-

ಸ್ವಾತಂತ್ರ್ಯದ ಇತಿಹಾಸ ತೆರೆಮರೆಯ ಖಳನಾಯಕರು!

-

ಕೆ.ಪಿ. ಸುರೇಶ್ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಸುಸ್ಥಿರ/ಸಾವಯವ ಕೃಷಿ, ಗಾಂಧೀ ವಿಚಾರಗಳು, ಸಾಹಿತ್ಯ- ವಿಭಿನ್ನ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿರುವ ಇವರು ಈಗಾಗಲೇ ಎರಡು ಕವನ ಸಂಕಲನ, ಎರಡು ಅನುವಾದಿತ ಕೃತಿಗಳನ್ನು ರಚಿಸಿದ್ದಾರೆ. ಕೃಷಿ ಮತ್ತು ಗ್ರಾಮೀಣ ಆರ್ಥಿಕತೆ ಅಭಿವೃದ್ಧಿ, ಇವುಗಳ ಬಗ್ಗೆ ಸತತ ಚಿಂತನೆ ನಡೆಸುವ ಇವರು ತೆರೆಯ ಹಿಂದೆಯೇ ‘ಅನಾಮಿಕ’ರಾಗಿ ಇರಲು ಬಯಸುವವರು. ಇವರ ಸಾಹಿತ್ಯ ಕೈಂಕರ್ಯ, ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.

ಕೆ.ಪಿ. ಸುರೇಶ್

1857ರ ಬಂಡಾಯವನ್ನು ಸಿಪಾಯಿ ದಂಗೆ ಎಂದೇ ಕರೆಯುತ್ತಿದ್ದ ಚಾರಿತ್ರಿಕ ಸಮಯದಲ್ಲಿ ಅದನ್ನು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದದ್ದು ಸಾವರ್ಕರ್. ಆ ಕಾಲಕ್ಕೆ ಅಪೂರ್ವ ಅಧ್ಯಯನ ಮಾಡಿ ಈ ಸಂಘಟಿತ ಹೋರಾಟವನ್ನು ಜನಮಾನಸದಲ್ಲಿ ಬಿಂಬಿಸಿದ ಮುಖ್ಯ ಕೃತಿ ಅದು. ಈ ಹೋರಾಟದಲ್ಲಿ ದಿಲ್ಲಿಯ ನಾಮಕಾವಸ್ತೆ ವೃದ್ಧ ಮೊಗಲ್ ಚಕ್ರವರ್ತಿಯನ್ನು ಭಾರತದ ಚಕ್ರವರ್ತಿ ಎಂದು ಈ ಬಂಡಾಯದ ನಾಯಕರೆಲ್ಲರೂ ಪರಿಗಣಿಸಿ ಪಟ್ಟಾಭಿಷೇಕ ಮಾಡಿದ್ದನ್ನೂ ಸಾವರ್ಕರ್ ದಾಖಲಿಸುತ್ತಾರೆ. ಈ ಸಮರದಲ್ಲಿ ಹಿಂದೂ- ಮುಸ್ಲಿಮ್ ಇಬ್ಬರೂ ಸೋದರ ಭಾವದಲ್ಲಿ ಕೈ ಜೋಡಿಸಿ ಹೋರಾಡಿ ಹುತಾತ್ಮರಾದ ವಿವರಗಳೂ ಸಾವರ್ಕರ್ ಅವರಿಗೆ ಗೊತ್ತಿತ್ತು. ವಸಾಹತುಶಾಹಿ ಚರಿತ್ರೆ ತದನಂತರದ ಕಾಲಘಟ್ಟದಲ್ಲಿ ವ್ಯವಸ್ಥಿತವಾಗಿ ಹಿಂದೂ - ಮುಸ್ಲಿಮ್ ಎಂದು ನಮ್ಮ ಇತಿಹಾಸವನ್ನು ಬಿಂಬಿಸಿ ಮುಸ್ಲಿಮರು ಹೊರಗಿನ ದಾಳಿಕೋರರು ಎಂಬಂತೆ ಸಾದರಪಡಿಸಿದ್ದೂ ನಮ್ಮ ರಾಷ್ಟ್ರೀಯ ನಾಯಕರಿಗೆ ಗೊತ್ತಿತ್ತು.

ಅಂಡಮಾನಿನ ಕಾಲಾಪಾನಿಯ ಬಳಿಕ ಸಾವರ್ಕರ್ ತಾನೇ ಪ್ರಸ್ತುತಪಡಿಸಿದ್ದ ಐತಿಹಾಸಿಕ ಸತ್ಯವನ್ನು ನಿರಾಕರಿಸಿ ಹಿಂದೂ ಪರಮೋಚ್ಚ ಅಧಿಕಾರದ ಪ್ರಣಾಲಿ ಸಿದ್ಧಪಡಿಸಿ, ಅದರಲ್ಲಿ ಮೊದಲ ಶತ್ರುವಾಗಿ ಮುಸ್ಲಿಮರನ್ನು ಗುರಿ ಮಾಡಿ ಬೌದ್ಧಿಕ ಅಪ್ರಾಮಾಣಿಕತೆಯನ್ನೂ ತೋರಿದರು.

ಈ ಬರಹ ಹಿಂದುತ್ವದ ವೇದಿಕೆ ಸಿದ್ಧವಾದ ಮಜಲುಗಳನ್ನು ಗುರುತಿಸಲು ಪ್ರಯತ್ನಿಸುತ್ತದೆ.

ಅದಕ್ಕಿಂತ ಮೊದಲು 1857ರಲ್ಲಿ ಬ್ರಿಟಿಷರ ಪರವಾಗಿ ನಿಂತ ದೇಶೀ ಅರಸರ ವಿವರಗಳನ್ನು ಪೀಠಿಕೆಯಾಗಿ ಮುಂದಿಡುತ್ತದೆ. ಇದು ಮುಖ್ಯ. ಯಾಕೆಂದರೆ ಈ ವಿದ್ರೋಹದಲ್ಲಿ ಭಾಗಿಯಾಗಿರದಿದ್ದರೆ ಭಾರತದ ಇತಿಹಾಸ ಬೇರೆಯೇ ಮಗ್ಗುಲಿಗೆ ಹೊರಳುತ್ತಿತ್ತು. ಸಾವರ್ಕರ್ ಅಂಥವರೂ ನೈತಿಕ ಪ್ರಾಮಾಣಿಕತೆ ಹೊಂದಿದ್ದರೆ ಅವರಿಗೆ ವಸಾಹತು ಶಾಹಿ ಜೊತೆ ಕೈ ಜೋಡಿಸಿದ ದ್ರೋಹಿಗಳು ಪ್ರಥಮ ಶತ್ರುವಾಗಿ ಕಾಣಿಸಬೇಕಿತ್ತು.

1857ರಲ್ಲಿ ಬ್ರಿಟಿಷರಿಗೆ ಸಹಾಯ ಮಾಡಿದವರು

1857ರ ಕ್ರಾಂತಿಯಲ್ಲಿ ಹೈದರಾಬಾದ್ ನಿಜಾಮನ ನಿಲುವು ಬಗ್ಗೆ ಕಂಪೆನಿ ಆತಂಕಿತವಾಗಿತ್ತು. ‘‘ನಿಜಾಮ ಹೋದರೆ ಎಲ್ಲಾ ಹೋದಂಗೆ’’ ಎಂಬ ಟೆಲಿಗ್ರಾಮ್ ಸಂದೇಶವನ್ನು ಬಾಂಬೆ ಪ್ರೆಸಿಡೆನ್ಸಿ ಕಳಿಸಿತ್ತು. ನಿಜಾಮ ಪಟ್ಟಾಗಿ ಕಂಪೆನಿ ಪರವಾಗಿ ನಿಂತ ಕಾರಣಕ್ಕೇ ಬ್ರಿಟಿಷ್ ಆಡಳಿತ ಭಾರತದಲ್ಲಿ ಭದ್ರವಾಗಿ ನೆಲೆ ಊರಲು ಕಾರಣವಾಯಿತು. ಇಡೀ ದಕ್ಷಿಣ ಭಾರತ ಈ ದಂಗೆಯ ಬಗ್ಗೆ ಉದಾಸೀನ ತಳೆದಿತ್ತು. ನಿಜಾಮನ ಹೈದರಾಬಾದ್ ಮತ್ತು ಗ್ವಾಲಿಯರ್ ಬಗ್ಗೆ ಗವರ್ನರ್ ಜನರಲ್ ಕ್ಯಾನಿಂಗ್ ‘ಪ್ರವಾಹ ತಡೆಯುವ ಬಂಡೆಗಳ ತರಹ ಇವು ಸಹಾಯ ಮಾಡಿದವು’ ಎಂದು ಪ್ರಶಂಸಿಸಿದ್ದ. ಹೈದರಾಬಾದಿನ ಸೈನ್ಯ ಮಾಳ್ವಾ ಮತ್ತು ಕೇಂದ್ರ ಭಾರತದಲ್ಲಿ ಬಂಡಾಯವನ್ನು ಸದೆಬಡಿಯಲು ಸಹಾಯ ಮಾಡಿದ್ದವು

ನಿಜಾಮನಿಗಿಂತಲೂ ಹೆಚ್ಚಿನ ಸಹಾಯ ಕಂಪೆನಿಗೆ ಸಿಕ್ಕಿದ್ದು ಪಂಜಾಬಿನ ಸಿಖ್ ರಾಜರುಗಳಿಂದ. ‘‘ಪಾಟಿಯಾಲಾ ಮತ್ತು ಜಿಂದ್ ರಾಜರು ನಮ್ಮ ಬೆಂಬಲಕ್ಕೆ ಇಲ್ಲದೇ ಇರುತ್ತಿದ್ದರೆ ದಿಲ್ಲಿಯ ಮುತ್ತಿಗೆ ಸಾಧ್ಯವೇ ಆಗುತ್ತಿರಲಿಲ್ಲ’’ ಎಂದು ದಂಗೆಯ ವರದಿ ಮಾಡಿದ ಇಂಗ್ಲೆಂಡಿನ ವರದಿಗಾರ ಹೇಳುತ್ತಾನೆ. ನಭಾದ ರಾಜಭರ್ಪುರ್ ಸಿಂಗ್, ಕಪುರ್ತಲಾದ ರಾಜ ರಾಜಾ ರಣಧೀರ್ ಸಿಂಗ್ ಹಾಗೂ ಫರೀದ್ ಕೋಟ್ನ ರಾಜ ವಜೀರ್ ಸಿಂಗ್ ಬ್ರಿಟಿಷರಿಗೆ ಸಂಪೂರ್ಣ ಸಹಾಯ ನೀಡಿದ್ದರು. ಶಸ್ತ್ರಾಸ್ತ್ರ, ಸೈನಿಕರು ಮತ್ತಿತರ ಸಹಾಯವನ್ನು ಯಥೇಚ್ಛ ಮಾಡಿದ್ದರು.

ಪಾಟಿಯಾಲಾದ ದೊರೆ ಮಹಾರಾಜ ನರೇಂದರ್ ಸಿಂಗ್ ಬ್ರಿಟಿಷರ ಬೆಂಬಲಕ್ಕೆ ಸಂಪೂರ್ಣವಾಗಿ ನಿಂತಿದ್ದನು. ಬಂಡಾಯದ ಮುಖ್ಯ ಕಾಲಘಟ್ಟದಲ್ಲಿ ಬಂಡಾಯದ ನೇತೃತ್ವ ವಹಿಸಿದ್ದ ‘‘ಮೊಗಲ್ ಸಾಮ್ರಾಟ’’ ಬಹಾದ್ದೂರ್ ಶಾ ಪಾಟಿಯಾಲಾದ ದೊರೆಗೆ ಪತ್ರ ಬರೆದು ತಮ್ಮೊಂದಿಗೆ ಕೈ ಜೋಡಿಸುವಂತೆ ವಿನಂತಿಸಿದ್ದರು. ಈ ಮನವಿಯನ್ನು ನಾಜೂಕಾಗಿ ತಿರಸ್ಕರಿಸಿ ಪಾಟಿಯಾಲಾದ ದೊರೆ ಬ್ರಿಟಿಷರ ಪರವಾಗಿ ನಿಂತಿದ್ದಷ್ಟೇ ಅಲ್ಲ, 8 ಫಿರಂಗಿ, 2,156 ಸವಾರರು, 2,846 ಸೈನಿಕರನ್ನೂ ಕಳಿಸಿದ್ದ. ಅಷ್ಟೇ ಅಲ್ಲ, ಕಂಪೆನಿ ಸೇನೆಯ ಚಲನೆಗೆ ದಿಲ್ಲಿಗೆ ತೆರಳುವ ಮಾರ್ಗಗಳಲ್ಲಿ ಯಾವುದೇ ತೊಂದರೆ ಆಗದಂತೆ ಉಸ್ತುವಾರಿ ನೀಡಿದ್ದ.

ನರೇಂದರ್ ಸಿಂಗ್ ಜೊತೆ ನಿಜಾಮ ಮತ್ತು ಗ್ವಾಲಿಯರ್ನ ಸಿಂಧ್ಯಾ ಅಷ್ಟೇ ಅಲ್ಲ ಉಳಿದ ಪುಡಿ ರಾಜರೂ ನಿಂತು ಬಂಡಾಯವನ್ನು ಬಗ್ಗು ಬಡಿಯಲು ಸಹಾಯ ಮಾಡಿದ್ದರು. ದೂರದ ಲಂಡನ್ನಲ್ಲಿ ಈ ಸುದ್ದಿ ಓದಿದ ಕಾರ್ಲ್ ಮಾರ್ಕ್ಸ್, ‘‘ಪಾಟಿಯಾಲದ ರಾಜ.. ಎಂತಹ ನಾಚಿಕೆಗೇಡು. ಬ್ರಿಟಿಷ್ ಸಹಾಯಕ್ಕೆ ದೊಡ್ಡ ಸಂಖ್ಯೆಯ ಸೈನ್ಯ ಕಳಿಸಿದ್ದಾನೆ’’ ಎಂದು ಟಿಪ್ಪಣಿ ಬರೆದರು. ಬಂಡಾಯವನ್ನು ಹೊಸಕಿ ಹಾಕಿದ ಮೇಲೆ ಬ್ರಿಟಿಷರು ಈ ರಾಜನನ್ನು ಮರೆಯಲಿಲ್ಲ. ದೊಡ್ಡ ಪ್ರದೇಶಗಳನ್ನೇ ಈ ರಾಜನಿಗೆ ನೀಡಿದ್ದರು. ಅಂದಾಜು 2 ಲಕ್ಷ ರೂ. ಆದಾಯ ಬರುವ ಭೂ ಭಾಗಗಳನ್ನು ನೀಡಿದ್ದಷ್ಟೇ ಅಲ್ಲ, ಬಹಾದೂರ್ ಜಫರ್ನ ರಾಣಿ ಝೀನತ್ ಬೇಗಮ್ಳ ಅರಮನೆಯನ್ನೂ ನೀಡಿದರು. Order of the star of nindia ಬಿರುದೂ ನೀಡಲಾಯಿತು.

ಕಪುರ್ತಲಾದ ರಾಜ ರಾಜಾರಣಧೀರ್ ಸಿಂಗ್ 1,200 ಕಾಲಾಳು, 200 ಅಶ್ವಾರೋಹಿ ಪಡೆ ಹಾಗೂ ಫಿರಂಗಿ ಸಹಿತ ಜಲಂಧರ್ನ ಟ್ರೆಶರಿಯನ್ನು ಕಾಯ್ದಿದ್ದಲ್ಲದೇ ಬಂಡಾಯ ಗಾರರನ್ನು ಬೆನ್ನಟ್ಟಿದ್ದ. ಈ ಸಹಾಯಕ್ಕಾಗಿ ಕಂಪೆನಿ ಈತನಿಗೆ 15 ಸಾವಿರ ರೂಪಾಯಿಗಳ ಖಿಲ್ಲತ್ ನೀಡಿತು! ಈತ ಅವಧ್ಗೂ ದಂಡೆತ್ತಿ ಹೋಗಿ ಅಲ್ಲಿನ ಬಂಡಾಯಗಾರರನ್ನು ಹತ್ತಿಕ್ಕಲು ಕೆಲಸ ಮಾಡಿದ್ದ. ಇದಕ್ಕಾಗಿ ಒಂದು ಲಕ್ಷ ರೂಪಾಯಿ ತೆರಿಗೆ ಬರುತ್ತಿದ್ದ ಭೌಂಡಿ ಮತ್ತು ಭಿಟೌಲಿ ಪ್ರದೇಶಗಳನ್ನು ಕಪುರ್ತಲಾಕ್ಕೆ ನೀಡಲಾಯಿತು. ಜಿಂದ್ನ ರಾಜಾ ಸರೂಪ್ ಸಿಂಗ್ ಬ್ರಿಟಿಷ್ ಪರವಾಗಿ ಬಂಡಾಯಗಾರರನ್ನು ದಮನಿಸಲು ಹಾನ್ಸಿ, ಝಜ್ಜಾರ್, ರೋಹ್ಟಕ್ಗಳಲ್ಲಿ ಸೈನ್ಯ ಸಮೇತ ಸೆಣೆಸಿದ.

ನಭಾ ರಾಜ್ಯದ 18ರ ಹರೆಯದ ರಾಜಾ ಭರ್ಪೂರ್ ಸಿಂಗ್, ಜಲಂಧರ್ ನ ಬಂಡಾಯ ಗಾರರು ಫಿಲ್ಪುರ್ಗೆ ದಾಟಿದಾಗ ಅವರನ್ನು ಬೆನ್ನತ್ತಲು 50 ಅಶ್ವಾರೋಹಿ ಪಡೆ, 100 ಕಾಲಾಳು, ಎರಡು ಫಿರಂಗಿ ಸಮೇತ ಹೋಗಿದ್ದ. ಇವನ ನಿಷ್ಠೆಯ ಬಗ್ಗೆ ಕಂಪೆನಿ ತಾರೀಫು ಮಾಡಿತ್ತು.

ಭೋಪಾಲ್ನ ರಾಣಿ ಸಿಕಂದರ್ ಬೇಗಂ ಎಲ್ಲಾ ತರಹದ ಬಂಡಾಯದ ಕರಪತ್ರಗಳನ್ನು ನಿಷೇಧಿಸಿದ್ದಲ್ಲದೇ, ಶಸ್ತ್ರಾಸ್ತ್ರ ಮಾರಾಟದ ಬಗ್ಗೆ ನಿಗಾ ಇರಿಸಿದಳು. ಬಂಡಾಯಗಾರರ ಪಕ್ಷ ವಹಿಸಿದ ಗೊಂಡ್ ಸೈನಿಕರಿಗೆ ಹಣದ ಆಮಿಷ ತೋರಿಸಿ ಅವರನ್ನು ಒಲಿಸಿಕೊಳ್ಳಲಾಯಿತು. ಈಕೆಗೆ ಬರೆದ ಪತ್ರವೊಂದರಲ್ಲಿ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ‘‘ನನ್ನ ಕೈಗಳಿಗೆ ಬಿಡುವು ಸಿಕ್ಕ ತಕ್ಷಣ ಖಡ್ಗದ ಮೊನೆಯಲ್ಲಿ ನಿನ್ನೊಂದಿಗೆ ವ್ಯವಹರಿಸುವೆ’’ ಎಂದಿದ್ದಳು.

ಈ ಎಲ್ಲರ ಸೇವೆಗಾಗಿ 1861ರಲ್ಲಿ ವೈಸರಾಯ್ ಕ್ಯಾನಿಂಗ್ ಜಬಲ್ಪುರ್ ನಲ್ಲಿ ವಿಶೇಷ ದರ್ಬಾರ್ ನಿಯೋಜಿಸಿ ಅಲ್ಲಿ ಈ ಬೇಗಂಳಿಗೆ ವಿಶೇಷ ಆಹ್ವಾನ ನೀಡಲಾಯಿತು. ಧಾರ್ ರಾಜ್ಯದ ಬೆರಾಸಿಯಾ ಪರಗಣವನ್ನೂ ಆಕೆಗೆ ನೀಡಲಾಯಿತು. ಅದೇ ವರ್ಷ GCSI ಪ್ರಶಸ್ತಿಯನ್ನು ಮಹಾರಾಜಾ ಸೈಯಾಜಿ ರಾವ್ ಸಿಂಧಿಯಾ, ರಾಮಪುರದ ನವಾಬ್ ಸಾಹೀಬ್, ಪಾಟಿಯಾಲಾದ ಮಹಾರಾಜಾರೊಂದಿಗೆ ಈಕೆಗೂ Most exalted oder of the star of india  ಬಿರುದು ನೀಡಲಾಯಿತು!. ಬಂಡಾಯ ಹತ್ತಿಕ್ಕಲು ಸಹಾಯ ಮಾಡಿದ್ದಕ್ಕಾಗಿ ರೇವಾದ ರಾಜನಿಗೂ ಸೋಹಸ್ ಪುರ್ ಜಿಲ್ಲೆಯನ್ನು ನೀಡಿ ನಗದು ಪುರಸ್ಕಾರ ನೀಡಲಾಯಿತು. ಅವಧ್ನ ಬೇಗಂ ಹಝ್ರತ್ ಮಹಲ್ ಬಂಡಾಯದ ನೇತೃತ್ವ ವಹಿಸಿದ್ದರೆ, ಬನಾರಸಿನ ರಾಜ ಬ್ರಿಟಿಷರಿಗೆ ಸಂಪೂರ್ಣ ನಿಷ್ಠನಾಗಿ ಬಂಡಾಯವನ್ನು ಹತ್ತಿಕ್ಕಲು ಸರ್ವ ಸಹಾಯ ಮಾಡಿದ್ದ. ಬಂಡಾಯ ಹತ್ತಿಕ್ಕಿದ ತರುವಾಯ ಮುಸ್ಲಿಮ್ ಸುಧಾರಣಾವಾದಿ ನಾಯಕ ಸರ್ ಸೈಯದ್ ಅಹ್ಮದ್ ಖಾನ್ ಅವರೊಂದಿಗೆ ಇದೇ ಬನಾರಸಿನ ರಾಜ "Patriotic assocation of india ’ ಎಂಬ ಸಂಘ ಕಟ್ಟಿದ್ದ!! 

ರಾಮಪುರದ ನವಾಬ ಮಾಡಿದ ಸಹಾಯಕ್ಕಾಗಿ ಬ್ರಿಟಿಷರು ಆತನಿಗೆ 5,000 ರೂ. ನಗದು ಮತ್ತು 10 ಸಾವಿರ ಆದಾಯದ ಜಹಗೀರನ್ನು ನೀಡಿದ್ದರು.

ವಿಕ್ಟೋರಿಯಾ ರಾಣಿಯಾದಾಗ ಬನಾರಾಸಿನ ಮಹಾರಾಜಾ ಆನಂದೋತ್ಸಾಹದಲ್ಲಿ ತೇಲಾಡಿ, ‘‘ನಿಮ್ಮ ಅಡಿದಾವರೆಗಳಲ್ಲಿ ಸಮರ್ಪಿಸಿರುವ ಈ ಪುಟ್ಟ ಉಡುಗೊರೆಯನ್ನು ಸ್ವೀಕರಿಸಬೇಕು ಎಂದು ವಿನೀತವಾಗಿ ಬೇಡಿಕೊಳ್ಳುವೆ’’ ಎಂದು ಪತ್ರ ಬರೆದಿದ್ದ. ಬನಾರಸಿನ ಅನತಿ ದೂರದ ಶಹಾಬಾದಿನ ರಾಜ 80ರ ಕುಂವರ್ ಸಿಂಗ್ ಬಂಡಾಯದಲ್ಲಿ ಭಾಗವಹಿಸಿದ್ದ. ಅವನೊಂದಿಗೆ ಪ್ರಜೆಗಳೂ ಕೈ ಜೋಡಿಸಿದ್ದರು. ಈತನನ್ನು ಸದೆಬಡಿಯಲು ಸ್ಥಳೀಯ ರಾಜರು, ಜಮೀನುದಾರರು ಬ್ರಿಟಿಷರ ಜೊತೆ ಕೈ ಜೋಡಿಸಿದ್ದರು.

 ಛೊಟಾ ನಾಗಪುರದ ರಾಜನೂ ಬ್ರಿಟಿಷರಿಗೆ ನಿಷ್ಠೆ ತೋರಿದ್ದ.

ಇವರಲ್ಲದೆ ಇನ್ನೂ ಹತ್ತಾರು ರಾಜರುಗಳಿಗೆ ಖಿಲ್ಲತ್, ಜಹಗೀರು ನೀಡಲಾಯಿತು. ನೂರಾರು ಜಮೀನುದಾರರಿಗೆ ಹೊಸ ಹೊಸ ಜಹಗೀರ್ ನೀಡಲಾಯಿತು. ಅವರ ಹೆಮ್ಮೆ ಹೆಚ್ಚಿಸಲು ‘‘ರಾಜ’’ ಎಂದಷ್ಟೇ ಇದ್ದವರಿಗೆ ‘‘ಮಹಾರಾಜಾ’’ ಎಂಬ ಪದೋನ್ನತಿ ನೀಡಲಾ ಯಿತು. ಜಮೀನುದಾರರಿಗೆ ಬಹಾದ್ದೂರ್ ಮುಂತಾದ ಬಿರುದು ನೀಡಲಾಯಿತು. ಈ ಮಂದಿ ಇಂಥಾ ಬಿರುದು ಬಾವಲಿಗಳನ್ನು ಹೊದ್ದು ಬೀಗುತ್ತಾ ಬ್ರಿಟಿಷರ ಸೇವೆ ಮಾಡುತ್ತಾ ಬಂದರು!

ಇಲ್ಲಿಗೆ ಮೊದಲ ಸ್ವಾತಂತ್ರ್ಯ ಸಮರದ ದುರಂತ ಕಥೆ ಮುಗಿಯಿತು.

ಬ್ರಿಟಿಷ್ ಸರಕಾರ ಇಂಡಿಯಾವನ್ನು ವಹಿಸಿಕೊಂಡ ಮೇಲೆ ಪ್ರಾಚೀನ ಪರಂಪರೆಯನ್ನು ಗೌರವಿಸಿ ದತ್ತು ಪುತ್ರರಿಗೂ ಹಕ್ಕಿದೆ ಎಂಬುದನ್ನು ಮರು ಸ್ಥಾಪಿಸಿತು. ಅಲ್ಲಿಂದಾಚೆ ರಾಜ್ಯಗಳ ಗಡಿ ಗುರುತು, ಆಳುವ ಸಂತತಿಯೆಲ್ಲಾ ಖಾಯಂ ಆಗಿ ಸ್ಥಾಪಿತವಾದವು!

ದೇಶೀ ರಾಜರುಗಳಿಗೆ ವಸಾಹತುಶಾಹಿ ಆಡಳಿತದ ಗುಲಾಮಗಿರಿಯಲ್ಲಿರುವುದು ಲಜ್ಜೆ ತರಿಸಲೇ ಇಲ್ಲ! ಬಹುತೇಕ ರಾಜರು ಈ ಗುಲಾಮಗಿರಿಯ ಬಗ್ಗೆ ಹೆಮ್ಮೆ ತಾಳಿ, ನಜರೊಪ್ಪಿಸಿದ್ದರು.

1857ರ ಬಳಿಕ ಭಾರತ ಹಠಾತ್ತಾಗಿ ಬ್ರಿಟಿಷ್ ಪ್ರಣೀತ ಆಧುನಿಕತೆಗೆ ಹೊರಳಿಕೊಂಡಿತು. ಇದರ ಮುಂಚೂಣಿಯಲ್ಲಿದ್ದುದು ಬಂಗಾಲ. 1911ರಲ್ಲಿ ದಿಲ್ಲಿಗೆ ಸ್ಥಳಾಂತರಗೊಳ್ಳುವವರೆಗೆ ಕಲ್ಕತ್ತಾವೇ ಬ್ರಿಟಿಷ್ ಅಂದರೆ ದೇಶದ ರಾಜಧಾನಿಯಾಗಿತ್ತು.

    

ಈ 1857ರ ಹೋರಾಟದ ಸಮಯದಲ್ಲಿ ಬಂಗಾಲ ನಿರ್ಲಿಪ್ತವಾಗಿತ್ತು. ಬ್ರಿಟಿಷರ ಪ ವಾಗಿತ್ತು. ಈ ವೇಳೆಗಾಗಲೇ ರಾಜಾರಾಮ ಮೋಹನ್ ರಾಯ್ ಅಂಥವರು ಸುಧಾರಣೆಯ ಹೊಸ ಹೆಜ್ಜೆ ಇರಿಸಿದ್ದರು. ಆಧುನಿಕ ಬ್ರಿಟಿಷ್ ಆಡಳಿತದ ಮೂಲಕವೇ ಭಾರತದ ಮೌಢ್ಯ, ದೋಷಗಳನ್ನು ಒರೆಸಿ ಹಾಕುವ ಯತ್ನ ಮಾಡುತ್ತಾ ಬಂದಿದ್ದರು.

 1857ರ ಮೊದಲೇ ಭಾರತದ ಮೇಲ್ಜಾತಿಯ ಒಂದು ವರ್ಗ ಬ್ರಿಟಿಷ್ ಆಡಳಿತದಲ್ಲಿ ಕಾರಕೂನಗಿರಿ ಗಿಟ್ಟಿಸಿಕೊಂಡು ತೃಪ್ತವಾಗಿತ್ತಷ್ಟೇ. ಆದರೆ ರಾಜಾರಾಮ ಮೋಹನ್ ರಾಯ್ ತರಹದ ಕೆಲವರು ಸಾಮಾಜಿಕ ಸುಧಾರಣೆಗೆ ಕಂಪೆನಿ ಆಡಳಿತದ ಪಾಶ್ಚಿಮಾತ್ಯ ಚೌಕಟ್ಟನ್ನು ಬೆಂಬಲಿಸಿ ಸಾಂಪ್ರದಾಯಿಕ ಸತಿ ಮುಂತಾದ ಅಮಾನವೀಯ ಪದ್ಧತಿಗಳಿಗೆ ಅಂತ್ಯ ಹಾಡಲು ಯತ್ನಿಸಿದರಷ್ಟೇ.

ಬ್ರಿಟಿಷ್ ಜೊತೆಗಿನ ದ್ವಂದ್ವ ನಿಲುವುಗಳಿಗೆ ಎರಡು ಸಮಾನಾಂತರ ನೆಲೆಗಳಿವೆ.

1. ಭಾರತದಲ್ಲಿದ್ದ ಸಾಮಾಜಿಕ ಅನಿಷ್ಠಗಳಿಗೆ ಬ್ರಿಟಿಷ್ / ಆಧುನಿಕ ಚೌಕಟ್ಟಿನ ಮೂಲಕ ಪ್ರಭುತ್ವದ ಶಕ್ತಿ ಬಳಸಿ ಅಂತ್ಯ ಹೇಳುವ ಸುಧಾರಣಾವಾದಿ ನಿಲುವು.

2. ಬ್ರಿಟಿಷ್ ( ಮೆಕಾಲೆಯ ಹೇಳಿಕೆ ) ಹೇರಿದ್ದ ಕೀಳರಿಮೆಯ ವಿರುದ್ಧ ಓರಿಯೆಂಟಲ್ ಪಂಡಿತರ ಚುಂಗು ಹಿಡಿದು ಭಾರತದ ಪರಂಪರೆಯ ಶ್ರೀಮಂತಿಕೆಯ ಪ್ರಸ್ತಾವ.

ಇವೆರಡೂ ಏಕಕಾಲಕ್ಕೆ ಜರುಗುತ್ತಾ ಬಂದಿತು. ಒಂದೆಡೆ ಆಧುನಿಕ ಇಂಗ್ಲಿಷ್ ಶಿಕ್ಷಣ ಮೂಲಕ ಬ್ರಿಟಿಷ್ ಹಡಗು ಹತ್ತಿ ಸಾಮಾಜಿಕ ಸ್ಥಾನಮಾನದಲ್ಲಿ ಏರಿಕೆ ಪಡೆಯುವುದು.. ಅದೇ ವೇಳೆ ಪಶ್ಚಿಮಕ್ಕೆ ಸರಿಸಮನಾದ ಸಾಂಸ್ಕೃತಿಕ ಶ್ರೀಮಂತಿಕೆ ನಮ್ಮಲ್ಲಿತ್ತು ಎಂದು ಬಿಂಬಿಸುವ ಪ್ರಯತ್ನ. ಕೀಳರಿಮೆಯಿಂದ ಪಾರಾಗಿ ಬ್ರಿಟಿಷರು ತಮ್ಮನ್ನೂ ಗೌರವದಿಂದ ನೋಡಬೇಕೆನ್ನುವ ಇರಾದೆಯೇ ಇದರಲ್ಲಿ ಮುಖ್ಯ ವಾಗಿತ್ತು.

ಈ ಪುನರುತ್ಥಾನದ ಫಲವಾಗಿ ವೈದಿಕ/ ಸಂಸ್ಕೃತ ಸಾಹಿತ್ಯ ಶ್ರೇಣಿಗಳೆಲ್ಲಾ ಭಾರತೀಯ ಸಂಸ್ಕೃತಿಯ ಪ್ರಾತಿನಿಧಿಕ ಸ್ವರೂಪ ಪಡೆದವು.

ಇದು ಪ್ರತಿಫಲನಗೊಂಡಿದ್ದು ಹೀಗೆ.. ಮೊದಲನೆಯದು ರಾಜಾ ರಾಮ ಮೋಹನ್ ರಾಯ್ ರೀತಿಯದ್ದು. ಎರಡನೆಯದು ರಾಜಾರಾಮ್ ಮೋಹನ್ ರಾಯ್ ಅವರ ಸಹವರ್ತಿ ಯಾಗಿದ್ದೂ ಸಂಪ್ರದಾಯವಾದಿಯಾಗಿ ರೂಪಾಂತರಗೊಂಡ ದೇಬೇಂದ್ರನಾಥ ಟಾಗೋರ್ (ರಬೀಂದ್ರನಾಥ ಟಾಗೋರ್ ಅವರ ತಂದೆ) ಮೋಹನ್ ರಾಯ್ ಬ್ರಹ್ಮ ಸಮಾಜ ಸ್ಥಾಪಿಸಿ, ಮೂರ್ತಿ ಪೂಜೆ, ಪುರಾಣ, ಶಾಸ್ತ್ರಗಳನ್ನು, ಜಾತಿ ಧರ್ಮಾಧಾರಿತ ತಾರತಮ್ಯವನ್ನೂ, ಮೌಢ್ಯವನ್ನೂ ಖಂಡಿಸುತ್ತಾ ಮಹಿಳಾ ಶಿಕ್ಷಣವನ್ನು ಪ್ರತಿಪಾದಿಸುತ್ತಾ ವೈಚಾರಿಕತೆಯ ನೆಲೆಯನ್ನು ಮುಂದೊತ್ತಿದರೆ, ದೇಬೇಂದ್ರನಾಥ ಟಾಗೋರ್ ಹಿಂದೂ ನೆಲೆಗಟ್ಟು ಶಿಥಿಲವಾಗುತ್ತಿದೆ ಎಂಬ ಗ್ರಹಿಕೆಯಲ್ಲಿ 1867ರಲ್ಲೇ ಹಿಂದೂ ಮೇಳ ಸಂಘಟಿಸಿದವರು. ಆರಂಭಕ್ಕೆ ಅದಕ್ಕೆ ರಾಷ್ಟ್ರೀಯ ಮೇಳ ಎಂಬ ಹೆಸರಿದ್ದರೂ ಕ್ರಮೇಣ ಅದು ಹಿಂದೂ ಮೇಳವೆಂದೇ ಹೆಸರಾಯಿತು. 1866ರಲ್ಲಿ ಭೂದೇಬ್ ಭಟ್ಟಾಚಾರ್ಯ ಎಂಬವರು ಕೃಷ್ಣದ್ವೈಪಾಯನ ವೇದವ್ಯಾಸ ಎಂಬ ಕಾವ್ಯನಾಮದಲ್ಲಿ ಹತ್ತೊಂಭತ್ತನೇ ಪುರಾಣ ಎಂಬ ವಿಡಂಬನಾ ಕೃತಿ ರಚಿಸಿದರು. ಅದರಲ್ಲಿ ಮೊತ್ತಮೊದಲ ಬಾರಿಗೆ ಭಾರತವನ್ನು ಮಾತೆ ಎಂಬಂತೆ ಕರೆದರು. ಆ ಕಾಲದಲ್ಲಿ ಬಹುತೇಕ ಬೆಂಗಾಲಿಗಳನ್ನು ಬ್ರಿಟಿಷರು ತಾತ್ಸಾರದಿಂದ ನೋಡುತ್ತಿದ್ದರು. ಭಾರತೀಯನಾಗಿದ್ದರೂ ಪಶ್ಚಿಮದ ವೈಚಾರಿಕತೆಯ ಬಡಿಗೆ ಹಿಡಿದು ಭಾರತದ ಮಡುಗಟ್ಟಿದ ಮೂಢ ನಂಬಿಕೆ ಬೌದ್ಧಿಕ ಸ್ಥಾಗಿತ್ಯದ ಬಗ್ಗೆ ಕವಿ ಹೆನ್ರಿ ಡೆರೋಜಿಯೋ ದಾಳಿ ಮಾಡುತ್ತಿದ್ದರು. ಆತನ ಬಗ್ಗೆ ಆಕ್ರೋಶಗೊಂಡ ಪ್ರಭಾವೀ ಬೆಂಗಾಲಿ ಮೇಲ್ವರ್ಗದ ಹಿಂದೂಗಳೂ ಆತನನ್ನು ಉಪನ್ಯಾಸಕ ಹುದ್ದೆಯಿಂದ ಕಿತ್ತು ಹಾಕುವಲ್ಲಿ ಯಶಸ್ವಿಯಾಗಿದ್ದರು.

ಆದರೆ ಕೀಳರಿಮೆಯ ಭಾರದಿಂದ ಬಿಡುಗಡೆ ಪಡೆಯಲು ಹಿಂದೂ ಪರಂಪರೆಯ ಪಠ್ಯಗಳ ಬಗ್ಗೆ ಓದು ಆರಂಭವಾಯಿತು. ಸ್ವತಃ ಬಂಕಿಮ್ ಚಂದ್ರ ಚಟರ್ಜಿ ಅವರು ಅಳೆದು ಸುರಿದು ಭಗವದ್ಗೀತೆಯನ್ನು ಬೈಬಲ್ ಗೆ ಸಮನಾದ ಕೃತಿ ಎಂದು ಮುಂದಿಟ್ಟರು.

1867ರಲ್ಲಿ ನಡೆದ ಹಿಂದೂ ಮೇಳ ದ್ವಿಜೇಂದ್ರನಾಥ ಟಾಗೋರ್ (ರಬೀಂದ್ರನಾಥ ಟಾಗೋರ್ ಅವರ ಅಣ್ಣ) ಬರೆದ ಹಾಡಿನೊಂದಿಗೆ ಆರಂಭವಾಯಿತು! ಈ ಹಾಡಿನಲ್ಲಿ ಭಾರತವನ್ನು ಸ್ಪಷ್ಟವಾಗಿ ತಾಯಿ ಎಂದು ಸಂಬೋಧಿಸಲಾಯಿತು. ‘‘ಮಲಿನ ಮುಕೋ ಚಂದ್ರ ಮಾ ಭಾರತಿ ತೊಮಾರಿ.’’(ಭಾರತ ಮಾತೆಯೇ ನೀನು ಕಳಾ ಹೀನಳಾಗಿದ್ದೀಯೆ) ಎಂಬ ಸಾಲುಗಳಿದ್ದವು.

1857ರ ಬಂಡಾಯದವರೆಗೂ ಕಂಪೆನಿಯ ಸೈನ್ಯದಲ್ಲಿ ಮೇಲ್ಜಾತಿಯವರ ಸಂಖ್ಯೆಯೇ ಜಾಸ್ತಿಇತ್ತು. ಸೇರ್ಪಡೆ ನೀತಿಯಲ್ಲೂ ಮೇಲ್ಜಾತಿ ಪ್ರಮುಖ ಅಂಶವಾಗಿತ್ತು. ಆದರೆ ಬಂಡಾಯದ ಬಳಿಕ ಈ ಜಾತಿಯವರನ್ನು ನೆಚ್ಚಿಕೊಳ್ಳುವಂತಿಲ್ಲ ಎಂಬ ತೀರ್ಮಾನಕ್ಕೆ ಕಂಪೆನಿ ಬಂದಿರಬೇಕು. ಆಮೇಲೆ ಈ ಸಂಖ್ಯೆ ಇಳಿಮುಖವಾಯಿತು ಎಂದು ದಾಖಲೆಕಾರರು ಹೇಳುತ್ತಾರೆ.

ಬಂಗಾಲದಲ್ಲಿ ಈ ಪ್ರತಿಕ್ರಿಯೆ ಬೇರೆ ರೀತಿಯಲ್ಲಿ ವ್ಯಕ್ತವಾಯಿತು. ಬಂಡಾಯದ ಸಮಯದಲ್ಲಿ ಬ್ರಿಟಿಷರಿಗೆ ಪೂರ್ತಿ ನಿಷ್ಠೆ ತೋರಿದ್ದರೂ ಬ್ರಿಟಿಷರು ಬಂಗಾಲಿಗಳ ಮೇಲೆ ಅಂದರೆ ಪಶ್ಚಿಮಕ್ಕೆ ಮೊಗವೊಡ್ಡಿದ್ದ ಭಾರತೀಯರ ಬಗ್ಗೆ ಅಸಹನೆ, ತಾತ್ಸಾರ ತೋರುತ್ತಿದ್ದರು. ಈ ಕಸಿವಿಸಿ ಬಂಗಾಲದ ಆಢ್ಯಲೋಕವನ್ನು ಪ್ರಭಾವಿಸಿರಬೇಕು, ಅಸ್ಮಿತೆಯನ್ನು ಮರು ಸ್ಥಾಪಿಸುವ ಪ್ರತಿಕ್ರಿಯೆ ಹೀಗೆ ಹುಟ್ಟಿತು..

ಹಿಂದೂ ಮೇಳ ಇತ್ಯಾದಿ ಚಿಗುರಿದ್ದು ಈ ಹಿನ್ನೆಲೆಯಲ್ಲಿ. ಬಂಕಿಮರ ಆನಂದ ಮಠ ಪ್ರಕಟವಾಗಿದ್ದು 1882ರಲ್ಲಿ.1857ರ ಬಂಡಾಯ ಘಟಿಸಿ 25 ವರ್ಷಗಳ ಬಳಿಕ. ಕೋಲ್ಕತಾ ಕಾಲೇಜಿನ ಮೊದಲ ಬ್ಯಾಚಿನ ಪದವೀಧರ ಬಂಕಿಮ್. ಅಪಾರ ಅಧ್ಯಯನ, ಪ್ರತಿಭೆ ಹೊಂದಿದ್ದ ದೈತ್ಯ. ತನ್ನ ಮೊದಲ ಕೃತಿ ( ಕಾದಂಬರಿ)ಯನ್ನು ಇಂಗ್ಲಿಷಲ್ಲೇ ಬಂಕಿಮ್ ಬರೆದಿದ್ದರು. ಆನಂತರ ಬೆಂಗಾಲಿಯಲ್ಲೇ ಬರೆದರು. ಶೈಶವದಲ್ಲಿದ್ದ ಬಂಗಾಲಿ ಭಾಷೆಗೆ ತಾರುಣ್ಯ ತಂದು ಕೊಟ್ಟ ಹಿರಿಯ ಎಂದೇ ಈಗಲೂ ಬಂಗಾಲ ಅವರನ್ನು ಸ್ಮರಿಸುತ್ತದೆ.

ಕಚೇರಿಯಲ್ಲಿ ಬ್ರಿಟಿಷ್ ಮರ್ಜಿಗೆ ಹೊಂದಿಕೊಳ್ಳಲಾಗದೆ ಕೆಲಸ ಬಿಟ್ಟು ಪೂರ್ಣ ಪ್ರಮಾಣದ ಲೇಖಕ, ಪತ್ರಕರ್ತರಾಗಿ ಬಂಕಿಮ್ ದುಡಿದರು. ಈ ವೇಳೆಗೆ ಅವರೊಳಗೊಂದು ತಾತ್ವಿಕ ಬದಲಾವಣೆ ಆಗಿದ್ದನ್ನು ಹಲವರು ಗುರುತಿಸಿದ್ದಾರೆ. ಬೆಂಗಾಲಿ ಅಸ್ಮಿತೆಯ ಮರು ಸ್ಥಾಪನೆಯ ಭಾಗವಾಗಿ ಭಾರತೀಯ ವೈದಿಕ ಪರಂಪರೆಯ ಪಠ್ಯ, ಸಂಕೇತ, ಆಚರಣೆಗಳೆಲ್ಲಾ ಒಟ್ಟಾರೆ ಬಂಗಾಲಿ ಅಸ್ಮಿತೆಯ ಬಿಂಬಗಳಾದವು. ಈ ಬೆಂಗಾಲಿ ಅಂದರೆ ಮೇಲ್ಜಾತಿ ಹಿಂದೂ!

ತನಿಕಾ ಸರ್ಕಾರ್ ಮುಂತಾದ ವಿಮರ್ಶಕರು ಈ ರೂಪಾಂತರದಲ್ಲಿ ಒಂದು ವ್ಯಂಗ್ಯವನ್ನು ಗುರುತಿಸುತ್ತಾರೆ. ಬಂಕಿಮರ ಹಿಂದಿನ ಕೃತಿಗಳಲ್ಲಿ ರೈತರ ಬವಣೆ, ಒಟ್ಟಾರೆ ಹಿಂದೂ ಆಚರಣೆಗಳ ಮೌಢ್ಯ ಮತ್ತು ದುರಂತ ಎಲ್ಲವನ್ನೂ ಆಂತರಿಕ ವಿಮರ್ಶಕನಾಗಿ ಬಂಕಿಮ್ ಮುಂದಿಡುತ್ತಾರೆ. ತಮ್ಮ ವ್ಯಂಗ್ಯ, ಲೇವಡಿಯ ಶೈಲಿಯಲ್ಲಿ ಈ ಸದ್ಯೋ ಸ್ಥಿತಿಯನ್ನು ಹಿಡಿಯು ತ್ತಾರೆ. ಆದರೆ ಆನಂತರ ಅವರ ಬಹುಪಾಲು ಶಕ್ತಿ - ಪುರೋಗಾಮಿ/ ಆಧುನಿಕರನ್ನು ಹಣಿಯಲು ಬಳಕೆಯಾಯಿತು ಎಂದು ಅಧ್ಯಯನಕಾರರು ಗುರುತಿಸುತ್ತಾರೆ.

ಬಂಗಾಳ ನಿಶ್ಯಕ್ತ ಸಮಾಜವಾಗಿರುವುದಕ್ಕೆ ನಮ್ಮ ತಾತ್ವಿಕತೆಗಳ ಪ್ರಭಾವವೇ ಕಾರಣ ಎಂದು ಬಂಕಿಮ್ ಭಾವಿಸುತ್ತಾರೆ. ನಿರ್ಲಿಪ್ತ ಸಾಕ್ಷೀ ಧೋರಣೆಯಲ್ಲಿ ಬದುಕುವ ತಾತ್ವಿಕತೆಯ ಕಾರಣಕ್ಕೆ ಕ್ರಿಯಾಶೀಲತೆಯೇ ಈ ಸಮಾಜಕ್ಕಿಲ್ಲ ಎಂದು ಬಂಕಿಮ್ ಭಾವಿಸುತ್ತಾರೆ. ಅವರು ಬರೆದಿರುವ ‘‘ಸಾಂಖ್ಯ’’ ಎಂಬ ಕೃತಿಯಲ್ಲಿ ಈ ರೀತಿಯ ಪ್ರಮೇಯಗಳಿವೆ ಎನ್ನುತ್ತಾರೆ.

ಇದೇ ವೇಳೆಗೆ ವಸಾಹತು ಶಾಹಿ ಲೇಖಕರು (ಇವರಲ್ಲಿ ಬಹುತೇಕರು ಕಂಪೆನಿ/ ಬ್ರಿಟಿಷ್ ಸೈನ್ಯದ ಲೆಕ್ಕಿಗರು!) ಭಾರತದ ಚರಿತ್ರೆಯನ್ನು ಕಟ್ಟಿ ಕೊಡಲು ಶುರು ಮಾಡಿದರು. ಈ ಚರಿತ್ರೆಯ ಸೃಷ್ಟಿ ಬಹುಮುಖ್ಯ ಸಾಧನ ಎಂದು ಅಧ್ಯಯನಕಾರರು ಹೇಳುತ್ತಾರೆ. ಅಷ್ಟೇ ಅಲ್ಲ, ಭೂಪಟ ತಯಾರಿಸುವ ಕೌಶಲ್ಯವೂ ಒಂದು ಭೂ ಭಾಗವನ್ನು ಗ್ರಹಿಸುವ ರೀತಿಗೆ ಅಪಾರ ಕೊಡುಗೆ ನೀಡಿತು. ಬ್ರಿಟಿಷರು ತಯಾರಿಸಿದ ಭಾರತದ ಭೂಪಟ ಅದರೊಳಗೆ ವಿವಿಧ ರಾಜಶಾಹಿಗಳ ಎಲ್ಲೆ ಗುರುತು- ಇವೆಲ್ಲಾ ವಸಾಹತು ಶಾಹಿ ಬರೆದ ಚರಿತ್ರೆಯನ್ನುಸಂಗ್ರಹ ರೂಪದಲ್ಲಿ ತಲೆಯೊಳಗೆ ಸ್ಥಾಪಿಸಲು ಅನುಕೂಲ ಮಾಡಿಕೊಟ್ಟಿತು.

ಈ ಕಥನದ ಬಹು ಮುಖ್ಯ ಭಾಗ ಎರಡು:

1. ಪ್ರಾಚೀನ ಭಾರತದಲ್ಲಿ ಒಂದು ಸುವರ್ಣ ಯುಗ ಇತ್ತು. ಭಾರತದ ಸಾಹಿತ್ಯ ವಿಶ್ವ ಮಟ್ಟದ್ದು ಎಂಬ ಶಿಫಾರಸು.

2. ಮುಸ್ಲಿಮರು ಹೊರಗಿನಿಂದ ಬಂದವರು. ಅವರ ದಾಳಿ ಈ ದೇಶವನ್ನು ನಲುಗಿಸಿತು ಎಂಬ ವ್ಯಾಖ್ಯೆ. ಭಾರತದ ಚರಿತ್ರೆಯನ್ನು ಅಕ್ಷರಶಃ ಹಿಂದೂ- ಮುಹಮ್ಮಡನ್ ಎಂದು ಈ ಕಥನ ನೋಡಿತು. ಬ್ರಿಟಿಷರು ನವೋದಯದ ಹರಿಕಾರರಾಗಿ, ಬಿಡುಗಡೆಯ ದೇವದೂತರ ರೀತಿ ಸ್ಥಾಪಿತರಾದರು. ಇತ್ತೀಚೆಗಿನವರೆಗೂ ಈ ವಸಾಹತುಶಾಹಿ ಬರೆದ ಚರಿತ್ರೆಯೇ ಅಧಿಕೃತವಾಗಿತ್ತು. ಬಹುತೇಕ 20ನೇ ಶತಮಾನದ ಚರಿತ್ರೆಯ ಆಕರ ಕೃತಿಗಳು ಈ ನೆಲೆಯಿಂದಲೇ ಗತವನ್ನು ನೋಡಿವೆ.

ಬಂಕಿಮ ಚಂದ್ರರ ‘ಆನಂದ ಮಠ’ ಗತದ ಬಗ್ಗೆ ಇರುವ ಪೂರ್ವಾಗ್ರಹವನ್ನು ಕಾದಂಬರಿ ಎಂಬ ಪ್ರಕಾರದ ಮೂಲಕ ಇನ್ನಷ್ಟು ಗಟ್ಟಿಗೊಳಿಸಿತು.ಕಲ್ಪನಾ ವಿಲಾಸವೇ ರಚನೆಯ ಮೂಲ ಅಸ್ತಿಪಂಜರವಾಗಿರುವ ಈ ಪ್ರಕಾರಕ್ಕೆ ದಾಖಲೆಗಳ ಹಂಗಿಲ್ಲ.

ಆನಂದ ಮಠ 1770ರ ಅವಧಿಯಲ್ಲಿ ನಡೆದ ಸನ್ಯಾಸಿ ದಂಗೆಯನ್ನು ನೆಲೆಯಾಗಿಟ್ಟು ಕೊಳ್ಳುತ್ತದೆ. ಮೊದಲ ಬಾರಿಗೆ ದೇಶವನ್ನು ತಾಯಿ ಎಂಬಂತೆ ಕಲ್ಪಿಸಿ ಕಟ್ಟಿ ಕೊಡುವುದರೊಂದಿಗೆ ಅದು ಅಪೇಕ್ಷಿಸುವ, ತ್ಯಾಗ ಬಲಿದಾನಗಳನ್ನು ರಂಜಕವಾಗಿ ಕಟ್ಟಿ ಕೊಡುತ್ತದೆ. ಬಂಗಾಲದ ನವಾಬನ ಶೋಷಕ ತೆರಿಗೆ ನೀತಿಯಿಂದಾಗಿ ಸರ್ವತ್ರರೈತಾಪಿಯಿಂದ ಹಿಡಿದು ಎಲ್ಲರೂ ತತ್ತರಿಸಿ ಹೋಗಿದ್ದರು. ಆದರೆ ನವಾಬ ಈಸ್ಟ್ ಇಂಡಿಯಾ ಕಂಪೆನಿಯ ಅಧೀನದ ಕೈಗೊಂಬೆಯಾಗಿದ್ದ. ತೆರೆಮರೆಯ ಈ ಕಂಪೆನಿ ಹಿಡಿತ ಬಂಕಿಮರ ಕಾಲದ ಬೌದ್ಧಿಕ ವರ್ಗಕ್ಕೆ ಗೊತ್ತಿತ್ತು. ಈ ನವಾಬನ ವಿರುದ್ಧ ದಂಗೆಯಾದಾಗ ಕಂಪೆನಿ ತನ್ನ ಸೈನ್ಯದ ಮೂಲಕ ಬಂಡಾಯವನ್ನು ಹತ್ತಿಕ್ಕಿ ನಾಮಕಾವಾಸ್ತೆ ನವಾಬನನ್ನು ಪದಚ್ಯುತಗೊಳಿಸಿ ನೇರವಾಗಿ ಬಂಗಾಳವನ್ನು ಆಳತೊಡಗಿತು. ಆದರೆ ಕಾದಂಬರಿಯಲ್ಲಿ ಬಂಕಿಮರು ಈ ಚಾರಿತ್ರಿಕ ಸತ್ಯವನ್ನು ಆರಾಮಾಗಿ ಬದಿಗೊತ್ತಿ ಶೋಷಣೆಯನ್ನು ಮುಸ್ಲಿಮ್ ಆಡಳಿತಗಾರನ ತಲೆಗೆ ಕಟ್ಟುತ್ತಾರೆ. ಅಲ್ಲಿಂದಾಚೆಗೆ ಕಥನದ ಹರಿವು ಸಲೀಸಾಗುತ್ತದೆ.

  

1882ರಲ್ಲಿ ಆನಂದ ಮಠ ಪ್ರಕಟವಾದ ಸಂದರ್ಭದಲ್ಲೇ ಬಂಕಿಮರು ‘‘ಬಂಗಾಲಾರ್ ಇತಿಹಾಸ್ ಸಂಬಂಧೇ ಕೋಕ್ತಿ ಕೊಥಾ’’ (ಬಂಗಾಲದ ಇತಿಹಾಸದ ಬಗ್ಗೆ ಕೆಲವು ಟಿಪ್ಪಣಿಗಳು) ಎಂಬ ಲೇಖನ ಪ್ರಕಟಿಸಿದರು. ಈ ಲೇಖನದಲ್ಲಿ ಅವರು ಬಂಗಾಲದ ಮುಸ್ಲಿಮ್ ಆಳ್ವಿಕೆಯ ಚರಿತ್ರೆಯನ್ನು ಬಂಗಾಲದ ಚರಿತ್ರೆ ಎಂದು ಒಪ್ಪಲು ನಿರಾಕರಿಸಿದರು.

‘‘ನನ್ನ ಅಭಿಪ್ರಾಯದ ಪ್ರಕಾರ ಒಂದೇ ಒಂದು ಇಂಗ್ಲಿಷ್ ಪುಸ್ತಕವೂ ಬಂಗಾಲದ ನಿಜ ಚರಿತ್ರೆಯನ್ನು ಹೊಂದಿಲ್ಲ.ಈ ಪುಸ್ತಕಗಳೆಲ್ಲಾ ‘ಬಂಗಾಲದ ಬಾದಶಾ, ಬಂಗಾಳದ ಸುಬಾಹ್ದಾರ್’ ಮುಂತಾದ ನಿಷ್ಪ್ರಯೋಜಕ ಬಿರುದು ಹೊತ್ತು ಹಾಸಿಗೆಯಲ್ಲೇ ದಿನ ಕಳೆದ ಮುಸ್ಲಿಮರ ಹುಟ್ಟು, ಸಾವು ಕೌಟುಂಬಿಕ ವಿವರಗಳನ್ನಷ್ಟೇ ಹೊಂದಿದೆ. ಇದು ಬಂಗಾಳದ ಚರಿತ್ರೆ ಅಲ್ಲ. ಇದರಲ್ಲಿ ಬಂಗಾಳದ ಎಳ್ಳು ಕಾಳಿನ ಚರಿತ್ರೆಯೂ ಇಲ್ಲ. ಇದಕ್ಕೆ ಬಂಗಾಳದ ಚರಿತ್ರೆಯ ಜೊತೆ ಯಾವ ಸಂಬಂಧವೂ ಇಲ್ಲ. ಇದನ್ನೆಲ್ಲಾ ಬಂಗಾಲದ ಚರಿತ್ರೆ ಎಂದು ಬಗೆಯುವ ಬಂಗಾಲಿ, ಬಂಗಾಲಿಯೇ ಅಲ್ಲ. ಆತ್ಮರತಿಯಿಂದ ಕುರುಡಾಗಿದ್ದ ಮತ್ತು ಹಿಂದೂ ದ್ವೇಷಿಗಳಾಗಿದ್ದ ಸುಳ್ಳು ಗಾರ ಮುಸ್ಲಿಮರ ಈ ವ್ಯಾಖ್ಯೆಯನ್ನು ಪ್ರಶ್ನಿಸದೇ ಒಪ್ಪಿಕೊಳ್ಳುವವನು ಬಂಗಾಲಿಯೇ ಅಲ್ಲ’’ ಆನಂದಮಠದ ಮೊದಲ ಆವೃತ್ತಿಯಲ್ಲಿ ಶತ್ರು ‘‘ಗೋರಾ’’ (ಬಿಳಿಯ) ಮತ್ತು ‘‘ಸೇನಾ’’ ( ಸೈನ್ಯ) ಆಗಿದ್ದರೆ ತದನಂತರದ ಆವೃತ್ತಿಗಳಲ್ಲಿ ಅದು ತಣ್ಣಗೆ ‘‘ನೇರೆ’’ ಮತ್ತು ‘‘ ಜಬೋನ್’’ (ಯವನ) ಎಂದು ಬದಲಾಯಿತು. ಈ ನೇರೆ ಮತ್ತು ಜಬೋನ್ ಎಂಬ ಪದಗಳು ಬಂಗಾಲದ ಹಿಂದೂಗಳು ಮುಸ್ಲಿಮರನ್ನು ಗುರುತಿಸುತ್ತಿದ್ದ ಪದಗಳು. ಈ ಬದಲಾವಣೆ ಬಂಕಿಮ್ ಯಾಕೆ ಮಾಡಿದರು ಎಂಬುದು ಅಂಥಾ ಒಗಟೇನಲ್ಲ.

ಬ್ರಿಟಿಷರು ಪ್ರಚೋದಿಸಿದ್ದ ಕೀಳರಿಮೆಯಿಂದ ಪಾರಾಗಲು ಬಂಗಾಲಿ ( ರಾಷ್ಟ್ರೀಯ?) ಅಸ್ಮಿತೆಯನ್ನು ಪ್ರತಿಮೆಗಳನ್ನು ಅನ್ವೇಷಿಸುತ್ತಿದ್ದ ಬಂಕಿಮರು ದೇಶವನ್ನು ತಾಯಿಯೆಂದೂ ಚಿತ್ರಿಸಿದರು. ಆದರೆ ಈ ಕಳಾಹೀನ ತಾಯಿಯ ಕಷ್ಟಕ್ಕೆ ಕಾರಣರಾದ ಶತ್ರು ಯಾರು? ಎಂಬ ಪ್ರಶ್ನೆಗೆ ಮುಸ್ಲಿಮರೇ ಕಾರಣ ಎಂದು ಬಂಕಿಮರು ಹೊರಳಿಕೊಂಡದ್ದು ಗಮನಾರ್ಹ. ವಸಾಹತುಶಾಹಿ ಬ್ರಿಟಿಷರನ್ನು ಈ ಕಾದಂಬರಿಯಲ್ಲಿ ಕೇಡಿಗರನ್ನಾಗಿ ಚಿತ್ರಿಸಿದರೆ ಸಂಕಷ್ಟಕ್ಕೀಡಾಗುತ್ತೇನೆ ಎಂಬ ಭಯವೂ ಇದಕ್ಕೆ ಕಾರಣ. ಯಾಕೆಂದರೆ ಈ ಕಾದಂಬರಿ ಸ್ವತಃ ಬಂಕಿಮ್ ಸಂಪಾದಿಸುತ್ತಿದ್ದ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂದಿತ್ತು. ಆಗ ಅಲ್ಲಿನ ಶತ್ರು ನೇರವಾಗಿ ಬ್ರಿಟಿಷ್ ಎಂಬ ಉಲ್ಲೇಖ ಇತ್ತು.

ಬ್ರಿಟಿಷ್ ಕೆಂಗಣ್ಣಿನಿಂದ ಪಾರಾಗಲು ಮುಸ್ಲಿಮ್ರನ್ನು ಶತ್ರುವಾಗಿ ಚಿತ್ರಿಸುವುದು ಸುಲಭದ ದಾರಿಯಾಗಿತ್ತು. ಆದರೆ ಇದಕ್ಕೆ ದೇಶ ತೆರಬೇಕಾಗಿ ಬಂದ ಬೆಲೆ ಅಪಾರ!!

ಈ ಕಾದಂಬರಿಯ ಮೊದಲು ಬರೆದಿದ್ದ ಲೇಖನಗಳಲ್ಲಿ ಬಂಕಿಮ್ ಅವರು ವಸಾಹತುಶಾಹಿ ಶೋಷಣೆಯ ಕಾರಣಕ್ಕೆ ರೈತಾಪಿ ಸಂಕಷ್ಟಕ್ಕೀಡಾಗಿದ್ದನ್ನು ದಾಖಲಿಸುತ್ತಾರೆ. ಅಲ್ಲಿ ಒಬ್ಬ ಹಿಂದೂ ರೈತನೂ ಇದ್ದಾನೆ. ಮುಸ್ಲಿಮ್ ರೈತನೂ ಇದ್ದಾನೆ.

ಚಾರಿತ್ರಿಕ ದಾಖಲೆಗಳನ್ನೆಲ್ಲಾ ಬದಿಗೊತ್ತಿ ಬಂಕಿಮರು ಮುಸ್ಲಿಮರನ್ನು ನಾಶ ಮಾಡುವ ಹಿಂದೂ ಮಿಲಿಟೆಂಟ್ ಉದ್ದೇಶವನ್ನು ಕಾದಂಬರಿಯ ಕಥನದಲ್ಲಿ ಬೆಳೆಸುತ್ತಾರೆ. ಹಿಂದೂ ಸನ್ಯಾಸಿಗಳಂತೆ ಮುಸ್ಲಿಮ್ ಫಕೀರರೂ 1770ರ ಬಂಡಾಯದಲ್ಲಿ ಭಾಗಿಯಾಗಿದ್ದರು ಎಂಬುದನ್ನು ಬಂಕಿಮ್ ಕಾದಂಬರಿಯಲ್ಲಿ ಒರೆಸಿ ಹಾಕುತ್ತಾರೆ.

‘‘ಈ ಮುಸ್ಲಿಮ್ ದುರುಳರಿಂದಾಗಿ ನಮ್ಮ ಮನೆ ಮಠ ಮಾತ್ರವಲ್ಲ ನಮ್ಮ ಧರ್ಮವೂ ಅಪಾಯದಲ್ಲಿದೆ. ಈ ದುರುಳರನ್ನು ಓಡಿಸದೇ ನಾವು ನಮ್ಮ ಧರ್ಮವನ್ನು ಉಳಿಸಿಕೊಳ್ಳುವುದು ಹೇಗೆ ಸಾಧ್ಯ?’’ ಎಂದು ಆನಂದ ಮಠದ ಪಾತ್ರವೊಂದು ಹೇಳುತ್ತದೆ. ಬರಗಾಲವೆಂಬುದು ನೆಪ ಮಾತ್ರ. ಉದ್ದೇಶ ಮುಸ್ಲಿಮರನ್ನು ಸಂಹಾರ ಮಾಡುವುದು ಎಂಬುದನ್ನು ಸತ್ಯಾನಂದ ಹೇಳುತ್ತಾನೆ. ‘‘ನಮಗೆ ಅಧಿಕಾರ ಬೇಕಿಲ್ಲ. ಆದರೆ ಈ ನೆಲದ ಎಲ್ಲಾ ಮುಸ್ಲಿಮರನ್ನೂ ನಾವು ನಿರ್ನಾಮ ಮಾಡಬೇಕಿದೆ.’’

ಅರ್ಥಾತ್ ಹಿಂದುತ್ವದ ತಾತ್ವಿಕ ಬೇರು ಇರುವುದೇ ಬೌದ್ಧಿಕ ಅಪ್ರಾಮಾಣಿಕತೆಯಲ್ಲಿ. ಬಂಕಿಮರೂ ತನಗೆ ಕಂಡ, ತನ್ನ ಅಂತಸ್ಸಾಕ್ಷಿಗೆ ಕಂಡಿದ್ದ ಸತ್ಯವನ್ನು ತೆರೆಮರೆಗೆ ಸರಿಸಿ ಪೂರ್ವಾಗ್ರಹದ ಧೋರಣೆಯ ತಾತ್ವಿಕತೆಯನ್ನು ಸಾದರಪಡಿಸಿದರು.

******

ಬಂಕಿಮ್ ಚಂದ್ರ ಅವರಿಗಿಂತ ಮೊದಲೇ ರಾಜ್ ನಾರಾಯಣ ಬಸು ಮತ್ತು ನಬಗೋಪಾಲ ಮಿತ್ರ ಎಂಬವರು ನ್ಯಾಶನಲ್ ಸೊಸೈಟಿ ಎಂಬ ಹಿಂದೂ ಸಂಘಟನೆ ಶುರುಮಾಡಿದ್ದರು. ಇದರ ವತಿಯಿಂದ ಪ್ರತೀ ವರ್ಷ ಹಿಂದೂ ಮೇಳ ಸಂಘಟಿಸುತ್ತಿದ್ದರು. ಹೆಸರು ನ್ಯಾಷನಲ್ ಸೊಸೈಟಿ, ಅದರ ಮೇಳ ‘ಹಿಂದೂ’ ಎಂಬ ಬಗ್ಗೆ ಯಾರೋ ತಕರಾರು ತೆಗೆದಾಗ, ಇವರು, ‘‘ಈ ವರದಿಗಾರ ಹಿಂದೂ ಎಂಬುದಕ್ಕೆ ಯಾಕೆ ಆಕ್ಷೇಪ ಹೇಳುತ್ತಿದ್ದಾರೆ? ಇದೇನು ವೈರುಧ್ಯ ಅಲ್ಲ. ಹಿಂದೂಗಳೇ ರಾಷ್ಟ್ರ ನಿರ್ಮಾಪಕರು.’’ ಎಂದು ಉತ್ತರಿಸಿದ್ದರು. ‘‘ಅಂದರೆ ರಾಷ್ಟ್ರವೆಂದರೆ ಹಿಂದೂ?! ನಭ ಗೋಪಾಲ್ ಪ್ರಕಾರ ಇಂಡಿಯಾದ ರಾಷ್ಟ್ರೀಯ ಐಕ್ಯದ ನೆಲೆಗಟ್ಟು ಹಿಂದೂ ಧರ್ಮ. ಅವರ ಸ್ಥಳ, ಭಾಷೆ ಏನೇ ಇದ್ದರೂ ಹಿಂದೂ ರಾಷ್ಟ್ರೀಯತೆ ಅವರೆಲ್ಲರನ್ನೂ ಒಳಗೊಳ್ಳುತ್ತದೆ’’

ಇವರ ಸಮಕಾಲೀನ ಶಶಿಧರ ತಾರಕಚೂಡಾಮಣೀ ಎಂಬಾತ ಆರ್ಯ ಧರ್ಮ ಪ್ರಚಾರಿಣಿ ಸಭಾ ಎಂಬ ಹಿಂದೂ ಪುನರುತ್ಥಾನದ ಸಂಘಟನೆಯನ್ನು ಆರಂಭಿಸಿದನು. ಹಿಂದೂ ಧರ್ಮದ ಆಚರಣೆಗಳಿಗೆ ವೈಜ್ಞಾನಿಕ ವಿವರಣೆ ನೀಡತೊಡಗಿದ್ದು ಈತನ ಸಾಧನೆ. ಈತನ ಬಗ್ಗೆ ಅದೆಷ್ಟು ಆದರ ಇತ್ತೆಂದರೆ ಹಲವಾರು ಮಂದಿ ಆತನನ್ನು ಎರಡನೇ ಶಂಕರಾಚಾರ್ಯ ಎಂದು ತಾರೀಪು ಮಾಡಿದ್ದರು. ಈತನ ಪ್ರಭಾವದಿಂದ ಚಂದ್ರನಾಥ ಬಸು ಹಿಂದುತ್ವ ಎಂಬ ಕೃತಿ ರಚಿಸಿದರು.

ಹಿಂದುತ್ವ ಎಂಬ ಪದ ಮತ್ತು ಪರಿಕಲ್ಪನೆ ಹುಟ್ಟಿದ್ದು ಹೀಗೆ

1909ರಲ್ಲಿ ಲೆ.ಕ. ಯು.ಎನ್. ಮುಖರ್ಜಿ ಎಂಬ ಮಹಾನುಭಾವ ‘‘ಹಿಂದೂ ವಿನಾಶದತ್ತ ಸಾಗುತ್ತಿರುವ ಜನಾಂಗ’’ ಎಂಬ ಲೇಖನವನ್ನು ‘ಬೆಂಗಾಲಿ’ ಎಂಬ ಇಂಗ್ಲಿಷ್ ಪತ್ರಿಕೆಯಲ್ಲಿ ಪ್ರಕಟಿಸಿದನು. ‘‘ಎಷ್ಟೋ ಜನಾಂಗಗಳು ನಶಿಸುತ್ತಾ ಕೊನೆಗೆ ತಮ್ಮದೇ ದೇಶದಿಂದ ಕಾಣೆಯಾಗಿದ್ದಾರೆ. ನಮ್ಮ ವಿಧಿಯೂ ಅದೇ ಹಾದಿಯಲ್ಲಿದೆ ನಮ್ಮದೂ ನಶಿಸಿಹೋಗುತ್ತಿರುವ ಜನಾಂಗ. ಪ್ರತೀ ವರ್ಷ ಹಿಂದೂಗಳು ಅಂಚಿಗೆ ಸರಿಸಲ್ಪಡುತ್ತಿದ್ದಾರೆ. ಅವರಲ್ಲಿದ್ದ ಭೂಮಿ ಎಲ್ಲಾ ಮುಹಮ್ಮದನರ ವಶವಾಗುತ್ತಿದೆ. ದೇಶದ ಜನಸಂಖ್ಯೆಯಲ್ಲಿ ಅವರ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದೆ.’’ ಎಂದು ಈತ ಗೋಳಾಡಿ, ನ್ಯೂಝಿಲ್ಯಾಂಡಿನ ಮಾವೋರಿಗಳು, ಅಮೆರಿಕದ ಮೂಲನಿವಾಸಿಗಳು ಹೇಗೆ ನಾಶವಾದರು ಎಂದು ಈತ ಬರೆಯುತ್ತಾನೆ.

ಕನಿಷ್ಠ ತರ್ಕ ಮತ್ತು ಸಾಮಾಜಿಕ ಗಮನ ಇದ್ದಿದ್ದರೂ ಈತನಿಗೆ ಕೆಲವು ಸತ್ಯಗಳು ಗೊತ್ತಾಗುತ್ತಿತ್ತು. ನ್ಯೂಝಿಲ್ಯಾಂಡ್ ಮತ್ತು ಅಮೆರಿಕದಲ್ಲಿ ಮೂಲನಿವಾಸಿಗಳನ್ನು ಭೌತಿಕವಾಗಿ ನಾಶ ಮಾಡಿದ್ದು ವಸಾಹತುಶಾಹಿ ಬಿಳಿಯರು. ಅದೇ ಮುಹಮ್ಮದನರು ಹಿಂದೂ ಧರ್ಮದ ತಾರತಮ್ಯ ನೀತಿಯಿಂದಾಗಿ ಮತಾಂತರಗೊಂಡವರು ಎಂಬ ಸತ್ಯ ಈತನಿಗೆ ಗೊತ್ತಿರದೇ ಇರಲು ಸಾಧ್ಯವಿಲ್ಲ. ಯಾಕೆಂದರೆ ಆ ವೇಳೆಗಾಗಲೇ ದಯಾನಂದ ಸರಸ್ವತಿಯವರು ಶುದ್ಧಿ ಎಂಬ ಪ್ರಕ್ರಿಯೆ ಮೂಲಕ ಮರು ಮತಾಂತರದ ಕೆಲಸ ಮಾಡುತ್ತಿದ್ದರು. ಬಹುತೇಕ ವೈಚಾರಿಕ ಸುಧಾರಣಾವಾದಿಗಳು ಹಿಂದೂ ಧರ್ಮದ ಜಾತಿ ತಾರತಮ್ಯದ ಬಗ್ಗೆ ಮಾತನಾಡಿದ್ದರು.

ಮುಖ್ಯವಾಗಿ ಮೊದಲ ಶತ್ರುವಾಗಿ ಮುಸ್ಲಿಮರನ್ನೂ, ಅವರಿಂದ ಪಾರು ಮಾಡಲು ಬ್ರಿಟಿಷರು ಬಂದಿದ್ದಾರೆ ಎಂಬ ಗ್ರಹಿಕೆಯನ್ನೂ, ಬಹುಸಂಖ್ಯಾತ ಹಿಂದೂಗಳು ಅಲ್ಪಸಂಖ್ಯಾತ ರಾಗುವ ಅಪಾಯದಲ್ಲಿದ್ದಾರೆ ಎಂಬ ಹುಯಿಲನ್ನೂ ಕಟ್ಟಿಕೊಟ್ಟ ವರ್ಗ ಇದು.

ಹಿಂದುತ್ವ ಶಕ್ತಿಗಳೆಂದು ನಾವಿಂದು ಕರೆಯುವ ಆರೆಸ್ಸೆಸ್ ನೇತೃತ್ವದ ಶಕ್ತಿಗಳಿಗೆ ಇವೆಲ್ಲಾ ಅನಾಯಾಸವಾಗಿ ದಕ್ಕಿದ ಪ್ರಮೇಯಗಳು

ನರೇಂದರ್ ಸಿಂಗ್ ಜೊತೆ ನಿಜಾಮ ಮತ್ತು ಗ್ವಾಲಿಯರ್ನ ಸಿಂಧ್ಯಾ ಅಷ್ಟೇ ಅಲ್ಲ ಉಳಿದ ಪುಡಿ ರಾಜರೂ ನಿಂತು ಬಂಡಾಯವನ್ನು ಬಗ್ಗು ಬಡಿಯಲು ಸಹಾಯ ಮಾಡಿದ್ದರು. ದೂರದ ಲಂಡನ್ನಲ್ಲಿ ಈ ಸುದ್ದಿ ಓದಿದ ಕಾರ್ಲ್ ಮಾರ್ಕ್ಸ್, ‘‘ಪಾಟಿಯಾಲದ ರಾಜ.. ಎಂತಹ ನಾಚಿಕೆಗೇಡು. ಬ್ರಿಟಿಷ್ ಸಹಾಯಕ್ಕೆ ದೊಡ್ಡ ಸಂಖ್ಯೆಯ ಸೈನ್ಯ ಕಳಿಸಿದ್ದಾನೆ’’ ಎಂದು ಟಿಪ್ಪಣಿ ಬರೆದರು. ಬಂಡಾಯವನ್ನು ಹೊಸಕಿ ಹಾಕಿದ ಮೇಲೆ ಬ್ರಿಟಿಷರು ಈ ರಾಜನನ್ನು ಮರೆಯಲಿಲ್ಲ. ದೊಡ್ಡ ಪ್ರದೇಶಗಳನ್ನೇ ಈ ರಾಜನಿಗೆ ನೀಡಿದ್ದರು. ಅಂದಾಜು 2 ಲಕ್ಷ ರೂ. ಆದಾಯ ಬರುವ ಭೂ ಭಾಗಗಳನ್ನು ನೀಡಿದ್ದಷ್ಟೇ ಅಲ್ಲ, ಬಹಾದೂರ್ ಝಫರ್ನ ರಾಣಿ ಝೀನತ್ ಬೇಗಮ್ಳ ಅರಮನೆಯನ್ನೂ ನೀಡಿದರು.

1867ರಲ್ಲಿ ನಡೆದ ಹಿಂದೂ ಮೇಳ ದ್ವಿಜೇಂದ್ರನಾಥ ಟಾಗೋರ್ ಬರೆದ ಹಾಡಿನೊಂದಿಗೆ ಆರಂಭವಾಯಿತು! ಈ ಹಾಡಿನಲ್ಲಿ ಭಾರತವನ್ನು ಸ್ಪಷ್ಟವಾಗಿ ತಾಯಿ ಎಂದು ಸಂಬೋಧಿಸಲಾಯಿತು. 1857ರ ಬಂಡಾಯದವರೆಗೂ ಕಂಪೆನಿಯ ಸೈನ್ಯದಲ್ಲಿ ಮೇಲ್ಜಾತಿಯವರ ಸಂಖ್ಯೆಯೇ ಜಾಸ್ತಿ ಇತ್ತು. ಸೇರ್ಪಡೆ ನೀತಿಯಲ್ಲೂ ಮೇಲ್ಜಾತಿ ಪ್ರಮುಖ ಅಂಶವಾಗಿತ್ತು. ಆದರೆ ಬಂಡಾಯದ ಬಳಿಕ ಈ ಜಾತಿಯವರನ್ನು ನೆಚ್ಚಿಕೊಳ್ಳುವಂತಿಲ್ಲ ಎಂಬ ತೀರ್ಮಾನಕ್ಕೆ ಕಂಪೆನಿ ಬಂದಿರಬೇಕು. ಆಮೇಲೆ ಈ ಸಂಖ್ಯೆ ಇಳಿಮುಖವಾಯಿತು ಎಂದು ದಾಖಲೆಕಾರರು ಹೇಳುತ್ತಾರೆ.

ಬಂಕಿಮ್ ಚಂದ್ರ ಅವರಿಗಿಂತ ಮೊದಲೇ ರಾಜ್ ನಾರಾಯಣ ಬಸು ಮತ್ತು ನಬಗೋಪಾಲ ಮಿತ್ರ ಎಂಬವರು ನ್ಯಾಶನಲ್ ಸೊಸೈಟಿ ಎಂಬ ಹಿಂದೂ ಸಂಘಟನೆ ಶುರುಮಾಡಿದ್ದರು. ಇದರ ವತಿಯಿಂದ ಪ್ರತೀ ವರ್ಷ ಹಿಂದೂ ಮೇಳ ಸಂಘಟಿಸುತ್ತಿದ್ದರು. ಹೆಸರು ನ್ಯಾಷನಲ್ ಸೊಸೈಟಿ, ಅದರ ಮೇಳ ‘ಹಿಂದೂ’ ಎಂಬ ಬಗ್ಗೆ ಯಾರೋ ತಕರಾರು ತೆಗೆದಾಗ, ಇವರು, ‘‘ಈ ವರದಿಗಾರ ಹಿಂದೂ ಎಂಬುದಕ್ಕೆ ಯಾಕೆ ಆಕ್ಷೇಪ ಹೇಳುತ್ತಿದ್ದಾರೆ? ಇದೇನು ವೈರುಧ್ಯ ಅಲ್ಲ. ಹಿಂದೂಗಳೇ ರಾಷ್ಟ್ರ ನಿರ್ಮಾಪಕರು.’’ ಎಂದು ಉತ್ತರಿಸಿದ್ದರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top