ಧ್ವಜ ರಾಜಕೀಯ
-

ಕೋವಿಡ್-19ರಲ್ಲಿ ಶಂಖಜಾಗಟೆ, ಆರತಿಯನ್ನು ಬಳಸಿದವರೇ ಅದರ ಇಮ್ಮಡಿ ಉತ್ಸಾಹದಿಂದ ಈಗ ಧ್ವಜಾರೋಹಣಕ್ಕೆ ಅಣಿಯಾಗುವವರು. ತಮ್ಮ ಬಡತನ, ನಿರುದ್ಯೋಗ, ಕೋಮುಗಲಭೆ ಇವನ್ನೆಲ್ಲ ೩ ದಿನಗಳ ಕಾಲ ಅಮಾನತು ಮಾಡಿ ಅಥವಾ ಮರೆತು ಧ್ವಜದಡಿ ವಿಸ್ಮತರಾಗುತ್ತಿದ್ದಾರೆ. ೩ ದಿನಗಳ ಆನಂತರ ಈ ಧ್ವಜಗಳ ಗತಿಯೇನಾಗುತ್ತದೆಯೆಂಬ ಬಗ್ಗೆ ಯಾರಿಗೂ ಚಿಂತೆ ಇದ್ದಂತಿಲ್ಲ. ರಾಷ್ಟ್ರದ ಗೌರವದ ಲಾಂಛನವಾದ ಧ್ವಜವನ್ನು ಬೀದಿಪಾಲುಮಾಡುವ ಈ ಅಧಃಪತನಕ್ಕೆ ಸಾಕ್ಷಿಯಾಗಿರಬೇಕಾದ್ದು ಈ ದೇಶದ ಎಲ್ಲ ಪ್ರಜ್ಞಾವಂತರ ದುರ್ವಿಧಿ.
ಕಳೆದ ವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಮೋಚ್ಚ ನಾಯಕ ಮೋಹನ ಭಾಗವತರು ವಿಶ್ವ ಸಂಘಶಿಕ್ಷಾ ವರ್ಗದಲ್ಲಿ ಮಾತನಾಡುತ್ತಾ ಸಾಮಾಜಿಕ ಪಿಡುಗುಗಳನ್ನು, ಯುದ್ಧ, ಜಾಗತಿಕ ತಾಪಮಾನ, ಅಂಧಶ್ರದ್ಧೆ ಮುಂತಾದವುಗಳನ್ನು ನಿಯಂತ್ರಿಸಲು, ನಿವಾರಿಸಲು ವಿಶ್ವಕ್ಕೆ ‘ಧರ್ಮ’ದ ಅಗತ್ಯವಿದ್ದು ಭಾರತವೊಂದೇ ಅದನ್ನು ವಿಶ್ವಕ್ಕೆ ನೀಡಬಲ್ಲುದು ಎಂದರು. ಅವರು ‘ಹಿಂದೂ ರಾಷ್ಟ್ರ’ದ ಕಲ್ಪನೆಯನ್ನು ಮಹರ್ಷಿ ಅರವಿಂದರು, ಸ್ವಾಮಿ ವಿವೇಕಾನಂದರು ಕಂಡಿದ್ದು ಅವರ ಕನಸುಗಳನ್ನು ಸಾಕಾರಮಾಡುವ ಕಾಲ ಬಂದಿದೆಯೆಂಬರ್ಥದಲ್ಲಿ ಮಾತನಾಡಿದರು. ಸಹಬಾಳ್ವೆಯ ಸಂದೇಶವನ್ನು (ರಾಷ್ಟ್ರೀಯ) ಸ್ವಯಂಸೇವಕರು ವಿಶ್ವದೆಲ್ಲೆಡೆ ಹಬ್ಬಿಸಬಹುದೆಂಬ ಕಲ್ಪನೆಯನ್ನು ಈ ಮಹಾನುಭಾವರು ಹೊಂದಿರಲಾರರು ಎಂದು ಹೇಳಿ ತಮ್ಮ ಸಂಘಟನೆಯನ್ನು ಶ್ಲಾಘಿಸಿದರು. ವಿದೇಶದಲ್ಲಿರುವ ಭಾರತೀಯರು ನಿಷ್ಕಳಂಕರಾಗಿರುವುದು ಭಾರತದ ಹಿರಿಮೆಯನ್ನು ತೋರಿಸುತ್ತದೆಯೆಂದು ಹೇಳಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ (೧೩ ರಾಷ್ಟ್ರಗಳ) ೫೩ ಶಿಬಿರಾರ್ಥಿಗಳನ್ನು ಹೊಗಳಿದರು.
ಆರೆಸ್ಸೆಸ್ ಇಂತಹ ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಸಾಮಾಜಿಕ-ಸಾಂಸ್ಕೃತಿಕವೆಂಬ ಸಿದ್ಧಾಂತದ ಅಡಿಯಲ್ಲಿ ಭಾರತೀಯತೆಯನ್ನು ಜನರಲ್ಲಿ ಬಿಂಬಿಸಲು ಮತ್ತು ಅಂತಹ ಒಂದು ರಾಷ್ಟ್ರವನ್ನು ಕಟ್ಟಲು ಈ ಅಡಿಪಾಯ ಸಾಕಾಗುವುದಿಲ್ಲವೆಂದು ಸ್ವಾತಂತ್ರ್ಯಪೂರ್ವದಲ್ಲೇ ಕಂಡುಕೊಂಡ ಸಂಘವು ಆನಂತರ ಹಿಂದೂ ಮನೋಭಾವಕ್ಕೆ ಲಗ್ಗೆಯಿಟ್ಟಿತು. ಅದೂ ಸಾಲದಿದ್ದಾಗ ಭಾಜಪದ ಮೂಲಕ ನೇರ ರಾಜಕೀಯಕ್ಕಿಳಿಯಿತು. ಅದರ ಪರಿಣಾಮವಾಗಿ ವಾಜಪೇಯಿ ನೇತೃತ್ವದ ಸರಕಾರವನ್ನು ಒಮ್ಮೆ ಕಂಡರೂ ಅದು ಮುಂದೆ ವಾಜಪೇಯಿಯವರ ಮೃದುಧೋರಣೆ ಮತ್ತು ಉದಾರವಾದದಿಂದಾಗಿ ಯಶಸ್ಸನ್ನು ಕಾಣಲಿಲ್ಲ. ಅದಾದ ಮೇಲೆ ಗುಜರಾತಿನ ಹಿಂಸಾಪ್ರಯೋಗದ ಯಶಸ್ಸನ್ನು ಬಂಡವಾಳವಾಗಿಸಿ ಕಳೆದ ಎಂಟು ವರ್ಷಗಳ ಹಿಂದೆ (೨೦೧೪) ಕೇಂದ್ರದಲ್ಲಿ ಅಧಿಕಾರವನ್ನು ಪಡೆದು ಜನರ ಮತೀಯ ಭಾವವನ್ನು ಪ್ರಚೋದಿಸಿ ಮತೀಯ ಸಾಮರಸ್ಯವನ್ನು ಕೆಡಿಸಿದೆ. ಭಾಜಪವು ಅದರ ಪೂರ್ಣಲಾಭವನ್ನು ಪಡೆಯುತ್ತಿದೆ. ಈಗ ಉಗ್ರ ಹಿಂದುತ್ವವೇ ಭಾಜಪಕ್ಕೆ ಬ್ರಹ್ಮಾಸ್ತ್ರವಾಗಿದೆ. ಇದಕ್ಕಾಗಿ ಯಾವ ಹಂತಕ್ಕೂ ಇಳಿಯಲು ಅದು ಸಿದ್ಧವಾಗಿದೆ. ಈ ಹುಲಿಸವಾರಿ ಎಲ್ಲಿಯ ವರೆಗೆ ಮುಂದುವರಿಯುತ್ತದೋ ಮತ್ತು ಈ ದೇಶವನ್ನು ಎಲ್ಲಿಗೆ ಕೊಂಡೊಯುತ್ತದೋ ಹೇಳಲಾಗದು.
ಸಂಘಕ್ಕೆ ಕೇಸರಿ ಭಗವಾಧ್ವಜವೇ ‘ಧ್ವಜ’. ತ್ರಿವರ್ಣಧ್ವಜವನ್ನು ಅದು ಎಂದೂ ಅಂಗೀಕರಿಸಿರಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬಂದದ್ದನ್ನು ಒಂದು ಶಾಪವೆಂದೂ ಅದು ವಿಭಜನೆಯ ದುರಂತಕಥೆಯೆಂದೂ ಸಂಘ ಸ್ಪಷ್ಟವಾಗಿ ಹೇಳಿತು. ಆಗಸ್ಟ್ ೧೫ನ್ನು ಅರವಿಂದರ ಹುಟ್ಟುಹಬ್ಬವಾಗಿ ಆಚರಿಸಿತೇ ಹೊರತು ಸ್ವಾತಂತ್ರ್ಯದಿನವೆಂದಲ್ಲ.
ಪ್ರಖ್ಯಾತವಾದ ಮತ್ತು ಪ್ರಾಯಃ ಕಳೆದ ತಲೆಮಾರಿನ ಮಕ್ಕಳು ಓದಿರಬಹುದಾದ ಅಕ್ಬರ್-ಬೀರಬಲ್ ಕಥೆಗಳು ಮನೋರಂಜಕವೂ ಜ್ಞಾನಪೂರ್ಣವಾಗಿಯೂ ಇವೆ. ಈ ತಲೆಮಾರಿನ ಮಕ್ಕಳು ಅನೇಕ ಕಾರಣಗಳಿಂದಾಗಿ ಅವುಗಳಿಂದ ವಂಚಿತವಾಗಿವೆ. ಅಕ್ಬರ್-ಬೀರಬಲ್ ಅಂತಲ್ಲ, ಇಸೋಪನ ನೀತಿಕತೆಗಳು, ಅರೇಬಿಯನ್ ನೈಟ್ಸ್, ಹಾತಿಮತಾಯಿ ಕತೆಗಳು ಮಾತ್ರವಲ್ಲ, ಭಾರತದ್ದೇ ಆಗಿರುವ ಪಂಚತಂತ್ರದ ಕತೆಗಳೂ ಈ ಮಕ್ಕಳಿಗೆ ಸಿಕ್ಕದಾಗಿವೆ. ಆಧುನಿಕ ಜೀವನ ಕ್ರಮ, ದೃಶ್ಯಮಾಧ್ಯಮಗಳು ನೀಡುವ ಅತಿರಂಜಿತ ಮತ್ತು ರೋಚಕ ಕಾರ್ಯಕ್ರಮಗಳಿಂದಾಗಿ ತಾಯಂದಿರೂ ಇಂತಹ ಮಕ್ಕಳಿಗೆ ಅಗತ್ಯವಿರುವ ಪುಸ್ತಕಗಳಿಂದ ದೂರವಿರುವುದರಿಂದ ಮಕ್ಕಳು ತಾವಾಗಿ ಅದನ್ನು ಮನೆಯಲ್ಲಿ ಕಲಿಯುವುದು ದುರ್ಲಭ. ರಾಮಾಯಣ-ಮಹಾಭಾರತಗಳು ಅದು ಹೇಗೋ ಹೊಸ ರೂಪಿನಿಂದ ಬಂದು ಒಂದಷ್ಟು ಮಂದಿಗೆ ಸಿಕ್ಕುತ್ತವೆ. ನಾವು ನಮ್ಮ ಸಾಂಸ್ಕೃತಿಕ ಸಂಪತ್ತಿನಿಂದ ದಿನವೂ ಕೊಂಚಕೊಂಚವೇ ದೂರವಾಗುತ್ತಿದ್ದೇವೆ. ವಿಶ್ವಸಾಗರದಲ್ಲಿರಬೇಕಾದ ನಾವು ವಿದೇಶಗಳನ್ನು ಅವುಗಳ ಸಾಂಸ್ಕೃತಿಕ ಸಂಪತ್ತನ್ನು ಹಳಿಯುತ್ತಲೇ ನಮ್ಮ ಸುತ್ತ ಗೋಡೆಗಳನ್ನು ಕಟ್ಟುತ್ತಿದ್ದೇವೆ. ಅತ್ತ ಅದೂ ಇಲ್ಲ; ಇತ್ತ ಇದೂ ಇಲ್ಲ.
ಈ ಅಕ್ಬರ್-ಬೀರಬಲ್‌ರ ಒಂದು ಕಥೆ ಹೀಗಿದೆ: ಅಗಲೂ ಭ್ರಷ್ಟಾಚಾರವಿತ್ತು ಸರಕಾರಿ ಅಧಿಕಾರಿಗಳು ಎದುರಾಗಬಹುದಾದ ಶಿಕ್ಷೆಗೂ ಹೆದರದೆ ಭ್ರಷ್ಟಾಚಾರದಲ್ಲಿ ತೊಡಗಿದ್ದರು. ಅಕ್ಬರನು ಬೀರಬಲ್ಲನೊಡನೆ ಆಡಳಿತದಲ್ಲಿ ಬಿಗಿ ಮತ್ತು ಬಿಗು ಕಾಣತೊಡಗಿದರೆ ಭ್ರಷ್ಟತೆಯನ್ನು ನಿಲ್ಲಿಸಬಹುದೆಂದು ಹೇಳಿದನು. ಆಗ ಬೀರಬಲ್ಲನು ‘‘ಸಾಧ್ಯವಿಲ್ಲ. ಭ್ರಷ್ಟನು ಎಲ್ಲೇ ಇರಲಿ, ಯಾವುದೇ ಸಂದರ್ಭವಿರಲಿ, ತನ್ನ ಅಕ್ರಮವನ್ನು ನಿಲ್ಲಿಸಲಾರ ಮತ್ತು ಯಾವುದೇ ಮೂಲದಿಂದ ತನ್ನ ಸಂಪಾದನೆಯನ್ನು ಮಾಡುತ್ತಾನೆ’’ ಎಂದ. ಇದು ಅಕ್ಬರನಿಗೆ ಸಿಟ್ಟು ತರಿಸಿತು. ‘‘ಇದನ್ನು ನೀನು ಸಾಬೀತುಮಾಡಬಲ್ಲೆಯಾ?’’ ಎಂದು ಕೇಳಿದನು. ಬೀರಬಲ್ಲನು ಯಥಾ ಪ್ರಕಾರ ‘‘ಅಪ್ಪಣೆ’’ ಎಂದನು. ಅಕ್ಬರನು ತನ್ನೆಲ್ಲ ಬುದ್ಧಿವಂತಿಕೆಯನ್ನು ಧಾರೆಯೆರೆದು ಒಬ್ಬ ಅತೀ ಭ್ರಷ್ಟ ಅಧಿಕಾರಿಗೆ ಸಮುದ್ರದಂಡೆಯಲ್ಲಿ ಅಲೆಗಳನ್ನು ಲೆಕ್ಕ ಹಾಕುವ ಕೆಲಸವನ್ನು ನೀಡಿದನು. ಬೀರಬಲ್ಲನು ನಕ್ಕು ಸುಮ್ಮನಿದ್ದನು. ಅ ಅಧಿಕಾರಿಯು ಬೆಳಗಿನಿಂದ ಸಂಜೆಯವರೆಗೆ ಸಮುದ್ರ ದಂಡೆಯಲ್ಲಿ ಕಾರ್ಯಮಗ್ನನಾದನು. ಕೆಲವೇ ದಿನಗಳಲ್ಲಿ ಜನರು ಅರಮನೆಗೆ ಬಂದು ಈ ಅಧಿಕಾರಿ ಸಾಕಷ್ಟು ಅಕ್ರಮ ಸಂಪಾದನೆ ಮಾಡುತ್ತಿದ್ದಾನೆ ಎಂದು ದೂರಿದರು. ಇದು ಹೇಗೆ ಸಾಧ್ಯ ಎಂದು ಅಕ್ಬರನು ಬೀರಬಲ್ಲನಲ್ಲಿ ವಿಚಾರಿಸಿದನು. ಆಗ ಬೀರಬಲ್ಲನು ತನಿಖೆ ಮಾಡಿ ‘‘ಪ್ರಭು, ಅಲ್ಲಿ ಜನರು ಮಲವಿಸರ್ಜನೆಗೆಂದು ಹೋದರೆ ಈ ಅಧಿಕಾರಿಯು ತನಗೆ ಅಲೆಗಳನ್ನು ಲೆಕ್ಕ ಹಾಕಲು ಅಡ್ಡಿಯಾಗುತ್ತದೆಯೆಂಬ ನೆಪ ಹಾಕಿ ಅವರಿಂದ ಹಣವಸೂಲು ಮಾಡುತ್ತಿದ್ದಾನೆ’’ ಎಂದು ತಿಳಿಸಿದನು.
ಅಕ್ಬರನ ಸಾಮ್ರಾಜ್ಯದಲ್ಲಿ ಸಮುದ್ರ ಇತ್ತೋ ಇಲ್ಲವೋ, ಇದು ನಡೆಯಿತೋ ಇಲ್ಲವೋ ಅಂತೂ ಈ ಕತೆಯು ಮನುಷ್ಯನ ಭ್ರಷ್ಟತೆಯನ್ನು ಮಾತ್ರವಲ್ಲ, ಯಾವುದನ್ನೂ ಹೇಗಾದರೂ ಬಳಸಿಕೊಳ್ಳುವ ಪಂಚತಂತ್ರದ ನರಿಯ (ಕು)ತಂತ್ರತನವನ್ನು ಹೇಳುತ್ತದೆ.
ಜನರಿಗೆ ಸಮೂಹ ಸನ್ನಿಯನ್ನು ಸೋಂಕಿಸುವ ನಿರುದ್ಯೋಗ ನಿವಾರಣಾ ಕಾರ್ಯಕ್ರಮಗಳು ಈ ನಿಟ್ಟಿನಲ್ಲಿ ನಡೆಯುತ್ತಿವೆ. ಕೋವಿಡ್-೧೯ರಂತಹ ವಿಷಾದಕರ ಸನ್ನಿವೇಶದಲ್ಲೂ ದೀಪ ಉರಿಸುವ, ಶಂಖಜಾಗಟೆತಾಳಸದ್ದುಗಳನ್ನು ಮಾಡುವ, ಆ ಮೂಲಕ ಕೊರೋನ ಸೋಂಕನ್ನು ಓಡಿಸುವ ಹಾಸ್ಯಾಸ್ಪದ ವಿಚಾರಗಳನ್ನು ಜನರಲ್ಲಿ ಹಬ್ಬಿಸಿತು. ಜನರು ಇವನ್ನು ಅನೂಚಾನವಾಗಿ ಅನುಸರಿಸಿದರು. ವಿಜ್ಞಾನಿಗಳೂ, ಶಿಕ್ಷಕರೂ ಸಮಾಜದಲ್ಲಿ ಬುದ್ಧಿವಂತರೆಂದು ಬಿಂಬಿಸಿಕೊಂಡ ಕಲಾವಿದ-ಸಾಹಿತಿಗಳೂ ಈ ತಂತ್ರಕ್ಕೆ ಬಲಿಯಾದರು. ಬೊಮ್ಮನಹಳ್ಳಿಯ ಕಿಂದರಿಜೋಗಿ ಚಿರಂಜೀವಿಯಾದನು. ನಿಸಾರ್ ಅಹಮದ್ ಅವರು ಬರೆದ ‘ಕುರಿಗಳು ಸಾರ್ ಕುರಿಗಳು’ ಕವಿತೆ ತಾನೇ ತಾನಾಗಿ ರಾಷ್ಟ್ರಗೀತೆಯಂತಾಯಿತು.
ಸರಕಾರವು ವಿವಿಧ ತಂತ್ರಗಳನ್ನು ಹಾಕಿ ಜನರ ಮನಸೆಳೆಯುವ, ಮತ್ತು ಭಾವನೆಗಳನ್ನು ಪ್ರಚೋದಿಸುವ ಪ್ರಯತ್ನ ನಡೆಸಿಕೊಂಡು ಬಂದಿದೆ. ಅಯೋಧ್ಯೆಯ ರಾಮನಿಂದ ಹಿಂದೂರಾಷ್ಟ್ರದ ಸಾಧನೆಯ ತನಕ ಈ ದೇಶದ ‘ಇತರರಿಗೆ’ ಜಾಗವಿಲ್ಲದ ಒಂದು ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದೆ.
ಕಳೆದ ೮ ವರ್ಷಗಳಿಂದ ಮಾಡಿಕೊಂಡು ಬಂದ ಮತೀಯ ರಾಜಕೀಯವು ಸರಕಾರಕ್ಕೆ ಬೇಸರ ತಂದಿರಬೇಕು. ಯಾವುದನ್ನು ಹೇಗೂ ಬಳಸಿ ರಾಜಕೀಯ ಮಾಡಬಹುದೆಂಬುದನ್ನು ಸಂಘಪ್ರಣೀತ ಭಾರತ ಸರಕಾರ ಈಗ ತೋರಿಸಿಕೊಟ್ಟಿದೆ. ರಾಷ್ಟ್ರಧ್ವಜವೆಂಬುದು ರಾಷ್ಟ್ರಲಾಂಛನಗಳಲ್ಲೊಂದು. ಅದನ್ನು ಆರೋಹಿಸಿ ಮತ್ತು ದೇಶದ ಸಂಕೇತವಾಗಿ ಅದನ್ನು ಬಳಸುವುದು ಸಹಜ. ಅದಕ್ಕಾಗಿ ಧ್ವಜಸಂಹಿತೆಯೆಂಬುದೊಂದಿದೆ. ಕಳೆದ ೭೫ ವರ್ಷಗಳಲ್ಲಿ ರಾಷ್ಟ್ರಧ್ವಜವನ್ನು ಬಳಸುತ್ತಿದ್ದುದಕ್ಕೂ ಈ ಬಾರಿ ಅದನ್ನು ಬಳಸುವ ವಿಧಾನಕ್ಕೂ ಅಜಗಜಾಂತರವಿದೆ. ಅದನ್ನು ಬೆಳಗ್ಗೆ ಆರೋಹಿಸಿ ಸೂರ್ಯಾಸ್ತದೊಳಗೆ ಅವರೋಹಿಸುವ ನಿಯಮವಿದೆ. ಹಾಗೆಯೇ ಅದಕ್ಕೂ ಭಾರತದ ಸ್ವಾತಂತ್ರ್ಯಕ್ಕೂ ಇರುವ ನಂಟನ್ನು ಮನಮನದಲ್ಲಿ, ಮನೆಗಳಲ್ಲಿ ಮೊಳೆಯಿಸಲು ಗಾಂಧಿ ಹಾಕಿಕೊಟ್ಟ ಖಾದಿ ಬಟ್ಟೆಯನ್ನೇ ಬಳಸುವ ನಿಯಮವೂ ಇದೆ.
ಆದರೆ ಸಂಘವು ಜನರನ್ನು ಮರುಳುಮಾಡಲು ಉದ್ದೇಶಿಸುವ ಯೋಜನೆಗಳು ಬುದ್ಧಿಯಿದ್ದವರಿಗೆ ಅಸಹ್ಯವಾಗುವಂಥವುಗಳು. ಹಿಂದೆ ಅದು ಅಯೋಧ್ಯೆಯ ರಾಮಮಂದಿರದ ನೆಪದಲ್ಲಿ ನಡೆಸಿದ ಶಿಲಾಪೂಜನ, ಕರಸೇವೆ ಚಳವಳಿಗಳು ಆರಂಭದಲ್ಲಿ ನಿರ್ಲಕ್ಷಿಸಬಹುದಾದ ಹುಡುಗಾಟದಂತೆ ಕಂಡರೂ ಅದು ಮಾಡಿದ ಭೀಕರ ಪರಿಣಾಮ ಮತ್ತು ನೀಡಿದ ಫಲಿತಾಂಶ ಈಗ ಇತಿಹಾಸ. ಆದರೆ ಅವು ಭಾಜಪಕ್ಕೆ ನೀಡಿದ ಬಳುವಳಿ ನಮ್ಮ ಕಣ್ಣಮುಂದಿದೆ. ಇದನ್ನು ವಿರೋಧಿಸುವವರು ಅವಾಕ್ಕಾಗಿ ನಿಂತಿದ್ದಾರೆಯೇ ಹೊರತು ಪರ್ಯಾಯವಾಗಿ ಏನು ಮಾಡಬಹುದೆಂಬುದು ಯಾರಿಗೂ ಹೊಳೆಯುತ್ತಿಲ್ಲ. ೧೯೭೫ರ ತುರ್ತುಪರಿಸ್ಥಿತಿಯನ್ನು ವಿರೋಧಿಸುವಲ್ಲಿ ಎಲ್ಲ ಪ್ರತಿಪಕ್ಷಗಳೂ ಒಂದಾಗಿದ್ದವು. ಅದು ಹತಾಶೆಯ ರಾಜಕಾರಣವಾಗಿದ್ದರೂ ಹೊಸ ನಿಲುವನ್ನು ಸ್ಥಾಪಿಸಲು ಸಹಾಯಮಾಡಿದವು. ಆದರೆ ಅದರ ಲಾಭವನ್ನು ಪಡೆದದ್ದು ಸಂಘಬೆಂಬಲಿತ ಭಾಜಪ ಮಾತ್ರ.
ಈ ಬಾರಿಯ ಸರಕಾರವು ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿನಲ್ಲಿ, ಅದಕ್ಕಿಂತಲೂ ಹೆಚ್ಚಾಗಿ ಅದರ ನೆಪದಲ್ಲಿ ಒಂದು ವಿಚಿತ್ರ ದೇಶವ್ಯಾಪೀ ಪ್ರಚಾರವನ್ನು ಕೈಗೊಂಡಿದೆ. ಅದೆಂದರೆ ರಾಷ್ಟ್ರಧ್ವಜವನ್ನು ಸ್ವಾತಂತ್ರ್ಯ ದಿನ ಪೂರ್ವವಾಗಿ ೩ ದಿನಗಳ ಕಾಲ ಮನೆಮನೆಗಳಲ್ಲಿ ಆರೋಹಿಸುವುದು. ೩ ದಿನಗಳ ಸಂಕೇತ ಅಥವಾ ಸಾರ್ಥಕತೆಯೇನು? ಮೂರೇ ದಿನಗಳು ಯಾಕೆ? ೩ ದಿನಗಳು ಸಾಕೇ? ಇದು ಹೇಗೆ ಸಾಧ್ಯ? ಅಥವಾ ಇದಕ್ಕೆ ಬೇಕಾದ ಧ್ವಜಗಳನ್ನು ಉತ್ಪಾದಿಸುವುದು ಹೇಗೆ ಸಾಧ್ಯ? ಅಥವಾ ಜನರನ್ನು ಈ ಕಾರ್ಯಕ್ಕೆ ಹಚ್ಚುವುದಾದರೂ ಹೇಗೆ?
ಇದಕ್ಕಾಗಿ ಧ್ವಜ ಸಂಹಿತೆಯನ್ನೇ ಬದಲಾಯಿಸಲಾಯಿತು. ಈಗ ದಿನವೂ ಸಂಜೆ ಧ್ವಜ ಇಳಿಸಬೇಕಾಗಿಲ್ಲ. ೩ ದಿನಗಳ ಕಾಲ ಅದು ಹಾರಿಬಿಟ್ಟಲ್ಲೇ ಇರಬಹುದು. ಅದರ ಗೊಡವೆ ಯಾರಿಗೂ ಬೇಡ. ಅದರ ಗತಿ ಏನಾಯಿತೆಂದು ನೋಡಬೇಕಾಗಿಲ್ಲ. ಧ್ವಜವು ಖಾದಿಯದೊಂದೇ ಆಗಬೇಕಾಗಿಲ್ಲ. ಪಾಲಿಸ್ಟರ್ ಧ್ವಜಗಳನ್ನು ಗುಜರಾತ್ ಮುಂತಾದ ಸರಕಾರಿ ಕೃಪಾಪೋಷಿತ ಸಂಸ್ಥೆಗಳ ಮೂಲಕ ಮಾಡಿಸಿ ಅದನ್ನು ದೇಶಾದ್ಯಂತ ಮಾರಾಟಮಾಡಲಾಗುತ್ತಿದೆ. ಅಂಚೆಕಚೇರಿ ಮಾತ್ರವಲ್ಲ ಎಲ್ಲ ಸರಕಾರಿ ಮತ್ತು ಅರೆಸರಕಾರಿ ಸಂಘ-ಸಂಸ್ಥೆಗಳ ಮೂಲಕ ಜನಸಾಮಾನ್ಯರಿಗೆ ಮಾರಲಾಗುತ್ತಿದೆ. ಈ ಧ್ವಜಗಳಲ್ಲಿ ಬೇಕಷ್ಟು ಕುಂದುಕೊರತೆಗಳಿರುವುದನ್ನು ಮಾಧ್ಯಮಗಳು ವರದಿಮಾಡಿವೆ. ಅವನ್ನು ಕೊಂಡುಕೊಳ್ಳುವುದು ಪ್ರಜೆಗಳ ಆದ್ಯ ಕರ್ತವ್ಯವೆಂಬಂತೆ ಪ್ರತಿಪಾದಿಸಲಾಗುತ್ತಿದೆ. ಜನರು ಹುಚ್ಚುಬಿದ್ದು ಅದನ್ನು ಕೊಂಡುಕೊಳ್ಳುತ್ತಿದ್ದಾರೆ. ಅದು ದೇಶಭಕ್ತಿಯ ಹೊಸ ಸಂಕೇತವಾಗಿದೆ. ಪರ್ಯಾಯವಾಗಿ ಮೊದಲೇ ನಿತ್ರಾಣವಾಗಿರುವ ಖಾದಿ ಗ್ರಾಮೋದ್ಯೋಗ ಸಂಸ್ಥೆ ದಿವಾಳಿಯಾಗುತ್ತಿದೆ. ಅದನ್ನು ನಂಬಿದ ಮಂದಿ ನಿರಾಶ್ರಿತರಾಗುತ್ತಿದ್ದಾರೆ. ಗಾಂಧಿಯನ್ನು ಮರೆಸುವ ಹಾದಿಯಲ್ಲಿ ಇದೂ ಒಂದು ಮೈಲಿಗಲ್ಲು.
ವಿಶೇಷವೆಂದರೆ ಕೋವಿಡ್-೧೯ರಲ್ಲಿ ಶಂಖಜಾಗಟೆ, ಆರತಿಯನ್ನು ಬಳಸಿದವರೇ ಅದರ ಇಮ್ಮಡಿ ಉತ್ಸಾಹದಿಂದ ಈಗ ಧ್ವಜಾರೋಹಣಕ್ಕೆ ಅಣಿಯಾಗುವವರು. ತಮ್ಮ ಬಡತನ, ನಿರುದ್ಯೋಗ, ಕೋಮುಗಲಭೆ ಇವನ್ನೆಲ್ಲ ೩ ದಿನಗಳ ಕಾಲ ಅಮಾನತು ಮಾಡಿ ಅಥವಾ ಮರೆತು ಧ್ವಜದಡಿ ವಿಸ್ಮತರಾಗುತ್ತಿದ್ದಾರೆ. ೩ ದಿನಗಳ ಆನಂತರ ಈ ಧ್ವಜಗಳ ಗತಿಯೇನಾಗುತ್ತದೆಯೆಂಬ ಬಗ್ಗೆ ಯಾರಿಗೂ ಚಿಂತೆ ಇದ್ದಂತಿಲ್ಲ. ರಾಷ್ಟ್ರದ ಗೌರವದ ಲಾಂಛನವಾದ ಧ್ವಜವನ್ನು ಬೀದಿಪಾಲುಮಾಡುವ ಈ ಅಧಃಪತನಕ್ಕೆ ಸಾಕ್ಷಿಯಾಗಿರಬೇಕಾದ್ದು ಈ ದೇಶದ ಎಲ್ಲ ಪ್ರಜ್ಞಾವಂತರ ದುರ್ವಿಧಿ. ಸರಿಯೋ ತಪ್ಪೋ ‘ಧ್ವಜ’ದ ಮೂಲಕವೂ ರಾಜಕಾರಣ ಮಾಡಬಹುದಾದ ಈ ಸಮ್ಮೋಹನಾಸ್ತ್ರವನ್ನು ಪ್ರಯೋಗಿಸಿದ ಸಂಘ ಪರಿವಾರಕ್ಕೂ ಅದನ್ನು ಅನುಷ್ಠಾನಕ್ಕೆ ತಂದ ಸರಕಾರಕ್ಕೂ ಅಭಿನಂದನೆಗಳು ವ್ಯಂಗ್ಯಾರ್ಥದಲ್ಲಾದರೂ ಸಲ್ಲಬೇಕು.
ಭಾಗವತರು ‘ಧರ್ಮ’ ಎಂದು ಹೇಳಿದ ಮತ್ತು ಅದರ ಮೂಲಕ ಸೂಚಿತವಾಗಿರಬೇಕಾಗಿದ್ದ ಧಾರ್ಮಿಕ ಮತ್ತು ನೈತಿಕ ಕರ್ತವ್ಯಗಳು, ಬದ್ಧತೆಗಳು ರಾಜಕೀಯ ಅಧಿಕಾರವನ್ನು ಪಡೆಯಲು ಬಳಸಿಕೊಂಡ ಮಂತ್ರಾಸ್ತ್ರಗಳಂತಿವೆ. ಅದರಲ್ಲಿ ‘ರಾಜಧರ್ಮ’ದ ಸುಳಿವಿಲ್ಲ. ಅರವಿಂದರು, ವಿವೇಕಾನಂದರು ನಮಗೆ ಊಟದ ಬೇವಿನ ಸೊಪ್ಪಿನಂತೆ ಬಳಕೆಯಾಗುತ್ತಿದ್ದಾರೆ. ಬೇಕಾದಂತೆ ಮಹಾನುಭಾವರನ್ನು ಹೈಜಾಕ್ ಮಾಡಲು ಆರೆಸ್ಸೆಸ್ ಸನ್ನದ್ಧವಾಗಿದೆ. ವಿಶ್ವಕ್ಕೆ ಬೆಳಕು ತೋರುವ ಬದಲು ದೀವಟಿಗೆ ಮೆರವಣಿಗೆ ಮಾಡಲು ಸಿದ್ಧವಾಗಿದೆ. ಕೊಳ್ಳಿದೆವ್ವಗಳಂತೆ ನಮ್ಮ ಅಧಿಕಾರಸ್ಥ ರಾಜಕಾರಣಿಗಳು ಅಟ್ಟಹಾಸಗೈಯುತ್ತಿದ್ದಾರೆ. ದೇಶವೀಗ ಅಶಿಸ್ತಿನ, ಅಶಾಂತಿಯ, ನಿರುದ್ಯೋಗದ, ಬಡತನದ ಜ್ವಾಲಾಮುಖಿಯಂತಿದ್ದು ಯಾವಾಗ ಸ್ಫೋಟಗೊಳ್ಳುವುದೋ ಹೇಳಲಾಗದು. ಭಾರತದೊಳಗಣ ಈ ನಡೆ-ನಡತೆಗಳು ಈಗಾಗಲೇ ಹಲವು ವಿದೇಶಗಳ ತಲೆಕೆಡಿಸಿವೆಯಾದರೂ ಅವು ಕಾದುನೋಡುವ ತಂತ್ರಕ್ಕೆ ಶರಣಾಗಿವೆ. ದೇಶ ಅತಂತ್ರವಾಗುತ್ತ ಹೋಗುತ್ತಿದೆ. ಕಾನೂನು ಒಂದು ಹಾಸ್ಯದ ಸರಕಾಗುತ್ತಿದೆ.
ಈ ತಂತ್ರದಿಂದಾಗಿ ಒಂದು ಶುಭಸೂಚನೆಯೆಂದರೆ ಇದೇ ಮೊದಲ ಬಾರಿಗೆ ನಾವು ಕೇಸರಿ ಧ್ವಜದ ಬದಲಿಗೆ ತ್ರಿವರ್ಣವನ್ನು ದೇಶದ ತುಂಬಾ ಕಾಣಬಹುದು. ಪ್ರಾಯಃ ಪ್ರಧಾನಿಯವರು ಈ ಧ್ವಜಾರೋಹಣವನ್ನು ೩ ದಿನಗಳ ಬದಲಿಗೆ ಶಾಶ್ವತವಾಗಿ ಮನೆಮನೆಗಳಲ್ಲೂ ಹಾಕುವುದನ್ನು ಕಡ್ಡಾಯಗೊಳಿಸಿದರೆ ಕೇಸರಿ ಧ್ವಜವು ನಿವೃತ್ತಿಯನ್ನು ಕಾಣಬಹುದೇನೋ? ಏಕೆಂದರೆ ಅದು ತನ್ನ ಒಂದು ಕಾಲದ ಮಹತ್ವವನ್ನು ಮೌಲ್ಯವನ್ನು ಈಗ ಕಳೆದುಕೊಂಡು ಮತಾಂಧತೆಯ ಸಂಕೇತವಾಗಿದೆ. ಬಿಳಿ ಮತ್ತು ಹಸಿರನ್ನು ಸೇರಿಸದ ಯಾವುದೇ ಧ್ವಜವು ಧ್ವಜವಾಗದೆ ಧಾರ್ಮಿಕ, ಮತೀಯ ಅಂಧತ್ವದ ಸಂಕೇತವಾಗಿದೆ. ಇದು ರಾಷ್ಟ್ರಧ್ವಜದ ಹರಿಕಾರರಿಗೆ ಗೊತ್ತಿತ್ತು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.