-

ಕೇಸರಿಮಯ ಮಂಟಪ

-

ಬರಲಿರುವ ದಿನಗಳು ವರ್ಣರಂಜಿತವಾಗುತ್ತವೆಯೆಂದು ತಿಳಿದರೆ ಮೂರ್ಖತನ. ಅದು ಕೇಸರಿಮಯವಾಗಿರುತ್ತದೆ. ಎಲ್ಲ ಬಣ್ಣಗಳಿಗೂ ಒಂದಲ್ಲ ಒಂದು ಕಾಲದಲ್ಲಿ ಪ್ರಾಶಸ್ತ್ಯವಿದೆ. ಇವುಗಳ ನಡುವೆ ಅಮಾಯಕರು ಬಲಿಯಾಗುತ್ತಾರೆ; ದೇವರ, ಧರ್ಮದ ಹೆಸರಿನಲ್ಲಿ ಕೊಲೆ-ಸುಲಿಗೆ-ಮೋಸ ನಡೆಯುವಾಗ ಎಲ್ಲವೂ ಧರ್ಮಸಮ್ಮತವೇ. ಗಾದೆ ತಿರುಗಾಮುರುಗಾ ಆಗುತ್ತಿದೆ. ವರ್ತಮಾನದ ಪ್ರತಿಯೊಬ್ಬ ಕಳ್ಳನಿಗೂ ಸಂತನಿಗೂ ಚರಿತ್ರೆಯಿದೆ; ಭವಿಷ್ಯವೂ ಇದೆ. ಸಂತಕೇಸರಿಗಳು ರಾಜಕೀಯ ಕೇಸರಿಗಳಾಗುವುದು ಭಾರತವೆಂಬ ಅಮೃತಮತಿಯ ಹಣೆಬರಹ; ಮಾವುತನ ಸುಯೋಗ.

ಎಡಪಕ್ಷಗಳ ಕೆಂಪು ಬಾವುಟವನ್ನು ರಕ್ತಕ್ಕೆ ಹೋಲಿಸಿ ಬಲಪಂಥೀಯರು ಟೀಕಿಸುವುದುಂಟು. ಆದರೆ ಈಗ ನಡೆಯುತ್ತಿರುವ ಕೇಸರಿಕ್ರಾಂತಿ ಎಷ್ಟು ಜೀವಗಳನ್ನು ಬಲಿತೆಗೆದುಕೊಳ್ಳುವುದೋ ಊಹಿಸಲೂ ಅಸಾಧ್ಯ. ಕಳೆದ ಎಂಟು ವರ್ಷಗಳಲ್ಲಿ ಕೇಸರೀಕರಣಕ್ಕಾಗಿ ಮೋದಿ ಸರಕಾರವೂ, ಸಂಘಪರಿವಾರವೂ ನಡೆಸಿದ ಅಕ್ರಮಗಳು ಅಕ್ಷಮ್ಯ. ಪ್ರಧಾನಿಯವರು ಯಾವುದೇ ರಾಜ್ಯಕ್ಕೆ ಹೆಚ್ಚು ಹೆಚ್ಚು ಪ್ರವಾಸ ಹೋಗುತ್ತಾರೆಂದರೆ, ಭೇಟಿ ನೀಡುತ್ತಾರೆಂದರೆ, ಅಲ್ಲಿ ಸದ್ಯ ಚುನಾವಣೆಯಿದೆಯೆಂದೇ ಅರ್ಥ. ಈಗ ಅವರ ಬೆಂಬಲಿಗರು ತಮ್ಮ ವೈಯಕ್ತಿಕ ಹಣವನ್ನು ಹೊರತುಪಡಿಸಿ ಇನ್ನೆಲ್ಲವನ್ನೂ ವೆಚ್ಚಮಾಡಿ ಈ ದೇಶವನ್ನು ಕೇಸರಿಗೊಳಿಸಲು ಹೊರಟಿದ್ದಾರೆ. ಕರ್ನಾಟಕ ಅದರ ಅಸತ್ಯದ ಹೊಸ ಪ್ರಯೋಗಶಾಲೆಯಾಗುತ್ತಿರುವುದು ಕನ್ನಡಿಗರ ದುರ್ದೈವ. ಮಾತಿಗೊಂದು ಅರ್ಥವಿತ್ತು, ತರ್ಕವಿತ್ತು, ಎಲ್ಲಕ್ಕಿಂತ ಹೆಚ್ಚಾಗಿ ಲಜ್ಜೆಯಿತ್ತು. ಜಾತ್ಯತೀತ ಭಾರತದಲ್ಲಿ ರಾಜಕೀಯಕ್ಕೂ ಒಂದು ಕನಿಷ್ಠ ಸೌಜನ್ಯವಿತ್ತು. ಬರಬರುತ್ತ ಕಾಂಗ್ರೆಸ್ ಅಧಿಕಾರಕ್ಕೆ ಅಂಟಿಕೊಳ್ಳಲು ಭ್ರಷ್ಟಾಚಾರದ ಫೆವಿಕಾಲ್ ಬಳಸಲಾರಂಭಿಸಿದಾಗ ಜನ ಮುನಿದೆದ್ದರು. ಈಗ ಕಾಂಗ್ರೆಸ್ ತನ್ನ ವೈಭವದ ದಿನಗಳ ಪೇಲವ ನೆರಳಾಗಿ ಉಳಿದಿದೆ.

ಆದರೆ ಭಾರತೀಯ ಜನತಾ ಪಾರ್ಟಿಯು ನಡೆಸುತ್ತಿರುವ ರಾಜಕೀಯವನ್ನು ಗಮನಿಸಿದರೆ ಕಾಂಗ್ರೆಸ್ ಸಂತನಂತೆ ಗೋಚರಿಸಲಾರಂಭಿಸಿದೆ. ಹೈಕಮಾಂಡ್ ಎಂಬುದು ಕಾಂಗ್ರೆಸ್ ಪಕ್ಷವು ದೇಶಕ್ಕೆ ಕೊಟ್ಟ ಕೊಡುಗೆಯೆಂದು ಹೇಳುವ ಕಾಲವಿತ್ತು. ಆದರೆ ಈಗ ಭಾಜಪದ ಹೈಕಮಾಂಡ್ ಎಷ್ಟು ಶಕ್ತವಾಗಿದೆಯೆಂದರೆ ಪಕ್ಷ ಬಹುಮತದಲ್ಲಿದ್ದಾಗಲೂ ರಾಜ್ಯ ಸರಕಾರಗಳ ಮುಖ್ಯಮಂತ್ರಿಗಳು ಬದಲಾಗುತ್ತಿದ್ದಾರೆ. ದಿಲ್ಲಿಗೆ ಹೋಗದೆ, ಮೋದಿಶಾದ್ವಯರ ಅಧಿಕೃತ ಮೊಹರು ಬೀಳದೆ ಯಾರೂ ಉಳಿಯಲಾರರು ಎಂಬ ಸ್ಥಿತಿ ಬಂದಿದೆ. ಕೋಮು ಸಂಘರ್ಷ ನಡೆಸಲು ಸಿಕ್ಕುವ ಯಾವುದೇ ಕಿಂಚಿತ್ ಅವಕಾಶವನ್ನೂ ಭಾಜಪ ಪುರಸ್ಕರಿಸಿ ನಡೆಯುತ್ತಿದೆ. ಅಂತರ್‌ರಾಷ್ಟ್ರೀಯ ಭಯೋತ್ಪಾದನೆಯನ್ನು ಮೊದಲಿನಿಂದಲೂ ಭಾರತವು ವಿರೋಧಿಸಿದೆ. ಈಗ ಅದು ಜಾಗತಿಕ ವೇದಿಕೆಗಳಲ್ಲಿ ಶಾಂತಿ-ಪ್ರೇಮ-ಭ್ರಾತೃತ್ವ-ಸಮಾನತೆಯ ಮಂತ್ರ ಜಪಿಸುತ್ತ, ದೇಶದೊಳಗೆ ದ್ವೇಷದ ಹುಲುಸಾದ ಬೆಳೆಗೆ ಅನುವು ಮಾಡಿಕೊಡುತ್ತಿದೆ. ವಿಶೇಷವೆಂದರೆ, ಹಿಂದೆಲ್ಲ ಒಂದು ಹಂತದ ಅಧಿಕಾರಕ್ಕೆ ಏರಿದರೆ ನಾಯಕನೊಬ್ಬ ತನ್ನ ಹೆಸರು ಭವಿಷ್ಯದಲ್ಲಿ ಉಳಿಯುವತ್ತ ಗಮನ ಹರಿಸಿ ತನ್ನ ಘನಸ್ತಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ಅನೇಕ ಬಾರಿ ಈ ಒಳ್ಳೆಯತನವು ದೇಶಕ್ಕೆ ತೊಂದರೆಯನ್ನು ತಂದುಕೊಟ್ಟು ಹೊರಟುಹೋದರು. ಇಂದಿರಾ-ರಾಜೀವ್ ಯಾವುದೇ ದೇಶಭಕ್ತರಿಗೆ ಕಡಿಮೆಯಿಲ್ಲದಂತೆ ದೇಶದ ಗೌರವವನ್ನುಳಿಸಿದರು; ಪರಿಣಾಮವಾಗಿ ಹತ್ಯೆಗೀಡಾದರು. ಸ್ವತಂತ್ರ ಭಾರತದಲ್ಲಿ ದೇಶನಾಯಕರ ಒಂದೇ ಕುಟುಂಬದ ಇಷ್ಟೊಂದು ಸದಸ್ಯರು ಕೊಲೆಯಾದ ನಿದರ್ಶನವು ಯಾವ ಪಕ್ಷದಲ್ಲೂ ಇಲ್ಲ. ಈ ದೃಷ್ಟಿಯಿಂದ ಕಾಂಗ್ರೆಸ್ ಇಂದು ಲಿಯರ್ ರಾಜನಂತೆ ತಪ್ಪಿಗಿಂತ ಹೆಚ್ಚು ಪ್ರಮಾಣದ ದೂಷಣೆಗೀಡಾಗಿದೆ. ಭಾರತೀಯ ಜನತಾ ಪಾರ್ಟಿಯ ಗೆಲುವಿನ ಸೂಚ್ಯಂಕವು ಮೊದಮೊದಲು ಸಹನೀಯ ಪ್ರಮಾಣದಲ್ಲಿದ್ದುದರಿಂದ ಅವರೂ ಸ್ವಲ್ಪ ಹೊಣೆಯರಿತು ನಡೆಯುತ್ತಿದ್ದರು. ಮತಾಂಧತೆಯ ವೇಗ ಹಗುರಿತ್ತು.

ಆದರೆ ಯಾವಾಗ ಗುಜರಾತಿನ ಮಾದರಿಯನ್ನು ದೇಶದೆಲ್ಲೆಡೆ ಹಬ್ಬಿಸುವ ಸಲುವಾಗಿ ಮೋದಿ ನಾಯಕತ್ವವನ್ನು ಹೊತ್ತರೋ ಆಗ ಭಾರತವು ಹೊತ್ತ ಮೌಲ್ಯಗಳು ಆಳಪಾತಾಳಕ್ಕೆ ಇಳಿದವು. ಸಂಘಪರಿವಾರದ ಒಂದಂಗವಾಗಿದ್ದ ಭಾಜಪವು ನಹುಷನ ಸ್ವರ್ಗಾಧಿಪತ್ಯದ ಮೆರವಣಿಗೆಯಾಗಿ ಈಗ ಸಂಘಪರಿವಾರವು ತನ್ನ ಸ್ವಘೋಷಿತ ಚಿಂತನ ಗಂಗೆಯ ಹರಿವನ್ನು ತ್ಯಜಿಸಿ ಭಾಜಪದ ಅನುಕೂಲಕ್ಕಾಗಿ ಮತೀಯ ಗಲಭೆಗಳನ್ನು ಆರಂಭಿಸುವ ಮತ್ತು ಹಬ್ಬಿಸುವ ಗೂಂಡಾ ಪಡೆಯಾಗಿ ಪರಿವರ್ತನೆಯಾದದ್ದು ಒಂದು ಅಚ್ಚರಿಯ ಬೆಳವಣಿಗೆ. ಇಂದು ಸಂಘಪರಿವಾರವು ಭಾಜಪವನ್ನು ಅದರಲ್ಲೂ ಮೋದಿಶಾರನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿಲ್ಲದಿರುವುದು ನಿಚ್ಚಳವಾಗಿದೆ. ಆರೆಸ್ಸೆಸ್‌ನ ಪರಮೋಚ್ಚ ನಾಯಕರೆಂದೆನಿಸಿದ ಮೋಹನ್‌ಭಾಗವತರು ಆಗಾಗ ಹೇಳಿಕೆಗಳನ್ನು ಕೊಡುವ ಆಲಂಕಾರಿಕ ನಿವೃತ್ತರಂತೆ ಕಾಣಿಸುತ್ತಿದ್ದಾರೆ. ಪುಟ್ಟ ರಾಜಕುಮಾರ ಸಂದರ್ಶಿಸಿದ ಗ್ರಹವೊಂದರಲ್ಲಿ ಒಬ್ಬ ರಾಜ ತಾನೇ ಆದೇಶವನ್ನು ಮಾಡಬೇಕು ಮತ್ತು ಅದರಂತೆಯೇ ಪ್ರಜೆಗಳು ನಡೆಯಬೇಕು ಎನ್ನುತ್ತಾನೆ. ತನ್ನ ಆದೇಶವನ್ನು ಪ್ರಜೆಗಳು ಪಾಲಿಸದಾಗ ಅವರು ನಿಶ್ಚಯಮಾಡಿದ್ದನ್ನು, ಸ್ವೀಕರಿಸುವುದನ್ನು ಆದೇಶಿಸುತ್ತಾನೆ. ಅಂತೂ ಆದೇಶಕ್ಕೂ ಪಾಲನೆಗೂ ತಾಳೆ ಬಿತ್ತು!

ಭಾಗವತರ ತಾಳಕ್ಕೆ ಯಾವ ಭಾಜಪನೂ ಕುಣಿಯುವುದಿಲ್ಲ. ಆದ್ದರಿಂದ ಭಾಗವತರ ಹೊಸ ವರಸೆಯು ಹೇಗಿದೆಯೆಂದರೆ ಅವರು ಭಾಜಪದ ಕುಣಿತವನ್ನು ಗಮನಿಸಿ ಅದಕ್ಕೆ ಸರಿಯಾದ ತಾಳವನ್ನು ಹುಡುಕಿ ಹಾಕಲು ಆರಂಭಿಸಿದ್ದಾರೆ. ಆದ್ದರಿಂದ ಇಂದು ಆರೆಸ್ಸೆಸ್ ಭಾರೀ ಬೆಳವಣಿಗೆಯನ್ನು ಸಾಧಿಸಿದೆಯೆಂಬಂತೆ ಕಂಡರೂ ಒಳಗೊಳಗೇ ಅದು ವಿಷಾದಯೋಗದಲ್ಲಿದೆ. ಏನೂ ಮಾಡುವಂತಿಲ್ಲ. ಮೇಲೆ ನೋಡಿ ಉಗುಳಿದರೆ ಯಾರಿಗೆ ಹಾನಿ!
ಮೋದಿಯವರಂತೂ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗಲೇ ಅಲ್ಲಿ ವಿಶ್ವಹಿಂದೂ ಪರಿಷತ್ತಿನ ಹೆಡೆಮುರಿಕಟ್ಟಿದವರು. ಆವರ ಜನಪ್ರಿಯತೆಯ ಬೆಳಕಿನಲ್ಲಿ ಜನ ಸೂರ್ಯಕಾಂತಿ ಹೂಗಳ ಹಾಗೆ ಅವರ ಜೊತೆ ಚಲಿಸತೊಡಗಿದಾಗ, ಉಳಿದ ಸಂಘೋಪಾಂಗಗಳು ಬಾಡಿಹೋದವು. ಉಗುಳುವಂತೆಯೂ ಇಲ್ಲ, ನುಂಗುವಂತೆಯೂ ಇಲ್ಲ!

ಈಗ ಚುನಾವಣಾಪೂರ್ವ ತಯಾರಿಯೆಂದರೆ ಅಲ್ಲಿ ಮತೀಯತೆಯನ್ನು ಪ್ರಚೋದಿಸುವುದು; ಪ್ರತಿಪಕ್ಷದ ನಾಯಕರನ್ನು, ಅನುಯಾಯಿಗಳನ್ನು, ಅನುರಾಗಿಗಳನ್ನು ಹೆದರಿಸುವುದು; ಮೇಲ್ನೋಟಕ್ಕೇ ತಪ್ಪೆಂದು ಕಾಣುವ ಅವ್ಯವಸ್ಥೆಯನ್ನು ಕಾನೂನುಬದ್ಧಗೊಳಿಸಲು, ನ್ಯಾಯಬದ್ಧಗೊಳಿಸಲು ಯತ್ನಿಸುವುದು; ಅದು ವಿಫಲವಾದಾಗಲೂ ಜನಬದ್ಧಗೊಳಿಸಿಯೇ ತೀರುವುದು. ಪ್ರಾಯಃ ಸ್ವತಂತ್ರ ಭಾರತದ ಆರಂಭದಲ್ಲೊಮ್ಮೆ, ಅದಾದ ಬಳಿಕ 1970ರ ದಶಕದಲ್ಲಿ ಕೆಲವೇ ಬಾರಿ (1971ರ ಬಾಂಗ್ಲಾ ವಿಜಯದ ನಂತರ, 1977ರಲ್ಲಿ ತುರ್ತುಪರಿಸ್ಥಿತಿಯ ನಂತರ ಮತ್ತು ಇಂದಿರಾ ಹತ್ಯೆಯ ನಂತರ ನಡೆದ ಚುನಾವಣೆಗಳಲ್ಲಿ) ಜನರು ಇಂತಹ ಸಮ್ಮೋಹಕ್ಕೆ ಗುರಿಯಾಗಿದ್ದರು.

ಈಗ 2014ರ ಬಳಿಕ ನಡೆದ ಎರಡೂ ಚುನಾವಣೆಗಳಲ್ಲಿ ಆ ಪ್ರಮಾಣದ ಸಮ್ಮೋಹನ ನಡೆಯದಿದ್ದರೂ ಪ್ರತಿಪಕ್ಷಗಳ ಹೊಂದಾಣಿಕೆಯ ಅಭಾವದಿಂದಾಗಿ ಮೋದಿಯ ವಿಜಯವೂ ದಿಗ್ವಿಜಯವೂ ಅದರ ವಾಸ್ತವಗಾತ್ರಕ್ಕಿಂತ ಹೆಚ್ಚಾಗಿ ಕಾಣಿಸುತ್ತಿದೆ. ಭ್ರಷ್ಟತೆಯಲ್ಲದೆಯೂ ಒಂದು ವಿಚಾರದಲ್ಲಿ ಭಾಜಪವು ಇತರ ಎಲ್ಲ ಪಕ್ಷಗಳಿಗಿಂತ ಮುಂದಿದೆ: ಅದು ತನ್ನ ಶಕ್ತಿಯನ್ನು ಇನ್ನಷ್ಟು ಗಿಲೀಟು ಹಚ್ಚಿ ಮೆರೆಸುತ್ತಿದೆ. ಇತರ ಪಕ್ಷಗಳ ಗೆಲುವನ್ನೂ ಸೋಲಿನಂತೆ ವಿವರಿಸಲು ತೊಡಗಿವೆ. ಭಾಜಪದ ಪ್ರಚಾರ ವೈಖರಿಯಲ್ಲಿ ಇತರ ಪಕ್ಷಗಳ ಶಕ್ತಿಯು ಮಸುಕಾದಂತಿದೆ. ಮೋದಿಯವರ ಮಾತಂತೂ ತನ್ನ ಸಾಧನೆಯ ವೈಫಲ್ಯವನ್ನು ಮುಚ್ಚಿಹಾಕುವಂತಿದೆ. ದಕ್ಷಿಣ ಭಾರತಕ್ಕೆ ಪೂರ್ಣವಾಗಿ ಲಗ್ಗೆಯಿಡಲು ಭಾಜಪಕ್ಕೆ ಮೋದಿಯವರ ನಾಯಕತ್ವದೊಂದಿಗೂ ಸಾಧ್ಯವಾಗಿಲ್ಲ. ದಕ್ಷಿಣದ ರಾಜ್ಯಗಳು ತಮ್ಮ ದ್ರಾವಿಡ ಪರಂಪರೆಯನ್ನು ಎತ್ತಿಹಿಡಿದಂತೆ ಉತ್ತರದ ಅತಾತ್ವಿಕ ವಸಾಹತುಶಾಹಿಯನ್ನು ಓಡಿಸಿದ್ದಾರೆ. ಅಯೋಧ್ಯೆಯ ಮೂಲಕ ದಿಲ್ಲಿಯಲ್ಲಿ ಅಧಿಕಾರವನ್ನು ಪಡೆದ ಹತ್ತು ತಲೆಗಳಿಗೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ ಹೇಗೆ ಮತ್ತು ಯಾವ ವೇಷವನ್ನು ಹಾಕಿದರೂ ಅಧಿಕಾರದ ಸೀತಾಪಹಾರ ಸಾಧ್ಯವಾಗಿಲ್ಲ. ಒಂದೊಮ್ಮೆ ಕರ್ನಾಟಕದಲ್ಲಿ ಭಾಜಪ ಹೆಜ್ಜೆಯಿಡಲು ಕಾರಣವಾದದ್ದು ಬಿ.ಎಸ್.ಯಡಿಯೂರಪ್ಪರೆೆಂಬ ಸಂಘಪರಿವಾರದ ಹಿನ್ನೆಲೆಯ ಹೋರಾಟಗಾರ. ಆದರೆ ಅವರ ಸಾಧನೆಯೂ ಮುಕ್ಕುಗಟ್ಟಿ ಕಳೆದ ಬಾರಿ ಕಾಂಗ್ರೆಸ್‌ನ ಅಧಿಕಾರತೀಟೆಯ ಒಂದಷ್ಟು ಮಂದಿಯನ್ನು ಒಳಮಾಡಿಕೊಂಡು ಅಧಿಕಾರವನ್ನು ಪಡೆಯಬೇಕಾಯಿತು, ಮುಂದುವರಿಯುತ್ತಿದೆ. ರಾಜನಿಗಿಂತಲೂ ಹೆಚ್ಚು ರಾಜರಕ್ತದವರಂತೆ, ರಾಜನಿಷ್ಠರಂತೆ, ಈ ಕಾಂಗ್ರೆಸಿನಿಂದ ಆಮದಾದವರು ಮತಾಂಧತೆಯ ನಟನೆಯಲ್ಲಿ ನಿರತರಾಗಿದ್ದಾರೆ.

ಕರ್ನಾಟಕದಲ್ಲಿ ಮುಂದೆ ಬರುವ ಚುನಾವಣೆಗೆ ಎಲ್ಲ ಅಕ್ರಮಗಳ ತಯಾರಿ ನಡೆಯುತ್ತಿದೆ. ಇದರಲ್ಲಿ ಜನರನ್ನು ಜಾತಿ-ಮತಗಳ ಆಧಾರದಲ್ಲಿ ಒಡೆದು ಪ್ರಚೋದಿಸುವುದು ಮಹತ್ವದ ಸಾಧನೆ. ಈಚೆಗೆ ಬೆಂಗಳೂರಿನಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ಸ್ಥಾಪಿಸಲಾಯಿತು. ಕೆಂಪೇಗೌಡರ ರಾಜ್ಯ ಕರ್ನಾಟಕದ ಬೆಂಗಳೂರಿನ ಸುತ್ತಮುತ್ತದ ಒಂದು ಭಾಗ ಮಾತ್ರ. ಆದರೆ ಅವರ ವಿಗ್ರಹಪೂಜೆ ಅಗತ್ಯವಾದದ್ದು 2023ರ ಚುನಾವಣೆಯಿಂದಾಗಿ. ಅವರು ಪ್ರಗತಿಯ ಮೂರ್ತಿಯಾದದ್ದು ಚುನಾವಣಾ ಕಾರಣಕ್ಕಾಗಿ. ರಾಜ್ಯ ರಾಜಕೀಯದಲ್ಲಿ ‘ನಾವೆಲ್ಲ ಹಿಂದೂ, ನಾವೆಲ್ಲ ಒಂದು’ ಎಂಬ ಒಡೆಯುವ ಘೋಷಣೆಗಿಂತಲೂ ಕೀಳಾಗಿ ಈಗ ಜಾತ್ಯಾಧಾರಿತ ಘೋಷಣೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದಕ್ಕೆ ಬೇಕಾದ ಪರಿಕರಗಳನ್ನು ಯಾವ್ಯಾವುದೋ ಹಿರಿಯರಿಂದ, ರಾಜಕಾರಣಿಗಳಿಂದ, ಸಂತ-ಸನ್ಯಾಸಿಗಳ ಹೆಸರುಗಳಿಂದ ಎರವಲು ಪಡೆಯಲಾಗುತ್ತಿದೆ. ಭಾಜಪದ ರೀತಿ ನೀತಿಗಳು ಎಲ್ಲ ಕಡೆಗೂ ಒಂದೇ. ನೆನಪಿರುವವರಿಗೆ ಇವು ಗೊತ್ತಾಗುತ್ತವೆ. ಗೊಡ್ಡುಮತದಾರರಿಗೆ ಇವೆಲ್ಲ ತಮ್ಮ ಹುಟ್ಟುಹಬ್ಬದ ಆಚರಣೆಯಂತೆ ಸುಖಕೊಡುವ ದಿನಗಳು. ಸರದಾರ್ ಪಟೇಲ್, ರಾಮಾನುಜಾಚಾರ್ಯರು, ಈಗ ಕೆಂಪೇಗೌಡ, ಹೀಗೆ ಎಲ್ಲ ಜಾತಿ-ಪಂಗಡಗಳ ನಾಯಕರ ಒಂದೊಂದು ಮೂರ್ತಿಯನ್ನು ಪ್ರತಿಷ್ಠಾಪಿಸುವುದು ಭಾಜಪ ಸರಕಾರದ ಆದ್ಯತೆಗಳಲ್ಲೊಂದು. ಹೀಗೆ ಮಾಡುವುದು ನಾಚಿಕೆಗೆಟ್ಟ ಮತ್ತು ತಲೆಯೆತ್ತಲಾರದ ಸಾಧನೆಗಳು. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ! ಈಗ ನಡೆಯತ್ತಿರುವ ಪ್ರತಿಮಾ ಲೋಕವು ಮಾಯಾವತಿಯ ಆನೆಗಳನ್ನು ಅವಮಾನಿಸುವಂತಿದೆ. ಇನ್ನೊಂದಷ್ಟು ವರ್ಷಗಳಲ್ಲಿ ಈ ದೇಶದ ತುಂಬಾ ಪ್ರತಿಮೆಗಳು ತುಂಬಿಕೊಂಡು ಸ್ಥಾವರಕ್ಕಳಿವಿಲ್ಲ, ಜಂಗಮಕ್ಕಳಿವುಂಟು ಎಂಬ ರಾಷ್ಟ್ರಘೋಷಣೆಯನ್ನು ನುಡಿಸಬಹುದು!

ಕರ್ನಾಟಕದ ಸಂಸದರಲ್ಲಿ ಕೆಲವರು ಬುದ್ಧಿವಂತರು: ಇವುಗಳನ್ನು ಸುಮ್ಮನಿದ್ದು ಕಳೆಯುತ್ತಾರೆ. ಆದರೆ ರಾಜ್ಯಾಧ್ಯಕ್ಷ ಕಟೀಲ್, ಮೈಸೂರಿನ ಪ್ರತಾಪಸಿಂಹ ಮುಂತಾದವರು ಮಾತಾಡಿದ ನಂತರ ಯೋಚಿಸುವವರು. ಖಳನಾಯಕರ ಮೆಚ್ಚಿನ ಬಂಟರಂತೆ ಅಥವಾ ಸಿನೆಮಾದ ಕ್ಯಾಬರೆ ನರ್ತಕಿಯರಂತೆ ಕೇಂದ್ರ ನಾಯಕರನ್ನು ತಮ್ಮೆಡೆಗೆ ಆಕರ್ಷಿಸುವ ಸಲುವಾಗಿ ಬಗೆಬಗೆಯ ವಯ್ಯೆರವನ್ನು ಪ್ರದರ್ಶಿಸುತ್ತಾರೆ. ಈಚೆಗೆ ಮೈಸೂರಿನ ಸಂಸದರು ‘ಟಿಪ್ಪು ಎಕ್ಸ್‌ಪ್ರೆಸ್’ ರೈಲುಗಾಡಿಯನ್ನು ‘ವಡೆಯರ್ ಎಕ್ಸ್‌ಪ್ರೆಸ್’ ಮಾಡಿದರು. (ಇದಕ್ಕೆ ಮದ್ದೂರಿನಲ್ಲಿ ನಿಲುಗಡೆಯಿದೆಯೋ ಗೊತ್ತಿಲ್ಲ. ಅಲ್ಲಿ ವಡೆ ಬಹಳ ಪ್ರಸಿದ್ಧ!) ಭಕ್ತರನ್ನು ಒಲಿಸಿಕೊಳ್ಳಲು ಇದು ಸಾಕಾಗುತ್ತದೆ. ಆ ಕಾಲದಲ್ಲಿ ಈಗಿನಂತೆ ಮಹಿಳಾ ಚಳವಳಿಯಿರಲಿಲ್ಲ. ಕಳ್ಳಬಸುರಾಗಿ ಹೆತ್ತಾಗಲೂ ಮಗುವಿನ ತಂದೆಯ ಹೆಸರು ಕೊಡಬೇಕಾಗಿತ್ತು. ಸತ್ಯಕಾಮಿಯರಿರಲಿಲ್ಲ. ಅಂತಹ ಸಂದರ್ಭದಲ್ಲಿ ತಂದೆಯಾಗಲು ಸದಾ ಸಿದ್ಧನಾಗಿರುವವನೊಬ್ಬನಿದ್ದ. ಅವನಿಗೆ ಐವತ್ತೋ ನೂರೋ ನೀಡಿದರೆ ನನ್ನ ಹೆಸರು ಬರ್ಕೊಳ್ಳಿ ಎಂದು ಪಠೇಲರಿಗೆ ಹೇಳುತ್ತಿದ್ದ. ದಶಕಗಳ ನಂತರ ಸಿಂಹಾವಲೋಕಿಸಿ ಈ ಜನನಾಯಕರಿಗೆ ಹೋಲಿಸಿದರೆ ಅವನೆಷ್ಟು ದೊಡ್ಡವನು ಎಂದು ಅನ್ನಿಸುತ್ತದೆ. ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳನೋಡುವ ಅನೇಕ ನಾಯಕರು ನಿಜಜೀವನದಲ್ಲಿ ಎಷ್ಟು ಕಳಪೆಗಳು, ಕೊಳಕರು ಎಂಬುದು ನಿಜಕ್ಕೂ ಸೋಜಿಗದ ಮತ್ತು ಸಂಕಟದ ವಿಚಾರ. ಇವರ ಮತ್ತು ಈ ತಳಿಕಳೆಗಳ ನಡುವೆ ಬದುಕುವ, ಬೆಳೆಯುವ ನಮ್ಮ ಮಕ್ಕಳು ಎಂತಹ ದುರ್ಭಾಗ್ಯರು!

ರಾಜ್ಯದ ಎಲ್ಲ ಶಾಲಾಗೋಡೆಗಳಿಗೆ ಕೇಸರಿ ಬಣ್ಣವನ್ನು ಲೇಪಿಸುವುದು ಈ ಸಾಧನಾ ಪ್ರಯೋಗಗಳಲ್ಲಿ ಒಂದು. ಎಲ್ಲ ಬಣ್ಣ ಮಸಿ ನುಂಗಿತು ಎಂಬ ಮಾತಿದೆ. ತತ್ವಮಸಿಗೆ ಪರ್ಯಾಯವಾಗಿ ಹಿಂದುತ್ವದ ತತ್ವಹೀನ ಮಸಿಯಾಗಿ ಮರುಹುಟ್ಟುಪಡೆಯುತ್ತಿದೆ. ಈಗ ಎಲ್ಲ ಬಣ್ಣ ಕೇಸರಿ ನುಂಗಿತು ಎಂಬ ಗಾದೆ ಹುಟ್ಟಬಹುದು. ಒಂದು ರೀತಿಯಲ್ಲಿ ಕೇಸರಿ ಒಳ್ಳೆಯದು; ಕೆಸರಾದರೆ, ಧೂಳಾದರೆ ಗೊತ್ತಾಗುವುದಿಲ್ಲ. ಇಂತಹ ಪ್ರಯೋಗಗಳು ಹಿಂದೆಯೂ ನಡೆದಿವೆ. ಹಿಟ್ಲರ್ ನಡೆಸಿದ ಅತೀವ ಸಾಹಸಗಳೂ ಕೊನೆಗೆ ಯಶಸ್ಸನ್ನು ಪಡೆಯಲಿಲ್ಲ. ಆತನನ್ನು ನಂಬಿದವರು ನೇಣಿಗೋ ಸೆರೆವಾಸಕ್ಕೋ ಹೋದರೇ ವಿನಾ ಶಾಶ್ವತ ಇಂದ್ರಪಟ್ಟವನ್ನು ಪಡೆಯಲಿಲ್ಲ. ಭಾಜಪ ರಾಜಕಾರಣಿಗಳು ಕೇಸರಿ ಬಟ್ಟೆಯನ್ನೇ ತಮ್ಮ ರಾಜಕೀಯ ಸಮವಸ್ತ್ರವಾಗಿಸುತ್ತಿದ್ದರು. ಕೆಲವು ಕೇಸರಿ ಮಠಾಧೀಶರು ಪೊಕ್ಸೊ ಪ್ರಕರಣಗಳಲ್ಲಿ ಸಿಕ್ಕಿಬೀಳುತ್ತಿರುವುದರಿಂದ (ನೆನಪಿಡಿ: ಸಿಕ್ಕಿಬಿದ್ದವರಷ್ಟೇ ಕಳ್ಳರು, ಲಂಪಟರು! ಉಳಿದವರು ಬುದ್ಧಿಗಳು, ಶ್ರೀಶ್ರೀಶ್ರೀಗಳು!)

ಬರಲಿರುವ ದಿನಗಳು ವರ್ಣರಂಜಿತವಾಗುತ್ತವೆಯೆಂದು ತಿಳಿದರೆ ಮೂರ್ಖತನ. ಅದು ಕೇಸರಿಮಯವಾಗಿರುತ್ತದೆ. ಎಲ್ಲ ಬಣ್ಣಗಳಿಗೂ ಒಂದಲ್ಲ ಒಂದು ಕಾಲದಲ್ಲಿ ಪ್ರಾಶಸ್ತ್ಯವಿದೆ. ಇವುಗಳ ನಡುವೆ ಅಮಾಯಕರು ಬಲಿಯಾಗುತ್ತಾರೆ; ದೇವರ, ಧರ್ಮದ ಹೆಸರಿನಲ್ಲಿ ಕೊಲೆ-ಸುಲಿಗೆ-ಮೋಸ ನಡೆಯುವಾಗ ಎಲ್ಲವೂ ಧರ್ಮಸಮ್ಮತವೇ. ಗಾದೆ ತಿರುಗಾಮುರುಗಾ ಆಗುತ್ತಿದೆ. ವರ್ತಮಾನದ ಪ್ರತಿಯೊಬ್ಬ ಕಳ್ಳನಿಗೂ ಸಂತನಿಗೂ ಚರಿತ್ರೆಯಿದೆ; ಭವಿಷ್ಯವೂ ಇದೆ. ಸಂತಕೇಸರಿಗಳು ರಾಜಕೀಯ ಕೇಸರಿಗಳಾಗುವುದು ಭಾರತವೆಂಬ ಅಮೃತಮತಿಯ ಹಣೆಬರಹ; ಮಾವುತನ ಸುಯೋಗ.
ಕೇಸರಿ ಯಾವಾಗ ರಕ್ತವರ್ಣವಾಗುತ್ತದೆಯೆಂಬುದನ್ನು ಕಾದು ನೋಡೋಣ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top