ಒಳಗ ತೊಳೆಯಲರಿಯದೆ...
-

ಇಂತಹ ಹತ್ತಾರು ಸಂಗತಿಗಳು ಕೆಟ್ಟ ಕನಸುಗಳಂತೆ ನಮ್ಮ ಮುಂದೆ ತೆರೆದುಕೊಳ್ಳುತ್ತವೆ. ನಮ್ಮ ಪ್ರಜ್ಞೆಯ ಬಾಗಿಲು ಅವುಗಳಿಗೆ ಮುಚ್ಚಬಾರದು. ಇವನ್ನು ಮೀರಿ, ಅಲಕ್ಷಿಸಿ, ಪ್ರಕೃತಿ, ಹೂವು, ಹಣ್ಣು, ಮರ, ಗಿಡ, ಬೆಟ್ಟ, ಗುಡ್ಡ, ಪ್ರೀತಿ ಎಂದು ಹಾಡುವುದು, ಬರೆಯುವುದು, ಅಜ್ಞಾನದ ಮತ್ತು ಪಲಾಯನವಾದದ ಪರಮಾವಧಿ. ಕೇಡಿನ ದುಷ್ಪರಿಣಾಮಗಳ ಬಗ್ಗೆ ತಿಳಿವಳಿಕೆಯನ್ನು ಸಮಾಜದ ಗಣ್ಯರು ನೀಡಬೇಕು. ಅದಲ್ಲವಾದರೆ ಕೋಟೆ ಸೂರೆಗೊಳ್ಳುವ ವರೆಗೆ ಕಾದು ಬರಿಗೈಯಲ್ಲಿ ಸಾಯಬೇಕು, ಇಲ್ಲವೇ ನರಳಬೇಕು.
ಮನುಷ್ಯ ಕಲಿಯಬೇಕಾದದ್ದೇ ಸತ್ಯವನ್ನು ಹೇಳುವ, ಹೇಳಿಸುವ, ವಿದ್ಯೆ. ಅದರ ಕಲಿಕೆ ಎಂದೂ ಪೂರ್ಣವಾಗುವುದಿಲ್ಲ. ಆದರೆ ಅದರ ದುಷ್ಪರಿಣಾಮಗಳ, ಅಪಾಯದ ಅರಿವಿದ್ದ ಜಾಣರು ಅಪ್ರಿಯವಾದ ಸತ್ಯವನ್ನು ಹೇಳದಿರು ಎಂದರು. ಅವರು ಸೂಚಿಸಿದ ಅಪಾಯ ಬೇರೆಲ್ಲಿಂದಲೂ ಎದುರಾದದ್ದಲ್ಲ, ಆಡಳಿತದಿಂದ. ಆಳುವ ಅರಸನ ಮತ್ತು ಆತನ ಭಕ್ತರ ಇಷ್ಟಾನಿಷ್ಟಗಳ ವಿರುದ್ಧ ನಿಂತ ಯಾವ ಸತ್ಯವೂ, ಸತ್ವವೂ ಉಳಿಯದು ಎಂಬುದಕ್ಕಾಗಿಯೇ ಬದುಕುಳಿಯುವ ಈ ತಂತ್ರವನ್ನು ಋಷಿಮುನಿಗಳು ಈ ದೇಶದಲ್ಲಿ ಬೋಧಿಸಿದರು. ''ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣುಬಟ್ಟೆಗಾಗಿ, ತುತ್ತು ಹಿಟ್ಟಿಗಾಗಿ'' ಎಂದು ದಾಸರು ಹೇಳಿದರೆ, ಈ ಅರ್ಧಸತ್ಯ ಇನ್ನೂ ಮುಂದೆ ಹೋಗಿ ಎಲ್ಲರೂ ಮಾಡುವುದು ಬದುಕುಳಿಯುವುದಕ್ಕಾಗಿ ಎಂದು ಸಾರಿದೆ. ''ನ್ಯಾಯನಿಷ್ಠುರಿ: ದಾಕ್ಷಿಣ್ಯಪರ ನಾನಲ್ಲ, ಲೋಕವಿರೋಧಿ: ಶರಣನಾರಿಗಂಜುವನಲ್ಲ'' ಎಂಬುದು ಬಸವಣ್ಣನವರ ವಚನವೊಂದರ ಸಾಲುಗಳು. ಇಂತಹ ಒಳಗ ತೊಳೆಯಲರಿತವರು ಮಾತ್ರ ಈ ಸಂದಿಗ್ಧದಿಂದ ಹೊರತಾದಾರು. ಸಾವಿರ ವರ್ಷಗಳ ಹಿಂದೆಯೂ ಲೋಕ ಇಷ್ಟೇ ಕೆಟ್ಟದಾಗಿತ್ತು ಎಂಬುದೇ ಕೊನೆಗೂ ಉಳಿಯುವ ಸತ್ಯ. ಬರಲಿರುವ ಸಾವಿರ ವರ್ಷಗಳ ಆನಂತರವೂ ಇದೇ ಮಾತು ಉಳಿಯಬಹುದು ಎಂಬುದೇ ಇತಿಹಾಸ ಮತ್ತು ವರ್ತಮಾನ ಕಲಿಸುವ ಸತ್ಯ. ಎಲ್ಲಿ ಸತ್ವಕ್ಕೆ, ಸತ್ಯಕ್ಕೆ, ಜ್ಞಾನಕ್ಕೆ ಬೆಲೆಯಿಲ್ಲವೋ ಅಲ್ಲಿ ದುರದೃಷ್ಟ ತಾಂಡವವಾಡುತ್ತಿದೆಯೆಂದೇ ಅರ್ಥ.
*
ಮೊನ್ನೆ ಗೋವಾದಲ್ಲಿ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವವು ನಡೆಯಿತು. ಇದರ ಆತಿಥ್ಯ ಭಾರತದ್ದು. ಭಾರತೀಯ ಪರಂಪರೆಯಲ್ಲಿ ಅತಿಥಿಗಳನ್ನು ತೃಪ್ತಿಪಡಿಸಬೇಕಾದದ್ದು ಆತಿಥೇಯನ ಕರ್ತವ್ಯವಾಗಿತ್ತು. ಆದರೆ ಈಗ ಅತಿಥಿಗಳು ಸುಳ್ಳನ್ನು ಹೇಳಿದರೂ ಸರಿ, ಆತಿಥೇಯನನ್ನು ತೃಪ್ತಿಪಡಿಸಬೇಕಾದದ್ದು ಅತಿಥಿಯ ಕರ್ತವ್ಯವೆಂದು ಆಧುನಿಕ ಭಾರತ ನಂಬಿದೆ. ಆದ್ದರಿಂದ ಯಾರೇ ಬರಲಿ ನಮ್ಮ ತಲೆಗೆ ಕಿರೀಟವಿಟ್ಟು ಹಾಡಿಹೊಗಳಬೇಕಾದ್ದನ್ನು ಭಾರತ ಬಯಸಿದೆಯೆಂಬುದಕ್ಕೆ ಗೋವಾ ಉತ್ಸವ ನಿದರ್ಶನವಾಯಿತು. ಗೋವಾ ಉತ್ಸವವನ್ನು ಭರ್ಜರಿ ದುರುಪಯೋಗಪಡಿಸಲು ಬಿಜೆಪಿ ಆಡಳಿತದ ಭಾರತ ಸರಕಾರ ವಿಪರೀತ ಕಾರ್ಯಪ್ರವೃತ್ತವಾಯಿತು. ಹಿಂದೂ ಮತಾಂಧತೆಯನ್ನು ಸಮಾಜದ ಎಲ್ಲ ಸ್ತರಗಳಲ್ಲಿ, ಆಯಾಮಗಳಲ್ಲಿ ಹಬ್ಬಿಸುವ ಸಂಚಿನ ಭಾಗವಾಗಿ 'ದಿ ಕಾಶ್ಮಿರ್ ಫೈಲ್ಸ್' ಹಿಂದಿ ಚಲನಚಿತ್ರವನ್ನು ಪ್ರದರ್ಶನಕ್ಕೆ ಕಳಿಸಿತು. ಈ ಚಿತ್ರವು ಕಲೆಗೆ ಹೊರತಾದ ಕಾರಣಗಳಿಗಾಗಿ, ಎಂದರೆ ಕಾಶ್ಮೀರದ ಪಂಡಿತರ ಮೇಲೆ ನಡೆದ ಹಿಂಸೆಯನ್ನು ನರಮೇಧವಾಯಿತೆಂಬ ರೀತಿಯಲ್ಲಿ ಹಿಗ್ಗಿಸಿ ಹಿಂದೂಗಳನ್ನು ಪ್ರಚೋದಿಸುವ ನಿಟ್ಟಿನಲ್ಲಿ ಯಶಸ್ವಿಯಾಯಿತು. ಇದಕ್ಕೆ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಸಿಕ್ಕಿತು.
ಹಿಂದೂ ಸಂಘಟನೆಗಳು, ನಾಯಕರು ಸಗಟು ಟಿಕೇಟುಗಳನ್ನು ಖರೀದಿಸಿ ಜನರಿಗೆ ಸಿನೆಮಾವನ್ನು ಬಿಟ್ಟಿ ತೋರಿಸಿದರು. ಈ ಬಾರಿಯ ಉತ್ಸವದ ಜ್ಯೂರಿ (ತೀರ್ಪುಗಾರರ ಮಂಡಳಿ)ಯ ಅಧ್ಯಕ್ಷ ಇಸ್ರೇಲಿನ ನಡಾವ್‌ಲಪಿಡ್ (ಈ ವಿದೇಶಿ ಹೆಸರುಗಳನ್ನು ಕನ್ನಡದಲ್ಲಿ ಹೇಗೆ ಹೇಳಿದರೆ ಸರಿಯಾದೀತೆಂಬ ಚಿಂತೆ ಸದಾ ಆವರಿಸುತ್ತದೆ- 'ರುಷಿ' ಸನಕ್ ಸರಿಯೇ ಅಥವಾ ಭಾಜಪ ಭಕ್ತ ಪರಂಪರೆಯ 'ಋಷಿ' ಸುನಕ್ ಸರಿಯೇ ಎಂಬಂತೆ!). ಅವರು ಸ್ವತಃ ಯೆಹೂದಿ. ಹಿಟ್ಲರನ ನರಮೇಧಕ್ಕೆ ಬಲಿಯಾದ ಜನಾಂಗದ ಚಿಗುರು. ಸರ್ವಾಧಿಕಾರದ, ಜನಾಂಗ ಹತ್ಯೆಯ ಬಗ್ಗೆ ತಿಳಿದವರು. ಇಸ್ರೇಲಿನ ಟೆಲ್‌ಅವೀವ್ ಯುನಿವರ್ಸಿಟಿಯಿಂದ ತತ್ವಶಾಸ್ತ್ರದಲ್ಲಿ ಪದವಿ ಪಡೆದವರು. ಟಿವಿ, ಸಿನೆಮಾ ಕಲೆಯಲ್ಲಿ ಸಾಕಷ್ಟು ತರಬೇತಿ ಹೊಂದಿದವರು; ಪಳಗಿದವರು.
ಇಸ್ರೇಲಿನ ಮಿಲಿಟರಿಯಲ್ಲಿಯೂ ದುಡಿದವರು. ಭಾರತದ ಅನುಭವದಲ್ಲಿ ಅಳೆಯುವುದಾದರೆ (ಅಂದರೆ ನಮ್ಮಲ್ಲಿ ಪ್ರಶಸ್ತಿಯೇ ಶ್ರೇಷ್ಠತೆಯ ಮಾಪನ!) ತನ್ನ ಸಿನೆಮಾಗಳಿಗಾಗಿ ಅನೇಕ ಪ್ರಶಸ್ತಿಗಳನ್ನು ಪಡೆದವರು. ಅಂತರ್‌ರಾಷ್ಟ್ರೀಯ ಖ್ಯಾತಿಯ ಸಿನೆಮಾ ನಿರ್ದೇಶಕ. ಹೇಗೂ ಇರಲಿ, ಭಾರತ ಸರಕಾರ ಸ್ವೀಕರಿಸಿದ ಆಯ್ಕೆ. ಜ್ಯೂರಿಗಳ ಮೂಲಕ ನಮ್ಮ 'ದಿ ಕಾಶ್ಮೀರ್ ಫೈಲ್ಸ್' ಸಿನೆಮಾಕ್ಕೂ ವಿಶ್ವಗುರುವಿನ ಸ್ಥಾನ ಲಭಿಸೀತೆಂಬ ದೂರದ ನಿರೀಕ್ಷೆ ಭಾಜಪ ಆಡಳಿತದ ಕೇಂದ್ರ ಮತ್ತು ಗೋವಾ ಸರಕಾರಕ್ಕಿತ್ತು. ಉತ್ಸವವು ನಡೆಯಿತು. ಸಮಾರೋಪ ಸಮಾರಂಭದಲ್ಲಿ ಆಡಳಿತ ಭಾರತೀಯ ಘಟಾನುಘಟಿ ರಾಜಕಾರಣಿಗಳೂ ಇದ್ದರು. ನಡಾವ್‌ಲಪಿಡ್ ತನ್ನ ಕೆಲವೇ ಸೆಕೆಂಡುಗಳ ಭಾಷಣದಲ್ಲಿ ಭಾರತದ ಪ್ರತಿನಿಧಿಯಾಗಿದ್ದ 'ದಿ ಕಾಶ್ಮೀರ್ ಫೈಲ್ಸ್' ಸಿನೆಮಾವನ್ನು ಪ್ರತ್ಯೇಕವಾಗಿ ಉಲ್ಲೇಖಿಸಿ ಅದೊಂದು ಪ್ರಚಾರತಂತ್ರದ ಅಸಭ್ಯ ಸಿನೆಮಾ ಎಂದು ಟೀಕಿಸಿದರು. ತನ್ನ ಆತ್ಮಸಾಕ್ಷಿಯನ್ನು ಮಾರಿಕೊಳ್ಳದ ಯಾವನೇ ಪ್ರಜ್ಞಾವಂತ ವಿಮರ್ಶಕನಾಗಲೀ ತೀರ್ಪುಗಾರನಾಗಲೀ ಹೀಗೆ ಹೇಳುವುದು ಸಹಜ. ಯಾವುದೇ ಅಭಿಪ್ರಾಯ ಅವರವರ ವೈಯಕ್ತಿಕವಾಗಿರುತ್ತದೆ.
ಪ್ರಾತಿನಿಧಿಕವಾಗಿ ಮಾತನಾಡುವಾಗ ಹೊಣೆಗಾರಿಕೆ ಇರಬೇಕಾಗುತ್ತದೆ ಎಂಬುದಷ್ಟೇ ಹೆಚ್ಚಳ. ಚಲನಚಿತ್ರವೊಂದರ ಕಲಾತ್ಮಕತೆಯ ಕುರಿತು ಮಾತನಾಡುವಾಗ ಅನುಭವಿಗಳು ಹೇಳುವ ಮಾತು ವೈಯಕ್ತಿಕ ಎನ್ನುವುದಕ್ಕಿಂತ ವಿಮರ್ಶಾತ್ಮಕ ಎನ್ನಬೇಕಾಗುತ್ತದೆ. ಅಂತಹ ಅಭಿಪ್ರಾಯಗಳು ಅವರ ಅನುಭವ, ಕಲಾತ್ಮಕ ಗೌರವ ಇವುಗಳನ್ನು ಆಧರಿಸುತ್ತದೆ. ಅಂಥವರ ಅಭಿಪ್ರಾಯಗಳು ಮೌಲಿಕವಾಗಿರುತ್ತವೆ ಮತ್ತು ಜಾಗತಿಕ ಮಟ್ಟದಲ್ಲೂ ಸ್ವೀಕಾರಾರ್ಹವಾಗಿರುತ್ತವೆ. ಆದ್ದರಿಂದ ಅವರ ಅಭಿಪ್ರಾಯವನ್ನು ಉತ್ಸವ ಮತ್ತು ಅದರ ಆತಿಥೇಯ ಭಾರತ ಗೌರವಿಸಬೇಕಾಗುತ್ತದೆ. ಇಲ್ಲವಾದರೆ ಅಭಿನಂದನಾ ಭಾಷಣಕ್ಕೆ ಮಾತ್ರ ಅವಕಾಶವಿದೆಯೆಂದು (ನಮ್ಮ ಸಾಹಿತ್ಯ ಸಮ್ಮೇಳನಗಳಲ್ಲಿ, ಪುಸ್ತಕ ಬಿಡುಗಡೆಯಲ್ಲಿ ಇರುವಂತೆ) ವ್ಯವಸ್ಥಾಪಕರು ಹೇಳಬೇಕಾಗುತ್ತದೆ. ಭಾರತವನ್ನು ವಿಶ್ವದ ಕಣ್ಣಲ್ಲಿ ಹೇಗೆ ಕಾಣಲಾಗುತ್ತದೆಯೆಂಬುದನ್ನು ಈ ಟೀಕೆ ಅನಾವರಣಗೊಳಿಸಿದೆ. ಆದರೆ ಭಾರತ ಎಚ್ಚೆತ್ತಿತು.
ತಕ್ಷಣ ರಾಜತಾಂತ್ರಿಕ ಸಂಬಂಧಗಳು ಗೋಚರವಾದವು. ಭಾಜಪ ಸರಕಾರ ಬಂದನಂತರ ಬಲಪಂಥದ ಇಸ್ರೇಲಿನ ಜೊತೆ ಸಮನ್ವಯ ಹೆಚ್ಚಾಗಿದೆ. ಫೆಲೆಸ್ತೀನ್ ಕುರಿತಂತೆ ಇಸ್ರೇಲಿನ ನಿರ್ದಯ ನೀತಿ ವಿಶ್ವಖ್ಯಾತವಾಗಿದೆ. ನಡಾವ್‌ಲಪಿಡ್ ಇಸ್ರೇಲ್ ಸರಕಾರದ ಪ್ರತಿನಿಧಿಯಾಗಿರಲಿಲ್ಲ. ಆತ ಭೌಗೋಳಿಕ, ರಾಜಕೀಯ ಕೃತಕ ಗಡಿರೇಖೆಗಳನ್ನು ಮೀರಿದ ಕಲೆಯ ವಿಶ್ವಮಾನವರಲ್ಲೊಬ್ಬ. ಆದರೆ ಭಾರತ ಸರಕಾರ ಇದನ್ನು ಅರ್ಥಮಾಡಿಕೊಳ್ಳದೆ ಇದನ್ನು ಇಲ್ಲವಾಗಿಸುವ ಕ್ರಮ ಕೈಗೊಂಡಿತು. ಈ ಕುರಿತು ಇಸ್ರೇಲ್ ಸರಕಾರ ಮೌನವಾಗಿರಬೇಕಾಗಿತ್ತು. ಆದರೆ ಭಾರತ-ಇಸ್ರೇಲ್ ನಡುವೆ ಗುಪ್ತಸೂಚಿಯ ಮಾತುಕತೆಗಳೇನಾದವೋ ಭಾರತದಲ್ಲಿನ ಇಸ್ರೇಲಿನ ರಾಯಭಾರಿ ಮತ್ತು ಇತರ ರಾಜತಾಂತ್ರಿಕರು ಈ ಅಭಿಪ್ರಾಯವನ್ನೇ ಟೀಕಿಸಿದರು. ರಾಜತಾಂತ್ರಿಕನೊಬ್ಬ ಕಲಾ ವಿಮರ್ಶೆಯ ಅರಿವಿಲ್ಲದಿದ್ದರೂ ಭಾರತದ ಸ್ವಘೋಷಿತ ಶ್ರೇಷ್ಠತೆಯ ವ್ಯಸನವನ್ನರಿತು ಎರಡು ದೇಶಗಳ ನಡುವಣ ಸಂಬಂಧ ಕೆಡದಂತೆ ಕೈಗೊಂಡ ಕ್ರಮ ಇದಾಗಿತ್ತು. ಆದರೆ ಇನ್ನುಳಿದವರ ಪ್ರತಿಕ್ರಿಯೆ ಹಾಸ್ಯಾಸ್ಪದವಾಗಿತ್ತು. ಈ ಚಲನಚಿತ್ರದಲ್ಲಿ ನಟಿಸಿದ ಅನುಪಮ್‌ಖೇರ್ ನಡಾವ್‌ಲಪಿಡ್‌ರನ್ನು ಟೀಕಿಸಿದರು.
ಅವರ ಟೀಕೆ ರಾಜಕೀಯ ಪೂರ್ವಗ್ರಹನಿರ್ಧರಿತವಾಗಿತ್ತು ಎಂದರು. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈ ಚಲನಚಿತ್ರದಲ್ಲಿ ಶೇ. 10 ಆದರೂ ಸುಳ್ಳನ್ನು ಗುರುತಿಸಲಿ ಎಂದು ಸವಾಲೆಸೆದರು. ದೇಶಭಕ್ತರ ಪಾಡು ಹೇಳತೀರದು. ಅವರು ವಾಟ್ಸ್‌ಆ್ಯಪ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ನಡಾವ್‌ಲಪಿಡ್‌ರ ಯೋಗ್ಯತೆಯನ್ನೇ ಪ್ರಶ್ನಿಸಿದರು. ಟೆಲ್‌ಅವೀವ್ ಯುನಿವರ್ಸಿಟಿಗಿಂತ ನಮ್ಮ ಈ ಯುನಿವರ್ಸಿಟಿಗಳೇ ಶ್ರೇಷ್ಠವಾದುವು. ವಿಶ್ವಗುರುವನ್ನೇ ನಡಾವ್‌ಲಪಿಡ್ ಟೀಕಿಸಿದರೆಂಬಂತೆ ಟೀಕೆಗಳ ಬ್ರಹ್ಮಾಸ್ತ್ರ ಪ್ರಯೋಗವಾಯಿತು. ಗಿರೀಶ್ ಕಾರ್ನಾಡರನ್ನು ಬಲಪಂಥೀಯ ಮೂಲಭೂತವಾದಿ ಸಂವಾದಿಗಳು ಟೀಕಿಸಿದಂತೆ ಎಲ್ಲವನ್ನೂ ರಾಜಕೀಯಗೊಳಿಸಬಲ್ಲ ಈ ಪ್ರವೃತ್ತಿ ದೈತ್ಯಾಕಾರವಾಗಿ ಬೆಳೆಯುವುದು ವಿನಾಶಕಾರಿ. ''ಏಳಿ, ಎದ್ದೇಳಿ, ಗುರಿಮುಟ್ಟುವ ವರೆಗೆ ನಿಲ್ಲದಿರಿ'' ಎಂಬ ವಿವೇಕವಾಣಿಯನ್ನು ಈಗ ವಿಕೃತಗೊಳಿಸಿ ಸಂಕುಚಿತ ಮನೋಭಾವದೊಂದಿಗೆ ಹಿಂಸೆಯ ಮಸಾಲೆಯನ್ನು ಸೇರಿಸಲಾಗಿದೆ. ಕರಾವಳಿಯಲ್ಲಿ ಹಂದಿಯ ಕುರಿತ ವಿವಾದದ ಒಂದು ತುಳು ಗಾದೆಯಿದೆ: ''ತೀರ್ಪು ಎಂಚಾಂಡ್ಲ ಇಪ್ಪಾಡು, ಪಂಜಿ ಎಂಕೇ ತಿಕ್ಕೋಡು'' (ತೀರ್ಪು ಹೇಗೇ ಇರಲಿ, ಹಂದಿ ನನಗೇ ಸಿಗಬೇಕು). ಇವೆಲ್ಲ 'ಕಿಸ್ಸಾ ಕುರ್ಸೀ ಕಾ' ಕಥಾಯಣಕ್ಕಿಂತಲೂ ನಿಕೃಷ್ಟವಾದ, ವಚನಕಾರರು ಹೇಳದ, ಅಧಿಕಾರಗರ ಬಡಿದ ಧೋರಣೆಗಳು. ಭಾರತವು ಅನುಭವಿಸಿದ ಈ ದುರಂತದಾರಿಯನ್ನು ಸರಿಪಡಿಸದಿದ್ದರೆ, ಅಥವಾ ಸರಿದಾರಿಯಲ್ಲಿ ಮುನ್ನಡೆಯದಿದ್ದರೆ, ವಿಷಾದಪಡುವ ದಿನಗಳು ದೂರವಿಲ್ಲ.
*
ಪ್ರತಿಷ್ಠಿತ ಮಣಿಪಾಲ ತಾಂತ್ರಿಕ ಕಾಲೇಜ್ (ಎಂಐಟಿ) ಪ್ರೊಫೆಸರ್ ಒಬ್ಬರು ಒಬ್ಬ ಅಲ್ಪಸಂಖ್ಯಾತ ವಿದ್ಯಾರ್ಥಿಯನ್ನು ಭಯೋತ್ಪಾದಕನೊಬ್ಬನೊಂದಿಗೆ ಸಮೀಕರಿಸಿ ಮಾಡಿದ ಲೇವಡಿ ಆತನನ್ನು ಕೆಣಕಿತು. ಶಿಕ್ಷಣ ಸಂಸ್ಥೆಗಳಲ್ಲಿ, ಕಚೇರಿಗಳಲ್ಲಿ, ಕೊನೆಗೆ ಸಾರ್ವಜನಿಕರೆದುರೂ ಎಗ್ಗಿಲ್ಲದೆ ನಿತ್ಯ ನಡೆಯುವ ಇಂತಹ ಘಟನೆಗಳಲ್ಲಿ ಬಹುತೇಕ ಬಲಿಪಶುಗಳು ಅಸಹಾಯಕತೆಯಿಂದ ಮೌನವಾಗಿರುತ್ತಾರೆ. ಅವರಿಗೆ ಸಹಪಾಠಿಗಳ, ಸಹೋದ್ಯೋಗಿಗಳ, ಪೊಲೀಸರ, ಒಟ್ಟಾಗಿ ಆಡಳಿತದ ಮತ್ತು ಸಮಾಜದ ಬೆಂಬಲವೇ ಕಾಣದಾಗಿದೆ. ಇಂತಹ ಅನಪೇಕ್ಷಿತ ವಾತಾವರಣದಲ್ಲಿ ಏನು ಮಾಡಿದರೂ ಏನು ಹೇಳಿದರೂ ನಡೆಯುತ್ತದೆಯೆಂಬ ದುರ್ವರ್ತನೆಗೆ ವಿದ್ಯಾವಂತರು, ಅವಿದ್ಯಾವಂತರು ಎಂಬ ತಾರತಮ್ಯವಿಲ್ಲ. ಆದರೆ ಒಬ್ಬ ವಿದ್ಯಾರ್ಥಿ ಈ ಅನೈತಿಕ ವ್ಯವಸ್ಥೆಯ ಇಂತಹ ಕೇಡನ್ನು ಏಕಲವ್ಯನಂತೆ, ಅಭಿಮನ್ಯುವಿನಂತೆ, ಏಕಾಂಗಿಯಾಗಿ ಎದುರಿಸಿದ, ಪ್ರತಿಕ್ರಿಯಿಸಿದ ರೀತಿ ಪ್ರಶಂಸಾರ್ಹ. ಈಗಾಗಲೇ ಸಾಕಷ್ಟು ಪ್ರಚಾರವಾದ ಈ ಘಟನೆಯ ವಿವರಗಳು ಇಲ್ಲಿ ಅವಶ್ಯವಿಲ್ಲ. ಆದರೂ ಒಂದಂಶವನ್ನು ಹೇಳಲೇಬೇಕು: ಆ ಪ್ರೊಫೆಸರ್ ತನ್ನ ಕ್ರಮವನ್ನು ಹಲವು ರೀತಿಯಲ್ಲಿ ಸಮರ್ಥಿಸಲು ಹೊರಟು ವಿಫಲರಾಗಿ ಕೊನೆಗೆ ವಿಷಾದ ವ್ಯಕ್ತಪಡಿಸಿದಾಗ ವಿದ್ಯಾರ್ಥಿ ''ನಿಮ್ಮ ವಿಷಾದವು ನಿಮ್ಮ ಮನಸ್ಥಿತಿಯನ್ನು/ಯೋಚನಾಹಾದಿಯನ್ನು ತೋರಿಸುತ್ತದೆ'' ಎಂದದ್ದು ಅತ್ಯಂತ ಪ್ರಸ್ತುತ. ಏಕೆಂದರೆ ನಮ್ಮ ಶಿಕ್ಷಣದ ಮತಿಭ್ರಾಂತ ಮತಾಂಧ ಸ್ಥಿತಿಯನ್ನು ನಮ್ಮ ಚಿಂತಕರಾಗಲೀ, ಶಿಕ್ಷಣತಜ್ಞರಾಗಲೀ, ಮಾಧ್ಯಮಗಳಾಗಲೀ ಹೇಳುತ್ತಿಲ್ಲ. ಅವರೆಲ್ಲ ಹದ್ದುಗಳು ಶವಕ್ಕೆ ಕಾಯುವಂತೆ ವರ್ತಿಸುತ್ತಿದ್ದಾರೆ. ಮಕ್ಕಳಿಗೆ ಗೋಡ್ಸೆಯ ಹೆಸರನ್ನಿಡುವ ದಿನಗಳು ಸನ್ನಿಹಿತವಾಗಿವೆ. ಶಿಕ್ಷಣ ಸಾಗುತ್ತಿರುವ ತಪ್ಪುಹಾದಿಯನ್ನು ಈ ಪ್ರೊಫೆಸರ್ ಬಿಚ್ಚಿತೋರಿಸಿದ್ದಾರೆ. ಇದನ್ನು ಧ್ಯಾನವಾಗಲೀ ಯೋಗವಾಗಲೀ ಸರಿಪಡಿಸಲಾಗದು.
ಇಲ್ಲಿ ಮುಖ್ಯವಾಗುವ ಇನ್ನೊಂದು ಸಂಗತಿಯೆಂದರೆ ಆ ಶಿಕ್ಷಣ ಸಂಸ್ಥೆಯು ಎಚ್ಚೆತ್ತುಕೊಂಡು ಸದ್ರಿ ಸಣ್ಣಬುದ್ಧಿಯ ಅವಿವೇಕತನವನ್ನು ಸಹಿಸದೆ ಅವರನ್ನು ಅಮಾನತು ಮಾಡಿದ್ದು. ಖಾಸಗಿ ಸಂಸ್ಥೆಗಳಿಗೆ ಇರುವ ವಿಶಾಲದೃಷ್ಟಿ, ತಾತ್ವಿಕತೆ ಸರಕಾರಕ್ಕಿರುವುದಿಲ್ಲ. ಸರಕಾರದ ಸಚಿವರೊಬ್ಬರು ಇದೊಂದು ಸಣ್ಣ ಘಟನೆಯೆಂದದ್ದು ಇದಕ್ಕೆ ಸಾಕ್ಷಿ. ಭಯೋತ್ಪಾದನೆಗೆ ಜಾತಿ-ಮತಗಳ ಹಂಗಿಲ್ಲ. ಯಾರೂ ಭಯೋತ್ಪಾದಕರಾಗಬಹುದು ಎಂಬುದಕ್ಕೆ ಇತಿಹಾಸದಲ್ಲಿ ಮಾತ್ರವಲ್ಲ ವರ್ತಮಾನದಲ್ಲೂ ಸಾಕಷ್ಟು ಉದಾಹರಣೆಗಳಿವೆ. ಕೊಂದು ಶವವನ್ನು ತುಂಡುಮಾಡಿ ಅಡಗಿಸುವ ಕೆಲವಾರು ಜಾತ್ಯತೀತ ಪ್ರಸಂಗಗಳು ಮನುಷ್ಯನ ದುಷ್ಟತನವನ್ನು ಕುರುಡನಿಗೂ ಕಾಣುವ, ಎಂತಹ ದಡ್ಡನಿಗೂ ಅರ್ಥವಾಗುವ, ರೀತಿಯಲ್ಲಿ ನಿರೂಪಿಸಿವೆ. ಆದರೂ ಇವುಗಳಿಂದ ಕಲಿಯದವರಿಗೆ ಏನೂ ಹೇಳಲಾಗದು. ಕಾಲ ಕೆಡುವುದಿಲ್ಲ; ಕೆಡುವವರು ನಾವೇ ಎಂಬ ಆರ್ಷೇಯ ಮಾತು ಹಳತಾಗದು.
*
ದೇಶದೆಲ್ಲೆಡೆ ಧಾರ್ಮಿಕ ಸ್ವಾತಂತ್ರ್ಯವಿದೆ. ಎಲ್ಲರೂ ಕೂಡಿ ಬಾಳುವ ಸಂಸ್ಕೃತಿ ನಮ್ಮದೆಂದು ಬೆನ್ನುತಟ್ಟಿಕೊಳ್ಳುತ್ತೇವೆ. ಧಾರ್ಮಿಕ ಸಂಸ್ಥೆಗಳಲ್ಲಿ, ಶ್ರದ್ಧಾಕೇಂದ್ರಗಳಲ್ಲಿ, ಎಲ್ಲರೂ ಭಾಗವಹಿಸುವುದರಿಂದಲೇ ಅವು ಕಳೆಗಟ್ಟುತ್ತವೆ. ಆದರೆ ಸಮಾಜದಲ್ಲಿ ಹುಳಿಹಿಂಡುವ ಕೆಲವು ಸಂಘಟನೆಗಳು ಕಳೆದ ಕೆಲ ವರ್ಷಗಳಿಂದ ಇತರ ಕೋಮಿನವರು ತಮ್ಮ ಧಾರ್ಮಿಕ ಮತ್ತು ಆಸ್ತಿಕ ಕೇಂದ್ರಗಳಿಗೆ ಮಾತ್ರವಲ್ಲ, ಉತ್ಸವಗಳ ಸಂದರ್ಭದಲ್ಲಿ ವ್ಯವಹಾರಕ್ಕೂ ಭಾಗವಹಿಸಬಾರದೆಂಬ ನೈತಿಕ ಪೊಲೀಸ್‌ಗಿರಿಗೆ ತೊಡಗಿದ್ದಾರೆ. ಕೆಲವೇ ಜನರ ಕುಹಕ ಕುಮ್ಮಕ್ಕಿನಿಂದ ದುಷ್ಟ ಜನನಾಯಕರ ಸುಖಕ್ಕಾಗಿ, ನಡೆಯುವ ಇಂತಹ ಕೃತಿಗಳು ಸರ್ವನಾಶದ ರುಚಿಯನ್ನು ಹೇಳುತ್ತಿವೆ. ಈ ಧೋರಣೆ ಸರಿಯೇ ತಪ್ಪೇ ಎಂಬ ಬಗ್ಗೆ ಚರ್ಚೆಮಾಡುವುದು ಮೂರ್ಖತನ; ಧೂರ್ತತನ. ಆದರೆ ನಮ್ಮ ಆಡಳಿತ ವ್ಯವಸ್ಥೆಯು ಇಂತಹ ದುರ್ವರ್ತನೆಗೆ ಬೇಷರತ್ತು ಬೆಂಬಲ ನೀಡುತ್ತಿದೆ. ಆಡಳಿತದ ಗುಲಾಮರಂತೆ ವರ್ತಿಸುವ ಪೊಲೀಸ್ ಮತ್ತಿತರ ಇಲಾಖೆಗಳು ಇಂತಹ ಕೇಡುಗಳನ್ನು ನಿರ್ಬಂಧಿಸದಿದ್ದರೆ, ನಿಯಂತ್ರಿಸದಿದ್ದರೆ, ಪ್ರಾಯಃ ಭವಿಷ್ಯದಲ್ಲಿ ಈ ನೈತಿಕ ಪೊಲೀಸರನ್ನೇ ಒಂದು ಇಲಾಖೆಯಾಗಿಸಿ, ಈಗಿರುವ ಪೊಲೀಸ್ ಇಲಾಖೆಗೆ ಮಂಗಳ ಹಾಡಬೇಕಾಗಬಹುದು; ವಿದಾಯ ಹೇಳಬೇಕಾಗಬಹುದು. ನೆರೆಮನೆಯಲ್ಲಿ ಬೆಂಕಿ ಕಾಣುವಾಗ ಅದು ನಮ್ಮ ಮನೆಗೂ ವ್ಯಾಪಿಸಬಹುದೆಂಬ ಕನಿಷ್ಠ ಅರಿವಿರಬೇಕು. ಅದಿಲ್ಲದಿದ್ದರೆ ಆ ಬೆಂಕಿ ನಮ್ಮನ್ನು ಆಹುತಿ ತೆಗೆದುಕೊಳ್ಳುವಾಗ ನಮಗೆ ತರ್ಪಣ ನೀಡುವವರೂ, ಶ್ರದ್ಧಾಂಜಲಿ ಭಾಷಣಮಾಡುವವರೂ ಇರುವುದಿಲ್ಲ. ಸರಕಾರದ ಅಧಿಕಾರಿಗಳು ಸಂಬಳಕ್ಕೆ, ಸವಲತ್ತುಗಳಿಗೆ ಕೊನೆಗೆ ನಿವೃತ್ತಿವೇತನಕ್ಕಷ್ಟೇ ಇರುವುದಲ್ಲ. ತಮ್ಮ ಅದೃಷ್ಟದೊಂದಿಗೆ ತಾವು ಬದುಕುವ ಪ್ರಜಾಸಮಾಜದ ಬದುಕನ್ನು ಹಸನು ಮಾಡುವ ಮಹತ್ತರ ಕರ್ತವ್ಯ ಅವರಿಗಿದೆ.
*
ಇಂತಹ ಹತ್ತಾರು ಸಂಗತಿಗಳು ಕೆಟ್ಟ ಕನಸುಗಳಂತೆ ನಮ್ಮ ಮುಂದೆ ತೆರೆದುಕೊಳ್ಳುತ್ತವೆ. ನಮ್ಮ ಪ್ರಜ್ಞೆಯ ಬಾಗಿಲು ಅವುಗಳಿಗೆ ಮುಚ್ಚಬಾರದು. ಇವನ್ನು ಮೀರಿ, ಅಲಕ್ಷಿಸಿ, ಪ್ರಕೃತಿ, ಹೂವು, ಹಣ್ಣು, ಮರ, ಗಿಡ, ಬೆಟ್ಟ, ಗುಡ್ಡ, ಪ್ರೀತಿ ಎಂದು ಹಾಡುವುದು, ಬರೆಯುವುದು, ಅಜ್ಞಾನದ ಮತ್ತು ಪಲಾಯನವಾದದ ಪರಮಾವಧಿ. ಕೇಡಿನ ದುಷ್ಪರಿಣಾಮಗಳ ಬಗ್ಗೆ ತಿಳಿವಳಿಕೆಯನ್ನು ಸಮಾಜದ ಗಣ್ಯರು ನೀಡಬೇಕು. ಅದಲ್ಲವಾದರೆ ಕೋಟೆ ಸೂರೆಗೊಳ್ಳುವ ವರೆಗೆ ಕಾದು ಬರಿಗೈಯಲ್ಲಿ ಸಾಯಬೇಕು, ಇಲ್ಲವೇ ನರಳಬೇಕು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.