ನೆಮ್ಮದಿಯ ರೂಪಗಳ ನಡುವೆ
-

ಮನುಷ್ಯ ಸದಾ ನೆಮ್ಮದಿಯ ಕ್ಷಣಗಳಿಗಾಗಿ ಹುಡುಕಾಟದಲ್ಲಿಯೇ ಇರುವನು. ಅಲ್ಪ ಸ್ವಲ್ಪ ಸಿಕ್ಕಿದರೂ ಅತೃಪ್ತಿಯೆಂಬುದು ಬಹುದೂರದವರೆಗೂ ಕರೆದುಕೊಂಡು ಹೋಗುವುದು.ಅಲ್ಲಿ ಸಾಲದು ಎಂದು ಮತ್ತೆಲ್ಲಿಗೋ ಓಡಿಹೋಗಲು ಬಯಸುವನು.ಯಾಕೆಂದರೆ; ತೃಪ್ತಿಯ ನೆಲೆಯು ಅಸ್ಪಷ್ಟವಾಗಿ ಗೋಚರಿಸುವುದರಿಂದ, ಈ ದೃಷ್ಟಿಯಿಂದ ಜಗತ್ತಿನ ಉದ್ದಗಲಕ್ಕೂ ವಲಸೆ ಹೋದವರೆ; ಹುಡುಕಾಟದ ನೆಪದಲ್ಲಿ ಏನೇನೋ ಕೊಡುತ್ತ ಬಂದಿರುವುದು.ಭಾರತದಿಂದ ಉನ್ನತ ಶಿಕ್ಷಣ ಪಡೆದು ಉದ್ಯೋಗದಲ್ಲಿ ತೊಡಗಿದವರು; ಪರಕೀಯತೆಯ ಕಾರಣಕ್ಕಾಗಿಯೋ ಅಥವಾ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುವುದಕ್ಕಾಗಿ ಎಷ್ಟೊಂದು ಕ್ರಿಯಾಶೀಲರಾಗಿದ್ದಾರೆ.ತಮ್ಮ ವೃತ್ತಿಯ ಜೊತೆಗೆ ಏನೇನೋ ಅಭಿರುಚಿಗಳು, ಅದನ್ನು ಶ್ರೀಮಂತವಾಗಿ ಉಳಿಸಿಕೊಳ್ಳುವುದಕ್ಕಾಗಿಯೇ ‘ಅಕ್ಕ’ ಮತ್ತು ‘ನಾವಿಕ’ ಸಂಘಟನೆಗಳು ಹುಟ್ಟಿಕೊಂಡಿದ್ದು, ಇದನ್ನು ಕುರಿತು ಈಗಾಗಲೇ ಪ್ರಸ್ತಾಪಿಸಿರುವುದರಿಂದ ಮತ್ತೆ ಹೇಳಿದರೆ ಕ್ಲೀಷೆಯಾಗಬಹುದು. ಆದರೆ ‘ನಾವಿಕ’ ದ ಕಾರಣಕ್ಕಾಗಿ ಯಾರ್ಯಾರೋ ಪರಿಚಯವಾದರು.ಅವರಲ್ಲಿ ಬಹುಪಾಲು ಮಂದಿ ತಮ್ಮ ಮೂಲ ವೃತ್ತಿಯ ಜೊತೆಗೆ ತಮ್ಮ ಮನೋಲ್ಲಾಸಕ್ಕಾಗಿ ವೈವಿಧ್ಯಮಯವಾದ ಹವ್ಯಾಸಿ ಚಟುವಟಿಕೆಗಳನ್ನು ಬೆಳೆಸಿಕೊಂಡವರು.
‘ನಾವಿಕ’ದ ಮೂರು ದಿವಸದ ಸಮಾವೇಶದಲ್ಲಿ ಎಷ್ಟು ಲವಲವಿಕೆಯನ್ನು ತುಂಬಿಕೊಂಡಿದ್ದರು.ಅವರೆಲ್ಲ ವೈದ್ಯರಾಗಿದ್ದರೂ, ಎಂಜಿನಿಯರ್‌ಗಳಾಗಿದ್ದರೂ ಬಾಲ್ಯದ ನೆನಪುಗಳನ್ನು ಮರೆತವರಲ್ಲ.ಕೆಲವು ಮಂದಿಯಂತೂ ಇಪ್ಪತ್ತು ಮೂವತ್ತು ವರ್ಷಗಳ ನೆನಪಿನಲ್ಲಿಯೇ ತೇಲಾಡುತ್ತಿದ್ದಾರೆ.ಈ ಎರಡು ಮೂರು ದಶಕಗಳಲ್ಲಿ ಸಾಮಾಜಿಕವಾಗಿ, ರಾಜಕೀಯವಾಗಿ ಆಗಿರುವ ಸ್ಥಿತ್ಯಂತರಗಳನ್ನು ತಮ್ಮ ಮಾನಸಿಕ ಪರಿಧಿಯೊಳಗೆ ಬಿಟ್ಟುಕೊಂಡ ವರೇ ಅಲ್ಲ.ಅದರಲ್ಲೂ ಬೆಂಗಳೂರು ಎಂಬುದು ತನ್ನ ಆಂತರ್ಯವನ್ನು ನಾಶಮಾಡಿಕೊಂಡಿದ್ದರ ಜೊತೆಗೆ ಸುತ್ತಮುತ್ತಲಿನ ಐವತ್ತು ಅರವತ್ತು ಕಿ.ಮೀಟರ್ ಪರಿಧಿಯ ಪ್ರದೇಶವನ್ನು ವಿಷಮಯ ಮಾಡಿರುವುದರ ಬಗ್ಗೆ ಅರಿವೇ ಇಲ್ಲ. ಕಳೆದ ಒಂದೆರಡು ದಶಕಗಳಲ್ಲಿ ಭೂಮಾಫಿಯಾದ ವಲಯದಲ್ಲಿ ರಿಯಲ್ ಎಸ್ಟೇಟ್ ಎಂಬ ಅನುತ್ಪಾದಕ ವ್ಯವಹಾರಸ್ಥರು ಕುಲಗೆಡಿಸುವುದರತ್ತ ಅವರ ಮನಸ್ಸನ್ನು ಸೆಳೆದಾಗ, ಬಹಳಷ್ಟು ಮಂದಿ ‘ನಾವಿಕ’ದ ಗೆಳೆಯರು ಗಾಬರಿಗೊಂಡಿದ್ದರು. ಬಹಳ ದಟ್ಟವಾಗಿ ತಾವು ಬೆಳೆದು ಬಂದ ನೆಲೆಗೆ ಸಂಬಂಧಿಸಿ ಭಾವನಾತ್ಮಕ ಅರಿವನ್ನು ಬೆಳೆಸಿಕೊಂಡವರಲ್ಲ. ಅಮೆರಿಕದಲ್ಲಿ ಚೆನ್ನಾಗಿ ಬದುಕಿ ಬಾಳುತ್ತಿರುವುದರಿಂದ ‘ಅಯ್ಯೋ ಹೀಗೆಲ್ಲಾ ಆಗುತ್ತಿದೆಯಾ’ ಎಂಬ ವಿಷಾದವಂತೂ ಗಾಢವಾಗಿದೆ. ಆ ವಿಷಾದದ ಮೂಲಕವೇ ಅವರೆಲ್ಲ ‘ಮೋದಿ’ಯವರು ಅಧಿಕಾರಕ್ಕೆ ಬಂದಿದ್ದರಿಂದ ಎಂಥದೋ ಪರಿಣಾಮಕಾರಿಯಾದ ಸುಧಾರಣೆಗಳು ಆಗಿಬಿಡುತ್ತದೆಂದು ಕನಸು ಕಾಣುತ್ತಿರುವಂಥವರು. ಹಾಗೆ ನೋಡಿದರೆ ‘ಮೋದಿ’ಯವರ ಘೋಷಣೆಗಳಿಗೆ ನಿಜವಾಗಿಯೂ ಮರುಳಾಗಿದ್ದಾರೆ.ಸಾವಿರಾರು ಕಿ.ಮೀಟರ್ ದೂರದಲ್ಲಿದ್ದು ಸಂಬಂಧಗಳನ್ನು ಹಾಗೂ ರಾಜಕೀಯ ಸ್ಥಿತ್ಯಂತರಗಳನ್ನು ಅತ್ಯಂತ ಅಸೂಕ್ಷ್ಮತೆಯಿಂದ ನೋಡುವುದ ರಿಂದಲೂ ಹೀಗೆ ಆಗಬಹುದು.ಇದು ತಪ್ಪೇನು ಅಲ್ಲ.ಬಹಳ ಜಾಗ್ರತೆಯಿಂದ ಭ್ರಮನಿರಸನಕ್ಕೆ ಒಳಗಾಗಲೂ ಬಹುದು.ಕಾಲಘಟ್ಟವೇ ಇಂಥದಕ್ಕೆಲ್ಲ ಉತ್ತರವನ್ನು ಕೊಡಲು ಸಾಧ್ಯ.
ಈ ರೀತಿಯ ವಾತಾವರಣದಲ್ಲಿ ಕೆಲವು ಮೂಲಭೂತ ಸಂಗತಿಗಳ ಬಗ್ಗೆ ಚರ್ಚಿಸುತ್ತಿರುವಾಗ ಆತ್ಮೀಯವಾಗಿ ಸ್ಪಂದಿಸುತ್ತಿದ್ದರು.ನಾರ್ತ್ ಕೆರೋಲಿನಾದ ರ್ಯಾಲೆ ನಗರದಲ್ಲಿ ನಡೆದ ಮೂರು ದಿವಸದ ‘ನಾವಿಕ’ದ ಸಮಾವೇಶದಲ್ಲಿ ಇದು ನನಗೆ ಮನದಟ್ಟಾಯಿತು.ಉದ್ದೇಶಪೂರ್ವಕವಾಗಿಯೇ ಯಾರ್ಯಾರನ್ನೋ ಪರಿಚಯಮಾಡಿಕೊಳ್ಳುತ್ತಿದ್ದೆ.ಅವರ ಮನೋಭಿಲಾಷೆಯನ್ನು ಅರಿಯಲು ಪ್ರಯತ್ನಿಸುತ್ತಿದ್ದೆ.ಇದರಿಂದ ನನಗೆ ತುಂಬ ಉಪಕಾರವಾಯಿತು.ಹೀಗೆ ಮಾತುಕತೆಯ ಸಂದರ್ಭದಲ್ಲಿ ಊಟಮಾಡುವಾಗ, ಡಾ. ಪ್ರಸಾದ್ ಮಾಕಮ್ ಎಂಬವರು ಪರಿಚಯವಾದರು.ಅತ್ಯಂತ ಸರಳತೆಯ ಮುಕ್ತ ಮನಸ್ಸಿನ ವೈದ್ಯರು.ಅವರು ಮತ್ತು ಅವರ ರೀತಿಯ ಎಷ್ಟೊಂದು ಮಂದಿ ‘ನಾವಿಕ’ದ ಕಾರಣಕ್ಕಾಗಿ ಕ್ರಿಯಾಶೀಲ ಕಾರ್ಯಕರ್ತರಾಗಿದ್ದರು. ಪಂಚೆ, ಷರ್ಟು ಮತ್ತು ಅದರ ಮೇಲಿನ ಟವಲ್ ರೀತಿಯ ಶಾಲು ಮೂಲಕ, ತಮ್ಮ ಕುಟುಂಬ ಮೂಲದ ಸಂಪ್ರದಾಯದ ಉಡುಪಿನಿಂದ ಸಂಭ್ರಮಪಡುತ್ತಿದ್ದರು.ಇದಕ್ಕೆ ನನ್ನ ಎಷ್ಟೋ ವರ್ಷಗಳ ಗೆಳೆಯ ತಿಮ್ಮ ಶೆಟ್ಟಿಯೂ ಹೊರತಾಗಿರಲಿಲ್ಲ.ಇರಲಿ, ಇಂಥವರ ಒಂದು ದೊಡ್ಡ ಪಟ್ಟಿಯನ್ನೇ ದಾಖಲಿಸಬಹುದು. ಆದರೆ ತಮ್ಮ ವೃತ್ತಿ ವಿಷಯ ಜೊತೆಗೆ, ಕೆಲವು ಆರೋಗ್ಯಪೂರ್ವ ಹವ್ಯಾಸಗಳನ್ನು ರೂಢಿಸಿಕೊಂಡಿರುವುದನ್ನು ಕಂಡು ಚಕಿತನಾದೆ. ಕೇವಲ ಬರವಣಿಗೆ ಮಾತ್ರವಲ್ಲ, ರಂಗಭೂಮಿಯ ಚಟುವಟಿಕೆಯ ಜೊತೆಗೆ, ಉತ್ತಮ ಕೃತಿಗಳ ಬಗೆಗಿನ ಚರ್ಚೆ ಸಂವಾದವನ್ನು ನಡೆಸುವುದು, ಅದಕ್ಕಾಗಿ ಶಿಬಿರಗಳನ್ನು ಏರ್ಪಡಿಸುವುದು, ಹಬ್ಬಹುಣ್ಣಿಮೆಯಂಥ ಸಾಂಪ್ರದಾಯಿಕ ಆಚರಣೆಗಳ ಸಂದರ್ಭಗಳಲ್ಲಿ ಎಲ್ಲರೂ ಸೇರಿ; ಅದನ್ನೆಲ್ಲ ವೈಭವಯುತವಾಗಿ ಪ್ರತಿನಿಧಿಸುವ ಉಡುಪಿನಲ್ಲಿ ತಮ್ಮನ್ನು ಗುರುತಿಸಿಕೊಳ್ಳುವುದು ಮೆಚ್ಚುವ ಸಂಗತಿಯೇ ಆಗಿದೆ.
ಈ ಚೌಕಟ್ಟಿನಲ್ಲಿ ತಿಮ್ಮ ಶೆಟ್ಟಿಯಂಥ ಗೆಳೆಯರ ಜೊತೆಗೆ; ಸವಿತಾ ರವಿಶಂಕರ್ ಅವರಂಥ ಕುಟುಂಬವು ಕನ್ನಡದ ಜೀವಶಕ್ತಿಯನ್ನು ಉಳಿಸುವುದ ರತ್ತ ಎಂಥ ಅಪೂರ್ವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಇದನ್ನೆಲ್ಲ ನೋಡಿದಾಗ ಮಾನಸಿಕವಾಗಿ ಸಂಭ್ರಮಪಟ್ಟೆ, ರವಿಶಂಕರ ಅವರು ಮೈಸೂರಿನ ಕಡೆಯವರಾಗಿ, ಸಾಫ್ಟ್‌ವೇರ್ ಎಂಜಿನಿಯರಾಗಿದ್ದರೂ, ಸಂಸ್ಕೃತ ಸಾಹಿತ್ಯದ ಅಧ್ಯಯನಕ್ಕೆ ಸಂಬಂಧಿಸಿದಂತೆ ಗಂಭೀರ ಅಧ್ಯಯನದಲ್ಲಿ ತೊಡಗಿರುವಂಥವರು. ಅದಕ್ಕೆ ಅನ್ವಯಿಸಿ ಅತ್ಯುತ್ತಮ ಲೇಖನ ಕೃಷಿಗೆ ತೊಡಗಿದ್ದರೂ; ಇನ್ನೂ ಅಧ್ಯಯನ ಸಾಲದು ಎಂಬ ಸಂಕೋಚ ಪ್ರವೃತ್ತಿಯ ನ್ನುಳಿಸಿಕೊಂಡಿರುವಂಥವರು. ಇಂಥ ಕೇಶವಮೂರ್ತಿಯವರು ಅಮೆರಿಕದ ಕೆಲವು ಪ್ರಸಿದ್ಧ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ‘ನಾರ್ತ್ ಕರೋಲಿನಾ ವಿಶ್ವವಿದ್ಯಾನಿಲಯ’ವನ್ನು ತೋರಿಸಲು ಹೋದರು.ಆ ವಿಶ್ವವಿದ್ಯಾನಿಲಯದ ವೈಭವ ಹಾಗೂ ಗ್ರಂಥಾಲಯವನ್ನು ನೋಡಿ ಹೊರಗೆ ಬರುವಾಗ ಒಬ್ಬ ಮುಖ್ಯ ವ್ಯಕ್ತಿಯನ್ನು ನೀವು ನೋಡಲೇ ಬೇಕು.ಈಗಾಗಲೇ ನಿಮಗೆ ಪರಿಚಯವಾಗಿರ್ತಾರೆ.ಅವರ ಹೆಸರು ಡಾ. ಪ್ರಸಾದ್ ಮಾಕಮ್ ಎಂದು. ಅವರ ಮನೆಗೆ ಹೋಗೋಣ. ಬರಲು ಹೇಳಿದ್ದಾರೆ.ಅಲ್ಲಿಯ ಅದ್ಭುತವನ್ನು ಕಂಡು ನೀವು ನಿಜವಾಗಿಯೂ ಸಂಭ್ರಮಿಸುತ್ತೀರಿ ಎಂದು ಮೊದಲೇ ಕುತೂಹಲವನ್ನು ಬೆಳೆಸಿದ್ದರು.
ಅವರ ಮನೆಗೆ ಹೋಗುವಾಗ, ಅಲ್ಲೊಂದು ಪಾರ್ಕ್‌ನಲ್ಲಿ ನೂರಕ್ಕೂ ಮೇಲ್ಪಟ್ಟು ‘ಅಮೆರಿಕನ್-ಆಫ್ರಿಕನ್ಸ್’ ಕುಟುಂಬದವರು ಬೆಳಗ್ಗೆ ಹತ್ತೂವರೆಗೆಯೇ ಸೇರಿ; ನಾನಾ ವಿಧವಾದ ತಿಂಡಿಗಳ ಮಧ್ಯೆ ಕುಣಿದು ಕುಪ್ಪಳಿಸುತ್ತ, ಎಂಥದೋ ಮಾನಸಿಕ ಸಂತೋಷದಲ್ಲಿ ಭಾಗಿಯಾಗಿದ್ದರು.ಅದಕ್ಕಿಂತ ಹಿಂದಿನ ವಾರ ಅಮೆರಿಕದ ಉದ್ದಗಲಕ್ಕೂ ಮೂರು ದಿವಸ ಹಬ್ಬದ ಸಂಭ್ರಮ.ಅದು ಅವರು ಅಮೆರಿಕದಲ್ಲಿ ಸಾಂವಿಧಾನಾತ್ಮಕವಾಗಿ; (ಸ್ಲೇವರಿಯಿಂದ ಬಿಡುಗಡೆಯಾಗಿ) ಪ್ರಜೆಗಳು ಎಂಬ ಸಂತೋಷದ ಹಕ್ಕನ್ನು ಪಡೆದ ದಿನಾಚರಣೆ, ಇದಕ್ಕೆ ಸಂಬಂಧಿಸಿದಂತೆ ಹಿಂದೆ ರ್ಯಾಲೆಯಲ್ಲಿ ಕೆಲವರನ್ನು ಸಂಪರ್ಕಿಸಿ ಚರ್ಚಿಸಿದ್ದೆ.ಮತ್ತೆ ಇಲ್ಲಿಯ ಗುಂಪಿನ ಯಜಮಾನರ ಬಳಿ ಮಾತಾಡುವ ಇರಾದೆ ಇತ್ತು.ಆದರೆ ಸಮಯವಿಲ್ಲದ ಪ್ರಯುಕ್ತ ಡಾ. ಪ್ರಸಾದ್ ಮಾಕಮ್ ಅವರ ಮನೆಗೆ ಹೋದೆವು.ಅಮೆರಿಕಾದ ಮನೆಗಳ ವಾಸ್ತುಶಿಲ್ಪದಂತೆ, ಅವರ ಮನೆಯು ಹೊರತಾದುದು ಅಲ್ಲ.ಇಷ್ಟಾದರೂ ಮನೆಯೊಳಗಿನ ವೈಭವಕ್ಕೆ ಮಾರು ಹೋದೆ.ಅದು ದುಬಾರಿ ಬೆಲೆಯ ಕುರ್ಚಿ ಮತ್ತು ಸೋಫಾಗಳಿಂದಲ್ಲ.ದೊಡ್ಡ ಕೊಠಡಿಯಲ್ಲಿ ಆಧುನಿಕ ರೈಲ್ವೆ ತಂತ್ರಜ್ಞಾನವನ್ನು ಪ್ರತಿನಿಧಿಸುವ ರೀತಿಯಲ್ಲಿ ‘ಪುಟ್ಟ ಲೋಕವೊಂದು ಅಲ್ಲಿತ್ತು.ಬೆಂಗಳೂರಿನ ರೈಲ್ವೆ ನಿಲ್ದಾಣವನ್ನು ನೆನಪಿಗೆ ತರುವಂಥ ಚಿತ್ರಣ.ಜೊತೆಗೆ ನಿಜವಾಗಿಯೂ ಮನಮೋಹಕವಾದದ್ದೆಂದರೆ, ಕೊಠಡಿಯ ಮೂಲೆಯಲ್ಲಿ ಪುಟ್ಟ ಬೆಟ್ಟವೊಂದು. ಹಸಿರು ತುಂಬಿದ ತಿರುಪತಿ ಬೆಟ್ಟದ ತದ್ರೂಪ. ಅಲ್ಲೊಂದು ಕಂಗೊಳಿಸುವ ತಿರುಪತಿಯ ವೆಂಕಟರಮಣ ಸ್ವಾಮಿಯ ವಿಗ್ರಹ.ಅದಕ್ಕೊಂದು ವಜ್ರ ಸ್ವರೂಪದ ಬೆಳಕು.ಇಷ್ಟಕ್ಕೇ ನಮ್ಮ ಆನಂದ ಮುಗಿಯುವುದಿಲ್ಲ.ಆ ಮನಮೋಹಕ ಬೆಟ್ಟಕ್ಕೂ ಬೆಂಗಳೂರು ರೈಲ್ವೇ ನಿಲ್ದಾಣದಿಂದ ರೈಲನ್ನು ಓಡಿಸುತ್ತಾರೆ. ಒಂದು ಕ್ಷಣ ಇದರ ಎರಡು ದಿವಸಗಳ ಹಿಂದೆ ವಾಷಿಂಗ್ಟನ್ ರೈಲ್ವೆ ಮ್ಯೂಸಿಯಂನಲ್ಲಿ ಒಂದು ಗಂಟೆ ಕಳೆದು, ಅದರ ವೈಭವಕ್ಕೆ ಮೈಮರೆತದ್ದು ನೆನಪಿಗೆ ಬಂದಿತ್ತು. ಅವರ ಮನೆಯ ಮತ್ತೊಂದು ವಾತಾವರಣವೆಂದರೆ, ಅವರ ಶ್ರೀಮತಿಯವರು ಅಭಿವೃದ್ಧಿಪಡಿಸಿರುವ ಕಿಚನ್ ಗಾರ್ಡನ್. ಅವರು ಬೆಂಗಳೂರಿನ ಬಸವನಗುಡಿಯವರು.
ಡಾ. ಪ್ರಸಾದ್ ಮಾಕಮ್ ಅವರು ಅಮೆರಿಕದ ವೈದ್ಯಕೀಯ ಕ್ಷೇತ್ರದಲ್ಲಿ ಸುಪರಿಚಿತರಂತೆ.ಗ್ಯಾಸ್ಟ್ರಾಲಜಿಯಲ್ಲಿ ತಮ್ಮ ವೈದ್ಯಕೀಯ ಲೋಕವನ್ನು ವಿಸ್ತರಿಸಿಕೊಂಡಿರುವಂಥವರು.ಮನೆಯಿಂದ ಸ್ವಲ್ಪ ದೂರದ ತೋಟವೊಂದರಲ್ಲಿ ತೊಡಗಿಸಿಕೊಂಡು, ಅಲ್ಲಿ ಬೆಳೆಯುವ ತರಕಾರಿ, ಫಲ, ಪುಷ್ಪಗಳನ್ನು ಕರ್ನಾಟಕದವರು ನಡೆಸುತ್ತಿರುವ ದೇವಸ್ಥಾನಗಳಿಗೆ ದಾನದ ರೂಪದಲ್ಲಿ ಕೊಡುವರಂತೆ.ಇಂಥ ಡಾ. ಮಾಕಮ್ ಅವರು ಕರ್ನಾಟಕದ ಕೋಲಾರ ಜಿಲ್ಲೆಯ ಮುಳುಬಾಗಿಲಿನವರು.ನಾನು. ಎಂ.ವಿ. ಕೃಷ್ಣಪ್ಪ, ಎಂ.ವಿ. ವೆಂಕಟಪ್ಪ, ಡಾ.ರಾಜು ಗೌಡ ಅವರ ಬಗ್ಗೆ ಪ್ರಸ್ತಾಪಿಸಿದಾಗ, ‘‘ತಲೆ ತಲಾಂತರದಿಂದ ನಮ್ಮ ತಂದೆ, ತಾತ, ಮುತ್ತಾತಂದಿರು ಅವರ ಕುಟುಂಬದ ಜೊತೆಗೆ ಅನ್ಯೋನ್ಯ ಸಂಬಂಧವನ್ನಿಟ್ಟುಕೊಂಡವರು.ನಮ್ಮ ಕುಟುಂಬದವರು ಕಡಲೆಕಾಯಿ ವ್ಯಾಪಾರಸ್ಥರಾಗಿದ್ದರಿಂದ ಬಹುದೊಡ್ಡ ವ್ಯಾಪಾರ ಸಂಬಂಧವನ್ನು ಕೋಲಾರದ ಉದ್ದಗಲಕ್ಕೂ ಇಟ್ಟುಕೊಂಡವರು’’ ಎಂದು ಹೇಳುವಾಗ; ಎಂ.ವಿ.ಕೃಷ್ಣಪ್ಪನವರ ಕಾರ್ಯಕ್ಷೇತ್ರದ ಚಿತ್ರಣವೂ ಚಿತ್ತಭಿತ್ತಿಯಲ್ಲಿ ಸರಿದು ಹೋಯಿತು. ಯಾಕೆಂದರೆ ಅವರು ಕೇಂದ್ರ ಸಚಿವರಾಗಿದ್ದಾಗ, ಲಾಲ್‌ಬಹದ್ದೂರ್ ಶಾಸ್ತ್ರಿಗಳು ಪ್ರಧಾನಮಂತ್ರಿಗಳಾಗಿದ್ದಾಗ; ಬೆಂಗಳೂರು ಡೈರಿಯನ್ನು ಪ್ರಾರಂಭಿಸಿದ್ದು, ನನ್ನ ಬಾಲ್ಯ ಕಾಲದ ಶ್ರೀಮಂತ ಭಾಗಗಳಲ್ಲಿ ಇದೂ ಒಂದು.
ಅದೇನೇ ಆಗಿರಲಿ ತುಂಬ ಸಂಭ್ರಮದಿಂದ, ಒಂದು ಅಪೂರ್ವ ಅನುಭವವನ್ನು ಪಡೆದು ಹೊರಗೆ ಬಂದಿದ್ದೆವು. ಹೀಗೆ ಒಬ್ಬೊಬ್ಬರು ಒಂದೊಂದು ವಿಧದ ಸಂಗ್ರಹದಲ್ಲಿ ತೊಡಗಿರುವಂಥವರು.ಕುಸುಮಾಬಸಪ್ಪ ಅವರ ಪತಿ ಹರ್ಷ ಅವರಿಗೆ ಗಡಿಯಾರಗಳನ್ನು ಸಂಗ್ರಹಿಸುವುದು ಎಷ್ಟು ಇಷ್ಟವೋ; ಅಷ್ಟೇ ಇಷ್ಟದಿಂದ ಅತ್ಯುತ್ತಮ ಕೃತಿಗಳನ್ನು ಓದುತ್ತ, ಸಾಧ್ಯವಾದ ಮಟ್ಟಿಗೆ ತಮ್ಮ ಮನೆಯ ಗ್ರಂಥ ಭಂಡಾರವನ್ನು ಬೆಳೆಸುವ ಅಭಿರುಚಿಯುಳ್ಳವರು.ತಮ್ಮ ಮೂಲ ಉದ್ಯೋಗದ ಜೊತೆಗೆ ನಟನೆ, ರಚನೆ ಮತ್ತು ರಂಗಭೂಮಿಯ ಚಟುವಟಿಕೆಯಲ್ಲಿ ಲವಲವಿಕೆಯನ್ನು ತುಂಬಿಕೊಂಡಿರುವ ಲಕ್ಷ್ಮೀನಾರಾಯಣ ಗಣಪತಿಯವರ ಅಭಿರುಚಿಯ ಮುಖಗಳು ವೈವಿಧ್ಯಮಯವಾಗಿ ಆವರಿಸಿಕೊಂಡಿರುವುದಂತೂ ನಿಜ. ಈ ನಿಜದ ಅರಿವು ವಿಸ್ತಾರಗೊಳ್ಳುವ ಮೊದಲೇ ಅಲ್ಲಿಂದ ಓಡಿ ಬಂದಿದ್ದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.