-

ಕೊಡಗಿನ ಸಾಮರಸ್ಯ- ಸಂಘರ್ಷದ ಕಥನಗಳು

-

ಹಿರಿಯ ವಕೀಲರಾಗಿರುವ ವಿದ್ಯಾಧರ ಕುಡೆಕಲ್ಲು ಲೇಖಕರು, ಕಥೆಗಾರರಾಗಿ ಗುರುತಿಸಲ್ಪಟ್ಟಿದ್ದಾರೆ. ಅವರ ಇತ್ತೀಚಿನ ಸಂಶೋಧನಾತ್ಮಕ ಕೃತಿ ಅಮರ ಸುಳ್ಯ -1837 (ಬ್ರಿಟಿಷ್ ವಸಾಹತುಶಾಹಿ ವಿರುದ್ಧದ ಸಶಸ್ತ್ರ ಹೋರಾಟ) ಕೃತಿ ಚರ್ಚೆಯಲ್ಲಿದೆ. ತಮ್ಮ ಹಲವು ಬರಹಗಳಲ್ಲಿ ಕೊಡಗು ಮತ್ತು ಸುಳ್ಯ ಪರಿಸರದ ಚರಿತ್ರೆಯ ಕುತೂಹಲಕಾರಿ ವಿವರಗಳನ್ನು ಅವರು ಕಟ್ಟಿಕೊಟ್ಟಿದ್ದಾರೆ. ಅಮರ ಸುಳ್ಯ ಹೋರಾಟದ ಬಗ್ಗೆ ವಿದ್ಯಾಧರ ಅವರು ನೀಡಿರುವ ಚಾರಿತ್ರಿಕ ವಿವರಣೆ, ದಾಖಲಾತಿ, ವಿಮರ್ಶೆ, ಚರ್ಚೆಯು ಓದುಗರಿಗೆ ಮತ್ತು ಸಂಶೋಧಕರಿಗೆ ಮಹತ್ವದ ಆಕರಗಳಾಗಿ ಗುರುತಿಸಿಕೊಂಡಿವೆ.

ಬ್ರಿಟಿಷ್ ಬೆಂಬಲಿಗರಾದ ಭಾರತೀಯ ಬರಹಗಾರರು, ಇತಿಹಾಸಕಾರರು ಅತ್ಯಂತ ಶ್ರದ್ಧೆಯಿಂದ ಚಿಕ್ಕ ವೀರರಾಜನ ವ್ಯಕ್ತಿತ್ವವನ್ನು ಹರಿದು ಹಂಚಿಹಾಕಿದ್ದಾರೆ. ಅವನನ್ನು ಕೊಡಗಿನ ಸಾಮಾಜಿಕ ವಲಯದಿಂದ ದೂರ ತಳ್ಳಿದ್ದಾರೆ. ಆತನನ್ನು ಮಾತ್ರವಲ್ಲ, ಸಂಪೂರ್ಣ ಹಾಲೇರಿ ಅರಸೊತ್ತಿಗೆಯೇ ಇವರ ವಕ್ರದೃಷ್ಟಿಗೆ ಒಳಗಾಗಿದೆ. ಜೊತೆಗೆ ಮುಸ್ಲಿಮರಿಗೂ ಕೊಡಗಿನ ಎಲ್ಲ ಸಮುದಾಯಗಳಿಗೂ ಇದ್ದ ಸುದೀರ್ಘವಾದ ಆಂತರಿಕ ಸಂಬಂಧವನ್ನು ಇಂದಿನ ರಾಜಕೀಯ ಉದ್ದೇಶಕ್ಕಾಗಿ ಮರೆತುಬಿಟ್ಟಿದ್ದೇವೆ. 

ಸಮಕಾಲೀನ ರಾಜಕೀಯ ಸನ್ನಿವೇಶಕ್ಕೆ ಅನುಗುಣವಾಗಿ ಕೊಡಗನ್ನು ಮುಸ್ಲಿಮ್ ದ್ವೇಷದ ಅಗ್ನಿಕುಂಡವನ್ನಾಗಿಸುವ ಪ್ರಯತ್ನಗಳು ನಿರಂತರವಾಗಿ ಚಾಲ್ತಿಯಲ್ಲಿವೆ. ಚರಿತ್ರೆಗೆ ಬೇರೆ ಬೇರೆ ಬಣ್ಣವನ್ನು ಹಚ್ಚಿ ವಿಕೃತಗೊಳಿಸುವ ಕೆಲಸಗಳು ಭರದಿಂದ ನಡೆದಿವೆ. ಅಂತಹ ವಿಚ್ಛಿದ್ರಕಾರಿ ಶಕ್ತಿಗಳ ಜೊತೆಗೆ ಸ್ಥಳೀಯ ಪ್ರತ್ಯೇಕತಾವಾದಿ ಕ್ರಿಮಿಗಳು ಕೂಡ ಕೈಜೋಡಿಸಿವೆ. ಟಿಪ್ಪುಸುಲ್ತಾನನ ಜನ್ಮದಿನವನ್ನು ಆಚರಿಸಲು ಹಿಂದಿನ ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತ ಇಲಾಖೆಗೆ ವಹಿಸಿದ ಬಾಲಿಶವಾದ ಜಾತ್ಯತೀತ ನಿಲುವು ಸಹ ಉರಿಯುವ ಬೆಂಕಿಗೆಎಣ್ಣೆಯನ್ನು ಸುರಿದು ಪ್ರಕ್ಷುಬ್ಧತೆಯ ಜ್ವಾಲೆ ಇನ್ನಷ್ಟು ಪ್ರಖರವಾಗಿ, ಇನ್ನಷ್ಟು ನೀಳವಾಗಿ ಚಾಚಿಕೊಳ್ಳಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕೊಡಗಿನ ಸಮಾಜ, ಅದರಲ್ಲಿ ಮುಸ್ಲಿಮರ ಸ್ಥಾನಮಾನ, ಅಂತೆಯೇ ಮುಸ್ಲಿಮೇತರರೊಂದಿಗಿನ ಸಂಬಂಧಗಳ ಒಂದಿಷ್ಟು ಪರಿಚಯವನ್ನು ಮಾಡುವುದು ಲೇಖನದ ಉದ್ದೇಶ. ಈ ಪ್ರಾಂತವನ್ನು ಆಳಿದ ಅರಸರ, ಅದರಲ್ಲೂ ಮುಖ್ಯವಾಗಿ ಹಾಲೇರಿ ಸಂಸ್ಥಾನದ ರಾಜರುಗಳ ಸಾಮಾಜಿಕ ನಿಲುವುಗಳು ಹೇಗಿದ್ದವು ಎನ್ನುವುದರ ಬಗ್ಗೆ ನೋಡುವ ಪ್ರಯತ್ನ ಸಹ ಇಲ್ಲಿದೆ. ಹೈದರ್ ಮತ್ತು ಟಿಪ್ಪು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಕೊಡಗಿನಲ್ಲಿ ನಡೆದಿದ್ದ ರಾಜಕೀಯ ಬೆಳವಣಿಗೆಗಳು ಹಾಗೂ ಸಾಮಾಜಿಕ ವಿಪ್ಲವಗಳು ಈ ಭಾಗದ ಜನರನ್ನು ಎಷ್ಟರ ಮಟ್ಟಿಗೆ ಮುಸ್ಲಿಮ್ ದ್ವೇಷಿಗಳನ್ನಾಗಿ ಪರಿವರ್ತಿಸಿದವು ಎನ್ನುವುದನ್ನು ಒರೆಗೆ ಹಚ್ಚಬೇಕಿದೆ.

ಎಲ್ಲೆಡೆ ನಾವು ನೋಡುವಂತೆ ಕೊಡಗಿನಲ್ಲಿ ಸಹ ಮುಸ್ಲಿಮರು ಮತ್ತು ಹಿಂದೂಗಳು ಪರಸ್ಪರ ಅವಲಂಬಿತರಾಗಿ ಬದುಕುವುದನ್ನು, ವ್ಯಾವಹಾರಿಕ ಸಂಬಂಧಗಳನ್ನು ಇಟ್ಟುಕೊಂಡಿರುವುದನ್ನು ನೋಡಬಹುದು. 18ನೇ ಶತಮಾನದ ಕೊನೆಯ ಭಾಗದಲ್ಲಿ ಟಿಪ್ಪು ನಡೆಸಿದ ಮತಾಂತರದ ಪ್ರಹಸನವು ಈ ಭಾಗದಲ್ಲಿ ಕೊಡವ ಮುಸ್ಲಿಮ್ ಅಥವಾ ಜಮ್ಮಾ ಮಾಪಿಳ್ಳೆ ಎಂಬ ಪ್ರತ್ಯೇಕವಾದ ಮುಸ್ಲಿಮ್ ಪಂಗಡವೊಂದರ ಉಗಮಕ್ಕೆ ಕಾರಣವಾಗಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಕೊಡಗು ಹಲವು ಸ್ಥಿತ್ಯಂತರಗಳನ್ನು ಕಂಡಿದೆ. ಅಂದಿನ ದಿನಗಳ ಇತಿಹಾಸದ ಎಳೆಗಳು ಇಂದಿನ ದಿನದ ಸಮಾಜದಲ್ಲಿ ಮತೀಯ ಅಸಹನೆಯನ್ನು ಬಡಿದೆಬ್ಬಿಸುವ ದಾಳಗಳಾಗಿ ಬಳಕೆಯಾಗುತ್ತಿವೆ. ಕೋಮುವಾದಿ ರಾಜಕಾರಣ ಒಂದೆಡೆ ಸಮಾಜದ ನೇಯ್ಗೆಯನ್ನು ಛಿದ್ರಗೊಳಿಸುತ್ತಾ ಹೋಗುತ್ತಿರುವಾಗ, ಇನ್ನೊಂದು ಕಡೆ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಪಕ್ಷಗಳು ಹರಿದುಹೋದ ಮನಸ್ಸುಗಳನ್ನು ಸೇರಿಸುವ ಪ್ರಯತ್ನದಲ್ಲಿ ಸೋತಿವೆ. ಅವರುಗಳ ರಾಜಕೀಯ ಅಪ್ರಬುದ್ಧತೆ ಎದ್ದು ಕಾಣಿಸುತ್ತಿದೆ.

ಕೊಡಗಿನ ಸಮಾಜ ರಚನೆಯಲ್ಲಿ ಮುಸ್ಲಿಮರ ಪಾತ್ರ ಗಣನೀಯವಾಗಿದೆ. ಕೊಡಗಿನಲ್ಲಿ 16ನೇ ಶತಮಾನದಲ್ಲಿ ಇಸ್ಲಾಮ್ ಪ್ರಚಲಿತದಲ್ಲಿದ್ದ ಬಗ್ಗೆ ಕುರುಹುಗಳು ಲಭ್ಯವಿವೆ. ವೀರಾಜಪೇಟೆ ತಾಲೂಕಿನ ಎಡಪಾಲ ಮಸೀದಿ ಮತ್ತು ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದ ಮಾಪಿಳ್ಳೆತೋಡು ಮಸೀದಿ ಅಂದಿನಿಂದ ಇಂದಿನವರೆಗೂ ಕಾರ್ಯ ನಿರ್ವಹಿಸುತ್ತಿವೆ.

ಸೂಫಿ ನೆಲೆ ಇರುವಲ್ಲಿ ಧಾರ್ಮಿಕ ಸಾಮರಸ್ಯದ ಬದುಕು ಇರುವುದನ್ನು ಎಲ್ಲೆಡೆ ನೋಡಬಹುದು. ಉರೂಸ್, ಜಾತ್ರೆಗಳನ್ನು ಒಟ್ಟಿಗೆ ಸೇರಿ ನಡೆಸುವುದು ಇಂತಹ ಜಾಗಗಳ ಅಸ್ಮಿತೆಯಾಗಿದೆ. ಎಮ್ಮೆಮಾಡು ದರ್ಗಾದ ಖ್ಯಾತಿ ನೆರೆಯ ಜಿಲ್ಲೆಗಳಿಗೆ ಮಾತ್ರವಲ್ಲ, ದೂರದೂರಿಗೂ ಹಬ್ಬಿದೆ. ಇಲ್ಲಿಗೆ ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣಗಳ ಭಕ್ತರೂ ಬರುತ್ತಾರೆ. ಮುಸ್ಲಿಮರು ಬಾಹುಳ್ಯದಲ್ಲಿರುವ ಎಮ್ಮೆಮಾಡು ದರ್ಗಾದ ವಾರ್ಷಿಕ ಉತ್ಸವವು ಕೊಡವ ಸಮುದಾಯಕ್ಕೆ ಸೇರಿದ ಮಣವಟ್ಟಿರ ಕುಟುಂಬದ ಭಾಗವಹಿಸುವಿಕೆಯೊಂದಿಗೆ ಪ್ರಾರಂಭವಾಗುತ್ತದೆ. 

ಅಂದಾಜು 370 ವರ್ಷಗಳ ಹಿಂದೆ ಈಜಿಪ್ಟಿನಿಂದ ಬಂದ ಸೂಫಿ ಸಂತ ಹಝ್ರತ್ ಸೂಫಿ ಶಹೀದ್ ವಲಿಯುಲ್ಲಾಹಿ ತನ್ನ ಜೊತೆಗಾರ ಸಯ್ಯದ್ ಹಸನ್ ಸಖಾಫ್ ಹಳ್ರಮಿ ಜೊತೆಗೆ ಮಡಿಕೇರಿ ತಾಲೂಕಿನ ಎಮ್ಮೆಮಾಡು ಎಂಬಲ್ಲಿ ತನ್ನ ಜೀವಿತಾವಧಿಯ ಕೊನೆಯಲ್ಲಿ ನೆಲೆಯೂರಿದರು. ಈ ಸಂತನನ್ನು ಪವಾಡ ಪುರುಷನೆಂದು ನಂಬಿರುವ ಹಿಂದೂ ಮುಸ್ಲಿಮ ರೆಲ್ಲರೂ ‘ದೊಡ್ಡವರು’ ಎಂದೇ ಸಂಬೋಧಿಸುತ್ತಾರೆ; ದೊಡ್ಡವರಿಗೆ ಹರಕೆ ಕಟ್ಟುತ್ತಾರೆ.

ಸೂಫಿ ನೆಲೆ ಇರುವಲ್ಲಿ ಧಾರ್ಮಿಕ ಸಾಮರಸ್ಯದ ಬದುಕು ಇರುವುದನ್ನು ಎಲ್ಲೆಡೆ ನೋಡಬಹುದು. ಉರೂಸ್, ಜಾತ್ರೆಗಳನ್ನು ಒಟ್ಟಿಗೆ ಸೇರಿ ನಡೆಸುವುದು ಇಂತಹ ಜಾಗಗಳ ಅಸ್ಮಿತೆಯಾಗಿದೆ. ಎಮ್ಮೆಮಾಡು ದರ್ಗಾದ ಖ್ಯಾತಿ ನೆರೆಯ ಜಿಲ್ಲೆಗಳಿಗೆ ಮಾತ್ರವಲ್ಲ, ದೂರದೂರಿಗೂ ಹಬ್ಬಿದೆ. ಇಲ್ಲಿಗೆ ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣಗಳ ಭಕ್ತರೂ ಬರುತ್ತಾರೆ. ಮುಸ್ಲಿಮರು ಬಾಹುಳ್ಯದಲ್ಲಿರುವ ಎಮ್ಮೆಮಾಡು ದರ್ಗಾದ ವಾರ್ಷಿಕ ಉತ್ಸವವು ಕೊಡವ ಸಮುದಾಯಕ್ಕೆ ಸೇರಿದ ಮಣವಟ್ಟಿರ ಕುಟುಂಬದ ಭಾಗವಹಿಸುವಿಕೆಯೊಂದಿಗೆ ಪ್ರಾರಂಭವಾಗುತ್ತದೆ. ಪಾಲಿಬೆಟ್ಟದ ಪಠಾಣ್ ಬಾಬಾ ದರ್ಗಾ ಇನ್ನೊಂದು ಪ್ರಸಿದ್ಧ ಸೂಫಿ ಕ್ಷೇತ್ರ. ಕೊಡಗಿನಲ್ಲಿ ಒಟ್ಟು 27 ದರ್ಗಾಗಳು ಇವೆ (ಮಾಹಿತಿ: ರಫೀಕ್ ತೂಚಮಕೇರಿ). ಈ ಎಲ್ಲ ಧಾರ್ಮಿಕ ಕ್ಷೇತ್ರಗಳ ಉತ್ಸವಗಳು ಉಭಯ ಧರ್ಮಗಳ ಸಹಭಾಗಿತ್ವದೊಂದಿಗೆ ನಡೆಯುತ್ತವೆ.

ಟಿಪ್ಪು ಸುಲ್ತಾನ ನಡೆಸಿದ ಮತಾಂತರದ ಕತೆ

ಸ್ವತಂತ್ರ ಕೊಡಗು ಸಾಮ್ರಾಜ್ಯದ ಸ್ಥಾಪನೆಯನ್ನು ಮಾಡಿದ್ದು 15ನೇ ಶತಮಾನದ ಕೊನೆಯಲ್ಲಿ ಇಕ್ಕೇರಿಯಿಂದ ಬಂದು ಮಡಿಕೇರಿಯ ಹತ್ತಿರ ಹಾಲೇರಿ ಎಂಬಲ್ಲಿ ‘ಬೂದಿ ಚಾವಡಿ’ ಎಂಬ ಆಧ್ಯಾತ್ಮಿಕ ಕೇಂದ್ರವನ್ನು ಹುಟ್ಟುಹಾಕಿದ ವೀರಪ್ಪೊಡೆಯ ಅಥವಾ ವೀರರಾಜ ಎಂಬ ಶಿವಾಚಾರದ ಸ್ವಾಮಿ. ಈತ ಹಾಲೇರಿಯಿಂದಲೇ ತನ್ನ ನೀಳ ಬಾಹುಗಳನ್ನು ಇಂದಿನ ಕೊಡಗಿನುದ್ದಕ್ಕೂ ಚಾಚಿ ಈ ಪ್ರಾಂತದ ಸಂಪೂರ್ಣ ಆಧಿಪತ್ಯವನ್ನು ಸಾಧಿಸಿದ. ನಂತರದ ರಾಜರುಗಳಲ್ಲಿ ಅತ್ಯಂತ ಬಲಿಷ್ಠನೆಂದರೆ ವೀರಪ್ಪೊಡೆಯನ ಮರಿಮೊಮ್ಮಗ ದೊಡ್ಡ ವೀರಪ್ಪ. ಮುಂದೆ 1770ರ ನಂತರದಲ್ಲಿ ಹಾಲೇರಿ ರಾಜವಂಶವು ಹಲವು ಏಳುಬೀಳುಗಳನ್ನು ಕಂಡಿತು. ಅದು ಎರಡು ವಿಭಿನ್ನ ಕವಲುಗಳಾಗಿ ಮಾರ್ಪಟ್ಟಿತು. ಅವುಗಳೆಂದರೆ ಹಾಲೇರಿ ಹಾಗೂ ಹೊರಮಲೆನಾಡು ಎಂಬ ವಿಭಾಗಗಳು. ಹೀಗೆ ಎರಡು ಆಡಳಿತ ಕೇಂದ್ರಗಳ ಸ್ಥಾಪನೆಯೊಂದಿಗೆ ಪರಸ್ಪರ ತೀವ್ರಸ್ತರದ ತಿಕ್ಕಾಟ ಆರಂಭವಾಯಿತು. ಹಾಲೇರಿಯ ಲಿಂಗರಾಜ ಮತ್ತು ಹೊರಮಲೆನಾಡಿನ ದೇವಪ್ಪರಾಜ ಇವರು ಕೊಡಗಿನ ಸಿಂಹಾಸನಕ್ಕಾಗಿ ಕಚ್ಚಾಡತೊಡಗಿದರು.

ದೇವಪ್ಪರಾಜನಿಗೆ ಪ್ರಜೆಗಳ ಬೆಂಬಲವಿತ್ತು, ಅವನು ಅರಸೊತ್ತಿಗೆಯ ಗಾದಿಯನ್ನೇರಿದನು. ಅವನ ವಿರುದ್ಧ ಪಿತೂರಿ ಮಾಡಿದ ಲಿಂಗರಾಜ ಮೈಸೂರಿನ ಹೈದರಲಿಯ ಮೊರೆಹೋದ. ಇದರಿಂದ ಕೊಡಗಿನ ಮೇಲೆ ನಿಯಂತ್ರಣ ಸಾಧಿಸಲು ಹೈದರಲಿಗೆ ಅನುಕೂಲವಾಯಿತು. ಕೊಡಗಿನಿಂದ ಜೀವರಕ್ಷಣೆಗಾಗಿ ಮಲೆಯಾಳ ಪ್ರಾಂತಕ್ಕೆ ಓಡಿ ಹೋಗಿ, ಅಲ್ಲಿಂದ ಮರಾಠರ ಆಶ್ರಯ ಕೋರಿ ಹೊರಟಿದ್ದ ದೇವಪ್ಪರಾಜ ಕೊನೆಗೆ ಹರಿಹರದಲ್ಲಿ ಹೈದರಲಿಗೆ ಸೆರೆಸಿಕ್ಕು ಶ್ರೀರಂಗಪಟ್ಟಣದಲ್ಲಿ ಕುಟುಂಬ ವರ್ಗದ ಸಮೇತ ಮರಣದಂಡನೆಗೆ ಒಳಗಾದ. ಹೀಗೆ ಕುತಂತ್ರದಿಂದ ಕೊಡಗನ್ನು ಪಡೆದುಕೊಂಡರೂ ದುರ್ಬಲ ಆಡಳಿತಗಾರನಾದ ಲಿಂಗರಾಜನಿಗೆ ಅದನ್ನು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. 1780ರಲ್ಲಿ ಆತ ಮೃತಪಟ್ಟ. ಅವನ ಅಪ್ರಾಪ್ತ ವಯಸ್ಸಿನ ಮಕ್ಕಳಾದ ದೊಡ್ಡ ವೀರರಾಜೇಂದ್ರ ಮತ್ತಿತರರನ್ನು ಹೈದರಲಿ ತನ್ನ ಸುಪರ್ದಿಗೆ ಪಡೆದುಕೊಂಡು ಕೊಡಗನ್ನು ಸಂಪೂರ್ಣವಾಗಿ ವಶಪಡಿಸಿಕೊಂಡು ಆಡಳಿತ ನಿರ್ವಹಿಸಲು ಅಧಿಕಾರಿಗಳನ್ನು ನೇಮಿಸಿದ. 1782ರಲ್ಲಿ ಹೈದರಲಿ ಬೆನ್ನಲ್ಲಿ ವ್ರಣವಾಗಿ ಮರಣವನ್ನಪ್ಪಿದ.

ದೊಡ್ಡ ವೀರರಾಜನು ಪಿರಿಯಾಪಟ್ಟಣದಲ್ಲಿ ಬಂದಿಯಾಗಿದ್ದ ಸಂದರ್ಭದಲ್ಲಿ ಟಿಪ್ಪುವಿನ ಅಧಿಕಾರಿ ಖಾದರ್‌ಖಾನ್ ಕೈಸಗಿಯು ವೀರರಾಜನನ್ನು ಪ್ರೀತಿಯಿಂದ ನೋಡಿಕೊಂಡಿದ್ದ. ಅಲ ಖಾದರ್‌ಖಾನ್ ಕೈಸಗಿ ಟಿಪ್ಪುವಿನ ಸೆರೆಯಿಂದ ತಪ್ಪಿಸಿಕೊಳ್ಳಲು ಪರೋಕ್ಷವಾಗಿ ನೆರವಾಗುತ್ತಾನೆ. ಮುಂದೆ ವೀರರಾಜನು ಅವನಿಗೆ ಆಭಾರಿಯಾದ ಘಟನೆ ನಡೆಯುತ್ತದೆ. ಅದು ದೊಡ್ಡ ವೀರರಾಜ ಕೊಡಗು ಸಾಮ್ರಾಜ್ಯದ ಮರುಸ್ಥಾಪನೆಯ ಪ್ರಯತ್ನದಲ್ಲಿದ್ದ ಸಮಯ. ಖಾದರ್‌ಖಾನ್ ಕೈಸಗಿ ಮಡಿಕೇರಿಯಲ್ಲಿ ಬೀಡುಬಿಟ್ಟಿದ್ದ ಟಿಪ್ಪುವಿನ ಸೈನ್ಯದ ಮುಖ್ಯಸ್ಥನಾಗಿದ್ದನು.

ಟಿಪ್ಪು ಪರಿಪೂರ್ಣ ಅರಸನಾಗಿ ಮೈಸೂರು ಸಿಂಹಾಸವನ್ನೇರಿದ. ಈ ನಡುವೆ ಕೊಡಗಿನಲ್ಲಿ ನಿರಂತರವಾಗಿ ದಂಗೆಗಳು ನಡೆದವು. ಕೊಡಗಿನ ಜನ ಕಂದಾಯ, ತೆರಿಗೆಗಳನ್ನು ನೀಡಲಿಲ್ಲ. ಅವರನ್ನು ಶಿಕ್ಷಿಸಲು ಬಂದ ಮೈಸೂರಿನ ಸೈನ್ಯ ಕೊಡಗಿನ ಜಮ್ಮಾ ರೈತರ ದಂಡಿನ ಆಘಾತಕ್ಕೆ ಸಿಕ್ಕಿ ಅಪಾರವಾದ ಸಾವು ನೋವುಗಳನ್ನು ಕಾಣಬೇಕಾಯಿತು. 1785ರಲ್ಲಿ ಉಲುಗುಲಿ ಸಂತೆಮಾಳದಲ್ಲಿ ಬೀಡುಬಿಟ್ಟಿದ್ದ ಟಿಪ್ಪುವಿನ ಸೇನಾಧಿಕಾರಿ ಝೈನುಲ್ ಆಬಿದೀನ್‌ನ 15,000 ಸಂಖ್ಯೆಯ ಬೃಹತ್ ಸೈನ್ಯವನ್ನು ಕೇವಲ 5,000 ಜಮ್ಮಾ ರೈತರು ಸೋಲಿಸಿಬಿಟ್ಟರು. ಈ ವೇಳೆಗೆ ಟಿಪ್ಪು ಸುಲ್ತಾನನ ತಾಳ್ಮೆ ಕೆಟ್ಟಿತು. 

ಅದಾಗಿ ಎರಡು ತಿಂಗಳ ನಂತರ ಫ್ರೆಂಚ್ ದಂಡನಾಯಕ ಲಾಲಿಯ ಜೊತೆಗೆ ಸಮರ್ಥ ತಂಡವನ್ನು ಕಳುಹಿಸಿ ಮಡಿಕೇರಿಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೇರುತ್ತಾನೆ. ಮುಂದೆ ತಾನೇ ಸೇನೆಯನ್ನು ಮುನ್ನಡೆಸಿ ತಲಕಾವೇರಿ ಸನಿಹದ ದೇವಟಿಪರಂಬು ಎಂಬಲ್ಲಿ ಬಿಡಾರ ಹೂಡುತ್ತಾನೆ. ದಂಗೆಯೇಳುತ್ತಿದ್ದ ರಿಂಗ್ ಲೀಡರ್‌ಗಳನ್ನು ಮಟ್ಟಹಾಕಬೇಕೆಂದು ಅವನು ತೀರ್ಮಾನಿಸಿದ್ದ. ಒಮ್ಮೆ ಮಾತೃಧರ್ಮದಿಂದ ಹೊರಹಾಕಿದರೆ ಅವರ ಕೌಟುಂಬಿಕ ಹಾಗೂ ಸಾಮಾಜಿಕ ವ್ಯವಸ್ಥೆ ಬುಡಸಮೇತ ಬಿದ್ದುಹೋಗುತ್ತದೆಯೆಂದು ಅವನಿಗೆ ತಿಳಿದಿತ್ತು. 

ಅಲ್ಲಿಗೆ ಜಮ್ಮಾ ರೈತರ ಮಿಲಿಟರಿ ಸಹ ಕುಸಿದು ಹೋಗುತ್ತದೆ ಎಂದವನು ಸರಿಯಾಗಿಯೇ ಯೋಚಿಸಿದ್ದ. ಕೊಡಗು ಮತ್ತು ಕೇರಳದ ಕೆಲವು ಸಮುದಾಯಗಳ ಬಹುಪತಿತ್ವ ಪದ್ಧತಿಯನ್ನು ಟಿಪ್ಪು ನಿಕೃಷ್ಟವಾಗಿ ನೋಡುತ್ತಿದ್ದನೆಂದು ದಾಖಲೆಗಳು ಹೇಳುತ್ತವೆ. ಈ ಜನರಿಗೆ ಸಂಸ್ಕೃತಿ ಎಂದರೇನು ಎಂಬುದನ್ನು ಕಲಿಸುತ್ತೇನೆ ಎಂಬುದಾಗಿ ಟಿಪ್ಪು ಹೇಳಿದ್ದ ಎಂದು ಯುರೋಪಿಯನ್ ಬರಹಗಾರ ಕರ್ನಲ್ ಮಾರ್ಕ್ ವಿಲ್ಕ್ಸ್ ಬರೆಯುತ್ತಾನೆ. 

ಟಿಪ್ಪು ನಡೆಸಿದ ಮತಾಂತರ ಪ್ರಹಸನದ ಮೇಲೆ ಆತನ ಈ ದೃಷ್ಟಿಕೋನ ಪರಿಣಾಮ ಬೀರಿರುವ ಸಾಧ್ಯತೆ ಇದೆ. ಕೊಡಗಿನ ಜನರನ್ನು ಮಾತುಕತೆಗೆಂದು ತಾನು ಉಳಿದುಕೊಂಡಿದ್ದ ದೇವಟಿಪರಂಬು ಪ್ರದೇಶಕ್ಕೆ ಬರಮಾಡಿದ. ಅಲ್ಲಿ ಅವರನ್ನು ಸೆರೆ ಹಿಡಿದು ಮತಾಂತರ ಮಾಡಿದ. ಅಲ್ಲಿಂದ ಶ್ರೀರಂಗಪಟ್ಟಣಕ್ಕೆ ಕರೆದುಕೊಂಡು ಹೋಗಿ ಅವರನ್ನು ಶೇಕ್, ಸೈಯದ್, ಮೊಗಲ್ ಹಾಗೂ ಪಠಾಣ್ ಪಂಗಡಕ್ಕೆ ಸೇರಿಸಲಾಯಿತು. 1799ರಲ್ಲಿ ಟಿಪ್ಪು ರಣರಂಗದಲ್ಲಿ ಹತ್ಯೆಯಾದ ನಂತರ ಅವರಲ್ಲಿ ಕೆಲವರು ಕೊಡಗಿಗೆ ಹಿಂದಿರುಗಿದರು. ಸ್ವತಃ ದೊಡ್ಡ ವೀರರಾಜೇಂದ್ರ ಒಡೆಯ ಬ್ರಿಟಿಷರನ್ನು ಮನವೊಲಿಸಿ ಉಪಾಯದಿಂದ ಅವರನ್ನು ಕೊಡಗಿಗೆ ಬರುವಂತೆ ಮಾಡುತ್ತಾನೆ. 

ಆದರೆ ಕೊಡಗಿನ ಜನ ಹಿಂದಿರುಗಿ ಬಂದವರನ್ನು ತಮ್ಮವರೆಂದು ಸ್ವೀಕರಿಸಲಿಲ್ಲ, ಇಸ್ಲಾಮ್‌ಗೆ ಮತಾಂತರಗೊಂಡಿದ್ದ ತಮ್ಮ ಸ್ವಂತ ಅಣ್ಣತಮ್ಮಂದಿರನ್ನು ತಮ್ಮ ಕೌಟುಂಬಿಕ ವಲಯದೊಳಗೆ ಸೇರಿಸಿಕೊಳ್ಳಲಿಲ್ಲ. ಆಸ್ತಿಯಲ್ಲಿ ಪಾಲು ಕೊಡಬೇಕಾಗುತ್ತದೆಯೆಂಬ ದುರಾಸೆ ಸಹ ಇಲ್ಲಿ ಕೆಲಸ ಮಾಡಿದೆ. ಈ ಸಂಕೀರ್ಣ ಸ್ಥಿತಿಯನ್ನು ತಿಳಿದುಕೊಂಡ ದೊಡ್ಡ ವೀರರಾಜೇಂದ್ರ ಒಡೆಯ ಅತ್ಯಂತ ಉದಾರ ಮನಸ್ಸಿನಿಂದ ಅವರಿಗೆ ಜಹಗೀರುಗಳನ್ನು ನೀಡಿದ. ಅವರ ಧಾರ್ಮಿಕ ಹಕ್ಕುಗಳನ್ನು ಗೌರವಿಸಿ, ಅವರಿಗಾಗಿ ಕೇರಳದಿಂದ ಮಲೆಯಾಳಿ ಮೌಲ್ವಿಗಳನ್ನು ಕರೆಸಿ ಮಸೀದಿಗಳನ್ನು ನಿರ್ಮಿಸಿಕೊಟ್ಟ. 

ವೀರರಾಜನ ಇಂತಹ ಉದಾತ್ತ ಮನಃಸ್ಥಿತಿಗೆ ಅವನ ವೈಯಕ್ತಿಕ ಬದುಕು ಸಹ ಒಂದು ಕಾರಣವಾಗಿತ್ತು. ಟಿಪ್ಪು ಸುಲ್ತಾನನು ವೀರರಾಜನ ಇಬ್ಬರು ಸಹೋದರಿಯರನ್ನು ಮುಸಲ್ಮಾನರನ್ನಾಗಿ ಪರಿವರ್ತಿಸಿ ತನ್ನ ಜನಾನಾಕ್ಕೆ ಸೇರಿಸಿಕೊಂಡಿದ್ದ. ಆಗ ದೇವಮ್ಮಾಜಿಗೆ ಟಿಪ್ಪುವು ಮೆಹ್ತಾಬ್ ಅಂದರೆ ಚಂದ್ರ ಎಂದು ಮತ್ತು ನೀಲಮ್ಮಾಜಿಗೆ ಅಫ್ತಾಬ್ ಅಂದರೆ ಸೂರ್ಯ ಎಂಬ ಹೆಸರಿಟ್ಟನು. 

ಅದಲ್ಲದೆ ಸ್ವತಃ ವೀರರಾಜನನ್ನು ಸಹ ಮತಾಂತರ ಮಾಡಲಾಗಿತ್ತು. ಆದರೆ ಅದನ್ನು ಮುಚ್ಚಿಟ್ಟ ಅರಸ ಕೊಡಗು ದೇಶದ ಪಟ್ಟವೇರಿದ ನಂತರ ಲಿಂಗಾಯತ ಪರಂಪರೆಯಲ್ಲೇ ಮುಂದುವರಿದ. ಟಿಪ್ಪುವಿನ ಮರಣಾನಂತರ ತನ್ನ ಮತಾಂತರಿ ಸಹೋದರಿಯರನ್ನು ಕೊಡಗಿಗೆ ಕರೆಯಿಸಿ, ಅವರಿಗೆ ನಾಲ್ಕುನಾಡು ಅರಮನೆಯಲ್ಲಿ ಆಶ್ರಯ ನೀಡಿದ್ದ. ಇಲ್ಲೆಲ್ಲೂ ಮತೀಯ ಮಲಿನತೆಯ ಕುರುಹುಗಳು ಗೋಚರಿಸುವುದಿಲ್ಲ. 

ಆದರೆ ಕುಚೋದ್ಯವೆಂದರೆ ಟಿಪ್ಪು ನಡೆಸಿದ ರಾಜಕೀಯ ಮತಾಂತರದ ನಂತರದಲ್ಲಿ ನಡೆದ ಸಾಮಾಜಿಕ ತಿರಸ್ಕಾರದ ಕಾರಣದಿಂದ ಕೊಡಗಿನ ಸಮಾಜವು ಕೊಡವ ಮುಸ್ಲಿಮ್ ಅಥವಾ ಜಮ್ಮಾ ಮಾಪಿಳ್ಳೆ ಎಂಬ ಹೊಸ ಪಂಗಡದ ಉಗಮಕ್ಕೆ ದಾರಿ ಮಾಡಿಕೊಟ್ಟಿತು. ತಮ್ಮದೇ ನೆಲದಲ್ಲಿ ಇವರು ಪರಕೀಯ ಭಾವದಿಂದ ನರಳುವ ಸ್ಥಿತಿ ನಿರ್ಮಾಣವಾಯಿತು. ಇವರ ಈ ದಯನೀಯ ಪರಿಸ್ಥಿತಿಯ ಬಗ್ಗೆ ನಾಡಿನ ಪ್ರಸಿದ್ಧ ಇತಿಹಾಸಕಾರ ವಿಜಯ್ ಪೂಣಚ್ಚ ತಂಬಂಡ ತಮ್ಮ ‘ರಾಜೇಂದ್ರನಾಮೆ: ಮರು ಓದು ಮತ್ತು ಅಮರ ಸುಳ್ಯ ಸಂಗ್ರಾಮ 1837’ ಕೃತಿಗಳಲ್ಲಿ ವಿಸ್ತೃತವಾಗಿ ದಾಖಲಿಸಿದ್ದಾರೆ. 

ಹಾಗಿದ್ದರೂ ಇಲ್ಲಿನ ಕೆಲವು ಕುಟುಂಬಗಳು ಮಾನವೀಯತೆಯನ್ನು ಮೆರೆದಿದ್ದುದನ್ನು, ತಮ್ಮ ಮೂಲ ಸಂಬಂಧವನ್ನು ಗೌರವಿಸಿರುವುದನ್ನು ನೋಡಬಹುದು. ಇಂತಹ ಉದಾಹರಣೆಗಳು ಕಡಿಮೆ ಇರುವುದಾದರೂ ಅವುಗಳನ್ನು ನಿರ್ಲಕ್ಷಿಸುವಂತಿಲ್ಲ. ಹಾಗೆ ಚರಿತ್ರೆಯ ಕಾಲಘಟ್ಟದಲ್ಲಿ ಮನುಷ್ಯ ಸಂಬಂಧಕ್ಕೆ ಬೆಲೆಕೊಟ್ಟಿರುವ ಸಂಕುಲವೊಂದು ಕೊಡಗಿನ ಮಡಿಕೇರಿ ತಾಲೂಕಿನ ಕೊಳಕೇರಿ ಗ್ರಾಮದ ಕಾಂಡಂಡ ಮನೆತನ. ಈ ಕುಟುಂಬಕ್ಕೆ 200 ಎಕರೆಯಷ್ಟು ಕೃಷಿ ಜಮೀನು ಇತ್ತು. ಅವಿಭಕ್ತ ಮನೆಯ ಎರಡು ಕವಲುಗಳಲ್ಲಿ ಒಂದು ವಿಭಾಗಕ್ಕೆ ಸೇರಿದ ವ್ಯಕ್ತಿಯನ್ನು ಮತಾಂತರ ಮಾಡಿ ಶ್ರೀರಂಗಪಟ್ಟಣಕ್ಕೆ ಸಾಗಹಾಕಲಾಗಿತ್ತು. 

ಆತ ಮುಂದೆ ಟಿಪ್ಪುವಿನ ಹತ್ಯೆ ನಡೆದ ನಂತರ ಕೊಡಗಿಗೆ ಹಿಂದಿರುಗಿ ತನ್ನ ಕಾಂಡಂಡ ಕೂಡುಕುಟುಂಬಕ್ಕೆ ಹೋಗುತ್ತಾನೆ. ಅವನನ್ನು ಗೌರವದಿಂದ ಬರಮಾಡಿಕೊಂಡ ಮನೆಯವರು ಕುಟುಂಬದ ಆಸ್ತಿಯಲ್ಲಿ ಅವನ ಭಾಗಕ್ಕೆ ಸೇರಬೇಕಾದ ಅರ್ಧಾಂಶವನ್ನು ಯಾವುದೇ ತಕರಾರುಗಳಿಲ್ಲದೆ ನೀಡುತ್ತಾರೆ. ಆದರೆ ಮತಾಂತರಗೊಂಡಿದ್ದ ವ್ಯಕ್ತಿ ಮುಸ್ಲಿಮ್ ಆಗಿಯೇ ಮುಂದುವರಿಯುತ್ತಾನೆ. ಆತ ಮತ್ತೆ ಮಾತೃ ಮತಕ್ಕೆ ಬರಲು ಅವಕಾಶ ದೊರಕಿರಲಾರದು. ಅವನ ಭಾಗದ ಕುಟುಂಬವನ್ನು ಈಗ ‘ಕನ್ನಪಣೆ’ ಎಂದು ಕರೆಯುತ್ತಾರೆ. ಕಾಂಡಂಡ ಮತ್ತು ಕನ್ನಪಣೆಯ ಮನೆತನಗಳು ಅಕ್ಕಪಕ್ಕದಲ್ಲಿ ಆಸ್ತಿಗಳನ್ನು ಹೊಂದಿವೆ. ಈಗಲೂ ಸೌಹಾರ್ದದಿಂದ ಬದುಕುತ್ತಿದ್ದಾರೆ.

 ದೇವಟಿಪರಂಬುವಿನ ಘಟನೆಯಲ್ಲಿ ಟಿಪ್ಪು ಮತಾಂತರ ನಡೆಸಿದ ಜನರ ಸಂಖ್ಯೆಯನ್ನು ವಿಭಿನ್ನ ಲೇಖಕರು ಬೇರೆ ಬೇರೆಯಾಗಿ ತೋರಿಸಿದ್ದಾರೆ. ಈ ವಿವರಗಳನ್ನು ವಿಜಯ್ ಪೂಣಚ್ಚ ತಂಬಂಡ ಸಮಗ್ರವಾಗಿ ನೀಡಿದ್ದಾರೆ. ಈ ಸಂಖ್ಯೆಯು ದೊಡ್ಡ ವೀರರಾಜೇಂದ್ರ ಒಡೆಯ ಬರೆಸಿದ ರಾಜೇಂದ್ರನಾಮೆಯಲ್ಲಿ ಒಂದೆಡೆ 1,11,000 ಆಗಿದ್ದರೆ ಇನ್ನೊಂದು ಕಡೆ 64,000 ಎಂದಿದೆ. 1817ರಲ್ಲಿ ಕೊಡಗನ್ನು ಸಮಗ್ರವಾಗಿ ಅಧ್ಯಯನ ಮಾಡಿದ ಬ್ರಿಟಿಷ್ ಅಧಿಕಾರಿ ಲೆಫ್ಟಿನೆಂಟ್ ಕಾನ್ನರ್ 5,000 ಕೊಡಗರನ್ನು ಅವರ ಕುಟುಂಬ ಸಮೇತರಾಗಿ ಮತಾಂತರ ಮಾಡಿದ ಬಗ್ಗೆ ಬರೆಯುತ್ತಾನೆ. 

ಅಲ್ಲದೆ ಇತಿಹಾಸಕಾರರೊಬ್ಬರು ಈ ಸಂಖ್ಯೆಯನ್ನು 12,000 ಎಂಬುದಾಗಿ ಹೇಳುತ್ತಾರೆ ಎಂದು ಸಹ ದಾಖಲಿಸಿದ್ದಾನೆ. ಇನ್ನು ಮಿಶನರಿ ಬರಹಗಾರರು ಹಾಗೂ ದೇಸಿ ವಿದ್ವಾಂಸರು 70,000ದಿಂದ ಒಂದು ಲಕ್ಷದ ಲೆಕ್ಕವನ್ನು ನೀಡಿದ್ದಾರೆ. ಟಿಪ್ಪುವಿನ ಚರಿತ್ರೆಕಾರನಾದ ಕಿರ್ಮಾನಿಯು ಮತಾಂತರಗೊಂಡವರು 80,000 ಎಂದು ಬರೆದಿದ್ದು, ಮುಂದಿನ ಪುಟದಲ್ಲಿ 8,000 ಅನ್ನುತ್ತಾನೆ. 1810 ಹಾಗೂ 1817ರಲ್ಲಿ ಹಿಸ್ಟರಿ ಆಫ್ ಮೈಸೂರ್ ಸಂಪುಟಗಳನ್ನು ಪ್ರಕಟಿಸಿದ ಕರ್ನಲ್ ಮಾರ್ಕ್ ವಿಲ್ಕ್ಸ್ ಈ ಸಂಖ್ಯೆ 70,000 ಎಂದು ಹೇಳುತ್ತಾನೆ. (ವಿಜಯ್ ಪೂಣಚ್ಚ ತಂಬಂಡ, 2018, ರಾಜೇಂದ್ರನಾಮೆ: ಮರು ಓದು, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ; ವಿಜಯ್ ಪೂಣಚ್ಚ ತಂಬಂಡ, 2022, ಅಮರ ಸುಳ್ಯ ಸಂಗ್ರಾಮ 2022, ಕನ್ನಡ ವಿಶ್ವವಿದ್ಯಾಲಯ, ಹಂಪಿ).

ದೊಡ್ಡ ವೀರರಾಜನು ಪಿರಿಯಾಪಟ್ಟಣದಲ್ಲಿ ಬಂದಿಯಾಗಿದ್ದ ಸಂದರ್ಭದಲ್ಲಿ ಟಿಪ್ಪುವಿನ ಅಧಿಕಾರಿ ಖಾದರ್‌ಖಾನ್ ಕೈಸಗಿಯು ವೀರರಾಜನನ್ನು ಪ್ರೀತಿಯಿಂದ ನೋಡಿಕೊಂಡಿದ್ದ. ಅಲ ಖಾದರ್‌ಖಾನ್ ಕೈಸಗಿ ಟಿಪ್ಪುವಿನ ಸೆರೆಯಿಂದ ತಪ್ಪಿಸಿಕೊಳ್ಳಲು ಪರೋಕ್ಷವಾಗಿ ನೆರವಾಗುತ್ತಾನೆ. ಮುಂದೆ ವೀರರಾಜನು ಅವನಿಗೆ ಆಭಾರಿಯಾದ ಘಟನೆ ನಡೆಯುತ್ತದೆ. 

ಅದು ದೊಡ್ಡ ವೀರರಾಜ ಕೊಡಗು ಸಾಮ್ರಾಜ್ಯದ ಮರುಸ್ಥಾಪನೆಯ ಪ್ರಯತ್ನದಲ್ಲಿದ್ದ ಸಮಯ.ಖಾದರ್‌ಖಾನ್ ಕೈಸಗಿ ಮಡಿಕೇರಿಯಲ್ಲಿ ಬೀಡುಬಿಟ್ಟಿದ್ದ ಟಿಪ್ಪುವಿನ ಸೈನ್ಯದ ಮುಖ್ಯಸ್ಥನಾಗಿದ್ದನು. ಆಗ ವೀರರಾಜನಸೈನ್ಯ ಸುತ್ತಲೂ ಮುತ್ತಿಕೊಳ್ಳುತ್ತದೆ. ಕೈಸಗಿ ಪಡೆಯ ಆಹಾರಸಾಮಗ್ರಿಗಳ ದಾಸ್ತಾನು ಮುಗಿದುಹೋಗಿ ಸೇನಾಳುಗಳಸ್ಥಿತಿ ದಯನೀಯವಾಗುತ್ತದೆ. ಕೈಸಗಿ ಅಸಹಾಯಕನಾಗಿ ಕಂಗೆಡುತ್ತಾನೆ. 

ಮಡಿಕೇರಿಯನ್ನು ಮತ್ತೆ ಪಡೆಯಲುಹೊಂಚುಹಾಕುತ್ತಿದ್ದ ವೀರರಾಜನಿಗೆ ಅನಿವಾರ್ಯವಾಗಿ ಆತ ಶರಣಾಗುತ್ತಾನೆ. ಆಗ ವೀರರಾಜನು ಕೈಸಗಿಯನ್ನು ಗೌರವಯುತವಾಗಿ ಕ್ಷಮಿಸುತ್ತಾನೆ. ಆದರೆ, ವೀರರಾಜನು ಟಿಪ್ಪು ಅಂತಃಪುರದಲ್ಲಿದ್ದ ತನ್ನ ಸಹೋದರಿಯರಗೌರವ ಮತ್ತು ಮಾನವನ್ನು ಕಾಪಾಡುವ ದೂರದೃಷ್ಟಿಯಿಂದ ಕೈಸಗಿಯನ್ನು ಕ್ಷಮಿಸಿದನೇ ಹೊರತು ಇನ್ಯಾವುದೇ ಉದ್ದೇಶದಿಂದಲ್ಲ ಎಂದು ರೆವರೆಂಡ್ ಮೋಗ್ಲಿಂಗ್ ಭಾವಿಸುತ್ತಾನೆ (ವಿಜಯ್ ಪೂಣಚ್ಚ ತಂಬಂಡ, 2018).

ದೊಡ್ಡ ವೀರರಾಜೇಂದ್ರನ ಮರಣಾನಂತರ ರಾಜಕೀಯ ಕ್ಷೋಭೆ ಉದ್ಭವಿಸಿದ್ದು, ನಂತರ ಲಿಂಗರಾಜೇಂದ್ರ ಒಡೆಯ ಪಟ್ಟಕ್ಕೆ ಬರುತ್ತಾನೆ. ಅವನ ನಂತರ ಅಧಿಕಾರದ ಗಾದಿಯನ್ನೇರಿದ ಹಾಲೇರಿ ವಂಶದ ಕೊನೆಯ ಅರಸ ಚಿಕ್ಕವೀರರಾಜೇಂದ್ರ ಒಡೆಯರ್ 1834 ರಲ್ಲಿ ಬ್ರಿಟಿಷರಿಂದ ಪದಚ್ಯುತಿಗೊಳ್ಳುವ ತನಕ ರಾಜ್ಯಭಾರ ನಡೆಸುತ್ತಾನೆ. ಈಎಲ್ಲಾ ಸಮಯದಲ್ಲಿ ಮೆಹ್ತಾಬ್ (ದೇವಮ್ಮಾಜಿ) ಮತ್ತು ಅಫ್ತಾಬ್ (ನೀಲಮ್ಮಾಜಿ) ಅರಮನೆಯಲ್ಲೇ ವಾಸವಿರುತ್ತಾರೆ. ಮುಂದೆ 1852ರಲ್ಲಿ ದೇವಮ್ಮಾಜಿ ಹಾಗೂ 1865ರಲ್ಲಿ ನೀಲಮ್ಮಾಜಿ ತೀರಿಹೋಗುತ್ತಾರೆ. ನಾಲ್ಕುನಾಡು ಅರಮನೆಯಹಿಂದಿನ ತೋಟದಲ್ಲಿ ಇವರಿಬ್ಬರ ಶವಗಳನ್ನು ಇಸ್ಲಾಮ್ ಧರ್ಮದ ನಿಯಮದಂತೆ ಹೂತಿಡಲಾಯಿತು ಎಂದುಕೊಡಗಿನ ಇತಿಹಾಸ ಬರೆದ ಡಿ.ಎನ್. ಕೃಷ್ಣಯ್ಯ ದಾಖಲಿಸುತ್ತಾರೆ.

ದೇವಮ್ಮಾಜಿ ಹಾಗೂ ನೀಲಮ್ಮಾಜಿ ಅಲ್ಲದೆ ದೊಡ್ಡ ವೀರರಾಜನಿಗೆ ಇನ್ನೊಬ್ಬ ಸೋದರಿಯೂ ಇದ್ದಳು. ಅರಮನೆಯ ಜನಾನಕ್ಕೆ ಸೇರಿಕೊಳ್ಳುವಷ್ಟು ಯೋಗ್ಯತೆಯನ್ನು ಆಕೆ ಪಡೆದಿರಲಿಲ್ಲವಾದ್ದರಿಂದ ಅವಳಿಗೆ ಜನಾನಕ್ಕೆ ಸೇರುವ ಗೌರವ ಸಿಗಲಿಲ್ಲವೆಂದು ವಿಲ್ಕ್ಸ್ ಬರೆದಿದ್ದಾನೆ. ಈ ಸಂದರ್ಭದಲ್ಲಿ ಖಾದರ್‌ಖಾನ್ ಕೈಸಗಿಯು ಟಿಪ್ಪು ವಿನಿಂದ ತಿರಸ್ಕೃತಳಾದ ಈ ಮಹಿಳೆಯನ್ನು ತನ್ನ ಮನೆಗೆ ಕರೆದೊಯ್ದು, ಅವಳ ಜಾತಿಯವರನ್ನೇ ಅವಳಯೋಗಕ್ಷೇಮವನ್ನು ನೋಡಿಕೊಳ್ಳಲು ನೇಮಿಸಿ, ಅವಳಿಗೆ ಪ್ರತ್ಯೇಕ ವಾಸಸ್ಥಳವನ್ನು ನಿರ್ಮಿಸಿ, ಅವಳು ಗೌರವದಿಂದಬದುಕು ಮಾಡಲು ಔದಾರ್ಯವನ್ನು ತೋರಿಸುತ್ತಾನೆ.

ಇಷ್ಟೆಲ್ಲದರ ನಡುವೆಯೂ ಕೈಸಗಿಯು ಯಾವುದೇ ಸಂದರ್ಭದಲ್ಲಿಯೂ ಅವಳನ್ನು ವೈಯಕ್ತಿಕವಾಗಿ ಭೇಟಿಯಾಗದೆ ಇದ್ದನು, ನಂತರ ಅವಳನ್ನು ರಹಸ್ಯವಾಗಿ ತನ್ನ ಅಣ್ಣನ ಬಳಿ ಕಳುಹಿಸಿಕೊಟ್ಟನು ಎಂಬುದಾಗಿ ವಿಲ್ಕ್ಸ್ ಬರೆಯುತ್ತಾನೆ (ವಿಜಯ್ ಪೂಣಚ್ಚ ತಂಬಂಡ, 2018). ಕೈಸಗಿ ಬಗ್ಗೆ ವೀರರಾಜನಿಗಿದ್ದ ಔದಾರ್ಯಕ್ಕೆ ಇದು ಒಂದು ಮುಖ್ಯ ಕಾರಣವಾಗಿರುವ ಸಾಧ್ಯತೆ ಸಹ ಇದೆ. ಟಿಪ್ಪುವಿನ ಮರಣಾನಂತರ ವೀರರಾಜನು ತನ್ನ ಸ್ನೇಹಿತ ಕೈಸಗಿಯನ್ನು ಕೊಡಗಿಗೆ ಕರೆತಂದು ತನ್ನ ಸೋದರನಂತೆ ನೋಡಿಕೊಂಡನು. ವೀರರಾಜನು ಅವನಿಗೆ ದೊಡ್ಡ ಎಸ್ಟೇಟುಗಳನ್ನು, ದನಕರುಗಳನ್ನು, ಆಳುಕಾಳುಗಳನ್ನು ನೀಡಿ ಗೌರವಿಸಿದನು. ಕೈಸಗಿಯು 1806 ರಲ್ಲಿ ಮೃತಪಡುತ್ತಾನೆ. ಬಿಳುಗುಂದದಲ್ಲಿ ಆತನ ಪ್ರತಿಷ್ಠಿತ ಕುಟುಂಬದ ಉತ್ತರಾಧಿಕಾರಿಗಳು ಈಗಲೂ ಇದ್ದಾರೆ.

ರಾಣಿ ಬಲಿಯಾ ಬಲಿಯಾಬಾನು ಬೀಬಿಯ ಕುರಿತಾದ ಪ್ರಹಸನವು ದೊಡ್ಡ ವೀರರಾಜನ ಸಹಿಷ್ಣು ಗುಣವನ್ನು ಬಿಂಬಿಸುತ್ತದೆ. ಆಕೆ ಕಣ್ಣನೂರಿನ ರಾಣಿಯಾಗಿದ್ದಳು. ಆಗಲೊಮ್ಮೆ ಟಿಪ್ಪುವಿನ ಕಡೆಯ ಫಾಸಲ್‌ಖಾನನ ನೇತೃತ್ವದ 6ಸಾವಿರ ಜನ ಸೈನಿಕರು ಮತ್ತು ಬಲಿಯಾಬಾನು ಬೀಬಿ ಕಡೆಯ 4 ಸಾವಿರ ಮಾಪಿಳ್ಳೆ ಸೈನಿಕರು ಕಣ್ಣನೂರಿನಲ್ಲಿಬೀಡುಬಿಟ್ಟಿದ್ದರು. ಆ ಸಂದರ್ಭದಲ್ಲಿ ತಲಚೇರಿ ಕೋಟೆಯ ಮುಖ್ಯಸ್ಥ ರಾಬರ್ಟ್ ಟೇಲರನು ಬೀಬಿಯ ಜೊತೆಸಂಧಾನ ನಡೆಸಿ ಅವಳ ಕೋಟೆಯಲ್ಲಿದ್ದ ಟಿಪ್ಪುವಿನ ಸೈನಿಕರನ್ನು ಒಪ್ಪಿಸಲು ಸಹಕರಿಸುವಂತೆ ಕೋರಿದನು. 

ಅವಳುಅದಕ್ಕೆ ಸಮ್ಮತಿಯನ್ನು ಸೂಚಿಸಿದರೂ, ಇಂಗ್ಲಿಷರು ಬರುವ ವಿಚಾರವನ್ನು ಟಿಪ್ಪುವಿನ ಸೈನ್ಯಾಧಿಕಾರಿಗಳಿಗೆಖಾಸಗಿಯಾಗಿ ತಿಳಿಸಿ ಬ್ರಿಟಿಷರ ಸೈನ್ಯದ ಮೇಲೆಯೇ ಎಲ್ಲರೂ ತಿರುಗಿಬೀಳುವ ವ್ಯವಸ್ಥೆಯನ್ನು ಮಾಡಿದಳು. ಅದೇ ವೇಳೆಗೆ ವೀರರಾಜನು ಇಂಗ್ಲಿಷರ ಸ್ನೇಹದಿಂದಾಗಿ ತಾನು ತಲಚೇರಿಯಲ್ಲಿ ಪಡೆದಿದ್ದ ಮನೆಗೆ ಯಾವುದೋ ವ್ಯವಹಾರದ ನಿಮಿತ್ತ ಹೋಗಿದ್ದನು. ಎಲ್ಲವೂ ಅಂದುಕೊಂಡಂತೆ ಆಗದ್ದರಿಂದ ಆರಂಭದಲ್ಲಿ ಹಿಮ್ಮೆಟ್ಟಿದ ಇಂಗ್ಲಿಷ್ ಸೈನ್ಯ ನಂತರ ಕಣ್ಣನೂರು ಕೋಟೆಯನ್ನು ವಶಪಡಿಸಿಕೊಳ್ಳುವಲ್ಲಿ ಸಫಲವಾಯಿತು. ಇದರಿಂದ ಕಂಗೆಟ್ಟ ರಾಣಿ ಬಲಿಯಾಬಾನು ಬೀಬಿ ತನ್ನ ಗಂಡು ಕೂಸನ್ನು ದೊಡ್ಡ ವೀರರಾಜನ ಕೈಗೊಪ್ಪಿಸಿ, ಮಗುವನ್ನು ರಕ್ಷಿಸುವಂತೆ ಮೊರೆಯಿಟ್ಟಳು. 

ಅವಳ ಪೂರ್ವಜರು ಯಾವುದೋ ಸಂದರ್ಭದಲ್ಲಿ ವೀರರಾಜನ ಹಿರಿಯರಿಗೆ ಮಾಡಿದ ಉಪಕಾರವನ್ನು ನೆನಪಿಸುತ್ತಾ ಅವಳ ಮನವಿಗೆ ರಾಜ ತಕ್ಷಣವೇ ಸ್ಪಂದಿಸುತ್ತಾನೆ. ಇಂಗ್ಲಿಷರೊಂದಿಗೆ ಅನ್ಯೋನ್ಯತೆ, ಆತ್ಮೀಯತೆ ಮತ್ತು ಭಾವಾತ್ಮಕ ಸಂಬಂಧ ಹೊಂದಿದ್ದ ವೀರರಾಜನು ಇಂತಹ ಸಂಕಟಕರವಾದ ಪರಿಸ್ಥಿತಿಯನ್ನು ಜಾಣ್ಮೆಯಿಂದ ಪರಿಹರಿಸಿದ. ಅಲ್ಲೇ ಸಮೀಪ ಉಳಿದುಕೊಂಡಿದ್ದ ಮೇಜರ್ ಜನರಲ್ ರಾಬರ್ಟ್ ಅಬರ್‌ಕ್ರಾಂಬಿಯ ಬಳಿಗೆ ಹೋಗಿ ಮಗುವನ್ನು ಅವನ ಕೈಗಿತ್ತು ತನ್ನ ಮೇಲೆ ಮೆಹರ್ಬಾನಗಿ ದೃಷ್ಟಿ ಇಟ್ಟು ಈ ಮಗುವಿನ ಮಾನಪ್ರಾಣ ಉಳಿಸಿ ರಕ್ಷಣೆ ಮಾಡಬೇಕು ಎಂದನು. ಅದಕ್ಕೆ ಆದೀತು ಎಂದನು ಇಂಗ್ಲಿಷ್ ಅಧಿಕಾರಿ. 

ನಂತರ ವಿಷಯ ತಿಳಿದು ಕೋಪೋದ್ರಿಕ್ತನಾದ ಅಬರ್‌ಕ್ರಾಂಬಿಯನ್ನು ವೀರರಾಜನು ಪರಿಪರಿಯಾಗಿ ಒಪ್ಪಿಸಿ ಸಫಲನಾಗುತ್ತಾನೆ. ಇವನ ಪ್ರಯತ್ನದಿಂದಾಗಿ ಆ ಮಗುವು ಬಲಿಯಾಬಾನು ಬೀಬಿಯ ಕೈಗೆ ಮತ್ತೆ ಸೇರುತ್ತದೆ. ಇನ್ನು ಮುಂದೆ ಇಂತಹದ್ರೋಹವನ್ನು ಮಾಡಬಾರದೆಂಬ ಶರತ್ತಿನೊಂದಿಗೆ ಅವಳಿಗೆ ರಾಜ್ಯವೂ ವಾಪಸಾಗುತ್ತದೆ. ಮುಸ್ಲಿಮನಾದಟಿಪ್ಪುವಿನ ಮೇಲಿದ್ದ ವೀರರಾಜನ ಆಕ್ರೋಶ, ಇಸ್ಲಾಮ್‌ನ ಮೇಲಿನ ದ್ವೇಷಪೂರಿತ ಮಾತುಗಳು ಕಣ್ಣನೂರಿನ ಮುಸ್ಲಿಮ್‌ರಾಣಿ ಮತ್ತು ಅವಳ ಬಳಗದ ಬಗ್ಗೆ ಬರೆಯುವಾಗ ಕಂಡುಬರುವುದಿಲ್ಲ. ಈ ಸಂದರ್ಭದಲ್ಲಿ ಅವನು ಹಿಂದೂ ಮುಸ್ಲಿಮ್ ಜಾತಿಗಳನ್ನು ಮೀರಿ ಮಾನವೀಯತೆಯನ್ನು ಮೆರೆದದ್ದು ಕಾಣಸಿಗುತ್ತದೆ. ಖಾದರ್ ಖಾನ್ ಕೈಸಗಿ, ಬಲಿಯಾಬಾನು ಬೀಬಿ ಮುಂತಾದವರ ಘಟನೆಗಳು ವೀರರಾಜನು ಮುಸ್ಲಿಮ್ ವಿರೋಧಿಯಲ್ಲ ಎನ್ನುವ ಅಂಶವನ್ನು ಬಿಂಬಿಸಿವೆ (ವಿಜಯ್ ಪೂಣಚ್ಚ ತಂಬಂಡ, 2018).

ಫ್ರೆಂಚರ ಕೈಯಿಂದ ಈಜಿಪ್ಟಿನ ಮಿಸರಿ ಪಟ್ಟಣವನ್ನು ಇಂಗ್ಲಿಷರು ಬಿಡಿಸಿ ಮುಸ್ಲಿಮ್ ಅರಸನಿಗೆ ಪುನಃ ಕೊಟ್ಟಘಟನೆಯೊಂದು ವೀರರಾಜ ಬರೆಸಿದ ರಾಜೇಂದ್ರನಾಮೆಯಲ್ಲಿದೆ. ಈ ಸಂತೋಷವನ್ನು ಹಂಚಿಕೊಳ್ಳಲು ಮುಸ್ಲಿಮ್ ರಾಜನು ಇಂಗ್ಲಿಷರಿಗೆ ಆಕರ್ಷಕವಾದ ಹೊಳೆಯುವ ವಜ್ರವನ್ನು ಪೋಣಿಸಿದ ಅರ್ಧಚಂದ್ರಾಕಾರದ ಚಿನ್ನದ ಹೂವಿನ ಕೊಡುಗೆಯೊಂದನ್ನು ನೀಡಿದ್ದನು. ಆ ಬಾದಶಹಾರವರ ಸರಕಾರ ಯಾವತ್ತೂ ಮುಸಲ್ಮಾನರದು ಇದೆ ಎಂದು ವೀರರಾಜನು ಹೆಮ್ಮೆ ಪಟ್ಟಿದ್ದನ್ನು ಕಾಣಬಹುದು. 

ನಮ್ಮ ಇಂಗ್ರೆಜ ಸರಕಾರಕ್ಕೂ ಅವರಿಗೂ ಭೇದವಿಲ್ಲದೆ ಏಕೀಕರಣವಾಗಿ ದೋಸ್ತಿ ಆದ್ದರಿಂದ ಬಹಳ ಸಂತೋಷ, ಬಹುಮಾನ ನಮಗೆ ಉಂಟಾಯಿತು ಎಂದುವೀರರಾಜನು ಬೀಗಿದ್ದನ್ನು ಗಮನಿಸಬಹುದು. ಇಂಗ್ಲಿಷ್, ಮುಸ್ಲಿಮ್ ಹಾಗೂ ಹಿಂದೂ (ವೀರಶೈವ) ಅರಸೊತ್ತಿಗೆಗಳಗೆಳೆತನದ ಬಗ್ಗೆ ವೀರರಾಜನು ಗೌರವ ಹಾಗೂ ಹೆಮ್ಮೆ ಪಟ್ಟುಕೊಂಡ ಸಂದರ್ಭವನ್ನು ರಾಜೇಂದ್ರ ನಾಮೆಯಲ್ಲಿ ನೋಡಬಹುದು. ಈಜಿಪ್ಟ್‌ನ ಅರಸನು ಮುಸ್ಲಿಮ್ ಆಗಿದ್ದರೂ ಅವನು ಇಂಗ್ಲಿಷರ ಸ್ನೇಹಿತನಾಗಿದ್ದರಿಂದ ಅವನ ಸಂಬಂಧ ವೀರರಾಜನಿಗೆ ಇಷ್ಟವಾಗಿತ್ತು. ಅದೇ ರೀತಿ ಹೈದರಾಬಾದಿನ ನಿಜಾಮ ಕೂಡ ಇಂಗ್ಲಿಷರ ಮಿತ್ರನಾಗಿದ್ದರಿಂದ ಅವನ ಬಗ್ಗೆ ಅವಹೇಳನದ ಬರಹವೇನೂ ರಾಜೇಂದ್ರನಾಮೆಯಲ್ಲಿ ಕಾಣಸಿಗುವುದಿಲ್ಲ. 

ನಿಜಾಮನ ಪ್ರಸ್ತಾವ ರಾಜೇಂದ್ರ ನಾಮೆಯಲ್ಲಿ ಕೆಲವೆಡೆ ಬಂದರೂ ಅವುಗಳಲ್ಲಿ ವೀರರಾಜೇಂದ್ರನ ಧಾರ್ಮಿಕ ಅಭಿಪ್ರಾಯವು ಕಾಣುವುದಿಲ್ಲ. ಹಾಗೆ ನೋಡಿದರೆ ವೀರರಾಜೇಂದ್ರನಿಗೆ ಹೈದರಲಿಯ ಬಗ್ಗೆ ಗೌರವವಿದ್ದದ್ದನ್ನು ರಾಜೇಂದ್ರನಾಮೆಯಲ್ಲಿ ಗಮನಿಸಬಹುದು. ಅವನ ಮಾತಿನಲ್ಲೇ ಅದನ್ನು ಹೇಳುವುದಾದರೆ ವಿಕೃತು ಸಂವತ್ಸರದ ಆರಭ್ಯ ನವಾಬ ಹೈದರಲಿ ಖಾನ್ ಬಹಾದ್ದರವರಿಗೂ ನಮ್ಮ ತಂದೆಯವರಾದ ಲಿಂಗರಾಜೇಂದ್ರ ಒಡೆಯವರಿಗೂ ತಮ್ಮ ಒಳಗೆದೋಸ್ತಿ ಪ್ರಾರಂಭವಾಗಿ, ಕೀಲಕ ಸಂವತ್ಸರದವರೆಗೆ ಹತ್ತೊಂಭತ್ತು ವರ್ಷ ದೋಸ್ತಿ ಕಾಯಂ ಆಗಿತ್ತು ಎಂದು ರಾಜೇಂದ್ರನಾಮೆಯಲ್ಲಿ ವೀರರಾಜನು ದಾಖಲಿಸಿದ್ದಾನೆ (ವಿಜಯ್ ಪೂಣಚ್ಚ ತಂಬಂಡ, 2018).

ದೊಡ್ಡ ವೀರರಾಜೇಂದ್ರನ ಬಿಡುಗಡೆ ಮತ್ತು ಸಿದ್ದೇಶ್ವರ ಬೆಟ್ಟದಲ್ಲಿ

ದೊಡ್ಡ ವೀರರಾಜೇಂದ್ರ ಒಡೆಯ 1788 ರಲ್ಲಿ ಟಿಪ್ಪು ಸುಲ್ತಾನನ ಸೆರೆಯಿಂದ ತಪ್ಪಿಸಿಕೊಳ್ಳು ತ್ತಾನೆ. ಅವನನ್ನುಪಿರಿಯಾಪಟ್ಟಣದಿಂದ ಹೊಂಬಾಳೆ ನಾಯಕ ಬಿಡಿಸಿಕೊಂಡು ಬರುತ್ತಾನೆ. ಟಿಪ್ಪುವಿನ ಆಪ್ತನಾಗಿದ್ದ ಖಾದರ್‌ಖಾನ್ ಕೈಸಗಿ ಈ ಬಿಡುಗಡೆಯ ಪ್ರಹಸನಕ್ಕೆ ಪರೋಕ್ಷ ನೆರವನ್ನು ನೀಡಿರುತ್ತಾನೆ. ಅವನಿಗೆ ಅದಾಗಲೇ ವೀರರಾಜನೊಡನೆ ಆತ್ಮೀಯವಾದ, ಮಧುರವಾದ ಮಾನವ ಸಂಬಂಧವೊಂದು ಚಿಗುರೊಡೆದಿತ್ತು. ಮುಂದೆ ಹೊಂಬಾಳೆ ನಾಯಕ ಹಾಲೇರಿ ಸಂಸ್ಥಾನದ ದಿವಾನನಾಗುತ್ತಾನೆ. ಟಿಪ್ಪುವಿನ ನಿಧನಾನಂತರ ಖಾದರ್‌ಖಾನ್ ಕೈಸಗಿ ಸಹ ಕೊಡಗಲ್ಲಿವೀರರಾಜನ ಆಶ್ರಯದಲ್ಲಿ ನೆಲೆಯೂರುತ್ತಾನೆ. ಟಿಪ್ಪುವಿನ ಕಬಂಧಬಾಹುಗಳ ಬಂಧನದಿಂದ ತಪ್ಪಿಸಿಕೊಂಡು ಬಂದ ದೊಡ್ಡ ವೀರರಾಜ ಕೊಡಗು ರಾಜ್ಯವನ್ನು ಮತ್ತೆ ಕಟ್ಟುವ ಕೆಲಸದಲ್ಲಿ ತೊಡಗುತ್ತಾನೆ. ಆ ವೇಳೆಯಲ್ಲಿ ತನ್ನ ಕುಟುಂಬವರ್ಗವನ್ನು ಸಿದ್ದೇಶ್ವರ ಬೆಟ್ಟದಲ್ಲಿ ಇರಿಸುತ್ತಾನೆ. ಆ ಬೆಟ್ಟದ ಮೇಲೆ ಸಿದ್ದೇಶ್ವರ ಗದ್ದಿಗೆಯಿದೆ. ಅದು ಹಿಂದೂ-ಮುಸ್ಲಿಮ್ ಭಾವೈಕ್ಯತೆಯ ಕ್ಷೇತ್ರ. ಅಂತಹ ಜಾಗದಲ್ಲಿ ರಾಜನ ಹೆಂಡತಿ ಮಕ್ಕಳು ಮೂರು ವರ್ಷಗಳ ಕಾಲ ವಾಸವಿರುತ್ತಾರೆ. ಸಿದ್ದೇಶ್ವರ ಗದ್ದಿಗೆಯು ಇಂಡೋ-ಸಾರ್ಸನಿಕ್ ಅಥವಾ ಇಂಡೋ-ಇಸ್ಲಾಮಿಕ್ ವಾಸ್ತುವನ್ನುಹೊಂದಿದೆ. ಈ ವಾಸ್ತು ಶೈಲಿ ಮುಂದೆ ಹಾಲೇರಿ ಅರಸರ ಕುರುಹಾಗಿ ದಟ್ಟವಾಗಿ ಗೋಚರಿಸುತ್ತದೆ.

ಇಂಡೋ- ಇಸ್ಲಾಮಿಕ್ ವಾಸ್ತುಶೈಲಿ

ಯದುವಂಶದ ರಾಜರು ಅರಸೊತ್ತಿಗೆಯನ್ನು ಭದ್ರಗೊಳಿಸಿದ್ದು, ಪ್ರಬಲ ಮೈಸೂರು ಸಾಮ್ರಾಜ್ಯವನ್ನುಸ್ಥಾಪಿಸಿದ್ದು, ಕಾರಳ್ಳಿ ಕಾಳಗದಲ್ಲಿ ಜಯಗಳಿಸುವ ಮೂಲಕ. ಆ ಕದನದಲ್ಲಿ ಅಂದಿನ ಯದುವಂಶೀಯರು ಗೆಲ್ಲಲುಮುಖ್ಯ ಕಾರಣ ಸಂತ-ಯೋಧ ಕೊಡೇಕಲ್ಲ ರಾಚಪ್ಪಾಜಿ. ರಾಜನನ್ನು ಯುದ್ಧದಲ್ಲಿ ಗೆಲ್ಲಿಸಿದ್ದು ಮಾತ್ರವಲ್ಲ ಒಡೆಯ ಎಂಬ ಅಭಿದಾನವನ್ನು ನೀಡಿದ್ದು ಸಹ ಈತನೇ (ಬಸವಲಿಂಗ ಸೊಪ್ಪಿಮಠ, 1998, ಕೊಡೇಕಲ್ಲ ವಚನವಾಕ್ಯ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ). ಯಾರೀತ ಕೊಡೇಕಲ್ಲ ರಾಚಪ್ಪಾಜಿ ಎನ್ನುವುದನ್ನು ಗಮನಿಸೋಣ.

ಅಲ್ಲಿ ವಿವಿಧ ಜಾತಿಯ ಜನ ಒಟ್ಟಾಗಿ ನದಿಯಿಂದ ನೀರು ತರುತ್ತಾರೆ. ದಲಿತರು ತಂದ ನೀರಲ್ಲಿ ಗಂಧತೇಯುತ್ತಾರೆ. ಹಾಗೆ ತೇದ ಗಂಧವನ್ನು ಆ ಪರಂಪರೆಯ ಮೂಲಪುರುಷನ ಸಮಾಧಿಗೆ ಹಚ್ಚಲಾಗುತ್ತದೆ. ಅದರಮೇಲೆ ಮುಸ್ಲಿಮರು ಹಸಿರು ಗಲೀಫ ತಂದು ಹೊದಿಸುತ್ತಾರೆ. ಊರಿಗೆ ಊರೆಲ್ಲ ಸೇರಿ, ಸಕಲೆಂಟು ಜಾತಿಗಳುನೆರೆದು, ಜಾತ್ರೆ ನಡೆಸುತ್ತಾರೆ. ಮಾದಲಿ ಪ್ರಸಾದ ಅರ್ಪಿಸುತ್ತಾರೆ. ಊದು ಹಚ್ಚುತ್ತಾರೆ, ಲೋಬಾನ ಉರಿಸುತ್ತಾರೆ. ಒಣ ಖರ್ಜೂರ, ಕಲ್ಲು ಸಕ್ಕರೆ, ಶರಬತ್ತು ಹಂಚುತ್ತಾರೆ. ಅಲ್ಲಿ ಪೀಠಾಧಿಪತಿಗಳು ಇದ್ದಾರೆ, ಆದರೆಪಾದಪೂಜೆಯಿಲ್ಲ, ಅಡ್ಡ ಪಲ್ಲಕ್ಕಿಯಿಲ್ಲ. ಅಲ್ಲಿ ಅರ್ಚನೆಯಿದೆ, ಆದರೆ ದೇವರ ಗುಡಿಯಿಲ್ಲ, ದೈವದ ಮೂರ್ತಿಯಿಲ್ಲ.ಅಲ್ಲಿರುವ ಆರಾಧನೆ ದೈವದೇವರಿಗಲ್ಲ, ಬದಲಿಗೆ ತಮ್ಮ ಪೂರ್ವಿಕರು ಬರೆದ ಸಾಹಿತ್ಯಕ್ಕೆ. ಅಲ್ಲಿ ನಡೆಯುವ ಪಲ್ಲಕ್ಕಿ ಉತ್ಸವ ಇದೇ ಪುರಾತನ ಗ್ರಂಥಗಳಿಗೆ. ವರ್ಷದಲ್ಲಿ ಎರಡು ಬಾರಿ ನಡೆಯುವ ಈ ಜಾತ್ರೋತ್ಸವ ಆರಂಭಗೊಳ್ಳುವುದು ದಲಿತರ ಸ್ಪರ್ಶದಿಂದ ಪವಿತ್ರಗೊಂಡ ನೀರಿನಲ್ಲಿ ಗಂಧ ತೇಯುವುದರೊಂದಿಗೆ, ಕೊನೆಗೊಳ್ಳುವುದು ಮುಸಲ್ಮಾನ ಗಣ್ಯರು ಫಾತಿಹಾ ಹೇಳಿ ಧೂಳುಗಾಯಿ ಹೊಡೆದ ನಂತರ!

ಸಮಾಜದ ಎಲ್ಲ ಸ್ತರದ ಜನರಿಗೂ ದಕ್ಕುವ ಹಾಗೂ ಎಲ್ಲರನ್ನೂ ಒಳಗೊಳ್ಳುವ, ಜಾತಿಗಳ ಮೇಲುಕೀಳು ಎಂಬ ಏರುಪೇರಿನ ವ್ಯವಸ್ಥೆಯ ವೈಪರೀತ್ಯವನ್ನು ಧಿಕ್ಕರಿಸುವ ಮತ್ತು ಪುರೋಹಿತಶಾಹಿ ಮಧ್ಯವರ್ತಿಗಳಿಂದ ಮುಕ್ತಗೊಂಡ ಒಂದು ಧಾರ್ಮಿಕ ಪರ್ಯಾಯದ ಕೇಂದ್ರಸ್ಥಾನ ಇಂದಿನ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೊಡೇಕಲ್ಲ. ಅಲ್ಲಿ ತನ್ನ ಆಧ್ಯಾತ್ಮಿಕ ಕಾಯಕದಲ್ಲಿ ತೊಡಗಿಕೊಂಡಿದ್ದ ಬಸವಣ್ಣ ಕಡೆಯ ಕಲ್ಯಾಣದ ಅಥವಾ ಕೊಡೇಕಲ್ಲ ಬಸವಣ್ಣ ಎಂದೇ ಪ್ರಸಿದ್ಧ. ಈತನ ಖ್ಯಾತ ಶಿಷ್ಯನೆಂದರೆ ಮಂಟೇಸ್ವಾಮಿ; ಮಲೆ ಮಾದೇಶ್ವರ ಸಹ ಇವನ ಇನ್ನೊಬ್ಬ ಶಿಷ್ಯ ಎಂದು ಊಹಿಸಲಾಗಿದೆ. ಮಂಟೇಸ್ವಾಮಿ, ಆತನ ಸಹಚರ ಕಿಡಿಗಣ್ಣ ರಾಚಪ್ಪಾಜಿ, ಶಿಷ್ಯ ಸಿದ್ದಪ್ಪಾಜಿ ಇವರುಗಳೆಲ್ಲ ಹದಿನೈದನೆಯ ಶತಮಾನದಲ್ಲಿ ಉತ್ತರದೇಶದಿಂದ ಇಂದಿನ ದಕ್ಷಿಣ ಕರ್ನಾಟಕವೆಂಬ ಆಧ್ಯಾತ್ಮಿಕ ಕತ್ತಲಿನ ಲೋಕಕ್ಕೆ ಜ್ಞಾನದ ಬೆಳಕನ್ನು ತಂದ ಬಗ್ಗೆ ಸಿದ್ದಪ್ಪಾಜಿ ಕಾವ್ಯ ಪರಂಪರೆ ಮತ್ತೆ ಮತ್ತೆ ಹೇಳುತ್ತದೆ.

ಮೂಲತಃ ಹಂಪಿಯವನಾದ ಕೊಡೇಕಲ್ಲ ಬಸವಣ್ಣ ತನ್ನ ಆಧ್ಯಾತ್ಮಿಕ ಕಾರ್ಯಕ್ಷೇತ್ರವನ್ನಾಗಿ ಆರಿಸಿಕೊಂಡದ್ದು ಹಂಪಿ ಮತ್ತು ಬಿಜಾಪುರದ ನಡುವಿನ ಕೊಡೇಕಲ್ಲನ್ನು. ಅದು 15ನೇ ಶತಮಾನದ ಸಮಯ. ಆ ಹೊತ್ತು ಸುತ್ತಲಿನ ಪರಿಸರ ರಾಜಕೀಯ ಮತ್ತು ಧಾರ್ಮಿಕ ಸಂಘರ್ಷಗಳ ಕುಲುಮೆಯಾಗಿತ್ತು. ಸಾಮ್ರಾಜ್ಯಾಧಿಪತಿಗಳ ವೈಭವ, ಅಹಂಭಾವ, ಕ್ರೌರ್ಯ, ಕಾಳಗ, ಅಂತರ್‌ಕಲಹ ಮತ್ತು ಪತನಕ್ಕೆ ಸಮಾಜ ಸಾಕ್ಷಿಯಾಗಿತ್ತು. ಧರ್ಮಗಳ ಅತಿರೇಕ ಅಸಹನೀಯವಾಗಿತ್ತು. ವೈಷ್ಣವ-ಶೈವ, ಮುಸ್ಲಿಮ್-ಹಿಂದೂ ಸಂಘರ್ಷಗಳಿಂದ ಜನ ತತ್ತರಿಸಿ ಹೋಗಿದ್ದರು. 

ಇಂತಹ ಸಮಯದಲ್ಲಿ ಒಂದು ಕಾಲಿಗೆ ಹಿಂದೂಗಳಂತೆ ಪಾದರಕ್ಷೆ ಮತ್ತು ಇನ್ನೊಂದು ಕಾಲಿಗೆ ಮುಸ್ಲಿಮರು ಧರಿಸುವ ಕಂಸಿಯನ್ನು ತೊಟ್ಟುಕೊಂಡ ಕೊಡೇಕಲ್ಲ ಬಸವಣ್ಣ ಜನರ ನಡುವೆ ಸಾಮರಸ್ಯಕ್ಕಾಗಿ ಓಡಾಡಿದ ಮಹನೀಯ. ಜಾತಿಗಳನ್ನು ತೊಡೆದುಹಾಕುವ ಮತ್ತು ದುಡಿಯುವ ವರ್ಗಕ್ಕೆ ಧಾರ್ಮಿಕ ಸ್ವಾತಂತ್ರವನ್ನು ನೀಡುವ ಉದಾತ್ತ ಕಲ್ಪನೆಯಿಂದ ಹುಟ್ಟಿಕೊಂಡಿದ್ದ ಲಿಂಗಾಯತ ಧರ್ಮ ಅದಾಗ ಮೇಲು-ಕೀಳು, ಶುದ್ಧಿ-ಅಶುದ್ಧಿ ಪರಿಕಲ್ಪನೆಯನ್ನು ತನ್ನೊಳಗೇ ತುಂಬಿಕೊಂಡು ನಿಂತ ನೀರಾಗಿ ಕೊಳೆಯತೊಡಗಿತ್ತು; ಒಂದು ಶ್ರೇಣೀಕೃತ ವ್ಯವಸ್ಥೆಯಾಗಿ ಬದಲಾಗಿತ್ತು. ಕೊಡೇಕಲ್ಲ ಬಸವಣ್ಣ ಮತ್ತೆ ಜಾತಿಸೂತಕವಾಗಿ ಮಾರ್ಪಟ್ಟ ಇಷ್ಟಲಿಂಗವನ್ನು ಕಿತ್ತೆಸೆದ. ಅದರ ಬದಲು ಪ್ರಾಣಲಿಂಗ ಪ್ರತಿಷ್ಠೆ ಎಂಬ ಹೊಸ ಪರಿಕಲ್ಪನೆಯನ್ನು ಹುಟ್ಟು ಹಾಕಿದ. ಶಿವನನ್ನು ಶುದ್ಧ ನಡೆನುಡಿಗಳ ಮೂಲಕ ಅಂತರಂಗದಲ್ಲಿ ಪ್ರತಿಷ್ಠೆ ಮಾಡಬೇಕೇ ವಿನಹ ಜಾತಿ ಸೂಚಕವಾಗಿ ದೇಹದ ಮೇಲಲ್ಲ ಎಂದು ಪ್ರತಿಪಾದಿಸಿದ.

ಕೊಡೇಕಲ್ಲ ಪರಂಪರೆಯವರಿಗೆ ಧರ್ಮದ ಹೊರ ಆವರಣಗಳು, ಸಂಕೇತಗಳು, ಆಚರಣೆಗಳು ಮತ್ತು ಕುರುಹುಗಳು ಅನಗತ್ಯವಾದುದು ಹಾಗೂ ಅಂಧಶ್ರದ್ಧೆಗೆ ಒಳದಾರಿಯೆಂದೇ ಅನ್ನಿಸಿದೆ. ಭೌತಿಕ ಆಚರಣೆಗಳು ಅಧ್ಯಾತ್ಮದ ಪರಿಕಲ್ಪನೆಗೆ ತೊಡಕಾದುದೆಂಬುದು ಅವರ ಸ್ಪಷ್ಟ ನಿಲುವು. ಮನೋವಿಕಾಸ ಮತ್ತು ನೈತಿಕತೆ ಎಂದೂ ಅವರ ಖಚಿತ ಗುರಿ. ಒಂದೆಡೆ ಅಲ್ಲಮ ಪ್ರಭು ಹೇಳುತ್ತಾನೆ, ಆಕಾರ, ನಿರಾಕಾರ ಎಂಬೆರಡೂ ಸ್ವರೂಪಂಗಳು.... ನನ್ನ ಗುಹೇಶ್ವರ ಆಕಾರನೂ ಅಲ್ಲ, ನಿರಾಕಾರನೂ ಅಲ್ಲ. 

ಈ ರೀತಿಯ ನಿರೀಶ್ವರವಾದಕ್ಕೆ ಅತಿ ಸನಿಹದ ಅಮೂರ್ತವಾದ ದೈವದ ಕಲ್ಪನೆ ಅವನದ್ದು. ಕೊಡೇಕಲ್ಲ ಬಸವಣ್ಣನನ್ನು ಕೆಲವೊಮ್ಮೆ ಕಲ್ಯಾಣದ ಬಸವಣ್ಣನ ಅವತಾರವೆಂದೂ, ಕೆಲವೊಮ್ಮೆ ಮಹಮ್ಮದನ ಪುನರವತಾರವೆಂದೂ ಗ್ರಹಿಸಿರುವಂತೆ ಆತ ಅಲ್ಲಮನ ಪುನರ್ಜನ್ಮ ಎಂಬ ನಂಬಿಕೆ ಸಹ ಇದೆ. ಅಂತೆಯೇ ಕೊಡೇಕಲ್ಲ ಬಸವಣ್ಣನನ್ನು ಶೂನ್ಯ ಸಿಂಹಾಸನ ಪ್ರಭು ಎಂದು ಬಣ್ಣಿಸಿರುವುದೂ ಇದೆ. ಕೊಡೇಕಲ್ಲ ಪಥ ಮೂಲತಃ ಅಲ್ಲಮನ ಪಥ ಎನ್ನುವುದು ಸುಸ್ಪಷ್ಟ. ವಿಗ್ರಹಾರಾಧನೆಯಂತೂ ಈ ಪರಂಪರೆಯ ಪರಿಧಿಯಾಚೆಗಿನದ್ದು. 

ಮಂಟೇಸ್ವಾಮಿಯ ಶಿಷ್ಯ ಘನನೀಲಿ ಸಿದ್ದಪ್ಪಾಜಿಯ ಹಂಬಲವೊಂದು ಹೀಗಿದೆ, ತಲಕಾಡ ಮರಳು ರಾಶಿ ಸಣ್ಣಕ್ಕಿ ಬೆಳೆಯಾಗಲಿ, ಹೊಡೆದು ಮೂಡಿದ ದೇವರುಗಳೆಲ್ಲ ಒಲೆ ಗುಂಡುಗಳಾಗಲಿ, ಹಾದಿಬೀದಿಯ ದೇವರುಗಳೆಲ್ಲ ಸೀಳು ಸೌದೆಯಾಗಲಿ; ಸಣ್ಣಕ್ಕಿಯ ಅನ್ನದಿಂದ ಅಳಿದುಳಿದ ಕಲ್ಯಾಣದ ಜಂಗಮರಿಗೆ ಪ್ರಸಾದವಾಗಲಿ. ನೀಲಗಾರರ ಸಾಹಿತ್ಯದಲ್ಲಿ ಬರುವ ಈ ಕಲ್ಯಾಣವು ಕಡೆಯ ಕಲ್ಯಾಣವಾದ ಕೊಡೇಕಲ್ಲ ಎಂಬುದು ಸ್ಪಷ್ಟ. ಕೊಡೇಕಲ್ಲು ಎಂದೂ ವಿಗ್ರಹಾರಾಧನೆಯಿಂದ ಗಾವುದ ಗಾವುದ ದೂರ ಇದ್ದುದು ಮಾತ್ರವಲ್ಲ, ಆ ಪರಂಪರೆಯ ಮುಂದುವರಿದ ಭಾಗಗಳು ಸಹ ನೈತಿಕತೆಯತ್ತಲೇ ತಮ್ಮ ದೃಷ್ಟಿ ಹರಿಸಿದ್ದವು ಎನ್ನುವುದು ಇದರಿಂದ ವಿಶದವಾಗುತ್ತದೆ.

ಸಾಂಪ್ರದಾಯಿಕವಾಗಿ ಶಿವನನ್ನು ಅಷ್ಟಾವಿಧಾರ್ಚನೆಗಳ ಮೂಲಕ ಮತ್ತು ಶೋಡಷೋಪಚಾರಗಳ ಮೂಲಕ ಆರಾಧಿಸುವ ಪದ್ಧತಿ ಮಧ್ಯಕಾಲೀನ ಸಮಯದಲ್ಲಿ ಆಚರಣೆಯಲ್ಲಿತ್ತು ಮತ್ತು ಈಗಲೂ ಇದೆ. ಅವನನ್ನು ನೈವೇದ್ಯ, ವಿಭೂತಿ, ಪುಷ್ಪ, ದೀಪ, ಧೂಪ, ತಾಂಬೂಲ ಮೊದಲಾದ ಎಂಟು ಬಗೆಯ ಅರ್ಪಣೆಯೊಂದಿಗೆ ಆರಾಧಿಸಬೇಕೆಂಬ ವಿಧಾನವದು. ಇದೊಂದು ಅರ್ಚಕವೃಂದ ಹುಟ್ಟುಹಾಕಿದ ಬಾಹ್ಯ ಆಚರಣೆಯ ವಿಧಿವಿಧಾನ.ಅದಕ್ಕೆ ವ್ಯತಿರಿಕ್ತವಾಗಿ ಕೊಡೇಕಲ್ಲ ಬಸವಣ್ಣನ ಸಂಪ್ರದಾಯ, ಮನವೆ ಮಲ್ಲಿಗೆ ಅರಳು, ಘನ ನೆನಹು ಶ್ಯಾವಂತಿಗೆ, ವಿನಯವೆ ಪಡವಳಿಗೆ ಪುಷ್ಪ, ಸತ್ಕರುಣೆ ಕಣಗಿಲೆ ಅರಳು ಎಂದು ಹೇಳುತ್ತದೆ. ಇದಷ್ಟೇ ಮಹಾಲಿಂಗನಿಗೆ ಅರ್ಪಿತ ಎಂಬುದು ಅವರ ನಂಬಿಕೆ. ಇದರ ಜೊತೆಗೆ ಅವರು ಉಪಮಾತೀತ ಶಿವನನ್ನು ಸಾಂಕೇತಿಕ ಧೂಪದೀವಗಳಿಂದ ಅರ್ಚಿಸುವ ಬಗೆಯಂತೂ ಅನನ್ಯವಾದುದು, ಅಸದೃಶವಾದುದು. ತಾಪತರ್ಕಾದಿಗಳ ತರಿದು ದಹನವ ಮಾಡು, ಈ ಪರಿಯ ಪರಿಮಳವು ಪರಕೆ ಗುಗ್ಗಳಧೂಪ, ಉಪಮಾತೀತನಿಗರ್ಪಿತ ಹರಹರ ಎಂದು ಧಾರ್ಮಿಕ ಆಚರಣೆಯ ಪರಂಪರೆಯನ್ನು ಧಿಕ್ಕರಿಸಿ ಭಕ್ತಿ ಅಂತರಂಗದ ಕ್ರಮವು, ಬೂಟಾಟಿಕೆಯ, ತೋರ್ಪಡಿಕೆಯ ಕ್ರಮ ಅದಲ್ಲ ಎಂದಿದ್ದಾರೆ.

ಹಿಂದೂ-ಮುಸ್ಲಿಮ್ ಭಾವೈಕ್ಯತೆಯ ಈ ಪರಂಪರೆ ನಮ್ಮ ಸಮಾಜದ ಹೃದಯಭಾಗದಲ್ಲಿ ನಿಲ್ಲುತ್ತದೆ. ಎಷ್ಟೆಂದರೆ ಕೊಡೇಕಲ್ಲ ಪೀಠಾಧಿಪತಿಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಹಸಿರು ಶಲ್ಯ ಹಾಕಿರಲೇಬೇಕು. ಉತ್ಸವ, ಸಮಾರಂಭಗಳಲ್ಲಿ ಅದರ ಜೊತೆಗೆ ಹಸಿರು ರುಮಾಲು ಧರಿಸಿರಬೇಕು. ಕೊಡೇಕಲ್ಲ ಪರಂಪರೆಯ ಎಲ್ಲ ಧಾರ್ಮಿಕ ತಾಣಗಳೂ ಮುಸ್ಲಿಮ್ ವಾಸ್ತುಶಿಲ್ಪದಲ್ಲಿ ರೂಪಿತವಾಗಿವೆ, ಹೊರನೋಟಕ್ಕೆ ಮಸೀದಿಯ ಸ್ವರೂಪದಲ್ಲಿರುತ್ತವೆ. ಈ ವಾಸ್ತುಶಿಲ್ಪದ ಪ್ರಸರಣವನ್ನು ಗಮನಿಸಿದರೆ ಕೊಡೇಕಲ್ಲ ಪರಂಪರೆಯ ಪ್ರಸರಣದ ಅಗಾಧತೆ ಅರಿವಾಗುತ್ತದೆ. ಬಿಜಾಪುರ, ಗುಲ್ಬರ್ಗ, ಯಾದಗಿರಿಗಳಲ್ಲಿ ಮಾತ್ರವಲ್ಲ ನೆರೆಯ ಆಂಧ್ರ ಪ್ರದೇಶದಲ್ಲಿ ಸಹ ಈ ಬಗೆಯ ವಾಸ್ತುಶಿಲ್ಪಗಳನ್ನು ನೋಡಬಹುದು.

ಕೊಡೇಕಲ್ಲ ರಾಚಪ್ಪಾಜಿಯ ಸಂಸರ್ಗದ ಫಲವಿರಬಹುದು, ಮೈಸೂರಿನ ಮೇಲೆ ಇಂಡೋ-ಸಾರ್ಸೆನಿಕ್ ವಾಸ್ತುಶೈಲಿಯ ಗಾಢವಾದ ಪ್ರಭಾವವಿದೆ. ನಂತರದ ದಿನಗಳಲ್ಲಿ ಬ್ರಿಟಿಷ್ ತಂತ್ರಜ್ಞರ ಮೂಲಕ ಕಟ್ಟಿಸಿದ ಮೈಸೂರು ಅರಮನೆ ಸಹ ಇಂತಹ ಶೈಲಿಯನ್ನು ಹೊಂದಿರುವುದನ್ನು ನೋಡಬಹುದು. ಮೈಸೂರು ನಗರ ಮತ್ತು ಅದರ ಸುತ್ತಲಿನ ಹಲವು ಹಿಂದೂ ದೇವಸ್ಥಾನಗಳು ಸಹ ಗುಂಬಜ ಗಳನ್ನು, ಕಮಾನುಗಳನ್ನು, ಜಾಲಂದ್ರಗಳನ್ನು ಹೊಂದಿರುವುದನ್ನು ಗಮನಿಸಬಹುದು. ಸುಪ್ರಸಿದ್ಧ ಗ್ರಾಮೀಣ ದೈವವಾದ ಉತ್ತನಳ್ಳಿ ಮಾರಮ್ಮನ ದೇಗುಲ ಕೂಡ ಇದೇ ಮಾದರಿಯಲ್ಲಿದೆ.

ದೊಡ್ಡ ವೀರರಾಜೇಂದ್ರ ಕೊಡಗನ್ನು ನೂತನವಾಗಿ ರೂಪಿಸಿದ ನಂತರ ಕಟ್ಟಿಸಿದ ಬಹುತೇಕ ಎಲ್ಲ ಕಟ್ಟಡಗಳೂ ಇಂಡೋ-ಸಾರ್ಸೆನಿಕ್ ವಾಸ್ತುಶೈಲಿಯನ್ನು ಹೊಂದಿವೆ. ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನ ಮತ್ತು ಕೊಡಗಿನ ಹಾಲೇರಿ ಅರಸರ ಗದ್ದಿಗೆಗಳು ಸಹ ಕೊಡೇಕಲ್ಲ ಸಂಪ್ರದಾಯದ ರಚನೆಗಳೇ ಆಗಿವೆ. ಮಾದಾಪುರದ ಗದ್ದಿಗೆ ಸ್ವರೂಪವೂ ಇದೇ ಆಗಿದೆ. ಅದೇ ರೀತಿ ಮಡಿಕೇರಿಯ ರಾಜಾಸೀಟಿನ ವೀಕ್ಷಣಾ ಮಂಟಪ ಕೂಡ ಈ ಮಾದರಿಯನ್ನು ಹೊಂದಿದೆ. ಕೈಸಗಿ ಕುಟುಂಬದ ಮನೆಗೆ ಹೋಗುವ ದಾರಿಯಲ್ಲಿ ಸಿಕ್ಕುವ ದ್ವಾರ ಸಹ ಅದೇ ಪ್ರಭಾವದಲ್ಲಿ ರಚಿಸಲ್ಪಟ್ಟಿದೆ. 

ದೇವಟಿಪರಂಬುವಿನ ಘಟನೆಯಲ್ಲಿ ಟಿಪ್ಪು ಮತಾಂತರ ನಡೆಸಿದ ಜನರ ಸಂಖ್ಯೆಯನ್ನು ವಿಭಿನ್ನ ಲೇಖಕರು ಬೇರೆ ಬೇರೆಯಾಗಿ ತೋರಿಸಿದ್ದಾರೆ. ಈ ವಿವರಗಳನ್ನು ವಿಜಯ್ ಪೂಣಚ್ಚ ತಂಬಂಡ ಸಮಗ್ರವಾಗಿ ನೀಡಿದ್ದಾರೆ. ಈ ಸಂಖ್ಯೆಯು ದೊಡ್ಡ ವೀರರಾಜೇಂದ್ರ ಒಡೆಯ ಬರೆಸಿದ ರಾಜೇಂದ್ರನಾಮೆಯಲ್ಲಿ ಒಂದೆಡೆ 1,11,000 ಆಗಿದ್ದರೆ ಇನ್ನೊಂದು ಕಡೆ 64,000 ಎಂದಿದೆ. 1817ರಲ್ಲಿ ಕೊಡಗನ್ನು ಸಮಗ್ರವಾಗಿ ಅಧ್ಯಯನ ಮಾಡಿದ ಬ್ರಿಟಿಷ್ ಅಧಿಕಾರಿ ಲೆಫ್ಟಿನೆಂಟ್ ಕಾನ್ನರ್ 5,000 ಕೊಡಗರನ್ನು ಅವರ ಕುಟುಂಬ ಸಮೇತರಾಗಿ ಮತಾಂತರ ಮಾಡಿದ ಬಗ್ಗೆ ಬರೆಯುತ್ತಾನೆ.

ಇಂತಹ ಶೈಲಿಯೊಂದು ಒಂದು ಕಾಲದ ಸಹಜವಾದ ಪ್ರಕ್ರಿಯೆಯ ಮೂಲಕ ರೂಪುಗೊಳ್ಳುತ್ತದೆ ಎಂಬ ವಾದವೊಂದಿದೆ. ದೇಶದಲ್ಲಿ ಪ್ರಭಾವಶಾಲಿಯಾಗಿದ್ದ ಮುಸ್ಲಿಮ್ ವಾಸ್ತುಶೈಲಿ ಉಳಿದ ನಿರ್ಮಾಣಗಳ ಮೇಲೂ ಪ್ರಭಾವ ಬೀರಿರಬಹುದು ಎನ್ನಲಾಗಿದೆ. ಆದರೆ ಕೊಡಗಿಗೆ ಸಂಬಂಧಿಸಿದಂತೆ ಕನಿಷ್ಠ ಎರಡು ನಿರ್ಮಾಣಗಳು ವಾಸ್ತುಶಿಲ್ಪಕ್ಕಿಂತ ಭಾವಾತ್ಮಕ ಸಂಬಂಧವನ್ನೇ ಸ್ಫುರಿಸುತ್ತವೆ. ಒಂದು ನಾಲ್ಕುನಾಡು ಅರಮನೆಯ ಮುಂಭಾಗದಲ್ಲಿರುವ ಮದುವೆಯ ಮಂಟಪ ಮತ್ತು ಎರಡನೆಯದ್ದು ಮಡಿಕೇರಿ ಅರಮನೆಯ ಮುಖಮಂಟಪಗಳು. ನಾಲ್ಕು ನಾಡು ಅರಮನೆಯು ಕೇರಳದ ಪ್ರಭಾವವಿರುವ ಸ್ಥಳೀಯ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ. ಮಡಿಕೇರಿಯ ಅರಮನೆ ಕೂಡ ಅದೇ ರೀತಿ ಇದ್ದರೂ ಬ್ರಿಟಿಷ್ ತಂತ್ರಜ್ಞಾನದ ಕೊಡುಗೆ ಅದರ ಮೇಲಿದೆ. 

ಶತ್ರು ಅರಸನೊಬ್ಬ ದೊಡ್ಡ ವೀರರಾಜನ ಸಂಪೂರ್ಣ ಕುಟುಂಬವನ್ನು ನಿರ್ನಾಮ ಮಾಡಿದ. ಅವನ ಹೆಂಡತಿಮಕ್ಕಳನ್ನು ಭೀಕರವಾಗಿ ಕೊಲ್ಲಲಾಗುತ್ತದೆ. ನಂತರದ ದಿನಗಳಲ್ಲಿ ವೀರರಾಜ ಮತ್ತೆ ವಿವಾಹವಾಗುತ್ತಾನೆ. ನಾಲ್ಕುನಾಡು ಅರಮನೆ ನಡೆದ ಅದ್ದೂರಿ ಮದುವೆಗೆ ಆಂಗ್ಲ ಮಿತ್ರರು ಸಾಕ್ಷಿಯಾಗುತ್ತಾರೆ. ಆಗ ಅರಮನೆ ಬಾಗಿಲಲ್ಲಿ ಅರಮನೆಯ ವಾಸ್ತುನಿರ್ಮಾಣಕ್ಕೆ ಹೊಂದಿಕೆಯಾಗದ ವಿವಾಹ ಮಂಟಪವನ್ನು ನೂತನವಾಗಿ ನಿರ್ಮಿಸಲಾಯಿತು. ಇದು ಪರಿಪೂರ್ಣವಾಗಿ ಇಂಡೋ-ಸಾರ್ಸನಿಕ್ ಶೈಲಿಯ ಪುಟ್ಟ ನಿರ್ಮಿತಿಯಾಗಿದೆ. 

ಅಂತೆಯೇ ಮಡಿಕೇರಿ ಅರಮನೆಯ ಶೈಲಿಗೂ ಅಲ್ಲಿರುವ ಮುಖಮಂಟಪಗಳ ಶೈಲಿಗೂ ಯಾವುದೇ ಸಂಬಂಧವಿಲ್ಲ. ಅವುಗಳನ್ನು ಉದ್ದೇಶಪೂರ್ವಕವಾಗಿ ಜೋಡಿಸಿದಂತೆ ಕಾಣಿಸುತ್ತದೆ. ಸ್ವಂತಿಕೆಯ ಕುರುಹು ಅಥವಾ ತನ್ನತನದ ಛಾಯೆ ಇರಬೇಕೆಂಬ ಒಂದೇ ಉದ್ದೇಶದಿಂದ ಮದುವೆ ಮಂಟಪ ಮತ್ತು ಮುಖಮಂಟಪಗಳನ್ನು ರಚಿಸಿರುವಂತೆ ಗೋಚರಿಸುತ್ತದೆ. ಅಂದರೆ ಕೊಡಗಿನ ಹಾಲೇರಿ ಅರಸರ ಮೇಲಿದ್ದ ಒತ್ತಡ ಯಾವುದು? ಅದಕ್ಕೆ ವೀರರಾಜನಿಗೆ ಆಶ್ರಯ ನೀಡಿದ ಸಿದ್ದೇಶ್ವರ ಗದ್ದಿಗೆ ಕಾರಣವೇ ಅಥವಾ ಇತರ ಯಾವುದಾದರೂ ಇತರ ಕಾರಣಗಳಿವೆಯೇ ಎನ್ನುವುದು ಕುತೂಹಲಕಾರಿ ಪ್ರಶ್ನೆ. 

ಮೈಸೂರು ಅರಸರಿಗೆ ಒಡೆಯ ಅಥವಾ ಒಡೆಯರ್ ಎಂಬ ಅಭಿದಾನವನ್ನು ಕೊಡೇಕಲ್ಲ ರಾಚಪ್ಪಾಜಿ ನೀಡಿದನೆಂಬ ಐತಿಹ್ಯವನ್ನು ಪರಿಶೀಲಿಸಿದ್ದೇವೆ. ಒಡೇರ ಎನ್ನುವುದು ಕುರುಬ ಸಮುದಾಯದ ಒಂದು ವಿಭಾಗ (ಗೋತ್ರ) ಎನ್ನುವ ವಾದವೂ ಇದೆ. ಏನಿದ್ದರೂ, ಕೊಡಗಿನ ಅರಸರು ಸಹ ಒಡೆಯರ್ ಪದವಿಯನ್ನು ಹೊಂದಿದ್ದರು ಎನ್ನುವುದು ಅಧ್ಯಯನಕ್ಕೆ ಅರ್ಹವಾದ ವಿಷಯವಾಗಿದೆ. ಕೊಡೇಕಲ್ಲ ಸಂಪ್ರದಾಯದಲ್ಲಿ ಹಿಂದೂ ಮತ್ತು ಮುಸ್ಲಿಮ್ ಗುರು-ಶಿಷ್ಯ ಪರಂಪರೆ ಗಮನಾರ್ಹವಾದುದಾಗಿದೆ. ಅಂತೆಯೇ ಡಿಗ್ಗಿ, ತಿಂಥಿಣಿ ಮುಂತಾದೆಡೆ ಗದ್ದಿಗೆ ಮತ್ತು ದರ್ಗಾಗಳು ಜೊತೆಜೊತೆಯಲ್ಲೇ ಇವೆ. ಗದ್ದಿಗೆಗಳಲ್ಲಿ ಹಚ್ಚಿದ ಬೆಳಕು ದರ್ಗಾಗಳಿಗೆ ಕಾಣಬೇಕಾದುದು ಅನಿವಾರ್ಯ. ಈ ಬೆಳಕು ಭಾವೈಕ್ಯತೆಯ ನಿಜ ಬೆಳಕಾಗಿ ಇಂದೂ ಆ ಪರಿಸರದ ಜನರ ನಡುವೆ ಜ್ವಲಂತವಾಗಿ ಉರಿಯುತ್ತಿದೆ. ಅದರ ಕಿಂಚಿತ್ ಪ್ರಭಾವ ಕೊಡಗಿನ ತನಕವೂ ಪ್ರವಹಿಸಿದ್ದರೆ ಆಶ್ಚರ್ಯವಿಲ್ಲ.

ದುದ್ದಿಯಂಡ ಅಲಿ ಹಾಗೂ ವಾಟೇರಿರ ಕುಟುಂಬದ ಕತೆ

ಈ ಮೊದಲು ನೋಡಿರುವಂತೆ ಕೊಡಗನ್ನಾಳಿದ ಹಾಲೇರಿ ವಂಶದಲ್ಲಿ ದೊಡ್ಡ ವೀರರಾಜೇಂದ್ರ ಒಡೆಯ ಅತ್ಯಂತ ಪ್ರಮಖ ಅರಸನಾಗಿದ್ದಾನೆ. ಟಿಪ್ಪು ಸುಲ್ತಾನನ ಸೆರೆಯಿಂದ ತಪ್ಪಿಸಿಕೊಂಡು ಬಂದ ಇವನು ನಶಿಸಿಹೋದ ಸಾಮ್ರಾಜ್ಯವನ್ನು ಪ್ರಬಲವಾಗಿ ಪುನರ್‌ಸ್ಥಾಪಿಸುತ್ತಾನೆ. ರಾಜನಿಗೆ ಟಿಪ್ಪುವಿನ ಪರಮ ಶತ್ರುಗಳಾದ ಬ್ರಿಟಿಷರು ಬೆಂಬಲ ನೀಡುತ್ತಾರೆ. ಮೈಸೂರಿನ ಮಗ್ಗುಲಲ್ಲಿ ಸಮಸ್ಯೆಯ ಮುಳ್ಳನ್ನು ನೆಡುವುದು ಅವರ ಗುರಿಯಾಗಿತ್ತು. ಆಂಗ್ಲರ ನೆರವಿನೊಂದಿಗೆ ವೀರರಾಜ ತನ್ನ ಪ್ರಾಬಲ್ಯವನ್ನು ಮೆರೆಯುತ್ತಾ ಹೋಗುವಾಗ ಎದುರಾದ ತೊಡಕುಗಳನ್ನು ಸಹಜವಾಗಿ ನಿವಾರಿಸುತ್ತಾ ಹೋಗುತ್ತಾನೆ. ವೀರಾಜಪೇಟೆಯ ಭಾಗದ ಮಗ್ಗುಲ ಮತ್ತಿತರ ಕಡೆ ತನ್ನ ವಿರೋಧಿಗಳೆಂದು ಕಂಡ ಕೆಲವು ಕುಟುಂಬಗಳನ್ನೇ ಈತ ನಿರ್ನಾಮ ಮಾಡಿದ್ದಾನೆ ಎಂಬ ಐತಿಹ್ಯಗಳಿವೆ. ವೀರರಾಜ ಸೂಕ್ತ ಕಾರಣವಿಲ್ಲದೆ ತಮ್ಮವರ ತಲೆ ಹಾರಿಸಿದ್ದಾನೆಂಬ ನಂಬಿಕೆಯೂ ಪ್ರಚಲಿತದಲ್ಲಿ ಇದೆ. ಇಂತಹ ಕತೆಗಳಲ್ಲಿ ವಾಟೇರಿರ ಎಂಬ ಕೊಡವ ಕುಟುಂಬದ ಐತಿಹ್ಯ ಕುತೂಹಲಕಾರಿಯಾಗಿದೆ.

ದೊಡ್ಡ ವೀರರಾಜ ಒಂದು ಸಂದರ್ಭದಲ್ಲಿ ತನಗೆ ಎದುರಾದ ವಾಟೇರಿರ ಕುಟುಂಬದ ಹಿರಿಯರು, ಕಿರಿಯರು, ಮಕ್ಕಳು, ಶಿಶುಗಳೆಂಬ ಭೇದವಿಲ್ಲದೆ ಪ್ರತಿಯೊಬ್ಬನನ್ನು ಕೊಲ್ಲಲು ಆಜ್ಞೆ ಹೊರಡಿಸುತ್ತಾನೆ. ರಾಜನ ಸೈನ್ಯ ಒಟ್ಟು ಕುಟುಂಬದ ವಾಟೇರಿರ ಮೂಲಮನೆಯನ್ನು ಹೊಕ್ಕು ಭೀಕರ ಹತ್ಯಾಕಾಂಡವನ್ನು ನಡೆಸುತ್ತದೆ. ಆ ವೇಳೆಗೆ ಕುಟುಂಬದ ವೃದ್ಧೆಯೊಬ್ಬಳು ಎಳೆ ಶಿಶುವೊಂದನ್ನು ಧಾನ್ಯವನ್ನು ಶೇಖರಿಸಿಡುವ ಪತ್ತಾಯದೊಳಗೆ ಎಸೆಯುತ್ತಾಳೆ. ಮರುದಿನ ಗ್ರಾಮದ ದುದ್ದಿಯಂಡ ಅಲಿ ಆ ಘೋರ ಘಟನೆ ನಡೆದ ಜಾಗವನ್ನು ನೋಡಲು ವಾಟೇರಿರ ಮೂಲಮನೆಗೆ ಹೋಗುತ್ತಾನೆ. ಆಗ ಅಲ್ಲಿ ಮಗುವೊಂದು ಕ್ಷೀಣಸ್ವರದಲ್ಲಿ ಅಳುವುದು ಕೇಳಿಸುತ್ತದೆ. ಅಲ್ಲೆಲ್ಲ ಹುಡುಕಾಡಿ ನೋಡಿದಾಗ ಪತ್ತಾಯದೊಳಗೆ ಆ ಶಿಶು ಕಾಣಿಸುತ್ತದೆ. 

ದುದ್ದಿಯಂಡ ಅಲಿ ಯಾರಿಗೂ ತಿಳಿಯದಂತೆ ಆ ಮಗುವನ್ನು ತನ್ನ ಮನೆಗೆ ಸಾಗಿಸುತ್ತಾನೆ. ದುದ್ದಿಯಂಡ ಮನೆಯ ಮಕ್ಕಳೊಂದಿಗೆ ಆ ಮಗುವೂ ಬೆಳೆಯುತ್ತದೆ. ಅವನಿಗೆ ಇಸ್ಲಾಮ್ ಪದ್ಧತಿಯನ್ನು ಕಲಿಸುವ ಬದಲು, ಕೊಡವ ಆಚಾರವಿಚಾರಗಳನ್ನು ತಿಳಿ ಹೇಳುತ್ತಾನೆ. ಕೇವಲ ಸಸ್ಯಾಹಾರವನ್ನು ನೀಡಿ ಮಗುವನ್ನು ಪೋಷಿಸುತ್ತಾನೆ. ಹೀಗೆ ಬೆಳೆದ ಮಗು ವಯಸ್ಕನಾದಾಗ ದುದ್ದಿಯಂಡ ಅಲಿ ಆತನನ್ನು ಕರೆದುಕೊಂಡು ಅರಮನೆಗೆ ಹೋಗುತ್ತಾನೆ. ವೀರರಾಜನ ಮುಂದೆ ತಾನು ಮಾಡಿದ ಘೋರ ಅಪರಾಧವನ್ನು ತಿಳಿಸಿ ತನ್ನ ತಪ್ಪಿಗೆ ಯೋಗ್ಯ ಶಿಕ್ಷೆ ನೀಡಬೇಕೆಂದೂ, ವಾಟೇರಿರ ಬಾಲಕನಿಗೆ ಕುಟುಂಬದ ಜಮೀನನ್ನು ಹಿಂದಕ್ಕೆ ದಯಪಾಲಿಸಬೇಕೆಂದೂ ಪ್ರಾರ್ಥಿಸುತ್ತಾನೆ. 

ಇಡೀ ಪ್ರಹಸನವನ್ನು ಕೇಳಿದ ರಾಜನ ಮನಸ್ಸು ಕದಡುತ್ತದೆ. ದುದ್ದಿಯಂಡ ಅಲಿಗೆ ಶಿಕ್ಷೆ ನೀಡುವ ಬದಲು ಉಚಿತ ಉಪಚಾರವನ್ನು ಮಾಡುತ್ತಾನೆ. ವಾಟೇರಿರ ಹುಡುಗನಿಗೆ ಕುಟುಂಬದ ಜಾಗವನ್ನು ಮತ್ತೆ ಕೊಡುತ್ತಾನೆ. ಆ ಬಾಲಕ ಈಗಿನ ವಾಟೇರಿರ ಕುಟುಂಬದ ಮೂಲಪುರುಷನೆಂದು ಆರಾಧಿಸಲ್ಪಡುತ್ತಾನೆ. ಕುಟುಂಬದ ಹಿರಿಯರಿಗೆ ಎಡೆಯಿಡುವ ಸಮಯದಲ್ಲಿ ದುದ್ದಿಯಂಡ ಅಲಿಯ ಹೆಸರಲ್ಲಿ ಪ್ರತ್ಯೇಕವಾಗಿ ಒಂದು ಎಡೆಯನ್ನು ಇಡುವ ಕ್ರಮ ಅಂದಿನಿಂದ ಇಂದಿನವರೆಗೂ ಅನೂಚಾನವಾಗಿ ನಡೆದುಬಂದಿದೆ.

ಚಿಕ್ಕ ವೀರರಾಜೇಂದ್ರ ಒಡೆಯ ಮತ್ತು ಮುಸ್ಲಿಮರೊಂದಿಗಿನ ಬಾಂಧವ್ಯ

1799ರ ನಾಲ್ಕನೇ ಮೈಸೂರು ಯುದ್ಧದ ನಂತರ ಇಂಗ್ಲಿಷರು ಮೈಸೂರು ಸಂಸ್ಥಾನದ ಮೇಲೆ ಸಂಪೂರ್ಣ ಹತೋಟಿಯನ್ನು ಸಾಧಿಸಿದರು. ಟಿಪ್ಪು ಮರಣದ ನಂತರ ಬಾಲಕ ಮೂರನೇ ಕೃಷ್ಣರಾಜೇಂದ್ರ ಒಡೆಯನಿಗೆ ಪಟ್ಟ ಕಟ್ಟಿದರೂ ಪರೋಕ್ಷ ನಿಯಂತ್ರಣ ಆಂಗ್ಲರ ಕೈಯಲ್ಲಿತ್ತು. ರಾಜ ಕುಟುಂಬ ಮತ್ತು ಮರಾಠಾ ಬ್ರಾಹ್ಮಣ ಸಲಹೆಗಾರರ ಕೂಟವು ಸಾಮ್ರಾಜ್ಯದ ಆರ್ಥಿಕ ಸ್ಥಿತಿಯನ್ನು ಹದಗೆಡಿಸಿತು. ರೈತರು ಅತೀವ ಸಂಕಷ್ಟದಲ್ಲಿದ್ದರು.. ಕೆಳದಿ ರಾಜಮನೆತನದ ರಂಗಪ್ಪ ನಾಯಕ ತನ್ನ ಭಾಗದ ಜನರ ಸಮಸ್ಯೆಗಳಿಗೆ ದನಿಯಾಗತೊಡಗಿದ. 

1830ರಲ್ಲಿ ಬಿದನೂರಿನ ಉತ್ತರಾಧಿಕಾರಿ ತಾನು, ನಗರ ಸಿಂಹಾಸನ ತನಗೆ ದಕ್ಕಬೇಕೆಂದು ಬೂದಿಬಸಪ್ಪ ಎಂಬಾತ ಪ್ರತ್ಯಕ್ಷನಾದ. ಇಂದಿನ ಶಿವಮೊಗ್ಗ ಜಿಲ್ಲೆಯ ನಗರದಲ್ಲಿ ಆರಂಭಗೊಂಡ ರೈತ ಹೋರಾಟ ದಕ್ಷಿಣ ಕರ್ನಾಟಕದ ಬಹುತೇಕ ಪ್ರದೇಶವನ್ನು ವ್ಯಾಪಿಸಿತ್ತು. ಈ ಹೋರಾಟ ಬ್ರಿಟಿಷರ ಹಿಡಿತದಲ್ಲಿದ್ದ ಮೈಸೂರು ಅರಸರ ಆಳ್ವಿಕೆಯನ್ನು ವಿರೋಧಿಸಿ ಸ್ಫೋಟಗೊಂಡು ಒಂದು ವರ್ಷಕ್ಕೂ ಹೆಚ್ಚಿನ ಅವಧಿ ನಡೆಯಿತು. ಕೊನೆಗೂ ಬ್ರಿಟಿಷ್ ಮಿಲಿಟರಿ ಸಹಾಯ ದಿಂದ 1831ರ ಮಾರ್ಚ್ 26 ರಂದು ನಗರ ಮತ್ತೆ ಮೈಸೂರಿನ ವಶಕ್ಕೆ ಬಂತು. ರೈತರ ಹೋರಾಟ ಮತ್ತೂ ಮುಂದುವರಿಯಿತು, ಆದರೆ ಈ ಹೊತ್ತಿಗೆ ಅವರ ಬಲ ಕ್ಷೀಣಿಸಿತ್ತು. ರಂಗಪ್ಪ ನಾಯಕ ಯುದ್ಧದಲ್ಲಿ ಹತನಾದನೆಂದೂ, ಬೂದಿ ಬಸಪ್ಪ ಹೈದರಾಬಾದ್ ಕಡೆ ತಪ್ಪಿಸಿ ಕೊಂಡು ಹೋದನೆಂದೂ ಸುದ್ದಿ ಹಬ್ಬಿತು. ಮೈಸೂರಿನ ದಾಖಲೆಗಳ ಪ್ರಕಾರ ಈ ಹೋರಾಟದಲ್ಲಿ ಒಟ್ಟು 164 ರೈತರನ್ನು ಗಲ್ಲಿಗೇರಿಸಲಾಗಿದೆ, ನಗರ ರೈತ ಸಂಗ್ರಾಮದ ಬಗ್ಗೆ ತನಿಖೆ ನಡೆಸಿದ ಸಮಿತಿಯು ಈ ಸಂಖ್ಯೆ 240 ಎಂದು ಹೇಳಿದೆ. ಹೋರಾಟದಲ್ಲಿ ಮಡಿದ ರೈತರ ಸಂಖ್ಯೆ 600 ರಿಂದ 700 ಇರಬಹುದು ಎಂದು ಗಣಿಸಲಾಗಿದೆ. ಈ ಘಟನಾವಳಿಗಳ ನಂತರ ಬ್ರಿಟಿಷರು ಮೈಸೂರನ್ನು ಸಂಪೂರ್ಣವಾಗಿ ತಮ್ಮ ತೆಕ್ಕೆಗೆ ತೆಗೆದುಕೊಂಡರು. 19 ನೇ ಅಕ್ಟೋಬರ್ 1831 ರಂದು ಮುಮ್ಮುಡಿ ಕೃಷ್ಣರಾಜೇಂದ್ರ ಒಡೆಯರ್ ಅಧಿಕಾರ ತ್ಯಾಗ ಮಾಡುವುದು ಅನಿವಾರ್ಯ ವಾಯಿತು. ಮುಂದಿನ 50 ವರ್ಷ ಮೈಸೂರು ಸಾಮ್ರಾಜ್ಯವನ್ನು ಆಂಗ್ಲರೇ ಆಳಿದರು.

ಈ ರೈತ ಬಂಡಾಯದ ಮುಖ್ಯ ಆರೋಪಿಗಳಲ್ಲಿ ಒಬ್ಬನಾದ ತರಿಕೆರೆಯ ಪಾಳೆಯಗಾರ ಸರ್ಜಪ್ಪ ನಾಯಕನಿಗೆ ಕೊಡಗಿನ ಅರಸ ಮಡಿಕೇರಿಯಲ್ಲಿ ಆಶ್ರಯ ನೀಡಿದ್ದ. ನಗರ ಹೋರಾಟಕ್ಕೆ ಚಿಕ್ಕವೀರರಾಜ ಸಂಪೂರ್ಣ ಬೆಂಬಲ ನೀಡಿದ್ದ ಎನ್ನಲಾಗಿದೆ. ಅದೇ ವೇಳೆಗೆ ಬೆಂಗಳೂರಿನ ಬ್ರಿಟಿಷ್ ದಂಡಿನಲ್ಲಿ ದಂಗೆಯೊಂದು ಸ್ಫೋಟಗೊಳ್ಳುವ ಸ್ಥಿತಿ ನಿರ್ಮಾಣವಾಯಿತು. ನೀವು ಬ್ರಿಟಿಷರ ವಿರುದ್ಧ ಆಯುಧಗಳನ್ನು ಎತ್ತಿಕೊಳ್ಳದಿದ್ದಲ್ಲಿ ನಾನು ರಮಝಾನ್ ಕೊನೆಯ ದಿನ ಈದ್ಗಾದಲ್ಲಿ ಸತ್ತ ಹಂದಿಯನ್ನು ಇಡುತ್ತೇನೆ ಎಂದು ಸೈನಿಕನೊಬ್ಬ ತುಂಬ ಜನ ಸೇರಿದ್ದಲ್ಲಿ ಪ್ರಚೋದನಾತ್ಮಕವಾಗಿ ಮಾತನಾಡುತ್ತಾನೆ. 

ಆತನ ಹೆಸರು ಉಸ್ಮಾನ್ ಬೇಗ್. ಬ್ರಿಟಿಷ್ ವಿರೋಧಿ ಹೋರಾಟಕ್ಕೆ ಉಳಿದ ಸೈನಿಕರಿಗೆ ಪ್ರೇರಣೆ ಕೊಟ್ಟ ಉಸ್ಮಾನ್ ಬೇಗ್ ತನ್ನ ಉದ್ದೇಶಕ್ಕೆ ಸೂಕ್ತ ಸ್ಪಂದನ ಸಿಗದಿದ್ದುದರಿಂದ ಸಾರ್ವಜನಿಕ ತಲೀಂ ಖಾನಾದಲ್ಲಿ 02-03-1832 ರಂದು ತನ್ನ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತಾನೆ. 04-03-1832 ರಂದು ಈದ್ಗಾದಲ್ಲಿ ಸತ್ತ ಹಂದಿಯನ್ನು ತಂದೆಸೆಯುತ್ತಾನೆ. ಅವನಿಗೆ ರಾಮನಗರ ನೇಪಾಳಿ ಗೂರ್ಖಾ ರಾಮಸಿಂಗ್ ಹಂದಿಯನ್ನು ಸರಬರಾಜು ಮಾಡಿರುತ್ತಾನೆ. ಅಬ್ಬಾಸ್ ಸಾಹೇಬ ಎಂಬಾತ ಉಸ್ಮಾನ್ ಬೇಗ್‌ಗೆ ಬೌದ್ಧಿಕ ಬೆಂಬಲ ನೀಡುತ್ತಾನೆ. ನಂತರ ಉಸ್ಮಾನ್ ಬೇಗ್ 08-03-1832 ರಂದು ತನ್ನ ರೆಜಿಮೆಂಟಿನಿಂದ ತಲೆತಪ್ಪಿಸಿಕೊಳ್ಳುತ್ತಾನೆ. ಕಂಟೋನ್ಮೆಂಟ್ ಕಾನ್ಸ್‌ಪಿರಸಿ ಎಂದು ಪ್ರಖ್ಯಾತವಾಗಿರುವ ಈ ಒಳಸಂಚಿನ ನಾಯಕ ಕೊನೆಗೂ 21-7-1832 ರಂದು ಸೆರೆಸಿಕ್ಕುತ್ತಾನೆ; ಅವನನ್ನು ಮರಣದಂಡನೆಗೆ ಈಡು ಮಾಡುತ್ತಾರೆ. ಇತ್ತ ತಲೆತಪ್ಪಿಸಿಕೊಂಡ ಅಬ್ಬಾಸ್ ಸಾಹೇಬ ಕೊಡಗಿನ ಚಿಕ್ಕ ವೀರರಾಜೇಂದ್ರ ಒಡೆಯನ ಆಶ್ರಯ ಪಡೆದುಕೊಳ್ಳುತ್ತಾನೆ. ಚಿಕ್ಕ ವೀರರಾಜೇಂದ್ರ ಒಡೆಯನು ಅಬ್ಬಾಸ್ ಸಾಹೇಬ ಅಥವಾ ಅಬ್ಬಾಸ್ ಅಲಿಯನ್ನು ರಾಜ ತನ್ನ ದಿವಾನನ್ನಾಗಿ ಸ್ವೀಕಾರ ಮಾಡಿದುದಂತೂ ವಿಶೇಷ ವಿಚಾರವಾಗಿದೆ. ಮಸೀದಿಯೊಂದರಲ್ಲಿ ಅಬ್ಬಾಸ್ ಅಲಿಗೆ ತಾನು ರಾಜದ್ರೋಹದ ಕೆಲಸ ಮಾಡುವುದಿಲ್ಲವೆಂದು ಪ್ರಮಾಣ ವಚನವನ್ನು ಬೋಧಿಸುತ್ತಾನೆ. ಆದರೆ ಅಬ್ಬಾಸ್ ಅಲಿ ಕೊಡಗಿನ ಆಡಳಿತಾತ್ಮಕ ವಿಷಯಗಳಲ್ಲಿ ಭಾಗಿಯಾದ ಬಗ್ಗೆ ಮಾಹಿತಿಗಳು ದೊರೆಯುವುದಿಲ್ಲ. ಅವನಿಗೆ ನೀಡಿದ್ದುದು ಆಲಂಕಾರಿಕ ಹುದ್ದೆಯಾಗಿರಬಹುದು.

ಕಂಟೋನ್ಮೆಂಟ್ ಪಿತೂರಿಯನ್ನು ನಡೆಸಲು ಕಾರಣನಾದವನೇ ಚಿಕ್ಕ ವೀರರಾಜ ಎಂದು ಬ್ರಿಟಿಷ್ ದಾಖಲೆಗಳು ಹೇಳುತ್ತವೆ. ಆ ಸಮಯದಲ್ಲಿ ಬಂಡುಕೋರರೊಂದಿಗೆ ಸಮರದಲ್ಲಿ ಭಾಗಿಯಾಗಲು ಕೊಡಗಿನ 400 ಮಂದಿ ಯೋಧರು ಮೈಸೂರಿನಲ್ಲಿ ಮತ್ತು 300 ಮಂದಿ ಯೋಧರು ಬೆಂಗಳೂರಿನಲ್ಲಿ ನಿಯೋಜಿಸಲ್ಪಟ್ಟಿರುತ್ತಾರೆ. ಮೈಸೂರಿನ ಗುಲಾಮ್ ಮುಹಮ್ಮದ್ ಖಾನನು ರಾಜನ ಕಾರ್ಯಯೋಜನೆಗೆ ಕೈಜೋಡಿಸಿದ್ದನು. ಇದೇ ವೇಳೆಗೆ ರಾಜ ದೂರದ ಪಂಜಾಬಿನ ರಣಜಿತ್ ಸಿಂಗ್, ಹೈದರಾಬಾದಿನ ನವಾಬ್ ಮುಖ್ತಾರ್ ಮೊದಲಾದವರ ಜೊತೆ ರಾಜತಾಂತ್ರಿಕ ಸಂಬಂಧವನ್ನು ಬೆಳೆಸಿದ್ದನು. ಗಂಜಂನ ಫಕ್ರುದ್ದೀನ್ ಎಂಬಾತ ಮಡಿಕೇರಿಯ ರಾಜನೊಂದಿಗೆ ಒಪ್ಪಂದವೊಂದಕ್ಕೆ ಭಾಗಿಯಾಗಿ 2,000 ಸಿಪಾಯಿಗಳನ್ನು ಕೊಡಗಿಗೆ ಕಳುಹಿಸಲು ಒಪ್ಪಿರುತ್ತಾನೆ.

ವಸ್ತುಶಃ 1834ರಲ್ಲಿ ಕೊಡಗಿನ ಹಾಲೇರಿ ವಂಶದ ಕೊನೆಯ ಅರಸ ಚಿಕ್ಕ ವೀರರಾಜ ಒಡೆಯ ಪದಚ್ಯುತಿಗೊಳ್ಳಲು ಹಲವು ಕಾರಣಗಳು ಏಕಕಾಲದಲ್ಲಿ ಕೆಲಸ ಮಾಡಿವೆ. 1832 ರಲ್ಲಿ ಅರಸನ ಮಲಸಹೋದರಿ ದೇವಮ್ಮಾಜಿಯ ಗಂಡ ಚೆನ್ನಬಸಪ್ಪ, ಆತನ ಅಣ್ಣ ಮುದ್ದಯ್ಯ, ತಕ್ಕಮುಖ್ಯಸ್ಥ ಬೋಪಣ್ಣ ಮುಂತಾದವರು ಸೇರಿ ಅರಸನನ್ನು ಪಟ್ಟದಿಂದ ಕೆಳಗಿಳಿಸಲು ಸಂಚು ಮಾಡಿದರು. ಇದರ ವಿಚಾರ ರಾಜನ ಗಮನಕ್ಕೆ ಬಂದದ್ದು ಗೊತ್ತಾಗಿ, ಇನ್ನು ತಮಗೆ ಉಳಿಗಾಲವಿಲ್ಲ, ಆತ ತಮ್ಮನ್ನು ಕೊಲ್ಲಿಸಬಹುದೆಂದು ಹೆದರಿ ದೇವಮ್ಮಾಜಿ ಮತ್ತು ಆಕೆಯ ಗಂಡ ಚೆನ್ನಬಸಪ್ಪ ಮೈಸೂರಿಗೆ ಪಲಾಯನ ಮಾಡಿ ಬ್ರಿಟಿಷರ ಆಶ್ರಯ ಕೋರುತ್ತಾರೆ. ಚಿಕ್ಕ ವೀರರಾಜನ ಕ್ರೌರ್ಯಕ್ಕೆ ಹೆದರಿ ಪ್ರಾಣಭೀತಿಯಿಂದ ತಾವು ಕೊಡಗಿನಿಂದ ತಪ್ಪಿಸಿಕೊಂಡು ಬಂದುದಾಗಿ ಅವರಿಬ್ಬರೂ ಹೇಳುತ್ತಾರೆ. 

ಕೊಡಗನ್ನು ಆಕ್ರಮಿಸಿ ರಾಜ್ಯಾಡಳಿತವನ್ನು ತಮಗೆ ದೊರಕಿಸಿಕೊಟ್ಟರೆ ಜೀವನಪರ್ಯಂತ ಬ್ರಿಟಿಷರಿಗೆ ಅಧೀನರಾಗಿರುವುದಾಗಿ ಅವರು ಪ್ರಾರ್ಥಿಸುತ್ತಾರೆ. ರಾಜಕುಟುಂಬದ ಆಂತರಿಕ ಕಲಹ ಇಂಗ್ಲಿಷರಿಗೆ ಅಯಾಚಿತವಾಗಿ ಒದಗಿ ಬಂದ ವರವಾಯಿತು. ದೊಡ್ಡವೀರರಾಜೇಂದ್ರ ಮತ್ತು ಲಿಂಗರಾಜೇಂದ್ರ ಒಡೆಯರ ಸಮಯದಲ್ಲಿ ಕೊಡಗಿಗೂ ಆಂಗ್ಲರಿಗೂ ಇದ್ದ ಅನ್ಯೋನ್ಯ ಸಂಬಂಧ ನಿಧಾನವಾಗಿ ತೆಳುವಾಗುತ್ತಾ ಬಂದಿತ್ತು. ದಾಸ್ಯಕ್ಕೆ ಒಗ್ಗದ ಚಿಕ್ಕ ವೀರರಾಜನ ಮನೋಭಾವ ಸಹ ಇದಕ್ಕೆ ಕಾರಣವಿರಬಹುದು. ಬ್ರಿಟಿಷರ ವಿಸ್ತರಣಾ ನೀತಿ ಈತನ ಗಮನದಲ್ಲಿತ್ತು. ದೇವಮ್ಮಾಜಿಯ ವಿಷಯಕ್ಕೆ ಸಂಬಂಧಿಸಿದಂತೆ ಬ್ರಿಟಿಷರ ಮತ್ತು ಅರಸನ ಮಧ್ಯೆ ಸುದೀರ್ಘ ಪತ್ರವ್ಯವಹಾರಗಳು ನಡೆಯುತ್ತವೆ. 

ಚಿಕ್ಕ ವೀರರಾಜ ಹಾಗೂ ಬ್ರಿಟಿಷರ ನಡುವೆ ನಡೆದ ಸಂಧಾನದ ಪ್ರಯತ್ನಗಳಲ್ಲಿ ಆಂಗ್ಲರ ಪರ ವಕೀಲನಾಗಿ ಶಿರಸ್ತೇದಾರರ ಕಲ್ಪುಳ್ಳಿ ಕರುಣಾಕರ್ ಮೆನನ್ ಮಡಿಕೇರಿಗೆ ಭೇಟಿ ನೀಡುತ್ತಾನೆ. ಅವನ ಪ್ರಕಾರ ಚಿಕ್ಕ ವೀರರಾಜನಿಗೆ ತನ್ನ ಪಟ್ಟದ ರಾಣಿಯ ಮೂಲಕ ಗಂಡು ಮಕ್ಕಳಿಲ್ಲದ ಕಾರಣ ದೇವಮ್ಮಾಜಿ ಮತ್ತು ಚೆನ್ನಬಸಪ್ಪ ಕೊಡಗಿನ ಸಿಂಹಾಸನಕ್ಕೆ ತಮ್ಮ ಮಗ ಉತ್ತರಾಧಿಕಾರಿಯಾಗಬೇಕೆಂದು ಒತ್ತಾಯವನ್ನು ಹೇರಿರುತ್ತಾರೆ. ಈ ಬಗ್ಗೆ ರಾಜಕುಟುಂಬದ ಆಪ್ತವಲಯದಲ್ಲಿ ಜನಾಭಿಪ್ರಾಯ ಮೂಡಿಸುವ ಪ್ರಯತ್ನವೂ ನಡೆದಿರುವ ಸಾಧ್ಯತೆಯಿದೆ. 

ಈ ಸಮಯದಲ್ಲಿ ರಾಜ ತನ್ನ ಹಲವು ಸಂಬಂಧಿಕರ ಹತ್ಯೆ ನಡೆಸುತ್ತಾನೆ. ಅಧಿಕಾರವನ್ನು ಉಳಿಸಿಕೊಳ್ಳುವ ಉದ್ದೇಶಕ್ಕೆ ಮುದ್ದಯ್ಯ ಮತ್ತು ಇತರ 40 ಆರೋಪಿಗಳನ್ನು ಮರಣದಂಡನೆಗೆ ಒಳಪಡಿಸುತ್ತಾನೆ. ತನ್ನ ಸಹೋದರಿಯ ವಿಕ್ಷಿಪ್ತ ಕೋರಿಕೆಯಿಂದ ರಾಜ ಮನೋಕ್ಷೋಭೆಗೆ ಒಳಗಾಗಿದ್ದರೆ ಅದೇನೂ ಅಸಹಜವಲ್ಲ. ಆಡಳಿತ, ಕಾನೂನು ಮತ್ತು ಕ್ರೌರ್ಯಕ್ಕೆ ಸಂಬಂಧಿಸಿದ ಇಂದಿನ ಪರಿಕಲ್ಪನೆಗಳನ್ನು ಆ ದಿನಗಳಿಗೆ ಅನ್ವಯಿಸುವುದು ತೀರಾ ಸೂಕ್ತವಾಗಲಾರದು. ಅಂದಿನ ಕಾಲಘಟ್ಟದ ನಿರಂಕುಶ ರಾಜಪ್ರಭುತ್ವ ಪ್ರಶ್ನಾತೀತ ಮತ್ತು ಸರ್ವಮಾನ್ಯವಾಗಿದ್ದುದು ನಮಗೆ ತಿಳಿದಿದೆ. ಅಂದಿನ ಸಂದರ್ಭದಲ್ಲಿ ಚಿಕ್ಕ ವೀರರಾಜ ತನ್ನವರೆಂದು ಭಾವಿಸುವವರಲ್ಲಿ ಯಾರನ್ನು ನಂಬುವುದೆಂಬ ಸಂದಿಗ್ಧ ಮನಃಸ್ಥಿತಿಯಲ್ಲಿ ಸಿಲುಕಿಕೊಂಡಿದ್ದ. ಕೊನೆಕೊನೆಗೆ ರಾಜ ತನ್ನ ಅಂಗರಕ್ಷಕ ಪಡೆಯನ್ನೇ ಬದಲಿಸಿದ. ತನ್ನಸ್ವಯಂರಕ್ಷಣೆಗಾಗಿ ವೈನಾಡಿನಿಂದ ಮುಸ್ಲಿಮ್ ಯೋಧರನ್ನು ಬರಮಾಡಿ ಜತೆಯಲ್ಲೇ ಇಟ್ಟುಕೊಂಡಿದ್ದ.

1833ರ ಕೊನೆಯಲ್ಲಿ ಹಾಗೂ 1834 ರ ಆದಿಭಾಗದಲ್ಲಿ ಕೊಡಗು ರಾಜಕೀಯ ಒತ್ತಡದ ಕುಲುಮೆಯಾಗಿತ್ತು. ಬ್ರಿಟಿಷರ ಆಕ್ರಮಣದ ನಿರೀಕ್ಷೆಯಿಂದ ಅತ್ಯುಗ್ರ ಪ್ರತಿರೋಧಕ್ಕಾಗಿ ಸಕಲ ಸಿದ್ಧತೆಯೂ ನಡೆದಿತ್ತು. ಕೊನೆಗೂ 01-04-1834 ರಂದು ಬ್ರಿಟಿಷರು ಅಧಿಕೃತವಾಗಿ ಯುದ್ಧ ಘೋಷಣೆ ಮಾಡುತ್ತಾರೆ. ಮೂರು ದಿಕ್ಕುಗಳಿಂದ ಏಕಕಾಲದಲ್ಲಿ ಆಕ್ರಮಣ ನಡೆಸಲಾಗುತ್ತದೆ. ಆದರೆ ಇಂಗ್ಲಿಷರ ಸೈನ್ಯ ಎಲ್ಲೆಡೆ ತೀವ್ರವಾದ ಹಿನ್ನಡೆಯನ್ನು ಅನುಭವಿಸುತ್ತದೆ. 04-04-1834 ರಂದು ಸಾಯಂಕಾಲ ದಿವಾನ ಲಕ್ಷ್ಮೀನಾರಾಯಣ ಮತ್ತು ರಾಜನ ಆಪ್ತನಾದ ತಾಹಿರ್ ಖಾನ್ ನಾಲ್ವರು ಸಂಗಡಿಗರೊಂದಿಗೆ ಶಾಂತಿಯ ಬಾವುಟವನ್ನು ಅರಳಿಸಿ ಕರ್ನಲ್ ಜೆ.ಜೆ. ಫ್ರೇಜರ್‌ನ ಮಕ್ಕಂದೂರಿನ ಶಿಬಿರಕ್ಕೆ ತೆರಳುತ್ತಾರೆ. 

ಸಂಧಾನದ ಪ್ರಕ್ರಿಯೆಯನ್ನು ಆರಂಭಿಸುವ ಸೂಚನೆಯೆಂಬಂತೆ ರಾಜ ಬರೆದ ಪತ್ರವನ್ನು ಅವರು ಫ್ರೇಜರನಿಗೆ ತಲುಪಿಸುತ್ತಾರೆ. ವ್ಯತಿರಿಕ್ತವಾಗಿ 04-04-1834 ರಂದು ರಾಜನ ಪತ್ರಕ್ಕೆ ಉತ್ತರಿಸಿದ ಫ್ರೇಜರ್ ಶರಣಾಗಲು ಸೂಚಿಸುತ್ತಾನೆ. ಅದಕ್ಕೆ ಒಪ್ಪದ ಅರಸ ಅದೇ ದಿನ ಮತ್ತೊಂದು ಪತ್ರವನ್ನು ಬರೆದು ತನ್ನ ವಕೀಲರಾದ ಅಬ್ದುಲ್ಲ ಮತ್ತು ಲತೀಫ್ ಖಾನ್ ಮೂಲಕ ಫ್ರೇಜರ್‌ನಿಗೆ ಕಳುಹಿಸುತ್ತಾನೆ. ಅಲ್ಲದೆ ತಾನು ವಶಕ್ಕೆ ಬ್ರಿಟಿಷರ ವಕೀಲ ಕಲ್ಪುಳ್ಳಿ ಕರುಣಾಕರ ಮೆನನ್‌ನನ್ನು ಬಿಡುಗಡೆ ಮಾಡಿ ಫ್ರೇಜರ್‌ನ ಶಿಬಿರಕ್ಕೆ ಕಳುಹಿಸಿ ಬ್ರಿಟಿಷರೊಂದಿಗೆ ಸಂಧಿ ಮಾಡಿಕೊಳ್ಳುವ ಸಂದೇಶವನ್ನು ರವಾನಿಸುತ್ತಾನೆ. 

ಈ ಪತ್ರ 05-04-1834 ರಂದು ಫ್ರೇಜರ್ ನಿಗೆ ತಲುಪುವ ಹೊತ್ತಿಗೆ ಅತ್ಯಂತ ನಾಟಕೀಯವಾಗಿ ದಿವಾನ ಅಪ್ಪಾರಂಡ ಬೋಪು ಸುಮಾರು 300 ರಿಂದ 400 ರಷ್ಟಿದ್ದ ಸೈನಿಕ ಪಡೆಯೊಂದಿಗೆ ಆಗ ಫ್ರೇಜರ್ ತಂಗಿದ್ದ ಜಂಬೂರಿನ ಶಿಬಿರಕ್ಕೆ ತೆರಳಿ ಬೇಷರತ್ತಾಗಿ ಶರಣಾಗುತ್ತಾನೆ. ಇದೇ ಹೊತ್ತಿಗೆ ವಿವಿಧ ಗಡಿಗಳಲ್ಲಿ ಯುದ್ಧದಲ್ಲಿ ನಿರತರಾಗಿದ್ದ ಸೈನಿಕರಿಗೆ ಹೋರಾಟವನ್ನು ನಿಲ್ಲಿಸಲು ಆದೇಶ ರವಾನೆ ಮಾಡಿರುತ್ತಾನೆ. ಈ ರಾಜದ್ರೋಹಿಯ ಪಿತೂರಿಗೆ ಬಲಿಯಾದ ಮಡಿಕೇರಿ ಪತನವಾಗುತ್ತದೆ, ರಾಜ ಪದವಿಭ್ರಷ್ಟ, ರಾಜ್ಯಭ್ರಷ್ಟನಾಗುತ್ತಾನೆ. ಆದರೆ ರಾಜನ ಎಲ್ಲ ದುರ್ಭರ ಸಂದರ್ಭಗಳಲ್ಲೂ ಆತನ ನಂಬಿಕೆಯ ಮುಸ್ಲಿಮ್ ಬಳಗ ಆತನ ಒಳಿತನ್ನೇ ಬಯಸಿ ಜೊತೆಗೇ ಇತ್ತು.

ಮುಂದೆ ಬ್ರಿಟಿಷ್ ಬೆಂಬಲಿಗರಾದ ಭಾರತೀಯ ಬರಹಗಾರರು, ಇತಿಹಾಸಕಾರರು ಅತ್ಯಂತ ಶ್ರದ್ಧೆಯಿಂದ ಚಿಕ್ಕ ವೀರರಾಜನ ವ್ಯಕ್ತಿತ್ವವನ್ನು ಹರಿದು ಹಂಚಿಹಾಕಿದ್ದಾರೆ. ಅವನನ್ನು ಕೊಡಗಿನ ಸಾಮಾಜಿಕ ವಲಯದಿಂದ ದೂರ ತಳ್ಳಿದ್ದಾರೆ. ಆತನನ್ನು ಮಾತ್ರವಲ್ಲ, ಸಂಪೂರ್ಣ ಹಾಲೇರಿ ಅರಸೊತ್ತಿಗೆಯೇ ಇವರ ವಕ್ರದೃಷ್ಟಿಗೆ ಒಳಗಾಗಿದೆ. ಒಂದೆಡೆ ರಾಜರು ನೀಡಿದ ಜಮ್ಮಾ ಭೂಮಿ, ಶಸ್ತ್ರಾಸ್ತ್ರ, ಉಡುಪುಗಳನ್ನು ನಮ್ಮ ಸಂಸ್ಕೃತಿಯೆಂದು ಹೆಮ್ಮೆಯಿಂದ ಹೇಳಿ ಬೀಗುವ ನಾವು ಅದೆಲ್ಲ ಹಾಲೇರಿ ರಾಜರು ನಮಗೆ ನೀಡಿದ ಕೊಡುಗೆಗಳೆಂಬುದನ್ನು ಮರೆತಿದ್ದೇವೆ. ಜೊತೆಗೆ ಮುಸ್ಲಿಮರಿಗೂ ಕೊಡಗಿನ ಎಲ್ಲ ಸಮುದಾಯಗಳಿಗೂ ಇದ್ದ ಸುದೀರ್ಘವಾದ ಆಂತರಿಕ ಸಂಬಂಧವನ್ನು ಇಂದಿನ ರಾಜಕೀಯ ಉದ್ದೇಶಕ್ಕಾಗಿ ಮರೆತುಬಿಟ್ಟಿದ್ದೇವೆ. ಒಂದೊಮ್ಮೆ ತಮ್ಮ ಇಚ್ಛೆಗೆ ವಿರುದ್ಧವಾಗಿ ಮತಾಂತರಗೊಂಡ ದುರಂತದ ಕಾರಣದಿಂದ ನಮ್ಮಿಂದ ಸಾಮಾಜಿಕವಾಗಿ ದೂರವೇ ಉಳಿದುಹೋದ ನಮ್ಮ ಸಹೋದರರನ್ನೇ ನಾವು ಗುರುತಿಸದೆ ಹೋಗಿದ್ದೇವೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top