ಅನುವಾದವಲ್ಲ, ಅನುಸೃಷ್ಟಿ
-

ಹಿರಿಯ ಲೇಖಕ, ಪತ್ರಕರ್ತ ಜಿ.ಎನ್. ರಂಗನಾಥ ರಾವ್ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಲ್ಲದೆ ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಸೇವೆ ಸಲ್ಲಿಸಿದ್ದಾರೆ. ‘ಹೊಸ ತಿರುವು’, ‘ಮಾಸ್ತಿಯವರ ನಾಟಕಗಳು’, ‘ಒಳನೋಟ’, ‘ಹಿಂದಣ ಹೆಜ್ಜೆ’, ‘ಅನ್ಯೋನ್ಯ’, ಗುಣ-ದೋಷ ಮುಖ್ಯ (ವಿಮರ್ಶಾ ಕೃತಿಗಳು). ಶೇಕ್ಸ್ಪಿಯರ್ನ ರೋಮಿಯೋ ಜೂಲಿಯಟ್ ಮತ್ತು ಆ್ಯಂಟನಿ ಕ್ಲಿಯಾಪಾಟ್ರ, ಬ್ರೆಕ್ಟನ ಕಕೇಷಿಯನ್ ಚಾಕ್ ಸರ್ಕಲ್, ಅಂತಿಗೊನೆ, ಜೀನ್ ಜೆನೆಯ ದಿ ಬ್ಲ್ಯಾಕ್ಸ್, ಟಾಲ್ಸ್ಟಾಯ್ನ ಡೆತ್ ಆಫ್ ಇವಾನ್ ಇಲಿಚ್, ಇವಾನ್ ದೆನಿಸೊವಿಚ್, ಕಾಫ್ಕ ಕತೆಗಳು, ಓ ಹೆನ್ರಿ ಕತೆಗಳು, ಜೆ.ಡಿ. ಬರ್ನಾಲ್ನ ಸೋಶಿಯಲ್ ಸೈನ್ಸ್ ಇನ್ ಹಿಸ್ಟರಿ, ರಾಮಚಂದ್ರ ಗುಹ ಅವರ ಇಂಡಿಯಾ ಆಫ್ಟರ್ ಗಾಂಧಿ(ಬಾಪೂ ನಂತರದ ಭಾರತ), ಮೇಕರ್ಸ್ ಆಫ್ ಮಾಡರ್ನ್ ಇಂಡಿಯಾ(ನವಭಾರತದ ನಿರ್ಮಾಪಕರು), ಪೇಟ್ರಿಯೆಟ್ಸ್ ಆ್ಯಂಡ್ ಪಾರ್ಟಿಸಾನ್ಸ್( ದೇಶಪ್ರೇಮಿಗಳು ಮತ್ತು ಪಕ್ಷಪಾತಕರು) ಗಾಂಧಿ ಬಿಫೋರ್ ಇಂಡಿಯಾ( ಗಾಂಧಿ ಮಹಾತ್ಮರಾದುದು) ಮತ್ತು ಕಾಲಾತೀತ ವಿಖ್ಯಾತ ಖಲೀಲ್ ಗಿಬ್ರಾನ್( ಅನುವಾದಿತ ಕೃತಿಗಳು) ಮೊದಲಾದವುಗಳು ಅವರು ಕನ್ನಡಕ್ಕೆ ನೀಡಿದ ಮಹತ್ವದ ಕೊಡುಗೆಗಳು .
ಜಿ.ಎನ್. ರಂಗನಾಥ ರಾವ್
ಭಾಷಾಂತರ ಒಂದು ವಿದ್ವತ್ ಕಾರ್ಯ,ಅದು ಸೃಜನಶೀಲವಲ್ಲ, ಸೃಜನಶೀಲ ಕೃತಿಯಲ್ಲ ಎಂಬುದು ಸಾಮಾನ್ಯ ಭಾವನೆ. ಅದು ನಿಜವಲ್ಲ. ಭಾಷಾಂತರ ಅಥವಾ ಅನುವಾದ ಕಾರ್ಯ ಭಾಷಾ ವಿದ್ವತ್ತು ಅಥವಾ ಪಾಂಡಿತ್ಯದ ಜೊತೆಗೆ ಸೃಜನಶೀಲ ಪ್ರತಿಭೆೆಯನ್ನೂ ಬೇಡುವ ಅನುಸೃಷ್ಟಿ. ಆದ್ದರಿಂದಲೇ ಅನುವಾದವೂ ಒಂದು ಸೃಜನಶೀಲ ಕಲೆ.
ಇಂಥ ಅನುಸೃಷ್ಟಿ ಮಾಡುವ,ಅಂದರೆ ಒಂದು ಅನ್ಯ ಭಾಷೆಯ ಕೃತಿಯನ್ನು ತನ್ನ ಭಾಷೆಯಲ್ಲಿ ಮರುಸೃಷ್ಟಿಸುವಾಗ, ಸೃಜನಶೀಲ ಲೇಖಕ-ಅನುವಾದಕನು ಪ್ರದೇಶಗಳು,ಪ್ರಾಂತಗಳು ಮತ್ತು
ರಾಷ್ಟ್ರಗಳ ನಡುವಣ ಸಾಂಸ್ಕೃತಿಕ ಅಂತರಗಳನ್ನು ಸರಿದೂಗಿಸುವ ಸಾಂಸ್ಕೃತಿಕ ರಾಯಭಾರಿ ಇದ್ದಂತೆ. ಒಂದು ಭಾಷೆಯ ಅಭಿಜಾತ ಕೃತಿಯನ್ನು ಅನುಸೃಷ್ಟಿಸುವ ಮೂಲಕ ಆ ಸೃಜನಶೀಲ ಪ್ರತಿಭೆ ತನ್ನ ಭಾಷೆಯನ್ನು ಶ್ರೀಮಂತಗೊಳಿಸುತ್ತದೆ.
ಭಾಷಾಂತರ ಅಥವಾ ಅನುವಾದ ಕುರಿತು ಹಲವು ವ್ಯಾಖ್ಯೆಗಳಿವೆ.ಅಮೆರಿಕದ ಸಾಹಿತ್ಯ ವಿಮರ್ಶಕ ಭಾಷಾಂತರ ತತ್ವ ಅನಿವಾರ್ಯವಾಗಿ ಈ ಕಾರ್ಯವನ್ನು ಮೂರುವರ್ಗಗಳಾಗಿ ವಿಂಗಡಿಸಿದೆ ಎನ್ನುತ್ತಾನೆ.
1. ಪದಶ: ಅನುವಾದ
2. ಮೂಲಕ್ಕೆ ನಿಷ್ಠವಾದ ಅನುವಾದ
3. ಪುನರ್ ಸೃಷ್ಟಿ ಮತ್ತು ಅನುಕರಣೆ.
ನಮ್ಮಲ್ಲೂ ಭಾಷಾಂತರ ಕುರಿತು ಇಂಥ ಪರಿಕಲ್ಪನೆ ಇದೆ.ಪದಶ: ಭಾಷಾಂತರ, ಉಭಯ
ಭಾಷೆಗಳ ನಿಘಂಟುಗಳ ಅರ್ಥಕ್ಕೆ ಸರಿಹೊಂದುವಂತಹ ಸಮಾನಾರ್ಥ ಪದಗಳ ಭಾಷಾಂತರ.
ಇದನ್ನು ಮಕ್ಕಿಕಾಮಕ್ಕಿ ಭಾಷಾಂತರ ಎಂದೂ ಕರೆಯಲಾಗುತ್ತದೆ.ಮೂಲಕೃತಿಗೆ ಅತಿಯಾಗಿ ನಿಷ್ಠವಾಗಿರುವ, ಚೂರುಪಾರು ಅರ್ಥವಿಸುವ ಅಥವಾ ವ್ಯಾಖ್ಯಾನಿಸುವ ಸ್ವಾತಂತ್ರ್ಯವನ್ನು ತೆಗೆದುಕೊಳ್ಳದ ಭಾಷಾಂತರವನ್ನು ಮೂಲನಿಷ್ಠ ಭಾಷಾಂತರ ಎಂದು ಕರೆಯಲಾಗುತ್ತದೆ.ಇದು ಒಂದು ರೀತಿಯಲ್ಲಿ ಮತ್ತೊಂದು ಭಾಷೆಯಲ್ಲಿ ಮರು ನಿರೂಪಣೆಯಷ್ಟೆ. ಮೂರನೆ ಯದು
ಮತ್ತೊಂದು ಭಾಷೆಯಲ್ಲಿ ಮರುಸೃಷ್ಟಿ ಅಥವಾ ಅನು ಸೃಷ್ಟಿ.ಇದು ಮೂಲಕೃತಿಯ ಅನುಕರಣ ವಾದರೂ ಮತ್ತೊಂದು ಭಾಷೆಯಲ್ಲಿ ಸೃಜನಶೀಲ ಅನುಸೃಷ್ಟಿಯಾಗಿರುತ್ತದೆ.ಇದರಲ್ಲಿ
ಭಾಷಾಂತರಕಾರ ಮೂಲವಸ್ತುವಿಗೆ,ಅದರ ಪ್ರಾದೇಶಿಕ ಸಾಂಸ್ಕೃತಿಯ ಹಿನ್ನೆಲೆಗೆ ಭಂಗ ಉಂಟು
ಮಾಡದ ರೀತಿಯಲ್ಲಿ ತನ್ನ ಭಾಷೆಯ ಜಾಯಮಾನಕ್ಕೆ (ನೇಟಿವ್ ಕ್ಯಾರಕ್ಟರ್)ಒಗ್ಗಿಸಿಕೊಳ್ಳುವ ಸ್ವಾತಂತ್ರ್ಯ ವಹಿಸಬಹುದು. ಮೂಲಕೃತಿಗೆ ಅತಿನಿಷ್ಠವಾಗಿರುವುದೇ ಭಾಷಾಂತರಕಾರನ ಅಂತಿಮಗುರಿಯಾದಲ್ಲಿ ಅನುವಾದ ಸಾಧ್ಯವೇ ಇಲ್ಲ ಎನ್ನುವುದು ವಾಲ್ಟರ್ ಬೆಂಜಮಿನ್ನ ಅಭಿಮತ.
ಜರ್ಮನ್ ಕವಿ ಗಯಟೆ ಈ ಮೂರು ವರ್ಗಗಳನ್ನು ತನ್ನದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿ
ದ್ದಾನೆ. ಅವನ ಪ್ರಕಾರ ಪದಶ: ಭಾಷಾಂತರ ಅನ್ಯಸಂಸ್ಕೃತಿಯೊಂದನ್ನು ಮತ್ತೊಂದು ಸಂಸ್ಕೃತಿಗೆ
ಹಸ್ತಾಂತರಿಸುವ ಕಾಯಕ. ಎರಡನೆಯದು, ಮೂಲನಿಷ್ಠ ಭಾಷಾಂತರ ಅಂದರೆ ಅನ್ಯಸಂಸ್ಕೃತಿ
ಯನ್ನು ಅರ್ಥಮಾಡಿಕೊಡನಂತರ ಅದನ್ನು ನಮ್ಮ ಸಂಸ್ಕೃತಿಗೆ ಯಥಾರ್ಥವಾಗಿ ಹಸ್ತಾಂತರಿಸು ವುದು. ಮೂರನೆಯದು ಪುನರ್ ಸೃಷ್ಟಿ. ಪುನರ್ ಸೃಷ್ಟಿ ಎಂದರೆ, ಅನ್ಯಸಂಸ್ಕೃತಿ ಯನ್ನು ನಮ್ಮ ಸಂಸ್ಕೃತಿಯ ಭೂಮಿಕೆಯಲ್ಲಿ ಪುನರ್ ಸೃಷ್ಟಿಸುವುದು. ಅದು ಅನುಸೃಷ್ಟಿ.
ಅನುಸೃಷ್ಟಿಯು ಎರಡು ಸಂಸ್ಕೃತಿಗಳನ್ನು ಸಂಯೋಜಿಸುವ, ಸಮನ್ವಯಗೊಳಿಸುವ ಕಾಯಕವೂ ಹೌದು ಎನ್ನುವುದೂ ಗಯಟೆ ಮಾತೇ. ಹೀಗೆ ಅನುಸೃಷ್ಟಿ ಪ್ರಕ್ರಿಯೆಯಲ್ಲಿ ಎರಡು ಸಂಸ್ಕೃತಿಗಳನ್ನು ಸಂಯೋಜಿಸುವುದು, ಸಮನ್ವಯಗೊಳಿಸುವುದು ಸಾಧ್ಯವಾದರೆ ಆಗ ಅನುಸೃಷ್ಟಿಯು ಸ್ವತಂತ್ರ ಕೃತಿಯ ಸ್ಥಾನಮಾನವನ್ನು ಪಡೆದುಕೊಳ್ಳುತ್ತದೆ.
ಅನುಸೃಷ್ಟಿಯು ಅನ್ಯಸಂಸ್ಕೃತಿಯೊಂದಿಗೆ ಸೃಜನಶೀಲವಾಗಿ ಅನುಸಂಧಾನಮಾಡಿ ಅದನ್ನು ನಮ್ಮದಾಗಿಸಿಕೊಳ್ಳಲು ಉತ್ತಮವಾದ ಸ್ವಾಯತ್ತಮಾರ್ಗ. ಇಲ್ಲಿ ಮೂಲಕ್ಕೆ ಚ್ಯುತಿಯಾಗದಂತೆ ಅದನ್ನು ಯರ್ಥಾರ್ಥದಲ್ಲಿ ಅರ್ಥಮಾಡಿಕೊಂಡು, ಅದನ್ನು ನಮ್ಮ ಭಾಷೆಯಲ್ಲಿ ನಮ್ಮದನ್ನೇ ಆಗಿಸಿಕೊಳ್ಳಲು, ಅರ್ಥೈಸಲು ಹೆಚ್ಚಿನ ಸ್ವಾತಂತ್ರ್ಯವಿರುತ್ತದೆ.ಅನ್ಯಸಂಸ್ಕೃತಿಗಳ ಆಚಾರ, ವಿಚಾರ, ಸಂಸ್ಕಾರ, ಸಂಪ್ರದಾಯಗಳು ಭಿನ್ನವಾಗಿರುತ್ತವೆಯಾದರೂ ಮನುಷ್ಯ ಸ್ವಭಾವ, ನಡವಳಿಕೆ ಮತ್ತು ಕಾಮನೆಗಳು, ಬಹುಮಟ್ಟಿಗೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗ ಜನ್ಯವಾದುದು. ಇದು ಜಗತ್ತಿನಾದ್ಯಂತ ಮನುಷ್ಯರಲ್ಲಿ ಕಂಡುಬರುವ ಸಮಾನ ಅಂಶ. ನಾಗರಿಕತೆ, ಸಂಸ್ಕೃತಿಗಳು, ಆಚಾರ ವಿಚಾರ, ಸಂಸ್ಕಾರಗಳು ಬೆಳೆದಿರುವುದು ಈ ಮೂಲಾಂಶಗಳ ಅಡಿಪಾಯದ ಮೇಲೆಯೇ ಎಂದರೆ ಉತ್ಪ್ರೇಕ್ಷೆಯಾಗದು. ಈ ಒಂದು ಸಮಾನ ಅಂಶವೇ ಅನ್ಯಸಂಸ್ಕೃತಿಯ ಕೃತಿಯೊಂದನ್ನು ನಮ್ಮ ಭಾಷೆಯಲ್ಲಿ ಅನುಸೃಷ್ಟಿಸಲು ಅನುವಾದಕನಿಗೆ ನೆರವಾಗುವ ಮುಖ್ಯ ಆಧಾರ.
ಅನುಸೃಷ್ಟಿಯ ಸಾಧ್ಯತೆಗಳು ಮತ್ತು ಸ್ವಾಯತ್ತತೆಯನ್ನು ಇನ್ನಷ್ಟು ವಿಶದವಾಗಿ ಸೋದೋಹರಣ
ವಾಗಿ ಪರಾಮರ್ಶಿಸಬಹುದು. ಅನುವಾದಕನ ಮೊಟ್ಟಮೊದಲ ಕೆಲಸವೆಂದರೆ ಪರಕಾಯ
ಪ್ರವೇಶಮಾಡುವುದು. ಅಂದರೆ ತಾನು ಅರ್ಥಮಾಡಿಕೊಂಡ, ಮೆಚ್ಚಿಕೊಂಡ, ಅನುವಾದಿಸಲು ಉದ್ದೇಶಿಸಿರುವ ಅನ್ಯ ಭಾಷೆ,ಅನ್ಯ ಸಂಸ್ಕೃತಿಗಳ ಭೂಮಿಕೆಯ ಕೃತಿಯ ಮೈ-ಮನ
ಗಳೊಳಗೆ ಪ್ರವೇಶಿಸುವುದು. ಕೃತಿಯ ಒಳಗನ್ನು ಪ್ರವೇಶಿಸಿದ ನಂತರ ಅಲ್ಲಿನ ರಾಸಾಯನಿಕ ಹಾಗೂ ಜೈವಿಕ ಕ್ರಿಯೆ ಪ್ರಕ್ರಿಯೆಗಳನ್ನು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಜೊತೆಗೆ ಕೃತಿಯ ಪ್ರಾಪಂಚಿಕ ಪರಿಸರ, ಸಾಂಸ್ಕೃತಿಕ ಹಿನ್ನೆಲೆಗಳ ಅಧ್ಯಯನ ಮಾಡಬೇಕು.
ಕೃತಿಯ ವಸ್ತು, ವಿಷಯ, ವಿಚಾರ, ವೈಚಾರಿಕತೆಗಳನ್ನು, ತರ್ಕಗಳನ್ನು ಯಥಾದೃಷ್ಟಿಯಲ್ಲಿ ಗ್ರಹಿಸಿ ಅರ್ಥಮಾಡಿಕೊಳ್ಳಲು ಅನುವಾದಕ ಪಾತ್ರಗಳ ಮನದೊಳಕ್ಕೂ ಹೊಕ್ಕು ವಿಶ್ಲೇಷಿಸ ಬೇಕಾಗುತ್ತದೆ. ಪಾತ್ರಗಳ ಚಾರಿತ್ರ್ಯ, ಧಾರ್ಮಿಕ ಹಿನ್ನೆಲೆ, ಸಂಸ್ಕಾರ, ಸಂಸ್ಕೃತಿಗಳನ್ನು ವೃತ್ತಿ-ಪ್ರವೃತ್ತಿ
ಗಳನ್ನು ಅಭ್ಯಸಿಸಬೇಕಾಗುತ್ತದೆ. ಅನುವಾದಕ ಮೂಲ ಕೃತಿಯ ಅರ್ಥಕೋಶ ಮತ್ತು ಭಾವಕೋಶಗಳನ್ನು, ಅಭಿಪ್ರಾಯಗಳನ್ನು ಪರಿಪೂರ್ಣತೆಯಿಂದ ಅರ್ಥಮಾಡಿಕೊಳ್ಳಬೇಕು. ಅನುವಾದಕನಿಗೆ ಉಭಯ ಭಾಷೆಗಳ ಕಾವ್ಯ ಮೀಮಾಂಸೆ ಮತ್ತು ಧ್ವನಿಶಾಸ್ತ್ರಗಳ ಸಂಪೂರ್ಣ ಜ್ಞಾನವಿರಬೇಕು. ಇಷ್ಟೆಲ್ಲ ಸಿದ್ಧತೆಗಳಿಂದ ಕೃತಿ ಪ್ರವೇಶ ಮಾಡಿ, ಮನೋಗತಮಾಡಿಕೊಂಡು ಅದನ್ನು ತನ್ನ ಭಾಷೆಯಲ್ಲಿ ಗರ್ಭೀಕರಿಸಿಕೊಳ್ಳಬೇಕು. ಹೀಗೆ ತನ್ನ ಭಾಷೆಯಲ್ಲಿ ಅನ್ಯ ಕೃತಿಯೊಂದು ಭ್ರೂಣ ರೂಪ ತಾಳಿದ ಕೂಡಲೇ ಅನುವಾದಕ ಅದರ ಪರ್ಯಾಯ ಮಾತೆಯಾಗಿ
ಬಿಡುತ್ತಾನೆ. ಅಕ್ಷರಶ: ಅವನು ಅನ್ಯರು ತನ್ನಲ್ಲಿ ವಾಪಿಸಿದ ಭ್ರೂಣದ ಪೋಷಕನಾಗುತ್ತಾನೆ. ಅಂದರೆ, ಅನುವಾದಕ ಅನ್ಯ ಭಾಷೆಯ ಕೃತಿಯೊಂದನ್ನು ತನ್ನ ಸಂಸ್ಕೃತಿಗೆ ಸ್ವೀಕರಿಸಿ ಅಥವಾ ತನ್ನ ಸಂಸ್ಕೃತಿಯನ್ನಾಗಿಸಿಕೊಂಡು ತನ್ನ ರಕ್ತಮಾಂಸ ಮೊದಲಾದ ಜೀವದ್ರವ್ಯಗಳಿಂದ ಬೆಳೆಸುತ್ತಾನೆ. ಇದು ಅನುಸೃಷ್ಟಿಯ ಕ್ರಮ.ಅನ್ಯ ಸಂಸ್ಕೃತಿಯ ಕೃತಿಯೊಂದರ ಪುನರ್ ಸೃಷ್ಟಿಯ ಕ್ರಮ. ಇದರಲ್ಲಿ ಅನುವಾದಕ ಯಶಸ್ವಿಯಾದಾಗ ಗಯಟೆ ಹೇಳುವಂತೆ ಅನ್ಯ ಭಾಷೆಯ ಕೃತಿಯೊಂದು ನಮ್ಮ ಭಾಷೆಯ ಸ್ವತಂತ್ರ ಕೃತಿಯೇ ಆಗುತ್ತದೆ.
ಇಲ್ಲೊಂದು ಪ್ರಶ್ನೆ ಉದ್ಭವಿಸುತ್ತದೆ, ಪರ್ಯಾಯ ಮಾತೆಯಾದ ಭಾಷಾಂತರಕಾರನಿಗೆ ಎಷ್ಟು ಸ್ವಾತಂತ್ರ್ಯವಿದೆ? ಹಾಗೆ ನೋಡಿದರೆ ಅನುವಾದಕನಿಗೆ ಏನೇನೂ ಸ್ವಾತಂತ್ರ್ಯವಿಲ್ಲ. ಅವನು ಮೂಲ ಕೃತಿಯ ಆಶಯ, ಆಚಾರವಿಚಾರಗಳಿಂದ ಎಳ್ಳಷ್ಟೂ ಅಕ್ಕಪಕ್ಕ, ಹಿಂದೆ ಮುಂದೆ ಸರಿಯುವಂತಿಲ್ಲ. ಮೂಲ ಕೃತಿಗೆ ಅವನ ನಿಷ್ಠೆ ಅಚಲವಾಗಿರಬೇಕು. ಆದರೆ ಅನುವಾದಕ ಅನ್ಯಕೃತಿಯೊಂದನ್ನು ತನ್ನ ಭಾಷೆ, ಸಂಸ್ಕೃತಿ,ಪರಿಸರಗಳಿಗೆ ಬರಮಾಡಿಕೊಳ್ಳುವಾಗ, ತನ್ನದನಾಗಿಸಿಕೊಳ್ಳುವಾಗ ಸ್ವಲ್ಪಮಟ್ಟಿನ ಹೊಂದಾಣಿಕೆಯ ಸ್ವಾತಂತ್ರ್ಯವಹಿಸಬಹುದು. ಇಲ್ಲೇ ವ್ಯಾಖ್ಯಾನ,ಅರ್ಥೈಸುವಿಕೆಗಳಿಗೆ ಅವಕಾಶವಿದೆ.
ಸಾಮಾನ್ಯವಾಗಿ ಅನುಸೃಷ್ಟಿ ಸಾಹಿತ್ಯದ ಎರಡು ಪ್ರಕಾರಗಳಲ್ಲಿ ಕಂಡುಬರುತ್ತದೆ.
1.ಕಲ್ಪಿತ ಸಾಹಿತ್ಯ (ಫಿಕ್ಷನ್)
2.ಅಕಲ್ಪಿತ ಸಾಹಿತ್ಯ (ನಾನ್ ಫಿಕ್ಷನ್)
ಕಾವ್ಯ, ಕಾದಂಬರಿ, ಸಣ್ಣ ಕಥೆ, ಲಲಿತ ಪ್ರಬಂಧ, ನಾಟಕ, ಹಾಸ್ಯ ಲೇಖನಗಳು, ವಿಡಂಬನೆಯ ಲೇಖನಗಳು ಇವೆಲ್ಲ ಕಲ್ಪಿತ ಸಾಹಿತ್ಯದಲ್ಲಿ ಬರುತ್ತವೆ. ವಿಮರ್ಶೆ,ವೈಜ್ಞಾನಿಕ ಲೇಖನಗಳು,ಆತ್ಮ ಕಥೆ, ಜೀವನ ಕಥೆ,ತತ್ವ-ಸಿದ್ಧಾಂತಗಳನ್ನು ಕುರಿತ ವೈಚಾರಿಕ ಲೇಖನಗಳು ಮೊದಲಾದವುಗಳನ್ನು ಅಕಲ್ಪಿತ ಸಾಹಿತ್ಯ (ನಾನ್ ಫಿಕ್ಷನ್) ಎಂದು ಕರೆಯಲಾಗುತ್ತದೆ.
ಕನ್ನಡದಲ್ಲಿ ಅನುವಾದ ಸಾಹಿತ್ಯಕ್ಕೆ ಕೊರತೆ ಇಲ್ಲ. ವಿಶ್ವದ ವಿವಿಧ ಭಾಷೆಗಳ ಅಭಿಜಾತ ಕೃತಿಗಳು ಹಾಗೂ ಭಾರತೀಯ ಭಾಷೆಗಳ ಅಭಿಜಾತ ಕೃತಿಗಳು ನವೋದಯ ಪೂರ್ವ ದಿಂದಲೂ ಅನುವಾದಗೊಳ್ಳುತ್ತಾ ಕನ್ನಡವನ್ನು ಶ್ರೀಮಂತಗೊಳಿಸಿವೆ. ‘ಇಂದಿರಾ ಬಾಯಿ’ (1899) ಕನ್ನಡದ ಪ್ರಪ್ರಥಮ ಸಾಮಾಜಿಕ ಕಾದಂಬರಿ ಎಂಬ ಕೀರ್ತಿಗೆ ಪಾತ್ರವಾಗಿದೆ. ಇದಕ್ಕೂ ಮೊದಲಿನದು ಯಾದವನ ‘ಕಲಾವತಿ ಪರಿಣಯ’(1815). ಬಂಗಾಲಿಯ ಬಂಕಿಮ ಚಂದ್ರ ಮತ್ತು ಮರಾಠಿಯ ಹರಿನಾರಾಯಣ ಆಪ್ಟೆ ಕನ್ನಡದಲ್ಲಿ ಕಾದಂಬರಿಯ ಪ್ರವರ್ತಕರೆಂದು ಕುರ್ತಕೋಟಿಯವರು ಅಭಿಪ್ರಾಯಪಡುತ್ತಾರೆ. ಕನ್ನಡದಲ್ಲಿ ಕಾದಂಬರಿ ಒಂದು ಕಥಾ ಸಾಹಿತ್ಯ ಪ್ರಕಾರವಾಗಿ ತನ್ನ ಅಸ್ಮಿತೆಯ ಛಾಪು ಮೂಡಿಸಿಕೊಳ್ಳುವುದಕ್ಕೂ ಮೊದಲೇ ಭಾಷಾಂತರ ಕೃತಿಗಳು ಪ್ರಭಾವ ಬೀರಿದ್ದವು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಬಿ.ವೆಂಕಟಾಚಾರ್ ಮತ್ತು ಗಳಗನಾಥರು ಬಂಕಿಮಚಂದ್ರ ಮತ್ತು ಆಪ್ಟೆಯವರ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ ಮೊದಲಿಗರು. ನವೋದಯದ ಪ್ರಮುಖ ಲೇಖಕರಿಂದ ಹಿಡಿದು ಇಂದಿನವರೆಗೆ ಅನೇಕ ಮಂದಿ ಕನ್ನಡ ಲೇಖಕರು ಶೇಕ್ಸ್ಪಿಯರ್, ಟಾಲ್ಸ್ಟಾಯ್ ಮೊದಲಾದವರ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಡಿ.ವಿ.ಜಿ.ಯಿಂದ ನಿಸಾರ್ ಅಹಮದ್ ಅವರ ವರೆಗೆ ಅನೇಕರು ಶೇಕ್ಸ್ಪಿಯರನ ಮಹತ್ವದ ನಾಟಕಗಳನ್ನು ಕನ್ನಡಿಸಿದ್ದಾರೆ. ಅನೇಕ ಲೇಖಕರು ಶೇಕ್ಸ್ ಪಿಯರನ ನಾಟಕಗಳನ್ನು ಕನ್ನಡಕ್ಕೆ ಅಳವಡಿಸಿದ್ದಾರೆ. ಸಿಂಪಿ ಲಿಂಗಣ್ಣ, ಎಲ್.ಗುಂಡಪ್ಪನವರಿಂದ ಹಿಡಿದು ನಾನೂ ಸೇರಿದಂತೆ ಇವತ್ತಿನ ಒ.ಎಲ್. ನಾಗಭೂಷಣಸ್ವಾಮಿಯವರವರೆಗೆ ಅನೇಕರು ಟಾಲ್ಸ್ಟಾಯ್ ಅವರ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ.ಇವುಗಳಲ್ಲಿ ಪದಶಃ ಅನುವಾದಗಳೂ ಇವೆ,ಅನುಸೃಷ್ಟಿಗಳೂ ಇವೆ. ಕಾದಂಬರಿ, ಸಣ್ಣ ಕಥೆ, ನಾಟಕಗಳಂಥ ಸೃಜನಶೀಲ ಸಾಹಿತ್ಯವಲ್ಲದೆ, ವಿಮರ್ಶೆ, ವೈಚಾರಿಕ ಸಾಹಿತ್ಯ, ವೈಜ್ಞಾನಿಕ ಸಾಹಿತ್ಯವೂ ಗಣನೀಯ ಪ್ರಮಾಣದಲ್ಲೇ ಕನ್ನಡಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ನನ್ನ ಅನುಸೃಷ್ಟಿಯ ಅನುಭವಗಳನ್ನೇ ಒರೆಗೆಹಚ್ಚಿ ನೋಡಬಹುದು. ನಾನು ಶೇಕ್ಸ್ಪಿಯರ್, ಟಾಲ್ಸ್ಟಾಯ್, ಅಲೆಕ್ಸಾಂಡರ್ ಸೋಲ್ಜೆನಿಟ್ಸಿನ್, ಬರ್ಟೋಲ್ಟ್ ಬ್ರೆಕ್ಟ್, ಪ್ರಾಂಜ್ ಕಾಪ್ಕಾ, ಒ.ಹೆನ್ರಿ, ಜೀನ್ ಅನ್ವಿ, ಜೀನ್ ಜೆನೆ, ಡಿ.ಎಚ್.ಲಾರೆನ್ಸ್, ಖಲೀಲ್ ಗಿಬ್ರಾನ್ ಅವರ ಕೃತಿಗಳನ್ನೂ ಜೆ.ಡಿ.ಬರ್ನಾಲನ ‘ಸೈನ್ಸ್ ಇನ್ಹಿಸ್ಟರಿ’ ವೈಜ್ಞಾನಿಕ ಕೃತಿಯನ್ನೂ ಕನ್ನಡಕ್ಕೆ ತಂದಿದ್ದೇನೆ. ಇದಲ್ಲದೆ ಭಾರತೀಯ ಭಾಷೆಯ ರವೀಂದ್ರನಾಥ ಠಾಕೂರ್, ಮೋಹನ್ ಭಂಡಾರಿ (ಪಂಜಾಬಿ), ರಾಜಮೋಹನ್ ಗಾಂಧಿ, ಗೋಪಾಲಕೃಷ್ಣ ಗಾಂಧಿ, ರಾಮಚಂದ್ರ ಗುಹಾ, ಎಲ್.ಎಸ್.ಶೇಷಗಿರಿ ರಾವ್ ಮೊದಲಾದವರ ಕೃತಿಗಳನ್ನು ಕನ್ನಡದಲ್ಲಿ ಅನುಸೃಷ್ಟಿಸಿದ್ದೇನೆ. ಇವೆಲ್ಲವನ್ನೂ ನಾನು ಇಂಗ್ಲಿಷ್ನಿಂದಲೇ ತಂದುಕೊಡಿದ್ದೇನೆ.
ಶೇಕ್ಸ್ಪಿಯರ್, ಟಾಲ್ಸ್ಟಾಯ್, ಬ್ರೆಕ್ಟ್, ಲಾರೆನ್ಸ್ ಅವರ ಕೃತಿಗಳು ಲೋಕದ ಜನಸಾಮಾನ್ಯರಲ್ಲಿ ಸಹಜವಾಗಿ ಕಾಣಬಹುದಾದಂಥ ಅರಿಷಡರ್ಗ್ವ ಮೂಲದವು. ಹಾಗೆಂದ ಮಾತ್ರಕ್ಕೆ ಅವುಗಳ ಸಾಂಸ್ಕೃತಿಕ ಅಸ್ಮಿತೆಯನ್ನು ಮರೆಯುವಂತಿಲ್ಲ. ಹೀಗಾಗಿ ಈ ಲೇಖಕರನ್ನು ಅನುಸೃಷ್ಟಿಸುವಾಗ ನನಗೆ ಕಷ್ಟವೆನಿಸಲಿಲ್ಲ. ಸಾಂಸ್ಕೃತಿಕ ಬಿಕ್ಕಟ್ಟು ಉದ್ಭವಿಸಲಿಲ್ಲ. ಆದರೆ ಐರೋಪ್ಯ ಲೇಖರಾದ ಲಾರೆನ್ಸ್. ಕಾಪ್ಕ, ಜೀನ್ ಜೆನೆರ ಕೃತಿಗಳ ಬಗ್ಗೆ ಇದೇ ಮಾತನ್ನು ಹೇಳಲಾರೆ. ಈ ಎಲ್ಲ ಲೇಖಕರ ಕೃತಿಗಳ ಅನುಸೃಷ್ಟಿಯ ಕಾರ್ಯದಲ್ಲಿ ನಾನು ಅನುಭವಿಸಿದ ಸಂದಿಗ್ಧತೆ, ಸಂತೋಷಗಳನ್ನು, ಒಂದೊಂದು ಕೃತಿಯನ್ನು ಮುಂದಿಟ್ಟುಕೊಂಡೇ ಪರಾಮರ್ಶಿಸಬಹುದು.
ಮನುಷ್ಯರಲ್ಲಿನ ಕಾಮಕಾಮನೆಗಳು, ಭಯಭೀತಿಗಳು, ಆಸ್ತಿಮೋಹ, ಲೋಭ, ಯುದ್ಧೋನ್ಮತ್ತತೆ, ಶಾಂತಿಯ ಹಂಬಲ, ಕಾಡುವ ಮರಣಭೀತಿ ಇವೇ ಮೊದಲಾದ ಮೂಲಭೂತ ಮನೋವೃತ್ತಿಗಳು ಟಾಲ್ಸ್ಟಾಯ್ ಅವರ ಬಹುತೇಕ ಕೃತಿಗಳ ವಸ್ತುವಿಷಯ
ವಾದರೂ ಅವರ ಕಥೆ, ಕಾದಂಬರಿ, ನಾಟಕಗಳ ಹಿನ್ನೆಲೆಯಲ್ಲಿ ರಶ್ಯ ಸಂಸ್ಕೃತಿ ಮತ್ತು ಇತಿಹಾಸದ ಭೀತಿ ಇದೆ. ಆದರೆ ಟಾಲ್ಸ್ಟಾಯ್ ಅವರ ಮೂಲ ಕಾಳಜಿ ಲೋಕಮಾನ್ಯವಾದ ಮನುಷ್ಯನ ಈ ದೌರ್ಬಲ್ಯಗಳ ಅಭಿವ್ಯಕ್ತಿಯೇ ಆಗಿರುವುದರಿಂದ ಅವರ ಕೃತಿಗಳು ನಮಗೆ ‘ಅನ್ಯ’ ಎನಿಸುವುದಿಲ್ಲ. ನಾನು ಟಾಲ್ಸ್ಟಾಯ್ ಅವರ ‘ದಿ ಡೆತ್ ಆಫ್ ಇವಾನ್ ಇಲ್ಯಿಚ್’ ಮತ್ತು ಇತರ ಐದು ಕಥೆಗಳನ್ನು ಕನ್ನಡದಲ್ಲಿ ಅನುಸೃಷ್ಟಿಸಿದ್ದೇನೆ. ‘ಡೆತ್ ಆಫ್ ಇವಾನ್ ಇಲ್ಯಿಚ್’, ವಿದ್ಯಾರ್ಥಿ ದಿನಗಳಿಂದ ನನ್ನನ್ನು ಬಹುವಾಗಿ ಕಾಡಿದ ಕಥೆ.
ಈ ನೀಳ್ಗಥೆ ನಮ್ಮ ‘ಮಹಾಭಾರತ’ದ ಮಹಾಪ್ರಸ್ಥಾನವನ್ನು ನೆನಪಿಗೆ ತರುತ್ತದೆ. ಮಹಾಪ್ರಸ್ಥಾನವೆಂದರೆ ಮರಣ ದೀಕ್ಷೆಯನ್ನು ಕೈಗೊಂಡು ಉತ್ತರ ದಿಕ್ಕಿಗೆ ನಡೆಸುವ ದೀರ್ಘ ಪಯಣ. ಇದು ಭಾರತೀಯ ಸಂಸ್ಕೃತಿಯ ಹಿನ್ನೆಲೆಯ ಅರ್ಥವಿವರಣೆ. ಟಾಲ್ಸ್ಟಾಯ್ ಅವರ ‘ಡೆತ್ ಆಫ್ ಇವಾನ್ ಇಲ್ಯಿಚ್’, ಇಲ್ಯಿಚ್ ಎಂಬವನ ಸುದೀರ್ಘ ಮರಣ ಯಾನ, ಯಾತನೆಗಳನ್ನು ನಿರೂಪಿಸುವ ಕಥೆ. ಈ ಮರಣ ಪಯಣ ಇಲ್ಯಿಚ್ ಪಾಲಿಗೆ ಕ್ಷಣಕ್ಷಣಕ್ಕೂ ಎದುರಾಗುವ ದಾರುಣ ಜೀವಂತ ಅನುಭವ. ಇಲ್ಯಿಚ್ನ ಮರಣ ಯಾನದ ಕಥೆ ಮೃತ್ಯು ಶಯ್ಯೆಯಲ್ಲಿ ಬಿಚ್ಚಿಕೊಂಡಂತೆ, ನೀತಿ-ನಿಷ್ಠೆಗಳಿಗೆ ಅಂಜದ ಮಾನವನ ನಿರ್ಲಜ್ಜ ನಡತೆಗಳು, ಹೆಣ್ಣುಹೊನ್ನುಗಳ ಮೋಹವೇ ಪ್ರಧಾನವಾದ, ಲೋಕ ವ್ಯಾಮೋಹಗಳಿಂದ ಬಾಧಿತವಾದ ಮಾನವ ಸಂಬಂಧಗಳು, ಅನೀತಿಯುತವಾದ ಆಸೆ ಆಕಾಂಕ್ಷೆಗಳು.
ಲೋಭಗಳು ಇವೆಲ್ಲದರ ದರ್ಶನವಾಗುತ್ತದೆ ನಮಗೆ ಇಲ್ಯಚ್ಚನ ಮರಣ ಯಾನದಲ್ಲಿ. ಇಲ್ಯಿಚ್ ಜೀವನದಲ್ಲಿ ಕಂಡ ಕನಸುಗಳು, ಈಡೇರದ ಆಸೆಗಳು, ಬದುಕಿನಲ್ಲಿ ಅವನು ಅನುಭವಿಸಿದ ಕಷ್ಟನಷ್ಟನೋವುಗಳು, ಹತಾಶೆ, ಅಸಹಾಯಕತೆಗಳು, ಮರ್ಯಾದೆಬದ್ಧ ಬದುಕಿಗಾಗಿ ಅವನು ನಡೆಸುವ ಹೋರಾಟ ಇವೆಲ್ಲವೂ ಟಾಲ್ಸ್ಟಾಯ್ ಅವರ ನಿರೂಪಣೆಯಲ್ಲಿ ಭಯಾನಕವಾದ ಆಯಾಮವನ್ನು ಪಡೆದುಕೊಳ್ಳುತ್ತವೆ. ಮರಣ ಯಾನದಲ್ಲಿ ಇಲ್ಯಿಚ್ ತನ್ನ ಬದುಕಿನ ದಾರುಣ ಹೋರಾಟವನ್ನು ಮೆಲುಕುಹಾಕುತ್ತ ಮರಣದ ಆ ಮಹಾಕ್ಷಣಕ್ಕಾಗಿ ಕಾಯುತ್ತಿದ್ದರೆ, ಇತ್ತ ಅವನ ಕುಟುಂಬ, ಅವನ ಸುತ್ತ ನೆರದವರು, ಅವನನ್ನು ಕಾಣಲು ಬಂದವರು ಅವನ ಸಾವಿನ ಸಾಧಕಬಾಧಕಗಳನ್ನೂ, ಅವನ ಸಾವಿನಿಂದ ತಮಗೆ ಸಿಗಬಹುದಾದ ನೆಮ್ಮದಿ, ಆಗಬಹುದಾದ ಲೌಕಿಕ ಲಾಭಗಳ ಲೆಕ್ಕಾಚಾರ ಮಾಡುತ್ತಿರುತ್ತಾರೆ. ಈ ಪ್ರಕ್ರಿಯೆಯಲ್ಲೇ ಟಾಲ್ ಸ್ಟಾಯ್ ಅವರು ಅರಿಷಡ್ವರ್ಗಗಳಿಂದ ಬಾಧಿತವಾದ ಮಾನವ ಜೀವನದ ವಿರಾಟ್ ದರ್ಶನ ಮಾಡಿಸುತ್ತಾರೆ.
ಕೊನೆಗೆ ಪಯಣದ ಕೊನೆಯಲ್ಲಿ, ಸುರಂಗ ಮಾರ್ಗದ ಇನ್ನೊಂದು ತುದಿಯಲ್ಲಿ ಬೆಳಕು ಕಾಣಿಸಿ ಇಲ್ಯಿಚ್ ನಿರಾಳವಾಗಿ ಕೊನೆಯುಸಿರೆಳೆಯುತ್ತಾನೆ. ಈ ಬೆಳಕು ನಮ್ಮ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಪುನರ್ ಜನ್ಮವಿಲ್ಲದ ಮೋಕ್ಷವೆನ್ನಿಸಬಹುದಾದರೂ ರಶ್ಯನ್ ಸಂಸ್ಕೃತಿಯ ಇಲ್ಯಿಚ್ನಿಗಂತೂ ಈ ಜನ್ಮದ ಲೌಕಿಕ ಬದುಕಿನಿಂದ ಮುಕ್ತಿಯೆನಿಸಿ ಸಮಾಧಾನ ಉಂಟುಮಾಡಿರಬಹುದು.
ಈ ಕಥೆ ನನಗೆ ನಮ್ಮ ಮಹಾಭಾರತದ ಮಹಾಪ್ರಸ್ಥಾನದಂತೆಯೇ ಕಂಡದ್ದಕ್ಕೆ, ಹಾಗೆ ಕಾಡಿ ಅನುಸೃಷ್ಟಿಗೊಂಡದ್ದಕ್ಕೆ ಒಂದೆರಡು ಕಾರಣಗಳಿವೆ. ಮೊದಲನೆಯದಾಗಿ ಮಹಾಪ್ರಸ್ಥಾನದಲ್ಲಿ ಕಂಡುಬರುವ ಯಾತನಾಪೂರ್ಣ ಪಯಣದಂತೆಯೇ ಇಲ್ಯಿಚ್ನ ಮರಣ ಯಾನವೂ ಯಾತನಾಪೂರ್ಣವಾಗಿರುವುದು.ತಮ್ಮಂದಿರು, ಪತ್ನಿ ಹೀಗೆ ಒಬ್ಬೊಬ್ಬರನ್ನಾಗಿ ಕಳೆದುಕೊಳ್ಳುತ್ತಾ ಕೊನೆಗೆ ಒಂಟಿಯಾಗಿ (ನಾಯಿಯೊಂದಿರುತ್ತದೆ ಇದಕ್ಕೆಲ್ಲ ಸಾಕ್ಷಿಯಾಗಿ), ಬಾಳಿನ ಶಾಶ್ವತತೆ, ನಶ್ವರತೆಗಳ ಬಗ್ಗೆ ಚಂತನೆಮಾಡುತ್ತಾ ಪ್ರಜ್ಞಾ ಪೂರ್ವಕವಾಗಿ ಮರಣ ದೀಕ್ಷೆಯ ಸಂಕಟವನ್ನು ಹೆಜ್ಜೆಹೆಜ್ಜೆಗೂ ಅನುಭವಿಸುತ್ತಾ ಸಾಗುವ ಯುಧಿಷ್ಠರನಂತೆಯೇ ನಾನು ಟಾಲ್ಸ್ಟಾಯ್ ಅವರ ಇಲ್ಯಿಚ್ನನ್ನು ಕಂಡೆ. ಎಂದೇ, ಜೀವನದಲ್ಲಿ ಎಲ್ಲಿ ಹೇಗೆ ಕೊಳೆಯಲು ಶುರುವಾಗುತ್ತದೆ ಎಂಬುದನ್ನೂ, ಸರಳತೆಯೆಂದರೆ ಏನೆಂಬುದನ್ನೂ, ಜೀವಕಾಮ ಎಷ್ಟು ಗಾಢವೆಂಬುದನ್ನೂ,ಸಾಯುವುದೆಂದರೆ ಎಷ್ಟು ತೀವ್ರ ಅನುಭವವೆಂಬುದನ್ನೂ ಟಾಲ್ಸ್ಟಾಯ್ನಷ್ಟು ಆಳವಾಗಿ ತೋರುವ ಐರೋಪ್ಯ ಲೇಖಕರು ಇಲ್ಲವೆನ್ನಬಹುದು.
.... ವಾಸ್ತವದ ನೆಲೆಯಲ್ಲಿ ಕಥೆ ಬರೆಯುವ ಟಾಲ್ಸ್ಟಾಯ್ ಈ ಭೂಮಿಯನ್ನೂ ಒಳಗೊಳ್ಳುವಂತೆ ಬರೆಯುವುದು ಆಶ್ಷರ್ಯವಲ್ಲ. ಪುರಾಣದ ಅನುಕೂಲ ಪಡೆದಿದ್ದ ವೇದವ್ಯಾಸರ ಆಕಾಶವನ್ನೂ ಈತ ವಾಸ್ತವ ಶೈಲಿಯಲ್ಲಿ ಪಡೆಯುತ್ತಾನೆ ಎಂದು ಅನಂತ ಮೂರ್ತಿಯವರು ‘ಮಹಾಪ್ರಸ್ಥಾನ’ಕ್ಕೆ ಬರೆದಿರುವ ಮುನ್ನುಡಿಯಲ್ಲಿ ಆಡಿರುವ ಮಾತುಗಳು ಇಂದಿಗೂ ಚಿಂತನಾರ್ಹ-ಟಾಲ್ಸ್ಟಾಯ್ನ ಆಧ್ಯಾತ್ಮಿಕ ಚಿಂತನೆ ಕುರಿತಂತೆ ಅನಂತ ಮೂರ್ತಿಯವರ ಗ್ರಹಿಕೆಯನ್ನು ಗಮನಿಸಿದಾಗ, ಇಲ್ಯಿಚ್ಚನ ಮರಣಯಾನವೂ ಬದುಕನ್ನು ಕಂಡುಂಡು ಮೋಕ್ಷ ಬಯಸಿದವನೊಬ್ಬನ ‘ಮರಣದೀಕ್ಷೆ’ ಅಥವಾ ಮಹಾಪ್ರಸ್ಥಾನವಾಗಿರಬಹುದು ಎಂದು ಅರ್ಥವಿಸಬಹುದು.
- ಇಲ್ಲಿನ ಸಾಮ್ಯತೆ ಹಾಗೂ ಈ ಬಗೆಯ ಜೀವನ ದರ್ಶನದಿಂದ ಟಾಲ್ ಸ್ಟಾಯ್ ಅವರ ‘ದಿ ಡೆತ್ ಆಪ್ ಇವಾನ್ ಇಲ್ಯಿಚ್’ ನಮ್ಮ ಕಥೆಯಾಗಿಯೂ ವಿಶ್ವಮಾನವರ ದಾರುಣ ಕಥೆಯಾಗಿಯೂ ನನ್ನನ್ನು ಕಾಡಿತು, ನನ್ನಿಂದ ಬರೆಸಿಕೊಂಡಿತು.
ಶೇಕ್ಸ್ಪಿಯರ್, ಡಿ.ಎಚ್.ಲಾರೆನ್ಸ್, ಕಾಪ್ಕ್ಕಾ, ಅನ್ವೀ, ಜೀನ್ ಜೆನೆ.ಒ.ಹೆನ್ರಿ ಇವರುಗಳ ಅನುವಾದ/ಅನುಸೃಷ್ಟಿ ನಿಜಕ್ಕೂ ಸವಾಲಿನ ಕೆಲಸವೇ. ಶೇಕ್ಸ್ ಪಿಯರನನ್ನು ಅನುವಾದಿಸಲು ಐರೋಪ್ಯ ಸಂಸ್ಕೃತಿ ಮತ್ತು ಇಂಗ್ಲಿಷ್ ಭಾಷೆಯಲ್ಲಿನ ಅಪಾರವಾದ ಜ್ಞಾನ, ಪಾಂಡಿತ್ಯಗಳು ಅಗತ್ಯ. ಶೇಕ್ಸ್ಪಿಯರನ ನಾಟಕಗಳ ಸಾಂಸ್ಕೃತಿಕ ಹಿನ್ನೆಲೆ ಭಿನ್ನವಾದರೂ ಅವುಗಳಲ್ಲಿ ನಾವು ಕಾಣುವ ಕಾಮಕಾಮನೆಗಳು, ಪ್ರೀತಿ, ದ್ವೇಷ, ಕೋಪ, ಕೊಲೆಗಳು, ಸಿಟ್ಟುಸೆಡವುಗಳು. ಲೋಭಮಾತ್ಸರ್ಯಗಳು ವಿಶ್ವದಾದ್ಯಂತ ಕಂಡುಬರುವ ಮಾನವ ಸ್ವಭಾವಗಳು. ಆದರೆ ರೋಮಿಯೋ ಜೂಲಿಯೆಟ್ ಭಾಷಾಂತರಿಸುವಷ್ಟು ಮ್ಯಾಕ್ಬೆತ್, ಒಥೆಲೊ ಸುಲಭವಾಗದು. ಏಕೆಂದರೆ ಇಲ್ಲಿನ ಅರಿಷಡ್ವರ್ಗಗಳು ಮತ್ತು ಅವುಗಳನ್ನು ಬಿಂಬಿಸುವ ಭಾಷೆ ಜಟಿಲವಾದುದು.
ಇನ್ನು ಲಾರೆನ್ಸ್. ಸಾಹಿತ್ಯದಲ್ಲಿ ಪೌರಾತ್ಯ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿ ಎಂಬ ವಿಭಜನೆ ಉಂಟಷ್ಟೆ. ಧಾರ್ಮಿಕವಾಗಿ ಪೌರಾತ್ಯ ಸಂಸ್ಕೃತಿ ಹಿಂದೂ, ಬೌದ್ಧ, ಇಸ್ಲಾಮ್, ಕ್ರಿಶ್ಚಿಯನ್ ಧರ್ಮಗಳಲ್ಲಿ ಹಂಚಿಹೋಗಿದ್ದರೂ ಅದರಲ್ಲಿ ಸಾಂಸ್ಕೃತಿಕವಾಗಿ ಕೆಲವೊಂದು ಅನುರೂಪಗಳಿವೆ. ಈ ಅನುರೂಪತೆಯಿಂದಾಗಿ ಪೌರಾತ್ಯ ದೇಶ ಭಾಷೆಗಳ ಅನುಸೃಷ್ಟಿ ನಮಗೆ ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಹತ್ತಿರವಾಗುತ್ತವೆ. ಇದೇ ಮಾತನ್ನು ಪಾಶ್ಚಾತ್ಯ ಕೃತಿಗಳ ಬಗ್ಗೆ ಹೇಳಲಾಗದು.
ಪಾಶ್ಚಾತ್ಯ ಸಂಸ್ಕೃತಿಯ ಮುಖ್ಯ ಭಾಗಗಳಾದ ಕ್ರಿಶ್ಚಿಯನ್ ಧರ್ಮ, ಭಾಷೆ ಮತ್ತು ಸತ್ಕುಲೀನ (ಅರಿಸ್ಟೊಕ್ರಾಟಿಕ್) ಪರಂಪರೆ ಇವೆಲ್ಲವೂ ಒಂದು ಕೃತಿಯನ್ನು ಪ್ರಭಾವಿಸಿರುತ್ತವೆ ಅಥವಾ ಅದಕ್ಕೆ ಆವರಣವೊಂದನ್ನು ಕಲ್ಪಿಸಿರುತ್ತವೆ ಎಂದೇ ಬಹುತೇಕ ಪಾಶ್ಚಾತ್ಯ ಕೃತಿಗಳು ನಮಗೆ ತದ್ವತ್ ಅನುವಾದವಾಗಿಯೇ ಲಭ್ಯವಾಗಿವೆ. ಈ ಮಾತು ಶೇಕ್ಸ್ಪಿಯರ್ನಿಂದ ಹಿಡಿದು ಕಾಮು, ಕಾಪ್ಕ, ಲಾರೆನ್ಸ್ವರೆಗೆ ಅನ್ವಯಿಸುತ್ತದೆ. ಡಿ.ಎಚ್. ಲಾರೆನ್ಸನ ಕೃತಿಗಳನ್ನೇ ಉದಾಹರಣೆಯಾಗಿ ನೋಡೋಣ.
ಡಿ.ಎಚ್.ಲಾರೆನ್ಸ, ‘ವುಮೆನ್ ಇನ್ ಲವ್’,‘ದಿ ಲೇಡಿ ಚಾಟರ್ಲೀಸ್ ಲವರ್’, ‘ದಿ ರೈನ್ಬೋ’, ‘ದಿ ಪ್ಲಮ್ಡ್ ಸರ್ಪೆಂಟ್’ ಕಾದಂಬರಿಗಳಿಂದ ನನನ್ನು ಬಹುವಾಗಿ ಕಾಡಿದ ಲೇಖಕ. ಲಾರೆನ್ಸ್ ಕಾದಂಬರಿಕಾರನಂತೆಯೇ ಸಂವೇದನಾಶೀಲನಾದ ಕವಿ, ಕತೆಗಾರನೂ ಹೌದು. ನಾನು ಲಾರೆನ್ಸನ ‘ದೀ ಪಾಕ್ಸ್’ ಕಾದಂಬರಿಯನ್ನೂ, ‘ಇಂಗ್ಲೆಂಡ್ ಮೈ ಇಂಗ್ಲೆಂಡ್’ ಮೊದಲಾದ ಎಂಟು ಕತೆಗಳನ್ನೂ ಕನ್ನಡದಲ್ಲಿ ಸೃಷ್ಟಿಸಿದ್ದೇನೆ.
ಲಾರೆನ್ಸ್ ಬಹುಮುಖ ಪ್ರತಿಭೆೆಯ ಧೀಮಂತ. ಬದುಕಿನಲ್ಲಿ ಮನುಷ್ಯನ ಮೂಲಪ್ರವೃತ್ತಿಯಾದ ಕಾಮವೇ ಪ್ರಧಾನ, ಅದೇ ಜೀವನ ಧರ್ಮ, ವಿವೇಕ-ವಿವೇಚನೆಗಳಲ್ಲಿ ರಕ್ತಮಾಂಸಗಳು ಬುದ್ಧಿಶಕ್ತಿಗಿಂತ ಮಿಗಿಲಾದವು, ಸಹಜ ಪ್ರವೃತ್ತಿಯಾದ ಕಾಮವನ್ನು ರಕ್ತದ ವಿವೇಕವೇ ರೂಪಿಸುತ್ತದೆ ಎಂದು ದಿವ್ಯಕಾಮದ ಪ್ರವಾದಿಯಾಗಿ ಭೋಗ ಸಂಸ್ಕೃತಿಯ ಐರೋಪ್ಯ ಸಮಾಜದಲ್ಲಿ ಆ ಕಾಲಮಾನದಲ್ಲೇ ಕೋಲಾಹಲವೆಬ್ಬಿಸಿದವನು. ‘ದಿ ಲೇಡಿ ಚಾಟರ್ಲೀಸ್ ಲವರ್’ ನನ್ನನ್ನು ಬಹುವಾಗಿ ಸೆಳೆದ ಕಾದಂಬರಿ.
ಕನ್ನಡದಲ್ಲಿ ಅನುಸೃಷ್ಟಿಸುವಂತೆ ಬಹುವಾಗಿ ಪ್ರಲೋಭನೆ ಉಂಟು ಮಾಡಿದ ಕೃತಿ. ಆದರೆ ಅದರಲ್ಲಿ ಲಾರೆನ್ಸ್ ಬಳಸಿರುವ ಭಾಷೆ ಮತ್ತು ಅದರ ಸಾಂಸ್ಕೃತಿಕ ಹಿನ್ನೆಲೆಯ ಕಾರಣದಿಂದಾಗಿ ಅದನ್ನು ನಮ್ಮ ಸಂಸ್ಕೃತಿಗೆ ಅಳವಡಿಸಿಕೊಳ್ಳುವುದು ನಮ್ಮ ಭಾಷೆಯ ಜಾಯಮಾನಕ್ಕೆ ಒಗ್ಗಿಸಿಕೊಳ್ಳುವುದು ಕಷ್ಟವೆನಿಸಿ ಈ ಆಸೆಯನ್ನು ಕೈ ಬಿಡಬೇಕಾಯಿತು. ಐರೋಪ್ಯ ಸಂಸ್ಕೃತಿ ಮುಕ್ತ ಸ್ವಚ್ಛಂದ ಕಾಮದ ಭೋಗ ಸಂಸ್ಕೃತಿ. ಆದರೆ ನಮ್ಮದು ಹಾಗಲ್ಲ. ಅಲ್ಲಿ ವಿವಾಹಪೂರ್ವ ಅಥವಾ ವಿವಾಹೇತರ ಕಾಮಸಂಬಂಧಗಳ ಕಳಂಕವನ್ನು ಒಂದು ಪಾಪನಿವೇದನೆಯಿಂದ ತೊಡದುಕೊಳ್ಳಬಹುದು. ನಮ್ಮಲ್ಲಿ ಅದೆಲ್ಲ ನೀತಿಬಾಹಿರ. ನಮ್ಮಲ್ಲಿ ಕಾಮ ಭೋಗವಲ್ಲ.
ಅದು ಮಾನವ ಸಂತತಿಯ ಮುಂದುವರಿಕೆಯ ಮಾರ್ಗವಷ್ಟೆ. ನಿರಂತರವಾದ ಸಂತತಿಯೇ ದಾಂಪತ್ಯ ಜೀವನದ ಚರಮ ಧ್ಯೇಯವೆಂದು ನಮ್ಮ ವೇದ ಉಪನಿಷತ್ತುಗಳು ಹೇಳುತ್ತವೆ.ಹಾಗೆಂದು ನಾವು ‘ಲೇಡಿ ಚಾಟರ್ಲೀಸ್ ಲವರ್’ ಕಾದಂಬರಿಯನ್ನು ತಿರಸ್ಕರಿಸಬೇಕಾಗಿಲ್ಲ. ಸಾಂಸ್ಕೃತಿಕ ಮುಜುಗರಗಳೇನಿದ್ದರೂ ಓದಿ ಆನಂದಿಸಲು ಅಡ್ಡಿ ಇಲ್ಲ.ಆದರೆ ನನ್ನ ಪ್ರಕಾರ ಅದನ್ನು ಕನ್ನಡದಲ್ಲಿ ಸೃಷ್ಟಿಸಲು ಇರುವ ದೊಡ್ಡ ತೊಡಕೆಂದರೆ ಭಾಷೆ. ಲಾರೆನ್ಸನ ಭಾಷೆ ರೂಪಕನಿಷ್ಠ ಭಾಷೆ. ಅಲ್ಲಿ ಬರುವ ಜನಜೀವನ, ಪ್ರಕೃತಿ,ಮಾನವನ ಸ್ವಭಾವ, ವರ್ತನೆ ಎಲ್ಲವೂ ಲಾರೆನ್ಸನ ದಿವ್ಯ ಕಾಮದ, ರತಿವಿಲಾಸದ ಪ್ರತಿಮೆ, ಸಂಕೇತಗಳಾಗಿಯೇ ಬರುತ್ತವೆ.
ಸಂಭೋಗ ಮತ್ತು ಕಾಮಾಂಗಗಳ ವರ್ಣನೆಯಲ್ಲಿ ಇಂಗ್ಲಿಷ್ ಭಾಷೆಯ ನಾಲ್ಕು ಅಕ್ಷರಗಳ ಪದಗಳನ್ನು ಲಾರೆನ್ಸ್ ಎಗ್ಗಿಲ್ಲದೆ ಮುಕ್ತವಾಗಿ, ಧಾರಾಳವಾಗಿ ಬಳಸುತ್ತಾನೆ. ಕನ್ನಡಕ್ಕೆ ತರುವುದಾದಲ್ಲಿ ಇವಕ್ಕೆ ಪರ್ಯಾಯವಾಗಿ ನಾವು ಸಂಸ್ಕೃತ ಪದಗಳನ್ನು ಬಳಸಬೇಕು ಅಥವಾ ಗ್ರಾಮ್ಯ ಕನ್ನಡದ ಪದಗಳನ್ನು ಬಳಸಬೇಕು. ಸಂಸ್ಕೃತ ಪದಗಳನ್ನು ಬಳಸಿದರೆ ಅದು ಮಡಿವಂತಿಕೆಯಾಗಿ, ಲಾರೆನ್ಸನ ಮುಕ್ತತೆಗೆ ಅಪಚಾರವೆಸಗಿದಂತೆ ಆಗುತ್ತದೆ. ಗ್ರಾಮ್ಯ ಕನ್ನಡವನ್ನು ಬಳಸಿದರೆ ‘ದಿವ್ಯಕಾಮ’ ಅಶ್ಲೀಲವಾಗುತ್ತದೆ. ಎಂದೇ ಅದನ್ನು ಕನ್ನಡದಲ್ಲಿ ಒಂದು ಅಶ್ಲೀಲ ಕೃತಿಯಾಗಿಸಲು ನನಗೆ ಮನಸ್ಸಾಗಲಿಲ್ಲ.ಇತ್ತೀಚೆಗೆ ಟಿ.ಎಸ್.ರಘುನಾಥ ಅವರು ‘ಲೇಡು ಚಾಟರ್ಲೀಸ್ ಲವರ್’ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರು ಇಂಗ್ಲಿಷ್ ಭಾಷೆಯ ನಾಲ್ಕು ಅಕ್ಷರಗಳ ಲೈಂಗಿಕ ಪದಗಳಿಗೆ ಪರ್ಯಾಯವಾಗಿ ಸಂಸ್ಕೃತ ಪದಗಳಿಗೆ ಮೊರೆ ಹೋಗಿದ್ದಾರೆ.
‘ಇಂಗ್ಲೆಂಡ್ ಮೈ ಇಂಗ್ಲೆಂಡ್’ ಲಾರೆನ್ಸನ ಪ್ರಾತಿನಿಧಿಕ ಸಣ್ಣ ಕಥೆ. ಇಂಗ್ಲಿಷ್ ಸಮಾಜ ಕ್ರಮೇಣ ಸತ್ಕುಲೀನ ಪರಂಪರೆಯಿಂದ ಕಳಚಿಕೊಳ್ಳುತ್ತಿರುವುದನ್ನು ಸಾಂಕೇತಿಕವಾಗಿ ನಿರೂಪಿಸಿರುವ ಮಹತ್ವಪೂರ್ಣ ಕಥೆ. ಕಥಾ ನಾಯಕ ಎಗ್ಬರ್ಟ್ ಸತ್ಕುಲೀನತೆಯ ಪ್ರತಿನಿಧಿ,
ಸದ್ವಂಶಜ, ಮುಕ್ತ ಕಾಮಿ.ಇವನ ಹೆಂಡತಿ ಮತ್ತು ಮಾವ ಸಹ ಕ್ರಿಶ್ಚಿಯನ್ ಧರ್ಮ ಮತ್ತು
ಸತ್ಕುಲೀನ ಪರಂಪರೆಯ ಪ್ರತಿನಿಧಿಗಳೇ. ಹೆಣ್ಣು ತನ್ನ ಬಳಕೆಗೆ ಇರುವ ಕಾಮದ ಬೊಂಬೆ
ಎಂದೇ ಭಾವಿಸಿರುವ ಎಗ್ಬರ್ಟ್ ಇಂಗ್ಲಿಷ್ ಸತ್ಕುಲೀನ ಪರಂಪರೆಯಲ್ಲಿನ ಪುರುಷ ಪ್ರಧಾನ ಅಹಮಿಕೆಯ ಪ್ರತಿರೂಪ. ತಾನು ಶುದ್ಧವಂಶಜನೆಂಬ ನಂಬಿಕೆಯಿಂದ ಜನಸಾಮಾನ್ಯರ
ಬದುಕನ್ನು ಕೀಳಾಗಿ ಕಾಣುವವನು. ಹೆಂಡತಿ ಕಾಮಾಸಕ್ತಿ ಕಳೆದುಕೊಂಡಾಗ ಎಗ್ಬರ್ಟ್ ತನ್ನ
ಪುರುಷತ್ವವನ್ನು ಪುನಃ ದೃಢಪಡಿಸಲೋ ಎಂಬಂತೆ ಮಿಲಿಟರಿ ಸೇರಿ ಯುದ್ಧದಲ್ಲಿ ಜರ್ಮನ ರಿಂದ ಹತನಾಗುತ್ತಾನೆ.ಲಾರೆನ್ಸನ ಕಥೆಗಳಲ್ಲೂ ಕಾಮ, ಸತ್ಕುಲ ಪ್ರಜ್ಞೆ ಮತ್ತು ಶ್ರಮಿಕ ಜೀವನ ಚಿತ್ರಣವೇ ಪ್ರಧಾನವಾದರೂ ಭಾಷೆಯಲ್ಲಿ, ಮೇಲಿನ ಕಾದಂಬರಿಗಳಲ್ಲಿರುವಂತೆ ಮುಕ್ತ ಲೈಂಗಿಕತೆ ಇಲ್ಲ. ಎಂದೇ ಕನ್ನಡದ ಜಾಯಮಾನಕ್ಕೆ ಅವುಗಳನ್ನು ಹೊಂದಿಸಿಕೊಳ್ಳಬಹುದು.
ಕಾಮು, ಬ್ರೆಕ್ಟ್, ಫ್ರಾಂಜ್ ಕಾಪ್ಕ,ಜೀನ್ ಅನ್ವೀ ಮತ್ತ ಜೀನ್ ಜೆನೆ ನಮಗೆ ತೀರಾ ‘ಅನ್ಯ’ವಾದ ಸಂಸ್ಕೃತಿಯವರು.ಕಾಪ್ಕ್ಕಾನ ಕಥೆಗಳು ಮತ್ತು ಕಾದಂಬರಿಗಳು ಬಹುತೇಕ ನಮಗೆ ಯುದ್ಧೋತ್ತರ ಜಗತ್ತಿನ ಮಾನವ ಜೀವನದ ದರ್ಶನ ಮಾಡಿಸುತ್ತವೆ. ಅವನ ಕೃತಿಗಳನ್ನು ಇಪ್ಪತ್ತನೇ ಶತಮಾನದ ಯೂರೋಪಿನ ಕ್ರೂರ ವಾಸ್ತವತೆಗಳಿಂದ ಪಲಾಯನಗೈಯಲು ಅನ್ಯೋಕ್ತಿ ಮಾರ್ಗವನ್ನು ಬಳಸಿಕೊಂಡ ಆಧ್ಯಾತ್ಮಿಕ ಮಾರ್ಗದ ಪಲಾಯನ ಕೃತಿಗಳೆಂದೂ ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ. ಅವರ ಕೃತಿಗಳಲ್ಲಿನ ಈ ‘ಪಲಾಯನ ಪ್ರಪಂಚ’ವನ್ನು ಅಥವಾ ಯುದ್ಧೋತ್ತರ ಕ್ರೂರ ಬದುಕನ್ನು ನಮ್ಮ ಸಂಸ್ಕೃತಿಯ ಭಿತ್ತಿಯಲ್ಲಿ ಪುನರ್ ಸೃಷ್ಟಿಸುವುದು ಸುಲಭದ ಮಾತಲ್ಲ.
ಇಲ್ಲಿ ಅನುಸೃಷ್ಟಿಗಿಂತ ಮೂಲ ನಿಷ್ಠೆಗೆ ಹೆಚ್ಚಾಗಿ ಆತುಕೊಳ್ಳ ಬೇಕಾಗುತ್ತದೆ. ನಾನು ಕಾಪ್ಕಾನ ‘ಮೆಟಮಾಫರ್ಸಿಸ್’ ಕಿರು ಕಾದಬಂರಿ ಹಾಗೂ ಹಲವು ಕಥೆಗಳನ್ನು ಅನುಸೃಷ್ಟಿಮಾಡಿದ್ದೇನೆ. ಯುದ್ಧೋತ್ತರ ಭೀಕರ ವಾಸ್ತವಿಕತೆ ಜೊತೆ ಮನುಷ್ಯ ಸಮಾಜದಲ್ಲಿ ವಿಶ್ವಾದ್ಯಂತ ಕಂಡು ಬರುವ ಭೇದಭಾವ,ಜನಾಂಗಿಕ ಭೇದಭಾವ,ಅಸ್ಪಶ್ಯತೆ,ಅನ್ಯತೆ ಇವು ಕಾಪ್ಕನ ಕೃತಿಗಳಲ್ಲಿ ಪ್ರಧಾನ ಕಾಳಜಿಗಳಾಗಿ ಕಂಡು ಬರುತ್ತವೆ. ಆದರೆ ಕಾಪ್ಕ ಇವೆಲ್ಲವನ್ನೂ ವಾಸ್ತವಿಕ ಶೈಲಿಯಲ್ಲಿ ಚಿತ್ರಿಸುವುದಿಲ್ಲ.
ಅನ್ಯೋಕ್ತಿ (ಅಲಿಗರಿಕಲ್) ಅವನ ಅಭಿವ್ಯಕ್ತಿ ಮಾಧ್ಯಮ. ಮಾನವ ಲೋಕ ಸಹಮಾನ ವನನ್ನು ಒಂದು ಸಣ್ಣ ಕ್ರಿಮಿಯಂತೆ ಕಾಣುವುದು, ಭಾವಿಸುವುದು ಎಲ್ಲ ಸಂಸ್ಕೃತಿಗಳಲ್ಲೂ ಇದೆ. ಹೀಗೆ ಕಾಪ್ಕಾನ ‘ಮೆಟಮಾಫರ್ಸಿಸ್’ನಲ್ಲಿ ಗ್ರೆಗರ್ ಸ್ಯಾಂಸ ಎನ್ನುವವನು ಜನರ ಕಣ್ಣಲ್ಲಿ ಒಂದು ಕ್ರಿಮಿಯಾಗಿಬಿಡುತ್ತಾನೆ. ನನ್ನ ಸಮಾಜ, ಸಮುದಾಯವೂ ನನ್ನನ್ನು ಒಂದು ಕಾಲಘಟ್ಟದಲ್ಲಿ ಒಂದು ಕ್ರಿಮಿಯಾಗಿ ಕಂಡ ಅನುಭವ ನನ್ನದಾಗಿತ್ತು. ಆದ್ದರಿಂದ ‘ಮೆಟಮಾಫರ್ಸಿಸ್’ ನನ್ನ
ಕಥೆಯಾಗಿಯೇ ಭಾಸವಾಯಿತು. ಅದರ ಅನುಸೃಷ್ಟಿ ಸುಲಭವಾಯಿತು. ಮೂಲಕ್ಕೆ ಎಲ್ಲಿಯೂ
ಕುಂದಾಗದಂತೆ, ಕಾಪ್ಕ್ಕಾನ ವಿಚಾರ ಪ್ರಣಾಲಿಯ ಜೊತೆಯಲ್ಲೇ ಸಾಗಿ. ಭಾಷೆಗಳು ಬೇರೆಬೇರೆಯಾದರೂ ಕಾಪ್ಕ ಮತ್ತು ಅನುವಾದಕ -ಇವರಿಬ್ಬರ ಮನೋಧರ್ಮಗಳು ಒಂದೇ ಎನ್ನಿಸುವಂತೆ ರಂಗನಾಥ ರಾವ್ ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎನ್ನುತ್ತಾರೆ ಕನ್ನಡದ ಖ್ಯಾತ ಸಾಹಿತ್ಯ ಚಿಂತಕ, ಲೇಖಕ ಎಸ್.ದಿವಾಕರ್.
ವಿಶ್ವಮಾನ್ಯ ಫ್ರೆಂಚ್ ಕವಿ ಬಾದಿಲೇರ್ ಜೊತೆ ಸಮೀಕರಿಸಲಾಗುವ ಜೀನ್ ಜೆನೆ ಮಡಿವಂತಿಕೆಗೆ ಸಡ್ಡುಹೊಡೆದ ಕವಿ, ನಾಟಕಕಾರ, ಕಾದಂಬರಿಕಾರ. ಜೆನೆಯದು ಸುಲಭ ಗ್ರಹಿಕೆಗೆ ಸಿಗದ ಸಂಕೀರ್ಣ ಬುದ್ಧಿಮತ್ತೆ, ಪ್ರಚಂಡ ಪ್ರತಿಭೆೆ. ಕಳ್ಳ, ತಲೆಹಿಡುಕ, ಸಲಿಂಗ ಕಾಮಿ, ಆತ್ಮರತಿಯ ಮೀಮಾಂಸೆಗಾರ ಇತ್ಯಾದಿ ಗುಣವಿಶೇಷಣಗಳು ಅವನ ಹೆಸರಿಗೆ ಅಂಟಿಕೊಂಡಿವೆ. ಆಧುನಿಕ ಅಸ್ತಿತ್ವವಾದದ ಮಹಾಪುರುಷ ಎಂದು ಅಸ್ತಿತ್ವವಾದಿ ತತ್ತ್ವಶಾಸ್ತ್ರಜ್ಞ ಜೀನ್ ಪಾಲ್ ಸಾರ್ತ್ರ್ನಿಂದ ಮಾನಿತನಾದ ಜೆನೆ ಬರೆದದ್ದು ಫ್ರೆಂಚ್ ಭಾಷೆಯಲ್ಲಿ. ‘ದಿ ಬ್ಲಾಕ್ಸ್’ ಜೆನೆ ಬರೆದಿರುವ ಐದು ನಾಟಕಗಳಲ್ಲಿ ಅತ್ಯಂತ ಮಹತ್ವದ ನಾಟಕ. 1961ರಲ್ಲಿ ಅಮೆರಿಕದಲ್ಲಿ ಮೂರು ವರ್ಷಗಳಿಗೂ ಹೆಚ್ಚುಕಾಲ ಪ್ರದರ್ಶನಗೊಂಡ ನಾಟಕ. ಇದು ಸಹ ನನ್ನನ್ನು ಅತಿಯಾಗಿ ಕಾಡಿದ ನಾಟಕ. ಬಿಳಿಯರಿಂದ ಶೋಷಣೆಗೊಳಗಾದ ನೀಗ್ರೋಗಳ ಬದುಕನ್ನು ಬಿಂಬಿಸುವ ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸುವುದು ಒಂದು ಸವಾಲೇ ಸರಿ. ಬಿಳಿಯರು ನಡೆಸುವ ದಮನ, ದಬ್ಬಾಳಿಕೆ ಮತ್ತು ಶೋಷಣೆಗಳು ಹಾಗೂ ಅದರ ವಿರುದ್ಧ ನೀಗ್ರೋಗಳ ಪ್ರತಿಭಟನೆಯನ್ನು ರಂಗಭೂಮಿಯಲ್ಲಿ ಅನಾವರಣಗೊಳಿಸಲು ಜೆನೆ ನೀಗ್ರೋ ಸಂಸ್ಕೃತಿಗೆ ಮೊರೆಹೋಗಿದ್ದಾನೆ. ನೀಗ್ರೋ ಸಂಸ್ಕೃತಿಯಲ್ಲಿರುವ ಪುರಾಣ ಕಥೆಗಳು,ಆಚರಣೆಗಳು, ಸಂಪ್ರದಾಯಗಳು ಮತ್ತು ಅವರ ಜಾನಪದ ಕಲೆಯನ್ನು ಈ ನಾಟಕದಲ್ಲಿ ವಿಪುಲವಾಗಿ ಬಳಸಿದ್ದಾನೆ.
ಇದನ್ನು ಕನ್ನಡದ ಜಾನಪದ ರಂಗಭೂಮಿಗೆ ಹೊಂದಿಸುವುದು ಕಷ್ಟವೇ. ಹೀಗಾಗಿ ನನ್ನ ಅನುಸೃಷ್ಟಿ ‘ಕಪ್ಪು ಜನ’ ಮೂಲಕ್ಕೆ ನಿಷ್ಟವಾಗಿರುವುದರಲ್ಲೇ ತೃಪ್ತಿಪಡಬೇಕಾಯಿತು. ಸಾಹಿತ್ಯ ಹಾಗೂ ರಂಗಭೂಮಿ ದೃಷ್ಟಿಯಿಂದ ತುಂಬ ಮೌಲಿಕವಾದ ಈ ನಾಟಕವನ್ನು ಕನ್ನಡ ಸಾಹಿತ್ಯಾಸಕ್ತರಾಗಲಿ, ರಂಗ ನಿರ್ದೇಶಕರಾಗಲೀ ಗಮನಿಸದೇ ಹೋದದ್ದು ನನಗೆ ತುಂಬ ನಿರಾಶೆ ಉಂಟುಮಾಡಿತು.
ಒ.ಹೆನ್ರಿಯ ಕಥೆಗಳು ಸರಳ, ಸುಂದರ,ಮನೋಹರ. ಆದರೆ ಅವನ ಇಂಗ್ಲಿಷ್ ಕನ್ನಡದ ಜಾಯಮಾನಕ್ಕೆ ಸುಲಭವಾಗಿ ಒಗ್ಗುವಂಥ ಭಾಷೆಯಲ್ಲ. ಅವನ ಅಮೆರಿಕನ್ ಇಂಗ್ಲಿಷ್ (ಅಮೆರಿಕನ್ ಸ್ಲ್ಯಾಂಗ್) ಬಾಜಾರಿ ಭಾಷೆ. ಅವನ ಪಾತ್ರಗಳ ಬಾಯಲ್ಲಿ ಬರುವ ಆಡುಮಾತಿನ ಇಂಗ್ಲಿಷ್ ಪದಗಳಿಗೆ ಕನ್ನಡದಲ್ಲಿ ತಥಾರ್ಥ ಪದಗಳಿರಲಿ, ಪರ್ಯಾಯ ಪದಗಳೂ ಸಿಗುವುದು ಕಷ್ಟ. ಕಥಾವಸ್ತು,ಅರ್ಥ, ಪಾತ್ರಗಳ ಮನೋಭಾವಗಳಿಗೆ ಭಂಗ ಬರದಂತೆ ಹೆನ್ರಿಯ ಕಥೆಗಳನ್ನು ಕನ್ನಡಿಸುವುದರಲ್ಲಿ ಮುಕ್ತ ಮಾರ್ಗವನ್ನು ಅನುಸರಿಸಿದ್ದೇನೆ. ಇದು ನಿಜವಾಗಿಯೂ ಅನುಸೃಷ್ಟಿಯೇ.
ವಿಜ್ಞಾನ ಮತ್ತು ತಂತ್ರಜ್ಞಾನಗಳ ಅನುಸೃಷ್ಟಿ ಅಗಾಧವಾದ ಬೌದ್ಧಿಕ ಶ್ರಮವನ್ನು ಬೇಡುವ ಕೆಲಸ. ವಿಜ್ಞಾನ, ತಂತ್ರಜ್ಞಾನಗಳನ್ನು ಅನುವಾದಿಸುವವರಿಗೆ ಅಪಾರವಾದ ಭಾಷಾ ಜ್ಞಾನ ಇರಬೇಕು, ಅವರು ಶಬ್ದ ನಿಧಿಯೇ ಆಗಿರಬೇಕು. ಆದಾಗ್ಯೂ ಕನ್ನಡದಲ್ಲಿ ಪರ್ಯಾಯ ಪದಗಳಿಲ್ಲ ಎಂದು
ಕೈಚೆಲ್ಲುವಂತಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಹೊಸ ಪದಗಳನ್ನು ಸೃಷ್ಟಿಸುವುದು ಅಥವಾ ಇಂಗ್ಲಿಷ್ ಪದಗಳನ್ನೇ ಕನ್ನಡಕ್ಕೆ ದತ್ತು ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಜೆ.ಡಿ. ಬರ್ನಾಲನ ‘ಸೈನ್ಸ್ ಇನ್ ಹಿಸ್ಟರಿ’ ಕೃತಿಯನ್ನು ಕನ್ನಡದಲ್ಲಿ ಅನುಸೃಷ್ಟಿಸುವಾಗ ನಾನು ಇಂಥ ಕಸರತ್ತನ್ನೇ ಮಾಡಬೇಕಾಯಿತು.
ರವೀಂದ್ರನಾಥ ಠಾಕೂರರ ಕಥೆಗಳ ಅನುಸೃಷ್ಟಿ ನನಗೆ ಪ್ರಯಾಸದ ಕೆಲಸವೇನೂ ಆಗಲಿಲ್ಲ. ಅವರ ‘ಷೀ’ ಕಥಾ ಸಂಕಲನದಲ್ಲಿ ಹನ್ನೊಂದು ಸ್ತ್ರೀ ಕೇಂದ್ರಿತ ಕಥೆಗಳಿವೆ. ಕೆಲವೊಂದು ಬಂಗಾಲಿ
ನಡೆನುಡಿ, ಸಂಪ್ರದಾಯಗಳನ್ನು ಬಿಟ್ಟರೆ ಇವು ಕನ್ನಡದ ಕಥೆಗಳಂತೆಯೇ ಇವೆ. ಈ ಕಥೆಗಳ ಅನುಸೃಷ್ಟಿ ನನಗೆ ಸಂತೋಷವನ್ನೂ ಕೊಟ್ಟಿತು, ಸ್ತ್ರೀಯರ ಬಗೆಗಿನ ನನ್ನ ಸಂವೇದನೆಯನ್ನೂ ಗೌರವವನ್ನೂ ಜಾಗೃತಗೊಳಿಸಿತು. ಮೋಹನ್ ಭಂಡಾರಿಯವರ ಪಂಜಾಬಿ ಕಥೆಗಳನ್ನು ಕೇಂದ್ರ ಸಾಹಿತ್ಯ ಅಕಾಡಮಿಗಾಗಿ ಅನುವಾದ ಮಾಡಿದ್ದು.‘ಮೂನ್ ದಿ ಆಂಖ್’ ಕನ್ನಡದಲ್ಲಿ ‘ಹರಿಣಾಕ್ಷಿ’ಯಾಗಿ ಅನುಸೃಷ್ಟಿಗೊಂಡಿದೆ. ಖಾಲಿಸ್ತಾನ್ ಆಂದೋಲನ ಮತ್ತು ಬ್ಲೂಸ್ಟಾರ್ ಕಾರ್ಯಾಚರಣೆಯ ಪರಿಸರ, ಹಿನ್ನೆಲೆಗಳಲ್ಲಿ ರಚಿಸಲಾದ ಕಥೆಗಳು ಇವು. ಆ ಪ್ರಕ್ಷುಬ್ಧ ಪ್ರಪಂಚದ ಅನುಸೃಷ್ಟಿ ಸುಲಭದ ಕೆಲಸವಾಗಿರಲಿಲ್ಲ.
ರಾಜಮೋಹನ ಗಾಂಧಿ ಮತ್ತು ರಾಮಚಂದ್ರ ಗುಹಾ ಅವರ ಕೃತಿಗಳ ಅನುಸೃಷ್ಟಿ ನನಗೆ ತೌರುಮನೆಯ ಕಥೆಬರೆದಷ್ಟೇ ನಿರಾಯಾಸದ ಸುಖಕರ ಅನುಭವವಾಗಿತ್ತು. ಸಂತ ಕವಿ ಕಬೀರ ಮಾನವನ ಶರೀರವನ್ನು ಕೈಮಗ್ಗದ ಉತ್ತರೀಯಕ್ಕೆ ಹೋಲಿಸಿದ್ದಾನೆ. ಆತ್ಮಕ್ಕೆ ದೇಹ ಒಂದು ಉತ್ತರೀಯವಿದ್ದಂತೆ ಎಂದಿದ್ದಾನೆ. ಹಾಗೆಯೇ ಮಾನವ ದೇಹಕ್ಕೂ ಒಂದು ಉತ್ತರೀಯಬೇಕಲ್ಲವೆ? ಗಾಂಧಿಯವರು ತುಂಡು ಪಂಚೆ ಉಟ್ಟು ಮೇಲೊಂದು ಉತ್ತರೀಯ ಹೊದ್ದಿಕೊಳ್ಳುತ್ತಿದ್ದರು. ಈ ಉತ್ತರೀಯವನ್ನು ರಾಜಮೋಹನ ಗಾಂಧಿಯವರು ತಮ್ಮ ತಾತನ ಹೃದಯವಂತಿಕೆ, ಉದಾತ್ತ ವ್ಯಕ್ತಿತ್ವ ಮತ್ತು ಆದರ್ಶಗಳ ರೂಪಕವಾಗಿ ಕಂಡಿದ್ದಾರೆ. ಗಾಂಧಿಯವರ ಈ ಉತ್ತರೀಯದ ಅಡಿ ಸಾವಿರಾರು ಮಂದಿ ಆಶ್ರಯಪಡೆದು ಮನಃಶಾಂತಿ ಪಡೆದಿದ್ದಾರೆ. ರಾಜಮೋಹನ್ ಗಾಂಧಿಯವರ ‘ಮೋಹನದಾಸ್-ಎ ಟ್ರೂ ಸ್ಟೋರಿ’
ಅನುಸೃಷ್ಟಿಸುವಾಗ ನಾನು ಮಾಡಿದ್ದೂ ಇದೇ ಕೆಲಸವನ್ನು. ಅವರ ಉತ್ತರೀಯದ ಚುಂಗು ಹಿಡಿದು ನಾನು ಗಾಂಧಿ ಅವರೊಂದಿಗೆ ಪರ್ಯಟನ ನಡೆಸಿದೆ. ಅನುಸೃಷ್ಟಿ ಸರಾಗವಾಗಿ ನಡೆಯಿತು.ಅದೊಂದು ದಿವ್ಯ ಅನುಭವವಾಯಿತು. ಇನ್ನು ರಾಮಚಂದ್ರ ಗುಹ ಅವರ ಕೃತಿಗಳು ನನಗೆ ಸಮಕಾಲಿನವೇ. ಆದುದರಿಂದ,ಈ ಸಮಕಾಲೀನತೆ ಮತ್ತು ಪತ್ರಕರ್ತನಾಗಿ ನನ್ನ ಅನುಭವ, ಜ್ಞಾನಗಳು ಗುಹಾ ಅವರ ಕೃತಿಗಳ ಅನುಸೃಷ್ಟಿಯನ್ನು ನೀರು ಕುಡಿದಷ್ಟು ಸುಲಭ
ವಾಗಿಸಿತು. ಸ್ವಂತ ಕೃತಿ ರಚಿಸಿದ ತೃಪ್ತಿಯನ್ನು ತಂದುಕೊಟ್ಟಿತು. ರಾಮಚಂದ್ರ ಗುಹಾ ಅವರ ‘ಇಂಡಿಯಾ ಆಫ್ಟರ್ ಗಾಂಧಿ’(ಎರಡು ಸಂಪುಟಗಳು),‘ಗಾಂಧಿ ಬಿಫೋರ್ ಇಂಡಿಯಾ’ (ಎರಡು ಸಂಪುಟಗಳು) ಸೇರಿದಂತೆ ಐದು ಕೃತಿಗಳನ್ನು ಕನ್ನಡದಲ್ಲಿ ಅನುಸೃಷ್ಟಿಸಿದ್ದೇನೆ.
ಅನುಸೃಷ್ಟಿ ಎನ್ನುವುದು ಮತ್ತೊಬ್ಬರ ಶಿಶುವನ್ನು ನಮ್ಮ ಭಾಷೆಯಲ್ಲಿ ಸೃಷ್ಟಿಸಲು ಅನುವಾದಕನ ಭಾಷಾ ಪಾಂಡಿತ್ಯ, ಸೃಜನಶೀಲ ಪ್ರತಿಭೆ ಮತ್ತು ರಕ್ತ, ಮಾಂಸ, ಜೀವಶಕ್ತಿ, ಸತ್ವಗಳನ್ನು ಬೇಡುವ ಕಾರ್ಯ. ಇದೆಲ್ಲವನ್ನೂ ಧಾರೆಯೆರೆದಾಗ ಇನ್ನೊಂದು ಭಾಷೆಯಲ್ಲಿ ಕೃತಿಯ ಅನುಸೃಷ್ಟಿಯಾಗುತ್ತದೆ. ಅದು ನಮ್ಮದಾಗುತ್ತದೆ. ಕನ್ನಡದ ಕೃತಿಯಾಗಿಯೇ ಓದಿಸಿಕೊಳ್ಳುತ್ತದೆ, ಮಾನ್ಯತೆ ಪಡೆಯುತ್ತದೆ. ನಮ್ಮ ಭಾಷೆ ಬೆಳೆಯುತ್ತದೆ, ಸಂಪದ್ಯುಕ್ತವಾಗುತ್ತದೆ.
ವಿಶ್ವಮಾನ್ಯ ಫ್ರೆಂಚ್ ಕವಿ ಬಾದಿಲೇರ್ ಜೊತೆ ಸಮೀಕರಿಸಲಾಗುವ ಜೀನ್ ಜೆನೆ ಮಡಿವಂತಿಕೆಗೆ ಸಡ್ಡುಹೊಡೆದ ಕವಿ, ನಾಟಕಕಾರ, ಕಾದಂಬರಿಕಾರ. ಜೆನೆಯದು ಸುಲಭ ಗ್ರಹಿಕೆಗೆ ಸಿಗದ ಸಂಕೀರ್ಣ ಬುದ್ಧಿಮತ್ತೆ. ಪ್ರಚಂಡ ಪ್ರತಿಭೆೆ. ಕಳ್ಳ, ತಲೆಹಿಡುಕ, ಆತ್ಮರತಿಯ ಮೀಮಾಂಸೆಗಾರ ಇತ್ಯಾದಿ ಗುಣವಿಶೇಷಣಗಳು ಅವನ ಹೆಸರಿಗೆ ಅಂಟಿಕೊಂಡಿವೆ. ಆಧುನಿಕ ಅಸ್ತಿತ್ವವಾದದ ಮಹಾಪುರುಷ ಎಂದು ಅಸ್ತಿತ್ವವಾದಿ ತತ್ತ್ವಶಾಸ್ತ್ರಜ್ಞ ಜೀನ್ ಪಾಲ್ ಸಾರ್ತ್ರ್ನಿಂದ ಮಾನಿತನಾದ ಜೆನೆ ಬರೆದದ್ದು ಫ್ರೆಂಚ್ ಭಾಷೆಯಲ್ಲಿ. ‘ದಿ ಬ್ಲಾಕ್ಸ್’ ಜೆನೆ ಬರೆದಿರುವ ಐದು ನಾಟಕಗಳಲ್ಲಿ ಅತ್ಯಂತ ಮಹತ್ವದ ನಾಟಕ. 1961ರಲ್ಲಿ ಅಮೆರಿಕದಲ್ಲಿ ಮೂರು ವರ್ಷಗಳಿಗೂ ಹೆಚ್ಚುಕಾಲ ಪ್ರದರ್ಶನಗೊಂಡ ನಾಟಕ. ಇದು ಸಹ ನನ್ನನ್ನು ಅತಿಯಾಗಿ ಕಾಡಿದ ನಾಟಕ.
ಅನುಸೃಷ್ಟಿ ಎನ್ನುವುದು ಮತ್ತೊಬ್ಬರ ಶಿಶುವನ್ನು ನಮ್ಮ ಭಾಷೆಯಲ್ಲಿ ಸೃಷ್ಟಿಸಲು ಅನುವಾದಕನ ಭಾಷಾ ಪಾಂಡಿತ್ಯ, ಸೃಜನಶೀಲ ಪ್ರತಿಭೆ ಮತ್ತು ರಕ್ತ, ಮಾಂಸ, ಜೀವಶಕ್ತಿ, ಸತ್ವಗಳನ್ನು ಬೇಡುವ ಕಾರ್ಯ. ಇದೆಲ್ಲವನ್ನೂ ಧಾರೆಯೆರೆದಾಗ ಇನ್ನೊಂದು ಭಾಷೆಯಲ್ಲಿ ಕೃತಿಯ ಅನುಸೃಷ್ಟಿಯಾಗುತ್ತದೆ. ಅದು ನಮ್ಮದಾಗುತ್ತದೆ. ಕನ್ನಡದ ಕೃತಿಯಾಗಿಯೇ ಓದಿಸಿಕೊಳ್ಳುತ್ತದೆ, ಮಾನ್ಯತೆ ಪಡೆಯುತ್ತದೆ. ನಮ್ಮ ಭಾಷೆ ಬೆಳೆಯುತ್ತದೆ, ಸಂಪದ್ಯುಕ್ತವಾಗುತ್ತದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.