ಎಲುಗನೆಂಬ ಪ್ರಧಾನಿಯೂ, ಚವುಡನೆಂಬ ಪ್ರೇತಾತ್ಮವೂ...
-

ಕುಂ.ವೀ. ಎಂದೇ ಜನಪ್ರಿಯರಾಗಿರುವ ಕಾದಂಬರಿಕಾರ, ಕತೆಗಾರ ಕುಂ. ವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನವರು. 1953ರ ಅಕ್ಟೋಬರ್ 1ರಂದು ಜನಿಸಿದರು. ‘ಬೇಲಿ ಮತ್ತು ಹೊಲ’ ಕಿರುಕಾದಂಬರಿಯ ಮೂಲಕ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ. ವೀರಭದ್ರಪ್ಪ, ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಮತ್ತು ನುಡಿಗಟ್ಟುಗಳಿಂದ. ಅವರ ಕತೆಗಳಲ್ಲಿ, ಕಾದಂಬರಿಗಳಲ್ಲಿ ಕಾಣಿಸಿಕೊಂಡ ಭಾಷೆ ಅವರಿಗೆ ಸಾಹಿತ್ಯದಲ್ಲೊಂದು ಪ್ರತ್ಯೇಕ ಸ್ಥಾನ ಕಲ್ಪಿಸಿಕೊಟ್ಟಿತು. ‘ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ’, ‘ಕತ್ತಲಿಗೆ ತ್ರಿಶೂಲ ಹಿಡಿದ ಕತೆ’ಗಳ ಮೂಲಕ ಸಣ್ಣ ಕತೆಯ ದಿಕ್ಕನ್ನು ಬದಲಾಯಿಸಿದರು. ಕುಂ. ವೀರಭದ್ರಪ್ಪನವರಿಗೆ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಜೊತೆಗೆ ರಾಜ್ಯಸಾಹಿತ್ಯ ಅಕಾಡಮಿ ಪ್ರಶಸ್ತಿ, ವರ್ಧಮಾನ್ ಪ್ರಶಸ್ತಿ, ಲಂಕೇಶ್ ಪ್ರಶಸ್ತಿ ಅಲ್ಲದೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದರೆ ಕನ್ನಡ ಸಾಹಿತ್ಯ ಪರಿಷತ್ತು ನೃಪತುಂಗ ಪ್ರಶಸ್ತಿಯೊಂದಿಗೆ ಗೌರವಿಸಿದೆ.
ಕುಂ. ವೀರಭದ್ರಪ್ಪ
ಸ್ವರ್ಗಲೋಕ ತನ್ನ ಪ್ರತಿಸ್ಪರ್ಧಿ ನರಕಲೋಕ ಹಲವು ಯೋಜನಗಳಷ್ಟು ದೂರವಿದೆ ಎಂದು ಭಾವಿಸಿತ್ತು. ಆದರೆ ಆ ಪಾಪಿಗಳ ಲೋಕ ತೀರಾ ಹತ್ತಿರವಿದೆ ಎಂದು ತಿಳಿಯುವ ಹೊತ್ತಿಗೆ ಕಾಲ ಮಿಂಚಿತ್ತು. ಆರಂಭದಲ್ಲಿ ಅದು ಅದನ್ನು ನಿರ್ಲಕ್ಷಿಸಿತ್ತು. ಅದಕ್ಕೂ ಹಿಂದೆ ಆ ಎರಡೂ ಲೋಕಗಳ ಸ್ಥಳೀಯ ಆಡಳಿತ ವ್ಯವಸ್ಥೆ ಕುರಿತಂತೆ, ಆತ್ಮಗಳ ಕೊಡುಕೊಳ್ಳುವಿಕೆ ಕುರಿತಂತೆ ಒಂದು ಸುತ್ತಿನ ಮಾತುಕತೆ ಸಹ ನಡೆದಿತ್ತು. ಅಕಸ್ಮಾತ್ ನಿಮ್ಮ ಲೋಕದವರು ನಮ್ಮ ಲೋಕದ ಗಡಿ ಉಲ್ಲಂಘಿಸಿದರೆ ಯಾರು ಹೊಣೆ ಎಂದು ನರಕಲೋಕದ ಮುಖ್ಯ ಆಡಳಿತಾಧಿಕಾರಿ ಪಂ ಸಣ್ಣೀರ ಆಕ್ಷೇಪ ಸಲ್ಲಿಸಿದನು, ಅದಕ್ಕೆ ಸ್ವರ್ಗಲೋಕದ ಆಡಳಿತಾಧಿಕಾರಿ ಡಾ. ದೊಡ್ಡೀರ ಮತ್ತವನ ಸಹೋದ್ಯೋಗಿಗಳು ನಗಾಡಿದ್ದರು.
ಅವರಲ್ಲಿ ನೈರ್ಮಲ್ಯಾಧಿಕಾರಿ ಪೈಕಿ ಓಬಲೇಸು ನಮ್ಮ ಸ್ವರ್ಗವಾಸಿಗಳು ಗಡಿರೇಖೆ ಉಲ್ಲಂಘಿಸುವುದೊತ್ತಟ್ಟಿಗಿರಲಿ, ನಮ್ಮ ಪ್ರಜಾನಿಕದ ಕಟ್ಟಕಡೆಯ ವ್ಯಕ್ತಿಯ ಆತ್ಮ ಸಹ ನಿಮ್ಮ ಲೋಕವಿರುವ ದಿಕ್ಕಿನ ಕಡೆ ತಲೆ ಹಾಕಿ ಮಲಗುವುದಿಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಆ ಮಾತಿಗೆ ಬೆಂಬಲವಾಗಿ ಸ್ವರ್ಗಲೋಕದ ಅಧೀಕ್ಷಕ ದುರ್ಗಪ್ಪ ನಿಮ್ಮ ಲೋಕದವರು ಗಡಿ ರೇಖೆಯ ಬಳಿ ನಿಂತು ನಮ್ಮ ಲೋಕದ ಕಡೆ ದೃಷ್ಟಿ ಹಾಯಿಸಿದರೆ ನಾವು ಹಿಡಿದು ವಿಚಾರಣೆಗೊಳಪಡಿಸುತ್ತೇವೆ, ಏಕೆಂದರೆ ಇದು ನಮ್ಮ ಲೋಕದ ಪಾವಿತ್ರ್ಯ ಹಾಗೂ ನೈರ್ಮಲ್ಯದ ಪ್ರಶ್ನೆ ಎಂದು ಖಾರವಾಗಿ ಹೇಳಿದ. ಅವರ ಮಾತಿನಿಂದ ಸೂಕ್ಷ್ಮಮತಿ ಸಣ್ಣೀರನ ಮನಸ್ಸಿಗೆ ನೋವಾಯಿತು, ಆತ ತಲೆ ತಗ್ಗಿಸಿ ಅಯ್ಯೋ ನತದೃಷ್ಟ ಲೋಕವೇ ಎಂದು ಸ್ವಗತವಾಗಿ ಮರುಗಿದ. ತಮ್ಮ ಸಹಚರರ ಕಡೆ ಪ್ರಶ್ನಾರ್ಥಕ ನೋಟ ಬೀರಿದನು.
ಆತನ ಮನದಿಂಗಿತ ಅರ್ಥ ಮಾಡಿಕೊಂಡ ಶಿಕ್ಷಾಸಂಹಿತೆ ವಿಭಾಗದ ಮುಖ್ಯಸ್ಥ ತಿಂದಪ್ಪ ನಮ್ಮ ನರಕಲೋಕವನ್ನು ನಿಮ್ಮ ಹರಿತ ನುಡಿಗಳಿಂದ ಅಪಹಾಸ್ಯ ಮಾಡದಿರಿ ಸನ್ಮಾನ್ಯರೆ, ನಮ್ಮ ಲೋಕಕ್ಕೆ ಆಗಮಿಸುವ ಪಾಪಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ, ಪಾಪಿಗಳಿರುವ ಕಡೆ ರೋಗರುಜಿನ ಸಂಕಟ ನೋವು ಸಾಮಾನ್ಯ. ಲೋಕದ ವಿಸ್ತೀರ್ಣ ಹೆಚ್ಚಿಸುವಂತೆಯೂ ಅಗತ್ಯ ಸಿಬ್ಬಂದಿ ನೇಮಕಾತಿ ಮಾಡುವಂತೆಯೂ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿರುವೆವು. ಅಲ್ಲಿಯವರೆಗೆ ನಮ್ಮ ಲೋಕದ ನಿವಾಸಿಗಳಿಂದ ಚಿಕ್ಕಪುಟ್ಟ ತೊಂದರೆಗಳು ಸಂಭವಿಸಿದರೆ ಕ್ಷಮಿಸಿರೆಂದು ವಿನಂತಿಸುವೆನು ಎಂದು ಹೇಳಿದ.
ಆತನ ಮಾತಿನಿಂದ ಕೊಟ್ರಪ್ಪ ಮತ್ತಾತನ ಸಂಗಡಿಗರ ಮನಸ್ಸಿಗೆ ನೋವಾಯಿತು. ಪರಿಸ್ಥಿತಿ ಹೀಗಿರುವಾಗ ಖಾರವಾಗಿ ಮಾತಾಡುವುದು ಸರಿ ಅಲ್ಲವೆಂದು ಭಾವಿಸಿದನು. ಮುಖ್ಯಾಡಳಿತಾಧಿಕಾರಿಯ ಕಣ್ಸನ್ನೆಯನ್ನು ಸ್ವರ್ಗಲೋಕದ ರಕ್ಷಣಾಧಿಕಾರಿ ಠೊಣ್ಣಿ ಅರ್ಥ ಮಾಡಿಕೊಂಡು ನಿಮ್ಮ ಸಂಕಟ ನಮಗೆಲ್ಲ ಅರ್ಥವಾಯಿತು, ಆದರೆ ನಮ್ಮ ಲೋಕನಿವಾಸಿಗಳು ನಿಮ್ಮ ಪ್ರಜೆಗಳ ಹಾಗೆ ಪಾಪಿಗಳಲ್ಲ ಪುಣ್ಯವಂತರು, ಅವರಿಗೆ ಕಿಂಚಿತ್ ನೋವಾಗದ ಹಾಗೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಆದ್ದರಿಂದ ನಿಮ್ಮವರನ್ನು ನೀವು ನಿಯಂತ್ರಿಸಲು ಕಠಿಣ ಕಾನೂನು ಜಾರಿಗೊಳಿಸಿದರೆ ಸಾಕು ಎಂದು ಮನವಿ ಮಾಡಿಕೊಂಡ.
ಇಂಥ ಆಡಳಿತಾತ್ಮಕ ಮಾತುಕತೆಗಳು ಒಂದೆ ಎರಡೆ, ಹಲವು ಸಲ ನಡೆದರೂ ಪ್ರಯೋಜನವಾಗಲಿಲ್ಲ, ಅಲ್ಲದೆ ನರಕಲೋಕಕ್ಕೆ ಸತ್ಯಯುಗದಲ್ಲಿ ಭೂಮಿ ಮಂಜೂರು ಮಾಡಲಾಗಿತ್ತು, ಆ ಕಾಲದಲ್ಲಿ ಪಾಪಿಗಳ ಪ್ರಮಾಣ ಅತ್ಯಲ್ಪವಿತ್ತು, ಆ ಕಾಲದ ಉಭಯಲೋಕಗಳ ವರಿಷ್ಠರಿಗೆ ಭವಿಷ್ಯದ ಅರಿವು ಇರಲಿಲ್ಲ. ಆದರೆ ಯುಗದಿಂದ ಯುಗಕ್ಕೆ ಪಾಪಿಗಳ ಸಂಖ್ಯೆ ಯಾವ ಪ್ರಮಾಣದಲ್ಲಿ ಹೆಚ್ಚಲಾರಂಭಿಸಿತು, ಆದರೆ ಕಲಿಯುಗದಲ್ಲಿ ಅದರ ಪ್ರಮಾಣ ಗರಿಷ್ಠ ಮಟ್ಟ ತಲುಪಿತು, ಅದರಲ್ಲೂ ಇತ್ತೀಚಿನ ದಶಕಗಳಲ್ಲಿ ನರಕಲೋಕದಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಯಿತು, ನರಕಲೋಕದಲ್ಲಿನ ನಿವಾಸಿಗಳು ಸಂಘಟಿತರಾಗುವುದು, ಮೂಲಭೂತ ಸೌಕರ್ಯಗಳಿಗೆ ಹೋರಾಡುವುದು, ಇದು ಹೇಳಿಕೇಳಿ ನರಕ, ಕುಂದುಕೊರತೆಗಳು ಸಹ ಶಿಕ್ಷೆಯ ಒಂದು ಭಾಗ ಎಂದು ತಿಳಿಯಿರಿ ಎಂಬಂಥ ಮಾತುಗಳನ್ನು ಕೇಳಿಸಿಕೊಳ್ಳುವುದು ಮಾಮೂಲಾಯಿತು.
ಕಾಲ ಉರುಳಿದಂತೆ ನರಕಲೋಕದಲ್ಲಿನ ಪಾಪಿಗಳು ರೋಸಿದರು. ನೆರೆ ಸ್ವರ್ಗಲೋಕದಲ್ಲಿ ತಮ್ಮಿಂದ ತೊಂದರೆಗೀಡಾಗಿ ಅಕಾಲಮೃತ್ಯುವಿಗೀಡಾಗಿರುವವರು ಸುಖಸಂತೋಷದಿಂದಿರುವುದು ಎಂದರೇನು? ಅದಕ್ಕೆ ಕಾರಣಕರ್ತರಾದ ತಾವು ಈ ದರಿದ್ರಲೋಕದಲ್ಲಿ ಅಷ್ಟಕಷ್ಟಗಳನ್ನು ಅನುಭವಿಸುವುದೆಂದರೇನು? ಇದು ಯಾವ ನ್ಯಾಯ! ಎಂದು ತುಲನಾತ್ಮಕವಾಗಿ ಯೋಚಿಸಲಾರಂಭಿಸಿದರು. ಆದರೆ ತಮ್ಮ ಪಂಚೇಂದ್ರಿಯಗಳ ಪೈಕಿ ಯಾವ ಇಂದ್ರಿಯ ಸಹ ಅದನ್ನು ಅನುಭವಿಸಿರಲಿಲ್ಲ, ಸಮಾಧಾನಕರ ಅಂಶವೆಂದರೆ ಉಭಯಲೋಕಗಳ ಗಡಿರೇಖೆ ಭದ್ರವಾಗಿರಲಿಲ್ಲ. ಕಳೆದ ಕೆಲವು ಯುಗಗಳಿಂದ ಭದ್ರತಾಸಿಬ್ಬಂದಿಯ ನೇಮಕಾತಿ ನಡೆದಿರಲಿಲ್ಲ, ಆ ಪುರಾತನಯುಗದ ಕಾವಲುಗಾರರು ಏಕತಾನತೆಯಿಂದ ರೋಸಿದ್ದರು, ಮುಂದಿನ ದಿನಗಳಲ್ಲಿ ಹಿರಿಯ ತಲೆಮಾರಿನ ಕುಖ್ಯಾತ ಪಾಪಿಗಳನ್ನು ಗಡಿರೇಖೆಯ ರಕ್ಷಣೆಗೆ ನಿಯೋಜಿಸಲಾಯಿತು.
ಇಂಥ ಕೆಲವು ನ್ಯೂನತೆಗಳಿಂದ ನರಕಲೋಕದ ಆಡಳಿತದ ಗುಣಮಟ್ಟ ಕುಸಿಯಿತು. ಬುದ್ಧಿವಾದ ಹೇಳುವವರು, ಉಪಯುಕ್ತ ಸಲಹೆ ಸೂಚನೆ ನೀಡುವವರು ಇಲ್ಲವಾದರು. ಹೀಗಾಗಿ ನರಕಲೋಕದ ಕೆಲವು ನಿಷ್ಣಾತ ಪಾಪಿಗಳು ಗಡಿರೇಖೆ ಉಲ್ಲಂಘಿಸಿ ಸ್ವರ್ಗಲೋಕದೊಳಗೆ ನುಸುಳಲಾರಂಭಿಸಿದರು, ಅದೂ ಪುಣ್ಯವಂತರ ಮುಖವಾಡ ಧರಿಸಿ! ಮಹಾಸಜ್ಜನರಂತೆ ವೇಷಮರೆಮಾಚಿ! ಪುನುಗುಬೆಕ್ಕುಗಳು ಛದ್ಮವೇಷಧರಿಸಿದ್ದರೂ ಅವುಗಳ ದೇಹದಿಂದ ಪರಿಮಳ ಯಾವ ರೀತಿ ಪಸರಿಸುವುದೊ ಅದೇ ಪ್ರಕಾರ ಪಾಪಿಗಳು ಮಾರುವೇಷದಲ್ಲಿದ್ದರೂ ಅವರವರ ಶರೀರದ ಶ್ವೇದರಂಧ್ರಗಳ ಮೂಲಕ ಪಾಪಗಳ ಪರಿಣಾಮ ನಿಧಾನವಾಗಿ ಸ್ವರ್ಗಲೋಕದ ಸಜ್ಜನಿಕೆಯನ್ನು ಹಾಳುಗೆಡುವಲಾರಂಭಿಸಿತು.
ಹಂತಹಂತವಾಗಿ ಅರಿಷಡ್ವರ್ಗಗಳು ಕೆರಳಲಾರಂಭಿಸಿದವು, ಜಿತೇಂದ್ರಿಯರು ಚಿತ್ತಚಾಪಲ್ಯಕ್ಕೊಳಗಾದರು. ಋಷಿಸದೃಶರಂತಿದ್ದವರು ಇನ್ನೋರ್ವ ಪುಣ್ಯವಂತರ ಪತ್ನಿಯರ ಸಂಗವನ್ನಾಪೇಕ್ಷಿಸಲಾರಂಭಿಸಿದರು, ಮಹಾದಾನಿಗಳೆನ್ನಿಸಿದ್ದವರು ಪರರ ಧನವನ್ನು ಕಳವು ಮಾಡಲಾರಂಭಿಸಿದರು! ಇಂಥ ದುಷ್ಕೃತ್ಯಗಳಿಂದ ಅಲ್ಲಿನ ಪುಣ್ಯಭಾಜನರು ಆಡಳಿತ ವ್ಯವಸ್ಥೆ ವಿರುದ್ಧ ದಂಗೆ ಎದ್ದರು. ಇದರಿಂದ ಅಲ್ಲಿನ ಗೃಹ ಇಲಾಖೆ ಎಚ್ಚೆತ್ತಿತು. ಸ್ವರ್ಗಲೋಕದ ಗೂಢಚಾರ ಸಂಸ್ಥೆ ಛಪ್ಪನ್ನಾರು ಲೋಕಗಳಲ್ಲಿ ಹೆಸರು ಮಾಡಿತ್ತಷ್ಟೆ, ಅದರ ಕ್ಷಿಪ್ರ ಕಾರ್ಯಾಚರಣೆಯಿಂದ ಒಂದೇ ದಿವಸದಲ್ಲಿ ಅಸಂಖ್ಯಾತ ನರಕಲೋಕ ಮೂಲದ ಛದ್ಮವೇಷಧಾರಿಗಳು ಬಂಧಿಸಲ್ಪಟ್ಟರು. ಅವರೆಲ್ಲ ಆಯಕಟ್ಟಾದ ಸ್ಥಳಗಳನ್ನಾಕ್ರಮಿಸಿ ದುಷ್ಕೃತ್ಯವೆಸಗತೊಡಗಿದ್ದರು.
+ಅವರ ಪಾಪಕೃತ್ಯಗಳು ಸ್ವರ್ಗ ಲೋಕದಲ್ಲೆಲ್ಲಾ ಹರಡಿವೆ ಎಂಬ ಸಂಗತಿ ತಿಳಿದು ಅಲ್ಲಿನ ಪ್ರಧಾನಮಂತ್ರಿ ಕ್ಯಾತೇಗೌಡ ದಿಗ್ಭ್ರಾಂತರಾದರು. ಸ್ವರ್ಗಲೋಕದ ಪ್ರಥಮಪ್ರಜೆ ನಿರ್ದೇಶನದಂತೆ ತಜ್ಞರಸಮಿತಿಯನ್ನು ನೇಮಿಸಲಾಯಿತು. ಆ ಸಮಿತಿ ಹಲವು ಮಾಸಗಳ ಕಾಲ ಬೌದ್ಧಿಕವಾಗಿ ಶ್ರಮಿಸಿ ಸರಕಾರಕ್ಕೆ ವರದಿ ಸಲ್ಲಿಸಿತು, ಆ ವರದಿಯಲ್ಲಿ ಏನಿತ್ತೆಂದರೆ..
ಪಾಪ ಸಂಬಂಧೀ ರೋಗಾಣುಗಳಿಗೆ ಚುಚ್ಚುಮದ್ದು ಕಂಡು ಹಿಡಿಯುವುದು, ಆ ಚುಚ್ಚುಮದ್ದನ್ನು ಸ್ವರ್ಗಲೋಕವಾಸಿಗಳಿಗೆ ಹಾಕುವುದು! ಅಕ್ರಮ ವಲಸೆಗಾರರನ್ನು ಪುನಃ ನರಕಲೋಕಕ್ಕೆ ಕಳಿಸುವುದು ಎಷ್ಟು ಮುಖ್ಯವೋ ಉಭಯಲೋಕಗಳ ಪ್ರಭುತ್ವಗಳು ಒಂದೆಡೆ ಸೇರಿ ಪರಸ್ಪರ ವಿಚಾರ ವಿನಿಮಯ ನಡೆಸುವುದು ಅಷ್ಟೇ ಮುಖ್ಯ! ತಿಳಿಸಿದೊಡನೆ ನೆರೆಲೋಕದ ಸಮ್ಮತಿ ದೊರೆಯಿತು. ನಿಗದಿತ ದಿವಸದಂದು ಸ್ವರ್ಗಲೋಕದ ಪ್ರಧಾನಿ ಕ್ಯಾತೇಗೌಡ ಹಾಗೂ ನರಕಲೋಕದ ಪ್ರಧಾನಿ ಜವರೇಗೌಡ ಅಶರೀರವಾಣಿ ಮೂಲಕ ಮೊದಲ ಸುತ್ತಿನ ಮಾತುಕತೆ ನಡೆಸಿದರು, ಬಳಿಕ..
ಶೌಚಗಿರಿ ಹೆಸರಿನ ಗಿರಿಧಾಮ ಆ ಎರಡೂ ಲೋಕಗಳಿಗೆ ಈಶಾನ್ಯ ದಿಕ್ಕಿನಲ್ಲಿತ್ತು. ಗಿರಿಶೃಂಗ ದಲ್ಲಿದ್ದ ಅಪಾನವಾಯು ಹೆಸರಿನ ಭವನ ಗಿರಿಶೃಂಗದಲ್ಲಿ ವಿರಾಜಮಾನಗೊಂಡಿತ್ತು. ಅದರಲ್ಲಿ ಸ್ವರ್ಗಲೋಕದ ಕಾರ್ಯದರ್ಶಿ ಪ್ರಕಾಸ ಹಾಗೂ ನರಕಲೋಕದ ಕಾರ್ಯದರ್ಶಿ ಕತ್ತಲ ಸೇರಿದರು, ಅವರಿಬ್ಬರು ತಮ್ಮ ತಮ್ಮ ಲೋಕಗಳಲ್ಲಿನ ಆತ್ಮಗಳ ಆಯವ್ಯಯ ಕುರಿತಂತೆ ಸುದೀರ್ಘ ಚರ್ಚೆ ನಡೆಸಿದರು. ಭೂಲೋಕದಲ್ಲಾದರೆ ಜೀವಗಳ ಆಯವ್ಯಯ ನಿರಂತರ ವಾಗಿರುತ್ತದೆ, ಆದರೆ ತಮ್ಮ ಲೋಕಗಳಲ್ಲಿ ಆತ್ಮಗಳ ಬಟವಾಡೆ ಇಲ್ಲದಿರುವುದು ಈ ದುಃಸ್ಥಿತಿಗೆ ಮೂಲಕಾರಣ, ಇದಕ್ಕೆ ಪರಿಹಾರ ಎಲ್ಲುಂಟು? ಅವರಿಬ್ಬರು ಯೋಚಿಸಿದ ಬಳಿಕ..
ಅವರು ಹೇಳಿದ್ದನ್ನು ಇವರು ತಳ್ಳಿ ಹಾಕಿದರು. ತಮ್ಮೆರಡು ಲೋಕಗಳಿಗೆ ನಿರಂತರವಾಗಿ ಆತ್ಮಗಳನ್ನು ರಫ್ತು ಮಾಡುತ್ತಿರುವುದು ಹಲಕುಂದಿ ಹೆಸರಿನ ದೇಶ. ಪಟಾಕಿ ಹೆಸರಿನ ಪಕ್ಷ ಅತಿಹೆಚ್ಚು ಬಹುಮತ ಪಡೆಯಿತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಡೋಮ ಎಲುಗನ ಹೆಸರನ್ನು ಪ್ರಧಾನಿ ಸ್ಥಾನಕ್ಕೆ ಸೂಚಿಸಿದ, ಪಕ್ಷದ ಸಂಸದರು ಆತನನ್ನು ಆಯ್ಕೆ ಮಾಡಿದರು. ಆ ಕ್ಷಣದಿಂದ ಹಲಕುಂದಿ ದೇಶದಲ್ಲಿ ಅಡಗಿದ್ದ ಸನಾತನ ಶಕ್ತಿಗಳು ವಿಜೃಂಭಿಸಲಾರಂಭಿಸಿದವು.
ದೇಶದಲ್ಲಿನ ಅಲ್ಪಸಂಖ್ಯಾತರು ದಲಿತರಂಥ ದ್ವಿಪಾದಿಗಳಿಗಿಂತ ಚತುಷ್ಪಾದಿಗಳೇ ಶ್ರೇಷ್ಠ ಎಂದು ವಾದಿಸಲಾರಂಭಿಸಿದವು. ಅಲ್ಲದೆ ಅವರ ಪೈಕಿ ಕೆಲವರನ್ನು ಹತ್ಯೆ ಮಾಡಲಾರಂಭಿಸಿದವು. ಹತ್ಯೆಯಾದ ನತದೃಷ್ಟರ ಆ ದೇಶದಿಂದ ಪ್ರೇತಾತ್ಮಗಳು ನಿರಂತರವಾಗಿ ಆಗಮಿಸುತ್ತಿರುವವು. ಅದನ್ನು ತಡೆದರೆ ಮಾತ್ರ ತಮ್ಮ ಲೋಕಗಳು ನೆಮ್ಮದಿಯಿಂದ ಇರಲು ಸಾಧ್ಯ, ಅದನ್ನು ತಡೆಯು
ವುದೆಂತು? ತದನಂತರ ತಮ್ಮೆರಡು ಲೋಕಗಳಿಗೆ ಆಗಮಿಸುವ ಹಾಗೂ ಅನಧಿಕೃತವಾಗಿ ನಿರ್ಗಮಿಸುವ ಆತ್ಮಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ನಿರ್ಣಯಿಸಲಾಯಿತು.
ಈ ಮಸೂದೆಯನ್ನು ಜಂಟಿ ಸದನದಲ್ಲಿ ಮಂಡಿಸಿದಾಗ ಸದಸ್ಯರೆಲ್ಲ ಮೂಕವಿಸ್ಮಿತರಾದರು, ಆದರೆ ನರಕಲೋಕದ ಅನಾಹತ ಪಕ್ಷದ ಮುಖಂಡ ಮೈಲಾರಿ ವ್ಯಂಗ್ಯವಾಗಿ ನಕ್ಕನು. ತಮ್ಮ ನರಕಲೋಕದಿಂದ ಪ್ರೇತಾತ್ಮಗಳು ಪಲಾಯನ ಮಾಡುವುದು ಮಾಮೂಲು ಸಂಗತಿ, ನಾಲ್ಕು ವರ್ಷಗಳ ಹಿಂದೆ ನಮ್ಮ ನರಕಲೋಕದ ಪ್ರೇತಗಳು ದಂಗೆ ಎದ್ದದ್ದು ಎಲ್ಲರಿಗೂ ತಿಳಿದಿರುವ ಸಂಗತಿ, ಅದಕ್ಕೆ ಕಾರಣ ಚವುಡ ಹೆಸರಿನ ಪ್ರೇತಾತ್ಮ! ಅದು ನರಕಲೋಕದ ಭದ್ರತಾ ಸಿಬ್ಬಂದಿಯ ಕಣ್ಣಿಗೆ ಮಣ್ಣೆರಚಿ ಭೂಲೋಕದ ಕಡೆ ಪಲಾಯನ ಮಾಡಿರುವುದು, ಎಲುಗ ಪ್ರಧಾನಿಯಾಗಿರುವ ಸಂಗತಿ ತಿಳಿದೊಡನೆ ತನ್ನ ಪೂರ್ವಾಶ್ರಮ ಹಲಕುಂದಿ ದೇಶವನ್ನು ಪ್ರವೇಶಿಸಿರುವುದು, ಅಷ್ಟೇ ಅಲ್ಲದೆ ಅದು ತನ್ನ ಸಂಗಡ ಅಲ್ಲಿಗೆ ಸಹಸ್ರಾರು ಪ್ರೇತಾತ್ಮಗಳನ್ನು ಹಲಕುಂದಿಗೆ ಕರೆದೊಯ್ದಿರುವುದು. ಅಲ್ಲಿ ಅವೆಲ್ಲ ಆ ದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿವೆ, ಹಗಲು ಕಗ್ಗೊಲೆ ಮಾನ್ಯರ ಜನನಕ್ಕೆ ಕಾರಣವಾಗಿವೆ. ಇದನ್ನು ಕೇಳಿ ಭಾಧ್ಯಕ್ಷ ನರಸೇಗೌಡ ಮೈಲಾರಿ ಕಡೆ ತೀಕ್ಷ್ಣ ನೋಟ ಬೀರಿದರು. ನರಕಲೋಕದ ಮಾನವನ್ನು ಹರಾಜು ಹಾಕುತ್ತಿರುವ ನಿನಗೆ ದೇಶಪ್ರೇಮವಿದೆಯೇ ಎನ್ನುವ ಅರ್ಥ ಅವರ ನೋಟದಲ್ಲಿತ್ತು. ನಿಡುಸುಯ್ದು ಪ್ರೇತಾತ್ಮಗಳ ಆಗಮನ ನಿರ್ಗಮನ ಸಹಜ ಎಂದು ಹೇಳಿದರು, ಅದಕ್ಕೆ ಮೈಲಾರಿ ಅಧ್ಯಕ್ಷ ಮಹೋದಯ್ ವಯೋಸಹಜ ಕಾರಣಕ್ಕೆ ನಿಮ್ಮ ಜ್ಞಾಪಕ ಶಕ್ತಿ ಕುಂದಿದೆ ಎಂದು ಭಾವಿಸುತ್ತೇನೆ, ಕಾಕತಾಳೀಯವೆಂದರೆ ಇದೇ ನೋಡಿ, ಜಗತ್ತಿನ ಎಲ್ಲಾ ರಾಷ್ಟ್ರಗಳಿಗಿಂತ ಅತಿ ಕಡಿಮೆ ಸಂಖ್ಯೆಯ ಪ್ರೇತಾತ್ಮಗಳನ್ನು ನಮ್ಮ ನರಕಲೋಕಕ್ಕೆ ರಫ್ತು ಮಾಡುತ್ತಿದ್ದುದು ಹಲಕುಂದಿ ರಾಷ್ಟ್ರ. ಕಾರಣ ಅನ್ಯೋನ್ಯತೆ ಅದರ ಬೆನ್ನೆಲುಬಾಗಿತ್ತು, ಪರಧರ್ಮ ಸಹಿಷ್ಣುತೆ ಅದರ ಉಸಿರಾಗಿತ್ತು. ದಯೆ ಕರುಣೆ ಅದರ ಎರಡು ಕಣ್ಣುಗಳಾಗಿದ್ದವು. ಈ ಕಾರಣದಿಂದ ಅಲ್ಲಿ ಪಾಪಿಗಳ ಉತ್ಪಾದನೆ ನಿರೀಕ್ಷಿತ ಪ್ರಮಾಣದಲ್ಲಿರಲಿಲ್ಲ, ಅಂಥ ದೇಶ ತದ್ವಿರುದ್ಧವಾಗಿರುವುದು ಕಳೆದ ಚುನಾವಣೆಯಲ್ಲಿ ಪಟಾಕಿ ಪಕ್ಷ ಜಯಭೇರಿ ಬಾರಿಸಿದ ಬಳಿಕ ಎಂದು ವಿವರಿಸಿದ. ಅದರಿಂದ ಸಭಾಸದರು ಆತಂಕಕ್ಕೊಳಗಾದರು. ನರಸೇಗೌಡನ ಮುಖ ನಿಸ್ತೇಜಗೊಂಡಿತು. ಸದಸ್ಯರೆಲ್ಲರು ಒಕ್ಕೊರಲಿನಿಂದ ಪಟಾಕಿ ಪಕ್ಷಕ್ಕೆ ಧಿಕ್ಕಾರ ಕೂಗಿದರು.
ಎಲುಗ ಸ್ವಭಾವತಃ ಸನಾತನ ಮೌಲ್ಯಗಳ ಪ್ರತಿಪಾದಕ, ಕೋಮುಗಲಭೆಗಳ ಸೃಷ್ಟಿಕರ್ತ, ಅಲ್ಪಸಂಖ್ಯಾತರ ಕಟ್ಟಾವಿರೋಧಿ. ಅಂಥ ವ್ಯಕ್ತಿ ಪ್ರಧಾನಿಯಾದೊಡನೆ ಪ್ರೇತಾತ್ಮಗಳು ಹರ್ಷಾತಿರೇಕದಿಂದ ತಾಂಡವನೃತ್ಯ ಆರಂಭಿಸಿದವು ಅಧ್ಯಕ್ಷರೆ, ಆ ವಾರ್ತೆಯಿಂದ ನರಕಲೋಕ ಹಿಗ್ಗಿನ ಹೊಳೆಯಲ್ಲಿ ಮುಳುಗೆದ್ದಿತು, ಚವುಡನ ನಾಸಿಕ ಅಲಂಕರಿಸಿದ್ದ ನತ್ತು ಹೊಳೆಯಲಾರಂಭಿಸಿತು, ಅದು ವಿಚಿತ್ರಭಂಗಿಯಲ್ಲಿ ನರ್ತಿಸಲಾರಂಭಿಸಿತು, ಸಹಚರ ಪ್ರೇತಗಳನ್ನು ಸಂಘಟಿಸಿತು, ದಂಗೆ ಏಳುವಂತೆ ಪ್ರೇರೇಪಿಸಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತು, ತನ್ನ ಕೆಲವು ಸಹಚರರ ಜೊತೆಗೂಡಿ ಈ ಲೋಕದಿಂದ ಪಲಾಯನ ಮಾಡಿತು ಎನ್ನುತ್ತ ಮುಖ ಸಪ್ಪಗೆ ಮಾಡಿಕೊಂಡ.
ಹಾಗಿದ್ದರೆ ಅದು! ತಿಪ್ಪೇಶಿ ಕೇಳಿದ್ದಕ್ಕೆ ಅದೇ ಮೈಲಾರಿ ಅದು ಪ್ರವೇಶಿಸಿರುವುದು ತನ್ನ ಮೂಲಸ್ಥಾನವಾದ ನಿರುಪದ್ರವಿ ಹಲಕುಂದಿ ದೇಶವನ್ನು ಅಧ್ಯಕ್ಷರೆ, ಅದರ ಪ್ರವೇಶದಿಂದ ಎಲುಗ ಹಾಗೂ ಪಟಾಕಿ ಪಕ್ಷದವರು ಪ್ರೇತೋತ್ಸಾಹದಿಂದ ಬೀಗುತ್ತಿದ್ದಾರೆ, ಅದರ ಕುಮ್ಮಕ್ಕಿನಿಂದ ಸತ್ಯಪ್ರತಿಪಾದಕರು ವಿಚಾರವಾದಿಗಳು ಕೊಲೆಯಾಗುತ್ತಿರುವರು, ಅಲ್ಪಸಂಖ್ಯಾತರು ಭಯದಿಂದ ಕಂಪಿಸುತ್ತಿದ್ದಾರೆ. ಅದು ಮುಗ್ಧ ಯುವಕರನ್ನು ಕೊಲೆಗಾರರನ್ನಾಗಿ ಪರಿವರ್ತಿಸಲಾರಂಭಿಸಿದೆ, ಅದರ ಪ್ರೋತ್ಸಾಹದಿಂದ ಅಲ್ಲಿನ ಸನಾತನ ಮನಸ್ಸುಗಳು ಹುಚ್ಚೆದ್ದು ಕುಣಿಯುತ್ತಿವೆ. ಆ ದೇಶದಲ್ಲಿನ ಅನ್ಯಧರ್ಮೀಯರಲ್ಲಿ ಅಭದ್ರತೆ ಕಾಣಿಸಿಕೊಂಡಿರುವುದು ಅದರ ಚಿತಾವಣೆಯಿಂದ ಅಧ್ಯ್ಯಕ್ಷರೆ ಎಂದು ವಿವರಿಸಿದನು, ಆತನ ಮಾತುಗಳಿಂದ ಸಭೆೆ ಸ್ತಂಭನಗೊಂಡಿತು ಅರಿಗಳಿಗೆ. ಮರುಗಳಿಗೆಯಲ್ಲಿ ಚೇತರಿಸಿಕೊಂಡ ನರಸೇಗೌಡ ಹಾಗಿದ್ದರೆ ಅದರಿಂದ ಕೊಲೆಗೀಡಾಗಿರುವ ಸತ್ಯಪ್ರತಿಪಾದಕರ ಆತ್ಮಗಳು ನೆರೆಲೋಕದಲ್ಲಿರಬಹುದಲ್ಲವೆ ಎಂದು ಕೇಳಿದ. ಅಲ್ಲಿನ ಪ್ರಧಾನಿ ಕ್ಯಾತೇಗೌಡ ಅವರನ್ನು ಈಗಲೇ ಸಂಪರ್ಕಿಸಿ ಅಧ್ಯಕ್ಷ ಮಹೋದಯ್ ಎಂದೊಡನೆ..
ಜವರೇಗೌಡ ಹೇಳಿದರೆ ಪ್ರವೇಶಕ್ಕೆ ಅನುಮತಿ ದೊರೆಯದಿರುವುದೆ! ನರಸೇಗೌಡ, ಮೈಲಾರಿ, ಮೈಲೇಶಿ, ದುರ್ಗಪ್ಪರೇ ಮೊದಲಾದ ಪ್ರಭೃತಿಗಳಿದ್ದ ಆಯೋಗವನ್ನು ಸ್ವರ್ಗಲೋಕದ ಕಾರ್ಯದರ್ಶಿ, ರಕ್ಷಣಾ ವ್ಯವಸ್ಥೆಯ ಮುಖ್ಯಸ್ಥ ಬರಮಾಡಿಕೊಂಡರು. ಉದ್ದೇಶ ತಿಳಿದು ಪ್ರಧಾನಿ ಹುಬ್ಬೇರಿಸಿದರು, ಸತ್ಯಪ್ರತಿಪಾದಕರಾದವರ ಆತ್ಮಗಳಿಗೆ ತಮ್ಮ ಲೋಕದಲ್ಲಿ ಪುನರ್ವಸತಿ ಕಲ್ಪಿಸಿರಬೇಕಲ್ಲವೆ! ವಿವರ ಅಪೇಕ್ಷಿಸಿದ್ದಕ್ಕೆ..
ಪಾಂಡು ಪುನರ್ವಸತಿ ಕೇಂದ್ರದ ಮುಖ್ಯಸ್ಥನಾಗಿದ್ದ, ಆತ ತೆರೆದ ದಪ್ತರುಗಳಲ್ಲಿ ಪುಣ್ಯವಂತರ ಸಕಲ ವಿವರವಿತ್ತು. ಹೆಚ್ಚುವರಿ ಹೇಳುವುದಾದರೆ ಅವರನ್ನು ಸಾಮಾನ್ಯ, ಗಣ್ಯ, ಅತಿಗಣ್ಯ, ಅತ್ಯಂತ ಗಣ್ಯ ಎಂದು ವಿಭಜಿಸಿದ್ದರು, ಅದಕ್ಕೆ ತಕ್ಕಂತೆ ಅವರಿಗೆ ವಸತಿ ಸೌಲಭ್ಯ ಕಲ್ಪಿಸಿದ್ದರು. ಅತ್ಯಂತ ಗಣ್ಯ ಅತಿಥಿಗಳು ಅಲ್ಲಿ ಬೆರಳೆಣಿಕೆಯಷ್ಟಿದ್ದರು, ಇದ್ದವರು ಕೇವಲ ನಾಲ್ಕು ಜನ ಮಾತ್ರ. ಆದರೆ ಅವರು ತಮ್ಮ ಪೂರ್ವಾಶ್ರಮದಲ್ಲಿ ಸತ್ಯಪ್ರತಿಪಾದಕರೆಂದೂ ಮೇಧಾವಿಗಳೆಂದೂ ವಿಚಾರವಾದಿಗಳೆಂದೂ ಹೆಸರಾಗಿದ್ದಂಥವರು. ಅವರ್ಯಾರು ಆಸ್ತಿಕ ಅಥವಾ ನಾಸ್ತಿಕರಾಗಿರಲಿಲ್ಲ, ಪೂರ್ವಾಪರ ಏನೇ ಇದ್ದರು ಅವರು ಸಹಜ ಸಾವು ಕಂಡಿರಲಿಲ್ಲ, ಈ ನಿಷ್ಠುರ ಕಾರಣಕ್ಕೆ ಅವರನ್ನು ಹಲಕುಂದಿ ದೇಶದ ದಕ್ಷಿಣಾತ್ಯ ಪ್ರಾಂತದಲ್ಲಿ ಹತ್ಯೆಗೈಯಲಾಗಿತ್ತು. ಆದ್ದರಿಂದ ಸ್ವರ್ಗಲೋಕದಲ್ಲಿನ ನ್ಯಾಯಾಲಯ ಗೊಂದಲಕ್ಕೆ ಸಿಲುಕಿ ವಿಚಾರಣೆಯನ್ನು ಪೂರ್ಣಗೊಳಿಸಿರಲಿಲ್ಲ. ಆದರೆ ಅವರನ್ನು ವಿಚಾರಣಾಧೀನ ಪುಣ್ಯವಂತರೆಂದು ಪರಿಗಣಿಸಲಾಗಿತ್ತು.
ನೋಡೋಣವೆಂದು ಹೋದವರು ನಿರಾಸೆ ಹೊಂದಿದರು. ಕಾರಣ ಅವರಲ್ಲಿ ಯಾರು ಸಹ ತಮ್ಮ ನಿವಾಸಗಳಲ್ಲಿ ಇರಲಿಲ್ಲ. ಸ್ವರ್ಗಲೋಕದಲ್ಲಿನ ಸಮಸ್ಯೆಗಳನ್ನು ಅಧ್ಯಯನ ಮಾಡಲೆಂದು, ವಿಚಾರವಾದವನ್ನು ಪ್ರಚಾರ ಮಾಡಲೆಂದು ಹೋಗಿದ್ದರು. ಹಲಕುಂದಿ ದೇಶದಲ್ಲಿ ಇವರು ಮಾತ್ರವಲ್ಲದೆ ವಿನಾಕಾರಣ ಹತ್ಯೆಗೀಡಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದೆಂದೂ, ಅಂಥ ನಿರುಪದ್ರವಿ ಆತ್ಮಗಳು ತಮ್ಮ ಸ್ವರ್ಗಲೋಕದ ವಿಷಾದಮಯ ವಾತಾವರಣಕ್ಕೆ ಕಾರಕವಾಗಿರುವವೆಂದೂ, ಚವುಡನೇ ಇಂಥ ಎಷ್ಟೋ ಅಕಾಲ ಮರಣಗಳ ರೂವಾರಿ ಎಂದು ಎಂಟೇಸಿ ಹೇಳಿದನು. ಅಲ್ಲಿನ ಪ್ರಧಾನಿ ಎಲುಗ ನಿರಂಕುಶಮತಿಯೋ ಅಥವಾ ಮೂಢನಂಬಿಕೆಗಳ ಪ್ರತಿಪಾದಕನೋ ಎಂದು ಪ್ರಕಾಸ ನಿಡುಸುಯ್ದ. ಅದಕ್ಕೆ ಮೈಲಾರಿ ವಿಷಣ್ಣನಗೆ ಚೆಲ್ಲಿ ಚವುಡನ ಆತ್ಮ ಅನಿಯಮಿತವಾಗಿ ವಿಶ್ರಮಿಸಿಕೊಳ್ಳುವ ಅತಿಗಣ್ಯ ವ್ಯಕ್ತಿಗಳ ಶರೀರಗಳಲ್ಲಿ ಎಲುಗ ಹಾಗೂ ಠೊಣ್ಣಿಯರೀರ್ವರ ಶರೀರಗಳು ಮುಖ್ಯವಾದವುಗಳು ಸಹ ಎಂದು ಹೇಳಿದನು. ಎಲ್ಲರೂ ಐತಲಕಡಿಪಮ್ಮನ ಕಡೆ
ತೀಕ್ಷ್ಣವಾಗಿ ನೋಡಿದರು, ಕಾರಣ ಆತ ಆ ಉಪದ್ರವಿ ಆತ್ಮವನ್ನು ಕಾನೂನುರೀತ್ಯಾ ಶಿಕ್ಷಿಸಿರಲಿಲ್ಲ.
ಆದ್ದರಿಂದ ಆತನ ಕಪ್ಪುಮುಖ ಇನ್ನಷ್ಟು ಕಪ್ಪಿಟ್ಟಿತು. ವಿಚಾರಣೆಗೆ ಒಳಪಡಿಸಿದರೇನು ಗತಿ! ಆತಂಕಕ್ಕೀಡಾದ. ಹಲಕುಂದಿ ದೇಶದಲ್ಲಿ ಘಟಿಸುತ್ತಿರುವ ಕುಕೃತ್ಯಗಳಿಗೆ ಪರೋಕ್ಷವಾಗಿ ನೀವು ಕಾರಣರಲ್ಲವೆ ಎಂದು ಕೇಳಿದ, ಅದರಿಂದ ಮೈಲಾರಿ ಮುಖತಗ್ಗಿಸಿದ. ಅದಕ್ಕೆ ಅದೇ ಲೋಕದ ಮೂಲಸೌಕರ್ಯಾಧಿಕಾರಿ ಈರೇಸಿ ಏನು ಹೇಳಿದನೆಂದರೆ..
ಉಭಯಲೋಕದ ಸಮಸ್ತರೂ ಈರೇಸಿಯ ಅಭಿಪ್ರಾಯಕ್ಕೆ ಮನ್ನಣೆ ನೀಡಿದರು. ಮಾರನೆ ದಿವಸ ಉಭಯಲೋಕಗಳ ಪ್ರಧಾನಿಗಳ ಮಟ್ಟದ ಸಭೆ ನರಕಲೋಕಾಕ್ರಮಿತ ಗೂಟನಾಮದಲ್ಲಿ ನಡೆಯಿತು. ಅದರಲ್ಲಿ ಉನ್ನತಮಟ್ಟದ ಅಧಿಕಾರಿಗಳು ಕೆಲವು ಆಮಾತ್ಯರು ಭಾಗವಹಿಸಿದರು. ಉಭಯಲೋಕಗಳಲ್ಲಿನ ಪ್ರೇತಾತ್ಮಗಳ ನಡಾವಳಿ ಕುರಿತು ಸುದೀರ್ ಚರ್ಚೆ ನಡೆಸಿದರು. ಪ್ರೇತಾತ್ಮಗಳಿಗೆ
ವಿವೇಚನಾಶಕ್ತಿ, ಸಾಮಾನ್ಯಜ್ಞಾನ ಇರುವುದಿಲ್ಲ, ಅವುಗಳನ್ನು ನಿಯಂತ್ರಿಸುವುದಕ್ಕೆ ಅಲ್ಲಿನ ಅಧಿಕಾರಿಗಳು ಯಮಸಾಹಸ ಪಡಬೇಕು. ಆದರೆ ನರಕಲೋಕದಲ್ಲಿ ತಾರಾಮೌಲ್ಯವಿದ್ದ ಏಕೈಕ ಚಲಾಕಿ ಪ್ರೇತವೆಂದರೆ ಚವುಡ! ಹಲಕುಂದಿ ದೇಶದಲ್ಲಿ ಪಟಾಕಿಪಕ್ಷ ಜಯಭೇರಿ ಬಾರಿಸುವುದರಲ್ಲಿ, ಸೆರೆಮನೆಯಲ್ಲಿದ್ದ ಕುಖ್ಯಾತ ಕೈದಿಗಳು ಜನಪ್ರತಿನಿಧಿಗಳಾಗುವುದರಲ್ಲಿ, ಎಲುಗ ಆ ದೇಶದ ಪ್ರಧಾನಿಯಾಗುವುದರಲ್ಲಿ, ತಿರುಪತಿ, ಅಲಿಪಿರಿ, ಕೊಟ್ರ, ಸ್ವಾಮಿ ಚಿದಾನಂದಾವಧೂತರೇ ಮೊದಲಾದ ತ್ರಿಷಷ್ಠಿಪುರಾತನರು ಬಡೇಲಡಕು, ಮಾಕನಡಕು, ನಿಚ್ಛಾಪುರ, ಕೈವಲ್ಯಾಪುರ ಇವೇ ಮೊದಲಾದ ರಾಜ್ಯಗಳ ಆಡಳಿತಾಧಿಪತಿಗಳಾಗುವುದರಲ್ಲಿ, ದ್ವಿಪಾದಿಗಳ ಯೋಗಕ್ಷೇಮಕ್ಕಿಂತ ಚತುಷ್ಪಾದಿಗಳ ಯೋಗಕ್ಷೇಮವೇ ಮುಖ್ಯವೆಂದು ಭಾವಿಸುವುದರಲ್ಲಿ ಈ ಚವುಡನೆಂಬ ಪ್ರೇತಾತ್ಮದ ಹಸ್ತಕ್ಷೇಪವಿರುವುದಂತೂ ಸತ್ಯ. ಈ ಅಭಿಪ್ರಾಯವನ್ನು ಎಲ್ಲರೂ ಸಮ್ಮತಿಸಿದರು.
ಹಲಕುಂದಿ ರಾಷ್ಟ್ರದಲ್ಲಿ ಇನ್ನಷ್ಟು ಸತ್ಯಪ್ರತಿಪಾದಕರ ವಿಚಾರವಾದಿಗಳ ಹತ್ಯೆಯಾಗುವ ಮೊದಲೆ, ಅಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿಯುವ ಮೊದಲೇ ಚವುಡನನ್ನು ನಿಷ್ಕ್ರಿಯಗೊಳಿಸಬೇಕೆಂದು ಜವರೇಗೌಡ ಆದೇಶಿಸಿದ. ಆದರೆ ಯಾವುದೇ ಆತ್ಮ ಒಮ್ಮೆ ನರಕಲೋಕದಿಂದ ಬಂಧಮುಕ್ತವಾಯಿತೆಂದರೆ ಅದನ್ನು ನಿಯಂತ್ರಿಸುವ ಶಕ್ತಿ ಹರಿಹರಬ್ರಹ್ಮಾದಿಗಳಿಗೂ ಇರುವುದಿಲ್ಲ. ಅದರಲ್ಲೂ ಚವುಡನೆಂಬ ಪ್ರೇತವನ್ನು! ಈ ಸಮಸ್ಯೆಗೆ ಪರಿಹಾರ ಸೂಚಿಸಬಲ್ಲವರ್ಯಾರೆಂದರೆ..
ಸ್ವರ್ಗಲೋಕ ಸ್ಥಾಪನೆಗೆ ಹಾಕಿರುವ ಅಡಿಗಲ್ಲಿನಲ್ಲಿ ಯಾರ ನಾಮವಾಚಕ ಉಂಟೋ ಆ ಬಕ್ಕರಕಕ್ಕರ ಇರುವಲ್ಲಿಗೆ ಉಭಯಲೋಕಗಳ ವಿಶಾರದರು ಹೋದರು. ಅವರೆಲ್ಲರು ಪರಿಪರಿಯಿಂದ ಕೇಳಿದೊಡನೆ ತ್ರಿಕಾಲಜ್ಞಾನಿ ಬಕ್ಕರಕಕ್ಕರ ಧ್ಯಾನಾಸಕ್ತನಾದ. ಮುಚ್ಚಿದ್ದ ಕಣ್ಣ ಪಾಪೆಯೊಳಗೆ ಹಲಕುಂದಿಯನ್ನೂ ಅಲ್ಲೆಲ್ಲ ಉಪಟಳ ನಡೆಸಿದ್ದ ಚವುಡ ಹೆಸರಿನ ಪ್ರೇತಾತ್ಮವನ್ನೂ ಕೂಲಂಕಷ ಪರಿಶೀಲಿಸಿದ. ಪ್ರೇತೋಪಚಾರ ಎಂಬ ಶಾಸ್ತ್ರ ಗ್ರಂಥವನ್ನು ಒಂದರೆಗಳಿಗೆ ಅವಲೋಕಿಸಿದ ಬಳಿಕ ಯಾರ ಹತ್ಯೆಯ ಕಾರಣದಿಂದ ತನಗೆ ಪ್ರೇತಾತ್ಮ ಪದವಿ ಪ್ರಾಪ್ತವಾಗಿರುವುದೋ ಅದೇ ದುರ್ದೈವಿ ಆತ್ಮವನ್ನು ಪುನಃ ಹಲಕುಂದಿ ದೇಶಕ್ಕೆ ಕಳಿಸುವುದೊಂದೆ ಪರಿಹಾರ ಎಂದು ಸೂಚಿಸಿದ. ಆ ದೇಶದಲ್ಲಿ ಅವೆರಡು ಪರಸ್ಪರ ಮುಖಾಮುಖಿ
ಯಾಗುವಂತೆ ಸಂದರ್ಭ ಕಲ್ಪಿಸುವುದು ಅನಿವಾರ್ಯವೆಂದು ನುಡಿದ. ಎಲ್ಲಿರುವುದು ಆ ದೇಶದ ಪವಿತ್ರಆತ್ಮ? ಹಲಕುಂದಿ ದೇಶದ ದಾಸ್ಯದ ವಿರುದ್ಧ ಅಹರ್ನಿಶಿ ಅಹಿಂಸಾತ್ಮಕ ಹೋರಾಟ ನಡೆಸಿದ ತ್ಯಾಗದ ಪ್ರತೀಕವೂ, ಸರಳ ಸಜ್ಜನಿಕೆ ಸಾಕಾರ ಮೂರ್ತಿಯೂ ಆದಂಥ ಆ ಪವಿತ್ರಆತ್ಮಕ್ಕೆ ಸ್ವರ್ಗಲೋಕದಲ್ಲಿ ಅತಿಗಣ್ಯ ಅತಿಥಿ ಎಂದೇ ಪರಿಗಣಿಸಲಾಗಿರುವುದೇನು! ಈ ಪ್ರಶ್ನೆಗೆ ಉತ್ತರವೆಲ್ಲಿ? ಕಂದಾರೆಮ್ಮ ಎಂಬ ಅರೆಕಾಲಿಕ ದೇವತೆ ಅದನ್ನು ತನ್ನ ಆರನೇ ಇಂದ್ರಿಯದ ಮೂಲಕ ಕೇಳಿಸಿಕೊಂಡಿತು. ಉತ್ತರವಿಲ್ಲಿದೆ ಎನ್ನುತ್ತ ಧಾವಿಸಿ ಬಂದಿತು, ಅಯ್ಯೋ ಆ ಪುಣ್ಯಾತ್ಮನ ಕಥೆಯನ್ನು ಏನೆಂದು ಹೇಳಲಿ ಎಂದು ಆರಂಭಿಸಿತು..
ಎಲುಗ ಹತ್ಯೆ ಮಾಡದಿದ್ದರೆಲ್ಲಿ ಮಹಾತ್ಮ ಸಂಗಜ್ಜನಿಗೆ ಹುತಾತ್ಮ ಪಟ್ಟ ಪ್ರಾಪ್ತವಾಗುತ್ತಿತ್ತು! ಸಂಗಜ್ಜ ಭೌತಿಕವಾಗಿ ತನ್ನ ನಿರ್ಗಮನಕ್ಕೆ ಕಾರಕನಾದವನಿಗೆ ಧನ್ಯವಾದಗಳನ್ನು ಅರ್ಪಿಸಿದ್ದು ನಿಜವಿರದಿದ್ದರೂ ಸುಳ್ಳಿರಲಿಕ್ಕಿಲ್ಲ. ಅದೇನೆ ಇರಲಿ ಹುತಾತ್ಮನ ಪವಿತ್ರಾತ್ಮ ಇರುವುದೆಲ್ಲಿ? ಅಷ್ಟರಲ್ಲಿ ಸ್ವರ್ಗಲೋಕದ ಕೊತ್ವಾಲ್ ಚಂದ್ರಪ್ಪ ನೀಡಿದ ಮಾಹಿತಿಯಂತೆ!
ನಿಜ ಹೇಳುವುದಾದರೆ ಹುತಾತ್ಮ ಸಂಗಜ್ಜ ನರಕಲೋಕಕ್ಕೆ ಸ್ವರ್ಗಲೋಕದ ವಿಶೇಷ ಸ್ಥಾನಮಾನ ನೀಡಬೇಕೆಂದು ಸತ್ಯಾಗ್ರಹ ಆರಂಭಿಸಿದ್ದ, ಆ ವೃದ್ಧ ಕಳೆದ ಎರಡು ದಶಕಗಳಿಂದ ಮೌನವ್ರತಾರೂಢನಾಗಿದ್ದ. ಅದು ಅಂದೇ ಆ ಕ್ಷಣವೇ ಮುಕ್ತಾಯವಾದದ್ದು ತಮ್ಮ ಪುಣ್ಯವೆಂದು ಕ್ಯಾತೇಗೌಡ ಹಾಗೂ ಜವರೇಗೌಡ ಭಾವಿಸಿದರು. ಆತನಿದ್ದಲ್ಲಿಗೆ ಇವರು ಹೋದರು. ಪಿತಾಮಹ ನಿಯೋಗದ ಸದಸ್ಯರನ್ನು ನೋಟದ ಮೂಲಕ ಕೂಲಂಕಷ ಪರಿಶೀಲಿಸಿದ, ಬಂದ ಕಾರಣ ಕೇಳಲಾಗಿ..
ಎಲುಗ! ಈ ನಾಮವಾಚಕ ಕೇಳಿದೊಡನೆ ವೃದ್ಧನ ಮುಖ ಅರಳಿತು, ಆ ನಾಮವಾಚಕವನ್ನು ದಯಾಳು ಕರುಣಾಳು ಎಂಬ ಗೌರವಪ್ರದ ವಿಶೇಷಣಗಳಿಂದ ಅಲಂಕರಿಸಿತು. ಆದರೆ ಹಲಕುಂದಿಯನ್ನು ಎಲುಗ ಹೆಸರಿನ ಉಭಯಲಿಂಗಿ ಪ್ರವೇಶಿಸಿರುವುದೆಂದರೇನು! ಅಲ್ಲಿನ ಸತ್ಯಪ್ರತಿಪಾದಕರನ್ನು ವಿಚಾರವಾದಿಗಳನ್ನು ಪ್ರಜಾಪ್ರಭುತ್ವವಾದಿಗಳನ್ನು ಭೌತಿಕವಾಗಿ ಗೈರು ಹಾಜರಿಗೊಳಿಸುತ್ತಿರುವುದೆಂದರೇನು! ಅಯ್ಯೋ ವಿಧಿಯೇ ಏನಿದು ನಿನ್ನ ಆಟ! ಸಂಗಜ್ಜನ ಮುಖ ಚಿಂತೆಯಿಂದ ಮುದುಡಿತು. ಜವರೇಗೌಡ ಬಾಪೂಜಿ ಎಂದೂ, ಕ್ಯಾತೇಗೌಡ ಅಪ್ಪಾಜಿ ಎಂದೂ ಉದ್ಗರಿಸಿದರು. ಆ ಸಂಬಂಧವಾಚಕಗಳನ್ನು ಆಲಿಸಿದೊಡನೆ ವೃದ್ಧನ ಮನಸ್ಸು ಅರಳಿತು. ಅಂತೂ ವೃದ್ಧಾತ್ಮ ಒಪ್ಪಿದ್ದು ತಮ್ಮ ಅದೃಷ್ಟ, ಉಭಯಲೋಕಗಳಲ್ಲಿ ಸಂತಸದ ಬೆಳದಿಂಗಳು ಚೆಲ್ಲಾಡಿತು. ಮುಖ್ಯ ಸಮಸ್ಯೆ ಎಂದರೆ!
ಆತ ಭೂಲೋಕಕ್ಕಧಿಕವೆನಿಸಿದ ಹಲಕುಂದಿಯಲ್ಲಿ ಅವತಾರ ಎತ್ತುವ ಬಗೆ ಯಾವುದು?
ಈ ಯಕ್ಷಪ್ರಶ್ನೆಗೆ ಸಮಾಧಾನ ನೀಡುವವರು ಉಭಯಲೋಕಗಳಲ್ಲಿ ಕಡಿಮೆ ಪ್ರಮಾಣ ದಲ್ಲಿದ್ದರು. ಸ್ವರ್ಗಲೋಕದಲ್ಲಿ ಚನ್ನಜ್ಜ ಹೆಸರಿನ ತ್ರಿಕಾಲಜ್ಞಾನಿ ಇದ್ದ, ಈ ಎಲ್ಲಾ ಸಮಸ್ಯೆಗಳನ್ನು ತಾನಿದ್ದಲ್ಲಿಂದಲೇ ಗ್ರಹಿಸಬಲ್ಲವನಿದ್ದ. ಇವರು ತಲುಪುವುದಕ್ಕೂ ಆತ ಪರಿಹಾರ ಸೂಚಿಸುವುದಕ್ಕೂ ಸರಿ ಹೋಯಿತು.
ಚವುಡ! ಇದು ಐದು ಸಹಸ್ರ ವರ್ಷಗಳ ಹಿಂದೆ ಸೃಷ್ಟಿಸಲ್ಪಟ್ಟಂಥ ಅಪಾಯಕಾರಿ ವಿಷ.
ನೂರಾರು ಯುದ್ಧಗಳಿಗೆ ದಾಯಾದಿ ಕಲಹಗಳಿಗೆ, ಸಂಬಂಧಗಳ ವಿಘಟನೆಗಳಿಗೆ ಕಾರಕವಾಗಿರುವ ಸಂಚು, ಇದು ಹಲವು ಕಾಲಘಟ್ಟಗಳಲ್ಲಿ ಹಲವು ರೂಪಧಾರಣ ಮಾಡಿ ಸಮಾಜದ ಸ್ವಾಸ್ಥ್ಯ ನಾಶ ಮಾಡಿದೆ. ಅಂಥ ಇದರ ಪ್ರಭಾವವನ್ನು ನಿಷ್ಕ್ರಿಯಗೊಳಿಸದಿದ್ದಲ್ಲಿ ಹಲಕುಂದಿ ಮಾತ್ರವಲ್ಲ, ಸಮಸ್ತ ಭೂಮಂಡಲ ಛಿದ್ರವಾಗುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಆ ದೇಶದಲ್ಲಿ ಮಹಾತ್ಮ ಸಂಗಜ್ಜ ಪುನಃ ಯಾರ ಗರ್ಭದಲ್ಲಾದರೂ ಅಂಕುರಿಸುವುದು ಮುಖ್ಯ. ಚನ್ನಜ್ಜನ ಸಲಹೆಯನ್ನು ಉಭಯಲೋಕಗಳ ವರಿಷ್ಠರು ಪುರಸ್ಕರಿಸಿದರು. ಸಂಗಜ್ಜ ಹಲಕುಂದಿಯಲ್ಲಿನ ಪ್ರಜಾಸತ್ತಾತ್ಮಕ ವ್ಯವಸ್ಥೆ ರಕ್ಷಣೆಗೆ ಇನ್ನೊಮ್ಮೆ ಹುತಾತ್ಮನಾಗಲು ಸಿದ್ಧ ಎಂದು ಸಮ್ಮತಿಸಿದ, ಆದರೆ ಅದೇ ಲೋಕದಲ್ಲಿ!
ಗಡ್ಡಧಾರಿ, ಜಟಾಜೂಟ ಹೆಸರಿನ ಪ್ರೇತಾತ್ಮಗಳಿದ್ದವು. ಅವು ಸಹ ಹಲಕುಂದಿ ಮೂಲದವೆ, ಅವೆ ದೇಶಭಕ್ತಿಯ ನೆಪದಲ್ಲಿ ಎಲುಗನಲ್ಲಿದ್ದ ಮುಗ್ಧತೆಯನ್ನು ಅಳಿಸಿ ಕೊಲೆಗಾರನನ್ನಾಗಿ ಮಾರ್ಪಡಿಸಿದ್ದು ಅವೆ, ಹಿಂಸ್ರಪ್ರವೃತ್ತಿಯ ಅವು ಸುಮ್ಮನಿರಲಾದೀತೆ! ಮಹಾತ್ಮ ಸಂಗಜ್ಜನ ಆತ್ಮ ಪುನಃ ಹಲಕುಂದಿ ಪ್ರವೇಶಿಸುವುದಕ್ಕೆ ಬಿಡುವುದಿಲ್ಲ ಎಂದೂ, ಹಲಕುಂದಿ ದೇಶದಲ್ಲಿನ ಯಾವ ಮಹಿಳೆ ಅದಕ್ಕೆ ತನ್ನ ಗರ್ಭದಲ್ಲಿ ಆಶ್ರಯ ನೀಡುವುದಕ್ಕೆ ತಾವು ಬಿಡುವುದಿಲ್ಲವೆಂದೂ ಶಪಥ ಮಾಡಿದವು. ಅಲ್ಲದೆ ಉಭಯಲೋಕಗಳಲ್ಲಿನ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಪ್ರೇತಾತ್ಮಗಳಿಗೆ ಕರೆ ನೀಡಿದವು, ಆದರೆ ಅವುಗಳ ಪ್ರಯತ್ನ ನಿಷ್ಫಲವಾಯಿತು. ಆದರೆ ಅಷ್ಟಕ್ಕೆ ಸುಮ್ಮನಿರದೆ ಅವು ಹಲಕುಂದಿಯಲ್ಲಿದ್ದ ಎಲುಗನಿಗೆ ಯಾವ ಮಾಹಿತಿ ನೀಡಿದವು ಎಂದರೆ..
*** *** *** ***
ಅದಾದ ಮಾರನೇ ದಿವಸ ಅಭೂತಪೂರ್ವ ಘಟನೆ ಹಲಕುಂದಿಯ ಉತ್ತರಾತ್ಯದಲ್ಲಿ ಅದೂ ರಾಜಧಾನಿ ಗುಂಡುಮುಳುಗುನಲ್ಲಿ ಅದೂ ಕೀಟಲೆ ಹೆಸರಿನ ರಾಜಭವನದಲ್ಲಿ ಸಂಭವಿಸಿತು. ರಾಷ್ಟ್ರದ ಪ್ರಧಾನಿ ಎಲುಗ ಅದರ ಹಿಂದಿನ ದಿವಸ ವ್ಯಸನ ಹೆಸರಿನ ಭವನದಲ್ಲಿ ಒಂದು ಸಮಾವೇಶ ಏರ್ಪಡಿಸಿದ್ದ. ಅದಕ್ಕೆ ಸನಾತನ ಧರ್ಮದ ಪುನರುತ್ಥಾನ ಎಂಬ ಶೀರ್ಷಿಕೆ ದಯಪಾಲಿಸಿದ್ದ, ಹೆಸರಾಂತ ಸನಾತನಿಗಳು ಋಷಿಪುಂಗವರು, ಕುಖ್ಯಾತ ಆಪಾದಿತರು, ಗೌರವಾನ್ವಿತ ಕೊಲೆಗಾರರು ಅದರಲ್ಲಿ ಭಾಗವಹಿಸಿದ್ದರು. ಪ್ರೇತ ಚವುಡ ಅವರೆಲ್ಲರ ಶರೀರಗಳಲ್ಲಿ ಮಿಂಚಿನೋಪಾದಿಯಲ್ಲಿ ಸಂಚರಿಸುತ್ತ ಹುರಿದುಂಬಿಸುತ್ತಿತ್ತು, ಸೌಮ್ಯವಾದಿ
ಗಳನ್ನು ಉಗ್ರವಾದಿಗಳನ್ನಾಗಿಸುತ್ತ ಮುನ್ನಡೆದಿತ್ತು. ಸಭೆೆ ಮಧ್ಯರಾತ್ರಿವರೆಗೆ ನಡೆದು ಮುಕ್ತಾಯ
ವಾಯಿತು, ಹೀಗಾಗಿ ಪ್ರಧಾನಿ ಶಯನಗೃಹ ಪ್ರವೇಶಿಸಿದ್ದು ಎರಡು ಗಂಟೆಗೆ. ಇನ್ನೇನು ಮಲಗಿ ಶ್ರವಣಾನಂದಭರಿತ ಗೊರಕೆ ಆರಂಭಿಸುವಷ್ಟರಲ್ಲಿ ತಮ್ಮನ್ನು ಯಾರೋ ಬಡಿದೆಬ್ಬಿಸಿ ದಂತೆ ಭಾಸವಾಯಿತು. ಕಣ್ತೆರೆದು ನೋಡಿದರು, ಭಯಭೀತರಾಗಿ ಬೆಚ್ಚಿ ಕೂಗಿದ್ದು ಹೇಷಾರವ ಸದೃಶವಾಗಿತ್ತು. ಆ ಹೇಷಾರವವನ್ನು ಛಪ್ಪನ್ನಾರು ದೇಶಗಳು ಕೇಳಿಸಿಕೊಂಡವು. ಉಪಗ್ರಹಗಳಿಂದ ಮಾಹಿತಿ ಪಡೆದರು, ಮರುಕ್ಷಣ ಹಲಕುಂದಿ ದೇಶದಲ್ಲಿನ ತಮ್ಮ ರಾಯಭಾರಿಗಳನ್ನು ಸಂಪರ್ಕಿಸಿದರು, ಅವರು ಇವರಿಂದಲೂ ಇವರು ಅವರಿಂದಲೂ..
ಕಿಷ್ಕಿಂಧ ರಾಜ್ಯದ ಮುಖ್ಯಮಂತ್ರಿ ಯೋಗಿ ಬೋಜನಾನಂದಸ್ವಾಮಿ ಮಂತ್ರತಂತ್ರಗಳ ಸಾಧನೆಯಿಂದ ಮಾಯಮರಾಠಿ ಎಂದೇ ಹೆಸರಾಗಿದ್ದ. ಮತದಾರರನ್ನೂ ವಿರೋಧ ಪಕ್ಷದವರನ್ನೂ ಭಯಭೀತರನ್ನಾಗಿಸಿ ಗೆದ್ದಿದ್ದ. ದ್ವಿಪಾದಿಗಳಿಗಿಂತ ಚತುಷ್ಪಾದಿಗಳ ಬಗ್ಗೆ ಹೆಚ್ಚು ಒಲವು ಉಳ್ಳವನಾಗಿದ್ದ, ಅಲ್ಪಸ್ವಲ್ಪ ಜ್ಯೋತಿಷ್ಯಶಾಸ್ತ್ರ ಅಭ್ಯಾಸ ಮಾಡಿದ್ದ. ಪುಣ್ಯಕ್ಕೆ ಯೋಗಿ ಗುಂಡುಮುಳುಗು ಪಟ್ಟಣದಲ್ಲಿದ್ದ ಕೋಕಾಶ್ರಮದಲ್ಲಿದ್ದ, ಪ್ರಧಾನಿ ಚೀರಿಕೊಂಡ ಸಮಯದಲ್ಲಿ ಈತ ಗ್ರಹಂ ಗ್ರೂಹಂ ಗ್ರಹೀಂ ಎಂಬ ಮ್ಲೇಚ್ಛ ವಿನಾಶಕ್ಕೆ ಸಂಬಂಧಿಸಿದ ಮಂತ್ರವನ್ನು ಪಠಣ ಮಾಡುತ್ತಿದ್ದ. ಕೇಳಿಸಿಕೊಂಡೊಡನೆ ಅಘ್ರೋರಂ ಅಘ್ರೋರಂ ಎಂಬ ಮಂತ್ರವನ್ನು ಜಪಿಸಿದ, ಪ್ರಧಾನಿಗಳ ಕನಸಿನಲ್ಲಿ ಗೋಚರಿಸಿದ್ದು ಚೀರುವಿಕೆಯನ್ನು ಹುರಿದುಂಬಿಸಿದ್ದು ಯಾರೆಂದು ನೋಡುತ್ತಾನೆ!
ಅವರಿಬ್ಬರು ಸಂಧಿಸಿದ ವೇಳೆಯಲ್ಲಿ ಕುಕ್ಕಟಾಲಾಪನೆ ಆರಂಭಿಸಿತು. ಅಪೇಕ್ಷಿಸಿದ್ದಕ್ಕೆ ಎಲುಗ ತೂಚ ತಪ್ಪದೆ ವಿವರಿಸಿದ, ಸತ್ಯಸಂಗತಿ ಎಂದರೆ ಸನ್ಮಾನ್ಯ ಎಲುಗ ತೈಲಪರಾಗಲೀ ತಮ್ಮ ಸಹವರ್ತಿಗಳಾಗಲೀ ಸದರಿ ದೇಶದಲ್ಲಿ ಘಟಿಸಿದ ಯಾವುದೇ ಸಮಾಜಮುಖೀ ಚಳವಳಿಗಳಲ್ಲಿ, ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗವಹಿಸಿರಲಿಲ್ಲ. ಆದರೆ ಮಹಾತ್ಮ ಸಂಗಜ್ಜನವರನ್ನು ಭಾವಚಿತ್ರದಲ್ಲಿ ನೋಡಿದ್ದರು. ಆದರೆ ಆತನನ್ನು ಭೌತಿಕವಾಗಿ ಇಲ್ಲವಾಗಿಸಿದ್ದ ಚವುಡನ ಭಾವಚಿತ್ರವನ್ನು ಕುಲದೇವತೆ ಕುಕ್ಕುಟಾಂಬೆಯ ಚರಣಕಮಲದ ಸನಿಹದಲ್ಲಿರಿಸಿ ತ್ರಿಕಾಲಪ್ರಜೆ ಸಲ್ಲಿಸುತ್ತಿದ್ದರು ತಪ್ಪದೆ. ಹೀಗಿರಲಾಗಿ..
ಕನಸಿನಲ್ಲಿ ಗೋಚರಿಸಿದ ಹಾಗೂ ತನ್ನ ಕೆನ್ನೆಗೆ ಬಾರಿಸಿದ ಮುದುಕ ಮುದುಕರನ್ನೇ ಹೋಲುತ್ತಿದ್ದ, ಆದರೆ ಯೋಗಿ ಮಾರನೇ ದಿವಸ ಅದೇ ಆಶ್ರಮದಲ್ಲಿ ಪಟಾಳ ಹೆಸರಿನ ಯಾಗ ಮಾಡಿದ. ಹ್ಹಾಂ ಅಂದಹಾಗೆ ಪುಣ್ಯಕ್ಕೆ ಹಲಕುಂದಿ ದೇಶ ಸಹಸ್ರಾರು ಪ್ರೇತಾತ್ಮಗಳ ವಿಹಾರದಾಣವಾಗಿತ್ತು, ಅದೂ ಕಳೆದ ಒಂದೆರಡು ವರ್ಷಗಳಿಂದ. ಅವುಗಳಲ್ಲಿ ಸೂಗ ಹೆಸರಿನ ಪ್ರೇತ ಎರಡು ಲೋಕಗಳಲ್ಲಿನ ವಿದ್ಯಮಾನಗಳನ್ನು ಗಮನಿಸಿ ಸಂಬಂಧಿತ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ವರದಿ ಮಾಡುತ್ತಿತ್ತು. ಆ ಸಂಗತಿ ಯೋಗಿ ಹಾಗೂ ಪ್ರಧಾನಿಗಳ ಶ್ರವಣೇಂದ್ರಿಯಗಳಿಗೆ ಬಟವಾಡೆಯಾಯಿತು. ಅದು ಸದರಿ ದೇಶವನ್ನು ಪ್ರವೇಶಿಸಿರುವುದೆಂದ ಬಳಿಕ..
ಪವಾರ, ಮೇಸ್ತ್ರಿ, ಟೊಣಪ, ಬೋಜ, ಪಟಿಂಗ ಇವರೇ ಮೊದಲಾದ ಸ್ವಯಂಘೋಷಿತ ಸೇನಾಧಿಪತಿಗಳು ಹೊಡಿ ಬಡಿ ಕಡಿ ನಾಮಾಂಕಿತ ಸಂಘಟನೆಗಳನ್ನು ದೇಶದಾದ್ಯಂತ ಹುಟ್ಟುಹಾಕಿದ್ದರು. ಚವುಡ ಅಂಥವರ ದೇಹಗಳಲ್ಲಿ ಮಿಂಚಿನೋಪಾದಿಯಲ್ಲಿ ಸಂಚರಿಸ ಲಾರಂಭಿಸಿತ್ತು. ಮುಗ್ಧರನ್ನು ಹಲ್ಲೆಕೋರರನ್ನಾಗಿ, ಅಮಾಯಕರನ್ನು ಕೊಲೆಗಾರರನ್ನಾಗಿ ಪರಿವರ್ತಿಸಲಾರಂಭಿಸಿತ್ತು. ತನ್ನ ಕಾರ್ಯಕ್ಷೇತ್ರವನ್ನು ತೆಂಕಣದಿಂದ ಬಡಗಣ ತನಕ, ಮೂಡಣದಿಂದ ಪಡುವಣ ತನಕ ವಿಸ್ತರಿಸಿಕೊಂಡಿತ್ತು. ಯೋಗಿ ಭೋಜನಾನಂದಸ್ವಾಮೀಜಿ ಏಕಪ್ರಕಾರವಾಗಿ ಉಚ್ಚರಿಸುತ್ತಿದ್ದ ಆವಹಂ ಆವಹಂ ಎಂದು ಮಂತ್ರ ಅದರ ಕಿವಿಗೆ ಬಿದ್ದಿತಾದರೂ ಹೇಗೆ!
ದಕ್ಷಿಣಾತ್ಯದಲ್ಲಿದ್ದ ಗುಡೇಕೋಟೆ ರಾಜ್ಯವನ್ನು ಚೂರಿಚಿಕ್ಕಣ್ಣ ಎಂಬ ಮಂತ್ರಿ ಪರಿಪಾಲಿಸುತ್ತಿದ್ದ, ಪ್ರಧಾನಿಗೂ ತನಗೂ ವೈಮನಸ್ಸಿತ್ತು. ಈ ಸಂಗತಿ ತಿಳಿದಿದ್ದ ಚವುಡ ಸುಮ್ಮನಿರಲಾದೀತೆ! ಆ ರಾಜ್ಯದ ಪ್ರಥಮ ಪ್ರಜೆಯ ತಲೆಯನ್ನು ಪ್ರವೇಶಿಸಿ ಆಲೋಚನಾ ಸರಣಿಯನ್ನು ಆಮೂಲಾಗ್ರವಾಗಿ ಬದಲಿಸಲು ಪ್ರಯತ್ನಿಸಿತು. ಅಷ್ಟರಲ್ಲಿ ಯೋಗಿ ಕಡೆಯಿಂದ ಕರೆ ಬಂತು. ಮನೋವೇಗದಲ್ಲಿ ಸಾಗಿ ತಲುಪಿತು. ಸೆಗಣಿಯ ಹುಳುವಿನ ದೇಹದಲ್ಲಿ ಕಾಣಿಸಿಕೊಂಡಿತು.
ಸಂಚು ಎಂಬ ತ್ರಿಕೋನದ ಮೂರು ಮೂಲೆಗಳನ್ನು ಅನುಕ್ರಮವಾಗಿ ಎಲುಗ, ಯೋಗಿ
ಹಾಗೂ ಚವುಡ ಅಲಂಕರಿಸಿದರು. ಸರ್ವತಂತ್ರ ಸ್ವತಂತ್ರವೆನಿಸಿದ್ದ ಚವುಡ ಯೋಗಿ ಹಾಗೂ ಎಲುಗರಿಬ್ಬರ ದೇಹಗಳನ್ನು ತನ್ನ ಕಾರಸ್ಥಾನವನ್ನಾಗಿ ಮಾರ್ಪಡಿಸಿಕೊಂಡಿತು. ಶಕ್ತಿಶಾಲಿಯಾದ
ತಾನೆಲ್ಲಿ! ತನ್ನಿಂದ ಇನ್ನೊಮ್ಮೆ ಕೊಲೆಯಾಗಲು ಹಾತೊರೆಯುತ್ತಿರುವ ಸಂಗಜ್ಜ ಎಂಬ
ವೃದ್ಧನೆಲ್ಲಿ! ಹುತಾತ್ಮನನ್ನಾಗಿಸಿ ವೃದ್ಧಾಪ್ಯವನ್ನು ತಡೆಯದಿದ್ದಲ್ಲಿ ಆತ ಇನ್ನೂ ಮುದುಕನಾಗುತ್ತಲೇ
ಇರುತ್ತಿದ್ದ. ಆ ಭ್ರೂಣ ಮೊಳೆಯಲು ದೇಶದ ಯಾವ ಮಹಿಳೆಯೂ ತನ್ನ ಗರ್ಭದಲ್ಲಿ ಆಶ್ರಯ ನೀಡದ ಹಾಗೆ ಮುಂಜಾಗ್ರತೆ ವಹಿಸಬೇಕು ಎಂದು ನಿರ್ಧರಿಸಿದ ಅದು..
ಸಂಗಜ್ಜ ಹಲಕುಂದಿ ದೇಶವನ್ನು ಪ್ರವೇಶಿಸಿದೆ ಎನ್ನುವುದಕ್ಕೆ ಪ್ರಧಾನಿಯ ಕೇಸರಿವರ್ಣದ ಕೆನ್ನೆ ಮೇಲಿನ ಬಾಸಾಳದ ಗುರುತುಗಳು ದೃದ್ಗೋಚರವಾಗುತ್ತಿರುವುದೆ ಸಾಕ್ಷಿ! ಆ ಗುರುತು ತನ್ನ ಆಲೋಚನಾಕ್ರಮವನ್ನು ನಿಯಂತ್ರಿಸುತ್ತಿರುವುದೆಂದೆನ್ನಿಸಿದ್ದು ಆರಂಭದಲ್ಲಿ. ಆದರೆ ಚವುಡ ತನ್ನ ಶರೀರವನ್ನು ವಾಸಸ್ಥಾನವನ್ನಾಗಿ ಪರಿವರ್ತಿಸಿಕೊಂಡ ಕ್ಷಣದಿಂದ ಎಲುಗನ ದಿನಚರಿ ಬದಲಾಯಿತು. ಹ್ಹಾಂ ಅಂದಹಾಗೆ ತಪರಾಕಿ ಹೆಸರಿನ ರಾಜಕೀಯ ಪಕ್ಷ ರಾಷ್ಟ್ರದ ಹಲವು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಪ್ರವರ್ಧಮಾನಕ್ಕೆ ಬಂದಿತ್ತು, ಅದರ ರಾಷ್ಟ್ರೀಯ ಅಧ್ಯಕ್ಷ ಏಕಾಂತ ಮೇಲ್ನೋಟಕ್ಕೆ ಎಲುಗನನ್ನೇ ಹೋಲುತ್ತಿದ್ದ. ಅವರಿಬ್ಬರು ತುಂಬ ಅನ್ಯೋನ್ಯರಾಗಿದ್ದರು, ಆತಗೆ ಶೀತವಾದರೆ ಈತ ಸೀನುತ್ತಿದ್ದ, ಈತಗೆ ಜ್ವರ ಬಂದರೆ ಆತ ಮಾತ್ರೆ ಸೇವನೆ ಮಾಡುತ್ತಿದ್ದ. ವಿಚಿತ್ರವೆಂದರೆ ಅವರಿಬ್ಬರು ಸಾಮೂಹಿಕ ನರಮೇಧ ಕುರಿತಂತೆ ಯೋಚಿಸುತ್ತಿದ್ದರಲ್ಲದೆ ಕನಸು ಕಾಣುತ್ತಿದ್ದರು. ಯೋಗಿಯ ಸಲಹೆಯಂತೆ ದಿನಕ್ಕೊಮ್ಮೆಯಾದರೂ ಅವರಿಬ್ಬರು ಹಾಡುತ್ತಿದ್ದ ಯುಗಳ ಗೀತೆಯನ್ನು ರಾಷ್ಟ್ರದ ದೂರದರ್ಶನ ಹಾಗೂ ಅಶರೀರವಾಣಿಗಳು ಏಕಕಾಲಕ್ಕೆ ಪ್ರಸಾರ ಮಾಡುತ್ತಿದ್ದವು. ಆದ್ದರಿಂದ ಯೋಗಿಯ ನಿರ್ದೇಶನದಲ್ಲಿ ಚವುಡ ತಪರಾಕಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷನ ತಲೆಯನ್ನೂ ತನ್ನ ಕಾರ್ಯಕ್ಷೇತ್ರವನ್ನಾಗಿ ಪರಿವರ್ತಿಸಿಕೊಂಡಿತು. ಅತ್ತ ರಾಷ್ಟ್ರದ ಪ್ರಧಾನಿ ಎಲುಗ, ಇತ್ತ ಏಕಾಂತು ಏಕಕಾಲಕ್ಕೆ ಮಹಾತ್ಮ ಸಂಗಜ್ಜನಿಗೆ ಸಂಬಂಧಿಸಿದ ನೆನಪುಗಳ ಮೇಲೆ ಗಧಾಪ್ರಹಾರ ಆರಂಭಿಸಿದರು. ಆ ಹುತಾತ್ಮನಿಗೆ ಸಂಬಂಧಿಸಿದ ಸ್ಮಾರಕ ಮತ್ತಿತರ ವಸ್ತುಸಂಗ್ರಹಾಲಯಗಳನ್ನು ಅಮಾನತ್ತಲ್ಲಿರಿಸಿದರು. ಈ ವರಿಷ್ಠರ ಅಸಾಂವಿಧಾನಿಕ ಪ್ರಭಾವ ಪಕ್ಷದ ವಿವಿಧ ಪದಾಧಿಕಾರಿಗಳ ಹಾಗೂ ಚುನಾಯಿತ ಪ್ರತಿನಿಧಿಗಳ ಮೇಲೆ ವಿಲೋಮ ಪ್ರಭಾವ ಬೀರಿತು. ಈ ಪ್ರಭಾವವನ್ನು ಇನ್ನಷ್ಟು ಪ್ರಖರಗೊಳಿಸುವ ನಿಟ್ಟಿನಲ್ಲಿ..
ಶಿವಪುರ ರಾಜ್ಯದ ಖಗ್ರಾಸ ಹೆಸರಿನ ದಟ್ಟಾರಣ್ಯದ ನಟ್ಟನಡುವೆ ದಿಗ್ಭ್ರಮಣ್ ಹೆಸರಿನ ಭವ್ಯಕಟ್ಟಡವನ್ನು ನೈರುತ್ಯ ಭೂಭಾಗವನ್ನಾಳಿದ ಚಕ್ರವರ್ತಿ ಕುಕೂಲ ತನ್ನ ಅಂತಃಪುರ ನಿವಾಸಿಗಳ ಅಪರಕರ್ಮಕ್ಕೆಂದೇ ನಿರ್ಮಿಸಿದ್ದ. ಅಲ್ಲಿಗೆ ಆಗಮಿಸಿದ ಪಕ್ಷದ ಅತಿಗಣ್ಯರನ್ನುದ್ದೇಶಿಸಿ ಯೋಗಿ ಭೋಜನಾನಂದಸ್ವಾಮಿ, ಪ್ರಧಾನಿ ಎಲುಗ, ಪಕ್ಷದ ರಾಷ್ಟಾಧ್ಯಕ್ಷ
ಠೊಣ್ಣಿ ಪ್ರಚೋದನಾತ್ಮಕ ಭಾಷಣ ಮಾಡಿದರು. ತಮ್ಮ ಸಿಡಿಮದ್ದು ಸದೃಶ ಮಾತುಗಳು ದೇಶದಾದ್ಯಂತ ಪ್ರತಿಧ್ವನಿಸಬೇಕೆಂದು ಕರೆ ನೀಡುವುದನ್ನು ಆ ಪ್ರಭೃತಿಗಳು ಮರೆಯಲಿಲ್ಲ. ಇದು ಅವರೆಲ್ಲರ ಪಂಚೇಂದ್ರಿಯಗಳನ್ನು ಚವುಡ ಮತ್ತದರ ಸಹಚರ ಪ್ರೇತಾತ್ಮಗಳು ಕಬ್ಜಾ ಮಾಡಿಕೊಂಡ ಪರಿಣಾಮ! ಅಲ್ಲಿಂದ ನಿರ್ಗಮಿಸಿದ ಅವರೆಲ್ಲರೂ..
***
ಕುಖ್ಯಾತ ಗೂಂಡಾಗಳು ವೃತ್ತಿಪರ ಕೊಲೆ ಸುಲಿಗೆ ಹಲ್ಲೆ ನಡೆಸುವವರನ್ನು ಸದಸ್ಯರನ್ನಾಗಿಸಿ ಪಟಾಕಿ ಪಕ್ಷಕ್ಕೆ ಸೇರಿಸಿಕೊಳ್ಳುವ ಅಭಿಯಾನವನ್ನು ಸ್ವತಃ ಠೊಣ್ಣಿ ಉದ್ಘಾಟಿಸಿದ. ದೇಶದಲ್ಲಿನ ಸಾಮಾನ್ಯ ಪ್ರಜೆಗಳು ಭಯಭೀತರಾಗಿ ಎಲ್ಲಿಯವರೆಗೆ ಪ್ರಾಣವನ್ನು ತಮ್ಮ ಅಂಗೈಯಲ್ಲಿರಿಸಿಕೊಂಡಿರುತ್ತಾರೋ ಅಲ್ಲಿಯವರೆಗೆ ತಮ್ಮ ಸರಕಾರವನ್ನು ಯಾರೂ ಅಲ್ಲಾಡಿಸಲಾರರು ಎಂಬ ಘೋಷವಾಕ್ಯವನ್ನು ಎಲ್ಲರೂ ಕರತಾಡನಗೈದು ಬೆಂಬಲಿಸಿದರು. ರಾಷ್ಟ್ರಾಧ್ಯಕ್ಷರ ಮಾತುಗಳನ್ನು ತ್ರಿಕರಣಪೂರ್ವಕವಾಗಿ ಜಾರಿಗೊಳಿಸುವುದು ತಮ್ಮ ಕರ್ತವ್ಯವೆಂದು ಭಾವಿಸಿದಂದಿನಿಂದ..
ದೇಶದ ಹಲವು ಕಡೆ ಹಲ್ಲೆ ಕೊಲೆ ಸುಲಿಗೆಗಳು ಅವ್ಯಾಹತವಾಗಿ ನಡೆಯಲಾರಂಭಿಸಿದವು, ಅದೂ ದೇಶಭಕ್ತಿಯ ಹೆಸರಿನಲ್ಲಿ. ನಮ್ಮ ದೇಶ ನಮ್ಮ ಹಕ್ಕು ಎಂಬ ಭಿತ್ತಿಬರಹಗಳು ರಾರಾಜಿಸ ಲಾರಂಭಿಸಿದವು. ದೇಶದ ಬಹುಪಾಲು ಸಜ್ಜನರು ನಿಧಾನವಾಗಿ ಹುತಾತ್ಮ ಸಂಗಜ್ಜನ ಸಾಮಾಜಿಕ ಅಗತ್ಯವನ್ನು ಮನಗಾಣಲಾರಂಭಿಸಿದರು. ದೇಶದ ಸಾಮಾನ್ಯ ಪ್ರಜೆಗಳು ತನ್ನ ನಿರೀಕ್ಷೆಯಲ್ಲಿರುವರು ಎಂದು ಹುತಾತ್ಮ ಭಾವಿಸುವುದಕ್ಕೂ ಎಲುಗನ ಹೌಹಾರಿದ ಹೃದಯದ ಕಾರ್ಯಕ್ಷಮತೆಯನ್ನು ಸುವಿಖ್ಯಾತ ವೈದ್ಯ ಡಾ. ರೇವಣ್ಣ ಪರೀಕ್ಷಿಸಿ ನಿಮ್ಮ ಹೃದಯ ಹೆಬ್ಬಂಡೆ ಎಂದು ಪ್ರಮಾಣೀಕರಿಸುವುದಕ್ಕೂ ಸರಿ ಹೋಯಿತು. ಇನ್ನು ತಮ್ಮನ್ನು ತಡೆಯುವ ವ್ಯಕ್ತಿ ಅವನೆ ತಾನೆ! ಆತನ ಆತ್ಮವನ್ನು ನಿಷ್ಕ್ರಿಯಗೊಳಿಸಿದರೆ ಹೇಗೆ! ಸಮಾಧಾನ ಆಪೇಕ್ಷಿಸಿದ್ದಕ್ಕೆ ಯೋಗಿ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವುದು ಪುಣ್ಯವಂತರ ಆತ್ಮದ ಲಕ್ಷಣ ಎಂದು ಹೇಳಿ ನಿರಾಸೆಗೊಳಿಸುವುದೆ! ಆದರೆ ಅದೇ ಯೋಗಿ ತಮ್ಮ ಆರನೇ ಇಂದ್ರಿಯದ ಮೂಲಕ..
ಹೌದು ನಿಸ್ಸಂದೇಹವಾಗಿ ಸಂಗಜ್ಜನ ಆತ್ಮ ತನಗೆ ಆಶ್ರಯ ನೀಡುವ ಗರ್ಭಕ್ಕಾಗಿ ಅನ್ವೇಷಣೆ ನಡೆಸಿತ್ತು. ನಿಜ ಸಂಗತಿ ಎಂದರೆ ಇತ್ತೀಚಿನ ಯುವತಿಯರಿಗೆ ಮಹಾತ್ಮರ ಹುತಾತ್ಮರ ಮೇಲ್ಮೈ ಲಕ್ಷಣದ ಪರಿಚಯವಿರಲಿಲ್ಲ, ಅಪರಿಚಿತ ಮುದುಕನೊಬ್ಬ ತಮ್ಮ ಕನಸಿನಲ್ಲಿ ಗೋಚರಿಸಿ ಅಂಗಲಾಚಿದನೆಂಬುದು ಗುಲ್ಲಾಯಿತು, ಸಂತ್ರಸ್ತ ಯುವತಿಯರು ತಮ್ಮ ಉಸ್ತುವಾರಿ ಪರಿವಾರದ ಕಿವಿಗೆ ಹಾಕಿದರು ಎಂಬುದು ಸುದ್ದಿಯಾಯಿತು. ಅದೇ ಆತ್ಮ ಏಕಕಾಲಕ್ಕೆ ದೇಶದ ಲಕ್ಷಾಂತರ ವಿವಾಹಿತೆಯರ ಕನಸಿನಲ್ಲಿ ಕಾಣಿಸಿಕೊಂಡರೆ ಮಾಧ್ಯಮಗಳು ಸುಮ್ಮನಿರಲಾದೀತೆ! ಅಂಥ ಯುವತಿಯರ ಸಂದರ್ಶನಗಳು, ಪುನರ್ಜನ್ಮಕ್ಕೆ ಸಂಬಂಧಿಸಿದ ಮಾತುಕತೆಗಳನ್ನು ಓತೋಪ್ರೋತವಾಗಿ ಪ್ರಸಾರವಾದ ಪರಿಣಾಮವಾಗಿ..
ಓಹ್! ಹುತಾತ್ಮನನ್ನಾಗಿಸಿ ಮಹಾತ್ಮನೊಟ್ಟಿಗೆ ತಾನು ಸಹ ಅಜರಾಮರನಾದ ಚವುಡ! ಸ್ವಾತಂತ್ರ್ಯೋತ್ತರ ಹಲಕುಂದಿ ರಾಷ್ಟ್ರದ ಮೂಲ ಚಹರೆಯನ್ನು ಅವೆರಡೂ ಪಾತ್ರಗಳು ಶಾಶ್ವತವಾಗಿ ಬದಲಿಸಿದವು. ಹಗಲು-ಇರುಳು, ಹುಣ್ಣುಮೆ-ಅವಮಾಸ್ಸೆ! ಪ್ರಜಾಪ್ರಭುತ್ವ-ನಿರಂಕುಶ ವ್ಯವಸ್ಥೆ! ಮಹಾತ್ಮ-ಹುತಾತ್ಮ ಹೇಗೋ ಹಾಗೆಯೇ ಸಂಗಜ್ಜ- ಚವುಡರು. ಮಹಾತ್ಮ ಮರುಜನ್ಮ ಪಡೆಯಲು ಹವಣಿಸುತ್ತಿರುವಾಗ ಹುತಾತ್ಮ ಸಹ ಮರುಜನ್ಮ ಪಡೆಯುವುದು ನ್ಯಾಯವಲ್ಲವೆ! ಅದಕ್ಕೆ ಆತ ಇದಕ್ಕೆ ಈತ! ಇಂಥ ಜಿಜ್ಞಾಸೆಯನ್ನು ಪ್ರೇತಾತ್ಮಗಳ ನ್ಯಾಯಾಲಯದಲ್ಲಿ ಹುಟ್ಟು ಹಾಕಿದ್ದು ರಾಚಪ್ಪ ಎಂಬ ಹಿರಿಯ ಪ್ರೇತ. ನ್ಯಾಯಾಲಯದ ಕಿರಿಯ ನ್ಯಾಯಾಧೀಶರು ಅದರ ವಾದವನ್ನು ಬೆಂಬಲಿಸಿದರೆ ಹಿರಿಶ್ರೇಣಿಯ ನ್ಯಾಯಾಧೀಶರು ಅದರ ವಾದವನ್ನು ತಳ್ಳಿ ಹಾಕಿದರು. ಮಹಾತ್ಮನನ್ನು ಹುತಾತ್ಮನನ್ನಾಗಿಸುವ ಹಕ್ಕು ಚವುಡನಿಗೆ ನೀಡಿದವರ್ಯಾರು? ಅದೇನಾದರೂ ಹಲಕುಂದಿ ರಾಷ್ಟ್ರದ ಬಹುತೇಕ ಪ್ರಜೆಗಳ ಉದರದಲ್ಲಿ ಮರುಹುಟ್ಟು ಪಡೆದರೆ ಆ ದೇಶವನ್ನು ರಕ್ಷಿಸುವವರ್ಯಾರು? ಎಂದೂ ಪ್ರಶ್ನಿಸಿತು, ಅಲ್ಲದೆ ಚವುಡ ಪಲಾಯನಗೈದ ಕೈದಿ ಎಂದು ಘೋಷಿಸಿತು, ಅಲ್ಲದೆ ಅದನ್ನು ಕೂಡಲೇ ಬಂಧಿಸುವಂತೆ ನರಕಲೋಕದ ಗೃಹಖಾತೆಗೆ ನಿರ್ದೇಶನ ನೀಡಿತು. ಗೃಹಖಾತೆಯ ಕಾರ್ಯದರ್ಶಿ ಕುಂಭೀಪಾಕ ತಡಮಾಡದೆ ಹಲಕುಂದಿ ದೇಶಕ್ಕೆ ನಾಗಪ್ಪನ ನೇತೃತ್ವದಲ್ಲಿ ಆರಕ್ಷಕರನ್ನು ಕಳಿಸಿದರು.
ಯೋಗಿ ಬೋಜನಾನಂದಸ್ವಾಮೀಜಿ ಪ್ರೇತಲೋಕದ ವಿದ್ಯಮಾನವನ್ನು ಆರನೇ ಇಂದ್ರಿಯದ ಮೂಲಕ ಗ್ರಹಿಸಿದ. ಚವುಡನಿಗೆ ಮರುಜನ್ಮ ಅಸಂಭವ, ಕಿರುಕುಳ ಕೊಡುವುದು ಕೋಮುಗಲಬೆಗಳನ್ನು ಸೃಷ್ಟಿಸುವುದು, ಸಾಮಾಜಿಕ ನೆಮ್ಮದಿಯನ್ನು ಹಾಳು ಮಾಡುವುದು ಅದರ ಜನ್ಮಸಿದ್ಧ ಹಕ್ಕು. ಅಂಥ ಮಹಿಮಾನ್ವಿತ ಪ್ರೇತ ಬಂಧನಕ್ಕೊಳಗಾಗದಂತೆ ಎಚ್ಚರವಹಿಸಬೇಕು. ಆತನ ಸ್ವಗತವನ್ನು ಆಲಿಸುತ್ತಿದ್ದ ಅಪನಂಬಿಕಾನಂದಸ್ವಾಮಿಯವರು..
ಸಮಯೋಚಿತ ಸಲಹೆ! ಧನ್ಯವಾದಗಳನ್ನರ್ಪಿಸಿದರು. ಮಂತ್ರ ಪಠಿಸುವಷ್ಟರಲ್ಲಿ ಶುನಕದಲ್ಲಿ ಕಾಣಿಸಿಕೊಂಡ ಅದನ್ನುದ್ದೇಶಿಸಿ! ಹೇಳಿದೊಡನೆ ಚವುಡ ನೇರವಾಗಿ! ಪ್ರಧಾನಿ ಎಲುಗ ರಾಜಧಾನಿ ಪುರೀಷದಲ್ಲಿನ ಕೋಲಾಹಲದಲ್ಲಿ ತಮ್ಮ ಕಣ್ಣೆದುರು ಹಲಕುಂದಿ ರಾಷ್ಟ್ರದ ನಕ್ಷೆಯನ್ನು ಹರಡಿಕೊಂಡು ಕುಳಿತಿದ್ದ. ದಕ್ಷಿಣಾತ್ಯ ರಾಜ್ಯಗಳನ್ನು ತೀಕ್ಷ್ಣವಾಗಿ ನೋಡುತ್ತಿದ್ದ ಹೊತ್ತಲ್ಲಿ ಎಲುಗ ನಾಭಿ ಮೂಲಕ ಆತನ ಶರೀರ ಪ್ರವೇಶಿಸಿತು. ಅದರ ಪರಿಣಾಮ ದಕ್ಷಿಣಾತ್ಯ ರಾಜ್ಯಗಳಿದ್ದ ನಕ್ಷೆ ಅಗ್ನಿಗಾಹುತಿಯಾಯಿತು. ಅರೆ ಎಂಥ ಶಕ್ತಿ ಇರುವುದು ತಮ್ಮ ನೇತ್ರಗಳಿಗೆ! ಮಾತ್ರವಲ್ಲದೆ..
ಛಪ್ಪನ್ನಾರು ದೇಶಗಳನ್ನು ಬಿರುಗಾಳಿಯೋಪಾದಿಯಲ್ಲಿ ಪರ್ಯಟಿಸಿದ ತಮಗೆ ತಮ್ಮ ದೇಶದ ರಾಜ್ಯಗಳು ಯಾವ ಲೆಕ್ಕ! ಭಾಷೆಯನ್ನು ಶಾಪಗ್ರಸ್ತವಾಗಿ ಬಳಸುವುದೆಂದರೆ ಸಾಮಾನ್ಯ ಸಂಗತಿಯೆ! ಮುದುಕರು ತಮ್ಮ ರಾಷ್ಟ್ರದ ಅಭಿವೃದ್ಧಿಗೆ ಮಾರಕ, ಅಂಥ ಯಾವುದೇ ಮುದುಕರಿಗೆ ನಿಮ್ಮ ಗರ್ಭದಲ್ಲಿ ಅಸನನ್ನು ಕಲ್ಪಿಸಿದರೆ ಅದು ದೇಶದ್ರೋಹವಾಗುವುದು. ಅಂಥ ಮಹಿಳೆಯನ್ನು ಕಠಿಣಶಿಕ್ಷ್ಷೆಗೆ ಗುರಿಪಡಿಸಲಾಗುವುತದು, ಅಂಥ ಕನಸುಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗುವುದೆಂದು ಘೋಷಿಸುವುದೆಂದರೆ! ಗರ್ಭ ರಾಷ್ಟ್ರದ ಸಂಪತ್ತು, ರಾಷ್ಟ್ರದ ಸಮಸ್ತ ಗರ್ಭಗಳನ್ನು ರಾಷ್ಟ್ರೀಕರಣಗೊಳಿಸಲು ಕೇಂದ್ರ ಸರಕಾರ ಗಂಭೀರವಾಗಿ ಯೋಚಿಸುತ್ತಿರುವುದು ಎಂದು ತಿಳಿಸುವುದೆಂದರೆ! ದೇಶದಲ್ಲಿನ ಫಲವತ್ತಾದ ಗರ್ಭಗಳನ್ನು ಅಮಾನತ್ತಲ್ಲಿರಿಸುವುದೆಂದರೆ! ಹುತಾತ್ಮನಾತ್ಮದ ಚಲನವಲನಗಳ ಮೇಲೆ ನಿಗಾ ಇಡಲಿಕ್ಕೆಂದೇ ನುರಿತ ಗೂಢಾಚಾರರನ್ನು ನೇಮಿಸುವುದೆಂದರೆ!
ಪ್ರಧಾನಿಗಳ ವರ್ತನೆ ಅಸಜವೆನ್ನಿಸಿತು ರಾಷ್ಟ್ರದ ಸತ್ಪ್ರಜೆಗಳಿಗೆ! ಇಂಥ ಅಮಾನವೀಯ
ಕಾನೂನು ಕಾಯ್ದೆಗಳನ್ನು ಜಾರಿಗೊಳಿಸುತ್ತಿರುವ ಎಲುಗ ಹಾಗೂ ಠೊಣ್ಣಿ ಮತಿಭ್ರಮಣೆ ಗೀಡಾಗಿರುವರೆ! ಖಂಡಿತ ಇರಲಾರದು, ಅವರ ಉದ್ದೇಶ ದೇಶದ ಚಲನೆಯನ್ನು ಸ್ಥಗಿತ
ಗೊಳಿಸುವುದಾಗಿದೆ. ನಮ್ಮ ಗರ್ಭ ನಮ್ಮ ಹಕ್ಕು, ಅದರಲ್ಲಿ ಯಾರನ್ನು ಬಿತ್ತಿಬೆಳೆಯಬೇಕೆನ್ನುವುದು ರಾಷ್ಟ್ರದ ಪ್ರತಿಯೊಬ್ಬ ಮಹಿಳೆಯ ಹಕ್ಕು. ಚುನಾಯಿತ ಪ್ರತಿನಿಧಿ ಎಂದ ಮಾತ್ರಕ್ಕೆ!
ಈ ಪ್ರಕಾರವಾಗಿ ಯೋಚಿಸಲಾರಂಭಿಸಿದ ಜನಮುಖಿ ಸಂಘಟನೆಗಳನ್ನು ನಿಷೇಧಿಸಿ ದ್ದಾಗಲೀ, ಆರಕ್ಷಕರ ಲಾಠಿಗಳಿಂದ ಯೋಧರ ಬಂದೂಕುಗಳಿಂದ ಹರತಾಳ ಪ್ರತಿಭಟನೆಗಳನ್ನು ಹತ್ತಿಕ್ಕಲಾರಂಭಿಸಿದ್ದಾಗಲೀ, ಪಟಾಕಿ ಪಕ್ಷದ ಆಲೋಚನೆಗಳ ಟೀಕಾಚಾರ್ಯರ ದೇಹಗಳನ್ನು ಮಾಯ ಮಾಡಲಾರಂಭಿಸಿದ್ದಾಗಲೀ! ಇವೆಲ್ಲ ಒಂದೆ ಎರಡೆ! ಆದರೂ...
ಸಂಗಜ್ಜ ಹೆಸರಿನ ಆತ್ಮ ರಾಜ್ಯದಿಂದ ರಾಜ್ಯಕ್ಕೆ, ನಗರದಿಂದ ನಗರಕ್ಕೆ, ಮನೆಯಿಂದ ಮನೆಗೆ,
ಮಹಿಳೆಯಿಂದ ಮಹಿಳೆಗೆ ಒಂದೇ ಸಮನೆ ಅಲೆಯುತ್ತಲಿತ್ತು, ತನ್ನನ್ನು ತಾನು ಪರಿಚಯಿಸಿ ಕೊಳ್ಳುತ್ತಲಿತ್ತು, ದೇಶಕ್ಕೆ ಇನ್ನೊಂದು ಸ್ವಾತಂತ್ರ್ಯದ ಅಗತ್ಯವಿರುವುದಾಗಿ ವಿವರಿಸುತ್ತಲಿತ್ತು, ದೇಶವನ್ನು ಆಂತರಿಕ ಶತ್ರುಗಳಿಂದ ರಕ್ಷಿಸುವ ಸಲುವಾಗಿ ನಿಮ್ಮ ಉದರದೊಳಗೆ ತನಗೆ ಆಶ್ರಯ ನೀಡಿ, ಅದೂ ಕೇವಲ ಒಂಭತ್ತು ತಿಂಗಳು ಒಂಭತ್ತು ದಿವಸಗಳವರೆಗೆ!
ಚವುಡ ಸಹಚರ ಪ್ರೇತಗಳು ಸುಮ್ಮನಿರಲಾದೀತೆ! ಅದರ ಹೆಜ್ಜೆ ಗುರುತುಗಳ ಮೇಲೆ ಹೆಜ್ಜೆಯನಿಕ್ಕುತ ಮಹಿಳೆಯರ ಗರ್ಭದ ರಹದಾರಿ ಮೇಲೆ ಕಲ್ಲುಮುಳ್ಳು ಚೆಲ್ಲಾಡುತ್ತಿದ್ದವು, ಹೊರಮೈ ಮೇಲೆ ಈ ಗರ್ಭ ಖಾಲಿ ಇರುವುದಿಲ್ಲ ಎಂಬ ಸೂಚನಾ ಪಲಕಗಳನ್ನು ನೇತು ಹಾಕಲಾರಂಭಿಸಿದ್ದವು, ಪಲವತ್ತಾದ ಗರ್ಭವಂತೆಯರ ಕಣ್ಣವಪೆಗಳ ಒಳಗೆ ದುಃಸ್ವಪ್ನಗಳ ತೊಗಲಗೊಂಬೆ ಮೇಳವನ್ನು ಏರ್ಪಡಿಸಲಾರಂಭಿಸಿದ್ದವು!. ರಾಷ್ಟ್ರದ ಭವಿಷ್ಯದ ಚದುರಂಗದ ಮೇಲೆ ಉರುಳುತ್ತಿರುವ ಒಳಿತು ಕೆಡುಕುಗಳ ಬಿತ್ತಗಳು. ಅದರಲ್ಲಿ ಗೆಲುವು ಯಾರದೋ, ಯಾರದು ಸೋಲು! ರಕ್ತಲೇಪಿತ ದಿನಗಳುರುಳುತ್ತಿವೆ ಒಂದರ ಹಿಂದೊಂದರಂತೆ!
ಹಾಗಿದ್ದರೆ ಸಂಗಜ್ಜ ಹೆಸರಿನ ಪವಿತ್ರಾತ್ಮದ ಸಂಗತಿ ಏನಾಯಿತೆಂದರೆ!
ಉಪಸಂಹಾರ
ಸಂಗಜ್ಜ ಎಂಬ ಪವಿತ್ರ ಆತ್ಮದ ಉದರದೆಡೆಗೆ ನಡೆ ನಿಗೂಢವಾಗಿ ಘಟಿಸಿತು. ಆದೂ ಹಲಕುಂದಿ ರಾಷ್ಟ್ರದಲ್ಲಿನ ಅಜ್ಞಾತ ಹಳ್ಳಿಯಲ್ಲಿ, ಅದೂ ಕೊಳಚೆಗೇರಿಯಲ್ಲಿ, ಭೂತಾಯಿ ಹದಿಹರೆಯ ದಾಟಿ ಯೌವನದ ಹೊಸ್ತಿಲು ಕ್ರಮಿಸಿದ್ದಳು. ಆ ದಿವಸ ಹೆತ್ತ ತಂದೆ ಯವಕನ
ಜೊತೆ ಬಂದ. ಈತನನ್ನು ಮದುವೆಯಾಗು ತಾಯಿ ಎಂದು ಕೇಳಿದ. ಅದಕ್ಕೆ ಆಕೆ ಅಪ್ಪಾಜಿ
ಈಗಾಗಲೇ ನಾನು ಗರ್ಭ ಧರಿಸಿರುವೆನು ಎಂದು ಘೋಷಿಸಿದಳು, ಅದೂ ನಿರ್ಭವುಕಳಾಗಿ.
ಕೇಳಿಸಿಕೊಂಡವರೆಲ್ಲ ದಿಗ್ಭ್ರಾಂತರಾದರು. ಯಾರು ತಾಯಿ ನಿನ್ನ ಗರ್ಭದಲ್ಲಿ ಆಶ್ರಯ ಪಡೆದಿರು ವುದು ಎಂದು ಪ್ರಶ್ನಿಸಿದರು, ಅದಕ್ಕೆ ಆಕೆ ಮಹಾತ್ಮ ಸಂಗಜ್ಜ ತನ್ನ ಉದರದಲ್ಲಿರುವನೆಂದು ಹೇಳಿದಳು. ಕೇಳಿಸಿಕೊಂಡ ಶತಾಯುಷಿ ಪವಾಡೆಜ್ಜ ಆನಂದಾತಿರೇಕದಿಂದ ಕುಣಿದು ಕುಪ್ಪಳಿಸಿದ. ಕಾರಣ ಹಿಂದೆ ತಾನು ಸಹ ಸ್ವಾತಂತ್ರ್ಯ ಹೋರಾಟಗಾರನಾಗಿದ್ದ. ಮಹಾತ್ಮನ ಸಂಗಡ ತುರಂಗವಾಸ ಅನುಭವಿಸಿ ಬಿಡುಗಡೆ ಹೊಂದಿದ್ದ. ತನ್ನ ಅದೃಷ್ಟವಂತೆ ಮೊಮ್ಮಗಳ ಗರ್ಭ ಸ್ಪರ್ಶಿಸಿ ಪುಳಕಿತನಾದ.
ಈ ಸುದ್ದಿ ದೇಶವನ್ನು ವ್ಯಾಪಿಸಿತು, ಕೇಳಿಸಿಕೊಂಡ ಎಲುಗ, ಠೊಣ್ಣಿ, ಯೋಗಿ ವಿಹ್ವಲ ಗೊಂಡರು, ಅಲ್ಲದೆ ಪಟಾಕಿ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು, ಸರಕಾರದ ಆಮಾತ್ಯರು ದಿಗ್ಭ್ರಮಿತರಾದರು. ಸರಕಾರದ ಸುಗ್ರೀವಾಜ್ಞೆಯನ್ನು ಉಲ್ಲಂಘಿಸಿರುವ ಭೂಮಿ ತಾಯಿಯನ್ನು ನೆರೆರಾಷ್ಟ್ರಕ್ಕೆ ಬಹಿಷ್ಕರಿಸಬೇಕೆಂದು ಕೆಲವರೂ, ಇನ್ನೂ ಕೆಲವರು ಆಕೆಯನ್ನು ಕೂಡಲೇ ಬಂಧಿಸಿ ಗರ್ಭಪಾತಕ್ಕೊಳಪಡಿಸಬೇಕೆಂದು ಸರಕಾರವನ್ನು ಒತ್ತಾಯಿಸಿದರು. ಚವುಡ
ಪ್ರೇತ ಹೊಲೆಗೇರಿ ಯುವತಿ ಉದರದಲ್ಲಿ ಆಶ್ರಯ ಪಡೆದು ಮೇಲ್ಜಾತಿಗಳನ್ನು ಅಪಮಾನ ಗೊಳಿಸಿದ ಸಂಗಜ್ಜ ಎಂಬ ಆತ್ಮಕ್ಕೆ ಧಿಕ್ಕಾರ ಎಂದು ಕೂಗಿತು. ಆಕೆಯ ಗರ್ಭ ನಷ್ಟ ಮಾಡಿ ತಾನು ಅಪವಿತ್ರಗೊಳ್ಳಲಾರೆ ಎಂದು ಒತ್ತಾಯಿಸಿದ ಯೋಗಿಗೆ ಹೇಳಿತು.
ಸರ್ವೋಚ್ಚ ನ್ಯಾಯಾಲಯ ಆಕೆಯ ಗರ್ಭ ಆಕೆಯ ಹಕ್ಕು ಎಂದು ಭೂತಾಯಿಯ ರಕ್ಷಣೆಗೆ ಧಾವಿಸಿತು. ಆದ್ದರಿಂದ ಯಾವ ಅಹಿತಕರ ಘಟನೆಗಳು ಸಂಭವಿಸಲಿಲ್ಲ. ಮುಂದೆ ಒಂದು ದಿವಸ ಭೂತಾಯಿ ಪ್ರಸವ ವೇದನೆ ಅನುಭವಿಸಿ ಗಂಡು ಕೂಸಿಗೆ ಜನ್ಮ ನೀಡಿದಳು. ಆ ಕೂಸಿನ ಹೆಸರು?
ಕುಖ್ಯಾತ ಗೂಂಡಾಗಳು ವೃತ್ತಿಪರ ಕೊಲೆ ಸುಲಿಗೆ ಹಲ್ಲೆ ನಡೆಸುವವರನ್ನು ಸದಸ್ಯರನ್ನಾಗಿಸಿ ಪಟಾಕಿ ಪಕ್ಷಕ್ಕೆ ಸೇರಿಸಿಕೊಳ್ಳುವ ಅಭಿಯಾನವನ್ನು ಸ್ವತಃ ಠೊಣ್ಣಿ ಉದ್ಘಾಟಿಸಿದ. ದೇಶದಲ್ಲಿನ ಸಾಮಾನ್ಯ ಪ್ರಜೆಗಳು ಭಯಭೀತರಾಗಿ ಎಲ್ಲಿಯವರೆಗೆ ಪ್ರಾಣವನ್ನು ತಮ್ಮ ಅಂಗೈಯಲ್ಲಿರಿಸಿಕೊಂಡಿರುತ್ತಾರೋ ಅಲ್ಲಿಯವರೆಗೆ ತಮ್ಮ ಸರಕಾರವನ್ನು ಯಾರೂ ಅಲ್ಲಾಡಿಸಲಾರರು ಎಂಬ ಘೋಷವಾಕ್ಯವನ್ನು ಎಲ್ಲರೂ ಕರತಾಡನಗೈದು ಬೆಂಬಲಿಸಿದರು. ರಾಷ್ಟ್ರಾಧ್ಯಕ್ಷರ ಮಾತುಗಳನ್ನು ತ್ರಿಕರಣಪೂರ್ವಕವಾಗಿ ಜಾರಿಗೊಳಿಸುವುದು ತಮ್ಮ ಕರ್ತವ್ಯವೆಂದು ಭಾವಿಸಿದಂದಿನಿಂದ..
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.