-

ಮನುಷ್ಯ ಸಂವೇದನೆಯನ್ನು ಕಳೆದುಕೊಂಡಿರುವ ಅಧಿಕಾರ ರಾಜಕಾರಣದ ಪರಿಭಾಷೆ

-

ಪರಸ್ಪರ ದೋಷಾರೋಪಣೆ ಮತ್ತು ಟೀಕೆಗಳಿಗೂ ರಾಜಕಾರಣಕ್ಕೂ ಅವಿನಾಭಾವ ಸಂಬಂಧವಿರುವುದು ಸತ್ಯ. ಆದರೆ ಈ ಟೀಕೆಗಳ ಸಂದರ್ಭದಲ್ಲಿ ಬಳಸುವ ಭಾಷೆಗೂ ಸಾರ್ವಜನಿಕ ಸುಪ್ರಜ್ಞೆಗೂ ಇದೇ ರೀತಿಯ ಸೂಕ್ಷ್ಮ ಸಂಬಂಧ ಇರುವುದನ್ನು ಸಾರ್ವಜನಿಕ ನಾಯಕರು ಗಮನಿಸಬೇಕಲ್ಲವೇ? ಇಂದಿನ ಬಹುತೇಕ ರಾಜಕೀಯ ನಾಯಕರಲ್ಲಿ ಈ ಪ್ರಜ್ಞೆ ಇದ್ದಂತೆ ಕಾಣುವುದಿಲ್ಲ. ಹಾಗಾಗಿಯೇ ಇದೇ ನಾಯಕರನ್ನು ಅನುಕರಿಸುವ ಯುವಪೀಳಿಗೆಯಲ್ಲೂ ಭಾಷಾ ಸೌಜನ್ಯ ಮತ್ತು ಸಂಯಮ ಕ್ಷೀಣಿಸುತ್ತಲೇ ಇದೆ.

ಭವಿಷ್ಯಕ್ಕೆ ಬೆನ್ನು ತಿರುಗಿಸುವ ಸಮಾಜ ಮಾತ್ರವೇ ಕಳೆದುಹೋದ ಇತಿಹಾಸದಲ್ಲಿ ತನ್ನನ್ನು ಹುದುಗಿಸಿಕೊಳ್ಳಲು ಸಾಧ್ಯ. ಚರಿತ್ರೆಯ ಆಗುಹೋಗುಗಳನ್ನು ಉತ್ಖನನ ಮಾಡುತ್ತಾ ಹೋದಂತೆಲ್ಲಾ ದೊರೆಯುವ ಪಳೆಯುಳಿಕೆಗಳು ಒಂದು ಸಮಾಜದ ಅಥವಾ ನಾಗರಿಕತೆಯ ವಿಭಿನ್ನ ಮುಖವಾಡಗಳನ್ನು ತೆರೆದಿಡುತ್ತಾ ಹೋಗುತ್ತವೆ. ಈ ಭಗ್ನಗೊಂಡ ಅವಶೇಷಗಳಿಂದ ಕಲಿಯುವುದೇನಾದರೂ ಇದ್ದರೆ ಅದು ಕೇವಲ ಭವಿಷ್ಯದ ಬದುಕಿಗೆ ಅವಶ್ಯವಾದಂತಹ, ಮನುಜ ಸಂಬಂಧಗಳನ್ನು ಬೆಸೆಯುವ ಸಾಂಸ್ಕೃತಿಕ ನೆಲೆಗಳಿಗೆ ಮಾತ್ರ ಸಂಬಂಧಿಸಿರಬೇಕಾಗುತ್ತದೆ.

 ಮಾನವನ ಅಭ್ಯುದಯದ ಹಾದಿಯಲ್ಲಿ ಎದುರಾಗಿರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸವಾಲುಗಳನ್ನು ಯಶಸ್ವಿಯಾಗಿ ದಾಟುತ್ತಲೇ ಮನುಕುಲ ಇಂದು ನಾಗರಿಕತೆಯನ್ನು ಉಸಿರಾಡುವ ಹಂತಕ್ಕೆ ಬಂದು ತಲುಪಿದೆ. ದುರಂತ ಎಂದರೆ ನಾಗರಿಕತೆ ಎಂಬ ಪರಿಕಲ್ಪನೆಯೇ ಇಂದು ಸಾಪೇಕ್ಷ ನೆಲೆಯಲ್ಲಿ ವ್ಯಾಖ್ಯಾನಕ್ಕೊಳಗಾಗುತ್ತಿದ್ದು, ಭೌಗೋಳಿಕ, ಧಾರ್ಮಿಕ, ಪ್ರಾದೇಶಿಕ, ಸಾಂಸ್ಕೃತಿಕ ಸ್ವರೂಪಗಳನ್ನು ಪಡೆದುಕೊಳ್ಳುತ್ತಿದೆ. ಹಾಗಾಗಿಯೇ ನಾಗರಿಕತೆಯ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸುವ ಸಂಸ್ಕೃತಿಯೂ ಸಹ ಅಪವ್ಯಾಖ್ಯಾನಕ್ಕೊಳಗಾಗುತ್ತಿದ್ದು 'ಸಂಸ್ಕೃತಿ' ಎನ್ನುವುದರ ಅರ್ಥವೇ ಸಂಕುಚಿತವಾಗುತ್ತಿದೆ.

 ಮನುಜ ಸಮಾಜದ ವಿಶಾಲ ತಳಹದಿಯನ್ನು ಬದಿಗಿಟ್ಟು, ನಿರ್ದಿಷ್ಟ ಗುಂಪುಗಳ ಅಥವಾ ಸಾಮುದಾಯಿಕ ಅಸ್ಮಿತೆಗಳ ನೆಲೆಯಲ್ಲಿ ಸಂಸ್ಕೃತಿಯನ್ನು ವ್ಯಾಖ್ಯಾನಿಸುತ್ತಿರುವುದರಿಂದಲೇ ಇಂದು ಮನುಜ ಸಂಸ್ಕೃತಿ ಎನ್ನುವ ಪದ ತನ್ನ ಮೂಲಾರ್ಥವನ್ನು ಕಳೆದುಕೊಂಡಿದೆ. ಈ ಮನುಜ ಸಂಸ್ಕೃತಿಯಿಂದಲೇ ಕವಲೊಡೆಯುವ ಜನಸಂಸ್ಕೃತಿ ಮತ್ತು ಜನಪದ ಸಂಸ್ಕೃತಿಗಳನ್ನೂ ಯಾವುದೋ ಒಂದು ಧಾರ್ಮಿಕ ಅಥವಾ ಭೌಗೋಳಿಕ ಅಸ್ಮಿತೆಗಳಲ್ಲಿ ಬಂಧಿಸಿ ಅಪಮೌಲ್ಯಗೊಳಿಸಲಾಗುತ್ತಿದೆ. ಮಾನವ ಸಮಾಜದ ಆರ್ಥಿಕ ಮುನ್ನಡೆಯು ಸೃಷ್ಟಿಸಿರುವ ಬಡತನ-ಸಿರಿತನ ನಡುವಿನ ಕಂದರಗಳು, ಹಿತಕರ-ಅಹಿತಕರ ವಾತಾವರಣದ ಅಂತರಗಳು ಮತ್ತು ಶ್ರೀಮಂತಿಕೆ-ದಾರಿದ್ರ್ಯತೆಯ ನಡುವಿನ ತರತಮಗಳು ಈ ಬಂಧಿತ ಅಸ್ಮಿತೆಗಳ ಚೌಕಟ್ಟಿನಲ್ಲೇ ವ್ಯಕ್ತವಾಗುವುದರಿಂದ, ಮಾನವನ ಬದುಕಿಗೆ ಅತ್ಯವಶ್ಯವಾದ ಒಂದು ಸಾಂಸ್ಕೃತಿಕ ನೆಲೆ ಸಾಪೇಕ್ಷತೆಗೊಳಗಾಗಿ ಅರ್ಥಹೀನವಾಗುತ್ತಿದೆ.

ಕೇಂದ್ರ ಸರಕಾರ ಸಂಸತ್ ಕಲಾಪಗಳಲ್ಲಿ ಸಂಸದರು ಬಳಸುವ ಅನೇಕ ಪದಗಳನ್ನು ಅಸಂಸದೀಯ ಎಂದು ನಿರ್ಧರಿಸಿದ್ದು, ಈ ಪದಬಳಕೆಯನ್ನು ನಿಷೇಧಿಸದಿದ್ದರೂ, ಆಕ್ಷೇಪಾರ್ಹ ಎಂದು ಕಡತಗಳಿಂದ ತೆಗೆದುಹಾಕಲು ನಿರ್ಧರಿಸಿದೆ. ಒಂದು ರೀತಿಯಲ್ಲಿ ಇದನ್ನು ಸ್ವಾಗತಿಸಲೂಬಹುದು. ಏಕೆಂದರೆ ವಿರೋಧ ಪಕ್ಷಗಳು ಮತ್ತು ಆಡಳಿತಾರೂಢ ಪಕ್ಷಗಳು ಪರಸ್ಪರ ದೋಷಾರೋಪಣೆಯ ಸಂದರ್ಭದಲ್ಲಿ ಬಳಸುವ ಕೆಲವು ಪದಗಳು, ಭವಿಷ್ಯದ ಪೀಳಿಗೆಗೆ ಮಾರ್ಗದರ್ಶಕವಾಗಿರುವುದಿಲ್ಲ. 

1950-60ರ ದಶಕದ ಶಾಸನಸಭೆಗಳ ಕಲಾಪಗಳನ್ನೂ ಕಳೆದ 30 ವರ್ಷಗಳ ಕಲಾಪಗಳನ್ನೂ ಹೋಲಿಸಿ ನೋಡಿದರೆ ಎರಡು ಅಂಶಗಳು ಸ್ಪಷ್ಟವಾಗುತ್ತವೆ. ಮೊದಲನೆಯದು ಚುನಾಯಿತ ಪ್ರತಿನಿಧಿಗಳು ತಮ್ಮ ಸಾಂಸ್ಕೃತಿಕ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಕಳೆದುಕೊಂಡಿರುವುದು. ಟೀಕೆ-ವಿಮರ್ಶೆ ಮತ್ತು ನಿಂದನೆ ಈ ಮೂರು ಪದಗಳ ನಡುವಿನ ಮೌಲಿಕ ವ್ಯತ್ಯಾಸವನ್ನೇ ಅರಿಯದೆ ಜನಪ್ರತಿನಿಧಿಗಳು ಬಳಸುವ ಭಾಷೆ ಮತ್ತು ಪರಿಭಾಷೆ ಅನೇಕ ಸಂದರ್ಭಗಳಲ್ಲಿ ಇಡೀ ಸಮಾಜವನ್ನೇ ಕೆಟ್ಟ ರೀತಿಯಲ್ಲಿ ಪ್ರತಿಫಲಿಸುವ ಸಾಧ್ಯತೆಗಳೂ ಇರುತ್ತವೆ. ಎರಡನೆಯ ಅಂಶವೆಂದರೆ, ಜನಪ್ರತಿನಿಧಿಗಳು ಬಳಸುವ ದೋಷಾರೋಪಣೆಯ ಭಾಷೆ ಮತ್ತು ವಿಮರ್ಶಾತ್ಮಕ ಪರಿಭಾಷೆ ಎರಡೂ ತಮ್ಮ ಘನತೆಯನ್ನು ಕಳೆದುಕೊಂಡಿವೆ. ಈ ಕಲಾಪಗಳಲ್ಲಿ ನಡೆಯುವ ಸಂವಾದ ಜನತೆಗೆ ವಾಸ್ತವ ಪರಿಸ್ಥಿತಿಯ ಅರಿವು ಮೂಡಿಸುವುದಕ್ಕಿಂತಲೂ ಪರ ವಿರೋಧದ ನೆಲೆಗಳನ್ನು ಸೃಷ್ಟಿಸಲಷ್ಟೇ ನೆರವಾಗುವಂತಿರುತ್ತದೆ.

ಕೇಂದ್ರ ಸರಕಾರವು ಸಂಸತ್ ಕಲಾಪದ ವೇಳೆ ಕೆಲವು ಪದಗಳ ಬಳಕೆಯನ್ನು ನಿರ್ಬಂಧಿಸಿದೆ. ಹಲವು ಪದಗಳನ್ನು ಸಂಸದೀಯ ಕಲಾಪಗಳಲ್ಲಿ ಬಳಸದಂತೆ ನಿರ್ಬಂಧ ಹೇರಲಾಗಿದೆ ಎಂದು ಲೋಕಸಭಾಧ್ಯಕ್ಷ ಓಂ ಪ್ರಕಾಶ್ ಬಿರ್ಲಾ ಹೇಳಿದ್ದಾರೆ. ಕಲಾಪಗಳಲ್ಲಿ ಭಾಷಾ ಸೌಜನ್ಯ ಮತ್ತು ಸಂಯಮವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಇದು ಸ್ವಾಗತಾರ್ಹ ನಿರ್ಧಾರವೆಂದೇ ಹೇಳಬಹುದು. 

ಆದರೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಈ ಹಿಂದೆ ಬಳಸಲಾದ ಇಂತಹ ಪದಗಳನ್ನೇ ಪಟ್ಟಿ ಮಾಡಿ ನಿರ್ಬಂಧಿಸಲಾಗಿದೆ ಎಂದು ಲೋಕಸಭಾಧ್ಯಕ್ಷರು ಹೇಳಿರುವುದನ್ನು ಗಮನಿಸಿದಾಗ, ನಮ್ಮ ಸಂಸದರು ಮತ್ತು ಶಾಸಕರು ಎಷ್ಟರ ಮಟ್ಟಿಗೆ ತಮ್ಮ ಭಾಷಾ ಸೌಜನ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ ಎನ್ನುವುದನ್ನೂ ಗ್ರಹಿಸಬಹುದು. ಲೋಕಸಭೆ/ರಾಜ್ಯಸಭೆ ಅಥವಾ ವಿಧಾನಸಭೆ ಎನ್ನುವುದು ದೇಶದ ಆಡಳಿತ ವ್ಯವಸ್ಥೆಯ ಅತ್ಯುನ್ನತ ಪೀಠಗಳು. ಇಲ್ಲಿ ನಡೆಯುವ ಚರ್ಚೆಗಳು ಭೂತ ಮತ್ತು ವರ್ತಮಾನವನ್ನು ಚರ್ಚೆಗೊಳಿಸುತ್ತಲೇ ಭವಿಷ್ಯದ ಪೀಳಿಗೆಗೂ ಆದರ್ಶಪ್ರಾಯವಾದ ಒಂದು ಭಾಷಾ ಸೌಜನ್ಯತೆ ಮತ್ತು ಸಂಸ್ಕೃತಿಯನ್ನು ಬಿಟ್ಟು ಹೋಗುವಂತಿರಬೇಕಲ್ಲವೇ? ಸಮಸ್ತ ಜನತೆ ಅಲ್ಲದಿದ್ದರೂ ಬಹುಸಂಖ್ಯಾತ ಜನರಿಂದ ಚುನಾಯಿತರಾಗಿರುವ ಪ್ರತಿನಿಧಿಗಳು ಕೇವಲ ತಮ್ಮ ಪಕ್ಷಗಳನ್ನು ಮಾತ್ರವೇ ಪ್ರತಿನಿಧಿಸುವುದಿಲ್ಲ, ಸಮಸ್ತ ಸಮಾಜವನ್ನು ಮತ್ತು ಈ ಸಮಾಜದಲ್ಲಿ ಅಂತರ್ಗತವಾಗಿರುವ ಜನಸಾಂಸ್ಕೃತಿಕ ನೆಲೆಗಳನ್ನು ಪ್ರತಿನಿಧಿಸುತ್ತಾರೆ.

 ಹಾಗಾಗಿ ಈ ವೇದಿಕೆಯಲ್ಲಿ ಬಳಸುವ ಭಾಷೆಯಲ್ಲಿ ಸೌಜನ್ಯ ಮತ್ತು ಸಂಯಮ ಇಲ್ಲವಾದರೆ ಅದು ಬಾಹ್ಯ ಸಮಾಜದ ಒಂದು ಪ್ರತಿಬಿಂಬವಾಗಿಯೇ ಕಾಣುತ್ತದೆ. ರಾಜಕೀಯ ವಿರೋಧ ಮತ್ತು ಪ್ರತಿರೋಧಕ್ಕೂ ರಾಜಕೀಯ ಪರಿಭಾಷೆಗೂ ನಡುವೆ ಇರುವ ಸೂಕ್ಷ್ಮ ಅಂತರವನ್ನು ಕಾಪಾಡಿಕೊಂಡು ಬರುವ ನೈತಿಕ ಹೊಣೆಗಾರಿಕೆ ಆಯ್ಕೆಯಾದ ಪ್ರತಿನಿಧಿಗಳ ಮೇಲಿರುತ್ತದೆ. ತಮ್ಮ 13 ದಿನಗಳ ಸರಕಾರವು ಪತನವಾಗುತ್ತದೆ ಎಂಬ ಅರಿವಿದ್ದರೂ, ಸಂಸತ್ತಿನಲ್ಲಿ ವಿಶ್ವಾಸಮತ ಕೋರಲು 1996ರ ಮೇ 27ರಂದು ಅಟಲ್‌ಬಿಹಾರಿ ವಾಜಪೇಯಿ ಅವರು ಮಾಡಿದ ಸಂಸದೀಯ ಭಾಷಣವನ್ನು ಇಂದಿನ ಪ್ರತಿಯೊಬ್ಬ ಕಿರಿಯ ಸಂಸದ/ಶಾಸಕರೂ ಒಮ್ಮೆಯಾದರೂ ಆಲಿಸುವುದು ಒಳಿತು.

 ಅಂದಿನ ಭಾಷಣದಲ್ಲಿ ವಾಜಪೇಯಿಯವರ ಟೀಕೆ, ವಿಮರ್ಶೆ, ಆರೋಪ ಮತ್ತು ರಾಜಕೀಯ ಪ್ರತ್ಯಾರೋಪಗಳನ್ನು ಸಹಜವೆಂದೇ ಪರಿಗಣಿಸಿ ಆಲಿಸಿದಾಗ, ಅವರ ಭಾಷಣದಲ್ಲಿದ್ದ ಸೌಜನ್ಯ, ಸಂಯಮ ಮತ್ತು ಭಾಷಾ ಶಿಸ್ತು ಸಾರ್ವಕಾಲಿಕವಾಗಿ ಮಾನ್ಯತೆ ಪಡೆಯುವಂತಿತ್ತು. ತಾವು ಅಧಿಕಾರ ಕಳೆದುಕೊಳ್ಳುವ ಹತಾಶೆಯಾಗಲೀ, ಆಕ್ರೋಶವಾಗಲೀ ತೋರಗೊಡದೆ ಪ್ರಜಾತಂತ್ರದ ಚೌಕಟ್ಟಿನಲ್ಲೇ ತಮ್ಮ ವಿರೋಧಿಗಳಿಗೆ ಪ್ರತ್ಯುತ್ತರ ನೀಡಿದ ವಾಜಪೇಯಿ ಅವರ ಈ ಭಾಷಣ ಎಲ್ಲರ ಮೆಚ್ಚುಗೆ ಗಳಿಸಿದ್ದಕ್ಕೆ ಕಾರಣವೆಂದರೆ ಅವರ ಭಾಷೆಯಲ್ಲಿದ್ದ ಸಂಯಮ ಮತ್ತು ಸೌಜನ್ಯ. ಮುಕ್ತ ಮನಸ್ಸಿನಿಂದ ಯೋಚಿಸಿದರೆ ಇಂದಿನ ಎಲ್ಲ ರಾಜಕೀಯ ನಾಯಕರೂ ಇದರಿಂದ ಕಲಿಯುವುದಿದೆ.

 ಬಹುಶಃ ಇದೇ ಸೌಜನ್ಯ ಮತ್ತು ಸಂಯಮವನ್ನು ನಮ್ಮ ಜನಪ್ರತಿನಿಧಿಗಳು ಕಾಪಾಡಿಕೊಂಡು ಬಂದಿದ್ದಲ್ಲಿ, ಇತ್ತೀಚಿನ ನಿರ್ಬಂಧಗಳು ಅನಪೇಕ್ಷಿತವಾಗುತ್ತಿದ್ದವು. ಆದರೆ ಭಾರತದ ಅಧಿಕಾರ ರಾಜಕಾರಣದ ಪರಿಭಾಷೆ ಮನುಜ ಸಂವೇದನೆಯನ್ನೂ ಕಳೆದುಕೊಂಡಿರುವುದನ್ನು ನಾವು ಕಾಣುತ್ತಿದ್ದೇವೆ. ಒಂದು ನಾಗರಿಕ ಸಮಾಜವಾಗಿ ನಾವು ನಿರ್ಬಂಧಿಸಬೇಕಿರುವುದು ಕೇವಲ ಸಂಸದೀಯ ನೆಲೆಯ ಪರಿಭಾಷೆಯನ್ನೇ ಅಲ್ಲ. ಸಾರ್ವಜನಿಕ ಬದುಕಿನಲ್ಲೂ ಕಳೆದ ಎರಡು ಮೂರು ದಶಕಗಳಿಂದ ನಾವು ಆಲಿಸುತ್ತಿರುವ ರಾಜಕೀಯ ಪರಿಭಾಷೆಯನ್ನೇ ಮರುಪರಿಷ್ಕರಣೆಗೆ ಒಳಪಡಿಸಬೇಕಿದೆ. ಶಿಕ್ಷಣದಿಂದ ಅಧ್ಯಾತ್ಮದವರೆಗೆ, ಸಾಂಸ್ಕೃತಿಕ ನೆಲೆಯಿಂದ ಧಾರ್ಮಿಕ ನೆಲೆಗಳವರೆಗೆ ಸಮಾಜದಲ್ಲಿ ರಾಜಕೀಯ ಪ್ರಜ್ಞೆ ಸೂಕ್ಷ್ಮವಾಗಿ ನುಸುಳಿರುವುದರ ಹಿನ್ನೆಲೆಯಲ್ಲಿ ಇಂದಿನ ಯುವ ಪೀಳಿಗೆಗೆ, ಯುವ ಸಮಾಜಕ್ಕೆ ರಾಜಕೀಯ ನಾಯಕರೇ ಬೌದ್ಧಿಕ ಸ್ಫೂರ್ತಿಯಾಗುತ್ತಿದ್ದಾರೆ. 

ಡಾ. ಬಿ.ಆರ್. ಅಂಬೇಡ್ಕರ್‌ಅವರ ನಂತರ ಭಾರತ ಒಬ್ಬ ಸಮಾಜ ಸುಧಾರಕನನ್ನು ಕಂಡಿಲ್ಲ ಎಂಬ ಸುಡುವಾಸ್ತವ ನಮ್ಮ ಗಮನದಲ್ಲಿರಬೇಕಿದೆ. ಏಕೆಂದರೆ ಸುಧಾರಣೆಯ ಎಲ್ಲ ನೆಲೆಗಳನ್ನೂ ಆವಾಹಿಸಿಕೊಂಡಿರುವ ರಾಜಕೀಯ ಪ್ರಜ್ಞೆ ಸಮಾಜ ಸುಧಾರಣೆಯ ಪರಿಕಲ್ಪನೆಯನ್ನೇ ವಿಕೃತಗೊಳಿಸಿದೆ. ಜಾತಿ, ಮತ, ಧರ್ಮ, ಪಂಥ, ಭಾಷಿಕ ಮತ್ತು ಪ್ರಾದೇಶಿಕ ಅಸ್ಮಿತೆಗಳ ನೆಲೆಯಲ್ಲೇ ಮಾನವ ಸಮಾಜದ ಬೌದ್ಧಿಕ ವಿಕಾಸವನ್ನು ನಿಷ್ಕರ್ಷೆಗೊಳಿಸುವ ಒಂದು ನವ ಸಂಸ್ಕೃತಿಗೆ ಭಾರತ ತೆರೆದುಕೊಳ್ಳುತ್ತಿದೆ. ಹಾಗಾಗಿಯೇ ಸಂಸ್ಕೃತಿ ಎನ್ನುವುದೂ ಸಾಪೇಕ್ಷವಾಗಿದೆ. ಸಮಾಜ ಸುಧಾರಣೆಯ ಕೂಗು ಅಸ್ಮಿತೆಗಳ ಚೌಕಟ್ಟಿನಲ್ಲಿ ಬಂಧಿತವಾಗಿರುವ ಸಂದರ್ಭದಲ್ಲಿ ಆಧ್ಯಾತ್ಮಿಕ ಮಠಗಳೂ, ಧಾರ್ಮಿಕ ಕೇಂದ್ರಗಳೂ ತಮ್ಮ ಸಾಮಾಜಿಕ ಹಾಗೂ ಸಾಮುದಾಯಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ರಾಜಕೀಯ ವೇದಿಕೆಗಳನ್ನೇ ಚಿಮ್ಮುಹಲಗೆಯಂತೆ ಬಳಸಿಕೊಳ್ಳುತ್ತಿವೆ. ಹಾಗಾಗಿಯೇ ಸುಧಾರಣೆಯ ಸ್ವರಗಳೂ ಕ್ಷೀಣಿಸುತ್ತಲೇ ಬರುತ್ತಿದ್ದು, ಸಾಂಸ್ಕೃತಿಕ ಪರಿಭಾಷೆಯೂ ಸಾಪೇಕ್ಷವಾಗುತ್ತಿದೆ. 

ಮಠಾಧೀಶರು, ಮಠೋದ್ಯಮಿಗಳು ಮತ್ತು ಮಠಾಧಿಪತಿಗಳು ರಾಜಕೀಯ ಪರಿಭಾಷೆಯಲ್ಲೇ ಮಾತನಾಡುತ್ತಿರುವುದರಿಂದಲೇ ಇಂದಿನ ಯುವ ಸಮೂಹಕ್ಕೆ ರಾಜಕೀಯ ನಾಯಕರೇ ಆದರ್ಶಪ್ರಾಯರಾಗಿ ಕಾಣುತ್ತಿದ್ದಾರೆ. ಈ ಸಂದರ್ಭದಲ್ಲಿ ಯುವ ಪೀಳಿಗೆಯಲ್ಲಿ ಒಂದು ಆಶಾದಾಯಕ ಭವಿಷ್ಯದ ಕಲ್ಪನೆಯನ್ನು ಬಿತ್ತಬೇಕಾದ ರಾಜಕೀಯ ನಾಯಕರು ಸಾರ್ವಜನಿಕ ಬದುಕಿನಲ್ಲಿ ಬಳಸುತ್ತಿರುವ ಭಾಷೆ ಮತ್ತು ನಡೆಸುತ್ತಿರುವ ಜೀವನ ಎಷ್ಟರ ಮಟ್ಟಿಗೆ ಸುಸಂಸ್ಕೃತತೆಯನ್ನು ಪೋಷಿಸುತ್ತದೆ ಎಂದು ಪ್ರಜ್ಞಾವಂತರಾದರೂ ಯೋಚಿಸಬೇಕಿದೆ. ದ್ವೇಷ, ಈರ್ಷೆ, ಮತ್ಸರ, ಹಿಂಸೆ, ಅಸಹನೆ ಇವೆಲ್ಲವೂ ಇಂದಿನ ರಾಜಕೀಯ ನಾಯಕರ ಭಾಷಣಗಳಲ್ಲಿ, ಹೇಳಿಕೆಗಳಲ್ಲಿ ಮತ್ತು ಟ್ವೀಟ್‌ಗಳಲ್ಲಿ ವಿಪುಲವಾಗಿ ಕಾಣುತ್ತಲೇ ಬಂದಿದ್ದೇವೆ. 

ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡು ವಾಗಲೂ ತಾವು ಒಂದು ನಾಗರಿಕ ಸಮಾಜದ ನಡುವೆ ಇದ್ದೇವೆ ಎಂಬ ಪರಿವೆಯೇ ಇಲ್ಲದೆ ಮಾತನಾಡುವ ಅನೇಕಾನೇಕ ರಾಜಕೀಯ ನಾಯಕರು ನಮ್ಮ ನಡುವೆ ಉದಯಿಸಿದ್ದಾರೆ, ರಾರಾಜಿಸುತ್ತಿದ್ದಾರೆ, ಮುನ್ನಡೆಯುತ್ತಿದ್ದಾರೆ. ಪರಸ್ಪರ ದೋಷಾರೋಪಣೆ ಮತ್ತು ಟೀಕೆಗಳಿಗೂ ರಾಜಕಾರಣಕ್ಕೂ ಅವಿನಾಭಾವ ಸಂಬಂಧವಿರುವುದು ಸತ್ಯ. ಆದರೆ ಈ ಟೀಕೆಗಳ ಸಂದರ್ಭದಲ್ಲಿ ಬಳಸುವ ಭಾಷೆಗೂ ಸಾರ್ವಜನಿಕ ಸುಪ್ರಜ್ಞೆಗೂ ಇದೇ ರೀತಿಯ ಸೂಕ್ಷ್ಮ ಸಂಬಂಧ ಇರುವುದನ್ನು ಸಾರ್ವಜನಿಕ ನಾಯಕರು ಗಮನಿಸಬೇಕಲ್ಲವೇ? ಇಂದಿನ ಬಹುತೇಕ ರಾಜಕೀಯ ನಾಯಕರಲ್ಲಿ ಈ ಪ್ರಜ್ಞೆ ಇದ್ದಂತೆ ಕಾಣುವುದಿಲ್ಲ.

 ಹಾಗಾಗಿಯೇ ಇದೇ ನಾಯಕರನ್ನು ಅನುಕರಿಸುವ ಯುವಪೀಳಿಗೆಯಲ್ಲೂ ಭಾಷಾ ಸೌಜನ್ಯ ಮತ್ತು ಸಂಯಮ ಕ್ಷೀಣಿಸುತ್ತಲೇ ಇದೆ. ಸಾಮಾಜಿಕ ಮಾಧ್ಯಮಗಳಲ್ಲಿ, ಟ್ವಿಟರ್, ಫೇಸ್‌ಬುಕ್, ಇನ್ಸ್ಟಾಗ್ರಾಂ ಮುಂತಾದ ತಾಣಗಳಲ್ಲಿ, ಯುಟ್ಯೂಬ್‌ಗಳಲ್ಲಿ ಯುವ ಪೀಳಿಗೆಯಿಂದ ವ್ಯಕ್ತವಾಗುವ ಅಭಿಪ್ರಾಯಗಳನ್ನು ಗಮನಿಸಿದಾಗ, ನಮ್ಮ ಸಮಾಜ ನಾಗರಿಕತೆಯಿಂದ ವಿಮುಖವಾಗುತ್ತಿದೆಯೇ, ಸಂವೇದನಾಶೂನ್ಯವಾಗುತ್ತಿದೆಯೇ ಎಂಬ ಆತಂಕ ಮೂಡುತ್ತದೆ. ಸಾರ್ವಜನಿಕ ವಲಯವನ್ನು ಇನ್ನೂ ಹೆಚ್ಚು ಪ್ರಭಾವಿಸುವ ವಿದ್ಯುನ್ಮಾನ ದೃಶ್ಯಮಾಧ್ಯಮಗಳನ್ನು, ಟಿವಿ ವಾಹಿನಿಗಳ ಧಾರಾವಾಹಿಗಳನ್ನು ಮತ್ತು ಸುದ್ದಿಮನೆಗಳ ನಿರೂಪಕರ ಮಾತಿನ ಶೈಲಿಯನ್ನು ಗಮನಿಸುತ್ತಾ ಹೋದರೆ ಈ ಆತಂಕಗಳೇ ಆಘಾತಕ್ಕೆ ಎಡೆಮಾಡಿಕೊಡುತ್ತದೆ. 

ರಾಜಕೀಯ ನಾಯಕರಿಗೆ ಭಾಷಾ ಸೌಜನ್ಯವನ್ನು ಕಾಪಾಡಿಕೊಳ್ಳುವಂತೆ ಎಚ್ಚರಿಸುವ ನೈತಿಕ ಹೊಣೆ ಹೊರಬೇಕಾದ ಮಾಧ್ಯಮಗಳು ಇಂದು ಆ ನೈತಿಕತೆಯನ್ನೇ ಕಳೆದುಕೊಳ್ಳುವ ಮಟ್ಟಿಗೆ ಸೌಜನ್ಯ-ಸಂಯಮ ಮತ್ತು ಸಂವೇದನೆಯನ್ನು ಕಳೆದುಕೊಂಡಿವೆ. ದಿನನಿತ್ಯ ಕೋಟ್ಯಂತರ ಯುವಜನರನ್ನು ನೇರವಾಗಿ ತಲುಪುವ ಈ ಸಂವಹನ ಮಾಧ್ಯಮಗಳಲ್ಲಿ ಭಾಷಾ ಸೌಜನ್ಯ ಮತ್ತು ಸಂಯಮ ಇಲ್ಲವಾದರೆ, ಸಮಾಜ ಸುಧಾರಣೆ ಹೇಗೆ ಸಾಧ್ಯವಾದೀತು? ಇದು ಯೋಚಿಸಬೇಕಾದ ವಿಚಾರ. ಈ ವಿಕೃತಿಯು ದಿನಗಳೆದಂತೆ ಹೆಚ್ಚಾಗುತ್ತಲೇ ಹೋಗುತ್ತಿದ್ದರೆ ಅದಕ್ಕೆ ರಾಜಕೀಯ ನಾಯಕರೂ ಭಾಗಶಃ ಹೊಣೆ ಹೊರಬೇಕಾಗುತ್ತದೆ

. ಅಪರಾಧಗಳ ಮೂಟೆಗಳನ್ನು ಹೊತ್ತು ಶಾಸನಸಭೆಗಳನ್ನು ಪ್ರವೇಶಿಸುವ ಜನಪ್ರತಿನಿಧಿಗಳಲ್ಲಿ ಈ ನೈತಿಕತೆಯನ್ನು ಅಪೇಕ್ಷಿಸಲೂ ಸಾಧ್ಯವಿಲ್ಲ. ಎಷ್ಟೇ ಕ್ಷುಲ್ಲಕ ಎನಿಸಿದರೂ, ಅಪರಾಧಗಳಿಂದ ಕಳಂಕಿತರಾದವರನ್ನು ಅಧಿಕಾರ ರಾಜಕಾರಣದಿಂದ ದೂರ ಇರಿಸುವ ಇಚ್ಛಾಶಕ್ತಿಯನ್ನು ರಾಜಕೀಯ ವ್ಯವಸ್ಥೆ ಕಳೆದುಕೊಂಡಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ, ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿಯೂ ಇದನ್ನು ಅಪೇಕ್ಷಿಸಲಾಗದಷ್ಟು ಮಟ್ಟಿಗೆ ಅಪರಾಧ ಮತ್ತು ಪಾಪಪ್ರಜ್ಞೆಯನ್ನು ಸಾಪೇಕ್ಷಗೊಳಿಸಲಾಗಿದೆ. ಅಸ್ಮಿತೆಗಳ ಚೌಕಟ್ಟಿನಲ್ಲಿ ಅಪರಾಧಗಳನ್ನೂ ವಿವೇಚಿಸುವ ಒಂದು ಹೊಸ ಪರಂಪರೆಯನ್ನೇ ಹುಟ್ಟುಹಾಕಲಾಗಿದ್ದು, ಸಾರ್ವಜನಿಕವಾಗಿ ಅನಪೇಕ್ಷಿತವಾದ ಎಲ್ಲ ಅವಗುಣಗಳನ್ನೂ ಯಾವುದೋ ಒಂದು ಅಸ್ಮಿತೆಯ ಚೌಕಟ್ಟಿನಲ್ಲಿ ಅಪೇಕ್ಷಿತವಾಗಿ ಅಥವಾ ಸಹನೀಯವಾಗಿ ಕಾಣಲಾಗುತ್ತಿದೆ.

ಇಂದು ಸಮಾಜದಲ್ಲಿ ಜಾತಿ, ಮತ, ಧರ್ಮಗಳ ನೆಲೆಯಲ್ಲಿ ಅಸಹಿಷ್ಣುತೆ ಆಳವಾಗಿ ಬೇರೂರುತ್ತಿದೆ. ಅಸಹಿಷ್ಣುತೆ ಇರಲೇಬೇಕೆಂದರೆ ಅದು ಈ ಅವಗುಣಗಳ ಬಗ್ಗೆ ಇರಬೇಕಾಗುತ್ತದೆ. ಸಮಾಜದ ಸ್ವಾಸ್ಥ್ಯ ಮತ್ತು ಮನುಜ ಸಂವೇದನೆಯನ್ನು ಭಂಗಗೊಳಿಸುವ ಯಾವುದೇ ಭಾಷೆ ಅಥವಾ ಪರಿಭಾಷೆಯನ್ನು ನಾವು ಸಹಿಸಿಕೊಳ್ಳಲಾರೆವು ಎಂಬ ಸಂದೇಶವನ್ನು ಸಮಾಜ ನೀಡಬೇಕಿದೆ. ಹೀಗೆ ಅಧಿಕಾರಯುತವಾಗಿ ಆದೇಶಿಸಬೇಕಾದ ಒಂದು ಸಮಾಜವನ್ನು ರೂಪಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ.

 ಸಂಸತ್‌ಕಲಾಪಗಳಿಂದ ನಿರ್ಬಂಧಿತವಾಗಿರುವ ಪದಗಳಷ್ಟೇ ಅಲ್ಲದೆ, ಸಾಮಾಜಿಕ ಸಂವೇದನೆಯನ್ನೇ ಹಾಳುಗೆಡಹುವಂತಹ ಅನೇಕಾನೇಕ ಪದಗಳು, ಪದಗುಚ್ಚಗಳು ನಮ್ಮ ಸಾರ್ವಜನಿಕ ಜೀವನದಲ್ಲಿ ರಾರಾಜಿಸುತ್ತಿವೆ. ಈ ಪದಬಳಕೆಯನ್ನು ಶಾಸನಬದ್ಧವಾಗಿ ನಿಷೇಧಿಸಲಾಗುವುದಿಲ್ಲ. ಆದರೆ ಒಂದು ಆರೋಗ್ಯಕರ ಸಮಾಜವನ್ನು ನಿರ್ಮಿಸುವ ಸದುದ್ದೇಶವನ್ನು ಹೊಂದಿರುವುದೇ ಆದರೆ ಪ್ರತಿಯೊಬ್ಬ ನಾಗರಿಕನೂ ಸ್ವಪ್ರೇರಣೆಯಿಂದ ಈ ನಿಷೇಧವನ್ನು ಹೇರಿಕೊಳ್ಳಬಹುದು. ರಾಜಕೀಯ ನಾಯಕರು ಈ ನಿಟ್ಟಿನಲ್ಲಿ ಮುಂದಾಳತ್ವ ವಹಿಸುತ್ತಾರೆ ಎಂದು ಭಾವಿಸುವುದು ಅತ್ಯುತ್ಪ್ರೇಕ್ಷೆಯಾಗುತ್ತದೆ. ಆದರೆ ನಾಗರಿಕತೆಯತ್ತ ಸಾಗುತ್ತಿರುವ ಒಂದು ಸಮಾಜ ಮತ್ತು ಈ ಸಮಾಜ ಮುಂದಾಳತ್ವ ವಹಿಸಲು ಬಯಸುವ ಯಾವುದೇ ಸಾಂಸ್ಕೃತಿಕ ವೇದಿಕೆಗಳು ಈ ನಿಟ್ಟಿನಲ್ಲಿ ಯೋಚಿಸಬಹುದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top