ಅನುಭವವನ್ನೂ ಅನುಭಾವವನ್ನೂ ತುಂಬಿಕೊಡುವ 'ಬೌಲ್'
-

ಪ್ರಾಯಃ ಇತ್ತೀಚೆಗೆ ಪ್ರಕಟವಾದ ಕಾದಂಬರಿಗಳಲ್ಲಿ ಈ ಪ್ರಕಾರದ ಅನುಭಾವಿಕ ಹಾದಿಯ ಸಾಂಸಾರಿಕ ಗತಿವಿಧಾನ ನಡೆದುದಿಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ಎಚ್.ಎಸ್. ಶಿವಪ್ರಕಾಶರ ಕಾವ್ಯಧಾಟಿ ಇಲ್ಲಿ ನೆನಪಾಗಬಹುದು. ನವ್ಯದ ಆರಂಭದಲ್ಲಿ ಈ ಬಗೆಯ ಅನುಭವವನ್ನು ಅಭಿವ್ಯಕ್ತಪಡಿಸಿದ ಪದ್ಯಗಳನೇಕವಿದ್ದವು. ಇಲ್ಲಿರುವ ಪ್ರಜ್ಞೆ ಹೇಗಿದೆಯೆಂದರೆ ''ನಿಮ್ಮ ಹುಡುಕಾಟ, ಮಾತು, ಆಚರಣೆಗಳಲ್ಲಿ ಅಡಗಿರುವ ಸದ್ದು ನಿಂತ ಕ್ಷಣ, ನಿಮಗೆ ಅದು ಬೇಕು ಅನಿಸಿದ ಕ್ಷಣ, ನೀವು ಅದರ ಸಮೀಪಕ್ಕೋ, ಅದೇ ನಿಮ್ಮ ಸಮೀಪಕ್ಕೋ ಬಂದು ಎರಡೂ ಪ್ರಜ್ಞೆಗಳು ಒಂದೇ ಆಗಬಹುದು..'' ಕೃತಿ ಇದನ್ನೇ ಹುಡುಕಿ ಹಿಡಿದಿದೆ.
ನಮಗೆ ಅಪರಿಚಿತರಾದ ಲೇಖಕರ ಕೃತಿಗಳನ್ನು ಕೆಲವೊಮ್ಮೆ ಪರೀಕ್ಷಕ ದೃಷ್ಟಿಯಿಂದ, ಇನ್ನು ಕೆಲವೊಮ್ಮೆ ಚಿಕಿತ್ಸಕ ದೃಷ್ಟಿಯಿಂದ ಓದಬೇಕಾಗುತ್ತದೆ. ಪತ್ರಿಕೆಗಳಲ್ಲಿ ವಿಮರ್ಶೆಯ ಹೆಸರಿನಲ್ಲಿ ಲೇಖನಗಳು ಪ್ರಕಟವಾಗಲು ಆರಂಭವಾದ ಮೇಲೆ ಈಗಾಗಲೇ ಜನಪ್ರಿಯರಾದ ಲೇಖಕರ ಕೃತಿಗಳನ್ನು ಕಣ್ಣು ಹಾಯಿಸಿ ಹೊಗಳುವ ಪದ್ಧತಿ ಬೆಳೆದಿದೆಯೆಂಬುದು ಕಹಿಸತ್ಯ. ಒಂದು ಕೃತಿ ಅದರಷ್ಟಕ್ಕೇ ಅದು ಮುಖ್ಯವಾಗಬೇಕೇ ಹೊರತು ಅದನ್ನು ಬರೆದವರು ಯಾರೆಂಬುದರಿಂದಲ್ಲ. ಕೃತಿಯ ಮೂಲಕ ಕೃತಿಕಾರನೇ ಹೊರತು ಕೃತಿಕಾರನ ಮೂಲಕ ಕೃತಿಯಲ್ಲ. ಈಚೀಚೆಗೆ ಕೃತಿಕಾರರನ್ನು ಮೊದಲ ಸಾಲಿನಲ್ಲಿ ಪ್ರತಿಷ್ಠಾಪಿಸಲೆಂದೇ ವಿಮರ್ಶೆಗಳು ಬರುವ ಸಂದರ್ಭಗಳು ಹೆಚ್ಚಾಗುತ್ತಿರುವುದರಿಂದ ಅಷ್ಟಾಗಿ ಪರಿಚಿತರಲ್ಲದ ಲೇಖಕರು ಸ್ಪರ್ಧೆಯಲ್ಲೋ, ಜನರ ಪ್ರಾಮಾಣಿಕ ಓದಿನಿಂದಲೋ ಮಾತ್ರ ಮುಂದೆ ಬರಬೇಕಷ್ಟೇ. ವೈಭವೋಪೇತ ಶ್ಲಾಘನೆಗಳಿಲ್ಲದ ಚಲನಚಿತ್ರಗಳು ತಿಳಿನೀರಿನ ಹರಿವಿನ ಹಾಗೆ ಜನಮಾನಸದಲ್ಲಿ ಮೂಡಿದಾಗ ವಿಮರ್ಶಕರಿಗೆ ''ಅರೆ, ನಾವು ಶಿಫಾರಸು ಮಾಡದೆಯೂ ಈ ಕೃತಿ ಇಷ್ಟೊಂದು ಜನಪ್ರೀತಿಯನ್ನು ಗಳಿಸಿತು ಹೇಗೆ?'' ಎಂದು ಕಸಿವಿಸಿಯಾಗುವುದು ಸಹಜ. ಜನಪ್ರೀತಿ ಬೇರೆ; ಜನಪ್ರಿಯತೆ ಬೇರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಡಾ ಎಂ.ಎಸ್.ಮೂರ್ತಿ ಶ್ರೇಷ್ಠ ಕಲಾವಿದರು. ಚಿತ್ರ, ಭಾವಚಿತ್ರಗಳಂತಹ ಕಲಾಕೃತಿಗಳ ಶಿಸ್ತುಗಳಲ್ಲಿ ದುಡಿಯುತ್ತಿರುವವರು. ಕನ್ನಡವಿಶ್ವವಿದ್ಯಾನಿಲಯದ ಡಾಕ್ಟರೇಟ್ ಪದವೀಧರರು. ಮುದ್ರಣಮಾಧ್ಯಮಗಳಲ್ಲಿ ಚಿತ್ರಗಳಲ್ಲದೆ ಅಂಕಣ ಬರಹ, ಪ್ರಬಂಧ, ನಾಟಕ ಮುಂತಾದವನ್ನು ಪ್ರಕಟಿಸಿದವರು. ಅವರೇ 'ಪುಸ್ತಕ ಪ್ರಪಂಚದ ಪ್ರಥಮ ದೃಶ್ಯ ಕಾದಂಬರಿ'ಯೆಂದು ಹೆಸರಿಸಿದ 'ದೃಶ್ಯ'ವೆಂಬ ಚಿತ್ರಕೃತಿಯನ್ನು 2010ರಲ್ಲೇ ತಂದವರು. ಅವರು ಅದನ್ನು ಕಾದಂಬರಿಯೆಂದು ಕರೆದಿದ್ದರೂ ಅದರ ಓದು ಒಂದು ವಿನೂತನ ಅನುಭವವನ್ನು ನೀಡಿದರೂ ಸಾಹಿತ್ಯ ಮಾಧ್ಯಮದ ಮತ್ತು ಚಿತ್ರಕಲೆಯ ಕುರಿತು ಅಷ್ಟಾಗಿ ಅಧ್ಯಯನವಿಲ್ಲದ ನನಗೆ ಸಂಗತವಾದ ಕಾದಂಬರಿಯೆಂಬ ಪ್ರಕಾರಕ್ಕೆ ಹೊಂದುವ ಸೃಷ್ಟಿಯೆಂದು ಒಪ್ಪಿಕೊಳ್ಳಲು ಕಷ್ಟವಾಯಿತು. ಇಲ್ಲಿ ಅದು ಪ್ರಸ್ತುತವಲ್ಲವಾದ್ದರಿಂದ ಅದನ್ನು ಪ್ರತ್ಯೇಕವಾಗಿ ಚರ್ಚಿಸಬಹುದು.
ಇಷ್ಟಕ್ಕೂ ಅವರು ಸಾಹಿತ್ಯಕ್ಷೇತ್ರದಲ್ಲಿ ನೇರ ಸೃಜನಶೀಲ ಸಾಹಿತ್ಯದ ವ್ಯವಸಾಯಗಾರರೆಂದು ಗುರುತಿಸಿಕೊಂಡವರಲ್ಲ. ಮೂರ್ತಿಯವರ ಮೊದಲ ಪೂರ್ಣ ಮತ್ತು ಶುದ್ಧ ಕಾದಂಬರಿ 'ಬೌಲ್'. ಬೆಂಗಳೂರಿನ ಕಿರಂ ಪ್ರಕಾಶನವು ಸುಮಾರು 200 ಪುಟಗಳಷ್ಟು ವಿಸ್ತಾರವಾದ ಈ ಕೃತಿಯನ್ನು ಈಚೆಗೆ ಪ್ರಕಟಿಸಿದೆ. ಮುನ್ನುಡಿಯಲ್ಲಿ ಚಿಂತಕ ಮನುಚಕ್ರವರ್ತಿ ''ಬೌಲ್ ಎಂತಹ ಕೃತಿಯೆಂದರೆ ಅದು ಪ್ರಗತಿಪರ ವಿಮರ್ಶಕರು ಮತ್ತು ಚಿಂತಕರಿಂದ ಅಪ್ರಸ್ತುತ, ಅಸ್ಪಷ್ಟ, ಅಸಂಗತ ಎಂದೆಲ್ಲ ಕರೆಸಿಕೊಳ್ಳುವ ಅಪಾಯವನ್ನು ಎದುರಿಸುವಂತಹ ಪಾತ್ರಗಳನ್ನು ಮತ್ತು ಸನ್ನಿವೇಶಗಳ ಜಗತ್ತನ್ನು ಸೃಷ್ಟಿಸಿಕೊಂಡಿದೆ.'' ಎನ್ನುತ್ತಾರೆ. ಮುನ್ನುಡಿಯನ್ನು ಓದಿದರೆ ಕಾದಂಬರಿಯನ್ನು ಸ್ವಲ್ಪ ಕಷ್ಟಪಟ್ಟೇ ಓದಬೇಕಾದೀತೆಂದು ಅನ್ನಿಸಿದರೆ ಅಸಹಜವೇನಲ್ಲ. ಯಾವುದೇ ಕೃತಿಯನ್ನು ಸಂಶಯದಿಂದಲೇ ಪ್ರವೇಶಿಸುವುದು ಕೃತಿಕಾರನಿಗೂ ಒಳ್ಳೆಯದು; ಓದುಗನಿಗೂ. ಆದರೆ ಈ ಕೃತಿಯ ಓದು ಹಾಗನ್ನಿಸುವುದಿಲ್ಲ. ಇಲ್ಲಿನ 'ಬೌಲ್' ಆಂಗ್ಲ ಪದ. ಅಂದರೆ 'ಪಾತ್ರೆ'. ಬೋಗುಣಿ ಮುಂತಾಗಿ ಪದಾರ್ಥವನ್ನು ಸಂಗ್ರಹಿಸುವ, ತುಂಬಿಕೊಳ್ಳುವ ಒಂದು ಉಪಾಧಿ. ದಿನದಿನಕ್ಕೆ ಅಗತ್ಯವಿರುವಷ್ಟೇ ಸಂಗ್ರಹಿಸುವ ಚಿಕ್ಕಪಾತ್ರೆ. ಈ ಕಾರಣಕ್ಕಾಗಿಯೇ ಈ ಪದವು ಯಾಚನೆಯೊಂದಿಗೆ ಜೋಡಿಸಲ್ಪಟ್ಟಿದೆ. 'ಬೆಗ್ಗಿಂಗ್‌ಬೌಲ್'(ಭಿಕ್ಷಾಪಾತ್ರೆ) ಎಂಬ ಪದಪುಂಜವು ಬಹಳಷ್ಟು ಬಳಕೆಯಲ್ಲಿರುವ ಪದ; ಹಾಗೆಯೇ ದುರ್ಬಳಕೆಯಾಗುವ ಪದವೂ ಹೌದು. ಬೌದ್ಧಭಿಕ್ಷುಗಳ ಒಂದು ಅಗತ್ಯ ಸಲಕರಣೆ. ಇದೊಂದು ಅಧ್ಯಾತ್ಮ ಪ್ರತೀಕವೂ ಹೌದು. 'ಬೌಲ್' ಎಂಬುದು ಸೂಫಿಪಂಥದಲ್ಲಿ ಬಂಗಾಳ ಮತ್ತಿತರ ಪೂರ್ವ ಮತ್ತು ಈಶಾನ್ಯ ಭಾರತದ ಭೂಭಾಗಗಳಲ್ಲಿರುವ 'ಸೂಫಿ' ಮತ್ತು 'ಸಹಜ' ಸಮುದಾಯದ ಗುಂಪಿಗಿರುವ ಹೆಸರೂ, ಧಾರ್ಮಿಕ ಮತ್ತು ಸಂಗೀತ ಪರಂಪರೆಯ ಒಂದು ವೈವಿಧ್ಯವೂ ಹೌದೆಂದು ಕೇಳಿದ್ದೇನೆ. ಹಲವು ಆಯಾಮಗಳಿರುವ ಈ ಪದವನ್ನು ಅದರ ವಿಶಿಷ್ಟ ಧ್ವನಿಪೂರ್ಣ ಅರ್ಥೋತ್ಪನ್ನಮತಿಗಾಗಿ ಲೇಖಕರು ಕನ್ನಡಕ್ಕಿಳಿಸದೆ ಬಳಸಿದ್ದಾರೆ. ಅನುವಾದಗಳಲ್ಲಿ ಸಹಜವಾಗುವ ಈ ರೀತಿಯ ಕನ್ನಡೇತರ ಪದ ಬಳಕೆಯು ತಂತ್ರವೂ ಹೌದು; ಪ್ರಯೋಗವೂ ಹೌದು. ಕ್ರಿಕೆಟ್‌ನಂತಹ ಕ್ರೀಡೆಯಲ್ಲಿ ಇದು ಕ್ರಿಯಾಪದವಾಗಿ ಬಳಕೆಯಲ್ಲಿದೆ! ಲೇಖಕರ ಸೂಚಿತ ಉದ್ದೇಶದ ಹೊರತಾಗಿಯೂ (ಲೇಖಕರ ಮಾತುಗಳು ಆರಂಭವಾಗುವುದೇ 'ಖಾಲಿ ಪಾತ್ರೆಯನ್ನಿಡಿದು..' ಎಂಬುದಾಗಿ!) ಇಲ್ಲಿನ ಪಾತ್ರೆಯು ಖಾಲಿಪಾತ್ರೆ ಎಂಬರ್ಥವನ್ನು ಧ್ವನಿಸದೆ ತುಂಬಿಕೊಳ್ಳಬಲ್ಲ ಸ್ಥಿತಿಯಾತ್ರೆ ಎಂಬರ್ಥವನ್ನು ಧ್ವನಿಸುವುದೇ ಈ ಕೃತಿಯ ಸಾರ್ಥಕತೆ ಅನ್ನಿಸುತ್ತದೆ.
ಇಲ್ಲಿರುವ ಪಾತ್ರಗಳು ಬೆರಳೆಣಿಕೆಯವು. 'ಬಿಕು' ಎಂದೇ ಉಲ್ಲೇಖವಾಗುವ, ಹೆಸರು ಕಾಣಿಸದ ಬೌದ್ಧ ಭಿಕ್ಷು; ಕೃತಿಯಲ್ಲಿ ಅನ್ನಕ್ಕಾಗಿ ದರೋಡೆ ಮಾಡಿ ಗತಿಸಿರುವ ಮಾಲಿಂಗ; ಆತನ ಪತ್ನಿ ಸುಮಲತೆ; ಮಗ ಆನಂದ; ಮತ್ತು ವಿಶಿಷ್ಟವಾಗಿ ಬರುವ ('ಸಂಸ್ಕಾರ' ಕಾದಂಬರಿಯ ಮಾಲೇರರ ಪುಟ್ಟನ ಪಾತ್ರಕ್ಕೆ ಹೋಲಿಸಲಾಗದಿದ್ದರೂ) ಕ್ಯಾಮಿಯೋ ಪಾತ್ರದಂತಿರುವ-ಅಜ್ಜ; ಇಷ್ಟೇ. ಇನ್ನುಳಿದದ್ದೆಲ್ಲ ಪ್ರಕೃತಿ, ಬದುಕಿನ ಆಗುಹೋಗುಗಳು ಅವುಗಳ ನಿರೀಕ್ಷೆ, ಅಪೇಕ್ಷೆ, ಪರಿಣಾಮ ಮತ್ತು ಫಲಿತಾಂಶಗಳು. ಬೌದ್ಧವಿಹಾರವೊಂದರಿಂದ ಗುರುವಿನ ಅಪ್ಪಣೆ ಮೇರೆಗೆ ಹೊರಟ ಬಿಕುಗಳ ಪೈಕಿ ಕಾಡಿನ ಮಧ್ಯೆ ಮಾಲಿಂಗನೆಂಬ ದರೋಡೆಕೋರನೊಬ್ಬನಿಂದ ಆಕ್ರಮಣಕ್ಕೀಡಾಗಿ ಉಳಿದವರೆಲ್ಲರೂ ಓಡಿದಾಗ ಉಳಿಯುವ ಮತ್ತು ತನ್ನ ದೈಹಿಕ ಚಾಕಚಕ್ಯತೆಯಿಂದ ಪಾರಾಗುವ ಮತ್ತು ಈ ಪಾರಾಗುವ ಯತ್ನದಲ್ಲಿ ಆ ದರೋಡೆಕೋರನ ಸಾವಿಗೆ ಕಾರಣನಾಗುವವನು ಈ ಕೃತಿಯ 'ಬಿಕು'. ತನ್ನ ಪಾಪಭೀತಿಯಿಂದ ಸತ್ತವನ ಮನೆಯವರನ್ನು ಹುಡುಕಿ ಅವರ ರೋಷಕ್ಕೆ, ದ್ವೇಷಕ್ಕೆ ಪಾತ್ರನಾದರೂ ಶವ ಸಂಸ್ಕಾರ ಮಾಡಿ ಮಾಲಿಂಗನ ಪತ್ನಿ ಸುಮಲತೆ ಮತ್ತು ಮಗ ಆನಂದನ ಉಳಿವಿಗಾಗಿ ಅವರೊಡನಿದ್ದೂ ಅವರಂತಾಗದೆ ಬದುಕಲೆತ್ನಿಸುವ ಮತ್ತು ಈ ನಡೆದಾಟದಲ್ಲಿ ಅಪರೂಪದ ಆಧ್ಯಾತ್ಮಿಕ ಬೆಳವಣಿಗೆಯನ್ನು ಕಾಣುವ ಮತ್ತು ಕೊನೆಗೆ ಆನಂದನನ್ನು 'ವಿಹಾರ'ಕ್ಕೆ ಕಳಿಸಿ ಬಿಕು ಮರಣಹೊಂದುವ ಹಾಗೂ ಆನಂತರ ಸುಮಲತೆ ಮತ್ತು ಬಳಿಕ ಅಜ್ಜ ಅದೇ 'ವಿಹಾರ'ಕ್ಕೆ ತೆರಳುವ ಕಥಾಹಂದರವನ್ನು ಚಿತ್ರಿಸಿದ ರೀತಿ ಬಹು ಆಕರ್ಷಕವಾಗಿದೆ.
ಇದು ಅನುಭಾವದ ಲೋಕವೆಂದು ಮೇಲ್ನೋಟಕ್ಕೆ ಅನ್ನಿಸಿದರೂ ಲೌಕಿಕದ ಪ್ರಪಂಚವೇ ಹೌದು; ಅದನ್ನು ಸಂಸಾರಸ್ಥರೂ ಸನ್ಯಾಸಿಗಳೂ ನೋಡುವ ರೀತಿಯಲ್ಲಿ ಮಾತ್ರ ಭಿನ್ನತೆಯಿದೆ ಎಂದು ಕಾಣುವ ರೀತಿಯಲ್ಲಿ ಕೃತಿ ಬೆಳೆದಿದೆ; ವಿಕಾಸಗೊಂಡಿದೆ. ಬೌದ್ಧ ಪರಂಪರೆಯ ಅರಿವಿರುವವರಿಗೆ ಇದು ಐತಿಹಾಸಿಕ ಅಥವಾ ಕ್ರಿಸ್ತಪೂರ್ವದ ಮತ್ತು ಇನ್ನಷ್ಟು ಸ್ಪಷ್ಟವಾಗಿ ಗುರುತಿಸಲು ಯತ್ನಿಸುವುದಾದರೆ ಬೌದ್ಧಧರ್ಮವು ಪ್ರಚಲಿತವಿದ್ದ ಕಾಲವೆಂದನ್ನಿಸುತ್ತದೆ. ಆದರೂ ಸುಮಾರು 125 ಪುಟಗಳವರೆಗೆ ಇಲ್ಲಿ ಸ್ಥಳನಾಮಗಳು ಇಲ್ಲದಿರುವುದರಿಂದ ಈ ಕೃತಿ ದೇಶ-ಕಾಲಗಳನ್ನು ದಾಟಿ ಅನೂಹ್ಯವಾದ, ಅಮೂರ್ತವಾದ ಸ್ಥಿತಿಯಲ್ಲಿ ವ್ಯವಹರಿಸುತ್ತದೆ. ಆನಂತರದ ವಿವರಣೆಗಳಲ್ಲಿ ಹಿಮಾಲಯ, ಗಂಗಾನದಿ, ನೇಪಾಳ, ಉತ್ತರಭಾರತ ಹೀಗೆ ಭೌಗೋಳಿಕ ಸ್ಪಷ್ಟತೆಯನ್ನು ಪಡೆಯುತ್ತದೆ. ಹೀಗಾದರೂ ಕಾಲಯಾನದಲ್ಲಿ ಒಂದೆಡೆ ಕೃತಿಯನ್ನು ಸ್ಥಾಪಿಸುವ ಅನಗತ್ಯ ಗೋಜಿಗೆ ಲೇಖಕರು ಪ್ರಯತ್ನಿಸಿಲ್ಲ. ಇದು ಎಲ್ಲೂ ಹೇಗೂ ಯಾವಾಗಲೂ ಯಾರೊಂದಿಗೂ ನಡೆಯಬಹುದು. ಮುಖ್ಯ ನೋಡುವ, ಸಂವೇದಿಸುವ, ಅನುಭವಿಸುವ ಗುಣಗಳಿರಬೇಕು.
ಕಾದಂಬರಿಯಲ್ಲಿ ಮಾಲಿಂಗನ ಸಾವಿನ ನಂತರ ಸುಮಲತೆ ತನ್ನ ಎಳೆಯ ಮಗ ಆನಂದನೊಂದಿಗೆ ಕಳೆಯುವ ಅಸಹನೀಯ ಬದುಕಿನಲ್ಲಿ ಬಿಕುವಿನ ಪ್ರವೇಶವಾದಾಗ, ಬಿಕು ಮತ್ತು ಸುಮಲತೆಯ ಬದುಕಿನ ದ್ವಂದ್ವಗಳನ್ನು ಗುರುತಿಸಿದಾಗ, ಹೇಳದೇ ಹೋದರೂ ಸೂಚ್ಯವಾಗಿ ಕಾಣುವ ಬೆಂಕಿ ಮತ್ತು ಬೆಣ್ಣೆಯಂತಹ ಸಂಬಂಧಗಳನ್ನು ಚಿತ್ರಿಸುವುದು ಕಷ್ಟವೇನಲ್ಲ. ಓದುಗರು ಮುಂದೇನು ನಡೆಯುತ್ತದೆಂಬ ಕುತೂಹಲಕ್ಕೂ ಈ ಎರಡು ಪಾತ್ರಗಳು ಸ್ವಯಂಚಾಲಿತವಲ್ಲದೆ ಕಾರಣವಾಗುತ್ತವೆ. ನಮ್ಮಲ್ಲಿ ಈ ಮಾದರಿಯ ಹಲವು ಕಾದಂಬರಿಗಳೂ ಚಲನಚಿತ್ರಗಳೂ ಬಂದಿವೆ. ಆದರೆ ಕಾದಂಬರಿಯುದ್ದಕ್ಕೂ ಪೂರ್ವಸೂಚನೆಗಳಿಲ್ಲದೆ ನಡೆಯುವ ಲೌಕಿಕ ಘಟನೆಗಳು, ಭಾವನೆಗಳು, ಲೇಖಕರು ಓದುಗರಿಗೊಡ್ಡಿದ ಸವಾಲಿನಂತಿವೆ. ವಾಸ್ತವಗಳು ಯಾವುದೇ ತಿರುವುಗಳಿಲ್ಲದೆ, ನಾಟಕೀಯತೆಯಿಲ್ಲದೆ, ಓದುಗನ ಕಲ್ಪನೆಗಿಂತ, ಊಹೆಗಿಂತ ಭಿನ್ನವಾಗಿ ಬೆಳೆಯುವುದು ಲೇಖಕರ ಸಾಹಸವೇ ಸರಿ. ಆಧ್ಯಾತ್ಮಿಕ ಸಾಧ್ಯತೆಯು ಸಾಮಾಜಿಕ ವಾಸ್ತವಿಕತೆಯಾಗಿ ಬರುವುದು ಅಪರೂಪ. ಆದರೆ ಇದನ್ನು ಸಹಜವಾಗಿಯೇ ರೂಪಿಸಿದ ರೀತಿಯಲ್ಲಿ ಮಾಮೂಲು ಪೋಷಕ ಪಾತ್ರವಾಗಬಹುದಿದ್ದ ಆನಂದನು ಬೆಳೆಯುತ್ತ ಬಿಕುವಿನ ಸ್ಥಾನವನ್ನು ಮಾತ್ರವಲ್ಲ, ಬಿಕುವಿನ ಗುರುವಿನ ಸ್ಥಾನವನ್ನೂ ತುಂಬಿಕೊಡುವುದು ಇಲ್ಲಿ ಬಹು ಪ್ರಮುಖ ಅಂಶವಾಗುತ್ತದೆ.
'ಆನಂದ' ಎಂಬ ಪದವೇ ಬದುಕಿನ ಬೆಳಕು. (ಬುದ್ಧನ ಜೊತೆಗೆ ಆನಂದ ಎಂಬ ಶಿಷ್ಯನಿದ್ದನೆಂದು ಪ್ರತೀತಿ.) ಇದು ಬುದ್ಧಪ್ರಜ್ಞೆಯ ಗಮ್ಯತೆಯನ್ನು ಸೂಚಿಸುತ್ತದೆ. ಅಲ್ಲಲ್ಲಿ ನಡೆಯುವ ಅನುಭಾವಿಕ ಚರ್ಚೆಗಳು, ನಿರೂಪಣೆಗಳು ಒಣ ಅಥವಾ ಅಪ್ರಸ್ತುತ ಎಂದು ಅನ್ನಿಸದೆ ಚಿಂತನೆಗೆ ಗ್ರಾಸವನ್ನೊದಗಿಸುತ್ತವೆ. ಕಾದಂಬರಿಯಲ್ಲಿ ಒಂದೆಡೆ ''ಅನುಭವಕ್ಕೆ ಬಂದ ಕೂಡಲೇ ಯಾವುದೇ ಮಾತುಗಳು ಜೀವಂತವಾಗಿ ಅರ್ಥಪಡೆಯುತ್ತವೆ.'' ಎಂಬ ಮಾತಿದೆ. ಇದು ಕಥೆಯ ಬೆಳವಣಿಗೆಯಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ. ಇದು ಮಾತ್ರವಲ್ಲ, ಇಂತಹ ಅನೇಕ ಅನುಭಾವಿಕ ಚಿಂತನೆಗಳು (ಪಾರಲೌಕಿಕ, ಆಧ್ಯಾತ್ಮಿಕ, ಅನುಭಾವಿಕ ಇವು ಬೇರೆ ಬೇರೆ ಅನುಭವಗಳು.) ಕಥೆಯ ಹಂದರಕ್ಕೆ ತೀರ ಸಮೀಪವಾಗಿ ಹರಿಯುತ್ತಲೇ ದೂರದ ಬೌದ್ಧಬೆಳಕೊಂದನ್ನು ತೋರುತ್ತವೆ. ''ನನಗೆ ಯಾರಾದರೂ 'ಇದು ಸತ್ಯದ ದಾರಿ' ಎಂದು ಹೇಳಲು ಹೊರಟಾಗಲೇ ಅದು ಅಲ್ಲ, ಎಂಬ ಅನುಮಾನವು ಬರುತ್ತದೆ!'' ಎಂಬ ಮಾತುಗಳು ಬುದ್ಧನ ಮತ್ತು ಆನಂತರದ ಪರಮಹಂಸರ ಸತ್ಯ, ಸತ್ವದ ಮಾತುಗಳೂ ಹೌದು. ''ಚರಿತ್ರೆ ಬರೆಯಬಾರದು. ಅದು ಆಗುತ್ತಿರುತ್ತದೆ; ನಾವು 'ಚರಿತ್ರೆ' ಅಂದುಕೊಂಡಿರುವುದು ಬರೆದದ್ದ್ದು, ಆಡಿದ್ದು, ಮಾಡಿದ್ದು ಮತ್ತು ತೋರಿದ್ದು ಮಾತ್ರ. ಆದರೆ ಅದು ಅದಲ್ಲ. ಬರೆಯಲಾಗದ, ಮಾಡಿ ತೋರಲಾಗದ ಏನೋ ಒಂದು ಆಗುತ್ತಿರುತ್ತದೆ. ಅದು ಸಂಕೀರ್ಣ. ಅದು ಅನುಭವಕ್ಕೆ ಬರುವಂತೆ ಬದುಕಿನೊಳಗೆ ಕೈಹಿಡಿದು ಕರೆದೊಯ್ಯುವವನು ಗುರು ಅಥವಾ ಅವಧೂತ. ನಮ್ಮ ಜನಪದ ಗುರು ಚರಿತ್ರೆಯನ್ನು ಕಟ್ಟಲಿಲ್ಲ. ಅವನು ಚರಿತ್ರೆಯ ಜೊತೆಗೆ ನಡೆದ; ಮಾತನಾಡದೆ, ಬರೆಯದೆ, ಸುಮ್ಮನೆ ನಡೆದ. ಎಲ್ಲವನ್ನೂ ಸುಮ್ಮನೆ ಗಮನಿಸುತ್ತಿದ್ದ. ('ಗಮನಿಸಿದ' ಎಂದಿರಬೇಕಾದ ಪದವು ಗಮನಿಸುತ್ತಿದ್ದ ಎಂದು ಮುದ್ರಣವಾದ ಅನುಭವವಾಯಿತು!) ಲೇಖಕರು ಬೌದ್ಧಪ್ರಜ್ಞೆಯನ್ನು ಆಪ್ತವಾಗಿ ಗಮನಿಸುವುದರ ಜೊತೆಗೆ ಅದರ ಸಂವೇದನೆಯನ್ನು ವಿಶಿಷ್ಟವಾಗಿ ಒಡಮೂಡಿಸಿದ್ದಾರೆ. ಇಲ್ಲಿನ ಭಿಕ್ಷಾಪಾತ್ರೆ ಮಣ್ಣಿನದ್ದಲ್ಲ. ಮರದ್ದು. ಮಾಲಿಂಗನೊಡನೆ ಬಿಕು ಸೆಣಸುವಾಗ ಅದು ಭಗ್ನಗೊಳ್ಳುತ್ತದೆ; ಮುಕ್ಕಾಗುತ್ತದೆ. ಅದನ್ನು ಬಿಕು ಅಂಟಿಸಲೆತ್ನಿಸುತ್ತಾನೆ. ಈ ಅಂಟು ನಿಲ್ಲದಾಗ ಆನಂದ ಅದನ್ನು ಕಂಡು ನಗುತ್ತಾನೆ. ಬಿಕುವಿನ ನಿಲುವು ಇನ್ನಷ್ಟು ಗಟ್ಟಿಯಾಗುತ್ತದೆ. ಕೊನೆಗೂ ಅದು ಸ್ಥಿರವಾಗುತ್ತದೆ. ಇದು ಬಿಕು ಮತ್ತು ಆನಂದನ ನಡುವಣ ಸಂಬಂಧದ ತಿರುಳೂ ಹೌದು.
ಆನಂದನು 'ವಿಹಾರ'ಕ್ಕೆ ತೆರಳಿದ ಆನಂತರ ಒಂಟಿತನವನ್ನು ಖಾಲಿತನದಂತೆ ಹಿಂಸೆಯಂತೆ ಅನುಭವಿಸಿದ ಬಿಕು 'ಅಂಟಿಕೊಂಡರೆ ಹಾಗೆಯೇ, ಬಾಂಧವ್ಯ ಎನ್ನುವುದು' ಎಂದುಕೊಳ್ಳುತ್ತಾನೆ. ಸುಮಲತೆಯ ಕಣ್ಣೀರಿನ ಹನಿಗಳು ಭಿಕ್ಷಾಪಾತ್ರೆಯೊಳಗೆ ಬಿದ್ದಾಗ ಬಿಕು ಹೇಳುವ ''ನಾನು ಖಾಲಿ ಭಿಕ್ಷಾಪಾತ್ರೆಯನ್ನು ನಿನಗೆ ಕೊಟ್ಟೆ, ಅದರೊಳಗೆ ನಿನ್ನ ಕಣ್ಣೀರನ್ನು ತುಂಬಿ ಭಿಕ್ಷಾಪಾತ್ರೆಯನ್ನು ಆನಂದನಿಗೆ ಕೊಡುತ್ತೀಯ? ಅದರ ತುಂಬ ನನ್ನ ಪ್ರೀತಿ ಮತ್ತು ನಿನ್ನ ವಾತ್ಸಲ್ಯ ತುಂಬಿಕೊಂಡು ಹೋಗಿ ಅವನಿಗೆ ಕೊಡು. ಅದಕ್ಕಾಗಿಯೇ ಅದು ಎಂದೂ ಖಾಲಿಯಾಗಿರುವ ಪಾತ್ರೆಯಾಗಿದೆ!'' ಎಂಬ ಮಾತುಗಳ ಮತ್ತು ಅದು ಪ್ರಾಪ್ತವಾಗುವ ಹಾಗೂ ಅದರೊಳಗಿನ ಸಂದರ್ಭ ಇಡೀ ಕಾದಂಬರಿಯ ಮನುಷ್ಯಸಂಬಂಧಗಳ ವಿವರಣೆಯಾಗಿದೆ. ಪ್ರಾಯಃ ಇತ್ತೀಚೆಗೆ ಪ್ರಕಟವಾದ ಕಾದಂಬರಿಗಳಲ್ಲಿ ಈ ಪ್ರಕಾರದ ಅನುಭಾವಿಕ ಹಾದಿಯ ಸಾಂಸಾರಿಕ ಗತಿವಿಧಾನ ನಡೆದುದಿಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ಎಚ್.ಎಸ್.ಶಿವಪ್ರಕಾಶರ ಕಾವ್ಯಧಾಟಿ ಇಲ್ಲಿ ನೆನಪಾಗಬಹುದು. ನವ್ಯದ ಆರಂಭದಲ್ಲಿ ಈ ಬಗೆಯ ಅನುಭವವನ್ನು ಅಭಿವ್ಯಕ್ತಪಡಿಸಿದ ಪದ್ಯಗಳನೇಕವಿದ್ದವು. ಇಲ್ಲಿರುವ ಪ್ರಜ್ಞೆ ಹೇಗಿದೆಯೆಂದರೆ ''ನಿಮ್ಮ ಹುಡುಕಾಟ, ಮಾತು, ಆಚರಣೆಗಳಲ್ಲಿ ಅಡಗಿರುವ ಸದ್ದು ನಿಂತ ಕ್ಷಣ, ನಿಮಗೆ ಅದು ಬೇಕು ಅನಿಸಿದ ಕ್ಷಣ, ನೀವು ಅದರ ಸಮೀಪಕ್ಕೋ, ಅದೇ ನಿಮ್ಮ ಸಮೀಪಕ್ಕೋ ಬಂದು ಎರಡೂ ಪ್ರಜ್ಞೆಗಳು ಒಂದೇ ಆಗಬಹುದು..'' ಕೃತಿ ಇದನ್ನೇ ಹುಡುಕಿ ಹಿಡಿದಿದೆ. ಲೇಖಕರು ಹಿಡಿದದ್ದು ಖಾಲಿ ಪಾತ್ರೆಯಲ್ಲ; ತುಂಬಿಕೊಳ್ಳಬಲ್ಲ ಮತ್ತು ತುಂಬಿಕೊಡುವ ಪಾತ್ರೆಯೆಂದು ಹೇಳಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.