-

ನ್ಯಾ. ಸದಾಶಿವ ವರದಿ-ಬಿಜೆಪಿಯ ಮಹಾದ್ರೋಹ, ಉಳಿದವರ ಮೌನದ್ರೋಹ

-

ಬಿಜೆಪಿ ಸರಕಾರ, ಸಂವಿಧಾನದ ಆಶಯಗಳಿಗೆ ಎಷ್ಟೇ ವಿರೋಧವಾಗಿದ್ದರೂ  EWS ಮಸೂದೆಯನ್ನು ಕಾಯ್ದೆಯಾಗಿಸಲು ಸಾಧ್ಯವಾದದ್ದು ಲೋಕಸಭೆಯಲ್ಲಿ ಮತ್ತು ರಾಜ್ಯ ಸಭೆಯಲ್ಲಿ ಆ ಪಕ್ಷಕ್ಕೆ ಮತ್ತದರ ಮಿತ್ರ ಪಕ್ಷಕ್ಕೆ ಮಸೂದೆಯನ್ನು ಪಾಸು ಮಾಡಿಸಿಕೊಳ್ಳುವಷ್ಟು ಸಂಖ್ಯಾ ಬಲ ಇದ್ದದ್ದಕ್ಕೆ ಮತ್ತು ಮೇಲ್ಜಾತಿಗಳ ಪರವಾಗಿ ಬಿಜೆಪಿಗೆ ಮಮಕಾರವಿದ್ದಿದ್ದಕ್ಕೆ. ಅದರೆ ಬಿಜೆಪಿ ಮತ್ತು ಮೋದಿ ಸರಕಾರ EWS ಮಸೂದೆಯನ್ನು ಕಾಯ್ದೆಯಾಗಿಸಲು ತೋರಿದ ರಾಜಕೀಯ ಉತ್ಸಾಹವನ್ನು ಒಳಮೀಸಲಾತಿ ಜಾರಿಗೇಕೆ ತೋರುತ್ತಿಲ್ಲ?

ಬೆಂಗಳೂರಿನಲ್ಲಿ ಐತಿಹಾಸಿಕ ದಲಿತ ಐಕ್ಯತಾ ಸಮಾವೇಶ ನಡೆದ ವಾರದಲ್ಲೇ ಒಳಮೀಸಲಾತಿಯನ್ನು ಒತ್ತಾಯಿಸಿ ದಲಿತ ಚಳವಳಿಯ ಸಂಸ್ಥಾಪಕರಲ್ಲಿ ಒಬ್ಬರಾದ ಬಿ. ಕೃಷ್ಣಪ್ಪರ ಹರಿಹರದ ಸಮಾಧಿ ಸ್ಥಳದಿಂದ ಹೊರಟ ಕಾಲ್ನಡಿಗೆ ಜಾಥಾ ಬೆಂಗಳೂರನ್ನು ತಲುಪುತ್ತಿದೆ. ಈ ಬಾರಿ ಒಳಮೀಸಲಾತಿಯ ಬಗ್ಗೆ ಬಿಜೆಪಿ ಸರಕಾರದಿಂದ ಖಚಿತ ಪರಿಹಾರ ಪಡೆಯುವವರೆಗೆ ಮರಳಬಾರದೆಂಬ ತೀರ್ಮಾನದೊಂದಿಗೆ ಫ್ರೀಡಮ್ ಪಾರ್ಕ್‌ನಲ್ಲಿ ಹಗಲಿರುಳು ಬೃಹತ್ ಪ್ರತಿಭಟನಾ ಧರಣಿಯನ್ನು ನಡೆಸಲು ಒಳಮೀಸಲಾತಿ ಹೋರಾಟ ಗಾರರು ನಿರ್ಣಯ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಐಕ್ಯತಾ ಸಮಾವೇಶದಲ್ಲಿ ಒಳಮೀಸಲಾತಿಯನ್ನು ಬೆಂಬಲಿಸಿ ಒಕ್ಕೊರಲಿನ ನಿರ್ಣಯವನ್ನು ಕೈಗೊಳ್ಳಲಾಗಿದೆ. ಇದೊಂದು ಸಕಾರಾತ್ಮಕ ಬೆಳವಣಿಗೆ.

ಒಳಮೀಸಲಾತಿಯ ಏಳು-ಬೀಳುಗಳ ಇತಿಹಾಸ 

ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಜಾತಿಗಳನ್ನು ಗುರುತಿಸಿ ಅವುಗಳಿಗೆ ಮೀಸಲಾತಿ ನೀಡುವ ವ್ಯವಸ್ಥೆ ಸ್ವಾತಂತ್ರ್ಯಕ್ಕೆ ಮುಂಚೆಯೇ ಕೊಲ್ಹಾಪುರ, ಮೈಸೂರು ಸಂಸ್ಥಾನಗಳಲ್ಲೂ, ಮದ್ರಾಸ್ ಪ್ರೆಸಿಡೆನ್ಸಿಯಲ್ಲೂ ಹಾಗೂ ಇನ್ನು ಕೆಲವು ಕಡೆ ಜಾರಿಯಲ್ಲಿತ್ತು. ಜಾತಿ ಶ್ರೇಣೀಕರಣದಲ್ಲಿ ಅತ್ಯಂತ ಕಟ್ಟಕಡೆಯ ಸ್ಥಾನದಲ್ಲಿ ಉಳಿಸಲ್ಪಟ್ಟಿರುವ ಅಸ್ಪೃಶ್ಯರು ಸಹಜವಾಗಿಯೇ ಈ ಜಾತಿ ವ್ಯವಸ್ಥೆಯ ಕಾರಣದಿಂದಾಗಿಯೇ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿಸಲ್ಪಟ್ಟವರಾಗಿದ್ದಾರೆ.

ಸ್ವಾತಂತ್ರ್ಯಾನಂತರದಲ್ಲಿ ಸಂವಿಧಾನದಲ್ಲಿ, ಪ್ರಧಾನವಾಗಿ ಅಂಬೇಡ್ಕರ್ ವಹಿಸಿದ ವಕಾಲತ್ತಿನಿಂದಾಗಿ ಮೀಸಲಾತಿಯು ದೇಶಾದ್ಯಂತ ವಿಸ್ತರಣೆಗೊಂಡು ಶಾಸನವಾಯಿತು. ಪ್ರಾರಂಭದಲ್ಲಿ ನ್ಯಾಯಾಲಯ ಅದನ್ನು ವಿರೋಧಿಸಿದರೂ ಸಂವಿಧಾನಕ್ಕೆ ಮಾಡಿದ ಮೊದಲನೇ ತಿದ್ದುಪಡಿಯೇ ನ್ಯಾಯಾಂಗದ ಈ ತಕರಾರನ್ನು ಬಗೆಹರಿಸಿಕೊಂಡು ಮೀಸಲಾತಿಯ ಸಾಂವಿಧಾನಿಕ ದಾರಿಯನ್ನು ಸುಗಮಗೊಳಿಸುವುದಾಗಿತ್ತು. ಇದರ ಭಾಗವಾಗಿಯೇ ಸಂವಿಧಾನದ ಆರ್ಟಿಕಲ್ 341 ಪರಿಶಿಷ್ಟ ವರ್ಗಗಳ ಮೀಸಲಾತಿಯನ್ನು ಸಾಂವಿಧಾನಿಕಗೊಳಿಸಿದೆ ಮತ್ತು 341 (1) ಕಲಮಿನ ಪ್ರಕಾರ ಆಯಾ ರಾಜ್ಯಗಳ ಪರಿಶಿಷ್ಟ ಜಾತಿಗಳ ಪಟ್ಟಿಯನ್ನು ಆಯಾ ರಾಜ್ಯಗಳು ತಯಾರು ಮಾಡಿದ್ದನ್ನು ರಾಷ್ಟ್ರಪತಿಗಳು ಅನುಮೋದನೆಯೊಂದಿಗೆ (ಅರ್ಥಾತ್ ಕೇಂದ್ರ ಸರಕಾರದ ಅನುಮೋದನೆಯೊಂದಿಗೆ) ಘೋಷಣೆಯಾಗುತ್ತದೆ.

ಆರ್ಟಿಕಲ್ 341 (2) ಪ್ರಕಾರ ಈ ಪಟ್ಟಿಗೆ ಯಾವುದಾದರೂ ಜಾತಿಯನ್ನು ಸೇರಿಸುವುದು ಅಥವಾ ಕೈಬಿಡುವುದನ್ನು ಸಂಸತ್ತು ಮಾಡಬೇಕೇ ಹೊರತು ಅದರ ಪರಮಾಧಿಕಾರ ರಾಜ್ಯ ಶಾಸನ ಸಭೆಗಳಿಗಿಲ್ಲ. ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ ಪರಿಶಿಷ್ಟ ಒಳಮೀಸಲಾತಿಯ ವಿಷಯದ ಬಗ್ಗೆ ಸಂವಿಧಾನ ಮೌನವಾಗಿದೆ. ಆದರೆ ಪರಿಶಿಷ್ಟ ಜಾತಿಗಳ ಪಟ್ಟಿಯೊಳ ಸೇರಿಸಲ್ಪಟ್ಟ ಜಾತಿಗಳು ಸಮಾಜದ ಉಳಿದ ಜಾತಿಗಳಿಗೆ ಹೋಲಿಸಿದಲ್ಲಿ ಹೆಚ್ಚೂ ಕಡಿಮೆ ಒಂದೇ ಬಗೆಯ ತಾರತಮ್ಯ ಮತ್ತು ಅದರಿಂದಾಗಿ ಹಿಂದುಳಿದಿರುವಿಕೆಯನ್ನು ಅನುಭವಿಸುತ್ತಿದ್ದರೂ ಪಟ್ಟಿಯೊಳಗೆ ಸೇರಿಸಲ್ಪಟ್ಟ ಪರಿಶಿಷ್ಟ ಜಾತಿಗಳೊಳಗೆ ಹೋಲಿಸಿದಲ್ಲಿ ಐತಿಹಾಸಿಕ ಕಾರಣಗಳಿಂದಾಗಿ ಕೆಲವು ಪರಿಶಿಷ್ಟ ಜಾತಿಗಳು ಉಳಿದ ಪರಿಶಿಷ್ಟ ಜಾತಿಗಳಿಗಿಂತ ಹೆಚ್ಚಿನ ಮೀಸಲಾತಿಯ ಲಾಭವನ್ನು, ವಿಶೇಷವಾಗಿ ಶಿಕ್ಷಣ, ರಾಜಕೀಯ ಮತ್ತು ಉದ್ಯೋಗಗಳಲ್ಲಿ ಪಡೆದುಕೊಳುತ್ತಿವೆ.

ಇದು ಭಾರತದಂತ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮತ್ತು ಸ್ವಾತಂತ್ರಾನಂತರದಲ್ಲಿ ಭಾರತ ಅನುಸರಿಸಿದ ಬಂಡವಾಳಶಾಹಿ ಬೆಳವಣಿಗೆಯ ಪರಿಣಾಮವೂ ಆಗಿದೆ. ಹೀಗಾಗಿ ಮೀಸಲಾತಿಯ ಲಾಭವನ್ನು ಪಡೆದುಕೊಳ್ಳಲಾಗದ ಪರಿಶಿಷ್ಟ ಜಾತಿಗಳು ತಮ್ಮನ್ನು ಮೀಸಲಾತಿ ಲಾಭ ಪಡೆದುಕೊಂಡ ಜಾತಿಗಳ ಜೊತೆಗೆ ಸೇರಿಸದೆ ತಮ್ಮನ್ನು ಪ್ರತ್ಯೇಕ ಗುಂಪಾಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ಆ ಮೂಲಕ ಮಾತ್ರ ಪರಿಶಿಷ್ಟ ಜಾತಿಗೆ ಸಿಗುವ ಮೀಸಲಾತಿಯ ಲಾಭ ತಮಗೂ ಸಿಗುತ್ತದೆ. ಇಲ್ಲದಿದ್ದರೆ ಈಗಾಗಲೇ ಲಾಭ ಪಡೆಯುತ್ತಿರುವ ಜಾತಿಗಳೇ ಅದರ ಲಾಭವನ್ನು ಪಡೆಯುತ್ತಾ ಹೋಗುತ್ತಾರೆ ಎಂಬ ಸಹಜ ಪ್ರಜಾತಾಂತ್ರಿಕ ಆಗ್ರಹ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮಾತ್ರವಲ್ಲದೆ 1960ರ ದಶಕದಲ್ಲಿ ಇತರ ಹಿಂದುಳಿದ ಜಾತಿಗಳಿಗೂ ವಿವಿಧ ರಾಜ್ಯ ಸರಕಾರಗಳು ಪ್ರತ್ಯೇಕ ಮೀಸಲಾತಿಯನ್ನು ಕಲ್ಪಿಸಲು ಪ್ರಾರಂಭಿಸಿದ್ದವು.

ಹಾಗೆ ಇತರ ಹಿಂದುಳಿದ ಜಾತಿಗಳಿಗೆ ಮೀಸಲಾತಿಯನ್ನು ಕಲ್ಪಿಸುವಾಗ ಆ ಎಲ್ಲಾ ಜಾತಿಗಳನ್ನು ಒಂದೇ ಪಟ್ಟಿಯಲ್ಲಿ ಸೇರಿಸಲಿಲ್ಲ. ಬದಲಿಗೆ ಆಯಾ ಜಾತಿ ಪಂಗಡಗಳ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಆಧರಿಸಿ ಆ ಜಾತಿಗಳನ್ನು ವಿವಿಧ ವರ್ಗಗಳಾಗಿ ವಿಂಗಡಿಸಿ ಮೀಸಲಾತಿಯನ್ನು ಕಲ್ಪಿಸಿದವು. ಇದು ಹಿಂದುಳಿದ ಜಾತಿಗಳ ಮೀಸಲಾತಿಯಲ್ಲಿ ಒಳ ಮೀಸಲಾತಿಯೇ ಆಗಿದೆ. ಹೀಗಾಗಿ 1976ರಲ್ಲಿ ಪಂಜಾಬ್ ಮತ್ತು 1994ರಲ್ಲಿ ಹರ್ಯಾಣ ಸರಕಾರಗಳು ತಮ್ಮ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳಮೀಸಲಾತಿಯನ್ನು ಜಾರಿ ಮಾಡಿದವು.

1990ರ ದಶಕದಲ್ಲೇ ಆಂಧ್ರದಲ್ಲಿ ಮಾದಿಗ ಸಮುದಾಯ ಪರಿಶಿಷ್ಟ ಮೀಸಲಾತಿಯಲ್ಲಿ ಒಳಮಿಸಲಾತಿಯನ್ನು ಆಗ್ರಹಿಸಿ ಬೃಹತ್ ಜನಾಂದೋಲನವನ್ನು ಪ್ರಾರಂಭಿಸಿತು. ಹೀಗಾಗಿ 1999-2000ದಲ್ಲಿ ಆಂಧ್ರ ಸರಕಾರ ಪರಿಶಿಷ್ಟ ಮೀಸಲಾತಿಯ ಪುನರ್ ವರ್ಗೀಕರಣ ಕಾಯ್ದೆಯನ್ನು ಮಾಡಿ ಒಳಮೀಸಲಾತಿಯನ್ನು ಜಾರಿ ಮಾಡಿತು. ಈ ಕಾಯ್ದೆಯನ್ನು ಆಂಧ್ರಪ್ರದೇಶದ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರೂ ಕೋರ್ಟ್ ವರ್ಗೀಕರಣವನ್ನು ಎತ್ತಿಹಿಡಿಯಿತು. ಆದರೆ ಹೈಕೋರ್ಟಿನ ಆದೇಶವನ್ನು ಇ.ವಿ. ಚಿನ್ನಯ್ಯ ಎಂಬವರು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದರು. 

ಇ.ವಿ. ಚಿನ್ನಯ್ಯ ಪ್ರಕರಣ ಮತ್ತು ಒಳಮೀಸಲಾತಿ ವಿರೋಧಿ ಸುಪ್ರೀಂ ಆದೇಶ

ಇ.ವಿ. ಚಿನ್ನ್ನಯ್ಯ ಪ್ರಕರಣವನ್ನು ನ್ಯಾ. ಸಂತೋಷ್ ಹೆಗ್ಡೆ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಪರಿಶೀಲಿಸಿತು. ಪರಿಶಿಷ್ಟ ಜಾತಿಗಳಿಗೆ ಸೇರ್ಪಡೆ ಮಾಡಿದ ಮೇಲೆ ಅ ಜಾತಿಗಳನ್ನು ಇನ್ನಷ್ಟು ವರ್ಗೀಕರಣ ಮಾಡಬಹುದೇ ಮತ್ತು ಆ ರೀತಿ ವರ್ಗೀಕರಣ ಮಾಡುವ ಅಧಿಕಾರ ರಾಜ್ಯ ಶಾಸನ ಸಭೆಗಳಿಗೆ ಇದೆಯೇ ಎಂಬ ಎರಡು ಕೀಲಕ ವಿಷಯಗಳ ಬಗ್ಗೆ ಸಾಂವಿಧಾನಿಕ ಪೀಠ 2004ರಲ್ಲಿ ಆದೇಶ ನೀಡಿತು.

ಸುಪ್ರೀಂಕೋರ್ಟ್‌ನ ಆದೇಶದ ಪ್ರಕಾರ ಸಮಾಜದಲ್ಲಿ ಅತ್ಯಂತ ಹಿಂದುಳಿದ ಜಾತಿಗಳು ಎಂಬ ಕಾರಣಕ್ಕಾಗಿಯೇ ಆ ಜಾತಿಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಹೀಗಾಗಿ ಅತ್ಯಂತ ಹಿಂದುಳಿದ ಈ ಜಾತಿಗಳನ್ನು ಇನ್ನಷ್ಟು ವರ್ಗೀಕರಿಸಲಾಗದು ಎಂದು ತೀರ್ಪು ನೀಡುವ ಮೂಲಕ ಒಳಮೀಸಲಾತಿಯ ಪರಿಕಲ್ಪನೆಯನ್ನೇ ಸುಪ್ರೀಂಕೋರ್ಟ್ ನಿರಾಕರಿಸಿತು.

ಇದರ ಜೊತೆಗೆ ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರ್ಪಡೆ ಮತ್ತು ತೆಗೆದುಹಾಕುವುದು ಇತ್ಯಾದಿ ಅಧಿಕಾರಗಳು ಆರ್ಟಿಕಲ್ 341-ಬಿ ಪ್ರಕಾರ ಸಂಸತ್ತಿನದಾಗಿರಬೇಕಾದರೆ ಪರಿಶಿಷ್ಟ ಜಾತಿಗಳ ಒಳವರ್ಗೀಕರಣದ ಅಧಿಕಾರ ರಾಜ್ಯ ಶಾಸನ ಸಭೆಗಳಿಗಿಲ್ಲ ಎಂದು ಕೂಡ ಪೀಠ ಸ್ಪಷ್ಟ ತೀರ್ಪಿತ್ತಿತು. ಪರಿಶಿಷ್ಟ ಮೀಸಲಾತಿಯ ಮರುವರ್ಗೀಕರಣದ ಬಗ್ಗೆ ಸಂವಿಧಾನವು ಮೌನವಾಗಿದ್ದರೂ ಈ ಆದೇಶವು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಆದೇಶವಾಗಿರುವುದರಿಂದ ಸುಪ್ರೀಂ ಆದೇಶವೇ ದೇಶದ ಕಾನೂನಾಯಿತು. ಹೀಗಾಗಿ ಈ ಆದೇಶ ಬಂದ ನಂತರ ಪಂಜಾಬ್, ಹರ್ಯಾಣ ಮತ್ತು ಆಂಧ್ರದ ಮರುವರ್ಗೀಕರಣದ ಕಾಯ್ದೆಗಳು ರದ್ದಾದವು. 

ನ್ಯಾ. ಉಷಾ ಮೆಹ್ರಾ ವರದಿ: ಸಂವಿಧಾನ ತಿದ್ದುಪಡಿ ಮಾಡಿ ಒಳಮೀಸಲಾತಿ

ಆದರೆ ಆನಂತರ ಆಂಧ್ರ ವಿಧಾನ ಸಭೆಯೂ ಒಳಗೊಂಡಂತೆ ಹಲವಾರು ರಾಜ್ಯ ವಿಧಾನ ಸಭೆಗಳ ಒಕ್ಕೊರಲಿನ ಸಲಹೆಯ ಮೇರೆಗೆ, ಸುಪ್ರೀಂ ತೀರ್ಪಿನ ಹಿನ್ನೆಲೆಯಲ್ಲಿ ಒಳಮೀಸಲಾತಿಯನ್ನು ಹೇಗೆ ಜಾರಿಗೆ ತರಬಹುದು ಎಂದು ಅಧ್ಯಯನ ಮಾಡಿ ವರದಿ ನೀಡಲು ಆಗಿನ ಯುಪಿಎ ಸರಕಾರ 2007ರಲ್ಲಿ ನ್ಯಾ. ಉಷಾ ಮೆಹ್ರ ಅವರ ನೇತೃತ್ವದ ಆಯೋಗವನ್ನು ನೇಮಕ ಮಾಡಿತು.

ಆ ಆಯೋಗವು ಆಂಧ್ರವನ್ನೂ ಒಳಗೊಂಡಂತೆ ದೇಶಾದ್ಯಂತ ಅಧ್ಯಯನ ಮಾಡಿ 2008ರಲ್ಲಿ ತನ್ನ ವರದಿಯನ್ನು ನೀಡಿತು. ಆ ವರದಿಯ ಪ್ರಕಾರ ಅ) ಪರಿಶಿಷ್ಟ ಮೀಸಲಾತಿಯ ಪಟ್ಟಿಯಲ್ಲಿ ಮರುವರ್ಗೀಕರಣ ಮಾಡಿ ಈವರೆಗೆ ಮೀಸಲಾತಿ ಲಾಭ ಪಡೆಯದ ಜಾತಿಗಳಿಗೆ ಮೀಸಲಾತಿ ಕಲ್ಪಿಸುವ ಅಗತ್ಯವಿದೆ. ಆ) ಆದರೆ ಅದನ್ನು ಮಾಡಲು ಈಗ ಸಂವಿಧಾನ ಅವಕಾಶ ಮಾಡಿಕೊಡುವುದಿಲ್ಲ. ಇ) ಆದ್ದರಿಂದ ಸಂವಿಧಾನದ ಆರ್ಟಿಕಲ್ 341ಕ್ಕೆ ತಿದ್ದುಪಡಿ ಮಾಡಿ:

ಆಯಾ ರಾಜ್ಯ ಶಾಸನಸಭೆಗಳು ಸರ್ವಸಮ್ಮತಿಯಿಂದ ಮಾಡುವ ಶಿಫಾರಸನ್ನು ಆಧರಿಸಿ ಸಂಸತ್ತು ಪರಿಶಿಷ್ಟ ಮೀಸಲಾತಿಯ ಮರುವರ್ಗೀಕರಣಕ್ಕೆ ಅವಕಾಶ ಮಾಡಿಕೊಡಬಹುದು ಎಂಬ 341(3) ಕಲಮು ಸೇರಿಸುವ ಶಿಫಾರಸು ಮಾಡಿತು. ಒಂದು ಸಂವಿಧಾನ ತಿದ್ದುಪಡಿ ಮಾಡಲು ಬೇಕಾದ ಸಂಖ್ಯಾಬಲ ಯುಪಿಎಗೆ ಲೋಕಸಭೆಯಲ್ಲಿತ್ತಾದರೂ ರಾಜ್ಯ ಸಭೆಯಲ್ಲಿರಲಿಲ್ಲ. ಮೇಲಾಗಿ ಇಂತಹ ತಿದ್ದುಪಡಿಗೆ ಯುಪಿಎಯ ಸದಸ್ಯ ಪಕ್ಷಗಳೇ ಬಂಡಾಯವೇಳುವ ಲಕ್ಷಣವಿತ್ತು. ಕಾಂಗ್ರೆಸ್‌ನೊಳಗೂ ಇದರ ಬಗ್ಗೆ ದೊಡ್ಡ ಕಾಳಜಿ ಅಥವಾ ಉತ್ಸಾಹವಿರದಿದ್ದರಿಂದ ಉಷಾ ಮೆಹ್ರಾ ವರದಿ ಹಾಗೆ ನನೆಗುದಿಗೆ ಬಿದ್ದಿತು. 

ದವಿಂದರ್ ಸಿಂಗ್ ಪ್ರಕರಣ ಮತ್ತು ಬದಲಾಗದ ಒಳಮೀಸಲಾತಿ ನಿಷೇಧ

ಈ ಮಧ್ಯೆ ಪಂಜಾಬ್ ಹಾಗೂ ತಮಿಳುನಾಡುಗಳಲ್ಲಿ ಆಯಾ ರಾಜ್ಯ ಸರಕಾರಗಳು ವಿಶಿಷ್ಟ ರೀತಿಯಲ್ಲಿ ಪರೋಕ್ಷ ಒಳಮೀಸಲಾತಿ ಯನ್ನು ಒದಗಿಸುವ ಪ್ರಯತ್ನವನ್ನು ಮಾಡಿದವು. ತಮಿಳುನಾಡಿನಲ್ಲಿ ಪರಿಶಿಷ್ಟ ಮೀಸಲಾತಿಯನ್ನು ತುಂಬುವಾಗ ದಲಿತರಲ್ಲಿ ದಲಿತರಾದ ಆರುಧತಿಯಾರ್ ಜಾತಿಯವರಿಗೆ ಮೊದಲ ಪಾತಿನಿಧ್ಯವನ್ನು ಕೊಡಬೇಕೆಂದು ತಮಿಳುನಾಡು ಸರಕಾರ ನಿಯಮವನ್ನು ಮಾಡಿತು.

ಹಾಗೆಯೇ ಪಂಜಾಬ್ ಸರಕಾರ 2010ರಲ್ಲಿ ಒಂದು ನಿಯಮವನ್ನು ಮಾಡಿ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ತುಂಬುವಾಗ ಮಜಬಿ ಸಿಖ್ ಸಮುದಾಯಕ್ಕೆ ಹಾಗೂ ವಾಲ್ಮೀಕಿಗಳಿಗೆ ಮೊದಲ ಪ್ರಾಶಸ್ತ್ಯದ ನಿಯಮ ಮಾಡಿತಲ್ಲದೆ ಎಲ್ಲಿಯತನಕ ಈ ಎರಡೂ ಜಾತಿಗಳ ಭರ್ತಿ ಆಗುವುದಿಲ್ಲವೋ ಅಲ್ಲಿಯತನಕ ಇತರ ಪರಿಶಿಷ್ಟ ಜಾತಿಗಳ ಅರ್ಜಿಯನ್ನು ಪರಿಗಣಿಸುವುದನ್ನೂ ನಿರಾಕರಿಸಿತು. ಪಂಜಾಬಿನ ಈ ನೀತಿಯನ್ನು ದವಿಂದರ್ ಸಿಂಗ್ ಎಂಬವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರು. ಇದರ ವಿಚಾರಣೆಯನ್ನು ನ್ಯಾ. ಅರುಣ್ ಮಿಶ್ರಾ ನೇತೃತ್ವದ ಐವರ ನ್ಯಾಯಾಧೀಶರ ಸಂವಿಧಾನ ಪೀಠ ಕೈಗೆತ್ತಿಕೊಂಡು 2020ರಲ್ಲಿ ತನ್ನ ನ್ಯಾಯಾದೇಶ ನೀಡಿತು.

ಈ ಪೀಠ ಚಿನ್ನಯ್ಯ ಆದೇಶಕ್ಕೆ ತದ್ವಿರುದ್ಧವಾದ ತೀರ್ಪನ್ನು ನೀಡಿತು. ಅದರ ಪ್ರಕಾರ ಪರಿಶಿಷ್ಟರ ಮೀಸಲಾತಿ ಪಟ್ಟಿಯನ್ನು ಮರುವರ್ಗೀಕರಣ ಮಾಡುವುದು ನ್ಯಾಯ ಸಮ್ಮತ ಮತ್ತು ಹಾಗೆ ಮರು ವರ್ಗೀಕರಣ ಮಾಡುವ ಅಧಿಕಾರ ರಾಜ್ಯಗಳ ಶಾಸನ ಸಭೆಗಳಿಗಿದೆ. ಇದು ಕೂಡ ಸಾಂವಿಧಾನಿಕ ಪೀಠದ ಆದೇಶವಾಗಿದ್ದರೂ ಅದು ಜಾರಿಗೆ ಬರಲು ಸಾಧ್ಯವಿರಲಿಲ್ಲ. ಏಕೆಂದರೆ ಈ ಹಿಂದೆ 2004ರಲ್ಲಿ ಮರುವರ್ಗೀಕರಣ ಸಾಧ್ಯವಿಲ್ಲ ಎಂದು ತೀರ್ಪಿತ್ತಿದ್ದ ಸಾಂವಿಧಾನಿಕ ಪೀಠವೂ ಐವರು ನ್ಯಾಯಾಧೀಶರ ಪೀಠ.

ಈಗ 2020ರಲ್ಲಿ ಮರುವರ್ಗೀಕರಣ ನ್ಯಾಯ ಸಮ್ಮತ ಎಂದು ತೀರ್ಪಿತ್ತ ಸಾಂವಿಧಾನಿಕ ಪೀಠವೂ ಐವರು ಸದಸ್ಯರ ಪೀಠವೇ. ಐವರು ಸದಸ್ಯರಿದ್ದ ಪೀಠದ ತೀರ್ಪನ್ನು ಮತ್ತೊಂದು ಐವರು ಸದಸ್ಯರ ಪೀಠ ರದ್ದು ಮಾಡಲು ಬರುವುದಿಲ್ಲ. ಆದ್ದರಿಂದ ನ್ಯಾ. ಅರುಣ್ ಮಿಶ್ರಾ ಅವರ ಪೀಠ ಮರುವರ್ಗೀಕರಣ-ಒಳಮೀಸಲಾತಿ ಸಮ್ಮತ ಎಂದು ಆದೇಶ ನೀಡಿದ್ದರೂ ಅದು ಜಾರಿಯಾಗುವುದಿಲ್ಲ. ಆದ್ದರಿಂದ ಈ ಪ್ರಕರಣವನ್ನು ಏಳು ಸದಸ್ಯರ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕೆಂದು ನ್ಯಾ. ಅರುಣ್ ಮಿಶ್ರಾ ಅವರ ಪೀಠ ಮುಖ್ಯ ನ್ಯಾಯಾಧೀಶರಿಗೆ ಮನವಿ ಮಾಡಿದೆ.

ಆದರೆ ಆ ತೀರ್ಪು ಬಂದು ಎರಡು ವರ್ಷಗಳಾದರೂ ಈಗಲೂ ಒಳಮೀಸಲಾತಿಯ ಬಗ್ಗೆ ವಿಚಾರಣೆ ನಡೆಸಲು ಏಳು ಸದಸ್ಯರ ಸಾಂವಿಧಾನಿಕ ಪೀಠವನ್ನು ಸುಪ್ರೀಂ ಕೋರ್ಟ್ ರಚಿಸಿಲ್ಲ. ಹಾಗೂ ಮೋದಿ ಸರಕಾರವೂ ಪೀಠವನ್ನು ತ್ವರಿತವಾಗಿ ರಚಿಸಬೇಕೆಂದು ಸರಕಾರದ ಕಡೆಯಿಂದ ಯಾವುದೇ ಮನವಿ ಮಾಡಿಲ್ಲ.

ಈ ನಡುವೆ 2019ರಲ್ಲಿ ಮೋದಿ ಸರಕಾರವೇ ಯಾರೂ ಕೇಳದಿದ್ದರೂ, ಯಾವ ಹೋರಾಟ ನಡೆಯದಿದ್ದರೂ ಮೇಲ್ಜಾತಿಗಳಿಗಾಗಿ ಮೀಸಲಾತಿ ನೀಡಲು ಸಂವಿಧಾನಕ್ಕೆ ತಿದ್ದುಪಡಿ ಮಾಡಿತು. ಅದನ್ನು 2019ರ ಜನವರಿ 8ರಂದು ಲೋಕಸಭೆಯಲ್ಲೂ, ಜನವರಿ 9ರಂದು ರಾಜ್ಯ ಸಭೆಯಲ್ಲೂ ಮಂಡಿಸಲಾಯಿತು. ಜನವರಿ 12ಕ್ಕೆ ಅದಕ್ಕೆ ರಾಷ್ಟ್ರಪತಿಗಳ ಅನುಮೋದನೆಯೂ ಸಿಕ್ಕಿ ಅದು ಮೂರೇ ದಿನಗಳಲ್ಲಿ ಶಾಸನವಾಗಿ ಜಾರಿಯೂ ಆಗಿಬಿಟ್ಟಿತು.

ಇಂಥದೇ ಪ್ರಕ್ರಿಯೆಯನ್ನು ಒಳಮೀಸಲಾತಿಗೂ ಅನ್ವಯಿಸಿದ್ದರೆ ಈ ವೇಳೆಗಾಗಲೇ ಒಳಮೀಸಲಾತಿ ಶಾಸನವಾಗುತ್ತಿತ್ತು. ಬಿಜೆಪಿ ಮತ್ತು ಮೋದಿ ಸರಕಾರಕ್ಕೆ ಮೇಲ್ಜಾತಿಗಳಿಗೆ ಮೀಸಲಾತಿ ಕೊಡಿಸಲು ಇರುವ ಉತ್ಸಾಹ ಮತ್ತು ಕ್ರಿಯಾಶೀಲತೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಸಂವಿಧಾನ ತಿದ್ದುಪಡಿ ಮಾಡಲು ಇಲ್ಲ ಎಂಬುದನ್ನಷ್ಟೆ ಇದು ಸ್ಪಷ್ಟಪಡಿಸುತ್ತದೆ. ಅದರ ಬದಲಿಗೆ ಕರ್ನಾಟಕದಲ್ಲಂತೂ ಬಿಜೆಪಿ ಈ ವಿಷಯದಲ್ಲಿ ಅತ್ಯಂತ ನಯವಂಚನೆಯ ದಾರಿ ಹಿಡಿದಿದ್ದರೆ ಕಾಂಗ್ರೆಸ್ ಆದಿಯಾಗಿ ಇತರ ಎಲ್ಲಾ ವಿರೋಧ ಪಕ್ಷಗಳು ಅದಕ್ಕೆ ಮೌನ ಸಮ್ಮತಿ ನೀಡುತ್ತಿವೆ.

ಸದಾಶಿವ ಆಯೋಗ:

ಒಳಮೀಸಲಾತಿಯ ಬಗ್ಗೆ ಶಿಫಾರಸು ಮಾಡಲು ಕಾಂಗ್ರೆಸ್-ಜೆಡಿಎಸ್ ಸರಕಾರ 2005ರಲ್ಲಿ ರಚಿಸಿದ್ದ ಸದಾಶಿವ ಆಯೋಗವು ಸರಕಾರಕ್ಕೆ 2012ರಲ್ಲೆ ವರದಿ ನೀಡಿತ್ತು. ಆಗ ಆಯೋಗವು ನೀಡಿದ ಪತ್ರಿಕಾ ಹೇಳಿಕೆಯನ್ನು ಬಿಟ್ಟರೆ ಅದರ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಮಾಹಿತಿಯನ್ನು ಸರಕಾರ ಬಿಡುಗಡೆ ಮಾಡಿಲ್ಲ. 2018ರ ರಾಜ್ಯ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ಮತ್ತೊಮ್ಮೆ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರಬೇಕೇ ಬೇಡವೇ ಎಂಬ ವಿವಾದಗಳು ಭುಗಿಲೆದ್ದಾಗ, ಕೆಲವು ಆಸಕ್ತರು ವರದಿಯ ಪೂರ್ಣಪಾಠವನ್ನು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಮಾಡಿದರು.

ಆಗ ಮಾತ್ರ ವರದಿಯ ಸಮಗ್ರ ಸ್ವರೂಪ ಸಾಕಷ್ಟು ಜನರ ಗಮನಕ್ಕೆ ಬಂದಿತು. ಸರಕಾರವು ಕೂಡಾ ಜನರ ನಡುವೆ ಚರ್ಚೆಯಲ್ಲಿದ್ದ ಈ ವರದಿಯ ಅಧಿಕೃತತೆಯನ್ನು ಈವರೆಗೆ ನಿರಾಕರಿಸಿಲ್ಲ. ಹೀಗಾಗಿ ಸರಕಾರವು ಸದಾಶಿವ ಆಯೋಗದ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡುವ ತನಕ ಇದನ್ನೇ ಅಧಿಕೃತ ಎಂದು ಭಾವಿಸುವುದರಲ್ಲಿ ಅಪಾಯವೇನಿಲ್ಲ. ಮೊದಲನೆಯದಾಗಿ ಈ ಸೋರಿದ ಸದಾಶಿವ ಆಯೋಗದ ವರದಿಯು ಯಾವ್ಯಾವ ಶಿಫಾರಸು ಮಾಡಿದೆ ಮತ್ತು ಮಾಡಿಲ್ಲ ಎಂಬುದನ್ನು ಗಮನಿಸಬೇಕು.

ಸದಾಶಿವ ಆಯೋಗದಲ್ಲಿ ಹೇಳಿರುವುದು ಮತ್ತು ಹೇಳದಿರುವುದು:

1) ಕರ್ನಾಟಕದಲ್ಲಿ ಈಗಾಗಲೇ ಪರಿಶಿಷ್ಟ ಜಾತಿ ಎಂದು ವರ್ಗೀಕರಣಗೊಂಡಿರುವ (101 ಜಾತಿಗಳಲ್ಲಿ) ಯಾವ ಜಾತಿಗಳನ್ನು ಆ ಪಟ್ಟಿಯಿಂದ ಹೊರಹಾಕಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತದೆ.

ಏಕೆಂದರೆ ಪರಿಶಿಷ್ಟ ಪಟ್ಟಿಗೆ ಸೇರಿಸುವ ಅಥವಾ ಕಿತ್ತುಹಾಕುವ ಶಾಸನಾತ್ಮಕ ಅಧಿಕಾರ ಇರುವುದು ದೇಶದ ಸಂಸತ್ತಿಗೇ ವಿನಾ ರಾಜ್ಯಗಳ ವಿಧಾನಸಭೆಗಳಿಗೆ ಅಂತಹ ಅಧಿಕಾರವಿಲ್ಲ. ಹೀಗಾಗಿ ಕರ್ನಾಟಕದ ಪರಿಶಿಷ್ಟ ಜಾತಿ ಪಟ್ಟಿಯಿಂದ ಸ್ಪೃಶ್ಯ ಜಾತಿಗಳಾದ ಲಂಬಾಣಿ, ಭೋವಿ, ಕೊರಮ, ಕೊರಚ ಜಾತಿಗಳನ್ನು ಎಸ್‌ಸಿ ಪಟ್ಟಿಯಿಂದ ಹೊರಗಿಡಲು ಸದಾಶಿವ ಆಯೋಗವು ಸಲಹೆ ಮಾಡಿದೆ ಎಂಬ ಪುಕಾರಿನಲ್ಲಿ ಯಾವುದೇ ಹುರುಳಿಲ್ಲ. 2) ಆಯೋಗವು ಎಸ್‌ಸಿ ಪಟ್ಟಿಯೊಳಗಿರುವ 101 ಜಾತಿಗಳನ್ನು 4 ವಿಭಾಗಗಳನ್ನಾಗಿ ವಿಂಗಡಿಸಿದೆ.

ಅ) ದಲಿತ ಸಮುದಾಯದ ಶೇ.33.47ರಷ್ಟು ಜನಸಂಖ್ಯೆ ಹೊಂದಿರುವ ಮಾದಿಗ (ಎಡಗೈ) ಮತ್ತು ಇತರ 29 ಉಪಜಾತಿಗಳು. ಆ) ದಲಿತ ಸಮುದಾಯದ ಶೇ.32.01ರಷ್ಟು ಜನಸಂಖ್ಯೆ ಇರುವ ಹೊಲೆಯ (ಬಲಗೈ) ಮತ್ತು ಇತರ 24 ಉಪಜಾತಿಗಳು. ಇ) ದಲಿತ ಸಮುದಾಯದ ಶೇ.4.65ರಷ್ಟಿರುವ ಮತ್ತು ಎಡಗೈ ಅಥವಾ ಬಲಗೈ ವರ್ಗಕ್ಕೆ ಸೇರದ ಅಸ್ಪೃಶ್ಯ ಜಾತಿಗಳು ಮತ್ತು ಈ) ದಲಿತ ಸಮುದಾಯದ ಭಾಗವಾಗಿ ಪರಿಗಣಿಸಲ್ಪಟ್ಟಿರುವ ಶೇ.23.64ರಷ್ಟು ಜನಸಂಖ್ಯೆಯನ್ನು ಹೊಂದಿರುವ (ಲಂಬಾಣಿ, ಭೋವಿ, ಕೊರಮ, ಕೊರಚ...) ಸ್ಪೃಶ್ಯ ಜಾತಿಗಳು.

3) ಆಯೋಗದ ವರದಿಯ ಪ್ರಕಾರ ಸರಕಾರಿ ಯೋಜನೆಗಳ ಫಲಾನುಭವಿಗಳಲ್ಲಿ ಮಾದಿಗರಿಗಿಂತ ಹೊಲೆಯರು ಹೆಚ್ಚಾಗಿದ್ದಾರೆ. ಆದರೆ ಕೆಲವು ನಿರ್ದಿಷ್ಟ ಜಿಲ್ಲೆಗಳಲ್ಲಿ ಇದರಲ್ಲಿ ಸ್ವಲ್ಪಏರುಪೇರೂ ಇದೆ. ಹೊಲೆಯ ಮತ್ತು ಮಾದಿಗ ಸಮುದಾಯಗಳಿಗೆ ಸೇರದ ವರ್ಗೀಕರಣ 3ರಲ್ಲಿರುವ ಇತರ ಅಸ್ಪೃಶ್ಯ ಜಾತಿಗಳಿಗೆ ಎಲ್ಲರಿಗಿಂತಲೂ ಅತ್ಯಂತ ಕಡಿಮೆ ಸೌಲಭ್ಯಗಳುಮತ್ತು ಪ್ರಾತಿನಿಧ್ಯಗಳು ದಕ್ಕಿವೆ.

4) ಹೀಗಾಗಿ ದಲಿತ ಸಮುದಾಯಕ್ಕೆ ನೀಡಲಾಗಿರುವ ಶೇ.15ರಷ್ಟು ಮೀಸಲಾತಿಯನ್ನು ಮೇಲಿನ ಜನಸಂಖ್ಯಾ ಪ್ರಮಾಣಕ್ಕನುಸಾರವಾಗಿ ವರ್ಗೀಕರಿಸಬೇಕೆಂದು ಸದಾಶಿವ ಆಯೋಗವು ಶಿಫಾರಸು ಮಾಡಿದೆ.

5) ಆದರೆ ಸರಕಾರದಲ್ಲಿ ಒಟ್ಟಾರೆ ಲಭ್ಯವಿರುವ ಉದ್ಯೋಗ ಮತ್ತು ಶಿಕ್ಷಣಾವಕಾಶಗಳ ಹೋಲಿಕೆಯಲ್ಲಿ ಹೊಲೆಯರಿಗೆ ಹೆಚ್ಚೆಂದರೆ ಶೇ.2.5ರಷ್ಟು ಮತ್ತು ಮಾದಿಗರಿಗೆ ಶೇ.1.5ರಷ್ಟು ಮಾತ್ರ ದಕ್ಕಿದೆ. ಇನ್ನು ಉನ್ನತ ಶಿಕ್ಷಣದಲ್ಲಿ ಹೊಲೆಯ ಮತ್ತು ಮಾದಿಗ ಎರಡೂ ಸಮುದಾಯಗಳಿಗೂ ಒಟ್ಟು ಸೇರಿ ಅವರ ಜನಸಂಖ್ಯೆಯ ಶೇ.5ರಷ್ಟು ಮಾತ್ರ ಪ್ರಾತಿನಿಧ್ಯ ಸಿಕ್ಕಿದೆ. ಹೀಗಾಗಿ ಹೊಲೆಯ-ಮಾದಿಗರ ನಡುವಿನ ಅವಕಾಶಗಳಲ್ಲಿ ವ್ಯತ್ಯಾಸಗಳಿದ್ದರೂ ಒಟ್ಟಾಗಿ ನೋಡಿದರೆ ಮೀಸಲಾತಿ ಸೌಲಭ್ಯವು ಆ ಸಮುದಾಯಗಳ ಬಹುದೊಡ್ಡ ಜನಸಂಖ್ಯೆಗೆ ಇನ್ನೂ ತಲುಪೇ ಇಲ್ಲ.

ಇದು ಮೀಸಲಾತಿಯ ಮಿತಿಗಳನ್ನು ಅದರಲ್ಲೂ ಸರಕಾರಿ ಉದ್ಯೋಗ, ಶಿಕ್ಷಣ ಎಲ್ಲವೂ ಖಾಸಗೀಕರಣವಾಗುತ್ತಿರುವ ಸಂದರ್ಭದಲ್ಲಿ ಮೀಸಲಾತಿಯ ಸೀಮಿತತೆಯನ್ನೂ ಸಹ ವಿವರಿಸುತ್ತದೆ.

ಸದಾಶಿವ ಆಯೋಗವನ್ನು ರಾಜ್ಯ ಸರಕಾರ ಜಾರಿ ಮಾಡುವ ಅಧಿಕಾರವಿದೆಯೇ?

ಇಲ್ಲ. ರಾಜ್ಯ ಸರಕಾರಕ್ಕೆ ಈಗಿರುವ ಕಾನೂನಿನ ಪ್ರಕಾರ ಸದಾಶಿವ ಆಯೋಗದ ಶಿಫಾರಸಿನಂತೆ ರಾಜ್ಯದ ಪರಿಶಿಷ್ಟ ವರ್ಗದ ಪಟ್ಟಿಯನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ, ಅದರ ಆಧಾರದಂತೆ ಒಳ ಮೀಸಲಾತಿಯನ್ನು ಕೊಡುವ ಅಧಿಕಾರವಿಲ್ಲ.

ಏಕೆಂದರೆ ಈಗಾಗಲೇ ಚಿನ್ನಯ್ಯ ಪ್ರಕರಣದಲ್ಲಿ 2004ರಲ್ಲೇ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಅಂತಹ ಅಧಿಕಾರ ಕೇವಲ ಸಂಸತ್ತಿಗಿದೆಯೇ ವಿನಾ ರಾಜ್ಯ ಸರಕಾರಗಳಿಗಿಲ್ಲ ಎಂದು ಸ್ಪಷ್ಟಪಡಿಸಿದೆ. 2020ರಲ್ಲಿ ಮತ್ತೊಂದು ಸುಪ್ರೀಂ ಪೀಠ ರಾಜ್ಯ ಸರಕಾರಗಳಿಗೆ ಅಧಿಕಾರವಿದೆ ಎಂದು ತೀರ್ಪಿತ್ತರೂ ಅದು ಕೂಡ ಐವರು ನ್ಯಾಯಾಧೀಶರ ಪೀಠವೇ ಆದ್ದರಿಂದ ಆ ತೀರ್ಪು ಜಾರಿಗೆ ಬರಲ್ಲ. ಹೀಗಾಗಿ ಹಾಲಿ ಇರುವ ಪರಿಸ್ಥಿತಿಯ ಪ್ರಕಾರ ಸದಾಶಿವ ವರದಿಯನ್ನು ಬೊಮ್ಮಾಯಿ ಸರಕಾರ ಜಾರಿಗೆ ತರಲಾಗದು.

ಆದ್ದರಿಂದ ಸದಾಶಿವ ವರದಿಯನ್ನು ಜಾರಿಗೆ ತನ್ನಿ ಎಂದು ರಾಜ್ಯ ಸರಕಾರವನ್ನು ಉದ್ದೇಶಿಸಿ ಆಗ್ರಹಿಸುವುದು ಅರ್ಥಹೀನ. ಬಿಜೆಪಿ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುತ್ತೇವೆ ಎಂದು ಹೇಳುವುದು ಜನರನ್ನು ಮರುಳು ಮಾಡುವ ಮಹಾ ವಂಚನೆ. ಆದರೆ ಖಂಡಿತವಾಗಿ ಸದಾಶಿವ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಬೇಕೆಂದೂ ಹಾಗೂ ಅದರ ಬಗ್ಗೆ ಬಹಿರಂಗ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದೂ ಮತ್ತು ಕರ್ನಾಟಕ ವಿಧಾನ ಸಭೆಯು ಒಕ್ಕೊರಲಿಂದ ಒಳಮೀಸಲಾತಿಗೆ ಆಗ್ರಹಿಸಿ ಗೊತ್ತುವಳಿ ಸ್ವೀಕರಿಸಬೇಕೆಂದು ಆಗ್ರಹಿಸಬೇಕು.

 ಹಾಗಿದ್ದಲ್ಲಿ ಒಳಮೀಸಲಾತಿ ಜಾರಿಗೆ ದಾರಿ ಏನು?

ಈ ಹಿನ್ನೆಲೆಯಲ್ಲಿ ಒಳಮೀಸಲಾತಿ ಜಾರಿಗೆ ಇರುವುದು ಎರಡೇ ಮಾರ್ಗ. ಒಂದು ಕೇಂದ್ರ ಸರಕಾರ ಒಳಮೀಸಲಾತಿಯ ಬಗ್ಗೆ ವಿಚಾರಣೆ ನಡೆಸಿ ಸಾಂವಿಧಾನಿಕ ತೀರ್ಪು ಕೊಡಲು ಏಳು ನ್ಯಾಯಾಧೀಶರ ಸಾಂವಿಧಾನಿಕ ಪೀಠವನ್ನು ತ್ವರಿತವಾಗಿ ರಚಿಸಲು ಆಗ್ರಹಿಸಬೇಕು. ಅದೂ ಬಿಜೆಪಿ ಮತ್ತು ಮೋದಿ ಸರಕಾರದ ಕೈಯಲ್ಲೇ ಇದೆ. ಎರಡನೆಯದು ರಾಜಮಾರ್ಗ. ಪ್ರಜಾತಾಂತ್ರಿಕ ಮಾರ್ಗ. ಸಂಸತ್ತಿನಲ್ಲಿ ಒಳಮೀಸಲಾತಿಯ ಪರವಾಗಿ ಒಂದು ಸಂವಿಧಾನ ತಿದ್ದುಪಡಿಯನ್ನು ಜಾರಿ ಮಾಡಿ ಸಂವಿಧಾನದ ಆರ್ಟಿಕಲ್ 341(3) ಕಲಮನ್ನು ಸೇರಿಸಿ ರಾಜ್ಯ ಸರಕಾರಗಳಿಗೆ ಒಳಮೀಸಲಾತಿಯ ಅಧಿಕಾರವನ್ನು ಶಾಸನ ಮಾಡುವುದು.

ಇದೂ ಬಿಜೆಪಿ ಮತ್ತು ಮೋದಿ ಸರಕಾರದ ಕೈಯಲ್ಲಿದೆ. ಬಿಜೆಪಿ ಸರಕಾರ, ಸಂವಿಧಾನದ ಆಶಯಗಳಿಗೆ ಎಷ್ಟೇ ವಿರೋಧವಾಗಿದ್ದರೂ EWS ಮಸೂದೆಯನ್ನು ಕಾಯ್ದೆಯಾಗಿಸಲು ಸಾಧ್ಯವಾದದ್ದು ಲೋಕಸಭೆಯಲ್ಲಿ ಮತ್ತು ರಾಜ್ಯ ಸಭೆಯಲ್ಲಿ ಆ ಪಕ್ಷಕ್ಕೆ ಮತ್ತದರ ಮಿತ್ರ ಪಕ್ಷಕ್ಕೆ ಮಸೂದೆಯನ್ನು ಪಾಸು ಮಾಡಿಸಿಕೊಳ್ಳುವಷ್ಟು ಸಂಖ್ಯಾ ಬಲ ಇದ್ದದ್ದಕ್ಕೆ ಮತ್ತು ಮೇಲ್ಜಾತಿಗಳ ಪರವಾಗಿ ಬಿಜೆಪಿಗೆ ಮಮಕಾರವಿದ್ದಿದ್ದಕ್ಕೆ.

ಅದರೆ ಬಿಜೆಪಿ ಮತ್ತು ಮೋದಿ ಸರಕಾರ EWS ಮಸೂದೆಯನ್ನು ಕಾಯ್ದೆಯಾಗಿಸಲು ತೋರಿದ ರಾಜಕೀಯ ಉತ್ಸಾಹವನ್ನು ಒಳಮೀಸಲಾತಿ ಜಾರಿಗೇಕೆ ತೋರುತ್ತಿಲ್ಲ? ಈಗಲೂ ಒಳಮೀಸ ಲಾತಿಯ ಪರವಾಗಿ ಸಂವಿಧಾನ ತಿದ್ದುಪಡಿ ತರಲು ಬೇಕಾದಷ್ಟು ಸಂಖ್ಯಾ ಬಲ ಬಿಜೆಪಿಗೆ ಇದೆ. ಆದರೆ ಮೀಸಲಾತಿ ವಂಚಿತರ ಪರವಾದ ಮಮಕಾರವಿದೆಯೇ ಎಂಬುದು ಪ್ರಮುಖ ರಾಜಕೀಯ ಪ್ರಶ್ನೆ. ಬಿಜೆಪಿ ಮೊದಲಿಂದಲೂ ಮೀಸಲಾತಿ ವಿರೋಧಿ. ಅದರಲ್ಲೂ ಜಾತಿ ಆಧಾರಿತ ಶೋಷಣೆಯನ್ನೇ ಅದು ನಿರಾಕರಿಸುವುದರಿಂದ ಅದನ್ನು ನೆನಪಿಸುವ ಜಾತಿ ಆಧಾರಿತ ಮೀಸಲಾತಿಗೆ ಮೊದಲಿಂದಲೂ ವಿರೋಧ. ಆದರೂ ಕೇವಲ ಚುನಾವಣಾ ರಾಜಕಾರಣಕ್ಕಾಗಿ ಒಳಮೀಸಲಾತಿಯ ಬಗ್ಗೆ ಹುಸಿ ಕಾಳಜಿಯನ್ನು ತೋರುತ್ತಾ ದಲಿತ ಸಮುದಾಯವನ್ನು ಒಳಗಿಂದ ಒಡೆಯುವ ಮಸಲತ್ತು ಮಾಡುತ್ತಿದೆ. ಆದರೆ ದಲಿತ ಸಮುದಾಯ ಮತ್ತು ಈ ನಾಡಿನ ನ್ಯಾಯವಂತ ಸಮಾಜ ಸದಾಶಿವ ವರದಿ ಜಾರಿ ಮಾಡುತ್ತೇವೆ ಎಂದೋ, ಸದಾಶಿವ ವರದಿಯನ್ನು ಕೇಂದ್ರದ ಗಮನಕ್ಕೆ ತರುತ್ತೇವೆ ಎಂದೋ ಮರುಳು ಮಾಡುವ ಬಿಜೆಪಿಗರ ಹುಸಿ ಆಸ್ವಾಸನೆಗಳನ್ನು ಧಿಕ್ಕರಿಸಬೇಕು.

 EWS  ಮತ್ತು ಮಸೂದೆಯ ರೀತಿಯಲ್ಲೇ ಈಗ ನಡೆಯುತ್ತಿರುವ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲೇ ಒಳಮೀಸಲಾತಿಯ ಪರವಾಗಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸುವಂತೆ ಆಗ್ರಹಿಸಬೇಕು ಹಾಗೂ ಉಳಿದೆಲ್ಲಾ ಪಕ್ಷಗಳು ಅ ಮಸೂದೆಯ ಪರವಾಗಿ ಮತ ಚಲಾಯಿಸಬೇಕೆಂದು ಆಗ್ರಹಿಸಬೇಕು. ಅದನ್ನು ಬಿಟ್ಟು ಬಿಜೆಪಿ ಮಾಡುವ ಅಥವಾ ಕೊಡುವ ಯಾವುದೇ ಭರವಸೆಗಳು ಮತ್ತೊಮ್ಮೆ ವಂಚಿತ ಸಮುದಾಯಕ್ಕೆ ಮಾಡುವ ಮಹಾದ್ರೋಹವೇ ಆಗಿರುತ್ತದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top