-

ತಿರಂಗೋನ್ಮಾದ ಮತ್ತು ಒಂದು ಜಾಹೀರಾತು ಹೇಳಿದ ಕಥೆ

-

ಇಂದು ನೆಹರೂರನ್ನು ಟೀಕಿಸುವವರು ಪಾಕಿಸ್ತಾನ ಮತ್ತು ಚೀನಾ ನಮ್ಮ ಎಷ್ಟು ಜಾಗವನ್ನು ಆಕ್ರಮಿಸಿವೆ ಮತ್ತು ಅವನ್ನು ಮರಳಿ ಪಡೆಯಲು ಆಗುತ್ತಿಲ್ಲ ಮಾತ್ರವಲ್ಲ, ದಿನವೂ ಸಂಘರ್ಷಸ್ಥಿತಿಯನ್ನೆದುರಿಸುವುದರ ಮತ್ತು ಚೀನಾ ಇನ್ನಷ್ಟು ಭೂಭಾಗವನ್ನು ಆಕ್ರಮಿಸಿರುವ ಬಗ್ಗೆ ತುಟಿಗಳನ್ನು ಹೊಲಿದುಕೊಂಡು ಕುಳಿತಿದ್ದಾರೆ. ಮುಗ್ಧ ಜನರು ಸರಕಾರವು ನೀಡಿದ ಮತೀಯ ಸಮಸ್ಯೆಗಳನ್ನು ಆಯ್ದುಕೊಂಡು ವಾಸ್ತವಕ್ಕೆ ಕುರುಡು-ಕಿವುಡಾಗಿದ್ದಾರೆ.

ಕಳೆದ ವಾರ ಇದೇ ಅಂಕಣದಲ್ಲಿ ಧ್ವಜರಾಜಕೀಯದ ಬಗ್ಗೆ ಬರೆದಿದ್ದೆ. ಒಕ್ಕೂಟ ಸರಕಾರದ ಶ್ರಮದಿಂದಾಗಿ ದೇಶದೆಲ್ಲೆಡೆ ಜನತೆ ಸ್ವಾತಂತ್ರ್ಯೋತ್ಸವದ ಉಲ್ಲಾಸ-ಉತ್ಸಾಹದಲ್ಲಿರುವ ಬದಲು ತಿರಂಗೋನ್ಮಾದದಲ್ಲಿ ಮುಳುಗಿತು. ಅಂಚೆ ಕಚೇರಿಯಿಂದ ಮೊದಲ್ಗೊಂಡು ಸರಕಾರಿ ಮತ್ತು ಅರೆ ಸರಕಾರಿ ಹಾಗೂ ಆಳುವ ಪಕ್ಷದ ಕಾರ್ಯಕರ್ತರ ಮೂಲಕ ಧ್ವಜಗಳನ್ನು (ಮತ್ತು ಅವುಗಳ ಗೌರವವನ್ನೂ?) ಮಾರಲಾಯಿತು. ಕೊನೆಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವವು ಮುಗಿಯಿತು. ಮೂರುದಿನದ ಸ್ವಾತಂತ್ರ್ಯ ಬಾಳುವೆಯ ಫಲಿತಾಂಶವಾಗಲೀ ಪರಿಣಾಮವಾಗಲೀ ಒಟ್ಟಾರೆ ಬದುಕಿನ ಮೇಲೆ ಕಾಣಲಿಲ್ಲ. ದೇಶದ ಜನತೆ ಯಥಾಪ್ರಕಾರ ತಮ್ಮ ಗೊಂದಲದ, ಅಶಿಸ್ತಿನ, ಕ್ರೌರ್ಯದ, ಹಿಂಸೆಯ ಪ್ರತ್ಯೇಕತೆಯತ್ತ ಹೊರಳಿತು.

ಬ್ರಿಟಿಷರು ಒಡೆದು ಆಳುವ ನೀತಿಯನ್ನು ಆಚರಿಸಿದರೆಂದು, ಹಿಂದೂ-ಮುಸ್ಲಿಮರನ್ನು ಒಡೆದು ಕೊನೆಗೆ ಭಾರತ-ಪಾಕಿಸ್ತಾನವೆಂದು ವಿಭಜಿಸಿ ಹೋದರೆಂದು, ನಮಗೆಲ್ಲ ಕೋಪ. ನಾವು ಬ್ರಿಟಿಷರ ಲಾಠಿಯೇಟಿಗೆ, ಗುಂಡಿನೇಟಿಗೆ ಬೆದರೆವೆಂದು ಸ್ವಾತಂತ್ರ್ಯ ಹೋರಾಟಗಾರರು ಸಂಕಲ್ಪಿಸಿದ್ದರು. ಸರಿ. ಸ್ವಾತಂತ್ರ್ಯ ಸಿಕ್ಕಿತು. ಇಷ್ಟು ವರ್ಷಗಳ ಆನಂತರ, ಪ್ರಾಯಃ ಎರಡು-ಮೂರು ಸ್ವತಂತ್ರ ತಲೆಮಾರುಗಳನ್ನು ಕಂಡ ದೇಶ ಈಗ ನಮ್ಮದೇ ಸರಕಾರದ ಲಾಠಿಯೇಟಿಗೆ, ಗುಂಡಿನೇಟಿಗೆ ಬೆದರೆವೆಂದು ಸಂಕಲ್ಪಿಸಬೇಕಾಗಿದೆ. ಒಡೆದಾಳುವ ನೀತಿ ಬ್ರಿಟಿಷರಿಗಿಂತಲೂ ಹೊಲಸಾಗಿದೆ. ಸಣ್ಣ ಉದಾಹರಣೆಯೆಂದರೆ ಮತೀಯ ಗಲಭೆಗಳೆಂದು ಭಿನ್ನನೀತಿಗಳನ್ನು ಅನುಸರಿಸುವ ಸರಕಾರವು ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಮತ್ತು ಗಾಂಧಿ ಹಂತಕನಾದ ಗೋಡ್ಸೆಯ ಭಾವಚಿತ್ರದೊಂದಿಗೆ ತಿರಂಗಾದ ಮೆರವಣಿಗೆಯನ್ನು ಸಹಿಸಿಕೊಂಡು ಅದು ತಿರಂಗಾಕ್ಕೆ ಕೊಟ್ಟ ಗೌರವವೆಂಬಂತೆ ನಡೆದುಕೊಂಡಿದೆ. ಇನ್ನೊಂದೆಡೆ ಆಳುವವರ ವಕ್ತಾರರೊಬ್ಬರು ಸಾವರ್ಕರ್ ಕುರಿತು ಹಿಂದಿನ ಮತ್ತು ಮುಂದಿನ ನಾಲ್ಕು ತಲೆಮಾರಿನವರಿಗೆ ಮಾತನಾಡುವ ಯೋಗ್ಯತೆಯಿಲ್ಲವೆಂದು ಫತ್ವಾ ಹೊರಡಿಸಿದ್ದಾರೆ. ಇನ್ನೂ ದಾರುಣ ಸಂಗತಿಯೆಂದರೆ ಅಮೃತ ಸ್ವಾತಂತ್ರ್ಯೋತ್ಸವದ ಕೊಡುಗೆಯಾಗಿ ಸಾಮೂಹಿಕ ಅತ್ಯಾಚಾರಕ್ಕಾಗಿ ಜೀವಾವಧಿ ಸಶ್ರಮ ಶಿಕ್ಷೆಗೊಳಗಾದ ೧೧ ಅಪರಾಧಿಗಳಿಗೆ ‘ಕ್ಷಮಯಾ ಧರಿತ್ರಿ’ಯ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಈ ದೇಶದಲ್ಲಿ ಮಹಿಳೆಯರನ್ನು ಗೌರವಿಸಲಾಗುತ್ತಿದೆಯೇ ಎಂಬುದಕ್ಕೆ ಇದಕ್ಕಿಂತ ಘೋರ ನಿದರ್ಶನ ಬೇಕಿಲ್ಲ. ಬಿಡುಗಡೆಯಾಗಿ ಹೊರಬಂದಾಗ ಅವರನ್ನು ಆರತಿಯೆತ್ತಿ ಸ್ವಾಗತಿಸಲಾಯಿತಂತೆ. ಯುದ್ಧ ಮುಗಿಸಿ ಬಂದ ವೀರಯೋಧನಿಗೆ ಸಿಗಬೇಕಾದ ‘ಜೈ ಜವಾನ್’ನಂತಹ ಗೌರವ ಅತ್ಯಾಚಾರಿಗಳಿಗೆ ಸಿಗುತ್ತದೆಯಾದರೆ (ವಿವಿಧ ಕ್ಷೇತ್ರಗಳಲ್ಲಿ ನೀಡುವ ದ್ರೋಣ, ಏಕಲವ್ಯ, ಅರ್ಜುನ ಇಂತಹ ಪ್ರಶಸ್ತಿಗಳಂತೆ) ಮುಂದೆ ಅವರಿಗೆ ‘ವೀರ-ದುಃಶಾಸನ’ ಪ್ರಶಸ್ತಿಯನ್ನೂ ಸರಕಾರ ಘೋಷಿಸಿದರೆ ವಿಚಿತ್ರವೇನಲ್ಲ. ಅದನ್ನು ರಾಷ್ಟ್ರಪತಿಯವರಿಂದ ಕೊಡಿಸಿದರೆ ಇನ್ನೂ ಅರ್ಥಪೂರ್ಣವಾಗುತ್ತದೆ. ಹೇಗಿದ್ದರೂ ಸಾಮೂಹಿಕ ಅತ್ಯಾಚಾರಕ್ಕೆ ಸರಕಾರದ ಪರೋಕ್ಷ ಪ್ರೋತ್ಸಾಹ ಮತ್ತು ಆಶೀರ್ವಾದ ಲಭ್ಯವಿದೆಯೆಂದೇ ತಾತ್ಪರ್ಯ. ‘‘ಎಲ್ಲಿ ಮಹಿಳೆಯೊಬ್ಬಳು ನಡುರಾತ್ರಿಯೂ ನಿರ್ಭಯವಾಗಿ ಸಂಚರಿಸಬಹುದೋ ಅದೇ ನೈಜ ಸ್ವಾತಂತ್ರ್ಯ’’ವೆಂದು ಮತ್ತು ಭಾರತೀಯವಾದ ‘‘ಯತ್ರ ನಾರ್ಯಸ್ತು ಪೂಜ್ಯಂತೇ..’’ ಹೇಳಿದ್ದು ಈ ಅಮೃತಮಹೋತ್ಸವಕ್ಕೆ ಅನ್ವಯಿಸುವುದಿಲ್ಲವೆಂದು ತಿಳಿದು ಸುಮ್ಮನಾಗಬಹುದು. ಎಷ್ಟೆಂದರೂ ಭಾರತ ಮಾತೆಯಲ್ಲವೇ?

ಕಾನೂನು, ನ್ಯಾಯ ಮತ್ತು ನೀತಿಯ ಕುರಿತು ಸರಕಾರದ ಸರ್ವೋಚ್ಚ ನ್ಯಾಯಾಲಯದ ಸ್ಪಷ್ಟ ನಿರ್ದೇಶನವಿದ್ದಿದ್ದರೆ ಇಂತಹ ಬಿಡುಗಡೆಯಾಗುತ್ತಿರಲಿಲ್ಲ. ಪ್ರತೀ ಅನ್ಯಾಯದಲ್ಲೂ ನ್ಯಾಯದಾನದ ಪಾತ್ರವಿರುತ್ತದೆ. ಪ್ರಜಾಪ್ರಭುತ್ವವೇ ಅಷ್ಟು: ಅಸ್ಪಷ್ಟ; ಅಸಂಗತ. ಈ ಕುರಿತು ಎಷ್ಟು ಚರ್ಚೆ ನಡೆದರೂ ಇದರಲ್ಲಿ ಲೋಕರುಚಿಯಿಲ್ಲ.

ನಿಧಿಗಾಗಿ, ಬದುಕಿನ ಅಭಿವೃದ್ಧಿಗಾಗಿ ಮಕ್ಕಳನ್ನೋ ಇನ್ನಿತರ ಮುಗ್ಧರನ್ನೋ ಬಲಿನೀಡುವ ವರದಿಗಳನ್ನು ಕೇಳುತ್ತೇವೆ. ಈ ವಿಚಾರದಲ್ಲಿ ಸರಕಾರವೂ ಹಿಂದೆ ಬಿದ್ದಿಲ್ಲ. ಮತ ಮತ್ತು ಮತೀಯತೆಯ ಸಮೀಕರಣಕ್ಕೆ, ಅಮೃತಮಹೋತ್ಸವದ ರಾಜಕೀಯ ಮೇಲಾಟಕ್ಕೆ ಹಲವರು ಅಮಾಯಕರು ಬಲಿಯಾದರು. ಅವರೂ ಮತದಾರರೇ ಇರಬಹುದು. ಸತ್ತರೆ ಸರಕಾರಕ್ಕೇನೂ ಕೊಳ್ಳೆ ಹೋಗುವುದಿಲ್ಲ.

ಇಂತಹ ಹತ್ತು ಹಲವು ಉದಾಹರಣೆಗಳು ಲಭ್ಯವಿವೆ.

ಇವೆಲ್ಲದರ ನಡುವೆ ಕರ್ನಾಟಕ ಸರಕಾರವು ತನ್ನ ಮತೀಯ ಸ್ವರೂಪಕ್ಕೆ ತಕ್ಕುದಾದ ಒಂದು ಜಾಹೀರಾತನ್ನು ನೀಡಿತು. ಬಹುತೇಕ ಎಲ್ಲ ಕನ್ನಡ ಮತ್ತು ಆಂಗ್ಲ ದಿನಪತ್ರಿಕೆಗಳಲ್ಲಿ ನವಭಾರತದ, ನವಕರ್ನಾಟಕದ ಪ್ರತಿಷ್ಠೆಯನ್ನು ಎತ್ತಿಹಿಡಿಯುವ ಈ ಜಾಹೀರಾತಿನಲ್ಲಿ ಮೇಲ್ಗಡೆ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳ ಫೋಟೊ ರಾರಾಜಿಸಿತು. ಚಿಕ್ಕದಾಗಿ ರಾಷ್ಟ್ರಧ್ವಜವೂ ಇತ್ತು. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಕಾಣಿಸುವ ಒಂದಷ್ಟು ವಾಕ್ಯಗಳು ಮತ್ತು ದೇಶಕ್ಕಾಗಿ ಹೋರಾಡಿದ ಅನೇಕ ಮಂದಿಯ ರೇಖಾಚಿತ್ರ ಮತ್ತು ಕೆಲವರ ವರ್ಣರಂಜಿತ ಭಾವಚಿತ್ರಗಳು ಶೋಭಿಸಿದವು. ರೇಖಾಚಿತ್ರಗಳಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿ,  ತಿಲಕ್, ಗಾಂಧಿ, ನೆಹರೂ, ನೇತಾಜಿ, ಭಗತ್‌ಸಿಂಗ್, ಸರ್ದಾರ್ ಪಟೇಲ್, ಅಂಬೇಡ್ಕರ್, ಮೌಲಾನಾ, ಸಾವರ್ಕರ್, ಶಾಸ್ತ್ರಿ ಇವರಿದ್ದರೆ ಬಣ್ಣದ ಭಾವಚಿತ್ರಗಳಲ್ಲಿ ಗಾಂಧಿಯಿಂದ ಯಶೋಧರಾ ದಾಸಪ್ಪನವರ ವರೆಗೆ ದೇಶದ ಮತ್ತು ಕರ್ನಾಟಕದ ಹಲವಾರು ಧುರೀಣರನ್ನು ತೋರಿಸಲಾಗಿತ್ತು. ಇವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಪ್ರಸ್ತುತರೇ.

ತೆರಿಗೆದಾರರ ದುಡ್ಡಿನಲ್ಲಿ ಸರಕಾರಗಳು ಆಡಳಿತ ಪಕ್ಷದ ಸುಳ್ಳುಗಳನ್ನು ಮತ್ತು ಅಲ್ಲಿನ ಪೊಳ್ಳುಜನರನ್ನು ಬೆರ್ಚಪ್ಪಗಳಂತೆ ನಿಲ್ಲಿಸಿ ವೈಭವೀಕರಿಸುವುದು ಲಾಗಾಯ್ತಿನಿಂದ ಬಂದ ತಂತ್ರ. ನಮ್ಮ ಜನರು ಇದರ ಬಗ್ಗೆ ಪ್ರಶ್ನೆ ಮಾಡುವುದಿಲ್ಲ. ಏಕೆಂದರೆ ಜಾಹೀರಾತಿನ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಒಂದೇ. ಆದರೆ ಈ ಜಾಹೀರಾತಿನ ಗುಪ್ತಕಾರ್ಯಸೂಚಿ ಪ್ರತ್ಯೇಕ ಮತ್ತು ವಿಶಿಷ್ಟವಾಗಿತ್ತು. ನಮ್ಮ ಜನರ ಮುಗ್ಧತೆಯನ್ನು ಅರಿತಿರುವ ಸರಕಾರವು ರೇಖಾಚಿತ್ರಗಳನ್ನು ಅಷ್ಟಾಗಿ ಮುಖ್ಯವಾಗಿಸದೆ ಭಾವಚಿತ್ರಗಳಲ್ಲಿ ತನ್ನ ರಾಜಕೀಯ ಮೇಲಾಟವನ್ನು ಮಾಡಿತು. ಭಾರತದ ಮೊದಲ ಪ್ರಧಾನಿ ನೆಹರೂ ಅವರ ಭಾವಚಿತ್ರವನ್ನು ಕೈಬಿಟ್ಟಿತು. ಇವನ್ನು ಗಮನಿಸಿದರೆ ಒಂದೋ ಇದನ್ನು ಸರಕಾರದ ಪೀಕದಾನಿಯನ್ನು ಹಿಡಿದ ಜೋಳವಾಳಿಗೆಯ ಅಧಿಕಾರಿಗಳು ಇಲ್ಲವೇ ಸರಕಾರಿ ಮುದ್ರಣಾಲಯದ ಕಂಪೊಸಿಟರುಗಳು ತಯಾರಿಸಿರಬೇಕು ಅನ್ನಿಸುತ್ತದೆ. ಏಕೆಂದರೆ ಈ ಆಯ್ಕೆಗೆ ತರ್ಕವಿಲ್ಲ; ತಲೆಬುಡವಿಲ್ಲ. ಒಟ್ಟಿನಲ್ಲಿ ಒಂದು ಪುಟದ ಜಾಹೀರಾತು ಬೇಕೆಂಬ ಅವಸರದಲ್ಲಿ ತಯಾರಿಸಿದಂತೆ ಮತ್ತು ದುರುದ್ದೇಶಕ್ಕಿಂತ ಹೆಚ್ಚಾಗಿ ನಿರ್ಲಕ್ಷ್ಯ ಮತ್ತು ಅಜ್ಞಾನ ಮನೆಮಾಡಿದ ಮಂದಿಯ ನಿರ್ಮಾಣದಂತಿದೆ. ಹಿಂದೊಮ್ಮೆ ಸಮಾಜವಾದಿ ಹೋರಾಟದ ಕುರಿತು ಪ್ರಕಟವಾದ ಪುಸ್ತಕದಲ್ಲಿ ಅಷ್ಟೇನೂ ಪರಿಚಯವಿಲ್ಲದ ಒಬ್ಬ ವ್ಯಕ್ತಿಯ ಹೆಸರಿತ್ತಂತೆ. ಲೇಖಕರೋ, ಸಂಪಾದಕರೋ, ಪ್ರಕಾಶಕರೋ ವಿಸ್ಮಯದಿಂದ ಇದನ್ನು ವಿಚಾರಿಸಿದರೆ ಅದನ್ನು ಮುದ್ರಣಾಲಯದ ಕಂಪೊಸಿಟರ್ ಒಬ್ಬ ಸೇರಿಸಿದನೆಂದು ಗೊತ್ತಾಯಿತಂತೆ. ಆತನ ಗೆಳೆಯನೊಬ್ಬ ಇಂತಹ ಒಂದು ಹೋರಾಟದಲ್ಲಿ ಭಾಗವಹಿಸಿ ದಸ್ತಗಿರಿಯಾಗಿದ್ದನಂತೆ. ಆತನ ಹೆಸರನ್ನೇಕೆ ಬಿಟ್ಟರೋ ಎಂದು ಮರುಗಿ ಆತ ತನ್ನ ಪಾಲಿನ ಕೊಡುಗೆಯಾಗಿ ಆ ಗೆಳೆಯನ ಹೆಸರನ್ನು ಸೇರಿಸಿದ್ದನೆಂದು ಆನಂತರ ಗೊತ್ತಾಯಿತು. ಎಲ್ಲ ಕ್ಷೇತ್ರಗಳಲ್ಲೂ ಯೋಗ್ಯರ ಮತ್ತು ಅಯೋಗ್ಯರ ಪಟ್ಟಿ ಬೆಳೆಯುವ ಕ್ರಮ ಹೀಗೆ!

ನೆಹರೂ ಅವರ ರೇಖಾಚಿತ್ರವಿರುವುದನ್ನೂ ಬಣ್ಣದ ಭಾವಚಿತ್ರವಿಲ್ಲದಿರು ವುದನ್ನೂ ಜನರು ಗಮನಿಸಿದ್ದಾರೆ. ಈ ಕುರಿತು ವ್ಯಾಪಕ ಟೀಕೆಗಳು ಬಂದವು. ವಿಚಿತ್ರವೆಂದರೆ ಸರಕಾರದ ಮತ್ತು ಆಳುವ ಪಕ್ಷದ ನಾಯಕರಿಗೂ, ಬೆಂಬಲಿಗರಿಗೂ ಯಾವರೀತಿಯ ಪ್ರತಿಕ್ರಿಯೆಯನ್ನು ಮತ್ತು ಸಮರ್ಥನೆಯನ್ನು ನೀಡಬೇಕೆಂಬ ಅರಿವಿರಲಿಲ್ಲ; ಈಗಲೂ ಇಲ್ಲ. ಪಕ್ಷದ ಪದಾಧಿಕಾರಿಯೊಬ್ಬರು ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಲಾಗಿದೆ ಎಂದರೆ ಸರಕಾರದ ಸಚಿವರೊಬ್ಬರು ನೆಹರೂ ಅವರ ಭಾವಚಿತ್ರವನ್ನು ಹಾಕಬೇಕಾಗಿತ್ತು ಎಂದರು. ಇದು ಪ್ರಮಾದ ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು ಆಕಸ್ಮಿಕವೆಂದರು. ಮುಖ್ಯಮಂತ್ರಿಯವರು ಅಳೆದು ಸುರಿದೂ ನೆಹರೂ ಅವರ ಹೆಸರನ್ನು ಪ್ರಸ್ತಾಪಿಸಿ ಕಾಶ್ಮೀರ ಸಮಸ್ಯೆಯಲ್ಲಿ ಅವರ ವೈಫಲ್ಯವನ್ನು ಬೆಟ್ಟುಮಾಡಿ ತೋರಿಸಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

ನೆಹರೂ ಈ ದೇಶದ ಮೊದಲ ಪ್ರಧಾನಿ. ಅಷ್ಟೇ ಆಗಿದ್ದರೆ ಅವರ ಹೆಸರು ಅಂಕಿಅಂಶಗಳಲ್ಲಿ, ದತ್ತಾಂಶಗಳಲ್ಲಿ ಮಾತ್ರ ಇರಬಹುದಿತ್ತು. ಆದರೆ ಅವರು ಸ್ವಾತಂತ್ರ್ಯ ಹೋರಾಟಗಾರರು. ಈಗ ದೇಶದ ಬಗ್ಗೆ, ದೇಶಭಕ್ತಿಯ ಬಗ್ಗೆ ಮಾತನಾಡುವ ಬಹಳಷ್ಟು ಮಂದಿ ನೆಹರೂ ಅವರನ್ನು ನೋಡಿಲ್ಲ. ನೋಡಿದವರೂ ನೋಡದವರೂ ಅವರನ್ನು ಕೇಳಿಸಿಕೊಂಡಿಲ್ಲ; ಓದಿಲ್ಲ.

ಸ್ವಾತಂತ್ರ್ಯ ಸಿಕ್ಕಾಗ ನೆಹರೂ ಅವರು ಮಾಡಿದ ಪ್ರಸಿದ್ಧ ಭಾಷಣ ‘ವಿಧಿಯೊಂದಿಗೆ ಒಪ್ಪಂದ’ (Tryst with Destiny) ಯಾವನೇ ನಾಯಕನು ಮಾಡಿದ ಅತ್ಯುತ್ತಮ ಭಾಷಣಗಳಲ್ಲೊಂದು. ಭಾಷಣ ಚೆನ್ನಾಗಿರಬೇಕಾದರೆ ಅದನ್ನು ಎಷ್ಟು ಗಟ್ಟಿಯಾಗಿ ಗಂಟಲಗುಳಿಯಿಂದ ಕಿರುಚಿದರೆಂಬುದು ಮುಖ್ಯವಲ್ಲ. ಅದರ ವಿಚಾರ, ಭಾವ, ಸತ್ವ ಮತ್ತು ಭಾಷಾಗುಣಮಟ್ಟ ಮುಖ್ಯ. ಹಿಂದಿನ ಪಠ್ಯಗಳಲ್ಲಿ ಈ ಭಾಷಣವು ಸೇರಲ್ಪಟ್ಟಿತ್ತು ಅದು ಪ್ರಧಾನಿ ಮಾಡಿದ ಭಾಷಣವೆಂದು ಸೇರಿದ್ದಲ್ಲ; ಅದು ಸೇರಿದ್ದು ತನ್ನ ಮೌಲ್ಯದಿಂದ. ಹಾಗೆಯೇ ಗಾಂಧಿಹತ್ಯೆ ನಡೆದಾಗ ‘ಬೆಳಕು ಮರೆಯಾಯಿತು’ (The Light has Gone out) ಎಂಬ ಅವರ ಭಾಷಣವೂ ಅಷ್ಟೇ ಪ್ರಸಿದ್ಧ. ಇವೆಲ್ಲ ತಕ್ಷಣಕ್ಕೆ ಅವರ ಮನಸ್ಸಿನಾಳದಿಂದ ಮೂಡಿದ ವಿಚಾರಪೂರಿತಭಾವುಕ ಪ್ರತಿಮೆಗಳು. ಸಿದ್ಧಪಡಿಸಿಕೊಂಡು ಮಾಡಿದ ಮನದ ಮಾತುಗಳಲ್ಲ. ಸ್ವತಂತ್ರ ಭಾರತದ ಇತಿಹಾಸ ಮತ್ತು ರಾಜಕೀಯವನ್ನು ಗಮನಿಸಿದರೆ ನೆಹರೂ ಅವರಂತಹ ನಿರರ್ಗಳ ಶಕ್ತ ಮಾತುಗಾರರು ಇನ್ನೊಬ್ಬರಿಲ್ಲ.

ಹಾಗೆಯೇ ನೆಹರೂ ಬರೆದಿರುವ ಆತ್ಮಚರಿತ್ರೆ, ವಿಶ್ವ ಇತಿಹಾಸದ ಪ್ರಭೆಗಳು (Glimpse of World History), ಭಾರತ ಶೋಧನೆ (Discovery of India) ಇವು ಭಾರತೀಯ ಸಾಹಿತ್ಯದ ಮೈಲಿಗಲ್ಲುಗಳು. ನೆಹರೂ ಪ್ರಧಾನಿಯಾಗಿದ್ದರು ಎಂಬುದನ್ನು ಪ್ರಜ್ಞಾವಂತರ್ಯಾರು ಮರೆಯಲಾರರಾದರೂ ಮುಗ್ಧರಲ್ಲಿ, ಅಜ್ಞಾನಿಗಳಲ್ಲಿ ಅವರು ಪ್ರಧಾನಿಯಾಗಿದ್ದರು ಎಂಬುದನ್ನು ಮರೆಸುವ ಪ್ರಯತ್ನ ನಡೆಯುತ್ತಿದೆ. ಇದರಲ್ಲಿ ಯಾರೇ ಯಶಸ್ವಿಯಾದರೂ ನೆಹರೂ ತಮ್ಮ ಬರಹ ಮತ್ತು ವಾಗ್ವೈಖರಿಯಿಂದಲೇ ಉಳಿದಾರು. ಅದಕ್ಕೇ ಅವರ ಮಾತು-ಕೃತಿಗಳ ಕುರಿತು ಯಾವ ರಾಜಕಾರಣಿಯೂ ಚರ್ಚಿಸುತ್ತಿಲ್ಲ. ಬಯ್ಯುವುದಕ್ಕೆ ಭಾಷೆ ಬೇಕಾಗಿಲ್ಲ; ದುಷ್ಟತನವಿದ್ದರೆ ಸಾಕು.

ನೆಹರೂ ವ್ಯಕ್ತಿತ್ವದ ಇನ್ನೊಂದು ಮುಖವೆಂದರೆ ಅವರು ಭಿನ್ನಮತವನ್ನು ಗೌರವಿಸುತ್ತಿದ್ದುದು. ತಮ್ಮ ವಿರುದ್ಧ ಬರುವ ಟೀಕೆಗಳನ್ನು ಅವರು ಆಲಿಸುತ್ತಿದ್ದರು. ಉದ್ವೇಗಕರವಾಗಿ ಪ್ರತಿಕ್ರಿಯಿಸುತ್ತಿರಲಿಲ್ಲ. ಅವರ ಇಚ್ಛೆಗೆ ವಿರುದ್ಧವಾಗಿ ಸ್ವತಂತ್ರ ಭಾರತದ ಮೊದಲ ಕಾಂಗ್ರೆಸ್ ಅಧ್ಯಕ್ಷರಾಗಿ ಪುರುಷೋತ್ತಮದಾಸ್ ಟಂಡನ್ ಆಯ್ಕೆಯಾದಾಗ, ಬಾಬು ರಾಜೇಂದ್ರ ಪ್ರಸಾದ್ ಅವರನ್ನು ಭಾರತದ ಮೊದಲ ರಾಷ್ಟ್ರಪತಿಯಾಗಿಸಿದಾಗ (ಈ ಹುದ್ದೆಗೆ ನೆಹರೂ ರಾಜಾಜಿ ಬಗ್ಗೆ ಒಲವು ತೋರಿಸಿದ್ದರು.) ತನ್ನ ಭಿನ್ನಮತವನ್ನು ಮರೆತು ಗೌರವಿಸಿದರು; ಸಹಕರಿಸಿದರು. (ಇವೆರಡು ಆಯ್ಕೆಗಳೂ ಸರ್ದಾರ್‌ಪಟೇಲರ ಪ್ರಭಾವದಿಂದ ನಡೆದವು.) ನೆಹರೂ ನಾಯಕತ್ವವು, ಲೇಖಕ-ಚಿಂತಕ ನೀರದ್ ಚೌಧುರಿ ಬರೆದಂತೆ, ‘‘ಭಾರತದ ಏಕತೆಯ ಹಿಂದಿದ್ದ ಬಹುಮುಖ್ಯ ನೈತಿಕ ಶಕ್ತಿ’’. ನೆಹರೂ ‘‘ಒಂದು ಪಕ್ಷದ ನಾಯಕರು ಮಾತ್ರ ಆಗಿರಲಿಲ್ಲ, ಭಾರತದ ಒಟ್ಟಾರೆ ಪ್ರಜೆಗಳ ನಾಯಕರಾಗಿದ್ದರು, ಗಾಂಧಿಯ ನ್ಯಾಯಯುತ ವಾರಸುದಾರ’’ ಎಂದಿದ್ದರು ನೀರದ್ ಚೌಧುರಿ. ಪಂಚಶೀಲವನ್ನು ತಾತ್ವಿಕವಾಗಿ ಶ್ರದ್ಧೆಯಿಂದ ಬೆಂಬಲಿಸಿದ ನೆಹರೂ ಅಲಿಪ್ತ ನೀತಿಗೆ ವಿಶ್ವಮಾನ್ಯತೆಯನ್ನು ತಂದರು. ಕೊನೆಗೆ ಚೀನಾ ಬೆನ್ನಿನಲ್ಲಿರಿದಾಗ ಅದರ ನೋವನ್ನು ಒಳಗಿರಿಸಿಕೊಂಡು ದಿನಕಳೆದರು. ಪ್ರಾಯಃ ಇದೇ ಅವರ ಕೊನೆಗೂ ಕಾರಣವಾಯಿತು.

ಭಾರತ ವಿಭಜನೆಗೆ ನೆಹರೂರವರನ್ನು ದೂಷಿಸುವವರು ಚರಿತ್ರೆಯನ್ನು ಓದದವರು ಅಥವಾ ಓದಿದರೂ ತಿರುಚುವವರು. ಇಂದು ನೆಹರೂರನ್ನು ಟೀಕಿಸುವವರು ಪಾಕಿಸ್ತಾನ ಮತ್ತು ಚೀನಾ ನಮ್ಮ ಎಷ್ಟು ಜಾಗವನ್ನು ಆಕ್ರಮಿಸಿವೆ ಮತ್ತು ಅವನ್ನು ಮರಳಿ ಪಡೆಯಲು ಆಗುತ್ತಿಲ್ಲ ಮಾತ್ರವಲ್ಲ, ದಿನವೂ ಸಂಘರ್ಷಸ್ಥಿತಿಯನ್ನೆದುರಿಸುವುದರ ಮತ್ತು ಚೀನಾ ಇನ್ನಷ್ಟು ಭೂಭಾಗವನ್ನು ಆಕ್ರಮಿಸಿರುವ ಬಗ್ಗೆ ತುಟಿಗಳನ್ನು ಹೊಲಿದುಕೊಂಡು ಕುಳಿತಿದ್ದಾರೆ. ಮುಗ್ಧ ಜನರು ಸರಕಾರವು ನೀಡಿದ ಮತೀಯ ಸಮಸ್ಯೆಗಳನ್ನು ಆಯ್ದುಕೊಂಡು ವಾಸ್ತವಕ್ಕೆ ಕುರುಡು-ಕಿವುಡಾಗಿದ್ದಾರೆ.

‘ಡೊಂಕು ಬಾಲಕ್ಕೆ ಚಿನ್ನದ ನಳಿಕೆಬಾಲವನ್ನು ನೆಟ್ಟಗಾಗಿಸದು. ನಮ್ಮನ್ನಾಳುವವರ ಬುದ್ಧಿ ಎಷ್ಟೆಂದರೂ ಅಷ್ಟೇ. ತಮಗಾಗದವರನ್ನು ದಮನಿಸಲು, ಅದು ಸಾಧ್ಯವಾಗದಿದ್ದರೆ ಅವಮಾನಿಸಲು ತಮ್ಮ ಕಾರ್ಯಕ್ಷೇತ್ರವನ್ನು, ಅಧಿಕಾರವನ್ನು, ಹಣವನ್ನು ಇನ್ನಿತರ ಪರಿಕರಗಳನ್ನು ಬಳಸುತ್ತಾರೆ. ಸದ್ಯ ಕೆಲವು ವರ್ಷಗಳಿಂದ ನೆಹರೂ ಅವರನ್ನು ಅವಮಾನಿಸಲು ಮತ್ತು ಮರೆಸಲು ಸಂಘಟಿತ ಪ್ರಯತ್ನ ನಡೆಯುತ್ತಿದೆ. ಗಾಂಧಿಯ ಕುರಿತೂ ಇಂತಹ ಪ್ರಯತ್ನ ನಡೆದಿದೆ; ನಡೆಯುತ್ತಿದೆ. ಆದರೆ ವಿಶ್ವಕ್ಕೆ ವಿಶ್ವವೇ ಗಾಂಧಿಗೆ ತೋರುವ ಗೌರವವನ್ನು ಗಮನಿಸಿದ ಸರಕಾರ ಸ್ವಲ್ಪಪಾಠ ಕಲಿತಂತಿದೆ. ಆದರೆ ಅದಕ್ಕಿರುವ ಗರ್ವವು ಗೌರವವನ್ನು ನೀಡುವುದಿಲ್ಲ; ಶೋಭೆಯನ್ನು ತರುವುದಿಲ್ಲ.

ಈ ಪರಿಸ್ಥಿತಿ ಎಲ್ಲರನ್ನೂ ವಿದ್ಯಾವಂತರನ್ನಾಗಿ ಮಾಡುವುದರಿಂದ ಬಗೆಹರಿಯುವುದಿಲ್ಲ. ನಮ್ಮ ವಿದ್ಯಾವಂತರೇ ಇದಕ್ಕೆ ಸಾಕ್ಷಿ. ದೇಶಭಕ್ತಿಯ ವಾಸ್ತವವು ತ್ರಿವರ್ಣಗಳನ್ನು ಚಾತುರ್ವರ್ಣಗಳನ್ನು ಮೀರಿ ನಡೆದರೆ ಮಾತ್ರ ಈ ದೇಶ ಅಭಿವೃದ್ಧಿಹೊಂದಬಹುದು. ಇಲ್ಲದಿದ್ದರೆ 25 ವರ್ಷ ಬಿಡಿ, 250 ವರ್ಷ ಕಳೆದರೂ ಭಾರತ ಕಾಲಕ್ರಮದಲ್ಲಿ ಹಿಂದೆ ಸರಿಯುವುದೇ ವಿನಾ ಒಂದು ಹೆಜ್ಜೆಯೂ ಅಭಿವೃದ್ಧಿಯತ್ತ ಅಡಿಯಿಡಲಾಗದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top