-

ಕರ್ನಾಟಕದ ಬೊಕ್ಕಸಕ್ಕೆ ಪ್ರತಿವರ್ಷ 23,000 ಕೋಟಿ ರೂ. ಕೇಂದ್ರದ ಕನ್ನ!

ಮೋದಿ ಸರಕಾರದ ಸೆಸ್ ಸುಲಿಗೆ

-

2014-2022ರ ಅವಧಿಯಲ್ಲಿ ಬಿಜೆಪಿಯೇ ಬಹುಮತ ಪಡೆದು ಅಧಿಕಾರಕ್ಕೆ ಬಂದ ಮೇಲೆ ಸೆಸ್‌ಗಳ ಪಾಲು ಶೇ. 10ರಿಂದ ಏರುತ್ತಲೇ ಹೋಯಿತು. ಬಿಜೆಪಿಯ ಸ್ವತಂತ್ರ ಸಂಖ್ಯಾ ಬಲ ಹೆಚ್ಚುತ್ತಾ ಹೋದಂತೆ ಸೆಸ್ ಪ್ರಮಾಣವೂ ಹೆಚ್ಚುತ್ತಾ ಹೋಯಿತು. ಅದು 2019ರಲ್ಲಿ ಶೇ. 18 ಆಗಿ, 2020ರಲ್ಲಿ ಶೇ. 25 ಆಗಿ, 2021ರಲ್ಲಿ ಶೇ. 28.1ನ್ನು ಮುಟ್ಟಿದೆ. ಇದರ ಜೊತೆಗೆ ಮೋದಿ ಸರಕಾರ ನೇಮಕ ಮಾಡಿದ 15ನೇ ಹಣಕಾಸು ಆಯೋಗವು ಕೇಂದ್ರದ ತೆರಿಗೆಯಲ್ಲಿ ಕರ್ನಾಟಕದ ಪಾಲನ್ನು ಶೇ. 4.71ರಿಂದ ಶೇ. 3.64ಕ್ಕೆ ಇಳಿಸಿದೆ.


ಭಾಗ-1

ಮೊನ್ನೆ ಕೇರಳದ ರಾಜ್ಯ ಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಅವರ ಪ್ರಶ್ನೆಯೊಂದಕ್ಕೆ ಉತ್ತರ ಕೊಡುತ್ತಾ ಮೋದಿ ಸರಕಾರ ಕೇಂದ್ರದ ತೆರಿಗೆಯಲ್ಲಿ ಸೆಸ್‌ಗಳ ಪಾಲು ಶೇ.28.1ಕ್ಕೆ ಏರಿದೆ ಎಂದು ಸ್ಪಷ್ಟವಾಗಿ ಉತ್ತರ ಸಿಕ್ಕಿದೆ. ಈ ಮಾಹಿತಿಯು ವಿರೋಧ ಪಕ್ಷಗಳನ್ನು ಕೆರಳಿಸಿ ಸೆಸ್ ಸುಲಿಗೆ ತಪ್ಪಲು ದೊಡ್ಡ ಪ್ರತಿರೋಧ ವ್ಯಕ್ತವಾಗಬೇಕಿತ್ತು. ಏಕೆಂದರೆ ಕೇಂದ್ರದ ತೆರಿಗೆಯಲ್ಲಿ ಸೆಸ್ ಮತ್ತು ಸರ್ಚಾರ್ಜ್‌ಗಳ ಪಾಲು ಹೆಚ್ಚಾದಂತೆಲ್ಲಾ ರಾಜ್ಯಗಳಿಗೆ ಕೇಂದ್ರವು ಕಡ್ಡಾಯವಾಗಿ ಕೊಡಬೇಕಿದ್ದ ಪಾಲು ಕಡಿಮೆಯಾಗುತ್ತಾ ಹೋಗುತ್ತದೆ. ಆದ್ದರಿಂದಲೇ 2004-2014ರ ನಡುವೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯಲ್ಲಿ ಸೆಸ್‌ಗಳ ಪಾಲು ಶೇ. 6-8ರ ಗಡಿಯನ್ನು ದಾಟಿರಲಿಲ್ಲ. ಏಕೆಂದರೆ ಯುಪಿಎ ಸರಕಾರದ ಉಳಿವಿಗೆ ಹಲವಾರು ರಾಜ್ಯಮಟ್ಟದ ಪಕ್ಷಗಳ ಬೆಂಬಲ ಅನಿವಾರ್ಯವಾಗಿತ್ತು. ಆದರೆ 2014-2022ರ ಅವಧಿಯಲ್ಲಿ ಬಿಜೆಪಿಯೇ ಬಹುಮತ ಪಡೆದು ಅಧಿಕಾರಕ್ಕೆ ಬಂದ ಮೇಲೆ ಸೆಸ್‌ಗಳ ಪಾಲು ಶೇ. 10ರಿಂದ ಏರುತ್ತಲೇ ಹೋಯಿತು. ಬಿಜೆಪಿಯ ಸ್ವತಂತ್ರ ಸಂಖ್ಯಾ ಬಲ ಹೆಚ್ಚುತ್ತಾ ಹೋದಂತೆ ಸೆಸ್ ಪ್ರಮಾಣವೂ ಹೆಚ್ಚುತ್ತಾ ಹೋಯಿತು. ಅದು 2019ರಲ್ಲಿ ಶೇ. 18 ಆಗಿ, 2020ರಲ್ಲಿ ಶೇ. 25 ಆಗಿ, 2021ರಲ್ಲಿ ಶೇ. 28.1ನ್ನು ಮುಟ್ಟಿದೆ. ಇದರ ಜೊತೆಗೆ ಮೋದಿ ಸರಕಾರ ನೇಮಕ ಮಾಡಿದ 15ನೇ ಹಣಕಾಸು ಆಯೋಗವು ಕೇಂದ್ರದ ತೆರಿಗೆಯಲ್ಲಿ ಕರ್ನಾಟಕದ ಪಾಲನ್ನು ಶೇ. 4.71ರಿಂದ ಶೇ. 3.64ಕ್ಕೆ ಇಳಿಸಿದೆ.

ಕೇಂದ್ರದ ತೆರಿಗೆಯಲ್ಲಿ ಸೆಸ್ ಪಾಲು ಜಾಸ್ತಿಯಾಗಿ, ಕರ್ನಾಟಕದ ಶೇ. ಪಾಲು ಕಡಿಮೆಯಾಗಿರುವುದರ ಅರ್ಥವಿಷ್ಟೆ:

ಮುಂದಿನ ಐದು ವರ್ಷಗಳಲ್ಲಿ ಕೇಂದ್ರದ ಮೋದಿ ಸರಕಾರವು ಕರ್ನಾಟಕ ರಾಜ್ಯಕ್ಕೆ ವಾಪಸ್ ಕೊಡಬೇಕಿರುವ ತೆರಿಗೆ ಪಾಲಿನಲ್ಲಿ 1.15 ಲಕ್ಷ ಕೋಟಿ ಮೊತ್ತವನ್ನು ಕೊಡದೇ ಹಗಲು ದರೋಡೆ ಮಾಡುತ್ತದೆ. ಅರ್ಥಾತ್ ಮೋದಿ ಸರಕಾರ ಪ್ರತಿವರ್ಷ ಕರ್ನಾಟಕಕ್ಕೆ ಏನಿಲ್ಲವೆಂದರೂ 23,000 ಕೋಟಿ ರೂ. ತೆರಿಗೆ ಪಾಲನ್ನು ದೋಖಾ ಮಾಡುತ್ತದೆ ಎಂದರ್ಥ. ಆದರೂ ಕರ್ನಾಟಕದಿಂದ ಆಯ್ಕೆಯಾದ 25 ಬಿಜೆಪಿ ಸಂಸತ್ ಸದಸ್ಯರಾಗಿರಬಹುದು, ಕರ್ನಾಟಕದ ಬಿಜೆಪಿಯಾಗಿರಬಹುದು ಇದರ ಬಗೆಗೆ ಚಕಾರವೆತ್ತುತ್ತಿಲ್ಲ. ಅದರ ಬದಲಿಗೆ ತಮ್ಮ ನಾಡದ್ರೋಹವನ್ನು ಬಚ್ಚಿಟ್ಟುಕೊಳ್ಳಲು ಕರ್ನಾಟಕದಲ್ಲಿ ಕೋಮುವಾದದ ಅಮಲನ್ನು ಹಬ್ಬಿಸಿ ಜನರ ಗಮನವನ್ನು ತಪ್ಪುದಾರಿಗೆಳೆಯುತ್ತಿದೆ. ವಿರೋಧ ಪಕ್ಷವಾದ ಕಾಂಗ್ರೆಸ್ ಅಥವಾ ಜೆಡಿಎಸ್‌ಗಳೂ ಇದರ ಬಗ್ಗೆ ಮಾಡಬೇಕಾದಷ್ಟು ಪ್ರತಿರೋಧ ಮಾಡಿ ಕರ್ನಾಟಕದ ಆಸಕ್ತಿಗಳನ್ನು ರಕ್ಷಿಸುತ್ತಿಲ್ಲ! ಈ ಬಗೆಯ ದಮನಕಾರಿ ಕೇಂದ್ರೀಕರಣ ವ್ಯವಸ್ಥೆಗೆ ಬುನಾದಿ ಹಾಕಿದ್ದು ಕಾಂಗ್ರೆಸೇ. ಆದರೆ ಅದನ್ನು ಇನ್ನಷ್ಟು ಆಕ್ರಮಣಕಾರಿಯಾಗಿ ವೇಗ ಮತ್ತು ಪ್ರಮಾಣಗಳಲ್ಲಿ ವಿಸ್ತರಿಸುತ್ತಾ ಊಹಿಸಲಸಾಧ್ಯವಾದ ಸಂವಿಧಾನ ದ್ರೋಹ ಮತ್ತು ನಾಡದ್ರೋಹ ಮಾಡುತ್ತಿರುವುದು ಮಾತ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವೇ.

ಮೋದಿ ಸರಕಾರ ಕೇಂದ್ರದ ತೆರಿಗೆಯಲ್ಲಿ ಘೋಷಿತವಾದ ರಾಜ್ಯಗಳ ಪಾಲನ್ನು ಕಡಿತಗೊಳಿಸಿ ಕರ್ನಾಟಕದಂತಹ ರಾಜ್ಯಗಳಿಗೆ ತೆರಿಗೆ ವಂಚನೆ ಮಾಡಲು ಮೂರು ಪ್ರಮುಖ ಮಾರ್ಗಗಳನ್ನು ಅನುಸರಿಸುತ್ತಿದೆ:

1) ಕೇಂದ್ರ ತೆರಿಗೆಯಲ್ಲಿ ಸೆಸ್ ಪಾಲನ್ನು ಜಾಸ್ತಿ ಮಾಡಿ ರಾಜ್ಯದೊಡನೆ ಹಂಚಿಕೊಳ್ಳಬೇಕಾದ ತೆರಿಗೆ ಪ್ರಮಾಣವನ್ನೇ (ಡಿವಿಸಿಬಲ್ ಪೂಲ್) ಕಡಿಮೆ ಮಾಡುವುದು. 2) ಹಣಕಾಸು ಆಯೋಗದ ಮೂಲಕ ರಾಜ್ಯದ ಅಧಿಕೃತ ಪ್ರಮಾಣವನ್ನೇ ಕಡಿಮೆ ಮಾಡುವುದು 3) ಘೋಷಿಸಿದಷ್ಟು ಪ್ರಮಾಣವನ್ನೂ ಬಿಡುಗಡೆ ಮಾಡದಿರುವುದು. ಈ ಮೂರು ಕ್ರಮಗಳ ಮೂಲಕ ಕರ್ನಾಟಕವನ್ನು ಮೋದಿ ಸರಕಾರ ಲೂಟಿ ಮಾಡುತ್ತಿದೆ. ಬಡವಾಗಿಸುತ್ತಿದೆ. ಕೇಂದ್ರ ಹೇಳುವಂತೆ ಕೇಳದಿದ್ದರೆ ನಮ್ಮ ಪಾಲಿನ ಸಂಪನ್ಮೂಲಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಭಯೋತ್ಪಾದನೆ ಮಾಡುತ್ತಿದೆ. ಮೋದಿ ಸರಕಾರದ ಈ ಸರ್ವಾಧಿಕಾರಿ ಹಣಕಾಸು ಭಯೋತ್ಪಾದನೆ ಅರ್ಥವಾಗಲು ದೇಶದ ಸಂಪನ್ಮೂಲಗಳನ್ನು ಕೇಂದ್ರ ಮತ್ತು ರಾಜ್ಯ ಹಂಚಿಕೊಳ್ಳುವ ಬಗ್ಗೆ ಸಂವಿಧಾನ ಏನು ಹೇಳುತ್ತದೆ ಎಂದು ನೋಡೋಣ.

ಫೆಡರಲ್ ಭಾರತದಲ್ಲಿ ಕೇಂದ್ರವೇಕೆ ಸರ್ವಾಧಿಕಾರಿ? 

ಭಾರತವನ್ನು ರಾಜ್ಯಗಳ ಒಕ್ಕೂಟ-ಯೂನಿಯನ್ ಆಫ್ ಸ್ಟೇಟ್ಸ್- ಎಂದು ಭಾರತದ ಸಂವಿಧಾನದ ಆರ್ಟಿಕಲ್ 2 ಸ್ಪಷ್ಟಪಡಿಸುತ್ತದೆ. 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ಪೂರ್ಣ ಪೀಠ ನೀಡಿರುವ ಸಾಂವಿಧಾನಿಕ ಆದೇಶದಲ್ಲೂ ಫೆಡರಲಿಸಂ- ಭಾರತದ ಒಕ್ಕೂಟ ಸ್ವರೂಪ- ಭಾರತದ ಸಂವಿಧಾನದ ಮೂಲ ರಚನೆಯ ಭಾಗವೆಂದು ಘೋಷಿಸಲಾಗಿದೆ. ಅದರ ಭಾಗವಾಗಿಯೇ ಭಾರತದ ಸಂವಿಧಾನವು ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡಕ್ಕೂ ತೆರಿಗೆ ಸಂಗ್ರಹ ಮಾಡುವ ಮತ್ತು ಶಾಸನಗಳನ್ನು ರೂಪಿಸುವ ಪರಮಾಧಿಕಾರವನ್ನು ಹಂಚಿದೆ. ಸಂವಿಧಾನದ ಆರ್ಟಿಕಲ್ 246ರ ಅನ್ವಯ ರೂಪಿಸಲಾಗಿರುವ ಶೆಡ್ಯೂಲ್ 7ರಲ್ಲಿ ಕೇಂದ್ರ ಹಾಗೂ ರಾಜ್ಯಗಳ ಪರಮಾಧಿಕಾರವಿರುವ ಬಾಬತ್ತುಗಳನ್ನು ನಿರ್ದಿಷ್ಟೀಕರಿಸಲಾಗಿದೆ. ಅದರ ಜೊತೆಗೆ ಕೇಂದ್ರ ಹಾಗೂ ರಾಜ್ಯಗಳೆರಡೂ ಶಾಸನಗಳನ್ನು ಮಾಡಬಹುದಾದ ಸಮವರ್ತಿ ಪಟ್ಟಿಯನ್ನು ನೀಡಲಾಗಿದೆ. ಆದರೆ ಕೇಂದ್ರದಲ್ಲಿ ತುರ್ತುಸ್ಥಿತಿ ಜಾರಿ ಮಾಡಿದ ಇಂದಿರಾ ಗಾಂಧಿ ಹಾಗೂ ಇಂದು ಅಘೋಷಿತ ಸರ್ವಾಧಿಕಾರ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಸರಕಾರಗಳು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲಾ ಸಮವರ್ತಿ ಪಟ್ಟಿಯನ್ನು ಬಳಸಿಕೊಂಡು ರಾಜ್ಯಗಳ ಅಧಿಕಾರದೊಳಗೆ ಸಾಂವಿಧಾನಿಕವಾಗಿಯೇ ಒತ್ತುವರಿ ಮಾಡುತ್ತಾ ಬಂದಿವೆ. ಇದಕ್ಕೆ ಪುಷ್ಟಿಕೊಡುವಂತೆ ಸಂವಿಧಾನದಲ್ಲಿ ಸ್ಪಷ್ಟಪಡಿಸಲಾಗದ ಎಲ್ಲಾ ರೆಸಿಡ್ಯುಯಲ್ ಅಧಿಕಾರಗಳನ್ನು ಕೇಂದ್ರಕ್ಕೆ ವಹಿಸಲಾಗಿದೆ.

ಬಹುತ್ವವನ್ನು ಗೌರವಿಸದ ಯಾವುದೇ ಆಳುವಿಕೆ ಅಧಿಕಾರಕ್ಕೆ ಬಂದಾಗ ಇದೇ ಸಂವಿಧಾನವನ್ನೇ ಬಳಸಿಕೊಂಡು ಸರ್ವಾಧಿಕಾರವನ್ನು ತರಬಹುದಾದ ಅವಕಾಶಗಳನ್ನು ಸಂವಿಧಾನದ ಸಂದಿಯಲ್ಲಿ ಬಚ್ಚಿಡಲಾಗಿದೆ. ಅದೇನೇ ಇರಲಿ, ಶೆಡ್ಯೂಲ್ 7ರಲ್ಲಿ ಕೇಂದ್ರ ಹಾಗೂ ರಾಜ್ಯಗಳಿಗೆ ವಿಭಜಿತವಾಗಿರುವ ಜವಾಬ್ದಾರಿ ಮತ್ತು ಹಕ್ಕುಗಳನ್ನು ಗಮನಿಸಿದರೆ ರಾಜ್ಯಗಳಿಗೆ ಹೆಚ್ಚು ಜವಾಬ್ದಾರಿಗಳನ್ನೂ ನೀಡಲಾಗಿದ್ದರೆ, ಕೇಂದ್ರಕ್ಕೆ ಹೆಚ್ಚು ತೆರಿಗೆ ಹಾಗೂ ಶಾಸನದ ಅಧಿಕಾರಗಳನ್ನೂ ಕೊಡಮಾಡಿರುವುದು ಎದ್ದು ಕಾಣುತ್ತದೆ. ಉದಾಹರಣೆಗೆ ದೇಶದ ಜನರ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಾಗಿರುವ ಆಹಾರ, ಆರೋಗ್ಯ, ಶಿಕ್ಷಣ, ಕೃಷಿ, ಉದ್ಯೋಗ, ಭದ್ರತೆಯಂತಹ ಎಲ್ಲಾ ಜವಾಬ್ದಾರಿಗಳು ಮೂಲಭೂತವಾಗಿ ರಾಜ್ಯಗಳ ಜವಾಬ್ದಾರಿಯಾಗಿವೆ. ಕೇಂದ್ರ ಸರಕಾರಕ್ಕೆ ಅವುಗಳಲ್ಲಿ ಏಕರೂಪತೆ ತರುವ ಮತ್ತು ಗುಣಮಟಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವ ಅಧಿಕಾರವಿದೆ. ಅದರ ಜೊತೆಗೆ ದೇಶದ ರಕ್ಷಣೆ, ವಿದೇಶಾಂಗ..ಇತ್ಯಾದಿ ವೆಚ್ಚಗಳಿರುತ್ತವೆ. ಅದೇನೇ ಇರಲಿ, ದೇಶದ ನಿಜವಾದ ಅಭಿವೃದ್ಧಿ ಸಾಧ್ಯವಾಗುವುದು ರಾಜ್ಯಗಳಿಗೆ ಹೆಚ್ಚು ಸಂಪನ್ಮೂಲಗಳು ದೊರಕುವಂತಾದರೆ ಮಾತ್ರ ಎನ್ನುವುದು ರಾಜ್ಯಗಳಿಗಿರುವ ಜವಾಬ್ದಾರಿಗಳನ್ನು ನೋಡಿದರೆ ಸ್ಪಷ್ಟವಾಗುತ್ತದೆ. ಆದರೆ, ಭಾರತ ಒಕ್ಕೂಟದಲ್ಲಿ ಕೇಂದ್ರ ಸರಕಾರ ಹಾಗೂ ಎಲ್ಲಾ 30 ರಾಜ್ಯಗಳ ಒಟ್ಟಾರೆ ತೆರಿಗೆ ಸಂಗ್ರಹವನ್ನು ಗಣನೆಗೆ ತೆಗೆದುಕೊಂಡಲ್ಲಿ ಕೇಂದ್ರವು ಶೇ. 63-64ರಷ್ಟು ತೆರಿಗೆಯನ್ನು ಸಂಗ್ರಹ ಮಾಡಿದರೆ ರಾಜ್ಯಗಳು ಕೇವಲ ಶೇ.36-37ರಷ್ಟು ತೆರಿಗೆ ಮೂಲವನ್ನು ಮಾತ್ರ ಪಡೆದುಕೊಂಡಿವೆ. ಅದಕ್ಕೆ ತದ್ವಿರುದ್ಧವಾಗಿ, ಕೇಂದ್ರವು ಒಟ್ಟ್ಟಾರೆಯಾಗಿ ಶೇ. 43ರಷ್ಟು ವೆಚ್ಚವನ್ನು ಮಾಡಬೇಕಿದ್ದರೆ ರಾಜ್ಯಗಳು ಶೇ. 57ರಷ್ಟು ವೆಚ್ಚಗಳನ್ನು ಮಾಡುತ್ತಿವೆ.

ಹಣಕಾಸು ಆಯೋಗಗಳೋ? ಆರ್ಥಿಕ ಕೇಂದ್ರೀಕರಣದ ಸಾಧನಗಳೋ?

ಈ ಅಸಮತೋಲನವನ್ನು ಸ್ವಲ್ಪಮಟ್ಟಿಗಾದರೂ ಕಡಿಮೆ ಮಾಡಲೆಂದೇ ಸಂವಿಧಾನದಲ್ಲಿ ಆರ್ಟಿಕಲ್ 280ರ ಪ್ರಕಾರ ರಾಷ್ಟ್ರಪತಿಗೆ ಒಂದು ಸ್ವತಂತ್ರ ಹಣಕಾಸು ಆಯೋಗವನ್ನು ನೇಮಕ ಮಾಡುವ ಅಧಿಕಾರವನ್ನು ನೀಡಲಾಗಿದೆ. ಈ ಆಯೋಗವು ಕೇಂದ್ರವು ರಾಜ್ಯಗಳಲ್ಲಿರುವ ಜನರಿಂದ ಸಂಗ್ರಹಿಸುವ ಪ್ರತ್ಯೇಕ ತೆರಿಗೆಗಳಲ್ಲಿ ರಾಜ್ಯಗಳಿಗೆ ಎಷ್ಟು ವರ್ಗಾಯಿಸತಕ್ಕದ್ದೆಂದು ನಿಗದಿ ಮಾಡುತ್ತದೆ ಮತ್ತು ಯಾವ್ಯಾವ ರಾಜ್ಯಗಳಿಗೆ ಎಷ್ಟು ಪಾಲು ನೀಡಬೇಕೆಂಬುದರ ಬಗ್ಗೆಯೂ ಮಾನದಂಡಗಳನ್ನು ತೀರ್ಮಾನಿಸುತ್ತದೆ. ಅದರ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿ ಅನುಮೋದನೆಯನ್ನು ಪಡೆದುಕೊಳ್ಳಬೇಕಿರುತ್ತದೆ. ಇದರ ಜೊತೆಗೆ 'ಯೋಜನಾ ಆಯೋಗ' (ಪ್ಲಾನಿಂಗ್ ಕಮಿಷನ್)ವೂ ರಾಜ್ಯಗಳಿಗೆ ಕೇಂದ್ರ ಸಂಗ್ರಹಿಸಿದ ಸಂಪನ್ಮೂಲಗಳ ಪಾಲನ್ನು ಷರತ್ತುವಾರು ಹಂಚುತ್ತಿತ್ತು. ಮೋದಿ ಸರಕಾರ ಈ ಯೋಜನಾ ಆಯೋಗವನ್ನೇ ರದ್ದು ಮಾಡಿಬಿಟ್ಟಿತು. ಈವರೆಗೆ 15 ಹಣಕಾಸು ಆಯೋಗಗಳು ನೇಮಕವಾಗಿದ್ದು, 15 ನೇ ಹಣಕಾಸು ಆಯೋಗವು ತನ್ನ ಪೂರ್ಣ ವರದಿಯನ್ನು 2021ರ ಫೆಬ್ರವರಿಯಲ್ಲಿ ಸರಕಾರಕ್ಕೆ ನೀಡಿದೆ ಮತ್ತು ಅದನ್ನು ಮೋದಿ ಸರಕಾರ ಸದನದಲ್ಲಿ ಮಂಡಿಸಿ ಉತ್ಸಾಹದಿಂದ ಅನುಷ್ಠಾನಕ್ಕೆ ಮುಂದಾಗಿದೆ.

ಕೆಲವು ಉದಾಹರಣೆಗಳನ್ನು ಬಿಟ್ಟರೆ, ಎಲ್ಲಾ ಹಣಕಾಸು ಆಯೋಗಗಳು ಕೇಂದ್ರದ ತೆರಿಗೆಗಳಲ್ಲಿ ರಾಜ್ಯದ ಪಾಲು ಮತ್ತು ರಾಜ್ಯಗಳ ನಡುವಿನ ತೆರಿಗೆ ಪಾಲಿನ ಹಂಚಿಕೆಯ ಪ್ರಮಾಣವನ್ನು ನಿಗದಿ ಮಾಡುವಾಗ ಕೇಂದ್ರ ಸರಕಾರದ ಆದ್ಯತೆಗಳನ್ನಷ್ಟೇ ಗಮನವಿಟ್ಟುಕೊಂಡು ವ್ಯವಹರಿಸಿವೆ. ಕೇಂದ್ರದ ತೆರಿಗೆ ಸಂಗ್ರಹವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುವ ಪಾಲು (ಡಿವಿಸಬಲ್ ಪೂಲ್) ಮತ್ತು ಕೇಂದ್ರದ ವೆಚ್ಚದ ಪಾಲು ಎಂದು ವಿಂಗಡಿಸಲಾಗುತ್ತದೆ. ಡಿವಿಸಬಲ್ ಪೂಲ್‌ನಲ್ಲಿ ನಿಗದಿಯಾದ ಮೊತ್ತವನ್ನು ರಾಜ್ಯಗಳಿಗೆ ನಿಗದಿಯಾದ ಮಾನದಂಡಗಳಿಗನುಸಾರ ಹಂಚಿಕೊಳ್ಳಲಾಗುತ್ತದೆ. ಇದರ ಜೊತೆಗೆ ಕೇಂದ್ರೀಯ ಯೋಜನೆ(ಸೆಂಟ್ರಲ್ ಸೆಕ್ಟರ್- ಸಿ.ಎಸ್) ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಒಟ್ಟಿಗೆ ಜಾರಿ ಮಾಡುವ ಕೇಂದ್ರೀಯ ಪ್ರಾಯೋಜಿತ ಯೋಜನೆಗಳು (ಸೆಂಟ್ರಲ್ ಸ್ಪೊಸೋರ್ಡ್ ಸ್ಕೀಮ್ಸ್- ಸಿಎಸ್‌ಎಸ್)ಗಳಿಗೆ ಅನುದಾನ ಒದಗಿಸುವ ಮೂಲಕವೂ ಕೇಂದ್ರವು ತಾನು ಸಂಗ್ರಹಿಸಿದ ಸಂಪನ್ಮೂಲಗಳನ್ನು ರಾಜ್ಯಗಳ ಜೊತೆ ಹಂಚಿಕೊಳ್ಳುತ್ತದೆ. ಆದರೆ ಈ ಎರಡೂ ಬಗೆಯ ಯೋಜನೆಗಳನ್ನು ಪಡೆದುಕೊಳ್ಳಲು ಕೇಂದ್ರವು ರಾಜ್ಯಗಳಿಗೆ ಹಲವಾರು ಷರತ್ತುಗಳನ್ನು ಹಾಕುವ ಮೂಲಕ ರಾಜ್ಯಗಳ ಮೇಲೆ ತನ್ನ ಅಧಿಕಾರವನ್ನು ಚಲಾಯಿಸುತ್ತಾ ಬಂದಿದೆ. ಹನ್ನೊಂದನೇ ಹಣಕಾಸು ಆಯೋಗವು (2000-05- ವಾಜಪೇಯಿ ನೇತೃತ್ವದ ಎನ್‌ಡಿಎ-1ರ ಅವಧಿ )ಕೇಂದ್ರದ ತೆರಿಗೆಗಳಲ್ಲಿ ರಾಜ್ಯ ಸರಕಾರಗಳ ಪಾಲನ್ನು ಶೇ. 29.5 ಎಂದು ನಿಗದಿ ಮಾಡಿತ್ತು. 13ನೇ ಹಣಕಾಸು ಆಯೋಗವು (2010-15- ಯುಪಿಎ-2 ಅವಧಿ) ಈ ಪಾಲನ್ನು ಶೇ. 32ಕ್ಕೇ ಏರಿಸಿತ್ತು.

ಮೋದಿ ಸರಕಾರದ ಅವಧಿ- ಮಾತಲ್ಲಿ ಫೆಡರಲ್- ಕೃತಿಯಲ್ಲಿ?
ಆದರೆ 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ತಮ್ಮದು ಕೋಆಪರೇಟೀವ್ ಫೆಡರಲಿಸಂ ತತ್ವವನ್ನು ಎತ್ತಿ ಹಿಡಿಯುವ, ರಾಜ್ಯಗಳ ಸ್ವಾಯತ್ತತೆಗೆ ಒತ್ತುಕೊಡುವ ಸರಕಾರವೆಂದು ಹೇಳುತ್ತಾ ಒಂದು ಕಡೆ ಯೋಜನಾ ಆಯೋಗವನ್ನು ರದ್ದು ಮಾಡಿತು. ಅದರ ಬದಲಿಗೆ ''ರಾಜ್ಯಗಳ ಸ್ವತಂತ್ರ ಅಭಿವೃದ್ಧಿಯ ಸಮಾಲೋಚನಾ ವೇದಿಕೆ''ಯಾಗುತ್ತದೆಂಬ ಪೊಳ್ಳು ಭರವಸೆಯೊಂದಿಗೆ ಮೋದಿ ಸರಕಾರ ಸ್ಥಾಪಿಸಿದ 'ನ್ಯಾಷನಲ್ ಇನ್‌ಸ್ಟಿಟ್ಯೂಶನ್ ಫಾರ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ- NITI' ಆಯೋಗವು, ಮೋದಿ ಸರಕಾರದ ಸರ್ವಾಧಿಕಾರಿ ನೀತಿಗಳಿಗೆ ತಾಂತ್ರಿಕ ಸಹಾಯ ಒದಗಿಸುವ ವೇದಿಕೆಯಾಗಿ ರಾಜ್ಯಗಳ ಅಧಿಕಾರ ಮತ್ತು ಜನರ ಹಕ್ಕುಗಳನ್ನು ಮೊಟಕುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಮತ್ತೊಂದು ಕಡೆ ಕೇಂದ್ರ ತೆರಿಗೆಯಲ್ಲಿ ರಾಜ್ಯಗಳ ಪಾಲನ್ನು 14ನೇ ಹಣಕಾಸು ಆಯೋಗದ ಮೂಲಕ ಶೇ. 42ಕ್ಕೆ ಏರಿಸಿತು. ಆದರೆ ಇದು ಬಿಜೆಪಿ-ಆರೆಸ್ಸೆಸ್‌ಗಳ ಇತರ ನೀತಿಗಳಂತೆ ಹಸಿಹಸಿ ಸುಳ್ಳೆಂಬುದು ಕೇವಲ ಕೆಲವೇ ತಿಂಗಳಲ್ಲಿ ಸಾಬೀತಾಯಿತು.

ನಾಳಿನ ಸಂಚಿಕೆಗೆ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top