ವಾರ್ತಾಭಾರತಿ: ದಿಟ್ಟ ಜಾತ್ಯತೀತ ದನಿಗಳ ನಿತ್ಯ ಸಂಗಾತಿ
-
ಕತೆಗಾರ-ಲೇಖಕ ನಟರಾಜ ಹುಳಿಯಾರ್ ಅವರು ತುಮಕೂರು ಜಿಲ್ಲೆಯ ಹುಳಿಯಾರಿನವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿರುವ ಅವರು ‘ಆಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾರೆ. ‘ಮತ್ತೊಬ್ಬ ಸರ್ವಾಧಿಕಾರಿ’, ‘ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು’, ‘ಮಾಯಾಕಿನ್ನರಿ’ (ಕಥಾಸಂಕಲನಗಳು), ‘ರೂಪಕಗಳ ಸಾವು’ (ಕವಿತೆಗಳು), ‘ಗಾಳಿಬೆಳಕು’ (ಸಾಂಸ್ಕೃತಿಕ ಬರಹಗಳು), ‘ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ (ತೌಲನಿಕ ಅಧ್ಯಯನ), ‘ಇಂತಿ ನಮಸ್ಕಾರಗಳು’ (ಲಂಕೇಶ್-ಡಿ.ಆರ್. ನಾಗರಾಜ್ ಕುರಿತ ಸೃಜನಶೀಲ ಕಥಾನಕ), ‘ಶೇಕ್ಸ್ಪಿಯರ್ ಮನೆಗೆ ಬಂದ’ (ನಾಟಕ), ‘ಶಾಂತವೇರಿ ಗೋಪಾಲಗೌಡ’ (ಜೀವನಚರಿತ್ರೆ), ‘ಕಾಮನ ಹುಣ್ಣಿಮೆ’ (ಕಾದಂಬರಿ), ‘ಕನ್ನಡಿ’ (ಪ್ರಜಾವಾಣಿ ಅಂಕಣ ಬರಹಗಳು) ಇವರ ಕೃತಿಗಳು.
ಡಾ. ನಟರಾಜ್ ಹುಳಿಯಾರ್, ಬೆಂಗಳೂರು
ಲಂಕೇಶರು ಇಪ್ಪತ್ತು ವರ್ಷಗಳ ಕಾಲ ಸಂಪಾದಿಸಿದ ಲಂಕೇಶ್ ಪತ್ರಿಕೆಗೆ ಒಗ್ಗಿ ಹೋಗಿದ್ದ ನಮ್ಮಂಥವರು ಲಂಕೇಶ್ ತೀರಿಕೊಂಡ ಎರಡು ವರ್ಷಗಳ ನಂತರ ಶುರುವಾದ ವಾರ್ತಾಭಾರತಿಯ ವೈಚಾರಿಕ ಧ್ವನಿಯನ್ನು ನಿರೀಕ್ಷೆ, ಭರವಸೆಗಳಿಂದ ಗಮನಿಸತೊಡಗಿದೆವು. ಬರುಬರುತ್ತಾ ಲಂಕೇಶ್ ಪತ್ರಿಕೆಯ ಥರದ ವೈಚಾರಿಕ ಸ್ಪಷ್ಟತೆ ಹಾಗೂ ನಿಲುವುಗಳನ್ನುಳ್ಳ ದಿನಪತ್ರಿಕೆಯಾಗಿ ವಾರ್ತಾಭಾರತಿ ಕಾಣತೊಡಗಿತು. ಇಪ್ಪತ್ತು ವರ್ಷಗಳ ಕೆಳಗೆ ಡಿಜಿಟಲ್ ಮಾಧ್ಯಮ
ವಾಗಲೀ, ವೆಬ್ಪುಟಗಳಾಗಲೀ ಇರದ ಕಾಲದಲ್ಲಿ ‘ವಾರ್ತಾಭಾರತಿ’ ಮಂಗಳೂರಿನಿಂದ
ಬೆಂಗಳೂರಿಗೆ ಎರಡು ದಿನಗಳ ನಂತರ ಅಂಚೆಯಲ್ಲಿ ಬರುತ್ತಿತ್ತು. ಅಷ್ಟೊತ್ತಿಗಾಗಲೇ ಸುದ್ದಿಗಳು ಹಳೆಯದಾಗಿದ್ದರೂ ಪತ್ರಿಕೆಯ ಸಂಪಾದಕೀಯದ ನಿಲುವುಗಳನ್ನು, ಸ್ಪಷ್ಟ, ಖಡಕ್ ಭಾಷೆಯನ್ನು ಓದುತ್ತಾ ಅದರ ರಾಜಿಯಿಲ್ಲದ ವೈಚಾರಿಕ ವಿಶ್ಲೇಷಣೆ, ನೈತಿಕ ನಿಲುವುಗಳು ನಮ್ಮೊಳಗೆ ಇಳಿಯತೊಡಗಿದವು. ವಾರ್ತಾಭಾರತಿ ಬೆಂಗಳೂರಿಗೆ ಬಂದ ಮೇಲೆ ಅದರ ಸಂಪರ್ಕ ಹೆಚ್ಚತೊಡಗಿತು.
ಕಳೆದೆರಡು ದಶಕಗಳಿಂದ ಜನದನಿಯ ಸಾರಥಿ ವಾರ್ತಾಭಾರತಿ ಜನರ ದನಿಯನ್ನೂ ರೂಪಿಸಲೆತ್ನಿಸಿದೆ; ಕರ್ನಾಟಕದ ಮುಂಚೂಣಿ ವೈಚಾರಿಕ ದನಿಯಾಗಿಯೂ
ವಿಕಾಸಗೊಂಡಿದೆ. ಮುಖ್ಯ ಸುದ್ದಿಗಳ ಜೊತೆಗೆ ದಲಿತ ಚಳವಳಿ, ರೈತ ಚಳವಳಿ ಹಾಗೂ ಎಲ್ಲ ತರದ ಜನತಾ ಚಳವಳಿಗಳ ಸುದ್ದಿ, ವಿಶ್ಲೇಷಣೆಗಳಿಗೆ ಮೊದಲ ಆದ್ಯತೆ ಕೊಟ್ಟಿದೆ. ಸಿಎಎ-ಎನ್ಆರ್ಸಿ ವಿರುದ್ಧದ ಶಾಹೀನ್ಬಾಗ್ನಲ್ಲಿ ಮುಸ್ಲಿಮ್ಮಹಿಳೆಯರ ಚಾರಿತ್ರಿಕ ಪ್ರತಿಭಟನೆ ಅಥವಾ ರೈತರು ಟಿಕ್ರಿ ಗಡಿಯಲ್ಲಿ ಒಂದು ವರ್ಷ ನಡೆಸಿದ ಅಪೂರ್ವ ಚಳವಳಿ ಎರಡಕ್ಕೂ ವಾರ್ತಾಭಾರತಿ ನಿರಂತರವಾಗಿ ಸ್ಪಂದಿಸುತ್ತಿತ್ತು.
ಈಚೆಗೆ ಕರ್ನಾಟಕದಲ್ಲಿ ನಡೆದ ದಲಿತ ಸಂಘಟನೆಗಳ ಮಹಾ ಒಕ್ಕೂಟದ ಬೃಹತ್ ಸಂವಿಧಾನ ರಕ್ಷಣಾ ರ್ಯಾಲಿಯನ್ನು ಬಹುತೇಕ ಮಾಧ್ಯಮಗಳು ಕಡೆಗಣಿಸಿದಾಗ ‘ವಾರ್ತಾಭಾರತಿ’ ಅದರ ಮಹತ್ವವನ್ನು ವಿಸ್ತೃತವಾಗಿ ವರದಿ ಮಾಡಿತು. ಹೀಗೆ ಕರ್ನಾಟಕದ ಚಳವಳಿಗಳ ನಿಸ್ವಾರ್ಥ ಸಂಗಾತಿಯಾಗಿ ಕೂಡ ಪತ್ರಿಕೆ ದಣಿವರಿಯದೆ ಕೆಲಸ ಮಾಡುತ್ತಿದೆ. ಅಂಬೇಡ್ಕರ್ವಾದ, ಮಾರ್ಕ್ಸ್ವಾದ ಹಾಗೂ ವೈಚಾರಿಕ ಹಿನ್ನೆಲೆಯ ವಿಶ್ಲೇಷಣೆಗಳು, ಸುದ್ದಿಗಳು ಈಗ ಸಮೃದ್ಧಿಯಾಗಿ ಬರುತ್ತಿರುವುದು ವಾರ್ತಾಭಾರತಿಯಲ್ಲೇ.
ತನ್ನ ಎರಡು ದಶಕಗಳ ಸ್ಪಷ್ಟ ದಿಕ್ಕಿನ ಪಯಣದಲ್ಲಿ ಖಚಿತವಾದ ಸೆಕ್ಯುಲರ್ ನೋಟವನ್ನೂ, ಇಪ್ಪತ್ತೊಂದನೆಯ ಶತಮಾನದ ಶೂದ್ರ, ದಲಿತ, ಅಲ್ಪಸಂಖ್ಯಾತ ಸಮುದಾಯಗಳ ಪರವಾದ ಡಿಸ್ಕೋರ್ಸನ್ನೂ ವಾರ್ತಾಭಾರತಿ ಹುಟ್ಟು ಹಾಕಿದೆ. ಕೋಮುವಾದ, ಜಾತೀಯತೆಗಳನ್ನು ವಿರೋಧಿಸುವ ಬರಹಗಳಿಗೆ; ಪ್ರಗತಿಪರ ನಿಲುವುಗಳ, ವೈಚಾರಿಕ ಪರಿಭಾಷೆಯ, ನ್ಯಾಯಯುತ ದನಿಗಳ ಬರಹಗಾರರಿಗೆ ಪತ್ರಿಕೆ ವೇದಿಕೆ ಒದಗಿಸಿದೆ.
ಇಪ್ಪತ್ತನೆಯ ಶತಮಾನದ ಕೊನೆಯ ದಶಕಗಳಲ್ಲಿ ಕರ್ನಾಟಕದಲ್ಲಿ ಬೆಳೆದಿದ್ದ ಕಮ್ಯುನಿಸ್ಟ್, ಮಾರ್ಕ್ಸಿಸ್ಟ್ ಚಿಂತನೆ, ಸಮಾಜವಾದ, ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯ, ಜಾತ್ಯತೀತ ಚಿಂತನೆಗಳ ಪರಂಪರೆಯನ್ನು ಮುಂದುವರಿಸುವ ವೇದಿಕೆಯಾಗಿಯೂ ವಾರ್ತಾಭಾರತಿ ಕಾಳಜಿಯಿಂದ ಕೆಲಸ ಮಾಡುತ್ತಾ ಬಂದಿದೆ. ಈ ಎಲ್ಲ ಚಿಂತನೆಗಳ ಇವತ್ತಿನ ರೂಪವನ್ನೂ ಮಂಡಿಸುತ್ತಿದೆ. ಹಲವು ಸವಾಲು, ಕಷ್ಟಗಳ ನಡುವೆ ಇಂಥ ಮಹತ್ವದ ಸಾಂಸ್ಕೃತಿಕ ಜವಾಬ್ದಾರಿಯನ್ನು ಹೊತ್ತು ಮುನ್ನಡೆಯುತ್ತಿರುವ ವಾರ್ತಾಭಾರತಿಗೆ ಕರ್ನಾಟಕದ ಪ್ರಜ್ಞಾವಂತ ವಲಯ ಕೃತಜ್ಞವಾಗಿರಬೇಕಾಗುತ್ತದೆ.
ವಾರ್ತಾಭಾರತಿಯ ಸಂಪಾದಕರು, ಸಂಪಾದಕೀಯ ತಂಡ, ಬರಹಗಾರರು, ವರದಿಗಾರರ ಜೊತೆಗೆ ದೇಶದ ಶ್ರೇಷ್ಠ ವ್ಯಂಗ್ಯ ಚಿತ್ರಕಾರರಲ್ಲೊಬ್ಬರಾದ ಪಿ. ಮಹಮ್ಮದ್ ವಾರ್ತಾಭಾರತಿಯ ಮುಖ್ಯ ಆಸ್ತಿಯಂತಿದ್ದಾರೆ. ಮುಖ್ಯ ಘಟನೆ ಯೊಂದು ನಡೆದ ತಕ್ಷಣ ಮಹಮ್ಮದರ ಕುಟುಕು ಬ್ರಶ್ ಎಚ್ಚರವಾಗುತ್ತದೆ. ವಿಮರ್ಶೆ ಯನ್ನು ತುಳಿಯುವ ದುಷ್ಟ ಸರಕಾರಗಳ ಈ ಕಾಲದಲ್ಲೂ ವಿಮರ್ಶೆ, ವಿನೋದ, ಚಿಕಿತ್ಸೆಗಳ ಮಹಮ್ಮದರ ಆಕರ್ಷಕ ಗೆರೆಗಳ ವ್ಯಂಗ್ಯ ಚಿತ್ರಗಳು ವಾರ್ತಾಭಾರತಿಯ ಡಿಜಿಟಲ್ ಆವೃತ್ತಿಯಲ್ಲಿ ಬಹುಬೇಗ ಪ್ರತ್ಯಕ್ಷವಾಗುತ್ತವೆ. ದಿನದಲ್ಲಿ ಹಲವು ಸಲ
ವಾರ್ತಾಭಾರತಿ ಡಿಜಿಟಲ್ ಆವೃತ್ತಿಯನ್ನು ನೋಡುವ ನನ್ನ ಕಣ್ಣು ಲೀಡ್ ಸುದ್ದಿಯ
ಜೊತೆಗೆ ಮಹಮ್ಮದರ ಡೈರೆಕ್ಟ್ ಶಾಟ್ಗಳನ್ನೂ ಹುಡುಕುತ್ತಿರುತ್ತದೆ. ಮಹಮ್ಮದ್ ಬರೆದ ಕೇಜ್ರಿವಾಲ್ ಪೊರಕೆ ಮತ್ತು ಮೋದಿ ವ್ಯಾಕ್ಯೂಮ್ ಕ್ಲೀನರ್ ನಡುವಣ ಹಣಾಹಣಿಯ ವ್ಯಂಗ್ಯಚಿತ್ರದವರೆಗೂ ಅವರ ಸಾವಿರಾರು ಕ್ಷಿಪ್ರ ವಿಶ್ಲೇಷಣೆಗಳು ಜನರ ವಿಮರ್ಶಾ ಪ್ರಜ್ಞೆಯನ್ನೂ ನೋಟವನ್ನೂ ರೂಪಿಸುತ್ತಾ ಬಂದಿವೆ.
ವಾರ್ತಾಭಾರತಿಯ ಡಿಜಿಟಲ್ ಹಾಗೂ ಮುದ್ರಿತ ಪುಟಗಳಲ್ಲಿ ಆಗಾಗ ಕೋಮು ಶಕ್ತಿಗಳ ಹಿನ್ನಡೆಯ ಸುದ್ದಿಗಳನ್ನು ನೋಡಿ ಮನಸ್ಸು ಕೊಂಚ ನೆಮ್ಮದಿಗೊಳ್ಳುತ್ತದೆ. ಇವತ್ತಿನ ತೊಡೆ ಮೀಡಿಯಾ (ಗೋದಿ ಮೀಡಿಯಾದ ಮುಂದುವರಿದ ಪತನದ ರೂಪ!) ವಿಚ್ಛಿದ್ರಕಾರಕ ಕೋಮುವಾದಿ ಶಕ್ತಿಗಳನ್ನು ಉಬ್ಬಿಸಿ ಎಂಜಲು ಕಾಸನ್ನೂ, ಹೀನ ಮಾನಸಿಕ ತೃಪ್ತಿಯನ್ನೂ ಪಡೆಯುತ್ತಿರುವುದು ಎಲ್ಲರಿಗೂ ಗೊತ್ತಿದೆ.
ಆಮಿರ್ ಖಾನ್ ಸಿನೆಮಾದಿಂದ ಹಿಡಿದು ಒಟ್ಟಾರೆ ಮುಸ್ಲಿಮ್ ಸಮುದಾಯದ ದನಿ, ಅಭಿವ್ಯಕ್ತಿಗಳನ್ನು ತುಳಿಯುವುದನ್ನೇ ಹಲವು ಹೀನ ಬುದ್ಧಿಯ ಮಾಧ್ಯಮಗಳು ಕಸುಬಾಗಿಸಿಕೊಂಡಿವೆ. ಇಂಥ ಹೀನ ಶಕ್ತಿಗಳನ್ನು ಹಿಮ್ಮೆಟ್ಟಿಸಿದ ಘಟನೆಗಳನ್ನೋ ಅಥವಾ ಅವುಗಳ ವಿರುದ್ಧದ ಅಪರೂಪದ ಕೋರ್ಟ್ ತೀರ್ಪುಗಳನ್ನೋ ವಾರ್ತಾಭಾರತಿಯಲ್ಲಿ ಓದಿದಾಗ ಖುಷಿಗೊಳ್ಳುವ ಜಾತ್ಯತೀತ ತರುಣ, ತರುಣಿಯರಿದ್ದಾರೆ. ಚುನಾವಣೆಯ ಕಾಲದಲ್ಲಿ ಜಾತ್ಯತೀತ ಪಕ್ಷಗಳ ಮುನ್ನಡೆಗಳ ಸುದ್ದಿಗೆ ವಾರ್ತಾಭಾರತಿ ಕೊಡುವ ಪ್ರಾಮುಖ್ಯತೆ ಕೂಡ ಇಂಥ ಓದುಗರಲ್ಲಿ ಹೊಸ ಭರವಸೆ ಮೂಡಿಸುತ್ತಿರುತ್ತದೆ.
ಹೊಸ ಕಾಲದ ಪತ್ರಕರ್ತರು ಮಾಡಿದ ಕೇರಳ ಚುನಾವಣೆಯ ಕವರೇಜ್ ಅಥವಾ ಬಿಹಾರ ಚುನಾವಣೆಯಲ್ಲಿ ಉವೈಸಿಯವರ ಎಐಎಂಐಎಂ ಪಕ್ಷದಿಂದಾಗಿ ಮುಸ್ಲಿಮರ ಮತ ವಿಭಜನೆಯಾದದ್ದನ್ನು ಕುರಿತ ವಿಶ್ಲೇಷಣೆ ತರದ ವೀಡಿಯೊಗಳು ವಾರ್ತಾಭಾರತಿಯ ಹೆಮ್ಮೆಗಳಾಗಿವೆ. ಶಿವಸುಂದರ್ ಬರಹಗಳ ವೈಜ್ಞಾನಿಕ ಚೌಕಟ್ಟು, ಖಚಿತತೆಗಳಿಂದ ಒಳನೋಟಗಳನ್ನು ಪಡೆದು ಅವನ್ನು ಅಳವಡಿಸಿ
ಕೊಳ್ಳುವವರಿದ್ದಾರೆ. ಈ ಬಗೆಯ ಹಲವರ ವಿಶ್ಲೇಷಣೆಗಳು ಹಾಗೂ ಸಂಪಾದಕೀಯದ
ನಿಲುವುಗಳು ಸಾರ್ವಜನಿಕ ಭಾಷಣ ವಾಡುವ ಚಳವಳಿಗಳ ನಾಯಕರಿಗೂ ಚಿಂತನೆಗಳನ್ನು ಒದಗಿಸುತ್ತಾ ಬಂದಿವೆ. ಪ್ರಕಾಶರ ನಿತ್ಯ ವರದಿಗಳು, ಓ ಮೆಣಸೇ
ಅಂಕಣದ ತೀಕ್ಷ್ಣ ತಿವಿತ, ಪುಟ್ಟಸ್ವಾಮಿಯವರ ತುಂಬಿ ಬಂದ ಗಂಧದ ಸಿನೆಮಾಲೋಕ,
ಬಸು ಮೇಗಲ್ಕೇರಿಯವರ ವ್ಯಕ್ತಿ ಚಿತ್ರಗಳು, ಶ್ರೀನಿವಾಸ ಕಕ್ಕಿಲಾಯರ ವಿಶಿಷ್ಟ ವೈದ್ಯ
ಚಿಂತನೆ, ಕಂಜರ್ಪಣೆಯವರ ಸಾಹಿತ್ಯ ನೋಟ, ಕುರ್ಆನ್ ಗ್ರಂಥದ ಮಿಂಚುಗಳು..
ಹೀಗೆ ನೂರಾರು ಬರಹಗಳು ನನ್ನನ್ನು ಸೆಳೆಯುತ್ತಾ ಬಂದಿವೆ. ಓದುಗರಿಗೆ ಇದುವರೆಗೆ ಕಾಣದ ಹೊಸ ಸತ್ಯಗಳನ್ನು ಹೊಳೆಯಿಸುವ, ಓದುಗರಿಗೆ ನಿತ್ಯ ವ್ಯಾಲ್ಯೂ ಅಡಿಶನ್ ಆಗಬಲ್ಲ ಬರಹಗಳು ಕೂಡ ಇಲ್ಲಿವೆ. ಜಿ. ಮಹಾಂತೇಶರ ತನಿಖಾ ವರದಿಗಳು ಅಪರೂಪದ ಸ್ಫೋಟಕ ದಾಖಲೆಗಳಾಗಿವೆ. ಪತ್ರಿಕೆಯೊಂದು ಹೀಗೆ ದಿಟ್ಟ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿರುವಾಗ, ಈ ದಾಖಲೆಗಳನ್ನು ಓದಿ ಸರಕಾರದ ಬೆನ್ನು
ಹತ್ತುವ ದಮ್ಮು ನಮ್ಮ ವಿರೋಧ ಪಕ್ಷಗಳಲ್ಲಿ ಹುಟ್ಟಬೇಕು; ಆಗ ಸರಕಾರಿ ಮುಖವಾಡಗಳು ಒಂದೊಂದೇ ಕಳಚಿ ನಿಜಕ್ಕೂ ರಾಜಕೀಯ ಬದಲಾವಣೆ ಶುರುವಾಗುತ್ತದೆ.
ಇಷ್ಟಾಗಿಯೂ, ಎಲ್ಲ ಬಗೆಯ ಭಾಷೆಗೂ ತುಕ್ಕು ಹಿಡಿಯುವಂತೆ ಪ್ರಗತಿಪರ, ವೈಚಾರಿಕ ಭಾಷೆಗೂ ತುಕ್ಕು ಹಿಡಿಯುತ್ತದೆ. ಆಗ ನಾವು ಬಳಸುವ ಭಾಷೆಯಲ್ಲೇ ಪಲ್ಲಟ
ಗಳನ್ನು ಮಾಡಿಕೊಂಡು ನಮ್ಮ ಆರೋಗ್ಯಕರ ನಿಲುವುಗಳನ್ನು ಮುಂದೊಯ್ಯ ಬೇಕಾಗುತ್ತದೆ. ಪ್ರತಿಯೊಬ್ಬ ಲೇಖಕ, ಲೇಖಕಿಯೂ ಒಂದೇ ಜಾಡಿನ ವಿಶ್ಲೇಷಣೆಗಳಿಂದ ಹೊರಬಂದು ಜೀವಂತ ಬರವಣಿಗೆಯ ಸಾಧ್ಯತೆಗಳನ್ನು ಹುಡುಕುತ್ತಿರಬೇಕಾಗುತ್ತದೆ. ಸುದ್ದಿಪುಟಗಳಲ್ಲಿ ವರದಿಯಾಗುವ ಭಾಷಣದ ತುಣುಕುಗಳಲ್ಲೂ, ಸಂಪಾದಕೀಯ ಪುಟದ ವಿಶ್ಲೇಷಣಾ ಬರಹಗಳಲ್ಲಿ ಒಂದೇ ನಿಲುವು, ಒಂದೇ ಭಾಷೆ ಕಾಣಿಸಿದರೆ ಪತ್ರಿಕೆಯ ಪುಟಗಳ ತಾಜಾತನ ಕಡಿಮೆಯಾಗುತ್ತದೆ. ಇದು ಕರ್ನಾಟಕದ ಒಟ್ಟು ಬೌದ್ಧಿಕ-ಸಾಂಸ್ಕೃತಿಕ ವಲಯದಲ್ಲಿ ವಿಕಾಸಗೊಳ್ಳುತ್ತಿರುವ ಪರ್ಯಾಯ ವೈಚಾರಿಕ ಭಾಷೆಯಂತೆಯೂ ಕಾಣುತ್ತದೆನ್ನುವುದು ನಿಜ.
ಆದರೆ ಒಂದೇ ತರದ ಭಾಷೆ ದಿನಪತ್ರಿಕೆಯಲ್ಲಿ ಮತ್ತೆ ಮತ್ತೆ ಕಾಣಿಸತೊಡಗಿದಾಗ ಓದುಗರು ಕಣ್ಣಾಡಿಸಿ ಸುಮ್ಮನಾಗುವ ಅಪಾಯವಿದೆ. ಈ ಬಗ್ಗೆ ಸಂಪಾದಕರೂ, ಲೇಖಕರೂ ಎಚ್ಚರವಾಗಿರಬೇಕಾಗುತ್ತದೆ. ಲೇಖನವೊಂದು ಸಂಪಾದಕೀಯ ಪುಟದಿಂದ ಮುಂದಿನ ಪುಟಕ್ಕೂ ಹರಿಯತೊಡಗಿದರೆ, ಈಗಾಗಲೇ ಸಣ್ಣಪುಟ್ಟ ಬರಹಗಳ ಖಯಾಲಿಗೆ ಒಗ್ಗಿದ ಓದುಗರ ಉದಾಸೀನ ಹೆಚ್ಚಬಲ್ಲದು. ಆಗ ಲೇಖಕರು ಕೂಡ ಹತ್ತು ಕಟ್ಟುವ ಕಡೆ ಒಂದು ಮುತ್ತು ಕಟ್ಟುವ ಕಲೆ ಕಲಿತು, ಪುನರಾವರ್ತನೆಯಾಗುವ ಐಡಿಯಾಗಳನ್ನು ಪರೀಕ್ಷಿಸಿಕೊಂಡು, ಅಡಕವಾಗಿ ಬರೆಯಬೇಕಾಗುತ್ತದೆ.
ಅದೇನೇ ಇರಲಿ, ಈಚಿನ ವರ್ಷಗಳ ಬಿಜೆಪಿ ಪರ ಪತ್ರಿಕೆಗಳ ಹಾವಳಿಯ ನಡುವೆ,
ವಾರ್ತಾಭಾರತಿಯ ಸುದ್ದಿ, ವಿಶ್ಲೇಷಣೆಗಳನ್ನು ಓದುತ್ತಾ, ತಮ್ಮ ನಿಲುವು, ವಿಚಾರ ಗಳಿಗೂ ಒಂದು ಆಶ್ರಯವಿದೆ, ವೇದಿಕೆಯಿದೆ ಎಂದು ನೆಮ್ಮದಿಗೊಳ್ಳುವ ವಿಚಾರವಂತ ಶೂದ್ರ, ದಲಿತ ವರ್ಗಗಳ ಸಂಖ್ಯೆಯೂ ದೊಡ್ಡದಿದೆ. ಆದರೆ ಈ ವರ್ಗಗಳ ಓದುಗರು ವಾರ್ತಾಭಾರತಿಯನ್ನು ಇನ್ನೂ ಗಟ್ಟಿಯಾಗಿಸುವ ನಿಟ್ಟಿನಲ್ಲಿ ಎಷ್ಟರ ಮಟ್ಟಿಗೆ
ಬೆಂಬಲಿಸಬಲ್ಲರು, ಪತ್ರಿಕೆಯ ಆರ್ಥಿಕ ಶಕ್ತಿಗೆ ಎಷ್ಟರ ಮಟ್ಟಿಗೆ ಕೊಡುಗೆ ಕೊಡಬಲ್ಲರು
ಎಂಬ ನಿರ್ಣಾಯಕ ಪ್ರಶ್ನೆಯನ್ನೂ ಈ ಓದುಗರೇ ಪ್ರಾಮಾಣಿಕವಾಗಿ ಕೇಳಿಕೊಳ್ಳ ಬೇಕು. ನ್ಯೂಸ್ ಲಾಂಡ್ರಿ, ದ ವೈರ್ಗಳಂಥ ದಿಟ್ಟ ಡಿಜಿಟಲ್ ವೇದಿಕೆಗಳಲ್ಲಿ ಒಳ್ಳೆಯ ಲೇಖನ
ಓದಿದ ತಕ್ಷಣ ಡಿಜಿಟಲ್ ವೇದಿಕೆಯ ಮೂಲಕ ಹಣ ರವಾನಿಸುವ ಇಂಗ್ಲಿಷ್ ಓದುಗರಿದ್ದಾರೆ. ನ್ಯೂಸ್ ಲಾಂಡ್ರಿ ಒಂದು ವಿಶೇಷ ಸರಣಿ ತಯಾರು ಮಾಡಲು, ಅಥವಾ
ಬಾಬಾ ರಾಮದೇವ್ ಸಾಮ್ರಾಜ್ಯ ಕುರಿತ ತನಿಖಾ ವರದಿ ತಯಾರು ಮಾಡಲು ತಗಲುವ ಅಂದಾಜು ವೆಚ್ಚ 7 ಲಕ್ಷ ರೂ. ಎಂದು ಪ್ರಕಟಣೆ ಕೊಟ್ಟ ಕೆಲ ದಿನಗಳಲ್ಲೇ ಸಾವಿರ, ಎರಡು ಸಾವಿರ ಜಮಾ ಮಾಡಿ ಆ ಗುರಿ ತಲುಪಿಸುವ ಸತ್ಯದ ಪರ ನಿಂತು ಪತ್ರಿಕಾ ಯುದ್ಧಗಳನ್ನು ಬೆಂಬಲಿಸುವ ಓದುಗರಿದ್ದಾರೆ. ಇದು ತಾವು ಮೆಚ್ಚುವ ಸತ್ಯಬದ್ಧ ಪ್ರತಿಕೋದ್ಯಮವನ್ನು ಬೆಂಬಲಿಸುವ ಆದರ್ಶ ಓದುಗರ ಕಮಿಟ್ಮೆಂಟ್. ಇಂಥ ಕಾಳಜಿಯ ಓದುಗರು ಕನ್ನಡದಲ್ಲೂ ಬೆಳೆದರೆ ಮಾತ್ರ ವಾರ್ತಾಭಾರತಿಯಂಥ ಅನೇಕ ವೇದಿಕೆಗಳು ಇನ್ನಷ್ಟು ಗಟ್ಟಿಯಾಗಬಲ್ಲವು.
ನನ್ನಂಥ ಕೆಲವು ವಾರ್ತಾಭಾರತಿಯ ಹಿತೈಷಿಗಳು ವಾರ್ತಾಭಾರತಿಯ ಎಲ್ಲ
ಆವೃತ್ತಿಗಳನ್ನೂ ಪಡೆಯಲು ವರ್ಷಕ್ಕೆ ಐದು ಸಾವಿರ ರೂಪಾಯಿ ನೀಡಿ ಚಂದಾದಾರ ರಾಗಿದ್ದೇವೆ. ಅದನ್ನು ಈ ವರ್ಷವೂ ಮುಂದುವರಿಸಲಿದ್ದೇವೆ. ಜಾತ್ಯತೀತ ಚಿಂತನೆಯ ಬಗ್ಗೆ
ಕಾಳಜಿಯಿರುವ, ತಕ್ಕ ಮಟ್ಟಿನ ಚಂದಾ ಕೊಡಬಲ್ಲ ಸಾಧ್ಯತೆಯಿರುವ ಸಾವಿರಾರು ಜನ ಹೀಗೆ ವಾರ್ತಾಭಾರತಿಯ ಬೆಂಬಲಕ್ಕೆ ನಿಲ್ಲಬಹುದು. ಕೊನೆಯ ಪಕ್ಷ ಸಾವಿರಾರು ಓದುಗರು ವಾರ್ಷಿಕ ಚಂದಾದಾರರಾಗಿ ಪತ್ರಿಕೆಯ ಮುದ್ರಿತ ಪುಟಗಳನ್ನು ಟೆಲಿಫೋನ್,
ಕಂಪ್ಯೂಟರ್ ಪರದೆಯ ಮೇಲೆ ತಮಗೆ ಬೇಕಾದಾಗ ನೋಡಿಕೊಳ್ಳಬಹುದು.
ಇಷ್ಟೇ ಮುಖ್ಯವಾಗಿ ಇಲ್ಲಿ ಹೇಳಬೇಕಾದ ಮತ್ತೊಂದು ಸಂಗತಿಯಿದೆ: ವಾರ್ತಾಭಾರತಿಯ ವ್ಯವಸ್ಥಾಪಕ ವರ್ಗ ಕಳೆದ ಕೊರೋನ ಬಿಕ್ಕಟ್ಟಿನ ಕಾಲದಲ್ಲಿ ನಡೆದುಕೊಂಡ ಮಾನವೀಯ ರೀತಿ ಕೂಡ ನನ್ನಲ್ಲಿ ವಿಶೇಷ ಗೌರವ ಹುಟ್ಟಿಸಿದೆ. ಆ ಕಾಲದಲ್ಲಿ ಬೃಹತ್ ಬಂಡವಾಳದ ಪತ್ರಿಕೆಗಳಲ್ಲಿ ಹತ್ತಾರು ವರ್ಷ ದುಡಿದ ಪತ್ರಕರ್ತರನ್ನು ನಿಂತ ನಿಲುವಿನಲ್ಲೇ ಮನೆಗೆ ಕಳುಹಿಸುತ್ತಿದ್ದಾಗ ವಾರ್ತಾಭಾರತಿಯಲ್ಲಿ ಕೆಲಸ ಮಾಡುವ ಗೆಳೆಯರು ಅಲ್ಲಿನ ಆರ್ಥಿಕ ಶಕ್ತಿಗೆ ತಕ್ಕಂತೆ ತಮ್ಮ ಎಂದಿನ ಸಂಬಳ ಪಡೆಯುತ್ತಾ ಮನೆಯಿಂದಲೂ ಕೆಲಸ ಮಾಡಿದ್ದನ್ನು ನೆನೆದು ವಾರ್ತಾಭಾರತಿಯ ಬಗ್ಗೆ ಕೃತಜ್ಞತೆ ಉಕ್ಕುತ್ತದೆ. ಇದು ಪತ್ರಿಕೋದ್ಯಮದಲ್ಲಿ ಜವಾಬ್ದಾರಿ ಎನ್ನುವ ಪರಿಕಲ್ಪನೆ ಹೀಗೂ ವಿಸ್ತರಿಸಿಕೊಳ್ಳುತ್ತಿರಬೇಕು ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.
ಆದ್ದರಿಂದಲೇ ತಮ್ಮ ನಿರೀಕ್ಷೆ, ನಿಲುವುಗಳನ್ನು ಬಿಂಬಿಸುವ ಪತ್ರಿಕೆಯೊಂದನ್ನು ನಿತ್ಯ ಮೆಚ್ಚುವ ಓದುಗರು ಅನೇಕ ಸವಾಲುಗಳನ್ನು ಎದುರಿಸಿ ನಡೆಯುತ್ತಿರುವ ಆ ಪತ್ರಿಕೆಗೆ ತಾವು ನೀಡಬಹುದಾದ ಬೆಂಬಲದ ಬಗ್ಗೆ ಪ್ರಾಮಾಣಿಕವಾಗಿ ಯೋಚಿಸಬೇಕಾದ ಅಗತ್ಯ
ವಿದೆ. ಓದುಗರ ಆರ್ಥಿಕ ಬೆಂಬಲ ನಿರೀಕ್ಷಿಸಿದ ಮಟ್ಟ ತಲುಪದಿದ್ದರೆ ಸಂಪಾದಕೀಯ ಬಳಗದಲ್ಲಿ ಉದಾಸ ಭಾವ ಹಬ್ಬಬಹುದು. ಇಂಡಿಯಾದ ಕಟು ವಾಸ್ತವವೆಂದರೆ, ನಾವು ಯಾರ ಪರವಾಗಿ ನಿಲುವು ತಾಳುತ್ತೇವೋ ಅವರೇ ನಮ್ಮ ಬೆಂಬಲಕ್ಕೆ ನಿಲ್ಲುವುದು ಗ್ಯಾರಂಟಿಯಿಲ್ಲ! ಇಂಥ ಕಠೋರ ವಾಸ್ತವದ ಅರಿವಿದ್ದೂ ಸಿನಿಕತನಕ್ಕೆ ಬಲಿಯಾಗದೆ, ವ್ಯವಸ್ಥೆಯನ್ನು ಎದುರಿಸುವ, ಆ ಮೂಲಕ ನೊಂದವರ ದನಿಯಾಗುವ ಗುರಿಯ ಪತ್ರಿಕೋದ್ಯಮ ಮಾತ್ರ ಈ ಕಾಲದಲ್ಲಿ, ಈ ದೇಶದ ಅಸಹಾಯಕರಿಗೆ ಅಷ್ಟಿಷ್ಟು ಸಾಂತ್ವನ ನೀಡಬಲ್ಲದು; ರಾಜಕೀಯ, ಸಾಮಾಜಿಕ ಬದಲಾವಣೆ ತರಬಲ್ಲದು. ಇಂಥ ದಿಟ್ಟ ನಂಬಿಕೆಯಿಂದ ವಾರ್ತಾಭಾರತಿ ಮುಂದಡಿಯಿಡುತ್ತದೆ. ಇಂಥದೊಂದು ದಿನಪತ್ರಿಕೆಗೆ ಆರ್ಥಿಕವಾಗಿ ಹಾಗೂ ನೈತಿಕವಾಗಿ ಬೆಂಬಲವಾಗಿ ನಿಲ್ಲುವ ಹೊಣೆ ಈ ಪತ್ರಿಕೆಯಿಂದ ನೆಮ್ಮದಿ, ಧೈರ್ಯ, ವೇದಿಕೆ, ಪ್ರಚಾರ, ಆತ್ಮವಿಶ್ವಾಸ ಪಡೆದ ವ್ಯಕ್ತಿಗಳು ಹಾಗೂ ತಂಡಗಳ ಮುಖ್ಯ ಜವಾಬ್ದಾರಿಯೂ ಆಗಿದೆ.
ಇದೀಗ ತಾರುಣ್ಯಕ್ಕೆ ಅಡಿಯಿಟ್ಟಿರುವ ವಾರ್ತಾಭಾರತಿಗೆ ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು. ತಾರುಣ್ಯದ ಹೊಸ ಕಸುವು ವಾರ್ತಾಭಾರತಿಯನ್ನು ದೀರ್ಘ ಕಾಲ ಹೀಗೇ ಮುನ್ನಡೆಸುತ್ತಿರಲಿ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.