-

ಬುದ್ಧಿಜೀವಿಗಳು ಮತ್ತು ಬರಹಗಾರರು

-

ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪನ ವೃತ್ತಿ ಆರಂಭಿಸಿದ ಕೆ.ವಿ. ನಾರಾಯಣ ಅವರು ಜಿ.ಎಸ್.ಎಸ್. ಮಾರ್ಗದರ್ಶನದಲ್ಲಿ ಆನಂದವರ್ಧನನ ‘ಧ್ವನ್ಯಾಲೋಕ’ವನ್ನು ಅಧ್ಯಯನ ಮಾಡಿ ಪಿಎಚ್. ಡಿ. ಪದವಿ ಪಡೆದರು. ಸಾಹಿತ್ಯ ವಿಮರ್ಶಕರಾಗಿ, ಭಾಷಾವಿಜ್ಞಾನಿಯಾಗಿ, ಕನ್ನಡ ಸಂಸ್ಕೃತಿ ಚಿಂತಕರಾಗಿ ಗುರುತಿಸಿಕೊಂಡಿರುವ ಕೆ.ವಿ.ಎನ್ ಅವರ ಈವರೆಗಿನ ಹೆಚ್ಚಿನ ಬರಹಗಳು ‘ತೊಂಡು ಮೇವು’ ಎಂಬ ತಲೆ ಬರಹದಲ್ಲಿ 10 ಸಂಪುಟಗಳಲ್ಲಿ ಪ್ರಕಟವಾಗಿವೆ. ಇವರ ಇತ್ತೀಚಿನ ಕೃತಿ ಜೀನ್ ಪಾಲ್ ಸಾರ್ತ್ರ್ ಅವರ ‘ಬುದ್ಧಿಜೀವಿ ಬಿಕ್ಕಟ್ಟುಗಳು’.

ಡಾ. ಕೆ.ವಿ. ನಾರಾಯಣ

ಈ ಸಂಬಂಧವನ್ನು ಹಲವು ನೆಲೆಗಳಲ್ಲಿ ಚರ್ಚಿಸಲು ಸಾಧ್ಯ. ಎಲ್ಲ ಕಾಲದೇಶಗಳನ್ನೂ ಒಳಗೊಂಡಂತೆ ಚಿಂತಿಸುವುದು ಒಂದು ದಾರಿ. ಹೆಚ್ಚು ತಾತ್ವಿಕ ನೆಲೆಗಳಲ್ಲಿ ಇಂತಹ ಚರ್ಚೆಗಳು ಸಾಗುತ್ತವೆ. ನಮ್ಮ ಕಾಲಕ್ಕೆ ನಮ್ಮ ಪರಿಸರಕ್ಕೆ ಹೊಂದುವಂತೆ ಚರ್ಚಿಸುವುದು ಇನ್ನೊಂದು ದಾರಿ. ಈ ಬರಹದಲ್ಲಿ ಎರಡನೆಯ ದಾರಿಯನ್ನು ಹಿಡಿಯುವುದು ಸರಿ ಎಂದು ತಿಳಿದಿದ್ದೇನೆ. ಅಲ್ಲಲ್ಲಿ ಇನ್ನೊಂದು ದಾರಿಗೂ ಹೊರಳುವ ಅವಕಾಶವನ್ನು ಕಾಯ್ದಿರಿಸಿಕೊಂಡಿರುವೆ.

ಎರಡು ಬಗೆಯ ಬುದ್ಧಿಜೀವಿಗಳಿರುತ್ತಾರೆ. ಯಾವುದೇ ಸಂಗತಿಯನ್ನಾದರೂ ವಿಶ್ಲೇಷಿಸಿ, ಜನಹಿತಕ್ಕೆ ತಕ್ಕಂತೆ ಸರಿಯಾದುದು ಯಾವುದು ಎಂಬುದನ್ನು ತಿಳಿಯ ಹೇಳುವ ಹೊಣೆಯನ್ನು ಹೊತ್ತವರು ಒಂದು ಬಗೆ. ಇವರು ಅಧಿಕಾರ ಕೇಂದ್ರಗಳ ಜೊತೆ, ತಮ್ಮಂತೆ ಚಿಂತಿಸುವವರ ಜೊತೆ ಮತ್ತು ಜನರ ಜೊತೆ ? ಹೀಗೆ ಯಾವುದಾದರೊಂದು ನೆಲೆಯಲ್ಲಿ ಮಾತಾಡುವ ದಾರಿಯನ್ನು ಹಿಡಿಯುತ್ತಾರೆ. ನಮ್ಮ ಸುತ್ತಣ ಸಮಾಜದಲ್ಲಿ ಇವರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ. ಇವರಲ್ಲಿ ಕೆಲವರು ತಮ್ಮ ಸಾಮಾಜಿಕ ಹೊಣೆಯನ್ನು ಅರಿತು ಕೊಂಡವರು; ಮತ್ತೆ ಕೆಲವರನ್ನು ಮಾಧ್ಯಮಗಳು ಹುಟ್ಟಿ ಹಾಕುತ್ತವೆ; ಮತ್ತೂ ಕೆಲವರನ್ನು ಅಧಿಕಾರ ಕೇಂದ್ರಗಳೇ ನಿಯೋಜಿಸುತ್ತವೆ. 

ಇನ್ನೂ ಒಂದು ಬಗೆಯ ಬುದ್ಧಿಜೀವಿಗಳು ಇರುತ್ತಾರೆ. ಇವರು ತಮ್ಮ ನಂಬಿಕೆ ಮತ್ತು ಆಚರಣೆಗಳ ನಡುವೆ ತುಂಬಲಾರದ ಬಿರುಕು ಇರುವುದನ್ನು ಕಂಡುಕೊಂಡವರು. ಇವರು ಬೇರೆ ಬೇರೆ ವಲಯಗಳಲ್ಲಿ ಪರಿಣತರಾಗಿರುತ್ತಾರೆ. ತಮ್ಮ ಪರಿಣತಿಯನ್ನು ಬಳಸಿ ಸಮಾಜಕ್ಕೆ ಅಗತ್ಯವಾದ ಕೆಲಸಗಳನ್ನು ಮಾಡುತ್ತಿರುತ್ತಾರೆ.ವೈದ್ಯರು, ವಿಜ್ಞಾನಿಗಳು, ತಂತ್ರಜ್ಞರು, ಶಿಕ್ಷಕರು, ವಕೀಲರು ಇವರೆಲ್ಲ ಈ ಗುಂಪಿನಲ್ಲಿ ಸೇರುತ್ತಾರೆ. ತಮಗಿರುವ ಪರಿಣತಿಗಾಗಿ ಹಲವು ವರುಷಗಳ ಕಾಲ ವಿದ್ಯಾಭ್ಯಾಸವನ್ನು ಮಾಡಿರುತ್ತಾರೆ; ತರಬೇತಿಯನ್ನೂ ಪಡೆದಿರುತ್ತಾರೆ. ಇವರು ತಮ್ಮ ಬೌದ್ಧಿಕ ಶ್ರಮವನ್ನು ಬಳಸುತ್ತಾರಾದರೂ ಆ ಬಳಕೆಯ ಫಲಿತವಾಗಿ ಮೂರ್ತವಾದುದು ಏನೂ ಉತ್ಪಾದನೆಯಾಗುವುದಿಲ್ಲ. ರೈತ, ಬಡಗಿ, ನೇಯ್ಗೆಯವರು, ಕುಂಬಾರ ಇವರೆಲ್ಲ ತಮ್ಮ ಶ್ರಮದ ಫಲವಾಗಿ ಮೂರ್ತವಾದುದನ್ನು ಉತ್ಪಾದಿಸಿದಂತೆ ಈ ಬುದ್ಧಿಜೀವಿಗಳು ಏನನ್ನೂ ಉತ್ಪಾದಿಸುವುದಿಲ್ಲ. 

ಇವರು ತಮ್ಮ ಕಲಿಕೆಯ ಭಾಗವಾಗಿ ಕೆಲವು ಮೌಲ್ಯಗಳನ್ನು ಪಡೆದುಕೊಂಡಿರುತ್ತಾರೆ. ಅದರಂತೆ ಅವರ ಪರಿಣತಿಯು ಕಾಲದೇಶಮುಕ್ತವಾದುದು. ಅಂದರೆ ತಮ್ಮ ಪರಿಣತಿಯನ್ನು ಎಲ್ಲಿ ಬೇಕಾದರೂ ಎಲ್ಲರಿಗೂ ಅನುಕೂಲವಾಗುವಂತೆ ಬಳಸಲು ಸಾಧ್ಯವಿರುತ್ತದೆ ಎಂದು ನಂಬಿರುತ್ತಾರೆ. ಆದರೆ ತಮ್ಮ ದುಡಿಮೆಯ ಸಂದರ್ಭದಲ್ಲಿ ತಾವು ಪಡೆದಿರುವ ಪರಿಣತಿಯು ಎಲ್ಲರಿಗೂ ದೊರೆಯುವುದು ಸಾಧ್ಯವಿಲ್ಲ; ಕೆಲವು ಆಯ್ದವರಿಗೆ ಮಾತ್ರ ದೊರೆಯುತ್ತಿದೆ ಎಂಬುದನ್ನು ಅರಿತುಕೊಳ್ಳುತ್ತಾರೆ. ಆಸ್ಪತ್ರೆ, ಕೋರ್ಟು, ಶಾಲೆ ಕಾಲೇಜುಗಳು, ಉದ್ದಿಮೆಗಳು ನಿರಂತರವಾಗಿ ಆಯ್ಕೆ ಮತ್ತು ನಿರಾಕರಣೆಯ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ಗ್ರಹಿಸುತ್ತಾರೆ. ಅಂದರೆ ಅವರ ನಂಬಿಕೆಯ ಜಗತ್ತು ಮತ್ತು ಆಚರಣೆಯ ನೆಲೆಗಳ ನಡುವೆ ಕಂದಕ ಉಂಟಾಗುವುದನ್ನು ಕಾಣುತ್ತಿರುತ್ತಾರೆ. ಈ ಅರಿವು ಮೊದಲ ಬಗೆಯ ಬುದ್ಧಿಜೀವಿಗಳಿಗೆ ಒದಗಿಬರುವುದು ಅನಿವಾರ್ಯವಲ್ಲ. ಎರಡನೆಯ ಬಗೆಯವರಿಗೆ ಇದರಿಂದ ಬಿಡುಗಡೆ ಇಲ್ಲ.

ನಮ್ಮ ಸುತ್ತಮುತ್ತ ಇರುವ ಬುದ್ಧಿಜೀವಿಗಳಲ್ಲಿ ಬಹುಪಾಲು ಮೊದಲಿನ ಬಗೆಯವರು. ತಮ್ಮ ಪರಿಣತಿಯ ವಲಯವನ್ನು ದಾಟಿ ಒಟ್ಟಾರೆಯಾಗಿ ಸಾಮಾಜಿಕ ಸನ್ನಿವೇಶವನ್ನು ತಮ್ಮ ಪರಿಶೀಲನೆಯ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗುವವರು. ಹೀಗೆ ತಾವು ಪರಿಣತರಲ್ಲದ ವಿಷಯಗಳಲ್ಲಿ ತಜ್ಞ ನಿಲುವನ್ನು ತಳೆಯುವುದಕ್ಕೆ ತಕ್ಕ ಸಮರ್ಥನೆಯನ್ನು ಅವರು ನೀಡಬಲ್ಲರು. ತಾವು ತಳೆಯುವ ನಿಲುವುಗಳ ಹಿಂದೆ ‘ಎಲ್ಲರ ಒಳಿತಿನ’ ಆಶಯ ಇರುವುದು ಎಂಬುದೇ ಆ ಸಮರ್ಥನೆ. ಉದಾಹರಣೆಗೆ ಎಲ್ಲರಿಗೂ ನಾಗರಿಕ ಸೌಲಭ್ಯಗಳು ಒದಗಬೇಕು ಎಂದು ತಿಳಿಯಲು ಮತ್ತು ಅದರ ಪರವಾಗಿ ವಾದಿಸಲು ಯಾವ ಪರಿಣತಿಯೂ ಬೇಕಿಲ್ಲ ತಾನೇ. ಹಾಗಾಗಿ ಯಾವುದೇ ನಡಾವಳಿ ಹೀಗೆ ಸೌಲಭ್ಯಗಳು ಎಲ್ಲರಿಗೂ ಒದಗುವುದಕ್ಕೆ ಅಡ್ಡಿಯಾಗುತ್ತಿದೆ ಎಂದು ತಿಳಿದಾಗ ಆ ನಡಾವಳಿಯ ವಿರುದ್ಧ ನಿಲುವು ತಳೆಯುವುದು ತಮ್ಮ ಹೊಣೆಗಾರಿಕೆ ಎಂದು ಈ ಬುದ್ಧಿಜೀವಿಗಳು ವಾದಿಸುತ್ತಾರೆ. ಇದು ಸರಿ.

ಸಮಸ್ಯೆ ಮೊದಲಾಗುವುದು ಇಲ್ಲಿಂದಲೇ. ಸಾಮಾಜಿಕವಾಗಿ ಮಂಡಿತವಾದ ಇಲ್ಲವೇ ಜಾರಿಗೆ ಬಂದ ನಡಾವಳಿಯೊಂದು ಎಲ್ಲರ ಒಳಿತಿಗಾಗಿ ಇಲ್ಲವೆಂದು ತಿಳಿಸುವುದು ಒಂದು ನೆಲೆ. ಏಕೆ ಆ ನಡಾವಳಿ ಯುಕ್ತವಲ್ಲ ಎಂದು ತಿಳಿಸುವಾಗ ಬಹುಮಟ್ಟಿಗೆ ನಮ್ಮ ಬುದ್ಧಿಜೀವಿಗಳು ಒಂದೋ ನೈತಿಕ ನೆಲೆಯಲ್ಲಿ ನಿಂತಿರುತ್ತಾರೆ ಇಲ್ಲವೇ ವಿಶ್ವಾತ್ಮಕವಾದ ಅಮೂರ್ತ ನೆಲೆಯನ್ನು ನೆಮ್ಮಿರುತ್ತಾರೆ. ಇಲ್ಲವೇ ಶುದ್ಧ ತರ್ಕವನ್ನು ಅವಲಂಬಿಸಿ ತಮ್ಮ ನಿಲುವನ್ನು ಮಂಡಿಸುತ್ತಿರುತ್ತಾರೆ. ಇದು ಸರಿಯಾದ ದಾರಿಯಲ್ಲ ಎಂದು ವಾದಿಸಲು ಬರುವುದಿಲ್ಲ. 

ಆದರೆ ಎಲ್ಲರ ಒಳಿತು ಎಂದೂ ಸಾಧ್ಯವಾಗಬಾರದು ಎಂಬುದನ್ನೇ ತನ್ನ ಗುರಿಯನ್ನಾಗಿ ಹೊಂದಿರುವ ವ್ಯವಸ್ಥೆಯಲ್ಲಿ ನಾವಿದ್ದೇವೆ. ಹೀಗಿರುವಾಗ ಅಧಿಕಾರ ಕೇಂದ್ರದ ಒಂದು ನಡಾವಳಿ ಎಲ್ಲರ ಒಳಿತಿನ ವಿರುದ್ಧವಾಗಿದೆ ಎಂದು ಎತ್ತಿ ತೋರಿಸುವುದರಿಂದ ಯಾವ ಬದಲಾವಣೆಯನ್ನೂ ತರುವುದು ಅಸಾಧ್ಯ. ಅಂದರೆ ಬುದ್ಧಿಜೀವಿಗಳು ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಿದ ತೃಪ್ತಿಯನ್ನು ಪಡೆಯಬಹುದು. ಅದರಾಚೆಗೆ ಏನೂ ಸಂಭವಿಸುವುದಿಲ್ಲ.

ಈ ಸನ್ನಿವೇಶ ಇನ್ನೂ ಜಟಿಲಗೊಳ್ಳುತ್ತಿರುವುದನ್ನು ಕಳೆದ ಕೆಲವು ದಶಕಗಳಿಂದ ನೋಡುತ್ತಿದ್ದೇವೆ. ಇದಕ್ಕೆ ಕಾರಣಗಳು ಕೆಲವಿವೆ. ಅಧಿಕಾರ ಕೇಂದ್ರಗಳು ತಮ್ಮ ನಡೆಯನ್ನು ಸಮರ್ಥಿಸುವ ಸಂಕಥನವನ್ನು ಕಟ್ಟುವ ಪಡೆಯೊಂದನ್ನು ರೂಪಿಸಿಕೊಂಡಿರುತ್ತದೆ. ಈ ಪಡೆಯಲ್ಲಿ ಕೆಲವರು ಸ್ವಂತ ಆಯ್ಕೆಯಿಂದ ಅಲ್ಲಿ ಸೇರಿರಬಹುದು; ಮತ್ತೆ ಕೆಲವರು ನಿಯೋಜಿತರೂ ಆಗಿರಬಹುದು. 

ಇವರು ನಾವು ಬುದ್ಧಿಜೀವಿಗಳೆಂದು ಮಾನ್ಯ ಮಾಡಿದವರು ಮಂಡಿಸುವ ಚಿಂತನಾಕ್ರಮಕ್ಕೆ ಎದುರಾಗಿ ಒಂದು ಸಂಕಥನವನ್ನು ಕಟ್ಟುತ್ತಿರುತ್ತಾರೆ. ಎರಡು ಪರಸ್ಪರ ವಿರುದ್ಧವಾದ ಸಂಕಥನಗಳ ನಡುವೆ ‘ದಿಟ’ ಎನ್ನುವುದು ಗೈರುಹಾಜರಾಗಿ ಬಿಡುತ್ತದೆ. ಸದ್ಯ ನಮ್ಮ ಸುತ್ತ ಮಾಧ್ಯಮಗಳು ನಿರ್ಮಿಸುತ್ತಿರುವ ಸನ್ನಿವೇಶಗಳನ್ನು ಗಮನಿಸಿದರೆ ಈ ಸಂಗತಿ ಗೋಚರಿಸುತ್ತದೆ.

ಬುದ್ಧಿಜೀವಿಗಳು ಅಧಿಕಾರ ಕೇಂದ್ರಗಳ ಮುಖಕ್ಕೆ ರಾಚುವಂತೆ ಸತ್ಯವನ್ನು ತೆರೆದಿಡಬೇಕು ಎಂಬ ಮಾತನ್ನು ಕೇಳುತ್ತಿರುತ್ತೇವೆ. ಹೀಗೆ ಅಧಿಕಾರ ಕೇಂದ್ರಗಳಿಗೆ ಮುಖ ಮಾಡಿ ಮಾತನಾಡುವುದು ನಿರುಪಯುಕ್ತವೆಂಬ ಮಾತನ್ನು ನೋಮ್ ಚಾಮ್ಸ್ಕಿಯೇ ಮೊದಲಾಗಿ ಹಲವು ಜಾಗತಿಕ ನೆಲೆಯ ಚಿಂತಕರು ಹೇಳುತ್ತಾರೆ. ಅಧಿಕಾರ ಕೇಂದ್ರಗಳ ನಡೆಯಿಂದ ಯಾರು ವಂಚನೆಗೆ ಒಳಗಾಗುತ್ತಾರೋ. ಯಾರು ಅವಕಾಶಗಳನ್ನು ಕಳೆದುಕೊಳ್ಳುತ್ತಾರೋ ಅವರಿಗೆ ಮುಖ ಮಾಡಿ ಮಾತನಾಡಬೇಕು ಎಂದು ಸೂಚಿಸುತ್ತಾರೆ. ಆದರೆ ವಾಸ್ತವದಲ್ಲಿ ಏನು ನಡೆಯುತ್ತಿದೆ ಎನ್ನುವುದು ಮುಖ್ಯವಾಗುತ್ತದೆ. 

ಅನ್ಯಾಯ, ಅಸಮಾನತೆ, ತಾರತಮ್ಯ, ಅವಕಾಶ ವಂಚನೆಗಳಿಗೆ ಒಳಗಾಗುತ್ತಿರುವವರು ಬುದ್ಧಿಜೀವಿಗಳ ಚಿಂತನೆಗಳಿಂದ, ಅವರ ವಿಚಾರಗಳಿಂದ ಪ್ರಭಾವಿತರಾಗುತ್ತಿಲ್ಲ.; ಬದಲಿಗೆ ಬುದ್ಧಿಜೀವಿಗಳ ಚಿಂತನೆಯೊಡನೆ ಸಹಮತವನ್ನು ಹೊಂದಿರುವವರೇ ಹೆಚ್ಚಾಗಿ ಅವರ ಚಿಂತನೆಗಳ ಬೆಂಬಲಕ್ಕೆ ನಿಲ್ಲುತ್ತಾರೆ. ಈ ಪರಿಸ್ಥಿತಿ ನಮ್ಮ ಪರಿಸರದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಕಂಡು ಬರುತ್ತಿದೆ.

ಈ ಬಿಕ್ಕಟ್ಟಿನ ಅರಿವು ನಮ್ಮ ಬುದ್ಧಿಜೀವಿಗಳಿಗೆ ಬಂದಿಲ್ಲವೇ? ಇಲ್ಲವೆಂದೇ ತೋರುತ್ತದೆ. ಏಕೆಂದರೆ ಈ ಬಿಕ್ಕಟ್ಟಿನ ಮೂಲ ಬೇರು ಬುದ್ಧಿಜೀವಿಗಳ ಹೊರಗಡೆ ಇರುವುದಕ್ಕಿಂತ ಹೆಚ್ಚಾಗಿ ಅವರ ಒಳಗಡೆಯೇ ಇರುವಂತಿದೆ. ಈ ಮಾತನ್ನು ಕೊಂಚ ಎಚ್ಚರಿಕೆಯಿಂದ ಗಮನಿಸಬೇಕಿದೆ. ಬುದ್ಧಿಜೀವಿಗಳನ್ನು ಟೀಕಿಸುವ, ಅವರ ಪಾತ್ರವನ್ನು ನಗಣ್ಯವೆಂದು ಪರಿಗಣಿಸುವ ಪ್ರವೃತ್ತಿ ಈಗ ಎಂದಿಗಿಂತಲೂ ಹೆಚ್ಚಾಗಿದೆ. ಹೀಗೆ ಟೀಕೆ ಮಾಡುವವರು ಬುದ್ಧಿಜೀವಿಗಳ ಒಳಗೇ ಇರಬೇಕಾದ ಬಿಕ್ಕಟನ್ನು ಪರಿಗಣಿಸುವ ನೆಲೆಯೇ ಭಿನ್ನವಾಗಿದೆ. 

ಬಹುಮಟ್ಟಿಗೆ ನಡೆ ಮತ್ತು ನುಡಿಗಳ ನಡುವಣ ಕಂದರವನ್ನು ಬುದ್ಧಿಜೀವಿಗಳಲ್ಲಿ ಕಾಣುವ ನೈತಿಕ ನೆಲೆಯ ಗ್ರಹಿಕೆಯೊಂದು ಈ ಟೀಕೆಗಳನ್ನು ನಿರ್ದೇಶಿಸುತ್ತಿರುತ್ತದೆ. ಇದು ಉಪಯುಕ್ತವಾದ ನೆಲೆಯ ಗ್ರಹಿಕೆಯಲ್ಲ. ಏಕೆಂದರೆ ಇಲ್ಲಿ ನಡೆ ಮತ್ತು ನುಡಿಯ ಸಮನ್ವಯದ ಸಮಸ್ಯೆಯು ಮುಖ್ಯವಲ್ಲ. ಬುದ್ಧಿಜೀವಿಗಳು ತಾವು ಸಮಾಜದಲ್ಲಿ ಪರಿಣತರಾಗಿ ರೂಪುಗೊಂಡಿರುವ ಪ್ರಕ್ರಿಯೆಯೊಳಗೆ ಇರುವ ಆಯ್ಕೆ ಮತ್ತು ನಿರಾಕರಣೆಯ ಚೌಕಟ್ಟನ್ನು ಮುಂಚೂಣಿಗೆ ತಂದುಕೊಳ್ಳುವುದಿಲ್ಲ. ಅಂದರೆ ಕೆಲವರನ್ನು ಆಯ್ದುಕೊಂಡು ಹಲವರನ್ನು ಹಿನ್ನೆಲೆಗೆ ಸರಿಸಿ ಈ ಪರಿಣತರನ್ನು ವ್ಯವಸ್ಥೆಯು ರೂಪಿಸಿಕೊಂಡಿರುತ್ತದೆ. ಅವರಿಗೆ ಬೇಕಾದ ಸಂಪನ್ಮೂಲಗಳನ್ನು ನಿರಂತರವಾಗಿ ಒದಗಿಸುತ್ತಿರುತ್ತದೆ. ತಾವು ಕಲಿಕೆಯ ಮೂಲಕ ಪಡೆದುಕೊಂಡು 

ನಂಬಿರುವ ಎಲ್ಲ ಮಾನವರೂ ಸಮಾನರು ಎಂಬ ತಿಳುವಳಿಕೆಯನ್ನು ತಾವು ಸಾಮಾಜಿಕವಾಗಿ ಹೊಂದಿರುವ ಸ್ಥಾನಮಾನಗಳು ಅಲ್ಲಗಳೆಯುತ್ತಿರುತ್ತವೆ. ತಾವೇ ಈ ಅಸಮಾನತೆಯ ಫಲಾನುಭವಿಗಳು ಎಂಬ ಅರಿವು ಬುದ್ಧಿಜೀವಿಗಳಿಗೆ ಬಂದಾಗ ಅವರು ತಮ್ಮೊಳಗಿನ ಬಿಕ್ಕಟ್ಟನ್ನು ಗುರುತಿಸಿಕೊಳ್ಳಲು ಶಕ್ತರಾಗುತ್ತಾರೆ. ಆ ಬಳಿಕ ಅವರ ಚಿಂತನೆಯ ಕ್ರಮ ಮತ್ತು ಕಾರ್ಯ ಯೋಜನೆಗಳು ಈಗ ಇರುವುದಕ್ಕಿಂತ ಬೇರೆಯೇ ಆಗಬೇಕಾಗುತ್ತದೆ.

ಈಗ ಇನ್ನೊಂದು ಅಂಶವನ್ನು ಗಮನಿಸೋಣ. ನಮ್ಮ ಸುತ್ತ ಇರುವ ಬುದ್ಧಿಜೀವಿಗಳು ಗೊತ್ತಾದ ವಲಯದಲ್ಲಿ ಪರಿಣತಿಯನ್ನು ಪಡೆದವರು; ವಿಷಯ ವಿಶ್ಲೇಷಣೆಯ ದಾರಿಗಳನ್ನು ಬಲ್ಲವರು; ಆರ್ಥಿಕವಾಗಿ ಸ್ಥಿರತೆಯನ್ನು ಪಡೆದವರು ಮತ್ತು ಸಾಕಷ್ಟು ವಿರಾಮ ಸಮಯವನ್ನು ಹೊಂದಿರುವವರು. ಆದರೆ ಹೀಗೆ ಪರಿಣತಿಯನ್ನು ಪಡೆದ ಎಲ್ಲರೂ ಕೂಡ ಬುದ್ಧಿಜೀವಿಗಳ ಹೊಣೆಗಾರಿಕೆಯನ್ನು ಹೊರಲು ಮುಂದಾಗುವುದಿಲ್ಲ. ಕೆಲವು ಕ್ಷೇತ್ರಗಳ ಪರಿಣತರು ಮಾತ್ರವೇ ಹೆಚ್ಚಾಗಿ ಈ ಕೆಲಸವನ್ನು ಮಾಡಲು ಮುಂದಾಗುವುದನ್ನು ಗಮನಿಸಬಹುದು. ತಜ್ಞ ಅಭಿಪ್ರಾಯವನ್ನು ನೀಡಬೇಕಾಗಿ ಬಂದಾಗ ಮಾತ್ರವೇ ಕಾಣಿಸಿಕೊಳ್ಳುವ ಹಲವು ವಲಯಗಳ ಪರಿಣತರು ಸಾಮಾಜಿಕ ವಲಯಗಳಲ್ಲಿ ಮೌನಿಗಳಾಗಿರುತ್ತಾರೆ. 

ಕೆಲವು ವಲಯಗಳ ಪರಿಣತರು ಮಾತ್ರ ಹೆಚ್ಚು ಹೊಣೆಗಾರಿಕೆಯುಳ್ಳವರಂತೆ ಬುದ್ಧಿಜೀವಿಗಳ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಏಕೆ ಹೀಗಾಗುತ್ತದೆ ಎಂಬುದಕ್ಕೆ ಉತ್ತರಗಳನ್ನು ಕಂಡುಕೊಳ್ಳಲು ಯತ್ನಿಸಲಾಗಿದೆ. ಈ ನೆಲೆಯಲ್ಲಿ ಮಂಡನೆಯಾಗಿರುವ ಒಂದು ಮುಖ್ಯ ವಿಚಾರ ಹೀಗಿದೆ. ವಿಜ್ಞಾನ, ತಂತ್ರಜ್ಞಾನ ಮುಂತಾದ ವಲಯಗಳಲ್ಲಿ ಪರಿಣತರಾಗಿರುವವರು ತಮ್ಮ ವಿಚಾರಗಳಿಗೆ, ಚಿಂತನೆಗಳಿಗೆ ಅಗತ್ಯವಾದ ತಾತ್ವಿಕ ಮತ್ತು ತಾರ್ಕಿಕ ನೆಲೆಗಳನ್ನು ಅವಲಂಬಿಸುತ್ತಾರೆ; ಅಲ್ಲದೆ ತಾವು ಹೇಳಿದ್ದಕ್ಕೆ ತಾವು ಉತ್ತರದಾಯಿಗಳು ಎಂದು ತಿಳಿದಿರುತ್ತಾರೆ. ಹಾಗಾಗಿ ಅವರು ತಮ್ಮ ಪರಿಣತ ವಲಯಕ್ಕೆ ಸಂಬಂಧಿಸಿಲ್ಲದ ವಿಷಯಗಳನ್ನು ವಿಶ್ಲೇಷಿಸಿ ತಮ್ಮ ಚಿಂತನೆಗಳನ್ನು ಮಂಡಿಸಲು ಹಿಂಜರಿಯುತ್ತಾರೆ. ಆದರೆ ಬುದ್ಧಿಜೀವಿಗಳ ಪಾತ್ರವನ್ನು ನಿರ್ವಹಿಸುವವರು ತಮ್ಮ ತಜ್ಞತೆಯ ವಲಯದ ಆಚೆಗೂ ಚಿಂತನೆಗಳನ್ನು ಮಂಡಿಸಲು ಮುಂದಾಗುತ್ತಾರೆ; ಮತ್ತು ತಮ್ಮ ವಿಚಾರಗಳಿಗೆ ತಾವು ಉತ್ತರದಾಯಿಗಳಾಗಬೇಕೆಂಬ ಹೊಣೆಯನ್ನು ಹೊರುವುದಿಲ್ಲ.

 ಇದೊಂದು ಆರೋಪದಂತೆ ತೋರುತ್ತದೆ. ದಿಟ. ಆದರೆ ಎಷ್ಟೋ ಸಂದರ್ಭಗಳಲ್ಲಿ ಬುದ್ಧಿಜೀವಿಗಳ ವಿಶ್ಲೇಷಣೆಗಳು ವಿಶ್ವಾತ್ಮಕ ನೆಲೆಯಲ್ಲಿ ಸಾಧು ಎನಿಸುತ್ತಿದ್ದರೂ ಕಾಲದೇಶಗಳ ಚೌಕಟ್ಟಿನಲ್ಲಿ ವಿರೋಧಾಭಾಸವನ್ನು ಹುಟ್ಟುಹಾಕುತ್ತಿರುತ್ತವೆ ಎನ್ನುವುದನ್ನು ಗುರುತಿಸಬಹುದು. ಉದಾಹರಣೆಗೆ ಎಲ್ಲ ಕಡೆಯೂ ಶಾಂತಿ ನೆಲೆಸಬೇಕೆಂದು ವಾದಿಸುವ ಬುದ್ಧಿಜೀವಿ ಜಾಗತಿಕವಾಗಿ ಎಲ್ಲಿಯೇ ಆಗಿರಲಿ ಯುದ್ಧದಲ್ಲಿ ನಿರತವಾಗಿರುವ ನಾಡುಗಳು ಯುದ್ಧದಿಂದ ವಿಮುಖವಾಗಬೇಕೆಂದು ಹೇಳುತ್ತಾರೆ. ಆದರೆ ತಮ್ಮ ನಾಡು ಮಾತ್ರ ಸದಾ ಯುದ್ಧ ಸನ್ನದ್ಧವಾಗಿರಬೇಕೆಂದು ನಂಬುತ್ತಾರೆ; ಅಂತಹ ಸೈನ್ಯ ಸಂಕಥನಗಳನ್ನು ಬೆಂಬಲಿಸುತ್ತಾರೆ. ಅಥವಾ ಅಂತಹ ಸಂಕಥನಗಳನ್ನು ನಿರಾಕರಿಸುವುದಿಲ್ಲ. ತಮ್ಮಲ್ಲೇ ಇರುವ ಈ ವೈಚಾರಿಕ ಬಿಕ್ಕಟ್ಟಿನ ಅರಿವು ಬುದ್ಧಿಜೀವಿಗೆ ಇರುವುದಿಲ್ಲವೇ ಎನ್ನುವುದು ಎಂದು ಪ್ರಶ್ನೆ.

ಇನ್ನೊಂದು ವಿಷಯವನ್ನು ಪ್ರಸ್ತಾಪಿಸಿ ಈ ಬರಹವನ್ನು ಮುಗಿಸುತ್ತೇನೆ. ಕನ್ನಡದ ಸಂದರ್ಭದಲ್ಲಿ ಹೆಚ್ಚು ಜನ ಬುದ್ಧಿಜೀವಿಗಳ ಹೊಣೆಯನ್ನು ನಿರ್ವಹಿಸುತ್ತಿರುವವರು ಬರಹಗಾರರೇ ಆಗಿದ್ದಾರೆ. ಇದೊಂದು ಬೀಸು ಹೇಳಿಕೆಯಂತೆ ಕಂಡರೂ ಇದರಲ್ಲಿ ತಥ್ಯವಿದೆ. ಕನ್ನಡದ ಬರಹಗಾರರ ಮೇಲೆ ಬೇರೆ ವಲಯಗಳ ಪರಿಣತರು, ‘ಈ ಬರಹಗಾರರು ಎಲ್ಲ ವಿಷಯಗಳಲ್ಲೂ ತಜ್ಞರಂತೆ ಮಾತಾಡುತ್ತಾರೆ’ ಎಂಬ ಆರೋಪವನ್ನು ಮಾಡುವುದನ್ನು ಕಂಡಿದ್ದೇವೆ. 

ಬುದ್ಧಿಜೀವಿಗಳ ವಲಯದಲ್ಲಿ ಇರುವ ತೆರಪನ್ನು ತುಂಬಲೆಂದು, ಅಂದರೆ ಬೇರೆ ವಲಯಗಳ ಪರಿಣತರು ಮೌನವಾಗಿರುವ ಸಂದರ್ಭದಿಂದ ಉಂಟಾಗಿರುವ ತೆರಪನ್ನು ತುಂಬಲೆಂದು ಕನ್ನಡ ಬರಹಗಾರರು ಈ ಹೊಣೆಯನ್ನು ಹೊರುತ್ತಿದ್ದಾರೆ ಎಂಬ ಸಮರ್ಥನೆಯ ವಾದವನ್ನೂ ಕೇಳಿದ್ದೇವೆ. ಈ ವಾದವಿವಾದ ಈಗ ನಮಗೆ ಮುಖ್ಯವಲ್ಲ. ಕನ್ನಡ ಬರಹಗಾರರು ಬುದ್ಧಿಜೀವಿಗಳಾಗಿ ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸುವಾಗ ವೈಚಾರಿಕ ಬರಹಗಳನ್ನು ಆಶ್ರಯಿಸುತ್ತಿದ್ದಾರೋ ಅಥವಾ ತಮ್ಮ ಸೃಜನಶೀಲ ಬರಹಗಳ ಮೂಲಕ ಈ ಹೊಣೆಯನ್ನು ಹೊರುತ್ತಿದ್ದಾರೋ ಎಂಬ ಪ್ರಶ್ನೆ ನಮಗೆ ಮುಖ್ಯ. ಇವೆರಡೂ ಬೇರೆ ಬೇರೆಯಲ್ಲ. ಒಂದು ವಿಚಾರಿತ ಸುಂದರವಾದರೆ ಇನ್ನೊಂದು ಅವಿಚಾರಿತ ರಮಣೀಯ; ಹೀಗೆ ಎರಡೂ ಬಗೆಯ ಬರಹಗಳೂ ಬೇರೆ ಬೇರೆ ದಾರಿಗಳಿಂದ ಒಂದೆ ಗುರಿಯನ್ನು ಮುಟ್ಟುತ್ತವೆ ಎಂಬ ಮಾತನ್ನೂ ಕೇಳುತ್ತೇವೆ. ಆದರೆ ಇದಕ್ಕೆ ಇನ್ನೂ ಒಂದು ಹೊರಚಾಚು ಇದೆ. ಅದನ್ನು ಬದಿಗಿರಿಸುವುದು ಅಸಾಧ್ಯ.

ಬುದ್ಧಿಜೀವಿಗಳು ಮಂಡಿಸುವ ವೈಚಾರಿಕ ಬರಹಗಳು ಯಾವುದೋ ಒಂದು ಚಿಂತನೆಯನ್ನು, ವಿಚಾರವನ್ನು ಮಂಡಿಸುತ್ತವೆ; ಒಂದು ವೈಚಾರಿಕ ಸಂಕಥನವನ್ನು ಕಟ್ಟುವ ಮುಂದುವರಿಸುವ ಧಾಟಿಯನ್ನು ಹೊಂದಿರುತ್ತವೆ. ಇದೇ ಮಾತನ್ನು ಸೃಜನಶೀಲ ಕೃತಿಗಳ ಸಂದರ್ಭದಲ್ಲೂ ಹೇಳಬಹುದೇ? ಎರಡು ಸಂಗತಿಗಳನ್ನು ಇಲ್ಲಿ ಗಮನಿಸೋಣ. ಒಂದು: ಸೃಜನಶೀಲ ಬರಹಗಾರರು ಬೇರೆ ವಲಯಗಳ ಪರಿಣತರಂತೆ ಅಲ್ಲ.ಅಂದರೆ ಅವರು ಸೃಜನಶೀಲ ಬರಹಗಾರರಾಗಿ ರೂಪುಗೊಳ್ಳಲು ಗೊತ್ತಾದ ಅವಧಿಯ ಕಲಿಕೆ , ತರಬೇತಿಗಳನ್ನು ಪಡೆಯುವ ಅಗತ್ಯವಿಲ್ಲ. ಹಾಗಾಗಿ ಬುದ್ಧಿಜೀವಿಗಳೆಂದು ನಾವು ಯಾರನ್ನು ಪರಿಗಣಿಸುತ್ತೇವೆಯೋ ಆ ಚೌಕಟ್ಟಿನೊಳಗೆ ಸೃಜನಶೀಲ ಬರಹಗಾರರು ಬರುವುದಿಲ್ಲ.

 ಎರಡು: ಬುದ್ಧಿಜೀವಿಗಳು ಒಂದು ವೈಚಾರಿಕ ನೆಲೆಯನ್ನು ಮಂಡಿಸಲು, ಕಟ್ಟಲೆಂದೇ ಬರೆಯುತ್ತಿರುತ್ತಾರೆ; ಮಾತನಾಡುತ್ತಿರುತ್ತಾರೆ. ಸೃಜನಶೀಲ ಬರಹಗಾರರು ತಮ್ಮ ಕೃತಿಗಳು ಕೂಡ ಹೀಗೆಯೇ ಒಂದು ವೈಚಾರಿಕತೆಯನ್ನು ಮಂಡಿಸಲೆಂದೇ ರಚನೆಯಾಗಿವೆ ಎಂದು ಹೇಳುವುದು ಸಾಧ್ಯವೇ? ಹಾಗಿದ್ದರೆ ಆ ವೈಚಾರಿಕ ನೆಲೆಯನ್ನು ಓದುಗರಿಗೆ ರವಾನಿಸಲು ಸೃಜನಶೀಲ ರಚನೆಗಳ ಮಾಧ್ಯಮವನ್ನೇ ಏಕೆ ಆಯ್ಕೆ ಮಾಡಿಕೊಳ್ಳುತ್ತಾರೆ? ಬದಲಿಗೆ ವೈಚಾರಿಕ ಬರಹಗಳ ಹಾದಿಯನ್ನೇ ಆಯ್ದುಕೊಳ್ಳಬಹುದಲ್ಲವೇ? ಒಂದು ಕವಿತೆ ಮತ್ತು ಒಂದು ಚಿಂತನಶೀಲ ಬರಹ ಇವುಗಳಲ್ಲಿಒಂದು ಇನ್ನೊಂದಕ್ಕೆ ಪರ್ಯಾಯ ಆಗುವುದಿಲ್ಲವಷ್ಟೆ. ಆದರೆ ಈ ಹೊತ್ತಿನ ಹಲವು ಸೃಜನಶೀಲ ಬರಹಗಾರರು ತಮಗೆ ಏನನ್ನೋ ಹೇಳುವುದಕ್ಕಿದೆ ಎಂದೇ ತಿಳಿದಿದ್ದಾರೆ; ಅದನ್ನೇ ನಂಬಿದ್ದಾರೆ. ಈ ನಂಬಿಕೆಯ ನೆಲೆಯನ್ನು ಚರ್ಚೆಗೆ ತೆಗೆದುಕೊಳ್ಳುವುದು ನನ್ನ ಗುರಿಯಲ್ಲ. ಬದಲಿಗೆ ಸೃಜನಶೀಲ ಬರಹಗಾರರು ಬೇರೊಂದು ಬಗೆಯಲ್ಲಿ ಬುದ್ಧಿಜೀವಿಗಳ ಬಿಕ್ಕಟ್ಟನ್ನು ಎದುರಿಸುತ್ತಿರುತ್ತಾರೆ ಎಂಬುದನ್ನು ಗಮನಿಸುವುದು ಅಗತ್ಯ. ಸೃಜನಶೀಲ ಬರಹಗಾರರು ತಮ್ಮ ಕೃತಿಗಳ ಮೂಲಕ ಏನನ್ನು ಹೇಳಬೇಕೆಂದು ಬಯಸಿದ್ದಾರೋ ಅದು ಅವರಿಗೆ ಅವರ ಕೃತಿ ರಚನೆಗೆ ಮೊದಲೇ ಸ್ಪಷ್ಟವಾಗಿ ತಿಳಿದಿರುತ್ತದೋ ಅಥವಾ ತಾವು ಏನು ಹೇಳಬೇಕಿದೆ ಎಂಬುದನ್ನು ಕೃತಿಯನ್ನು ರಚಿಸುವ ಮೂಲಕವೇ ಅವರೂ ಅರಿತುಕೊಳ್ಳುತ್ತಿರುತ್ತಾರೋ? ಈ ಪ್ರಶ್ನೆಯನ್ನು ಸೃಜನಶೀಲ ಬರಹಗಾರರು ಎದುರಿಸಬೇಕಾಗುತ್ತದೆ. 

ಗೊತ್ತಿರುವುದನ್ನೇ ಹೇಳುವುದಾದರೆ ಅದಕ್ಕಾಗಿ ಆಗ ಸಾಹಿತ್ಯ ಕೃತಿಗಳ ರಚನೆಯು ಅನಿವಾರ್ಯ ಮತ್ತು ಅಗತ್ಯವಾದ ದಾರಿ ಎಂದು ಹೇಳುವುದು ಸಾಧ್ಯವಾಗದು ಅಲ್ಲವೇ? ಹೇಳಬೇಕಿರುವುದನ್ನು ತಾವೇ ಕಂಡುಕೊಳ್ಳಲು ಕೃತಿರಚನೆಯ ದಾರಿಯನ್ನು ಹಿಡಿಯುತ್ತಿದ್ದೇವೆ ಎಂಬ ಅರಿವು ಕೃತಿಕಾರರಿಗೆ ಅಗತ್ಯವೆಂದು ತೋರುತ್ತದೆ.

ಇಲ್ಲಿಯೇ ಇನ್ನೊಂದು ವಿಚಾರ ಮುಂಚೂಣಿಗೆ ಬರುತ್ತದೆ. ಬುದ್ಧಿಜೀವಿಗಳು ಹೇಗೆ ವಿಶ್ವಾತ್ಮಕವಾದ ತಮ್ಮ ತಿಳುವಳಿಕೆ ಮತ್ತು ಕಾಲದೇಶಬದ್ಧವಾದ ತಮ್ಮ ಆಚರಣೆಗಳ ನಡುವಣ ವೈರುದ್ಧ್ಯವನ್ನು ನಿಭಾಯಿಸಬೇಕಾಗುತ್ತದೋ ಅದೇ ನೆಲೆಯಲ್ಲಿ ಸೃಜನಶೀಲ ಬರಹಗಾರರೂ ಇರುತ್ತಾರೆ. ಅವರ ಅನುಭವ ಲೋಕ ಕಾಲದೇಶಬದ್ಧವಾದುದು.ಗೊತ್ತಾದ ಸಂದರ್ಭದಲ್ಲಿ ಅವರು ಆ ಅನುಭವವನ್ನು ಪಡೆದಿರುತ್ತಾರೆ. ಆದರೆ ಆ ಅನುಭವವನ್ನು ಕಾಲದೇಶಮುಕ್ತ ನೆಲೆಯಲ್ಲಿ ನಿರೂಪಿಸಬೇಕಾದ ಅಗತ್ಯ ಅವರಿಗೆ ಇರುತ್ತದೆ. ಆದರೆ ಹೀಗಾಗುವಾಗಲೂ ಅನುಭವದ ಕಾಲದೇಶಬದ್ಧತೆಯು ಸಂಪೂರ್ಣವಾಗಿ ಕಳೆದು ಹೋಗಬಾರದು.ಅದನ್ನು ಉಳಿಸಿಕೊಂಡೇ ಒಂದು ಜಿಗಿತವನ್ನು ಸಾಧಿಸಬೇಕಾಗುತ್ತದೆ. 

ಹೀಗೆ ಮಾಡಿರುವ ಸೃಜನಶೀಲ ಬರಹಗಳಿಗೆ ಮಾತ್ರವೇ ತಾಳಿಕೆಯ ಗುಣ ಇರುತ್ತದೆ. ಅನುಭವ ಲೋಕದ ಗ್ರಹಿಕೆ ಮತ್ತು ಅದರ ಮಂಡನೆಗಳ ನಡುವೆ ಸಾಧಿಸಬೇಕಾದ ಜಿಗಿತದ ನಿರ್ವಹಣೆಯು ಸೃಜನಶೀಲ ಬರಹಗಾರರು ಎದುರಿಸಬೇಕಾದ ಸವಾಲು. ಇದೇ ಸವಾಲನ್ನು ಬೇರೊಂದು ಬಗೆಯಲ್ಲಿ ಬುದ್ಧಿಜೀವಿಗಳೂ ಎದುರಿಸಬೇಕಾಗುತ್ತದೆ. ತಾವು ಜೀವನದುದ್ದಕ್ಕೂ ನಂಬಿಕೊಂಡು ಬಂದಿರುವ ಮೌಲ್ಯಗಳು ತಮ್ಮ ಕಾರ್ಯ ನಿರ್ವಹಣೆಯ ಸಂದರ್ಭದಲ್ಲಿ ನಿರಾಕರಣೆಯಾಗುತ್ತಿರುವ ವೈರುದ್ಧ್ಯವನ್ನು ಹೇಗೆ ನಿವಾರಿಸಿಕೊಳ್ಳಬೇಕು ಎಂಬ ಬಿಕ್ಕಟ್ಟು ಬುದ್ಧಿಜೀವಿಗಳನ್ನು ಸದಾ ಕಾಡುತ್ತಿರುತ್ತದೆ. ಕನ್ನಡದ ಈಗಿನ ಸಂದರ್ಭದಲ್ಲಿ ಬುದ್ಧಿಜೀವಿಗಳಾಗಲೀ ಸೃಜನಶೀಲ ಬರಹಗಾರರಾಗಲೀ ತಾವು ಎದುರಿಸುತ್ತಿರುವ ಈ ನೆಲೆಯ ಸವಾಲಿನ ಸ್ವರೂಪವನ್ನು ಗ್ರಹಿಸಿದ್ದಾರೆಯೇ ಎಂಬ ಪ್ರಶ್ನೆ ಮಾತ್ರ ಉತ್ತರವಿಲ್ಲದೆ ಹಾಗೆಯೇ ಉಳಿಯುತ್ತದೆ.

ಕನ್ನಡ ಬರಹಗಾರರು ಬುದ್ಧಿಜೀವಿಗಳಾಗಿ ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸುವಾಗ ವೈಚಾರಿಕ ಬರಹಗಳನ್ನು ಆಶ್ರಯಿಸುತ್ತಿದ್ದಾರೋ ಅಥವಾ ತಮ್ಮ ಸೃಜನಶೀಲ ಬರಹಗಳ ಮೂಲಕ ಈ ಹೊಣೆಯನ್ನು ಹೊರುತ್ತಿದ್ದಾರೋ ಎಂಬ ಪ್ರಶ್ನೆ ನಮಗೆ ಮುಖ್ಯ. ಇವೆರಡೂ ಬೇರೆ ಬೇರೆಯಲ್ಲ. ಒಂದು ವಿಚಾರಿತ ಸುಂದರವಾದರೆ ಇನ್ನೊಂದು ಅವಿಚಾರಿತ ರಮಣೀಯ; ಹೀಗೆ ಎರಡೂ ಬಗೆಯ ಬರಹಗಳೂ ಬೇರೆ ಬೇರೆ ದಾರಿಗಳಿಂದ ಒಂದೆ ಗುರಿಯನ್ನು ಮುಟ್ಟುತ್ತವೆ ಎಂಬ ಮಾತನ್ನೂ ಕೇಳುತ್ತೇವೆ. ಆದರೆ ಇದಕ್ಕೆ ಇನ್ನೂ ಒಂದು ಹೊರಚಾಚು ಇದೆ. ಅದನ್ನು ಬದಿಗಿರಿಸುವುದು ಅಸಾಧ್ಯ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top