಂತರ ಅಂದರೆ 1994ರಲ್ಲಿ ನೆಲ್ಸನ್ ಮಂಡೇಲಾ ಅಧ್ಯಕ್ಷರಾದ ಬಳಿಕ ಅವರು ದಕ್ಷಿಣ ಆಫ್ರಿಕಕ್ಕೆ ಭೇಟಿ ನೀಡಿದ್ದರು.

1997 ಹಾಗೂ 2009ರ ನಡುವೆ ನಾನು ಐದು ಬಾರಿ ದಕ್ಷಿಣ ಆಫ್ರಿಕವನ್ನು ಸಂದರ್ಶಿಸಿದ್ದೆ. ಈ ಪ್ರವಾಸದಲ್ಲಿ ನಾನು ವರ್ಣಭೇದ ವಿರೋಧಿ ಹೋರಾಟದ ಕೆಲವು ಗಮನಾರ್ಹ ವ್ಯಕ್ತಿಗಳನ್ನು ಭೇಟಿಯಾಗಿದ್ದೆ. ಕವಿ ಮೊಂಗಾನೆ ವ್ಯಾಲಿ ಸೆರೊಟೆ ಅವರು ಕಲೆ ಹಾಗೂ ಸಂಸ್ಕೃತಿ ಅಭಿವೃದ್ಧಿಗಾಗಿನ ಸಂಸದೀಯ ಸಮಿತಿಯ ಉಸ್ತುವಾರಿಯಾಗಿದ್ದರು. ಸಮಾಜಶಾಸ್ತ್ರಜ್ಞೆ ಫಾತಿಮಾ ಮೀರ್ ವೃದ್ಧಾಪ್ಯ ಹಾಗೂ ದುರ್ಬಲತೆಯ ಹೊರತಾಗಿಯೂ ಸಕ್ರಿಯರಾಗಿದ್ದರು. ನ್ಯಾಯಶಾಸ್ತ್ರಜ್ಞ ಆಲ್ಬೀ ಸ್ಯಾಚ್ಸ್ ಅವರು ದಕ್ಷಿಣ ಆಫ್ರಿಕದ ಭದ್ರತಾಪಡೆಗಳ ಬಾಂಬ್ ದಾಳಿಯಿಂದ ಕೈ ಹಾಗೂ ಕಣ್ಣನ್ನು ಕಳೆದುಕೊಂಡಿದ್ದರೂ ಅವರಲ್ಲಿ ಉತ್ಸಾಹ ಹಾಗೂ ಹುಮ್ಮಸ್ಸು ಇನ್ನೂ ಬತ್ತಿರಲಿಲ್ಲ. ಇತಿಹಾಸಕಾರರಾದ ಹೇಮಂಡ್ ಸ್ಯಾಟ್ಟನೆರ್ ಅವರ ಮುಖದಲ್ಲಿ ಜೈಲಿನಲ್ಲಿ ಬರ್ಬರವಾಗಿ ಚಿತ್ರಹಿಂಸೆಗೆ ಒಳಗಾದ ಗುರುತುಗಳು ಕಂಡುಬರುತ್ತಿದ್ದರೂ, ಅವರು ಶ್ರದ್ಧೆಯಿಂದ ಶೈಕ್ಷಣಿಕ ನಿಯತಕಾಲಿಕವೊಂದನ್ನು ನಡೆಸುತ್ತಿದ್ದಾರೆ. ಅವರು ಹಾಗೂ ಇತರ ಹಲವಾರು ಮಂದಿ ಇತಿಹಾಸದ ಗಾಯಗಳನ್ನು ಹಿಂದಕ್ಕಿರಿಸಿ, ಸುಸಜ್ಜಿತವಾದ ಹಾಗೂ ಸಮರ್ಪಕವಾದ ಬಹುಜನಾಂಗೀಯವಾದಿ ಪ್ರಜಾಪ್ರಭುತ್ವವಾದಿ ರಾಷ್ಟ್ರದ ನಿರ್ಮಾಣಕ್ಕಾಗಿ ಸಾಮೂಹಿಕವಾಗಿ ಶ್ರಮಿಸುತ್ತಿದ್ದಾರೆ.

ಈ ವ್ಯಕ್ತಿಗಳು ತಮ್ಮ ಶೌರ್ಯ, ದೃಢನಿರ್ಧಾರ, ಬೌದ್ಧಿಕಶಕ್ತಿಯಿಂದಾಗಿ ಹಾಗೂ ಇವೆಲ್ಲಕ್ಕಿಂತಲೂ ಮಿಗಿಲಾಗಿ ದ್ವೇಷದ ಭಾವನೆಯಿಲ್ಲದೆ ಇರುವುದಕ್ಕಾಗಿ ವಂದನೀಯರಾಗಿದ್ದಾರೆ. ಆಫ್ರಿಕನ್, ಭಾರತೀಯ, ಬಿಳಿಯ ಹಾಗೂ ಮಿಶ್ರ ವರ್ಣೀಯ ಹೀಗೆ ಇವೆರಲ್ಲರೂ ವಿಭಿನ್ನವಾದ ಜನಾಂಗೀಯ ಹಿನ್ನೆಲೆಗಳಿಂದ ಬಂದವರಾಗಿದ್ದರು.

ನನ್ನ ದಕ್ಷಿಣ ಆಫ್ರಿಕ ಭೇಟಿಯ ಸಂದರ್ಭಗಳಲ್ಲಿ ನಾನು ಬಹುತೇಕವಾಗಿ ಬರಹಗಾರರು ಹಾಗೂ ವಿದ್ವಾಂಸರ ಜೊತೆ ಸಮಾಲೋಚನೆಯನ್ನು ನಡೆಸಿದ್ದೆ. ಆದರೆ ಯಾವತ್ತೂ ಆರ್ಚ್‌ಬಿಷಪ್ ಟುಟು ಅವರನ್ನು ಸಮೀಪದಲ್ಲಿ ಕಾಣಲು ಸಾಧ್ಯವಾಗಿರಲಿಲ್ಲ. ಆದಾಗ್ಯೂ 2005ರಲ್ಲಿ ಟುಟು ಅವರು ಬೆಂಗಳೂರಿಗೆ ಖಾಸಗಿ ಭೇಟಿ ನೀಡಿದ್ದ ಸಂದರ್ಭದಲ್ಲಿ, ಅವರ ಗೌರವಾರ್ಥವಾಗಿ ಏರ್ಪಡಿಸಲಾಗಿದ್ದ ಸಣ್ಣ ಔತಣಕೂಟಕ್ಕೆ ನಾನು ಆಹ್ವಾನಿತನಾಗಿದ್ದೆ. ಅಲ್ಲಿ ನಾನು ಅವರೊಂದಿಗೆ ಸುಮಾರು 20 ನಿಮಿಷಗಳನ್ನು ಕಳೆದಿದ್ದೆ. ನಾವು ಮೊದಲಿಗೆ ಸಚಿನ್ ತೆಂಡುಲ್ಕರ್ ಬಗ್ಗೆ ಮಾತನಾಡಿದೆವು. ದಕ್ಷಿಣ ಆಫ್ರಿಕದ ವೇಗಿ ಬೌಲರ್‌ಗಳ ಮುಂದೆ ಸಚಿನ್ ಅವರ ರೋಮಾಂಚನಕಾರಿ ಬ್ಯಾಟಿಂಗ್‌ನ್ನು ಅವರು ಅಪಾರವಾಗಿ ಮೆಚ್ಚಿಕೊಂಡಿದ್ದರು. ಆನಂತರ ನಾನು ಟ್ರೆವರ್ ಹಡಲ್‌ಸ್ಟನ್ ಅವರನ್ನು ಭೇಟಿಯಾಗಿದ್ದರ ಬಗ್ಗೆ ಅವರೊಂದಿಗೆ ಮಾತನಾಡಿದೆ. ಆಗ ಆರ್ಚ್ ಬಿಷಪ್ ಟುಟು ಅವರು ಉದ್ದೇಶಪೂರ್ವಕವಾಗಿ ಹಾಗೂ ಉತ್ಸಾಹದಿಂದ ಮತ್ತು ಪ್ರೀತಿಪೂರ್ವಕವಾಗಿ ಹೀಗೆ ಹೇಳಿದ್ದರು. ‘‘ಟ್ರೆವರ್ ಅವರು ಪಕ್ಕಾ ಆಫ್ರಿಕನ್‌ನಂತೆ ದೇಹವಿಡೀ ನಗುತ್ತಾರೆ’’ ಎಂದಿದ್ದರು.

ಡೆಸ್ಮಂಡ್ ಟುಟು ಅವರೊಂದಿಗೆ ನನಗೆ ಎಳ್ಳಷ್ಟೂ ವೈಯಕ್ತಿಕ ನಂಟು ಇಲ್ಲದೆ ಇದ್ದರೂ ಅವರ ನಿಧನವು ನನಗೆ ದುಃಖವನ್ನು ತಂದಿದೆ. ಅವರಿಂದ ಪ್ರೇರಣೆ ಪಡೆದಿದ್ದ ಅಮೆರಿಕದ ವಿದ್ಯಾರ್ಥಿ ಪ್ರತಿಭಟನೆ ಹಾಗೂ ಎರಡು ದಶಕಗಳ ನಂತರ ನನ್ನ ಊರಿನಲ್ಲಿ ಅವರೊಂದಿಗಿನ ಸಂಕ್ಷಿಪ್ತ ಭೇಟಿ ನೆನಪಿಗೆ ಬರುತ್ತದೆ. ವರ್ಣಭೇದವಾದಿ ಸರಕಾರದ ಜನಾಂಗೀಯ ಬರ್ಬರತೆಯ ವಿರುದ್ಧ ನೇರವಾಗಿ ಹೋರಾಡಿದಂತಹ ಅವರು ದಕ್ಷಿಣ ಆಫ್ರಿಕದ ಆತ್ಮಸಾಕ್ಷಿಯಾಗಿದ್ದರು. ಅಲ್ಲದೆ ವರ್ಣಭೇದವಾದಿ ಸರಕಾರದ ಆನಂತರ ಅಧಿಕಾರಕ್ಕೇರಿದ ಆಡಳಿತದಲ್ಲಿದ್ದ ಭ್ರಷ್ಟಾಚಾರ ಹಾಗೂ ಆಫ್ರಿಕನ್ ನ್ಯಾಶನಲ್ ಕಾಂಗ್ರೆಸ್‌ನ ಸ್ವಜನಪಕ್ಷಪಾತದ ವಿರುದ್ಧ ಧ್ವನಿಯೆತ್ತಿದ್ದರು. ಯಹೂದಿ ವಸಾಹತುಶಾಹಿಗಳು ಹಾಗೂ ಇಸ್ರೇಲ್ ಫೆಲೆಸ್ತೀನಿಯರ ವಿರುದ್ಧವಾಗಲಿ ಅಥವಾ ಮ್ಯಾನ್ಮಾರ್‌ನಲ್ಲಿ ನೊಬೆಲ್ ಪುರಸ್ಕೃತೆ ಆಂಗ್ ಸಾನ್ ಸೂಕಿ ನೇತೃತ್ವದ ಆಡಳಿತವು ರೋಹಿಂಗ್ಯಾಗಳ ವಿರುದ್ಧ ನಡೆಸಿದ ದೌರ್ಜನ್ಯವಾಗಲಿ, ಹೀಗೆ ಅನ್ಯಾಯ ಎಲ್ಲೇ ನಡೆದರೂ, ಅದನ್ನು ಬಲವಾಗಿ ಖಂಡಿಸುತ್ತಿದ್ದರು. ಸಲಿಂಗಿಗಳ ವಿರುದ್ಧ ತನ್ನದೇ ಆದ ಆಂಗ್ಲಿಕನ್ ಚರ್ಚ್‌ಗಳ ದ್ವೇಷದ ಭಾವನೆಯನ್ನು ಕೂಡಾ ಅವರು ವಿರೋಧಿಸಿದ್ದರು.

ಟುಟು ಅವರ ಜೀವನ ಹಾಗೂ ಸಾಧನೆಯು ನಮ್ಮ ದೇಶಕ್ಕೆ ಕೆಲವು ವಂದನೀಯವಾದ ಪಾಠಗಳನ್ನು ಕಲಿಸಿಕೊಟ್ಟಿದೆ. ಅಂತರ್ ಧರ್ಮೀಯ ಸೌಹಾರ್ದಕ್ಕಾಗಿ ಅವರ ಗಾಢವಾದ ಬದ್ಧತೆಯು ಭಾರತಕ್ಕೆ ಅತ್ಯಂತ ಪ್ರಸಕ್ತವಾದುದಾಗಿದೆ. ಮೊದಲಿಗೆ ಬಿಷಪರಾಗಿ ಆನಂತರ ಆರ್ಚ್‌ಬಿಷಪ್‌ರಾಗಿ ಕ್ರೈಸ್ತ ಧರ್ಮಗುರುವಾಗಿ ಸೇವೆ ಸಲ್ಲಿಸಿದ್ದ ಅವರು ಕ್ರೈಸ್ತ ಧರ್ಮದ ಆಚರಣೆಯಲ್ಸಿ ಪ್ರಬುದ್ಧತೆಯನ್ನು ಪ್ರದರ್ಶಿಸಿದ್ದರು. ಇತರ ಧಾರ್ಮಿಕ ಪರಂಪರೆಗಳ ವ್ಯಕ್ತಿಗಳ ಬಗ್ಗೆ ತಾನು ಮಾಡಿರುವ ಪ್ರಶಂಸೆಯ ಬಗ್ಗೆ ಮಾತನಾಡಿದ್ದ ಅವರು ‘ದೇವರು ಧರ್ಮಾತೀತ’ ಎಂದು ಉದ್ಘರಿಸಿದ್ದರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top