-

ಮಾನವೀಯ ಸಮಸಮಾಜಕ್ಕಾಗಿ ಹಂಬಲಿಸಿದ ಸಹನೆಯ ಲೋಕದ ಕವಿ ಡಾ. ಸಿದ್ದಲಿಂಗಯ್ಯ

-

ದೂರದರ್ಶನ ಚಂದನ ವಾಹಿನಿಯಲ್ಲಿ ಕಾರ್ಯ ನಿರ್ವಹಿಸಿರುವ ಸುಬ್ಬು ಹೊಲೆಯಾರ್, ಕಾವ್ಯ, ರಂಗಭೂಮಿ ಸಹಿತ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು. ಇವರ ‘ಸೂಜಿಗಾತ್ರದ ಕೊಳವೆಯಿಂದ ಮನುಷ್ಯನೊಬ್ಬನ ಹಾಡು’ ಕೃತಿಗೆ ಡಾ. ಜಿ.ಎಸ್.ಎಸ್. ಕಾವ್ಯಪ್ರಶಸ್ತಿ, ದಿನಕರ ದೇಸಾಯಿ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಶ್ರೀಗಂಧದ ಹಾರ ಕಾವ್ಯಪ್ರಶಸ್ತಿ, ‘ಅಮ್ಮ’ ಗೌರವ ಪ್ರಶಸ್ತಿ, ಮುಳ್ಳೂರ್ ನಾಗರಾಜ್ ಕಾವ್ಯಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಇವರ ಎರಡನೇ ಕಾವ್ಯಸಂಗ್ರಹ ‘ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ’ ಕೃತಿಯು 2010ನೇ ಸಾಲಿನ ಮುದ್ದಣ ಕಾವ್ಯಪ್ರಶಸ್ತಿಯನ್ನು ಪಡೆದುಕೊಂಡಿದೆ. 2013ನೇ ಸಾಲಿನಲ್ಲಿ ಬುದ್ಧ ಪ್ರಶಸ್ತಿ, ದಲಿತಸಿರಿ ಪ್ರಶಸ್ತಿ, ಕರ್ನಾಟಕ ರಾಜ್ಯಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಸೇರಿದಂತೆ ಹಲವಾರು ಪುರಸ್ಕಾರಗಳು ಸಂದಿವೆ. ಇವರ ಜೀವನ ಕಥನ ‘ದನ ಕಾಯದವನು’ ‘ಕರಿಯ ಕಣ್ಬಿಟ್ಟ’ ಎಂಬ ಕಲಾತ್ಮಕ ಚಲನಚಿತ್ರವಾಗಿ ಮೂಡಿಬಂದಿದೆ.

ಸುಬ್ಬು ಹೊಲೆಯಾರ್

ಡಾ.ಅಕ್ಕಮಹಾದೇವಿ ಹೇಳಿದ ‘ನೊಂದವರ ನೋವು ನೋಯದವರೆತ್ತ ಬಲ್ಲರು’; ಬಸವಣ್ಣನವರು ಹೇಳಿದ ‘ದಯೆಯೇ ಧರ್ಮದ ಮೂಲವಯ್ಯ’ ಎಂಬ ವಚನದ ಸಾಲುಗಳ ಮೂಲಕ ಸಿದ್ದಲಿಂಗಯ್ಯನ ವರನ್ನು ನೆನಪು ಮಾಡಿಕೊಳ್ಳುತ್ತೇನೆ. ಡಾ. ಸಿದ್ದಲಿಂಗಯ್ಯನವರನ್ನು ನಾವು ‘ದಲಿತ ಕವಿ’ ಎಂದು ಕರೆಯುತ್ತೇವೆ. ದಲಿತ ಕವಿ ಎಂದರೆ, ಲೋಕದ ಕವಿ ಎಂದರ್ಥ. ಹಾಗಾಗಿ ಡಾ. ಸಿದ್ದಲಿಂಗಯ್ಯನವರು ‘ಲೋಕದ ಕವಿ’, ಅರವಿಂದ ಮಾಲಗತ್ತಿಯವರು ‘ದಲಿತ’ ಎಂದರೆ, ‘ಸೀಮಾತೀತ’ ಎಂದು ಹೇಳಿದ್ದಾರೆ.

ದಲಿತ ಚಳವಳಿಯ ನಾಯಕರು ‘ದಲಿತರು’ ಎಂದರೆ, ‘ಎಲ್ಲಾ ಜಾತಿ, ಧರ್ಮದ ನೊಂದವರು’ ಎಂದು ಹೇಳಿದ್ದಾರೆ. ದುಃಖದ ಕಣ್ಣೀರಿನ ಬಣ್ಣ ಬೇರೆ ಬೇರೆಯಾಗಿರುತ್ತದೆಯೆ? ಮನುಷ್ಯನ ಸಂಕಟಕ್ಕೆ, ದುಃಖಕ್ಕೆ ಗಡಿರೇಖೆಗಳಿರುವುದಿಲ್ಲ. ಕವಿ ಸಿದ್ದಲಿಂಗಯ್ಯನವರ ಕಾವ್ಯ ಕೂಡ ಸಂಕಟ, ದುಃಖಗಳಿಲ್ಲದ ಮಾನವೀಯ ಸಮಸಮಾಜದ ಅಸ್ತಿತ್ವಕ್ಕಾಗಿ ಹಂಬಲಿಸುತ್ತದೆ. ಹಾಗಾಗಿ ಮತ್ತೆ ಮತ್ತೆ ನಾವು ಸಿದ್ದಲಿಂಗಯ್ಯನವರ ಸಾಹಿತ್ಯವನ್ನು ಮರು ಓದು - ಅಧ್ಯಯನಕ್ಕೆ ಒಳಪಡಿಸಬೇಕಿದೆ. ಕವಿಗಳ ಸಾಹಿತ್ಯ - ಚಿಂತನೆಯನ್ನು ಹೊಸ ತಲೆಮಾರಿಗೆ ದಾಟಿಸುವ ಕಾರಣಕ್ಕಾಗಿ ಇಂತಹ ವಿಚಾರ ಸಂಕಿರಣಗಳು ಬಹಳ ಮುಖ್ಯ.

ನಾಳೆಯ ಬೆಳಗನ್ನು ಬೆಳಗಿಸುವುದು ಮತ್ತು ಒಂದು ಸಮಾಜ ಒಟ್ಟಿಗೆ ಬದುಕ ಬೇಕೆಂಬುದು ಕವಿ ಸಿದ್ದಲಿಂಗಯ್ಯನವರ ಕಾವ್ಯದ ಆಶಯವಾಗಿತ್ತು. ಈ ಸಮಾಜದ ತರತಮಗಳ ಕಾರಣದಿಂದಾಗಿ ಸಿದ್ದಲಿಂಗಯ್ಯನವರ ಕಾವ್ಯ ಕೆಂಡದುಂಡೆಗಳಾಗಿದ್ದವು, ಪ್ರತಿಭಟನಾತ್ಮಕವಾಗಿದ್ದವು. ಹಾಗಾಗಿ ಅವರ ಕಾವ್ಯ ಹೇಳಿದ್ದು ‘ಇಕ್ರಲಾ ವದಿರ್ಲಾ...’ ಎಂದು. ನಾನು ಹಳ್ಳಿಯಿಂದ ಬಂದವನು.

ಸಿದ್ದಲಿಂಗಯ್ಯನವರು ಸಹ ಹಳ್ಳಿಯಿಂದ ಬಂದವರು. ನನ್ನೂರು ಸಕಲೇಶಪುರದ ಹೆತ್ತೂರು. ನಾನು ಒಂಭತ್ತು ವರ್ಷದ ಹುಡುಗನಾಗಿದ್ದಾಗ ಒಂದು ಘಟನೆ ನಡೆಯಿತು. ಆ ದಿನ ನಾನು ನನ್ನ ಕೇರಿಯಲ್ಲಿ ನಮ್ಮ ಮನೆಯ ಮುಂದಿನ ಬೀದಿಯಲ್ಲಿ ಗೋಲಿ ಆಡುತ್ತಿದ್ದೆ. ನಮ್ಮವ್ವ ಮನೆಯ ಪಡಸಾಲೆಯಲ್ಲಿ ಕುಳಿತು ತಲೆ ಬಾಚಿಕೊಳ್ಳುತ್ತಿದ್ದರು. ಇದ್ದಕ್ಕಿದ್ದ ಹಾಗೆ ನಮ್ಮವ್ವ ‘ಗೌಡ್ರು ಬಂದ್ರು... ಗೌಡ್ರು ಬಂದ್ರು..’ ಅಂದ್ರು ಈ ಶಬ್ದ ನನ್ನ ಕಿವಿಗೆ ಬಿದ್ದ ತಕ್ಷಣ ನಾನು ನಮ್ಮ ಮನೆಯ ಒಳಗಡೆ ಓಡಿ ಹೋದೆ. ನಾನು ಗಾಬರಿಯಿಂದ ಓಡಿ ಹೋದ ಕಾರಣದಿಂದಾಗಿ ನನ್ನ ತಲೆ ಗೋಡೆಗೆ ಹೊಡೆದು ಪೆಟ್ಟಾಯಿತು.

ನಾನು ಕೆಳಕ್ಕೆ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದೆ. ನನಗೆ ಎಚ್ಚರವಾದಾಗ ನಾನು ನಮ್ಮವ್ವನನ್ನು ಕೇಳಿದೆ ‘ಯಾಕವ್ವ ಗೌಡ್ರು ಬಂದ್ರು ಅಂತ ಹೇಳ್ದೆ... ಅವರು ಬರುವಾಗ ನಾವು ಬೀದಿಲಿ ಗೋಲಿ ಆಡಬಾರದ’ ಅಂತ ಕೇಳಿದೆ. ಅದಕ್ಕೆ ನಮ್ಮವ್ವ ‘ಹಂಗಲ್ಲಪ್ಪ, ಗೌಡು ಬರುವಾಗ ನಾವು ಅವರ ಎದುರಿಗೆ ಇರಬಾರದು’ ಅಂತ ಹೇಳಿದರು. ಅಂದರೆ, ನಮ್ಮೂರಿನ ಪಟೇಲ, ಗೌಡ ನಮ್ಮ ಬೀದಿಯಲ್ಲಿ ಹೋಗುತ್ತಿದ್ದಾರೆ ಅಂದರೆ ನಾವೆಲ್ಲಾ ಮನೆಯ ಒಳಗೆ ಇರಬೇಕಾಗಿತ್ತು. ಇದು ನಾನು ಸ್ವತಃ ಅನುಭವಿಸಿದ್ದು. ಕೆಲವು ದಿನಗಳ ನಂತರ ಆ ಗೌಡ್ರು ತೀರಿ ಹೋದರು.

ಆಗ ನಮ್ಮ ಕೇರಿಯ ಜನ ಎಲ್ಲರೂ ಅಳುತ್ತಿದ್ದರು, ನಮ್ಮವ್ವನೂ ಅಳುತ್ತಿದ್ದರು, ನಮ್ಮವ್ವನ ಸೆರಗು ಹಿಡಿದುಕೊಂಡು ನಾನು ಅಳುತ್ತಿದ್ದೆ. ಊರ ಗೌಡರ ಸಾವಿನ ದುಃಖದಲ್ಲಿ ಊರವರ ಜೊತೆ ನಮ್ಮ ಕೇರಿಯ ಜನರೂ ಒಂದಾಗಿದ್ದರು. ದುಃಖದಲ್ಲಿ ನಾವೆಲ್ಲರೂ ಒಂದೇ ಆಗಿದ್ದೆವು. ಆ ಗೌಡರ ಸಾವಿನ ಮನೆಯ ದುಃಖದಲ್ಲಿ ನಾವು ಒಬ್ಬರಾಗಿದ್ದೆವು. ಅವತ್ತು ಗೌಡರ ಮನೆಯವರಿಗೆ ದುಃಖವಾದಂತೆ, ನಮ್ಮ ಕೇರಿಯ ಜನರಿಗೂ ದುಃಖವಾಗಿತ್ತು. ಆಗ ನನಗೆ, ದುಃಖ ಎಲ್ಲರಿಗೂ ಒಂದೇ ಅನಿಸಿತು. ನಮ್ಮ ಕೇರಿಯ ಜನರಿಗೆ ಬಹಳ ದೊಡ್ಡ ಸಹನೆ ಇತ್ತು. ಇಂತಹ ಸಹನೆಯ ಲೋಕದಿಂದ ಬಂದವರು ನಮ್ಮ ಕವಿ ಸಿದ್ದಲಿಂಗಯ್ಯನವರು.

ನೊಂದವರ ಕಣ್ಣೀರು ಸಿದ್ದಲಿಂಗಯ್ಯನವರ ಹಾಡಾಗಿತ್ತು. ಇವರ ಹಾಡುಗಳು ನಮ್ಮೊಳಗಿನ ಸಿಟ್ಟು, ಆಕ್ರೋಶ, ಉದ್ವೇಗಗಳನ್ನು ತಣ್ಣಗಾಗಿಸಿದವು. ಶೋಷಕ ಸಮುದಾಯ ನಮಗೆ ಹೀಗೆ ಮಾಡಿತ್ತಲ್ಲ ಎಂದು ನಾವು ಆ ಸಮುದಾಯಕ್ಕೆ ಪ್ರತೀಕಾರ ತೋರಲಿಲ್ಲ. ಬದಲಾಗಿ, ಸಿದ್ದಲಿಂಗಯ್ಯನವರ ಹಾಡಿನ ಮೂಲಕ ಶೋಷಕ ಸಮಾಜಕ್ಕೆ ಎಚ್ಚರಿಕೆಯನ್ನು ಕೊಟ್ಟೆವು ಮತ್ತು ನಾವೂ ನಿಮ್ಮ ಹಾಗೆಯೇ ಮನುಷ್ಯರು ಎಂದು ಹೇಳಿದೆವು. ಇದು ಸಿದ್ದಲಿಂಗಯ್ಯನವರ ಕಾವ್ಯದ ಸ್ಥಾಯಿ ಮನೋಭಾವ.

ಅಸ್ಪಶ್ಯರ ಬಗೆಗೆ ಈ ಸಮಾಜ ಯಾಕೆ ಇಷ್ಟು ಕಠೋರವಾಗಿದೆ? ಎನ್ನುವ ಪ್ರಶ್ನೆ ನನ್ನನ್ನು ಸದಾ ಕಾಡುತ್ತಿರುತ್ತದೆ. ನಾನು ಮಾತನಾಡುತ್ತಿರುವ ಈ ಹೊತ್ತಿನಲ್ಲಿಯೇ ನಮ್ಮ ದೇಶದ ಯಾವುದಾದರೊಂದು ಕಡೆ ಅಸ್ಪಶ್ಯರ ಮೇಲೆ ದೌರ್ಜನ್ಯ ನಡೆಯುತ್ತಿರುತ್ತದೆ. ಕರ್ನಾಟಕದಲ್ಲಿ ಮೂವತ್ತಾರು ಸಾವಿರ ಹಳ್ಳಿಗಳಿವೆ. ಈ ಮೂವತ್ತಾರು ಸಾವಿರ ಹಳ್ಳಿಗಳಲ್ಲಿ ಅಶ್ಪಶ್ಯತೆ ಇಲ್ಲದ ಯಾವುದಾದರು ಒಂದು ಹಳ್ಳಿಯನ್ನು ನೋಡಬೇಕು ಎನ್ನುವುದು ನನ್ನ ಬಹುದೊಡ್ಡ ಕನಸು. ಇಂತಹ ಆಲೋಚನೆಗಳೇ ಸಿದ್ದಲಿಂಗಯ್ಯನವರ ಕಾವ್ಯದ ವಸ್ತುಗಳಾಗಿವೆ.

ಸಿದ್ದಲಿಂಗಯ್ಯನವರು ಎಲ್ಲಾ ಶೋಷಿತ ಸಮುದಾಯಗಳ ನೋವುಗಳನ್ನು ಕಾವ್ಯವಾಗಿಸಿದ್ದಾರೆ. ಇತ್ತೀಚೆಗೆ ಉತ್ತರ ಕರ್ನಾಟಕದ ಒಂದು ಹಳ್ಳಿಯಲ್ಲಿ ಒಂದು ಘಟನೆ ನಡೆಯಿತು. ಒಂದು ಅಶ್ಪಶ್ಯ ಕುಟುಂಬದ ದಂಪತಿ ಆ ಹಳ್ಳಿಯ ದೇವಸ್ಥಾನಕ್ಕೆ ಹೋಗಿ ಹೊರಗಡೆಯೇ ನಿಂತು ಪೂಜೆ ಮಾಡಿಕೊಂಡು ಬರುವ ಸಂದರ್ಭದಲ್ಲಿ, ಆ ದಂಪತಿಯ ಮಗು ದೇವಸ್ಥಾನದ ಒಳಗಡೆ ಪ್ರವೇಶ ಮಾಡಿದೆ. ಇದನ್ನು ಕಂಡ ಮೇಲ್ಜಾತಿಯ ಜನ, ಅಶ್ಪಶ್ಯರ ಮಗು ದೇವಸ್ಥಾನದ ಒಳಗಡೆ ಹೋಗಿ ಮೈಲಿಗೆ ಮಾಡಿದೆ ಅಂತ ಹೇಳಿ ಬೈದು, ಆ ಮಗುವಿಗೆ ದಂಡ ಹಾಕಿದ್ದಾರೆ. ಇಂತಹ ಅಮಾನವೀಯ ವರ್ತನೆಗಳಿಗೆಲ್ಲಾ ಸಿದ್ದಲಿಂಗಯ್ಯನವರು ತಮ್ಮ ಕಾವ್ಯದ ಮೂಲಕ ಉತ್ತರ ಕೊಟ್ಟಿದ್ದಾರೆ. ಸಿದ್ದಲಿಂಗಯ್ಯನವರು ಯಾಕೆ ಮುಖ್ಯ ಅಂತ ಹೇಳಿದರೆ, ಇವರು ತಮ್ಮ ಕಾವ್ಯದ ಮೂಲಕ ಎಪ್ಪತ್ತರ ದಶಕದಲ್ಲಿ ದನಿ ಇಲ್ಲದ ಸಮುದಾಯಕ್ಕೆ ದನಿ ಕೊಟ್ಟರು ಎನ್ನುವ ಕಾರಣಕ್ಕಾಗಿ.

ನಮ್ಮೂರಿನ ಬೋಜಣ್ಣ ಮತ್ತು ಮಲ್ಲೇಶಣ್ಣ ಲಾರಿಗಳಿಗೆ ಮರಳು ತುಂಬುವ ಕೂಲಿ ಕೆಲಸ ಮಾಡುತ್ತಿದ್ದರು. ಇವರು ನನಗೆ ಪರಿಚಿತರು. ಒಂದು ದಿನ ಈ ಇಬ್ಬರು ಕೂಲಿ ಕೆಲಸ ಮುಗಿಸಿ ಟೀ ಕುಡಿಯಲು ಹೊಟೇಲ್ ಬಳಿ ಹೋಗಿ ತಮಗಾಗಿ ಪ್ರತ್ಯೇಕವಾಗಿ ಇಟ್ಟಿದ್ದ ಲೋಟ ತೆಗೆದುಕೊಂಡು ಟೀ ಬಿಡಿಸಿಕೊಂಡು ಕುಡಿಯುತ್ತಿದ್ದರು. ಆ ಸಂದರ್ಭದಲ್ಲಿ ಮಳೆ ಸುರಿಯಲಾರಂಭಿಸಿತು.

ಈ ಇಬ್ಬರು ಆ ಮಳೆಯಿಂದ ತಪ್ಪಿಸಿಕೊಳ್ಳಲು ಹೊಟೇಲ್ ಒಳಗೆ ಹೋಗಿದ್ದಾರೆ. ಅಲ್ಲಿದ್ದ ಸವರ್ಣೀಯರು, ‘ಅಶ್ಪಶ್ಯರಾದ ನೀವು ಈ ಹೊಟೇಲ್ ಒಳಗೆ ಬರಲು ಎಷ್ಟು ಧೈರ್ಯ’ ಅಂತ ಹೇಳಿ ಆ ಇಬ್ಬರ ಕೈಗಳನ್ನು ಮುರಿದರು. ಇದು ನಲವತ್ತು ವರ್ಷಗಳ ಹಿಂದೆ ನಡೆದ ಘಟನೆ. ಈ ರೀತಿಯ ಅಶ್ಪಶ್ಯತೆಯ ಆಚರಣೆಯ ವಿರುದ್ಧ ಸಹ ನಮ್ಮ ಕವಿಗಳು ಕಾವ್ಯ ಬರೆದಿದ್ದಾರೆ. ಎಲ್ಲರ ಮನೆಯ ಸಂಕಟಗಳು ಒಂದೆ, ಎಲ್ಲರೂ ಸಮಾನವಾಗಿ ಬದುಕಬೇಕು, ಸಮಸಮಾಜ ನಿರ್ಮಾಣವಾಗಬೇಕು ಎಂಬುದು ಕವಿಗಳ ಕಾವ್ಯ ಆಶಯ.

ಎಪ್ಪತ್ತರ ದಶಕ ನನ್ನಂತಹವರಿಗೆ ಎಚ್ಚರದ ಕಾಲಘಟ್ಟ, ಬಿ. ಬಸವಲಿಂಗಪ್ಪನವರ ಮಾತಿನಿಂದ ಉಂಟಾದ ಜಾಗೃತಿ, ತಲ್ಲಣ, ಪ್ರೇರಣೆಯಿಂದಾಗಿ ಮೂಕನಿಗೆ ಬಾಯಿ ಬಂದಂತೆ ಹುಟ್ಟಿದ್ದೇ ‘ಹೊಲೆ ಮಾದಿಗರ ಹಾಡು’. ಭಾರತದ ಶ್ರೇಣೀಕೃತ ಸಮಾಜದ ತಾರತಮ್ಯಗಳಿಂದಾಗಿ ಕೋಟ್ಯಂತರ ಜನರ ಬದುಕನ್ನು ಕತ್ತಲೆಯಲ್ಲಿ ಇಟ್ಟಿದ್ದನ್ನು ನಮ್ಮ ಸಮಾಜ ಸುಧಾರಕರು ಪ್ರಶ್ನಿಸಿದ್ದಾರೆ. ಹೋರಾಟ ಮಾಡಿದ್ದಾರೆ.

ಇಂತಹ ಸಮಾಜ ಸುಧಾರಕರಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪ್ರಮುಖರು. ಇವರ ಅಗಾಧ ಪ್ರೇರಣೆಯಿಂದ ಶೋಷಿತ ಸಮುದಾಯದಲ್ಲಿ ಪ್ರಜ್ಞೆಯನ್ನು ಮರುರೂಪಿಸುವಲ್ಲಿ ಡಾ. ಸಿದ್ದಲಿಂಗಯ್ಯನವರ ಕಾವ್ಯ ಪ್ರಮುಖ ಪಾತ್ರ ವಹಿಸಿದೆ. ಸಿದ್ದಲಿಂಗಯ್ಯನವರ ಕಾವ್ಯ ಲಕ್ಷಾಂತರ ಶೋಷಿತರ ಎದೆಯಲ್ಲಿ ಹಾಡಾಗಿದ್ದು ಈಗ ಇತಿಹಾಸ, ಅಶ್ಪಶ್ಯತೆಯ ಕ್ರೌರ್ಯವನ್ನು ಇನ್ನೆಷ್ಟು ದಿನ ಅನುಭವಿಸುವುದು, ಸಹಿಸಿಕೊಳ್ಳವುದು ಎಂಬ ಸಿದ್ದಲಿಂಗಯ್ಯನವರ ಎದೆಯಾಳದಲ್ಲಿ ಮಡುಗಟ್ಟಿದ್ದ ದುಃಖ, ಸಿಟ್ಟು ಅಕ್ಷರಗಳಾಗಿ ದಾಖಲಾದವು.

ನೊಂದವರ ಕೊರಳಲ್ಲಿ ಹಾಡಾದವು. ‘‘ಆಕಾಶವ ಎತ್ತಿ ನಿಲ್ಲಿಸಿ ನೀಲಿಯಾಗಿ ನಿಂತವರೆ’’ ಎಂಬ ಸಾಲಿನಲ್ಲಿನ ರೂಪಕ ಅದ್ಭುತವಾದದ್ದು. ಅಶ್ಪಶ್ಯರಿಗೆ ಆಕಾಶವನ್ನು ಎತ್ತಿ ನಿಲ್ಲಿಸುವ ಶಕ್ತಿ ಎಲ್ಲಿಂದ ಬಂತು ಎಂದರೆ, ಎರಡು ಸಾವಿರ ವರ್ಷಗಳಿಂದ ಅವಮಾನವನ್ನು ಸಹಿಸಿಕೊಂಡ ಬಂದ ಸಹನೆಯಿಂದ ಬಂದದ್ದು. ಇಂತಹ ಹಲವು ರೂಪಕಗಳನ್ನು ಕೊಟ್ಟ ಸಿದ್ದಲಿಂಗಯ್ಯ ಮಹಾಕವಿ. ಈ ನೋವು, ದೌರ್ಜನ್ಯಗಳಿಗೆ ಪ್ರತಿಯಾಗಿ ಕವಿಗಳು

‘‘ ಇಕ್ರಲಾ ವದೀರ್ಲಾ

ಈ ನನ್ ಮಕ್ಕಳ ಚರ್ಮ ಎಬ್ರಲಾ

ದೇವ್ರ ಒಬ್ನೇ ಅಂತಾರೆ

ಓಣಿಗೊಂದೊಂದ್ ತರಾ ಗುಡಿ ಕಟ್ಸವ್ರೆ

ಎಲ್ಲಾರು ದೇವ್ರ ಮಕ್ಳು ಅಂತಾರೆ

ಹೊಲೇರ್ನ ಕಂಡ್ರೆ ಹಾವ್ ಕಂಡಂಗಾಡ್ತಾರೆ

ಹೋಟ್ಲು, ಬಾವಿ, ಮನೆ ಯಾವುದ್ಕೂ ಸೇರ್ಸಲ್ವಲ್ರೊ

ನಮ್ ಹೇಲ್ ತಿನ್ನೋ ನಾಯ್ನ ಕ್ವಾಣೆವಳೀಕ್ ಬುಟ್ಕತ್ತಾರೆ’’

- ಈ ರೀತಿಯ ಸಾಲುಗಳನ್ನು ಕೇಳಿದ ಕನ್ನಡ ಸಾರಸ್ವತ ಲೋಕ ಬೆಚ್ಚಿ ತಿರುಗಿ ನೋಡಿತು. ‘ಇದು ಕವಿತೆನಾ, ಹಾಡಾ?’ ಎಂಬ ಗೊಣಗಪ್ಪಗಳಿಗೇನು ಕಡಿಮೆ ಇರಲಿಲ್ಲ. ಆದರೆ ಇದು ಶತಮಾನಗಳ ಕಾಲ ಒಂದು ಜನಾಂಗವನ್ನು ನಡೆಸಿಕೊಂಡ ರೀತಿಗೆ ಪ್ರಕೃತಿಯೇ ಕೊಟ್ಟ ಉತ್ತರವಾಗಿತ್ತು. ಈ ಹಿನ್ನೆಲೆಯಲ್ಲಿಯೇ ಜಿ.ಎಸ್. ಶಿವರುದ್ರಪ್ಪನವರು ಹೇಳಿದ್ದು ‘‘ ಪ್ರಕೃತಿಯಂತೆ ಕವಿಯ ಮನಸ್ಸು, ಈ ನೆಲವೇ ಬರೆಸಿಕೊಂಡ ಕವಿತೆಗಳು ಸಿದ್ದಲಿಂಗಯ್ಯನವರದು’’. ಉಸಿರಾಡಬಾರದೆ, ನಡೆದಾಡುವ ಕಾಲು ನಡೆದಾಡಬಾರದೆ, ಮಾತನಾಡುವ ನಾಲಿಗೆ ಮಾತನಾಡಬಾರದೆ. ಪ್ರಕೃತಿ ಎಲ್ಲರಿಗೂ ಬದುಕುವ ಹಕ್ಕು ಕೊಟ್ಟಿದೆ. ಡಾ. ಬಾಬಾ ಸಾಹೇಬರು ರೂಪಿಸಿದ ಸಂವಿಧಾನ ಎಲ್ಲರೂ ಸಮಾನವಾಗಿ ಬದುಕುವ ಹಕ್ಕನ್ನು ಕೊಟ್ಟಿದೆ ಎಂಬುದನ್ನು ಸಿದ್ದಲಿಂಗಯ್ಯನವರ ಬರವಣಿಗೆ ಮನವರಿಕೆ ಮಾಡಿಕೊಡುತ್ತದೆ. ನಮಗೆ ಉಸಿರಾಡುವ ಬದುಕುವ ಹಕ್ಕಿದೆ ಎಂದು ಆತ್ಮವಿಶ್ವಾಸದಿಂದ, ಸ್ವಾಭಿಮಾನದಿಂದ ಕೇಳುವ ಧೈರ್ಯವನ್ನು ಸಿದ್ದಲಿಂಗಯ್ಯನವರ ಕಾವ್ಯ ನಮಗೆ ಕೊಟ್ಟಿದೆ.

ಡಾ. ಸಿದ್ದಲಿಂಗಯ್ಯನವರು ಮಾನವೀಯ ಕವಿಯಾಗಿದ್ದರು. ಅತಿ ಹೆಚ್ಚು ನೊಂದ ಶೋಷಿತ ಜನಾಂಗವೆಂದರೆ, ಈ ದೇಶದ ಮಹಿಳೆಯರು, ಎಲ್ಲಾ ಸಮುದಾಯಗಳು ಹೆಣ್ಣನ್ನು ಶೋಷಿಸಿವೆ. ದೂರದ ಬಳ್ಳಾರಿಯ ಒಂದು ಹಳ್ಳಿಯಲ್ಲಿ ಯರ್ರಮ್ಮ ಎಂಬ ಒಬ್ಬ ಹೆಣ್ಣು ಮಗಳನ್ನು ಒಂದು ಸಮುದಾಯದವರು ಬೆತ್ತಲೆಗೊಳಿಸಿ, ಬೀದಿಯಲ್ಲಿ ಮೆರವಣಿಗೆ ಮಾಡಿದರು. ಈ ಘಟನೆ ಮರುದಿನ ಪತ್ರಿಕೆಗಳಲ್ಲಿ ಬರುತ್ತದೆ. ಇದನ್ನು ಓದಿದ ನಾನು ಕವಿಗಳಿಗೆ ಫೋನ್ ಮಾಡಿದೆ. ಮೊದಲಿಗೆ ಕವಿಗಳು ಫೋನಿಗೆ ಸಿಗಲಿಲ್ಲ. ನಂತರ ಸಿಕ್ಕಿ ‘ಹೇಳಿ ಸುಬ್ಬಣ್ಣ’ ಎಂದರು. ‘‘ಸರ್ ನಾನು ಬೆಳಗ್ಗೆಯಿಂದ ನಿಮಗೆ ಫೋನ್ ಮಾಡುತ್ತಿದ್ದೇನೆ, ಆದರೆ ನೀವು ಸಿಗಲಿಲ್ಲ’’ ಎಂದು ಹೇಳಿದೆ. ಅದಕ್ಕೆ ಕವಿಗಳು ‘‘ಸುಬ್ಬಣ್ಣ, ಯರ್ರಮ್ಮನಿಗೆ ಸೀರೆ ಕೊಟ್ಟು ಬರುವುದಕ್ಕಾಗಿ ನಾನು ವಿಕ್ಟೋರಿಯ ಆಸ್ಪತ್ರೆಗೆ ಹೋಗಿದ್ದೆ’’ ಎಂದರು. ಈ ಮಾತುಗಳನ್ನು ಕೇಳಿ ನನ್ನೊಳಗೆ ಕವಿಗಳ ಬಗೆಗೆ ಅಪಾರ ಗೌರವ ಮೂಡಿತು. ಕವಿ ಸಿದ್ದಲಿಂಗಯ್ಯನವರು ಎಷ್ಟು ಸೂಕ್ಷ್ಮವಾಗಿದ್ದರು, ಮಾನವೀಯವಾಗಿದ್ದರು ಎಂಬುದು ಇದರಿಂದ ನಮಗೆ ಗೊತ್ತಾಗುತ್ತದೆ. ಮನುಷ್ಯನಿಗೆ ಪ್ರಾಣ ಎಷ್ಟು ಮುಖ್ಯನೋ, ಮಾನವು ಕೂಡ ಅಷ್ಟೇ ಮುಖ್ಯ ಅಲ್ಲವೇ? ಕವಿತೆ ಬರೆಯುವುದು ಎಷ್ಟು ಮುಖ್ಯವೋ, ಅದಕ್ಕಿಂತ ಬಹಳ ಮುಖ್ಯವಾದದ್ದು ಅವಮಾನಕ್ಕೆ ಒಳಗಾದ ಆ ಹೆಣ್ಣು ಮಗಳಿಗೆ ಬಟ್ಟೆ ಕೊಡುವುದು ಬಹಳ ಮುಖ್ಯ ಅಂತ ಕವಿಗಳಿಗೆ ಅನ್ನಿಸಿದೆ. ಇದು ಬಹಳ ಮುಖ್ಯ ಸಂವೇದನೆ. ಕೇವಲ ಸಿದ್ದಲಿಂಗಯ್ಯನವರ ಕವಿತೆಗಳಿಂದ ಮಾತ್ರವಲ್ಲದೆ, ಅವರ ವ್ಯಕ್ತಿತ್ವದಿಂದಲೂ ಸಹ ಕಲಿಯುವಂತಹದ್ದು ಬಹಳ ಇದೆ. ಕವಿ ಸಿದ್ದಲಿಂಗಯ್ಯನವರ ಒಳಗೆ ಒಬ್ಬ ತಾಯಿ ಇದ್ದಳು.

‘ಹೊಲೆ ಮಾದಿಗರ ಹಾಡು’ ಶೀರ್ಷಿಕೆ ಹೊರ ನೋಟಕ್ಕೆ ಒಂದು ಜನಾಂಗದ ಮಿತಿಗೆ ಒಳಪಟ್ಟಿದೆ ಎಂದು ಭಾವಿಸಲಾಗುತ್ತದೆ. ಆದರೆ, ಒಬ್ಬ ತಾಯಿ ಮಗುವನ್ನು ತನ್ನ ಮಡಿಲಿನಲ್ಲಿ ಇಟ್ಟು ಪೊರೆಯುವಂತೆ ಈ ಅಶ್ಪಶ್ಯ ಜನಾಂಗ ಇಡೀ ಸಮಾಜವನ್ನು ಸಾಕಿದೆ ಎಂಬುದನ್ನು ಅರ್ಥಮಾಡಿಕೊಂಡವರಿಗೆ : ‘ಹೊಲೆ ಮಾದಿಗರ ಹಾಡು’ ಕಾವ್ಯ, ಮಾನವೀಯ ಕಾವ್ಯ ಹಾಗೂ ಮನುಷ್ಯತ್ವಕ್ಕಾಗಿ ಬರೆದ ಕಾವ್ಯ ಎಂಬುದು ತಿಳಿಯುತ್ತದೆ. ಕನ್ನಡದ ಲಕ್ಷಾಂತರ ಜನರನ್ನು ಸಿದ್ದಲಿಂಗಯ್ಯನವರ ಕಾವ್ಯ ಪ್ರಭಾವಿಸಿದಂತೆ, ಬೇರೊಬ್ಬರ ಕಾವ್ಯ ಪ್ರಭಾವಿಸಿದ್ದನ್ನು ನಾನು ಕಾಣೆ, ಕುವೆಂಪು ಅವರ ವೈಚಾರಿಕತೆಯನ್ನು, ಬೇಂದ್ರೆಯವರ ಲಯವನ್ನು, ಕಂಬಾರರ ಜಾನಪದ ಶೈಲಿಯನ್ನು ಹಾಗೂ ಅಶ್ಪಶ್ಯರ ಸಂಕಟವನ್ನು ತನ್ನೆದೆಗೆ ಆಹ್ವಾನಿಸಿಕೊಂಡು, ಅರಗಿಸಿಕೊಂಡು ಧ್ಯಾನಿಸಿ ಬರೆದ ‘ಹೊಲೆ ಮಾದಿಗರ ಹಾಡು’ ಮಾನವ ಜನಾಂಗದ ಹಾಡಾಗಿದೆ. ಕವಿ ಸಿದ್ದಲಿಂಗಯ್ಯನವರ ಸಹನೆ, ವಿನಯ ಕಗ್ಗಲ್ಲನ್ನೂ ಕರಗಿಸುವಂತಹದ್ದು. ಮನುಷ್ಯರನ್ನು ಕರಗಿಸುವುದಿಲ್ಲವೆ? ಬದುಕನ್ನು ಅಪಾರವಾಗಿ ಪ್ರೀತಿಸಿದ ಕವಿ, ಇನ್ನೊಬ್ಬರಿಗೆ ಕಿಂಚಿತ್ತೂ ನೋವುಂಟು ಮಾಡಲಿಲ್ಲ ಬದಲಾಗಿ ತಾವೇ ನೋವುಂಡವರು, ಈ ಹಿನ್ನೆಲೆಯಲ್ಲಿಯೇ ಕವಿಗಳ ಪ್ರೀತಿಯ ಗೆಳೆಯ ಡಿ.ಆರ್. ನಾಗರಾಜ್ ಹೇಳಿದ್ದು ‘ಬಡವರ ನೋವಿನ ಶಕ್ತಿ’ ಎಂದು. ಕುವೆಂಪು ‘ನಾನೇರುವ ಎತ್ತರಕ್ಕೆ ಏರಬಲ್ಲಿರ’ ಎಂದು ಹೇಳಿದ ಕವಿಗಳು ‘ನಾನಿಳಿಯುವ ಆಳಕ್ಕೆ ಇಳಿಯಬಲ್ಲಿರ’ ಎಂದು ಹೇಳಿದ ಮಾತುಗಳನ್ನು ಈ ಸಮಾಜ ಕೇಳಿಸಿಕೊಳ್ಳಬೇಕಿದೆ ಎಂಬುದು ನನ್ನ ವಿನಮ್ರ ವಿನಂತಿ, ಈ ವಿನಂತಿ ಏಕೆಂದರೆ, ನಾವು ಸಹನೆಯ ಕುಲದವರು. ಈ ಸಹನೆಯ ಪಾಠವನ್ನು ಕಲಿತಿದ್ದು ಬಾಬಾಸಾಹೇಬರ ಚೌಧಾರ್ ಕೆರೆಯ ಘಟನೆಯಿಂದ, ದೇವನೂರ ಮಹಾದೇವರ ನಡೆನುಡಿಯಿಂದ, ಬಿ. ಕೃಷ್ಣಪ್ಪನವರು ಹಚ್ಚಿದ ಪುಟ್ಟ ಹಣತೆಯ ದೀಪದ ಬೆಳಕಿನಿಂದ ಸಿದ್ದಲಿಂಗಯ್ಯನವರ ವಿನಯ್ - ನಮ್ರತೆಯಿಂದ. ದೇವನೂರ ಮಹಾದೇವ ಅವರನ್ನು ಸಂದರ್ಶಕರೊಬ್ಬರು ‘ನಿಮಗೆ ಏನಾಗಬೇಕು ಎನಿಸುತ್ತದೆ ’ ಎಂದು ಕೇಳಿದಾಗ, ದೇವನೂರರು ‘ನನಗೆ ನನ್ನ ಮಗಳಾಗಬೇಕು ಎನಿಸುತ್ತದೆ’ ಎಂದು ಹೇಳುತ್ತಾರೆ. ಕವಿ ಸಿದ್ದಲಿಂಗಯ್ಯನವರಿಗೆ ಈ ಪ್ರಶ್ನೆಯನ್ನು ಕೇಳಿದ್ದರೆ, ಅವರು ‘ನನಗೆ ನನ್ನ ತಾಯಿ ಆಗಬೇಕು ಎನಿಸುತ್ತದೆ’ ಎಂದು ಹೇಳುತ್ತಿದ್ದರು. ಈ ಇಬ್ಬರೂ ಸಹ ಹೆಣ್ಣಾಗುವ ಸಮಸಮಾಜದ ಕಣ್ಣಾಗುವ ಹಣತೆಯನ್ನು ಬೆಳಗುವ ಕನಸು ಕಂಡವರು. ಭೀಮಾ ಸಾಹೇಬರು ಕೂಡ ಹೆಣ್ಣು ಮಕ್ಕಳಿಗೆ ಸಿಗಬೇಕಾದ ಪಾಲು ಸಿಗದ ಕಾರಣಕ್ಕಾಗಿ ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟು ಹೊರಗೆ ಬಂದಿದ್ದರು.

ಕವಿಗಳ ಜೊತೆ ನಾನು ಬುದ್ಧಗಯಾಕ್ಕೆ ಹೋಗಿದ್ದೆ. ನಾವು ಅಲ್ಲಿ ಮೂರು ದಿನ ಇದ್ದೆವು. ಅ ಮೂರು ದಿನ ಕವಿಗಳು ಕೆಲವು ಸಮಯ ಬೋಧಿವೃಕ್ಷದ ಕೆಳಗೆ ಕುಳಿತು ಧ್ಯಾನ ಮಾಡುತ್ತಿದ್ದರು. ನಾನು ಸಹ ಒಂದು ದಿನ ಕವಿಗಳ ಜೊತೆ ಧ್ಯಾನ ಮಾಡುತ್ತಿದ್ದೆ. ಕಣ್ಣು ಬಿಟ್ಟು ನೋಡಿದಾಗ ಅಲ್ಲಿಗೆ ಬಂದಿದ್ದ ಪ್ರವಾಸಿಗರು ಬೋಧಿವೃಕ್ಷದ ಎಲೆಗಳನ್ನು ಆಯ್ದುಕೊಳ್ಳುತ್ತಿದ್ದರು. ನಾನು ಸಹ ಒಂದಷ್ಟು ಎಲೆಗಳನ್ನು ಆಯ್ದುಕೊಂಡು ಧ್ಯಾನಕ್ಕೆ ಕುಳಿತೆ. ಧ್ಯಾನಸ್ಥರಾಗಿದ್ದ ಕವಿಗಳು ಕಣ್ಣು ತೆರೆದು ಅವರು ಸಹ ಮೂರ್ನಾಲ್ಕು ಬೋಧಿವೃಕ್ಷದ ಎಲೆಗಳನ್ನು ಆಯ್ದು ಕೊಂಡರು. ನಾನು ಅವರಿಗೆ ನನ್ನ ಬಳಿ ಇದ್ದ ಕೆಲವು ಎಲೆಗಳನ್ನು ಕೊಟ್ಟೆ. ಅವುಗಳನ್ನು ಪಡೆದುಕೊಂಡ ಕವಿಗಳು ಮತ್ತೆ ಧ್ಯಾನಸ್ಥರಾದರು. ಸ್ವಲ್ಪ ಸಮಯದ ನಂತರ ಕಣ್ಣು ತೆರೆದ ಕವಿಗಳು ತಮ್ಮ ಕೈಯಲ್ಲಿದ್ದ ಬೋಧಿವೃಕ್ಷದ ಎಲೆಗಳನ್ನು ಅಲ್ಲಿಯೇ ಬಿಟ್ಟು ನಡೆದು ಬಂದರು. ಇದನ್ನು ನೋಡಿದ ನನಗೆ, ಬುದ್ಧ ಗುರು ಹೇಳಿದಂತೆ ‘ಆಸೆ ದುಃಖಕ್ಕೆ ಕಾರಣ’ ಎಂಬ ಮಾತಿನಂತೆ, ಬುದ್ಧಗಯಾಕ್ಕೆ ಬಂದು ಆಸೆಯನ್ನು ಬಿಡದಿದ್ದರೆ ಹೇಗೆ ಎಂಬುದು ಕವಿಗಳಿಗೆ ಅರ್ಥವಾಗಿ, ಆ ಎಲೆಗಳ ಆಸೆಯನ್ನು ಬಿಟ್ಟು ಅವುಗಳನ್ನು ಅಲ್ಲಿಯೆ ಇಟ್ಟು ಹೋದರೇನೊ ಎನಿಸಿತು. ಆ ಕ್ಷಣದಲ್ಲಿ ಕವಿಗಳು ನನಗೆ, ಬುದ್ಧನ ಅರಿವನ್ನು ಪಡೆದವರಂತೆ, ಎನ್ಲೈಟ್ಮೆಂಟನ್ನು ಪಡೆದುಕೊಂಡವರಂತೆ ಕಂಡರು. ಆನಂದ ಬುದ್ಧನ ಶಿಷ್ಯನಾಗಿದ್ದಂತೆ, ನಾನು ಆ ಸಂದರ್ಭದಲ್ಲಿ ಕವಿಗಳ ಶಿಷ್ಯನಾಗಿದೆ ಎಂದು ಭಾವಿಸಿಕೊಂಡೆ.

ನಾನು ಆರಂಭದಲ್ಲಿ ಅಕ್ಕಮಹಾದೇವಿಯ ವಚನವನ್ನು ಹೇಳಿದ ಹಾಗೆ, ಹೆಣ್ಣು ಮತ್ತು ಅಶ್ಪಶ್ಯರು ಈ ನಾಡಿನಲ್ಲಿ ಅಪಾರವಾಗಿ ನೋವಿಗೆ ಒಳಪಟ್ಟವರು. ಇವರ ಒಳಿತಿಗಾಗಿ ನಾವೆಲ್ಲರೂ ದುಡಿಯೋಣ, ಕವಿಗಳು ಹೇಳಿದ ಹಾಗೆ ‘ಜಗದ ಗೊಂದಲ ಬೇಡ ನಮಗೆ, ಎದೆಯ ಹಾಡು ನೀಡು ನಮಗೆ’ ಎಂಬ ಸಾಲಿನ ಮೂಲಕ ಕವಿಗಳನ್ನು ನೆನೆಯುತ್ತ ‘ಪ್ರೀತಿಯಿಲ್ಲದ ಮೇಲೆ ಹೂವು ಅರಳೀತು ಹೇಗೆ’ ಎಂಬ ಕವಿಯೊಬ್ಬರ ಸಾಲನ್ನು ಹಾಗೂ ಬುದ್ಧ ಗುರುಗಳು ಹೇಳಿದ ‘ಸದಾ ಎಚ್ಚರವಾಗಿರು ಎಲ್ಲಾ ತಿಳಿಯುತ್ತದೆ ’ ಎಂಬ ಮಾತನ್ನು ಮರೆಯದಿರೋಣ.

‘ಸಹನೆಯಿಂದ ಸಾಮರಸ್ಯದ ಕಡೆಗೆ’ ನಾವು ಚಲಿಸಬೇಕಿದೆ. ನಾವು ನೋವುಂಡವರು, ಗಾಯಗೊಂಡವರು, ಕೊಲ್ಲಲ್ಪಟ್ಟವರು. ಆದರೂ ನಮ್ಮ ನಗುವಿನ ಶಕ್ತಿ ಕಡಿಮೆಯಾಗಲಿಲ್ಲ. ನಮ್ಮ ಸಹನೆಯ ಶಕ್ತಿಯನ್ನು ಅಲುಗಾಡಿಸಲಿಕ್ಕೆ ಆಗಲಿಲ್ಲ. ಇದೇ ನಮ್ಮ ದಮ್ಮ ಸಿದ್ದಲಿಂಗಯ್ಯನವರು ಕೇವಲ ಒಂದು ಜನಾಂಗದ ಕಣ್ಣು ತೆರೆಸಿದ ಕವಿ ಮಾತ್ರವಲ್ಲ: ಒಂದು ನಾಡಿನ, ಸಮಾಜದ ಕಣ್ಣು - ಮನಸ್ಸನ್ನು ತೆರೆಸಿ, ಮಹಾಕವಿ, ಇಂತಹ ಕವಿಗೆ ಸಾವಿಲ್ಲ. ಸಿದ್ದಲಿಂಗಯ್ಯ ಹನ್ನೆರಡನೇ ಶತಮಾನದ ವಚನಕಾರರ ಆಶಯವನ್ನು ಮುಂದುವರಿಸಿದ ಕವಿ, ಕವಿ ಸಿದ್ದಲಿಂಗಯ್ಯನವರ ಬದುಕು - ಬರಹವನ್ನು ಅರ್ಥಮಾಡಿಕೊಂಡರೆ, ಇನ್ನಷ್ಟು ಈ ಸಮಾಜದ ತರತಮ ಸುಧಾರಿಸುತ್ತದೆ. ಕವಿಗಳ ಹೇಳಿದಂತೆ ‘‘ಎಲ್ಲರ ಬಿಡುಗಡೆಯಲ್ಲಿ ದಲಿತರ ಬಿಡುಗಡೆ ಇದೆ’’.

‘ಹೊಲೆ ಮಾದಿಗರ ಹಾಡು’ ಶೀರ್ಷಿಕೆ ಹೊರ ನೋಟಕ್ಕೆ ಒಂದು ಜನಾಂಗದ ಮಿತಿಗೆ ಒಳಪಟ್ಟಿದೆ ಎಂದು ಭಾವಿಸಲಾಗುತ್ತದೆ. ಆದರೆ, ಒಬ್ಬ ತಾಯಿ ಮಗುವನ್ನು ತನ್ನ ಮಡಿಲಿನಲ್ಲಿ ಇಟ್ಟು ಪೊರೆಯುವಂತೆ ಈ ಅಶ್ಪಶ್ಯ ಜನಾಂಗ ಇಡೀ ಸಮಾಜವನ್ನು ಸಾಕಿದೆ ಎಂಬುದನ್ನು ಅರ್ಥಮಾಡಿಕೊಂಡವರಿಗೆ : ‘ಹೊಲೆ ಮಾದಿಗರ ಹಾಡು’ ಕಾವ್ಯ, ಮಾನವೀಯ ಕಾವ್ಯ ಹಾಗೂ ಮನುಷ್ಯತ್ವಕ್ಕಾಗಿ ಬರೆದ ಕಾವ್ಯ ಎಂಬುದು ತಿಳಿಯುತ್ತದೆ. ಕನ್ನಡದ ಲಕ್ಷಾಂತರ ಜನರನ್ನು ಸಿದ್ದಲಿಂಗಯ್ಯನವರ ಕಾವ್ಯ ಪ್ರಭಾವಿಸಿದಂತೆ, ಬೇರೊಬ್ಬರ ಕಾವ್ಯ ಪ್ರಭಾವಿಸಿದ್ದನ್ನು ನಾನು ಕಾಣೆ. ಕುವೆಂಪು ಅವರ ವೈಚಾರಿಕತೆಯನ್ನು, ಬೇಂದ್ರೆಯವರ ಲಯವನ್ನು, ಕಂಬಾರರ ಜಾನಪದ ಶೈಲಿಯನ್ನು ಹಾಗೂ ಅಶ್ಪಶ್ಯರ ಸಂಕಟವನ್ನು ತನ್ನೆದೆಗೆ ಆಹ್ವಾನಿಸಿಕೊಂಡು, ಅರಗಿಸಿಕೊಂಡು ಧ್ಯಾನಿಸಿ ಬರೆದ ‘ಹೊಲೆ ಮಾದಿಗರ ಹಾಡು’ ಮಾನವ ಜನಾಂಗದ ಹಾಡಾಗಿದೆ.

‘ಸಹನೆಯಿಂದ ಸಾಮರಸ್ಯದ ಕಡೆಗೆ’ ನಾವು ಚಲಿಸಬೇಕಿದೆ. ನಾವು ನೋವುಂಡವರು, ಗಾಯಗೊಂಡವರು, ಕೊಲ್ಲಲ್ಪಟ್ಟವರು. ಆದರೂ ನಮ್ಮ ನಗುವಿನ ಶಕ್ತಿ ಕಡಿಮೆಯಾಗಲಿಲ್ಲ. ನಮ್ಮ ಸಹನೆಯ ಶಕ್ತಿಯನ್ನು ಅಲುಗಾಡಿಸಲಿಕ್ಕೆ ಆಗಲಿಲ್ಲ. ಇದೇ ನಮ್ಮ ದಮ್ಮ ಸಿದ್ದಲಿಂಗಯ್ಯನವರು ಕೇವಲ ಒಂದು ಜನಾಂಗದ ಕಣ್ಣು ತೆರೆಸಿದ ಕವಿ ಮಾತ್ರವಲ್ಲ: ಒಂದು ನಾಡಿನ, ಸಮಾಜದ ಕಣ್ಣು - ಮನಸ್ಸನ್ನು ತೆರೆಸಿದ, ಮಹಾಕವಿ. ಇಂತಹ ಕವಿಗೆ ಸಾವಿಲ್ಲ. ಸಿದ್ದಲಿಂಗಯ್ಯ ಹನ್ನೆರಡನೇ ಶತಮಾನದ ವಚನಕಾರರ ಆಶಯವನ್ನು ಮುಂದುವರಿಸಿದ ಕವಿ. ಕವಿ ಸಿದ್ದಲಿಂಗಯ್ಯನವರ ಬದುಕು - ಬರಹವನ್ನು ಅರ್ಥಮಾಡಿಕೊಂಡರೆ, ಇನ್ನಷ್ಟು ಈ ಸಮಾಜದ ತರತಮ ಸುಧಾರಿಸುತ್ತದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top