ನ್ಯಾಯಾಧೀಶರನ್ನು ಕೂಡ ಸರಕಾರವೇ ನೇಮಿಸುವುದಾದರೆ ಸಂವಿಧಾನವೇಕೆ?
-

ರಾಷ್ಟ್ರಪತಿ ನಾರಾಯಣನ್ ಅವರು ಉನ್ನತ ನ್ಯಾಯಾಂಗದಲ್ಲಿ ಸರಿಯಾದ ಸಾಮಾಜಿಕ ಪ್ರಾತಿನಿಧ್ಯವನ್ನು ಖಾತರಿಗೊಳಿಸಬೇಕೆಂದು ಆಗಿನ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾ. ಜೆ.ಎಸ್. ಆನಂದ್ ಅವರಿಗೆ ಪತ್ರ ಬರೆದಿದ್ದರು. ಆದರೆ ಸಿಜೆಐ ಆನಂದ್ ಅವರು ಸಂವಿಧಾನ ತಮಗೆ ಪ್ರತಿಭೆಯನ್ನು ಮಾತ್ರ ಮಾನದಂಡವನ್ನಾಗಿ ಪರಿಗಣಿಸಬೇಕೆಂದು ಮಾರ್ಗ ದರ್ಶನ ನೀಡಿದೆಯೆಂದೂ ತಾವು ಅದನ್ನು ಮಾತ್ರ ಪಾಲಿಸುವುದಾಗಿ, ಸಂವಿಧಾನದ ಅಪವ್ಯಾಖ್ಯಾನ ಮಾಡಿ, ಉತ್ತರಿಸಿದ್ದರು.
ಇದಲ್ಲದೆ ಕೊಲಿಜಿಯಂ ವ್ಯವಸ್ಥೆಯಲ್ಲಿ ಯಾವುದಾದರೂ ನ್ಯಾಯಾಧೀಶರನ್ನು ಅಯ್ಕೆ ಮಾಡಿದಾಗ ಅಥವಾ ತಿರಸ್ಕರಿಸಿದಾಗ ಯಾವ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ ಎಂಬುದು ಕೂಡ ಪ್ರಜಾತಾಂತ್ರಿಕವಾಗಿ ಸಾರ್ವಜನಿಕ ವಿಚಕ್ಷಣೆಗೆ ಒಳಪಡುವುದಿಲ್ಲ.
ಇಂತಹ ಹಲವು ಲೋಪದೋಷಗಳು ಕೊಲಿಜಿಯಂ ಪದ್ಧತಿಯಲ್ಲಿರುವುದು ನಿಜ ಮತ್ತು ಅವೆಲ್ಲವೂ ಆದಷ್ಟು ಬೇಗ ಸುಧಾರಣೆಗೊಳ್ಳಬೇಕಿದೆ. ಆದರೆ ಈ ಲೋಪದೋಷಗಳನ್ನು ನೆಪವಾಗಿಟ್ಟುಕೊಂಡು ಮೋದಿ ಸರಕಾರ ಜಾರಿಗೆ ತಂದ ಬದಲಾವಣೆ ಮಾತ್ರ ರೋಗಕ್ಕಿಂತ ಔಷಧಿಯೇ ಹೆಚ್ಚು ಮಾರಕ ಎಂಬಂತಿತ್ತು.
NJAC- ರೋಗಕ್ಕಿಂತ ಔಷಧಿಯೇ ಮಾರಕ!
ಕೊಲಿಜಿಯಂ ವ್ಯವಸ್ಥೆಯಲ್ಲಿರುವ ಮೇಲಿನ ಎಲ್ಲ ನೈಜ ಲೋಪದೋಷಗಳನ್ನು ನೆಪವಾಗಿರಿಸಿಕೊಂಡು ಮೋದಿ ಸರಕಾರ ಉನ್ನತ ನ್ಯಾಯಾಧೀಶರನ್ನು ನೇಮಕ ಮಾಡುವ ಆಯೋಗವನ್ನು-NJAC ಸ್ಥಾಪಿಸುವ ೯೯ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ೨೦೧೪ರಲ್ಲಿ ಸಂಸತ್ತಿನಲ್ಲಿ ಮಂಡಿಸಿತ್ತು. ಇದನ್ನು ಹೆಚ್ಚುಕಡಿಮೆ ಎಲ್ಲಾ ಪಕ್ಷಗಳು ಸರ್ವಸಮ್ಮತಿಯಿಂದ ಪಾಸು ಮಾಡಿ ಅದು ಕಾಯ್ದೆಯೂ ಆಯಿತು. ಆದರೆ ಈ NJACಯು ಸಂವಿಧಾನದ ಮೂಲ ಆಶಯಗಳಿಗೆ ಮತ್ತು ಮೂಲ ರಚನೆಗೆ ವ್ಯತಿರಿಕ್ತವಾಗಿದೆಯೆಂದು ಅದರ ವಿರುದ್ಧ ದಾವೆಯು ದಾಖಲಾಗಿ ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠ ಅದರ ವಿಚಾರಣೆ ನಡೆಸಿತು.
ಮೋದಿ ಸರಕಾರದ NJAC ಪ್ರಕಾರ ಆಯೋಗದಲ್ಲಿ ೬ ಜನ ಸದಸ್ಯರಿರುತ್ತಾರೆ. ಅದರಲ್ಲಿ ಒಬ್ಬರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಮತ್ತು ಇಬ್ಬರು ಹಿರಿಯ ನ್ಯಾಯಾಧೀಶರು. ನಾಲ್ಕನೆಯವರು ಕೇಂದ್ರದ ಕಾನೂನು ಮಂತ್ರಿ. ಇನ್ನಿಬ್ಬರು ‘ಗಣ್ಯ’ ವ್ಯಕ್ತಿಗಳು!
ಈ ಗಣ್ಯ ವ್ಯಕ್ತಿಗಳ ಗಣ್ಯತೆಯನ್ನು ಅಳೆಯುವ ಮಾನದಂಡಗಳೇನು ಎಂಬುದು ಕಾಯ್ದೆ ಸ್ಪಷ್ಟಪಡಿಸಿಲ್ಲ. ಅವರಿಬ್ಬರನ್ನು ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಿರುವ ಸಮಿತಿ ಆಯ್ಕೆ ಮಾಡುತ್ತದೆಯೆಂದು ಕಾಯ್ದೆ ಹೇಳುತ್ತದೆ. ಸುಪ್ರೀಂ ಕೋರ್ಟಿನಲ್ಲಿ ಇದರ ಬಗ್ಗೆ ವಾದ ಮಾಡುವಾಗ ಮೋದಿ ಸರಕಾರ ಈ ಗಣ್ಯರಿಗೆ ಕಾನೂನು ಮತ್ತು ಕೋರ್ಟ್‌ಗಳ ಪರಿಣಿತಿ ಇರುವ ಅಗತ್ಯವೇನೂ ಇಲ್ಲ ಎಂದು ವಾದಿಸಿತ್ತು.
ಆರು ಜನ ಸದಸ್ಯರ ಅಯೋಗದಲ್ಲಿ ಸಭೆ ನಡೆಯುವ ಕೋರಂ ಏನು ಎಂದು ಕಾಯ್ದೆ ಹೇಳುವುದಿಲ್ಲ. ಸಭೆಯಲ್ಲಿ ಭಿನ್ನಮತವಿದ್ದಾಗ ತೀರ್ಮಾನವನ್ನು ಬಹುಸಂಖ್ಯಾತ ಅಭಿಪ್ರಾಯದ ಮೇರೆಗೆ ತೆಗೆದುಕೊಳ್ಳುವುದು ಪ್ರಜಾತಾಂತ್ರಿಕ ವಾಡಿಕೆ.
ಆದರೆ NJAC ಕಾಯ್ದೆಯ ೫(೨)ರ ಪ್ರಕಾರ ‘‘ಆರು ಸದಸ್ಯರಲ್ಲಿ ಯಾವುದೇ ಇಬ್ಬರು ಸದಸ್ಯರು ಯಾವುದಾದರೂ ನೇಮಕಾತಿಯನ್ನು ವಿರೋಧಿಸಿದರೂ ಅಂಥವರು ನೇಮಕವಾಗುವಂತಿಲ್ಲ’’ ಎಂಬ ವಿಟೊ ಅಧಿಕಾರವನ್ನು ಕೊಡಲಾಗಿದೆ. ಈ ವಿಟೊ ಆಧಿಕಾರ ಸರಕಾರ ನೇಮಿಸುವ ‘ಇಬ್ಬರು ಗಣ್ಯ’ರಿಗೂ ಇರುತ್ತದೆ! ಅಂದರೆ ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಾಧೀಶರು ಸಮ್ಮತಿಯಿಂದ ಮಾಡುವ ಶಿಫಾರಸನ್ನು ಸರಕಾರದಿಂದ ನೇಮಕವಾದವರು ವಿಟೊ ಮಾಡಿ ನಿಲ್ಲಿಸಬಹುದು.
ಹೈಕೋರ್ಟ್ ನ್ಯಾಯಾಧೀಶರನ್ನು ನೇಮಕ ಮಾಡುವಾಗ ಅಲ್ಲಿನ ಮುಖ್ಯಮಂತ್ರಿಗಳು ಹಾಗೂ (ಕೇಂದ್ರ ಸರಕಾರವೇ ನೇಮಕ ಮಾಡಿರುವ) ರಾಜ್ಯಪಾಲರ ಅಭಿಪ್ರಾಯವನ್ನು ಅಯೋಗವು ತೆಗೆದುಕೊಳ್ಳಬೇಕಿರುವುದು ಕಡ್ಡಾಯವಂತೆ!
ಹೀಗಾಗಿ NJAC ಎಂಬುದು ಉನ್ನತ ನ್ಯಾಯಾಧೀಶರ ನೇಮಕಾತಿಯಲ್ಲಿ ಮೋದಿ ಸರಕಾರದ ವಿಟೊ ಅಧಿಕಾರವಿರುವಂತೆ ನೋಡಿಕೊಳ್ಳುವ ವ್ಯವಸ್ಥೆಯೇ ಆಗಿತ್ತು.
ಇದಲ್ಲದೆ ಉನ್ನತ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಪಟ್ಟಂತೆ ಸೇವಾ ಹಿರಿತನ, ವಯಸ್ಸು, ಆರೋಗ್ಯ, ಸಾಮರ್ಥ್ಯಗಳಲ್ಲದೆ ಇನ್ನಿತರ ನಿಯಮಗಳನ್ನು ಸಂಸತ್ತು ಮಾಡಬಹುದೆಂಬ ಅವಕಾಶವನ್ನು ಕಾಯ್ದೆ ಮಾಡಿಕೊಡುತ್ತದೆ. ಅಂದರೆ ಕಾಲಕಾಲಕ್ಕೆ ಆಯಾ ಸರಕಾರದ ರಾಜಕೀಯ ಮತ್ತು ಸಿದ್ಧಾಂತಗಳಿಗನುಸಾರವಾಗಿ ಇರುವ ಜಡ್ಜ್‌ಗಳು ಮಾತ್ರ ನೇಮಕಾತಿಯಾಗುತ್ತಾರೆ.
ಉದಾಹರಣೆಗೆ ಮೋದಿ ಸರಕಾರವು ಉನ್ನತ ನ್ಯಾಯಾಧೀಶರು ಭಾರತದ ಇತಿಹಾಸ ಮತ್ತು ರಾಷ್ಟ್ರೀಯ ಪರಂಪರೆಯನ್ನು ಗೌರವಿಸುವ ಇತಿಹಾಸ ಹೊಂದಿರಬೇಕು ಎಂಬ ನಿಯಮವನ್ನು ಯಾವುದೇ ವಿವರಣೆ ಇಲ್ಲದೆ ಸಂಸತ್ತಿನಲ್ಲಿ ತನಗಿರುವ ಬಹುಮತ ಬಳಸಿಕೊಂಡು ಸೇರಿಸಿದರೆ, ಈ ದೇಶದಲ್ಲಿ ಹಿಂದುತ್ವ, ಬ್ರಾಹ್ಮಣ್ಯವನ್ನು ವಿರೋಧಿಸುವ ಯಾರೂ ಜಡ್ಜ್ ಗಳಾಗಿ ಆಯ್ಕೆಯಾಗದಂತೆ ಕಾನೂನು ಮಂತ್ರಿ ಮತ್ತು ಗಣ್ಯರು ಆಯೋಗದ ಸಭೆಯಲ್ಲಿ ವಿಟೊ ಚಲಾಯಿಸಿ ನೋಡಿಕೊಳ್ಳಬಹುದು.
ಹೀಗಾಗಿ NJACಯು ನ್ಯಾಯಾಧೀಶರ ನೇಮಕಾತಿಯನ್ನು ಕಾರ್ಯಾಂಗವು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಸಾಧನವಾಗಿದೆ.
ಆದರೆ ಸ್ವತಂತ್ರ ನ್ಯಾಯಾಂಗವು ಭಾರತದ ಸಂವಿಧಾನದ ಮೂಲರಚನೆಯ ಭಾಗವಾಗಿದೆ. ಆದ್ದರಿಂದ NJAC ಕಾಯ್ದೆಯು ಸಂವಿಧಾನದ ಮೂಲ ರಚನೆಯನ್ನೇ ಬದಲಿಸುವುದರಿಂದ ಅದು ಸಂವಿಧಾನ ಬಾಹಿರ ಎಂದು ಅದನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು ಮತ್ತು ಉನ್ನತ ನ್ಯಾಯಾಧೀಶರ ನೇಮಕಾತಿಯಲ್ಲಿ ಕೊಲಿಜಿಯಂ ಪದ್ಧತಿಯನ್ನೇ ಮುಂದುವರಿಸಿದೆ.
ಮೋದಿ ಸರಕಾರದ ಕೊಲಿಜಿಯಂ ವಿರೋಧದ ಹಿಂದಿನ ಅಸಲಿ ಕಾರಣಗಳು
NJAC ರದ್ದಾಗಿ ಎಂಟು ವರ್ಷಗಳೇ ಕಳೆದರೂ ಮೋದಿ ಸರಕಾರ ಮತ್ತು ಆರೆಸ್ಸೆಸ್ ಪರಿವಾರ ಅದರ ಬಗ್ಗೆ ಇತ್ತೀಚಿನವರೆಗೆ ಹೆಚ್ಚು ತಗಾದೆಯನ್ನು ತೆಗೆದಿರಲಿಲ್ಲ. ಏಕೆಂದರೆ ಈ ಅವಧಿಯಲ್ಲಿ ಸುಪ್ರೀಂ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ನಿರ್ವಹಿಸಿದ ನ್ಯಾ. ದೀಪಕ್ ಮಿಶ್ರಾ, ನ್ಯಾ. ರಂಜನ್ ಗೊಗೊಯಿ, ನ್ಯಾ. ಬೊಬ್ಡೆಯವರು ಮೋದಿ ಸರಕಾರಕ್ಕೆ ಹಿತವಾಗುವಂತಹ ತೀರ್ಪುಗಳನ್ನೇ ಕೊಟ್ಟರು (ಅಯೋಧ್ಯಾ, ರಫೇಲ್ ಹಗರಣ, ನ್ಯಾ. ಲೋಯಾ ಹತ್ಯೆ ಇತ್ಯಾದಿ) ಅಥವಾ ಮೋದಿ ಸರಕಾರಕ್ಕೆ ಮುಜುಗರ ತರುವಂಥ ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿಲ್ಲ (ಎಲೆಕ್ಟೋರಲ್ ಬಾಂಡ್, ಆರ್ಟಿಕಲ್ ೩೭೦ರದ್ದು, ಸಿಎಎ, ಪೆಗಾಸಸ್).
ಆದರೆ
-ನ್ಯಾ. ರಮಣ ಮುಖ್ಯ ನ್ಯಾಯಾಧೀಶರಾಗಿದ್ದಾಗ ಸೆಡಿಷನ್ ಕೇಸುಗಳನ್ನು ತಡೆಹಿಡಿದದ್ದು ಮತ್ತು ಪೆಗಾಸಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಾರಂಭದಲ್ಲಿ ಗಡುಸು ಧೋರಣೆ ತೋರಿದ್ದರು. (ಆದರೆ ಯಾವುದೇ ಪರಿಣಾಮಕಾರಿ ನಿಲುವನ್ನು ಈ ವಿಷಯದಲ್ಲಿ ಅವರು ತೆಗೆದುಕೊಳ್ಳಲಿಲ್ಲ)
-ಇದೀಗ ನ್ಯಾ. ಚಂದ್ರಚೂಡ್ ಅವರು ಕೂಡ ನ್ಯಾ. ಲೋಯಾ ಹತ್ಯೆ ವಿಚಾರದಲ್ಲಿ ಮೋದಿ ಸರಕಾರಕ್ಕೆ, ಅದರ ಗೃಹಮಂತ್ರಿಗೆ ಅನುಕೂಲಕರವಾದ ತೀರ್ಪೇ ನೀಡಿದ್ದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪೂರಕವಾದ ಆದೇಶ ಕೊಟ್ಟ ಐವರು ನ್ಯಾಯಾಧೀಶರಲ್ಲಿ ಅವರೂ ಒಬ್ಬರು.
ಆದರೂ ಅವರು ಮಾನವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯದ ವಿಚಾರದಲ್ಲಿ ಉದಾರವಾದಿ ನಿಲುವಿಗೆ ಹೆಸರು ಪಡೆದಿದ್ದಾರೆ ಮತ್ತು ಅವರು ೨೦೨೪ರ ನವೆಂಬರ್ ತನಕ ಮುಖ್ಯ ನ್ಯಾಯಾಧೀಶರಾಗಿರುತ್ತಾರೆ ಮತ್ತು ಅವರ ಅವಧಿಯಲ್ಲಿ ನೇಮಕವಾಗಬಹುದಾದ ೩೫ಕ್ಕೂ ಹೆಚ್ಚು ನ್ಯಾಯಾಧೀಶರು ಉನ್ನತ ನ್ಯಾಯಾಲಯದಲ್ಲಿ ತಮ್ಮ ಸಿದ್ಧಾಂತಕ್ಕೆ ಮತ್ತು ರಾಜಕೀಯಕ್ಕೆ ವ್ಯತಿರಿಕ್ತವಾಗಬಹುದಾದ ಸಾಧ್ಯತೆ ಇದೆ ಎಂದು ಮೋದಿ ಸರಕಾರ ಭಾವಿಸುತ್ತಿದೆ.
ಇವೆಲ್ಲವೂ ಇದ್ದಕ್ಕಿದ್ದಂತೆ ಕೊಲಿಜಿಯಂ ವ್ಯವಸ್ಥೆಯ ಮೇಲೆ ಮೋದಿ ಸರಕಾರದ ಆಕ್ರಮಣಕ್ಕೆ ಕಾರಣವಾಗಿದೆಯೇ ಹೊರತು ಕೊಲಿಜಿಯಂ ಪದ್ಧತಿಯಲ್ಲಿ ಪ್ರಜಾತಂತ್ರಿಕ ಸುಧಾರಣೆ ತರಬೇಕೆಂಬುದಲ್ಲ.
ಏಕೆಂದರೆ ಅವರು ಮುಂದಿಟ್ಟಿದ್ದ NJAC ವ್ಯವಸ್ಥೆಯಲ್ಲಿ ಕೊಲಿಜಿಯಂ ವ್ಯವಸ್ಥೆಯಲ್ಲಿರುವ ನಿಜವಾದ ಲೋಪಗಳನ್ನು ನಿವಾರಿಸಿ ನೇಮಕಾತಿ ಪ್ರಕ್ರಿಯೆಗಳನ್ನು ಪಾರದರ್ಶಕಗೊಳಿಸುವ ಅಥವಾ ಪ್ರಾತಿನಿಧ್ಯ ಹೆಚ್ಚಿಸುವ ಯಾವ ಪ್ರಸ್ತಾಪಗಳು ಇರಲಿಲ್ಲ. ಅಥವಾ ಮೋದಿ ಸರಕಾರ ಶಿಫಾರಸು ಮಾಡಿದ ನೇಮಕಾತಿಗಳಲ್ಲೂ ಯಾವ ಪ್ರಾತಿನಿಧ್ಯವೂ ಇರಲಿಲ್ಲ.
ಹೀಗಾಗಿ ಮೋದಿ ಸರಕಾರದ ಕೊಲಿಜಿಯಂ ವಿರೋಧದ ಹಿಂದಿನ ಅಸಲಿ ಕಾರಣಗಳು ನ್ಯಾಯಾಂಗದ ಸ್ವಾತಂತ್ರ್ಯವನ್ನು ಮತ್ತು ಸ್ವಾಯತ್ತತೆಯನ್ನು ಕಿತ್ತುಕೊಂಡು ಅದನ್ನು ಶಾಸನಬದ್ಧವಾಗಿ ಮತ್ತು ಅಧಿಕೃತವಾಗಿ ಮೋದಿ ಸರಕಾರದ ಅಧೀನಗೊಳಿಸುವುದೇ ಆಗಿದೆ.
ಈಗಾಗಲೇ ನ್ಯಾಯಾಂಗ ಕೇಸರೀಕರಣ ತೀವ್ರಗತಿಯಲ್ಲಿ ಅನಧಿಕೃತವಾಗಿ ನಡೆದಿದೆ. ಅನಿಲ್ ದವೆ ಎಂಬ ಸುಪ್ರೀಂ ನ್ಯಾಯಾಧೀಶರೊಬ್ಬರು ಈ ಹಿಂದೆ ತಾನು ಸರ್ವಾಧಿಕಾರಿಯಾಗಿದ್ದರೆ ಭಗವದ್ಗೀತೆ ಮತ್ತು ಮಹಾಭಾರತವನ್ನು ಕಡ್ಡಾಯ ಮಾಡುವುದಾಗಿ ಹೇಳಿದ್ದರು. ೨೦೧೯ರಲ್ಲಿ ಚಿದಂಬರೇಶ್ವರನ್ ಎಂಬ ಕೇರಳ ಕೋರ್ಟಿನ ನ್ಯಾಯಾಧೀಶರು ಬ್ರಾಹ್ಮಣರು ಜಾತಿ ಮೀಸಲಾತಿಯ ವಿರುದ್ಧ ಬಹಿರಂಗವಾಗಿ ಬಂಡಾಯವೇಳಲು ಕರೆಕೊಟ್ಟಿದ್ದರು ಮತ್ತು ಬ್ರಾಹ್ಮಣರು ಸಮಾಜದಲ್ಲಿ ಅಧಿಕಾರ ಸ್ಥಾನದಲ್ಲಿದ್ದರೆ ಮಾತ್ರ ದೇಶಕ್ಕೆ ಸದ್ಗತಿ ಸಿಗುತ್ತದೆ ಎಂದು ಹೇಳಿದ್ದರು. ಹಿಜಾಬ್ ಪ್ರಕರಣದಲ್ಲಿ ಸುಪ್ರೀಂ ನ್ಯಾಯಾಧೀಶ ಈ ದೇಶ ನಡೆಯುತ್ತಿರುವುದು ಆದಾಯ ತೆರಿಗೆ ಕಟ್ಟುತ್ತಿರುವರ ದುಡ್ಡಿನಲ್ಲಿ ಎಂದಿದ್ದು ಮಾತ್ರವಲ್ಲದೆ ಸಿಖ್ಖರ ಸಂಸ್ಕೃತಿ ಈ ದೇಶದ ಸಂಸ್ಕೃತಿಯೇ ವಿನಾ ಇಸ್ಲಾಮಿನದ್ದಲ್ಲ ಎಂದು ಹೇಳಿದ್ದರು.
ಕೊಲಿಜಿಯಂ ಪದ್ಧತಿಯೊಳಗೇ ಇಂತಹ ನ್ಯಾಯಾಧೀಶರ ಸಂಖ್ಯೆ ಹೆಚ್ಚುತ್ತಿದೆ. ಇನ್ನು ಮೋದಿ ಸರಕಾರವೇ ನ್ಯಾಯಾಧೀಶರನ್ನು ನೇಮಕ ಮಾಡುವುದಾದರೆ ಭಾರತದ ಭವಿಷ್ಯದ ಗತಿಯೇನು?
ಆದ್ದರಿಂದ ಈ ದೇಶದ ನಾಗರಿಕರು, ನ್ಯಾಯಿಕ ಸಮುದಾಯ, ಪ್ರಜಾತಂತ್ರವಾದಿಗಳು ನ್ಯಾಯಾಂಗದ ಮೇಲೆ ಮೋದಿ ಸರಕಾರವು ತನ್ನ ದೂರಗಾಮಿ ದುರುದ್ದೇಶಗಳಿಂದ ಮಾಡುತ್ತಿರುವ ದಾಳಿಗಳನ್ನು ಖಂಡಿಸಬೇಕು.
ಆದರೆ ಅದೇ ಸಮಯದಲ್ಲಿ ಕೊಲಿಜಿಯಂ ಪದ್ಧತಿಯ ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಸಾಮಾಜಿಕ ಪ್ರಾತಿನಿಧ್ಯ ಹಾಗೂ ನೇಮಕಾತಿ ಪ್ರಕ್ರಿಯೆಗಳ ಪ್ರಜಾತಾಂತ್ರೀಕರಣಕ್ಕೂ ಹೋರಾಡಬೇಕು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.