ಭೂತದ ಎದೆಹಾಲು ಕುಡಿದು ಬೆಳೆದ ಬಾಲೆ ನಾನು; ಅದು ಪೊರೆವ ಭೂತ!
-

ಡಾ. ಇಂದಿರಾ ಹೆಗ್ಗಡೆ
ಸಮಾಜಮುಖಿ ಚಿಂತಕಿ ಡಾ. ಇಂದಿರಾ ಹೆಗ್ಗಡೆ ಸಾಹಿತಿ-ಸಂಶೋಧಕಿಯಾಗಿ ಗುರುತಿಸಿಕೊಂಡಿದ್ದಾರೆ. ಅವರು ಸಣ್ಣ ಕಥೆಗಳನ್ನು ಬರೆಯುವ ಮೂಲಕ ತಮ್ಮ 33ನೆಯ ವಯಸಿನಲ್ಲಿ ಸಾಹಿತ್ಯಲೋಕಕ್ಕೆ ಪಾದಾರ್ಪಣೆ ಮಾಡಿದರು. ಮೂರು ಕಥಾ ಸಂಕಲನಗಳನ್ನು, ನಾಲ್ಕು ಕಾದಂಬರಿಗಳನ್ನು, ಒಂದು ಕವನ ಸಂಕಲನವನ್ನು ಹೊರತಂದಿದ್ದಾರೆ. ‘ಗುತ್ತಿನಿಂದ ಸೈನಿಕ ಜಗತ್ತಿಗೆ’ ಎಂಬ ಅನುಭವ ಕಥನವನ್ನು ತಮ್ಮ ಪತಿ ಎಸ್. ಆರ್.ಹೆಗ್ಡೆಯವರೊಂದಿಗೆ ಸೇರಿ ರಚಿಸಿದ್ದಾರೆ. ಎಸ್.ಆರ್. ಹೆಗ್ಡೆಯವರ ಕುರಿತಾಗಿ ‘ನಾಡಿಗೆ ನಮಸ್ಕಾರ ಮಾಲೆ’ಗಾಗಿ ಕೃತಿ ರಚಿಸಿಕೊಟ್ಟಿದ್ದಾರೆ.. ‘ಬಂಟರು: ಒಂದು ಸಮಾಜೋ ಸಾಂಸ್ಕತಿಕ ಅಧ್ಯಯನ’ ಇವರಿಗೆ ಬಹಳ ಹೆಸರು ತಂದ ಕೃತಿ. ಅವರ ಡಿ.ಲಿಟ್. ಸಂಪ್ರಬಂಧ ‘ತುಳುವರ ಮೂಲತಾನ ಆದಿ ಆಲಡೆ : ಪರಂಪರೆ ಮತ್ತು ಪರಿವರ್ತನೆ’. ಸಂಶೋಧನೆ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಾಗಿ ಇವರು ಹಲವು ಪ್ರಶಸ್ತಿ, ಸನ್ಮಾನ, ಗೌರವಗಳಿಂದ ಅಲಂಕೃತರು.
ನಾನು ಜನಿಸಿದ್ದು ಬೆಳೆದುದು ಬಾಗಿಲೇ ಇಲ್ಲದ ತೆರೆದ ಚಾವಡಿಯ ಗುತ್ತು ಮನೆಯಲ್ಲಿ. ಚಾವಡಿಯಲ್ಲಿ ರಾಜನ್ ದೈವ ಜುಮಾದಿಯ ಬೂತೊಟ್ಯ ಇದೆ. ಈ ಚಾವಡಿಯ ಅಧಿಕೃತ ಗಡಿ ಹಿಡಿದ ಗುತ್ತಿನಾರ ಮುತಾಲಿಕೆಯಲ್ಲಿ ಗುತ್ತಿನ ಮತ್ತು ನೆರೆಯ ಶಿಮಂತೂರಿನ ಜಾರಂದಾಯನ ನೇಮ ಮತ್ತು ಇತರ ಸೇವಾಕಾರ್ಯಗಳು ನಡೆಯುತ್ತವೆ.
ಮುಂಭಾಗದಲ್ಲಿ ಗೋಡೆಗಳೇ ಇಲ್ಲದ ಈ ಗುತ್ತು ಮನೆಗಳ ವಿಶಾಲ ಚಾವಡಿಗಳಲ್ಲಿ ದೊಡ್ಡ ಕಲೆಂಬಿಗಳು. ಅದರೊಳಗೆ ಮನೆಯವರ ನಗ ನಾಣ್ಯ ಇರುತ್ತದೆ. ಆ ಕಲೆಂಬಿಯ ಮೇಲೆ ಮನೆಯ ಸದಸ್ಯರು ಮಲಗುತ್ತಿದ್ದರು.
ಈ ಚಾವಡಿಯಲ್ಲಿ ಜುಮಾದಿ, ಬಂಟ, ಮಯಿಸಂದಾಯ ಮತ್ತು ಪಂಜುರ್ಲಿ ಭೂತಗಳು ಇವೆ. ಅವು ಅಂದೂ ಇಂದೂ ಮನೆಯ ಗಡಿ ಹಿಡಿದ ಯಜಮಾನನಿಂದ ಪೂಪೂಜನದ ಸೇವೆಯನ್ನು ಪಡೆಯುತ್ತವೆ. ಮನೆಯೊಳಗೆ ಅಣ್ಣಪ್ಪ ಪಂಜುರ್ಲಿ ಭೂತ ಇದೆ.
ಪಂಜುರ್ಲಿಗೆ ಕೋಳಿ ಕಡಿಯಲೆಂದು ಮನೆಯ ಹೊರಗೆ ನೈರುತ್ಯ ಭಾಗದಲ್ಲಿ ಒಂದು ಕಲ್ಲು ಹಾಕಿದ್ದರು. ಗುರುತಿಗೆ. ವರ್ಷಕ್ಕೆ ಒಮ್ಮೆ ನಡೆಯುವ ಕೋಲ, ತಂಬಿಲಗಳಲ್ಲಿ ಈ ಕಲ್ಲಿನ ಬಳಿ ಅನೇಕ ಕೋಳಿಗಳ ಕತ್ತು ಕತ್ತರಿಸಿ ರಕ್ತ ಹರಿಸುತ್ತಿದ್ದರು.
ಮೇಲೆ ಗುಡ್ಡದ ಕಾಡಿನಲ್ಲಿ ಗುಳಿಗನ ಸಾನ ಇತ್ತು. ಶನಿವಾರ, ಸೋಮವಾರ, ಅಮವಾಸ್ಯೆ, ಭರಣಿ ಕೃತ್ತಿಕೆ ಉಳಿದು ಇತರ ದಿನಗಳಲ್ಲಿ ಅದಕ್ಕೆ ನಿತ್ಯ ಭೋಗ. ನಿತ್ಯ ಮೂರು ಕೋಳಿಗಳ ಭೋಗ! ಒಂದು ಕೋಳಿಯನ್ನು ಕ್ಷೇತ್ರದಲ್ಲಿಯೇ ಅಡುಗೆ ಮಾಡಿ ಪ್ರಸಾದ ರೂಪದಲ್ಲಿ ಬಡಿಸುತ್ತಾರೆ.
ಚಾವಡಿಯಲ್ಲಿ ರಾಜನ್ ದೈವ ಇದ್ದುದರಿಂದ ನಮಗೆ ಈ ಜೋರು ಭೂತಗಳ ಬಗ್ಗೆ ಭಯ ಇದ್ದಿರಲಿಲ್ಲ. ದೈವ ಮಾಧ್ಯಮನ ನುಡಿಯಂತೆ, ರಾಜನ್ ದೈವಗಳಿಗೆ ಕುಳಿತು ಪಟ್ಟ, ಪಂಜುರ್ಲಿ, ಗುಳಿಗ ದೈವಗಳಿಗೆ ತಿರುಗಿ ಪಟ್ಟ. ಅಂದರೆ ಊರು ಕಾಯುವ ಕೆಲಸ ಅವುಗಳದ್ದು. ಗುಳಿಗ ಜೋರು ಎಂದು ನಂಬಿಕೆ ಹುಟ್ಟಿಸಲಾಗಿದೆ, ಈ ಗುಳಿಗನ ಜೋರು ಬಗ್ಗೆ ನನ್ನ ಕ್ಷೇತ್ರಕಾರ್ಯ ಸಂದರ್ಭಗಳಲ್ಲಿ ನಾನು ಸಂದರ್ಶಿಸಿದ ಮನೆಗಳವರು ನನ್ನ ಬಳಿ ಕೇಳಿದ್ದರು, ಎಳತ್ತೂರು ಗುತ್ತಿನ ಜೋರು ಅಂತೆ, ಬಲು ಕಾರ್ನಿಕ ಅಂತೆ. ಆದರೆ ನಮ್ಮ ಗುಳಿಗ ಯಾರಿಗಾದರೂ ಅನ್ಯಾಯ ಮಾಡಿದ ಒಂದೇ ಒಂದು ಉದಾಹರಣೆ ಇಲ್ಲ. ಯಾರನ್ನೂ ಕೊಂದ ಅಂತೆ ಕಂತೆಗಳೂ ಇಲ್ಲ. ಆದರೆ ಕದ್ದವರು ತಮಗೆ ತೊಂದರೆ ಆದಾಗ ಬಲ್ಮೆಯಲ್ಲಿ ಕೇಳುವಾಗ ಗುಳಿಗ ಅವರ ಕಣ್ಣೆದುರು ಬಂದಿದ್ದು ಇದೆ. ಅದು ಸಹಜ ಕೂಡಾ! ಮುಲ್ಕಿ ಸ್ಟೇಷನ್ನಲ್ಲಿ ಒಬ್ಬ ಕಳ್ಳ ಹೇಳಿದ್ದನಂತೆ, ನಾನು ಎಲ್ಲಿ ಕದ್ದರೂ ಎಳತ್ತೂರಲ್ಲಿ ಕದಿಯುವುದಿಲ್ಲ ಎಂದು. ಒಂದು ವೇಳೆ ಆಕಸ್ಮಿಕವಾಗಿ ಯಾರಾದರೂ ಸಣ್ಣ ಪುಟ್ಟ ವಸ್ತುವನ್ನು ಕದ್ದರೆ ಕೂಡಾ ಗುಳಿಗನ ಬೀರ್ ಪ್ರತಾಪ ಅವರ ಕಿವಿಗೆ ಬಿದ್ದು ಕದ್ದ ಸಾಮಾನನ್ನು ಮರಳಿ ತಂದು ಹಾಕಿ ಹೋಗುತ್ತಿದ್ದ ಉದಾಹರಣೆ ಇದೆ.
ಈ ಗುಳಿಗನಿಗೆ ನಾವು ಎಷ್ಟು ಹೆದರುತ್ತಿದ್ದೆವೆಂದರೆ ಈ ಗುಳಿಗನ ಕಾಡಿಗೆ ಮಳೆಗಾಲದ ಮೊದಲ ಸಿಡಿಲಿಗೆ ಮಣ್ಣಿನಲ್ಲಿ ಮೂಡುವ ಕಲ್ಲಲಾಂಬು ಹೆಕ್ಕಲಾಗಲೀ, ಮತ್ತೆ ಸುರಿವ ಮಳೆಗೆ ಬೆಳೆವ ಕುಂಟಾಲ ಹಣ್ಣನ್ನು ಬಿಡಿಸಿ ತರಲು ಆಗಲೀ ಅಥವಾ ಬೇಸಗೆಯ ದಿನಗಳಲ್ಲಿ ಹಳ್ಳಿ ಮಕ್ಕಳ ಕರಿ ದ್ರಾಕ್ಷಿಯ ರುಚಿ ನೀಡಬಲ್ಲ ಕರಂಡೆ ಹುಳಿ ಆಗಲೀ ತರಲು ಆ ಗುಳಿಗನ ಸಾನದ ಬಳಿ ಹೋಗುತ್ತಿರಲಿಲ್ಲ. ಆದರೂ ಚಾವಡಿಯ ರಾಜನ್ ದೈವದ ಮಾತು ಮೀರಿ ಯಾವ ಭೂತವೂ ಹೋಗಲಾರದು ಎಂಬ ನಂಬಿಕೆ ನಮ್ಮದು. ಆ ನಂಬಿಕೆ ಬರುವಂತೆ ಜುಮಾದಿ ಮಾನೆಚ್ಚಿಯಲ್ಲಿ ಅಥವಾ ಪಂಬದೆಚ್ಚಿಯಲ್ಲಿ ನಮಗೆ ಭರವಸೆ ನೀಡುತ್ತದೆ. ಮಾತ್ರವಲ್ಲ ತನ್ನನ್ನು ಮೀರಿ ಯಾವ ಪರಿವಾರ ಭೂತವೂ ಹೋಗದು ಎಂಬ ನಂಬಿಕೆಯನ್ನು ಈ ಭೂತವು ನಮ್ಮಲ್ಲಿ ಹುಟ್ಟಿಸಿತ್ತು. ‘‘ನಾನು ತಾಯಿಯಾಗಿ ಮೊಲೆ ಹಾಲನ್ನಿತ್ತು ಪೊರೆವೆ, (ಸೋದರ) ಮಾವನಾಗಿ ನಿಮ್ಮ ಬೆನ್ನ ಹಿಂದೆ ನಿಂತು ಕಾಯುತ್ತೇನೆ’’ ಎನ್ನುವ ಈ ಭೂತ ಪೊಣ್ಣ ನೆರಿ, ಆನ ತರೆ (ಹೆಣ್ಣಿನ ಮಾನ ಗಂಡಿನ ಪ್ರಾಣ) ಕಾಪಾಡುವ ಹೊಣೆ ತನ್ನದು. ‘ಹತ್ತು ತಾಯಿಯ ಮಕ್ಕಳನ್ನು ಒಂದು ತಾಯಿಯ ಮಕ್ಕಳಂತೆ ಮಡಿಲಲ್ಲಿರಿಸಿ ಎದೆ ಹಾಲನ್ನಿತ್ತು ಪೊರೆವೆ’ ಎಂಬ ಅಭಯ ನುಡಿಯನ್ನು ನಮ್ಮ ರಾಜನ್ ದೈವದ ಬಾಯಿಯಿಂದ ಕೇಳಿಯೇ ಬೆಳೆದವಳು.
ಬಾಗಿಲಿಲ್ಲದ ಮನೆಗಳು:
ದುಷ್ಟರನ್ನು ಶಿಕ್ಷಿಸುವ ಭೂತ ಭಯದಿಂದಾಗಿ ಅಂದಿನ ತುಳುನಾಡಿನಲ್ಲಿ ಕಳ್ಳಕಾಕರ ಭಯ ಇರಲಿಲ್ಲ. ಹೀಗಾಗಿ ವಿದೇಶಿ ಪ್ರವಾಸಿಗರೂ ತುಳುನಾಡಿನ ಉದ್ದಗಲಕ್ಕೂ ಒಂಟಿಯಾಗಿ ಕಾಲ್ನಡಿಗೆಯಲ್ಲಿ ಸಂಚರಿಸಲು ಸಾಧ್ಯವಾಗಿದೆ. ಜಾತಿ ಜಾತಿ, ಧರ್ಮ ಧರ್ಮಗಳ ನಡುವೆ ಕಲಹ ಇರಲಿಲ್ಲ. ಚಾವಡಿ ದೈವದ ಹೆಸರಲ್ಲಿ ಬೀಡುಗಳ ಗುತ್ತುಗಳ ಯಜಮಾನರು ಮತಧರ್ಮಗಳ ಸೌಹಾರ್ದಕ್ಕೆ ಭಂಗ ಉಂಟಾಗದಂತೆ ನೋಡುತ್ತಿದ್ದರು. ಜಾತಿ ಜಾತಿಗಳೊಳಗಿನ ಕಲಹಗಳನ್ನು ನಿವಾರಿಸುತ್ತಿದ್ದರು. ಅಂದಿನ ಮನೆಗಳಿಗೆ ಮುಂದಿನಿಂದ ಗೋಡೆ ಬಾಗಿಲುಗಳು ಇದ್ದಿರಲಿಲ್ಲ. ‘ತೆರೆದ ಚಾವಡಿ’ಯ ಕಲೆಂಬಿಯಲ್ಲಿ ಇದ್ದ ದೈವಗಳ ಆಭರಣ ಭಂಡಾರಕ್ಕೆ ಕಳ್ಳರು ಕನ್ನ ಹಾಕದೆ ಇದ್ದಿದ್ದುದು ಭೂತ ಭಯದಿಂದ. ಈಗ ಅಂತಹ ಮನೆಗಳು ಬಹಳ ಅಪರೂಪವೆಂಬಂತೆ ಅಲ್ಲೊಂದು ಇಲ್ಲೊಂದು ಉಳಿದಿವೆ.
ಭೂತಾರಾಧನೆಯ ವಿವಿಧ ಆಯಾಮಗಳನ್ನು ನಾನು ಸುಮಾರು 20ವರ್ಷಗಳಿಂದ ಕ್ಷೇತ್ರಗಳ ಸಂದರ್ಶನ ಅಧ್ಯಯನ ಮಾಡುತ್ತಿದ್ದೇನೆ. ಭೂತಾರಾಧನೆಯ ಮೂಲ ಸಂಸ್ಕೃತಿಯ ಬಗ್ಗೆ ದಾಖಲಾತಿ ಮಾಡಿ ಕೃತಿಗಳನ್ನು ರಚಿಸಿದ್ದೇನೆ.
ಸಂಸ್ಕೃತಿ ಚಲನೆ ವೇಗವನ್ನು ಪಡೆದುದು.
ಭೂತಸ್ಥಾನಗಳು ದೇವಸ್ಥಾನಗಳಾದುದು:
ಸಂಸ್ಕೃತಿ ಚಲನೆ ನಿರಂತರವಾದುದು ಆದರೂ ಅದು ಕೆಲವೊಮ್ಮೆ ಮಂದಗತಿಯಲ್ಲಿ ಕೆಲವೊಮ್ಮೆ ತೀವ್ರಗತಿಯಲ್ಲಿ ನಡೆಯುತ್ತದೆ. ಆರಂಭದಲ್ಲಿ ನಾಥ ಪಂಥವು ಕರಾವಳಿಯ ತುಳು ನೆಲದ ಸಂಸ್ಕೃತಿಯೊಂದಿಗೆ ರಾಜಿಮಾಡಿಕೊಂಡಿತ್ತು. ನಾವಿಂದು ಮಾಡುವ ಜುಮಾದಿ, ಪಂಜುರ್ಲಿ, ಕಾಳಿ, ಕಾಳ ಬೈರವ, ಕಾಳರ್ಕಾಯಿ, ಚಂಡಿ, ಚಾಮುಂಡಿ ಕನ್ಯಾಕುಮಾರಿ ಮುಂತಾದ ಅನೇಕ ಭೂತ/ದೈವಗಳು ನಾಥ ಪಂಥದ ಶಕ್ತಿಗಳು. ಉತ್ತರ ಭಾರತದ ಕೆಲವು ಕಡೆ, ಬಂಗಾಳ, ಮಣಿಪುರ, ತ್ರಿಪುರ ಅಸ್ಸಾಮ್ನ ಕಾಮಾಖ್ಯದಲ್ಲಿ ಇವುಗಳು ಈಗಲೂ ರಕ್ತಬಲಿ ಪಡೆದು ಉಪಾಸನೆಗೊಳ್ಳುತ್ತಿವೆ.
ಅಲ್ಲಿಯ ಬ್ರಾಹ್ಮಣರು ಈ ಶಕ್ತಿಗಳ ಪೂಜೆ ಮಾಡುತ್ತಾರೆ. ಯಾವುದೋ ಕಾಲದಲ್ಲಿ ನಾಥ ಪಂಥದ ಪ್ರಭಾವ ತುಳು ಸಂಸ್ಕೃತಿಯಲ್ಲಿ ಸಮ್ಮಿಲನಗೊಂಡಿರಬೇಕು. ಬೌದ್ಧ ಧರ್ಮದ ಮಹಾಯಾನದ ಶಾಖೆಯ ಪ್ರಭಾವವೂ ಆಗಿರಬಹುದು. ಆದರೆ ತುಳುನಾಡಿನಲ್ಲಿ ಹೆಚ್ಚಾಗಿ ಈಗ ಇರುವವರು ವೈಷ್ಣವ ಬ್ರಾಹ್ಮಣರು. ಶೂದ್ರ ದೈವಗಳನ್ನು ಉಪಾಸನೆ ಮಾಡುವುದು ಅವರಿಗೆ ಪ್ರತಿಷ್ಠೆಯ ಕೆಲಸ ಅಲ್ಲ. ಬೀಡು ಗುತ್ತುಗಳ ಪಟ್ಟದ ದೈವಕ್ಕೆ ಗಡಿ/ಪಟ್ಟಾಭಿಷಿಕ್ತ ಹಿರಿಯನೇ ಅರ್ಚನೆ ಮಾಡಬೇಕೆನ್ನುವ ಪರಂಪಾನುಗತ ಪದ್ಧತಿ ಇತ್ತು.
ಅರ್ಚಕ ವೃತ್ತಿ ಮೇಲ್ಜಾತಿಗಳಾದ ಬಂಟ ಜೈನರಿಗೂ ಪ್ರತಿಷ್ಠೆಯ ಕೆಲಸ ಆಗಿರಲಿಲ್ಲ. ಅರ್ಚಕ ವೃತ್ತಿಯಿಂದ ಬಿಡುಗಡೆ ಹೊಂದಲು ಗುತ್ತು ಬೀಡುಗಳಲ್ಲಿ ಆರಂಭದಲ್ಲಿ ಬ್ರಾಹ್ಮಣ ಅರ್ಚಕರನ್ನು ಕರೆಸಿಕೊಂಡರು. ಅರಸು ದೈವಗಳ, ಚಾವಡಿ ದೈವಗಳ ಪೂನೀರ್ ಇಡುವ ಇನ್ನಿತರ ಕೆಲಸಗಳನ್ನು ಅವರಿಗೆ ಒಪ್ಪಿಸಿ ತಾವು ಭೂತದ ಉಪಾಸನಾ ಕೆಲಸಗಳಿಂದ ಬಿಡುಗಡೆ ಪಡೆದರು. ಈ ಭೂತಗಳ ಉಪಾಸನಾ ಕೈಂಕರ್ಯಕ್ಕೆ ಬ್ರಾಹ್ಮಣರಿಗೆ ಉಂಬಳಿಯನ್ನು ನೀಡಿದರು. ಶೂದ್ರ ದೈವಗಳಿಗೆ ಬ್ರಾಹ್ಮಣರು ಅರ್ಚಕರಾಗಲು ನಿಷೇಧ ಇದ್ದರೂ ಅನ್ನದ ಪ್ರಶ್ನೆ, ಬದುಕಿನ ಪ್ರಶ್ನೆ ಇಲ್ಲಿ ಇರುವುದರಿಂದ ತಮಗೆ ಅನುಕೂಲಕರವಾದ ಪರಿವರ್ತನೆಗಳನ್ನು ಆರಂಭದಲ್ಲಿ ಮಾಡಿಸಿ ಬ್ರಾಹ್ಮಣರು ಶೂದ್ರರ ಭೂತಸ್ಥಾನಗಳಲ್ಲಿ ಅರ್ಚಕರಾಗಿ ನಿಯುಕ್ತಿಗೊಂಡರು.
ಇದರ ಪರಿಣಾಮವಾಗಿ ಮುಂದೆ ಅನೇಕ ಭೂತ/ದೈವಸಸ್ಥಾನಗಳು, ದೇವಸ್ಥಾನಗಳಾಗಿ ಪರಿವರ್ತಿತವಾದುವು. ಉದಾ ಧರ್ಮಸ್ಥಳ, ನಂದಳಿಕೆ, ಕವತ್ತಾರು, ದೇಂದೊಟ್ಟು ಇನ್ನೂ ಅನೇಕಾನೇಕ ದೈವಸ್ಥಾನಗಳು ದೇವಸ್ಥಾನಗಳಾದುವು. ಇಂತಹ ಪರಿವರ್ತನೆ ಈಗಲೂ ಆಗುತ್ತಿವೆ. ಶಿವಲಿಂಗ ಸ್ಥಾಪನೆಯಾದ ಅಥವಾ ಶ್ರೀ ಚಕ್ರ ಪ್ರತಿಷ್ಠಾಪನೆ ಆದ ಆಲಡೆ, ದೈವಸ್ಥಾನಗಳಲ್ಲಿ ಉಲ್ಲಾಯನನ್ನು, ಧರ್ಮ ದೈವಗಳನ್ನು ಎರಡನೇ ದರ್ಜೆಗೆ ಇಳಿಸಲಾಯಿತು. ಇಂತಹ ಪರಿವರ್ತನೆಯ ಮೂಲಕ ಬ್ರಾಹ್ಮಣತ್ವಕ್ಕೆ ಕುಂದುಂಟಾಗದಂತೆ ಎಚ್ಚರಿಕೆ ವಹಿಸಲಾಯಿತು.
ಅಂತಹ ಕೆಲವೆಡೆ ಆಲಡೆ ಕ್ಷೇತ್ರಗಳಲ್ಲಿ ಉಲ್ಲಾಯನ (ನಾಗಬೆರ್ಮೆರ್)ಮುಂದಿದ್ದ ಕೊಡಿಮರವನ್ನು ಕಿತ್ತು ಶಿವನ ಗರ್ಭಗುಡಿಯ ಮುಂದೆ ಪ್ರತಿಷ್ಠಾಪಿಸಲಾಯಿತು. ಈ ಪರಿವರ್ತನೆಯನ್ನು ಆರಂಭದಲ್ಲಿ ಎಲ್ಲರೂ ಪುರಸ್ಕರಿಸಲಿಲ್ಲ. ಘರ್ಷಣೆ ಆದುದೂ ಇದೆ. ಹೀಗೆ ಆಗಮ ಸಂಪ್ರದಾಯದ ಪೂಜೆಗೆ ನೆಲಮೂಲದ ದೈವಗಳು ಒಗ್ಗಿಕೊಂಡವು.
ಇನ್ನೊಂದು ಹಂತದಲ್ಲಿ ತುಳುನಾಡಿನ ‘ನಾಗಬೆರ್ಮೆರ್’ ಎಂಬ ಕೂಡು ನುಡಿಯಿಂದ ನಾಗನನ್ನು ಪ್ರತ್ಯೇಕಿಸಿ ದೇವರ ಸಾಲಲ್ಲಿ ನಿಲ್ಲಿಸಲಾಯಿತು. ಬೆರ್ಮೆರನ್ನು ಭೂತಗಳ ಸಾಲಲ್ಲಿ ನಿಲ್ಲಿಸಲಾಯಿತು. ಕೆಲವೆಡೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘‘ತುಳು ಬೆರ್ಮ’’ನನ್ನು ವೈದಿಕ ಧರ್ಮಕ್ಕೆ ಪರಿವರ್ತಿಸಿ ಬ್ರಹ್ಮಲಿಂಗೇಶ್ವರ ಮಾಡಲಾಯಿತು. ಈ ಬದಲಾವಣೆಗೆ ಕಾರಣ ಭೂತಾರಾಧನೆಯಲ್ಲಿ ಆಗಮ ಸಂಪ್ರದಾಯದ ಪ್ರವೇಶ. ‘‘ಭೂತ’’ ಪದದ ಬಗ್ಗೆ ಇದ್ದ ತಪ್ಪು ಕಲ್ಪನೆ. ಆದರೆ ವೇದಗಳು ‘‘ನಾಗಂ ಪ್ರಧಾನ ಭೂತಂ’’ ಎನ್ನುತ್ತವೆ.
ಆದರೂ ಈಗಲೂ ಶೂದ್ರವರ್ಗದ ಬಂಟರು ಮತ್ತು ಬಿರುವ ಪೂಜಾರಿಗಳು ಇದ್ದಾರೆ, ದಲಿತರು ನಾಗಬೆರ್ಮೆರ ತನು ತಂಬಿಲ ಸೇವೆ, ಪ್ರತಿಷ್ಠಾಪನೆ ಮಾಡುವ ಸಂಸ್ಕೃತಿ ಅಪರೂಪಕ್ಕೆ ಎಂಬಂತೆ ಈಗಲೂ ಬಿರುವರಲ್ಲಿ, ದಲಿತರಲ್ಲಿ ಉಳಿದು ಬಂದಿದೆ. ಉಲ್ಲಾಲ್ತಿಯ ದರ್ಶನ ಪಾತ್ರಿಗಳಾಗಿ, ಢಕ್ಕೆ ಬಲಿ, ಮಂಡಲ ಪೂಜೆಯ ನಾಗ/ಸ್ವಾಮಿ ಪಾತ್ರಗಳಾಗಿ ಬಂಟರೂ ಇದ್ದಾರೆ. ಕಟೀಲು, ಬಪ್ಪನಾಡು ದುರ್ಗಾ ದೇವಿ ಸ್ಥಳೀಯರಿಗೆ ಈಗಲೂ ಉಲ್ಲಾಲ್ತಿ.
ಆದರೂ ಇನ್ನೂ ಅನೇಕ ಕಡೆ ಉಲ್ಲಾಲ್ತಿ , ದುರ್ಗಾಪರಮೇಶ್ವರಿಯಾಗದೆ ತುಳು ನೆಲಮೂಲದ ದೈವವಾಗಿ/ಭೂತವಾಗಿ ಮೆಚ್ಚಿ/ಕೋಲ ಪಡೆದು ಸಂಪ್ರೀತಳಾಗುತ್ತಿದ್ದಾಳೆ. ಉಲ್ಲಾಲ್ತಿ ನಾಗಶಕ್ತಿಯಾಗಿ ಉಪಾಸನೆ ಗೊಳ್ಳುವ ದಲಿತರ ನಾಗಕ್ಷೇತ್ರಗಳು ಇವೆ. ನಾಗ ಸ್ತ್ರೀ ಪುರುಷ ಶಕ್ತಿಯನ್ನು ಒಳಗೊಂಡಿರುವ ದೈವ ಶಕ್ತಿ. ಹೀಗಾಗಿ ತುಳುನಾಡಿನ ದೈವಗಳು ಸ್ತ್ರೀ ಮತ್ತು ಪುರುಷ ಶಕ್ತಿಗಳನ್ನು ಒಳಗೊಂಡಿವೆ ಎಂದು ನಂಬಲಾಗಿದೆ.
ತುಳುನಾಡಿನಲ್ಲಿ ಉಲ್ಲಾಲ್ತಿ -ಉಲ್ಲಾಯ ರೂಪದಲ್ಲಿಯೇ ನಾಗಶಕ್ತಿಗಳು ಸೇವೆ ಪಡೆಯುತ್ತವೆ. ಐತಿಹ್ಯದ ಪ್ರಕಾರ ಕಟೀಲು ಉಲ್ಲಾಲ್ತಿಯು ಮೊದಲು ಮೈದೋರಿದ್ದು ‘ಕಟೀಲ’ ಎಂಬ ಕೊರಗ ತರಣನ ತಾಯಿಗೆ.
ಕಂಬುಲ -ಸಿರಿ
ಭತ್ತದ ಬೆಳೆಗೆ ಸಮೃದ್ಧವಾದ ಭೂಮಿಯ ನಾಡಿದು. ತುಳುನಾಡಿನ ಹಬ್ಬಗಳೂ ಕೃಷಿ ಆಚರಣೆಯ ಭಾಗ. ದೀಪಾವಳಿ ಮುಂತಾದ ಹಬ್ಬಗಳು ಮಾತ್ರವಲ್ಲ ಚೌತಿಯೂ ಬೇಸಾಯ ಮೂಲದ ಹಬ್ಬವಾಗಿದೆ. ತುಳು ಸಂಸ್ಕೃತಿಯ ಚೌತಿಯ ಗಣಪನ ಪೂಜೆ ಅಂದರೆ ಕಬ್ಬು ಮತ್ತು ದ್ವಿದಳ ಧಾನ್ಯಗಳನ್ನು ಪೂಜಿಸುವುದಾಗಿದೆ. ಪರ್ಬ ಎಂದು ಕರೆಸಿಕೊಳ್ಳುವ ದೀಪಾವಳಿ ಮನೆಗೆ ಪೊಲಿ/ಸಿರಿಯನ್ನು ತುಂಬುವ ಸಂಭ್ರಮವನ್ನು ಆಚರಿಸುವುದಾಗಿದೆ. ಭೂತಾರಾಧನೆ ಕಂಬುಲ, ಆಟಿ ಕಳಂಜ, ಸೋಣದ ಮದಿಮಾಳ್, ಕರಂಗೋಲು ಕುಣಿತ, ನಾಗಾರಾಧನೆ ಭತ್ತದ ಬೇಸಾಯದೊಂದಿಗೆ ನಂಟನ್ನು ಹೊಂದಿವೆ. ಆದ್ದರಿಂದಲೇ ತುಳುನಾಡಿನ ಬೇಸಾಯದಿಂದ, ಇಲ್ಲಿಯ ಸಂಸ್ಕೃತಿಯನ್ನು ಬೇರ್ಪಡಿಸಲಾಗುವುದಿಲ್ಲ. ನಾಗ ಕೃಷಿ ಪೋಷಕ ದೈವ.
ಕಂಬುಲವು ಕೃಷಿ ದೈವವಾದ ನಾಗಬೆರ್ಮ ಮತ್ತು ಪರಿವಾರ ದೈವಗಳ ಉಪಾಸನೆ: ಕಂಬುಲ ಎಂದರೆ ಗದ್ದೆಗೆ ಮದುವೆ. ಕಂಬುಲ ಆರಂಭ ಆಗುವುದು ನಾಗ ಕ್ಷೇತ್ರಗಳಿಂದ. ನಾಗ ಬನಗಳಿಂದ. ಎಲ್ಲಾ ಪರಂಪರೆಯ ಕಂಬುಲಗಳು ಆಯಾ ಮನೆತನದ ದೈವಗಳ ಹೆಸರಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ಆಯಾ ದೈವಗಳಿಗೆ ಕೋಲ ನಡೆಯುತ್ತದೆ. ದೈವಗಳು ಆಯಾ ಮನೆತನಕ್ಕೆ ಸಮೃದ್ಧಿಯನ್ನು ತಂದು ಕೊಡುವ ಭರವಸೆಯನ್ನು ನೀಡುತ್ತವೆ. ಆಯಾ ಮನೆತನದ ಕಂಬುಲದ ಕೋಣಗಳನ್ನು ‘ಪಟ್ಟದ ಕೋಣಗಳು’ ಎಂದು ಗೌರವದಿಂದ ಕಾಣುತ್ತಾರೆ.
ಕಂಬುಲದ ದಿನ ಪಟ್ಟದ ಕೋಣಗಳು ಉಪವಾಸ ಇರುತ್ತವೆ. ಮನೆಯ ಯಜಮಾನ ಕೂಡಾ ಉಪವಾಸ ಇರುತ್ತಾನೆ. ಪಟ್ಟದ ಕೋಣಗಳಿಗೆ ದರ್ಶನ ಬಂದು ನಡುಗುತ್ತವೆ. ಇಂತಹ ಕಂಬುಲಕ್ಕೆ 733 ವರ್ಷಗಳ ಇತಿಹಾಸ ಇದೆ. ಬಾರ್ಕೂರಿನಿಂದ ಆಳುತ್ತಿದ್ದ ಬಲ್ಲಮಹಾದೇವಿಯ ಕ್ರಿ.ಶ. 1282ರ ಶಾಸನದಲ್ಲಿ ಕಂಬುಲಕ್ಕೆ ಎತ್ತುಗಳನ್ನು ಪೂರೈಸಿದ ಉಲ್ಲೇಖ ಇದೆ.
ಸಿರಿ ಆರಾಧನೆ ಮತ್ತು ಕಂಬುಲಗಳು ಕೃಷಿ ಪೋಷಕ ಸಾಮೂಹಿಕ ಆಚರಣೆ; ಉಪಾಸನೆ. ತುಳು ನೆಲದ ಪಾಳೆಯಗಾರಿಕೆ ಸಂಸ್ಕೃತಿಯ ಮೂಲದ ನಾಗ ಶಕ್ತಿಗಳ, ನಾಗ ಬೆರ್ಮರ ಉಪಾಸನಾ ಆಚರಣೆ. ಕಾಲಾಂತರದಲ್ಲಿ ಅವು ತನ್ನ ಮೂಲ ಸ್ವರೂಪವನ್ನು ಬದಲಾಯಿಸಿಕೊಂಡರೂ ಈಗಲೂ ಹಲವೆಡೆ ಅಂದಿನ ಪಾಳೆಯಗಾರಿಕೆಯ ಉಪಾಸನಾ ಸಂಸ್ಕೃತಿಯಾಗಿ ಉಳಿದುಕೊಂಡು ಬಂದಿದೆ. ‘ಸಿರಿಗಳು’ ಈ ನಾಡಿಗೆ ಬಂದುದು ಅತಿಕಾರೆ ಎಂಬ ಭತ್ತದ ಬೀಜದ ಜೊತೆಗೆ. ಸಿರಿ ಅಂದರೆ ಫಲವಂತಿಕೆ.
ಎರಡು ಕುಂಭಗಳು ಸಿರಿಗಳನ್ನು ಪ್ರತಿನಿಧಿಸುತ್ತವೆ. ಎರಡು ಹೆಡಿಗೆ ಅತಿಕಾರೆ ಭತ್ತ, ಅವಳಿ (ಕನ್ನೆಗಳನ್ನು) ಸಿರಿಗಳನ್ನು ಪ್ರತಿನಿಧಿಸುತ್ತದೆ. ಸಿರಿಗಳ ನಲಿಕೆ (ಇವು ಪಾಡ್ದನ ಸಿರಿಗಳಲ್ಲ) ಅಂದರೆ ದಯ್ಯೊಲೆ ನಲಿಕೆಯಲ್ಲಿ ಪ್ರಧಾನವಾಗಿ ಪೂಜಿಸುವುದು ಎರಡು ಪುಡಾಯಿ (ಹೆಡಿಗೆ) ಅತಿಕಾರ ಭತ್ತವನ್ನು. ಕೊಯ್ಲಿನ ಸಂದರ್ಭದಲ್ಲಿ ಸಿರಿಗಳ/ದೆಯ್ಯೊಲೆ ನಲಿಕೆ ಎಂಬ ಉಪಾಸನಾ ಆಚರಣೆ ನಡೆಯುತ್ತದೆ. ಕಂಬುಲ ಸಂಸ್ಕೃತಿಯ ಭಾಗವಾಗಿದೆ. ಕಂಬುಲದ ದಿನವೂ ಸಿರಿ ದರ್ಶನ (ದೆಯ್ಯೊಲೆ ನಲಿಕೆ) ಹಿಂದೆ ನಡೆಯುತ್ತಿತ್ತು. ಕಂಬುಲ ಗದ್ದೆಯ ಕೊಯ್ಲಿನ ದಿನವೂ ದೆಯ್ಯೊಲೆ ನಲಿಕೆ ನಡೆಯುವ ಕಡ್ಡಾಯ ಪದ್ಧತಿ ಇತ್ತು.
ಅರಸು ದೈವಗಳ ಮತ್ತು ನಾಗ ಶಕ್ತಿಗಳ ಕ್ಷೇತ್ರಗಳಲ್ಲಿ ಬಿಷು ಸಂಕ್ರಾಂತಿಯಂದು ನಡೆಯುವ ಉತ್ಸವ ಕೃಷಿಪೋಷಕವಾದುದು. ತುಳುನಾಡಿಗರಿಗೆ ಮೇಷ ಮಾಸದ ಅಂದರೆ ಪಗ್ಗುತಿಂಗಳ ಸಂಕ್ರಾಂತಿಯ ಮರುದಿವಸ ಹೊಸ ವರುಷ. ಹೊಸ ವರುಷವನ್ನು ತನ್ನ ಸೀಮೆ, ಗ್ರಾಮ ವ್ಯಾಪ್ತಿಯ ಜನರೊಂದಿಗೆ ಅರಸು ದೈವಗಳು ಸ್ವಾಗತಿಸುತ್ತವೆ. ಈ ಪದ್ಧತಿ ಇಂದಿಗೂ ಮಂಗಳೂರು, ಬಂಟ್ವಾಳ, ಕಾಸರಗೋಡು, ಸುಳ್ಯ ಮುಂತಾದ ಕಡೆ ನಡೆಯುತ್ತಿದೆ. ಹೊಸ ವರ್ಷದ ಹೊಸ ಫಲಗಳನ್ನು ದೈವದ ಕೊಡಿಮರದಲ್ಲಿ ಅರ್ಪಿಸಿ ನಿಲುವುಗನ್ನಡಿ ಇಟ್ಟು ಆ ಮೂಲಕ ಹೊಸ ವರ್ಷಕ್ಕೆ ನಾಡಿನ ಸಮಸ್ತರಿಗೆ ಸಮೃದ್ಧಿಯನ್ನು ಬಯಸುತ್ತವೆ ಈ ದೈವಗಳು.
ಭೂತಸ್ಥಾನಗಳಲ್ಲಿ ಬ್ರಹ್ಮ ಕಲಶ:
ಈ ಶತಮಾನದ ಮಧ್ಯ ಭಾಗದಲ್ಲಿ ಭೂತಸ್ಥಾನಗಳನ್ನು ನವೀಕರಿಸುವಾಗ ಭೂತಗಳ ಪ್ರತಿಷ್ಠಾಪನೆ, ಬ್ರಹ್ಮ ಕಲಶ ಮುಂತಾದುವು ಇರಲಿಲ್ಲ. ‘‘ಪೊಸ ಪುಡಾಯಿಯಲ್ಲಿ ದೈವದ ಭಂಡಾರ ಇಟ್ಟು ಕೂಚಿಯ ಪವಿತ್ರ ನೀರು ಪ್ರೋಕ್ಷಿಸಿ ಅದನ್ನು ಒಂದೆಡೆ ಇಟ್ಟು ದಿನಾ ಅದಕ್ಕೆ ಕೇಪುಲ ಪೂ ಅರ್ಚಿಸಿ ಪೂ ನೀರು ಇಡಲಾಗುತ್ತಿತ್ತು. ಭೂತ ಸ್ಥಾನ ಒಕ್ಕಲಾಗುವಾಗ ಆ ಪೊಸ ಪುಡಾಯಿಗೆ (ಮತ್ತೆ ಕೇಪುಲ ಅರ್ಚಿಸಿ ಕೂಚಿಯ ಪವಿತ್ರ ನೀರು ಪ್ರೋಕ್ಷಿಸಿ ಚಾವಡಿಯ ಅಥವಾ ಬೂತೊಟ್ಯದ ಒಳಗೆ ಉಜ್ಜಾಲಿನಲ್ಲಿ ಇಡಲಾಗುತ್ತಿತ್ತು. ಈಗಿನಂತೆ ಖರ್ಚು ವೆಚ್ಚವೂ ಇರಲಿಲ್ಲ. ಈಗ ದಲಿತರ ದೈವಸ್ಥಾನಗಳಲ್ಲೂ ಬ್ರಾಹ್ಮಣ ಪುರೋಹಿತರ ಮೂಲಕ ಬ್ರಹ್ಮ ಕಲಶ ನಡೆಯುತ್ತಿದೆ. ಬ್ರಾಹ್ಮಣ ಅರ್ಚಕರನ್ನು ಕರೆಯುವುದರಲ್ಲಿ ಶೂದ್ರ ಜನಾಂಗಕ್ಕೆ ಉಂಟಾಗುವ ಮೇಲರಿಮೆ ಇಂತಹ ಪರಿವರ್ತನೆಗೆ ಕಾರಣ. ಇದರಿಂದ ಶೂದ್ರರ ಪಾರಂಪರಿಕ ಹಕ್ಕುಗಳು ಕಳಚಿಕೊಂಡು ಅರ್ಚನೆಯ ಸಂದರ್ಭದಲ್ಲಿ ಅವರು ಅಸ್ಪಶ್ಯರಂತೆ ದೂರ ನಿಲ್ಲಬೇಕಾದ ಸ್ಥಿತಿ ಒದಗಿದರೂ ಬ್ರಾಹ್ಮಣ ಅರ್ಚಕರು ಜನಪದರ ಜೊತೆಗೆ ಬೆರೆಯುವಂತಾದುದು ಸ್ವಾಗತಿಸಬೇಕಾದ ಬೆಳವಣಿಗೆ.
ಪಾಡ್ದನಗಳು ಚಿತ್ರಿಸುವ ಭೂತಗಳು ಕ್ರೂರ :
ಭೂತಗಳನ್ನು, ಕ್ರೂರವಾಗಿ ಪಾಡ್ದನಗಳು ಚಿತ್ರಿಸಿದರೂ ತುಳುನಾಡಿನ ಜನರು ಭೂತಾರಾಧನೆಯಿಂದ ವಿಮುಖರಾಗಲಿಲ್ಲ.
ನಾನು ಎಳೆಯ ಮಗುವಾಗಿರುವಾಗಲೇ ಭೂತದ ತಂಬಡದ ಸದ್ದನ್ನು ಕೇಳಿ ಬೆಳೆದವಳು. ನಮ್ಮ ಎಳತ್ತೂರು ಚಾವಡಿಯಲ್ಲಿ ತಂಬಡ ಸದ್ದಿಗೆ ಅಂದು ನಡುಗಿದ ನನ್ನದೆಯ ಸದ್ದು ಇಂದೂ ಅನುಭವವಾಗುತ್ತದೆ. ಜುಮಾದಿ ಭೂತ ಮಾನೆಚ್ಚಿಯಲ್ಲಿ ಅರಬಾಯಿ ಇಟ್ಟರೆ ಎಳೆಯ ಮಕ್ಕಳು ನಿಂತಲ್ಲೇ ಉಚ್ಚೆ ಹುಯ್ಯುತ್ತಿದ್ದುದನ್ನು ನಾನು ಕಂಡಿದ್ದೇನೆ. ಭೂತ, ಪಾತ್ರಿಯ ಮೈದುಂಬುವಾಗ (ಹಾಗೆ ನಂಬಬೇಕು) ಅಂದರೆ ದರ್ಶನ ಬಂದಾಗ ಪಾತ್ರಿಯ ಎದುರಾಗಿ ಮಹಿಳೆಯರು ಮಾತ್ರವಲ್ಲ ಪುರುಷರೂ ಹೋಗುವಂತಿರಲಿಲ್ಲ್ಲ. ಈಗ ಮಹಿಳೆ ಕ್ಯಾಮರಾ ಹಿಡಿದು ನಿಂತರೂ ಭೂತಗಳು ಮುಂದೆ ಬಂದು ಫೋಸ್ ಕೊಡುತ್ತವೆ. ನಮ್ಮ ಹಿರಿಯರ ಕಾಲದ ಗಾಂಭೀರ್ಯವನ್ನು ಭೂತಾರಾಧನೆ ಕಳೆದುಕೊಂಡಿದೆ. ಅಂದಿನ ಭೂತ ಭಯ ನೆನೆದರೆ ಕಂಪಿಸುತ್ತದೆ ಮನಸ್ಸು.
ಭೂತಗಳು ದಂಡು ಸಾಧಿಸಿದ್ದು:
ಪಾಳೆಯಗಾರಿಕೆಯ ಕಾಲದ ಯುದ್ಧಕ್ಕೂ ಭೂತಾರಾಧನೆಗೂ ನೇರವಾದ ಸಂಬಂಧ ಇದೆ. ಪಾಡ್ದನಗಳ ಪ್ರಕಾರ ತುಳುನಾಡಿನಲ್ಲಿ ದಂಡು ಸಾಧಿಸಿದ್ದು ಅರಸರಲ್ಲ ಭೂತಗಳು. ಅನೇಕ ಪಾಡ್ದನಗಳು ಈ ಬಗ್ಗೆ ಮಾಹಿತಿ ನೀಡುತ್ತವೆ. ಈ ಬಗ್ಗೆ ಐತಿಹ್ಯಗಳೂ ಇವೆ.
ಈಗಲೂ ಅಂದಿನ ಕಾಲದ ಯುದ್ಧ/ಹೋರಾಟದ ಸಂಕೇತವಾಗಿ ಅಂಬೊಡಿ ಆಚರಣೆ ಕೆಲವೊಂದು ಆಲಡೆ ಮೂಲಸ್ಥಾನಗಳಲ್ಲಿ ನಡೆಯುತ್ತಿದೆ. ಈ ಕ್ಷೇತ್ರಗಳ ಶಕ್ತಿ ಕಲ್ಲು ಎತ್ತುವ ಸ್ಪರ್ಧೆಗಳು ಯುದ್ಧ ವೀರರಿಗೆ ಸಂಬಂಧಿಸಿದ್ದು. ಕಂಬೆರ್ಲು ಕಲ ಮಿತಾವುನು ಯುದ್ಧವನ್ನು ಸಂಕೇತಿಸುತ್ತದೆ.
ಪಾಡ್ದನಗಳಲ್ಲಿ ಜನಸಾಮಾನ್ಯರು:
ಇತಿಹಾಸ, ಚರಿತ್ರೆಯಲ್ಲಿ ಜನಸಾಮಾನ್ಯರ ಬಗ್ಗೆ ದಾಖಲಾಗಿಲ್ಲ; ನಿರ್ಲಕ್ಷ್ಯಕ್ಕೆ ಒಳಗಾದ ಜನಪದರ ಪಾತ್ರಗಳ ಸೊಲ್ಲಿಲ್ಲ ಅಲ್ಲಿ. ಅರಸರ ಬಗ್ಗೆ ಮಾತ್ರ ಚರಿತ್ರೆ ಬರೆಯಲಾಗಿದೆ. ಭೂತಾರಾಧನೆಯಲ್ಲಿ ಅರಸು ಆರಾಧನಾ ಪದ್ಧತಿಯೇ ಪ್ರಮುಖವಾದರೂ, ಪರಿವಾರ ದೈವಗಳು, ಬಂಟ ದೈವಗಳು, ಚಾಕ್ರಿಯ (ಸೇವಕ) ದೈವಗಳೂ ಉಪಾಸನೆಗೊಳ್ಳುವುದು ಗಮನಿಸಬೇಕಾದ ಅಂಶ. ಅರಸು ಆರಾಧನೆಯ ಸಂದರ್ಭದಲ್ಲಿಯೂ ಅಂಗಳ ಗುಡಿಸುವ ಜಾಲ ಕೊರತಿಗೂ ಮಾನ್ಯತೆ ಇದೆ, ಮೂಲದಾಳುಗಳಿಗೂ ಪ್ರಾಧಾನ್ಯತೆ ಇದೆ. ಪಾಡ್ದನಗಳು ಜನಪದ ಸಂಸ್ಕೃತಿಯನ್ನು ಕಟ್ಟಿಕೊಡುತ್ತದೆ. ನಿರ್ಲಕ್ಷಿತ ಜನಸಮುದಾಯದವರೇ ಕಟ್ಟಿ, ಮೌಖಿಕವಾಗಿ ಪ್ರಸಾರ ಆದ ತುಳು ಭೂತಾರಾಧನಾ ಸಂಸ್ಕೃತಿ ಎಲ್ಲಾ ವರ್ಗದ ಜನರ ಬಗ್ಗೆ ದಾಖಲಾತಿಯನ್ನು ಮೌಖಿಕ ನೆಲೆಯಲ್ಲಿ ಮಾಡಿದೆ. ಇಲ್ಲಿಯ ಪಾಡ್ದನ ಕಬಿತೆಗಳು ಅಲಕ್ಷಿತ ಸಮುದಾಯವನ್ನು ಚಿತ್ರಿಸುವುದು ಗಮನಿಸಬೇಕಾದ ವಿಷಯ.
ಧರ್ಮ ಸಾಮರಸ್ಯ:
ಭೂತಗಳು ಜಾತಿ ಮತಧರ್ಮ ರಹಿತ ಸಮಾಜದ ಶಕ್ತಿಗಳು. ಜಾತಿ ಹುಟ್ಟುವ ಮೊದಲೇ ಭೂತಗಳು ಹುಟ್ಟಿರಬೇಕು. ಲಭ್ಯ ಇರುವ ಮಾಹಿತಿಯಂತೆ ಸಂಘಂ ಕಾಲದಲ್ಲಿಯೇ ಭೂತಗಳು ಕಾಣಬರುತ್ತವೆ. ಹೀಗಾಗಿ ಅವು ಎಲ್ಲಾ ಜಾತಿ ಮತ ಧರ್ಮದವರನ್ನು ತನ್ನ ಮಕ್ಕಳಾಗಿ ಕಾಣುತ್ತಿದೆ. ಪತ್ತಪ್ಪ್ಪೆ ಜೋಕುಲೆನ್ ಒಂಜಿ ಮಟ್ಟೆಲ್ಡ್ ಪಾಡುನ ಶಕ್ತಿಗಳು ಅವು. ಮಾತೃಶಕ್ತಿಗಳು. ಭೂತಗಳ ತೆಕ್ಕೆಯಲ್ಲಿ ಬ್ರಾಹ್ಮಣ, ಜೈನ, ಮಾತ್ರವಲ್ಲ ಬ್ಯಾರಿಗಳೂ ಸೇರಿದ್ದಾರೆ. ಜೈನರು ಮತ್ತು ಬ್ಯಾರಿಗಳು ಈ ನೆಲದ ಭೂತ ಶಕ್ತಿಗಳನ್ನು ನಂಬುವ ಸಂಸ್ಕೃತಿ ಕನ್ನಡ ಕರಾವಳಿ ತುಳುನಾಡಿನದ್ದು. ತುಳುವರ ಉಪಾಸನೆಯು ಮತಧರ್ಮ ಪ್ರೇರಿತವಾದುದಲ್ಲ. ಸನಾತನ ಧರ್ಮದ ಭಾಗವಲ್ಲ. ಅದು ನೆಲದ ಸಂಸ್ಕೃತಿ, ಜೀವನ ಪದ್ಧತಿ. ಭೂತಗಳು ಎಂದರೆ ಮಣ್ಣು! ಮಣ್ಣು ಎಂದರೆ ನಾಗ! ಅರ್ಥಾತ್ ಕೃಷಿ ಪೋಷಕ ಉಪಾಸನೆ!
ಇನ್ನೊಂದು ಅಚ್ಚರಿಯ ವಿಷಯವನ್ನು ಓದುಗರ ಗಮನಕ್ಕೆ ತರಬೇಕು. ನನ್ನ ಗಮನಕ್ಕೆ ಬಂದಂತೆ ಎಲ್ಲಾ ಪಾಡ್ದನಗಳಲ್ಲಿ ಬ್ರಾಹ್ಮಣರ ಪ್ರಭಾವ ಕಾಣುತ್ತದೆ. ಆದರೂ ಅಲ್ಲಿ ಜಾತಿ ಸಾಮರಸ್ಯ ಇದೆ, ಧರ್ಮ ಸಾಮರಸ್ಯ ಇದೆ. ಆದರೆ ಬ್ರಾಹ್ಮಣ ಅರ್ಚಕರನ್ನು ಮಂತ್ರವಾದಿಗಳನ್ನಾಗಿ ಕೂಡಾ ಚಿತ್ರಿಸಲಾಗಿದೆ. ಕ್ರೈಸ್ತರನ್ನೂ ಒಳಗೊಂಡಿವೆ ಪಾಡ್ದನಗಳು.
ಆಧುನಿಕ ಮಧ್ಯಸ್ಥರು:
ಭೂತಾರಾಧನೆಯಲ್ಲಿ ಈಗಲೂ ಬದಲಾವಣೆಗಳು ಆಗುತ್ತಿವೆ. ಇತ್ತೀಚೆಗೆ ಆಗುತ್ತಿರುವ ಬದಲಾವಣೆ ಮದಿಪು ನೀಡುವುದು. ಮದಿಪು ನೀಡುವ ಕಲೆ ಕರಗತ ಮಾಡಿಕೊಂಡ ಪುರುಷರು ಅನ್ಯರ ಕುಟುಂಬದ ದೈವಕ್ಕೂ ಮಧ್ಯಸ್ಥರಾಗಿ ಮದಿಪು ನೀಡತೊಡಗಿದ್ದಾರೆ. ನುಡಿಗಟ್ಟಿನ ಬಗ್ಗೆ ಪುಸ್ತಕ ಪ್ರಕಟವಾಗತೊಡಗಿದ ಮೇಲೆ ಯುವ ಪೀಳಿಗೆಯವರು ಇಂತಹ ಪುಸ್ತಕಗಳಿಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಪುಸ್ತಕ ಮಾರಾಟಗಾರರೇ ನನ್ನಲ್ಲಿ ಹೇಳಿದರು. 2010ರಿಂದೀಚೆಗೆ ಈ ಬೆಳವಣಿಗೆ. ಹಿಂದೆ ಒಂದು ಮನೆತನದ ದೈವ, ಮಾಧ್ಯಮದಲ್ಲಿ ಆಕರ್ಷಣೆಯಾಗಬೇಕಾದರೆ ಆಯಾ ಕುಟುಂಬದ ಗಡಿಪ್ರದಾನ ಆದ ಹಿರಿಯ ಅಥವಾ ಆ ಕುಟುಂಬದ ಗಂಡು ಹುಡುಗನೂ ದೈವ ಪಾತ್ರಿಯ ಮುಂದೆ ಕೈ ಜೋಡಿಸಿ ಕೇಪುಲ ಪೂ ಎಸೆದು ಜೋಗದ ಜಗತ್ತಿಗೆ ಬರಲು ಅಪ್ಪಣೆ ನೀಡಿದರೆ ದೈವ ಪಾತ್ರಿಯಲ್ಲಿ ದೈವ ಮೈದುಂಬಿ ಬರುತ್ತಿತ್ತು. ಅದು ಪದ್ಧತಿ. ಆತನಿಗೆ ಮದಿಪು ಹೇಳಲು ಬರಲೇ ಬೇಕೆಂದಿರಲಿಲ್ಲ. ಆದರೆ ಈಗ ಮದಿಪು ಹೇಳುವುದು ವ್ಯಾಪಾರೀಕರಣವಾಗಿದೆ. ದೈವ ಕುಟುಂಬಸ್ಥನಾಗಿರದವನೂ ಮದಿಪು ಹೇಳಿ ದೈವವನ್ನು ಮಾಯಾ ಜಗತ್ತಿನಿಂದ ಜೋಗದ ಜಗತ್ತಿಗೆ ಬರಿಸುತ್ತಾನೆ. ನನ್ನಲ್ಲಿ ಒಬ್ಬ ತರುಣ ಈ ರೀತಿ ನುಡಿದ ‘ಅಕ್ಕಾ ನಾನು ನನ್ನದೇ ಆಸಕ್ತಿಗಾಗಿ ಮದಿಪು ಹೇಳುವ ಕಲೆಯನ್ನು ಕರಗತಮಾಡಿಕೊಂಡೆ. ಆದರೆ ಈಗ ನನ್ನನ್ನು ಮದಿಪು ಹೇಳಲು ಅನೇಕರು ಆಹ್ವಾನಿಸುತ್ತಿದ್ದಾರೆ. ತಪ್ಪಿಸಿಕೊಳ್ಳಲಾಗುತ್ತಿಲ್ಲ. ನನಗೆ ಗೊತ್ತಿದೆ ಬೇರೆಯವರ ದೈವಕ್ಕೆ ನಾನು ಮದಿಪು ಹೇಳುವುದು ತಪ್ಪು’ ಎಂದು.
ಭೂತಾರಾಧನೆಯಲ್ಲಿ ಇನ್ನೊಂದು ಪದ್ಧತಿ/ಸಂಸ್ಕೃತಿ ಸದ್ದಿಲ್ಲದೆ ಬದಿಗೆ ಸರಿಯುತ್ತಿದೆ. ಪಂಬದ ಭೂತದ ಅರದಳ ಹಾಕುವಾಗ ನಾಂದಿ ಪದ್ಯ-ಪಾಡ್ದನವನ್ನು ಮಹಿಳೆ ಹಾಡಬೇಕಾಗುತ್ತದೆ. ತೆಂಬರೆ ಬಡಿದು ಹಾಡುವ ಆಕೆ ಪಾತ್ರಿಯ ಮಡದಿಯೋ, ತಾಯಿಯೋ, ಸೋದರಿಯೋ ಆಗಿರುತ್ತಿದ್ದಳು. ಇತ್ತೀಚೆಗೆ ಮಹಿಳೆಯರ ಭಾಗವಹಿಸುವಿಕೆ ಕಡಿಮೆಯಾಗುತ್ತಿದೆ. ಆದರೆ ಧರ್ಮಸ್ಥಳದಲ್ಲಿ ಅದು ಉಳಿದು ಬಂದಿದೆ.
ಹೀಗೆ ಭೂತಾರಾಧನೆಯ ಭಕ್ತಿ ಸಂಸ್ಕೃತಿಯಲ್ಲಿ ಅನೇಕ ಬದಲಾವಣೆಗಳಾಗುತ್ತಿವೆ. ಆದರೂ ಭೂತಾರಾಧನೆಯನ್ನು ಪ್ರದರ್ಶನ ಕಲೆಯನ್ನಾಗಿಸುವುದನ್ನು ತುಳುನಾಡು ಇದುವರೆಗೆ ಬೆಂಬಲಿಸಿರಲಿಲ್ಲ. ತುಳು ನೆಲಮೂಲದ ಸಾವಿರಾರು ವರ್ಷಗಳ ಆರಾಧನಾ ಸಂಸ್ಕೃತಿಯ ಗಾಂಭೀರ್ಯವನ್ನು ಉಳಿಸಿಕೊಳ್ಳಬೇಕೆಂಬ ಒಲವು ಜನರಲ್ಲಿ ಹೆಚ್ಚಾಗಿ ಇರುವುದರಿಂದ ಭೂತಾರಾಧನೆಯನ್ನು ಪ್ರದರ್ಶನ ಕಲೆಯನ್ನಾಗಿಸುವ ಪ್ರಯತ್ನ ಸಫಲವಾಗಿರಲಿಲ್ಲ. ಈಗ ಪ್ರದರ್ಶನ ಕಲೆಯಾಗಿಯೂ ಕಾಣಬರುತ್ತಿದೆ. ಇದರಿಂದ ಭೂತಾರಾಧನೆಯ ಘನತೆಗೆ ಧಕ್ಕೆ ಬಂದಿದೆ ಗಾಂಭೀರ್ಯ ಕಳೆದು ಕೊಂಡಿದೆ.
******************
ಮಾದರಿ ಶಾಲೆಯಲ್ಲಿ ವಾರ್ಷಿಕೋತ್ಸವ ಆಚರಿಸುತ್ತಾರೆ. ಆ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಶಾಲೆಯ ಎಲ್ಲ ಮಕ್ಕಳು ಸಂಭ್ರಮ ಸಡಗರದಿಂದ ವಾರ್ಷಿಕೋತ್ಸವದ ಸಂತೋಷವನ್ನು ಅನುಭವಿಸುತ್ತಿದ್ದರು. ಸದಾ ಸಮವಸ್ತ್ರದಲ್ಲಿ ಇರುತ್ತಿದ್ದ ಎಲ್ಲ ವಯಸ್ಸಿನ ಹೆಣ್ಣು ಮಕ್ಕಳು ಅಂದು ಬಣ್ಣದ, ವಿಧ, ವಿಧದ ಬಟ್ಟೆ ಧರಿಸಿ ಸಂಭ್ರಮ ಪಡುವುದು ನೋಡಿ ಆನಂದಿಸಬೇಕು (ಆಗಿನ ಕಾಲದಲ್ಲಿ ಪ್ಯಾಂಟ್, ಸಲ್ವಾರ್ ಕಮೀಝ್ ಈ ಊರಿಗೆ ಬಂದಿರಲಿಲ್ಲ). ಈ ಸಂಭ್ರಮ ನೋಡಲು ಪಕ್ಕದ ಊರಿನ ಗಂಡು ಮಕ್ಕಳ ದಾಮಸ್ ಕಟ್ಟೆಯ ಗಂಡು ಹುಡುಗರು ಕೂಡಾ ಬರುತ್ತಿದ್ದರು. ನನಗೆ ಮತ್ತು ಸುಧಾಳಿಗೆ ವಾರ್ಷಿಕೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಬೇಕೆಂಬ ಆಸೆ. ಆದರೆ ಅಂದಿನ ಹಳ್ಳಿಯ ವಾತಾವರಣದಲ್ಲಿ ಮಕ್ಕಳ ಇಂತಹ ಆಸೆಗಳಿಗೆ ಸ್ಪಂಧಿಸುವವರು ಯಾರೂ ಇಲ್ಲ.
ಅದರಲ್ಲೂ ನಮ್ಮ ಗುತ್ತು ಮನೆಯಲ್ಲಿ ಸಾಂಸ್ಕೃತಿಕ ಮಾತ್ರವಲ್ಲ ಆಟೋಟಗಳಲ್ಲಿ ಭಾಗವಹಿಸಲು ಕೂಡಾ ಹೆಣ್ಣುಮಕ್ಕಳಿಗೆ ನಿಷೇಧ ಇತ್ತು. ಡ್ಯಾನ್ಸ್ ಕಲಿತರೆ ನೀನೇನೂ ನಲ್ಕೆಯವಳಾ, ಸಂಗೀತ ಪಾಠಕ್ಕೆ ಸೇರಿದರೆ ನೀನೇನು ಮಾದಿರದವಳಾ? ಎಂದು ಆ ವೃತ್ತಿ ಜನಾಂಗವನ್ನು ಹೋಲಿಸಿ ಹೇಳುತ್ತಿದ್ದರು. ಅದ್ಯಾವುದೂ ಬೇಡ, ಬರೇ ಪ್ರೇಕ್ಷಕರಾಗೋಣ ಎಂದರೆ ವಾರ್ಷಿಕೋತ್ಸವ ಪ್ರಾರಂಭವಾಗುವಾಗಲೇ ರಾತ್ರಿಯಾಗುತ್ತಿದೆ. ಸ್ವಲ್ಪ ಹೊತ್ತು ಇದ್ದು ಹೋಗೋಣ ಎಂದರೂ ಹಳ್ಳಿಗೆ ಮತ್ತೆ 3.5 ಮೈಲಿ ದೂರವನ್ನು ಕಾಲ್ನಡಿಗೆಯಲ್ಲಿ ರಾತ್ರಿಯ ಹೊತ್ತು ಕ್ರಮಿಸುವ ಕಲ್ಪನೆಯನ್ನೂ ಯಾವ ಹೆಣ್ಣುಮಕ್ಕಳು ಮಾಡುತ್ತಿರಲಿಲ್ಲ. ನಾವು ಧೈರ್ಯ ಮಾಡಿದರೂ ಮನೆಯಲ್ಲಿ ಅನುಮತಿ ದೊರಕದು. ಹೆತ್ತವರು ಇಂತಹ ಸಮಾರಂಭಕ್ಕೆ ಬರಬೇಕು ಎಂಬ ಬಗ್ಗೆ ಅವರಿಗೆ ಗೊತ್ತಿಲ್ಲ. ಅಂತಹ ನಿರೀಕ್ಷೆ ನಾವೂ ಇಟ್ಟಿರಲಿಲ್ಲ.
ಶಾಲೆಗೆ ಪ್ರವೇಶ ದೊರಕಿಸಿಕೊಟ್ಟ ಮೇಲೆ ಇತ್ತ ಕಡೆ ತಲೆ ಹಾಕಿದವರಲ್ಲ ಅವರು. ಹೀಗಾಗಿ ನಾವೊಂದು ಯೋಜನೆ ರೂಪಿಸಿದೆವು. ನಮ್ಮ ಅವಿಭಕ್ತ ಕುಟುಂಬದ ಓರಗೆಯ ಇಬ್ಬರು ಗಂಡು ಮಕ್ಕಳನ್ನು ನಾವು ಪುಸಲಾಯಿಸಿ ವಾರ್ಷಿಕೋತ್ಸವಕ್ಕೆ ಬರಲು ದಂಬಾಲು ಬಿದ್ದೆವು. ಒಬ್ಬ ಸುಧಾಳ ತಮ್ಮ ಹಿರಿಯಣ್ಣ, ಇನ್ನೊಬ್ಬ ಮೋಹನ. ಹಿರಿಯಣ್ಣ ನನಗಿಂತ ಒಂದು ವರ್ಷ ಚಿಕ್ಕವ. ಮೋಹನ ಇನ್ನೂ ಒಂದು ವರ್ಷ ಚಿಕ್ಕವ. ಈ ಗಂಡುಗಳು ರಾತ್ರಿಯ ಪಯಣಕ್ಕೆ ಹೆಣ್ಣುಮಕ್ಕಳ ಜೊತೆಗಿರುತ್ತಾರೆ ಎಂಬ ಧೈರ್ಯದಿಂದ ಮನೆಯವರು ವಾರ್ಷಿಕೋತ್ಸವ ನೋಡಲು ಅನುಮತಿ ನೀಡಿದರು.
ವಾರ್ಷಿಕೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಗಿಯುವವರೆಗೆ ಕಾಯಲಿಲ್ಲ. ಗಡಿಯಾರ ಇಲ್ಲದ ನಾವು ಕತ್ತಲೆಕವಿದು ಹೊತ್ತಾದಾಗ ಆತಂಕಗೊಂಡೆವು. ಸಮಾರಂಭ ನಡೆಯುತ್ತಿದ್ದಂತೆ ಮನೆಗೆ ಹೊರಟೆವು. ಕಿನ್ನಿಗೋಳಿಯ ಶಾಲೆಯಿಂದ ಸುಮಾರು 4 ಕಿ.ಮೀ. ದೂರದ ಗೋಳಿಜೋರದವರೆಗೆ ವಾಹನ ಸಂಚಾರದ ಮಣ್ಣಿನ ರಸ್ತೆ. ಅಲ್ಲಿಂದ 1.5 ಕಿ.ಮೀ. ದೂರವನ್ನು ಸುತ್ತು ಬಳಸಿ ರಸ್ತೆ ಸಾಗುತ್ತದೆ. ಹೀಗಾಗಿ ಒಂದು ಕಿ.ಮೀ. ದೂರವನ್ನು ನಾವು ಕಾಲುದಾರಿಯಲ್ಲಿ ನಡೆದು ಮತ್ತೆ ಕಿನ್ನಿಗೋಳಿಯಿಂದ ಬರುವ ರಸ್ತೆಗೆ ಸೇರುತ್ತಿದ್ದೆವು. ಇದರಿಂದ ಒಂದು ಕಿ.ಮೀ. ದಾರಿ ಹತ್ತಿರವಾಗುತ್ತಿತ್ತು. ಆದರೆ ಕಾಲುದಾರಿ ಕಾಡಿನ ಮಧ್ಯೆ ಹೋಗುತ್ತದೆ.
ನಾವು ಶಾಲೆಯಿಂದ ಹೊರಟಾಗಲೇ ತಿಂಗಳ ಬೆಳಕು ಮೂಡಿತ್ತು. ಗೋಳಿಜೋರದಿಂದ ಗುಡ್ಡ ಇಳಿದು ಕಾಡಿನ ಕಾಲುದಾರಿ ಹಿಡಿದೆವು. ಇಲ್ಲಿ ಸ್ವಲ್ಪ ಭಯ ಆಯಿತು. ಕಾಡಿನ ಕಡಿದಾದ ಮಾರ್ಗದಲ್ಲಿ ಅನೇಕ ತಿರುವು ಇದ್ದು, ನಾವು ಯಾರಿಗೂ ಕಾಣುವಂತಿರಲಿಲ್ಲ. ಗಟ್ಟಿಯಾಗಿ ಮಾತನಾಡಿ ಕಾಡಿನ ನೀರವತೆಯನ್ನು ದೂರಮಾಡಲು ಪ್ರಯತ್ನಿಸಿದೆವು. ಒಂದೇ ಉಸಿರಿಗೆೆ ಕಾಡು ದಾರಿ ಇಳಿದಾಗ ಅಲ್ಲಿ ಒಂದು ಮೊಯ್ಲಿಗಳ ಮನೆ. ಮತ್ತೆರಡು ಬ್ರಾಹ್ಮಣರ ಮನೆಗಳು ಇದ್ದುವು. ನನ್ನ ಓರಗೆಯ ಸುಧಾ ರಾತ್ರಿ ಬ್ರಾಹ್ಮಣರ ಮನೆಯಲ್ಲಿ ತಂಗೋಣ ಮರುದಿನ ಎದ್ದು ಮನೆಗೆ ಹೋಗೋಣ ಎಂದಳು. ನನಗೆ ಇದು ಇಷ್ಷವಿಲ್ಲದ ಮಾತು. ಇಷ್ಟು ದೂರ ಬಂದಾಯಿತು ಅದೂ ಕಾಡು ದಾರಿ ಮುಗಿಯಿತು.
ಇನ್ನೇನು ರಸ್ತೆ ಸೇರುತ್ತೇವೆ, ಅಲ್ಲಿಂದ ಮುಂದೆ ನಮ್ಮ ಗುತ್ತಿನ ಆಸ್ತಿ ಹೀಗಾಗಿ ಇದುವರೆಗೆ ಇಲ್ಲದ ಭಯ ಮುಂದೆ ಯಾಕೆ? ಕೇಳಿದೆ. ನಿನಗೆ ಗೊತ್ತಿಲ್ಲವಾ, ನಮ್ಮ ಮನೆಯ ದೈವಗಳು ರಾತ್ರಿ ಸಂಚಾರ ಹೋಗುತ್ತವೆ. ನಮ್ಮ ಕುಟುಂಬದ ಆಸ್ತಿಯನ್ನು ಕಾಯಲು, ರಾತ್ರಿ ಜೀಟೆಗೆ (ಪಂಜು, ದೀವಟಿಗೆ)ಹಿಡಿದು ಗಸ್ತು ತಿರುಗುತ್ತವೆ ಎಂದಳು ಸುಧಾ. ನಾನು ಉತ್ತರ ಕೊಡುವ ಮೊದಲು ಮೋಹನ ನಮ್ಮ ಮನೆಗೆ ಹೋಗುವ ದಾರಿ ಬೀದಿಯಂತೆ ಮಲ್ಲಪ್ಪೆ ಹೇಳಿದ್ದಾರೆ. ರಾತ್ರಿ ಹೊತ್ತು ಬೀದಿಯಲ್ಲಿ ನಮ್ಮ ನಾಗಬನದ ನಾಗಗಳು ಸುತ್ತಾಡುತ್ತವೆ ಎಂದ.
ನಾನು ಹೇಳಲು ಬಾಯಿ ತೆರೆಯುವ ಮೊದಲು ಸುಧಾಳ ತಮ್ಮ ಹಿರಿಯಣ್ಣ ನಮ್ಮ ನಾನಜ್ಜರನ್ನು ಗುಳಿಗ ಓಡಿಸಿಕೊಂಡು ಹೋದುದು ನಿನಗೆ ನೆನಪಿಲ್ಲವಾ ಅದೂ ಕರ್ಮಾರು (ಒಂದು ಜಾತಿಯ ಕುಚಲು ಮರ) ಜೋರದ ದಾರಿಯಲ್ಲಿ ಓಡಿಸಿಕೊಂಡು ಹೋದುದು. ನಾವು ಅದೇ ದಾರಿಯಾಗಿ ಹೇಗೆ ಹೋಗುವುದು? ಎಂದು ತನ್ನ ಅಕ್ಕಳನ್ನು ಬೆಂಬಲಿಸಿದ.
ನಾನಜ್ಜ ನಮ್ಮ ಗುತ್ತು ಮನೆಯ ಎಲ್ಲ ಸದಸ್ಯರಿಗೂ ಅಜ್ಜ. ಮೂಲ ತಾಯಿಯಿಂದ ಎರಡಾಗಿ ಅಲ್ಲಿಂದ ಮೂರಾಗಿ ಸಿಡಿದ ಕವರು (ಶಾಖೆ) ನಾನಜ್ಜನದ್ದು. ಅವರು ಗುಳಿಗ ದೈವದ ಅರ್ಚಕ. ಈ ಅರ್ಚಕ ಪಟ್ಟವನ್ನು ಅವರು ಸುಲಭವಾಗಿ ಒಪ್ಪಿಕೊಳ್ಳಲು ಸಿದ್ಧರಾಗಿರಲಿಲ್ಲ. ಬಂಟರು ಅರ್ಚಕ ವೃತಿಯನ್ನು ಗೌರವಿಸುವುದಿಲ್ಲ. ಅರ್ಚಕನಾಗುವುದು ಹಿರಿಮೆಯ ವಿಷಯವಲ್ಲ. ತಾನು ಅರ್ಚಕನಾಗುವುದೇ ಇಲ್ಲ. ದಿನಾ ಗುಳಿಗನಿಗೆ ಅಗೆಲ್ ಬಡಿಸುತ್ತಾ ಕೂರಲು ತನ್ನಿಂದ ಸಾಧ್ಯವಿಲ್ಲ ಎಂದು ಪ್ರತಿಭಟಿಸಿದ್ದರು. ಹಾಗೇ ಪ್ರತಿಭಟಿಸಿದಾಗ ಗುತ್ತು ಕುಟುಂಬದವರು ಗುಳಿಗನಿಗೆ ಬೇಕಾದರೆ ನೀನು ಅರ್ಚಕನಾಗುತ್ತಿ ಎಂದು ಗುಳಿಗನ ಮೇಲೆ ಭಾರ ಹಾಕಿದ್ದರು.
ಒಂದು ದಿನ ನಾನಜ್ಜ ಕಿನ್ನಿಗೋಳಿಯಿಂದ ಮರಳಿ ಬರುವಾಗ ರಾತ್ರಿಯಾಗಿತ್ತು. ಆ ದಿನವೂ ಬೆಳದಿಂಗಳು ಇತ್ತು. ನಾನಜ್ಜರಿಗೆ ಒಂದು ಅಭ್ಯಾಸ ಇದೆ; ಮನೆಯಿಂದ ಹೊರಡುವಾಗ ಪಂಚೆ ಉಟ್ಟು ಕೊಳ್ಳುತ್ತಾರೆ. ಮೇಲಂಗಿಯನ್ನು ಹೆಗಲ ಮೇಲೆ ಹಾಕುತ್ತಾರೆ. ಒಂದು ಹೆಗಲ ಮೇಲೆ ಅಂಗಿ ಮತ್ತೊಂದು ಹೆಗಲೆ ಮೇಲೆ ಬೈರಾಸು. ಕಿನ್ನಿಗೋಳಿ ಹತ್ತಿರ ಆಗುತ್ತಾ ಅಂಗಿ ಹಾಕಿಕೊಳ್ಳುತ್ತಾರೆ. ಮತ್ತೆ ಕಿನ್ನಿಗೋಳಿ ಬಿಟ್ಟ ಮೇಲೆ ಅಂಗಿ ತೆಗೆದು ಹೆಗಲ ಮೇಲೆ ಹಾಕುತ್ತಾರೆ. ಆ ದಿನವೂ ಅಂಗಿಯನ್ನು ಹೆಗಲ ಮೇಲೆ ಹಾಕಿ ಮನೆಗೆ ಮರಳುತ್ತಿದ್ದರು.
ಕರ್ಮಾರ್ ಜೋರ ಇಳಿಯುವಾಗ ಆಕಾಶದೆತ್ತರ ಬೆಳೆದ ಬಿಳಿ ಮುಸುಕುಧಾರಿ ಅವರಿಗೆದುರಾಗಿ ನಿಂತ. ನಿಂತವನು ಬೆಳೆಯುತ್ತಲೇ ಇದ್ದಾನೆ. ಅಂತ್ಯ ಇಲ್ಲದ ಬಾನು ಮುಟ್ಟುವಂತೆ. ನಾನಜ್ಜ ಭಯಭೀತರಾಗಿ ಮೈಮೇಲೆ ದೈವ ಬಂದವರಂತೆ ನಡುಗುತ್ತಾ ಗುಳಿಗಾ ನಾನು ನಿನ್ನ ಸೇವೆ ಮಾಡ್ತೀನಿ ಎಂದು ದಶ ದಿಕ್ಕುಗಳಿಗೂ ಕೇಳಿಸುವಂತೆ ಹೇಳಿ ಕಣ್ಮುಚ್ಚಿ ನಾಲ್ಕೇ ಬಕ್ಕರ್ನಲ್ಲಿ ಮುಕ್ಕಾಲು ಕಿಲೋಮೀಟರ್ ದೂರವನ್ನು ಕ್ರಮಿಸಿ ಮನೆಯ ಮುಂದೆ ಬಂದು ಅರಬಾಯಿ ಇಡುತ್ತಾ, ದೊಪ್ಪೆಂದು ಕುಸಿದರು. ಓಡುವಾಗ ಉಟ್ಟ ಪಂಚೆ ಕೂಡಾ ಕೈಯಲ್ಲಿ ಇತ್ತು. ಆದರೆ ಲಂಗೋಟೆ ಸೊಂಟದಲ್ಲಿ ಇತ್ತು.
ಮನೆ ಮಂದಿ ಗಾಬರಿ. ಏನಾಯಿತು ಎಂದು ಕೇಳಿದಾಗ ನನ್ನನ್ನು ಗುಳಿಗ ಅಟ್ಟಿಸಿಕೊಂಡು ಬಂದ. ನಾನು ಅವನ ಚಾಕರಿ ಮಾಡಲಾರೆ ಎಂದುದಕ್ಕೆ ನನ್ನ ಮೇಲೆ ಮುನಿಸಿ ಕೊಂಡಿದ್ದಾನೆ ಎಂದು ಸೇಕುತ್ತಾ (ಏದುಸಿರು)ಹೇಳಿದರು. ನೆರೆದ ಹೆಂಗಸರು ಮನೆಯ ಕತ್ತಲೆಯಲ್ಲಿ (ಆಗ ಮಿದ್ಯುದ್ದೀಪ ಇರಲಿಲ್ಲ) ಬಾಯಿಗೆ ಸೆರಗಿಟ್ಟು ನಕ್ಕರು. ಮನೆಯ ಗಂಡಸರು ನಗು ತಡೆದು ನಿನಗೆ ಹೇಳಲು ಗುಳಿಗನೇ ಒಲಿದು ಬರಬೇಕಾಯಿತಾ ನಮ್ಮ ಮಾತನ್ನು ನೀನು ಕೇಳುವವನಲ್ಲ ಎಂದರು. ಆದರೆ ಕೆಲವರು ಭಯಭೀತರಾಗಿ ಗುಳಿಗನಿಗೆ ಶರಣು ಶರಣು ಎಂದರು. ನಮ್ಮ ಮನೆಯ ಎಲ್ಲ ಮಕ್ಕಳಿಗೂ ನಾನಜ್ಜೆರೆನ್ ಗುಳಿಗೆ ಗಿಡತೊಂದು ಬಯಿದೆ ಎಂದು. ನಮ್ಮನ್ನು ಗುಳಿಗ ಓಡಿಸಿ ಯಾಕೆ ಬರುತ್ತಾನೆ? ಎಂದುಕೊಂಡರೂ ಗುಳಿಗನ ಬಗ್ಗೆ ಭಯ ಭಕ್ತಿ ಇತ್ತು. ಅಲ್ಲದೆ ನನ್ನನ್ನು ಉಳಿದು ಮೂವರಿಗೂ ಮುಂದೆ ಹೋಗಲು ಮನಸಿಲ್ಲ. ನಾನೊಬ್ಬಳು ಏನು ಮಾಡಲಿ ಎಂದು ಅಸಹಾಯಕಳಾಗಿ ಅವರ ಹಿಂದೆ ನಡೆದೆ.
ನಾವು ಬ್ರಾಹ್ಮಣರ ಮನೆಯಂಗಳದಲ್ಲಿ ಹೆಜ್ಜೆ ಇಟ್ಟೆವು. ಇಲ್ಲಿಯ ಬ್ರಾಹ್ಮಣರು ನಾಯಿಯನ್ನು ಸಾಕುವುದಿಲ್ಲ. ಹೀಗಾಗಿ ನಾಯಿ ಬೊಗಳುವ ಸದ್ದೂ ಇಲ್ಲ. ಸುಧಾ ಅಮ್ಮಾ ಅಮ್ಮಾ ಎಂದು ಕರೆಯಲು ಪ್ರಾರಂಭಿಸಿದಳು. ಅವಳ ಅಮ್ಮನನ್ನು ಕರೆಯುವಂತೆ. ಅವಳಿಗೆ ಮತ್ತು ಅವಳಮ್ಮನಿಗೆ ಆ ಮನೆಯವರಲ್ಲಿ ಸಲಿಗೆ ಇತ್ತು. ಆಗ ಒಳಗಿಂದ ಎದ್ದು ಬಂದರು ಬೆರಂದಿ. ಅಮ್ಮ ನಮಗೆ ಈ ರಾತ್ರಿ ಮನೆಗೆ ಹೋಗಲು ಭಯ ಆಗುತ್ತದೆ. ನಾವಿಲ್ಲೆ ರಾತ್ರಿ ಮಲಗುತ್ತೇವೆ ಆಯಿತಾ? ಎಂದಳು. ನೀವು ಮಲಗಲು ಅಡ್ಡಿ ಇಲ್ಲ. ಚಾಪೆ ಕೊಡ್ತೀನಿ. ಚಾವಡಿಯಲ್ಲಿ ಮಲಗಿ, ಬೆಳಗ್ಗೆ ಎದ್ದು ಅದನ್ನು ಆ ಕೆರೆಯಲ್ಲಿ ಒಗೆದು ಹಾಕಿ ಹೋಗಿ ಎಂದರು ಬೆರಂದಿ.
ಕುರುವಾಯಿ (ಗುಂಗಿ ಹುಳ) ನನ್ನ ಕಿವಿಯೊಳಗೆ ತೂರಿದಂತೆ ಆಯಿತು. ಅವರ ಮಾತಿಗೆ ನಾನು ಇಲ್ಲಿ ಮಲಗುವವಳಲ್ಲ, ನೀವು ಬೇಕಾದರೆ ಮಲಗಿ. ನಾನು ಮನೆಗೆ ಹೋಗ್ತೀನಿ ಎಂದು ಅವರಂಗಳಕ್ಕೆ ಬೆನ್ನು ಹಾಕಿದೆ. ಆ ಕೂಡಲೇ ಬೆರಂದಿ ಇಲ್ಲೇ ಅಂಗಳದ ಅಂಚಿಗೆ ಕೆರೆ ಇದೆ. ಅದರಲ್ಲಿ ಮುಳುಗಿಸಿ ಹೋಗಿ. ಸಾಕು. ಒಗೆಯಬೇಡಿ ಎಂದರು ಮೆತ್ತಗಿನ ಸ್ವರದಿಂದ. ನಾನು ನಮ್ಮ ಮನೆಯ ದಾರಿ ಹಿಡಿದಿದ್ದೆ. ಚಡಪಡಿಸಿದ ಸುಧಾ ನನ್ನ ಹಿಂದೆಯೇ ಓಡಿ ಬಂದು ಇಂದ್ರ ತಡೆಯೇ... ತಡೆ. ನೀನು ಚಾಪೆ ಒಗೆಯ ಬೇಡ, ನಾನು ಒಗೆಯುತ್ತೀನಿ. ಈ ಮನೆಯಲ್ಲಿ ರಾತ್ರಿ ಮಲಗೋಣ ಎಂದಳು. ಕಂಬಳಿ ಹುಳ ಮೈಮೇಲೆ ಹರಡಿದವಳಂತೆ ಅವಳನ್ನು ನೋಡಿದೆ.
ನನಗೆ ಭಯ ಆಗ್ತಿದೆ ಮಾರಾಯ್ತಿ. ಅವರಿಬ್ಬರೂ ನಮಗಿಂತಲೂ ಚಿಕ್ಕವರು. ಅವರೂ ಹೆದರಿದ್ದಾರೆ. ದಾರಿಯಲ್ಲಿ ಅವರು ಹೆದರಿದರೆ....? ಹೆದರಿ ಅವರಿಗೆ ಜ್ವರ ಬಂದರೆ? ಎಂದಳು. ನಮ್ಮ ಬೆಂಗಾವಲಿಗೆ ಬಂದ ಗಂಡುಗಳು ಇವರು!
ನಾನು ಶಾಲೆಯಿಂದ ಇಷ್ಟು ದೂರ ಈ ರಾತ್ರಿಯಲ್ಲಿ ನಡೆದು ಬಂದಾಗ ಭಯ ಆಗಲಿಲ್ಲ. ಇಲ್ಲಿಂದ ಒಂದು ಬಕ್ಕರ್ ಆಚೆ ನಮ್ಮ ಗುತ್ತಿನ ಭೂಮಿ ಬರುತ್ತದೆ. ನಮ್ಮ ಭೂಮಿಯ ರಸ್ತೆಯಲ್ಲಿ ನಿಮಗೆ ಭಯ ಯಾಕೆ? ಎಂದೆ.
ಅಲ್ಲೇ ಅಲ್ಲವಾ? ನಮ್ಮ ಭೂತಗಳಾದ ಗುಳಿಗೆ, ಜುಮಾದಿ ಜೀಟಿಗೆ ಹಿಡಿದು ಸವಾರಿ ಹೋಗುವುದು. ನಾಗ ಬೀದಿಯಲ್ಲಿ ನಾಗ ಸಂಚರಿಸುವುದು?
....ಜುಮಾದಿ ನಮ್ಮ ಚಾವಡಿ ದೈವ, ಗುಳಿಗ ಅವನ ದೂತ. ನಾಗ-ಬೆರ್ಮ ನಮ್ಮ ಕುಲದೈವ. ಇವರನ್ನು ನಮ್ಮ ಹಿರಿಯರು ಪೂಜಿಸಿದ್ದು, ನಾವು ಪೂಜಿಸುವುದು, ನಮ್ಮ ಕುಟುಂಬವನ್ನು ಅನವರತ ರಕ್ಷಿಸಿ, ಸುಖ ಸಮೃದ್ಧಿ, ನೆಮ್ಮದಿಯನ್ನು ಕೊಡಲೆಂದು, ಕೋಲ-ತಂಬಿಲದ ದಿನ ಜುಮಾದಿ ನುಡಿ ಕೊಡುವುದಿಲ್ಲವೇ, ನನ್ನ ಮಕ್ಕಳನ್ನು ಸೋದರ ಮಾವನಂತೆ ಬೆಂಗಾವಲಾಗಿ ರಕ್ಷಕನಾಗಿ ಕಾಯುವೆ, ತಾಯಿಯಾಗಿ ಎದೆಯ ನೊರೆಹಾಲು ಕುಡಿಸಿ ಮಡಿಲಲ್ಲಿ ರಮಿಸುವೆ ಎಂದು. ನಮ್ಮ ಕುಟುಂಬದ ದೈವವನ್ನು ನಾನು ನಂಬುತ್ತೇನೆ.
ನನ್ನ ಜೊತೆ ಬರುವವರು ಬನ್ನಿ. ಇಲ್ಲಿ ಮಲಗುವವರು ಮಲಗಿ ನಾನು ಯಾರನ್ನೂ ಕರೆಯುವುದಿಲ್ಲ. ಒಬ್ಬಳೇ ಹೋಗಬಲ್ಲೆ ಅವರ ಮನೆಯಲ್ಲಿ ಮಲಗಿದರೆ ಚಾಪೆ ಒಗೆಯಬೇಕಂತೆ....... ಎನ್ನುತ್ತಾ ನಾನು ಬಿರ ಬಿರನೇ ನಡೆದೆ. ಇರೇ, ಅಮ್ಮನಿಗೆ ಹೇಳಿ ಬರ್ತೀನಿ ಎನ್ನುತ್ತಾ ಸುಧಾ ಮರಳಿ ಹೋಗಿ ಹೇಳಿ ಬಂದಳು. ಬಂದವಳೇ ಏನಾದರೂ ಹೆಚ್ಚು ಕಡಿಮೆ ಆದರೆ ನೀನೆ ಜಬದಾರಿ ಅಂದಳು.
ನಿಮ್ಮನ್ನು ನನ್ನನ್ನು ಕಾಯುವುದು ನನ್ನ ಕೆಲಸ ಅಲ್ಲ. ಅದು ನಮ್ಮ ದೈವಗಳ ಕೆಲಸ. ಜುಮಾದಿಗೆ ಮತ್ತು ಗುಳಿಗನಿಗೆ ಇನ್ನೇನು ಕೆಲಸ? ಜುಮಾದಿ ಯಾಕೆ ಇರುವುದು ನಮ್ಮ ಚಾವಡಿಯಲ್ಲಿ? ಗುಳಿಗ ಯಾಕೆ ಇರುವುದು ನಮ್ಮ ಗುಡ್ಡದಲ್ಲಿ? ಬರೇ ಭೋಗ ಪಡೆಯಲಾ?
ನಿನ್ನ ತಂಕ (ಎದೆಗಾರಿಕೆ/ಕಲೇಜಾ) ಗಟ್ಟಿ ಅಂದರು.
ನಾವು ಮಾತನಾಡುತ್ತಾ ಕಾಡಿನ ಪರಿಸರ ದಾಟಿ ಮುಖ್ಯ ರಸ್ತೆ ಸೇರಿದೆವು. ತಿಂಗಳ ಬೆಳಕು ನಮಗೆ ಆಸರೆಯ ಕೊಡೆ ಹಿಡಿದು ನಮ್ಮನ್ನು ಅನುಸರಿಸಿತು. ನೆರಳು ಬೆಳಕಿನಾಟ ಒಂದೆಡೆಯಾದರೆ ಬಣ್ಣಬಣ್ಣದ ಗಿಡಗಳ ಮೇಲೆ ತಿಂಗಳು ಬೆಳಕಿನ ಚೆಲ್ಲಾಟ ಅವರ್ಣನೀಯ ಆನಂದ ನೀಡಿತ್ತು. ಈಗಲೂ ಆ ದೃಶ್ಯ ಕಣ್ಣಿಗೆ ಕಟ್ಟಿದೆ. ಅಂದು ನನ್ನ ಮನಕ್ಕೆ ದೊರೆತ ಆ ಆನಂದದ ಅನುಭೂತಿ ಇಂದಿಗೂ ಮನದ ಖಜಾನೆಯಲ್ಲಿ ತುಂಬಿ ತುಳುಕುತ್ತಿದೆ. ಈ ರಾತ್ರಿಯ ಪಯಣ ಮನಸ್ಸಿಗೆ ಎಷ್ಟು ಮುದ ನೀಡಿತು ಎಂದರೆ ನಾಲ್ವರಿಗೂ ಈ ಬೆಳದಿಂಗಳಲ್ಲಿ ಗುಡ್ಡದಲ್ಲಿ ಕುಳಿತು ಆಟವಾಡುವಾಸೆಯಾಯಿತು. ಜುಮಾದಿಯ ಅಭಯದ ನೆನಪೋ ಏನೋ ಯಾರಿಗೂ ಭಯ ಕಾಡಲಿಲ್ಲ. ಪೊದೆಯಿಂದ ಛಂಗನೆ ಮೊಲ ನೆಗೆದಾಗಲೂ ಖುಷಿಪಟ್ಟರೇ ವಿನಃ ಗಾಬರಿ ಬೀಳಲಿಲ್ಲ. ಮನೆ ಹತ್ತಿರ ಆದಾಗ ನಾನು ಹೇಳಿದೆ ನೋಡಿದಿರಾ ನಮ್ಮ ಗುಳಿಗ ಮತ್ತು ಜುಮಾದಿಯ ಮೈಮೆಯನ್ನ! ಇನ್ನು ಮುಂದೆ ಯಾರ್ಯಾರ ಮಾತು ಕೇಳ ಬೇಡಿ, ನಮ್ಮ ಹಿರಿಯರು ನಂಬಿದ ದೈವಗಳು ನಮ್ಮನ್ನು ಕಾಪಾಡುತ್ತವೆ. ದೈವ ನುಡಿ ನಾವು ಹೋದಲ್ಲಿ ಸೋದರಮಾವನಾಗಿ ಬೆನ್ನಿನ ಹಿಂದೆ ಮಾಯೆಯಲ್ಲಿ ನಿಂತು ಕಾಪಾಡುವೆ ಎಂದು ಪ್ರತಿವರ್ಷ ನುಡಿಕೊಡುವುದು ಸುಳ್ಳಲ್ಲ ಎಂದೆ.
ಬೆಟ್ಟು ಗದ್ದೆ ಇಳಿದು ಮನೆಯಂಗಳಕ್ಕೆ ಬರುವಾಗ ಎಲ್ಲಾ ಪಾಲಿನ ನಾಯಿಗಳು ಬೌ ಬೌ ಎನ್ನುತ್ತಾ ಓಡಿ ಬಂದು ಬಾಲ ಆಡಿಸಿ ನಮ್ಮನ್ನು ಜೊತೆ ಮಾಡಿ ನಡೆದುವು ನಮ್ಮ ನಮ್ಮ ಪಾಲಿನ ಮನೆಗೆ.
ಆದರೆ ಅಂತಹ ಅವಿಭಕ್ತ ಮನೆಯ ಸುಂದರ ವಾತಾವರಣ ಈಗಿಲ್ಲ. ಹಳೆಯ ಮಹಡಿ ಮನೆಗಳು ಬಿದ್ದು ಹೋಗಿವೆ. ಹೊಸ ಮನೆಗಳು ತಲೆ ಎತ್ತಿವೆ.
ದುಷ್ಟರನ್ನು ಶಿಕ್ಷಿಸುವ ಭೂತದ ಭಯದಿಂದಾಗಿ ಅಂದಿನ ತುಳುನಾಡಿನಲ್ಲಿ ಕಳ್ಳಕಾಕರ ಬೆದರಿಕೆ ಇರಲಿಲ್ಲ. ಹೀಗಾಗಿ ವಿದೇಶಿ ಪ್ರವಾಸಿಗರೂ ತುಳುನಾಡಿನ ಉದ್ದಗಲಕ್ಕೂ ಒಂಟಿಯಾಗಿ ಕಾಲ್ನಡಿಗೆಯಲ್ಲಿ ಸಂಚರಿಸಲು ಸಾಧ್ಯವಾಗಿದೆ. ಜಾತಿ ಜಾತಿ, ಧರ್ಮ ಧರ್ಮಗಳ ನಡುವೆ ಕಲಹ ಇರಲಿಲ್ಲ. ಚಾವಡಿ ದೈವದ ಹೆಸರಲ್ಲಿ ಬೀಡುಗಳ ಗುತ್ತುಗಳ ಯಜಮಾನರು ಮತಧರ್ಮಗಳ ಸೌಹಾರ್ದಕ್ಕೆ ಭಂಗ ಉಂಟಾಗದಂತೆ ನೋಡುತ್ತಿದ್ದರು. ಜಾತಿ ಜಾತಿಗಳೊಳಗಿನ ಕಲಹಗಳನ್ನು ನಿವಾರಿಸುತ್ತಿದ್ದರು.
ಪಾಳೆಯಗಾರಿಕೆಯ ಕಾಲದ ಯುದ್ಧಕ್ಕೂ ಭೂತಾರಾಧನೆಗೂ ನೇರವಾದ ಸಂಬಂಧ ಇದೆ. ಪಾಡ್ದನಗಳ ಪ್ರಕಾರ ತುಳುನಾಡಿನಲ್ಲಿ ದಂಡು ಸಾಧಿಸಿದ್ದು ಅರಸರಲ್ಲ ಭೂತಗಳು. ಅನೇಕ ಪಾಡ್ದನಗಳು ಈ ಬಗ್ಗೆ ಮಾಹಿತಿ ನೀಡುತ್ತವೆ. ಈ ಬಗ್ಗೆ ಐತಿಹ್ಯಗಳೂ ಇವೆ. ಈಗಲೂ ಅಂದಿನ ಕಾಲದ ಯುದ್ಧ/ಹೋರಾಟದ ಸಂಕೇತವಾಗಿ ಅಂಬೊಡಿ ಆಚರಣೆ ಕೆಲವೊಂದು ಆಲಡೆ ಮೂಲಸ್ಥಾನಗಳಲ್ಲಿ ನಡೆಯುತ್ತಿದೆ. ಈ ಕ್ಷೇತ್ರಗಳ ಶಕ್ತಿ ಕಲ್ಲು ಎತ್ತುವ ಸ್ಪರ್ಧೆಗಳು ಯುದ್ಧ ವೀರರಿಗೆ ಸಂಬಂಧಿಸಿದ್ದು. ಕಂಬೆರ್ಲು ಕಲ ಮಿತಾವುನು ಯುದ್ಧವನ್ನು ಸಂಕೇತಿಸುತ್ತದೆ.
ಭೂತಾರಾಧನೆಯ ಭಕ್ತಿ ಸಂಸ್ಕೃತಿಯಲ್ಲಿ ಅನೇಕ ಬದಲಾವಣೆಗಳಾಗುತ್ತಿವೆ. ಆದರೂ ಭೂತಾರಾಧನೆಯನ್ನು ಪ್ರದರ್ಶನ ಕಲೆಯನ್ನಾಗಿಸುವುದನ್ನು ತುಳುನಾಡು ಇದುವರೆಗೆ ಬೆಂಬಲಿಸಿರಲಿಲ್ಲ. ತುಳು ನೆಲಮೂಲದ ಸಾವಿರಾರು ವರ್ಷಗಳ ಆರಾಧನಾ ಸಂಸ್ಕೃತಿಯ ಗಾಂಭೀರ್ಯವನ್ನು ಉಳಿಸಿಕೊಳ್ಳಬೇಕೆಂಬ ಒಲವು ಜನರಲ್ಲಿ ಹೆಚ್ಚಾಗಿ ಇರುವುದರಿಂದ ಭೂತಾರಾಧನೆಯನ್ನು ಪ್ರದರ್ಶನ ಕಲೆಯನ್ನಾಗಿಸುವ ಪ್ರಯತ್ನ ಸಫಲವಾಗಿರಲಿಲ್ಲ. ಈಗ ಪ್ರದರ್ಶನ ಕಲೆಯಾಗಿಯೂ ಕಾಣಬರುತ್ತಿದೆ. ಇದರಿಂದ ಭೂತಾರಾಧನೆಯ ಘನತೆಗೆ ಧಕ್ಕೆ ಬಂದಿದೆ. ಗಾಂಭೀರ್ಯ ಕಳೆದುಕೊಂಡಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.