-

ಎಸ್. ಆರ್. ಭಟ್ ಆ ಶತಮಾನದ ನೆನಪಿನಲ್ಲಿ...

-

70ರ ದಶಕದ ಸಾಂಸ್ಕೃತಿಕ ಚಳವಳಿಯ ಮಹತ್ವದ ಭಾಗವಾಗಿದ್ದವರು ಶೂದ್ರ ಶ್ರೀನಿವಾಸ್. ಶೂದ್ರ ಸಾಹಿತ್ಯ ಪತ್ರಿಕೆಯ ಮೂಲಕ ಶ್ರೀನಿವಾಸ್ ಅವರು ಶೂದ್ರ ಶ್ರೀನಿವಾಸ್ ಆಗಿ ಗುರುತಿಸಿಕೊಂಡವರು. ಲಂಕೇಶ್, ಡಿ. ಆರ್. ನಾಗರಾಜ್, ಅನಂತಮೂರ್ತಿ ತಲೆಮಾರಿನ ಕೊನೆಯ ಕೊಂಡಿಯಾಗಿ ನಮ್ಮ ನಡುವೆ ಇರುವ ಶೂದ್ರ ಅವರು ಸಾಹಿತ್ಯಕವಾಗಿ ಮತ್ತು ಸಾಂಸ್ಕೃತಿಕವಾಗಿ ತಮ್ಮ ಕೆಲಸದಲ್ಲಿ ದಣಿದಿಲ್ಲ. ಯಾತ್ರೆ ಇವರ ಇತ್ತೀಚಿನ ಮಹತ್ವದ ಕಾದಂಬರಿ.

ಶೂದ್ರ ಶ್ರೀನಿವಾಸ್

ಇಪ್ಪತ್ತನೆಯ ಶತಮಾನದ ಕೊನೆಯ ಇಪ್ಪತೈದು ವರ್ಷಗಳು ಎಂತೆಂಥ ಸ್ಮರಣೀಯ ಸಂಗತಿಗಳಿಗೆ ಎದುರಾಗಬೇಕಾಯಿತು. ಅವು ಇಂದಿಗೂ ಅಂತರಾಳದಲ್ಲಿ ಪಿಸುಗುಡುತ್ತಲೇ ಇವೆ.ಅಷ್ಟರ ಮಟ್ಟಿಗೆ ಆಗಿಹೋದ ಮಾತು ಕತೆಗಳೆಲ್ಲ ದಟ್ಟಗೊಂಡಿವೆ.ಇಂಥ ಅನುಭವದ ನೆಲೆಯಲ್ಲಿ ಎಸ್.ಆರ್.ಭಟ್ ಅವರ ನೆನಪು ಯಾವಾಗಲೂ ಪ್ರಾತಃಸ್ಮರಣೀಯವಾದದ್ದು. ನವಕರ್ನಾಟಕ ಪುಸ್ತಕ ಅಂಗಡಿ ಹೊಸ ಚಿಂತನೆಗಳಿಗೆ ಬೇಕಾದ ಅರಿವನ್ನು ವಿಸ್ತರಿಸುವ ಕೃತಿಗಳು ಅಲ್ಲಿ ದೊರಕುತ್ತಿತ್ತು. ಅಲ್ಲಿ ಚಿಂತನೆಯ ನೆಲೆಯಲ್ಲಿ ಅತ್ಯಂತ ಆಕರ್ಷಕ ವ್ಯಕ್ತಿಯಾಗಿದ್ದವರು ಎಸ್.ಆರ್. ಭಟ್ ಅವರು. ಆತ ಬಹುದೊಡ್ಡ ಪ್ರಮಾಣದ ಓದಿನ ಪ್ರಿಯರಾಗಿದ್ದರು. ಅವರಿಗೆ ಸಹಾಯಕರಾಗಿ ಈಗಿನ ನವಕರ್ನಾಟಕದ ಮುಖ್ಯಸ್ಥರಾದ ರಾಜಾರಾಂ ಅವರು ಇದ್ದರು.

ನಾನಾ ಕಾರಣದಿಂದಾಗಿ ಬೆಂಗಳೂರಿನ ಕೇಂದ್ರ ಸ್ಥಳವಾದ ಮೆಜೆಸ್ಟಿಕ್ ಸರ್ಕಲ್ ಬಳಿ ಗೀತಾ ಥಿಯೇಟರ್ಗೆ ಹೊಂದಿಕೊಂಡಂತೆ ಇದ್ದ ಕಟ್ಟಡದಲ್ಲಿ ನವಕರ್ನಾಟಕ ಪುಸ್ತಕ ಮಳಿಗೆ ಇತ್ತು.ಈಗಿನ ರೀತಿಯಲ್ಲಿ ಪ್ರಕಟಣಾ ವ್ಯವಸ್ಥೆ ಇರಲಿಲ್ಲ.ಆದರೆ ಬಹುದೊಡ್ಡ ಸಾಂಸ್ಕೃತಿಕ ಆಕರ್ಷಕ ವ್ಯಕ್ತಿಯಾಗಿದ್ದವರು ಎಸ್.ಆರ್.ಭಟ್ ಅವರು. ಕರ್ನಾಟಕದ ಬಹುಪಾಲು ಚಿಂತಕರಿಗೆ ಬೆಂಗಳೂರಿಗೆ ಹೋದಾಗ ಅವರನ್ನು ಕಾಣಬೇಕು ಎಂಬ ತಹತಹ ಮೂಡಿತ್ತು. ಅವರ ಚಿಂತನೆಯ ಬಹುಮುಖತ್ವವೆ ಅಪೂರ್ವವಾದದ್ದು.ಅದು ನಮ್ಮ ತತ್ವಶಾಸ್ತ್ರ ಇರಬಹುದು, ವೇದ ಉಪನಿಷತ್ತುಗಳಿರಬಹುದು ಎಷ್ಟು ಸರಳವಾಗಿ ವಿವರಿಸುತ್ತಿದ್ದರು. ನನಗಂತೂ ಶೂದ್ರ ಸಾಹಿತ್ಯ ಪತ್ರಿಕೆಯ ಕಾರಣದಿಂದ ಪರಿಚಯವಾದವರು.

 

ವಾರಕ್ಕೆ ಎರಡು ಮೂರು ಬಾರಿಯಾದರೂ ಅಲ್ಲಿಗೆ ಹೋಗದಿದ್ದರೆ ಏನನ್ನೋ ಕಳೆದುಕೊಂಡಿದ್ದೇನೆ ಅನ್ನಿಸುತ್ತಿತ್ತು.ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಬಂದ ಲೇಖಕ ಗೆಳೆಯರೂ ಅಲ್ಲಿ ಸಿಗುತ್ತಿದ್ದರು.

 ಎಸ್.ಆರ್.ಭಟ್ ಅವರು ದೇವಿ ಪ್ರಸಾದ್ ಚಟ್ಟೋಪಾಧ್ಯಾಯ ಮತ್ತು ಡಿ.ಡಿ. ಕೌಸಾಂಬಿಯವರ ಕುರಿತು ಬಹಳಷ್ಟು ಒಳನೋಟಗಳನ್ನು ಭಾರತದ ತತ್ವಶಾಸ್ತ್ರದ ನೆಲೆಯಲ್ಲಿ ನಮಗೆ ಧಾರೆಯೆರೆದಿದ್ದಾರೆ.ಅದರಲ್ಲೂ ಚಟ್ಟೋಪಾಧ್ಯಾಯ ಅವರ ‘ಲೋಕಾಯಯತ’ ಮತ್ತು ‘ಎಥೀಯಿಸಂ’ ಬಗ್ಗೆ ಭಟ್ ಅವರ ಒಳನೋಟ ಮಹತ್ವಪೂರ್ಣವಾದದ್ದು. ಅರಿವಿನ ನೆಲೆಯಲ್ಲಿ ಅವರಿಗೆ ಯಾವುದೇ ವಿಧದ ಸಿನಿಕತನ ಇರಲಿಲ್ಲ.

ಒಮ್ಮೆ ಸಂಜೆ ನವಕರ್ನಾಟಕಕ್ಕೆ ಹೋದಾಗ ಅವರು ಶ್ರೀನಿವಾಸ್, ಒಮ್ಮೆ ನಿಮ್ಮನ್ನು ನಿರಂಜನ ಅವರು ನೋಡಬೇಕಂತೆ ಎಂದರು. ನಾನು ಆಗಲಿ ಸರ್ ಎಂದೆ.ಯಾಕೆಂದರೆ ಒಬ್ಬ ಮಹತ್ವದ ಲೇಖಕರನ್ನು ನೋಡುತ್ತಿದ್ದೇನೆ ಎಂದು. ಅಷ್ಟೊತ್ತಿಗೆ ಅವರ ಪ್ರಜಾವಾಣಿಯ ಅಂಕಣ ನನಗೆ ತುಂಬಾ ಪ್ರಿಯವಾಗಿತ್ತು. ಜೊತೆಗೆ ನಿರಂಜನ ಅವರ ‘ಚಿರಸ್ಮರಣೆ’ ತುಂಬಾ ಪ್ರಿಯವಾದ ಕಾದಂಬರಿ. ಈ ಕಾದಂಬರಿ ಕುರಿತು ಪ್ರಸಿದ್ಧ ರಾಜಕೀಯ ಮುತ್ಸದ್ದಿ ಹಾಗೂ ಲೇಖಕ ಇ.ಎಂ.ಎಸ್. ನಂಬೂದಿರಿ ಪಾದ್ ಅವರ ‘ಚಿರಸ್ಮರಣೆ’ ಕುರಿತ ಲೇಖನವನ್ನು ಶೂದ್ರದಲ್ಲಿ ಪ್ರಕಟಿಸಿದ್ದೆ. ಅದು ಮಲೆಯಾಳಂನ ‘ದೇಶಾಭಿಮಾನಿ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

ಇರಲಿ, ಎಸ್.ಆರ್.ಭಟ್ ಅವರೊಂದಿಗೆ ಒಂದು ಸಂಜೆ ನಿರಂಜನ ಅವರ ಮನೆಗೆ ಹೋದೆ. ಆ ಮನೆ ನಾನಿದ್ದ ಸಾರಕ್ಕಿ ಮನೆಗೆ ತುಂಬಾ ಹತ್ತಿರದಲ್ಲಿ ಇತ್ತು. ಹಾಗೆ ನೋಡಿದರೆ ಬಹಳಷ್ಟು ಬಾರಿ ನಿರಂಜನ ಮತ್ತು ಅನುಪಮಾ ಅವರ ಮನೆ ಮುಂದೆ ಓಡಾಡುವ ಸಂದರ್ಭ ಒದಗಿ ಬಂದಿತ್ತು.ಒಂದು ಕಾಲದಲ್ಲಿ ನಿರಂಜನ ಅವರು ಕರ್ನಾಟಕದ ಸಾಂಸ್ಕೃತಿಕ ಸಂದರ್ಭದಲ್ಲಿ ಹೆಚ್ಚು ಚಲಾವಣೆಯಲ್ಲಿದ್ದ ಲೇಖಕರು. ಆದರೆ ಅವರು ಪಾರ್ಶ್ವವಾಯುವಿಗೆ ತುತ್ತಾದಾಗ ಎಷ್ಟು ಸುದ್ದಿಯಾಗಿತ್ತು.ಇದರಿಂದ ಅವರ ಓಡಾಟವೇ ಪೂರ್ತಿ ನಿಂತು ಹೋಗಿತ್ತು.

 

ಎಂತೆಂಥ ಸಾಹಿತ್ಯದ ವಾಗ್ವಾದಗಳು. ಅದರಲ್ಲೂ ಅನಕೃ ಮತ್ತು ನಿರಂಜನ ಅವರು ಎಷ್ಟು ಮುಖಾಮುಖಿಯಾಗುತ್ತಿದ್ದರು. ಈ ಸಾಂಸ್ಕೃತಿಕ ಸಂವಾದಗಳು ಒಟ್ಟು ಸಾಮಾಜಿಕ ವಾತಾವರಣವನ್ನು ಆರೋಗ್ಯ ಪೂರ್ಣವಾಗಿಟ್ಟಿದ್ದವು. ಯಾಕೆಂದರೆ ಪ್ರಗತಿ ಪಂಥ ಮತ್ತು ಪ್ರಗತಿಶೀಲರ ನಡುವೆ ಸದಾ ಶೀತಲ ಸಮರ ಇದ್ದೇ ಇರುತ್ತಿತ್ತು.ಇದರಿಂದ ನಮ್ಮ ಸಾಂಸ್ಕೃತಿಕ ಸಂದರ್ಭ ಎಷ್ಟು ಒಳನೋಟಗಳನ್ನು ತೆರೆದುಕೊಂಡಿತು ಹಾಗೂ ಓದಿನ ವ್ಯಾಪಕತೆ ಸಮೃದ್ಧಗೊಳ್ಳಲು ಸಹಕಾರಿಯಾಗಿದೆ.

ಇರಲಿ ಇದರ ಕಥೆ ಬಹು ದೀರ್ಘವಾದದ್ದು. ಒಂದು ಸಂಜೆ ಎಸ್. ಆರ್. ಭಟ್ ಅವರೊಂದಿಗೆ ನಿರಂಜನರ ಮನೆಗೆ ಹೋದೆವು. ಗೇಟ್ ಬಳಿಯೇ ಒಂದು ಉಗ್ರಯೆನ್ನ ಬಹುದಾದ

ನಾಯಿ ನಮ್ಮನ್ನು ಸ್ವಾಗತಿಸಿತು.ಅದರ ಬೊಗಳುವಿಕೆ ಭೀಕರವಾಗಿತ್ತು. ತೇಜಸ್ವಿನಿಯವರು ಓಡಿ ಬಂದು ಅದನ್ನು ಹಿಡಿದುಕೊಂಡರು.ಅನುಪಮಾ ಬಾಗಿಲಲ್ಲಿ ನಿಂತು ಅದು ಏನೂ ಮಾಡುವುದಿಲ್ಲ ಎಂದು ತಮ್ಮ ಮಾಮೂಲಿ ನಗುವಿನ ಮೂಲಕ ಸ್ವಾಗತಿಸಿದರು. ಅಲ್ಲೇ ಅಂಗಳದಲ್ಲಿ ಸ್ವಲ್ಪ ವಿಶಾಲವಾದ ಮೇಜಿನ ಮುಂದೆ ಕೂತಿದ್ದರು ನಿರಂಜನ ಅವರು.ನಾನಾ ವಿಧವಾದ ವಿಶ್ವ ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ಕೃತಿಗಳು ಆ ಮೇಜಿನ ಮೇಲೆ ಶಿಸ್ತು ಬದ್ಧಾಗಿ ಅಲಂಕರಿಸಿದ್ದುವು. ನಾವು ಹೋದ ತಕ್ಷಣ ಪ್ರೀತಿಯಿಂದ ಬರಮಾಡಿಕೊಂಡರು.

ನಾವು ಕೂತಿದ್ದರೂ ಡಾ.ಅನುಪಮಾ ಅವರು ನಿಂತೇ ಇದ್ದರು.ನಾವು ಕೂತುಕೊಳ್ಳಿ ಎಂದಾಕ್ಷಣ ಕ್ಲಿನಿಕ್ಗೆ ಹೊರಡಬೇಕು ಎಂದು ನಮಗೆ ಕಾಫಿ ತಂದುಕೊಟ್ಟು ಹೊರಟರು.ನಿರಂಜನ ಅವರು ನನ್ನ ಬಗ್ಗೆ ಸಾಕಷ್ಟು ವಿಚಾರಿಸಿದರು. ಶೂದ್ರದ ಹೆಸರಿನ ಹಿನ್ನೆಲೆ ಕೇಳಿದರು.ಹೇಳಿದೆ. ಒಂದು ವಿಧದ ವ್ಯಂಗ್ಯ ಮಿಶ್ರಿತ ಧ್ವನಿಯಲ್ಲಿ ನಕ್ಕರು. ಒಂದು ಕ್ಷಣ ಪೆಚ್ಚಾದೆ. ಮುಂದೆ ಲೋಹಿಯಾ, ಅಡಿಗರು, ಅನಂತಮೂರ್ತಿ, ಲಂಕೇಶ್ ಮುಂತಾದವರನ್ನು ಕುರಿತು ಕೇಳಿದರು.ನಾನು ಅವರ ಬಗ್ಗೆ ಮೆಚ್ಚಿಗೆಯಿಂದಲೇ ಮಾತಾಡಿದೆ. ಒಂದು ವಿಧದಲ್ಲಿ ಅವರ ವಿಚಾರದಲ್ಲಿ ಸ್ವಲ್ಪ ಸಿನಿಕತನದಿಂದಲೇ ನುಡಿದರು. ನನ್ನ ಹಿನ್ನೆಲೆ ವಿಚಾರಿಸಿದರು. ತಿಳಿಸಿದೆ. ಶೂದ್ರ ಹಳೆಯ ಸಂಚಿಕೆಗಳನ್ನು ಕೇಳಿದರು.‘ಕಳಿಸುವೆ ಸರ್’ ಎಂದೆ. ಸುಮಾರು ಎರಡು ಗಂಟೆ ಅವರೊಡನೆ ಮಾತುಕತೆ ನಡೆಯಿತು.

ಅದು ಯಾವ ರೀತಿಯಲ್ಲಿ ಇತ್ತೆಂದರೆ: ನನ್ನ ಕೆಲಸಕ್ಕೆ ತೆಗೆದುಕೊಳ್ಳುವ ಸಂದರ್ಶನದ ಮಾದರಿಯಲ್ಲಿ ಇತ್ತು. ನನಗೆ ಅದರಿಂದ ಕಿಂಚಿತ್ತೂ ಬೇಸರ ಅನ್ನಿಸಲಿಲ್ಲ.ಸಂತೋಷದಿಂದಲೇ ಹೊರಗೆ ಬಂದೆವು. ಆದರೆ ನಿರಂಜನ ಅವರ ವಿಚಾರದಲ್ಲಿ ನನಗೆ ಅಗಾಧವಾದ ಗೌರವ ಇತ್ತು. ಕೇವಲ ಚಿರಸ್ಮರಣೆ ಮುಂತಾದ ಕೃತಿಗಳು ಕಾರಣ. ಜೊತೆಗೆ ಪಾರ್ಶ್ವವಾಯು ಅವರನ್ನು ಅಪ್ಪಳಿಸಿದ್ದರೂ ವಿಶ್ವ ಕಥಾ ಕೋಶದಂಥ ಬೃಹತ್ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಭಟ್ ಅವರು ನಿರಂಜನ ಅವರ ಕುಟುಂಬದ ವಿಷಯದಲ್ಲಿ ಎಷ್ಟು ಮೆಚ್ಚುಗೆ ಮಾತು ನುಡಿದಿದ್ದರು.

 

 ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಕ್ರಿಯಾಶೀಲರಾಗಿರುವವರನ್ನು ಕಂಡರೆ ಅವರಿಗೆ ಎಲ್ಲಿಲ್ಲದ ಅಭಿಮಾನ. ದಕ್ಷಿಣ ಕನ್ನಡದಿಂದ ಬಂದು ಬೆಂಗಳೂರಿನಲ್ಲಿ ನವಕರ್ನಾಟಕವನ್ನು ಹುಟ್ಟಾಕಿ ಅದಕ್ಕೆ ವಿವಿಧ ಸಾಮಾಜಿಕ ಸ್ತರಗಳ ಚೌಕಟ್ಟಿನಲ್ಲಿ ಜೀವ ತುಂಬಿದರು. ಗೆಳೆಯ ಡಿ.ಆರ್.ನಾಗರಾಜ್, ಕವಿ ಸಿದ್ದಲಿಂಗಯ್ಯ ಮತ್ತು ನಾನು ಒಟ್ಟಿಗೆ ಸೇರುವುದಕ್ಕೆ ಅದು ಕೇಂದ್ರ ಸ್ಥಾನವಾಗಿತ್ತು. ನಾವು ಯಾವುದಾದರೂ ಕೃತಿಯನ್ನು ಸೂಚಿಸಿದರೆ ಅದನ್ನು ತರಿಸಿಕೊಡುವ ವ್ಯವಸ್ಥೆ ಮಾಡುತ್ತಿದ್ದರು. ಒಂದು ಸಂಜೆ ಅವರೊಂದಿಗೆ ಮಾತಾಡುತ್ತಿರುವಾಗ; ಒಂದು ಪುಸ್ತಕವನ್ನು ನನ್ನ ಕೈಯಲ್ಲಿಟ್ಟು ಇದನ್ನು ನೀವು ಓದಲೇ ಬೇಕು ಎಂದು ಕೊಟ್ಟರು. ಅದು ನೂರೈವತ್ತು ಪುಟಗಳ ಸ್ಮರಣೀಯ ನಟ ಬಲರಾಜ್ ಸಹಾನಿಯವರ ಕೃತಿ. ಶ್ರೀನಿವಾಸ್ ನೀವು ಓದುವುದು ಮಾತ್ರವಲ್ಲ; ಅದರಲ್ಲಿ ಸಹಾನಿಯವರು ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ನೀಡಿದ ಘಟಿಕೋತ್ಸವ ಭಾಷಣದ ಲೇಖನವಿದೆ. ಅದನ್ನು ಸಾಧ್ಯವಾದರೆ ಅನುವಾದಿಸಿ ಶೂದ್ರದಲ್ಲಿ ಪ್ರಕಟಿಸಲು ಪ್ರಯತ್ನಿಸಿ ಎಂದಾಗ ಅದನ್ನು ಅತ್ಯಂತ ಸಂಭ್ರಮದಿಂದ ಸ್ವೀಕರಿಸಿದೆ.ಆ ಕೃತಿಯು ನನಗೆ ಸಿಕ್ಕಿದ ಅಮೂಲ್ಯ ಕೊಡುಗೆ ಅನ್ನಿಸಿತು.

ಸಹಾನಿಯವರು ಬೌದ್ಧಿಕವಾಗಿ ಬೆಳೆದ ಬಹುದೊಡ್ಡ ನಟ ಮತ್ತು ಚಿಂತಕ.ಸಹಾನಿಯವರನ್ನು ಕಮ್ಯುನಿಸ್ಟ್ ಪಕ್ಷಕ್ಕೆ ಪರಿಚಯಿಸಿದವರು ಅವರ ಪತ್ನಿ ದಮಯಂತಿ ಅವರು. ಆಕೆ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿಯಾಗಿದ್ದರು. ಒಂದು ದೃಷ್ಟಿಯಿಂದ ಮುಂದೆ ನನಗೆ ಬೀಷ್ಮ ಸಹಾನಿಯವರು ಪರಿಚಯವಾಗಲು ಎಸ್.ಆರ್.ಭಟ್ ಅವರು ಕಾರಣ. ಒಂದಷ್ಟು ದಿವಸ ‘ಪ್ರಗತಿ ಪಂಥ’ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಕಾರಣಕರ್ತರಾದರು. ಇದರಿಂದ ಅದರ ಕಾರ್ಯದರ್ಶಿಯಾಗಿ ಪ್ರಸಿದ್ಧ ನಾಟಕಕಾರರು ಮತ್ತು ಹಿರಿಯರಾದ ಶ್ರೀರಂಗರ ಜೊತೆಗೆ ಒಂದಷ್ಟು ದಿವಸ ಕೆಲಸ ಮಾಡಲು ಸಾಧ್ಯವಾಯಿತು.

ಇದೇ ಕಾಲಘಟ್ಟದಲ್ಲಿ ಬಿಜಾಪುರ ಜಿಲ್ಲೆಯ ಮಹಾಲಿಂಗಪುರದಲ್ಲಿ ಸಮಾವೇಶ ಇತ್ತು. ಅದರಲ್ಲಿ ಭಾಗವಹಿಸಲು ಎಸ್.ಆರ್.ಭಟ್ ಅವರ ಸಮ್ಮುಖದಲ್ಲಿ ನಿರಂಜನ ಅವರು ಸೂಚಿಸಿದರು. ಡಾ.ಹಾ.ಮ. ನಾಯಕ ಅವರು ಅದನ್ನು ಉದ್ಘಾಟಿಸಿದರು. ಡಾ.ಅನುಪಮಾ, ರಂಜಾನ್ ದರ್ಗ ಮತ್ತು ನಾನು ಮುಖ್ಯ ಅತಿಥಿಗಳಾಗಿದ್ದೆವು. ಆದರೆ ಇದಾದ ನಂತರ ಕಾರ್ಯದರ್ಶಿಗಳಲ್ಲಿ ಒಬ್ಬರಾದ ವಜ್ರಮಟ್ಟಿಯವರು ಅಸಹ್ಯ ಎನ್ನುವ ರೀತಿಯಲ್ಲಿ ಪ್ರಗತಿಪಂಥದ ಅಧ್ಯಕ್ಷರಾದ ಶ್ರೀರಂಗರ ಬಗ್ಗೆ ಹೇಳಿಕೆಯನ್ನು ಕೊಟ್ಟರು. ಇದರಿಂದ ಶ್ರೀರಂಗರು ಮತ್ತು ನಾನು ರಾಜೀನಾಮೆ ಕೊಟ್ಟೆವು. ವಜ್ರಮಟ್ಟಿಯವರು ಬಸವರಾಜ ಕಟ್ಟೀಮನಿಯವರ ಪರ ಇದ್ದರು.

ಎಲ್ಲಿಗೆ ಹೋದರೂ ಜಾತೀಯ ಗುಂಪುಗಾರಿಕೆ. ಆದರೆ ಇದಕ್ಕಿಂತ ಮೊದಲು ನಡೆದ ದಾವಣಗೆರೆ ಸಮಾವೇಶದಲ್ಲಿ ಡಿ.ಆರ್. ನಾಗರಾಜ್, ಕವಿ ಸಿದ್ದಲಿಂಗಯ್ಯ ಮತ್ತು ನಾನು ಭಾಗವಹಿಸಿದ್ದೆವು. ಅಲ್ಲೇ ಜಯಂತ ಕಾಯ್ಕಿಣಿ ಯವರ ಮೊದಲ ಭೇಟಿ. ಈ ಸಮಾವೇಶದಲ್ಲಿ ಭೀಷ್ಮ ಸಹಾನಿಯವರನ್ನು ಎಸ್.ಆರ್.ಭಟ್ ಅವರು ಪರಿಚಯಿಸಿದರು. ಇದರಿಂದ ಭಾರತದ ಸಾಂಸ್ಕೃತಿಕ ರಾಜಕಾರಣದ ಎಷ್ಟೊಂದು ಒಳನೋಟಗಳು ಪರಿಚಯವಾಯಿತು. ಮುಂದೆ ದೂರದರ್ಶನದಲ್ಲಿ ಅವರ ತಮಸ್ ಧಾರಾವಾಹಿಯಲ್ಲಿ ಪ್ರದರ್ಶನಗೊಂಡಾಗ ಅವರನ್ನು ಮತ್ತಷ್ಟು ಅರಿಯಲು ಸಾಧ್ಯವಾಯಿತು.

ಇದೇ ಕಾಲಘಟ್ಟದಲ್ಲಿ ಅಂದರೆ,1994 ರಲ್ಲಿ ಪಾಕಿಸ್ತಾನದ ಲಾಹೋರ್ ನಲ್ಲಿ ನಡೆದ ಶಾಂತಿ ಸಮಾವೇಶದಲ್ಲಿ ಭಾಗವಹಿಸಿದ್ದು ಒಂದು ಸ್ಮರಣೀಯ ಅನುಭವ. ಭಾರತದ ಉದ್ದಗಲದಿಂದ ಎಂತೆಂಥ ಮಹನೀಯರು ಭಾಗವಹಿಸಿದ್ದರು. ಅಲ್ಲಿ ಸಹಾನಿಯವರು ತಮಸ್ ಕುರಿತು ಮಾತಾಡಿದರು.

ನಾನು ಖುಷ್ವವಂತ ಸಿಂಗ್ ಅವರ ಅಪೂರ್ವ ಕೃತಿ ‘ಟ್ರೈನ್ ಟು ಪಾಕಿಸ್ತಾನ್’ ಕುರಿತು ಮಾತಾಡಿದ್ದೆ. ಇಲ್ಲಿ ಖಾಸಗಿ ಮಾತುಕತೆ ಸಂದರ್ಭದಲ್ಲಿ ಸುರೇಂದ್ರ ಮೋಹನ್, ಸ್ವಾಮಿ ಅಗ್ನಿವೇಶ್ ಅವರ ಸಮ್ಮುಖದಲ್ಲಿ ಅವರು ತಮ್ಮ ಅಣ್ಣ ಬಲರಾಜ್ ಸಹಾನಿಯವರನ್ನು ಕುರಿತು ಎಂಥ ಅದ್ಭುತ ಸಂಗತಿಗಳನ್ನು ವಿವರಿಸಿದ್ದರು. ಇದೆಲ್ಲವನ್ನೂ ವಾಪಸ್ ಬಂದಮೇಲೆ ಒಮ್ಮೆ ಭಟ್ ಅವರಿಗೆ ವಿವರಿಸಿದ್ದೆ.

ಭಟ್ ಅವರ ಕಾರಣದಿಂದಾಗಿ ನನಗೆ ನಿರಂಜನ ಮತ್ತು ಅನುಪಮಾ ಅವರ ಬದುಕನ್ನು ಅರಿಯಲು ಸಾಧ್ಯವಾಯಿತು.ಇಬ್ಬರು ಮಹತ್ವಪೂರ್ಣ ಲೇಖಕರ ಕೊನೆಯ ದಿನಗಳು ಎಷ್ಟು ದುರಂತಮಯವಾಗಿತ್ತು.ನಾವು ಕನ್ನಡದ ಅತ್ಯಂತ ಮಹತ್ವದ ಕವಿ ಗೋಪಾಲ ಕೃಷ್ಣ ಅಡಿಗರ ನೇತೃತ್ವದಲ್ಲಿ ಧಾರವಾಡ ಸಾಹಿತ್ಯ ಸಮ್ಮೇಳನದ ವಿರುದ್ಧ ಬೆಂಗಳೂರಿನಲ್ಲಿ ಜಾಗೃತ ಸಾಹಿತ್ಯ ಸಮಾವೇಶ ನಡೆಸಿದೆವು.ಅದರ ಸಂಚಾಲಕರಾಗಿ ಕಿ.ರಂ.ನಾಗರಾಜ್, ಡಿ.ಆರ್. ನಾಗರಾಜ್ ಮತ್ತು ನಾನು.ಆಗ ಡಾ.ಅನುಪಮಾ ಅವರು ಕ್ಯಾನ್ಸರ್ ರೋಗದಿಂದ ನರಳುತ್ತಿದ್ದರೂ ಕ್ರಿಯಾಶೀಲರಾಗಿ ಭಾಗವಹಿಸಿದ್ದರು.ಆದರೆ ನಿರಂಜನ

ಅವರು ಪ್ರಜ್ಞಾಹೀನರಾಗಿ ಒಂದು ಮೂಲೆಯಲ್ಲಿ ಮಲಗಿದ್ದರು. ಜಾಗೃತ ಸಮಾವೇಶ ಅತ್ಯಂತ ಚೆನ್ನಾಗಿ ನಡೆದಿದ್ದರಿಂದ ಖುಷಿಯಾಗಿದ್ದರು. ಸಂಚಾಲಕರಾದ ನಮ್ಮ ಮೂರು ಮಂದಿಯನ್ನು ಕಾಫಿಗೆ ಕರೆದಿದ್ದರು. ನಾವು ಹೋಗಿ ಬಂದೆವು.ಆದರೆ ಆ ಮನೆಯ ದುರಂತ ನನ್ನನ್ನು ಗಾಢವಾಗಿ ಕಾಡತೊಡಗಿತ್ತು. ಇದನ್ನೆಲ್ಲ ವೇದನೆಯಿಂದ ಭಟ್ಟರ ಬಳಿ ಚರ್ಚಿಸಿದ್ದೆ. ಆಗ ಅವರು ನನಗೆ ರಾಹುಲ ಸಾಂಕೃತ್ಯಾಯನ ಅವರ ‘ಓಲ್ಗಾ ಗಂಗಾ’ ಓದಿ ಶೂದ್ರದಲ್ಲಿ ಒಂದು

ಪ್ರತಿಕ್ರಿಯೆ ಬರೆಯಲು ತಿಳಿಸಿದರು. ಅವರ ಬಳಿ ಭಾರತದ ಸಾಂಸ್ಕೃತಿಕ ಸಂಗತಿಗಳ ಕುರಿತು

ಎಷ್ಟೊಂದು ಮಾತಾಡಿದ್ದೇವೆ. ಆದರೆ ಒಂದೇ ಒಂದು ದಿನ ಸಮತಾವಾದದ ಬಗ್ಗೆ ಪ್ರಸ್ತಾಪಿಸಿಲ್ಲ.

ಎಲ್ಲವನ್ನು ಅವರವರ ವ್ಯಕ್ತಿತ್ವದ ಅರಿವಿಗೆ ಬಿಟ್ಟವರು. ಅಷ್ಟರ ಮಟ್ಟಿಗೆ ವಿಶಾಲ ಮನೋಭಾವ ಬೆಳೆಸಿ

ಕೊಂಡಿದ್ದರು. ಯಾಕೆಂದರೆ ಅಷ್ಟರ ಮಟ್ಟಿಗೆ ಅವರ ವ್ಯಕ್ತಿತ್ವ ತಾದಾತ್ಮ್ಯತೆಯಿಂದ ಕೂಡಿತ್ತು.

 ಜಗತ್ತಿನ ಶ್ರೇಷ್ಠ ಕೃತಿಗಳ ನಡುವೆ ಒಂಟಿಯಾಗಿ ಬದುಕಿದವರು.ಆರೋಗ್ಯಪೂರ್ಣವಾಗಿ ಜೀವನ ಸಾಗಿಸಿ ನೂರಾರು ಮಂದಿಯ ನಡುವೆ ಪ್ರಾತಃಸ್ಮರಣೀಯ ರಾಗಿ ತಮ್ಮ ವ್ಯಕ್ತಿತ್ವವನ್ನು ಬಿಟ್ಟು ಇಪ್ಪತ್ತನೆಯ ಶತಮಾನದ ಕೊನೆಯ ದಿನಗಳಿಗೆ ವಿದಾಯ ಹೇಳಿ ಹೋದವರು.

ಸಹಾನಿಯವರು ಬೌದ್ಧಿಕವಾಗಿ ಬೆಳೆದ ಬಹುದೊಡ್ಡ ನಟ ಮತ್ತು ಚಿಂತಕ. ಸಹಾನಿಯವರನ್ನು ಕಮ್ಯುನಿಸ್ಟ್ ಪಕ್ಷಕ್ಕೆ ಪರಿಚಯಿಸಿದವರು ಅವರ ಪತ್ನಿ ದಮಯಂತಿ ಅವರು. ಆಕೆ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿಯಾಗಿದ್ದರು. ಒಂದು ದೃಷ್ಟಿಯಿಂದ ಮುಂದೆ ನನಗೆ ಭೀಷ್ಮ ಸಹಾನಿಯವರು ಪರಿಚಯವಾಗಲು ಎಸ್.ಆರ್.ಭಟ್ ಅವರು ಕಾರಣ. ಒಂದಷ್ಟು ದಿವಸ ‘ಪ್ರಗತಿ ಪಂಥ’ ಸಂಘಟನೆಯಲ್ಲಿ ತೊಡಗಿಸಿ ಕೊಳ್ಳಲು ಕಾರಣಕರ್ತರಾದರು. ಇದರಿಂದ ಅದರ ಕಾರ್ಯದರ್ಶಿಯಾಗಿ ಪ್ರಸಿದ್ಧ ನಾಟಕಕಾರರು ಮತ್ತು ಹಿರಿಯರಾದ ಶ್ರೀರಂಗರ ಜೊತೆಗೆ ಒಂದಷ್ಟು ದಿವಸ ಕೆಲಸ ಮಾಡಲು ಸಾಧ್ಯವಾಯಿತು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top