-

ನಾದದ ಬೆನ್ನೇರಿದ ಪಯಣ...

-

40 ವರ್ಷದ ನಾದ ಮಣಿನಾಲ್ಕೂರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದವರು. ರಂಗ ಭೂಮಿ ಕಲಾವಿದರಾಗಿರುವ ನಾದ, ಏಕ ತಾರಿ ವಾದ್ಯದ ಜೊತೆಗೆ ಕರ್ನಾಟಕಾದ್ಯಂತ ಓಡಾಡಿ, ಜನಮನವನ್ನು ಬೆಸೆಯುವ ಪ್ರಯತ್ನ ಮಾಡುತ್ತಿರುವವರು. ಸಂತ ಶಿಶುನಾಳ ಶರೀಫರು, ದಾಸವರೇಣ್ಯರನ್ನು ಮಾದರಿಯಾಗಿಸುತ್ತಾ ತಂಬೂರಿ ಮೀಟುತ್ತಾ ಇವರು ಸವೆಸಿದ ದಾರಿ ಸುದೀರ್ಘವಾದುದು. ನಾದದ ಬೆನ್ನೇರಿ ಸಾಗಿದ ಅನುಭವವನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ.

ನಾದ ಮಣಿನಾಲ್ಕೂರು

‘ಮಲಗದವರಿಗೆ ಎದ್ದೇಳುವ ಹಂಗೇ ಇರುವುದಿಲ್ಲ’

ಬಿಹಾರದ ಗಯಾದಿಂದ ಪಶ್ಚಿಮ ಬಂಗಾಳದ ಹೌರಾ ಸ್ಟೇಷನ್ಗೆ ಬರುತ್ತಿದ್ದಾಗ ರೈಲಿನಲ್ಲಿ ಸಿಕ್ಕ ಬದುಕಿನ ಅನುಭವ ನೋಟವಿದು. ಬೆಳಗಿನ ಜಾವ ಬಂದ ಗುಡ್ಮಾರ್ನಿಂಗ್ ಮೆಸೇಜಿಗೆ ಪ್ರತಿಕ್ರಿಯೆಯಾಗಿ ಹುಟ್ಟಿದ್ದ ಸಾಲು ಇದು. ಜನರಲ್ ಬೋಗಿಯ ಸಾವಿರ ಜೀವಗಳ ಮಧ್ಯೆ ಕಬ್ಬಿಣದ ಸರಳಿನ ಲಗೇಜು ಸೀಟಿನ ಕೊನೆ ಸಂದಿಯಲ್ಲಿ ನನ್ನ ದೇಹ ತೂರಿಕೊಂಡಿತ್ತು. ತೂಕಡಿಸಲೂ ಜಾಗವಿಲ್ಲದ ಸ್ಥಿತಿಯಲ್ಲಿ ಮಲಗೋದು, ಏಳೋದು ಸಾಧ್ಯವೇ ಇರಲಿಲ್ಲ ಬಿಡಿ. 2018ರ ಈ ಉತ್ತರಭಾರತ ಯಾತ್ರೆ ಒಂದು ಸಣ್ಣ ನಿರಾಸೆಯಿಂದ ವಾಪಸ್ ಬಂಟ್ವಾಳಕ್ಕೆ ಕರೆತಂದಿತ್ತು. ಅದಲ್ಲವಾಗಿದ್ರೆ ಬಹುಷಃ ಭಾರತಯಾತ್ರೆ ಮಾಡುತ್ತಾ ಮಾಡುತ್ತಾ ಮರಳಿ ಬಾರದ ಯಾನ ಮುಂದುವರಿದಿರುತ್ತಿತ್ತು.

ಬಂಟ್ವಾಳಕ್ಕೆ ಬಂದ ಎರಡೇ ದಿನಕ್ಕೆ ‘ಕರ್ನಾಟಕ ಯಾತ್ರೆ’ ದಿನ ನಿಗದಿ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡುಬಿಟ್ಟಿದ್ದೆ. ಎಲ್ಲಾ ಜಿಲ್ಲೆಗಳನ್ನು ಗೂಗಲ್ ನಕ್ಷೆ ನೋಡಿಕೊಂಡು ಯೋಜಿಸಿಕೊಂಡಿದ್ದೆ. ಮೂರು ದಿನದೊಳಗೆ ರಾಜ್ಯದ ವಿವಿಧೆಡೆಗಳಲ್ಲಿ ಹಲವಾರು ಕಾರ್ಯಕ್ರಮಗಳು ನಿಗದಿಯಾದವು. ಹಾಗೆ ಹೊರಟ ಯಾನ ಸುತ್ತುತ್ತಾ ಸುತ್ತುತ್ತಾ 251 ದಿನಗಳು ಅನಿಯಂತ್ರಿತವಾಗಿ ಸಾಗಿತು.          

ಅರಿವು ಹಂಚುವ ಕೆಲಸಗಳು ಮಾಡುತ್ತಾ ನನ್ನ ಅರಿವು ವಿಸ್ತರಣೆ ಸಾಕಾಗುತ್ತಿಲ್ಲ ಅನಿಸಿತ್ತು. ಆ ಸಮಯಕ್ಕೆ ಕತ್ತಲಹಾಡು ಪಯಣ ಶುರುವಾಗಿ ಮೂರು ವರುಷಗಳೂ ದಾಟಿದ್ದವು. ನಡೆಗೇ ವಂದನೆ ನುಡಿಗೇ ವಂದನೆ.. ಎಂದು ಹಾಡುವಾಗಲೆಲ್ಲ ಒಳಗೇನೋ ಸಂಕಟ. ನಡೆ-ನುಡಿ ನನ್ನೊಳಗೆ ಅಂತರವಾಗುತ್ತಾ ನಾನು ಸುಮ್ಮನೆ ಹಾಡೋದು ಹಿಂಸೆ ಅನಿಸಿ ಎಲ್ಲದರಿಂದ ಒಂದು ಬ್ರೇಕ್ ಬೇಕು ಅಂತ ನಿರ್ಧರಿಸಿದೆ. ಕೆಲಸ ಬಿಟ್ಟೆ. ಸುತ್ತಾಡಬೇಕು ಅಂತ ಅಂತಿಮ ನಿರ್ಧಾರ ಮಾಡಿಬಿಟ್ಟೆ. ಐದು ತಿಂಗಳು ಸುತ್ತಾಡೋಣ ಅಂತ ನಿರ್ಧರಿಸಿದವನು ಪಯಣಿಸುತ್ತಾ, ಪಯಣಿಸುತಾ ಎಂಟೂವರೆ ತಿಂಗಳು ಪಯಣವೇ ನನ್ನನ್ನು ನಡೆಸಿಬಿಡ್ತು.

‘ಬೆಸೆಯಲೇ ಬೇಕಾದ ತುರ್ತಿದೆ; ನಮ್ಮ ಅಭಿವ್ಯಕ್ತಿಗಳ ಜೊತೆಗೆ’ ಅಂತ ‘ಕರ್ನಾಟಕ ಯಾತ್ರೆ’ಗೊಂದು ಅಡಿಬರಹವನ್ನೂ ಕೊಟ್ಟಿದ್ದೆ. ಒಡೆದು ಚೂರುಚೂರಾಗುತ್ತಿರುವ ಮನುಷ್ಯರ ಮಧ್ಯೆ ಸೇತುವಾಗುವ ಸಂವಾದಗಳು ಬೇಕು. ಎಲ್ಲರೂ ಅಕ್ಷರಗಳನ್ನು ಹಿಡಿದುಕೊಂಡು ಬಡಿದಾಡುತ್ತಾ ಛಿದ್ರವಾಗುತ್ತಿದ್ದೇವಲ್ಲಾ? ಅದರ ಭಾವ-ಜೀವ-ನೋವ ಸಂವೇದನೆಗಳು ಎದೆಗೆ ಇಳಿಯುತ್ತಲೇ ಇಲ್ಲವಲ್ಲಾ? ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಿರುವ ಹೆಣ್ಣು ಜೀವದ ಜೊತೆಗೆ ನಿಲ್ಲುತ್ತಲೇ, ದೌರ್ಜನ್ಯ ನಡೆಸುತ್ತಿರುವ ಗಂಡು ಮನಸ್ಸಿನ ಜೊತೆಗೂ ಮುಖಾಮುಖಿಯಾಗಬೇಕಲ್ಲಾ? ಯಾಕೀ ವರ್ತನೆ, ಎಲ್ಲಿಂದ ಬಂತೀ ಕ್ರೌರ್ಯ? ಕೇಳಬೇಕು ಅನಿಸಿತ್ತು.

ಪಾಸು-ಫೇಲು ಭಯಕ್ಕೆ ಬಿದ್ದು ಸಾಲು ಹೆಣಗಳಾಗುತ್ತಿರುವ ಮಕ್ಕಳು, ಯುವಜನರ ಜೊತೆಗೆ ಬದುಕುವ ಮಾತು ನೆನಪಿಸಬೇಕಲ್ಲಾ? ದೇವರು, ಧರ್ಮ, ಜಾತಿ, ಭಾಷೆ, ಲಿಂಗ ಮುಂತಾದ ಭಾವನಾತ್ಮಕ ಸಂಗತಿಗಳು ರಾಜಕೀಯ ದಾಳಗಳಾಗಿ ನಿಮ್ಮ-ನಮ್ಮ ಮನೆಯ ಜೀವಗಳು ಬೀದಿ ಹೆಣಗಳಾಗುತ್ತಿರುವ ಹೊತ್ತಲ್ಲಿ ಅವರ ಎದೆಗಳ ಜೊತೆಗೊಂದು ಪ್ರೀತಿ, ಮಮತೆ, ಶಾಂತಿ, ಸಹಬಾಳ್ವೆ, ಸ್ವೀಕರಣೆಯ ನೆನಪುಗಳನ್ನು ಮೆಲುಕು ಹಾಕಬೇಕಲ್ಲಾ? ಇಂತಹ ನೂರಾರು ಸಂಗತಿಗಳು ನನ್ನನ್ನು ಎದೆಕಂಪನಗೊಳಿಸುತ್ತಲೇ ಇದ್ದವು. ಅವುಗಳ ಜೊತೆಗೆ ಮುಖಾಮುಖಿ ಸಂವಾದಕ್ಕೆ ಸದ್ಯ ನನ್ನ ಅಭಿವ್ಯಕ್ತಿ ಹಾಡು ಮತ್ತು ಮಾತುಕತೆ(ಸಂವಾದ). ಹಾಗಾಗಿ ನಾನು ಒಂದು ಕಡೆ ಇರುವುದು ಸಾಧ್ಯವೇ ಇರಲಿಲ್ಲ. ಹಾಡಿನ ಸ್ವರೂಪದ ಮಾತು, ಮಾತಿನ ಸ್ವರೂಪದ ಹಾಡು ನನ್ನ ಪಯಣವನ್ನು ಮುನ್ನಡೆಸಿದವು. ಒಂಟಿ ವ್ಯಕ್ತಿಯ ಜೊತೆಯಿಂದ ಲಕ್ಷಾಂತರ ಮಂದಿ ಸೇರಿದ ಜಾತ್ರೆಯಲ್ಲೂ ಈ ಬೆಸೆವ ಪ್ರಯತ್ನ ಮುಂದುವರಿಯಿತು.

ಕರಾವಳಿ, ಮಲೆನಾಡು, ಉತ್ತರಕರ್ನಾಟಕ, ಬಯಲುಸೀಮೆ, ಗಡಿನಾಡುಗಳು ಸೇರಿದಂತೆ ಕರ್ನಾಟಕದ ಉದ್ದಗಲದ ಈ ಪಯಣ ನನ್ನನ್ನು ನಡೆೆಸಿದ್ದು ನನ್ನ ಈ ಹಿಂದಿನ ಬದುಕಿಗಿಂತ ಎರಡುಪಟ್ಟು ಮುಂದಕ್ಕೆ. ಕರ್ನಾಟಕದ ವಿವಿಧ ಭಾಷೆಗಳು, ವಿವಿಧ ರುಚಿ- ಆಹಾರ ವೈವಿಧ್ಯತೆಗಳು, ಅತಿಥಿ ಸತ್ಕಾರದ ರೀತಿಗಳು, ಹಬ್ಬ ಸಂಭ್ರಮಗಳು, ವೇದಿಕೆಯ ನಡವಳಿಕೆಗಳು, ಧಾರ್ಮಿಕ ಆಚರಣೆಗಳು, ವಿಧವಿಧದ ಹವಾಮಾನ, ಹಳ್ಳಿ-ಪೇಟೆ-ಮನೆಗಳ ರಚನೆಗಳು, ಪರಿಸರ-ಕೈಗಾರಿಕೆ-ಕಸುಬುಗಳು, ಜನ-ಸಮುದಾಯ ಸಂಬಂಧಗಳು... ಎಲ್ಲವೂ ಬಹುತ್ವ ಭಾರತದ ವಿಶಿಷ್ಟ ಅಂಶಗಳಾಗಿ ಎದೆಯೊಳಗೆ ಅಚ್ಚಾಗಿವೆ.

ಭಾವನಾತ್ಮಕವಾದ ಗುಂಪುಗಳು, ಎಡ-ಬಲ-ಮಧ್ಯಮ ವೈಚಾರಿಕ, ಸೈದ್ಧಾಂತಿಕ ಬಳಗಗಳು, ಶೈಕ್ಷಣಿಕ ಗುಂಪುಗಳು, ಮಾಧ್ಯಮ ಬಳಗ, ಸಮಾಜ ಸೇವಾ ಸಂಸ್ಥೆಗಳು, ಧಾರ್ಮಿಕ ಶ್ರದ್ಧಾಕೇಂದ್ರಗಳು, ಶಾಲೆ-ಕಾಲೇಜು-ಹಾಸ್ಟೆಲ್ಗಳು, ಆಧ್ಯಾತ್ಮಿಕ ಗುಂಪುಗಳು, ಬಾಲಮಂದಿರ, ಅನಾಥಾಶ್ರಮ, ವೃದ್ಧಾಶ್ರಮ, ವಿಶೇಷ ಚೇತನ ಕೇಂದ್ರಗಳು, ಜೈಲು, ಯೂನಿವರ್ಸಿಟಿಗಳು, ಪಾರ್ಕ್ಗಳು ಸೇರಿದಂತೆ ಕೆಲವು ಕೌಟುಂಬಿಕ ಕಾರ್ಯಕ್ರಮಗಳೂ ನನ್ನ ಯಾನದ ವಿವಿಧ ಭಾಗಗಳು. ಕೆಲವು ದಿನ ಮೂರ್ನಾಲ್ಕು ಗುಂಪುಗಳೊಂದಿಗೆ, ಕೆಲವು ದಿನ ಒಂದೇ, ಹೀಗೆ ಸರಾಸರಿ ಎರಡರಿಂದ ಮೂರು ಕಾರ್ಯಕ್ರಮಗಳು ಈ ಅಷ್ಟೂ ದಿನಗಳಲ್ಲಿ ನಡೆದವು. ಅನಾರೋಗ್ಯ ನಿಮಿತ್ತ ಕೆಲವು ದಿನ ಹಾಡದೆ ಉಳಿದುದು ಇದೆ. ಆದರೆ ಯಾವುದಾದರೂ ಗುಂಪು ಅಥವಾ ವ್ಯಕ್ತಿಗಳೊಂದಿಗೆ ಸಂವಾದ ನಡೆಸದೆ ಉಳಿದ ದಿನಗಳಿಲ್ಲ.

ಬೆನ್ನಿನ ಬ್ಯಾಗಿನೊಳಗೆ ಮೂರು ಜೊತೆ ಪ್ಯಾಂಟು-ಕುರ್ತಾಗಳು, ರಾತ್ರಿಗೆ ಎರಡು ಜೊತೆ ಆರಾಮ ಬಟ್ಟೆಗಳು, ಒಂದು ಬೆಡ್ಶೀಟ್, ಚಳಿಗೊಂದು ಜರ್ಕಿನ್, ಮಂಕಿಕ್ಯಾಪ್, ಬಣ್ಣದ ಶಾಲುಗಳು ಮೂರು, ಟವೆಲ್, 3/4 ಶಾರ್ಟ್ಸ್, ಎರಡು ಜೊತೆ ಕಾಲಿನ ಸಾಕ್ಸು, ಕೈ ಗ್ಲೌಸ್, ಕೈಕಾಲಿಗೆ ಹಚ್ಚುವ ಬಯೋಲಿನ್ ಡಬ್ಬವೊಂದು, ಎರಡು ಡೈರಿಗಳು, ಸಣ್ಣ ಮಡಚುವ ಛತ್ರಿ, ಪೆನ್ನು ಪೆನ್ಸಿಲ್, ಮೊಬೈಲು-ಚಾರ್ಜರು, ಇಯರ್ ಫೋನ್, ಪರ್ಸು - ಅದರಲ್ಲೊಂದು ಸಾವಿರ ದುಡ್ಡು, ತಲೆನೋವಿನ ಮಾತ್ರೆಗಳು, ನೇಲ್ಕಟ್ಟರ್, ಮರದೆರಡು ಬಳೆಗಳು, ಭಾರತೀಯತೆಯ ದೃಢೀಕರಣಕ್ಕೆ ಪೂರಕ ಐಡೆಂಟಿಟಿ ಕಾರ್ಡುಗಳು, ಏಕತಾರಿಗೆ ಬೇಕಾದ ಎಕ್ಸ್ಟ್ರಾ ತಂತಿ ಮತ್ತು ಕಟ್ಟರ್, ಜಿಡ್ಡು ಕೃಷ್ಣಮೂರ್ತಿ ಅವರ ಪ್ರೀತಿ ನದಿಯಂತೆ ಪುಸ್ತಕದ ಜೆರಾಕ್ಸ್ ಪ್ರತಿ ಹಾಗೂ ಹಳೆಯದೊಂದು ಬಾತ್ರೂಮ್ ಕಿಟ್.

ಬಲಗೈನಲ್ಲೊಂದು ದೋತಾರಿ (ಏಕತಾರಿ ಅಂತಾನು ಕರೀತಾರೆ, ಹೀಗೆ ಆಡುಭಾಷೇಲಿ ತಂಬೂರಿ ಅಂತಾನೂ ಕರೀತಾರೆ.), ಹಾಕಿದ ಪೈಜಾಮ, ಕುರ್ತಾ, ಶಾಲು, ಬಳೆ, ಸಾಕ್ಸು, ಚಪ್ಪಲಿ ಮತ್ತು ಎದೆಯ ತುಂಬಾ ‘ಅಕ್ಕ, ಅಲ್ಲಮ, ಬುದ್ಧ, ಕಬೀರ, ಕನಕ’ರ ಕನವರಿಕೆಗಳು.

ಕಾರ್ಯಕ್ರಮದಲ್ಲಿ ಏನು ಮಾಡುತ್ತಿದ್ದೆ?

ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯು ಕಾಲೇಜು ಆಗಿದ್ದರೆ ಸರಳವಾದ ಕೆಲವು ಹಾಡು, ಸಂವಾದ, ಒಂದೆರಡು ಚಟುವಟಿಕೆ, ಆಟಗಳು, ಓದು, ಒಳಗೊಳ್ಳುವಿಕೆಯ ಪ್ರಕ್ರಿಯೆ ನಡೆಸುತ್ತಿದ್ದೆ. ಪದವಿ ಕಾಲೇಜು ಆಗಿದ್ರೆ ಹಾಡು, ಸಂವಾದ, ಒಂದು ಚಟುವಟಿಕೆ, ಓದು ಹೀಗೆ.. ಸಾರ್ವಜನಿಕ ಕಾರ್ಯಕ್ರಮ ಆಗಿದ್ದರೆ ಹಾಡು- ಸಂವಾದ ನಡೆಯುತ್ತಿತ್ತು. ಕೆಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಸಂಘ, ಸಂಸ್ಥೆ, ಪಿಜಿ ಸೆಂಟರ್ಗಳಲ್ಲಿ ವಿಶಿಷ್ಟವಾದ, ಗಂಭೀರವಾದ, ತರ್ಕಭರಿತವಾದ ಸಂವಾದಗಳೂ ನಡೆಯುತ್ತಿದ್ದವು. ಖರ್ಚು ನಿಭಾವಣೆ ಹೇಗೆ? ಯಾವ ಸಂಸ್ಥೆ ಅಥವಾ ಸರಕಾರದ ಪ್ರಾಜೆಕ್ಟ್ ಇದು? ವೇಷ-ಭೂಷಣ ಯಾಕೆ

ಹೀಗಿದೆ? ಕುಟುಂಬ ಏನೂ ಬಯ್ಯಲ್ವಾ? ಭಯ ಆಗಲ್ವಾ? ಮುಂದೆ ಭಾರತ ಯಾತ್ರೆ, ಜಗತ್ತಿನ

ಯಾತ್ರೆ ಎಲ್ಲಾ ಮಾಡುತ್ತೀರಾ?.. ಇನ್ನೂ ಮುಂತಾದೆಲ್ಲಾ ಪ್ರಶ್ನೆಗಳು ಇದಿರಾಗುತ್ತಿದ್ದುವು.

 ಬೆಂಗಳೂರಿನಲ್ಲಿದ್ದೆ. ಎಲ್ಲಿಂದಲೋ ಎಲ್ಲಿಗೋ ಒಂದು ತಾಸಿನೊಳಗೆ ತಲುಪಬೇಕಿತ್ತು. ಮೆಜೆಸ್ಟಿಕ್ನಲ್ಲಿ ಮೆಟ್ರೊ ಸ್ಟೇಷನ್ ಒಳಗೆ ಹೋದಾಗ ಎಂದಿನ ಹಾಗೆ ಏಕತಾರಿಯನ್ನೂ ಸ್ಕ್ಯಾನಿಂಗ್ ಮೆಷೀನ್ ಒಳಗೆ ಹಾಕಿ ಚೆಕಿಂಗ್ ನಡೆದಿತ್ತು. ಬ್ಯಾಗಿನೊಳಗಿನ ತಂತಿ ಮತ್ತು ಕಟ್ಟರ್ ಒಯ್ಯಬಾರದು ಎಂದು ಹಠ ಶುರುವಾಯ್ತು. ಅದೂ ಇದೂ ಕಾರಣ ಕೊಟ್ಟ ಮೇಲೆ ಏಕತಾರಿ ತಗೊಂಡು ಹೋಗಬಾರದು ಎಂದೆಲ್ಲಾ ಶುರುವಾಯ್ತು. ಅಲ್ಲಿ ಚೆಕಿಂಗ್ನವರ ದೊಡ್ಡ ಗುಂಪೇ ನೆರೆಯಿತು.

ವಿಮಾನದಲ್ಲೂ ಹೀಗೇ ಓಡಾಡಿದ್ದೇನೆ, ಯಾರಿಗೂ ತೊಂದರೆ ಆಗಲ್ಲ, ಏನಾದ್ರೂ ಆದ್ರೆ ನಾನೇ ಜವಾಬ್ದಾರಿ ಎಂದೆಲ್ಲಾ ಬರೆದುಕೊಡುತ್ತೇನೆ, ನೋಡಿ ಈ ಐಡೆಂಟಿಟಿ ಕಾರ್ಡು ನೋಡಿ... ಎಂದೆಲ್ಲಾ ಏನೇನೂ ಹೇಳಿದ್ರೂ ನಂಬದೆ ಸುಮಾರು ಅರ್ಧ ತಾಸು ಹಾಗೇ ಸಾಗಿತು. ಮತ್ತೂ ಅವರಿವರ ಜೊತೆ ಮಾತಾಡಿ ‘ಹೋಗಿ’ ಅಂದ್ರು. ನಾನು ಹೋಗಲಾರೆ ಎಂದು ಹೊರಗೆ ಹೊರಟೆ. ಸ್ಕ್ಯಾನಿಂಗ್ ಮೆಷಿನ್ ಜೊತೆಗೊಂದು ಏಕತಾರಿ ಸಹಿತ ಸೆಲ್ಫಿ ಇರಲಿ ಎಂದು ಕ್ಲಿಕ್ಕಿಸಿಕೊಂಡೆ. ಅಲ್ಲಿಗೆ ಹೊಸದೊಂದು ಜಗಳ ಶುರು ಮಾಡ್ಕೊಂಡ್ರು. ನಮ್ಮ ಫೋಟೊ ತೆಗೆದ್ರಿ ಅಂತ ಆರೋಪಿಸುತ್ತಾ ಮಹಿಳಾ ಗಾರ್ಡುಗಳು ರಾಶಿ ಸೇರಿದರು.

ನಿಮ್ಮದಲ್ಲ ಎಂದು ಎಷ್ಟೇ ಕೇಳಿಕೊಂಡರೂ ಅವರು ಕೇಳುವ ಸ್ಥಿತಿಯಲ್ಲಿರಲಿಲ್ಲ. ನನ್ನ ಮೊಬೈಲ್ನ ಫೋಟೊ ತೋರಿಸುತ್ತಿದ್ದಂತೆ ಮೊಬೈಲನ್ನು ಎತ್ಕೊಂಡು ಡ್ರಾವರ್ನೊಳಗೆ ಹಾಕಿ ಅವರ ಮೇಲಧಿಕಾರಿಗಳಿಗೆ ಫೋನ್ ಮಾಡಿದರು. ‘ನಮ್ಮ ಫೋಟೊ ಎಲ್ಲಾ ತೆಗೆದ್ರು, ವಿಚಿತ್ರವಾಗಿದ್ದಾನೆ, ಗಡ್ಡ ಇದೆ, ಕೈಯಲ್ಲೊಂದು ಏನೋ ಇದೆ ಸರ್, ಉದ್ದದ್ದು, 6 ಫೀಟ್ ಇದೆ ಸರ್, ಹಾ..ಸರ್, ಬಂದೂಕು ಥರ ಇದೆ ಸರ್...’ ಮುಂದಿನದು ನಂಗೆ ಕೇಳಲೇ ಇಲ್ಲ. ಎರಡೂ ಕಣ್ಣುಗಳು ನೀರು ತುಂಬಿಕೊಂಡು ಹೇಳಿದೆ, ‘ನಿಮ್ಮ ಹೈಯರ್ ಆಫೀಸರ್ ಬರಲಿ.

ನಾನಿಲ್ಲೇ ಇರ್ತೇನೆ. ಅವರು ಬಾರದೇ ನಾನು ಇಲ್ಲಿಂದ ಹೋಗುವುದಿಲ್ಲ’ ಎಂದು ದಾರಿಯಿಂದ ಸರಿದು ಬ್ಯಾಗ್ ಹಿಡ್ಕೊಂಡು ಕೂತುಬಿಟ್ಟೆ. ಆಮೇಲೆ ಹತ್ತಾರು ಆಫೀಸರ್ಗಳ ಫೋನ್ ಬಂತು. ನಾನು ಯಾರೊಂದಿಗೂ ಮಾತಾಡಲಿಲ್ಲ, ಫೋನ್ ಅವರು ಎತ್ತಿಟ್ಕೊಂಡಿದ್ದರಲ್ಲಾ. ಈ ಮಧ್ಯೆ ಒಂದಿಬ್ಬರು ಆಫೀಸರ್ಗಳು ಫೋನಲ್ಲಿ ವಿಚಾರಿಸಿದರು, ಎಲ್ಲಾ ವಿವರ ಕೊಟ್ಟೆ. ಸಾರಿ ಕೇಳಿದರು, ಹೋಗಿ ಅಂದರು, ಫೋನ್ ವಾಪಸ್ ಕೊಡಿಸಿದರು. ಎದ್ದವನೇ ಆ ಫೋಟೊಗಳನ್ನು ಅವರೆದುರಲ್ಲೇ ಡಿಲೀಟು ಮಾಡಿ ಗ್ಯಾಲರಿ ತೆರೆದು ಕೊಟ್ಟೆ.

‘ನೋಡಿ, ನಾನೀಗ ಒಂದು ವೃದ್ಧಾಶ್ರಮದ ಕಾರ್ಯಕ್ರಮ ಮುಗಿಸಿ ಬಂದೆ, ಇದು ಅಲ್ಲೊಂದು ಬಡ ಶಾಲೆದು, ಇದು ಬೇರೊಂದು ಕುಟುಂಬದ್ದು. ಹೀಗೆ ಶ್ರಮದ ಪರವಾದ, ಜೀವದ ಪರವಾದ ಪಯಣ ನನ್ನದು, ಹೀಗೆ ನಡೆಸ್ಕೋಬಾರದಲ್ಲಾ ನೀವು?’ ಅನ್ನುತ್ತಾ ಕಣ್ಣೀರು ಒರೆಸುತ್ತಾ ಹೊರಗೆ ನಡೆದೆ. ಅದು ಕರ್ನಾಟಕ ಯಾತ್ರೆಯ 13ನೇ ದಿನ.

20ನೇ ದಿನ ಕೋಲಾರದ ಅಂತರಗಂಗೆ ಬೆಟ್ಟಕ್ಕೆ ಮಿತ್ರ ಸಿದ್ದು ನದಾಫ್ ಜೊತೆಗೆ ಹೋಗಿದ್ದೆ. ಬೆಟ್ಟದ ಬುಡದ ಮೆಟ್ಟಲುಗಳಿಂದಲೇ ಇಬ್ಬರು ಯುವಕರು ವಿಚಿತ್ರವಾದ ಕೂಗಿನಿಂದ ಕೋತಿಗಳನ್ನು ಕರೆಯುತ್ತಾ ತಾವು ಹೊತ್ತಿದ್ದ ಹೊರೆಯಿಂದ ತುಂಡು ತುಂಡಾಗಿಸಿದ್ದ ಸೌತೆ ಮತ್ತಿತರ ತರಕಾರಿಗಳನ್ನು ದಾರಿಯುದ್ದಕ್ಕೂ ಚೆಲ್ಲುತ್ತಾ ಬೆಟ್ಟ ಏರಿದರು. ಕೋತಿಗಳು ಕುಣಿದಾಡುತ್ತಾ ತಿನ್ನುತ್ತಾ ಓಡಾಡುತ್ತಿದ್ದವು. ನಾವು ಬೆಟ್ಟ ಏರಿದ್ದೆವು.

ಅಲ್ಲಿಲ್ಲಿ ಸುತ್ತಾಡುತ್ತಾ ಇದ್ದಂತೆ ಮೈಕೈ ತುಂಬಿಕೊಂಡಿದ್ದಂತೆ ತೋರುತ್ತಿದ್ದ ದಪ್ಪದ ವ್ಯಕ್ತಿಯೊಬ್ಬರು ಬಂದರು. ಏನೋ ಕಿರುಚಿದರು. ಮುದ್ದು ಮಕ್ಕಳಂತೆ ರಾಶಿ ರಾಶಿ ಕೋತಿಗಳು ಎಲ್ಲೆಡೆಯಿಂದ ಹರಿದುಬಂದವು. ಇವರ ಸುತ್ತಮುತ್ತ ವಿನೀತವಾಗಿ ನೆರೆದವು. ಆ ಮನುಷ್ಯ ಅಂಗಿಯೊಳಗೆ ಕೈಹಾಕಿ ಮುಷ್ಟಿ ಮುಷ್ಟಿ ಹೊರಗೆ ಎಸೆಯಿತು. ಕೋತಿಗಳು ಮುದ್ದುಮುದ್ದಾಗಿ ಓಡಾಡುತ್ತಾ ತಿಂದವು. ವಿವಿಧ ರೀತಿಯ ಬೇಳೆ ಕಾಳುಗಳು, ಬ್ರೆಡ್ಡು, ಬನ್ನುಗಳು ಪೂರಾ ಖಾಲಿಯಾದಂತೆ ಆ ಮನುಷ್ಯ ತನ್ನ ಸಹಜ ದೇಹಕ್ಕೆ ಬಂತು.

ಅಂಗಿ ಮತ್ತು ಒಳಗಿನ ಬನಿಯನ್ ಕೊಡವಿ ಸಂತೃಪ್ತವಾಯಿತು. ಅವರ ಹೆಸರು ಪುರುಷೋತ್ತಮ ಅಂತ. ಪೋಸ್ಟಲ್ ಇಲಾಖೆಯಲ್ಲಿ ಉದ್ಯೋಗಿ. ಸುಮಾರು ಹತ್ತು ಹನ್ನೆರಡು ವರುಷಗಳಿಂದ ಹೀಗೆ ಮಾಡುತ್ತಿದ್ದಾರಂತೆ. ಮನಸ್ಸಿಗೆ ಇದರಿಂದ ತುಂಬಾ ಆನಂದವಾಗುತ್ತದೆಯಂತೆ.

 ಕರ್ನಾಟಕ ಯಾತ್ರೆ 95ನೇ ದಿನ ಬಿಜಾಪುರದಲ್ಲಿದ್ದೆ. ಮಧ್ಯಾಹ್ನ ನಂತರ ಯುನಿವರ್ಸಿಟಿ ಯಲ್ಲಿ ಕಾರ್ಯಕ್ರಮವಿತ್ತು. ಹೊರಟಿದ್ದವನು ದಾರಿ ಮಧ್ಯೆಯ ಹೊಟೇಲ್ವೊಂದರಲ್ಲಿ ಚಾ ಕುಡಿಯಲು ಕೂತಿದ್ದೆ. ಕಾಲೇಜು ಹುಡುಗರ ಗುಂಪೊಂದು ಹರಟುತ್ತಾ ಬಂದು ಟೀ ಕುಡಿಯುತ್ತಾ ನನ್ನ ಕೈಯ ಏಕತಾರಿ ಗಮನಿಸಿ ತಮ್ಮ ಹರಿದುಹೋದ ಗಿಟಾರ್ ತಂತಿ ರಿಪೇರಿ ಮಾಡಿಕೊಡಲು ಭಿನ್ನವಿಸಿದರು. ನನಗೆ ತಿಳಿದಿಲ್ಲ ಅಂದರೂ ‘ಆದಷ್ಟು ಮಾಡಿಕೊಡಿ, ತರುತ್ತೇವೆ’ ಎಂದು ತಮ್ಮ ರೂಮಿನತ್ತ ಬೈಕ್ನಲ್ಲಿ ಹಾರಿದರು. ಹೋಗುವಾಗ ಹೊಟೇಲ್ ಅಣ್ಣಗೆ ‘ಇವರ ದುಡ್ಡು ತಗೋಬೇಡಿ, ನಾವು ಕೊಡ್ತೇವೆ’ ಅಂದರು. ನನ್ನ ಟೀ ಮುಗಿವಷ್ಟರಲ್ಲೇ ಗಿಟಾರ್ ತಂದರು. ತಂತಿಯೊಂದು ತುಂಡಾಗಿ ಜೋತಾಡುತ್ತಿತ್ತು. ಅದನ್ನು ರಿಪೇರಿ ಮಾಡಿಕೊಟ್ಟೆ. ಹುಡುಗರು ಖುಷಿಯಲ್ಲಿ ಥ್ಯಾಂಕ್ಸ್ ಹೇಳುತ್ತಾ ಅವರ ಟೀ ದುಡ್ಡನ್ನು ಕೊಡಲೂ ಮರೆತು ಹೋಗಿಯೇ ಬಿಟ್ಟರು. ಎಷ್ಟು ಹೇಳಿದರೂ ಹೊಟೇಲ್ ಅಣ್ಣ ಅವರ ಟೀ ಬಿಲ್ ಪಡೆಯದೇ, ನನ್ನ ಟೀ ದುಡ್ಡಷ್ಟೇ ಪಡೆದರು.

 ಮೈಸೂರಿನ ಯಾವುದೋ ಬೀದಿಯಲ್ಲಿ ಏಕತಾರಿ ಹೆಗಲಲ್ಲಿ ಹೊತ್ತುಕೊಂಡು ಸ್ನೇಹಿತರ ಮನೆಗೆ ವಾಪಸ್ ಹೋಗುತ್ತಿದ್ದೆ. ಟೀ ಅಂಗಡಿಯಲ್ಲಿದ್ದ ಹಿರಿಯ ವ್ಯಕ್ತಿ ಒಬ್ಬರು ಕರೆದ್ರು. ಟೀ ಕುಡೀರಿ ಅಂದ್ರು. ಕುಡಿದೆ. ‘ನಮ್ಮ ಮನೇಲೂ ಏಕತಾರಿ ಇದೆ, ಮನೆಗೆ ಬಂದು ಹೋಗಿ’ ಅಂತ ಪ್ರೀತಿಯಿಂದ ಕರೆದ್ರು. ಅವರೊಂದಿಗೆ ಹೋದೆ. ಅವರು ಆರೂಢ ಪರಂಪರೆಯವರು. ಅವರ ಏಕತಾರಿ ದೇವರ ಫೋಟೊಗಳಿದ್ದಲ್ಲಿ ನೇತು ಹಾಕಿದ್ದರು. ಅವರಲ್ಲಿ ‘ಹಾಡಿ’ ಅಂದೆ, ‘ಇಲ್ಲ, ನಾವು ವರ್ಷಕ್ಕೆ ಒಂದೇ ಸಲ ಭಜನೆ ಮಾಡುವುದು’ ಎಂದು ನಿರಾಕರಿಸಿದರು. ಅವರ ಏಕತಾರಿ ಮೀಟ್ಕೊಂಡು ಒಂದೆರಡು ಹಾಡಿ, ಅಲ್ಲೊಂದು ಟೀ ಕುಡಿದು ಹೊರಟೆ.

 ಆವತ್ತು ಬಳ್ಳಾರಿಯ ಸೆಂಟ್ರಲ್ ಜೈಲಿನೊಳಗೆ ನನ್ನ ಕಾರ್ಯಕ್ರಮವಿತ್ತು. ಅದು 69ನೆಯ ದಿನ. ಪತ್ರಕರ್ತ ಮಿತ್ರ ಇಮಾಮ್ ಗೋಡೆಕಾರ್ ಬಹಳ ಕಾಳಜಿಯಿಂದ 2ನೇ ಸಲ ಪ್ರಯತ್ನಿಸಿ ಕಾರ್ಯಕ್ರಮ ಆಯೋಜನೆ ಆಗಿತ್ತು. ಪೆಂಡಾಲ್ ಕೆಳಗೆ ಎಲ್ಲರೂ ಸೇರಿದ್ದರು. ಸೆಲ್ಗಳಲ್ಲಿ ಇದ್ದವರು ಮುಕ್ಕಾಲು ಭಾಗ ಸೇರಿದ್ದರು ಅನಿಸುತ್ತೆ. ಇನ್ನು ಕೆಲವರು ಸೆಲ್ಗಳಿಂದಲೇ ಇಣುಕುತ್ತಿದ್ದರು. ಕೆಲವರು ಸಂಬಂಧವೇ ಇಲ್ಲದಂತೆ ಇದ್ದರು. ಕಾರ್ಯಕ್ರಮ ಶುರುವಾಗಿತ್ತು. ಹಲವರು ಧ್ಯಾನಸ್ಥರಾದರು, ಕೆಲವರು ಅತ್ತರು, ನಿದ್ದೆ ಹೋದರು, ಭಾವುಕರಾದರು. ಮುಗಿಯುತ್ತಿದ್ದಂತೆ ಕೆಲವರು ಅನಿಸಿಕೆ ಮಾತಾಡಿದರು. ಅದರಲ್ಲೊಬ್ಬ ತೆಲುಗಿನಲ್ಲಿ ಮಾತಾಡಿದ್ದು ನನ್ನ ಎದೆಯಲ್ಲಿನ್ನೂ ಗುಂಗಣಿಸುತ್ತಿದೆ. ‘ನಿಮ್ಮ ಹಾಡು, ಮಾತು ಗಳು ಪ್ರಶಾಂತವಾಗಿದ್ದವು. ನನಗೆ ಮರೆತೇ ಹೋಗಿದ್ದೊಂದು ಇವತ್ತು ನೆನಪಾಯ್ತು.

ನಾನು ಸಣ್ಣವನಿದ್ದಾಗ ನನ್ನ ಅಮ್ಮ ನನ್ನನ್ನು ಸ್ನಾನ ಮಾಡಿಸಿ, ಪೌಡರ್ ಹಾಕಿ, ಕಾಲಡಿಗೆ ಮತ್ತು ಕೆನ್ನೆಗೆ ಬೊಟ್ಟಿಟ್ಟು ಲಾಲಿ ಹಾಡ್ತಾ ಮಲಗಿಸ್ತಾ ಇದ್ಳಂತೆ. ಅಂತಾದ್ದು ಇವತ್ತು ಮತ್ತೆ ನೆನಪಾಯ್ತು. ಇದಕ್ಕೂ ಹಿಂದೆ ಇದೆಲ್ಲಾ ನೆನಪಿದ್ರೆ ನಾನು ಇಲ್ಲಿ ಇರುತ್ತಾ ಇರಲಿಲ್ಲ’ ಎಂದು ಕಣ್ಣೀರು ತುಂಬಿಕೊಂಡು ಅಪ್ಪಿಕೊಂಡರು. ಅವರು ಅತ್ಯಾಚಾರ ಮತ್ತು ಕೊಲೆ ಕೇಸಿನಲ್ಲಿ ಕೈದಿಯಾಗಿ ಅಲ್ಲಿ ಇದ್ದವರು. ನಂತರ ಎಲ್ಲಾ ಸೆಲ್ಗಳನ್ನು ತೋರಿಸುತ್ತಾ ಹೋಗುತ್ತಿದ್ದಂತೆ ಆಗತಾನೇ ಕೋಮುವಾದಿ ಜಗಳದ ಕೇಸುಗಳಲ್ಲಿ ಒಳಗೆ ಬಂದಿದ್ದ ಕಲ್ಲಡ್ಕ ಮತ್ತು ಕಾಸರಗೋಡಿನ ಹುಡುಗರು, ‘ಎಂಕ್ಲು ಕುಡ್ಲದಕುಲು’ ಎಂದು ಪರಿಚಯಿಸಿಕೊಂಡರು. ಒಬ್ಬಾತ ಸೆಲ್ಗಳನ್ನೆಲ್ಲಾ ಸುತ್ತಾಡಿಕೊಂಡು ಟವೆಲ್ನಲ್ಲಿ ದುಡ್ಡು ಕಾಣಿಕೆ ಹಾಕಿಸಿಕೊಂಡು ಬಂದಿದ್ದ, ಒಂದು ಸಾವಿರದ ನಾನೂರು ರೂಪಾಯಿ.

 ಕಲಬುರಗಿ ತಲುಪುವ ಹೊತ್ತಿಗೆ ನೀರು ಮತ್ತು ಧೂಳಿನ ಅಲರ್ಜಿಯಿಂದಾಗಿ ಗಂಟಲು ಬಿದ್ದು ಹೋಗಿ ಸ್ವರ ಇರಲಿಲ್ಲ. ಹಾಡಲು ಆಗದೇ ಬರೀ ಗಂಟಲು ಕೆರೆತ ಮತ್ತು ಕೆಮ್ಮು. ನನಗೆ ಅವಶ್ಯವಾಗಿ ಸ್ನಾನ ಮತ್ತು ಕುಡಿಯಲು ಬಿಸಿನೀರು ಬೇಕಿತ್ತು. ಈಗಾಗಲೇ ಪರಿಚಯದ ಮೂರ್ನಾಲ್ಕು ವ್ಯಕ್ತಿ ಮತ್ತು ಕುಟುಂಬಗಳಲ್ಲಿ ಕೇಳಿದೆ, ಸಬೂಬು ಹೇಳಿ ಜಾರಿಕೊಂಡರು. ಹೇಗೋ ಒಂದು ದಿನ ಲಾಡ್ಜ್ನಲ್ಲಿ ಉಳಿದೆ. ಹೊಟೇಲ್ನಲ್ಲಿ ಬಿಸಿನೀರು ಕೇಳಿದ್ರೆ ಕುದಿಸದ ಬಿಸಿ ಅಷ್ಟೇ, ಅದೂ ವಿವಿಧ ರೋಗಮೂಲದ ನೀರೇ. ಎರಡನೇ ದಿನಕ್ಕೆ ಕೆಮ್ಮು ಉಲ್ಬಣಿಸಿತು. ಮಲಗಲೂ, ನಿದ್ದೆ ಮಾಡಲೂ ಬಿಡದ ಕೆಮ್ಮು. ಮಿತ್ರನೊಬ್ಬ ಅವನ ಮನೆಗೊಯ್ದು ಬಿರಿಯಾನಿ ಉಣಿಸಿ ಕಳಿಸಿದ. ಅವರಿವರಿಗೆ ಕೇಳಿದೆ, ಬೇಡಿದೆ. ಕೆಲಸವಾಗಲಿಲ್ಲ. ಸಂಸ್ಥೆಯೊಂದರ ಬ್ರಾಂಚು ಅಲ್ಲೂ ಕೆಲಸ ಮಾಡುತ್ತಿತ್ತು.

ಆಗತಾನೇ ಹೊಸ ಕಚೇರಿ ಸಿಕ್ಕಿತ್ತು. ಆದರೆ ಒಂದು ಚಾಪೆಯೂ ಇಲ್ಲದ ಖಾಲಿ ಗೋಡೆಗಳು ಮಾತ್ರ ಉಳ್ಳ ಪ್ರಾರಂಭಿಕ ಸ್ಥಿತಿ ಅಲ್ಲಿನದು. ಈ ಲಾಡ್ಜಿನ ವಾಸನೆಗಿಂತ ಅದೇ ಆಗಬಹುದು ಅಂತ ಅಲ್ಲಿಗೆ, ಅವರ ಕಚೇರಿ ಫಾರ್ಮಾಲಿಟೀಸ್ ಮುಗಿಸಿಕೊಂಡು ವಿಶ್ರಾಂತಿಗೆ ತೆರಳಿದೆ. ಮೂರ್ನಾಲ್ಕು ದಿನಗಳ ಹಿಂಸೆ, ನಿದ್ದೆ ಇಲ್ಲದ ಸ್ಥಿತಿ, ಗಂಟಲಿಗೆ ಬಟ್ಟೆ ಒಗೆಯುವ ಬ್ರಶ್ ಹಾಕಿ ಪರಪರ ಕೆರೆದುಕೊಳ್ಳುವಷ್ಟು ಹಿಂಸೆ. ಬಿಸಿನೀರ ಮಗ್ಗ್ ಹೊಸದಾಗಿ ಖರೀದಿಸಿದೆ. ನೀರು ಕುದಿಸಿಕೊಂಡು ಗಟಗಟನೆ ಕುಡಿಯುತ್ತಾ ಮನಸಾರೆ ಅತ್ತುಬಿಟ್ಟೆ. ಅಷ್ಟೂ ದಿನಗಳ ಹಿಂಸೆ ಎರಡು ಮಗ್ಗ್ ಬಿಸಿನೀರ ಕುಡಿತ ಮತ್ತು ಬಿಸಿಕಣ್ಣೀರ ಜಳಕದಿಂದ ನಿರಾಳನಾದೆ.

ಮಿತ್ರ ದೇವರಾಜ್ ಬಂದರು. ಬಿಸಿನೀರ ಫ್ಲಾಸ್ಕ್, ಲೋಟ ಮತ್ತು ಔಷಧಿ ಕೊಡಿಸಿದರು. ಇದರ ಜೊತೆಗೇ ಐದು ದಿನಗಳು ಅಲ್ಲಲ್ಲಿ ಕಾಲೇಜು, ಹಾಸ್ಟೆಲ್ಗಳಲ್ಲಿ ಕಾರ್ಯಕ್ರಮ ಮುಂದುವರಿಯಿತು. ಬಳಿಕ ಅಲ್ಲಿಂದ ಅಪ್ಪಗೆರೆ ಸರ್ ಕಾಳಜಿಯಿಂದ ಕೇಂದ್ರೀಯ ವಿ.ವಿ.ಗೆ ತೆರಳಿದೆ. ಈ ಮಧ್ಯೆ ಸನತ್ಕುಮಾರ್ ಬೆಳಗಲಿ ಕುಟುಂಬದ ಸಹಾಯ, ವಿಕ್ರಮ್ ಇಸಾಜಿ ಸರ್ ಒಳನೋಟಗಳು, ಮಹಾದೇವ ಹಡಪದ್ ತಂಡದ ಮಾಂಟೋ ನಾಟಕ, ಕಲಬುರಗಿ ಸಿಟಿಯ ಅಲ್ಲಲ್ಲಿಯ ಟೀಪೆಟ್ಟಿಗೆಗಳ ಅದ್ಭುತ ಚಹಾ, 30ರೂಪಾಯಿಗೆ ಸಿಗುತ್ತಿದ್ದ ಅರ್ಧಪ್ಲೇಟು ತಾಹಿರಿಯ ರುಚಿ, ಗುಂಡು ಎಂಬ ಮುದ್ದು ಮಗುವಿನ ಆಟ ಮಾತುಗಳು ಮರೆಯಲಾಗದ ನೆನಪುಗಳು.

 153ನೇ ದಿನ ಬೆಳ್ತಂಗಡಿ ಬಾಂಜಾರುಮಲೆಯಲ್ಲಿ ಮಲೆಕುಡಿಯ ಆದಿವಾಸಿ ಸಮುದಾಯದೊಂದಿಗೆ ಕತ್ತಲಹಾಡು ಆಯೋಜನೆ ಆಗಿತ್ತು. ಅಲ್ಲೊಂದು ಕಟ್ಟೆ. ಅದು 1981ರಲ್ಲಿ ಡಿಸಿ ಅವರು ಬರುವ ನೆಪಕ್ಕಾಗಿ ಕಟ್ಟಲಾದುದು, ಈಗದು ಡಿಸಿಕಟ್ಟೆ ಅಂತಲೇ ಕರೆಸಿಕೊಳ್ತಿದೆ. ಆ ಕಟ್ಟೆಯ ಮೇಲೆ ಕತ್ತಲಹಾಡು. ರಾಜ್ಯದ ವಿವಿಧೆಡೆಗಳಲ್ಲಿ ವಿವಿಧ ದೀಪ, ಬೆಳಕು, ಡಿಸೈನ್ ಮೂಲಕ ಈ ಮೂರು ವರ್ಷಗಳಲ್ಲಿ ಕತ್ತಲಹಾಡು ಜರುಗಿತ್ತು. ಆದರೆ ಇದು ಬಹುವಿಶಿಷ್ಟ. ಕಟ್ಟೆಯ ಮೇಲೆ ಒಂದೆರಡು ಕಾಲುದೀಪಗಳನ್ನು ಉರಿಸಿ ಇಟ್ಟಿದ್ದರು.

ಆ ದಟ್ಟಕಾಡಿನ ಸಹಜ ಕತ್ತಲು, ಜೀರುಂಡೆ, ನೀರವತೆ ಜೊತೆಗೆ ಎಲ್ಲೆಡೆಗಳಿಂದ ದೀಪಗಳನ್ನು ಹಿಡಿದುಕೊಂಡು ಅವರೆಲ್ಲ ನೆರೆದರು. ಎಲ್ಲರ ಕೈಯಲ್ಲೂ ಚಿಮಣಿ ದೀಪಗಳು. ತಂದ ಎಲ್ಲರೂ ಕಟ್ಟೆಯ ಸುತ್ತಲೂ ಆ ಚಿಮಣಿದೀಪಗಳನ್ನು ಜೋಡಿಸಿದರು. ಹಾಗೆ ಚಿಮಣಿದೀಪಗಳ ಜೊತೆಗೆ ಏಕೈಕ ಕತ್ತಲಹಾಡು ಅಲ್ಲಿ ಜರುಗಿತು. ನನ್ನ ಬಾಲ್ಯ ಪೂರಾ ಇದೇ ಚಿಮಣಿದೀಪ, ಬೀಡಿಯ ಸೂಪು ಹಾಗೂ ಹಸಿವು, ಭಯ... ಎಲ್ಲವೂ ಆವತ್ತು ಮರುಕಳಿಸಿದಂತಿತ್ತು.

ಹೀಗೇ ಹೇಳುತ್ತಾ ಹೋದರೆ ಪ್ರತಿದಿನದ ಹತ್ತಾರು ವಿಶಿಷ್ಟ ಸಂಗತಿಗಳು, ವ್ಯಕ್ತಿಗಳು, ಕಾರ್ಯಕ್ರಮಗಳು ಎಲ್ಲವೂ ತೀರುವುದಿಲ್ಲ. 2018ರ ಜುಲೈ 25ರಂದು ಮಡಿಕೇರಿಯ ಮೂರ್ನಾಡು ಬಿಸಿಎಂ ಹಾಸ್ಟೆಲ್ ಮಕ್ಕಳ ಜೊತೆಗೆ ಮೊದಲ ಕಾರ್ಯಕ್ರಮ ಆರಂಭಿಸಿ, 2019ರ ಎಪ್ರಿಲ್ 1ರಂದು ಬೆಳ್ಳಾರೆಯ ಜ್ಞಾನಗಂಗಾ ಶಾಲೆಯ ಕೊನೆಯ ಕತ್ತಲಹಾಡು ಮೂಲಕ ಕರ್ನಾಟಕ ಯಾತ್ರೆಯ ಪ್ರಯಾಣಕ್ಕೆ ಒತ್ತಾಯದ ವಿರಾಮವನ್ನು ನಾನೇ ಹಾಕಿಕೊಂಡೆ. ಕೊಟ್ಟ ಕಾಣಿಕೆ ದುಡ್ಡು ಸ್ವೀಕರಿಸಿದ್ದೇನೆ, ಕೊಡದವರನ್ನು ಹಿಂದೆಮುಂದೆ ಬಯ್ದಾಡಿಕೊಂಡಿಲ್ಲ.

ಯಾವುದೋ ಮಧ್ಯರಾತ್ರಿ ಬಸ್ಸ್ಟ್ಯಾಂಡ್, ರೈಲ್ವೇ ಸ್ಟೇಷನ್ಗಳಲ್ಲಿ ಬಂದು ಕಾದು ನನ್ನನ್ನು ಸ್ವೀಕರಿಸಿಕೊಂಡು ಮನೆಗೆ ಕರೆದೊಯ್ದವರಿದ್ದಾರೆ, ಎಲ್ಲೋ ಹಾದಿಯಲ್ಲಿ ಗುರುತು ಹಿಡಿದು ಮನೆಗೆ ಕರ್ಕೊಂಡು ಹೋಗಿ ಊಟ ಹಾಕಿ ಸತ್ಕರಿಸಿದವರಿದ್ದಾರೆ, ಎಲ್ಲಿಂದ ಎಲ್ಲಿಗೋ ಡ್ರಾಪ್ ಮಾಡಿ ಆಯಾಸಗೊಂಡವರಿದ್ದಾರೆ. 251 ದಿನಗಳ ಪ್ರಯಾಣದಲ್ಲಿ 120ಕ್ಕೂ ಅಧಿಕ ಮನೆ ಮತ್ತು ಕುಟುಂಬಗಳ ಜೊತೆ ಉಳಿದುಕೊಂಡಿದ್ದೇನೆ, ಅವರು ಕೊಟ್ಟದ್ದನ್ನು ಉಂಡಿದ್ದೇನೆ, ಅವರ ಮಾನವೀಯ ಅಂತಃಕರಣದ ಸವಿಯನ್ನು ನೆನಪಿಟ್ಟುಕೊಂಡಿದ್ದೇನೆ ಮತ್ತು ಇವರೆಲ್ಲರೂ ಬಹುತೇಕ ಈ ಯಾತ್ರೆಯಿಂದಲೇ ಪರಿಚಿತರಾದವರು.

ಈ ಮೊದಲು ನಾನು ಹಾಡುತ್ತಿದ್ದ ಹಾಡುಗಳು ಇನ್ನಷ್ಟು ಒಳನೋಟಗಳು ಕಂಡಿವೆ, ನನ್ನ ನಡೆ -ನುಡಿಯ ಅಂತರಗಳು ಕಡಿಮೆಯಾಗಿವೆ, ಭೇಟಿಯಾದ ನೂರಾರು ಶಾಲೆ -ಕಾಲೇಜು -ಕುಟುಂಬಗಳು ಇಂದಿಗೂ ಸಂಪರ್ಕಿಸುತ್ತಾ ಜೀವ ಸಂವೇದನೆಯ ಸಹಭಾಗಿಗಳಾಗಿದ್ದೇವೆ. ಶಿಕ್ಷಣ ವ್ಯವಸ್ಥೆಯ ಮಿತಿಗಳನ್ನು ವಿಶಿಷ್ಟವಾಗಿ ದಾಟಿಕೊಂಡವರು, ಸೇವೆಯನ್ನು ಯಾವುದೇ ಹಿತಾಸಕ್ತಿ ಅಥವಾ ರಾಜಕೀಯಗಳಿಲ್ಲದೆ ಮಾಡುತ್ತಿರುವವರು, ಭ್ರಮೆಗಳನ್ನು ಒಡೆದುಕೊಂಡವರು, ಗಡಿಗಳನ್ನು ಅರಿತವರು- ಮೀರಿದವರು ಅಥವಾ ಇದೆಲ್ಲದರ ಜೊತೆಗೆ ಯಾವ ಅರಿವೂ ಇಲ್ಲದೆ ಅದೇ ರೂಢಿಯ ಬದುಕನ್ನು ಸಾಗಿಸುತ್ತಾ ಇರುವವರು.. ಎಲ್ಲ ತರದವರನ್ನೂ ಭೇಟಿಯಾಗಲು ಸಾಧ್ಯವಾಯ್ತು. ಎಲ್ಲಕ್ಕಿಂತಲೂ ಹೆಚ್ಚಾಗಿ ನಾನು ಇನ್ನಷ್ಟು ಹದವಾಗಿದ್ದೇನೆ, ಮೆದುವಾಗಿದ್ದೇನೆ. ಹೊಸದು ಬೆಳೆಯಲು ಇನ್ನೇನು ಬೇಕು?

153ನೇ ದಿನ ಬೆಳ್ತಂಗಡಿ ಬಾಂಜಾರುಮಲೆಯಲ್ಲಿ ಮಲೆಕುಡಿಯ ಆದಿವಾಸಿ ಸಮುದಾಯದೊಂದಿಗೆ ಕತ್ತಲಹಾಡು ಆಯೋಜನೆ ಆಗಿತ್ತು. ಅಲ್ಲೊಂದು ಕಟ್ಟೆ. ಅದು 1981ರಲ್ಲಿ ಡಿಸಿ ಅವರು ಬರುವ ನೆಪಕ್ಕಾಗಿ ಕಟ್ಟಲಾದುದು, ಈಗದು ಡಿಸಿಕಟ್ಟೆ ಅಂತಲೇ ಕರೆಸಿಕೊಳ್ತಿದೆ. ಆ ಕಟ್ಟೆಯ ಮೇಲೆ ಕತ್ತಲಹಾಡು. ರಾಜ್ಯದ ವಿವಿಧೆಡೆಗಳಲ್ಲಿ ವಿವಿಧ ದೀಪ, ಬೆಳಕು, ಡಿಸೈನ್ ಮೂಲಕ ಈ ಮೂರು ವರ್ಷಗಳಲ್ಲಿ ಕತ್ತಲಹಾಡು ಜರುಗಿತ್ತು. ಆದರೆ ಇದು ಬಹುವಿಶಿಷ್ಟ. ಕಟ್ಟೆಯ ಮೇಲೆ ಒಂದೆರಡು ಕಾಲುದೀಪಗಳನ್ನು ಉರಿಸಿ ಇಟ್ಟಿದ್ದರು. ಆ ದಟ್ಟಕಾಡಿನ ಸಹಜ ಕತ್ತಲು, ಜೀರುಂಡೆ, ನೀರವತೆ ಜೊತೆಗೆ ಎಲ್ಲೆಡೆಗಳಿಂದ ದೀಪಗಳನ್ನು ಹಿಡಿದುಕೊಂಡು ಅವರೆಲ್ಲ ನೆರೆದರು.

ಪ್ರತಿದಿನದ ಹತ್ತಾರು ವಿಶಿಷ್ಟ ಸಂಗತಿಗಳು, ವ್ಯಕ್ತಿಗಳು, ಕಾರ್ಯಕ್ರಮ ಗಳು ಎಲ್ಲವೂ ತೀರುವುದಿಲ್ಲ. 2018ರ ಜುಲೈ 25ರಂದು ಮಡಿಕೇರಿಯ ಮೂರ್ನಾಡು ಬಿಸಿಎಂ ಹಾಸ್ಟೆಲ್ ಮಕ್ಕಳ ಜೊತೆಗೆ ಮೊದಲ ಕಾರ್ಯಕ್ರಮ ಆರಂಭಿಸಿ, 2019ರ ಎಪ್ರಿಲ್ 1 ರಂದು ಬೆಳ್ಳಾರೆಯ ಜ್ಞಾನಗಂಗಾ ಶಾಲೆಯ ಕೊನೆಯ ಕತ್ತಲಹಾಡು ಮೂಲಕ ಕರ್ನಾಟಕ ಯಾತ್ರೆಯ ಪ್ರಯಾಣಕ್ಕೆ ಒತ್ತಾಯದ ವಿರಾಮವನ್ನು ನಾನೇ ಹಾಕಿಕೊಂಡೆ. ಕೊಟ್ಟ ಕಾಣಿಕೆ ದುಡ್ಡು ಸ್ವೀಕರಿಸಿದ್ದೇನೆ, ಕೊಡದವರನ್ನು ಹಿಂದೆ ಮುಂದೆ ಬಯ್ದಾಡಿಕೊಂಡಿಲ್ಲ. ಯಾವುದೋ ಮಧ್ಯರಾತ್ರಿ ಬಸ್ಸ್ಟ್ಯಾಂಡ್, ರೈಲ್ವೇ ಸ್ಟೇಷನ್ಗಳಲ್ಲಿ ಬಂದು ಕಾದು ನನ್ನನ್ನು ಸ್ವೀಕರಿಸಿಕೊಂಡು ಮನೆಗೆ ಕರೆದೊಯ್ದವರಿದ್ದಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top