ಮಾಡರ್ನ್ ಆರ್ಟ್ ಅರ್ಥ ಆಗೋದಿಲ್ಲ ಏಕೆ?
-

ಜಗತ್ತಿನ ಆಗು ಹೋಗುಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಾ ಪ್ರತಿಕ್ರಿಯಿಸುತ್ತಿರುವ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ವಿವಿಧ ಸಂಸ್ಥೆಗಳಲ್ಲಿ ಅವರು ಪತ್ರಕರ್ತರಾಗಿ ದುಡಿದವರು. 2001ರ ವೇಳೆಗೆ ದೇಶದಲ್ಲಿ ಗ್ಲೋಬಲೈಸೇಷನ್ ಚಟುವಟಿಕೆಗಳು ಆರಂಭಗೊಂಡಾಗ, ಅನುವಾದಕನಾಗಿ ಫ್ರೀಲ್ಯಾನ್ಸ್ ವೃತ್ತಿ ಆರಂಭಿಸಿದರು. ಮುಂದೆ 2007ರಲ್ಲಿ ತಲ್ಲೂರ್ಸ್ ಇನ್ಫೋವ್ಯಾಲಿಡೇಷನ್ಸ್ ಪ್ರೈ.ಲಿ ಎಂಬ ಏಶ್ಯನ್ ಭಾಷಾ ಸೇವೆಗಳ ಸಂಸ್ಥೆ ಆರಂಭಿಸಿದರು. ಕಳೆದ 15 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಈ ಸಂಸ್ಥೆ 2011ರಿಂದಲೂ ISಔ ಪ್ರಾಮಾಣಿತವಾಗಿದೆ. ಇವರ ಪ್ರಕಟಿತ ಕೃತಿಗಳು: ‘ನುಣ್ಣನ್ನ ಬೆಟ್ಟ’ (2017), ‘ತಲ್ಲೂರು ಎಲ್ ಎನ್’(2018), ‘ಏನಿದು ಪೌರತ್ವ ಕಾಯ್ದೆ’ (2019), ‘ದುಪ್ಪಟ್ಟು’ (2020), ‘ಕರಿಡಬ್ಬಿ’ (2022). ತಮ್ಮ ಸಾಧನೆಗಾಗಿ ಅಮ್ಮ ಪ್ರಶಸ್ತಿ(2017), ಶಿವರಾಮ ಕಾರಂತ ಪುರಸ್ಕಾರ-2019 (2020)ಗಳಿಗೆ ಭಾಜನರಾಗಿದ್ದಾರೆ.
ರಾಜಾರಾಂ ತಲ್ಲೂರು
‘‘ಮಾಡರ್ನ್ ಆರ್ಟ್ ಅರ್ಥ ಆಗೋದಿಲ್ಲ; ಅದು ಇರೋದೇ ಹಂಗೆ.’’
‘‘ಮಾಡರ್ನ್ ಆರ್ಟ್ ಅರ್ಥ ಮಾಡ್ಕೊಳ್ಳೋಕೆ ಸ್ವಲ್ಪ ತರಬೇತಿ ಬೇಕು, ಅದು ಸುಲಭಕ್ಕೆ ದಕ್ಕುವಂತಹದಲ್ಲ’’
ಇಲ್ಲಿ ಮೊದಲಿನ ವಾಕ್ಯ ಭಾರತೀಯ ಕಲೆಯ ಬಹುತೇಕ ನೋಡುಗರ ಸಾಮಾನ್ಯ ಅಭಿಪ್ರಾಯವಾದರೆ, ಎರಡನೇಯದು ಹಲವು ಮಂದಿ ಮಾಡರ್ನ್ ಆರ್ಟ್ ಕಲಾವಿದರ ಅಭಿಪ್ರಾಯ. ಇವೆರಡರದೂ ಅರ್ಥ ಒಂದೇ. ಅದೇನೆಂದರೆ, ಭಾರತದಲ್ಲಿ ಮಾಡರ್ನ್ ಆರ್ಟ್ ಎಂಬುದು ಕಬ್ಬಿಣದ ಕಡಲೆ. ಮಾಡರ್ನ್ ಆರ್ಟ್ ಕಬ್ಬಿಣದ ಕಡಲೆ ಆಗಲು ಚಾರಿತ್ರಿಕ ಕಾರಣಗಳೇನಿರಬಹುದು ಎಂಬುದರತ್ತ ಒಂದು ಸ್ಥೂಲ ನೋಟ ಇದು.
ಇಲ್ಲಿ ಮಾಡರ್ನ್ ಆರ್ಟ್ ಎಂಬ ಪದದ ಅರ್ಥ- ‘ಸಮಕಾಲೀನ ಕಲೆ’ ಎಂದು. ಮಾಡರ್ನ್ ಆರ್ಟ್ ಎಂಬುದು ಅದಕ್ಕೆ ಆಡುಬಳಕೆಯ ಪದ ಆಗಿರುವುದರಿಂದ ಅದನ್ನೇ ಇಲ್ಲಿ ಬಳಸಲಾಗಿದೆ. ನಿಜಕ್ಕೆಂದರೆ, ಮಾಡರ್ನ್ ಆರ್ಟ್ ಎಂಬುದು ಈಗ ಇತಿಹಾಸ. 1860-1970 ನಡುವಿನ ಅವಧಿ. ಕಲಾಜಗತ್ತು ಅಲ್ಲಿಂದ ಬಹಳ ಮುಂದೆ ಬಂದುಬಿಟ್ಟಿದೆ.
*** *** *** *** ***
ಭಾರತೀಯ ಕಲಾಚರಿತ್ರೆಯ ಬಗ್ಗೆ ಸ್ವಲ್ಪ ತಿಳಿಯುವ ಮೂಲಕ ಈ ಪ್ರಯಾಣವನ್ನು ಆರಂಭಿಸುವ.
ಭಾರತದಲ್ಲಿ ಚಿತ್ರಕಲೆಗೆ ಸುದೀರ್ಘವಾದ ಇತಿಹಾಸ ಇದೆ. ಭೂಮಿಯ ಮೇಲೆ ಮನುಷ್ಯ ಜೀವಿಯು ಸಮೂಹವಾಗಿ ಬದುಕಲು ಆರಂಭಿಸಿದಂದಿನಿಂದ ಇಂದಿನ ತನಕವೂ ಕಲೆ ಭಾರತದಲ್ಲಿ ಮನುಷ್ಯನ ಬದುಕಿನ ಭಾಗವಾಗಿದೆ. ಗುಹೆಗಳಲ್ಲಿ ಆದಿ ಮಾನವ ಬರೆದ ಚಿತ್ರಗಳು, ಸಿಂಧೂ ಕಣಿವೆಯಲ್ಲಿ ದೊರೆತ ಚಿತ್ರಗಳು-ಶಿಲ್ಪಗಳಿಂದ ಮೊದಲ್ಗೊಂಡು ಮುಂದೆ ಮೌರ್ಯರು, ಶುಂಗರು, ಶಾತವಾಹನರು, ಕುಶಾಣರು, ಗುಪ್ತರು, ಚಂದೇಲರು, ಹೊಯ್ಸಳರು, ಚಾಲುಕ್ಯರು, ಪಾಲರ ಕಾಲದ ಚಿತ್ರಗಳು, ಶಿಲ್ಪಗಳು, ವಾಸ್ತುಶಿಲ್ಪಗಳು? ಹೀಗೆ ಸುದೀರ್ಘವಾದ ಚರಿತ್ರೆ ಭಾರತೀಯ ಕಲೆಗೆ ಇದೆ. ಆ ಬಳಿಕ ಬೌದ್ಧರು, ಮೊಘಲರು, ಬ್ರಿಟಿಷರು... ಹೀಗೆ ಪರಕೀಯ ಆಡಳಿತದ ಕಾಲದಲ್ಲೂ ಭಾರತೀಯ ಕಲಾಜಗತ್ತು ಪರ್ಷಿಯಾ, ಯುರೋಪ್ ಮತ್ತಿತರ ಹಲವು ಕಲಾ ಜಗತ್ತುಗಳ ಪ್ರಭಾವಕ್ಕೆ ಒಳಗಾಗುತ್ತಾ ಬಂದಿದೆ.
ಭಾರತಕ್ಕೆ ಸಂಬಂಧಿಸಿದಂತೆ, ಬ್ರಿಟಿಷ್ ಕಾಲದಿಂದೀಚೆಗೆ ಭಾರತೀಯ ಕಲಾಚರಿತ್ರೆಯಲ್ಲಿ ಏನೇನು ಬದಲಾವಣೆಗಳಾಗಿವೆ ಎಂಬುದನ್ನು ಗಮನಿಸಿದರೆ, ಈವತ್ತಿನ ಸಮಕಾಲೀನ ಭಾರತೀಯ ಕಲಾ ಜಗತ್ತಿನ ಒಂದು ಸ್ಪಷ್ಟವಾದ ಚಿತ್ರಣ ಸಿಗುತ್ತದೆ.
ಬಂಗಾಳ/ಮದರಾಸ್ ಕಲಾ ಚಳವಳಿ
ಭಾರತವನ್ನು ಒಗ್ಗೂಡಿಸಿ ಒಂದು ದೇಶವನ್ನಾಗಿ ಆಳಲಾರಂಭಿಸಿದ ಬ್ರಿಟಿಷರು ಇಲ್ಲಿ 1850ರ ಹೊತ್ತಿಗೆ, ಮದರಾಸಿನಲ್ಲಿ ಮೊದಲ ಕಲಾಶಾಲೆಯನ್ನು ತೆರೆದರು. ಭಾರತದಲ್ಲಿ ಕಲೆಯ ಅಕಾಡಮಿಕ್ ಕಲಿಕೆ ಆರಂಭ ಆದದ್ದು ಹಾಗೆ. ಇಂತಹ ಶಾಲೆಗಳು ಕ್ರಮೇಣ ದೇಶದ ಪ್ರಮುಖ
ನಗರಗಳಲ್ಲಿ ಆರಂಭಗೊಂಡವು. ಮುಂದೆ ಬಂಗಾಳದ ಅವನೀಂದ್ರನಾಥ ಠಾಗೋರರ ಶಿಷ್ಯ ದೇವೀಪ್ರಸಾದ್ ರಾಯ್ ಚೌಧರಿ ಮದರಾಸು ಕಲಾಶಾಲೆಯ ಮುಖ್ಯಸ್ಥರಾದರು. ಅಲ್ಲಿನ ತರಬೇತಿಗಳ ಫಲವಾಗಿ, ಯುರೋಪಿಯನ್, ಮುಘಲ್ ಮತ್ತು ಇತರ ಭಾರತೀಯ ಶೈಲಿಗಳ ಹದವಾದ ಮಿಶ್ರಣವನ್ನೊಳಗೊಂಡ ಕಲಾಕೃತಿಗಳು ರಚನೆಗೊಳ್ಳತೊಡಗಿದವು. ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ ರಾಜಾ ರವಿವರ್ಮ ಅವರ ತೈಲವರ್ಣಚಿತ್ರಗಳು.
ಸುಮಾರಿಗೆ ಅದೇ ಅವಧಿಯ ಹೊತ್ತಿಗೆ, ಬಂಗಾಳದಲ್ಲಿ ಶಾಂತಿನಿಕೇತನದಿಂದಲೂ ಭಾರತೀಯ ಶೈಲಿಯ ಕಲಾಕೃತಿಗಳು ಮೂಡಿಬರತೊಡಗಿದವು. ಸ್ವಾತಂತ್ರ್ಯ ಹೋರಾಟದ ಮತ್ತು ಸ್ವದೇಶಿ ಕಲ್ಪನೆಯ ಹಿನ್ನೆಲೆಯಲ್ಲಿ ಹುಟ್ಟಿದ ಈ ಕಲಾ ಚಳವಳಿಯ ರೂವಾರಿ ಅವನೀಂದ್ರನಾಥ ಠಾಗೋರರು. ಸ್ವಾತಂತ್ರ್ಯ ಹೋರಾಟದ ಕಲ್ಪನೆ ತಿದಿಯೊತ್ತಿಸಿಕೊಳ್ಳುತ್ತಾ ಹೋದಂತೆಲ್ಲ ನಂದಲಾಲ್ ಬೋಸ್, ಎಂ.ಎ.ಆರ್. ಚುಗ್ತಾಯ್, ಗಗನೇಂದ್ರನಾಥ ಠಾಗೋರ್, ರವೀಂದ್ರನಾಥ ಠಾಗೋರ್ ಮೊದಲಾದವರು ಯುರೋಪಿನ ಅಂದಿನ ರೊಮ್ಯಾಂಟಿಕ್ ಶೈಲಿಯಿಂದ ಹೊರಬಂದು ಪ್ರಯೋಗಶೀಲರಾಗಿ, ಭಾರತೀಯ ಶೈಲಿಯ ಬೇರುಗಳ ಹುಡುಕಾಟದಲ್ಲಿ ತೊಡಗಿಕೊಂಡರು. ಇಂತಹ ಪ್ರಯೋಗಗಳ ಮುಂಗೋಳಿಯಾಗಿದ್ದ ಅವನೀಂದ್ರನಾಥ ಠಾಗೋರರನ್ನು (1871-1951) ಭಾರತದಲ್ಲಿ ‘ಮಾಡರ್ನ್ ಆರ್ಟ್ನ ಪಿತಾಮಹ’ ಎಂದು ಗುರುತಿಸಲಾಗುತ್ತದೆ. ಸ್ವಾತಂತ್ರ್ಯದ ಆಸುಪಾಸಿನಲ್ಲಿ, ಕೆ.ಸಿ.ಎಸ್. ಫಣಿಕ್ಕರ್ ಅವರು ಮದ್ರಾಸ್ ಕಲಾ ಚಳವಳಿಯ ಹರಿಕಾರರಾಗಿ, ಪ್ರೋಗ್ರೆಸಿವ್ ಪೇಂಟರ್ಸ್ ಅಸೋಶಿಯೇಷನ್ (PPಂ) ಸ್ಥಾಪಿಸಿದರು (1941). ಈ ಅವಧಿ ಭಾರತೀಯ ಕಲೆಯ ನವೋದಯ ಕಾಲ.
ಬಾಂಬೆ ಮತ್ತು ಬರೋಡಾ ಕಲಾ ಚಳವಳಿಗಳು
ಭಾರತ ಸ್ವತಂತ್ರಗೊಂಡ ಬಳಿಕ, ಎರಡು ಮಹತ್ವದ ಬೆಳವಣಿಗೆಗಳು ಕಲಾ ಜಗತ್ತಿನಲ್ಲಿ ನಡೆದವು. ಆ ಹೊತ್ತಿಗೆ ಭಾರತದಲ್ಲಿ ಚಾಲ್ತಿ ಇದ್ದ ಬಂಗಾಳ ಮತ್ತು ಮದರಾಸುಗಳನ್ನು ತವರಾಗಿ ಹೊಂದಿದ್ದ ಕಲಾ ಚಳವಳಿಗಳಿಗಿಂತ ಭಿನ್ನವಾದ ಹೊಸದೊಂದು ಕಲಾ ಚಳವಳಿ ಮುನ್ನೆಲೆಗೆ ಬಂತು. ಸ್ವಾತಂತ್ರ್ಯ ಹೋರಾಟದ ಅವಧಿಯುದ್ದಕ್ಕೂ ಯುರೋಪಿನ ಸಮಕಾಲೀನ ಬೆಳವಣಿಗೆಗಳಿಂದ ದೂರವೇ ಉಳಿದಿದ್ದ ಭಾರತೀಯ ಕಲಾಜಗತ್ತು, ಏಕಾಏಕಿ ಅಲ್ಲಿನ ಬೆಳವಣಿಗೆಗಳಿಗೆ ತೆರೆದುಕೊಂಡಿತು. ಸಯ್ಯದ್ ಹೈದರ್ ರಝಾ, ಕೃಷ್ಣಾಜಿ ಹೌಲಾಜಿ ಅರಾ, ಸದಾನಂದ ಕೆ. ಭಾಕ್ರೆ, ಹರಿ ಅಂಬಾದಾಸ್ ಗಾಢೆ, ಮಕ್ಬೂಲ್ ಫಿದಾ ಹುಸೇನ್ ಮತ್ತು ಫ್ರಾನ್ಸಿಸ್ ನ್ಯೂಟನ್ ಸೋಜಾ ಎಂಬ ಆರು ಮಂದಿ ಕಲಾವಿದರು, 1952ರಲ್ಲಿ ಬಾಂಬೆ ಪ್ರೋಗ್ರೆಸಿವ್ ಆರ್ಟಿಸ್ಟ್ಟ್ಸ್
ಗ್ರೂಪ್ (ಆಅ) ಸ್ಥಾಪಿಸುವ ಮೂಲಕ, ಭಾರತದಲ್ಲಿ ಮಾಡರ್ನ್ ಆರ್ಟ್ಸ್ನ ವ್ಯಾಖ್ಯಾನವನ್ನೇ ಬದಲಾಯಿಸಿದರು. ಅಂದಿನ ಸಮಕಾಲೀನ ಯುರೋಪಿಯನ್ ಸಾಮಾಜಿಕ-ರಾಜಕೀಯ ಪಲ್ಲಟಗಳು ಮತ್ತು ಅದಕ್ಕೆ ಅಲ್ಲಿನ ಕಲಾಜಗತ್ತಿನ ಪ್ರತಿಕ್ರಿಯೆಗಳಿಂದ ಪ್ರೇರಣೆ ಪಡೆದು ಏಕಾಏಕಿ ರೂಪುಗೊಂಡ ದಿಢೀರ್ ಬದಲಾವಣೆ ಆಗಿತ್ತದು.
ಅದೇ ಸಮಯದಲ್ಲಿ ಸಂಭವಿಸಿದ ಇನ್ನೊಂದು ಬೆಳವಣಿಗೆ ಎಂದರೆ, ಬಂಗಾಳ ಕಲಾಚಳವಳಿಯಿಂದ ಒಂದಿಷ್ಟು ಮಂದಿ ಕಲಾವಿದರು ಭಾರತೀಯ ಜನಮೂಲದ ಕಲೆಗಳ ಸಾಧ್ಯತೆಗಳನ್ನರಸುತ್ತಾ ಬರೋಡಾಕ್ಕೆ ಬಂದು, ಅಲ್ಲಿ ಬರೋಡಾ ಕಲಾ ಚಳವಳಿಗೆ (1957) ನಾಂದಿ ಹಾಡಿದ್ದರು. ನಾರಾಯಣ್ ಶ್ರೀಧರ್ ಬೇಂದ್ರೆ, ಕೆ.ಜಿ. ಸುಬ್ರಹ್ಮಣ್ಯನ್, ಭುಪೇನ್ ಖಕ್ಕರ್, ಗುಲಾಂ ಮುಹಮ್ಮದ್ ಶೇಖ್, ಜ್ಯೋತಿ ಭಟ್ ಮತ್ತಿತರರು ಈ ಚಳವಳಿಯ ಹರಿಕಾರರು. ಇದು ಭಾರತೀಯ ಕಲಾ ಜಗತ್ತಿನ ನವ್ಯ ಕಾಲ.
ಯುರೋಪಿನಲ್ಲಿ ಏನಾಗಿತ್ತು?
ಯುರೋಪಿನಲ್ಲಿ 18-19ನೇ ಶತಮಾನದ ಕಲಾಚಳವಳಿಗಳ ಬೆಳವಣಿಗೆಗೆ ಒಂದು ಖಚಿತ ಹಾದಿ ಇದೆ. ಕಂಡದ್ದನ್ನು ಕಂಡಂತೆ ಚಿತ್ರಿಸುವ ಆರಂಭಿಕ ದಿನಗಳಿಂದ, ಕಂಡದ್ದನ್ನು ವಸ್ತುನಿಷ್ಠವಾಗಿ ಚಿತ್ರಿಸುವ ಬದಲಾವಣೆಯೊಂದಿಗೆ ರೊಮ್ಯಾಂಟಿಸಿಸಂ (1848-1900) ಆರಂಭಗೊಂಡಿತು. ವಿಜ್ಞಾನದ ಅರಿವು, ಪ್ರಕೃತಿಯ ಕುರಿತು ಬೆರಗು, ಹಳೆಯ ವೈಭವಗಳನ್ನು ಮೆಲುಕು ಹಾಕುವ ಈ ಹಾದಿ, ಆಗಷ್ಟೇ ಆರಂಭಗೊಂಡಿದ್ದ ಕೈಗಾರಿಕೀಕರಣಕ್ಕೆ ಸೃಜನಶೀಲ ಪ್ರತಿಕ್ರಿಯೆ ಆಗಿತ್ತು.
18 ನೇ ಶತಮಾನದ ಕೊನೆಯ ಭಾಗದಲ್ಲಿ, ಬಂದ ಇಂಪ್ರೆಷನಿಸಂ ಚಳವಳಿಯಲ್ಲಿ (1865-1885) ಸಾಮಾನ್ಯ ವಸ್ತುಗಳೂ ಕೂಡ ಕಲಾಕೃತಿಗಳಾಗತೊಡಗಿದವು, ವಿವರಗಳ ಬದಲು ದೃಶ್ಯ ಪರಿಣಾಮಗಳು ಮಹತ್ವ ಪಡೆಯತೊಡಗಿದವು.
ಹತ್ತೊಂಭತ್ತನೇ ಶತಮಾನದ ಅಂತ್ಯದ ವೇಳೆಗೆ ಕಲಾಕೃತಿಗಳಲ್ಲಿ ವಸ್ತುವನ್ನು ಭಾವನಾತ್ಮಕವಾಗಿ ಅಭಿವ್ಯಕ್ತಿಸುವ, ವಸ್ತುವಿಗಿಂತ ಅದರ ಮೂಡ್, ಐಡಿಯಾಗಳಿಗೆ ಹೆಚ್ಚಿನ ಆದ್ಯತೆ ಕೊಡುವ ಪ್ರಯತ್ನ ಆರಂಭಗೊಂಡಿತು. ಮೊದಲ ವಿಶ್ವ ಯುದ್ಧದ ಬಳಿಕ ತಲೆದೋರಿದ ಆತಂಕಗಳ ಸೃಜನಾತ್ಮಕ ಅಭಿವ್ಯಕ್ತಿಯು ಎಕ್ಸ್ಪ್ರೆಷನಿಸ್ಟ್ ಕಲಾಚಳವಳಿ (1905-1920) ಆಗಿ ಹೊರಹೊಮ್ಮಿತು. ಸಾಂಪ್ರದಾಯಿಕ ಸೌಂದರ್ಯದ ಜಾಗದಲ್ಲಿ ಫ್ಯಾಂಟಸಿ, ವಿರೂಪ, ಚಲನಶೀಲತೆಗಳು ಕಲಾಕೃತಿಗಳಲ್ಲಿ ಅಭಿವ್ಯಕ್ತಿಗೊಂಡವು.
ಕ್ಯೂಬಿಸಂ (1907-1914), ದಾದಾಯಿಸಂ (1916-1924), ಸರ್ರಿಯಲಿಸಂ (1924-1960), ಅಮೂರ್ತ ಎಕ್ಸ್ಪ್ರೆಷನಿಸಂ ಚಳವಳಿಗಳು (1943-1965) ಹಂತಹಂತ ವಾಗಿ, ಎರಡನೇ ಮಹಾಯುದ್ಧದ ಆಸುಪಾಸಿನ ಅವಧಿಗಳಲ್ಲಿ ಆದ ರಾಜಕೀಯ ಬೆಳವಣಿಗೆಗಳಿಗೆ ಸೃಜನಾತ್ಮಕ ಪ್ರತಿಕ್ರಿಯೆಗಳ ಭಾಗಗಳಾಗಿದ್ದವು. ಸಮಾಜವನ್ನು, ವ್ಯಕ್ತಿಗಳನ್ನು ನಿರಂಕುಶ ಪ್ರಭುತ್ವಗಳಡಿ ಬಂಧಿಸಿಡುವ ಪ್ರಯತ್ನಗಳು, ಜರ್ಮನಿಯಲ್ಲಿ ನಡೆದ ನಾಝಿ ನರಮೇಧ (ಹಾಲೋಕಾಸ್ಟ್) ಇವೆಲ್ಲವೂ ಕೂಡ ಕಲಾವಿದರ ಮೇಲೆ, ಸಮಾಜದ ಮೇಲೆ ಬೀರಿದ ಗಾಢ ಪರಿಣಾಮಗಳು ಸೃಜನಾತ್ಮಕ ಅಭಿವ್ಯಕ್ತಿಯಲ್ಲಿ ಕಾಣಿಸಿಕೊಂಡದ್ದರ ಫಲವೇ ಅಮೂರ್ತವಾದ ದೃಶ್ಯಭಾಷೆಯುಳ್ಳ ಕ್ಯೂಬಿಸಂ, ದಾದಾಯಿಸಂ, ಸರ್ರಿಯಲಿಸಂ ಕಲಾ ಚಳವಳಿಗಳು.
ಭಾರತದಲ್ಲಿ ಏನಾಯ್ತು?
ಭಾರತ ಎರಡನೇ ಮಹಾಯುದ್ಧದ ಆಸುಪಾಸಿನ ತನಕವೂ ಬ್ರಿಟಿಷ್ ಆಡಳಿತದ ಭಾಗವಾಗಿದ್ದುದರಿಂದ, ಇಲ್ಲಿ ಸೃಜನಶೀಲ ಮನಸ್ಸುಗಳ ಗಮನ ಸ್ವಾತಂತ್ರ್ಯದ ಹೋರಾಟದತ್ತಲೇ ಕೇಂದ್ರೀಕೃತವಾಗಿತ್ತು ಮತ್ತು ಜಾಗತಿಕ ಯುದ್ಧಗಳು ಭಾರತದೊಳಗೆ, ಸಾಮಾಜಿಕವಾಗಿ ದೊಡ್ಡ ಪರಿಣಾಮಗಳನ್ನು ಬೀರಿರಲಿಲ್ಲ. ಆಂತರಿಕ ಸಮಸ್ಯೆಗಳಲ್ಲಿ ಮೈಮರೆತಿದ್ದ ಭಾರತದ ಕಲಾಜಗತ್ತಿಗೆ, ಈ ಹೊತ್ತಿಗೆ ತಾನು ಬೆಳೆದು ಬಂದ ಹಾದಿಯ ಕುರಿತು ವಿಸ್ಮತಿ ಬೆಳೆದಿತ್ತು. ಹಾಗಾಗಿ ಮುಂದೆ ಸಾಗುವ ಹಾದಿ ಸ್ಪಷ್ಟವಿರಲಿಲ್ಲ. ಕಲಾಜಗತ್ತು ಒಂದು ರೀತಿಯಲ್ಲಿ ನಿಂತ ನೀರಾಗತೊಡಗಿತ್ತು. ಇದರ ಅರ್ಥ, ಭಾರತದಲ್ಲಿ ತಾನು ಬೆಳೆದುಬಂದ ಸಹಜ ಹಾದಿಯ ಹುಡುಕಾಟ ನಡೆದೇ ಇರಲಿಲ್ಲ ಎಂದಲ್ಲ. ಬಂಗಾಲ ಕಲಾ ಚಳವಳಿ ಈ ನಿಟ್ಟಿನಲ್ಲಿ ಸಣ್ಣಪುಟ್ಟ ಪ್ರಯತ್ನಗಳನ್ನು ಮಾಡಿದ್ದಿದೆ. ದೂರಪೂರ್ವದ ಜಪಾನಿಗೆ ಅವನೀಂದ್ರನಾಥರು ಹೋಗಿಬಂದದ್ದು ಇದೇ ಪ್ರಯತ್ನದ ಭಾಗ. ಅದೇ ರೀತಿ, ಅಮೃತಾ ಷೇರ್-ಗಿಲ್, ಜೆಮಿನಿ ರಾಯ್ ಮತ್ತಿತರ ಕೆಲವೇ ಕೆಲವರಿಗೆ ದೊರೆತ ಐರೋಪ್ಯ ಕಲಾ ಪ್ರಭಾವಗಳ ಕಾರಣದಿಂದಾಗಿ, ಬಂಗಾಳದ ನವೋದಯ ಕಾಲದ ಕಲಾಭಿವ್ಯಕ್ತಿಗಳಲ್ಲಿ ಸಣ್ಣ ಬದಲಾವಣೆಗಳು ಕಾಣಿಸಿಕೊಳ್ಳತೊಡಗಿದ್ದವು.
ಆದರೆ, 1947ರಲ್ಲಿ ಸ್ವಾತಂತ್ರ್ಯ ಸಿಕ್ಕ ಬಳಿಕ, ಸಂಕೋಲೆ ಕಳಚಿಕೊಂಡು ಜಗತ್ತಿಗೆ ತೆರೆದುಕೊಳ್ಳುವ ಉತ್ಸಾಹದಲ್ಲಿ ಹುಟ್ಟಿಕೊಂಡ ಬಾಂಬೇ ಕಲಾ ಚಳವಳಿಯ ಪ್ರೋಗ್ರೆಸಿವ್ ಆರ್ಟಿಸ್ಟ್ಸ್ ಗುಂಪು, ಏಕಾಏಕಿ ಸಮಕಾಲೀನ ಯುರೋಪಿನ ಕಲಾ ಚಳವಳಿಗಳಿಗೆ ತನ್ನನ್ನು ತೆರೆದುಕೊಂಡುಬಿಟ್ಟಿತು. ಯುರೋಪಿನಲ್ಲಿ ಕಾಲಕಾಲಕ್ಕೆ ಅಲ್ಲಿನ ಸಾಮಾಜಿಕ- ರಾಜಕೀಯ- ಜಾಗತಿಕ ಸನ್ನಿವೇಶಗಳಿಗೆ ಪ್ರತಿಕ್ರಿಯೆಯ ರೂಪದಲ್ಲಿ ಕಲಾಚಳವಳಿಗಳು ಹಂತಹಂತವಾಗಿ ಹುಟ್ಟಿಕೊಂಡರೆ, ಭಾರತದಲ್ಲಿ ಕಲಾಚಳವಳಿಯು ನವೋದಯದಿಂದ ನೇರವಾಗಿ ಎಕ್ಸ್ಪ್ರೆಷನಿಸ್ಟ್ ಮತ್ತು ಪೋಸ್ಟ್ ಇಂಪ್ರೆಷನಿಸ್ಟ್ ಕಲಾ ಚಳವಳಿಗಳಿಗೆ ಧುಮುಕಿ ಬಿಟ್ಟಿತು. ಅದರ ಹರಿಕಾರರಿಗೆ ತಾವೇನು ಮಾಡುತ್ತಿದ್ದೇವೆ ಎಂಬುದು ಸ್ಪಷ್ಟವಿತ್ತಾದರೂ, ಆ ಬಳಿಕ ಅವರನ್ನು ಅನುಸರಿಸಿ ಬಂದ ಭಾರತೀಯ ಕಲಾವಿದರು ತಮ್ಮ ಅನುಭವ ವ್ಯಾಪ್ತಿಯನ್ನು ದಾಟಿ ಕಲಾಕೃತಿಗಳ ರಚನೆಯಲ್ಲಿ ತೊಡಗಿಕೊಂಡರು ಮತ್ತು ಕಲಾಕೃತಿಗಳ ನೋಡುಗರು ಮಾಡರ್ನ್ ಆರ್ಟ್ ಎಂದರೆ ಯಾರಿಗೂ ಅರ್ಥವಾಗದ್ದು ಎಂಬ ತೀರ್ಮಾನಕ್ಕೆ ತಲುಪುವಲ್ಲಿ
ಮಹತ್ವದ ಕೊಡುಗೆಗಳನ್ನು ನೀಡಿದರು.
ಅರಾ, ರಝಾ, ಸೋಜಾ, ಬಾಕ್ರೆ, ಗಾಢೆ, ಹುಸೇನ್ ಮೊದಲಾದ ಮಹಾರಥಿಗಳ ಭರಾಟೆಯ
ನಡುವೆ, ಭಾರತೀಯ ಮೂಲದ ಕಲೆಯ ಹಾದಿಗಳ ಅನ್ವೇಷಣೆ ನಡೆಯಲೇ ಇಲ್ಲ ಎಂದಲ್ಲ. ಬರೋಡಾ ಕಲಾ ಚಳವಳಿಯನ್ನು ಕಟ್ಟಿದವರು ಜನಮೂಲದ, ಜೀವಂತ ಸಾಂಪ್ರದಾಯಿಕ ಕಲೆಗಳಲ್ಲಿ ಆಧುನಿಕತೆಯ ಸಾಧ್ಯತೆಗಳನ್ನು ಅರಸಿಕೊಂಡು ಹೊರಟರು. ಎನ್.ಎಸ್. ಬೇಂದ್ರೆ,
ಕೆ.ಜಿ. ಸುಬ್ರಹ್ಮಣ್ಯನ್, ಜೋಗೇನ್ ಚೌಧರಿ, ಭುಪೇನ್ ಖಕ್ಕರ್, ಗುಲಾಂ ಮುಹಮ್ಮದ್ ಶೇಖ್, ಜ್ಯೋತಿ ಭಟ್ ಮತ್ತಿತರರು ಈ ಅರಸಾಟದಲ್ಲಿ ಮಹತ್ವದ ಭೂಮಿಕೆ ವಹಿಸಿದ್ದರು. ಇನ್ನೊಂದೆಡೆ, ಮದರಾಸ್ ಕಲಾ ಚಳವಳಿಯ ಭಾಗವಾಗಿದ್ದ ಕೆ.ಸಿ.ಎಸ್. ಪಣಿಕ್ಕರ್ ಅವರು, 1944ರಲ್ಲಿ, ಪ್ರೋಗ್ರೆಸಿವ್ ಪೇಂಟರ್ಸ್ ಅಸೋಸಿಯೇಷನ್ (ಅ) ಅನ್ನು ಮದರಾಸಿನಲ್ಲಿ ಆರಂಭಿಸಿದರು ಮತ್ತು 1966ರಲ್ಲಿ ಚೋಳಮಂಡಲ ಆರ್ಟಿಸ್ಟ್ಸ್ ವಿಲೇಜ್ ಸ್ಥಾಪನೆಗೆ ಕಾರಣರಾದರು. ಭಾರತೀಯ ಮೂಲದ ಶೈವ, ಶಾಕ್ತ, ಬೌದ್ಧ ಪರಂಪರೆಗಳಲ್ಲಿರುವ ತಾಂತ್ರಿಕ್ ಮಂಡಲಗಳಿಂದ ಪ್ರೇರಿತರಾಗಿ, ‘‘ತಂತ್ರ ಕಲೆ’’ ಶೈಲಿಯನ್ನು ಅವರು ಆರಂಭಿಸಿದರು.
1985ರ ಸುಮಾರಿಗೆ, ಬರೋಡಾದಲ್ಲಿ ಸಕ್ರಿಯರಾಗಿದ್ದ ಕೇರಳ ಮೂಲದ ಕಲಾವಿದರು, ರಾಡಿಕಲ್ ಪೇಂಟರ್ಸ್ ಆ್ಯಂಡ್ ಸ್ಕಲ್ಟರ್ಸ್ ಅಸೋಸಿಯೇಷನ್ ಹೆಸರಲ್ಲಿ ಕಲಾಚಳವಳಿಗೆ ಹೊಸ ಹಾದಿಗಳನ್ನು ತೆರೆಯಲು ಪ್ರಯತ್ನಿಸಿದ್ದು ಕೂಡ ಭಾರತದ ಕಲಾ ಇತಿಹಾಸದಲ್ಲಿ ಮಹತ್ವದ ಹೆಜ್ಜೆ ಎಂದು ದಾಖಲಾಗಿದೆ. ಕೆ.ಪಿ. ಕೃಷ್ಣಕುಮಾರ್, ಕೆ. ಎಂ. ಮಧುಸೂದನನ್ ಮತ್ತಿತರರು ಈ ಬಳಗದ ಸದಸ್ಯರಾಗಿದ್ದರು.
ಈ ರೀತಿಯ ಪ್ರಯತ್ನಗಳು ಭಾರತದ ಕಲಾ ಸಂಪತ್ತಿನ ಸಾಗರದಿಂದ ಎತ್ತಿತಂದ ಮುತ್ತುಗಳಿಗೆ
ಶೋಕೇಸ್ಗಳಾದವೇ ಹೊರತು, ಆ ಪರಂಪರೆಯ ಸಹಜ ಮುಂದುವರಿಕೆ ಆಗಲಿಲ್ಲ. ಉಂಟಾದ ನಿರ್ವಾತ ಹಾಗೆಯೇ ಉಳಿಯಿತು.
ಯಾಕೆ ಮಾಡರ್ನ್ ಆರ್ಟ್ ಅರ್ಥ ಆಗೋದಿಲ್ಲ?
ಭಾರತದ ಆಧುನಿಕ ಕಲಾ ಜಗತ್ತಿನಲ್ಲಿ ಕೋಲ್ಕತಾ, ಮುಂಬೈ, ಬರೋಡಾ ಮತ್ತು ಮದರಾಸು ಮಹಾನಗರಗಳು ಕಲಾ ಚಳವಳಿಗಳ ಕೇಂದ್ರಗಳಾಗಿ ಬೆಳೆದರೂ ಕೂಡ, ಮಾರುಕಟ್ಟೆಯ ದೃಷ್ಟಿಯಿಂದ ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮುಂಚೂಣಿಯಲ್ಲಿ ನಿಂತಿತು ಮತ್ತು
ಅದರ ಪರಿಣಾಮವಾಗಿ ಆ ಚಳವಳಿಯ ಅನುಯಾಯಿಗಳು ಬೇರೆಯವರಿಗೆ ಹೋಲಿಸಿದರೆ, ದೊಡ್ಡ ಗಾತ್ರದಲ್ಲಿ ಬೆಳೆದು ನಿಂತರು. ದೇಶದಾದ್ಯಂತ ಅಕಾಡಮಿಕ್ ಆಗಿ ಕಲೆಯನ್ನು ಕಲಿಸುವ ಕಲಾಶಾಲೆಗಳಲ್ಲೂ ಈ ಮುಂಬೈಯ ಯಶಸ್ವೀ ಮಾದರಿಯ ಅನುಕರಣೆ ನಡೆಯಿತು. ಇದು ಭಾರತದಲ್ಲಿ ಮಾಡರ್ನ್ ಆರ್ಟ್ ಎಂದರೆ ಅದು ‘‘ಅರ್ಥವಾಗದ್ದು’’ ಎಂಬ ಬೀಸು ತೀರ್ಮಾನಕ್ಕೆ ಕಾರಣವಾಗಿರಬೇಕು. ಪ್ರದರ್ಶಿತವಾಗಿರುವ ಕಲಾಕೃತಿಯ ಬಗ್ಗೆ ನೋಡುಗರು ಕೇಳಿದರೆ, ‘‘ಅದು ಏನೆಂದು ಅರ್ಥವಾಗಲು ನೋಡುಗನಿಗೂ ತಯಾರಿ ಬೇಕು, ಅದಿಲ್ಲದಿದ್ದರೆ ಅರ್ಥ ಆಗೋದಿಲ್ಲ’’ ಎಂಬ ಉಡಾಫೆ ತಲೆಹಾಕತೊಡಗಿತು. ಒಂದು ಹಂತಕ್ಕೆ ಈ ರೀತಿಯ ಉಡಾಫೆಗೂ ಒಂದು ಸಕಾರಣ ಇದೆ. ನಮ್ಮಲ್ಲಿ ಚಿಂತನೆಗಳು-ಪ್ರತಿಕ್ರಿಯೆಗಳು ಹುಟ್ಟುವುದು ಭಾಷೆಯ ರೂಪದಲ್ಲೇ. ಮನುಷ್ಯ ದೇಹದಲ್ಲೇ ಭಾಷೆಗೆ ಹೊರತಾದ ಮಲ್ಟಿಸೆನ್ಸರಿ ಸ್ಪಂದನಗಳು ಇವೆಯಾದರೂ, ಅವನ್ನು ನಿರ್ವಹಿಸುವಲ್ಲಿ ನೋಡುಗರಿಗಿರುವ ಮಿತಿ, ಈ ರೀತಿಯ ‘‘ತಯಾರಿ ಬೇಕು’’ ಎಂಬ ಮಾತುಗಳನ್ನು ಎತ್ತುತ್ತದೆ. ಒಂದು ಕಡಲ ತೀರಕ್ಕೋ,
ಪ್ರಶಾಂತವಾದ ಜಾಗಕ್ಕೋ ಹೋದಾಗ ಅದು ನೀಡುವ ಅನುಭೂತಿಗೆ ಹಲವು ಬಾರಿ ಶಬ್ದಗಳ
ಹಂಗಿರುವುದಿಲ್ಲ. ಆದರೂ ಮನಸ್ಸು ಉಲ್ಲಾಸಗೊಂಡಿರುತ್ತದೆ. ಮನುಷ್ಯ ತನ್ನೊಳಗೇ ಇರುವ
ಈ ಸಾಮರ್ಥ್ಯವನ್ನು ಬಹಳ ಬಾರಿ ಬಳಸದೇ ಅದು ಮೊಂಡಾಗಿರುತ್ತದೆ. ಒಂದು ಕಲಾಕೃತಿಗೆ
ಕೂಡ, ಮನಸ್ಸಿನ ಯಾವುದಾದರೊಂದು ಭಾವನೆಯನ್ನು ಟ್ರಿಗರ್ ಮಾಡಬಲ್ಲ ಸಾಧ್ಯತೆಗಳಿರ ಬಹುದು ಎಂಬುದನ್ನು ನೋಡುಗ ಅರ್ಥ ಮಾಡಿಕೊಂಡಾಗ, ಪ್ರತೀ ಕಲಾಕೃತಿಯಲ್ಲೂ, ‘‘ಇದರ
ಅರ್ಥ ಏನು?’’ ಎಂದು ಭಾಷೆಯ ಮೂಲಕ ಅರ್ಥ ಹುಡುಕಿಕೊಳ್ಳುವ ಕಷ್ಟ ತಪ್ಪುತ್ತದೆ.
ಈ ರೀತಿಯ ಗೊಂದಲಗಳ-ವಿಸ್ಮತಿಗಳ ನಡುವೆ, ಮಾಡರ್ನ್ ಆರ್ಟ್ ಎಂದರೆ ಅರ್ಥ ವಾಗದ್ದು ಎಂದು ನೋಡುಗ ಒಪ್ಪಿಕೊಂಡ ಕಾರಣಕ್ಕೆ ಕಲೆ ಭಾರತೀಯ ಸಂದರ್ಭದಲ್ಲಿ ಸೋಲತೊಡಗಿತು.
ಹಾದಿ ಕಾಣಿಸದೆ ನಿಂತಾಗ, ಇವೆಲ್ಲ ಸಹಜ ಬೆಳವಣಿಗೆಗಳು. ಏಕೆಂದರೆ, ಜರ್ಮನ್ ಹಾಲೊಕಾಸ್ಟ್ನ ಅನುಭವವನ್ನು ಒಬ್ಬ ಭಾರತೀಯ ಕಲಾವಿದ ಅಲ್ಲಿನ ಸಮಯ- ಸಂದರ್ಭಗಳಿಂದ ಪ್ರತ್ಯೇಕಿಸಿ ಎತ್ತಿ ತಂದು, ಊಹೆಗಳ ಆಧಾರದಲ್ಲಿ ರಚಿಸುವ ಅಮೂರ್ತ ಕಲಾಕೃತಿಯೊಂದು, ಸ್ವತಃ ಕಲಾವಿದನಿಗಾಗಲೀ ಅಥವಾ ಅದರ ನೋಡುಗನಿಗಾಗಲೀ, ಆ ಕರಾಳ ಅನುಭವವನ್ನು ಇಡಿಯಾಗಿ ಕಟ್ಟಿಕೊಡುವುದು ಸಾಧ್ಯವಿಲ್ಲ. ಹಿಂದೆ ಶಿವರಾಮ
ಕಾರಂತರು ತಮ್ಮ ಭಾಷಣಗಳಲ್ಲಿ ಇಂತಹದೇ ಒಂದು ಉದಾಹರಣೆ ಕೊಡುತ್ತಿದ್ದುದನ್ನು ಕೇಳಿದ್ದು ನೆನಪಿದೆ. ಒಂದು ಕಥೆಯಲ್ಲಿ ಬಡತನವನ್ನು ವಿವರಿಸುವಾಗ, ಎಂತಹ ಕಡುಬಡತನ ಎಂದರೆ, ಮನೆಯ ಹೆಂಗಸು ಹಣೆಗೆ ಬೊಟ್ಟಿಡಲು ಚರಂಡಿಯ ನೀರಿನಲ್ಲಿ ಮುಖ ನೋಡಿಕೊಳ್ಳಬೇಕಿತ್ತು ಎಂದು ಹೇಳಲಾಗಿತ್ತಂತೆ ಇದನ್ನು ಕಾರಂತರು ಅನುಭವರಹಿತ ಬರವಣಿಗೆ
ಗಳನ್ನು ಗೇಲಿ ಮಾಡಲು ಬಳಸುತ್ತಿದ್ದರು. ಕನ್ನಡದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಈ ರೀತಿಯ ಸನ್ನಿವೇಶಗಳ ಕುರಿತು ಹಲವಾರು ಗಂಭೀರ ವಾಗ್ವಾದಗಳು ನಡೆದದ್ದಿದೆ. ದಲಿತೇತರರು
ದಲಿತರ ಬದುಕಿನ ಬಗ್ಗೆ, ಮುಸ್ಲಿಮೇತರರು ಮುಸ್ಲಿಮ್ ಬದುಕಿನ ಬಗ್ಗೆ, ಪುರುಷರು ಮಹಿಳೆಯರ ಬದುಕಿನ ಬಗ್ಗೆ ಬರೆದಾಗಲೆಲ್ಲ ಈ ರೀತಿಯ ವಾಗ್ವಾದಗಳು ಕಾಣಿಸಿಕೊಂಡದ್ದಿದೆ. ಕುತೂಹಲದ ಸಂಗತಿ ಎಂದರೆ, ಕಲೆಗೆ ಸಂಬಂಧಿಸಿದಂತೆ ಇಂತಹದೊಂದು ವಾಗ್ವಾದಕ್ಕೆ ಭಾರತದ ಕಲಾಜಗತ್ತು ತನ್ನನ್ನು ದೊಡ್ಡ ಪ್ರಮಾಣದಲ್ಲಿ ಒಡ್ಡಿಕೊಳ್ಳಲಿಲ್ಲ.
ಅಕಾಡಮಿಕ್ ಶಿಸ್ತು ಆಗಿ ಕೂಡ ಕಲೆ, ಭಾರತದಲ್ಲಿ ಇನ್ನೂ ಗುರುಕುಲ ಮಾದರಿಯ ಶೈಶವದಲ್ಲಿರುವುದು ಇದಕ್ಕೆ ಕಾರಣ ಇರಬಹುದು. ಹಾಗಾಗಿ ಸಮಕಾಲೀನ ಕಲಾಜಗತ್ತಿಗೆ ಸಂಬಂಧಿಸಿದಂತೆ ಭಾರತ, ಇನ್ನೂ ಹತ್ತಿಪ್ಪತ್ತು ವರ್ಷ ಹಿಂದುಳಿದಿದೆ. ಬರೋಡಾ ಮತ್ತು ಮದ್ರಾಸ್ ಕಲಾಚಳವಳಿಗಳು ಭಾರತೀಯ ಬೇರಿನ ಅನ್ವೇಷಣೆಯಲ್ಲಿ ತೊಡಗಿಕೊಂಡವಾದರೂ,
ಅದರ ಫಲಿತಾಂಶ ಬಹಳ ಸೀಮಿತವಾದುದಾಗಿತ್ತು ಮತ್ತು ಅವು ನೋಡುಗರಲ್ಲಿ ಕಲೆಗೂ ಬದುಕಿಗೂ ನಡುವೆ ಕರುಳು ಬಳ್ಳಿ ಸಂಬಂಧಗಳ ಅನ್ವೇಷಣೆಯನ್ನು ಪ್ರೇರಿಸುವಲ್ಲಿ ಸೋತವು.
ಈಗ 2000ನೇ ಇಸವಿಯ ಬಳಿಕ, ಇಂಟರ್ನೆಟ್ ಯುಗ, ಕಲಾ ಜಗತ್ತಿನಲ್ಲಿ ಇಲ್ಲಿಯ ತನಕ ಇದ್ದ ಗುರು-ಶಿಷ್ಯ ಪರಂಪರೆಗೆ (ಅರ್ಥಾತ್, ಗುರು ಅವಕಾಶ ಮಾಡಿ ಕೊಟ್ಟರೆ ಮಾತ್ರ ಶಿಷ್ಯ ಬೆಳೆಯುವ ಪರಂಪರೆ!) ಬ್ರೇಕ್ ತೊಡಿಸಿದೆ, ಜಾಗತೀಕರಣ ಮತ್ತು ಉದಾರೀಕರಣ ನೀತಿಗಳು ಜಗತ್ತಿನಾದ್ಯಂತ ಎಲ್ಲ ರಂಗಗಳಂತೆ ಕಲಾರಂಗಕ್ಕೂ ಹೊಸ ಹಾದಿಗಳನ್ನು ತೆರೆದಿದೆ. ಹಾಗಾಗಿ ಹೊಸ ತಲೆಮಾರು ತಮ್ಮ ಅನುಭವಗಳ ಆಧಾರದಲ್ಲಿ, ನೆಲಮೂಲದಿಂದಲೇ ಭಾರತೀಯ ಕಲೆಗೆ ಹೊಸ ನುಡಿಗಟ್ಟುಗಳನ್ನು ಕಟ್ಟಿಕೊಡಲು ಆರಂಭಿಸಿದೆ. ಜಗತ್ತು ಕೂಡ ಅವರನ್ನು ಗಮನಿಸಲಾರಂಭಿಸಿದೆ. ಇದು ಆಶಾದಾಯಕ ಬೆಳವಣಿಗೆ.
ಅಕಾಡಮಿಕ್ ಶಿಸ್ತು ಆಗಿ ಕೂಡ ಕಲೆ, ಭಾರತದಲ್ಲಿ ಇನ್ನೂ ಗುರುಕುಲ ಮಾದರಿಯ ಶೈಶವದಲ್ಲಿರುವುದು ಇದಕ್ಕೆ ಕಾರಣ ಇರಬಹುದು. ಹಾಗಾಗಿ ಸಮಕಾಲೀನ ಕಲಾಜಗತ್ತಿಗೆ ಸಂಬಂಧಿಸಿದಂತೆ ಭಾರತ, ಇನ್ನೂ ಹತ್ತಿಪ್ಪತ್ತು ವರ್ಷ ಹಿಂದುಳಿದಿದೆ. ಬರೋಡಾ ಮತ್ತು ಮದ್ರಾಸ್ ಕಲಾಚಳವಳಿಗಳು ಭಾರತೀಯ ಬೇರಿನ ಅನ್ವೇಷಣೆಯಲ್ಲಿ ತೊಡಗಿಕೊಂಡವಾದರೂ,
ಅದರ ಫಲಿತಾಂಶ ಬಹಳ ಸೀಮಿತವಾದುದಾಗಿತ್ತು ಮತ್ತು ಅವು ನೋಡುಗರಲ್ಲಿ ಕಲೆಗೂ ಬದುಕಿಗೂ ನಡುವೆ ಕರುಳು ಬಳ್ಳಿ ಸಂಬಂಧಗಳ ಅನ್ವೇಷಣೆಯನ್ನು ಪ್ರೇರಿಸುವಲ್ಲಿ ಸೋತವು.
ಭಾರತದ ಆಧುನಿಕ ಕಲಾ ಜಗತ್ತಿನಲ್ಲಿ ಕೋಲ್ಕತಾ, ಮುಂಬೈ, ಬರೋಡಾ ಮತ್ತು ಮದರಾಸು ಮಹಾನಗರಗಳು ಕಲಾ ಚಳವಳಿಗಳ ಕೇಂದ್ರಗಳಾಗಿ ಬೆಳೆದರೂ ಕೂಡ, ಮಾರುಕಟ್ಟೆಯ ದೃಷ್ಟಿಯಿಂದ ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮುಂಚೂಣಿಯಲ್ಲಿ ನಿಂತಿತು ಮತ್ತು ಅದರ ಪರಿಣಾಮವಾಗಿ ಆ ಚಳವಳಿಯ ಅನುಯಾಯಿಗಳು ಬೇರೆಯವರಿಗೆ ಹೋಲಿಸಿದರೆ, ದೊಡ್ಡ ಗಾತ್ರದಲ್ಲಿ ಬೆಳೆದು ನಿಂತರು. ದೇಶದಾದ್ಯಂತ ಅಕಾಡಮಿಕ್ ಆಗಿ ಕಲೆಯನ್ನು ಕಲಿಸುವ ಕಲಾಶಾಲೆಗಳಲ್ಲೂ ಈ ಮುಂಬೈಯ ಯಶಸ್ವೀ ಮಾದರಿಯ ಅನುಕರಣೆ ನಡೆಯಿತು. ಇದು ಭಾರತದಲ್ಲಿ ಮಾಡರ್ನ್ ಆರ್ಟ್ ಎಂದರೆ ಅದು ‘‘ಅರ್ಥವಾಗದ್ದು’’ ಎಂಬ ಬೀಸು ತೀರ್ಮಾನಕ್ಕೆ ಕಾರಣವಾಗಿರಬೇಕು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.