-

ಪ್ರತಿಕ್ರಿಯಾಶ್ಲೀಲರು

-

ರಾಜಕೀಯ ನಮ್ಮನ್ನೆಷ್ಟು ಆವರಿಸಿದೆಯೆಂದರೆ ಯಾವುದನ್ನೇ ಆದರೂ ರಾಜಕೀಯವಾಗಿ ಯೋಚಿಸುತ್ತೇವೆ. ಒಂದು ಕಲಾಕೃತಿಯ ವಿಮರ್ಶೆಗೆ ತೊಡಗುವವನು ಆ ಕಲಾವಿದನ ಜಾತಿ, ಧರ್ಮ, ಪಂಗಡ, ಮತ ಇತ್ಯಾದಿಗಳ ವಿವರಗಳನ್ನು ಪಡೆದು ಅದು ಸಮಾಜಕ್ಕೆ ಹಿತವೋ ಅಹಿತವೋ ಎಂದು ನಿರ್ಧರಿಸುತ್ತಾನೆ. ಸೃಜನಶೀಲ ಮನಸ್ಸು ಎಷ್ಟೇ ದೊಡ್ಡದಿರಲಿ ಈ ಅಸಂಬದ್ಧ ವಿಚಾರಗಳ ನಿಕಷಕ್ಕೆ ತನ್ನನ್ನೊಡ್ಡಿಕೊಂಡು ಅಲ್ಲಿ ತೇರ್ಗಡೆಯಾದರೆ ಮಾತ್ರ ಮುಂದೆ ಸಾಗಲು ಸಾಧ್ಯ.


ಇತ್ತೀಚೆಗೆ ಬಾಲಿವುಡ್ ನಟ ರಣವೀರ್‌ಸಿಂಗ್ ನಿಯತಕಾಲಿಕವೊಂದಕ್ಕೆ ಬೆತ್ತಲೆ ನಿಂತ ಚಿತ್ರಗಳು ಮಾಧ್ಯಮಗಳಲ್ಲಿ ಹರಿದವು. ಆತನ ವಿರುದ್ಧ ನೈತಿಕ ಮೌಲ್ಯಗಳ ಟೀಕೆಗಳು ಸುರಿದವು. ಕ್ರಿಮಿನಲ್ ಪ್ರಕರಣವೂ ದಾಖಲಾಯಿತೆಂದು ಸುದ್ದಿ. ಈ ರೀತಿ ಬಹಿರಂಗಗೊಂಡ ಬೆತ್ತಲೆಯಿಂದ ಆತನ ಮಾನ ಎಷ್ಟು ಸೋರಿಹೋಯಿತೋ ಅದು ಪ್ರತ್ಯೇಕ ವಿಚಾರ. ಆದರೆ ಮಹಿಳೆಯರಿಗೆ ಅಪಚಾರವಾಯಿತೆಂಬ ರೀತಿಯಲ್ಲಿ ಟೀಕೆಗಳಾದವು. ಹೀಗೆ ಆತ ನಿಂತನೇಕೆ ಮತ್ತು ಇದರಿಂದಾಗಿ ಸಮಾಜಕ್ಕೆ ಏನು ಕೆಡುಕಾಗಿದೆ ಎಂಬ ಜಿಜ್ಞಾಸೆಯು ತೀರಾ ಸರಳವಾಗಿ ಚರ್ಚೆಯಾಯಿತು. ಶತಮಾನಗಳಿಂದ ಇರುವ ಬಾಹುಬಲಿಯ ಮೂರ್ತಿ ಯಾರಿಗೂ ಅಪಚಾರವಾಗಿಲ್ಲ. ಅದನ್ನು ಭಾವುಕತೆಯಿಂದ, ಭಕ್ತಿಯಿಂದ, ಅಭಿಮಾನದಿಂದ ನೋಡುತ್ತಾರೆಯೇ ಹೊರತು ಅಶ್ಲೀಲವೆಂದಲ್ಲ. ಮೈಖೇಲ್‌ಏಂಜೆಲೋವಿನ ಕಲಾಕೃತಿಗಳನ್ನು, ರಾಜಾರವಿವರ್ಮನ ತೈಲಚಿತ್ರಗಳನ್ನು, ಎಂ.ಎಫ್. ಹುಸೇನ್ ಅವರ ಚಿತ್ರಗಳನ್ನು ಅಶ್ಲೀಲವೆಂದೂ ಕಾಣಬಹುದು. ಇವು ಕೇವಲ ಉದಾಹರಣೆಗಳು. ವಿಶ್ವದ ಬಹುಪಾಲು ಸಾಂಸ್ಕೃತಿಕ ಕೇಂದ್ರಗಳಲ್ಲಿ, ಅಜಂತಾ, ಎಲ್ಲೋರಾ, ಖಜುರಾಹೋಗಳಲ್ಲಿರುವ ಮೂರ್ತಿಗಳು ಲೈಂಗಿಕತೆಯನ್ನು ತೋರಿಸುತ್ತವೆಯಾದರೂ ಅವನ್ನು ಸೌಂದರ್ಯವೆಂದು, ಕಲೆಯೆಂದು ಕಂಡವರೇ ಹೆಚ್ಚು. ಪ್ರಕೃತಿಯಲ್ಲಿ, ಸಂಸ್ಕೃತಿಯಲ್ಲಿ, ವಿಕೃತಿಯನ್ನು ಕಾಣುವವರಿದ್ದಾರೆ. ಇಲ್ಲವೆಂದಲ್ಲ. ಆದರೆ ಅಂಥವರು ಶಿಷ್ಟಾಚಾರದ ನಿಯಮಕ್ಕೆ ಅಪವಾದಗಳು. ಎಲ್ಲ ಬಗೆಯ ಸಾಹಿತ್ಯದಲ್ಲೂ ಅಶ್ಲೀಲವನ್ನು ಹುಡುಕುತ್ತ ಹೋಗಬಹುದು.

ಅಂತರಂಗದ ಸೌಂದರ್ಯವನ್ನು ಬಣ್ಣಿಸುವವರು ಬಯಸುವವರು ಬಾಹ್ಯ ವಿವರಗಳಿಗೆ ಹೆಚ್ಚು ಮಹತ್ವವನ್ನು ನೀಡುವುದಿಲ್ಲ. ಇಷ್ಟಕ್ಕೂ ಸೌಂದರ್ಯವಿರುವುದು ನೋಟಕನ ಕಣ್ಣುಗಳಲ್ಲಿ ಮಾತ್ರವಲ್ಲ, ಗ್ರಹಿಕೆಯಲ್ಲೂ ಹೌದು. ತಾಯಿ ಮಗುವಿಗೆ ಹಾಲುಣಿಸುವ ಚಿತ್ರವಾಗಲೀ, ವಿವರಣೆಯಾಗಲೀ ಅಸಹ್ಯವೆಂದು ಕಾಣುವವನು ಪ್ರಕೃತಿ ವಿರೋಧಿ; ವಿಕೃತವಾದಿ. ಹೀಗೆ ಮನುಷ್ಯದೇಹವನ್ನು ಬೆತ್ತಲೆಯಾಗಿಸುವ ರೂಪಕವು ಸಮಾಜದ ಉನ್ನತಿಯನ್ನೂ ಮನುಷ್ಯನ ವೈಯಕ್ತಿಕ ಹಾಗೂ ಸಾಮೂಹಿಕ ಭಾವವನ್ನೂ ಚಿತ್ರಿಸುತ್ತದೆ. ಇಂದು ಬದುಕಿನ ಅನೇಕ ಕ್ಷೇತ್ರಗಳಲ್ಲಿ ವೈಯಕ್ತಿಕ ದೃಷ್ಟಿಕೋನವು ವ್ಯವಹರಿಸಲಾರಂಭಿಸಿದೆ. ನಮಗಿಷ್ಟವಾಗದ್ದನ್ನು ಬೇಡವೆಂದು ಬಿಡುವ ಸ್ಥಿತಿಯಲ್ಲಿ ಇಂದಿನ ಸಮಾಜವಿಲ್ಲ. ಅದೇಕೆ ಬೇಡವೆಂಬಲ್ಲಿಂದ ಆರಂಭವಾಗಿ ಅದರ ಪರ-ವಿರೋಧ ಎಷ್ಟು ಜನರಿರುತ್ತಾರೆಂಬುದರ ಮೇಲೆ ಆ ವ್ಯಾಪಾರದ ಮೌಲ್ಯವು ನಿರ್ಧರಿತವಾಗುತ್ತಿದೆ. ಹೀಗೆ ಟೀಕಿಸುವಾಗ ನಾವು ಅಭಿಪ್ರಾಯಪಡುವ ಕೃತಿಯ ಮೌಲ್ಯಕ್ಕಿಂತಲೂ ಅದನ್ನು ಅಳೆಯುವ ರೀತಿಯು ಅಸಹ್ಯವಾಗುತ್ತಿದೆ. ಅದೆಷ್ಟು ಅಶ್ಲೀಲವಾಗುತ್ತಿದೆಯೆಂದರೆ ಅದನ್ನು ಓದಿ-ನೋಡಿದ ವ್ಯಕ್ತಿಯ ಧಾಟಿಯೇ ಬದಲಾಗುವಷ್ಟು. ಹಿಂದೆ ತಲೆಮಾರಿನ ಆನಂತರ ಆಗುವ ಬದಲಾವಣೆಗಳು ಈಗ ತ್ವರಿತವಾಗಿ ನಡೆಯುತ್ತಿವೆ. 'ಸತ್ಯಂ ಶಿವಂ ಸುಂದರಂ' ಅಥವಾ 'ರಾಮ್ ತೇರಿ ಗಂಗಾ ಮೈಲಿ' ಮುಂತಾದ ಸಿನೆಮಾಗಳಲ್ಲಿ ನಾಯಕಿಯನ್ನು ತೋರಿಸಿದ ರೀತಿಯು ಅಪಾರ ಟೀಕೆಗೊಳಗಾಯಿತು. ಆ ಕಥೆಗೆ, ಸನ್ನಿವೇಶಕ್ಕೆ ಅದು ಅಗತ್ಯವೆಂದು ರಾಜ್‌ಕಪೂರ್ ಸಮರ್ಥಿಸಿಕೊಂಡರು. ಅಲ್ಲಿಗೆ ಅದು ಮುಗಿದುಹೋಯಿತು. ಸಿನೆಮಾದಲ್ಲಿ ಚುಂಬನದ ದೃಶ್ಯಗಳು ಬರಲಾರಂಭಿಸಿದಾಗ ಅದನ್ನು ಗುಟ್ಟಾಗಿ ನೋಡುವ ಪ್ರಮೇಯವುಂಟಾಯಿತು. ಪಾಶ್ಚಾತ್ಯರು ಈ ವಿಚಾರದಲ್ಲಿ ಭಾರತೀಯರಿಗಿಂತ ದಶಕಗಳಷ್ಟು ಮುಂದಿದ್ದರು. ಬದುಕೇ ಒಂದಷ್ಟು ವರ್ಷಗಳದ್ದಿರುವಾಗ ಬದುಕನ್ನು ಹೇಗೆ ಬೇಕಾದರೂ ತೋರಿಸಬಹುದು ಮತ್ತು ಅದು ಇತರರನ್ನು ಬಾಧಿಸದು ಎಂಬ ತರ್ಕ ಅವರದ್ದು.

ಕಲೆಯನ್ನು ಕಲೆಯಾಗಿ ನೋಡಬೇಕೇ ಹೊರತು ಅದನ್ನು ನೈತಿಕ ಅಧಃಪತನವೆಂಬಂತೆ ನೋಡಬಾರದು ಎಂಬ ದೃಷ್ಟಿಯನ್ನು ಪೌರ್ವಾತ್ಯರಿಗಿಂತ ಪಾಶ್ಚಾತ್ಯರು ಹೆಚ್ಚು ಅರ್ಥಮಾಡಿಕೊಂಡಿದ್ದಾರೇನೋ ಅನ್ನಿಸುತ್ತದೆ. ಸೌಂದರ್ಯ ಶಾಸ್ತ್ರಿಗರು ಈ ನಿಟ್ಟಿನಲ್ಲಿ ಹೆಚ್ಚು ಬೆಳಕು ಬೀರಲು ಶಕ್ತರು. ನಾವು ಯಾವುದನ್ನು ನಮ್ಮ ಸಂಸ್ಕೃತಿ, ನಾಗರಿಕತೆ ಎಂದೆಲ್ಲ ಹೇಳುತ್ತೇವೋ ಅದನ್ನು ಕಾಪಾಡಲು, ಕಾಪಿಡಲು ನಾವು ಶಕ್ತರಾಗಿದ್ದೇವೆಯೇ? ಇದನ್ನು ಸದ್ಯ ಭಾರತದ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಗಮನದಲ್ಲಿರಿಸಿ ಚರ್ಚಿಸಬಹುದು. ಜಗತ್ತು ಜೀವವೈವಿಧ್ಯವನ್ನೊಳಗೊಂಡಂಥದ್ದು. ಇದೇ ಬೇಕು, ಇದೇ ಶ್ರೇಷ್ಠ ಎಂದು ತರ್ಕಿಸಿದರೆ ಅದರ ಫಲ ಶೂನ್ಯ. ನಾವು ರಕ್ಷಿಸಬೇಕೆಂದಿರುವ ಸಂಸ್ಕೃತಿ, ನಾಗರಿಕತೆ ಯಾವುದು? ಟೈಗ್ರಿಸ್, ನೈಲ್, ಸಿಂಧೂ ನದಿ ದಡಗಳ, ಮೆಸಪೊಟೋಮಿಯಾ, ಹರಪ್ಪ, ಮೊಹೆಂಜೋದಾರೋ ಮುಂತಾದ ಸಂಸ್ಕೃತಿ ಎಲ್ಲಿ ಹೋದವು? ಅವು ನಿಜಕ್ಕೂ ಸಂಸ್ಕೃತಿಗಳೇ ಅಥವಾ ನಾಗರಿಕತೆಯೇ? ನಾವು ಪ್ರಗತಿಯೆಂದು, ಅಭಿವೃದ್ಧಿಯೆಂದು ಬಿಂಬಿಸುವ ಬದಲಾವಣೆಗಳಲ್ಲಿ ಹಳತು ನಶಿಸಿಹೋದದ್ದನ್ನು ಹೇಗೆ ಸ್ವೀಕರಿಸುತ್ತೇವೆ? ಇತಿಹಾಸದಲ್ಲಿ ಡೈನೋಸೋರಸ್ ಎಂಬ ಪ್ರಾಣಿ ಸಂದುಹೋಯಿತೇಕೆ? ಯಾವುದು ಸರಿ? ಯಾವುದು ತಪ್ಪು? ಅಳಿದದ್ದಕ್ಕೂ ಉಳಿದದ್ದಕ್ಕೂ ಕಾರಣವೇನು? ವ್ಯತ್ಯಾಸವೇನು? ನಾಯಿ ತೋಳದ ತಳಿಯೆಂದು ಹೇಳುತ್ತೇವೆ. ಬೆಕ್ಕು ಹುಲಿಯ ತಳಿಯೆನ್ನುತ್ತೇವೆ. ಯಾವುದು ಉಳಿಯಬೇಕೆಂದು ಯಾರು ನಿರ್ಧರಿಸಿದರು? ಇವೆಲ್ಲ ಸದ್ಯ ಬೆಳ್ಳಿಪರದೆಯ ಮೇಲೆ ಮಿಂಚುವ ಕುತೂಹಲವಾಗಿ ಉಳಿದಿವೆ.

ಇಷ್ಟು ಸಂಕೀರ್ಣವಾದ ದೇಶ-ಕಾಲದಲ್ಲಿ ಮನುಷ್ಯನೆಂಬ ಯೋಚನಾಶೀಲ ವ್ಯಕ್ತಿಯು ತನ್ನ ಚರ್ಮವನ್ನು ಎಂದೂ ಇಷ್ಟು ತೆಳುವಾಗಿಸಿರಲಿಲ್ಲ. ಈಗ ರಣವೀರ್‌ಸಿಂಗ್‌ನ ಬೆತ್ತಲೆ ದೇಹಕ್ಕಿಂತಲೂ, ಚರ್ಮವನ್ನು ಸುಲಿದು ಅಂಗಾಂಗಗಳನ್ನೂ, ಮಾಂಸಖಂಡಗಳನ್ನೂ ಅಭಿಧಮನಿ-ಅಪಧಮನಿಗಳನ್ನೂ, ಹೃದಯವೆಂಬ ಸಾಕಾರವನ್ನೂ (ನಿರಾಕಾರ ಹೃದಯವನ್ನು ಸದ್ಯ ಬದಿಗಿಡೋಣ!) ತೊಲಗಿಸಿ, ಕಣ್ಣುಗಳನ್ನು ಕಳೆದು ಇಂದ್ರಿಯಹೀನ ಅಸ್ಥಿಪಂಜರದಂತೆ ಕಂಗೊಳಿಸುವ ಮನುಷ್ಯರನ್ನು ಹೇಗೆ ಪರಿಭಾವಿಸಬೇಕು? ಎಲ್ಲದಕ್ಕೂ ಕಣ್ತೆರೆಯುವ ಮನುಷ್ಯನು ತನ್ನ ದೋಷಗಳನ್ನು ಕಾಣುವುದೇ ಇಲ್ಲ. ಒಟ್ಟಾಗಿ ಬಾಳಬೇಕೆಂದೇ ಪ್ರಾಯಃ ಯಾರೋ (ಅದನ್ನು/ಅವುಗಳನ್ನು/ಅವರನ್ನು ದೇವರುಗಳು ಎಂತಲೋ ಕಲ್ಪಿಸುತ್ತೇವಲ್ಲ!) ಒಂದಕ್ಕಿಂತ ಹೆಚ್ಚು ಜೀವಿಗಳನ್ನು ಸೃಷ್ಟಿಸಿರಬೇಕು. ಆದರೆ ತಾನೊಬ್ಬನೇ ಬದುಕಬೇಕು, ತನ್ನ ನಿಲುಮೆಯೇ ಸರಿ ಎಂದು ತಿಣುಕಾಡುವವರ ಮಧ್ಯೆ ಅನುದಿನವೂ ಸಂಸ್ಕೃತಿ, ನಾಗರಿಕತೆಯೆಂದೆಲ್ಲ ನಾವು ಕರೆಯುವ ಅತಿರೇಕಗಳು ನಾಶವಾಗುತ್ತಿವೆ. ಹಿಂದೆ ಇದ್ದವೆನ್ನಲಾದ ಇಂತಹ ಸಂಗತಿಗಳು ನಾಶವಾಗುವುದಕ್ಕೆ ಇದೇ ಕಾರಣವಿರಬಹುದು.

ಅವುಗಳ ಅವಶೇಷಗಳನ್ನು ಅಗೆಯುತ್ತ, ಅವನ್ನು ವೈಭವೀಕರಿಸಿ ವಿಜೃಂಭಿಸುವ ನಾವು ಮುಂದೊಂದು ದಿನ ನಮ್ಮ ಗತಿ, ಪಾಡೂ ಇದೇ ಇರಬಹುದಲ್ಲವೇ ಎಂದು ಯೋಚಿಸುವುದಿಲ್ಲ. ಸದ್ಯ ಇಂಡಿಯಾವನ್ನು ಭಾರತವಾಗಿಸಿ ಮುಂದೆ ಹಿಂದೂ ರಾಷ್ಟ್ರವಾಗಿಸಲು ಯತ್ನಿಸುವ ಮನಸ್ಸುಗಳು (ಅವನ್ನು ಮನಸ್ಸುಗಳೆಂದು ಕರೆಯಬಹುದಾದರೆ) ನಮ್ಮ ಜೀವನ ಪದ್ಧತಿಯು ಹಿಂದೆ ಬರಲಾಗದಷ್ಟು ಮುಂದೆ ಹೋಗಿರುವುದನ್ನು ಗಮನಿಸುವುದೇ ಇಲ್ಲ; ಅಥವಾ ನಿರ್ಲಕ್ಷಿಸಿದ್ದಾರೇನೋ? ಅಥವಾ ಅವೆಲ್ಲ ನಮ್ಮ ನಿಯಂತ್ರಣದಲ್ಲಿದೆಯೆಂದು ಭಾವಿಸಿದ್ದಾರೇನೋ? ರಣವೀರ್‌ಸಿಂಗ್‌ನ ಬೆತ್ತಲೆಗಿಂತಲೂ ಮುಖ್ಯಾಧಿಕವಾಗಿ ವಿಕೃತಿಗಳನ್ನು ನಾವು ನಮ್ಮ ಚಲನಚಿತ್ರಗಳಲ್ಲಿ ಕಾಣುತ್ತಿಲ್ಲವೇ? ನಮ್ಮ ಅನೇಕ ಕಲಾಮಾಧ್ಯಮಗಳಲ್ಲಿ ಈ ಬೆತ್ತಲೆಗಿಂತಲೂ ವಿಕೃತವಾಗಿ ಲೈಂಗಿಕತೆಯನ್ನು, ಹಿಂಸೆಯನ್ನು, ಕ್ರೌರ್ಯವನ್ನು ಪ್ರಚೋದಿಸುವ ದೃಶ್ಯಗಳಿವೆ. ಅವನ್ನು ನೋಡಿ ನಮ್ಮ ಎಳೆಯ ಮನಸ್ಸುಗಳು (ಇವು ತೆರೆದ ಮನಸ್ಸುಗಳು ಖಂಡಿತಾ) ಕೊಚ್ಚಿಹೋಗಬಲ್ಲವು. ಈಗ ಕೆಲವು ವರ್ಷಗಳಿಂದ ಎಲ್ಲೆಡೆ (ಇದು ದೇಶಕ್ಕೂ ಹೌದು; ವಿಶ್ವಕ್ಕೂ ಹೌದು) ನೈಜತೆಯನ್ನು ಕಲೆಯ ಹೆಸರಿನಲ್ಲೂ ಕಲೆಯನ್ನು ಅನುಕರಿಸುವ ಬದುಕಿನಲ್ಲೂ ಜ್ವಲಂತವಾಗಿ, ಜೀವಂತವಾಗಿ ಗಮನಿಸಬಹುದು.

ಬಯೋಪಿಕ್‌ಗಳ ಹೆಸರಿನಲ್ಲಿ ಯಾರೊಬ್ಬರನ್ನು, ಯಾವುದಾದರೊಂದನ್ನು ನಮ್ಮ ಮೂಗಿನ ನೇರಕ್ಕೆ ಕುಣಿಸಬಹುದು. ಅದರಿಂದ ನಮ್ಮ ಸಮಾಜದ ಮೇಲಾಗುವ ಪರಿಣಾಮಗಳನ್ನು ನಾವು ಲೆಕ್ಕಿಸುವುದೇ ಇಲ್ಲ. ಹಾಗೆಯೇ ಕಲಾ ಮಾಧ್ಯಮದಲ್ಲಿ ಕಲ್ಪಿಸಿದ ಸಂಗತಿಗಳನ್ನು ನಿಜಜೀವನದಲ್ಲಿ ಅಳವಡಿಸುವ ಸಾಹಸಕ್ಕೆ ಮನುಷ್ಯ ಸದಾ ಸಿದ್ಧನಿದ್ದಾನೆ. ವಿದ್ಯುಚ್ಚೋರರಿಸಿಯ ಸಾಹಸ ಎಲ್ಲ ತರುಣರಿಗೆ ಮಾದರಿಯಾಗುತ್ತಿದೆ. ನಿರುದ್ಯೋಗ ನಿವಾರಣಾ ಯೋಜನೆಯಲ್ಲಿ ಬದುಕನ್ನು ರೂಪಿಸುವ ಅಧ್ಯಯನಕ್ಕಿಂತ ಹೆಚ್ಚಾಗಿ ಬದುಕನ್ನು ಕೆಡಿಸುವ, ನಾಶಮಾಡುವ ಅಧ್ಯಯನ ಹೆಚ್ಚು ಪ್ರಸ್ತುತವಾಗುತ್ತಿದೆ. ನಮ್ಮ ಉಡುಪುತೊಡುಪುಗಳು ಹೇಗೂ ಇರಲಿ ವಿಚಾರ ಮತ್ತು ಭಾವಗಳು ಸಮರ್ಪಕವಾಗಿರಬೇಕು ಹಾಗೂ ಪರಸ್ಪರ ಪೂರಕವಾಗಿರಬೇಕು ಎಂದು ಅನ್ನಿಸುವವರ, ಯೋಚಿಸುವವರ ಸಂಖ್ಯೆ ತೀರ ಕ್ಷೀಣವಾಗುತ್ತಿದೆ. ಹೀಗೆ ಹಿಂದಕ್ಕೆಳೆಯುವುದರಲ್ಲಿ ರಾಜಕೀಯದ ಪಾಲು ಹೇರಳ. ಒಂದು ಕಾಲವಿತ್ತು. ರಾಜರೇ ಸರ್ವಸ್ವ. ಹಾಗೆಂದು ರಾಜನನ್ನು ಎಂದೂ ಕಾಣದೆ, ಆ ಬಗ್ಗೆ ಚಿಂತಿಸದೆ ಬದುಕುವುದು ಕಷ್ಟವಿರಲಿಲ್ಲ. ಸಾವಿರ ಕುರಿಗಳ ಮಂದೆಯ ಕುರುಬನಿಗೆ, ಅಂಕೆಯ ತಿಳುವಳಿಕೆ ಇಲ್ಲದವನಿಗೆ, ತನ್ನ ಪ್ರಮಾಣಕ್ಕನುಗುಣವಾಗಿ ಬದುಕಿನ ಕಲಾಕೃತಿ ತಯಾರಾಗುವುದು ಸಾಧ್ಯವಿತ್ತು. ಆದರೆ ಇಂದು ಹಾಗಿಲ್ಲ.

ರಾಜಕೀಯ ನಮ್ಮನ್ನೆಷ್ಟು ಆವರಿಸಿದೆಯೆಂದರೆ ಯಾವುದನ್ನೇ ಆದರೂ ರಾಜಕೀಯವಾಗಿ ಯೋಚಿಸುತ್ತೇವೆ. ಒಂದು ಕಲಾಕೃತಿಯ ವಿಮರ್ಶೆಗೆ ತೊಡಗುವವನು ಆ ಕಲಾವಿದನ ಜಾತಿ, ಧರ್ಮ, ಪಂಗಡ, ಮತ ಇತ್ಯಾದಿಗಳ ವಿವರಗಳನ್ನು ಪಡೆದು ಅದು ಸಮಾಜಕ್ಕೆ ಹಿತವೋ ಅಹಿತವೋ ಎಂದು ನಿರ್ಧರಿಸುತ್ತಾನೆ. ಸೃಜನಶೀಲ ಮನಸ್ಸು ಎಷ್ಟೇ ದೊಡ್ಡದಿರಲಿ ಈ ಅಸಂಬದ್ಧ ವಿಚಾರಗಳ ನಿಕಷಕ್ಕೆ ತನ್ನನ್ನೊಡ್ಡಿಕೊಂಡು ಅಲ್ಲಿ ತೇರ್ಗಡೆಯಾದರೆ ಮಾತ್ರ ಮುಂದೆ ಸಾಗಲು ಸಾಧ್ಯ. ಎಂ.ಎಫ್ ಹುಸೇನ್ ಅವರ ಚಿತ್ರಗಳು ವಿಶ್ವದೆಲ್ಲೆಡೆ ಮನ್ನಣೆಯನ್ನು ಪಡೆದಾಗಲೂ ಅದು ನನ್ನ ದೇವರನ್ನು ಅವಮಾನಿಸಿತು ಎಂದು ಟೀಕಿಸಲು ಮತ್ತು ಈ ಅಭಿಪ್ರಾಯವನ್ನು ಪ್ರಚೋದಿಸಿ ಜನರನ್ನು ಎತ್ತಿಕಟ್ಟಿ ಆ ಮಹಾನುಭಾವನನ್ನು ಆತ ಭೌತಿಕವಾಗಿ ಇಲ್ಲದಿದ್ದಾಗಲೂ ಮತ್ತೆ ನಾಶಮಾಡಲು ಈಗ ಯಾವ ಅಡೆತಡೆಯೂ ಇಲ್ಲ. ವಾಲ್ಮೀಕಿ-ವ್ಯಾಸರು ಈಗ ರಾಮಾಯಣ-ಮಹಾಭಾರತಗಳ ಕರ್ತೃಗಳಾಗಿ ಉಳಿದಿಲ್ಲ. ಅವರವರ ಜಾತಿಗಳ ಮುಖ್ಯಸ್ಥರಾಗಿದ್ದಾರೆ. ಕಳೆದ ತಲೆಮಾರಿನ ಮತ್ತು ಅದಕ್ಕೂ ಮುನ್ನಿನ ಕಲಾವಿದರು ಅದೃಷ್ಟವಂತರು. ಅವರನ್ನು ಈಗಿನಂತೆ ಅಸಹನೆಯಿಂದ ನೋಡುವವರಿರಲಿಲ್ಲ. ಟೀಕೆಗಳೆಲ್ಲವೂ ಒಂದು ಹಂತಕ್ಕೆ ಮುಗಿದು ಬೂದಿಯಾಗುತ್ತಿದ್ದವು. ದೇವದೇವರುಗಳು ಕಲೆಯಲ್ಲಿ ಹಾಸ್ಯಕ್ಕೆ-ಅಪಹಾಸ್ಯಕ್ಕೆ ಒಡ್ಡಿಕೊಳ್ಳುತ್ತಿದ್ದವು. ಜರತಾರಿ ಜಗದ್ಗುರುಗಳು ಕಾದಂಬರಿಯ ನಾಯಕ-ಖಳನಾಯಕರಾಗಬಹುದಿತ್ತು. ರಂಗದ ಮೇಲೆ ಜೀವಬೆದರಿಕೆಗೊಳಗಾಗಿ ಪಂಚೆಯನ್ನೆತ್ತಿಕೊಂಡು ಓಡುವ ದೇವದೇವತೆಗಳನ್ನು ನೋಡಿ ನಕ್ಕು ಮತ್ತೆ ಸಹಜ ಜೀವನಕ್ಕೆ ಹೊರಳಬಹುದಿತ್ತು. ಆದರೆ ಇಂದು ಎಲ್ಲವನ್ನೂ ನಮ್ಮ ಹೊಸ ಅವಮಾನದಂಡಕ್ಕೆ ಒಳಪಡಿಸುತ್ತಿದ್ದೇವೆ. ಈಗ ಕಲೆಯ ಸೃಷ್ಟಿಕರ್ತ ತನ್ನ ಸೃಷ್ಟಿಯಲ್ಲಿ ಯಾವುದು ಜಾತಿ-ಮತ- ಧರ್ಮ-ಪಂಗಡಗಳಿಲ್ಲದ ಹೊಸಲೋಕವನ್ನು ಮಾತ್ರ ನೀಡಬಹುದಾಗಿದೆ.

ಹೆಸರುಗಳೂ ಈಗ ಉಪಯೋಗಿಸುವುದು ತಾಪತ್ರಯದ ವಿಚಾರ. ನಮ್ಮ ಸಿನೆಮಾಗಳನ್ನು ಯಾವೊಂದು ಜಾತಿಗಳು ಸೆನ್ಸಾರ್ ಮಂಡಳಿಗಳಂತೆ ನಿಯಂತ್ರಿಸುತ್ತಿವೆ. ಚರಿತ್ರೆಯನ್ನು ತಮ್ಮ ಬಯಕೆಗೆ ಒಗ್ಗಿಸಿ, ಬಗ್ಗಿಸಿ ನೋಡಬೇಕಾಗಿದೆ. ಬ್ರಾಹ್ಮಣನೊಬ್ಬ ರಾಮಾಯಣ ಬರೆದರೆ ಚತುರ್ವೇದ ಪಾರಂಗತನಾದ ಬ್ರಾಹ್ಮಣ ರಾವಣನಿಂದ ಕ್ಷತ್ರಿಯ ರಾಮನನ್ನು ಕೊಲ್ಲಿಸಬಹುದು. ನಾಮಧೇಯದ ಸಾಮ್ಯತೆಯನ್ನೇ ನ್ಯಾಯಾಲಯಕ್ಕೆ ಒಯ್ಯಬಹುದು. ಯಾವೊಂದು ಪಾತ್ರದ ರೂಪಸಾದೃಶ್ಯವನ್ನು ಖಂಡಿಸಬಹುದು. ಎಲ್ಲವನ್ನೂ ಕಾನೂನಿನ ಮೂಲಕ ತಡೆಯಲಾಗದಿದ್ದರೂ ತೊಂದರೆಯನ್ನಂತೂ ನೀಡಬಹುದು. ಭವಿಷ್ಯದಲ್ಲಿ ಅಣಕವೆಂಬುದೇ ಇರದೇನೋ? ಈ ಸ್ಥಿತಿ ಬರಬಹುದೆಂದೊ ಏನೋ ಕೆಲವಾದರೂ ಧರ್ಮಗಳು ತಮ್ಮ ದೇವರನ್ನು ನಿರಾಕಾರವಾಗಿಸಿವೆ.

ಬರಿಗೈಯಲ್ಲಿ ಮೊಳಹಾಕುವುದಾದರೂ ಹೇಗೆ? ಅವು ಕಿರೀಟ, ಒಂದಕ್ಕಿಂತ ಹೆಚ್ಚು ಕೈಗಳನ್ನು ಹೊಂದವು. ಗಡ್ಡ ಬಿಳಿಯಾದರೂ ಹೊಕ್ಕಳು ಬಳ್ಳಿಯನ್ನು ಕಳೆದುಕೊಳ್ಳದ ಒಬ್ಬನೇ ಒಬ್ಬ ದೇವರಾದ ಕಮಲಜ ಬ್ರಹ್ಮನಿಗೆ ಆಪರೇಷನ್ ಕಮಲವಾದರೆ ಆತನೂ ಸೃಷ್ಟಿಯಿಂದ ಸ್ವತಂತ್ರನಾಗಬಹುದು. ಇಂತಹ ವೈಪರೀತ್ಯದಲ್ಲಿ ಯಾರೂ ಹಿಂದೆ ಬಿದ್ದಿಲ್ಲ. ದ್ರೋಣರು 'ವೈಪರೀತ್ಯಕೆ ಬೆದರಲಾಗದು ರಾಜಕಾರ್ಯವಿದು' ಎಂದಂತೆ ಇಂದು 'ರಾಜಕೀಯವಿದು' ಎಂದುಕೊಂಡು ಸುಮ್ಮನಿರಬೇಕು. ಸಂಕೀರ್ಣತೆಯೆಲ್ಲವೂ ಗಂಭೀರವೆಂದೇನಿಲ್ಲ; ಅದು ಪರಿಸ್ಥಿತಿ ಬಂದಾಗ ಹಾಸ್ಯವೂ ಹೌದು, ಹಾಸ್ಯಾಸ್ಪದವೂ ಹೌದು. ಕೆಲವು ಬಾರಿ ವಿಷಾದನೀಯ ದುರಂತವೂ ಹೌದು. ಇವೆಲ್ಲವು ಪ್ರತಿಕ್ರಿಯಿಸುವವರ ಶೀಲ-ಅಶ್ಲೀಲದ ಆಧಾರದಲ್ಲಿ ನಿಂತಿದೆ. ಹುಚ್ಚಾಸ್ಪತ್ರೆಯ ರೋಗಿಗಳಲ್ಲಿ ನೀವು ವಿವೇಕ, ವಿವೇಚನೆಯನ್ನು ಬಯಸಬಾರದು. ಬಯಸಿದರೆ ನೀವು ಹುಚ್ಚರು. ಏನಿದ್ದರೂ ಅವರತ್ತ ಅನುಕಂಪ, ಅಷ್ಟೇ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top